ವಿಷಯಕ್ಕೆ ಹೋಗು

ದೂರದ ನಕ್ಷತ್ರ/೧೩

ವಿಕಿಸೋರ್ಸ್ದಿಂದ

೧೩

ಜಯರಾಮಶೆಟ್ಟರ ಮನೆಯಲ್ಲಿ ಎಲ್ಲ ಅನುಕೂಲತೆಗಳೂ ಇದ್ದುವು. 'ಏನೋಪ್ಪ' ಎಂದು ಶಂಕಿಸುವ ಅವಶ್ಯಕತೆಯೇ ಇರಲಿಲ್ಲ. ನಾಗರಾಜನ ಅಕ್ಕ ಶಾಮಲಾ ಮನೆಗೆ ಬಂದ ಮೇಲೆ ಉಪಾಧ್ಯಾಯರ ಬಗೆಗೆ ಮನೆಯವರು ಆದರ ತೋರಿಸುವುದೂ ಹೆಚ್ಚಿತು

ಹುಡುಗ ಬಂದು ಅಕ್ಕನಿಗಾಗಿ ಕತೆ ಪುಸ್ತಕಗಳನ್ನು ಕೇಳಿ ಒಯ್ಯುತಿದ್ದ. ತನ್ನ ಅಚ್ಚುಮೆಚ್ಚಿನ ಸಾಹಿತಿಗಳ ಹಲವಾರು ಕೃತಿಗಳನ್ನು ಬೆಂಗಳೂರಿನಿಂದ ಹೊತ್ತು ತಂದಿದ್ದ ಜಯದೇವನಿಗೆ ಪುಸ್ತಕ ಎರವಲು ನೀಡುವುದೇನೂ ಕಷ್ಟ ವಾಗಲಿಲ್ಲ, ಆದರೆ ಆ ಪುಸ್ತಕಗಳೆಲ್ಲ, ಹಾಳೆ ಕಿವಿ ಮಡಚಿಕೊಂಡೋ ನೀಳವಾದ ಸುವಾಸನೆಯ ತಲೆಗೂದಲಿನೊಡನೆಯೋ ಕು೦ಕುಮ ಪೌಡರುಗಳನ್ನು ಬಳೆದುಕೊಂಡೋ ವಾಪಸ್ಸು ಬರುತಿದುವು. ಪುಸ್ತಕಗಳಿಗೆ ಆ ರೀತಿ ಆಗುತಿದ್ದ ಹಿಂಸೆಯನ್ನು ಜಯದೇವ ಕಷ್ಟಪಟ್ಟು ಸಹಿಸಿದ.

ಆದರೆ, ಹಿಂಸೆ ಅವನನ್ನೂ ಬಲಿ ತೆಗೆದುಕೊಳ್ಳತೊಡಗಿದಾಗ ಜಯದೇವನಿಗೆ ಗಾಬರಿಯಾಯಿತು. ಸುಂದರಿಯಾಗಿದ್ದಳು ನಾಗರಾಜನ ಅಕ್ಕ ಶಾಮಲಾ, ಹೃಷ್ಟಪುಷ್ಟವುದ ಮೈ, ಗೌರಾಂಗಿಯಲ್ಲದೇ ಹೋದರೂ ತಾನು ಶಕ್ಷೆ ಸಮರ್ಥೆ ಎಂಬುದನ್ನು ಸಾರಿಹೇಳುವ ಗುಣ ವಿಶೇಷಗಳಿದುವು ಆಕೆಯ ರೂಪಕ್ಕೆ. ಗಂಡನೊಡನೆ ಯಾತಕ್ಕೊಸ್ಕರ ಜಗಳವಾಡಿ ಬಂದಳೋ ಎಂದು ಜಯದೇವ ಚಿಂತಿಸಿದ.

ನಾಗರಾಜ ದಿನವೂ ಅಕ್ಕನ ವಿಷಯ ಏನಾದರೊಂದು ಮಾತನಾಡದಿರುತ್ತಿರಲಿಲ್ಲ,

“ಬೆಂಗಳೂರಲ್ಲಿ ಎಷ್ಟು ಸಿನಿಮಾ ಥಿಯೇಟರುಗಳಿದಾವೆ ಹೇಳಿ ಸಾರ್.”

*ಗೊತ್ತಿಲ್ವಲ್ಲಾ...”

“ಅರವತ್ಮೂರು. ನಂಗೊತ್ತಿದೆ. ಅಕ್ಕ ಹೇಳಿದ್ದು, ಮದುವೆ ಆದ್ಮೇಲೆ ಅಲ್ಲಿ ನಮ್ಮ ಸಂಬಂಧಿಕರ ಮನೇಲಿ ಒಂದು ತಿಂಗಳು ಇದ್ಲಂತೆ,”

ಮತ್ತೊಮ್ಮೆ ಬೇರೆ ರೀತಿಯ ಪ್ರಶ್ನೆ.

“ನಿಮ್ಮೂರು ಖುದ್ದು ಬೆಂಗಳೂರೇ ಸಾರ್?”

“ಹೌದು, ಯಾಕಪ್ಪಾ?"

