ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕ ಜಾನಪದ ನೃತ್ಯ

ವಿಕಿಸೋರ್ಸ್ದಿಂದ

ಕರ್ನಾಟಕ ಜಾನಪದ ನೃತ್ಯ

 ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ, ಕರ್ಣಾಟಕದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಉತ್ತರ ಕರ್ಣಾಟಕ, ದಕ್ಷಿಣ ಕರ್ಣಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ- ಈ ಪ್ರದೇಶಗಳಲ್ಲಿ ವೈಶಿಷ್ಟ್ಯ ಪಡೆದಿರುವ ನೃತ್ಯಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಪರಿಶೀಲಿಸಲಾಗಿದೆ.

 ಗುಡ್ಡಬೆಟ್ಟಗಳಲ್ಲಿ ವಾಸಿಸುವ ಲಂಬಾಣಿಯರ ಜಾನಪದ ನೃತ್ಯಗಳು ರಮಣೀಯವಾಗಿವೆ. ಕಸೂತಿ, ಮಣಿ, ಕನ್ನಡಿಗಳಿಂದ ಹೊಲೆದಿರುವ ಬಣ್ಣದ ಲಂಗ, ಕುಪ್ಪಸಗಳನ್ನು ತೊಟ್ಟುಕೊಂಡು, ಕಾಲುಬೆರಳುಗಳಿಂದ ತಲೆಯ ಕೂದಲಿನವರೆಗೂ ಆಭರಣಗಳನ್ನು ಧರಿಸಿ, ಕೈಗಳನ್ನು ಜೋತುಹಾಕಿ ಸಾಮೂಹಿಕವಾಗಿ ಕುಣಿಯುವಾಗ ಈ ನೃತ್ಯದ ಚಲನೆಗಳ ಲಾಲಿತ್ಯ ಎದ್ದುಕಾಣುತ್ತದೆ.

 ಕರ್ಣಾಟಕದ ಎಲ್ಲ ಕಡೆಗಳಲ್ಲೂ ಕೋಲಾಟಗಳು ಆಕರ್ಷಣೀಯವಾಗಿರುತ್ತವೆ. ಅವುಗಳಲ್ಲಿ ವೀರರಸ ಹೆಚ್ಚು. ಸೊಗಸಾದ ಗೀತೆಗಳನ್ನು ಹಾಡುತ್ತ ನರ್ತಕರು ಕೋಲು ಹಿಡಿದು ಚಕ್ರಾಕಾರವಾಗಿ ನಿಂತು ಹಾಡಿಗೆ ಸರಿಯಾಗಿ ಗೆಜ್ಜೆಕಾಲಿನ ಹೆಜ್ಚೆಗಳನ್ನು ಹಾಕುತ್ತ, ಕೋಲು ಹೊಯ್ಯುತ್ತ ಕುಣಿಯುತ್ತಾರೆ. ನೃತ್ಯ ಸಾಗಿದಂತೆ ಪದ್ಮ, ಚಕ್ರ, ಕೋಟೆ, ಜಡೆ ಮುಂತಾದ ಆಕೃತಿಗಳಲ್ಲಿ ನರ್ತಿಸುತ್ತಾರೆ. ಪದವನ್ನು ಚೆನ್ನಾಗಿ ಹಾಡುವವನೇ ಮುಖಂಡ. ದಿನವೆಲ್ಲ ದುಡಿದುಸೋತ ರೈತರು ಸುಗ್ಗಿಯ ದಿನಗಳ ರಾತ್ರಿ ಬೆಳದಿಂಗಳಲ್ಲಿ ಕೋಲುಗಳನ್ನು ಕುಟ್ಟುತ್ತ ಪದವನ್ನು ಹಾಡುತ್ತ ಗುಂಪುಗುಂಪಾಗಿ ಕೋಲಾಟವಾಡುತ್ತಾರೆ. ಈ ಕೋಲು ಪದ್ಯಗಳ ಸಾಹಿತ್ಯ ಬಹಳ ಸೊಗಸು. ಈ ಪದಗಳಲ್ಲಿ ಉತ್ಸಾಹ ಆನಂದ ರಸಗಳೇ ಪ್ರಧಾನ. ಗಂಡಸರೇ ಹೆಚ್ಚಾಗಿ ನಡೆಸುವ ಈ ಕೋಲಾಟಗಳನ್ನು ಕೆಲವೆಡೆ ಹೆಂಗಸರೂ ಆಡುತ್ತಾರೆ. ಕೋಲಾಟಗಳಲ್ಲಿ-ಒಂಟಿಕೋಲು, ಜೋಡಿಕೋಲು, ತೊಟ್ಟಿಲುಕೋಲು, ಸುತ್ತುಕೋಲು ಇತ್ಯಾದಿ ವಿಧಗಳಿವೆ. ಕೋಲಾಟವಾದ ಮೇಲೆ ಕೋಲುಗಳನ್ನು ಭೂಮಿತಾಯಿಗೆ ಒಪ್ಪಿಸುವುದರಲ್ಲೂ ಒಂದು ರೀತಿ ಇದೆ.

