ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ಯೂಡರ್ ದೊರೆಗಳು

ವಿಕಿಸೋರ್ಸ್ದಿಂದ

15ನೆಯ ಶತಮಾನದ ಕೊನೆಯ ಭಾಗದಲ್ಲಿ ಯುರೋಪಿನಲ್ಲಿ ಅನೇಕ ರಾಜಕೀಯ ಬದಲಾವಣೆಗಳಾದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾಹ ಸಂಬಂಧಗಳು ಬೆಳೆದವು. ಇಂಗ್ಲೆಂಡಿನಲ್ಲಿ ಈ ಕಾಲದಲ್ಲಿ ಅಧಿಕಾರಕ್ಕೆ ಬಂದ ಟ್ಯೂಡರ್ ದೊರೆಗಳು ನಿರಂಕುಶ ಅಧಿಕಾರ ನಡೆಸಿದರೂ ಕ್ರಮೇಣ ರಾಷ್ಟ್ರೀಯ ಭಾವನೆ ಮೂಡುತ್ತ ಬಂತು.

ಟ್ಯೂಡರ್ ದೊರೆಗಳ ಪ್ಯೆಕಿ ಏಳನೆಯ ಮತ್ತು ಎಂಟನೆಯ ಹೆನ್ರಿ ಮುಖ್ಯರು. ಏಳನೆಯ ಹೆನ್ರಿಯ ಕಾಲದಲ್ಲಿ ಯಾರ್ಕರು ನಡೆಸಿದ ಪಿತೂರಿಯನ್ನು ಆತ ಸದೆಬಡಿದ; ಶ್ರೀಮಂತರನ್ನು ಮೂಲೆಗುಂಪಾಗಿಸಿದ. ಪಾರ್ಲಿಮೆಂಟಿನ ಅನುಮತಿ ಪಡೆದು ಸ್ಟಾರ್ ಚೇಂಬರ್ ಕೋರ್ಟನ್ನು ಸ್ಥಾಪಿಸಿ ಶ್ರೀಮಂತರನ್ನು ತುಳಿದ. ವೆಸ್ಟ್ ಮಿನ್ಸ್ಚರ್ನಲ್ಲಿ ಸೇರುತ್ತಿದ್ದ ಈ ಕೋರ್ಟಿನ ಪ್ರಾಂಗಣದ ಒಳ ಚಾವಣಿ ನಕ್ಷತ್ರಗಳಿಂದ ಅಲಂಕೃತವಾಗಿತ್ತು. ಆದ್ದರಿಂದ ಇದಕ್ಕೆ ಸ್ಟಾರ್ ಚೇಂಬರ್ ಕೋರ್ಟ್ ಎಂದು ಹೆಸರು ಬಂತು. ದೇಶದ ಶಿಸ್ತನ್ನು ಕಾಪಾಡುವುದರಲ್ಲಿ ಇದು ಸಹಾಯ ಮಾಡಿತು. ಗುಲಾಬಿ ಯುದ್ಧದಿಂದ ಸುಸ್ತಾಗಿದ್ದ ಇಂಗ್ಲೆಂಡಿಗೆ ಹೆನ್ರಿಯ ಆಡಳಿತ ತಂಪನ್ನೆರಚಿತು. ಇಂಗ್ಲೆಂಡ್ ಪ್ರಗತಿಪರವಾಯಿತು. ಸರ್ಕಾರ ಜನಪ್ರಿಯವಾಯಿತು. ಶಾಂತಿ ಲಭಿಸಿತು. ಟ್ಯೂಡರ್ ರಾಜರು ಜನತೆಯ ಬೆಂಬಲ ಗಳಿಸಿದರು.

