ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಮಿತ್ ವಿನ್ಸೆಂಟ್
ಸ್ಮಿತ್ ವಿನ್ಸೆಂಟ್ 1848-1920. ಆಧುನಿಕ ಇತಿಹಾಸ ತಜ್ಞ. ವಿನ್ಸೆಂಟ್ ಅರ್ಥರ್ ಸ್ಮಿತ್ ಇವನ ಪೂರ್ಣ ಹೆಸರು. ಇವನು 1848ರಲ್ಲಿ ಡಬ್ಲಿನ್‍ನಲ್ಲಿ ಜನಿಸಿದ. ಇವನ ತಂದೆ ವೃತ್ತಿಯಲ್ಲಿ ವೈದ್ಯನಾಗಿದ್ದ; ಪ್ರವೃತ್ತಿಯಲ್ಲಿ ಒಬ್ಬ ಹವ್ಯಾಸಿ ನಾಣ್ಯಶಾಸ್ತ್ರಜ್ಞನೂ ಪುರಾತತ್ತ್ವತಜ್ಞನೂ ಆಗಿದ್ದ. ಸ್ಮಿತ್ 1869ರಲ್ಲಿ ಭಾರತದ ಸಿವಿಲ್ ಸರ್ವಿಸ್‍ಗೆ ಸೇರ್ಪಡೆಯಾಗಿ ಉತ್ತರ ಪ್ರದೇಶದಲ್ಲಿ ಸೇವೆಸಲ್ಲಿಸಿದ. ಸೇವೆಯಿಂದ ನಿವೃತ್ತಿಯಾದ ಅನಂತರ ಡಬ್ಲಿನ್‍ನಲ್ಲಿ ನೆಲೆಯಾಗಿ ಭಾರತೀಯ ಇತಿಹಾಸದ ಅಧ್ಯಯನ ಕೈಗೊಂಡ (1900). ಈ ಸಮಯದಲ್ಲಿ ಅನೇಕ ಹೊಸ ವಿಷಯಗಳನ್ನು ಬೆಳಕಿಗೆ ತಂದು ಪ್ರಾಚೀನ ಭಾರತದ ಇತಿಹಾಸದ ಕಾಲಮಾನವನ್ನು ಅಭ್ಯಸಿಸಲು ಅಡಿಪಾಯ ಹಾಕಿದ. ಇವನ ಅರ್ಲಿ ಹಿಸ್ಟರಿ ಆಫ್ ಇಂಡಿಯ (1904) ಎಂಬ ಗ್ರಂಥದಲ್ಲಿ ಪ್ರಾಚೀನ ಭಾರತದ ಇತಿಹಾಸವನ್ನು ಸಮೀಕ್ಷಿಸಲಾಗಿದೆ. ಈ ಕೃತಿ ಮುಖ್ಯವಾಗಿ ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದೆ. ಅದುವರೆಗೆ ಪ್ರಾಚೀನ ಭಾರತದ ಬಗ್ಗೆ ಪ್ರಚಲಿತವಿದ್ದ ಹೆಲೆನಿ ಸ್ಮಿತ್‍ನ ಅಭಿಪ್ರಾಯವನ್ನು ಅಲ್ಲಗಳೆದು, ಭಾರತದ ಇತಿಹಾಸದ ಮೇಲೆ ಪಾಶ್ಚಾತ್ಯರ ಪ್ರಭಾವ ತೀರ ಕಡಮೆ ಎಂದು ಈ ಕೃತಿ ಹೇಳಿದೆ. ಇದು ಕ್ರಿಪೂ 600 ರಿಂದ ಕ್ರಿ.ಶ. 1200ರ ವರೆಗಿನ ಇತಿಹಾಸವನ್ನು ಒಳಗೊಂಡಿದೆ. ಇದರಲ್ಲಿ ಭಾರತದ ಮೇಲೆ ಅಲೆಕ್ಸಾಂಡರ್ ಕೈಗೊಂಡ ದಂಡಯಾತ್ರೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ (66ಪುಟಗಳು). ಇವನು ಗುಪ್ತರ ಅವಧಿಯನ್ನು ಇಂಗ್ಲೆಂಡಿನ ಎಲಿಜಬೆತ್ ಮತ್ತು ಸ್ಟುವರ್ಟ್‍ರ ಆಡಳಿತಕ್ಕೆ ಹೋಲಿಸಿದ್ದಾನೆ. ತದನಂತರ 1919ರಲ್ಲಿ ಇವನು ಆಕ್ಸ್‍ಫರ್ಡ್ ಹಿಸ್ಟರಿ ಆಫ್ ಇಂಡಿಯ ಎಂಬ ಗ್ರಂಥವನ್ನು ರಚಿಸಿದ. ಅನಂತರ ಇವನು ದಿ ಹಿಸ್ಟರಿ ಆಫ್ ಫೈನ್ ಆರ್ಟ್ ಇನ್ ಇಂಡಿಯ ಅಂಡ್ ಸಿಲೋನ್ ಎಂಬ ಗ್ರಂಥ ಬರೆದ. ಇವನು ರಚಿಸಿದ ಅರ್ಲಿ ಹಿಸ್ಟರಿ ಆಫ್ ಇಂಡಿಯ ಮತ್ತು ಆಕ್ಸ್‍ಫರ್ಡ್ ಹಿಸ್ಟರಿ ಆಫ್ ಇಂಡಿಯ ಪುಸ್ತಕಗಳು ಭಾರತದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅತ್ಯುತ್ತಮ ಪಠ್ಯಪುಸ್ತಕ ಗಳಾಗಿವೆ.
ಇವನು ಭಾರತದ ಆಡಳಿತಾತ್ಮಕ ಇತಿಹಾಸ ತಜ್ಞ ಕೂಡ. ರಾಜ್ಯ ವಿಷಯಕ್ಕೆ ಸಂಬಂಧಿಸಿದಂತೆ, ಆಧುನಿಕ ಭಾರತ ಹಾಗೂ ಅದರ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಪ್ರಾಚೀನ ಭಾರತದ ಇತಿಹಾಸವನ್ನು ತಿಳಿಯಲೇಬೇಕು ಎನ್ನುವುದು ಇವನ ಅಭಿಮತ. ಈತ ಎಲ್ಫಿನ್‍ಸ್ಟನ್‍ನಂತೆ ಪ್ರಾಚೀನ ಭಾರತದ ನಾಗರಿಕತೆಯ ಬಗ್ಗೆ ತನ್ನ ಸಹಾನುಭೂತಿಯನ್ನು ತೋರಿದ್ದಾನೆ. ಈತ 1920ರಲ್ಲಿ ನಿಧನನಾದ. (ಸಿ.ಬಿ.ಟಿ.)