ವಿಷಯಕ್ಕೆ ಹೋಗು

ದೂರದ ನಕ್ಷತ್ರ/೧೧

ವಿಕಿಸೋರ್ಸ್ದಿಂದ

೧೧

ನಾಲ್ವತ್ತು ಮತ್ತು ಹದಿನೈದು ರೂಪಾಯಿ ಸಂಬಳ ಜಯದೇವನಿಗೆ ಬರುತಿತ್ತು, ಆ ಸಂಬಳವನ್ನು ತಾಲ್ಲೋಕು ಕೇಂದ್ರದಿಂದ ತರುವವರಿಗೆ ಪ್ರವಾಸ ಭತ್ತೆ ಒಂದು ರೂಪಾಯಿ. ಅಧಿಕೃತ ಜವಾನನಿದ್ದಿದ್ದರೆ ಆ ರೂಪಾಯಿಯನ್ನು ಆತನ ತಲೆಗೆ ಕಟ್ಟಬಹುದಿತ್ತು. ನಡೆದುಕೊಂಡೋ ಉಪವಾಸ ಬಿದ್ದೋ ಹೇಗಾದರೂ ಮಾಡಿ ಆತ ಹೋಗಿ ಬರುತಿದ್ದ.. ಆದರೆ ಜಯದೇವನಿದ್ದ ಶಾಲೆಗೆ ಸಂಬಂಧಿಸಿ ಅಂತಹ ತೊಂದರೆ ಇರಲಿಲ್ಲ. ಯಾಕೆಂದರೆ, ನಂಜುಂಡಯ್ಯನೇ ಆ ಕೆಲಸ ಮಾಡುತಿದ್ದರು. ಅವರು ಒಂದು ರೂಪಾಯಿಯನ್ನೇನೋ ಪಡೆಯುತಿದ್ದರೂ ಸ್ವಂತದ ಐದು ರೂಪಾಯಿ ವೆಚ್ಚ ಮಾಡದೆ ಹಿಂತಿರುಗುತ್ತಿರಲಿಲ್ಲ. ಒಂದೆರಡು ದಿನ ತಡವಾಗಿ ಅವರು ವಾಪಸ್ಸು ಬಂದರೂ ಬಂದರೇ.

ಒಮ್ಮೆ ವೆಂಕಟರಾಯರೆಂದರು:

“ಅಲ್ಲ ಜಯದೇವ್, ನಮ್ಮ ನಂಜುಂಡಯ್ಯ ತುಂಬಾ ರಸಿಕರೂಂತ ಕಾಣುತ್ತೆ.”

ನಂಜುಂಡಯ್ಯನ ವಿದ್ವತ್ತಿನ ಕುರಿತು ಯೋಚಿಸಿ ಜಯದೇವ ಗೌರವ ತಳೆದುದಿತ್ತೇ ಹೊರತು, ರಸಿಕತೆಯ ವಿಷಯ ಅವನ ಗಮನಕ್ಕೆ బందిరలిల్ల. ಹೀಗಾಗಿ, ವೆಂಕಟರಾಯರಿಗೆ ಏನು ಉತ್ತರ ಕೊಡಬೇಕೆಂದು ತಿಳಿಯದೆ, ಪ್ರಶಾರ್ಥಕ ದೃಷ್ಟಿಯಿಂದ ಅವರನ್ನೆ ಜಯದೇವ ನೋಡಿದ.

“ಸಂಬಳ ತರೋ ಕೆಲಸ ಒಂದು ಸಲವಾದರೂ ನಂಜುಂಡಯ್ಯ ತಪ್ಪಿಸ್ಕೋಳ್ಳೋದೇ ಇಲ್ವಲ್ರಿ! ಅಂತೂ ಅಲ್ಲಿ ಮಜಾ ಮಾಡಿ ವಾಪಸ್ಸು ಬರ್ತಾರೆ...ಸಿನಿಮಾ ಗಿನಿಮಾ ನೋಡ್ಕೊಂಡು...”

