ಪುಟ:Vimoochane.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ನೋವು ಕಡಿಮೆಯಾಗುತ್ತಿತ್ತು. ಅಮ್ಮನ ಬದಲು ಪ್ರೀತಿಯ ನಾಲ್ಕು ಮಾತನ್ನಾಡತೊಡಗಿದ್ದ ಅಜ್ಜಿ ನನ್ನನ್ನು ಮನುಷ್ಯನಾಗಿ ಮಾಡಿದರು. ಕಾಲಕಳೆದಂತೆ ಎಂಥ ನೋವೂ ವಾಸಿಯಾಗುವುದೆಂಬ ಪಾಠವನ್ನು ನಾನು ಮೆಲ್ಲಮೆಲ್ಲನೆ ಕಲಿತೆ.

ಆದರೆ ನಾನು ಕಲಿಯಬೇಕಾಗಿದ್ದ ಬೇರೆ ಪಾಠಗಳಿದ್ದುವು_ಶಾಲೆಯ ಪಾಠಗಳು. ನನ್ನನ್ನು ಸ್ಕೂಲಿಗೆ ಸೇರಿಸಿದರು. ತೀರ ಹೊಸತಾಗಿದ್ದ ವಿಚಿತ್ರ ವಾತಾವರಣದಲ್ಲಿ ಬೆದರಿಕೆ ಗದರಿಕೆಯ ಬಿರುನುಡಿಗಳ ಬ‌ಯ್ಗಳ ಮಂತ್ರಪಠನದ ನಡುವೆ, ನಾನು ವಿದ್ಯಾಸರಸ್ವತಿಯ ದರ್ಶನ ಪಡೆದೆ. ಮೊದಲ ದಿನ ನಾನು ಮನೆಗೆ ಮರಳಿದಾಗ, ನಮ್ಮ ಕೊಠಡಿಗೆ ಹೋಗಿ, ಮುಖಮುಚ್ಚಿಕೊಂಡು ಅತ್ತೆ.

ನಾನು ಬರುತ್ತಿದ್ದುದನ್ನು ದೂರದಿಂದಲೆ ಅಜ್ಜಿ ನೋಡಿದ್ದರೋ ಏನೋ. ಹೊರಗಿನಿಂದಲೇ ಇಣಿಕಿನೋಡುತ್ತಾ, "ಏನಪ್ಪಾ ಚಂದ್ರು? ಹೊಡೆದ್ರೇನೋ ಮರಿ?" ಎಂದರು.

ನನಗೆ ಯಾರೂ ಹೊಡೆದಿರಲಿಲ್ಲ. ಆದರೆ ಯಾಕೊ ಆ ಹೊಸ ಅನುಭವ ನನ್ನ ಹೃದಯದ ಅಣೆಕಟ್ಟೆಗೆ ಸುರಂಗಹೊಡೆದಿತ್ತು.

ಕೆಲಸದಿಂದ ವಾಪಸು ಬಂದ ತಂದೆ, ಬಲು ಆತುರದಿಂದ ನನ್ನ ಮೈದಡವಿದ.

"ಎಂಗಿತ್ತಪ್ಪಾ? ಸ್ಕೂಲು ಹೆಂಗಿತ್ತು ಚಂದ್ರೂ?"

ನಾನು ಮತ್ತೊಮ್ಮೆ ಗಟ್ಟಿಯಾಗಿ ಅತ್ತೆ. ಮತ್ತೆ ಶಾಲೆಗೆ ಹೋಗುವುದೇ ಇಲ್ಲವೆಂದು ಗೋಳಾಡಿದೆ. ಆ ಬಣ್ಣಬಣ್ಣದ ಷರಟು ಲಂಗಗಳು, ನುಣ್ಣನೆಯ ಕೂದಲು ಬೈತಲೆ, ಕೆಂಪು ಕೆಂಪನೆಯ ಕೋಮಲ ಮುಖಗಳು- ಇವೆಲ್ಲವೂ, "ಇದು ನಿನ್ನ ಲೋಕವಲ್ಲ"ಎಂದು ನನಗೆ ಗದರಿ ಹೇಳಿದ್ದುವು. ನನ್ನ ಹಾಗೆಯೇ ಬಡವರಂತೆ ಕಂಡ ಬೇರೆ ಕೆಲವರಿದ್ದರು ನಿಜ. ಆದರೆ ಅವರೊಬ್ಬರೂ ಮಾತನಾಡುತ್ತಿರಲಿಲ್ಲ. ಸ್ವರ ಹೊರಡಿಸುತ್ತಿರಲಿಲ್ಲ. ನಗುತ್ತಿರಲಿಲ್ಲ. ದೊಡ್ಡವರ ಮಕ್ಕಳೆದುರಲ್ಲಿ ಅವರು ಹಿಂಜರಿದು ಹಿಂಜರಿದು ಮೂಲೆ ಗುಂಪಾಗಿದ್ದರು.