ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗರ್ಕೋಯಿಲ್
ಗೋಚರ
ನಾಗರ್ಕೋಯಿಲ್ ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಆಡಳಿತ ಕೇಂದ್ರ. ಪಶ್ಚಿಮ ಘಟ್ಟದ ಅರಂಬೋಲಿ ಕಣಿವೆಗೆ ಪಶ್ಚಿಮದಲ್ಲಿ ಉ.ಅ. 8º 11́ ಮತ್ತು ಪೂ.ರೇ. 77º 26́ ಮೇಲೆ ಇದೆ. ಜನಸಂಖ್ಯೆ 1,41,288 (1971).
ನಾಗರ್ಕೋಯಿಲ್ನಲ್ಲಿ ನಾಗರಾಜನ ಪ್ರಾಚೀನ ಸುಂದರ ದೇವಾಲಯವಿದೆ. ಅದರಿಂದಲೇ ಈ ಸ್ಥಳಕ್ಕೆ ಈ ಹೆಸರು ಬಂದಿದೆ. ಮಂದಿರದಲ್ಲಿರುವ ನಾಗರಾಜನ ವಿಗ್ರಹ ಹೆಡೆಯೆತ್ತಿ ಪ್ರಸನ್ನತೆಯಿಂದ ನಿಂತಿದೆ. ನಾಗರ್ಕೋಯಿಲ್ ಒಂದು ಯಾತ್ರಾಸ್ಥಳ. ಈ ಪಟ್ಟಣದ ಸುತ್ತಣ ಪ್ರದೇಶ ಫಲವತ್ತಾದ್ದು. ಇದೊಂದು ಕೃಷಿ ಉತ್ಪನ್ನ ವ್ಯಾಪಾರ ಕೇಂದ್ರ. ಹಿಂದೆ ಇದು ತಿರುವಾಂಕೂರು ಸಂಸ್ಥಾನದಲ್ಲಿತ್ತು. 1956ರಲ್ಲಿ ರಾಜ್ಯ ಪುನರ್ವಿಂಗಡಣೆಯಾದಾಗ ತಮಿಳು ರಾಜ್ಯಕ್ಕೆ ಸೇರಿತು. ಹತ್ತಿ ಮತ್ತು ಅಕ್ಕಿಗಿರಣಿ, ಮೋಟಾರು ರಿಪೇರಿ, ರಬ್ಬರ್ ಸರಕು ತಯಾರಿಕೆ- ಇವು ಇಲ್ಲಿಯ ಉದ್ಯಮಗಳು. ಇಲ್ಲಿಯ ಕಾಲೇಜುಗಳು ಮದುರೈ ವಿಶ್ವವಿದ್ಯಾಲಯಕ್ಕೆ ಸೇರಿವೆ. ಹಿಂದಿನ ತಿರುವಾಂಕೂರು ಮಹಾರಾಜರು ವಾಸಿಸುತ್ತಿದ್ದ ಪದ್ಮನಾಭಪುರಂ ಅರಮನೆ ಇಲ್ಲಿಗೆ ಸುಮಾರು 14 ಕಿ.ಮೀ. ಪಶ್ಚಿಮಕ್ಕೆ ಇದೆ. ಅದೊಂದು ಪ್ರವಾಸಿಕೇಂದ್ರ. ನಾಗರ್ಕೋಯಿಲ್ನಿಂದ ತ್ರಿವೇಂದ್ರಂ ಮತ್ತು ಮದರಾಸಿಗೆ ರಸ್ತೆಗಳಿವೆ. (ವಿ.ಕೆ.ಯು.ಎಸ್.)