ಸಾಗರೋಪಮವಾಗಿ ಬೆಳೆಯುತ್ತಿತ್ತು.
ತಾನು ಏರಿಬಂದ ಯೋಗಮಾರ್ಗದ ರಹಸ್ಯಗಳನ್ನೆಲ್ಲಾ ಮಹಾದೇವಿಗೆ ವಿವರಿಸುವನು ಪ್ರಭುದೇವ. ಸಾಮಾನ್ಯ ಹೆಣ್ಣು ದೇಹಕ್ಕೆ ಅಸಾಧ್ಯವಾದ ಅವಳ ಯೌಗಿಕ ಶಕ್ತಿಯನ್ನು ಕಂಡು ಆಶ್ಚರ್ಯಗೊಳ್ಳುವನು.
ರಾಜಯೋಗದ ಮಾರ್ಗವನ್ನೂ, ಕುಂಡಲಿನೀಶಕ್ತಿಯ ರಹಸ್ಯವನ್ನೂ ಇಷ್ಟಲಿಂಗದ ದೃಷ್ಟಿಯಿಂದ ಶಿವಯೋಗ ಅದನ್ನು ಅಳವಡಿಸಿಕೊಂಡಿರುವ ರೀತಿಯನ್ನೂ ಒಮ್ಮೆ ತಿಳಿಸಿ ಹೇಳಿದ. ಅದು ಮಹಾದೇವಿಯ ಮನಸ್ಸನ್ನು ನಾಟಿತ್ತು. ಒಂದೆರಡು ದಿನಗಳಲ್ಲಿಯೇ ಅದು ಅವಳ ಅನುಭವಸಂಪತ್ತಾಗಿ ಪರಿಣಮಿಸಿತು.
ಒಂದು ರಾತ್ರಿ ಪೂಜೆಯಲ್ಲಿ ನಿರತಳಾದ ತನಗೆ ಆದ ಅನುಭವಗಳನ್ನು ಕೆಲವು ತ್ರಿಪದಿಗಳ ರೂಪದಲ್ಲಿ ಬರೆದು ತಂದು, ಪ್ರಭುದೇವನ ಎದುರಿನಲ್ಲಿ ಓದಿದ್ದಳು :
ಕುಂಡಲಿಯ ಸರ್ಪನಾ, ತುಂಡ ಮೇಲಕೆ ತೆಗೆಯೆ,
ಮಂಡಲವು ಮೂರು ಬೆಳಗಾಗಿ ಉರಿಯುವ -
ಖಂಡಜ್ಯೋತಿಯೊಳು ಬಯಲಾದೆ
ಮೊರೆವ ನಾದವ ಕೇಳಿ, ಉರಿಯ ಜ್ಯೋತಿಯ ನೋಡಿ,
ಸುರಿವ ಅಮೃತವನು ಸವಿದುಂಡು ಕಾರಣದಿ
ತೊರೆದಿಹೆನು ಜನನಮರಣಗಳ
ಒಂಬತ್ತು ವೆಜ್ಜದಾ, ಇಂಬುಗಳ ಬಲಿವುತ್ತ
ತುಂಬಿ ಸುಷುಮ್ನೆಯೊಳು ಘನವ ನೋಡಲ್ಕೆ
ಕುಂಭದೊಳಮೃತ ಸುರಿಯುವುದು
ಅವಳ ಈ ಯೌಗಿಕ ಅನುಭವವನ್ನು ಕೇಳುತ್ತಾ ಪ್ರಭು ಬೆರಗಾಗಿದ್ದನು. ಇನ್ನೂ ಮುಂದಿನ ಹೆಜ್ಜೆಯನ್ನು ಅವಳಿಗೆ ಸೂಚಿಸಿದ್ದನು. ಇಂದು ಅವಳನ್ನು ಹೇಳಿಕಳುಹಿಸಿದುದರ ಉದ್ದೇಶವಾದರೂ ಅದೇ.
ಅಲ್ಲಮಪ್ರಭುದೇವನಿಗೆ ಇಂದು ಅನಿರೀಕ್ಷಿತವಾದ ಸೂಚನೆಯೊಂದು ಬಂದಿತ್ತು. ಎಂದಿನಂತೆ ಪ್ರಭುದೇವ ಪೂಜೆಯಲ್ಲಿ ತಲ್ಲೀನನಾಗಿದ್ದನು. ಅತ್ತ ಇತ್ತ ಹರಿವ ಮನವ ಬಚ್ಚಬೆಳಗಿನ ಲಿಂಗದಲ್ಲಿ ಲೀನಗೊಳಿಸಿ ಸಮರಸಭಾವದ ಆನಂದದ ನಿಬ್ಬೆರಗಿನಲ್ಲಿ ನಿಲುಗಡೆ ಹೊಂದಿದ್ದನು. ಇದ್ದಕ್ಕಿದ್ದಂತೆಯೇ ಅಲ್ಲಿ ಮೂಡಿತ್ತು ಶ್ರೀಶೈಲ ಪರ್ವತ ಮತ್ತು ಅದರ ಹೃದಯಗರ್ಭದೊಳಗಿರುವ ಕದಳಿಯ ಗುಹೆ!