ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈಶೋಪನಿಷತ್ತು

ವಿಕಿಸೋರ್ಸ್ದಿಂದ

ಈಶೋಪನಿಷತ್ತು ಪ್ರಮುಖ ಉಪನಿಷತ್ತುಗಳಲ್ಲಿ ಒಂದಾಗಿದ್ದು ಯಜುರ್ವೇದದ ವಾಜಸನೇಯ ಶಾಖೆಗೆ ಸೇರಿದ್ದು ಹದಿನೆಂಟು ಶ್ಲೋಕಗಳಿಂದ ಕೂಡಿದೆ. ಈಶಾವಾಸ್ಯಮ್ ಎಂಬ ಪದಗಳಿಂದ ಪ್ರಾರಂಭವಾಗುವ ಈ ಉಪನಿಷತ್ತು ಈಶಾವಾಸ್ಯೋಪನಿಷತ್ತು ಎಂದೂ ಪಡೆದಿದೆ. ಗಾತ್ರದಲ್ಲಿ ಕಿರಿದಾಗಿದ್ದರೂ ತತ್ತ್ವ ಗಾಂಭೀರ್ಯದಿಂದ ಅರ್ಥಸಂಪತ್ತಿನಿಂದ ಅತಿ ಮಹತ್ತ್ವವುಳ್ಳದ್ದಾಗಿದೆ.

ಮೊದಲ ಎರಡು ಶ್ಲೋಕಗಳಲ್ಲಿ ಅತಿ ಗೂಢವಾದ ಪರಮಾತ್ಮತತ್ತ್ವವೂ ಜೀವನದ ಸಾರ್ಥಕತೆಗೆ ಬೇಕಾದ ಎಲ್ಲ ಧರ್ಮವೂ ಅಡಗಿದೆ ಎನ್ನಬಹುದು. ಅವು ಹೀಗಿವೆ:

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾಗೃಧಃ ಕಸ್ಯ ಸ್ವಿದ್ಧನಮ್ ||
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋರಸ್ತಿ ನಕರ್ಮ ಲಿಪ್ಯತೇ ನರೇ ||

ಚಲನಾತ್ಮಕ ಜಗತ್ತೆಲ್ಲವೂ ಈಶನಿಂದ ಆವರಿಸಲ್ಪಟ್ಟಿದೆ. ಅದನ್ನು ತ್ಯಾಗಮಾಡಿ ಆತ್ಮರಕ್ಷಣೆಯನ್ನು ಮಾಡಿಕೋ. ಧನದಾಶೆಯನ್ನು ತೊರೆ.

ಜಗತ್ತನ್ನು ತ್ಯಾಗ ಮಾಡಿದರೂ ಕರ್ಮವನ್ನು (ಶಾಸ್ತ್ರವಿಹಿತವಾದ) ಭಗವದನುಜ್ಞೆಯೆಂಬ ನಿಷ್ಠೆಯಿಂದ ಮಾಡುತ್ತ ನೂರು ವರ್ಷ ಬಾಳು. ಈ ಮಾರ್ಗವಲ್ಲದೆ ಬೇರೆ ಉಪಾಯವಿಲ್ಲ.

ಆತ್ಮಘಾತಿಗಳು ಮುಂದೆ ಅಸುರಸಂಬಂಧವುಳ್ಳ, ಅಜ್ಞಾನವೆಂಬ ಕತ್ತಲೆಯಿಂದಾವೃತವಾದ, ಲೋಕಗಳನ್ನು ಪಡೆಯುತ್ತಾರೆಂಬ ಸಂದೇಶವಿದೆ. ಮುಂದಿನ ಶ್ಲೋಕಗಳಲ್ಲಿ ಆತ್ಮಸ್ವರೂಪವನ್ನೂ ಏಕತ್ವವನ್ನೂ ಅದರ ಜ್ಞಾನದಿಂದ ಒದಗುವ ಶೋಕಮೋಹಗಳ ನಿವೃತ್ತಿಯನ್ನೂ ಹೇಳಲಾಗಿದೆ. ಆ ವಿದ್ಯೆಯಲ್ಲಿ ನಿರತರಾದ ಕರ್ಮೋಪಾಸಕರಿಗೆ, ಕರ್ಮವನ್ನು ತ್ಯಜಿಸಿ ಜ್ಞಾನವನ್ನು ಉಪಾಸಿಸುವವರಿಗೆ, ಬ್ರಹ್ಮವಿದ್ಯೆ ದುರ್ಲಭವೆಂದೂ ವಿದ್ಯೆ ಅವಿದ್ಯೆಗಳೆರಡನ್ನೂ ಅಂದರೆ ವಿಹಿತ ಕರ್ಮ ಮತ್ತು ಜ್ಞಾನ ಎರಡನ್ನೂ ಅರಿತವನು ಅವುಗಳ ಮೂಲಕ ಅಮೃತತ್ತ್ವವನ್ನು ಪಡೆಯುತ್ತಾನೆಂದು ತಿಳಿಸಿದೆ. ಯಾವ ಯೋಗಿ ಪರಬ್ರಹ್ಮ ಮತ್ತು ಕರ್ಮ ಇವೆರಡನ್ನು ತಿಳಿದಿರುತ್ತಾನೆಯೋ ಆತ ಜ್ಞಾನೋತ್ಪತ್ತಿಗೆ ಕಾರಣವಾದ ಶಾರೀರಕ ಕರ್ಮಗಳ ಮೂಲಕ ಮೃತ್ಯುವನ್ನು ದಾಟಿ ಬ್ರಹ್ಮಜ್ಞಾನದಿಂದ ಅಮೃತತ್ತ್ವವನ್ನು ಹೊಂದುತ್ತಾನೆಂದು ಮುಂದಿನ ಶ್ಲೋಕಗಳು ಉಪದೇಶಿಸುತ್ತದೆ. ಮರಣಕಾಲ ಸಮೀಪಿಸಿದಾಗ ಸಾಧಕ ಆತ್ಮಪ್ರಾಪ್ತಿಗೋಸ್ಕರ ಸತ್ಯಾತ್ಮನನ್ನೂ ಪೋಷಕನಾದ ಸೂರ್ಯನನ್ನೂ ಅಗ್ನಿಯನ್ನೂ ಕುರಿತು ಮಾಡುವ ಪ್ರಾರ್ಥನೆ, ನಮಸ್ಕಾರಗಳಿಂದ ಈ ಉಪನಿಷತ್ತು ಸಮಾಪ್ತಿಯಾಗುತ್ತದೆ.