“ಅಲ್ಲ ಅಂದ್ಲು ನಮ್ಮಕ್ಕ, ನಿಮ್ಮನ್ನ ನೋಡಿದ್ರೆ ಬೆಂಗಳೂರ್ನೊರ ಹಾಗೆ ಕಾಣೋದಿಲ್ವಂತೆ, ಯಾವುದೋ ಹಳ್ಳಿಯವರಿರಬಹುದೂಂತ ನಮ್ಮಕ್ಕ ಅಂದ್ಲು,”

ತನ್ನ ಅಕ್ಕನ ಊಹೆ ಸರಿಯಾಗಲಿಲ್ಲವೆಂದು ನಾಗರಾಜನಿಗೆ ನಿರಾಸೆಯಾದರೆ, ಆ ಅಕ್ಕನ ಅಭಿಪ್ರಾಯ ಕೇಳಿ ಜಯದೇವನ ಮೈ ಉರಿಯಿತು. ಕಿವಿಗಳು ಕೆಂಪಗಾದುವು. ಸೂಚ್ಯ ಮಾತುಗಳಲ್ಲಿ ಆ ಶ್ಯಾಮಲಾ ತನ್ನನ್ನು ಅವಮಾನಿಸುತಿದ್ದಳೆಂದು, ಕೆಣಕುತಿದ್ದಳೆಂದು, ಅವನಿಗೆ ಹೊಳೆಯದೆ ಹೋಗಲಿಲ್ಲ.

“ನಿಮ್ಮಕ್ಕ ಹೇಳಿದ್ದು ಸರಿ ಕಣೋ. ನಾನು ಹುಟ್ಟಿದ್ದು ಕಾನಕಾನ ಹಳ್ಳೀಲಿ."

ಅಕ್ಕ ಸರಿಹೇಳಿದಳೆಂದು ನಾಗರಾಜನಿಗಾದ ಸಂತೋಷದ ಭರದಲ್ಲಿ ಜಯದೇವನ ಧ್ವನಿಯಲ್ಲಿದ್ದ ಸಿಡುಕು ಅವನ ಗಮನಕ್ಕೆ ಬರಲೇ ಇಲ್ಲ. ಅಕ್ಕನಿಗೆ ಆ ವಿಷಯ ತಿಳಿಸಲು ಆತ ಕೆಳಕ್ಕಿಳಿದು ಹೋದ.

ಒಮ್ಮೊಮ್ಮೆ ಕೊಠಡಿಯಿಂದ ಇಳಿದು ಬರತಿದ್ದಾಗ ಶಾಮಲೆಯ ದರ್ಶನವಾಗುತಿತ್ತು, ಆರಂಭದಲ್ಲಿ ಆಕೆ ಗಂಭೀರಳಾಗಿಯೇ ಇದ್ದಳು. ಬಳಿಕ ಯಾರೂ ಸವಿಯೊಪದಲ್ಲಿ ಇಲ್ಲದೆ ಇದ್ದಾಗ ಮುಗುಳ್ನಗತೊಡಗಿದಳು. ಈ ಸಂಕೋಚದ ಕಳ್ಳತನದ ನಗೆವಿನಿಮಯದಿಂದಲೆ ಹೆಚ್ಚುತಿತು. ಜಯದೇವನೊಳಗಿನ ಕಸಿವಿಸಿ. ನಮ್ಮವರೇ ಹೀಗೆ: ನೇರವಾಗಿ ಮಾತನಾಡಿ ನಿಸ್ಸಂಕೋಚವಾಗಿ ಬೆರೆತರೆ ಯಾವ ಯೋಚನೆಯೂ ಇಲ್ಲ; ಅದರ ಬದಲು ಬಾಗಿಲ ಮರೆಯಲ್ಲಿ ಬೇರೆಯವರ ಕಣ್ಣ ತಪ್ಪಿಸಿ–ಥೂ.... ಜಯದೇವ ಎಲ್ಲರನ್ನೂ ನಿಂದಿಸಿದ, ತನ್ನನ್ನೂ ನಿಂದಿಸಿಕೊಂಡ. ತಾನು ಎಚ್ಚರದಿಂದಿರಬೇಕು; ಉಪಾಧ್ಯಾಯನಾಗಿ ಇರಲು ಬಂದವನು ಮಾನವಾಗಿ ಮರ್ಯಾದೆಯಾಗಿ ಬಾಳಬೇಕು; ಯಾರಾದರೂ ಬೇಕುಬೇಕೆಂದೇ ಏನಾದರೂ ಅಪಾರ್ಥ ಕಲ್ಪಿಸಿದರೆ ಎಂತಹ ಪ್ರಮಾದವಾದೀತು! ... ಎಂದೆಲ್ಲ ಯೋಚಿಸಿದ.

ಆ ಸಂದರ್ಭಗಳಲ್ಲೆಲ್ಲ ಅನಿವಾರ್ಯವಾಗಿಯೆ ಅವನಿಗೆ ವೇಣು-ಸುನಂದೆ ಯರ ನೆನಪಾಗುತಿತ್ತು, ಅಂತಹ ದಿನಗಳಲ್ಲಿ ನೆಮ್ಮದಿ ಇಲ್ಲದ ಮನಸಿನಿಂದ ಆತ ಶಾಲೆಗೆ ಹೋಗುತಿದ್ದ.

