ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾತರು

ವಿಕಿಸೋರ್ಸ್ದಿಂದ

ಗಾತರು

[ಸಂಪಾದಿಸಿ]

ಟ್ಯೂಟನ್ ಜನಾಂಗಕ್ಕೆ ಸೇರಿದ ಮತ್ತು ಪ್ರ.ಶ. 1ನೆಯ ಶತಮಾನದಲ್ಲಿ ವಿಸ್ಟ್ಯುಲ ನದಿಯ ತೀರದಲ್ಲಿ ವಾಸಿಸುತ್ತಿದ್ದ ವಿವಿಧ ಜರ್ಮ್ಯಾನಿಕ್ ಪಂಗಡಗಳ ಒಕ್ಕೂಟದ ಜನಾಂಗ. ಕ್ರೈಸ್ತ ಧರ್ಮ ಸ್ವೀಕರಿಸಿದ ಪ್ರಥಮ ಜರ್ಮ್ಯಾನಿಕ್ರೆಂದೂ ಇವರನ್ನು ಗುರುತಿಸುತ್ತಾರೆ. ಜನಾಂಗವನ್ನು ಸ್ಥೂಲವಾಗಿ ಗಾತರೆಂದು ಕರೆಯಬಹುದು. ಯುರೋಪಿನ ಇತಿಹಾಸದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಇವರ ಉಗಮ, ಪೂರ್ವ ಚರಿತ್ರೆ ಮುಂತಾದ ವಿಷಯಗಳ ಬಗ್ಗೆ ಚಾರಿತ್ರಿಕ ಅಂಶಗಳಿಗಿಂತ ಕಥೆಗಳೇ ಹೆಚ್ಚು. ಗಾತ್ ಜನಾಂಗದವರಲ್ಲಿ ಪ್ರಚಲಿತವಾದ ಪರಂಪರಾಗತ ನಂಬಿಕೆಯ ಪ್ರಕಾರ ಸ್ಯಾಂಡ್ಜó ದ್ವೀಪ ಇವರ ಮೂಲನಿವಾಸ. ಅಲ್ಲಿಂದ ವಲಸೆ ಹೊರಟು ಗಾತಿಸ್ಕಾಂಡ್ಜ ಎಂಬಲ್ಲಿ ಮೊಟ್ಟಮೊದಲು ನೆಲಸಿದರು. ಅನಂತರ ಇವರು ಪಾಮರೇನಿಯದ ಸಮೀಪದಲ್ಲಿದ್ದ ಅನೇಕ ಜನಾಂಗಗಳನ್ನು ಸೋಲಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿ ಕೊಂಡರು.

