ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿರುದ್ಯೋಗ ವಿಮೆ
ನಿರುದ್ಯೋಗ ವಿಮೆ - ಅನೈಚ್ಛಿಕ ನಿರುದ್ಯೋಗಕ್ಕೆ ಒಳಗಾದ, ಎಂದರೆ ಯುಕ್ತ ಉದ್ಯೋಗ ನಿರ್ವಹಿಸಲು ಸಿದ್ಧರಿದ್ದಾಗ್ಯೂ ಕೆಲಸದ ಅಭಾವದಿಂದಾಗಿ ನಿರುದ್ಯೋಗಿಗಳಾದ, ಕಾರ್ಮಿಕರಿಗೆ ಹಣಕಾಸಿನ ನೆರವು ನೀಡಲು ರಚಿಸಲಾಗಿರುವ ಒಂದು ಯೋಜನೆ (ಅನೆಂಪ್ಲಾಯ್‍ಮೆಂಟ್ ಇನ್ಯೂರೆನ್ಸ್) . ಸಾಮಾಜಿಕ ವಿಮೆಯ ಒಂದು ರೂಪ. ಅನೈಚ್ಛಿಕ ನಿರುದ್ಯೋಗದಿಂದ ಆರ್ಥಿಕ ಸುಭದ್ರತೆಗೆ ಹಾಗೂ ಸಮಾಜದ ನೆಮ್ಮದಿಗೆ ಭಂಗ ಉಂಟಾಗುವುದರಿಂದ ಅದಕ್ಕೆ ಪರಿಹಾರ ದೊರಕಿಸಿಕೊಡುವುದು ಸಾಮಾಜಿಕ ಸುಭದ್ರತೆಯ ಒಂದು ಆವಶ್ಯಕ ಕ್ರಮವಾಗಿದೆ. ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ ಮೊದಲಾದ ಅನೇಕ ದೇಶಗಳಲ್ಲಿ ಇದು ಜಾರಿಯಲ್ಲಿದೆ.
ಬೆಳೆವಣಿಗೆ: ನಿರುದ್ಯೋಗ ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನಗಳು ಪ್ರಾರಂಭವಾದ್ದು 20ನೆಯ ಶತಮಾನದ ಆದಿಯಲ್ಲಿ. 1905ರಲ್ಲಿ ಫ್ರಾನ್ಸ್, 1906ರಲ್ಲಿ ನಾರ್ವೇ ಮತ್ತು 1907ರಲ್ಲಿ ಡೆನ್ಮಾರ್ಕ್ ದೇಶಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮಗಳು ರೂಪಿತವಾದುವು. ಕಾನೂನಿನ ಬೆಂಬಲವಿಲ್ಲದೆ ಕ್ರಮಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದು ಕಷ್ಟವೆಂಬುದನ್ನು ಮನಗಂಡ ಬ್ರಿಟನ್ನು ರಾಷ್ಟ್ರಾದ್ಯಂತ ಕಡ್ಡಾಯ ನಿರುದ್ಯೋಗ ವಿಮಾ ಯೋಜನೆಯನ್ನು ಜಾರಿಗೆ ತರುವ ಉದ್ದೇಶದಿಂದ 1911ರಲ್ಲಿ ಪ್ರಥಮವಾಗಿ ರಾಷ್ಟ್ರೀಯ ವಿಮಾ ಅಧಿನಿಯಮವೊಂದನ್ನು ತಂದಿತು. ಇದರ ಪ್ರಕಾರ ಯೋಜನೆಯ ವ್ಯಾಪ್ತಿ ಸೀಮಿತವಾಗಿದ್ದುದರಿಂದ 1920ರಲ್ಲಿ ಮತ್ತೊಂದು ಅಧಿನಿಯಮವನ್ನು ಜಾರಿಗೆ ತಂದು ಯೋಜನೆಯ ಸಾರ್ವತ್ರಿಕ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಲಾಯಿತು. 1919ರಲ್ಲಿ ಇಟಲಿ, 1927ರಲ್ಲಿ ಜರ್ಮನಿ, 1947ರಲ್ಲಿ ಜಪಾನ್ ಮತ್ತು 1955ರಲ್ಲಿ ಕೆನಡ ಹೀಗೆ ಹಲವು ದೇಶಗಳು ಕಡ್ಡಾಯ ನಿರುದ್ಯೋಗ ವಿಮಾ ಕಾನೂನುಗಳನ್ನು ಜಾರಿಗೆ ತಂದುವು. ಅಮೆರಿಕ ಸಂಯುಕ್ತ ಸಂಸ್ಥಾನ ಸರ್ಕಾರ 1935ರಲ್ಲಿ ಸಮಾಜ ಸುಭದ್ರತಾ ಅಧಿನಿಯಮವನ್ನು ಜಾರಿಗೆ ತಂದು ಯೋಜನೆಯ ಅನುಷ್ಠಾನಕ್ಕೆ ಭದ್ರವಾದ ನೆಲೆ ನಿರ್ಮಿಸಿತು. 1937ರ ಮಧ್ಯಭಾಗದ ವೇಳೆಗೆ ಅಮೆರಿಕದ ಎಲ್ಲ ರಾಜ್ಯಗಳು ನಿರುದ್ಯೋಗ ವಿಮಾ ಕಾನೂನುಗಳನ್ನು ಜಾರಿಗೆ ತಂದಿದ್ದುವು.
ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಅರಬ್ ರಾಷ್ಟ್ರಗಳು, ನ್ಯೂಜಿóಲೆಂಡ್ ಮುಂತಾದ ಹಲವು ದೇಶಗಳು ಇದನ್ನು ಜಾರಿಗೆ ತಂದಿವೆ. ಪ್ರಪಂಚದ ಮೂರನೆಯ ಎರಡು ದೇಶಗಳಲ್ಲಿ ನಿರುದೋಗ ವಿಮಾ ಯೋಜನೆಗಳು ಜಾರಿಯಲ್ಲಿವೆ. ಇಲ್ಲಿ ಸಂಬಳದಾರರನ್ನೂ ಒಳಗೊಂಡಂತೆ ಸುಮಾರು ಸೇ. 77ರಷ್ಟು ಕಾರ್ಮಿಕರಿಗೆ ರಕ್ಷಣೆ ದೊರಕುತ್ತಿದೆ. ಕೆಲವು ದೇಶಗಳಲ್ಲಿ ಕೃಷಿ ಹಾಗೂ ಗೃಹ ಕಾರ್ಮಿಕರು ಮತ್ತು ಒಂದು ಗೊತ್ತಾದ ಗರಿಷ್ಠಮಿತಿಗೆ ಮೀರಿದ ವರಮಾನವಿರುವ ಸಂಬಳದಾರರು ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಮತ್ತೆ ಕೆಲವು ದೇಶಗಳಲ್ಲಿ ನೌಕಾ ಕಾರ್ಮಿಕರು, ರೈಲ್ವೆ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರಿಗೇ ವಿಶಿಷ್ಟವಾದ ನಿರುದ್ಯೋಗ ವಿಮಾಯೋಜನೆಗಳು ಆಚರಣೆಯಲ್ಲಿವೆ. ಹಂಗಾಮಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಏರ್ಪಾಡುಂಟು. ಆಂಶಿಕ ನಿರುದ್ಯೋಗವೂ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಎಡೆಗಳಲ್ಲಿ ಅದಕ್ಕೂ ಪೂರ್ಣ ನಿರುದ್ಯೋಗಕ್ಕೆ ಅನ್ವಯವಾಗುವ ನಿಯಮಗಳನ್ನೇ ಅನ್ವಯಿಸಲಾಗುತ್ತದೆ. ಇದು ಒಳಪಡದೆ ಇರುವಲ್ಲಿ ಆಂಶಿಕ ನಿರುದ್ಯೋಗಗಳಿಗೆ ಕೂಲಿ ಕೊಡುವುದು ಕೆಲವು ವೇಳೆ ಮಾಲೀಕನ ಹೊಣೆಯಾಗಿರುವುದುಂಟು.