 ಸುಗ್ಗಿಯ ಕುಣಿತ ಅನೇಕ ಕಡೆಗಳಲ್ಲಿ ಪ್ರಚಾರದಲ್ಲಿದೆ. ಅದರಲ್ಲಿ ರಂಗದ ಕುಣಿತ, ಮಾರಿ ಕುಣಿತ ಎಂಬ ವಿಧಾನಗಳಿವೆ. ಸುಗ್ಗಿಯ ಸಂತೋಷ ದುಡಿದ ರೈತನಿಗಲ್ಲದೆ ಇನ್ನಾರಿಗೆ ತಿಳಿದೀತು ? ಅವನ ಕಷ್ಟ, ಶ್ರಮ, ಜಾಗರಣೆ, ಮಳೆಯ ಹಂಬಲ, ಇವೆಲ್ಲ ಕಾಳಿನ ರಾಶಿಯನ್ನು ನೋಡುವಾಗ ಮಾಯವಾಗುತ್ತವೆ. ಹಾಡು, ಕುಣಿತಗಳಲ್ಲಿ ಅವನ ಸಂತೋಷ ಹೊರಹೊಮ್ಮುತ್ತದೆ. ಒಂದು ತಮಟೆಯ ತಾಳಕ್ಕೆ ನಾಲ್ಕಾರು ಜನ ಸಾಲಾಗಿ ನಿಂತು ಹೆಜ್ಜೆಹಾಕಲು ಆರಂಭಿಸುತ್ತಾರೆ. ಒಂದು ಕೈಯಲ್ಲಿ ಬಣ್ಣದ ಚೌಕ ಹಿಡಿದು ಇನ್ನೊಂದು ಕೈಯನ್ನು ಸೊಂಟದ ಮೇಲಿಟ್ಟು ಬಳುಕುತ್ತ, ಕುಪ್ಪಳಿಸುತ್ತ ಕುಣಿಯುತ್ತಾರೆ. ಹಳ್ಳಿಯ ಗುಡಿಯ ಹೊರಾಂಗಣದಲ್ಲಿ ಉರಿಹಾಕಿ ತಮಟೆ ಬಾರಿಸಿ ಕೇಕೆ ಹಾಕುತ್ತಿರುವಾಗ ಹಳ್ಳಿಯ ಜನರೆಲ್ಲ ಸೇರಿ ಇದರಲ್ಲಿ ಭಾಗವಹಿಸುತ್ತಾರೆ. ಹೀಗೆಯೇ ಅನೇಕ ಬಗೆಯ ನೃತ್ಯಗಳು ಕರ್ಣಾಟಕದಲ್ಲಿ ಲಭ್ಯವಾಗುತ್ತವೆ. ವೀರಭದ್ರ ಕುಣಿತ, ವೀರಮಕ್ಕಳ ಕುಣಿತಗಳು ಮೈಸೂರಿನಲ್ಲಿವೆ. ವೀರಕುಣಿತ ವೀರರಿಗೆ ಸಾಧ್ಯ. ಕಾಳಗಕ್ಕೆ ಮುಂಚೆಯೋ ಬೇಟೆಯ ಕೊನೆಯಲ್ಲೋ ಹುಮ್ಮಸ್ಸು ಹುರುಪುಗಳನ್ನು ಹೊರ ಸೂಸುವ ಈ ವೀರಕುಣಿತ ಆವೇಶಭರಿತವಾದುದು. ಕುಣಿವಾಗಿನ ಈ ವೀರರ ಕೇಕೆ ಹಲವಾರು ಮೈಲಿಗಳ ವರೆಗೆ ಕೇಳುತ್ತಿರುತ್ತದೆ.

 ಹಳೆಯ ಮೈಸೂರಿನ ಬೀಸುಕಂಸಾಳೆ ನೃತ್ಯಗಳಲ್ಲಿ ಕಂಸಾಳೆಯ ಗತ್ತಿಗನುಸಾರವಾಗಿರುವ ಹಿನ್ನೆಲೆ ಸಂಗೀತಕ್ಕೆ ಹೊಂದುವಂತೆ ನೃತ್ಯಗಾರರು ಆಕರ್ಷಣೀಯವಾಗಿ ಕುಣಿಯುತ್ತಾರೆ. ಕಂಸಾಳೆ ಕುಣಿತದಲ್ಲಿ ಒಂದು ಕಂಚಿನ ಬಟ್ಟಲು ಮತ್ತು ತಾಳಗಳನ್ನು ಉಪಯೋಗಿಸುತ್ತಾರೆ. ಕಂಸಾಳೆ ಪದ ಲಾವಣಿ ರೂಪದ ಹಾಡು. ನೃತ್ಯಗಾರರ ಜೊತೆಗೆ ಇಬ್ಬರು ಕಂಸಾಳೆ ಬಾರಿಸುತ್ತ ಪಲ್ಲವಿ ಹಾಡುತ್ತಾರೆ. ಒಬ್ಬ ಕಂಸಾಳೆಯನ್ನು ಬಡಿಯುತ್ತ ಬಾಗಿ ಬಳುಕಿ ಕುಣಿಯುತ್ತಾನೆ.