ಪ್ರಾಚೀನ ಸಾಹಿತ್ಯದಲ್ಲಿ ಗಾತರ ಹೆಸರು ಮೊಟ್ಟಮೊದಲಿಗೆ ಕಂಡುಬರುವುದು ಪ್ರಚಲಿತಶಕೆಯ ಆರಂಭ ವರ್ಷಗಳಲ್ಲಿ. ಅದಕ್ಕಿಂತ ಮುಂಚೆ ಇವರ ಸ್ಥಿತಿಗತಿಗಳು ನಮಗೆ ತಿಳಿದು ಬರುವುದಿಲ್ಲ. ಪ್ರಚಲಿತಶಕೆಯ ಆರಂಭ ವರ್ಷಗಳಲ್ಲಿ ಮ್ಯಾರೊಬಾಡ್ಯೂಸ್ ರಾಜನ ಆಳ್ವಿಕೆಗೆ ಇವರು ಒಳಪಟ್ಟಿದ್ದರೆಂದು ತಿಳಿದುಬರುತ್ತದೆ. ಪ್ರ.ಶ.ಸು.3ನೆಯ ಶತಮಾನದ ಸಮಯದಲ್ಲಿ ರೋಮನ್ ಇತಿಹಾಸದಲ್ಲೂ ಗಾತರ ಪಾತ್ರ ಪ್ರಾರಂಭ ವಾಗುತ್ತದೆ. ಆ ಸಮಯಕ್ಕೆ ಇವರು ತಮ್ಮ ರಾಜ್ಯವನ್ನು ಸಾಕಷ್ಟು ವಿಸ್ತರಿಸಿ ಡ್ಯಾನ್ಯೂಬ್ ನದಿಯ ಕೆಳಪಾತ್ರದವರೆಗೂ ಆಗಾಗ್ಗೆ ನುಗ್ಗುತ್ತಿದ್ದರು. ಚಕ್ರವರ್ತಿ ಗಾರ್ಡಿಯನ್ ಗಾತರನ್ನು ಸೋಲಿಸಿದ್ದ. ಆದರೆ ಅವನ ಅನಂತರ ಬಂದ ಚಕ್ರವರ್ತಿಗಳಲ್ಲಿ ಒಬ್ಬನಾದ ಡೇಷಿಯಸ್ (201-251) ಗಾತರಿಂದ ಕೊಲ್ಲಲ್ಪಟ್ಟ. ಚಕ್ರವರ್ತಿ ಗ್ಯಾಲಿಯೀನಸ್ (ಮರಣ.268) ಗಾತರಿಗೆ ಕಪ್ಪಕಾಣಿಕೆ ಕೊಡಬೇಕಾಯಿತು. ಪ್ರ.ಶ.ಸು. 321ರಲ್ಲಿ ಚಕ್ರವರ್ತಿ ಕಾನ್ಸ್ಟಂಟೈನ್ (280-337) ಗಾತರನ್ನು ಈ ಪ್ರದೇಶಗಳಿಂದ ಹೊಡೆದೋಡಿಸಿ, ಗಾತರ ರಾಜನಾಗಿದ್ದ ಅರಿಯಾರಿಕನೊಡನೆ ಮೈತ್ರಿ ಬೆಳೆಸಿದ. ಗಾತರು ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ತಮ್ಮ ಬಲವನ್ನು ಹೆಚ್ಚಿಸಿಕೊಂಡ ಮೇಲೆ ತಮ್ಮ ಮೂಲವಾಸಸ್ಥಾನದೊಡನೆ ಸಂಪರ್ಕ ಕಳೆದುಕೊಂಡರು. ಪ್ರಾಚೀನ ಗಾತ್ ರಾಜರಲ್ಲಿ ಅತ್ಯಂತ ಮುಖ್ಯನಾದವನು ಹೆರ್ಮಾನರಿಕ್. ಇವನ ಶೌರ್ಯ ಸಾಧನೆಗಳನ್ನು ಕುರಿತು ಅನೇಕ ಕಟ್ಟು ಕಥೆಗಳು ಹುಟ್ಟುಕೊಂಡಿವೆ. ಇವನು ಹೆರೂಲಿ, ಏಸ್ಟೈ, ವೆನೆಡಿ ಮತ್ತು ಇನ್ನೂ ಅನೇಕ ದಕ್ಷಿಣ ರಷ್ಯನ್ ಅನಾಗರಿಕ ಬುಡಕಟ್ಟು ಜನರನ್ನು ಸೋಲಿಸಿದ. ಇವನ ರಾಜ್ಯ ಪಶ್ಚಿಮದಲ್ಲಿ ಹೋಲ್ಸ್ಟೈನ್ವರೆಗೆ ಹಬ್ಬಿತ್ತು. 370ರಲ್ಲಿ ಹೂಣರು ಆಸ್ಟ್ರೋಗಾತ್ ರಾಜ್ಯದ ಮೇಲೆ ಧಾಳಿ ನಡೆಸಿ ಬಹಳ ಕಷ್ಟನಷ್ಟಗಳಿಗೆ ಕಾರಣರಾದರು. ಇದರಿಂದ ದು:ಖಿತನಾದ ಹೆರ್ಮಾನರಿಕ್ ಆತ್ಮಹತ್ಯೆ ಮಾಡಿಕೊಂಡ. ಅನಂತರ ಆಸ್ಟ್ರೋಗಾತ್ ರಾಜ್ಯ ಹೂಣರ ವಶವಾಯಿತು.

