ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷಿ ವಿಮೆ

ವಿಕಿಸೋರ್ಸ್ದಿಂದ

ಕೃಷಿ ವಿಮೆ

ಕೃಷಿ ಎಷ್ಟು ಹಳೆಯದೋ ವಿಮೆಯೂ ಅಷ್ಟೇ ಹಳೆಯದು. ಕೃಷಿಕರೂ ಕುರಿಗಾಹಿಗಳೂ ಪಶುಪಾಲಕರೂ ತಮಗೆ ಸಂಭವಿಸಬಹುದಾದ ನಷ್ಟಗಳನ್ನೆದುರಿಸಲು ನಾನಾ ಬಗೆಯ ಉಪಾಯಗಳನ್ನು ಬಲು ಹಿಂದಿನಿಂದಲೂ ಅನುಸರಿಸುತ್ತ ಬಂದಿದ್ದಾರೆ. ಆಧುನಿಕ ಕೃಷಿ ವಿಮೆಗೆ ಇವೇ ಉಗಮ. ಪ್ರಾಣಹಾನಿ, ಸ್ವತ್ತಿನ ಹಾನಿಗಳನ್ನೂ ಆಹಾರ ಸರಬರಾಯಿಗೆ ಸಂಭವಿಸುವ ತಡೆಯನ್ನೂ ತಪ್ಪಿಸುವ ಸಲುವಾಗಿ ರೈತಜನರು ಪರಸ್ಪರವಾಗಿ ಸಹಕರಿಸುತ್ತಿದ್ದ ದೃಷ್ಟಾಂತಗಳು ಎಷ್ಟೋ ಉಂಟು. ಈ ಬಗೆಯ ರಕ್ಷಣೆಯ ಕಾರ್ಯವನ್ನು ಪ್ರತಿಯೊಂದು ಕುಟುಂಬಕ್ಕೂ ಗುಂಪಿಗೂ ವಿಧಿಸಲಾಗಿತ್ತು. ಜೀವಕ್ಕೋ ಆಸ್ತಿಗೋ ನಷ್ಟವೇನಾದರೂ ತಟ್ಟಿದ ಪಕ್ಷದಲ್ಲಿ ಊರವರೆಲ್ಲ ಸೇರಿ ಆ ನಷ್ಟ ತುಂಬಲು ಸೇವೆ ಸಲ್ಲಿಸುವುದು ಸಾಮಾನ್ಯವಾಗಿತ್ತು. ಇದು ಧರ್ಮವಾಗಿತ್ತು.

ವ್ಯಾಪಾರ ಬೆಳೆದು ಹಣವ್ಯವಸ್ಥೆ ಆಗಮಿಸಿದಾಗ ನಷ್ಟ ತುಂಬುವ ಹೊಸಹೊಸ ವಿಧಾನಗಳು ಅಸ್ತಿತ್ವಕ್ಕೆ ಬಂದುವು. ಸಂಭವಿಸಿದ ವೈಯಕ್ತಿಕ ನಷ್ಟನವನ್ನು ಉರೊಟ್ಟಿನವರೆಲ್ಲ ಪಾಲ್ಗೊಳ್ಳುವ ವ್ಯವಸ್ಥೆ ವಿಸ್ತರಿಸಿ, ಹಣಾಧಾರಿತವಾದ ವ್ಯವಸ್ಥೆಗೆ ಎಡೆ ಕೊಟ್ಟಿತು. ಈ ಪರಿವರ್ತನೆ ಸಂಭವಿಸುತ್ತಿದ್ದಂಥ ಸಂಧಿಕಾಲದಲ್ಲಿ ನಷ್ಟ ತುಂಬುವ ಕಾರ್ಯ ಬಹುತೇಕ ಸ್ವಂತ ಇಚ್ಛೆಯದಾಗಿತ್ತು. ಗುಂಪಿನ ಯಾವ ವ್ಯಕ್ತಿಗಾದರೂ ಸಂಭವಿಸಿದ ನಷ್ಟವನ್ನು ಪ್ರತಿಯೊಬ್ಬನೂ ಅವನವನ ಇಚ್ಛಾನುಸಾರ ತುಂಬಿಕೊಡುವ ಪದ್ಧತಿ ಹಣವ್ಯವಸ್ಥೆಯಲ್ಲಿ ಸರಿಯಾಗಿ ಕೆಲಸ ಮಾಡಲಾರದೆ ಹೋಯಿತು. ಇದರ ಹಿಂದಿನ ಧೋರಣೆಯನ್ನು ಬದಲಾಯಿಸಿ, ಇದನ್ನೊಂದು ವ್ಯವಹಾರವಾಗಿ ರೂಪಿಸಬಾರದೇಕೆ? ಎಂಬ ವಿಚಾರ ಬೆಳೆಯಿತು. ಸರ್ವಸಾಮಾನ್ಯವಾದ ನಷ್ಟಸಂಭವಗಳನ್ನು ಎದುರಿಸುವ ಸಲುವಾಗಿ ಪ್ರತಿಯೊಬ್ಬರಿಂದಲೂ ಚಂದಾ ಸಂಗ್ರಹಿಸಿ ನಿಧಿಯಾಗಿ ಇಟ್ಟಿದ್ದು, ಚಂದಾದಾರರಲ್ಲಿ ಯಾರಿಗೆ ನಷ್ಟ ಸಂಭವಿಸಿದರೂ ಆ ಸಾಮಾನ್ಯ ನಿಧಿಯಿಂದ ಅವರ ನಷ್ಟವನ್ನು ತುಂಬಿಕೊಡುವ ವಿಧಾನವೊಂದು ವಿಕಾಸವಾಯಿತು.

