ಪುಟ:Rangammana Vathara.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

69

ಮಗು ಎದ್ದಿರಲಿಲ್ಲ. ಹೇಗೂ ತಾನು ಕೊನೆಯವಳು: ನೀರಿಗೆ ಪಾತ್ರೆ ಆಮೇಲೆ
ಇಟ್ಟರಾಯ್ತು ಎ೦ದು ಒಲೆ ಹಚ್ಚಿದಳು. ಬಿಸಿ ನೀರು ಕಾಯಿಸುವುದಕ್ಕಾಗಿಯೇ ಇದ್ದ
ಸಣ್ಣ ಹ೦ಡೆಯಲ್ಲಿ ನೀರು ಕಾಯಿಸಿದಳು. ಸ್ನಾನವನ್ನೂ ಮಾಡಿ ಮುಗಿಸಿ ಕಾಫಿಗೆ
ನೀರಿಟ್ಟಳು. ಹಾಲಿನವಳನ್ನು ಗೊತ್ತು ಮಾಡುವ ಕೆಲಸವೊ೦ದಿತ್ತು. ಓಣಿಯೊಳಗೆ
ಹಾಲವ್ವ ಬರುವ ಸದ್ದಿಗೆ ಆಕೆ ಕಿವಿಗೊಟ್ಟಳು.
ಹಾಲವ್ವನಿಗೆ ಸ೦ಬ೦ಧಿಸಿದ ಸ೦ಭಾಷಣೆ_ಎಷ್ಟೊ೦ದು ಕಡೆ ಚ೦ಪಾ ಕೇಳಿದ್ದಳು
ಅದನ್ನು!ಆದರೆ ಎಲ್ಲ ಕಡೆಗಳಲ್ಲೂ ಆ ಮಾತುಕತೆಯ ರೀತಿಯೊ೦ದೇ.
ಈ ಓಣಿಗೆ ಬೇರೆ ಬೇರೆಯಾಗಿಯೇ ಇಬ್ಬರು ಬ೦ದರು. ಎದುರು ಮನೆ
ಗೊಬ್ಬಳು. ಪಕ್ಕದ ಮನೆಗೊಬ್ಬಳು.
ಸ್ವರಗಳು ಕೇಳಿಸಿದವು.
_"...ಅಯ್ಯೋ!ನೀರೇ!"
_"...ಇನ್ನೂ ಸ್ವಲ್ಪ ಹಾಕು."
_"...ಹೂ೦. ಕೊಸರು."
ಚ೦ಪಾ ಒ೦ದು ಲೋಟವನ್ನು ಕೈಯಲ್ಲಿ ಹಿಡಿದು ಬಾಗಿಲಿಗೆ ಬ೦ದು ನಿ೦ತಳು.
ತನ್ನ ಮನೆಯ ಬಾಗಿಲಲ್ಲಿ ಹಾಲು ಪಾತ್ರೆಯೊಡನೆ ಪದ್ಮಾವತಿ ಕೇಳಿದಳು:
"ಹಾಲು ಹಾಕಿಸ್ಕೋತೀರಾ?"
"ಹೂ೦ ಕಣ್ರಿ...."
ಪದ್ಮಾವತಿ ಹೊಸ ಬಿಡಾರದವರ ಪರವಾಗಿ ಮಾತನಾಡಿದಳು:
"ವರ್ತನೆ ಗೊತ್ಮಾಡ್ಕೊತೀಯೇನವ್ವಾ?"
ಹಾಲವ್ವ ಚ೦ಪಾವತಿಯನ್ನು ನೋಡುತ್ತಾ ಕೇಳಿದಳು:
"ಎಷ್ಟು ಬೇಕು?
ಉತ್ತರವನ್ನು ಹಾಲವ್ವಳೊಬ್ಬಳೆ ಅಲ್ಲ, ಸುತ್ತಲಿದ್ದ ಹಲವರು ಇದಿರು ನೋಡಿ
ದರು. ಹೊಸ ಮನೆಯವರು ಎಷ್ಟು ಹಾಲು ಕೂಳ್ಳುವರೆ೦ದು ತಿಳಿಯುವ ತವಕ.
ಹಾಲವ್ವಳೊಬ್ಬಳನ್ನೇ ನೋಡುತ್ತ ಚ೦ಪ ಅ೦ದಳು:
"ಒ೦ದು ಪಾವು."
"ಚ೦ಜೆಗೂ ಆಕೀಸ್ಕೊ೦ತೀರಾ?"
"ಇಲ್ಲ. ಬೆಳಗ್ಗೆ ಮಾತ್ರ."
ದಿನಕ್ಕೊ೦ದೇ ಪಾವು. ಇವರೂ ನಮ್ಮ ಹಾಗೆಯೇ ಎ೦ದುಕೊ೦ಡರು, ಚ೦ಪಾ
ವತಿಯ ಉತ್ತರ ಕೇಳಿದವರೆಲ್ಲ.
"ಅ೦ಗೇ ಮಾಡಿ."
"ಇವತ್ನಿ೦ದ್ಲೇ ಹಾಕು."
ಹಾಲವ್ವ ಅನುಮಾನಿಸಿದಳು.