ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುಬ್ಬಳ್ಳಿ - ಧಾರವಾಡ

ವಿಕಿಸೋರ್ಸ್ದಿಂದ

ಹುಬ್ಬಳ್ಳಿ - ಧಾರವಾಡ

ಭಾರತದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಎರಡು ಪಟ್ಟಣಗಳು. ಧಾರವಾಡ ಅದೇ ಜಿಲ್ಲೆಯ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರಪಟ್ಟಣ. ಹುಬ್ಬಳ್ಳಿ ಅದೇ ತಾಲ್ಲೂಕಿನ ಆಡಳಿತ ಕೇಂದ್ರಪಟ್ಟಣ. ಈ ಎರಡೂ ಪಟ್ಟಣಗಳನ್ನು ಸೇರಿಸಿ 1962ರಲ್ಲಿ ಏಕನಗರವಾಗಿ ಪರಿಗಣಿಸಿ ಹುಬ್ಬಳ್ಳಿ-ಧಾರವಾಡ ಕಾರ್ಪೊರೇಷನ್ ರಚಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಬಗೆಯ ನಗರ ಇದೊಂದೇ. ಈ ಎರಡು ಪಟ್ಟಣಗಳ ಅಂತರ 19 ಕಿಮೀ. ಇದು ರಾಜ್ಯದ ಎರಡನೆಯ ದೊಡ್ಡ ನಗರವೆನಿಸಿದೆ. ಈ ಪಟ್ಟಣಗಳ ನಡುವಿರುವ ಅಂತರವೂ ಹೊಸ ಕೈಗಾರಿಕೆಗಳ ಸ್ಥಾಪನೆಯಾಗಿ ಕಡಿಮೆಯಾಗುತ್ತಿದೆಯೆನ್ನಬಹುದು.

ಈ ಮಹಾನಗರದಲ್ಲಿ ಧಾರವಾಡ ತಾಲ್ಲೂಕಿನ 13 ಗ್ರಾಮಗಳು ಪೂರ್ಣವಾಗಿಯೂ 4 ಗ್ರಾಮಗಳು ಭಾಗಶಃವೂ ಹುಬ್ಬಳ್ಳಿ ತಾಲ್ಲೂಕಿನ 14 ಗ್ರಾಮಗಳು ಭಾಗಶಃವೂ ಸೇರಿದ್ದು ಧಾರವಾಡ-ಹುಬ್ಬಳ್ಳಿ ಪಟ್ಟಣಗಳೂ ಸೇರಿ ಕಾರ್ಪೊರೇಷನ್ನಿನ ವಿಸ್ತೀರ್ಣ 182.30 ಚ.ಕಿಮೀ. ಜನಸಂಖ್ಯೆ 7,86,018. ಎರಡೂ ನಗರಗಳಿಗೆ ಸೇರಿದಂತೆ 10 ಅಲೋಪತಿ ಆಸ್ಪತ್ರೆಗಳೂ 2 ಆಯುರ್ವೇದ, 4 ಹೋಮಿಯೋಪತಿ ಆಸ್ಪತ್ರೆಗಳೂ ಒಂದು ಪಶುವೈದ್ಯಾಲಯವೂ ಇವೆ. ಕಾರ್ಪೊರೇಷನ್ ತನ್ನ ಇತರ ಅಭಿವೃದ್ಧಿ ಕಾರ್ಯಗಳ ಜೊತೆಯಲ್ಲಿ ಇತ್ತೀಚೆಗೆ ಮಹಾತ್ಮಗಾಂಧೀ ವನದಲ್ಲಿ ಮಕ್ಕಳಿಗಾಗಿ ಒಂದು ಪ್ರಾಣಿಸಂಗ್ರಹಾಲಯ ಪ್ರಾರಂಭಿಸಿದೆ. ಧಾರವಾಡದಲ್ಲಿ ಕಲಾಭವನವಿದೆ.

