ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಜರಾತಿನ ವಾಸ್ತು, ಶಿಲ್ಪ
ಈ ಪ್ರದೇಶದ ಅತ್ಯಂತ ಪ್ರಾಚೀನ ವಾಸ್ತುಶಿಲ್ಪ ಸ್ಮಾರಕಗಳೆಂದರೆ ಸಿಂಧೂ ಬಯಲಿನ ನಾಗರಿಕತೆಯ ಕಟ್ಟಡಗಳು. ಲೋಥಾಲ್, ರಂಗಪುರ, ರೋಜ್ಡಿ, ಸುರ್ಕೋಟಡ್ ಮುಂತಾದವು ಇದರ ನೆಲೆಗಳು. (ನೋಡಿ- ಗುಜರಾತಿನ ಇತಿಹಾಸ) ಅನಂತರಕಾಲದ ವಾಸ್ತುವಿನ ಉಲ್ಲೇಖವೆಂದರೆ ರುದ್ರದಾಮನನ ಶಾಸನದಲ್ಲಿ ಹೇಳಿರುವ, ಮೌರ್ಯರ ಕಾಲಕ್ಕೆ ಸಂಬಂಧಿಸಿದ, ಸುದರ್ಶನ ಸರೋವರ (ನೋಡಿ- ಗುಜರಾತಿನ ಶಾಸನಗಳು, ನಾಣ್ಯಗಳು). ಆದರೆ ಈ ಸರೋವರದ ಒಡ್ಡು, ಕಾಲುವೆಗಳು ಯಾವುವೂ ಈಗ ಕಾಣಿಸುವುದಿಲ್ಲ. ಕಲ್ಲಿನಲ್ಲಿ ಕೊರೆದ ಜೈನ ವಿಹಾರ ಮತ್ತು ಚೈತ್ಯಗಳು ಜುನಾಗಢ, ತಲಾಜಾ ಮತ್ತು ಧಾಂಕಗಳಲ್ಲಿವೆ. ಜುನಾಗಢದಲ್ಲಿಯ ಭಾವೆ ಪ್ಯಾರಾ ಮಠದ ಸಮೀಪದಲ್ಲಿ ಚೈತ್ಯವಿಹಾರಗಳ ಮೂರು ಸಾಲುಗಳುಂಟು. ಚೈತ್ಯದ್ದು ಗಜಪೃಷ್ಠಾಕೃತಿ. ಉಳಿದೆಲ್ಲವೂ ಸಾಮಾನ್ಯವಾಗಿ ಚತುರ್ಭುಜಾಕಾರದ ಕೋಣೆಗಳು. ಕೆಲವಕ್ಕೆ ಕಂಬಗಳುಳ್ಳ ಹೊರಾಂಗಣಗಳುಂಟು. ಎರಡರಲ್ಲಿ ಚೈತ್ಯಾಕಾರದ ಗವಾಕ್ಷಿಗಳಿವೆ. ಇವುಗಳಲ್ಲೊಂದರಲ್ಲಿ ಜೈನಧರ್ಮದ ಸಂಕೇತಗಳಾದ ಸ್ವಸ್ತಿಕ, ಭದ್ರಾಸನ, ನಂದಿಪಾದ, ಜೋಡಿಮೀನು, ಕಲಶ ಇವುಗಳ ಚಿಹ್ನೆಗಳಿವೆ. ಗಜಪೃಷ್ಠಾಕೃತಿಯ ಚೈತ್ಯ ಪ್ರ.ಶ.ಪು. 2 ನೆಯ ಶತಮಾನದ್ದಿರಬಹುದು. ಉಳಿದವುಗಳ ನಿರ್ಮಾಣ ಪ್ರ.ಶ. 200-300ರ ಕಾಲದಲ್ಲಿ ಆಗಿರಬಹುದು.