 ನಂದಿಕಂಬದ ಕುಣಿತವನ್ನು (ನಂದಿಕೋಲು) ಸಾಮಾನ್ಯವಾಗಿ ಮೆರವಣಿಗೆಗಳಲ್ಲಿ ಕಾಣಬಹುದು. ಯಾವುದಾದರೂ ವಿಜೃಂಭಣೆಯ ಮೆರವಣಿಗೆ ಹೊರಟಾಗ ಅಲಂಕೃತವಾದ 30-40 ಅಡಿ ಎತ್ತರದ ಕಂಬವನ್ನು ನೃತ್ಯಕಾರರು ಹೊಟ್ಟೆಗೆ ಜೋತುಹಾಕಿಕೊಂಡು ತಮ್ಮಟೆಯ ತಾಳಕ್ಕೆ ಸರಿಯಾಗಿ ಕುಣಿಯುತ್ತ ಕೋಲನ್ನು ನೆಟ್ಟಗೆ ನಿಲ್ಲಿಸುವುದು ಆಶ್ಚರ್ಯಕರ.

 ಕರಗದ ಕುಣಿತ ಮೈಸೂರಿನ ವಿಶೇಷ ಜಾನಪದ ನೃತ್ಯ. ಅಲಂಕೃತ ಕರಗವನ್ನು ತಲೆಯ ಮೇಲೆ ಧರಿಸಿ, ಭಕ್ತಿಪರವಶನಾದ ಒಬ್ಬ ನೃತ್ಯಗಾರ ವಿವಿಧ ರೀತಿಯ ಕೈಚಲನೆ, ಕಾಲುಚಲನೆಗಳಿಂದ ನರ್ತಿಸುತ್ತಾನೆ. ವಾದ್ಯಗೋಷ್ಠಿಯ ನಾದಕ್ಕೆ ಸ್ಫೂರ್ತಿಗೊಂಡು ದಿಗ್ಭ್ರಾಂತನಂತೆ ಕುಣಿದರೂ ಆತನ ತಲೆಯ ಮೇಲಿನ ಕರಗ ಒಂದಿಷ್ಟೂ ಅಲುಗಾಡುವುದಿಲ್ಲ, ತುಳುಕುವುದಿಲ್ಲ. ಜೊತೆಗೆ ಖಡ್ಗ ಹಿಡಿದು ಅವನನ್ನು ಹಿಂಬಾಲಿಸುವ ಪಂಗಡ ಆ ದೃಶ್ಯಕ್ಕೆ ಕಳೆ ಕೊಡುತ್ತದೆ. ಜಡೆ ಮತ್ತು ಚಿತ್ರಗೋಪುರ ಎಂಬುವು ಕರಗದ ಇತರ ವಿಧಗಳು. ಇವುಗಳಲ್ಲದೆ ಡೊಳ್ಳುಕುಣಿತ, ಬಣಜದ ತಾಂಡ ಕುಣಿತ, ಕುದುರೆ ಕುಣಿತ, ಪೂಜೆ ಕುಣಿತ, ವೀರಗಾಸೆ ಕುಣಿತ ಪಟ್ಟ ಕುಣಿತ, ಮುಂತಾದ ಹಲವಾರು ಕುಣಿತಗಳಿವೆ.

 ಕೊಡಗಿನ ಹುತ್ತರಿ ನೃತ್ಯ ಮತ್ತು ಬೊಳ್‍ಕಾಟ ನೃತ್ಯಗಳು ಜನಪ್ರಿಯವಾದುವು. ದೇವರ ಪೂಜಾವಿಧಾನವಾದ ಈ ನೃತ್ಯವನ್ನು ಧಾರ್ಮಿಕ ಸಂದರ್ಭಗಳಲ್ಲಿ ಗಂಡಸರು ಮಾಡುತ್ತಾರೆ. ಸುಗ್ಗಿಯ ಕಾಲದಲ್ಲಿ, ಉತ್ಸವ, ಮದುವೆ ಸಮಾರಂಭಗಳಲ್ಲಿ ಕೊಡವರು ಕಪ್ಪು ಬಣ್ಣದ ಉದ್ದ ನಿಲುವಂಗಿ, ಧೋತಿ ಧರಿಸಿ, ತಲೆಗೆ ರುಮಾಲು ಸುತ್ತಿ, ಪೀಚ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆನಂದದಿಂದ ನರ್ತಿಸುತ್ತಾರೆ. ಹಾಡುಗಾರಿಕೆಯ ಜೊತೆಗೆ ಚರ್ಮವಾದ್ಯ ಬಾರಿಸುವವರು ಮಧ್ಯದಲ್ಲಿ ನಿಂತು ತಾಳವನ್ನು ಕೊಡುತ್ತಿರಲು ಸುತ್ತಲೂ ನೃತ್ಯಗಾರರು ಡಮರು ನಾದಕ್ಕೆ ಚಾಮರಗಳನ್ನು ಬೀಸಿ ನರ್ತಿಸುವ ದೃಶ್ಯ ಮೋಹಕವಾದುದು.

