ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಡಿಗೋ (ಇಂಡಿಗೋಟಿನ್)
ಇಂಡಿಗೋ (ಇಂಡಿಗೋಟಿನ್)- ಎರಡು ಇಂಡೋಲ್ ಆವರ್ತಗಳ ಸಂಯೋಜನೆಯಿಂದ ಉತ್ಪತ್ತಿಯಾಗುವ ವಸ್ತು. ಅಣುಸೂತ್ರ C16H10N202. (ನೋಡಿ- ಇಂಡೋಲ್)
ಇಂಡಿಗೋ ಪದದ ಕನ್ನಡರೂಪ ನೀಲಿ. ಸಾಮಾನ್ಯವಾಗಿ ಇದರ ಉಪಯೋಗ ಬಟ್ಟೆಯ ಚೆಲುವೆಗೆ. ಈ ಪದಾರ್ಥ ಇಂಡಿಕಾನ ಎಂಬ ವಸ್ತುವಿನ ರೂಪದಲ್ಲಿ, ಇಂಡಿಗೋಫೆರ ಟಿಂಕ್ಟೋರಿಯ ಎಂಬ ಜಾತಿಗೆ ಸೇರಿದ ಸಸ್ಯಗಳಲ್ಲಿ ಉತ್ಪತ್ತಿಯಾಗುತ್ತದೆ. ಕೃತಕವಾಗಿ ಇಂಡಿಗೋವನ್ನು ತಯಾರು ಮಾಡುವುದಕ್ಕೆ ಮೊದಲು ಭಾರತದಲ್ಲಿ ಈ ಗಿಡವನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು.
ಗುಣಗಳು : ಅಪ್ಪಟ ನೀಲಿ ಬಣ್ಣದ ಹರಳಿನ ರೂಪದಲ್ಲಿರುವ ವಸ್ತು. 300o ಸೆ. ನಲ್ಲಿ ನೇರವಾಗಿ ಆವಿಯಾಗುತ್ತದೆ (ಎಂದರೆ ದ್ರವಿಸುವುದಿಲ್ಲ) ಮತ್ತು ಛಿದ್ರವಾಗುತ್ತದೆ. ನೀರು, ಈಥರ್ ಮತ್ತು ಮದ್ಯಸಾರದಲ್ಲಿ ವಿಲೀನವಾಗುವುದಿಲ್ಲ. ಆದರೆ ಅನಿಲಿನ್, ನೈಟ್ರೋಬೆಂಜೀನ್, ಕ್ಲೋರೋಫಾರ್ಮ್, ಪ್ರಬಲ ಅಸಿಟಿಕ್ ಮತ್ತು ಸಲ್ಪ್ಯೂರಿಕ್ ಆಮ್ಲಗಳಲ್ಲಿ ವಿಲೀನವಾಗುತ್ತದೆ.
ಉತ್ಪತ್ತಿ, ತಯಾರಿಕೆ : ಇಂಡಿಗೋಫೆರ ಸಸ್ಯಗಳ ಸಣ್ಣ ಸಣ್ಣ ರಂಬೆಗಳು ಮತ್ತು ಎಲೆಗಳನ್ನು ನೀರಿನೊಂದಿಗೆ ಹುದುಗಿಸಿದಾಗ ಇಂಡಿಕಾನ್ ವಿಭಜನೆಯಾಗುತ್ತದೆ. ಫಲಿತವನ್ನು ಗಾಳಿಯಲ್ಲಿ ಉತ್ಕರ್ಷಿಸಿದಾಗ ಇಂಡಿಗೋ ಒತ್ತರದ ರೂಪದಲ್ಲಿ ಹೋರಬೀಳುತ್ತದೆ. ಈ ವಿಧಾನ ಈಗ ಬಳಕೆಯಲ್ಲಿಲ್ಲ. ಕೃತಕವಾಗಿ ಇಂಡಿಗೋವನ್ನು; ಅನಿಲಿನ್ ಮತ್ತು ಕ್ಲೋರಲಿಸಿಟಿಕ್ ಆಮ್ಲಗಳನ್ನು (ClCH2.COOH) ಸಂಯೋಗ ಮಾಡುವುದರಿಂದ ಉತ್ಪತ್ತಿಯಾಗುವ ಫೀನೈಲ್ ಗ್ಲೈಸಿನ್ ವಸ್ತುವನ್ನು ಪ್ರತ್ಯಾಮ್ಲ ಮತ್ತು; ಸೋಡಿಯಂ ಅಮೈಡ್ಗಳೊಂದಿಗೆ ಬೆಸೆದು ಉತ್ಪತ್ತಿಮಾಡುತ್ತಾರೆ. ಕೃತಕವಾಗಿ ಉತ್ಪತ್ತಿಯಾಗುವ ಇಂಡಿಗೋ ವಾಸ್ತವ ಮೂಲಗಳಿಂದ ತಯಾರುಮಾಡುವ ವಸ್ತುವಿಗಿಂತ ಉತ್ತಮವಾಗಿರುವುದೆಂದು ಪರಿಗಣಿಸಲಾಗಿದೆ.
ಉಪಯೋಗಗಳು : ಹತ್ತಿಯ ಬಟ್ಟೆಗಳಿಗೆ ಬಣ್ಣವನ್ನು ಕೊಡುವುದಕ್ಕೆ; ಶಾಯಿಗಳ ತಯಾರಿಕೆಯಲ್ಲಿ; ಇಂಡಿಗೋದಿಂದ ಉತ್ಪತ್ತಿಯಾಗುವ ವಸ್ತುಗಳ ತಯಾರಿಕೆಯಲ್ಲಿ, ಬಣ್ಣಗಳ ತಯಾರಿಕೆಯಲ್ಲಿ.
(ಎಚ್.ಎಸ್.ಎಸ್.)