ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾವನದುರ್ಗ
ಸಾವನದುರ್ಗ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಕಸಬೆಯಿಂದ ಆಗ್ನೇಯಕ್ಕೆ 11 ಕಿಮೀ ದೂರದಲ್ಲಿರುವ ಇತಿಹಾಸಪ್ರಸಿದ್ಧ ಸ್ಥಳ ಹಾಗೂ ಬೆಟ್ಟ. ಈ ಬೆಟ್ಟಕ್ಕೆ ಮಾಗಡಿಬೆಟ್ಟವೆಂದೂ ಕೃಷ್ಣರಾಜಗಿರಿ ಎಂದೂ ಹೆಸರುಗಳಿವೆ. ಹೊಯ್ಸಳರ ಕಾಲದಲ್ಲಿ ಇದೊಂದು ಪ್ರಸಿದ್ಧ ಸ್ಥಳವಾಗಿದ್ದು ಆಗ ಇದನ್ನು ಸಾಮಂತನದುರ್ಗವೆಂದು ಕರೆಯುತ್ತಿದ್ದರೆಂದು ಶಾಸನಗಳಿಂದ ತಿಳಿಯುತ್ತದೆ. 1150ರ ವೇಳೆಗೆ ಸಾವನದುರ್ಗಕ್ಕೆ ಪಶ್ಚಿಮದಲ್ಲಿ ಒಂದು ನಗರವಿದ್ದುದರ ಬಗೆಗೆ ಶಾಸನಗಳಲ್ಲಿ ಉಲ್ಲೇಖಗಳಿವೆ. ಅಚ್ಯುತದೇವರಾ ಯನ ಕಾಲದಲ್ಲಿ (1543) ಸಾಮಂತರಾಯನೆಂಬ ಸಾಮಂತ ಮಾಗಡಿ ಪ್ರಾಂತ್ಯವನ್ನು ಆಳುತ್ತಿದ್ದು ಅವನ ಹೆಸರಿನಲ್ಲಿ ಈ ದುರ್ಗಕ್ಕೆ ಸಾಮಂತರಾ ಯನ ದುರ್ಗವೆಂಬ ಹೆಸರು ಬಂದಂತೆ ತಿಳಿಯುತ್ತದೆ. ಬೆಟ್ಟದ ತಪ್ಪಲಿನಲ್ಲಿ ವೀರಭದ್ರ ಮತ್ತು ನರಸಿಂಹಸ್ವಾಮಿ ದೇವಾಲಯಗಳಿವೆ. ವೀರಭದ್ರ ದೇವಾಲಯ ದ್ರಾವಿಡ ಸಂಪ್ರದಾಯಕ್ಕೆ ಸೇರಿದ ವಿಶಾಲವಾದ ಕಟ್ಟಡ ವಾಗಿದ್ದು ಪೂರ್ವಾಭಿಮುಖವಾಗಿದೆ. ನರಸಿಂಹಸ್ವಾಮಿ ದೇವಾಲಯ ಪ್ರಾಚೀನವಾದುದು. ಇದರಲ್ಲಿರುವ ವಿಗ್ರಹವನ್ನು ಒಂದು ಬಂಡೆಗಲ್ಲಿನಲ್ಲಿ ಕೆತ್ತಲಾಗಿದ್ದು ಅತ್ಯಂತ ಸುಂದರವಾಗಿದೆ. ಸಾವನದುರ್ಗದ ಬಳಿ ಬೃಹತ್ ಶಿಲಾಸಂಸ್ಕøತಿಯ ಸಮಾಧಿಗಳು ಇವೆ. (ಎಸ್.ಕೆ.ಒ.)