ಮಹತ್ತ್ವ: ಕೂಲಿಯ ನಷ್ಟದ ಪರಿಹಾರದ ಮೂಲಕ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ದೊರಕಿಸಿಕೊಡುವುದು ನಿರುದ್ಯೋಗ ವಿಮೆಯ ಮೂಲ ಉದ್ದೇಶ. ಜೊತೆಗೆ ಇದು ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಆರ್ಥಿಕ ಕುಸಿತಗಳನ್ನು ತಪ್ಪಿಸಬಹುದಾಗಿದೆ. ಹೀಗೆ ಇದೊಂದು ಸ್ವಯಂಚಾಲಿತ ಆರ್ಥಿಕಸ್ಥಾಯಿತ್ವಕಾರಿಯಾಗಿದೆ. ಕಾರ್ಮಿಕರು ಮುಂದೂಡಲಾಗದ, ಅನಿವಾರ್ಯವಾಗಿ ಮಾಡಲೇಬೇಕಾದ ವೆಚ್ಚಗಳಿಗಾಗಿ ಅಲ್ಪ ಕೂಲಿಯ ಉದ್ಯೋಗಗಳಿಗೆ ಸೇರಬೇಕಾಗುವಂಥ ದುಃಸ್ಥಿತಿಯನ್ನು ನಿವಾರಿಸಿ, ಅವರ ಅನುಭವ ಹಾಗೂ ಕಾರ್ಯಕ್ಷಮತೆಗೆ ರಕ್ಷಣೆ ನೀಡುತ್ತದೆ. ಅವರಲ್ಲಿ ಆತ್ಮಸ್ಥೈರ್ಯವನ್ನು ಕುದುರಿಸುತ್ತದೆ. ನಿರುದ್ಯೋಗ ಪರಿಹಾರ ನೀಡಲು ಬೇಕಾಗುವ ಹಣಕಾಸಿಗಾಗಿ ಮಾಲೀಕರ ಭೇದಕಾರಕ ತೆರಿಗೆ ವಿಧಿಸುವುದರಿಂದ ವ್ಯವಸ್ಥಾಪಕರು ಉದ್ಯೋಗಗಳನ್ನು ಕ್ರಮಬದ್ಧ ಗೊಳಿಸಲು ಆಸಕ್ತಿ ವಹಿಸುತ್ತಾರೆ.
ಪರಿಹಾರ: ವಿವಿಧ ದೇಶಗಳಲ್ಲಿ ಜಾರಿಯಲ್ಲಿರುವ ಕಾನೂನುಗಳಲ್ಲಿ ವಿಧಾಯಕವಾದ ಪರಿಹಾರ ತಪ್ಸೀಲುಗಳ ಪ್ರಕಾರ ಅರ್ಹ ಕಾರ್ಮಿಕರಿಗೆ ವಾರಕ್ಕೊಮ್ಮೆ ಪರಿಹಾರವನ್ನು ಪಾವತಿ ಮಾಡಲಾಗುತ್ತದೆ. ಕಾರ್ಮಿಕನ ವಾರಗೂಲಿ, ನಿರುದ್ಯೋಗ ವಿಮೆಗೆ ಅವನು ಅಥವಾ ಅವನ ಪರವಾಗಿ ಮಾಲೀಕ ಸಲ್ಲಿಸಿರುವ ವಂತಿಗೆ-ಇವಕ್ಕೆ ಅನುಗುಣವಾಗಿ ಪರಿಹಾರದ ಮೊಬಲಗು ನಿರ್ಧಾರವಾಗುತ್ತದೆ. ನಿರುದ್ಯೋಗ ವಿಮೆ ಜನಿಸಿದ ದೇಶವಾದ ಬ್ರಿಟನ್ನಿನಲ್ಲಿ, ಮತ್ತು ಇದರ ಆಚರಣೆಯಲ್ಲಿ ಅಗ್ರಗಣ್ಯ ರಾಷ್ಟ್ರವಾಗಿರುವ ಅಮೆರಿಕದಲ್ಲಿ ಇದೇ ಕ್ರಮವನ್ನು ಅನುಸರಿಸಲಾಗುತ್ತಿದೆ. ಅಮೆರಿಕದಲ್ಲಿ ಮೂಲತಃ ಪ್ರತಿಯೊಬ್ಬ ನಿರುದ್ಯೋಗಿಗೂ ಅವನ ಕೂಲಿಯ ಅರ್ಧದಷ್ಟು ಹಣವನ್ನು ಪರಿಹಾರವಾಗಿ ಕೊಡಬೇಕೆಂಬ ಉದ್ದೇಶವಿತ್ತು. ಎರಡನೆಯ ಮಹಾಯುದ್ಧ ಮತ್ತು ಅನಂತರದ ದಶಕಗಳಲ್ಲಿ ಸಂಭವಿಸಿದ ತೀವ್ರ ವೇತನ ಬದಲಾವಣೆಗಳ ಫಲವಾಗಿ ಈಗ ಪರಿಹಾರದ ಸರಾಸರಿ ಮೊಬಲಗು ಕಾರ್ಮಿಕರ ಕೂಲಿಯ ಸೇ. 40ರಷ್ಟಾಗಿರುತ್ತದೆ. ಆದಾಗ್ಯೂ ಸ್ಥಳೀಯ ಸ್ಥಿತಿಗತಿಗಳಿಗೆ ಅನುಗುಣವಾಗಿ ರಾಜ್ಯಗಳು ಪರಿಹಾರ ದರ, ಅವಧಿ ಹಾಗೂ ತೆರಿಗೆ ದರಗಳನ್ನು ನಿರ್ಧರಿಸಿಕೊಳ್ಳಬಹುದಾಗಿದೆ. ಈ ಸಂಯುಕ್ತ ಯೋಜನೆಯ ಜೊತೆಗೆ ರಸ್ತೆ ಸಾರಿಗೆ ಕಾರ್ಮಿಕರಿಗೆ ಪ್ರತ್ಯೇಕವಾದ ನಿರುದ್ಯೋಗ ವಿಮಾ ಪದ್ಧತಿ ರೂಢಿಯಲ್ಲಿರುತ್ತದೆ. ಇದಕ್ಕೆ ಬೇಕಾದ ಹಣಕಾಸಿಗಾಗಿ ರಸ್ತೆ ಸಾರಿಗೆ ಉದ್ಯಮಿಗಳ ಮೇಲೆ ಏಕರೀತಿಯ ಫೆಡರಲ್ ತೆರಿಗೆಯನ್ನು ವಿಧಿಸಲಾಗುತ್ತಿದೆ. ಪರಿಹಾರದ ದರ ರಾಷ್ಟ್ರಾದ್ಯಂತ ಒಂದೇ ಆಗಿರುತ್ತದೆ. ಸಂಯುಕ್ತ ಸಂಸ್ಥಾನ ಸರ್ಕಾರದ ಅಭಿಕರ್ತೃಗಳಾಗಿ ರಾಜ್ಯಗಳು ಪರಿಹಾರ ವಿತರಣೆ ಮಾಡುತ್ತವೆ.
ಬ್ರಿಟನ್ನಿನಲ್ಲಿ ನಿರುದ್ಯೋಗ ವಿಮಾ ಯೋಜನೆಯ ನಿರ್ವಹಣೆ ಕಾರ್ಮಿಕ ಮಂತ್ರಿ ಶಾಖೆಗೆ ಸೇರಿದ್ದು. ನಿರುದ್ಯೋಗಿಗಳಿಗೆ ಪ್ರತಿ ವಾರಕ್ಕೆ ಪಾವತಿಯಾಗುವ ಮೊಬಲಗು ಎಷ್ಟು, ಇದನ್ನು ವರ್ಷದಲ್ಲಿ ಎಷ್ಟು ವಾರಗಳವರೆಗೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಲಾಗಿದೆ.