 ತುಳುನಾಡಿನಲ್ಲಿ ಅನೇಕ ವಿಧದ ಜಾನಪದ ನೃತ್ಯಗಳು ರೂಢಿಯಲ್ಲಿವೆ. ಅಲ್ಲಿನ ಹರಿಜನರು ಲೇ ಲೇ ಲೇ ಲೋ ಎಂಬ ಪಲ್ಲವಿ ಹಾಡುತ್ತ ದುಡಿಯ ತಾಳಕ್ಕೆ ಕುಣಿಯುತ್ತಾರೆ. ಒಬ್ಬಾತ ದುಡಿಯನ್ನು ಬಾರಿಸುತ್ತಾನೆ. ಹೆಂಗಸರು ಬಳುಕಿ, ಬಾಗಿ, ಕೈ ಅಲುಗಿಸಿ ಹಿಂದೆ ಮುಂದೆ ಸರಿದು ಕೂಟನೃತ್ಯದಲ್ಲಿ ಭಾಗವಹಿಸುತ್ತಾರೆ. ಕುಂದಾಪುರ, ಉಡುಪಿಯ ಹರಿಜನರಲ್ಲಿ 5-6 ಯುವಕರು ಚಿಕ್ಕ ಕೋಲುಗಳನ್ನು ಹಿಡಿದು ಸರಳವಾಗಿ ಹೆಜ್ಜೆ ಹಾಕಿ ಕುಣಿಯುತ್ತಾರೆ. ಹಿನ್ನೆಲೆ ಸಂಗೀತಕ್ಕೆ ಇಬ್ಬರು ಚರ್ಮವಾದ್ಯದವರು, ಒಬ್ಬ ಕೊಳಲು ಬಾರಿಸುವವನು ಇರುತ್ತಾರೆ. ಹೆಂಗಸೊಬ್ಬಳು ದೊಡ್ಡ ತಾಳಗಳನ್ನು ಬಾರಿಸುತ್ತಾಳೆ. ಸಂಗೀತದ ಲಯ ಹೆಚ್ಚಾದಂತೆ ನೃತ್ಯಗಾರರ ಆವೇಶ ಹೆಚ್ಚಾಗುತ್ತದೆ. ಪುತ್ತೂರು ತಾಲ್ಲೂಕಿನ ಮೇರಾ ಜನರಲ್ಲಿ ಹೆಂಗಸರು ಮಾಡುವ ಕೂಟನೃತ್ಯಗಳಿವೆ. ಇಬ್ಬರು ಗಂಡಸರು ದುಡಿಬಡಿದಂತೆ ಬಿಳಿ ಸೀರೆ ಉಟ್ಟ ಹೆಂಗಸರು ಕೈಚಪ್ಪಾಳೆಗಳಿಂದ ಹಿಂದೆಮುಂದೆ ಬಳುಕಿ ಬಾಗಿ ವಾದ್ಯಗಾರರ ಸುತ್ತಲೂ ಕುಣಿಯುತ್ತಾರೆ. ಅವರ ಸರಳ ಲಲಿತ ಚಲನೆಗಳಲ್ಲಿ ಸ್ನೇಹಪರವಶತೆಯ ಆನಂದ ಉಕ್ಕಿ ಹರಿಯುತ್ತದೆ. ರಾಣಿಯಾರ್ ಪಂಗಡದವರು ಭಕ್ತಿ ಶಕ್ತಿಗಳಿಂದ ಕೋಲಾಟಮಾಡುವಾಗ ಅವರ ಕೋಲುಗಳೂ ಕಾಲುಗೆಜ್ಜೆಗಳೂ ಮಾತನಾಡುವಂತೆ ಭಾಸವಾಗುತ್ತದೆ. ಕಾರ್ಕಳ ತಾಲ್ಲೂಕಿನ ಕುಡುಬಿಯರಲ್ಲಿ ಸುಂದರ ಕೂಟ ನೃತ್ಯವಿದೆ. ಗಂಡಸರು ಬಿಳಿ ಬಟ್ಟೆಯುಟ್ಟು ಕೆಂಪು ರುಮಾಲು ಸುತ್ತಿ, ಕೈಯಲ್ಲಿ ಮಣ್ಣಿನ ವಾದ್ಯ ಹಿಡಿದು ಎರಡು ಸಾಲಾಗಿ ನಿಂತು ಹಾಡುತ್ತ ಸಂಭಾಷಣೆ ನಡೆಸುತ್ತಾರೆ.

