ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಭಾಷಾಂತರಗಳು

ವಿಕಿಸೋರ್ಸ್ದಿಂದ

ಕನ್ನಡದಲ್ಲಿ ಭಾಷಾಂತರಗಳು : - ಕನ್ನಡ ಸಾಹಿತ್ಯ ತನ್ನ ಸಾವಿರದ ಮುನ್ನೂರು ವರ್ಷಗಳ ಇತಿಹಾಸದಲ್ಲಿ ಉದ್ದಕ್ಕೂ ಭಾಷಾಂತರಗಳಿಂದ ಪುಷ್ಟವಾಗಿದೆ. ಈ ಭಾಷಾಂತರ ಪರಂಪರೆಯನ್ನು ಕವಿರಾಜಮಾರ್ಗದ ಕಾಲದಿಂದಲೂ ಗುರುತಿಸಬಹುದು. ಹಿಂದೆ ಸಂಸ್ಕೃತ ಪ್ರಾಕೃತಗಳಿಂದ, ಆಧುನಿಕ ಕಾಲದಲ್ಲಿ ವಿಶೇಷವಾಗಿ ಇಂಗ್ಲಿಷಿನಿಂದ ಭಾಷಾಂತರಗಳು ಬಂದಿವೆ. ಪ್ರಾಚೀನ ಕನ್ನಡ ಸಾಹಿತ್ಯವೆಲ್ಲ ಭಾಷಾಂತರವೆಂದು ಹೇಳುವುದುಂಟು. ಇದು ಪುರ್ಣ ಸತ್ಯವಲ್ಲ. ಹಿಂದಿನ ಕನ್ನಡ ಕವಿಗಳು ಸಂಸ್ಕೃತ ಪ್ರಾಕೃತಗಳಿಂದ ವಸ್ತುವನ್ನು ಸ್ವೀಕರಿಸುತ್ತಿದ್ದರೆಂಬ ಬಹು ಸ್ಥೂಲವಾದ ಅರ್ಥದಲ್ಲಿ ಅವರ ಕೃತಿಗಳನ್ನು ಭಾಷಾಂತರಗಳೆನ್ನ ಬಹುದು. ಆದರೆ ಅವರು ಪ್ರತಿಭೆ, ಸ್ವೋಪಜ್ಞತೆಗಳನ್ನು ತಮ್ಮ ಕಾವ್ಯಗಳಲ್ಲಿ ಮೇಳವಿಸುತ್ತಿದ್ದರು. ಅವರಲ್ಲಿ ಭಾಷಾಂತರ ಎನ್ನುವುದು ಕೇವಲ ಒಂದು ಅಂಗವಾಗಿತ್ತಷ್ಟೆ. ಆದ್ದರಿಂದ ಹಿಂದಿನ ಕನ್ನಡ ಕಾವ್ಯಗಳನ್ನು ಬರಿಯ ಭಾಷಾಂತರಗಳೆನ್ನದೆ ಸ್ವತಂತ್ರ ಕೃತಿಗಳೆಂದೇ ಪರಿಗಣಿಸಬೇಕಾಗುತ್ತದೆ. ಪಂಪ, ಕುಮಾರವ್ಯಾಸರ ಭಾರತಗಳನ್ನು ಒಂದರ್ಥದಲ್ಲಿ ಭಾಷಾಂತರಗಳೆನ್ನಬಹುದಾದರೂ ಮತ್ತೊಂದು ದೃಷ್ಟಿಯಿಂದ ಅವು ಸ್ವತಂತ್ರ ಕಾವ್ಯಗಳೇ. ಇಂದು ಭಾಷಾಂತರವೆಂದರೆ ಯಾವ ನಿಷ್ಕೃಷ್ಟವಾದ ಖಚಿತವಾದ ಕಲ್ಪನೆಯಿದೆಯೋ ಅದು ಹಿಂದಿನವರಿಗಿರಲಿಲ್ಲ. ಭಾಷಾಂತರಿಸುವುದು ಅವರ ಉದ್ದೇಶವಲ್ಲ. ಆದರೆ ಇಂದಿನ ಅರ್ಥದಲ್ಲಿ ಕೂಡ ಭಾಷಾಂತರದ ಅಂಶಗಳನ್ನು ಪ್ರಾಚೀನ ಕನ್ನಡ ಸಾಹಿತ್ಯ ವಿಪುಲವಾಗಿ ತೋರಿಸಿಕೊಡುತ್ತಿದೆ ಎಂಬುದು ಗಮನಾರ್ಹ ಸಂಗತಿ. ರೂಪಾಂತರ, ಭಾವಾನುವಾದ, ಸಂಗ್ರಹಾನುವಾದ, ವಿಸ್ತಾರಾನುವಾದ, ನಿಕಟಾನುವಾದ ಮುಂತಾದ ಬಗೆಗಳಿಗೆಲ್ಲ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನಿದರ್ಶನಗಳಿವೆ. ನಮ್ಮ ಹಿಂದಿನ ಕವಿಗಳು ಯಾವುದೋ ಒಂದು ಆಕರವನ್ನು ಆಧಾರವಾಗಿಟ್ಟುಕೊಂಡಿದ್ದರೂ ಅದಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವರ್ಣನಾವಸರದಲ್ಲಿ ನಾನಾ ಮೂಲಗಳಿಂದ ಅನುವಾದಿಸುವುದೂ ಉಂಟು. ಒಟ್ಟಿನಲ್ಲಿ ಪ್ರಾಚೀನ ಕನ್ನಡ ಕೃತಿಗಳು ಸ್ಥೂಲವಾಗಿ ಅಂಶತಃ ಭಾಷಾಂತರಗಳಾಗಿವೆ.

ನಿಯತವಾದ ಅರ್ಥದಲ್ಲಿ ಅಪ್ಪಟ ಭಾಷಾಂತರಗಳನ್ನು ನಾವು ನೋಡುವುದು ಆಧುನಿಕ ಕಾಲದಲ್ಲೇ. ಹಳಗನ್ನಡದಲ್ಲಿ ಕಂಡುಬರುವ ಕೆಲವು ಭಾಷಾಂತರ ನಿದರ್ಶನಗಳನ್ನು ಮೊದಲು ನೋಡಬಹುದು. ದಂಡಿಯ ಕಾವ್ಯಾದರ್ಶವನ್ನು ಬಹುಮಟ್ಟಿಗೆ ಅವಲಂಬಿಸಿರುವ ಕವಿರಾಜಮಾರ್ಗದ ಪ್ರಾರ್ಥನಾಪದ್ಯವೇ ಭಾಷಾಂತರವಾಗಿದೆ. ಜನ್ನನ ಯಶೋಧರಚರಿತೆ ಕಾವ್ಯವೆಲ್ಲ ಬಹುಮಟ್ಟಿಗೆ ವಾದಿರಾಜನ ಸಂಸ್ಕೃತ ಯಶೋಧರ ಚರಿತದ ನಿಕಟಾನುವಾದವಾಗಿದೆ.

ಹೊಸಗನ್ನಡ ಸಾಹಿತ್ಯ ಭಾಷಾಂತರಗಳಿಗೆ ಬಹಳ ಋಣಿಯಾಗಿದೆ. 16ನೆಯ ಶತಮಾನದ ಅನಂತರ ಮಡುಗಟ್ಟಿ ನಿಂತ ನೀರಾಗಿದ್ದ ಕನ್ನಡ ಸಾಹಿತ್ಯವಾಹಿನಿಗೆ 19-20ನೆಯ ಶತಮಾನಗಳಲ್ಲಿ ಹೊಸ ಪಾತ್ರವನ್ನು ನಿರ್ಮಿಸಿದ ಶ್ರೇಯಸ್ಸು ಭಾಷಾಂತರಗಳದು. ಅದರಲ್ಲೂ ಇಂಗ್ಲಿಷಿನಿಂದಾದ ಭಾಷಾಂತರಗಳದು. ವಿಲಿಯಂ ಕೇರಿಯ ಬೈಬಲಿನ ಭಾಷಾಂತರ 1829ರಲ್ಲೇ ಪ್ರಕಟವಾಯಿತು. ಮುದ್ರಾಮಂಜೂಷವನ್ನು ಬಿಟ್ಟರೆ ಇದೇ ಹೊಸಗನ್ನಡದಲ್ಲಿ ಮೊದಲು ಅನುವಾದವಾದ ಗದ್ಯಗ್ರಂಥ.