ಇದೇ ಸ್ಥಳದ ಉಪರಕೋಟದಲ್ಲಿರುವ ಕೊರೆದ ಕಲ್ಲಿನ ಚೈತ್ಯ ಎರಡು ಅಂತಸ್ತುಗಳುಳ್ಳದ್ದು. ಮೊದನೆಯದರಲ್ಲಿ 3.30 ಮೀ ಚದರದ ಒಂದು ಕುಂಡವಿದೆ. ಇದರ ಮೂರು ಬದಿಗಳಲ್ಲಿ ಅಂಗಳವಿದೆ. ಅಂಗಳದ ಬದಿಯಲ್ಲಿ ಕುಳಿತುಕೊಳ್ಳಲು ಆಸನವುಳ್ಳ ಗೂಡುಗಳುಂಟು. ಉಳಿದ ಬದಿಯಲ್ಲಿ ವಿಶಾಲವಾದ ಕಂಬಗಳುಳ್ಳ ಕೋಣೆಯಿದೆ. ಅಲ್ಲಲ್ಲಿ ಸುಂದರವಾದ ಪ್ರಾಣಿಗಳ, ಹೂವುಗಳ ಚಿತ್ರಗಳುಂಟು. ಕಂಬಗಳ ವೈವಿಧ್ಯದಿಂದ ಇವೆಲ್ಲವೂ ಪ್ರ.ಶ. 1-7ನೆಯ ಶತಮಾನಗಳಲ್ಲಿ ಆಗಿರಬಹುದೆಂದು ತೋರುವುದು. ತಲಾಜಾದಲ್ಲಿರುವ 30 ಕೊರೆದ ಚೈತ್ಯ ವಿಹಾರಗಳು ಇವುಗಳನ್ನು ಹೆಚ್ಚು ಕಡಿಮೆ ಹೋಲುವುವು. ಇವುಗಳಲ್ಲಿ ಒಂದು ಚೈತ್ಯದ ಗವಾಕ್ಷಿಯ ಆಕಾರ ವಿಶಿಷ್ಟವಾಗಿದೆ. ಸಾನಾದಲ್ಲಿ ಇಂಥ ಸುಮಾರು 62 ಕೊರೆದ ಗುಹಾಚೈತ್ಯ ವಿಹಾರಗಳಿವೆ. ಧಾಂಕದಲ್ಲಿಯ ಗುಹಾಚೈತ್ಯಗಳಲ್ಲಿ ಮೂರ್ತಿಗಳೂ ಕೆತ್ತಲ್ಪಟ್ಟಿವೆ.
ಗುಪ್ತರ ಕಾಲದ ಯಾವ ವಿಧವಾದ ಕಟ್ಟಡಗಳೂ ಬೆಳಕಿಗೆ ಬಂದಿಲ್ಲ. ಸ್ಕಂದ ಗುಪ್ತನ ಪ್ರಾಂತ್ಯಾಧಿಕಾರಿಯಾಗಿದ್ದ ಚಕ್ರಪಾಲಿತ ಗಿರ್ನಾರಿ ನಲ್ಲಿ ವಿಷ್ಣುದೇವಾಲಯವನ್ನು ಕಟ್ಟಿಸಿದ್ದನೆಂಬುದಕ್ಕೆ ಅಲ್ಲಿಯ ಶಾಸನದಲ್ಲಿ ಉಲ್ಲೇಖವಿದೆ. ಅಲ್ಲಿಯ ದಾಮೋದರ ಮಂದಿರದಲ್ಲಿ ಇದರ ಅವಶೇಷಗಳಿರಬಹುದು.
ಗುಪ್ತರ ಅನಂತರ ಚಾಳುಕ್ಯರ ಕಾಲದವರೆಗೆ ದೇವಾಲಯದ ವಾಸ್ತುಶಿಲ್ಪದಲ್ಲಿ ಬೆಳೆವಣಿಗೆ ಯಾಗುತ್ತ ಚಾಳುಕ್ಯರ ಕಾಲದಲ್ಲಿ ಅದು ತನ್ನದೇ ಆದ ಸುಸ್ಪಷ್ಟವಾದ ಶೈಲಿಯಾಗಿ ಮಾರ್ಪಟ್ಟಿತು. ಚಾಳುಕ್ಯರ ಶೈಲಿಯ ಪೂರ್ವದ ಬೆಳೆವಣಿಗೆಯನ್ನು