 ಪಶ್ಚಿಮ ಘಟ್ಟದ ಮಲೆಕುಡಿಯರ ಪಂಗಡಗಳಲ್ಲಿ ವಿಶೇಷ ತರಹದ ಒಂದು ಭೂತನೃತ್ಯವಿದೆ. ಮೂವರು ಯುವಕರು ಖಡ್ಗಾಯುಧರಾಗಿ ಕಹಳೆ-ಕೊಂಬು ವಾದ್ಯಕ್ಕೆ ಹೊಂದಿದಂತೆ ಮೈಮರೆತು ಕುಣಿಯುತ್ತಾರೆ. ಈ ನೃತ್ಯ ಅನಾಗರಿಕರ ಯುದ್ಧನೃತ್ಯವನ್ನು ಹೋಲುತ್ತದೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳ ಕುಣಿತ ಹೆಸರಾದುದು. ಬೇರೆ ಬೇರೆ ಜನರು ಬೇರೆ ಬೇರೆ ಭೂತಗಳನ್ನು ನಂಬಿ ಪೂಜಿಸುತ್ತಾರೆ. ವರ್ಷದ ನಾನಾಕಾಲಗಳಲ್ಲಿ ಈ ದೆವ್ವಗಳಿಗೆ ಜಾತ್ರೆ ನಡೆಯುತ್ತದೆ. ದೆವ್ವದ ಆವೇಶ ಪಡೆಯುವವರ ಜಾತಿಯೇ ಬೇರೊಂದಿದೆ. ಈ ನೃತ್ಯಗಳೆಲ್ಲ ಭಕ್ತಿಪ್ರಧಾನವಾದುವು. ಭಕ್ತರು ತಾವು ನಂಬುವ ಭೂತಗಳ ತೃಪ್ತಿಗಾಗಿ ಅವನ್ನು ಆಹ್ವಾನಿಸಿ, ಉಣಿಸುವರು. ಭೂತದ ಆವೇಶ ಪಡೆಯುವ ಪೂಜಾರಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಬಣ್ಣ ಲೇಪಿಸಿಕೊಂಡು ವೀರಾವೇಶದಿಂದ ಕುಣಿದು ತನ್ನನ್ನೇ ಮರೆಯುತ್ತಾನೆ. ಆತನ ಬಾಯಿಂದ ಬರುವ ಮಾತುಗಳು ಭೂತದ ಮಾತುಗಳೆಂಬ ಭ್ರಾಂತಿ ಜನರಲ್ಲಿ ಮೂಡುತ್ತದೆ. ಬೇರೆ ಬೇರೆ ಭೂತಗಳಿಗೆ ತಕ್ಕ ನಡೆ, ನೃತ್ಯ, ವೇಷ, ಕಿರೀಟ, ಭೂಷಣಗಳಿರುತ್ತವೆ. ಸಾಮಾನ್ಯವಾಗಿ ಭೂತಗಳ ಉಗ್ರಸ್ವರೂಪ ಆಯಾ ವೇಷದಲ್ಲಿ ವ್ಯಕ್ತವಾಗುತ್ತದೆ. ಇಂಥ ನೃತ್ಯ ಸಂಪ್ರದಾಯದಲ್ಲಿ ನಾಗನೃತ್ಯ ವಿಚಿತ್ರವಾದುದು. ವೈದ್ಯರೆಂಬ ಪೂಜಾರಿಗಳ ಈ ನೃತ್ಯಕ್ಕೆ ನಾಗಮಂಡಲವೆನ್ನುತ್ತಾರೆ. ರಂಗಮಂಟಪದಲ್ಲಿ ಮಹಾಶೇಷನ ರಂಗೋಲೆಯನ್ನು ಹಾಕಿಸುತ್ತಾರೆ. ಪೂಜಾರಿ ಕೆಂಪು ರೇಷ್ಮೆಯನ್ನುಟ್ಟು ಚದರಿದ ಕೂದಲನ್ನು ಬಿಟ್ಟು ಸುಬ್ಬರಾಯನಾಗಿ ಬಂದು ನಿಲ್ಲುತ್ತಾನೆ. ಅವನ ಮುಂದೆ ಪ್ರಕೃತಿ ಪುರುಷ ಸೂಚಕವಾಗಿ ಅರ್ಧ ಗಂಡಸಿನ ಅರ್ಧ ಹೆಂಗಸಿನ ಉಡುಪನ್ನು ಧರಿಸಿದ ನೃತ್ಯಗಾರ ನಿಂತಿರುತ್ತಾನೆ. ಹಿಮ್ಮೇಳದ ಗಾಯಕರು ದೇವರ ಲೀಲೆಗಳನ್ನು ಹಾಡುತ್ತಾರೆ. ಒಂದು ಡಮರು, ಒಂದು ಜೊತೆ ತಾಳಕ್ಕೆ ಅನುಗುಣವಾಗಿ ನಾಗದ ಆವೇಶ ತಂದುಕೊಂಡು ದೇಹಕ್ಕೆ ಮೂಳೆಗಳೇ ಇಲ್ಲವೆಂಬಂತೆ ನರ್ತಿಸುವಾಗ ಅದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿ ಪರಿಣಮಿಸುತ್ತದೆ. ನಾಗಬ್ರಹ್ಮನೇ ಪ್ರತ್ಯಕ್ಷವಾಗಿ ಎದುರಿಗೆ ಬಂದಂತೆ ಭಾಸವಾಗುತ್ತದೆ.

 ಕನ್ನಡ ನಾಡಿನ ಯಕ್ಷಗಾನ ಬಯಲಾಟದ ಪರಂಪರೆ ಆ ಸಂಸ್ಕøತಿಯ ಅತ್ಯಂತ ಸುಂದರವಾದ ಅಂಗವಾಗಿದೆ. ಯಕ್ಷಗಾನ ಬಯಲಾಟ ಪ್ರೇಕ್ಷಣೀಯ ನೃತ್ಯ ಸಂಪ್ರದಾಯ. ಮಹಾಭಾರತ ರಾಮಾಯಣಾದಿ ಕಥಾನಕಗಳಲ್ಲಿ ಬರುವ ಪಾತ್ರಗಳು ಅತಿಮಾನುಷ ವೇಷಭೂಷಣ, ಕಿರೀಟ, ಬಣ್ಣಲೇಪನಗಳಿಂದ ಕೂಡಿದ್ದು ಪ್ರೇಕ್ಷಕರನ್ನು ಮೈಮರೆಸುತ್ತಾರೆ. ತಾಳ ನೃತ್ಯಕ್ಕೂ ಸಂಗೀತಕ್ಕೂ ಹೊಂದಿಕೊಂಡು ಭಾವಾವೇಶವನ್ನೂ ಸ್ಫೂರ್ತಿಯನ್ನೂ ಒದಗಿಸುತ್ತದೆ. ಸಾಹಿತ್ಯ ಪಂಡಿತಪಾಮರರನ್ನು ರಂಜಿಸುವಂತಿರುತ್ತದೆ. ಭಾಗವತರು ಚಂಡೆ, ಮದ್ದಳೆ, ಶ್ರುತಿ, ತಾಳಗಳೊಡನೆ ಕಥೆಯನ್ನು ಆರಂಭಿಸುತ್ತಾರೆ. ಇಬ್ಬರು ಎತ್ತಿಹಿಡಿದ ಪರದೆಯ ಹಿಂದಿನಿಂದ ಅದ್ಭುತವೇಷಧಾರಿಗಳು ನೃತ್ಯಕ್ಕೆ ಸಿದ್ಧರಾಗುತ್ತಾರೆ. ಪಾತ್ರಧಾರಿಗಳು ನರ್ತಿಸುತ್ತಿರಲು ಭಾಗವತರು ಜಾಗಟೆ ಕೋಲುಗಳಿಂದ ತಾಳ ಸೂಚಿಸುತ್ತ ಪ್ರಸಂಗದ ಸಾಹಿತ್ಯವನ್ನು ಹಾಡಿ ಸಭಿಕರಾಗಿ ಹಾಸ್ಯಗಾರರಾಗಿ ಕಥಾಸರಣಿಯನ್ನು ಮುಂದುವರಿಸುತ್ತಾರೆ. ಯಕ್ಷಗಾನ ವೀರರಸ ಪ್ರಧಾನವಾದದ್ದು. ಅಲ್ಲಿನ ವೇಷಗಳ ಅಲಂಕಾರಾದಿಗಳಲ್ಲಿ ಚಿತ್ರಕಲಾಪ್ರೌಢಿಮೆಯಿದೆ; ಧರ್ಮವಿಷಯವನ್ನು ಸರಳ ಮಾತಿನಲ್ಲಿ ಉದಾಹರಣೆ ಸಹಿತ ಕಥಾರೂಪಕವಾಗಿ ಬೋಧಿಸುವ ಮಧುರ ಸಂಭಾಷಣೆಯಿದೆ. ವೇದೋಪನಿಷತ್ತುಗಳ ತತ್ತ್ವಾರ್ಥವನ್ನು ಯಕ್ಷಗಾನ ಸುಲಭವಾಗಿ ತಿಳಿಸುತ್ತದೆ. ದೇದೀಪ್ಯಮಾನರಾದ ಪುರಾಣವ್ಯಕ್ತಿಗಳ ಪಾತ್ರಧಾರಿಗಳು ರಂಗಸ್ಥಳದ ಎತ್ತರವಾದ ಕಾಲು ದೀಪಗಳ, ದೀವಟಿಗೆಗಳ ಬೆಳಕಿನಲ್ಲಿ ಸಂಜೆಯಿಂದ ಮುಂಜಾನೆಯವರೆಗೆ ನರ್ತಿಸುವಾಗ ಪ್ರೇಕ್ಷಕರು ತನ್ಮಯರಾಗುತ್ತಾರೆ. ಯಕ್ಷಗಾನ ಬಯಲಾಟ ಅವರನ್ನು ಮಾಯೆಯ ಸುಂದರ ಕಲಾಜಗತ್ತಿಗೆ ಕೊಂಡೊಯ್ಯುತ್ತದೆ.