ಕನ್ನಡದಲ್ಲಿ ಆಗಿರುವ ಭಾಷಾಂತರಗಳಲ್ಲಿ ನಾಟಕಗಳು ಬಹುಸಂಖ್ಯೆಯಲ್ಲಿವೆ. ಕನ್ನಡದಲ್ಲಿ ನಮಗೆ ಮೊದಲು ಸಿಕ್ಕುವ ನಾಟಕ 17ನೆಯ ಶತಮಾನದಲ್ಲಿ ರಚಿತವಾದ ಸಿಂಗರಾರ್ಯನ ಮಿತ್ರವಿಂದಾಗೋವಿಂದ. ಇದು ಸಂಸ್ಕೃತ ರತ್ನಾವಳಿಯ ಅನುವಾದ. ಮುಂದೆ 19-20ನೆಯ ಶತಮಾನಗಳಲ್ಲಿ ಮುಖ್ಯ ಸಂಸ್ಕೃತ ನಾಟಕಗಳೆಲ್ಲ ಕನ್ನಡಕ್ಕೆ ಬಂದುವು. ಬಸವಪ್ಪಶಾಸ್ತ್ರಿಗಳು ಶಾಕುಂತಲ, ವಿಕ್ರಮೋರ್ವಶೀಯ, ರತ್ನಾವಳಿ, ಉತ್ತರರಾಮಚರಿತೆ ಮತ್ತು ಚಂಡಕೌಶಿಕ ನಾಟಕಗಳನ್ನು ಭಾಷಾಂತರಿಸಿದರು. ಅವರ ಶಾಕುಂತಲದ ಅನುವಾದ ಶ್ರೇಷ್ಠ ವೆನಿಸಿದೆ. ಅವರಿಗಿಂತ ಮೊದಲೆ ಚುರಮುರಿ ಶೇಷಗಿರಿರಾಯರು ಶಾಕುಂತಲವನ್ನು ಹಾಡಿನ ರೂಪದಲ್ಲಿ ಅನುವಾದಿಸಿದ್ದರು. ಬಿ.ಕೃಷ್ಣಪ್ಪನವರು ಅದನ್ನು ಗದ್ಯದಲ್ಲಿ ಪರಿವರ್ತಿಸಿದ್ದರು. ಧೋಂಡೊ ನರಸಿಂಹ ಮುಳಬಾಗಿಲರು ಉತ್ತರರಾಮಚರಿತೆ, ಮಾಲವಿಕಾಗ್ನಿ ಮಿತ್ರ, ಮೃಚ್ಫಕಟಿಕ, ವೇಣೀಸಂಹಾರ ಗಳನ್ನು ಭಾಷಾಂತರಿಸಿದ್ದಾರೆ. ಅಳಸಿಂಗಾಚಾರ್ಯರಿಂದ ಸ್ವಪ್ನ ವಾಸವದತ್ತ, ಪಂಚರಾತ್ರಗಳು, ಮೈಸೂರು ಸೀತಾರಾಮಶಾಸ್ತ್ರಿಗಳಿಂದ ಪ್ರತಿಮಾನಾಟಕ, ನಂಜನಗೂಡು ಸುಬ್ಬಾಶಾಸ್ತ್ರಿಗಳಿಂದ ಮೃಚ್ಫಕಟಿಕ, ಅನಂತನಾರಾಯಣಶಾಸ್ತ್ರಿಗಳಿಂದ ನಾಗಾನಂದ ಅನುವಾದಗೊಂಡಿವೆ. ವೇಣೀಸಂಹಾರವನ್ನು ಸೀತಾರಾಮಶಾಸ್ತ್ರಿಗಳೂ ಜಯರಾಯಾ ಚಾರ್ಯರೂ ಭಾಷಾಂತರಿಸಿದ್ದಾರೆ. ಈ ಎಲ್ಲ ಭಾಷಾಂತರಗಳೂ ಕಂದವೃತ್ತಗಳ ರೂಪದಲ್ಲಿವೆ. ಹೊಸಗನ್ನಡ ಛಂದಸ್ಸಿನಲ್ಲೂ ಸಂಸ್ಕೃತ ನಾಟಕಗಳನ್ನು ಅನುವಾದಿಸಲಾಗಿದೆ. ಎಸ್.ವಿ.ಪರಮೇಶ್ವರ ಭಟ್ಟರು ಕಾಳಿದಾಸ, ಭಾಸರ ಎಲ್ಲ ನಾಟಕಗಳನ್ನೂ ಕೆ.ಕೃಷ್ಣಮೂರ್ತಿಯವರು ಪ್ರತಿಮಾನಾಟಕ, ಉತ್ತರಾಮಚರಿತೆ, ಯಜ್ಞಫಲ, ಆಶ್ಚರ್ಯ ಚೂಡಾಮಣಿಗಳನ್ನೂ ಕನ್ನಡಿಸಿದ್ದಾರೆ. ಎಲ್.ಗುಂಡಪ್ಪನವರು ಭಾಸನ ಏಕಾಂಕ ನಾಟಕಗಳನ್ನೂ ಪ್ರತಿಜ್ಞಾ ಯೌಗಂಧರಾಯಣ ನಾಟಕ, ಸ್ವಪ್ನವಾಸವದತ್ತ ನಾಟಕಗಳನ್ನೂ ಅನುವಾದಿಸಿದ್ದಾರೆ. ತೀ.ನಂ.ಶ್ರೀಯವರ ರಾಕ್ಷಸನ ಮುದ್ರಿಕೆ ಸಂಸ್ಕೃತ ಮುದ್ರಾರಾಕ್ಷಸದ ಸಂಗ್ರಹಾನುವಾದ. ಸಿ.ಪಿ.ಕೆ.ಅವರಿಂದ ಸ್ವಪ್ನವಾಸವದತ್ತ, ಪ್ರತಿಜ್ಞಾಯೌಗಂಧರಾಯಣ, ರತ್ನಾವಳಿ, ನಾಗಾನಂದ, ವೇಣೀಸಂಹಾರಗಳು ಭಾಷಾಂತರಗೊಂಡಿವೆ. ಇಂಗ್ಲಿಷಿನಿಂದ ನಾಟಕಗಳನ್ನು ಅನುವಾದಿಸಿದವರಲ್ಲಿ "ಎಂ.ಎಲ್. ಶ್ರೀಕಂಠೇಶಗೌಡರು" ಮೊದಲಿಗರು. ಅವರು ಷೇಕ್ಸ್‌ಪಿಯರನ ಮ್ಯಾಕ್ಬೆತ್, ಎ ಮಿಡ್ಸಮ್ಮರ್ ನೈಟ್ಸ್‌ ಡ್ರೀಮ್ ನಾಟಕಗಳನ್ನು ಅನುಕ್ರಮವಾಗಿ ಪ್ರತಾಪರುದ್ರದೇವ, ಪ್ರಮೀಳಾರ್ಜುನೀಯ ಎಂದು ಕನ್ನಡಕ್ಕೆ ತಂದಿದ್ದಾರೆ. ಚುರಮುರಿಯವರು ಒಥೆಲೊ ನಾಟಕವನ್ನು ರಾಘವೇಂದ್ರರಾವ್ ನಾಟಕ ಎಂದೂ ಸಿ.ಆನಂದರಾಯರು ರೋಮಿಯೊ ಅಂಡ್ ಜೂಲಿಯಟ್ ನಾಟಕವನ್ನು ರಾಮವರ್ಮ ಲೀಲಾವತಿ ಎಂದೂ ಪರಿವರ್ತಿಸಿದ್ದಾರೆ. ಮ್ಯಾಕ್ಬೆತ್ ನಾಟಕವನ್ನು ಡಿ.ವಿ.ಜಿ.ಯವರು ಸೊಗಸಾಗಿ ಕನ್ನಡಿಸಿದ್ದಾರೆ. ಕುವೆಂಪು ಅವರ ರಕ್ತಾಕ್ಷಿ ಮತ್ತು ಬಿರುಗಾಳಿ ಷೇಕ್ಸ್‌ಪಿಯರನ ನಾಟಕಗಳ ರೂಪಾಂತರಗಳು. ಷೇಕ್ಸ್‌ಪಿಯರನ ಕೆಲವು ನಾಟಕಗಳು ಮಾಸ್ತಿಯವರಿಂದಲೂ ಅನುವಾದಗೊಂಡಿವೆ. ಕೆ.ಎಸ್.ಭಗವಾನ್ ಅವರಿಂದ ಜೂಲಿಯಸ್ ಸೀಸರ್, ಮ್ಯಾಕ್ಬೆತ್, ಒಥೆಲೋಗಳು ತರ್ಜುಮೆಗೊಂಡಿವೆ. ಬರ್ನಾರ್ಡ್ಷಾನ ಪಿಗ್ಮೇಲಿಯನ್ ಮತ್ತು ಮೇಜರ್ ಬಾರ್ಬರಾಗಳನ್ನು ವಿ.ಸೀ.ಕನ್ನಡಿಸಿದ್ದಾರೆ.

ಗ್ರೀಕ್ ಸಾಹಿತ್ಯದಿಂದ ಅನೇಕ ನಾಟಕಗಳು ಕನ್ನಡಕ್ಕೆ ಬಂದಿವೆ. ಪಾರಸಿಕರು, ಅಂತಿಗೊನೆ, ಏಜಾಕ್ಸ್‌, ದೊರೆ ಈಡಿಪಸ್, ಕಪ್ಪೆಗಳು, ಬದ್ಧಪ್ರಮಿತ್ಯೂಸ್, ಮೀಡಿಯಾ ಇವುಗಳನ್ನು ಕನ್ನಡಕ್ಕೆ ತಂದಿರುವವರು ಬಿ.ಎಂ.ಶ್ರೀ., ಕೆ.ವಿ.ರಾಘವಾಚಾರ್, ಸುಜನಾ, .ವಿ.ವೆಂಕಟಾಚಲಶಾಸ್ತ್ರೀ ಮತ್ತು ಕೆ.ಎಸ್.ನರಸಿಂಹಸ್ವಾಮಿ. ಇಬ್ಸನ್ನನ ಕೆಲವು ನಾಟಕಗಳನ್ನು ಎಸ್.ಜಿ.ಶಾಸ್ತ್ರೀ, ಅಡಿಗ, ಶ್ರೀರಂಗರು ಕನ್ನಡಿಸಿದ್ದಾರೆ. ಮೋಲಿಯರನ ಎರಡು ನಾಟಕಗಳನ್ನು ಎ.ಎನ್.ಮೂರ್ತಿರಾಯರು ಅನುವಾದಿಸಿದ್ದಾರೆ. ಗಯಟೆಯ ಫೌಸ್ಟ್‌ ನಾಟಕದ ಪ್ರಥಮ ಭಾಗ ಪು.ತಿ.ನ.ಅವರಿಂದ ಭಾಷಾಂತರವಾಗಿದೆ. ಪಿ.ಲಂಕೇಶರ ‘ದೊರೆ ಈಡಿಪಸ್ ಮತ್ತು ಅಂತಿಗೊನೆ’ ಇತ್ತೀಚಿನ ಸಮರ್ಥ ಅನುವಾದ ಗ್ರಂಥ. ಷೇಕ್ಸ್‌ಪಿಯರನ ಎ.ಮಿಡ್ಸಮ್ಮರ್ ನೈಟ್ಸ್‌ ಡ್ರೀಮ್ ನಾಟಕವನ್ನು ನಿಸಾರ್ ಅಹಮದ್ ಕನ್ನಡಕ್ಕೆ ಅದೇ ಹೆಸರಿನಲ್ಲಿ ಅನುವಾದಿಸಿದ್ದಾರೆ. ಆಲ್ಬರ್ಟ್ ಕಾಮುವಿನ ಎರಡು ನಾಟಕಗಳನ್ನು (ಕಾಲಿಗುಲ; ತಪ್ಪಿದ ಎಳೆ) ಡಿ.ಎ.ಶಂಕರ್, ಅ.ರಾ.ಮಿತ್ರ ಅನುವಾದಿಸಿದ್ದಾರೆ.

ಹೊಸಗನ್ನಡ ಕವಿತೆ ಭಾಷಾಂತರಗಳಿಂದಲೇ ಮೊದಲಾಯಿತು. 19ನೆಯ ಶತಮಾನದ ಮಧ್ಯಭಾಗದಲ್ಲಿ ಇಂಗ್ಲಿಷ್, ಜರ್ಮನ್ ಮುಂತಾದ ಭಾಷೆಗಳಿಂದ ಕ್ರಿಶ್ಚಿಯನ್ ಮಿಷನರಿಗಳು ಕವಿತೆಗಳನ್ನೂ ಗೀತೆಗಳನ್ನೂ ಅನುವಾದಿಸಿ ಪ್ರಕಟಿಸಿದ್ದರು. ಕಳೆದ ಶತಮಾನದ ಕಡೆಯಲ್ಲಿ ಮತ್ತು ಈ ಶತಮಾನದ ಮೊದಲ ಎರಡು ದಶಕಗಳಲ್ಲಿ ಈ ಅನುವಾದಕಾರ್ಯ ವ್ಯಾಪಕವಾಗಿ ನಡೆಯಿತು. ಈ ಕ್ಷೇತ್ರದಲ್ಲಿ ಹಟ್ಟಿಯಂಗಡಿ ನಾರಾಯಣರಾಯ, ಎಸ್.ಜಿ.ನರಸಿಂಹಾಚಾರ್ಯ, ಜಯರಾಯಾಚಾರ್ಯ, ಪಂಜೆ ಮಂಗೇಶರಾಯ, ಗೋವಿಂದ ಪೈ,

ಬಿ.ಎಂ.ಶ್ರೀಕಂಠಯ್ಯನರು ಮುಖ್ಯರು. 1921ರಲ್ಲಿ ಪ್ರಕಟವಾದ ಶ್ರೀಯವರ ಇಂಗ್ಲಿಷ್ ಗೀತಗಳು ಹೊಸಗನ್ನಡ ಕಾವ್ಯದ ಚರಿತ್ರೆಯಲ್ಲಿ ಒಂದು ಮೈಲುಗಲ್ಲು. ಅದು ಕನ್ನಡ ಕವಿಗಳಿಗೆ ಹೊಸ ಹೊಸ ವಸ್ತುಗಳನ್ನು ತೋರಿಸಿಕೊಟ್ಟಿತಲ್ಲದೆ ಹೊಸ ಲಯಗಳನ್ನು ರೂಪಿಸಿ, ಭಾವಗೀತೆಗಳ ಯುಗಕ್ಕೆ ನಾಂದಿಯಾಯಿತು. ಕುವೆಂಪು ಅವರ ದೇವಕೇತು (ಹೌಂಡ್ ಆಫ್ ಹೆವನ್), ಬೊಮ್ಮನಹಳ್ಳಿಯ ಕಿಂದರಿಜೋಗಿ, ಎಲ್.ಗುಂಡಪ್ಪನವರ ಸೊಹ್ರಾಬ್-ರುಸ್ತುಂ, ಅಡಿಗರ ಹುಲ್ಲಿನ ದಳಗಳು (ಲೀವ್ಸ್‌ ಆಫ್ ಗ್ರಾಸ್) ಇತ್ಯಾದಿ ಅನುವಾದಗಳನ್ನು ಈ ಕ್ಷೇತ್ರದಲ್ಲಿ ಹೆಸರಿಸಬಹುದು. ಇಲಿಯಡ್ ಮತ್ತು ಒಡಿಸ್ಸಿ ಕಾವ್ಯಗಳು ಎಲ್.ಎಸ್.ಶೇಷಗಿರಿರಾವ್ ಹಾಗೂ ಜಿ.ಎ.ರೆಡ್ಡಿಯವರಿಂದ ಗದ್ಯರೂಪದಲ್ಲಿ ಕನ್ನಡಕ್ಕೆ ತರ್ಜುಮೆಗೊಂಡಿವೆ. ಏಟ್ಸ್‌ ಕವಿಯ 50 ಕವನಗಳನ್ನು ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ ಅನುವಾದಿಸಿ ಚಿನ್ನದ ಹಕ್ಕಿ ಎಂಬ ಸಂಕಲನವನ್ನು ತಂದಿದ್ದಾರೆ. ವೆರಿಯರ್ ಎಲ್ವಿನ್ರ ಕೃತಿಯನ್ನು ಕಾಡಿನ ಹಾಡುಗಳು ಎಂಬ ಶೀರ್ಷಿಕೆಯಲ್ಲಿ ಸಿ.ಪಿ.ಕೆ.ಯವರು ಕನ್ನಡಿಸಿದ್ದಾರೆ.

ಸಂಸ್ಕೃತದಿಂದ ಕೆಲವು ಕಾವ್ಯಗಳನ್ನು ಕನ್ನಡಕ್ಕೆ ತರಲಾಗಿದೆ. ಎ.ಆರ್.ಕೃಷ್ಣಶಾಸ್ತ್ರಿಗಳ ವಚನ ಭಾರತ ಹಾಗೂ ಕಥಾಮೃತ ಇವು ಗಣ್ಯವಾದ ಕೃತಿಗಳು. ಶ್ರೀ ಮನ್ಮಹಾಭಾರತ ಸಂಪುಟಗಳು ಸುಬ್ರಹ್ಮಣ್ಯ ಕೌಶಿಕರು ಕನ್ನಡಕ್ಕೆ ತಂದ ಸರಳಾನುವಾದಗಳು.

ಎನ್.ರಂಗನಾಥಶರ್ಮರು. ಶ್ರೀಮದ್ವಾಲ್ಮೀಕಿ ರಾಮಾಯಣಮ್ ಕೃತಿಯನ್ನು ಅನುವಾದಿಸಿದ್ದಾರೆ. ಚುರಮುರಿಯವರಿಂದ ಬಾಣನ ಕಾದಂಬರಿ ಅನುವಾದಗೊಂಡಿದೆ. ಎಸ್.ವಿ.ಪರಮೇಶ್ವರ ಭಟ್ಟರು ಗೀತಗೋವಿಂದ, ಗಾಥಾಸಪ್ತಶತಿ, ಅಮರಶತಕ, ಭರ್ತೃಹರಿಶತಕ, ಬುದ್ಧಚರಿತಗಳನ್ನು ಕನ್ನಡಿಸಿದ್ದಾರೆ. ಅಶ್ವಘೂೕಷನ ಬುದ್ಧಚರಿತೆ ಹಾಗೂ ಸೌಂದರನಂದ ಕೃತಿಗಳನ್ನು ಇತ್ತೀಚೆಗೆ ಎಲ್.ಬಸವರಾಜು ಅವರು ಅನುವಾದಿಸಿದ್ದಾರೆ. ಬೇಂದ್ರೆಯವರ ಮೇಘದೂತದ ಅನುವಾದ ಶ್ಲಾಘ್ಯವಾಗಿದೆ. ಎಂ.ಜಿ.ನಂಜುಂಡಾರಾಧ್ಯರು ಶಿಶುಪಾಲವಧವನ್ನು, ಕಡವ ಶಂಭುಶರ್ಮರು ಸೌಂದರನಂದವನ್ನು, ವೈ.ನಾಗೇಶಶಾಸ್ತ್ರಿಗಳು ರಘುವಂಶವನ್ನು, ಅಮ್ಮೆಂಬಳ ಶಂಕರನಾರಾಯಣರು ಕುಮಾರಸಂಭವವನ್ನು, ಸಿ.ಪಿ.ಕೆ.ಯವರು ಯಶೋಧರಚರಿತೆ, ಸೌಂದರ್ಯ ಲಹರಿಗಳನ್ನು, ಮೇವುಂಡಿ ಮಲ್ಲಾರಿ ಯವರು ಶಿವಾನಂದಲಹರಿಯನ್ನು, ಕೆ.ಕೃಷ್ಣಮೂರ್ತಿ ಅವರು ಕಿರಾತಾರ್ಜುನೀಯದ ಕೆಲವು ಸರ್ಗಗಳನ್ನು ಅನುವಾದಿಸಿದ್ದಾರೆ. ತೀ.ನಂ.ಶ್ರೀ.ಯವರ ಬಿಡಿಮುತ್ತು ಸಂಸ್ಕೃತ ಸುಭಾಷಿತಗಳ ಚೆಲುವಾದ ಭಾಷಾಂತರ.

ಅರಿಸ್ಟಾಟಲ್ ಮತ್ತು ಹೊರೇಸನ ಕಾವ್ಯಮೀಮಾಂಸೆ ಎನ್.ಬಾಲಸುಬ್ರಹ್ಮಣ್ಯಂ ಅವರಿಂದ, ಷೆಲ್ಲಿಯ ಡಿಫೆನ್ಸ್‌ ಆಫ್ ಪೊಯಟ್ರಿ (ಕಾವ್ಯಸಮರ್ಥನೆ) ಸಿ.ಮಹದೇವಪ್ಪನವರಿಂದ ಹಡ್ಸನ್, ಅಬರ್ಕ್ರಾಂಬಿ ಅವರ ಕೃತಿಗಳು ಸಿ.ಪಿ.ಕೆ. ಅವರಿಂದ, ಎಲಿಯಟ್ಟನ ಕೆಲವು ಬರೆಹಗಳು ಆರ್.ನಾಗರಾಜ ಮತ್ತು ಸಿ.ಪಿ.ಕೆ ಅವರಿಂದ ಭಾಷಾಂತರಗೊಂಡಿವೆ. ಪ್ರಮುಖವಾದ ಸಂಸ್ಕೃತ ಅಲಂಕಾರಗ್ರಂಥಗಳನ್ನೆಲ್ಲ ಕೆ.ಕೃಷ್ಣಮೂರ್ತಿಯವರೂ ಧನಂಜಯನ ದಶರೂಪಕವನ್ನು ಕೆ.ವಿ.ಸುಬ್ಬಣ್ಣನವರೂ ಕನ್ನಡಿಸಿದ್ದಾರೆ.