ಇದಾದ ಅನಂತರ ಗಾತರಲ್ಲಿ ಪುರ್ವದ ಗಾತರು ಮತ್ತು ಪಶ್ಚಿಮದ ಗಾತರು ಎಂಬ ವ್ಯತ್ಯಾಸ ಹೆಚ್ಚು ತೀವ್ರವಾಗಿ ಕಾಣಬರುತ್ತದೆ. ಪ್ರ.ಶ.376ರಲ್ಲಿ ಪಶ್ವಿಮ ಗಾತರು ಫ್ರಿತಿಜೆರ್ನ್ ಎಂಬ ನಾಯಕನ ನೇತೃತ್ವದಲ್ಲಿ ಡ್ಯಾನ್ಯೂಬ್ ನದಿಯನ್ನು ದಾಟಿ ರೋಮನ್ ಚಕ್ರಾಧಿಪತ್ಯದ ಪ್ರಾಂತ್ಯವಾದ ಮೀಷಿಯಕ್ಕೆ ನುಗ್ಗಿದರು. ಸ್ವಲ್ಪ ಕಾಲದ ಅನಂತರ ಇವರಿಗೂ ಅಲ್ಲಿಯ ಮೂಲ ಜನಕ್ಕೂ ಕಲಹಗಳು ಪ್ರಾರಂಭವಾದುವು. 378ರ ವೇಳೆಗೆ ಇಲ್ಲಿ ಪಶ್ಚಿಮ ಗಾತರು ಪ್ರಬಲರಾದರು. ಅನಂತರ ಚಕ್ರವರ್ತಿ ತೀಯೊಡೋ ಷಿಯಸ್ (346-395) ಗಾತರೊಡನೆ ಸಖ್ಯ ಬೆಳೆಸಿದ. ಬಹು ಮಂದಿ ಗಾತ್ ವೀರರು ರೋಮನ್ ಚಕ್ರಾಧಿಪತ್ಯದಲ್ಲಿ ಸಾಮಂತರಾದರು. ತೀಯೊಡೋಷಿಯಸ್ 395ರಲ್ಲಿ ಮರಣ ಹೊಂದಿದ ಮೇಲೆ ರೋಮನ್ ಚಕ್ರಾಧಿಪತ್ಯಕ್ಕೂ ಗಾತರಿಗೂ ಇದ್ದ ಸಖ್ಯ ನಾಶವಾಯಿತು. ಗಾತರು ತಮ್ಮ ಸಾಮಂತಸ್ಥಾನವನ್ನು ತ್ಯಜಿಸಿ ಅಲರಿಕನನ್ನು ತಮ್ಮ ರಾಜನನ್ನಾಗಿ ಮಾಡಿಕೊಂಡರು. ಇವನ ಕಾಲದಲ್ಲಿ ಅವರು ಸ್ವತಂತ್ರವಾಗಿ ಆಳಲು ಪ್ರಾರಂಭ ಮಾಡಿದರೂ ಅವರು ಎಲ್ಲಿಯೂ ನೆಲೆಯಾಗಿ ನಿಲ್ಲಲಿಲ್ಲ. ಅಲರಿಕ್ 395-96 ರಲ್ಲಿ ಗ್ರೀಸಿನ ಮೇಲೆ ದಂಡೆತ್ತಿ ಹೋದ. ಸು. 409-10ರಲ್ಲಿ ರೋಮ್ ನಗರವನ್ನು ಮುತ್ತಿ ಈ ನಗರವನ್ನು ನಾಶಮಾಡಿದ.