ಗೊಪ್, ವಿಸಾವಾದ, ಬಿಲೇಸ್ವರ್, ಸುತ್ರಪಾದ, ಥಾನ್ ಮತ್ತು ಕದ್ವಾರದಲ್ಲಿಯ ದೇವಾಲಯಗಳಲ್ಲಿ ಕಾಣಬಹುದು. ಗೊಪ್ದಲ್ಲಿಯ ದೇವಾಲಯ ಹಳೆಯದು ಮತ್ತು ಬಲು ಸರಳವಾದ್ದು. ಇದು ಎರಡು ಪ್ರಾಕಾರಗಳಿಂದ ಸುತ್ತುವರಿಯಲ್ಪಟ್ಟ, ಸಮಬಾಹುವಿನ ಗರ್ಭಗೃಹವುಳ್ಳ ದೇವಾಲಯ. ಶಿಖರ ತ್ರಿತಲವಾಗಿದೆ. ಕದ್ವಾರದಲ್ಲಿಯ ದೇವಾಲಯ ಉದ್ದವಾದ ಕೋಣೆಯಾಗಿದೆ; ಪ್ರಾಕಾರದಿಂದ ಸುತ್ತುವರಿಯಲ್ಪಟ್ಟಿದೆ. ಪ್ರಾಕಾರದ ಒಂದು ಬದಿಯಲ್ಲಿ ಮಂಟಪವಿದೆ. ಇದರ ದ್ವಾರದ ಚೌಕಟ್ಟಿನ ಕೆಳಗಿನ ಬದಿಯಲ್ಲಿ ಗಂಗೆ-ಯಮುನೆಯರ ಮೇಲೆ ಅಡ್ಡಜಂತಿಯಲ್ಲಿ ವಿಷ್ಣು, ಗಣಪತಿಗಳ ಮೂರ್ತಿ ಗಳಿವೆ. ಸ್ವಲ್ಪ ಮೇಲೆ ಸೂರ್ಯ, ಬ್ರಹ್ಮ, ವಿಷ್ಣು, ಶಿವ ಮತ್ತು ಬಹುಶಃ ಚಂದ್ರನ ಮೂರ್ತಿಗಳ ಸಾಲು ಇದೆ.
ಇದೇ ಕಾಲದ ಕಿಂದರ್ಖೇಡ್, ಸೋನ್ ಕನ್ಸಾರೀ ಮತ್ತು ಪಾಸ್ತರ ದೇವಾಲಯಗಳು ಶಿಖರದ ಶೈಲಿಯಲ್ಲಿ ಇತರ ದೇವಾಲಯಗಳಿಗಿಂತ ಭಿನ್ನವಾದಂಥವು.
ಒಟ್ಟಿನಲ್ಲಿ ಈ ಕಾಲದ ದೇವಾಲಯಗಳನ್ನು ಅವುಗಳ ವಾಸ್ತುಶಿಲ್ಪ ಲಕ್ಷಣದ ಮೇರೆಗೆ ವಿಸಾವಾದ -ಥಾನ್ ಮತ್ತು ಕದ್ವಾನ್-ಪಾಸ್ತಾರ್ ಎಂದು ಎರಡು ಪಂಗಡಗಳಾಗಿ ವಿಂಗಡಿಸಬಹುದು.
ಕ್ರಮೇಣ, ಚಾಳುಕ್ಯರ ಕಾಲದಲ್ಲಿ ದೇವಾಲಯದ ನಿರ್ಮಾಣದಲ್ಲಿ ಒಂದು ವಿಶಿಷ್ಟ ಶೈಲಿ ವಿಕಾಸ ಹೊಂದಿತು. ಈ ಕಾಲದ ಕಟ್ಟಡಗಳನ್ನು ಕೋಟೆಗಳು, ಹೆಬ್ಬಾಗಿಲುಗಳು, ಸರೋವರಗಳು, ದೇವಾಲಯಗಳು, ತೋರಣಗಳೆಂದು ವಿಭಾಗಿಸಬಹುದು. ಶಾಸನಗಳಲ್ಲಿ ಪ್ರಾಕಾರಗಳೆಂದು ಕರೆಯಲಾದ ಕೋಟೆಗಳು ಕ್ರಮೇಣ ಹಾಳಾಗಿ ಈಗ ಅಲ್ಲಲ್ಲಿ ದಿಬ್ಬಗಳಾಗಿ ಕಾಣುತ್ತವೆ. ದಾಭೋಯಿಕೋಟೆಯ ನಿರ್ಮಾಣ ಪ್ರಾಯಶಃ ಜಯಸಿಂಹ ಸಿದ್ಧರಾಜ ಮತ್ತು ಅವನ ಹಿಂದಿನವರಿಂದ ಪ್ರಾರಂಭವಾಗಿ ವಾಘಲಾರಾಜನಾದ ವಿಸಾಲಿ ದೇವನ (1244-61) ಕಾಲದವರೆಗೂ ಮುಂದುವರಿಯಿತು. ವಸ್ತುಪಾಲಚರಿತ ಎಂಬ ಗ್ರಂಥದ ಪ್ರಕಾರ ವಸ್ತುಪಾಲನ ಸಹೋದರನಾದ ತೇಜಪಾಲ ಮತ್ತು ವಾಘೇಲದ ರಾಜ ವೀರಧವಲನ ಮಂತ್ರಿ ಈ ನಗರದ ಪ್ರಾಕಾರವನ್ನು ಕಟ್ಟಿಸಿದರು. ಈಗ ಇದರ ನಾಲ್ಕು ಬದಿಗಳಲ್ಲಿಯ ಹೆಬ್ಬಾಗಿಲುಗಳು ಉಳಿದಿವೆ. ವಡೋದರದ ಕೋಟೆಯ ಹೆಬ್ಬಾಗಿಲಿನ ಕಂಬಗಳು ಸುಂದರವಾದ ಚಿತ್ರಗಳಿಂದಲೂ ಮೂರ್ತಿಗಳಿಂದಲೂ ಅಲಂಕೃತವಾಗಿವೆ. ಝಿಂಜೂವಾದ, ಗುಮ್ಲಿ, ಜುನಾಗಢಗಳಲ್ಲಿಯೂ ಇಂಥ ಕೋಟೆಗಳ ಅವಶೇಷಗಳಿವೆ.
ಮಹಾರಾಣಿ ಮಯಣಲ್ಲದೇವಿ ಕಟ್ಟಿಸಿದ (1,100), ವಿರಂಗಾಮಿನಲ್ಲಿಯ ಮಾನಸರ್ ಸರೋವರ ಪ್ರಾಯಶಃ ಶಂಖಾಕೃತಿಯದು; ಇಳಿಯಲು ಹಾಗೂ ಮೇಲೇರಲು ಹಲವು ದಾರಿಗಳಿಂದ ಕೂಡಿದ್ದು. ಘಾಟಿನಲ್ಲಿ ಈಗ ಸುಮಾರು 357 ಸಣ್ಣ ಶೈವ ವೈಷ್ಣವ ಗುಡಿಗಳಿವೆ. ಮೊದಲು 520 ಗುಡಿಗಳಿದ್ದವು. ಮೊಧೇರದಲ್ಲಿಯ ಸೂರ್ಯ ದೇವಾಲಯದ ಪಕ್ಕದ ರಾಮಕುಂಡದ (ಸು. 11 ನೆಯ ಶತಮಾನ) ನೀರಿನ ಮಟ್ಟದ ತನಕ ಅಲ್ಲಲ್ಲಿ ಸುತ್ತಲೂ ಅಗಲವಾದ ಸ್ಥಳ ಬಿಟ್ಟಿದೆ. ಪ್ರತಿಯೊಂದು ಮೂಲೆಯಲ್ಲೂ ಹಂತಹಂತದ ಮಧ್ಯೆ ಒಂದೊಂದು ಸಣ್ಣ ಗುಡಿಯುಂಟು. ಅನ್ಹಿಲ್ವಾಡದ ರಾಣಿ ಬಾವಿ, ಬಾರೋತ್ ಬಾವಿಗಳು, ವಾಯಡದಲ್ಲಿಯ ಬಾವಿ, ವಧ್ವಾನ್ದ ಮಾಧವ ಮತ್ತು ಗಂಗಾ ಬಾವಿಗಳು ಹಾಗೂ ಧಾಂಡಲ್ಪುರದ ಬಾವಿಗಳು ವಾಸ್ತುಶೈಲಿಯ ದೃಷ್ಟಿಯಿಂದ ಪ್ರೇಕ್ಷಣೀಯ.