ಕಥೆಕಾದಂಬರಿಗಳ ರಂಗದಲ್ಲಿಯೂ ಕೆಲವು ಭಾಷಾಂತರಗಳಿವೆ. ರೆ.ವೆಗಲ್ ಮಾಡಿದ ಪಿಲ್ಗ್ರಿಮ್ಸ್‌ ಪ್ರೋಗ್ರೆಸ್ ಗ್ರಂಥದ ಭಾಷಾಂತರ ಯಾತ್ರಿಕನ ಸಂಚಾರ ಎಂಬ ಹೆಸರಿನಲ್ಲಿ 1847ರಲ್ಲಿ ಪ್ರಕಟವಾಯಿತು. ಮುದ್ರಾಮಂಜೂಷವನ್ನು ಬಿಟ್ಟರೆ ಸುದೀರ್ಘ ಕಥೆ ಅಥವಾ ಕಾದಂಬರಿಯಾಗಿ ಕನ್ನಡದಲ್ಲಿ ಭಾಷಾಂತರಗೊಂಡಿರುವುದು ಇದೇ ಮೊದಲನೆಯದು. ಬಿ.ವೆಂಕಟಾಚಾರ್ಯರು ಬಂಗಾಲಿಯಿಂದ ಅನುವಾದಿಸಿದ ಮತ್ತು ಗಳಗನಾಥರು ಮರಾಠಿಯಿಂದ ರೂಪಾಂತರಿಸಿದ ಕಾದಂಬರಿಗಳು ಕನ್ನಡ ಕಾದಂಬರಿ ಪ್ರಪಂಚಕ್ಕೆ ತಳಹದಿ ಹಾಕಿದುವು. ದೇವದಾಸಿ ಜೀವನ ಚಿತ್ರಿಸುವ ಮರಾಠಿಯ ಜೋಗವ್ವವನ್ನು ಶಾ.ಮಂ.ಕೃಷ್ಣರಾಯರು ಕನ್ನಡಕ್ಕೆ ತಂದಿದ್ದಾರೆ. ವೆಂಕಟಾಚಾರ್ಯರು ಬಂಕಿಮಚಂದ್ರರನ್ನೂ ಗಳಗನಾಥರು ಹರಿನಾರಾಯಣ ಆಪ್ಟೆಯವರನ್ನೂ ಕನ್ನಡಕ್ಕೆ ತಂದರು. ಈಚೆಗೆ ಇಂಗ್ಲಿಷಿನಿಂದ ಅನೇಕ ಕಥೆಕಾದಂಬರಿಗಳು ಕನ್ನಡಕ್ಕೆ ಬಂದಿವೆ. ವಾಲ್ಟರ್ ಸ್ಕಾಟ್ನ ಕೆನಿಲ್ವರ್ತ್ಅನ್ನು ನಾಗೇಗೌಡರು, ಸ್ಟೀವನ್ಸನ್ನನ ಡಾ.ಜೆಕಿಲ್ ಅಂಡ್ ಮಿ.ಹೈಡನ್ನು ಆನಂದರು (ಪುರುಷಾಮೃಗ), ಚಾರಲ್ಸ್‌ ಡಿಕನ್ಸ್‌ನ ಡೇವಿಡ್ ಕಾಪರ್ಫೀಲ್ಡನ್ನು ಎ.ಪಿ.ಸುಬ್ಬಯ್ಯನವರು, ಜೇನ್ ಆಸ್ಟೆನ್ನಳ ಪ್ರೈಡ್ ಅಂಡ್ ಪ್ರಿಜುಡಿಸ್ ಅನ್ನು ದೇಜಗೌ ಅವರು (ಹಮ್ಮು-ಬಿಮ್ಮು), ಜಾರ್ಜ್ ಎಲಿಯಟ್ಟಳ ಸೈಲಾಸ್ ಮಾರ್ನರನ್ನು ಎಂ.ರಾಮರಾಯರು, ರೈಡರ್ ಹಗಾರ್ಡನಷಿ ಅನ್ನು ಎ.ಮೈಲಾರಿರಾಯರು (ಆಷಾ) ಭಾಷಾಂತರಿಸಿದ್ದಾರೆ. ಥೋರೋನ ವಾಲ್ಡನ್ ದೇವುಡು ನರಸಿಂಹಶಾಸ್ತ್ರಿಗಳಿಂದ, ಹೆಮಿಂಗ್ವೇಯ ಓಲ್ಡ್‌ ಮ್ಯಾನ್ ಅಂಡ್ ದಿ ಸೀ, ಪಂಕಜ ಅವರಿಂದ (ಗೆದ್ದು ಸೋತವನು), ಹಾಥಾರ್ನನ ಹೌಸ್ ಆಫ್ ಸೆವನ್ ಗೇಬಲ್ಸ್‌ ಎಂ.ವಿ.ಸೀತಾರಾಮಯ್ಯನವರಿಂದ (ಏಳು ಇಪ್ಪಾರಿನ ಮನೆ) ಕನ್ನಡಿಸಲ್ಪಟ್ಟಿವೆ. ಥಾಮಸ್ ಹಾರ್ಡಿಯ ಮೇಯರ್ ಆಫ್ ಕ್ಯಾಸ್ಟರ್ಬ್ರಿಡ್ಜನ್ನು ಆನಂದರಾಯರು ಸಂಗ್ರಹಾನುವಾದ ಮಾಡಿದ್ದಾರೆ (ಏರಿಳಿತ). ಇದೇ ಲೇಖಕನ ಎರಡು ಕಾದಂಬರಿಗಳನ್ನು ಗೌರೀಶ ಕಾಯ್ಕಿಣಿ ಅನುವಾದಿಸಿದ್ದಾರೆ. ರಿಟರ್ನ್ ಆಫ್ ದಿ ನೇಟೀವ್ ಮತ್ತು ಟೆಸ್ ಆಫ್ ದ ಡಿ ಅರ್ಬರ್ ವಿಲೆ, ಕಾದಂಬರಿಗಳನ್ನು ವಿ.ನಾಗರಾಜರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಆಲ್ಬರ್ಟ್ ಕಾಮುವಿನ ದಿ ಔಟ್ ಸೈಡರ್ (ಅನ್ಯ) ಡಿ.ಎ.ಶಂಕರ್ ಅವರಿಂದ ಅನುವಾದವಾಗಿದೆ. ಅವರೇ ಮುಲ್ಕ್‌ ರಾಜ್ ಆನಂದರ ಅನ್ಟಚಬಲ್ಸ್‌ ಕೃತಿಯನ್ನು ಅಸ್ಪೃಶ್ಯ ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. ಆರ್.ಕೆ.ನಾರಾಯಣ್, ಮಾಳಗಾಂವಕರ್ ಮೊದಲಾದ ಭಾರತೀಯ ಇಂಗ್ಲಿಷ್ ಲೇಖಕರ ಕೆಲವು ಕಾದಂಬರಿಗಳೂ ಕನ್ನಡಕ್ಕೆ ಬಂದಿವೆ. ಎ.ಎನ್.ಮೂರ್ತಿರಾಯರು ಅನೇಕ ಪಾಶ್ಚಾತ್ಯ ಕಥೆಗಳನ್ನು ಯೋಧನ ಪುನರಾಗಮನ ಮತ್ತು ಪಾಶ್ಚಾತ್ಯ ಸಣ್ಣಕಥೆಗಳು ಎಂಬೆರಡು ಸಂಕಲನಗಳಲ್ಲಿ ಕೊಟ್ಟಿದ್ದಾರೆ. ಸಿ.ಪಿ.ಕೆ. ಅವರ ಹನ್ನೊಂದು ಹೊರಗಿನ ಕತೆಗಳನ್ನೂ ಇಲ್ಲಿ ಹೆಸರಿಸಬಹುದು. ಎರಿಕ್ ಪ್ರಾಮ್ನ ಮನೋವೈಜ್ಞಾನಿಕ ಕೃತಿಯನ್ನು ‘ಪ್ರೀತಿಸುವುದೆಂದರೆ’ ಎಂದು ಕೆ.ವಿ.ನಾರಾಯಣ ಅವರು ಅನುವಾದಿಸಿದ್ದಾರೆ.

ಇತರ ಭಾಷೆಗಳ ಕೆಲವು ಕೃತಿಗಳು ಇಂಗ್ಲಿಷಿನ ಮೂಲಕ ಕನ್ನಡಕ್ಕಿಳಿದಿವೆ. ವಿಕ್ಟರ್ ಹ್ಯೂಗೋವಿನ ಲೆ ಮಿಸರಬಲ್ ಕಾದಂಬರಿಯನ್ನು ಎ.ಪಿ.ಸುಬ್ಬಯ್ಯ ಮತ್ತು ನಾ.ಕಸ್ತೂರಿ ಅನುವಾದಿಸಿದ್ದಾರೆ. ಡ್ಯೂಮಾನ ತ್ರೀ ಮಸ್ಕೆಟೀರ್ಸನ್ನು ಮಾಧವ ಬಾಳಿಗರು, ವಾಲ್ಟೇರನ ಕ್ಯಾಂಡಿಡ್ ಅನ್ನು ಜಿ.ಪಿ.ರಾಜರತ್ನಂ ಭಾಷಾಂತರಿಸಿದ್ದಾರೆ. ಲಿಯೊ ಟಾಲ್ಸ್ಟಾಯ್ ಅವರ ರಷ್ಯನ್ ಕಾದಂಬರಿ ರಿಸರಕ್ಷನ್ ದೇಜಗೌ ಅವರಿಂದ ಪುನರುತ್ಥಾನವಾಗಿ ಕನ್ನಡಕ್ಕೆ ಲಬಿಸಿದೆ. ಅದೇ ಸಾಹಿತಿಯ ವಾರ್ ಅಂಡ್ ಪೀಸ್ ಎಂಬ ಕೃತಿಯನ್ನು ಸಮರ ಮತ್ತು ಶಾಂತಿ ಎಂದು ಅನುವಾದಿಸಿದ ದೇಜಗೌ ಅವರೇ ಅನ್ನ ಕರೇನಿನ ಕೃತಿಯನ್ನು ಕನ್ನಡಕ್ಕೆ ನೀಡಿದ್ದಾರೆ. ಟಾಲ್ಸ್ಟಾಯ್ನ ಕೆಲವು ಕಥೆಗಳನ್ನು ಎಲ್.ಗುಂಡಪ್ಪನವರೂ ಅಲೆಕ್ಸಿ ಟಾಲ್ಸ್ಟಾಯ್ ಅವರ ಆರ್ಡಿಯಲನ್ನು ಆನಂದರೂ ಗಾರ್ಕಿಯ ಆತ್ಮಕಥೆಯನ್ನು ನಿರಂಜನರೂ ಭಾಷಾಂತರಿಸಿದ್ದಾರೆ.

ಗೊರೂರು, ಮ.ಶ್ರೀಧರಮೂರ್ತಿ, ತ.ರಾ.ಸು., ಅನಕೃ ಮೊದಲಾದವರು ರಷ್ಯನ್ ಕೃತಿಗಳನ್ನು ಅನುವಾದಿಸಿಕೊಟ್ಟಿದ್ದಾರೆ. ಬುದ್ದಣ್ಣಹಿಂಗಮಿರೆ ಅವರು ಪುಷ್ಕಿನ್ ಕವಿತೆಗಳು ಎಂಬ ಹೆಸರಿನಲ್ಲಿ 41 ಕವಿತೆಗಳನ್ನು ಅನುವಾದಿಸಿದ್ದಾರೆ. ಶಾ.ಬಾಲೂರಾಯರು ಆ್ಯನ್ನಾ ಆದ್ಮತೋವ ಎಂಬ ಕವಯಿತ್ರಿಯ ನೂರು ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಿ.ಪಿ.ಕೆ. ಅವರು ಟಾಲ್ಸ್ಟಾಯ್ನ ಕಲೆ ಕುರಿತ ಗ್ರಂಥವನ್ನು ಕನ್ನಡಿಸಿದ್ದಾರೆ.

ಎಸ್.ವಿ.ಪರಮೇಶ್ವರ ಭಟ್ಟ, ಎಂ.ರಾಮರಾವ್ ಮತ್ತು ರಾಮಚಂದ್ರಯ್ಯನವರು ಅನೇಕ ಇಂಗ್ಲಿಷ್ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ಲೇಟೋವಿನ ರಿಪಬ್ಲಿಕ್ ಕೆ.ವೆಂಕಟರಾಮಪ್ಪನವರಿಂದ, ಮ್ಯಾಕಿಯವೆಲ್ಲಿಯ ರಾಜನೀತಿ ನವರತ್ನ ರಾಮರಾಯರಿಂದ ಭಾಷಾಂತರಗೊಂಡಿವೆ. ಎಚ್.ಎಲ್.ನಾಗೇಗೌಡರ "ಪ್ರವಾಸಿ ಕಂಡ ಇಂಡಿಯಾ"ದ ಸಂಪುಟಗಳು ಪ್ರವಾಸ ಸಾಹಿತ್ಯದ ಅನುವಾದ. ಲೂಯಿ ಪಿಶರ್, ಲಾರೆನ್ಸ್‌ ಬನ್ಯನ್ ಮೊದಲಾದವರು ಬರೆದ ಜೀವನ ಚರಿತ್ರೆಗಳೂ ಕೆಲವು ಆತ್ಮಕಥೆಗಳೂ ಕನ್ನಡಕ್ಕೆ ಬಂದಿವೆ. ಗಾಂಧೀ, ನೆಹರು, ವಿವೇಕಾನಂದ, ಅರವಿಂದ, ಟಾಗೂರ್, ಕೃಷ್ಣಾ ಹಥೀಸಿಂಗ್, ರಾಜಾಜಿ ಮೊದಲಾದ ಭಾರತೀಯ ಲೇಖಕರ ಸಾಹಿತ್ಯ ಕನ್ನಡದಲ್ಲಿ ಸಿಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮತ್ತು ಗಾಂದೀ ಭವನಗಳು ಹಾಗೂ ಭಾರತೀಯ ವಿದ್ಯಾಭವನ ಕೇಂದ್ರವನ್ನೂ ಮಹಾತ್ಮಗಾಂಧೀಜಿಯವರ ಕೃತಿಗಳನ್ನೂ ಬರೆಹ, ಭಾಷಣಗಳನ್ನೂ ಜೀವನ ಚರಿತ್ರೆಗಳನ್ನೂ ಕನ್ನಡಕ್ಕೆ ಸಮಗ್ರವಾಗಿ ತಂದಿವೆ. ಆನಂದರು ಟಾಲ್ಸ್ಟಾಯ್ನ ಆತ್ಮಕಥೆಯ ಮೂರು ಭಾಗಗಳನ್ನು ಅನುವಾದಿಸಿದ್ದಾರೆ. ನೆಹರು ಅವರ 'ಡಿಸ್ಕವರಿ ಆಫ್ ಇಂಡಿಯಾ' ಭಾರತದರ್ಶನ ಎಂಬ ಹೆಸರಿನಿಂದ ಅನುವಾದಗೊಂಡಿದೆ. ಬಟರ್ರ್‌ಂಡ್ ರಸೆಲ್

