ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಾಲಕೃಷ್ಣ ಅಡಿಗ, ಎಂ

ವಿಕಿಸೋರ್ಸ್ದಿಂದ
  • ಗೋಪಾಲ ಕೃಷ್ಣ ಅಡಿಗ, ಎಂ -
  • 1918-92. ನವ್ಯಸಾಹಿತ್ಯದ ಶ್ರೇಷ್ಠ ಕವಿ ಹಾಗೂ ವಿಮರ್ಶಕರು. ಇಂದಿನ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಮೊಗೇರಿಯಲ್ಲಿ 1918 ಫೆಬ್ರವರಿ 18ರಂದು ಜನಿಸಿದರು. ಇವರು 1942ರಲ್ಲಿ ಮೈಸೂರಿನಲ್ಲಿ ಬಿ.ಎ. ಆನರ್ಸ್ ಮುಗಿಸಿ ಅದೇ ವರ್ಷ ಚಿತ್ರದುರ್ಗದ ಪ್ರೌಢಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿದ್ದ ಕಾಲಾವಧಿ ಕೇವಲ ಮೂರು ತಿಂಗಳು. ಅನಂತರ 1943ರಲ್ಲಿ ದಾವಣಗೆರೆ ಪ್ರೌಢಶಾಲೆಯಲ್ಲಿ ಮೂರು ತಿಂಗಳ ಕಾಲ ಕೆಲಸಮಾಡಿ ಅದೇ ವರ್ಷ ಬೆಂಗಳೂರಿನ ಮಲ್ಲೇಶ್ವರಂ ಪ್ರೌಢಶಾಲೆಯಲ್ಲಿ ಕೆಲಸಮಾಡಿ, ಕೆಲಸಕ್ಕೆ ರಾಜೀನಾಮೆ ನೀಡಿದರು. 1944ರಲ್ಲಿ ಬೆಂಗಳೂರು ಅಠಾರಾ ಕಚೇರಿಯ ಪಿಂಚಣಿ ಖಾತೆಯಲ್ಲಿ ನಾಲ್ಕು ತಿಂಗಳ ಕಾಲ ಗುಮಾಸ್ತರಾಗಿ ಕೆಲಸಮಾಡಿದರು. ಅನಂತರ ಗಾಂದಿsೀನಗರದ ಪ್ರೌಢ ಶಾಲೆಯಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದರು. 1946ರಲ್ಲಿ ತುಮಕೂರಿನ ಆರ್.ಎನ್. ಪ್ರೌಢ ಶಾಲೆಯಲ್ಲಿ ಒಂದು ವರ್ಷ ವಿದ್ದರು. 1947ರಲ್ಲಿ ಮದುವೆಯಾದರು. ಇದೇ ವರ್ಷ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಯಾಗಿ ವ್ಯಾಸಂಗಕ್ಕೆ ತೊಡಗಿದರಾದರೂ ಅದನ್ನು ಮುಗಿಸಲಿಲ್ಲ. ಅನಂತರ 1948-52ರವರೆಗೆ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ಎಂ.ಎ. ಮುಗಿಸಿದರು. 1952-54ರವರೆಗೆ ಕುಮಟ ಕೆನರಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ದುಡಿದರು. ಅನಂತರ ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು (1954-64). 1964ರಲ್ಲಿ ಸಾಗರದ ಲಾಲ್‍ಬಹದ್ದೂರ್ ಕಾಲೇಜಿನ ಪ್ರಿನ್ಸಿಪಾಲರಾದರು. 1968ರಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿದರು. ಅನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಕೆಲವು ಕಾಲ ದುಡಿದರು. ನ್ಯಾಷನಲ್ ಬುಕ್ ಟ್ರಸ್ಟಿನ ನಿರ್ದೇಶಕರಾಗಿಯೂ ಇವರು ಸ್ವಲ್ಪಕಾಲ ಇದ್ದರು. 1971ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋತರು. 1974ರಲ್ಲಿ ಅಮೆರಿಕ ವಿಶ್ವವಿದ್ಯಾಲಯಗಳಿಗೆ ವಿಶೇಷ ಉಪನ್ಯಾಸ ಕೊಡಲು ಹೋಗಿಬಂದರು. ಕನ್ನಡ ವಿಮರ್ಶೆಗೆ ಹೊಸ ಆಯಾಮವನ್ನು ಜೋಡಿಸಿದ ಸಾಕ್ಷಿ ಎಂಬ ತ್ರೈಮಾಸ ಪತ್ರಿಕೆಯ ಸಂಪಾದಕರಾಗಿಯೂ ಕೆಲಸಮಾಡಿದರು. ಇವರು ಸಿಮ್ಲಾದಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಡಡೀಸ್‍ನಲ್ಲಿ ರೀಸರ್ಚ್ ಫೆಲೋ ಆಗಿಯೂ ಕೆಲಸ ಮಾಡಿದರು (1975).