ಈ ಊರಿನಲ್ಲಿ ಸಿನೀಮಾ ಇರಲಿಲ್ಲ, ನಾಟಕ ಕಂಪೆನಿಯೊಂದು ಬಂದು. ಡೇರೆ ಹಾಕಿ ದಿವಾಳಿಯೆದು ಹೋಗಿತ್ತಂತೆ ಹಿಂದಿನ ವರ್ಷ.

“ಇರಬಹುದು ಸಾರ್, ಮನರಂಜನೆಯೇ ಇಲ್ಲ ನೋಡಿ ಈ ಪುಟ್ಟ ಊರಲ್ಲಿ.” -

“ನಿಮಗೆ ಇಲ್ಲಿ ಬೇಜಾರಾಗೊಲ್ವೆ ಜಯದೇವ್?”

“ಬಂದು ಷುರೂನಲ್ಲಿ ಸ್ವಲ್ಪ ದಿವಸ ಆಯ್ತು, ಈಗ ಅಭ್ಯಾಸವಾಗಿದೆ. ಸಾರ್"

“ನನಗೆ ಇದೆಲ್ಲಾ ಗಮನಕ್ಕೆ ಬರೋದಿಲ್ಲ, ಶಾಲೆಯ ಅಭಿವೃದ್ಧಿ ಚೆನ್ನಾಗಿ ಆಗ್ತಿದ್ರೆ ಅಷ್ಟರಿಂದ್ಲೇ ನಾನು ಸುಖಿಯಾಗಿರ್ತೀನಿ."

ಆ ಮಾತಿನಲ್ಲಿ ಕಾಪಟ್ಯವಿತ್ತು, ಅಲ್ಲದೆ, ನಂಜುಂಡಯ್ಯನಿಗಿಂತ ತಾನು ಮೇಲು ಎಂಬ ಒಣ ಜಂಭವಿತ್ತು.

ಒಮ್ಮೊಮ್ಮೆ ವಿದ್ಯಾಭ್ಯಾಸದ ವಿಷಯವಾಗಿಯೇ ಸಂಭಾಷಣೆಯಾಗುತ್ತಿದ್ದಾಗ ವೆಂಕಟರಾಯರು ಹೇಳುತಿದ್ದರು :

“ಈಗ ಕಾಲೇಜುಗಳೆಲ್ಲ ಕಾರ್ಖಾನೆಗಳಾಗಿವೆ. ಡಿಗ್ರಿಯವರ್ನ ಯಾರು. ಕೇಳ್ತಾರೆ? ಕಾಸಿಗೊಂದು ಕೊಸರಿಗೊಂದು. ಈಗಿನ ಪದವೀಧರರಿಗಿಂತ ಹಳೇ ಮೆಟ್ರಿಕುಲೇಟುಗಳೇ ಮೇಲು.”

ಆದರೆ ಈ ಸರಣಿಯಲ್ಲಿ ಅವರು ಮಾತನಾಡುತಿದ್ದುದು ನಂಜುಂಡಯ್ಯ ಇಲ್ಲದಿದ್ದಾಗ ಮಾತ್ರ.

ಸದಾ ಕಾಲವೂ ವೆಂಕಟರಾಯರು ಮತ್ತು ಜಯದೇವನ ನಡುವೆ, ಸೌಹಾರ್ದದ ವಾತಾವರಣವಿರುವುದು ಸಾಧ್ಯವಿರಲಿಲ್ಲ, ಸವೆದು ಹೋಗಿದ್ದೊಂದು ವಿದ್ಯಾಯಂತ್ರದ ಸವಕಲು ಕೀಲಿಯಾಗಿ ಬಾಳಲು ಜಯದೇವ ಬಂದಿದ್ದನೆ? ದಿನಕಳೆದಂತೆ, ವಿದ್ಯಾಭಾಸದ ಸಮಸ್ಯೆಗಳು ಸ್ಪಷ್ಟವಾದಂತೆ, ತನ್ನ ಆತ್ಮವಿಶ್ವಾಸವೂ ಬೆಳೆದಂತೆ ಜಯದೇವ ಮಾತನಾಡತೊಡಗಿದ.