ಚಾಳುಕ್ಯರ ಕಾಲದ ದೇವಾಲಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲಿನ ಗುಂಪಿನ ದೇವಾಲಯಗಳನ್ನು ಅಳತೆ ಪ್ರಮಾಣಗಳ ದೃಷ್ಟಿಯಿಂದ ಮತ್ತೆ ಎರಡು ಗುಂಪುಗಳನ್ನಾಗಿ ವಿಭಾಗಿಸಬಹುದು. ಉತ್ತರ ಗುಜರಾತಿನಲ್ಲಿರುವ ಸೂನಕ್, ಸಂಡೆರ್, ರುಹಾವಿ, ದಿಲ್ಮಾಲ್, ಕಸರ್, ಧಿನೋಜ್, ಮಾಮೊಡ ಮತ್ತು ಕಾಠಿಯಾವಾಡದ ಪರಬಾದಿ, ಚೌಬಾರಿಗಳಲ್ಲಿಯ ದೇವಾಲಯಗಳು ಸಾಮಾನ್ಯವಾಗಿ ಸಣ್ಣವಾಗಿವೆ. ಮೊಧೇರ, ರುದ್ರಮಾಲ್ (ಉತ್ತರ ಗುಜರಾತ್), ಥಾನ್, ಸೋಮನಾಥ್ ಬಳಿಯ ಭೀಮನಾಥ್ ಮತ್ತು ಹಿರಣ್ಯ ನದಿಯ ಹತ್ತಿರದ ಸೂರ್ಯ ದೇವಾಲಯ-ಇವು ದೊಡ್ಡವಾಗಿವೆ. ಮೊಧೇರ ಸೂರ್ಯ ದೇವಾಲಯವನ್ನು 1026ರಲ್ಲಿ ನಿರ್ಮಿಸಲಾಗಿದೆ ಎಂದು ಶಾಸನಗಳಿಂದ ತಿಳಿಯುತ್ತದೆ. ಈ ದೇವಾಲಯದಲ್ಲಿ ಸೂರ್ಯಕುಂಡ ಅಥವಾ ರಾಮಕುಂಡ, ಸಭಾ ಮಂಟಪ ಮತ್ತು ಗೂಢ ಮಂಟಪವಿದೆ. ಸಭಾ ಮಂಟಪದಲ್ಲಿ ಸುಂದರ ಕೆತ್ತನೆ ಕೆಲಸ ಮತ್ತು ಕೆಳಭಾಗದಲ್ಲಿ ಅನೇಕ ಉಬ್ಬು ಶಿಲ್ಪಿಗಳನ್ನೊಳಗೊಂಡ 52 ಕಂಬಗಳಿವೆ. ಈ ಕಂಬಗಳಲ್ಲಿ ಅನೇಕ ಶಿಲ್ಪಗಳಿದ್ದು, ಕೆಲವು ಅಪರೂಪದ ಜೀವನ ಚಕ್ರದ ಶಿಲ್ಪಗಳಿವೆ. ಇವುಗಳಲ್ಲಿ ಯುವಕ-ಯುವತಿಯರಲ್ಲಿಯ ಸಹಜ ಕಾಮೋನ್ಮಾದದಿಂದ ಹಿಡಿದು, ಗರ್ಭದಾರಣೆ, ಹುಟ್ಟು ಮೊದಲಾದ ಹಂತಗಳ ಮೂಲಕ ಕಡೆಯಲ್ಲಿ ಸಾವಿನವರೆಗೆ ಜೀವನ ಚಕ್ರದ ಪ್ರಮುಖ ಹಂತಗಳನ್ನು ನಿರೂಪಿಸಲಾಗಿದೆ. ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಿರುವ ಸೃಷ್ಟಿ, ಸ್ಥಿತಿ ಮತ್ತು ಲಯದ ವಾಸ್ತವಾಂಶವನ್ನು ಮುಕ್ತವಾಗಿ ಚಿತ್ರಿಸಿರುವುದು ಈ ದೇವಾಲಯದ ಒಂದು ವಿಶೇಷವಾಗಿದೆ. ಸೋಮನಾಥದ ಶಿವದೇವಾಲಯ ಮತ್ತು ಗುಮ್ಲಿ ಸೆಜಕ್ಪುರದ ದೇವಾಲಯಗಳು ಎರಡನೆಯ ಗುಂಪಿಗೆ ಸೇರಿವೆ. ಇವಲ್ಲದೆ ತಾರಿಂಗ, ಸರೋತ್ರ, ಆಖು, ಗಿರ್ನಾರ್ ಮತ್ತು ಶತ್ರುಂಜಯದಲ್ಲಿಯ ಜೈನದೇವಾಲಯಗಳದು ಅವುಗಳ ವಾಸ್ತು ವೈಶಿಷ್ಟ್ಯದಿಂದ ಒಂದು ಪ್ರತ್ಯೇಕವಾದ ಗುಂಪು.