ಈ ಕಾರ್ಪೊರೇಷನ್ನಿನ ಎರಡು ಮುಖ್ಯ ಪಟ್ಟಣಗಳಲ್ಲಿ ಒಂದಾದ ಹುಬ್ಬಳ್ಳಿ, ಧಾರವಾಡದ ಆಗ್ನೇಯಕ್ಕೆ 19 ಕಿಮೀ ದೂರದಲ್ಲಿದೆ. ಹುಬ್ಬಳ್ಳಿ-ಧಾರವಾಡ ಎರಡೂ ಔದ್ಯಮಿಕ ಕೇಂದ್ರಗಳಾಗಿದ್ದರೂ ಹುಬ್ಬಳ್ಳಿ ವಿಭಾಗದಲ್ಲಿ ಉದ್ದಿಮೆಗಳು ಹೆಚ್ಚು. ಇಲ್ಲಿ ಬಟ್ಟೆಗಿರಣಿ, ಕೆಲವು ಜಿನ್ನಿಂಗ್ ಫ್ಯಾಕ್ಟರಿಗಳು ಮತ್ತು ಔದ್ಯಮಿಕ ವಸಾಹತು ಇವೆ. ಮಧ್ಯಮ ಪ್ರಮಾಣದ ಹನ್ನೊಂದು ಉದ್ದಿಮೆಗಳೂ ಚಿಕ್ಕ ಉದ್ದಿಮೆಗಳೂ 350 ಘಟಕಗಳೂ ಈ ನಗರದಲ್ಲಿವೆ. ಇವುಗಳಲ್ಲಿ ಮುಖ್ಯವಾಗಿ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ, ಅಚ್ಚು ತಯಾರಿಸುವ ಎನ್.ಟಿ.ಟಿ.ಎಫ್. ಸಂಸ್ಥೆ, ವಿಶಿಷ್ಟ ಸೆಂಟ್ರಿಫ್ಯೂಗಲ್ ಪಂಪು ತಯಾರಿಸುವ ಎ.ಕೆ.ಇಂಡಸ್ಟ್ರೀಸ್, ಪ್ಲೈವುಡ್ ಕಾರ್ಖಾನೆ, ಎ.ಕೆ. ಇಂಡಸ್ಟ್ರೀಸ್, ಸಿಮೆಂಟ್ ವಸ್ತು ತಯಾರಿಕೆ ಕಾರ್ಖಾನೆ-ಇವನ್ನು ಹೆಸರಿಸಬಹುದು. ಬೀಡಿ ಉದ್ದಿಮೆ ಒಂದು ಪ್ರಮುಖ ಗೃಹೋದ್ಯಮ. ಇಲ್ಲಿಯ ತ್ರಾಮದ ಪಾತ್ರೆಗಳು ಹೆಸರಾದವು. ರೈಲ್ವೆ ವರ್ಕ್‍ಶಾಪ್, ರಾಜ್ಯ ರಸ್ತೆ ಸಾರಿಗೆಯ ಪ್ರಾದೇಶಿಕ ವರ್ಕ್‍ಶಾಪ್ ಇಲ್ಲಿವೆ.

ಹುಬ್ಬಳ್ಳಿ ಮೂರು ರೈಲುಮಾರ್ಗಗಳ ಕೂಡುದಾರಿಯಲ್ಲಿದ್ದು ಬೆಂಗಳೂರು-ಪುಣೆ, ಹುಬ್ಬಳ್ಳಿ-ಹೊಸಪೇಟೆ, ಹುಬ್ಬಳ್ಳಿ-ಸೋಲಾಪುರ ರೈಲು ಮಾರ್ಗಗಳು ಹುಬ್ಬಳ್ಳಿಯಲ್ಲಿ ಸಂಧಿಸುತ್ತವೆ. ಇದೊಂದು ಮುಖ್ಯ ಸಾರಿಗೆ ಸಂಪರ್ಕ ಕೇಂದ್ರವೂ ಆಗಿದ್ದು ಇಲ್ಲಿಂದ ಶಿರಸಿ, ಬೆಂಗಳೂರು, ಗದಗ, ಸೊಲ್ಲಾಪುರ, ಬೆಳಗಾಂವಿ ಮುಂತಾದ ಕಡೆಗಳಿಗೆ ರಸ್ತೆ ಸಂಪರ್ಕವಿದೆ.