ಇಂಪ್ಯಾಕ್ಟ್‌ ಆಫ್ ಸೈನ್ಸ್‌ ಆನ್ ಸೊಸೈಟಿ ಸಮಾಜದ ಮೇಲೆ ವಿಜ್ಞಾನದ ಪ್ರಭಾವ ಎಂಬ ಹೆಸರಿನಿಂದ ಭಾಷಾಂತರಗೊಂಡಿದೆ.

ನೂರಾರು ವಿಜ್ಞಾನ ಗ್ರಂಥಗಳು ಇಂಗ್ಲಿಷ್ ಹಾಗೂ ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡಿವೆ ಎಂದು ಅಂದಾಜಿಸಲಾಗಿದೆ. ಇವನ್ನು ಪಠ್ಯಪುಸ್ತಕಗಳು, ಜನಪ್ರಿಯ ಗ್ರಂಥಗಳು, ಆಕರ ಗ್ರಂಥಗಳು ಎಂದು ಮೂರು ವಿಭಾಗಗಳಾಗಿ ವಿಂಗಡಿಸಬಹುದು. 1969ರ ವರೆಗೂ ಪ್ರಕಟಗೊಂಡಿರುವ ಅನುವಾದ ಗ್ರಂಥಗಳು ಬಹುಪಾಲು ಮೊದಲಿನ ಎರಡು ವಿಭಾಗಗಳಿಗೇ ಸೀಮಿತವಾಗಿವೆ. ಈಗ ಸಿಕ್ಕಿರುವ ಮೊದಲ ಅನುವಾದಿತ ಗ್ರಂಥದ ಹೆಸರು ಅಂಕಗಣಿತವು (ಇಂಗ್ಲಿಷಿನಿಂದ ಅನುವಾದಿಸಿದವರು ಚನ್ನಬಸಪ್ಪಾ ಬಸಲಿಂಗಪ್ಪಾ ಧಾರವಾಡಕರ, 1873). 1969ರಿಂದ ಈಚೆಗೆ ಮುಖ್ಯವಾಗಿ ವಿಶ್ವವಿದ್ಯಾಲಯಗಳ ನೆರವಿನಿಂದ ಆಕರ ಗ್ರಂಥಗಳ ಕನ್ನಡ ಅನುವಾದಗಳು ಬರತೊಡಗಿವೆ. ಕನ್ನಡ ಬೋಧನ ಮಾಧ್ಯಮವಾಗಲು ಈ ಬಗೆಯ ಶಾಸ್ತ್ರಗ್ರಂಥಗಳ ಅನುವಾದ ಅಗತ್ಯವೆನಿಸಿದೆ. ಈ ಕಾರ್ಯ ಬಹು ತ್ವರೆಯಿಂದ ಜರುಗುತ್ತಿದ್ದು ಆಧಾರ ಗ್ರಂಥಗಳೆಲ್ಲವುಗಳ ಅನುವಾದ ನಡೆಯುತ್ತಿದೆ.

ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಲಿ, ಮರಾಠಿ, ಉರ್ದು, ಪಂಜಾಬಿ ಮುಂತಾದ ಭಾರತೀಯ ಭಾಷೆಗಳೂ ಕನ್ನಡಕ್ಕೆ ಕೊಡುಗೆಗಳನ್ನಿತ್ತಿವೆ. ಈ ದಿಶೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್‌ಗಳು ಮಹತ್ತ್ವದ ಪಾತ್ರವಹಿಸಿವೆ. ಹಿಂದಿಯಿಂದ ರಾಮಚರಿತಮಾನಸ, ಆಂಸೂ ಮುಂತಾದ ಕಾವ್ಯಗಳೂ ಪ್ರೇಮಚಂದ್, ಯಶಪಾಲ್, ವೃಂದಾವನಲಾಲವರ್ಮ, ಹಜಾರಿಪ್ರಸಾದ್ದ್ವಿವೇದಿ, ದೇವಕಿನಂದನ ಖತ್ರಿ, ಜಯಶಂಕರ ಪ್ರಸಾದ್, ಮೊದಲಾದವರ ಕಥೆ ಕಾದಂಬರಿ ನಾಟಕ ಪ್ರಬಂಧಗಳೂ ಭಾಷಾಂತರಗೊಂಡಿವೆ.

ದ.ಕೃ.ಭಾರದ್ವಾಜ, ಗುರುನಾಥ ಜೋಶಿ, ಕುಮುದಪ್ರಿಯ, ಎಂ.ಎಸ್.ಕೃಷ್ಣ ಮೂರ್ತಿ, ಮೇ.ರಾಜೇಶ್ವರಯ್ಯ, ಪ್ರಧಾನ್ ಗುರುದತ್ತ, ತಿಪ್ಪೇಸ್ವಾಮಿ ಮೊದಲಾದವರು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಬಂಗಾಲಿಯಿಂದ ಶರಚ್ಚಂದ್ರ, ಟಾಗೂರ್ ಮೊದಲಾದವರ ಕೃತಿಗಳನ್ನು ಅಹೋಬಲ ಶಂಕರ, ಎಚ್.ಕೆ.ವೇದವ್ಯಾಸಾಚಾರ್ಯ, ಶಂಕರಾನಂದ ಸರಸ್ವತಿ, ಎಚ್.ವಿ.ಸಾವಿತ್ರಮ್ಮ ಮೊದಲಾದವರು ಕನ್ನಡಿಸಿದ್ದಾರೆ. ಟಾಗೂರರ ಪ್ರಬಂಧಗಳು ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಯವರಿಂದ ಅನುವಾದಿತ ವಾಗಿವೆ. ತಮಿಳಿನಿಂದ ಮತ್ತೂರು ಕೃಷ್ಣಮೂರ್ತಿ, ಎಲ್.ಗುಂಡಪ್ಪ, ಕೆ.ಸಂಪದ್ಗಿರಿರಾವ್ ಮೊದಲಾದವರೂ ತೆಲುಗಿನಿಂದ ಕೆ.ವೆಂಕಟರಾಮಪ್ಪ, ಕೋ.ಚೆನ್ನಬಸಪ್ಪ, ವೀರಭದ್ರ, ಆರ್.ವಿ.ಎಸ್.ಸುಂದರಂ ಮೊದಲಾದವರೂ ಮಲಯಾಳಂನಿಂದ ನಾ.ಕಸ್ತೂರಿ, ಕರುಣಾಕರನ್, ಬಿ.ಕೆ.ತಿಮ್ಮಪ್ಪ ಮೊದಲಾದವರೂ ಮರಾಠಿಯಿಂದ ಬಾಲಚಂದ್ರ ಘಾಣೇಕರ, ವಿ.ಎಂ.ಇನಾಂದಾರ್, ಸರಸ್ವತಿಗಜಾನನರಿಸಬೂಡ ಶಾ.ಮಂ.ಕೃಷ್ಣರಾಯ, ಮೊದಲಾದವರೂ ಭಾಷಾಂತರಿಸಿದ್ದಾರೆ. ಮರಾಠಿಯ ಯಾದಾತಾರ್ರ 'ಸ್ತ್ರೀ ಪುರುಷ 'ಕೃತಿ ಸರಸ್ವತಿಯವರಿಂದ ಕನ್ನಡೀಕರಣಗೊಂಡಿದೆ. ಪರ್ಷಿಯನ್ ಕವಿ ರೂಮಿಯನ 64 ಕವಿತೆಗಳನ್ನು ಡಿ.ಆರ್.ನಾಗರಾಜ್ 'ವಸಂತಸ್ಮೃತಿ' ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಹಿಂದಿಯ ನಿರ್ಮಲ್ವರ್ಮಾ ಅವರ ಕಾದಂಬರಿ ವೇದಿನ್ ಕನ್ನಡಕ್ಕೆ ಆ ದಿನಗಳು ಎಂಬ ಹೆಸರಿನಲ್ಲಿ ಅನುವಾದಗೊಂಡಿದೆ (ತಿಪ್ಪೇಸ್ವಾಮಿ).