ಸಾಮಾನ್ಯವಾಗಿ ಈ ದೇವಾಲಯಗಳ ಗೋಡೆಗಳ ಹೊರಬದಿಯಲ್ಲಿ, ಗರ್ಭಗುಡಿಯ ಮುಂದಿನ ಮಂಟಪದ ಮಧ್ಯದ ಗುಮ್ಮಟಾಕಾರದ ಚಾವಣಿಯಲ್ಲಿ ಮತ್ತು ಕಂಬಗಳ ಮೇಲೆ ವಿಶೇಷವಾಗಿ ದೇವಮಾನವ ಮೂರ್ತಿಗಳೂ ರೇಖಾ ಹೂಬಳ್ಳಿ ಚಿತ್ರಗಳೂ ಇರುತ್ತವೆ. ಗೋಡೆಗಳು ಅಲ್ಲಲ್ಲಿ ಕ್ರಮವಾಗಿ ಹಿಂದಕ್ಕೆ ಸರಿದು ಮುಂದಕ್ಕೆ ಚಾಚಿರುವುದರಿಂದ ತಳವಿನ್ಯಾಸ ಚತುಷ್ಕೋಣವಾಗಿರದೆ ಸಮಸಂಖ್ಯೆಯ ಅನೇಕ ಕೋಣಗಳುಳ್ಳ ಹಲವು ಭುಜುಗಳನ್ನುಳ್ಳದ್ದಾಗಿದೆ. ಈ ಎರಡು ಲಕ್ಷಣಗಳು 500-1000ದ ಕಾಲದ ಗುಡಿಗಳಲ್ಲಿ ಇಲ್ಲ. ಮಂಟಪದ ಮೇಲೆ ಗುಮ್ಮಟವೂ ಗರ್ಭಗುಡಿಯ ಮೇಲೆ ರೇಖಾನಾಗರ ಶೈಲಿಯ ಶಿಖರವೂ ಇವೆ. ಸರ್ನೆಲ್ದಲ್ಲಿಯ ಗಲ್ತೆಶ್ವರ ದೇವಾಲಯ 38 ಕಂಬಗಳ ಸಭಾ ಮಂಟಪದಿಂದ ಮತ್ತು ವರ್ತುಳಾಕಾರದ ನಕ್ಷತ್ರಾಕೃತಿಯ ತಳವಿನ್ಯಾಸದ ಗರ್ಭಗುಡಿಯಿಂದ ಕೂಡಿದೆ. ಗಿರ್ನಾರದ ನೇಮಿನಾಥ ದೇವಾಲಯಕ್ಕೆ ಸುತ್ತಲೂ ಸರಾಯಿಯ ಪ್ರಾಕಾರವಿದೆ. ಹಾಗೆಯ ಗುಮ್ಲಿಯ ನವಲಾಖ ದೇವಾಲಯಕ್ಕೆ ಸರಾಯಿಯಿಲ್ಲದ ಪ್ರಾಕಾರವುಂಟು. ಕಸರ್ ಮತ್ತು ಗಿರ್ನಾರ್ಗಳಲ್ಲಿ ತ್ರಿಕೂಟಾಚಲ ದೇವಾಲಯಗಳಿವೆ. ಪ್ರಸಿದ್ಧವಾದ ಸೋಮನಾಥ ದೇವಾಲಯ ಪದೇಪದೇ ಶತ್ರುಗಳ ಹಾವಳಿಗಳಿಂದ ಹಾಳಾಗಿ ಜೀರ್ಣೋದ್ಧಾರಗೊಂಡು, ಅದರ ಮೊದಲಿನ ಸ್ವರೂಪ ಬದಲಾಗಿದೆ.
ವಡನಗರ, ಕಪಧ್ವಂಜ್, ಐಲುದ್ರ, ರೇವ-ಈ ಸ್ಥಳಗಳಲ್ಲಿಯ ಕೀರ್ತಿ ತೋರಣಗಳು ಗುಜರಾತಿನ ವಾಸ್ತುಶಿಲ್ಪದ ಗುರುತುಗಳು. ಇವುಗಳಲ್ಲಿ ವಡನಗರದಲ್ಲಿರುವುದು ಪ್ರರೂಪಿ ಸ್ವರೂಪದ್ದು. ಇದು ಸಂಪುರ್ಣ ಸೂಕ್ಷ್ಮ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿದೆ.