ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುನಾ

ವಿಕಿಸೋರ್ಸ್ದಿಂದ

ಮಧ್ಯಪ್ರದೇಶದ ಒಂದು ಜಿಲ್ಲೆ; ಜಿಲ್ಲೆಯ ಮುಖ್ಯಪಟ್ಟಣ. ಜಿಲ್ಲೆಯ ವಿಸ್ತೀರ್ಣ 11065ಚ.ಕಿಮೀ. ಜನಸಂಖ್ಯೆ 12.40.938 (2011). ಜಿಲ್ಲೆಯ ಹೆಚ್ಚಿನ ಭಾಗ ಗುಡ್ಡಗಳಿಂದ ಕೂಡಿದೆ; ಸಮುದ್ರಮಟ್ಟದಿಂದ 488 ಮೀ ಎತ್ತರದಲ್ಲಿದೆ. ಬೇತವಾ, ಪಾರ್ವತಿ, ಸಿಂಧ ಮತ್ತು ಬಿಲಾಸ್ ಇಲ್ಲಿಯ ಮುಖ್ಯ ನದಿಗಳು.


ಐತಿಹಾಸಿಕ ಮತ್ತು ಪುರಾತತ್ವ ದೃಷ್ಟಿಯಿಂದ ಈ ಜಿಲ್ಲೆ ಮಹತ್ತ್ವದ ಸ್ಥಾನ ಪಡೆದಿದೆ. ತುಂಭವನ್, ಚಾಚೋಡಾ, ಮ್ಯಾನಾ (ಮಾಯಾಪುರ), ಈಸಾಗಢ, ಚಂದೇರಿ ಮುಂತಾದ ಐತಿಹಾಸಿಕ ಸ್ಥಳಗಳು ಇಲ್ಲಿವೆ. ವ್ಯಾಪಾರ, ಕೈಗಾರಿಕೆ, ಸರಕು ಸಾಗಣೆ, ಶಿಕ್ಷಣ ಮತ್ತು ಸಾಂಸ್ಕೃತಿಕ ದೃಷ್ಟಿಗಳಿಂದ ಜಿಲ್ಲೆ ಅಷ್ಟಾಗಿ ಮುಂದುವರಿದಿಲ್ಲ. 1951ರಿಂದ ಈಚೆಗೆ ಎಣ್ಣೆ, ಬೇಳೆ, ಮಂಜುಗೆಡ್ಡೆ, ಸಕ್ಕರೆ ಮತ್ತು ಜವಳಿ ಕೈಗಾರಿಕೆಗಳು ಪ್ರಾರಂಭವಾಗಿವೆ. ಚಂದೇರಿಯಲ್ಲಿ ತಯಾರಾಗುವ ನೂಲು ಮತ್ತು ರೇಷ್ಮೆ ಬಟ್ಟೆಗಳು ದೇಶವಿದೇಶಗಳಲ್ಲಿ ಪ್ರಸಿದ್ಧವಾಗಿವೆ. ಇವಲ್ಲದೆ ಜರಿ ಕೆಲಸ, ಚರ್ಮ ಹದಮಾಡುವ ಮತ್ತು ಬೀಡಿ ಕಟ್ಟುವ ಉದ್ಯಮಗಳು ಬೆಳೆದಿವೆ.


ಗುನಾ ಪಟ್ಟಣ (ಉ.ಅ. 24° 39' ಪು.ರೇ. 77° 19') ಆಗ್ರಾ-ಮುಂಬಯಿ ಹೆದ್ದಾರಿಯಲ್ಲಿದೆ. ಮಧ್ಯ ರೈಲ್ವೆಯ ಬೀನಾ-ಬಾರನ್ ಉಪಶಾಖೆಯಲ್ಲಿ ಇದು ಒಂದು ನಿಲ್ದಾಣ. ಮೊದಲು ಇದೊಂದು ಚಿಕ್ಕ ಗ್ರಾಮವಾಗಿತ್ತು. 1844ರಲ್ಲಿ ಗ್ವಾಲಿಯರಿನ ಅಶ್ವಾರೋಹಿ ದಳದವರು ಇಲ್ಲಿ ಬೀಡುಬಿಟ್ಟರು. ಅಂದಿನಿಂದ ಗುನಾದ ಮಹತ್ತ್ವ ಹೆಚ್ಚುತ್ತಿದೆ. 1897ರಲ್ಲಿ ರೈಲುಮಾರ್ಗದ ವಿಸ್ತರಣ ಕಾರ್ಯ ನಡೆದದ್ದರಿಂದ ಇದು ವ್ಯಾಪಾರ ಕೇಂದ್ರವಾಯಿತು.