ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂಙಂಬು, ಕೃಷ್ಣಪಿಳ್ಳೆ
ಚಂಙಂಬು, ಕೃಷ್ಣಪಿಳ್ಳೆ - 1911-1948. ಮಲೆಯಾಳಂ ಸಾಹಿತ್ಯದ ರಮ್ಯ ಸಂಪ್ರದಾಯದ ಕವಿ. 1930-35ರ ಕಾಲದಲ್ಲಿ ಮಲೆಯಾಳಂನಲ್ಲಿ ಕುಮಾರನ್ ಆಶಾನ್, ವಳ್ಳತ್ತೋಳ್, ಉಳ್ಳೂರ್, ಶಂಕರನ್ ಕುರುಪ್ ಇವರಿಗಿಂತ ಭಿನ್ನರೀತಿಯ ಕಾವ್ಯ ಪರಂಪರೆಯೊಂದನ್ನು ಸೃಷ್ಟಿಸಿದ. ಇಡಪ್ಪಳ್ಳಿ ರಾಘವನ್ ಪಿಳ್ಳೆಯ ಗೆಳೆಯನಾಗಿದ್ದ ಈತ ಆತನ ಜೊತೆಯಲ್ಲಿ ಪ್ರೇಮಾನುಭೂತಿ ತುಂಬಿದ ಕವಿತೆಗಳನ್ನು ಹಾಡಿದ. ಇವು ವಿಷಾದಾತ್ಮಕತೆಯ ಸ್ವರ ಮೊಳಗುವ ಕವಿತೆಗಳಾಗಿದ್ದುವು. ಕೃಷ್ಣಪಿಳ್ಳೆಯ ಕಾವ್ಯ ರಾಘವನ್ ಪಿಳ್ಳೆಯ ಕಾವ್ಯಕ್ಕಿಂತ ಹೆಚ್ಚು ಸಂಕೀರ್ಣವಾದುದು. ಕವಿ ಬದುಕಿದ್ದುದು ಕೇವಲ ಮೂವತ್ತಾರು ವರ್ಷ ಮಾತ್ರ. ಇಂಗ್ಲೆಂಡಿನ ಕೀಟ್ಸ್ ಕವಿಯಂತೆ ಈತನದು ಅತ್ಯುತ್ಕøಷ್ಟ ಪ್ರತಿಭೆ. ಈತನ ಜೀವನಾನುಭವಗಳೆಲ್ಲ ಕವಿತೆಗಳಾಗಿ ಪರಿಣಮಿಸಿದವು. ಲೋಕದ ನಿರ್ದಯತೆ, ಕಾಠಿಣ್ಯ, ಕಾಪಟ್ಯಗಳನ್ನು ಈತ ತನ್ನ ಕೃತಿಗಳಲ್ಲಿ ನಿಶಿತವಾಗಿ ಖಂಡಿಸಿದ್ದಾನೆ.
ಕಪಟಲೋಕದಲ್ಲಿ ಆತ್ಮಾರ್ಥವಾದೊಂದು ಹೃದಯವಿದ್ದುದೇ ನನ್ನ ಪರಾಜಯ !
ಎಂದು ತನ್ನ ಹೃದಯದಳಲನ್ನು ತೋಡಿಕೊಂಡಿದ್ದಾನೆ. ಕೆಲವೊಮ್ಮೆ ಬದುಕಿಗಿಂತ ಮರಣವೇ ಮಧುರವಾಗಿ ಈತನಿಗೆ ತೋರಿದೆ. ಸರಳವಾದ ನಿರೂಪಣೆ, ಮಾದಕವಾದ ಸಂಗೀತ ಮಾಧುರ್ಯ, ಯುವಲೋಕಕ್ಕೆ ಹೃದ್ಯವಾಗಿ ಕಾಣಿಸುವ ಪ್ರೇಮಾನುಭೂತಿ ತುಂಬಿದ ಭಾವಾತ್ಮಕತೆ-ಇವು ಕೃಷ್ಣಪಿಳ್ಳೆಯ ವೈಶಿಷ್ಟ್ಯಗಳು. ಈ ಬಗೆಯ ಸಂಗೀತರಸ ತುಂಬಿತುಳುಕುವ ಕವಿತೆಗಳನ್ನು ಅಲ್ಲಿಯ ತನಕ ಮಲೆಯಾಳಂ ಭಾಷೆಯಲ್ಲಿ ಯಾರೂ ಬರೆದಿರಲಿಲ್ಲ. ಅದು ಕೇವಲ ಬಾಹ್ಯ ಸಂಗೀತವಾಗಿರದ ಹೃದಯಾಂತರಾಳದಿಂದ ಅನಾಯಾಸವಾಗಿ ಹೊರಹೊಮ್ಮಿದ ಆಂತರಿಕ ಸಂಗೀತವಾಗಿತ್ತು. ಜೊತೆಗೆ ಸ್ನಿಗ್ಧಕೋಮಲವಾದ ಪದಸಂಯೋಜನೆ ಆ ಸಂಗೀತದ ಶ್ರವಣಸುಭಗತೆಯನ್ನು ಹೆಚ್ಚಿಸಿತು.