ಆಸ್ತಿಯ ನಷ್ಟವನ್ನು ತುಂಬಿಕೊಡುವ ಕ್ರಮಗಳೇ ಅತ್ಯಂತ ಪ್ರಾಚೀನವಾದವು. ಜೀವವಿಮೆ, ಸಾಮಾಜಿಕ ಭದ್ರತೆಯ ಕ್ರಮಗಳು-ಇವೆಲ್ಲ ಈಚಿನವು. ವ್ಯವಸಾಯ ಕ್ಷೇತ್ರದಲ್ಲಿ ವಿಮೆಯ ಉದಯವಾದ್ದು ಬಲು ಹಿಂದೆಯೇ ಆದರೂ ಕೈಗಾರಿಕೆ ವಾಣಿಜ್ಯ ಕ್ಷೇತ್ರಗಳಲ್ಲಿ ಇದು ಬೆಳೆದಷ್ಟು ಶೀಘ್ರವಾಗಿ ಕೃಷಿಕ್ಷೇತ್ರದಲ್ಲಿ ಬೆಳೆಯಲಿಲ್ಲ. ಅನಿವಾರ್ಯವಾದ ನಷ್ಟಗಳನ್ನು ಪರಸ್ಪರ ಸಹಾಯದಿಂದ ತುಂಬಿಕೊಳ್ಳುವಷ್ಟಕ್ಕೇ ಇದು ಬಹುಕಾಲ ಸೀಮಿತವಾಗಿತ್ತು. ಕೃಷಿಕರು ಸಾಮಾನ್ಯವಾಗಿ ಸ್ವಾವಲಂಬನಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದದ್ದೂ, ಕೈಗಾರಿಕೆ ವಾಣಿಜ್ಯಗಳೊಡನೆ ಹೋಲಿಸಿದರೆ ಅವರ ನಷ್ಟಸಂಭವಗಳು ಅಲ್ಪವಾಗಿದ್ದು ಅವನ್ನು ಸುಲಭವಾಗಿ ತುಂಬಿಕೊಳ್ಳಬಹುದೆಂಬ ಭಾವನೆಯಿದ್ದದ್ದೂ ಕೃಷಿವಿಮೆಯ ಮಂದಗಮನಕ್ಕೆ ಮುಖ್ಯ ಕಾರಣ ವಿಮೆಯ ವೆಚ್ಚ ಬಲು ದುಬಾರಿಯೆಂಬ ಕಾರಣದಿಂದ ಅವರು ವಿಮಾಕಂತು ಕೊಡಲು ಹಿಂದೆಗೆಯುತ್ತಿದ್ದರು. ತಾಂತ್ರಿಕ ಮುನ್ನಡೆಯಿಂದಾಗಿ ಕೃಷಿಯಲ್ಲೂ ವಿಶೇಷ ಪ್ರಾವೀಣ್ಯ ಪ್ರಧಾನವಾಗಿ, ಜಮೀನಿನ ಮೇಲೆ ಹೆಚ್ಚು ಬಂಡವಾಳ ಹಾಕುವುದು ಆರಂಭವಾದಾಗ ಇದಕ್ಕೂ ವಿಮಾ ಸೂತ್ರವನ್ನು ಅನ್ವಯಿಸುವುದು ಅಗತ್ಯವಾಯಿತು. ಆದರೂ ಕೃಷಿ ವಿಮೆಯ ಬೆಳವಣಿಗೆ ಅಷ್ಟೇನೂ ಗಮನಾರ್ಹವಾದ್ದಲ್ಲವೆಂದೇ ಹೇಳಬೇಕು.

ವ್ಯವಸಾಯೋತ್ಪಾದನೆಗೆ ಸಂಬಂಧಿಸಿದ ನಷ್ಟ ಸಂಭವಗಳೆಂದರೆ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಹಿಮವೃಷ್ಟಿ, ಸಿಡಿಲು, ಬೆಂಕಿ, ಪಿಡುಗುಗಳು, ಪ್ರಾಣಿಗಳ ಹಾವಳಿ, ಕೃಷಿಕಾರ್ಯ ಸರಿಯಾಗಿ ನಿರ್ವಹಿಸದೆ ಇದ್ದುದರ ಪರಿಣಾಮವಾಗಿ ಕಡಿಮೆ ಇಳುವರಿ, ಕೃಷಿಕಾರ್ಯ ನಿರ್ವಹಿಸುವವನ ಕಾಯಿಲೆ, ಸಾವು, ಬೆಲೆಗಳ ಏರಿಳಿತಗಳಿಂದ ಸಂಭವಿಸುವ ನಷ್ಟ-ಮುಂತಾದವು.

ಲಾಭೋದ್ದೇಶವಿಲ್ಲದ ಪರಸ್ಪರ ವಿಮಾ ಕ್ರಮಗಳು ಜರ್ಮನಿಯ ರೈತರಲ್ಲಿ 15-16ನೆಯ ಶತಮಾನಗಳಲ್ಲಿ ಬೆಳೆದುವು. ಪಶುಗಳ ನಷ್ಟ ತುಂಬಿಕೊಡುವ ಪರಸ್ಪರ ವಿಮಾ ಪದ್ಧತಿ 12ನೆಯ ಶತಮಾನದ ಆದಿಕಾಲದಲ್ಲಿ ಐಸ್‍ಲೆಂಡಿನಲ್ಲಿತ್ತು. ರೈತರೇ ಪರಸ್ಪರ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡಿದ್ದರು. ನಷ್ಟ ಸಂಭವಿಸಿದಾಗ ಅದನ್ನು ತುಂಬಿಕೊಡಲು ಎಲ್ಲ ಸದಸ್ಯರ ಮೇಲೂ ಶುಲ್ಕ ವಿಧಿಸಲಾಗುತ್ತಿತ್ತು. ಸರಾಸರಿ ನಷ್ಟವನ್ನು ಮುಂದಾಗಿಯೇ ಅಂದಾಜುಮಾಡಿ ಶುಲ್ಕವನ್ನು ಮುಂಗಡವಾಗಿ ವಸೂಲುಮಾಡುವ ಪದ್ಧತಿ ಅನಂತರ ವಿಕಾಸಗೊಂಡಿತು. ಈ ನಷ್ಟವನ್ನು ಇನ್ನೂ ವಿಶಾಲಕ್ಷೇತ್ರಕ್ಕೆ ವರ್ಗಾಯಿಸುವ ವಿಧಾನವಾದ ಮರುವಿಮೆ ವ್ಯವಸ್ಥೆ ಕ್ರಮೇಣ ಬಂತು. ಪ್ರಾದೇಶಿಕ ಹಾಗೂ ರಾಷ್ಟ್ರಿಯ ಸಂಘಟನೆಗಳು ಬೆಳೆದುವು.