ಪತ್ರಿಕೆಗಳ ತುಂಬಾ ವಿದ್ಯಾಭ್ಯಾಸದ ಹೊಸ ಸುಧಾರಣೆಗಳ ವಾರ್ತೆಯೇ ಬರುತಿತ್ತು, ತೀವ್ರ ಚರ್ಚೆಗಳು, ಭಾಷಣಗಳು...

ವಿದ್ಯಾಭ್ಯಾಸದಲ್ಲಿ ಸುಧಾರಣೆಯೆಲ್ಲ ದೂರದ ಕನಸು ಎಂದು ಭಾವಿಸಿದ್ದವರು ಕಣ್ಣು ಹೊಸಕಿಕೊಂಡು, ಹೊತ್ತು ಎಷ್ಟೀಗ–ಎಂದು ಕೇಳುವಂತಾಯಿತು.

ಜಯದೇವನೂ ಆಸಕ್ತಿವಹಿಸಿ ಸಮೂಲಾಗ್ರವಾಗಿ ವಿವರಗಳನ್ನು ಅಭ್ಯಾಸ ಮಾಡಿದ. ಮೊದಲಹಂತದಲ್ಲಿ ಆರುವರ್ಷಗಳ ತನಕ ಹಳ್ಳಿಗಾಡಿನ ಶಿಕ್ಷಣ, ಆ ಬಳಿಕ ವಿದ್ಯಾರ್ಥಿಯನ್ನು ಸ್ವಾವಲಂಬಿಯಾಗಿ ಸ್ವಯಂಪೂರ್ಣನಾಗಿ ಮಾಡುವ ಯತ್ನ: ಮೆಟ್ರಿಕ್ ಪರೀಕ್ಷೆಯ ಬದಲು, ಕಾಲೇಜಿನ ಮೊದಲ ಎರಡು ವರ್ಷಗಳನ್ನೂ ಸೇರಿಸಿ ದ್ವಿತೀಯ ಹಂತದ ಏರ್ಪಾಟು. ಅಲ್ಲಿಯವರೆಗೂ ಮಾತೃಭಾಷೆಯ ಮಾಧ್ಯಮ. ಆ ಬಳಿಕ ಪ್ರೌಢ ವಿದ್ಯಾಭ್ಯಾಸ... ಸರಿಯೋ ತಪ್ಪೋ—ಅಂತೂ ಅದು ಆಕರ್ಷಕವಾಗಿತ್ತು.

ನಂಜುಂಡಯ್ಯನ ವಿಮರ್ಶೆಯ ದೃಷ್ಟಿ ಬೇರೆಯೂ ಕೆಲ ವಿಷಯಗಳನ್ನು ಗುರುತಿಸಿತು. ಇದರ ಉದ್ದೇಶವೇನು? ದ್ವಿತೀಯ ಹಂತದಲ್ಲೆ ಸ್ವಾವಲಂಬಿಗಳಾದ ನಾಗರಿಕರನ್ನು ನಿರ್ಮಾಣ ಮಾಡುವುದೆ? ಸ್ವಲ್ಪಮಟ್ಟಿಗೆ ಅದು ಸರಿ ಎನ್ನಬಹುದು. ಆದರೆ ಪದವೀಧರರಾಗುವವರ ಸಂಖ್ಯೆ ಇನ್ನು ಕಡಮೆಯಾಗುವುದು. ನಿರುದ್ಯೋಗಿ ಪದವೀಧರರ ಪ್ರಶ್ನೆಯ ಹೆಚ್ಚಿನ ಕಾಟ ತಪ್ಪುವುದು. ಹೇರಳ ಹಣವಿದ್ದವರು, ಅತ್ಯಗತ್ಯವಿದ್ದವರು ಮಾತ್ರ ಕಾಲೇಜುಗಳ ಮೆಟ್ಟಲು ಹತ್ತುವರು.

“ಇದರ ಹಿಂದೆ ರಾಜಕೀಯ ಇದೆ ಸಾರ್...ಮಹಾಬುದ್ಧಿವಂತರು ಇದನ್ನು ಸಲಹೆ ಮಾಡಿದ್ದಾರೆ...ಭೇಷ್ !”

ಹಾಗೆಂದು ಅದಕ್ಕೆ ಅವರ ವಿರೋಧವೇನೂ ಇರಲಿಲ್ಲ.

ವೆಂಕಟರಾಯರಿಗಿದ್ದ ದೃಷ್ಟಿಯೇ ಬೇರೆ. ಸುಧಾರಣೆಗಳಿಗೆ ಅಧಿಕಾರಿ ವೃತ್ತದ ಬೆಂಬಲ ದೊರೆತಿತು, ಆ ಕಾರಣದಿಂದ ಅವರೂ ಅದರ ಬೆಂಬಲಿಗರಾದರು; ಸುಧಾರಣೆಗಳ ಗುಣಗಾನ ಮಾಡಿದರು.

“ನಮ್ಮ ಸಂಸ್ಕಾನ ಮಾದರಿ ಸಂಸ್ಥಾನ ಅನ್ನೋದಕ್ಕೆ ಬೇರೆ ನಿದರ್ಶನ ಬೇಕೇನ್ರಿ? ಎಲ್ಲದ್ರಲ್ಲು ಮೇಲ್ಪಂಕ್ತಿ ಹಾಕೋರು ನಾವು.”