ಗೊಂಬೆ ಕುಣಿತಗಳು

 ಗಾರುಡಿ ಗೊಂಬೆ : ಮೆರವಣಿಗೆಯ ಒಂದು ಸಾಲಿನಲ್ಲಿ ಮೊದಲು ಕಾಣುವುದು ದೊಡ್ಡ ಗೊಂಬೆಗಳು- ಒಂದು ಹೆಣ್ಣು, ಒಂದು ಗಂಡು. ಅವುಗಳ ಮೈ ಬಿದಿರ ಬುಟ್ಟಿಗಳದ್ದು. ಮೇಲಿನ ಹೊದಿಕೆ ಹರಕು ಸೀರೆ, ತಲೆಗೆ ಒಂದು ಮಡಕೆ. ರಂಗಕ್ಕೆ ಸಿದ್ಧವಾದ ಮೇಲೆ ಅವಕ್ಕೆ ಗಾರುಡಿಗತನದ ಆವೇಶ ಬರುತ್ತದೆ. ಅವುಗಳ ಜಡ ದೇಹದಲ್ಲಿ ಜೀವ ಸುಳಿದಾಡುತ್ತದೆ. ಅವಕ್ಕೆ ಹೀಗೆ ಜೀವ ಕೊಡುವವ ಅವನ್ನು ಕುಣಿಸುವಾತ; ಬೊಂಬೆಯ ಬಟ್ಟೆಯೊಳಗೆ ಸೇರಿಕೊಂಡು ನರ್ತಿಸುವ ಮನುಷ್ಯ !

 ಸೂತ್ರದ ಗೊಂಬೆ : ಈ ಆಟ ಯಕ್ಷಗಾನದ ಇನ್ನೊಂದು ಪದ್ಧತಿ. ಗೊಂಬೆಗಳನ್ನು ಕುಣಿಸುವ ಆಟಗಾರರು ಪರದೆಯ ಹಿಂದೆ ನಿಂತು, ಅಲಂಕೃತ ಗೊಂಬೆಗಳನ್ನು ಪರದೆಯ ಮುಂದೆ ಬಿಟ್ಟು ಪ್ರೇಕ್ಷಕರಿಗೆ ಕಾಣದಂತೆ ಇದ್ದು ದಾರಗಳಿಂದ ಅವನ್ನು ಆಡಿಸುತ್ತಾರೆ. ಅವು ಕುಣಿದಂತೆ ಹಿಂದೆ ನಿಂತವರು ಹಾಡುತ್ತಾರೆ; ಅವುಗಳ ಅಂಗಾಂಗಳ ಚಲನೆಗನುಸಾರವಾಗಿ ಮಾತನಾಡುತ್ತಾರೆ. ಕಥೆ ಸಾಗುತ್ತ ಪ್ರೇಕ್ಷಕರು ಆಟಗಾರನ ಕೈಗೊಂಬೆಗಳಾಗುತ್ತಾರೆ. ಈ ಕೌಶಲ ಅದ್ಭುತವಾದುದು. ಕಥೆಯ ಪಾತ್ರಧಾರಿಗಳಲ್ಲಿ ಹುಟ್ಟುವ ನವರಸಗಳೆಲ್ಲವೂ ಗೊಂಬೆಗಳ ಚಲನೆಗಳ ಮೂಲಕ ಪ್ರೇಕ್ಷಕನಲ್ಲಿ ಉದ್ಭವಿಸಿ ಮಾಯೆಯ ವಾತಾವರಣವನ್ನು ಕಲ್ಪಿಸುತ್ತವೆ.