ಎಂಟನೆಯ ಹೆನ್ರಿಯ ಕಾಲದಲ್ಲಿ ನವೀನ ಮತಧರ್ಮ ಇಂಗ್ಲೆಂಡನ್ನು ಪ್ರವೇಶಿಸಿತು. ಇವನಿಗೆ ಸಹಾಯಕನಾದವನು ಥಾಮಸ್ ವುಲ್ಸಿ. ಈತ ರಾಜಕಾರ್ಯ ಪ್ರವೀಣ. ಪೋಪನಿಂದ ಮಹಾ ಮಠಾಧಿಪತಿ ಸ್ಥಾನ ಈತನಿಗೆ ಲಭಿಸಿತು. ಇಂಗ್ಲೆಂಡಿನ ವಿದೇಶಾಂಗನೀತಿಯನ್ನು ಮೊದಲ ಬಾರಿಗೆ ರೂಪಿಸಿದವನು ಇವನು. ಶಕ್ತಿಗಳ ಸಮತೋಲ ಈತನ ಗುರಿಯಾಗಿತ್ತು. ಎಂಟನೆಯ ಹೆನ್ರಿ ತನ್ನ ಮೊದಲ ಹೆಂಡತಿ ಕ್ಯಾಥರೀನ್ ಆಫ್ ಅರಗಾನಳೊಂದಿಗೆ ವಿವಾಹವಿಚ್ಛೇದ ಮಾಡಿಕೊಂಡು ಆಸ್ಥಾನದ ಆನ್ ಬೋಲಿನ್ಳನ್ನು ಮದುವೆಯಾಗಬಯಸಿದ. ಆದರೆ ಇದಕ್ಕೆ ಪೋಪ್ ಆಶೀರ್ವಾದ ನೀಡಲಿಲ್ಲ. ಆದ್ದರಿಂದ ಈತ ಪೋಪನನ್ನೇ ಧಿಕ್ಕರಿಸಿ ಚರ್ಚಿನ ಸ್ವಾತಂತ್ರ್ಯವನ್ನು ಸಾರಿದ. ಮೊದಲನೆಯ ವಿವಾಹವನ್ನು ಕೊನೆಗೊಳಿಸಲು ಚರ್ಚಿನಿಂದ ಅನುಮತಿಯೂ ಬಂತು. ಆಗ ಈತ ಆನ್ ಬೋಲಿನಳನ್ನು ಮದುವೆಯಾದ. ಇಂಗ್ಲೆಂಡಿನಲ್ಲಿ ಆದ ಮತಸುಧಾರಣೆ ವ್ಯೆಯಕ್ತಿಕ ಕಾರಣಕ್ಕಾಯಿತು. ಎಂಟನೆಯ ಹೆನ್ರಿ ಪಾರ್ಲಿಮೆಂಟಿನ ಅನುಮತಿಯನ್ನು ಪಡೆಯದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಟ್ಯೂಡರರ ಕಾಲದಲ್ಲಿ ಪಾರ್ಲಿಮೆಂಟಿನ ಬೆಳೆವಣಿಗೆ ವ್ಯವಸ್ಥಿತವಾಗಿ ಆಯಿತು. ಎಂಟನೆಯ ಹೆನ್ರಿಯ ಕಾಲದಲ್ಲಿ ಇಂಗ್ಲೆಂಡಿನ ಸಶಸ್ತ್ರ ನೌಕಾಪಡೆಯ ನಿರ್ಮಾಣವಾಯಿತು.

ಆರನೆಯ ಎಡ್ವರ್ಡ್ ಚಿಕ್ಕವನಾಗಿದ್ದಾಗಲೇ ಪಟ್ಟಕ್ಕೆ ಬಂದ. ಈತನ ಕಾಲದಲ್ಲಿ ಪ್ರಾಟೆಸ್ಟೆಂಟ್ ಮತ ಪ್ರಾಬಲ್ಯಕ್ಕೆ ಬಂತು. ಇವನ ಅನಂತರ ಬಂದ ಮೇರಿ ಎಂಟನೆಯ ಹೆನ್ರಿಯ ಮಗಳು. ಆಕೆ ಜಾರಿಯಲ್ಲಿದ್ದ ಎಲ್ಲ ಮತೀಯ ಬದಲಾವಣೆಗಳನ್ನೂ ರದ್ದು ಮಾಡಿದಳು. ಪೋಪನ ಸಾರ್ವಭೌಮತ್ವವನ್ನು ಇಂಗ್ಲೆಂಡ್ ಒಪ್ಪಿತು. ರೋಮನ್ ಕ್ಯಾಥೊಲಿಕ್ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಪ್ರತಿಸುಧಾರಣೆ ಚಳವಳಿ ಪ್ರಾರಂಭವಾಯಿತು. ಇದರ ನಾಯಕ ಲಯೋಲದ ಇಗ್ನೇಷಿಯಸ್ (ಇಗ್ನೇಷಿಯಸ್, ಲಯೋಲದ). ಮೇರಿಯ ಆಳ್ವಿಕೆಯಲ್ಲಿ ಪ್ರಾಟೆಸ್ಟೆಂಟ್ ಮತ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತು.