ಅಡಿಗರ ಕಾವ್ಯಪ್ರe್ಞÉ ಸದಾ ಅಂತರ್ಮುಖಿಯಾದದ್ದು. ಇದಕ್ಕೆ ಕಾರಣ ಇವರು ಬೆಳೆದುಬಂದ ಪರಿಸರ. ಮನೆಯಲ್ಲಿ ಇವರ ಹಿರಿಯರು ಸಂಸ್ಕøತ ಪಂಡಿತರು. ಮೊಗೇರಿಯ ಸುತ್ತಲ ಪ್ರಕೃತಿಸೌಂದರ್ಯ, ಹತ್ತಿರದಲ್ಲೇ ಸಮುದ್ರ, ಚಂಡೆಮದ್ದಳೆಯ ಸದ್ದು ಇಂಥ ವಾತಾವರಣದಲ್ಲಿ ಬೆಳೆದ ಅಡಿಗರು ಆರಂಭದಲ್ಲಿ ಕಡೆಂಗೋಡ್ಲು ಶಂಕರಭಟ್ಟರ, ಅನಂತರ ಬೇಂದ್ರೆಯವರ ಪ್ರಭಾವದಲ್ಲಿ ಕಾವ್ಯರಚನೆಗೆ ತೊಡಗಿದರು. ಭಾವತರಂಗ (1946) ಅಡಿಗರ ಮೊದಲ ಕವನ ಸಂಕಲನ. ಇದರಲ್ಲಿ ಕವಿಯ ಮನಸ್ಸು ಸ್ವಯಂ ದೀಪಕತೆಗೆ ತುಡಿಯುತ್ತದೆ. ಹಳೆಯ ಕವಿಗಳ ಶೈಲಿಯಲ್ಲೇ ಬರೆಯಬೇಕಲ್ಲ ಎಂದು ಚಡಪಡಿಸುತ್ತದೆ. ತನ್ನತನವನ್ನು ಕಂಡುಕೊಳ್ಳಲು ಹಾತೊರೆಯುತ್ತದೆ. ಪ್ರೇಮ ಮತ್ತು ಗೆಳೆತನದಲ್ಲಿ ಅನುಭವಿಸಿದ ಸೋಲಿನಿಂದ ಚೇತರಿಸಿಕೊಳ್ಳುವುದಕ್ಕೆ, ಬಾಳಿನ ಬಿರುಗಾಳಿಯಲ್ಲಿ ಅಲ್ಲಾಡದೆ ನಿಲ್ಲಲಿಕ್ಕೆ, ಕಲ್ಲಾಗಹೊರಡುತ್ತದೆ. ಆಗಾಗ ಮೇಲ್ನಾಡಿನಾಶೆಯಿಂದ ಚಡಪಡಿಸುತ್ತದೆ. ಇಂಥ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವಸ್ತು ಒಂದು ಎಳೆಯಾಗಿ ಸೇರಿಕೊಳ್ಳುತ್ತದೆ. ಇವರ ಕಟ್ಟುವೆವು ನಾವು (1948) ಎಂಬ ಎರಡನೆಯ ಸಂಗ್ರಹದಲ್ಲಿ ಕವಿಯ ಆಸಕ್ತಿಗಳು ಹಿಗ್ಗುತ್ತಿರುವುದನ್ನು ಕಾಣಬಹುದು. ಹಿಂದಿನ ಸಂಗ್ರಹದಲ್ಲಿ ನಾನು ಎನ್ನುವುದರ ಮೇಲಿದ್ದ ಒತ್ತು ಇಲ್ಲಿ ನಾವು ಎನ್ನುವುದರ ಮೇಲೆ ಬೀಳುವುದರಿಂದ, ಕವಿಯ ವ್ಯಕ್ತಿತ್ವ ಬೆಳೆಯುತ್ತಿರುವುದು ಸ್ಪಷ್ಟವಾಗುತ್ತದೆ. ಇದು ಸಮಾಜವಾದದ ಮೂಲಕ ನಗರದ ನಡುವಿನಡ್ಡಗೋಡೆಗಳನ್ನು ಕೆಡಹುವ, ಹೊಸ ಹುರುಪಿನ ಪ್ರಗತಿಶೀಲ ಕಾವ್ಯ. ಇಲ್ಲಿಯ ಸಾಮಾಜಿಕ ದನಿಯ ನಡುನಡುವೆ ಭಾವತರಂಗದ ಏಕಾಕಿತನದ ದನಿ ಮೋಹನಮುರಳಿಯಿಂದ ಮಾರ್ಪಟ್ಟು ಹೊಸ ಸಹಾನುಭೂತಿಯನ್ನು ಪಡೆಯುತ್ತದೆ.

