ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಧಮಾಗಧೀ

ವಿಕಿಸೋರ್ಸ್ದಿಂದ

ಪ್ರಾಕೃತದ ಒಂದು ಉಪಭಾಷೆ. ಮಗಧ ದೇಶದ ಅರ್ಧಭಾಗದಲ್ಲಿ ಪ್ರಚಲಿತವಿದ್ದುದರಿಂದ ಈ ಹೆಸರು. ಮಾಗಧೀ ಉಪಭಾಷೆಗೆ ಸಮೀಪದ್ದಾಗಿದೆ. ಬುದ್ಧ ಮಾಗಧೀ ಭಾಷೆಯಲ್ಲಿ ಉಪದೇಶ ಮಾಡಿದಂತೆ, ಮಹಾವೀರ ತೀರ್ಥಂಕರ ಅರ್ಧಮಾಗಧಿಯಲ್ಲಿ ಅಥವಾ ಸರ್ವಾರ್ಧಮಾಗಧಿಯಲ್ಲಿ ಉಪದೇಶ ಮಾಡಿದ್ದನೆಂಬ ನಂಬಿಕೆಯುಂಟು. ಜೈನಾಗಮಗ್ರಂಥಗಳ ಭಾಷೆ ಕ್ರಮೇಣ ತುಸು ಬದಲಾಗಿದ್ದರೂ ಮೂಲದಲ್ಲಿ ಇವೆಲ್ಲ ಅರ್ಧಮಾಗಧಿಯಲ್ಲೇ ಲಿಖಿತವಾಗಿದ್ದಿತೆಂಬುದನ್ನು ಒಪ್ಪಲಿಕ್ಕೆ ಯಾವ ತೊಂದರೆಯೂ ಇಲ್ಲ. ಮಾಗಧಿಯಂತೆ ಅಕಾರಾಂತ ಶಬ್ದಗಳ ಪ್ರಥಮಾವಿಭಕ್ತಿಯ ಏಕವಚನ ಏಕಾರದಲ್ಲಿ ದೊರೆಯುತ್ತದೆ. ಪುಲ್ಲಿಂಗನಾಮಗಳ ಸಪ್ತಮೀ ವಿಭಕ್ತಿ ಏಕವಚನ ರೂಪುದೇವಂಸಿ-ಈ ರೀತಿ ದೊರೆಯುತ್ತದೆ. ಕೆಲವೆಡೆಯಲ್ಲಿ ಕಕಾರ ಗಕಾರವಾದದ್ದು ಕಂಡುಬರುತ್ತದೆ. ಹಲವು ಈ ಶಬ್ದಗಳಲ್ಲಿ ರಕಾರವು ಲಕಾರವಾಗುತ್ತದೆ. ಇವೆಲ್ಲ ಮಾಗಧಿಗೆ ಸಮಾನವಾದ ಲಕ್ಷಣಗಳು. ಇವಲ್ಲದೆ ಅರ್ಧಮಾಗಧಿಯಲ್ಲಿ ಮತ್ತೂ ಕೆಲವು ವೈಶಿಷ್ಟ್ಯಗಳು ಕಂಡು ಬರುತ್ತವೆ. ಸದ್ಯದ ಜೈನಾಗಮದ ವಿಸ್ತಾರವನ್ನು ಲಕ್ಷ್ಯಕ್ಕೆ ತೆಗೆದುಕೊಂಡರೆ ಸುಮಾರು 45 ಗ್ರಂಥಗಳು ಅರ್ಧಮಾಗಧೀಯಲ್ಲಿ ದೊರೆಯುತ್ತವೆಂದು ಹೇಳಬಹುದು. ಇವುಗಳ ವಿವರ ಈ ರೀತಿ ಇದೆ: 11 ಅಂಗಗಳು, 12 ಉಪಾಂಗಗಳು, 6 ಛೇದಸೂತ್ರಗಳು, 4 ಮೂಲಸೂತ್ರಗಳು, 10 ಪ್ರಕೀರ್ಣಕಗಳು ಮತ್ತು ನುದಿಯಾದಿ ಎರಡು ಗ್ರಂಥಗಳು. ಇವೆಲ್ಲ ಒಂದೇ ಕಾಲದವಲ್ಲ. ಆಚಾರಾಂಗ ಮತ್ತು ಸೂತ್ರಕೃತಾಂಗ ಇವುಗಳ ಪ್ರಥಮ ಶ್ರುತಸ್ಕಂಧಗಳು ಅತ್ಯಂತ ಪ್ರಾಚೀನ ವಾಗಿದ್ದು, ಅರ್ಧಮಾಗಧಿಯ ಕೆಲವು ಲಕ್ಷಣಗಳು ಅವುಗಳಲ್ಲಿ ದೊರೆಯುತ್ತವೆ. ಈ ಆಗಮಗಳಲ್ಲಿ ಕೆಲವು ಪ್ರಾಚೀನ ಮತ್ತು ಕೆಲವು ಅರ್ವಾಚೀನ ಅಂಶಗಳು ಒಟ್ಟುಗೂಡಿಹೋಗಿವೆ. ಪ್ರಾಚೀನ ಅಂಶಗಳು ಪ್ರಶಕ್ತಶಕದ ಪುರ್ವದಲ್ಲಿಯೇ ರೂಪುಗೊಂಡಿವೆ. ಇವುಗಳ ಅಂತಿಮ ಸ್ವರೂಪ 5ನೆಯ ಶತಮಾನದ ಮಧ್ಯದ್ದು. ಸಂಸ್ಕೃತನಾಟಕಗಳಲ್ಲಿ ಉಕ್ತವಾಗಿರುವ ಅರ್ಧಮಾಗಧೀ ಭಾಷೆಯ ಸ್ವರೂಪ ಮಾತ್ರ ಬೇರೆ.