ಸಂಸ್ಕೃತದಿಂದ ವೇದ, ಉಪನಿಷತ್, ಗೀತೆ, ಪುರಾಣ, ರಾಮಾಯಣ, ಭಾರತಾದಿಗಳೂ ಹಲವಾರು ಶಾಸ್ತ್ರಕೃತಿಗಳೂ ಕನ್ನಡಕ್ಕೆ ಬಂದಿವೆ. ಈ ದಿಶೆಯಲ್ಲಿ ಮೈಸೂರು ಅರಮನೆಯಿಂದ ಪ್ರಕಟವಾಗಿರುವ ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲೆಯಲ್ಲಿ 34 ಸಂಪುಟಗಳು ಅನುವಾದಗೊಂಡು ಬೆಳಕು ಕಂಡಿವೆ. ಎಚ್.ಪಿ.ವೆಂಕಟರಾವ್ ಅವರು ಋಗ್ವೇದ ಸಂಹಿತೆ ಸಂಪುಟಗಳನ್ನು ಅನುವಾದಿಸಿದ್ದಾರೆ. ಟಿಳಕರ ಶ್ರೀಮದ್ಭಗವದ್ಗೀತಾ ರಹಸ್ಯ ಕೃತಿಯನ್ನು ವೆಂಕಟೇಶ ಬೀಮರಾವ್ ಆಲೂರ ಮತ್ತು ವಿ.ಎಸ್.ಕೆರೂರು ಅವರು ಅನುವಾದಿಸಿದ್ದಾರೆ. ಭಾಷಾಂತರ ಪ್ರಕಾರ ದಿನೇ ದಿನೇ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಹೊರಗಿನ ಸಾಹಿತ್ಯ ಕೃತಿಗಳನ್ನು ಪರಿಚಯಿಸಿಕೊಳ್ಳಲು ಹಾಗೂ ವಿಜ್ಞಾನ, ಮಾನವಿಕ, ಶಾಸ್ತ್ರಗ್ರಂಥಗಳು ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ತಿಳಿಯಲು ಭಾಷಾಂತರಕ್ಕೆ ಮೊರೆ ಹೋಗಲಾಗುತ್ತಿದೆ. ಇತ್ತೀಚಿನ ಅನುವಾದಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು. ಕೆ.ಎಂ.ಜಾರ್ಜ್ ಸಂಪಾದಿಸಿರುವ ಕಂಪ್ಯಾರಿಟಿವ್ ಇಂಡಿಯನ್ ಲಿಟರೇಚರ್ ಸಂಪುಟಗಳು ಕನ್ನಡಕ್ಕೆ ತರ್ಜುಮೆಗೊಂಡಿವೆ. ಇವನ್ನು ಎಲ್.ಎಸ್.ಶೇಷಗಿರಿ ರಾವ್ ಸಂಪಾದಿಸಿದ್ದು ಭಾರತೀಯ ಸಾಹಿತ್ಯ ಸಮೀಕ್ಷೆ ಎಂಬ ಶೀರ್ಷಿಕೆಯಡಿ ಹೊರತರಲಾಗಿದೆ. ಗ್ರೀಕ್ ಮೂಲದ ಲಾಂಜಿನಸ್ನ ಕೃತಿಯನ್ನು ಔನ್ನತ್ಯ ವಿಚಾರ ಚರ್ಚೆ ಎಂಬ ಶೀರ್ಷಿಕೆಯಲ್ಲಿ ಎನ್.ಬಾಲಸುಬ್ರಹ್ಮಣ್ಯರವರು ಕನ್ನಡಿಸಿದ್ದಾರೆ. ಜಾರ್ಜ್ ಆರ್ವೆಲ್ರ ನೈನ್ಟೀನ್ ಎಯ್ಟಿಫೋರ್ ಎಂಬ ಕಾದಂಬರಿಯನ್ನು ಎಚ್.ಎಚ್.ಅಣ್ಣಯ್ಯ ಗೌಡರು ಕನ್ನಡಕ್ಕೆ ತಂದಿದ್ದಾರೆ (1984).

ಸಂಸ್ಕೃತ ಕೃತಿಗಳು ಮತ್ತೆ ಮತ್ತೆ ಭಾಷಾಂತರಗೊಂಡಿರುವುದನ್ನು ಕಾಣಬಹುದು. ಉದಾಹರಣೆಗೆ ಜಯದೇವ ಕವಿಯ ಗೀತಗೋವಿಂದ ಕೃತಿ ಬಿ.ಶ್ರೀನಿವಾಸಮೂರ್ತಿಯವರಿಂದ ಭಾಷಾಂತರಗೊಂಡಿದೆ. ಬಿ.ಗೋಪಾಲರಾವ್ ಅವರು ಕಾಳಿದಾಸ ಭಾಸಾದಿಗಳ ವಿವಿಧ ಕೃತಿಗಳನ್ನು ಕನ್ನಡಕ್ಕೆ ಮೂಲ ಮತ್ತು ಅರ್ಥವ್ಯಾಖ್ಯೆ ಸಹಿತ ಅನುವಾದಿಸಿ ಪ್ರಕಟಿಸಿದ್ದಾರೆ. ಕಾಳಿದಾಸ ವಿರಚಿತ ಕುಮಾರ ಸಂಭವ ಮಹಾಕಾವ್ಯ (1999) ಅಂತಹವುಗಳಲ್ಲಿ ಒಂದು. ಕಲ್ಹಣನ ರಾಜತರಂಗಿಣಿಯನ್ನು ನಿರ್ಪಾಜೆ ಬೀಮಭಟ್ಟರು ಭಾಷಾಂತರಿಸಿದ್ದಾರೆ (1994).

ಶೇಷ ನವರತ್ನರಿಂದ ನಾಲ್ಕು ವೇದಗಳು "ಎಂಬ ಸಂಪುಟಗಳು ಹೊರಬಂದಿವೆ. ಶ್ರೀಮಧ್ವಾಚಾರ್ಯರ ದ್ವೈತ ವೇದಾಂತ ದರ್ಶನ ಎಂಬ ಶೀರ್ಷಿಕೆಯಲ್ಲಿ ಸುರೇಂದ್ರನಾಥ್ ದಾಸಗುಪ್ತರ ಆಂಗ್ಲ ಕೃತಿಯನ್ನು ಆರ್.ಜಿ.ಕುಲಕರ್ಣಿಯವರು ಕನ್ನಡೀಕರಿಸಿದ್ದಾರೆ.

ಇಂಗ್ಲಿಷೇತರ ಐರೋಪ್ಯ ಸಾಹಿತ್ಯವನ್ನು ಪರಿಚಯಿಸುವ ವಿವಿಧ ಭಾಷಾಂತರ ಗ್ರಂಥಗಳ ಪ್ರಕಟಣೆ ಮುಂದುವರೆದಿದೆ. ಕೆ.ಎಲ್.ಗೋಪಾಲ ಕೃಷ್ಣರಾವ್ರವರು ತೊಲ್ಸ್ತೋಯ್ ನೀಳ್ಗತೆಗಳು ಎಂಬುದರಲ್ಲಿ ರಷ್ಯನ್ ಮಹಾಕವಿ ಟಾಲ್ಸ್ಟಾಯ್ರವರ ಕಥಾಸಾಹಿತ್ಯವನ್ನು ಅನುವಾದಿಸಿದ್ದಾರೆ. ಜಾನ್ ರೀಡ್ರ ಟೆನ್ ಡೇಸ್ ದಟ್ ಷುಕ್ ದ ವಲ್ರ್ಡ್‌ ಎಂಬ ರಷ್ಯದ ಕ್ರಾಂತಿ ಕುರಿತ ಕೃತಿಯನ್ನು ಎಚ್.ಎಸ್.ಹರಿಶಂಕರ ಅವರು ಕನ್ನಡೀಕರಿಸಿದ್ದಾರೆ. ಪ.ವಿ.ಚಂದ್ರಶೇಖರ್ ರಷ್ಯಾದ ಸಣ್ಣ ಕಥೆಗಳು ಎಂಬ ಆಯ್ದ ಕಥೆಗಳ ಸಂಕಲನವನ್ನು ಕನ್ನಡಕ್ಕೆ ತಂದಿದ್ದಾರೆ. ಜರ್ಮನ್ ಮೂಲದ ಜಾರ್ಜ್ ಬುಶ್ಶರ್ರ ಕೃತಿಯನ್ನು ವಾಯ್ಜೆಕ್ ಎಂಬ ಶೀರ್ಷಿಕೆಯಲ್ಲಿ ಕೆ.ವಿ.ಸುಬ್ಬಣ್ಣ ಅನುವಾದಿಸಿದ್ದಾರೆ. (ಸಿ.ಪಿ.ಕೆ.)

ಮರಾಠಿ ಸಾಹಿತ್ಯ ಅನುವಾದಕರ ಗಮನವನ್ನು ಹೆಚ್ಚಾಗಿ ಸೆಳೆದಿದೆ. ದುರ್ಗಾಭಾಗವತರ ವ್ಯಾಸಪರ್ವ ಕೃತಿ ಗೌರೀಶ ಕಾಯ್ಕಿಣಿಯವರಿಂದ ತರ್ಜುಮೆಗೊಂಡಿದೆ. ಅಶೋಕ ಪ್ರಭಾಕರರ ಮರಾಠಿ ಕೃತಿ ಕ್ಷಿತಿಜ ಅಂಕೋಲಾರಿಂದ ಕನ್ನಡಕ್ಕೆ ಲಭ್ಯವಾಗಿದೆ. ರಘುನಾಥ ಬಿಡೆಯವರ ಮರಾಠಿಯ ವಾಲ್ಮೀಕಿ ರಾಮಾಯಣದಲ್ಲಿ ಶಾಪ ಮತ್ತು ವರ (ಅನು. ಸರಸ್ವತಿ ಗಜಾನನ ರಿಸಬೂಡ), ಮಹಾಭಾರತದಲ್ಲಿ ಕುಮಾರ ಸಂಭವ (ಅನು. ವಿರೂಪಾಕ್ಷ ಕುಲಕರ್ಣಿ) ಕನ್ನಡಕ್ಕೆ ಬಂದಿವೆ. ಅಶೋಕ ನೀಲಗಾರರು ಶಿವಾಜಿ ಸಾವಂತರ ಮರಾಠಿ ಕೃತಿ ಮೃತ್ಯುಂಜಯವನ್ನು ಅನುವಾದಿಸಿದ್ದಾರೆ. ನರೇಂದ್ರ ಪಾಲ್ ಸಿಂಘರ ಪಂಜಾಬಿ ಮೂಲದ ಕೃತಿಯನ್ನು ಕತ್ತಲೆಯಿಂದ ಕಗ್ಗತ್ತಲೆಗೆ ಎಂಬ ಶೀರ್ಷಿಕೆಯಲ್ಲಿ ಪಿ.ಶಶಿಕಲಾ ಅನುವಾದಿಸಿದ್ದಾರೆ. ಚಂದ್ರಕಾಂತ ಪೋಕಳೆ ಅವರಿಂದ ಮರಾಠಿಯ ಮಹಾನಂದ ಕಾದಂಬರಿ ಮಾನು ಎಂಬ ಹೆಸರಿನಲ್ಲಿ ಕನ್ನಡೀಕರಣಗೊಂಡಿದೆ. ಅದೇ ಭಾಷೆಯ ಶರಣಕುಮಾರ ಲಿಂಬಾಳೆಯವರ ಕೃತಿಯನ್ನು ಅಕ್ರಮ ಸಂತಾನ ಎಂದು ದು.ನಿಂ.ಬೆಳಗಲಿ ಭಾಷಾಂತರಿಸಿದ್ದಾರೆ. ಮರಾಠಿಯಿಂದ ಲಕ್ಷ್ಮಣಗಾಯಕ್ವಾಡ. ಉಚಲ್ಯಾ ಎಂಬ ಕಾದಂಬರಿಯನ್ನು ಇವರೇ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರೇಮಚಂದರ ನಿರ್ಮಲಾ ಎಂಬ ಕಾದಂಬರಿಯ ಕನ್ನಡ ಅವತರಣಿಕೆಯನ್ನು ತಿಪ್ಪೇಸ್ವಾಮಿಯವರು ತಂದಿದ್ದಾರೆ. ಒರಿಯ ಮೂಲದ ನಿಶ್ಶಬ್ದದಲ್ಲಿ ಕವಿ ಎಂಬ ಸೀತಾಕಾಂತ ಮಹಾಪಾತ್ರರ ಒಂದು ಕೃತಿ ಸಿ.ಪಿ.ಕೆ.ಯವರಿಂದ ಕನ್ನಡಕ್ಕೆ ಬಂದಿದೆ. ಹೀಗೆ ತೆಲುಗು, ತಮಿಳು, ಬಂಗಾಲಿ, ಮರಾಠಿ ಮೊದಲಾದ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಭಾಷಾಂತರ ಕೃತಿಗಳನ್ನು ಹೊರತರುವಲ್ಲಿ ನಿರತವಾಗಿವೆ. ಇದರಿಂದಾಗಿ ಬೇರೆ ಬೇರೆ ಅಧ್ಯಯನ ಶಿಸ್ತುಗಳಲ್ಲಿ ಅನುವಾದ ಕೃತಿಗಳು ಬರುತ್ತಿವೆ. ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಇತಿಹಾಸಗಳಿಗೆ ಪುರಕವಾದ ಗಂಬೀರ ಕೃತಿಗಳೂ ಭಾಷಾಂತರ ಗೊಳ್ಳುತ್ತಿರುವುದನ್ನು ಕಾಣಬಹುದು. ಹಿಂದೂಧರ್ಮವನ್ನು ಕುರಿತ ಗ್ರಂಥಗಳಂತೆಯೇ ಜೈನ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಸಂಬಂಧವಾದ ಕೃತಿಗಳು ಆಯಾ ಧಾರ್ಮಿಕ ಕೇಂದ್ರಗಳಿಂದ ಭಾಷಾಂತರಗೊಳ್ಳುತ್ತಿವೆ. ಬೌದ್ಧ ಸಾಹಿತ್ಯದ ಕೃತಿಗಳು ಬೆಳಕು ಕಾಣುತ್ತಿರುವುದು ಒಂದು ವಿಶೇಷ ವಿದ್ಯಮಾನವಾಗಿದೆ. ಎಚ್.ವಿ.ಶ್ರೀರಂಗರಾಜು ಅವರು ದೀಙ್ಞನಿಕಾಯವನ್ನು ಅನುವಾದಿಸಿದ್ದಾರೆ (1984). ಬಿ.ನಂ.ಚಂದ್ರಯ್ಯನವರ ಬುದ್ಧನ ಜಾತಕ ಕಥೆಗಳು ಈ ಕ್ಷೇತ್ರದಲ್ಲಿ ಉಲ್ಲೇಖಾರ್ಹ ಕೃತಿ. ಕೆ.ಎಸ್.ಭಗವಾನ್ ರವರ ಬುದ್ಧ ಅಥವಾ ಕಾರ್ಲ್ಮಾಕ್ರ್ಸ್‌ ಎಂಬ ಅನುವಾದ ಕೃತಿಯ ಮೂಲ ಲೇಖಕರು ಸ್ವಾಮಿ ಧರ್ಮತೀರ್ಥರು.

ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಯುಗಯಾತ್ರೀ ಭಾರತೀಯ ಸಂಸ್ಕೃತಿ ಎಂಬ ಅನುವಾದ ಸಂಪುಟಗಳು ಕಲ್ಚರಲ್ ಹೆರಿಟೇಜ್ ಆಫ್ ಇಂಡಿಯಾ ಕೃತಿ ಸರಣಿಯ ಅನುವಾದ; ವಿವಿಧ ಲೇಖಕರು ಅನುವಾದ ಮಾಡಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪಿ.ವಿ.ಕಾಣೆಯವರ ಹಿಸ್ಟರಿ ಆಫ್ ಧರ್ಮಶಾಸ್ತ್ರ ಎಂಬ ಕೃತಿಯ ಮೊದಲ ಸಂಪುಟಗಳನ್ನು ಅನುವಾದಿಸಿ ಧರ್ಮಶಾಸ್ತ್ರದ ಇತಿಹಾಸ ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಭಾರತೀಯ ವಿದ್ಯಾಭವನದ ಬೆಂಗಳೂರು ಕೇಂದ್ರ ಅದೇ ಸಂಸ್ಥೆಯ ಹಿಸ್ಟರಿ ಅಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್ ಎಂಬ ಇತಿಹಾಸ ಸರಣಿ ಕೃತಿಗಳ ಅನುವಾದ ಮತ್ತು ಪ್ರಕಟಣೆಯಲ್ಲಿ ತೊಡಗಿಕೊಂಡಿದೆ. ಅದೇ ಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಸಮಗ್ರ ಸಾಹಿತ್ಯದ ಅನುವಾದ ಕಾರ್ಯ ಕೈಗೆತ್ತಿಕೊಂಡಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮತ್ತು ಗಾಂಧೀಭವನಗಳು ಮಹಾತ್ಮರಿಗೆ ಸಂಬಂದಿಸಿದ ಅನೇಕ ಕೃತಿಗಳನ್ನು ಅನುವಾದಿಸಿವೆ. ನೆಹರು, ಅಂಬೇಡ್ಕರ್, ಲಾಲ್ಬಹದ್ದೂರ್ ಶಾಸ್ತ್ರಿ, ಸರ್ವೇಪಲ್ಲಿ ರಾಧಾಕೃಷ್ಣನ್ ಮೊದಲಾದ ರಾಷ್ಟ್ರನಾಯಕರ ಜೀವನ ಚರಿತ್ರೆಗಳು ಅನುವಾದದ ಮೂಲಕ ಕನ್ನಡಿಗರಿಗೆ ಲಭ್ಯವಿವೆ.

ಕನ್ನಡ ಭಾಷಾಂತರಗಳು ಒಂದು ಕಾಲದಲ್ಲಿ ಮುಖ್ಯವಾಗಿ ಕಥೆ, ಕಾದಂಬರಿಗಳ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದುವು. ಅನಂತರದ ದಿನಗಳಲ್ಲಿ ಭಾಷಾಂತರ ಇತರ ಗಂಬೀರ ಸಾಹಿತ್ಯದತ್ತಲೂ ಮುಖ ಮಾಡಿತು. ಮುಖ್ಯವಾಗಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಇಂಥ ಕೆಲಸಕ್ಕೆ ಚಾಲನೆ ನೀಡಿದುವು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವ ಪ್ರತ್ಯೇಕ ಪ್ರಕಟಣಾ ಶಾಖೆಯನ್ನು ಪ್ರಾರಂಬಿಸಿ ಈ ನಿಟ್ಟಿನಲ್ಲಿ ಗಮನ ಹರಿಸಿದೆ. ಹಂಪೆಯ ಕನ್ನಡ ವಿಶ್ವವಿದ್ಯಾನಿಲಯ ಪ್ರತ್ಯೇಕ ಭಾಷಾಂತರ ವಿಭಾಗವನ್ನೇ ಸ್ಥಾಪಿಸಿದೆ. ಅಕಾಡೆಮಿಗಳು, ಪುಸ್ತಕ ಪ್ರಾದಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಅನುವಾದ ಕೃತಿಗಳನ್ನು ಹೊರತಂದಿವೆ. ಕನ್ನಡ ಭಾಷೆಯ ಸತ್ವ ಹೆಚ್ಚಲು ಮತ್ತು ಬೋಧನೆಯಲ್ಲಿ ಅದು ಪರಿಣಾಮಕಾರಿಯಾದ ಮಾಧ್ಯಮವಾಗಲು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಿಂದ ಹಿಡಿದು ವಿವಿಧ ಜ್ಞಾನ ಶಾಖೆಗಳಲ್ಲಿ ಭಾಷಾಂತರ ಕೃತಿಗಳು ಹೊರಬರಬೇಕೆಂದು ನಿರೀಕ್ಷಿಸಲಾಗಿದೆ.

ಇಂದು ಭಾಷಾಂತರ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳಿಂದ ಮಾನ್ಯತೆ ಪಡೆದಿರುವ ಸಾಹಿತ್ಯ ಪ್ರಕಾರವಾಗಿದೆ. ಕನ್ನಡ ಅನುವಾದಕರಲ್ಲಿ ಕೆಲವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ. ಎಸ್.ವಿ.ಪರಮೇಶ್ವರ ಭಟ್ಟ, ಪ್ರಧಾನ ಗುರುದತ್ತ, ತಿಪ್ಪೇಸ್ವಾಮಿ, ಎಚ್.ಎಸ್.ವೆಂಕಟೇಶಮೂರ್ತಿ, ನೀರ್ಪಾಜೆ ಬೀಮಭಟ್ಟ, ಶೇಷನಾರಾಯಣ, ಕೀರ್ತಿನಾಥ ಕುರ್ತಕೋಟಿ, ಬಿ.ಆರ್.ನಾರಾಯಣ, ಹಮೀದ್ ಅಲ್ಮಾಸ್, ಉಮಾ ವಿರೂಪಾಕ್ಷ ಕುಲಕರ್ಣಿ ಮೊದಲಾದವರು ಈ ಪ್ರಶಸ್ತಿಗೆ ಸೇರಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನ್ಯಾಷನಲ್ ಬುಕ್ ಟ್ರಸ್ಟ್‌ ಆಫ್ ಇಂಡಿಯಾ ಈ ಎರಡೂ ಸಂಸ್ಥೆಗಳು ಅನುವಾದ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕಟಣೆಗಳನ್ನು ಕೈಗೊಂಡಿವೆ. ಕೇಂದ್ರ ಸರ್ಕಾರದ ನೆರವಿನಿಂದ ನಡೆಯುತ್ತಿರುವ ಈ ಸಂಸ್ಥೆಗಳು ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ಮತ್ತು ವಿವಿಧ ಭಾಷೆಗಳ ಸಾಹಿತ್ಯವನ್ನು ಪರಸ್ಪರ ಪರಿಚಯಿಸುವುದಕ್ಕಾಗಿ ವಿವಿಧ ಮಾಲಿಕೆಗಳನ್ನು ಪ್ರಾರಂಬಿಸಿ ಲೇಖಕರನ್ನು ಗುರುತಿಸಿ ಅನುವಾದ ಕಾರ್ಯವನ್ನು ಕೈಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ದಕ್ಷಿಣ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿದೆ. ಅದು ವಿವಿಧ ಮಾಲೆಗಳಲ್ಲಿ ಕನ್ನಡ ಅನುವಾದ ಗ್ರಂಥಗಳನ್ನು ಪ್ರಕಟಿಸಿದೆ. ಕಾದಂಬರಿಗಳು, ಕಥಾ ಸಂಕಲನ, ಕಾವ್ಯ, ಜಾನಪದ, ನಾಟಕ, ಭಾರತೀಯ ಸಾಹಿತ್ಯ ನಿರ್ಮಾಣಕಾರರು ಮೊದಲಾದ ಶೀರ್ಷಿಕೆಗಳ ಅಡಿಯಲ್ಲಿ ಕೃತಿಗಳು ಪ್ರಕಟವಾಗಿವೆ.