ವಾಚನಾಲಯಕ್ಕೇಂತ ಅಂದಾಜು ಪಟ್ಟಿಲಿ ಹಣ ಮೀಸಲಿದೆಯಲ್ಲಾ ಸಾರ್?” -

“ಇದೆ ಏನ್ಮಾಡೋಣ ಅಂತೀರಿ?”

"ಅದರಿಂದ ಒಂದಿಷ್ಟು ಒಳ್ಳೆ ಪುಸ್ತಕ ಕೊಂಡುಕೊಳ್ಳೋಣ.”

“ಹೊಸ ಪುಸ್ತಕ!” -

ಅದರಲ್ಲಿ ಆಶ್ಚರ್ಯಪಡಬೇಕಾದುದು ಏನಿತ್ತೊ! ಆದರೆ ವೆಂಕಟ ರಾಯರು ತಲೆಯಾಡಿಸಿದರು.

“ಛೆ! ಛೆ! ಜಯದೇವ್.. ಹಾಗೆ ಮಾಡೋದು ದುಡ್ಡು ದಂಡ ಹಳೆ ಕತೆ ಕಾದಂಬರಿಗಳು ಕಡಿಮೆಗೆ ಸಿಗುತ್ವೆ, ಒಂದಿಷ್ಟು ತಂದು ಹಾಕಿದರಾಯ್ತು.”

“ಅಷ್ಟಲ್ಲ ಸಾರ್, ವಿಶ್ವವಿದ್ಯಾನಿಲಯದವರು ಪ್ರಕಟಿಸಿದ ಮೂರಾಣಿ ಪುಸ್ತಕಗಳೂ ನಮ್ಮಲ್ಲಿಲ್ಲ. ವಿಜ್ಞಾನಕ್ಕೆ ಸಂಬಂಧಿಸಿ 'ಬಾಲಪ್ರಪಂಚ' ದಂಥ ಪುಸ್ತಕಗಳನ್ನೂ ನಾವು ಕೊಂಡ್ಕೋಬೇಕು.”

“ಇದೆಲ್ಲಾ ಹುಡುಗರಿಗೆ ರುಚಿಸುತ್ತೆ ಅಂತೀರಾ ?

“ಹುಡುಗರು ಅಂತಲ್ಲ ಸಾರ್-ನಾವೂ ಓದಿ ನೋಡ್ಬಹುದು.”

“ನಾವು ಓದೋದು! ಹ ಹ್ಹ! ಚೆನ್ನಾಗಿ ಹೇಳಿದ್ರಿ.”

“ಯಾಕ್ಕೂಡದು? ಮನುಷ್ಯ, ಸಾಮಾನ್ಯವಾಗಿ ಜೀವಮಾನವೆಲ್ಲ ವಿದ್ಯಾರ್ಥಿಯೇ ಅಲ್ಲವೇ ?"

“ಅದು ಬರೇ ಸಿದ್ದಾಂತ. ?? .

ಮಾತಿಗೆ ಮಾತು ಬೆಳೆದು ಗೇಣಿ ಅಕ್ಕಿಗೆ ನಷ್ಟವೊದಗಿತು. ವಾಚನಾಲಯಕ್ಕೆ ಮಿಾಸಲಿರುವ ಹಣವನ್ನು ಉಪಯೋಗಿಸುವ ವಿಚಾರ ಅಲ್ಲಿಗೇ ಉಳಿಯಿತು

.ಶಾಲೆಯಲ್ಲಿದ್ದ ಕಾಲ್ಚೆಂಡು ಹಳೆಯದು. ಅದಕ್ಕೆ ತೂತುಗಳು 'ಬಿದ್ದಾಗಲೆಲ್ಲ ಹತ್ತಿರದ ಸೈಕಲು ಅಂಗಡಿಯವನು 'ಪಂಚೇರು' ತೆಗೆದು ಕೊಡುತಿದ್ದ, ಈಗ ಆ 'ಪಂಚೇರು'ಗಳೆಲ್ಲ ಹೊಸ ಪಂಚೇರುಗಳೊಡನೆ ಮುಖ ತೋರಿಸಿದ್ದುವು.