ಅದೇನಿದ್ದರೂ ವಿದ್ಯಾಭ್ಯಾಸದ ಈ ಸುಧಾರಣೆ ಹೊಸ ಪ್ರಯೋಗವೆನ್ನುವುದರಲ್ಲಿ ಸಂದೇಹವಿರಲಿಲ್ಲ. ವಿದ್ಯಾಭ್ಯಾಸ ಪದ್ಧತಿಯಲ್ಲಿ ಬದಲಾವಣೆಯಾಗಲೇ ಬೇಕು ಎಂಬ ವಿಷಯದಲ್ಲೂ ಭಿನಾಭಿಪಾಯವಿರಲಿಲ್ಲ, ಈಗ ಸುಧಾರಣೆಗಳ ಪ್ರಸ್ತಾಪ ಬಂದು ಜಯದೇವನಿಗೆ ಸಂತೋಷವಾಯಿತು. ಈ ಮಹಾಪ್ರಯೋಗದಲ್ಲಿ ತಾನೂ ಭಾಗಿಯಾಗುವೆನೆಂದು ಹೆಮ್ಮೆ ಎನಿಸಿತು.

ಮುಂದೆ ಊರಲ್ಲಿ ಸಿದ್ಧವಾಗಬೇಕಾದ ಖಾಸಗಿ ಹೈಸ್ಕೂಲು, ಸ್ವಾವಲಂಬಿಗಳನ್ನು ಸಿದ್ಧಗೊಳಿಸುವ ಹೊಸ ಮಾದರಿಯ ದ್ವಿತೀಯ ಹಂತದ ಶಾಲೆಯಾಗಿ ತನ್ನ ನೇತೃತ್ವದಲ್ಲಿ ನಡೆಯುವ ಚಿತ್ರವನ್ನು ನಂಜುಂಡಯ್ಯನವರು ಕಲ್ಪಿಸಿಕೊಂಡರು.

ವೆಂಕಟರಾಯರು ಮಾತ್ರ ಅಂದರು :

“ಅಂತೂ ಈ ಪ್ರಯೋಗಗಳೆಲ್ಲ ಜಾರಿಗೆ ಬರೋ ಹೊತ್ತಿಗೆ ನನಗೆ ನಿವೃತ್ತಿಯಾಗಿರುತ್ತೆ!”

ಸುಧಾರಣೆಯ ಮೊದಲ ಹೆಜ್ಜೆಯಾಗಿ ಲೋವರ್ ಸೆಕೆಂಡರಿ ಪರೀಕ್ಷೆಯನ್ನೇ—ಮಾಧ್ಯಮಿಕ ಶಾಲೆಯ ಸಾರ್ವಜನಿಕ ಪರೀಕ್ಷೆಯನ್ನೇ– ಮುಂದಿನ ವರ್ಷದಿಂದ ತೆಗೆದು ಹಾಕುವ ನಿರ್ದೇಶ ಬಂತು.

ಹಾಗಿದ್ದರೆ ಆ ವರ್ಷದ್ದೇ ಕೊನೆಯ ಐದು ರೂಪಾಯಿಗಳ ಎಲ್.ಎಸ್. ಪರೀಕ್ಷೆ

ಇದರಿಂದ ಮಾತ್ರ ವೆಂಕಟರಾಯರಿಗೆ ಅಸಮಾಧಾನವಾಯಿತು. ದೂರದಲ್ಲಿ ಸೊಬಗಿನದಾಗಿ ಕಂಡಿದ್ದ ಸುಧಾರಣೆ ತೀರ ಸಮಿಾಪಕ್ಕೆ ಬಂದಾಗ ನಂಜುಂಡಯ್ಯನೂ ಅಳುಕಿದರು. ಇನ್ನು ಮುಂದೆ ಎಲ್.ಎಸ್. ಪರೀಕ್ಷೆಗೆ ಭೀತಿಯ ಸ್ವರೂಪವಿಲ್ಲ, ಕೋಚಿಂಗ್ ಕ್ಲಾಸುಗಳಿಗೂ ಹಿಂದಿನ ಮಹತ್ವ ವಿಲ್ಲ, ಉತ್ತರ ಪತ್ರಿಕೆಗಳ ಪರೀಕ್ಷಕರಾಗಿ ದೊರೆಯುತಿದ್ದ ಇನ್ನೂರು ರೂಪಾಯಿಗಳಷ್ಟರ ಸಂಭಾವನೆಯೂ ಇನ್ನಿಲ್ಲ.

“ಈ ಸುಧಾರಣೆಗಳ ಪರಿಣಾಮ ಏನಾಗುತ್ತೊ ನೋಡಬೇಕು” ಎಂದು ವೆಂಕಟರಾಯರೂ ನಂಜುಂಡಯ್ಯನವರೂ ಶಂಕೆ ವ್ಯಕ್ತ ಪಡಿಸಿದರು!