ನಡೆದು ಬಂದ ದಾರಿಯ (1952) ಹೊತ್ತಿಗೆ ಬೇಂದ್ರೆ, ಕುವೆಂಪು, ಪು.ತಿ.ನ. ಮೊದಲಾದವರ ರಮ್ಯಮಾರ್ಗವನ್ನು ಬಿಟ್ಟು ಅಡಿಗರು, ಹೊಸ ರೀತಿಯಲ್ಲಿ ಈಗ ನವ್ಯಕಾವ್ಯ ಎಂದು ಹೆಸರಾಗಿರುವ ಕಾವ್ಯ ಬರೆಯಲು ಪ್ರಾರಂಭಿಸಿದರು. ಈ ಸಂಗ್ರಹದ ಮುನ್ನುಡಿಯಲ್ಲಿ ಬಹು ಪ್ರಸಿದ್ಧವಾದ ಮಣ್ಣಿನವಾಸನೆ ಎನ್ನುವ ಪಾರಿಭಾಷಿಕ ಶಬ್ದವಿದ್ದು ಇದನ್ನು ಅಡಿಗರು ಸಾಹಿತ್ಯಕ್ಕೆ ಸಂಬಂಧಿ ಸಿದಂತೆ ಮೊದಲ ಬಾರಿಗೆ ಬಳಸಿದರು. ಕಾಲದಿಂದ ಕಾಲಕ್ಕೆ ಭಾಷೆ ಹೊಸದಾಗಿ ರೂಪಗೊಳ್ಳದೆ ಉತ್ತಮ ಅಭಿವ್ಯಕ್ತಿ ಸಾಧ್ಯವಾಗುವುದಿಲ್ಲz ಈ ಜಗತ್ತನ್ನು ಬಿಟ್ಟು ಕಾವ್ಯ ಬದುಕಲಿಕ್ಕೆ ಸಾಧ್ಯವಿಲ್ಲವಾದ್ದರಿಂದ ಕವಿಗಳು ವಾಸ್ತವದ ಕಡೆ ಗಮನ ಕೊಡಬೇಕೆಂದು ಈ ಸಂಗ್ರಹದ ಮುನ್ನುಡಿಯಲ್ಲಿ ನುಡಿದರು. ಇಲ್ಲಿಂದ ಮುಂದೆ ಬಂದ ನವ್ಯಕಾವ್ಯದಲ್ಲಿ ಅಡಿಗರು ಹೊಸ ಛಂದೋರೂಪಗಳನ್ನು, ಹೊಸದಾದ ಭಾಷೆಯನ್ನು ಉಪಯೋಗಿಸಿದರು. 1954ರಲ್ಲಿ ಪ್ರಕಟವಾದ ಚಂಡೆಮದ್ದಳೆಯಲ್ಲಿ ನವ್ಯಕಾವ್ಯದ ಪ್ರಾತಿನಿಧಿಕ ಕವನಗಳಿವೆ. ಹಿಮಗಿರಿಯ ಕಂದರ ಮತ್ತು ಗೊಂದಲಪುರ 249 ಮತ್ತು 411 ಸಾಲುಗಳ ದೀರ್ಘ ಕವನಗಳು. ಹೊಸ ಕಾವ್ಯಕ್ಕೆ ಹೇಳುವ ರೀತಿ ಮಾತ್ರ ಮುಖ್ಯವಾಗಿರದೆ ಹೇಳುವುದೂ ಬೇಕಾದಷ್ಟಿದೆ ಎಂಬುದಕ್ಕೆ ಈ ದೀರ್ಘ ಕವನಗಳು ಸಾಕ್ಷಿಯಾಗಿವೆ. ಹಿಮಗಿರಿಯ ಕಂದರ ಇಹಪರಗಳ ನಡುವೆ ತೊಳಲಾಡುವ ಮನುಷ್ಯನ ಚಿತ್ರವನ್ನು ನಗರದ ಪರಿಸರದ ಭಾಷೆಯಲ್ಲಿ ಸಶಕ್ತವಾಗಿ ಹಿಡಿದಿಡುತ್ತದೆ. ಗೊಂದಲಪುರದಲ್ಲಿ ಕಮ್ಯೂನಿಸ್ಟ್ ರಾಕ್ಷಸರು ಭಾರತವನ್ನೆಲ್ಲ ಆಕ್ರಮಿಸಿ ವೈಯಕ್ತಿಕತೆಯನ್ನು ನಾಶಮಾಡುವ ದುರಂತಚಿತ್ರಣವಿದೆ. ದೀಪಾವಳಿ ಎನ್ನುವ ಕವನ ಸಂತೋಷವನ್ನು ಅನುಭವಿಸದೆ, ಲವಲವಿಕೆಯನ್ನು ಕಳೆದುಕೊಂಡವನಿಗೆ ಆ ದಿನದ ಸುಖದ ಕ್ಷಣಗಳನ್ನು ಅನುಭವಿಸಬೇಕು, ಮಿಕ್ಕ ದಿನಗಳು ಕತ್ತಲೆ ಇದ್ದೇ ಇರುತ್ತದೆ ಎನ್ನುತ್ತದೆ. ಏನಾದರೂ ಮಾಡುತಿರು ತಮ್ಮ ಎಂಬ ಕವನದಲ್ಲಿ ಪ್ರಕೃತಿಯ ಅಪಾರ ಸಂಪತ್ತನ್ನು ವಿವೇಕಹೀನವಾಗಿ ನಾಶಮಾಡುವ ಮನುಷ್ಯ, ಭೂಮಿಭಾರವಾಗದಿರಲಿಕ್ಕೆ ಅವನು ಭೂಮಿಯನ್ನು ನಾಶಮಾಡುವುದೇ ಸರಿ ಎನ್ನುವ ವಿಡಂಬನೆಯಿದೆ.

1959ರಲ್ಲಿ ಪ್ರಕಟಗೊಂಡ ಭೂಮಿಗೀತದಲ್ಲಿ ಭೂಮಿಗೀತ, ಭೂತ ಮತ್ತ ಪ್ರಾರ್ಥನೆ ಎನ್ನುವ ಶ್ರೇಷ್ಠ ಕವನಗಳಿವೆ. ಭೂಮಿಗೀತ ಕವನದಲ್ಲಿ ಹಿಮಗಿರಿಯ ಕಂದರದ ನಾಯಕನಂತೆ, ಭೂಮಿ ಆಕಾಶಗಳ ವಿರುದ್ಧ ದಿಕ್ಕುಗಳ ಸೆಳೆತಕ್ಕೆ ಸಿಕ್ಕ ನಾಯಕನನ್ನು ಭೂಮಿತಾಯಿಯೇ ಕಟ್ಟಿಹಾಕುತ್ತಾಳೆ. ಅವಳ ಮಾದಕ ದನಿಗೆ ಮತ್ತು ವಿಚಿತ್ರ ಪ್ರೀತಿಗೆ ಮಾರುಹೋದ ನಾಯಕ ಅವಳಿಂದ ತಪ್ಪಿಸಿಕೊಳ್ಳಲಾರದೆ ಪರಿತಪಿಸುತ್ತಾನೆ. ಅವನಿಗೆ ಧ್ರುವನ ಹಾಗೆ ತಪ್ಪಿಸಿಕೊಳ್ಳುವ ದಾರಿ ಗೊತ್ತಿಲ್ಲ. ಹಿಮಗಿರಿಯ ಕಂದರದ ನಾಯಕ ಮುಖ್ಯವಾಗಿ ಗುಮಾಸ್ತನಾಗಿದ್ದರೆ ಇಲ್ಲಿಯ ನಾಯಕ ಕರ್ಣ, ತ್ರಿಶಂಕು, ಭೀಮ, ಧ್ರುವ ಮೊದಲಾದ ಪುರಾಣ ನಾಯಕರ ಅಂಶಸಂಭೂತನಾಗಿ, ಮನುಷ್ಯನ ಪ್ರತಿನಿಧಿಯಾಗಿ ದುರಂತನಾಯಕನಾಗುತ್ತಾನೆ. ಭೂಮಿ ಮಾಯಾಪ್ರಪಂಚ, ನಿಜವಾದ ಪ್ರಪಂಚ ಇನ್ನೆಲ್ಲೋ ಇದೆ ಎನ್ನುವ ನಂಬಿಕೆ ಭೂಮಿಗೀತದಲ್ಲಿದ್ದರೆ, ಭೂತದಲ್ಲಿ ಭೂಮಿಯೂ ನಿಜವಾದದ್ದು, ಇಲ್ಲಿಯೇ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎನ್ನುವ ಧೋರಣೆಯಿದೆ. ಗೆರೆಗೆರೆಯಾದ ಚಿನ್ನದದಿರನ್ನು ಭೂಮಿಯಿಂದ ಅಗೆದು ತೆಗೆದು ಶೋಧಿಸಿ ಕಾಸಿ ಬಡಿದು ಇಷ್ಟದೇವತಾವಿಗ್ರಹಕ್ಕೊಗ್ಗಿಸುವ ಅಸಲು ಕಸಬಿನ ರೀತಿಯಲ್ಲಿ ಬದುಕಿರಬೇಕು ಎನ್ನುವ ಈ ಕವಿತೆ ಏಕಕಾಲದಲ್ಲಿ ಕಾವ್ಯಸೃಷ್ಟಿಯ ಗುಟ್ಟನ್ನೂ ಉತ್ತಮ ಕಾವ್ಯದ ಹಾಗೂ ಬದುಕಿನ ಆದರ್ಶವನ್ನೂ ಅದಕ್ಕೆ ಮಾದರಿಯನ್ನೂ ಒದಗಿಸುತ್ತದೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳ ಪರಸ್ಪರ ಸಂಬಂಧವನ್ನೂ ಚಿನ್ನದ ಪ್ರತಿಮೆ ಧ್ವನಿಸುತ್ತದೆ. ನೀರು, ಚಿನ್ನ, ಭ್ರೂಣ ಮತ್ತು ಭೂತಕಾಲದ ಪ್ರತಿಮೆಗಳು ಒಂದನ್ನೊಂದು ಸಮರ್ಥಿಸುತ್ತ, ಪರಸ್ಪರವಾಗಿ ಅಂತರಾರ್ಥಗಳನ್ನು ಪುಷ್ಟಿಗೊಳಿಸುತ್ತ ಈ ಕವನದ ಉತ್ತಮ ಶಿಲ್ಪಕ್ಕೆ ಕಾರಣವಾಗುತ್ತವೆ. ಪ್ರಾರ್ಥನೆ ಕವನ ದೈಹಿಕ, ಮಾನಸಿಕ, ಲೈಂಗಿಕ, ಆರೋಗ್ಯಕ್ಕೆ ಉತ್ತಮವಾದ ಸಾಮಾಜಿಕ ಕೊಡುಕೊಳ್ಳುವಿಕೆಗೆ ಮತ್ತು ಕಾವ್ಯಸೃಷ್ಟಿಗೆ ಮನುಷ್ಯಪ್ರಯತ್ನವೂ ಅದಕ್ಕೆ ಬೇಕೆಂದು ಹೇಳುತ್ತದೆ. ತನ್ನೆಲ್ಲ ಶಕ್ತಿಗಳನ್ನೂ ತೊಡಗಿಸುವಂಥ ದೈವಾನುಗ್ರಹವೂ ಪರಮಾತ್ಮನೊಬ್ಬನನ್ನು ಬಿಟ್ಟು ಇನ್ನು ಯಾರಿಗೂ ತಲೆಬಾಗದಂಥ ಕ್ರಿಯಾಶೀಲತೆಯನ್ನು ಕಾಪಾಡಿಕೊಳ್ಳುವುದು ಈ ಕವನದ ಮೂಲ ಆಶಯವಾಗಿದೆ.