ಕಾಮನ್‍ವೆಲ್ತ್ ರಾಷ್ಟ್ರಗಳ ಪೈಕಿ ಆಸ್ಟ್ರೇಲಿಯದಲ್ಲಿ ನಿರುದ್ಯೋಗಿಯ ವರಮಾನದ ಪರೀಕ್ಷೆಯಾದ ಅನಂತರ ಪರಿಹಾರದ ಪರಿಮಾಣ ಮತ್ತು ಅವಧಿಯನ್ನು ನಿರ್ಧರಿಸಲಾಗುತ್ತದೆ. ಪ್ರಾಪ್ತವಯಸ್ಕ ಕಾರ್ಮಿಕರಿಗೆ, ಅವಲಂಬಿಗಳಿಗೆ, ಮಕ್ಕಳಿಗೆ ನೀಡಲಾಗುವ ಗರಿಷ್ಠ ದರವನ್ನು ನಿರ್ಧರಿಸಲಾಗಿದೆ; ನ್ಯೂಜಿóಲೆಂಡಿನಲ್ಲೂ ಪರಿಹಾರ ಬೇಡುವ ನಿರುದ್ಯೋಗಿಯನ್ನು ವರಮಾನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವಿವಾಹಿತ ಕಾರ್ಮಿಕನ ಪರಿಹಾರದ ಗರಿಷ್ಠ ಪರಿಮಾಣವನ್ನು ನಿಗದಿಮಾಡಿದೆ. ಇದರ ನಿರ್ವಹಣೆ ಪ್ರಾಂತೀಯ ಸರ್ಕಾರದ ಹೊಣೆಯಾಗಿರುತ್ತದೆ. ಕೆನಡದಲ್ಲಿ ಕಾರ್ಮಿಕ ಒಂಟಿಯಾಗಿದ್ದರೆ ಹಾಗೂ ಅವನಿಗೆ ಅವಲಂಬಿಗಳಿದ್ದರೆ ಪಾವತಿ ಮಾಡಲಾಗುವ ಸಾಪ್ತಾಹಿಕ ದರಗಳನ್ನು ಗೊತ್ತುಮಾಡಿದೆ. ಪರಿಹಾರದ ಅವಧಿಯ ನಿಗದಿ ಮಾಡುವ ನಿಯಮಗಳಿವೆ. ಈ ವ್ಯವಸ್ಥೆಯ ನಿರ್ವಹಣೆಯ ಹೊಣೆ ಪುರಸಭೆಗಳದು.
ಐರೋಪ್ಯ ರಾಷ್ಟ್ರಗಳ ಪೈಕಿ ಫ್ರಾನ್ಸ್ ಮತ್ತು ನಾರ್ವೇ ಸಾಮೂಹಿಕ ಕರಾರಿಗೆ ಒಳಪಟ್ಟ ಯೋಜನೆ ಅನುಸರಿಸುತ್ತಿವೆ. ಅರ್ಹತೆಯ ನಿರ್ಣಯಕ್ಕಾಗಿ ನಿರುದ್ಯೋಗಿಯನ್ನು ವರಮಾನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಪರಿಹಾರದ ದರ ವ್ಯತ್ಯಾಸವಾಗುತ್ತದೆ. ಸ್ವೀಡನ್ನಿನಲ್ಲಿ ರೂಢಿಯಲ್ಲಿರುವ ಯೋಜನೆ ವಿಮಾ ಸ್ವರೂಪದ್ದಾಗಿದ್ದರೂ ನಿರ್ವಹಣೆಯನ್ನು ಸ್ವಯಂಪ್ರೇರಿತ ಕಾರ್ಮಿಕ ಸಂಘಗಳು ನೋಡಿಕೊಳ್ಳುತ್ತವೆ. ನೆದರ್‍ಲೆಂಡ್ಸಿನಲ್ಲಿ ನಿರುದ್ಯೋಗ ವಿಮಾ ಯೋಜನೆ ಸಾಮಾನ್ಯ ವಿಮಾ ಯೋಜನೆಗೆ ಪೂರಕವಾಗಿದೆ. ಅರ್ಹ ಕಾರ್ಮಿಕನಿಗೆ ಎರಡು ವರ್ಷಗಳಿಗೆ ಮೀರದ ಒಂದು ಗೊತ್ತಾದ ಅವಧಿಯವರೆಗೆ ಪರಿಹಾರ ನೀಡಲಾಗುತ್ತದೆ. ಇಟಲಿ ಮತ್ತು ಸ್ಪೇನ್ ಹೆಚ್ಚು ಕಡಿಮೆ ಇದೇ ವಿಧಾನ ಅನುಸರಿಸುತ್ತವೆ.