ಹುಡುಗರ ಪರವಾಗಿ ಜಯದೇವ ಮುಖ್ಯೋಪಾಧ್ಯಾಯರೊಡನೆ ಮಾತನಾಡಿದ.

“ನಮ್ಮ ಫುಟ್ಬಾಲ್ಗೆ ಪೆನ್ಶನ್ ಕೊಡೋಕಾಲ ಬಂತು ಸಾರ್.”

ಆ ಪದಪ್ರಯೋಗ ವೆಂಕಟರಾಯರಿಗೆ ರುಚಿಸಲಿಲ್ಲ. ತಾವೂ ಹಳಬರಾಗುತಿದ್ದುದನ್ನು ಪೆನ್ಶನ್ ಎನ್ನುವ ಪದ ನೆನಪಿಗೆ ತಂದುಕೊಟ್ಟಿತು.

“ಈಗೇನ್ಬೇಕು ಜಯದೇವ್ ?

“ಹುಡುಗರು ಹೊಸ ಫುಟ್ಬಾಲು ಕೇಳ್ತೀದಾರೆ. ಈಗ ಒಂದು ವಾರದಿಂದ ಅವರು ಚೆಂಡಾಟ ಆಡಿಯೇ ಇಲ್ಲ.”

ವೆಂಕಟರಾಯರು ಸುಮ್ಮನಿದ್ದರು. ಕೊನೆಗೆ ಅಂದರು;

"ಮುಂದಿನ ಸಾರೆ ಸಂಬಳ ತರೋಕೆ ನಂಜುಂಡಯ್ಯ ಹೋಗ್ತಾರಲ್ಲ ಆಗ ತರಿಸಿದರಾಯ್ತು,” -

“ಮೂರನೇ ತರಗತಿ ಮಾನಿಟರ್, ನಮ್ಮ ಪೋಲೀಸ್ ಇನ್ಸ್ಪೆಕ್ಟರ್ ಹುಡುಗ, ಕ್ರಿಕೆಟ್ ಆಟ ಷುರು ಮಾಡ್ಬೇಕೂಂತ ಹೇಳ್ತೀದ್ದಾನೆ.”

“ಸರಿ, ಸರಿ... ಅದಕ್ಕೆಲ್ಲಿಂದ ತರೋದು ನೂರು ರೂಪಾಯಿ ?"

“ಆ ಮೇಲೆ ಹುಡುಗಿಯರು ತಮಗೊಂದು ರಿಂಗ್ ಟೆನ್ನಿಸ್ ಆಟಕ್ಕೆ ನೆಟ್ಟ-ರಿಂಗು ಬೇಕೂಂತ ಕೇಳ್ತೀದ್ದಾರೆ.”

“ಆಘೋಯ್ತು! ವಿದ್ಯಾರ್ಥಿಗಳು ಹೀಗೆಲ್ಲಾ ಮಾತನಾಡೋದಕ್ಕೆ ನೀವೇ ಕಾರಣ ಅಂತ ಭಾವಿಸ್ಲೆ ಮಿ.. ಜಯದೇವ್ ?”

"ಛೆ! ಛೆ! ಹಾಗೆ ತಪ್ಪು ತಿಳ್ಕೋಬೇಡಿ ಸಾರ್."

“ಮತ್ತೆ ? ಇದೆಲಾ ಏನೂಂತ ?”

“ಆಟದ ನಿಧೀ೦ತ ಇದೆಯಲ್ಲ, ಅದರಿಂದ ಖರ್ಚು ಮಾಡಬಹುದೂಂತ ಹುಡುಗರು ಹೇಳಿದ್ರು.”

“ಅವರು ಹೇಳಿದ್ರು ; ನೀವು ಕೇಳಿದ್ರಿ : ಅಲ್ಲ ?

ಈ ವಿಷಯದಲ್ಲೂ ಜಯದೇವನಿಗೆ ನಿರಾಶೆಯಾಯಿತು.