ಕೃಷಿ ಉತ್ಪಾದನೆಗೆ ಸಂಬಂಧಿಸಿದ ನಾನಾ ನಷ್ಟ ಸಂಭವಗಳ ವಿಮೆ ಇಳಿಸುವ ಕಷ್ಟದಿಂದಾಗಿ, ಕೆಲವು ಬಗೆಯ ನಷ್ಟ ತುಂಬುವ ವ್ಯವಸ್ಥೆಗಳಿಗೆ ಸರ್ಕಾರದ ನೆರವನ್ನು ಪಡೆಯಲಾಗಿದೆ. ಬೆಳೆ ಮತ್ತು ಪಶು ವಿಮೆಗಳು ಇಂಥವು. ಜಮೀನುಗಳ ಪರಸ್ಪರ ಸಹಕಾರ ವಿಮೆ ಕಂಪನಿಗಳನ್ನು ಕೆಲವು ವಿದೇಶಗಳಲ್ಲಿ ಸರ್ಕಾರಗಳೇ ಸಂಘಟಿಸಿವೆಯಲ್ಲದೆ, ಅವಕ್ಕೆ ನೇರ ಧನದಾನ ನೀಡಿವೆ ; ಅವುಗಳ ಬೆಳವಣಿಗೆಗೆ ಬಲು ಉದಾರವಾದ ಕಾನೂನುಗಳನ್ನು ಜಾರಿಗೆ ತಂದಿವೆ ; ತೆರಿಗೆಯಿಂದಲೂ ಅವಕ್ಕೆ ವಿನಾಯಿತಿ ನೀಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಸರ್ಕಾರಗಳೇ ವಿಮಾಕ್ಷೇತ್ರವನ್ನು ಪ್ರವೇಶಿಸಿ, ರೈತರಿಗೆ ಬೇರೆ ಮೂಲಗಳಿಂದ ಲಭಿಸದಿದ್ದ ಭರವಸೆಯನ್ನು ತಾವೇ ದೊರಕಿಸಿಕೊಟ್ಟಿರುವುದುಂಟು.

ಕಟ್ಟಡ, ಜಾನುವಾರು, ಉತ್ಪನ್ನದ ದಾಸ್ತಾನು, ಕೃಷಿ ಉಪಕರಣಗಳು, ಯಂತ್ರಗಳು, ವಾಹನಗಳು, ಬೆಳೆ-ಇವಕ್ಕೆ ಸಂಬಂಧಿಸಿದ್ದು ಸ್ವತ್ತಿನ ವಿಮೆ. ಬೆಂಕಿಯ ವಿಮೆ ಇನ್ನೊಂದು ಹಳೆಯ ವಿಮಾಪ್ರಕಾರ. ಸಿಡಿಲಿನಿಂದ ಸಂಭವಿಸಿದ ನಷ್ಟ ತುಂಬಿಕೊಡುವ ವ್ಯವಸ್ಥೆ ಮೊದಲಿಗೆ ಇರಲಿಲ್ಲ. ಸಿಡಿಲಿನಿಂದ ಬೆಂಕಿ ಸಂಭವಿಸಿದರೆ ಅದರ ನಷ್ಟ ತುಂಬಿಕೊಡುವ ಕ್ರಮ ಅನಂತರ ಬಂತು. ಕ್ರಮೇಣ ನಾನಾ ಬಗೆಯ ಕಾರಣಗಳಿಂದ ಸಂಭವಿಸುವ ಅಗ್ನಿ ಅಪಘಾತಗಳೆಲ್ಲ ವಿಮೆಯ ವ್ಯಾಪ್ತಿಯೊಳಕ್ಕೆ ಬಂದುವು. ಬೆಳೆ ಒಣಗಿ ಬೆಂಕಿಗೆ ಈಡಾಗಬಹುದಾದ ಸಂಭವಕ್ಕೆ ವಿರುದ್ಧವಾಗಿಯೂ ವಿಮೆ ಇಳಿಸುವ ಪರಿಪಾಠ ಆರಂಭವಾಯಿತು.