ಭೂಮಿಗೀತ ಸಂಕಲನವಾದಮೇಲೆ ಬಂದ ವರ್ಧಮಾನದಲ್ಲಿ (1972) ಅಡಿಗರ ಅತ್ಯುತ್ತಮ ಕವನಗಳಲ್ಲಿ ಕೆಲವಾದ ಕೂಪಮಂಡೂಕ, ರಾಮನವಮಿಯ ದಿವಸ ಮತ್ತು ವರ್ಧಮಾನ ಸೇರಿವೆ. ಮೊದಲ ಎರಡು ಕವನಗಳು ಬದುಕಿನ ಸಾರ್ಥಕತೆಯನ್ನು ವಿಮರ್ಶಿಸುವ ಕವನಗಳು, ಕೂಪಮಂಡೂಕದ ನಾಯಕನಿಗೆ ಸೃಷ್ಟಿ ಶಕ್ತಿ ತನಗೆ ಕೈಕೊಟ್ಟಿದೆಯೆಂಬ ನೋವೂ ಇಲ್ಲಿಯವರೆಗೂ ತನ್ನ ಬದುಕು ಫಲಬಿಟ್ಟ ಬಾಳೆಯ ಹಾಗೆ ಕೃತಕೃತ್ಯವಾಗಿದೆಯೆಂಬ ಧನ್ಯಭಾವವೂ ಕಾಣಿಸುತ್ತದೆ. ಇನ್ನು ಮುಂದೆ ತಾನು ಮತ್ತೆ ಕ್ರಿಯಾಶೀಲತೆಯನ್ನು ಪಡೆದು ಬದುಕಬೇಕೆನ್ನುವ ತೀವ್ರವಾದ ಇಚ್ಫೆಯೊಂದಿಗೆ ತನಗೆ ಸಹಜವಾದ ಮಿತಿಯಲ್ಲಿ ಬದುಕಿನ ಸಮತೋಲನವನ್ನು ಕಾಯುವ ನಿರ್ಧಾರವೂ ಒಂದು ರೀತಿಯ ಸಮಾಧಾನವೂ ಕಂಡುಬರುತ್ತದೆ. ರಾಮನವಮಿಯ ದಿವಸದಲ್ಲಿ ರಾಮದೇವರು ಎನ್ನುವುದಕ್ಕಿಂತ ಪುರುಷೋತ್ತಮ ಎನ್ನುವುದರ ಮೇಲೆ ಹೆಚ್ಚು ಒತ್ತಿದೆ. ರಾಕ್ಷಸ ಮತ್ತು ದೇವತೆಗಳ ದ್ವಂದ್ವ ಅಳಿಸಿಹಾಕಲಸಾಧ್ಯವಾದದ್ದು ಎನ್ನುವ ಅರಿವಿನ ನೆಲೆಯಲ್ಲೇ ಸಂಕಲ್ಪಬಲದಿಂದ ಪುರುಷೋತ್ತಮನಾಗುವ ಸಾಧ್ಯತೆಯನ್ನೂ ಉತ್ತಮ ಕೃತಿಯನ್ನೂ ನಿರ್ಮಿಸುವ ಸಾಧ್ಯತೆಯನ್ನೂ ಈ ಕವಿತೆ ಮನದಟ್ಟು ಮಾಡುತ್ತದೆ. ವರ್ಧಮಾನ ಬದುಕನ್ನು ಹತ್ತಿರದಿಂದ ನೋಡುವ ಕವನ. ಇಂಥ ಕವನಗಳಿಗೆ ಸಹಜವಾದ ಘರ್ಷಣೆ, ತಳಮಳ ಮತ್ತು ಅದರಿಂದ ಬರುವ ಹೊಸ ತಿಳಿವಳಿಕೆ ಅಥವಾ ಕಂಡುಕೊಳ್ಳುವ ದಾರಿ ಈ ಕವನದಲ್ಲೂ ಇದೆ. ತಂದೆಯೊಬಪಿ ಯೌವನಕ್ಕೆ ಕಾಲಿಡುತ್ತಿರುವ ಮಗನ ವೈಪರೀತ್ಯಗಳನ್ನು ಕಂಡು ತಲ್ಲಣಗೊಂಡು, ಮಗನ ಭಾಷೆ ಅರ್ಥವಾಗದ್ದಕ್ಕೆ ಚಡಪಡಿಸುತ್ತಾನೆ. ಆಮೇಲೆ ತನ್ನ ಮಗ ತನ್ನತನವನ್ನು ಕಂಡುಕೊಳ್ಳುವ ರೀತಿಯೇ ಅದೆಂದು ಸಮಾಧಾನಗೊಂಡು, ತನ್ನ ಮಗ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಿ ಎಂದು ಹಾರೈಸುತ್ತಾನೆ. ತನ್ನ ಮಗನ ಚಟುವಟಿಕೆಗಳು ಕಪಿಚೇಷ್ಟೆಯಾಗದೆ, ಹನುಮದ್ವಿಲಾಸಕ್ಕೆ ಸಮನಾಗಲಿ ಎಂದು ಇಚ್ಫಿಸುತ್ತಾನೆ. ಹೀಗೆ ಭಾವಗೀತೆಯ ಸತ್ತ್ವ, ಚಿಂತನಪರತೆ ಮತ್ತು ನಾಟಕೀಯ ಗುಣಗಳಿಂದ, ಮೂಲಭೂತ ಪ್ರತಿಮೆಗಳ ಮೂಲಕ ಬದುಕಿನ ನೆಲೆಗಳನ್ನು ಗುರುತಿಸುವುದು ಅಡಿಗರ ಕಾವ್ಯವೈಶಿಷ್ಟ್ಯವಾಗಿದೆ.