ಜಯದೇವನಿಗೆ ಆ ಏರ್ಪಾಟೂ ಸಾಗತಾರ್ಹವಾಗಿ ತೋರಿತು. ವರ್ಷವೆಲ್ಲ ಕಲಿತುದನ್ನು ಕೆಲವೇ ಗಂಟೆಗಳಲ್ಲಿ ಯಾಂತ್ರಿಕವಾಗಿ ಸಾರ್ವ ತ್ರಿಕವಾಗಿ ಉತ್ತರಿಸುವ ವ್ಯವಸ್ಮೆ ಎಂದೂ ಆತನಿಗೆ ಮೆಚ್ಚುಗೆಯಾಗಿರಲಿಲ್ಲ. ಸದ್ಯಃ ಶಾಲೆಯ ಪರೀಕ್ಷೆ ಮಾತ್ರ ಎಂಬ ಭಾವನೆಯಾದರೂ ಉಂಟಾದರೆ ಅದರಿಂದ ದೌದ್ಧಿಕ ಪ್ರದರ್ಶನಕ್ಕೆ ಹೆಚ್ಚು ಒಳ್ಳೆಯ ವಾತಾವರಣ ಎರ್ಪಡುವುದು ಸಾಧ್ಯವಿತ್ತು.

ವಿದ್ಯಾಖಾತೆಯ ಈ ನಿರ್ಧಾರದಿಂದ ಹೆಚ್ಚಿನ ಪರಿಣಾಮ ಉಂಟಾದುದು ನಾಲ್ಕನೆ ತರಗತಿಯ ವಿದ್ಯಾರ್ಥಿಗಳ ಮೇಲೆ, ಅವರೇ ಎಲ್. ಎಸ್. ಪರೀಕ್ಷೆಯ ಕೊನೆಯ ತಂಡ.

ಜಯದೇವ ನಗುತ್ತ ಹೇಳಿದ:

“ನೀವೆಲ್ಲ ಮುದುಕ ಮುದುಕೀರಾದಾಗ್ಲೂ ಮೊಮ್ಮಕ್ಕಳ ಮುಂದೆ ಜಂಭ ಕೊಚ್ಕೋಬಹುದು--ಕಡೇ ಸಲ ಎಲ್. ಎಸ್. ಪರೀಕ್ಷೆ ಕಟ್ಟೋರು ನಾವೇ ಅಂತ ! "

ಆದರೆ ನಾಲ್ಕಾರು ದಡ್ಡ ಹುಡುಗರಿಗೆ ಮಾತ್ರ ಅನಿಸದಿರಲಿಲ್ಲ;

'ಈ ಸಲ ಫೇಲಾದ್ರೆ ತೊಂದರೆ ಇಲ್ಲ. ಮುಂದಿನ್ಸಲ ಮೇಷ್ಟ ಪರೀಕ್ಷೆ. ಹೇಳಿಸಿ ಪಾಸ್ಮಾಡಿಸ್ಕೊಂಡರಾಯ್ತು!' ಇಂತಹ ಸಂಭವಗಳ ನಡುವೆ ರೇಂಜ್ ಇನ್ಸ್ಪೆಕ್ಟರರು ಬರುವರೆಂದು ಮುನ್ಸೂಚನೆ ಬಂತು. ಒಂದೇ ದಿವಸ ಆ ಊರಲ್ಲಿದ್ದು ಶಾಲಾ ಸಂದರ್ಶನ ಮುಗಿಸಿ ಮತ್ತೆ ಮುಂದಿನ ಊರಿಗೆ ಹೊರಡುವ ಕಾರ್ಯಕ್ರಮ.

ನಂಜುಂಡಯ್ಯನವರಿಗೆ ಅವರ ಪರಿಚಯವಿತ್ತು. ವೆಂಕಟರಾಯರಿಗೆ ಇರಲಿಲ್ಲ.

“ಯಾರ್ರೀ ಈತ ? ರಾಧಾಕೃಷ್ಣಯ್ಯ ಅಂತೆ. ಗುರುತೇ ಇಲ್ವಲ್ಲಾ!”

“ಹೋದ ವರ್ಷವೂ ಆತನೇ ಬಂದಿದ್ರಪ್ಪಾ..”

“ಹುಡುಗ್ನೋ?"

“ಮಧ್ಯವಯಸ್ಸು, ಸ್ವಲ್ಪ ವಿಚಿತ್ರ ಮನುಷ್ಯ, ರಂಗರಾಯರ ಮೇಲಿನ ಆರೋಪಗಳ ವಿಷಯಲ್ಲಿ ಷರಾ ಬರೆಯೋಕೂ ಒಪ್ಲಿಲ್ಲ, ಸುಮ್ಮೆ ಡಿ.ಇ.ಒ. ಕಡೆ ದಾಟಿಸ್ಬಿಟ್ರು.”

“ಗಟ್ಟಿ ಅನ್ನಿ"

“ಗಟ್ಟಿನೋ ಮೆತ್ತಗೋ, ಆಳವಾದ ಮನುಷ್ಯ, ಗೊತ್ತೇ ಆಗಲ್ಲ, ನಗುವೂ ಇಲ್ಲ, ಮಾತೂ ಇಲ್ಲ, ಮೌನವಾಗಿ ಕೂತಿದ್ರೆ ಏನೋ ಒಂದು ಥರ ಆಗುತ್ತೆ.”

ವೆಂಕಟರಾಯರ ಎದೆ ಚಿಳ್ಳೆಂದಿತು. ಮುಗುಳ್ನಗಲು ಅವರು ವಿಫಲರಾಗಿ ಯತ್ನಿಸಿದರು.

“ಮರ್ಜಿ ಹೇಗೆ? ಎಲ್ಲಿ ಉಳ್ಕೊತಾರೆ ಬಂದ್ರೆ?”

