ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪಾಕರ್ಮ

ವಿಕಿಸೋರ್ಸ್ದಿಂದ

ಉಪಾಕರ್ಮ: ವಿಧಿವತ್ತಾಗಿ ವೇದವನ್ನು ಅಧ್ಯಯನ ಮಾಡಲು ಪ್ರಾರಂಭಿಸುವುದು. ವೇದಾಧಿಕಾರಿಗಳಾದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಈ ಮೂರು ವರ್ಣದವರಿಗೂ ವಿಹಿತವಾಗಿದೆ. ಉಪನಯನಾನಂತರದಲ್ಲಿ ಮೊಟ್ಟ ಮೊದಲು ವೇದಾಧ್ಯಯನಕ್ಕೆ ಪ್ರಾರಂಭಿಸುವುದು ಪ್ರಥಮೋಪಾಕರ್ಮ. ಅಧ್ಯಯನ ಮಾಡಲು ಪ್ರಾರಂಭಿಸುವುದಕ್ಕೆ ಮೊದಲು ಹೋಮಮಾಡಿ ಆ ಅಗ್ನಿ ಸನ್ನಿಧಿಯಲ್ಲಿ ವೇದಾಧ್ಯಯನಕ್ಕೆ ಉಪಕ್ರಮಿಸಬೇಕು. ಪ್ರತಿವರ್ಷದಲ್ಲೂ ಶ್ರಾವಣ ಮಾಸದ ಹುಣ್ಣಿಮೆಯಲ್ಲಿ ಯಜುರ್ವೇದಿಗಳೂ ಇದೇ ತಿಂಗಳಿನ ಶ್ರವಣನಕ್ಷತ್ರದಲ್ಲಿ ಋಗ್ವೇದಿಗಳೂ ಹುಣ್ಣಿಮೆಯಲ್ಲೇ ಅಥರ್ವಣವೇದಿಗಳೂ ಉಪಾಕರ್ಮ ಮಾಡಬೇಕೆಂದು ವಿಹಿತವಾಗಿದೆ. ಶ್ರಾವಣ ಹುಣ್ಣಿಮೆ ಅಥವಾ ಶ್ರವಣನಕ್ಷತ್ರದ ದಿವಸ ಚಂದ್ರಗ್ರಹಣ ಸಂಭವಿಸಿದರೆ ಅಥವಾ ಸಿಂಹ ಸಂಕ್ರಮಣವಾದರೆ ಆ ದಿವಸ ಗ್ರಹಣ ಅಥವಾ ಸಂಕ್ರಮಣ ದುಷ್ಟವಾಗುವುದ ರಿಂದ ಆ ಕಾಲವನ್ನು ಬಿಟ್ಟು ಆಷಾಢ ಶುಕ್ಲ ಪುರ್ಣಿಮಾ ಅಥವಾ ಭಾದ್ರಪದಶುಕ್ಲ ಪುರ್ಣಿಮಾ ದಿವಸ ಯಜುರ್ವೇದಿಗಳೂ ಶುಕ್ಲಪಂಚಮಿ ಅಥವಾ ಹಸ್ತನಕ್ಷತ್ರದಲ್ಲಿ ಋಕ್ವೇದಿಗಳೂ ಶ್ರಾವಣಮಾಸ ಅಧಿಕ ಬಂದರೆ ನಿಜಶ್ರಾವಣಮಾಸದಲ್ಲಿ ಮಾಡಬೇಕು. ಅಧಿಕ ಶ್ರಾವಣದಲ್ಲೇ ಮಾಡುವ ಪದ್ಧತಿ ಕೆಲವರಲ್ಲಿ ಮಾತ್ರ ಇದೆ. ಗುರು, ಶುಕ್ರರು ಅಸ್ತರಾಗಿದ್ದಾಗ ಪ್ರಥಮೋಪಾಕರ್ಮ ಕೂಡದು. ಉಪಾಕರ್ಮಾನಂತರ ಐದು ತಿಂಗಳಕಾಲ ಶುಕ್ಲಪಕ್ಷದ ದಿವಸಗಳಲ್ಲಿ ವೇದಾಧ್ಯಯನವನ್ನೂ ಕೃಷ್ಣಪಕ್ಷದ ದಿವಸಗಳಲ್ಲಿ ಶಾಸ್ತ್ರಾಧ್ಯಯನವನ್ನೂ ಮಾಡಬೇಕು. ಶ್ರಾವಣದಲ್ಲಿ ಪ್ರಾರಂಭಿಸುವ ವೇದಾಧ್ಯಯನವನ್ನು ಪುಷ್ಯಮಾಸ ಶುಕ್ಲಪಕ್ಷದಲ್ಲಿ ಮುಕ್ತಾಯ ಮಾಡಬೇಕು. ಈ ಮುಕ್ತಾಯಕ್ಕೆ ಉತ್ಸರ್ಜನ (ನೋಡಿ-ಉತ್ಸರ್ಜನ) ಎಂದು ಹೆಸರು. ಉತ್ಸರ್ಜನಾನಂತರ ಮತ್ತೆ ಶ್ರಾವಣದಲ್ಲಿ ಅಧ್ಯಯನವನ್ನು ಪ್ರಾರಂಭಿಸುವುದು ನಿತ್ಯೋಪಾಕರ್ಮ. ಇದಕ್ಕೆ ಗುರು ಶುಕ್ರಾಸ್ತಾದಿದೋಷಗಳಿಲ್ಲ. ಈ ಸಮಾರಂಭವನ್ನು ಜನಿವಾರದ ಹಬ್ಬ ಎಂದು ಕರೆಯುವುದೂ ಕೆಲವರಲ್ಲಿ ರೂಢಿಯಲ್ಲಿದೆ. (ಎಸ್.ಎನ್.ಕೆ.)