ಕರುಣರಸ ಬೆರೆತ ಪ್ರೇಮಾನುಭೂತಿಯ ಆವಿಷ್ಕಾರಣಗಳಾಗಿದ್ದ ಈತನ ಕವಿತೆಗಳು ಜನಸಾಮಾನ್ಯರ ಮೇಲೆ ಅದರಲ್ಲೂ ವಿಶೇಷವಾಗಿ ಯುವಜನರ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದವು. ಈತನ ಕವನಗಳಲ್ಲಿ ಮನುಷ್ಯಸಹಜವಾದ ಲಲಿತಭಾವಗಳೂ ಋಜುವಾದ ಚಿಂತನೆಗಳೂ ಹೆಚ್ಚು. ದುಗ್ರ್ರಾಹ್ಯವಾದ ಆಶಯಗಳಾಗಲೀ ಸಹಾನುಭೂತಿ ಪಡೆಯಲು ಅನರ್ಹವಾದ ಭಾಗಗಳಾಗಲೀ ಅವುಗಳಲ್ಲಿಲ್ಲ. ಈತ ಒಬ್ಬ ಚಿಂತಕನಲ್ಲ ಎಂಬುದೂ ನಿಜವೇ.
ರಮಣನ್ ಎಂಬುದು ಈತನ ಗೀತ ನಾಟಕ. ಇದು ಒಂದು ಆರಣ್ಯಕ ವಿಲಾಪ ಕಾವ್ಯ. ಇದರ ರೂಪಶಿಲ್ಪ ಮಿಲ್ಟನ್ನನ ಲಿಸಿಡಾಸ್ ಮೊದಲಾದವನ್ನು ನೆನಪಿಸುವಂತಿದ್ದರೂ ಇಡೀ ಕೃತಿಯ ಒಟ್ಟು ಸ್ವರ ಮತ್ತು ಸಂವಿಧಾನಗಳು ತೀರ ಸ್ವೋಪಜ್ಞವಾಗಿವೆ. ಇದರಲ್ಲಿ ಪ್ರಾರಂಭವಾದ ಈತನ ಕ್ರಾಂತಿಪ್ರವೃತ್ತಿ ರಕ್ತಪುಷ್ಪಂಙಳ್ನಲ್ಲಿಯೂ ಮುಂದುವರಿಯಿತು. ವಾ¿ಕ್ಕುಲ, ಕೊಡುಂಗಾಟ್ಟ್, ನವವರ್ಷನಾಂದಿ, ತೀಪ್ಪೊರಿ, ಇನ್ನತ್ತೆನಿಲ-ಎಂಬ ಕವನಗಳು ಕಾರ್ಮಿಕಮಾಲೀಕ ಸಂಘಟನೆಯನ್ನು ತ್ವರಿತಗೊಳಿಸಿ ಸಾಮಾಜಿಕ ಸಮಾನತೆಯನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ರಚಿತವಾದುವು. ಒಬ್ಬ ಸಾಧು ಪ್ರಾಣಿಯಾದ ಹೊಲೆಯ ನೆಟ್ಟು ಬೆಳೆಸಿದ ಬಾಳೆಯಲ್ಲಿ ಬಿಟ್ಟ ಗೊನೆ, ಅದರ ಬಗೆಗೆ ಆಸೆಯಿಂದ ಕಣ್ಣಿಟ್ಟಿದ್ದ ಆತನ ಮಕ್ಕಳು, ಅದನ್ನು ಕೊಯ್ದುಕೊಂಡು ಹೋಗುವ ಮಾಲೀಕ-ಇವುಗಳ ಚಿತ್ರಣ ವಾ¿ಕ್ಕುಲ (ಬಾಳೆಗೊನೆ) ಕವನದಲ್ಲಿದೆ. ಇಲ್ಲಿ ಶೋಷಣೆ, ಪ್ರತೀಕಾರಗಳ ಧ್ವನಿಯಿದೆ. ಇಷ್ಟಿದ್ದರೂ ಚಂಙಂಬು¿ ಒಬ್ಬ ಕ್ರಾಂತಿಕಾರಿ ಕವಿಯೆಂಬುದನ್ನು ಕೆಲವರು ಒಪ್ಪಿಲ್ಲ. ಏಕೆಂದರೆ ಕ್ರಾಂತಿಕಾರಿಯೊಬ್ಬನಿಗೆ ಇರಬೇಕಾದ ಯಾಥಾಥ್ರ್ಯ ಪ್ರಜ್ಞೆಯಾಲೀ ದೃಢ ಪ್ರತಿಜ್ಞೆಯಾಗಲೀ ಕವಿಗಿರಲಿಲ್ಲವೆಂದು ಅವರ ವಾದ. ಈತ ಪ್ರಧಾನವಾಗಿ ರಮ್ಯಕವಿ.
ಈತನ ದೋಷಗಳು ಏನೇ ಇರಲಿ ಮಲೆಯಾಳಂ ಸಾಹಿತ್ಯದಲ್ಲಿ ಈತನ ಕವನಗಳು ಶಾಶ್ವತವಾದ ಸ್ಥಾನವನ್ನು ಗಳಿಸಿಕೊಂಡಿವೆ. (ಕೆ.ಕೆ.ಎಸ್.)