 ತೊಗಲು ಗೊಂಬೆಯ ಆಟ : ಈ ಗೊಂಬೆಗಳು ಕಾಗದದಂತೆ ತೆಳ್ಳಗಿರುವ ಹದ ಮಾಡಿದ ಚರ್ಮದವು. ಹಿಂದೆ ಪ್ರಕಾಶವಾದ ಬೆಳಕಿಟ್ಟರೆ ಅವು ಪರದೆಯ ಮೇಲೆ ಕಾಣುತ್ತವೆ. ಅವಕ್ಕೆ ಬಣ್ಣ ಹಾಕಿರುತ್ತಾರೆ. ತೆಳ್ಳನೆ ಪರದೆಯ ಹಿಂದೆ ಪ್ರಕಾಶವಾದ ಒಂದು ದೀಪವನ್ನು ಕೊಂಚ ಪಕ್ಕಕ್ಕೆ ನೇತುಹಾಕಿರುತ್ತಾರೆ. ಆಟಗಾರನ ಇಡೀ ಸಂಸಾರವೇ ಈ ಆಟದಲ್ಲಿ ಭಾಗವಹಿಸುತ್ತದೆ. ಒಂದೊಂದಾಗಿ ಗೊಂಬೆಗಳನ್ನು ತೆಗೆದು ಕೊಡುವುದು, ಅವನ್ನು ಕ್ರಮವಾಗಿ ಜೋಡಿಸುವುದು ಮುಂತಾದ ಕೆಲಸವನ್ನು ಹೆಂಡತಿ ಮಕ್ಕಳು ನಿರ್ವಹಿಸುತ್ತಾರೆ. ಗೊಂಬೆಗಳ ಕೈಕಾಲುಗಳಿಗೆ ಕಡ್ಡಿಗಳನ್ನು ಸಿಕ್ಕಿಸಿ, ತನ್ನ ನೆರಳು ಪರದೆಯ ಮೇಲೆ ಬೀಳದಂತೆ ಬೆಳಕಿನ ಹಿಂದೆ ನಿಂತು ಅವನ್ನು ಯಜಮಾನ ಪರದೆಗೆ ಅಂಟಿಸುತ್ತಾನೆ. ಅವುಗಳ ಕೈಕಾಲು ಆಡಿಸಿ ಅದಕ್ಕೆ ಸರಿಯಾಗಿ ಮಾತನಾಡುತ್ತಾನೆ. ಹೆಣ್ಣು ಗೊಂಬೆಗೆ ಹೆಂಡತಿಯ ಸ್ವರ ಸೇರುತ್ತದೆ. ಗೊಂಬೆಗಳು ಕುಣಿಯುವಾಗ ಮಕ್ಕಳ ಹಾಡುಗಳು, ಗೆಜ್ಜೆಶಬ್ದ, ಗಡಸು ಗಂಡಸಿನ ಮಾತುಗಳಿಗೆ ಗಂಡಿನ ಕಂಠ- ಹೀಗೆ ಈ ತೊಗಲು ಗೊಂಬೆಯ ಆಟ ಮೂಕ ಚಲನಚಿತ್ರಕ್ಕೆ ಶಬ್ದ ಜೋಡಿಸಿದಂತಿರುತ್ತದೆ.

 ಜಾನಪದ ನೃತ್ಯ ಗೀತೆಗಳು : ಕರ್ಣಾಟಕದಲ್ಲಿ ಸಾವಿರಾರು ಬಗೆಯ ಜಾನಪದ ಗೀತೆಗಳಿವೆ. ಇವಕ್ಕೆ ಕೆಲವು ಗಾನನೃತ್ಯಗಳೂ ಇವೆ. ಶಿವಶರಣರ ವಚನಗಳು, ಭಾರತ ವಾಚನ, ಹರಿಕಥೆ, ಶಿವಕಥೆ, ಕೀರ್ತನೆ ಇವುಗಳೆಲ್ಲ ಜನತೆಯಲ್ಲಿ e್ಞÁನ ಪ್ರಸಾರಮಾಡಲು ರೂಢಿಯಲ್ಲಿದ್ದ ವಿಧಾನಗಳು. ಇವುಗಳಲ್ಲಿ ಸಂಗೀತ, ಸಾಹಿತ್ಯ, ನಾಟ್ಯ, ಅಭಿನಯ ಇವುಗಳೆಲ್ಲ ಹದವಾಗಿ ಕೂಡಿಕೊಂಡಿದ್ದು ಪಂಡಿತ ಪಾಮರರೆಂಬ ಭೇದಭಾವವಿಲ್ಲದೆ ಎಲ್ಲರಿಗೂ ಮನರಂಜಕವಾಗಿ ವಿಷಯಬೋಧಕವಾಗಿವೆ. ಈಚೆಗೆ ಆಧುನಿಕ ರೀತಿಯ ನಾಟಕ ಚಲನಚಿತ್ರಗಳು ಬಂದು ಹಳೆಯ ಜನಪದ ನೃತ್ಯ ನಾಟಕಾದಿಗಳು ಹಿಂದೆ ಬಿದ್ದಿವೆ.

(ನೋಡಿ- ಕರ್ನಾಟಕ-ಜಾನಪದ)

(ನೋಡಿ- ಕರ್ನಾಟಕ-ಜಾನಪದ-ಸಂಗೀತ)

(ಯು.ಎಸ್.ಕೆ.)