“ಹೋದ್ದಲ ಬಂದಾಗ, ಈ ಊರಲ್ಲಿ ಮುಸಾಫಿರ್ ಖಾನೆ ಇಲ್ವೆ ?– ಅಂದು ಇಲ್ಲ-ಅಂದಿದ್ದಕ್ಕೆ, ಯಾರ ಮನೆಗೂ ಹೋಗೋಕೆ ಒಪ್ದೆ, ಶಾಲೇಲೇ ಇದ್ಬಿಟ್ರು. ಜತೇಲಿ ಜವಾನ. ನೀವು ನಂಬ್ತೀರೋ ಇಲ್ವೋ ಪೇಟೆಯಿಂದ ಅಕ್ಕಿ ತರಕಾರಿ ಹಾಲು ಮೊಸರು ಜವಾನ ಕೊಂಡ್ಕೊಂಡು ಬಂದ ಸೌದೆ ಮಾತ್ರ ಈ ಕಾಡಿನಲ್ಲಿ ಮಾರಾಟಕ್ಕೆ ಸಿಗೋದಿಲ್ಲಾಂತ ಎಲ್ಲಿಂದಲೋ ಇಸಕೊಂಡು ಬಂದಿದ್ದಾಯಿತು!”

“ಗೊತ್ತು ಬಿಡಿ. ಈ ಜಾತೀನ ನೋಡಿದೀನಿ.”

ವೆಂಕಟರಾಯರ ಬಹಿರಂಗ ಮೂದಲಿಕೆ,ನಂಜುಂಡಯ್ಯನವರ ಸೂಕ್ಷ್ಮ ವ್ಯಂಗ್ಯ, ಆ ಅಧಿಕಾರಿಯ ಬಗೆಗೆ ಜಯದೇವನಲ್ಲಿ ಆದರ ಮೂಡಿಸಿತು.

ಇನ್ಸ್ಪೆಕ್ಟರು ಯಾವ ಜಾತಿ ಎಂದು ತಿಳಿದುಕೊಳ್ಳಲು ವೆಂಕಟರಾಯರು ಕುತೂಹಲಿಯಾಗಿದ್ದರು. ಅವರು ಬಾಹ್ಮಣನಲ್ಲವೆಂಬುದಷ್ಟು ನಂಜುಂಡಯ್ಯನಿಗೆ ಗೊತ್ತಿದ್ದರೂ ಅವರಾಗಿ ಹೇಳಲಿಲ್ಲ.

ವೆಂಕಟರಾಯರು ಇನ್ಸ್ಪೆಕ್ಟರರ ಸ್ವಾಗತಕ್ಕೆ ಸಿದ್ಧತೆ ನಡೆಸಿದರು. ಚಿಕ್ಕ ಪರೀಕ್ಷೆಗಾಗಿ ಓದುತ್ತಲಿದ್ದ ವಿದ್ಯಾರ್ಥಿಗಳಲ್ಲಿ ಕೆಲವರನ್ನಷ್ಟೆ ಆಯ್ದು ಇನ್ಸ್ಪೆಕ್ಟರ ಮುಂದೆ ಪ್ರಶ್ನೆ ಕೇಳುವುದೆಂದು ಗೊತ್ತಾಯಿತು. ಶಾಲಾ ಕಟ್ಟಡ ಸ್ವಚ್ಛವಾಯಿತು. ಒಳ್ಳೆಯ ಬಟ್ಟೆಗಳನ್ನೇ ಹಾಕಿಕೊಂಡು ಬರಬೇಕೆಂದು ಸಾರಿ ಹೇಳಿದಾಯಿತು. ಎಂದಿಲ್ಲದ ಚಟುವಟಿಕೆಯನ್ನು ಪ್ರದರ್ಶಿಸುತ್ತ ವೆಂಕಟರಾಯರು ಓಡಾಡಿದರು.

ರೇಂಜ್ ಇನ್ಸ್ಪೆಕ್ಟರು ರಾಧಾಕೃಷ್ಣಯ್ಯ ಬಂದಿಳಿದರು. ಅವರು ಸಂತೋಷಗೊಳ್ಳಲಿಲ್ಲ. ರೇಗಲಿಲ್ಲ, ಏನೂ ಅನ್ನಲಿಲ್ಲ. ನಂಜುಂಡಯ್ಯ ಹೇಳಿದ್ದ ಹಾಗೆ, ಅವರ ಮೌನವೇ ವಿಚಿತ್ರವಾಗಿತ್ತು.