ಸ್ಪೇನ್ ಮತ್ತು ಇಟಲಿಯಲ್ಲಿರುವಂಥ ವಿಧಾನವೇ ದಕ್ಷಿಣ ಅಮೆರಿಕದ ಚಿಲಿ, ಎಕ್ವಡಾರ್ ಮತ್ತು ಉರಗ್ವೆಯಲ್ಲಿ ಜಾರಿಯಲ್ಲಿದೆ. ಆರ್ಜೆಂಟೀನದಲ್ಲಿ ಇತರ ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿರುವಂತೆ ನಿರುದ್ಯೋಗ ವಿಮೆಯಾಗಲಿ ನೆರವು ನೀಡುವ ಯೋಜನೆಯಾಗಲಿ ಇಲ್ಲ. ಆದರೆ ನಿರುದ್ಯೋಗಿಯಾದವನಿಗೆ ಮಾಲೀಕ ಒಮ್ಮೆಲೆ ಇಂತಿಷ್ಟು ಪರಿಹಾರ ಎಂದು ಕೊಡುವುದು ರೂಢಿಯಲ್ಲಿದೆ.
ಭಾರತದಲ್ಲಿ 1948ರಲ್ಲಿ ಜಾರಿಗೆ ಬಂದ ಕಾರ್ಮಿಕರ ರಾಜ್ಯ ವಿಮಾ ಅಧಿನಿಯಮದ ಪ್ರಕಾರ ಅಪಘಾತದಿಂದ ಅಥವಾ ಅನಾರೋಗ್ಯದ ನಿಮಿತ್ತ ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಕೆಲಸ ಮಾಡಲಾಗದ ಕಾರ್ಮಿಕರಿಗೆ ಪರಿಹಾರ ನೀಡಲಾಗುತ್ತಿದೆ. ಕಾರ್ಮಿಕ ಈ ಪರಿಹಾರ ಪಡೆಯಬೇಕಾದರೆ ವಿಮಾ ನಿಧಿಗೆ ಕನಿಷ್ಠ 12 ವಾರಗಳ ವಂತಿಗೆಯನ್ನಾದರೂ ಸಲ್ಲಿಸಿರಬೇಕು. ಮೇಲೆ ಹೇಳಿದ ಇತರ ದೇಶಗಳಲ್ಲಿರುವಂಥ ನಿರುದ್ಯೋಗ ವಿಮಾ ಯೋಜನೆ ಭಾರತದಲ್ಲಿ ಆಚರಣೆಯಲ್ಲಿಲ್ಲ.
ಅರ್ಹತೆ: ಪರಿಹಾರ ಪಡೆಯುವ ಅರ್ಹತೆಯ ನಿರ್ಣಯದ ನಿಬಂಧನೆಗಳು ವಿಶ್ವಾದ್ಯಂತ ಹೆಚ್ಚುಕಡಿಮೆ ಒಂದೇ ರೀತಿಯಾಗಿವೆ. ಕಾರ್ಮಿಕ ಒಂದು ನಿರ್ದಿಷ್ಟ ಅವಧಿಯವರೆಗೆ ನಿರುದ್ಯೋಗ ವಿಮೆಯ ಚೌಕಟ್ಟಿಗೆ ಒಳಪಟ್ಟ ಉದ್ಯಮದಲ್ಲಿ ಕೆಲಸ ಮಾಡಿರಬೇಕು ಅಥವಾ ವಿಮಾನಿಧಿಗೆ ಒಂದು ಗೊತ್ತಾದ ಮೊತ್ತದವರೆಗೆ ವಂತಿಗೆ ಸಲ್ಲಿಸಿರಬೇಕು. ಜೊತೆಗೆ ಉದ್ಯೋಗ ವಿನಿಮಯ ಕಛೇರಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿರಬೇಕಲ್ಲದೆ ಪರಿಹಾರ ಪಡೆಯುವ ಹಕ್ಕನ್ನು ಕಳೆದುಕೊಂಡಿರಬಾರದು. ಸ್ವಂತ ಇಚ್ಛೆಯಿಂದಾಗಲಿ ದುರ್ನಡತೆಯಿಂದಾಗಲಿ ಕಾರ್ಮಿಕ ವಿವಾದದಲ್ಲಿ ಸಿಕ್ಕಿಯಾಗಲಿ ನಿರುದ್ಯೋಗಿಯಾದ ಕಾರ್ಮಿಕ ಪರಿಹಾರ ಪಡೆಯಲು ಅನರ್ಹನಾಗುತ್ತಾನೆ. ಯುಕ್ತ ಉದ್ಯೋಗ ದೊರಕಿಯೂ ಅದನ್ನು ನಿರಾಕರಿಸಿದ ಕಾರ್ಮಿಕನಿಗೆ ಪರಿಹರ ನೀಡುವುದನ್ನು ಒಂದು ನಿಯಮಿತ ಅವಧಿಯವರೆಗೆ ಮುಂದೂಡಲಾಗುತ್ತದೆ. ಅಮೆರಿಕ ಮತ್ತು ಇನ್ನು ಕೆಲವು ದೇಶಗಳಲ್ಲಿ ಇದನ್ನು ರದ್ದು ಮಾಡುವುದೂ ಉಂಟು.