ಬಿರುಗಾಳಿ, ಆಲಿಕಲ್ಲು ಮುಂತಾದ ನೈಸರ್ಗಿಕ ಅನಾಹುತಗಳ ವಿಮೆ ಪದ್ಧತಿಗಳು ಸ್ವಿಟ್ಜರ್ಲೆಂಡ್, ಅರ್ಜೆಂಟಿನ, ಡೆನ್ಮಾರ್ಕ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬೆಳೆದುವು. ಜಾನುವಾರುಗಳ-ಮುಖ್ಯವಾಗಿ ಉಳುವ ಎತ್ತು, ಕುದುರೆ, ಮುಂತಾದುವುಗಳ-ನಷ್ಟಭರ್ತಿ ಮಾಡಿಕೊಡುವ ವಿಮಾ ಪ್ರಕಾರಗಳು ಬಲು ಹಿಂದಿನವು. ಈ ಬಗೆಯ ನಷ್ಟಸಂಭವದ ಸಾಮೂಹಿಕ ಪಾಲುದಾರಿಕೆ ವ್ಯವಸ್ಥೆ ಅನೇಕ ಶತಮಾನಗಳ ಹಿಂದೆ ಚೀನದಲ್ಲಿ ಜಾರಿಯಲ್ಲಿತ್ತು. ಬೆಂಕಿ, ಸಿಡಿಲು, ಬಿರುಗಾಳಿ ಮುಂತಾದವುಗಳಿಂದ ಸಂಭವಿಸುವ ನಷ್ಟವನ್ನು ತುಂಬಿಕೊಡುವ ವಿಮೆ ಇಂದು ಜಾರಿಯಲ್ಲಿದೆ. ಅಪಘಾತ ಮತ್ತು ಕಾಯಿಲೆಗಳಿಂದ ಸಂಭವಿಸುವ ಜಾನುವಾರು ನಷ್ಟದ ವಿಮೆಯೂ ಹಲವು ದೇಶಗಳಲ್ಲುಂಟು. ಜಾನುವಾರುಗಳಿಗೆ ಸಂಭವಿಸುವ ಎಲ್ಲ ಬಗೆಯ ನಷ್ಟಗಳಿಗೂ ಅನ್ವಯಿಸುವ ವಿಮೆ (ಸಕಲನಷ್ಟ ವಿಮೆ) ತುಂಬ ಅಮೂಲ್ಯವಾದ ಪ್ರಾಣಿಗಳಿಗೆ ಸಂಬಂಧಿಸಿದಂತೆ ಮಾತ್ರ ಜಾರಿಯಲ್ಲಿದೆ. ಒಂದು ಅಥವಾ ಎರಡು ಪ್ರಾಣಿಗಳನ್ನೇ ಅವಲಂಬಿಸಿರುವ ರೈತನಿಗೆ ಸಕಲನಷ್ಟ ವಿಮೆಯ ಅಗತ್ಯ ಅಧಿಕವಾಗಿದೆ. ಬೆಂಕಿ, ಬಿರುಗಾಳಿ, ಅಪಘಾತ- ಈ ಮೂರು ಬಗೆಯ ನಷ್ಟಗಳನ್ನೊಳಗೊಂಡ ವಿವಿಧ ಮುಖ ವಿಮಾ ಯೋಜನೆಯೇ ಇತ್ತೀಚಿನ ಪ್ರವೃತ್ತಿ.

ಫಸಲು ವಿಮೆ ಯೋಜನೆಗಳು ಆರಂಭದಲ್ಲಿ ಒಂದೊಂದೇ ಬಗೆಯ ನಷ್ಟಗಳಿಗೆ ಸೀಮಿತವಾಗಿದ್ದುವು. ಸಕಲ ನಷ್ಟಗಳಿಗೂ ರಕ್ಷೆ ನೀಡುವ ಯೋಜನೆಗಳು ಈಚೆಗೆ ಜಾರಿಗೆ ಬರುತ್ತಿವೆ. ಇವಕ್ಕೆ ಸರ್ಕಾರಗಳೂ ನೆರವು ನೀಡುತ್ತಿವೆ. ಅನೇಕ ಸಂಧರ್ಭಗಳಲ್ಲಿ ಸರ್ಕಾರವೇ ಈ ಬಗೆಯ ವಿಮೆಯಲ್ಲಿ ಏಕಸ್ವಾಮ್ಯ ಪಡೆದಿರುವುದುಂಟು. ಸೋವಿಯತ್ ದೇಶದಲ್ಲಿ ಫಸಲು ವಿಮೆ ಸರ್ಕಾರದ ಏಕಸ್ವಾಮ್ಯ. ವಿಮೆ ಅಲ್ಲಿ ಕಡ್ಡಾಯ. ಚಂಡಮಾರುತದಿಂದ ಬಾಳೆಗೆ ರಕ್ಷಣೆ ನೀಡುವ ವಿಮಾ ಯೋಜನೆಯೊಂದು ಜಮೇಕಾದಲ್ಲಿ ಜಾರಿಯಲ್ಲಿದೆ. ಇದು ಅರ್ಧ ಸರ್ಕಾರಿ ಅಭಿಕರ್ತೃತ್ವವಾಗಿದೆ (ಏಜೆನ್ಸಿ). ಕಾಫಿ ಬೀಜ ಮತ್ತು ಕಾಫಿಯ ನೆರಳುಮರಗಳ ರಕ್ಷಣೆಗಾಗಿ ಪೋರ್ಟರಿಕೋದಲ್ಲಿ ಸರ್ಕಾರಿ ವಿಮಾ ವ್ಯವಸ್ಥೆಯೊಂದಿದೆ. ಮಲಾವಿಯಲ್ಲಿ ಬಿರುಗಾಳಿ ಮತ್ತು ಅನಾವೃಷ್ಟಿಯಿಂದ ಕಬ್ಬಿಗಾಗುವ ನಷ್ಟ ತುಂಬಲು ವಿಮಾ ಸೌಲಭ್ಯವುಂಟು. ಫಸಲಿನ ಸಕಲ ನಷ್ಟಗಳ ವಿರುದ್ಧ ರಕ್ಷಣೆ ನೀಡುವ ವಿಮಾಯೋಜನೆಗಳು ಅನೇಕ ರಾಷ್ಟ್ರಗಳಲ್ಲಿವೆ. ಬ್ರಜಿûಲಿನಲ್ಲಿರುವ ವಿಮಾ ಕಾರ್ಪೋರೇಷನ್ ಅರ್ಧ ಸರ್ಕಾರಿ ಸಂಸ್ಥೆ. ಜಪಾನಿನಲ್ಲಿ ಬತ್ತ, ಕಾಳು, ರೇಷ್ಮೆಹುಳು ಮುಂತಾದವುಗಳ ನಷ್ಟ ತುಂಬುವ ಕಡ್ಡಾಯ ವಿಮೆ ಜಾರಿಯಲ್ಲಿದೆ. ಇದಕ್ಕಾಗಿ ಸ್ಥಾಪಿತವಾದ ಅರ್ಧ ಸರ್ಕಾರಿ ಸಂಸ್ಥೆಗೆ ಸರ್ಕಾರ ಬಹು ಹೆಚ್ಚು ಸಹಾಯಧನ ನೀಡುತ್ತಿದೆ. ವಿಮಾಕಂತಿನ ಒಂದು ಭಾಗವನ್ನು ರೈತ ಕೊಡಬೇಕು. ಉಳಿದವನ್ನು ಸರ್ಕಾರ ಹೊರುತ್ತದೆ.