ಕಾವ್ಯದಲ್ಲಿ ವಾಸ್ತವವಾದವನ್ನು ತಂದ ಹಾಗೆ ಅಡಿಗರು ವಿಮರ್ಶೆಯಲ್ಲೂ ಕೃತಿನಿಷ್ಠ ವಿಶ್ಲೇಷಣೆಯನ್ನು ತಂದರು. ಮಣ್ಣಿನ ವಾಸನೆ (1967), ಕನ್ನಡದ ಅಭಿಮಾನ (1972), ವಿಚಾರಪಥ (1972), ನಮ್ಮ ಶಿಕ್ಷಣ ಕ್ಷೇತ್ರ (1972) ಇವು ಇವರ ವೈಚಾರಿಕ ಲೇಖನಗಳ ಸಂಗ್ರಹಗಳು. ಇವರು ಆಕಾಶದೀಪ, ಅನಾಥೆ ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಹುಲ್ಲಿನ ದಳಗಳು, ಸುವರ್ಣಕೀಟ, ಭೂಗರ್ಭಯಾತ್ರೆ, ರೈತರ ಹುಡುಗಿ, ಜನತೆಯ ಶತ್ರು, ದೆವ್ವದ ಸುವರ್ಣ ಕೀಟ, ಮುಕ್ತಾಫಲ, ಇತಿಹಾಸ ಚಕ್ರ ಇವು ಇವರ ಅನುವಾದ ಕೃತಿಗಳು. ಇದನ್ನು ಬಯಸಿರಲಿಲ್ಲ ಎಂಬುದು ಇವರ ಇನ್ನೊಂದು ಕವನ ಸಂಗ್ರಹ (1975). ಆಯ್ದ ಪ್ರಬಂಧಗಳು, ಕಾವ್ಯಜಗತ್ತು (1986) ಇವರ ಇತರ ಪ್ರಮುಖ ಕೃತಿಗಳು. ನೆನಪಿನಗಣಿಯಿಂದ ಎಂಬುದು ಇವರ ಆತ್ಮಕಥೆ. ಇವರಿಗೆ ಅನೇಕ ಗೌರವ ಮತ್ತು ಪ್ರಶಸ್ತಿಗಳು ಲಭ್ಯವಾಗಿವೆ. ವರ್ಧಮಾನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973-1974) ಕುಮಾರ್ ಆಶಾನ್ ಪ್ರಶಸ್ತಿ (1979), ಕಬೀರ್ ಸಮ್ಮಾನ ಪ್ರಶಸ್ತಿ (1985), ಲಭಿಸಿದೆ. ಧರ್ಮಸ್ಥಳದಲ್ಲಿ ಜರುಗಿದ 51ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು (1979). ಇವರು 1992 ನವೆಂಬರ್ 14ರಂದು ನಿಧನಹೊಂದಿದರು. ಇವರ ಸುವರ್ಣ ಪುತ್ಥಳಿ ಕೃತಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಪಂಪ ಪ್ರಶಸ್ತಿ ನೀಡಲಾಗಿದೆ (1993). (ಎಸ್‍ಯು.ಎನ್.)