ಹಣಕಾಸು: ನಿರುದ್ಯೋಗ ವಿಮಾ ನಿಧಿಗೆ ಹಣಕಾಸನ್ನು ಪೂರೈಸುವಲ್ಲಿ ಇಡೀ ವಿಶ್ವಕ್ಕೆ ಅನ್ವಯಿಸಿದಂತೆ ಎರಡು ವಿಧಾನಗಳನ್ನು ಗುರುತಿಸಬಹುದು; ಮಾಲೀಕರ ಮೇಲೆ ಭಿನ್ನಕ ಪಾವತಿ ಪಟ್ಟಿ ವಿಧಿಸಿ, ದೊರೆತ ಹಣವನ್ನು ಸಂಪೂರ್ಣವಾಗಿ ವಿಮಾನಿಧಿಗೆ ಒದಗಿಸುವುದು ಒಂದು ವಿಧಾನ. ಈ ವಿಧಾನ ಅಮೆರಿಕದಲ್ಲಿ ರೂಢಿಯಲ್ಲಿದೆ. ನಿರ್ವಹಣೆಯ ಹೊಣೆ ಹೊತ್ತಿರುವ ರಾಜ್ಯಗಳು ಸ್ಥಳೀಯ ಸ್ಥಿತಿಗತಿಗಳಿಗೆ ಅನುಗುಣವಾಗಿ ತೆರಿಗೆಯ ದರಗಳನ್ನು ನಿರ್ಧರಿಸುತ್ತವೆ. ಈ ನಿರ್ಧಾರದಲ್ಲಿ ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಲಾಗುವ ಅಂಶಗಳೆಂದರೆ ಕೈಗಾರಿಕೆಗಳ ಸ್ವರೂಪ ಹಾಗೂ ಸ್ಥಾನ. ವಂತಿಗೆ ಸ್ವೀಕರಿಸುವುದು ಎರಡನೆಯ ವಿಧಾನ. ಈ ವ್ಯವಸ್ಥೆಯಲ್ಲಿ ನಿರುದ್ಯೋಗ ವಿಮಾ ನಿಧಿಗೆ ಕಾರ್ಮಿಕ-ಮಾಲೀಕರಿಬ್ಬರೂ ಸಮವಾಗಿ ವಂತಿಗೆ ಸಲ್ಲಿಸಬೇಕಾಗುತ್ತದೆ. ವಂತಿಗೆಯ ದರದ ನಿರ್ಣಯದಲ್ಲಿ ಪ್ರಧಾನವಾದ ಅಂಶವೆಂದರೆ ಉದ್ಯೋಗದ ಸ್ವರೂಪ. ವಂತಿಗೆಯ ಜೊತೆಗೆ ನಿರ್ವಹಣೆಯ ವೆಚ್ಚಕ್ಕಾಗಿ ಸರ್ಕಾರದಿಂದ ಸಹಾಯಧನ ದೊರಕುತ್ತದೆ. ಬ್ರಿಟನ್ನೂ ಸೇರಿದಂತೆ ಹೆಚ್ಚುಕಡಿಮೆ ಉಳಿದ ಎಲ್ಲ ದೇಶಗಳು ಈ ವಿಧಾನ ಅನುಸರಿಸುತ್ತವೆ. (ಕೆ.ಜಿಒ.)