ಆದರೆ ಈ ಮಾತುಕತೆಯ ಪರಿಣಾಮವಾಗಿ ಮುಖೇಳ್ಳೋಪಾದ್ಯಾಯರು ವಾರಕ್ಕೆ ಎರಡು ಸಾರೆ ನಡೆಯಬೇಕಾದ 'ಡ್ರಿಲ್' ಪಾಠವನ್ನು ಕ್ರಮಬದ್ಧವಾಗಿ ತಾವೇ ನಡೆಸಿದರು. ಆದರೆ, ಹಾರಿ ಕುಪ್ಪಳಿಸಿ ಮೈಬಾಗಿಸಿ ಕೈಬಿಸಿ ಅವರಿಗೆ ಸಾಕುಸಾಕಾಗಿ ಹೋಯಿತು. ಡ್ರಿಲ್ ಪಾಠವನ್ನೂ ಕೊನೆಯಲ್ಲಿ 'ಯುವಕ ಜಯದೇವನೇ ನಡೆಸಿದ.

ನಂಜುಂಡಯ್ಯ ఆ ವಿಷಯವಾಗಿ ಅಂದರು:

'ನನಗೂ ಈ ಆಟಗಳಿಗೂ ಎಣ್ಣೆ-ಸೀಗೆ. ಮೊದಲಿಂದಲೂ ಅಷ್ಟೇ. ನಾನು ಪುಸ್ತಕ ಕೀಟ, ಸದ್ಯಃ ಥ್ರಿಲ್ ಪಾಠಗಳ್ನ ನೀವೇ ನಡೆಸ್ಕೊಂಡು ಹೋಗ್ರಿದೀರಲ್ಲ! ಅದರಿಂದ ನನಗೆಷ್ಟೋ ಸಮಾಧಾನವಾಗಿದೆಯಪ್ಪ!”

ಹಾಗೆ ನೋಡಿದರೆ ಜಯದೇವಸು ಪುಸ್ತಕಕೀಟವೇ ಆಗಿದ್ದ,

ನಂಜುಂಡಯ್ಯ ಸಿಗರೇಟು ಸೇದುತ್ತ ಕುಳಿತಿದ್ದರು. ಅವರನ್ನು ನೋಡುತ್ತ ಜಯದೇವ ಮನಸಿನಲ್ಲಿ ಅಂದುಕೊಂಡ:

'ಇವರು ಸುಖಜೀವಿ ಸಂಶಯವೇ ಇಲ್ಲ.'

ಸುಖಜೀವಿಯಲ್ಲದ ಜಯದೇವನಿಗೆ ಶಾಲೆಮುಗಿದ ಅನಂತರ ಸಂಜೆಯ ಹೊತ್ತನ್ನು ಕಳೆಯುವುದು ಕಷ್ಟವಾಯಿತು. ತಿದ್ದಲು ಹುಡುಗರ ಕಾಪಿ ಪುಸ್ತಕ' 'ನೋಟ್ಸ್ ಪುಸ್ತಕ'ಗಳೆಷ್ಟಿದ್ದರೂ ರಾತ್ರೆಯ ಸ್ವಲ್ಪ ಹೊತ್ತಿನಲ್ಲೇ ಆ ಕೆಲಸ ಮುಗಿಯುತಿತ್ತು... ಶಾಲೆಯ ಹುಡುಗರಿಗೆ ಆಡಲು ಒಳ್ಳೆಯ. ಆಟದ ಬಯಲಿರಲಿಲ್ಲ, ಹುಡುಗರನ್ನು ಹುರಿದುಂಬಿಸಿ ಶ್ರಮದಾನದ ಸೇನೆಯೊಂದನ್ನು ಸಿದ್ಧಗೊಳಿಸುವುದು ಸಾಧ್ಯವಾದರೆ–ಎನಿಸಿತು ಆತಗೆ.

ಜಯದೇವ ಹುಡುಗರೊಡನೆ ಆ ವಿಷಯವನ್ನು ಪ್ರಸ್ತಾಪಿಸಿದ. ಕೆಲ ಹುಡುಗರು ಕೇಳಿದರು: ``

“ನಾವೇ ಮಣ್ಣು ಅಗೀಬೇಕೆ ಸಾರ್?”