ಅಲರಿಕನ ಅನಂತರ ಅಟಾಲ್ಫ ಗಾತರ ರಾಜನಾದ. ರೋಮನ್ ಸಾಮ್ರಾಜ್ಯವನ್ನು ನಾಶಮಾಡಿ ಅದರಷ್ಟೇ ಪ್ರಮುಖವಾದ ಗಾತಿಕ್ ಸಾಮ್ರಾಜ್ಯವನ್ನು ಕಟ್ಟಬೇಕೆನ್ನುವುದೇ ಇವನ ಮುಖ್ಯ ಉದ್ದೇಶವಾಗಿತ್ತು. ತೀಯೊಡೋಷಿಯಸನ ಮಗಳಾದ ಪ್ಲೇಸಿಡಿಯಳನ್ನು ವಿವಾಹವಾದ. ಇದರಿಂದ ಗಾತರೂ ರೋಮನ್ನರೂ ಒಂದಾಗುವ ಅವಕಾಶವೂ ಇತ್ತು. ಆದರೆ ಇವರ ಮಗ ಬಾಲ್ಯದಲ್ಲೆ ಮರಣ ಹೊಂದಿದ. ಅಷ್ಟೇ ಅಲ್ಲದೆ 415ರಲ್ಲಿ ಅಟಾಲ್ಫನ ಕೊಲೆಯಾಯಿತು. ಹೀಗಾಗಿ ಅವನ ಆಸೆಗಳು ನೆರವೇರಲಿಲ್ಲ. ಇವನ ಅನಂತರ ವಾಲ್ಲಿಯ ಗಾತರ ರಾಜನಾದ. ಇವನ ಕಾಲದಲ್ಲಿ ಗಾತರ ಸಾಮ್ರಾಜ್ಯ ವಿಸ್ತಾರವಾಯಿತು. ವಾಲ್ಲಿಯನ ಅನಂತರ 1ನೆಯ ತೀಯೊಡೋರಿಕ್ ರಾಜನಾದ. ಇವನ ಕಾಲದಲ್ಲಿ ಹೂಣರ ಧಾಳಿಗಳನ್ನು ಎದುರಿಸುವ ಸಲುವಾಗಿ ರೋಮನ್ನರೂ ಗಾತರೂ ಒಟ್ಟುಗೂಡಿದರು. ಆದರೆ ಹೂಣರ ಸೈನ್ಯದಲ್ಲಿ ಪುರ್ವ ಗಾತರನ್ನು ಇವರು ಎದುರಿಸಬೇಕಾಯಿತು. ಈ ಯುದ್ಧದಲ್ಲಿ ತೀಯೊಡೋರಿಕ್ ಮರಣ ಹೊಂದಿದ. ಇದರಿಂದ ಪಶ್ಚಿಮ ಗಾತರ ರಾಜ್ಯ ಗಾಲ್ ಪ್ರದೇಶಕ್ಕೆ ಮಾತ್ರ ಸೀಮಿತಗೊಳ್ಳುವಂತಾಯಿತು. ಪಶ್ಚಿಮ ಗಾತರು ರೋಮನ್ನರ ಸಂಸ್ಕೃತಿಯನ್ನು ಅನುಸರಿಸಿದರೂ ಕೆಥೊಲಿಕ್ ಜನಕ್ಕೆ ಅವರ ಧರ್ಮ ಹಿಡಿಸಲಿಲ್ಲ. ಹೀಗಾಗಿ ಪಶ್ಚಿಮ ಗಾತರು ತಮ್ಮ ಪ್ರಭಾವವನ್ನು ಹೆಚ್ಚು ಕಾಲ ಸ್ಪೇನಿನಲ್ಲಿ ಉಳಿಸಿಕೊಳ್ಳುವುದು ಕಷ್ಟವಾಯಿತು.