ಪ್ರವಾಹ ವಿಮೆ, ಕೃಷಿಕರ ವಾಹನಗಳಿಂದಲೂ ಯಂತ್ರಗಳಿಂದಲೂ ಸಂಭವಿಸುವ ಅಪಘಾತದ ವಿಮೆ, ಕೃಷಿ ಕೆಲಸಗಾರರ ನಷ್ಟ ಪರಿಹಾರ ವಿಮೆ, ಜೀವ ವಿಮೆ,- ಇವು ಹಲವು ದೇಶಗಳಲ್ಲಿ ಜಾರಿಯಲ್ಲಿರುವ ಇತರ ವಿಮೆಗಳು. ಸಣ್ಣರೈತರು, ಕೃಷಿ ಕಾರ್ಮಿಕರು ಮುಂತಾದವರ ಸಾಮಾಜಿಕ ಸುರಕ್ಷತಾ ವಿಮಾ ಯೋಜನೆಗಳು ವ್ಯಾಪಕವಾಗುತ್ತಿವೆ. ಕೃಷಿಕರು ಮಾತ್ರವೇ ಅಲ್ಲದೆ ಸಮಾಜದ ಎಲ್ಲ ವರ್ಗಗಳಿಗೂ ಅನ್ವಯಿಸುವಂಥ ಯೋಜನೆಗಳಿವೆ. ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಇವು ಸಾಮಾನ್ಯ. ಭಾರತದಲ್ಲಿ ಕೃಷಿ ವಿಮೆಯ ಕೆಲವು ಪ್ರಕಾರಗಳು ಪ್ಲಾಂಟೇಷನ್ ವ್ಯವಸಾಯದಲ್ಲಿ ಸ್ವಲ್ಪಮಟ್ಟಿಗೆ ಬೆಳೆದಿವೆಯಾದರೂ ಇತರ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಟ್ಟಿಲ್ಲ. ವ್ಯವಸಾಯಗಾರನಿಗೆ ಕೃಷಿಕಾರ್ಯಕ್ಕೆ ಅಗತ್ಯವಾದ ಉದ್ದರಿಯ ಸೌಲಭ್ಯ ಕಲ್ಪನೆಗೂ ಫಸಲು ವಿಮೆಗೂ ನೇರ ಸಂಬಂಧವಿರುವುದರಿಂದ ಇದನ್ನು ವ್ಯಾಪಕವಾಗಿ ಜಾರಿಗೆ ತರುವುದು ಅವಶ್ಯವಾಗಿದೆ. (ಬಿ.ವಿ.ವಿ.; ಎಸ್.ಎಸ್.ಎಚ್.ಎ.)