“ಹೂಂ ಮತ್ತೆ.”

“ಹೊರೋದು ??

“ನಾವೇನೇ!“

ಒಬ್ಬಿಬ್ಬರು ಹುಡುಗರು, “ಮನೇಲಿ ಕೇಳಿ ಬರಬೇಕು ಸಾರ್" ಎಂದರು. ಹೆಚ್ಚಿನ ಹುಡಗರೇನೋ ಜಯದೇವನ ಜತೆಯಲ್ಲಿ ಆ ಶ್ರಮದ ಕೆಲಸಕ್ಕೆ ಸಿದ್ಧರಾದರು.

ಆದರೆ ಅದಕ್ಕೆ ಮುಖೋಪಾಧಾಯರ ಸಮ್ಮತಿ ಸಿಗಲಿಲ್ಲ.

“ಇದೆಲ್ಲಾ ಯಾಕೋ ಸರಿಯಾಗಿಲ್ಲ ಜಯದೇವ !”

“ಏನಾಯ್ತು ಸಾರ್ ?”

ಪ್ರತಿಭಟನೆಯೇನೋ ಎಂಬ ಸಂದೇಹ ಮೂಡುವಂತಹ ಧ್ವನಿಯಲ್ಲಿ. ಜಯದೇವ ಕೇಳಿದ.

ವೆಂಕಟರಾಯರ ಉತ್ತರದ ಸ್ವರ ಜೋರಾಗಿಯೆ ಇತು.

“ಮತ್ತೇನಿದೆಲ್ಲ? ನೀವು ಬಿತ್ತುತಾ ಇರೋದು ಅಶಿಸ್ತಿನ ಬೀಜ. ನಾನಿದಕ್ಕೆಲಾ ಸಮ್ಮತಿ ಕೊಡೋದು ಸಾಧ್ಯವಿಲ್ಲ !”

“ಈ ರೀತಿ ಹುಡುಗರು ತಾವಾಗಿಯೇ ಸ್ವಾವಲಂಬನ ಜೀವನ ಅಭ್ಯಾಸ ಮಾಡೋದು ತಪ್ಪೆ ಸಾರ್?”

“ಸಿದ್ದಾಂತ ನನಗೆ ಕಲಿಸ್ಬೇಡಿ. ನಿಮಗೇನೂ ತಿಳಿದು. ಹುಚ್ಚುಚ್ಚಾಗಿ ಏನಾದರೂ ಮಾಡಿ ನಿಮ್ಮ ಕಾಲಿಗೆ ನೀವೇ ಕಲ್ಲು ಹಾಕ್ಕೊಬೇಡಿ. ಇವರಿನ್ನೂ ಎಳೇ ಹುಡುಗ್ರು, ಕೂಲಿಕೆಲಸ ಮಾಡಿಸಿದ್ರೆ ಊರವರು ನಮ್ಮನ್ನ ಸುಮ್ಮೆ ಬಿಟ್ಟಾರೇನ್ರಿ? ಏನು ಮಿ.. ನಂಜುಂಡಯ್ಯ, ನೀವಾದರೂ ಹೇಳಿ ಇವರಿಗೆ.”

ನಂಜುಂಡಯ್ಯ ಮುಗುಳ್ನಕ್ಕರು ಮಾತ್ರ.

ಸಂಜೆಯಾಯಿತು. ಜಯದೇವ ಮುಖ ಬಾಡಿಸಿ, ತಲೆಬಾಗಿಸಿ, ಹೊರಬಿದ್ದ, ಬೆಂಗಳೂರಿಗೆ ಅಭಿಮುಖವಾಗಿದ್ದೊಂದು ರಸ್ತೆಯಲ್ಲಿ ಕತ್ತಲಾಗುವವರೆಗೂ ಒಬ್ಬನೇ ನಡೆದು ಹೋದ. ಒಂದೆರಡು ನಿಮಿಷ ಅಳಬೇಕೆನಿಸಿತು. ಜತೆಯಲ್ಲೆ, 'ಥೂ ! ಧೂ ! ನಾನೇನು ಎಳೇ ಮಗು ಕೆಟ್ಟ ಹೋದೆನೆ? ಎಂದು ತನಗೆ ತಾನೇ ಭೀಮಾರಿ ಹಾಕಿಕೊಂಡ, ರಂಗರಾಯರು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ, ಅಥವಾ ನಂಜುಂಡಯ್ಯನೇ ಮುಖ್ಯೋಪಾಧಾಯರಾಗಿದ್ದರೂ ಪರಿಸ್ಮಿತಿ ಇಷ್ಟು ಪ್ರತಿಕೂಲವಾಗುತ್ತಿರಲಿಲ್ಲ. ಅಂತೂ ಈ ವೆಂಕಟರಾಯರು-ಅಬ್ಬ!-ಎಂತಹ ಮನುಷ್ಯ!