ಹುಬ್ಬಳ್ಳಿಯಲ್ಲಿ ಕಲಾ, ವಿಜ್ಞಾನ, ಶಿಕ್ಷಣ ಮತ್ತು ಲಾ ಕಾಲೇಜುಗಳೂ ವೈದ್ಯಕೀಯ ಮತ್ತು ಎಂಜಿನಿಯರಿಂಗ್, ವಾಣಿಜ್ಯ ಮುಂತಾದ ಕಾಲೇಜುಗಳೂ ಹೋಮಿಯೋಪಥಿ ಮತ್ತು ಆಯುರ್ವೇದ ಕಾಲೇಜುಗಳೂ ಇವೆ. ಮಹಿಳೆಯರಿಗಾಗಿಯೇ ಎರಡು ಕಾಲೇಜುಗಳುಂಟು. ಕರ್ನಾಟಕ ವೈದ್ಯಕೀಯ ಕಾಲೇಜು ಸುಸಜ್ಜಿತ ಆಸ್ಪತ್ರೆ ಹೊಂದಿದೆ. ಇವಲ್ಲದೆ ಪಟ್ಟಣದಲ್ಲಿ ಅನೇಕ ಶಾಲೆಗಳಿದ್ದು ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. ಕರ್ನಾಟಕ ಇತಿಹಾಸ ಸಂಶೋಧನ ಸಂಸ್ಥೆ, ಜನತಾ ಶಿಕ್ಷಣ ಸಮಿತಿಯ ಅರ್ಥ ಸಂಶೋಧನ ಸಂಸ್ಥೆ ಮೂರು ತಾಂತ್ರಿಕ ತರಬೇತಿ ಸಂಸ್ಥೆಗಳೂ ಪ್ರಾಥಮಿಕ ಶಿಕ್ಷಕರ ಐದು ತರಬೇತಿ ಕಾಲೇಜುಗಳೂ ಇತರ ಸಂಘಸಂಸ್ಥೆಗಳೂ ನಗರ ಗ್ರಂಥಾಲಯ ಮುಂತಾದವುಗಳಿವೆ.

ಈ ನಗರದಲ್ಲಿರುವ ಭವಾನಿಶಂಕರ ದೇವಾಲಯ ಬಹು ಪ್ರಾಚೀನವಾ ದುದ್ದು. ಇದಲ್ಲದೆ ಅಂಬಾಭವಾನಿ, ಬನಶಂಕರಿ, ಬಸವಣ್ಣ, ದತ್ತಾತ್ರೇಯ, ದುರ್ಗವ್ವ, ಹರಿ, ಈಶ್ವರ, ಕಾಳಮ್ಮ, ಮಾರುತಿ, ಮುರಲೀಧರ, ನಾಗೇಶ್ವರ, ಪರ್ವತದೇವ, ರಾಧಾಕೃಷ್ಣ, ರಾಘವೇಂದ್ರಸ್ವಾಮಿ, ತುಳಜಾಭವಾನಿ, ವಿಠೋಬ, ವೆಂಕಟರಮಣ, ವೀರಭದ್ರ ಮೊದಲಾದ ದೇವಾಲಯಗಳಿವೆ. ಇಲ್ಲಿ ಪ್ರಸಿದ್ಧ ಸಿದ್ಧಾರೂಢ ಮಠ ಮತ್ತು ಮೂರು ಸಾವಿರ ಮಠಗಳೂ ಇವೆ. ಇಲ್ಲಿ ನಡೆಯುವ ಸಿದ್ಧಾರೂಢಸ್ವಾಮಿ ಜಾತ್ರೆ ಬಹು ಪ್ರಸಿದ್ಧವಾದುದು.

ಹುಬ್ಬಳ್ಳಿ-ಧಾರವಾಡ ಕಾರ್ಪೊರೇಷನ್ನಿನ ಮತ್ತೊಂದು ಪ್ರಮುಖ ಪಟ್ಟಣವಾದ ಧಾರವಾಡ ಹುಬ್ಬಳ್ಳಿಯ ವಾಯವ್ಯಕ್ಕೆ 19 ಕಿಮೀ ದೂರದಲ್ಲಿ ಹುಬ್ಬಳ್ಳಿ-ಬೆಳಗಾಂವಿ ಹೆದ್ದಾರಿಯಲ್ಲಿದೆ. ಬೆಂಗಳೂರು-ಪುಣೆ ರೈಲುಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ಈ ಪಟ್ಟಣದ ಮಧ್ಯದಲ್ಲಿ ಹಾದುಹೋಗಿದೆ. ಅಂಕೋಲ-ಗೂಟಿ ರಾಷ್ಟ್ರೀಯ ಹೆದ್ದಾರಿಯೂ ಈ ಪಟ್ಟಣದಲ್ಲಿ ಹಾದುಹೋಗಿದೆ. ಇಲ್ಲಿಂದ ಬಳ್ಳಾರಿ, ಬಿಜಾಪುರ, ಕಾರವಾರ, ಬೆಳಗಾಂವಿ ಮೊದಲಾದ ಜಿಲ್ಲಾ ಕೇಂದ್ರಗಳಿಗೆ ನೇರವಾದ ಸಂಪರ್ಕ ಒದಗಿಸುವ ಉತ್ತಮ ರಾಜ್ಯ ರಸ್ತೆಗಳ ಜೊತೆಗೆ ತಾಲ್ಲೂಕು ರಸ್ತೆಗಳಿದ್ದು ಸಾಕಷ್ಟು ಸಂಪರ್ಕ ಅನುಕೂಲತೆಗಳಿವೆ. ನಗರ ರಸ್ತೆಯ ಒಟ್ಟು ಉದ್ದ 81,878 ಮೀ. ಒಳಚರಂಡಿ ಯೋಜನೆ ಕಾರ್ಯಗತವಾಗಿದೆ. ನಗರಕ್ಕೆ ನೀರಸಾಗರದಿಂದ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆ. ನವಿಲುತೀರ್ಥದ ಬಳಿಯ ಮಲಪ್ರಭಾ ಅಣೆಕಟ್ಟಿನ ಸ್ಥಳದಿಂದ ನೀರು ಪೂರೈಕೆ ಯೋಜನೆಯಿದೆ.