ಹೂಣರ ರಾಜ ಆಟ್ಟಿಲನ ಮರಣಾನಂತರ ಹೂಣರಲ್ಲಿ ಒಗ್ಗಟ್ಟು ಕಡಿಮೆಯಾಯಿತು. ಇದೇ ತಕ್ಕ ಸಮಯವೆಂದು ಪುರ್ವ ಗಾತರು ಸ್ವತಂತ್ರ್ಯರಾದರು. ಪ್ರ.ಶ. 5ನೆಯ ಶತಮಾನದ ಕೊನೆಯಲ್ಲಿ ಪುರ್ವಗಾತರ ರಾಜನಾದ ತೀಯೊಡೋರಿಕ್ ಈ ವಂಶದಲ್ಲಿ ಅತ್ಯಂತ ಶ್ರೇಷ್ಠನೂ ಸಮರ್ಥನೂ ಆದ ವ್ಯಕ್ತಿ. ಸುಮಾರು 493ರ ಸಮಯಕ್ಕೆ ಪುರ್ವ ಗಾತ್ ಸಾಮ್ರಾಜ್ಯಕ್ಕೆ ಇಟಲಿ, ಸಿಸಿಲಿ ಮುಂತಾದ ಪ್ರದೇಶಗಳೂ ಸೇರಿಕೊಂಡುವು. ಇವನ ದಕ್ಷ ಆಡಳಿತದಲ್ಲಿ ಪುರ್ವ ಮತ್ತು ಪಶ್ಚಿಮ ಗಾತರು ಸ್ವಲ್ಪ ಕಾಲ ಒಟ್ಟಿಗೆ ಸೇರಿದರು. ತೀಯೊಡೋರಿಕ್ ರಾಜನ ಮಗಳನ್ನು ವಿಸಿಗಾತ್ ರಾಜ ಎರಡನೆಯ ಅಲರಿಕ ಮದುವೆಯಾದ. ಇದರಿಂದ ಈ ಎರಡು ಮನೆತನಗಳಿಗೂ ಬಾಂಧವ್ಯ ಬೆಳೆಯಿತು. ತೀಯೊಡೋರಿಕ್ ರಾಜನ ಕಾಲದಲ್ಲಿ ಪುರ್ವ ಗಾತಿಕ್ ಸಾಮ್ರಾಜ್ಯ ಸುಸಂಸ್ಕೃತವಾಯಿತು. ಗಾತಿಕ್ ಸಾಮ್ರಾಜ್ಯದ ಮೇಲೆ ರೋಮನ್ ಚಕ್ರಾಧಿಪತ್ಯದ ಪ್ರಭಾವ ವಿಶೇಷವಾಯಿತು. ಆದರೆ 526ರಲ್ಲಿ ತೀಯೊಡೋರಿಕ್ ಮರಣ ಹೊಂದಲು ಪುರ್ವ ಮತ್ತು ಪಶ್ಚಿಮ ಗಾತ್ ರಾಜ್ಯಗಳು ಬೇರ್ಪಟ್ಟುವು. ಸ್ಪೇನಿನಲ್ಲಿ ಅಮಲರಿಕ್ ಎಂಬುವನು ಪಶ್ಚಿಮ ಗಾತರ ರಾಜನಾದ. ಪುರ್ವಗಾತರು ಸ್ವಲ್ಪ ಕಾಲದಲ್ಲೇ ಅವನತಿ ಹೊಂದಿದರು.

ಪಶ್ಚಿಮ ಗಾತ್ ಸಾಮ್ರಾಜ್ಯ ಹೆಚ್ಚು ಕಾಲ ಬಾಳಿತು. ಲಿಯೋವಿಜಿಲ್್ಡ ಎಂಬಾತ 568 ರಿಂದ 586ರ ವರೆಗೆ ಆಳಿದ. ಈತ ಗಾತ್ ಸಮ್ರಾಜ್ಯದ ದೊರೆಗಳಲ್ಲಿ ಅತ್ಯಂತ ಶ್ರೇಷ್ಠನಾದವ. ಇವನು ಗಾಲ್ ಮತ್ತು ಸ್ಪೇನ್ ಪ್ರಾಂತ್ಯಗಳನ್ನು ಒಟ್ಟುಗೂಡಿಸಿದ. ಅನೇಕ ಸಣ್ಣಪುಟ್ಟ ರಾಜರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದ. ಇವನ ಮಗ ರೆಕಾರಡನ ಕಾಲದಲ್ಲಿ ಬಹುಮಂದಿ ಗಾತರು ಕೆಥೊಲಿಕ್ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದರು. ಇದರಿಂದ ರೋಮನ್ನರಿಗೂ ಗಾತರಿಗೂ ಧಾರ್ಮಿಕ ಸಮಾನತೆ ಯುಂಟಾಯಿತು. ಇದಾದಮೇಲೆ ಗಾತರ ಮೇಲೆ ರೋಮನ್ನರ ಪ್ರಭಾವ ವಿಶೇಷವಾಗ ತೊಡಗಿತು. ಕಾಲಕ್ರಮದಲ್ಲಿ ಗಾತ್ ಎನ್ನುವ ಪದವೂ ಮರೆತುಹೋಗುವಂತೆ ರೋಮನ್ ಸಂಸ್ಕೃತಿಯಲ್ಲಿ ಗಾತರು ಸೇರಿ ಹೋದರು. ಮಧ್ಯ ಯುರೋಪಿನಲ್ಲಿ ಸು. 8 ಶತಮಾನಗಳ ಕಾಲ ಪ್ರಭಾವ ಹೊಂದಿದ್ದ ಗಾತರು ಅವನತಿ ಹೊಂದಿದರು. ಅದರೆ ಸ್ಪೇನಿನಲ್ಲಿ ಅವರ ಪ್ರಭಾವ ವಿಶೇಷವಾಗಿ ಕಂಡುಬರುತ್ತದೆ.