ಕಾಲು ಸೋತಿತೆಂದು, ಕತ್ತಲಾಯಿತೆಂದು, ಜಯದೇವ ಹಿಂತಿರುಗಿದ. ಕೈಕಾಲು ತೊಳೆದುಕೊಂಡು ಕೊಠಡಿ ಸೇರಿ ಆತ ಜಯರಾಮಶೆಟ್ಟರು ಕೊಟ್ಟಿದ್ದ ದೊಡ್ಡ ಕಂದೀಲು ಹಚ್ಚುತಿದ್ದಂತೆ ನಾಗರಾಜ ಮೇಲಕ್ಕೆ ಓಡಿ ಬಂದ

“ಎಲ್ಲಿಗೆ ಹೋಗಿದ್ರಿ ಸಾರ್ ನೀವು ಇಷ್ಟೊತ್ತು?”

“ವಾಕಿಂಗ್ ಹೋಗಿದ್ನೆಪಾ..”

“ಇವತು ನಮ್ಮ ಅಕ್ಕ ಬಂದ್ರು ಸಾರ್.”

“ಯಾವ ಅಕ್ಕ ನಾಗರಾಜ ?”

“ಆವತ್ತು ಹೇಳಿರ್ಲಿಲ್ವೆ ಸಾರ್-ಹಾಸನಕ್ಕೆ ಕೊಟ್ಟಿದೇಂತ. ಅವಳೇನೆ. ... ಅಮ್ಮ ಯಾರಿಗೂ ಹೇಳ್ಕೂಡದು ಅಂದಿದ್ದಾರೆ-ಅಕ್ಕ ಅಲ್ಲಿ ಜಗಳ ಮಾಡ್ಕೊಡು ಬಂದಿದಾಳಂತೆ. ”

“ಮತ್ತೆ ನಂಗ್ಯಾಕೆ ಹೇಳ್ದೆ?”

ಜಯದೇವನಿಗೆ ತಮಾಷೆಯಾಗಿ ತೋರಿತು ಇದೆಲ್ಲ.

“ನಿಮಗೆ ಹೇಳ್ಳೆ ಏನ್ಸಾರ್–ನೀವು ಮೇಷ್ಟ್ರು!”

ಸ್ದೂ ತಮಾಷೆಯ ತಿಳಿವಳಿಕೆಯೇ.

“ಆಗಲೀಪ್ಪ.. ನಿನಗೆ ಪಾಠ ಈಗ ಮಾಡೋಣವೋ ಬೆಳಗ್ಗೆ ಮಾಡೋಣವೋ ?

“ಬೆಳಗ್ಗೆ ಮಾಡೋಣ ಸಾರ್. ನನಗೆ ಅಕ್ಕನ ಜತೇಲಿ ಮಾತಾಡ್ಬೇಕು"

ಜಯದೇವನಿಗೂ ಏಕಾಂತ ಬೇಕಾಗಿತ್ತು, ಆಗ ಪಾಠ ಹೇಳಿಕೊಡುವ ಮನಸ್ಸು ಆತನಿಗಿರಲಿಲ್ಲ. ಅವನು ಆರಾಮಕುರ್ಚಿಯ ಮೇಲೆ ಕುಳಿತ.

“ಹಾಸನ್ದಲ್ಲಿ ಕಾಲೇಜಿದೆಯಂತೆ ಸಾರ್.”