ಇಲ್ಲಿಯ ನಿಯಂತ್ರಿತ ಮಾರುಕಟ್ಟೆ 1947ರಿಂದ ಕೆಲಸ ಮಾಡುತ್ತಿದೆ. ಮಣ್ಣು ಪರೀಕ್ಷಣೆ ಮತ್ತು ಬಿತ್ತನೆ ಬೀಜ ಸಂಸ್ಕರಿಸುವ ಕೇಂದ್ರಗಳಿವೆ. ಟ್ರ್ಯಾಕ್ಟರ್ ಮೊದಲಾದ ಆಧುನಿಕ ಕೃಷಿ ಉಪಕರಣಗಳನ್ನು ರೈತರಿಗೆ ಒದಗಿಸಿಕೊಡುವ ಸಹಕಾರಿ ಸಂಸ್ಥೆ ಇದೆ. ಬೀಡಿ ತಯಾರಿಕೆ, ಹತ್ತಿ ಕಾರ್ಖಾನೆ, ಸರ್ಕಾರಿ ಮತ್ತು ವಿಶ್ವವಿದ್ಯಾಲಯದ ಮುದ್ರಣಾಲಯಗಳು ಮತ್ತು ಕೆಲವು ಗ್ರಾಮೋದ್ಯೋಗ ಕೇಂದ್ರಗಳೂ ಇವೆ. ಇಲ್ಲಿ ವ್ಯಾಪಾರ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಆರ್ಥಿಕ ಸಹಕಾರ ನೀಡುವ ಅನೇಕ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಛೋಟಾ ಮಹಾಬಳೇಶ್ವರದ ಪ್ರಶಾಂತ ಸ್ಥಳದಲ್ಲಿದೆ. ಇಲ್ಲಿ ಕೃಷಿ ಮಹಾವಿದ್ಯಾಲಯ, ಬಾಸೆಲ್ ಮಿಶನ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಅನೇಕ ಕಾಲೇಜು, ದಂತವೈದ್ಯ ಕಾಲೇಜು ಇವೆ. ಇವಲ್ಲದೆ ಕಲಾ, ವಿಜ್ಞಾನ, ಶಿಕ್ಷಕರ ತರಬೇತಿ, ಒಂದು ತಾಂತ್ರಿಕ ತರಬೇತಿ ಸಂಸ್ಥೆ ಮುಂತಾದವೂ ನಾನಾ ಕಾಲೇಜುಗಳೂ ಪ್ರೌಢಶಾಲೆಗಳೂ ಇದ್ದು ಇದೊಂದು ಶಿಕ್ಷಣ ಕೇಂದ್ರವೆನಿಸಿದೆ. ಧಾರವಾಡದಲ್ಲಿ ಹೆಸರಾಗಿರುವ ಕೆಲವು ಸಂಘ ಸಂಸ್ಥೆಗಳಲ್ಲಿ ಮಲ್ಲಸರ್ಜ ವ್ಯಾಯಾಮಶಾಲೆ, ಶಂಕರಾಚಾರ್ಯ ಸಂಸ್ಕøತ ಪಾಠಶಾಲೆ, ಬಾಸೆಲ್ ಮಿಶನ್ ಶೈಕ್ಷಣಿಕ ಸಂಸ್ಥೆ ಮುಂತಾದವನ್ನು ಹೆಸರಿಸಬಹುದು. ಕಿತ್ತೂರ ಚೆನ್ನಮ್ಮ ಉಪವನ, ನಗರಸಭಾಭವನ, ಆಕಾಶವಾಣಿ ಕೇಂದ್ರ ಮುಂತಾದವುಗಳಿವೆ. (ಎಸ್.ವಿ.ಪಿ.)

