ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆಂಪೇಗೌಡ 2

ವಿಕಿಸೋರ್ಸ್ದಿಂದ

ಕೆಂಪೇಗೌಡ 2

1ನೆಯ ಕೆಂಪೇಗೌಡನ ಅನಂತರ ಆಳಿದ ಮಾಗಡಿ ಪ್ರಭುಗಳಲ್ಲಿ ಪ್ರಮುಖನಾದವ. 1569ರಲ್ಲಿ ಅಧಿಕಾರಕ್ಕೆ ಬಂದು ಮಾಗಡಿ ಮತ್ತು ಬೆಂಗಳೂರುಗಳಲ್ಲಿ 14 ವರ್ಷಕಾಲ ಆಳಿದ. ತರುವಾಯ ಸುಮತಿ ಬಾಗೂರಿನ ಪಾಳೆಯಗಾರ ಬಿಜಾಪುರದ ಸುಲ್ತಾನನೊಂದಿಗೆ ಸಂಚು ನಡೆಸಿದುದರ ಫಲವಾಗಿ ಮಾಗಡಿ ಈತನ ಕೈತಪ್ಪಿತು. ಅನಂತರ ಈತ 1638ರವರೆಗೆ ಬೆಂಗಳೂರಿನಲ್ಲಿ ತನ್ನ ಆಳ್ವಿಕೆ ಮುಂದುವರಿಸಿದುದಾಗಿ ತಿಳಿದುಬರುತ್ತದೆ. 1623ರಲ್ಲಿ ವಿಜಯನಗರ ಸಾಮ್ರಾಟನ ಪರವಾಗಿ ಗುಡೇಮಾರನಹಳ್ಳಿಯ ತಳವಾರನಾದ ಗಂಗನಿಂದ ಸಾವನದುರ್ಗವನ್ನು ವಶಪಡಿಸಿಕೊಂಡ. 1638ರಲ್ಲಿ ಈತ ಬಹುಮನಿ ಸುಲ್ತಾನರ ಪ್ರತಿನಿಧಿ ರಣದುಲ್ಲಾಖಾನನಿಗೆ ಶರಣಾಗತನಾಗಬೇಕಾಗಿ ಬಂದು, ತನ್ನ ರಾಜಧಾನಿಯನ್ನು ಪುನಃ ಮಾಗಡಿಗೆ ವರ್ಗಾಯಿಸಿಕೊಂಡ. ಈ ಕಾರಣದಿಂದ ಇವನಿಗೂ ಇವನ ಉತ್ತರಾಧಿಕಾರಿಗಳಿಗೂ ಮಾಗಡಿ ಕೆಂಪೇಗೌಡರೆಂದೇ ಹೆಸರಾಯಿತು. ಮಾಗಡಿಯ ಸೋಮೇಶ್ವರ ದೇವಾಲಯವನ್ನು ಪೂರ್ಣಗೊಳಿಸಿದ್ದು ಈತನ ಪ್ರಮುಖ ಸಾಧನೆಗಳಲ್ಲೊಂದು. ತನ್ನ ದೀರ್ಘಕಾಲದ ಆಳ್ವಿಕೆಯಲ್ಲಿ ಅನೇಕ ಗುಡಿ, ಗೋಪುರ, ಕೋಟೆ, ಕೊತ್ತಲಗಳ ನಿರ್ಮಾಣ ಮತ್ತು ದುರಸ್ತಿಕಾರ್ಯಗಳನ್ನು ನಡೆಸಿದ.

ಇವನ ಅನಂತರ ಈ ವಂಶದ ಇನ್ನಿಬ್ಬರು ಕೆಂಪೇಗೌಡರು 1728ರ ವರೆಗೆ ಮಾಗಡಿಯಲ್ಲಿ ಆಳಿದರು. ಕೊನೆಗೆ ಆ ಪಾಳೆಯಪಟ್ಟು ಮೈಸೂರು ರಾಜ್ಯದಲ್ಲಿ ವಿಲೀನವಾಯಿತು. (ಕೆ.ಪಿ.ಎ.)