ಈ ಉಪನಿಷತ್ತಿನಲ್ಲಿ ಪ್ರಪಂಚಾತೀತ ಬ್ರಹ್ಮವಸ್ತುವಿಗಿಂತಲೂ ಪರಬ್ರಹ್ಮನಿಗೂ ಜಗತ್ತಿಗೂ ಇರುವ ಸಂಬಂಧವಿವರಣೆಗೆ ಹೆಚ್ಚು ಗಮನ ಕೊಡಲಾಗಿದೆ. ಮಾನವನ ಬಾಳಿನ ಅಂತರಾರ್ಥವನ್ನು ಇಲ್ಲಿ ಬಿಡಿಸಲಾಗಿದೆ. ಸಾಮಾಜಿಕ ದೃಷ್ಟಿಯಿಂದಲೂ ಜನ್ಮ ಸಾಫಲ್ಯದ ದೃಷ್ಟಿಯಿಂದಲೂ ಇದರ ತತ್ತ್ವ ಅತ್ಯಂತ ಪರಿಣಾಮಕಾರಿಯಾಗಿದೆ. ಭಗವಂತನೇ ಸೃಷ್ಟಿಕರ್ತನೂ ಪಾಲಕನೂ ಪ್ರಭುವೂ ಆಗಿರುವುದರಿಂದ ನಾವು ಯಾವುದಕ್ಕೂ ಹೊಣೆಗಾರರೂ ಅಲ್ಲ. ಹಕ್ಕುದಾರರೂ ಅಲ್ಲ. ಭಗವದರ್ಪಣಬುದ್ಧಿಯಿಂದ ಕರ್ಮಗಳನ್ನು ಮಾಡಿ ನಾವು ಬಾಳುವೆ ನಡೆಸಬೇಕು. ಹಣದಾಸೆಯನ್ನು ತೊರೆಯಬೇಕು. ಕರ್ಮಯೋಗಿಗಳಾಗಿ ಸೇವೆ ಮಾಡಬೇಕು. ಎಲ್ಲರಲ್ಲೂ ಪರಮಾತ್ಮನನ್ನು ಕಾಣುವವ ಯಾವ ಜೀವಿಯನ್ನೂ ತುಚ್ಛವಾಗಿ ಕಾಣುವುದಿಲ್ಲ, ನಿಸ್ವಾರ್ಥನಾಗಿರುತ್ತಾನೆ. ದ್ವಂದ್ವಭಾವವಿಲ್ಲದಿರುವುದರಿಂದ ಅವನನ್ನು ದುಃಖ ಬಾಧಿಸುವುದಿಲ್ಲ — ಈ ಮೊದಲಾದ ತತ್ತ್ವಗಳೆಲ್ಲ ಇಲ್ಲಿ ಅಡಗಿವೆ.

ಇದರಲ್ಲಿ ಆಧ್ಯಾತ್ಮ ಮತ್ತು ಲೌಕಿಕಗಳ ಸಮನ್ವಯವೂ ಜ್ಞಾನ ಕರ್ಮಗಳ ಸಂಯೋಗವೂ ಆಗಿದೆ. ಅಜ್ಞಾನಿಗಳಾಗಿ ಕರ್ಮದಲ್ಲಿ ತೊಡಗಿರುವವರಿಗಿಂತ, ನಿಷ್ಕ್ರಿಯ ಜ್ಞಾನಿಗಳಿಗೆ ಮತ್ತು ಭಯಂಕರವಾದ ಸ್ಥಿತಿ ಪ್ರಾಪ್ತವಾಗುತ್ತದೆ ಎಂದು ತೋರಿಸಲಾಗಿದೆ.