ಇಲ್ಲಿನ ಕೋಟೆಯಲ್ಲಿರುವ ದುರ್ಗಾ ದೇವಸ್ಥಾನ ಪುರಾತನವಾದುದು. ಇಲ್ಲಿ ಕಲ್ಯಾಣ ಚಾಳುಕ್ಯ ಮನೆತನಕ್ಕೆ ಸೇರಿದ 6ನೆಯ ವಿಕ್ರಮಾದಿತ್ಯನ ಕಾಲದ 1117ರ ಒಂದು ಶಿಲಾಶಾಸನವಿದೆ. ಹಿಂದೆ ಧಾರವಾಡ ಕುಂದೂರು 500 ಪ್ರದೇಶದ ಒಂದು ಭಾಗವಾಗಿತ್ತು. ನರೇಂದ್ರ, ಮನಗುಂಡಿ, ಹೊಂಬಳ ಶಾಸನಗಳಲ್ಲಿ ಧಾರವಾಡದ ಉಲ್ಲೇಖಗಳಿವೆ. ಬಾದಾಮಿ ಚಳುಕ್ಯರ ಆಡಳಿತದ ವೇಳೆಯಲ್ಲಿ ಇದು ಅಸ್ತಿತ್ವಕ್ಕೆ ಬಂದಿರಬಹುದಾಗಿದೆ. ಕಲ್ಯಾಣ ಚಾಳುಕ್ಯರ ಹಾಗೂ ದೇವಗಿರಿ ಸೇವುಣರ ಆಡಳಿತ ಕಾಲದಲ್ಲಿ ಧಾರವಾಡ ನಗರ ಸಮೃದ್ಧ ಸ್ಥಿತಿಯಲ್ಲಿತ್ತು. ಅನಂತರ ಧಾರವಾಡ ವಿಜಯನಗರದ ಪ್ರಭಾವಕ್ಕೆ ಒಳಗಾದಂತೆ ಕಂಡುಬರುತ್ತದೆ. ಮುಸಲ್ಮಾನರ ಆಳಿಕೆಯ ಸಮಯದಲ್ಲಿ ನಗರಕ್ಕೆ ಹೊಸ ಕೋಟೆಯನ್ನು ಕಟ್ಟಲಾಯಿತು. ಬಿಜಾಪುರ ಸುಲ್ತಾನ ಅಲಿ ಆದಿಲ್ ಷಾ 1573ರಲ್ಲಿ ಧಾರವಾಡದ ಮೇಲೆ ದಂಡೆತ್ತಿಬಂದಾಗ ಧಾರವಾಡ ಕರ್ನಾಟಕದಲ್ಲಿಯೇ ಅತ್ಯಂತ ಭದ್ರಕೋಟೆಯಾಗಿತ್ತೆಂದು ಪರಿಗಣಿಸಲಾಗಿದೆ. ಶಿಲಾಶಾಸನಗಳ ಮೇರೆಗೆ ಇದರ ಪೂರ್ವ ಹೆಸರು ಧಾರವಾಡ ಎಂದಿದೆ. ಧಾರವಾಡಕ್ಕೆ ಈ ಹೆಸರು ಬರಲು ಈ ಸ್ಥಳದ ಭೌಗೋಳಿಕ ಕಾರಣವಿರಬಹುದು. ಧಾರವಾಡ ಬಯಲು ಸೀಮೆ ಹಾಗೂ ಮಲೆನಾಡುಗಳ ನಡುವೆ ಇದ್ದು ಬೆಳವಲ 300 ಪ್ರದೇಶದ ಒಂದು ಭಾಗವಾಗಿತ್ತು. ಶಾಸನದ ಉಲ್ಲೇಖದಂತೆ ಬೆಳವಲದ ಮಾರಾಟಕ್ಕಾಗಿ ಬರುತ್ತಿದ್ದ ಎಲ್ಲ ಸಾಮಗ್ರಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಧಾರವಾಡ ದ್ವಾರವಾಗಿತ್ತು. ದ್ವಾರ-ವಾಡಿ ಎಂಬ ಸಂಸ್ಕøತದ ಮೂಲಶಬ್ದಗಳಿಂದ ದಾರವಾಡ ಅಥವಾ ಧಾರವಾಡ ಆಯಿತೆಂದು ತೋರುತ್ತದೆ. (ಎಸ್.ಎಸ್.ಬಿ.)