1558-1603ರ ವರೆಗೆ ಆಳಿದ ಎಲಿಜಬೆತ್ ರಾಣಿ ಇಂಗ್ಲೆಂಡ್ ದೇಶದ ಚರಿತ್ರೆಯಲ್ಲಿ ಅದ್ವಿತೀಯಳು. ಇಪ್ಪತ್ತೈದನೆಯ ವಯಸ್ಸಿನಲ್ಲಿ ಈಕೆ ಪಟ್ಟಕ್ಕೆ ಬಂದಾಗ ಇದ್ದ ಮತೀಯ ಅಶಾಂತಿಯನ್ನು ಕಡಿಮೆ ಮಾಡುವುದಕ್ಕಾಗಿ ಚಾಣಾಕ್ಷತನದಿಂದ ಆಳಿ ಪೋಪನ ಅಧಿಕಾರವನ್ನು ಆಳಿದಳು. ಈಕೆ ಯಾವ ಬಣಕ್ಕೂ ಸೇರಿರಲಿಲ್ಲ. ಇಂಗ್ಲಿಷ್ ಚರ್ಚಿನ ಮೇಲೆ ಇದ್ದ ಪೋಪನ ಅಧಿಕಾರವನ್ನು ಈಕೆ ಕಿತ್ತೆಸೆದಳು. ಈಕೆಯ ಮತೀಯನೀತಿ ನಿಷ್ಪಕ್ಷದ್ದಾಗಿತ್ತು. ಕ್ಯಾಥೊಲಿಕ್, ಪ್ರಾಟೆಸ್ಟೆಂಟ್ ಮತ್ತು ಪ್ಯುರಿಟನ್ ಎಂಬ ಮೂರು ಪಂಗಡಗಳು ಈಕೆಯ ಕಾಲದಲ್ಲಿದ್ದವು. ಇಂಗ್ಲೆಂಡಿನ ಚರ್ಚಿಗೆ ತಾನೇ ಮುಖ್ಯ ಗೌರ್ನರಳೆಂದು ಈಕೆ ಘೋಷಿಸಿಕೊಂಡಳು. ಕ್ಯಾಥೊಲಿಕರು ಕೋಪಕೊಂಡು ಈಕೆಯ ವಿರುದ್ಧ ಪಿತೂರಿ ನಡೆಸಿದರು. ಪ್ಯೂರಿಟನ್ನರೂ ವಿರುದ್ಧವಾಗಿ ನಿಂತರು. ಪ್ರಾಟೆಸ್ಟೆಂಟರಿಗೆ ಇವಳ ಅಭಯ ಹಸ್ತವಿದ್ದಿತು. ಎಲಿಜಬೆತ್ ಮತ್ತು ಸ್ಕಾಟ್ಲೆಂಡಿನ ಸಂಬಂಧ ವಿಚಿತ್ರವಾದದ್ದು. ಸ್ನೇಹ ಸಂಪಾದನೆಗಾಗಿ ಹೆನ್ರಿಯ ಮಗಳಾದ ಮಾರ್ಗರೇಟಳನ್ನು ಸ್ಕಾಟ್ಲೆಂಡಿನ ನಾಲ್ಕನೆಯ ಜೇಮ್ಸಿಗೆ ವಿವಾಹಮಾಡಿಕೊಡಲಾಗಿತ್ತು. ಎಂಟನೆಯ ಹೆನ್ರಿಯ ಕಾಲದಲ್ಲಿ ಸ್ಕಾಟ್ಲೆಂಡಿನೊಡನೆ ಯುದ್ಧವಾದಾಗ ಜೇಮ್ಸ್ ಮಡಿದಿದ್ದ. ಆತನ ಮಗ 5ನೆಯ ಜೇಮ್ಸ್ ಮತ್ತೊಂದು ಕದನದಲ್ಲಿ ಸತ್ತ. ಸ್ಕಾಟ್ಲೆಂಡಿನ ರಾಜಕುಮಾರಿ ಮೇರಿ ಚಿಕ್ಕ ವಯಸ್ಸಿನವಳು. ಆಕೆಯನ್ನು ಆರನೆಯ ಎಡ್ವರ್ಡನಿಗೆ ವಿವಾಹ ಮಾಡಬೇಕೆಂದು ಪ್ರಯತ್ನಿಸಿ ವಿಫಲರಾದರು. ಸ್ಕಾಟರು ಫ್ರೆಂಚ್ ರಾಜಕುಮಾರನಿಗೆ ಮೇರಿಯನ್ನು ಕೊಟ್ಟು ಮದುವೆ ಮಾಡಿದರು. ಸ್ಕಾಟ್ಲೆಂಡಿನಲ್ಲಿ ಫ್ರೆಂಚರಿಗೂ ಪ್ಯೂರಿಟನರಿಗೂ ಯುದ್ಧವಾಯಿತು. ಎಲಿಜಬೆತ್ ರಾಣಿ ಸ್ಕಾಟರಿಗೆ ಸಹಾಯಮಾಡಿ ಅವರ ಸ್ನೇಹ ಸಂಪಾದಿಸಿದಳು.