ಗಾಂಧೀಜಿಯವರು ಈ ಉಪನಿಷತ್ತನ್ನು ಹರಿಜನ ಪತ್ರಿಕೆಯಲ್ಲಿ ಮನಮುಟ್ಟುವಂತೆ ಶ್ಲಾಘಿಸಿದ್ದಾರೆ. ಹಿಂದೂಧರ್ಮದ ಸಾರಸರ್ವಸ್ವವೂ ಜೀವನದ ಬೆಳಕೂ ಇದರಲ್ಲಿ ಅಡಗಿರುವುದೆಂದು ವಿಶದಪಡಿಸಿದ್ದಾರೆ. ಹಿಂದೂಧರ್ಮದ ಸಕಲ ಗ್ರಂಥಗಳು ಭಸ್ಮವಾದರೂ ಈ ಉಪನಿಷತ್ತು—ಅದರಲ್ಲೂ ಒಂದನೆಯ ಮಂತ್ರ—ಉಳಿದರೂ ಹಿಂದೂಧರ್ಮ ಚಿರಕಾಲ ಉಳಿಯುವುದು ಎಂದು ತಮ್ಮ ನಂಬುಗೆ ಎಂದು ಹೇಳಿಕೊಂಡಿದ್ದಾರೆ. ಅಹಿಂಸೆ, ಸತ್ಯ, ವಿಶ್ವಪ್ರೇಮ—ಈ ಎಲ್ಲ ತತ್ತ್ವಗಳನ್ನೂ ಇದರಲ್ಲಿ ಕಂಡಿದ್ದಾರೆ. ಅವರು ಮೊದಲ ಎರಡು ಶ್ಲೋಕಗಳನ್ನು ನಿತ್ಯವೂ ಪಠನ ಮಾಡುತ್ತ ಅನುಸಂಧಾನ ಮಾಡುತ್ತಿದ್ದರು.

ಕೊನೆಯಲ್ಲಿ ಮರಣೋನ್ಮುಖನಾದವನಿಗೆ ಈ ಜನ್ಮದಲ್ಲಿ ಅಲ್ಲದೆ ಮುಂದಿನ ಜನ್ಮದಲ್ಲೂ ಶಾಂತಿ ಸಮಾಧಾನಗಳನ್ನು ತರುವ ಸಂದೇಶ ಇಲ್ಲಿ ನಮಗೆ ದೊರಕುತ್ತದೆ. ಅಂಥ ಭಗವಂತನನ್ನು ಕಾಣುವ ಹಂಬಲದಿಂದಲೇ ಪ್ರಾಣವನ್ನು ನೀಗುವುದರಿಂದ ಸದ್ಗತಿ ಹೊಂದುವುದರಲ್ಲಿ ಸಂಶಯವೇ ಇಲ್ಲವೆಂದು ಅಭಿಪ್ರಾಯ.

ಈ ಉಪನಿಷತ್ತಿಗೆ ಶಂಕರ, ವೇದಾಂತದೇಶಿಕ ಮತ್ತು ಆನಂದತೀರ್ಥರೇ ಮೊದಲಾದ ಆಚಾರ್ಯರ ಭಾಷ್ಯಗಳಿರುವುದಲ್ಲದೆ, ಅರವಿಂದರು, ಮಹಾತ್ಮಗಾಂಧಿ, ವಿನೋಬಾಭಾವೆ, ಚಕ್ರವರ್ತಿ ರಾಜಗೋಪಾಲಾಚಾರಿ-ಇವರುಗಳ ಆಧುನಿಕ ವ್ಯಾಖ್ಯಾನಗಳಿವೆ. ಸಂಗ್ರಹವೂ ಸಾರತಮಾರ್ಥ ಪ್ರತಿಪಾದಕವೂ ಆದ ಈ ಉಪನಿಷತ್ತಿಗೆ ಅತ್ಯಂತ ಮಹತ್ತ್ವವನ್ನು ಕೊಡಲಾಗಿದೆ. ಇದರಲ್ಲಿ ಬ್ರಹ್ಮತತ್ತ್ವದ ಪ್ರಾಧಾನ್ಯವನ್ನು ಬಿಡದೆ ಜಗತ್ತಿನ ಸತ್ಯಾಂಶವನ್ನು ಮುಂದಿಟ್ಟಿರುವುದಲ್ಲದೆ, ಜ್ಞಾನಕರ್ಮ ಸಮನ್ವಯವನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ. ಭಗವದ್ಗೀತೆಯ ವಿಸ್ತಾರವಾದ ಉಪದೇಶ ಈ ಉಪನಿಷತ್ತಿನ ಅಧಿಕೃತ ವಿವರಣೆಯಂತಿದೆ. (ಎಸ್.ಎಸ್.ಆರ್.)