ಇನ್ಸ್ಪೆಕ್ಟರು ತನಿಖೆಗೆ ಬಂದಾಗ ಜಯದೇವ ಎರಡನೆ ತರಗತಿಗೆ ಪಾಠ ಮಾಡುತಿದ್ದ, ಇನ್ಸ್ಪೆಕ್ಟರು ವಿದ್ಯಾರ್ಥಿಗಳ ಬಳಿಯಲ್ಲೆ ಜಾಗ ಮಾಡಿ ಕುಳಿತರು, ಅವರು ಅಲ್ಲಿದ್ದರೆಂಬ ಗಮನವೇ ಇಲ್ಲದಂತೆ ಜಯದೇವ ಪಾಠ ಮಾಡಿದ. ಗಂಟೆ ಬಾರಿಸಿ ಪಾಠ ಮುಗಿದು ವಿದ್ಯಾರ್ಥಿಗಳು ಎದು ನಿಂತಂತೆ ರಾಧಾಕೃಷ್ಣಯ್ಯನೂ ಅವರಲ್ಲಿ ಒಬ್ಬರಾಗಿ ಎದ್ದು ನಿಂತರು. ಅವರು ಬಂದು ಜಯದೇವನ ಕೈಯನ್ನೇನೂ ಕುಲುಕಲಿಲ್ಲ, ಆದರೆ ಜಯದೇವ ಆವರೆಗೂ ಕಾಣದೇ ಇದ್ದ ಮುಗುಳುನಗೆಯೊಂದು ಅವರ ತುಟಿಗಳ ಮೇಲೆ ಮೂಡಿತ್ತು.

ನಂಜುಂಡಯ್ಯ ಹೇಳಿದ್ದಂತೆಯೇ ರಾಧಾಕೃಷ್ಣಯ್ಯ ಶಾಲೆಯಲ್ಲೇ ಉಳಿದರು. ತಮ್ಮ ವೆಚ್ಚವನು ತಾವೇ ನಿರ್ವಹಿಸಿಕೊಂಡರು, ಜವಾನನೇ ಅವರ ಊಟ ಉಪಚಾರಗಳನ್ನು ಮಾಡಿದ.

ಹಳೆಅಯ ಹುಲಿ ವೆಂಕಟರಾಯರಿಗೆ ರಾಧಾಕೃಷ್ಣಯ್ಯ ಯಾವ ಜನವೆಂದು ಜವಾನನನ್ನು ಕೇಳಿ ತಿಳಿಯುವುದು ಕಷ್ಟವಾಗಲಿಲ್ಲ. ತಮ್ಮವರಲ್ಲವೆಂದು ಗೊತ್ತಾದ ಮೇಲೆ, ಮತ್ತಷ್ಟು ಹೆಚ್ಚು ಎಚ್ಚರಿಕೆಯಿಂದ ಅವರು ವರ್ತಿಸಿದರು.

ಮುಖ್ಯೋಪಾಧ್ಯಾಯರು ರಾಧಾಕೃಷ್ಣಯ್ಯನನ್ನು ಬಿಟ್ಟೇ ಇರಲಿಲ್ಲ. ಆದರೂ ಒಮ್ಮೆ, ವೆಂಕಟರಾಯರು ಮತ್ತು ನಂಜುಂಡಯ್ಯ ಇಲ್ಲದ ಹೊತ್ತು ನೋಡಿ, ಜಯದೇವನನ್ನು ಇನ್ಸ್ಪೆಕ್ಟರರು ಸಮೀಪಕ್ಕೆ ಕರೆದರು. '

“ಇದೇ ಮೊದಲ್ನೇ ವರ್ಷವೇನು?”

“ಹೌದು ಸಾರ್."

ಜಯದೇವ ನಿಂತೇ ಇದ್ದ. ರಾಧಾಕೃಷ್ಣಯ್ಯನೆಂದರು.

“ಆ ಕುರ್ಚಿ ಎಳಕೊಂಡು ಕೂತೊಳ್ಳಿ.”

ಜಯದೇವ ಹಾಗೆ ಮಾಡಿದ. ಮಾತು ಬೆಳೆಯಿತು. ಒಂದೊಂದಾಗಿ ಜಯದೇವನ ವಿಚಾರಗಳನ್ನೆಲ್ಲ ಅವರು ಕೇಳಿ ತಿಳಿದರು.

“ನೀವು ಯಾಕೆ ಕೋರ್ಸ್ ಪೂರ್ತಿ ಮಾಡ್ಲಿಲ್ಲ?”

“ಪರಿಸ್ಮಿತಿ ಸರಿಯಾಗಿದ್ದಿಲ್ಲ ಸಾರ್.” *

“ನನ್ನ ಕೇಳಿದ್ರೆ ನೀವು ಹ್ಯಾಗಾದ್ರೂ ಮಾಡಿ ಕೋರ್ಸು ಮುಗಿಸ್ಬೇಕು. ಆಮೇಲೆ ಟ್ರೇನಿಂಗೂ ಆಗ್ಲಿ."

ಆಸೆ ಹುಟ್ಟಿಸುವ ಸಿಹಿ ಮಾತುಗಳು.

“ನೀವು ಪಾಠ ಹೇಳೋದನ್ನ ನೋಡಿದೆ. ಸಂತೋಷವಾಯು, ನಿಮ್ಮಂಥ ಒಂದು ಸಾವಿರ ಜನ ಇದ್ರೆ ಸಂಸ್ಥಾನದಲ್ಲಿ ನಾವು ನಮ್ಮ ಕ್ಷೇತ್ರ ದಲ್ಲಿ ಏನು ಬೇಕಾದ್ರೂ ಸಾಧಿಸ್ಟಹುದು.”

ಉತ್ತರ ಕೊಡುವುದಾಗಲಿಲ್ಲ ಜಯದೇವನಿಂದ.

“ಹಾಗಿದ್ದಾರೆ ನಿಮ್ಮ ಹೆಡ್ಮೇಷ್ಟ್ರು?"

"............."