1561ರಲ್ಲಿ ವಿಧವೆ ಮೇರಿ ಏಳನೆಯ ಹೆನ್ರಿಯ ಮರಿಮಗನಾದ ಲಾರ್ಡ್ಡಾನೆರ್ಲ್ಯನ್ನು ಮದುವೆಯಾದಳು. ಇಂಗ್ಲೆಂಡಿನ ಸಿಂಹಾಸನಕ್ಕೆ ಅವಳ ಹಕ್ಕು ಸ್ಥಾಪಿತವಾಯಿತು. ಎರಡನೆಯ ಫಿಲಿಪ್ ನಾಯಕತ್ವದಲ್ಲಿ ಸ್ಪೇನ್ ಇಂಗ್ಲೆಂಡಿನ ಮೇಲೆ ದಾಳಿ ಮಾಡಲು ಯೋಚಿಸಿತು. ಹಾಲೆಂಡ್ ದೇಶಕ್ಕೆ ಎಲಿಜಬೆತ್ ರಾಣಿ ಸಹಾಯ ಮಾಡಿದ್ದಳೆಂಬುದು ಇದಕ್ಕೆ ಕಾರಣ. ಫಿಲಿಪ್ ಒಂದು ದೊಡ್ಡ ನೌಕಾಬಲವನ್ನು ತಯಾರಿಸಿದ. 130 ಹಡಗುಗಳಿದ್ದ ಸ್ಪ್ಯಾನಿಷ್ ಆರ್ಮೆಡ ಯುದ್ಧಕ್ಕೆ ಸಜ್ಜಾಯಿತು. 1588ರಲ್ಲಿ ಇದು ಇಂಗ್ಲಿಷ್ ಕಡಲ್ಗಾಲುವೆಯನ್ನು ಪ್ರವೇಶಿಸಿದಾಗ ಯಾರೊಬ್ಬರೂ ಅದನ್ನು ವಿರೋಧಿಸಲಿಲ್ಲ. ಆದರೆ ಇಂಗ್ಲಿಷರು ಹಠಾತ್ತಾಗಿ ಅದರ ಮೇಲೆ ಎರಗಿ ಪುಡಿ ಪುಡಿಮಾಡಿದರು. ಸ್ಪೇನ್ ಸೋತಿತು. ಪ್ರಾಟಸ್ಟೆಂಟ್ ಮತಕ್ಕೆ ಒದಗಿದ್ದ ಕಂಟಕ ನಿವಾರಣೆಯಾಯಿತು ಈಕೆಯ ಕಾಲ ವಾಣಿಜ್ಯ ಮತ್ತು ವಸಾಹತುಗಳ ದೃಷ್ಟಿಯಿಂದ ಬಹು ಮಹತ್ತ್ವದ್ದು. 1600ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು. ಇಂಗ್ಲೆಂಡ್ ಮತ್ತು ರಷ್ಯಗಳ ನಡುವೆ ವ್ಯಾಪಾರ ಸಂಬಂಧ ಕುದುರಿತು. ಈಕೆಯ ಚಾಣಾಕ್ಷತನ, ಶಾಂತ ಸ್ವಭಾವ ಈಕೆಯನ್ನು ರಾಜಕೀಯದಲ್ಲಿ ಬದುಕಿಸಿದವು. ಈಕೆ ಪಾರ್ಲಿಮೆಂಟನ್ನು ಎಂದೂ ಎದುರು ಹಾಕಿಕೊಳ್ಳಲಿಲ್ಲ.