"ಇದೆ...."

“ಆದರೆ ಕಟ್ಟಡ ಅಷ್ಟೇನೂ ಚೆನಾಗಿಲ್ವಂತೆ...”

ಜಯದೇವ ಏನೂ ಹೇಳದೆ ಕಿಟಕಿಯ ಹೊರಗೆ ಆಕಾಶದಲ್ಲಿ ಕಾಣುತಿದ್ದ ತಾರೆಗಳನ್ನು ನೋಡುತ್ತ ಕುಳಿತ.

ನಾಗರಾಜನೂ ಜಯದೇವರ ನಿರಾಸಕ್ತಿಯನ್ನು ಗಮನಿಸಿ, “ಬರ್ತಿನಿ ಸಾರ್” ಎಂದು ಕೆಳಕ್ಕಿಳಿದು ಹೋದ. *

ಆದರೆ ಸ್ವಲ್ಪ ಹೊತ್ತಿನಲ್ಲೆ ಹಿಂತಿರುಗಿ ಬರದಿರಲಿಲ್ಲ. ಅವನ ಕೈಯಲ್ಲಿ ಬೆಳ್ಳಿಯ ತಟ್ಟೆಯಲ್ಲಿ ಆರೆಂಟು ರಸಬಾಳೆ ಹಣ್ಣುಗಳಿದುವು.

“ಅಮ್ಮ ಕೊಟ್ಬಿಟ್ಟು ಬಾ ಅಂದು ಸಾರ್.”

“ನನಗೆ ಊಟವಾಗಿದೆ ನಾಗರಾಜ.”

“ಊಟವಾದ್ಯೇಲೆ ಅಲ್ವೇ ಸಾರ್ ಹಣ್ಣು ತಿನ್ನೋದು ?”

ತಟ್ಟೆಯನ್ನು ಹಾಗೆಯೇ ಅಲ್ಲಿ ಇರಿಸುವುದರಲ್ಲಿದ್ದ ನಾಗರಾಜನನ್ನು ತಡೆದು, ಹಣ್ಣಗಳನ್ನೆತ್ತಿಕೊಂಡು ತಟ್ಟೆಯನ್ನು ಜಯದೇವ ಹಿಂದಕ್ಕೆ ಕಳುಹಿಸಿದ

ಎರಡು ಹಣ್ಣುಗಳು ಆಹಾರವಾದುವು. ಒಂದು ಲೋಟ ನೀರು ಪಾನೀಯವಾಯಿತು, ಹಾಸಿಗೆ ಬಿಡಿಸಿಕೊಂಡು ದೀಪ ಆರಿಸಿ ದಿಂಬಿಗೆ ಜಯದೇವ ತಲೆಯಾನಿಸಿದ

ಕೆಳಗೆ ಹಜಾರದಲ್ಲಿ ಯಾರೋ ನಗುತಿದ್ದರು... ಹೆಂಗಸಿನ ನಗು... ಯುವತಿ.ನಾಗರಾಜನ ಅಕ್ಕನೇನೋ...

.ಬೆಂಗಳೂರಲ್ಲಿ ಅಷ್ಟು ಹೊತ್ತಿಗೆ ವೇಣು-ಸುನಂದ ಏನು ಮಾಡುತ್ತಿರಬಹುದು? ನಿದ್ದೆ?...

.ಬಾಲ್ಯದ ನೆನಪುಗಳು...ಅಂತೂ ತಾನು ಉಪಾಧ್ಯಾಯನಾದೆ. ಎಂತಹ ಉಪಾಧ್ಯಾಯ !

ಕಣ್ಣುಗಳು ತೇವವಾದುವು. ಜಯದೇವ ಮಗ್ಗುಲು ಹೊರಳಿ ಕತ್ತಲೆಯಲ್ಲಿ ಕಾಣದೆ ಇದ್ದ ಛಾವಣಿಯನ್ನೇ ದಿಟ್ಟಿಸಿ ನೋಡುತ್ತ ನಿದ್ದೆ ಹೋಗಲು ಯತ್ನಿಸಿದ.