ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಯನ ಸಂಕ್ರಾಂತಿಗಳು

ವಿಕಿಸೋರ್ಸ್ದಿಂದ

ಅಯನ ಸಂಕ್ರಾಂತಿಗಳು

ಆಕಾಶಗೋಳದಲ್ಲಿ ವಿಷುವದ್ವøತ್ತದಿಂದ ಅತ್ಯಧಿಕ ಕೋನಾಂತರದಲ್ಲಿರುವ ಸೂರ್ಯನ ಎರಡು ಸ್ಥಾನಗಳು (ಸಾಲ್ಸ್‍ಟಿಸಸ್). ಅತಿ ಉತ್ತರದ ಬಿಂದುವನ್ನು ಜೂನ್ 21ರಂದೂ ಅತಿ ದಕ್ಷಿಣದ ಬಿಂದುವನ್ನು ಡಿಸೆಂಬರ್ 22 ರಂದೂ ಸೂರ್ಯ ತಲಪುತ್ತಾನೆ. ಅಲ್ಲಿಂದ ಮುಂದೆ ಕ್ರಮವಾಗಿ ದಕ್ಷಿಣ ಮತ್ತು ಉತ್ತರ ದಿಕ್ಕಿನ ಸೂರ್ಯಚಲನೆ ಪ್ರಾರಂಭವಾಗುತ್ತದೆ. ಆದ್ದರಿಂದ ಈ ಬಿಂದು ಅಥವಾ ತಾರೀಖುಗಳನ್ನು ದಕ್ಷಿಣಾಯನಾರಂಭ ಮತ್ತು ಉತ್ತರಾಯನಾರಂಭ ದಿನಗಳೆಂದು ಕರೆಯುವುದಿದೆ. ಕರ್ಕಾಟಕ ಸಂಕ್ರಾಂತಿ (ಸಮ್ಮರ್ ಸಾಲ್ಸ್‍ಟಿಸ್) ಮತ್ತು ಮಕರ ಸಂಕ್ರಾಂತಿ (ವಿಂಟರ್ ಸಾಲ್ಸ್‍ಟಿಸ್) ಎಂದು ಇವುಗಳ ಹೆಸರು. ಸೂರ್ಯನನ್ನು ಪರಿಭ್ರಮಿಸುತ್ತಿರುವ ಭೂಮಿಯ ಅಕ್ಷ ಕಕ್ಷಾತಲಕ್ಕೆ 231/2 ಯಷ್ಟು ಬಾಗಿಕೊಂಡಿರುವುದೇ ಈ ದೃಗ್ಗೋಚರಸೂರ್ಯಚಲನೆಗೆ ಕಾರಣ. ವಾಸ್ತವಿಕವಾಗಿ ಜೂನ್ 21 ರಂದು (ಕರ್ಕಾಟಕ ಸಂಕ್ರಾಂತಿ) ಭೂಮಿಯ ಉತ್ತರ ಮೇರುವೂ ಡಿಸೆಂಬರ್ 22 ರಂದು (ಮಕರ ಸಂಕ್ರಾಂತಿ) ದಕ್ಷಿಣ ಮೇರುವೂ ಅತ್ಯಧಿಕವಾಗಿ ಸೂರ್ಯನೆಡೆಗೆ ವಾಲುವುವು. ಆದ್ದರಿಂದ ಮೊದಲಿನ ದಿನದಂದು ಉತ್ತರಾರ್ಧಗೋಲದವರಿಗೂ, ಎರಡನೆಯ ದಿನದಂದು ದಕ್ಷಿಣಾರ್ಧ ಗೋಲದವರಿಗೂ ನಡುಬೇಸಿಗೆ. ಅಯನ ಸಂಕ್ರಾಂತಿಗಳು ಋತುಭೇದಗಳನ್ನು ಅರಿಯಲು ಉಪಯುಕ್ತವಾಗಿವೆ. (ನೋಡಿ- ಋತುಗಳು)