“ಅರ್ಥವಾಯ್ತು, ನಾನೂ ಹಾಗೇ ಊಹಿಸ್ದೆ, ಹಿಂದೆ ರಂಗರಾವ್ ಅಂತ ಇದ್ರಲ್ವೆ?”

ಒಮ್ಮೆಲೆ ಜಯದೇವನ ನಾಲಿಗೆ ಚಲಿಸಿತು.

“ಹೌದು ಸಾರ್, ತುಂಬಾ ಒಳ್ಳೆಯವರು–ಸಮರ್ಥ, ಅವರಿಗೆ ಅನ್ಯಾಯವಾಯ್ತು.!”

ರಂಗರಾಯರ ವಿಷಯವಾಗಿ ತಮ್ಮ ಅಭಿಪ್ರಾಯವೇನಿರಬಹುದೆಂಬುದನ್ನು ತಿಳಿಯದೆಯೇ ಜಯದೇವ ಧೈರ್ಯವಾಗಿ ಹಾಗೆ ಹೇಳಿದ್ದನ್ನು ಕಂಡು ಇನ್ಸಪೆಕ್ಟರರಿಗೆ ಸಂತೋಷವಾಯಿತು.

ಅವರು ಸ್ವರ ತಗ್ಗಿಸಿ ಅಂದರು :

“ಹುಂ.. ಈ ವಿಷಯ ನಮ್ಮನಮ್ಮೊಳಗೇ ಇರ್ಲಿ ಜಯದೇವ್, ರಂಗ ರಾಯರಿಗೆ ಅನ್ಯಾಯವಾಗಿದೇಂತ ನನಗೆ ಗೊತ್ತಿದೆ. ಆದರೆ ನಾವು ಯಾರೂ ಏನೂ ಮಾಡೋದಾಗಲಿಲ್ಲ, ಮೇಲಿಂದ ಅನುಜ್ಞೆ ಬಂತು.”

“ಇದನ್ನೆಲ್ಲ ನೋಡುವಾಗ ನಿರಾಶೆಯಾಗ್ರದೆ, ಅಲ್ವೆ?"

“ಹೌದು ಸಾರ್."

“ಏನೇ ಆಗ್ಲಿ, ಉಪಾಧ್ಯಾಯ ವೃತ್ತೀನ ಬಿಡೋ ಯೋಚ್ನೆ ಮಾಡ್ಬೇಡಿ. ಹಳಬರಲ್ಲೂ ಅನುಭವಿಗಳು ಒಳ್ಳೆಯೋರು ಇದಾರೆ. ಆದರೆ ಕೆಲವರಂತೂ ಡೊಂಕಾಗಿ ಬೆಳೆದು ಕೊರಡಾಗಿದಾರೆ. Fit for fuel. ಉರುವಲು ಸೌದೆಗೇ ಸರಿ.. ಕಟುವಾಗಿ ಅಂದೆ ಅಂತ ತಪ್ಪು ತಿಳಿಬೇಡಿ. ನನಗೆ ಭೇಜಾರಾಗಿದೆ. ಮುಂದಿನ ಆಸೆ ಏನಾದರೂ ಇದ್ರೆ ಅದು ನಿಮ್ಮಂಥ ಯುವ ಕರಿಂದ, ಯಾವನ, ಜೋಗಿನ ಜಲಪ ತ ಇದ್ದಹಾಗೆ ಅದರ ಸದ್ವ್ಯಯ ಆಗಬೇಕು.

ವೆಂಕಟರಾಯರು ಬರುತಿದ್ದುದರಿಂದ ಮಾತು ಅಲ್ಲಿಗೇ ನಿಂತಿತು.

ತಿಳಿಯಾದ ಜಲರಾಶಿಯಲ್ಲಿ ಮುಳುಗಿ ಎದ್ದು ಹೊರಬಂದ ಹಾಗೆ, ಜಯದೇವನ ಹೃದಯ-ಮೆದುಳು ನಿರ್ಮಲವಾಗಿದುವು. ಆತ ಕುಳಿತಲ್ಲಿಂದ ಎದ್ದು, ಒಬ್ಬನೇ ಅಲ್ಲೇ ದೂರ ಸರಿದ.

ಆ ರಾತ್ರೆಯೇ ಮನೆಗೆ ಹೊರಡುತ್ತ ವೆಂಕಟರಾಯರು ಕೇಳಿದರು :

“ಏನು ಜಯದೇವ, ಮಾತುಕತೆ ನಡೆದಿತ್ತಲ್ಲಾ..”

ಸುಳ್ಳಿನ ಹೊರತು ಬೇರೆ ಹಾದಿ ಇರಲಿಲ್ಲ.

“ಒಬ್ಬನೇ ಯಾಕಿದೀಯಾಂತ ಕೇಳ್ತಾ ಇದ್ರು”

“ಅಷ್ಟೇನಾ!”

'ಹೂಂ.”

“ಯಾವಾಗ ಹೊರಡ್ತಾರಂತೆ?

“ನಾಳೇನೇ”

“ನಾಳೆ ರಜೆಕೊಟ್ಬಿಡೋಣ. ನನಗಂತೂ ಇಪ್ಪತ್ತನಾಲ್ಕು ಘಂಟೆ ಅಖಂಡ ನಿದ್ದೆ ಮಾಡ್ಬೇಕು!”