ಮರಾಠಿಯ ಹರಿನಾರಾಯಣ ಆಪ್ಟೆಯವರ ಯಾರು ಲಕ್ಷಿಸುವರು? ಎಂಬ ಕಾದಂಬರಿ (ಲೀಲಾ ಕಾರಂತ ಮತ್ತು ಶಿವರಾಮ ಕಾರಂತ), ಗುಜರಾತಿಯ ಕುಂದನಿಕಾ ಕಪಾಡಿಯಾ ಅವರ ಗೋಡೆಗಳಿಂದ ಆಚೆ ಆಕಾಶ ಎಂಬ ಕಾದಂಬರಿ (ಎಸ್.ಕೆ.ರಮಾದೇವಮ್ಮ ಮತ್ತು ಲಿಂಗರಾಜು) ಅನುವಾದಗೊಂಡಿವೆ. ಮಲಯಾಳಂ ಮೂಲದ ಪಿ.ಕೆ.ಬಾಲಕೃಷ್ಣನ್ ರಚಿಸಿರುವ ‘ನಾನಿನ್ನು ನಿದ್ರಿಸುವೆ’ ಕೃತಿಯ ಅನುವಾದಕರು ಸಾರಾ ಅಬೂಬಕರ್. ಅಸ್ಸಾಮಿ ಮೂಲದ ಬೀರೇಂದ್ರ ಕುಮಾರ್ ರಚಿಸಿದ ಜನತೆಯ ರಾಜ್ಯ ಎಂಬ ಕಾದಂಬರಿಯನ್ನು ಕೆ.ಪುಟ್ಟರಾಜು ಕನ್ನಡಿಸಿದ್ದಾರೆ.

ಜಾನಕೀರಾಮನ್ರ ತಮಿಳು ಕೃತಿ ಶಕ್ತಿವೈದ್ಯ ಎಂಬ ಕಥಾಸಂಕಲನವನ್ನು ಶೇಷನಾರಾಯಣರು ಕನ್ನಡಕ್ಕೆ ತಂದಿದ್ದಾರೆ. ಒರಿಯಾ ಮೂಲದ ಕಾಣೆಯಾದ ಟೋಪಿಯ ರಹಸ್ಯ ಮತ್ತಿತರ ಕಥೆಗಳು ಎಂಬ ಸಂಕಲನದ ಅನುವಾದಕರು ಎಂ.ಎಸ್.ಕೆ.ಪ್ರಭು. ಇಂಗ್ಲಿಷಿನಲ್ಲಿರುವ ಶಿವ್ ಕೆ.ಕುಮಾರ್ ಅವರ ‘ಕಾವ್ಯ ದೇವರ ಸ್ವಗತ’ ಎಂಬ ಹೆಸರಿನಲ್ಲಿ (ಬಿ.ಸಿ.ರಾಮಚಂದ್ರ ಶರ್ಮ) ಕನ್ನಡಕ್ಕೆ ಬಂದಿದೆ. ಇಂಗ್ಲಿಷ್ನ ವಾಲ್ಟ್‌ವಿಟ್ಮನ್ನ ಕೃತಿಯನ್ನು ಗೋಪಾಲಕೃಷ್ಣ ಅಡಿಗರು ‘ಹುಲ್ಲಿನ ದಳಗಳು’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ರವೀಂದ್ರನಾಥ ಠಾಕೂರರ ‘ನೂರೊಂದು ಕವನ’ ಕೃತಿಯನ್ನು ದ.ರಾ.ಬೇಂದ್ರೆ ಮತ್ತು ನಾರಾಯಣ ಸಂಗಮ ಅನುವಾದಿಸಿದ್ದಾರೆ. ಮರಾಠಿ ಮೂಲದ ಎ.ಆರ್.ದೇಶಪಾಂಡೆ ಯವರ ಕೃತಿ ‘ಭಗ್ನಮೂರ್ತಿ’ ಎಂಬ ಹೆಸರಿನಲ್ಲಿ ದ.ರಾ.ಬೇಂದ್ರೆಯವರಿಂದ ಕನ್ನಡಕ್ಕೆ ಬಂದಿದೆ. ಪಂಜಾಬಿ ಮೂಲದ ಭಾಯಿವೀರ್ ಸಿಂಗ್ರ ಕಾವ್ಯ- ನನ್ನ ಪ್ರಿಯತಮನೇ ಬಾಳು, ಎಂಬ ಕೃತಿ ಎನ್.ಮಾಲತಿಯವರಿಂದ ಅನುವಾದಗೊಂಡಿದೆ.

ಗ್ರೀಕ್, ಇಂಗ್ಲಿಷ್, ಸಂಸ್ಕೃತ ನಾಟಕ ಕೃತಿಗಳೂ ಕನ್ನಡದಲ್ಲಿ ಪ್ರಕಟವಾಗಿವೆ. ಮುದ್ದುಕೃಷ್ಣ ಸಂಪಾದಿಸಿರುವ ‘ತೆಲುಗು ಏಕಾಂಕ ನಾಟಕಗಳು’ ಕೃತಿಯನ್ನು ಲಕ್ಷ್ಮಿ ಜಿ.ಎ.ರೆಡ್ಡಿ ಮತ್ತು ಜಿ.ಎ.ರೆಡ್ಡಿ ಕನ್ನಡಿಸಿದ್ದಾರೆ. ಎ.ಎನ್.ಮೂರ್ತಿ ರಾಯರು ಮೋಲಿಯೇರನ ಎರಡು ನಾಟಕಗಳನ್ನು ಭಾಷಾಂತರಿಸಿದ್ದಾರೆ. ಪ್ರಬಂಧ ಸಾಹಿತ್ಯ ಮತ್ತಿತರ ಪ್ರಕಾರದ ಕೃತಿಗಳ ಅನುವಾದಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ರವೀಂದ್ರನಾಥ ಠಾಕೂರರ ನಿಬಂಧಮಾಲಾ-೧, ಸ್ವಾಮಿ ಶಂಕರಾನಂದ ಸರಸ್ವತಿಯವರಿಂದ ಕನ್ನಡದಲ್ಲಿ ಬೆಳಕು ಕಂಡಿದೆ. ಹಿಂದಿ ಮೂಲದ ಮೋತಿಚಂದ್ರ ವಿರಚಿತ ಸಾರ್ಥವಾಹವನ್ನು ಎಚ್.ಎಸ್.ಪಾಟೀಲರು ಅನುವಾದಿಸಿದ್ದಾರೆ. ಭಾರತೀಯ ಸಾಹಿತ್ಯ ನಿರ್ಮಾಣಕಾರರು ಎಂಬ ಮಾಲಿಕೆಯಲ್ಲಿ ಜಯಶಂಕರ್ ಪ್ರಸಾದ್, ಮಹಾಕವಿ ಉಳ್ಳೂರ್, ಗಾಲಿಬ್, ಈಶ್ವರಚಂದ್ರ ವಿದ್ಯಾಸಾಗರ, ಯಶ್ಪಾಲ್ ಮೊದಲಾದವರ ಬಗೆಗೆ ಬಂದಿರುವ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ.

ನ್ಯಾಷನಲ್ ಬುಕ್ ಟ್ರಸ್ಟ್‌ ಕೂಡ ಭಾರತ ದೇಶ ಮತ್ತು ಜನ ಮಾಲೆ, ತರುಣ ಭಾರತೀ, ಜನಪ್ರಿಯ ವಿಜ್ಞಾನ ಮಾಲೆ, ಅಂತರ ಭಾರತೀಯ ಪುಸ್ತಕಮಾಲೆ, ಜಾನಪದ ಮಾಲೆ, ರಾಷ್ಟ್ರೀಯ ಜೀವನ ಚರಿತ್ರೆ ಮಾಲೆ, ನವಸಾಕ್ಷರತೆ ಸಾಹಿತ್ಯ ಮಾಲೆ, ಸತತ ಶಿಕ್ಷಣ ಪುಸ್ತಕ ಮಾಲೆ, ಏಷ್ಯಾ ಪೆಸಿಪಿsಕ್ ಸಹ ಪ್ರಕಾಶನ, ಭಾರತೀಯ ಸಾಹಿತ್ಯ ನಿದಿ, ಸೃಜನಶೀಲ ಕಲಿಕೆ, ಹೊಸ ಕಾರ್ಯಕ್ಷೇತ್ರ ಮೊದಲಾದ ಮಾಲೆಗಳಲ್ಲಿ ಪ್ರಕಟಣೆಯನ್ನು ಕೈಗೊಂಡಿದ್ದು ಅವುಗಳಲ್ಲಿ ಹೆಚ್ಚಿನವು ಭಾಷಾಂತರಗಳು.

ಸಿ.ಶಿವರಾಮಮೂರ್ತಿಯವರ ಭಾರತೀಯ ಚಿತ್ರಕಲೆ ಎಂಬ ಕೃತಿಯನ್ನು ಪಿ.ಆರ್.ತಿಪ್ಪೇಸ್ವಾಮಿಯವರು ಅನುವಾದಿಸಿದ್ದಾರೆ. ಬಂಗಾಲಿ ರಂಗಭೂಮಿ ಕೃತಿಯ ಅನುವಾದಕರು ಎಚ್.ಕೆ.ರಂಗನಾಥ್. ಮಹಾತ್ಮಾ ಗಾಂದಿsಯವರ ಹಿಂದೂಧರ್ಮ ಎಂದರೇನು ಎಂಬ ಕೃತಿಯ ಅನುವಾದಕರು ಎನ್.ಬಾಲಸುಬ್ರಹ್ಮಣ್ಯ. ಬಸವರಾಜ ಪುರಾಣಿಕರು ಕೆಲವು ಉರ್ದು ಕಥೆಗಳನ್ನು ಕನ್ನಡೀಕರಿಸಿದ್ದಾರೆ. ಪಠಾಣಿ ಪಟ್ನಾಯಕ್ರ ‘ಒರಿಯಾ ಕಥೆಗಳು’ ಎಸ್.ವಿ.ಶ್ರೀನಿವಾಸರಾವ್ರಿಂದ ಅನುವಾದಗೊಂಡಿವೆ. ಎ.ಎಂ.ರಾವಲ್ರ ಗುಜರಾತಿ ‘ಏಕಾಂಕಗಳು’ ಪ್ರೇಮಾಕಾರಂತರಿಂದ ಅನುವಾದಗೊಂಡಿದೆ. ಎಂ.ಟಿ.ವಾಸುದೇವನ್ ನಾಯರ್ರ ಮಲಯಾಳಂ ಕೃತಿ ‘ಚೌಕಟ್ಟಿನ ಮನೆ’ ಬಿ.ಕೆ.ತಿಮ್ಮಪ್ಪನವರಿಂದ ಅನುವಾದವಾಗಿದೆ. ಹರಭಜನ್ಸಿಂಗ್ರ ಪಂಜಾಬಿ ಕಥೆಗಳು ಎಂಬ ಕೃತಿಯನ್ನು ಗೌರೀಶ ಕಾಯ್ಕಿಣಿಯವರು ಕನ್ನಡಿಸಿದ್ದಾರೆ.

ಚಂದ್ರಗುಪ್ತ ವಿದ್ಯಾಲಂಕಾರರ ಹಿಂದಿ ಏಕಾಂಕ ಕೃತಿ ಎಸ್.ಬಿ.ಕೊಡದರಿಂದ ಅನುವಾದಗೊಂಡಿದೆ. ಆರ್.ಕೆ.ನಾರಾಯಣ್ರ ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಎಂಬ ಕೃತಿಯನ್ನು ಎಚ್.ವೈ.ಶಾರದಾಪ್ರಸಾದ್ ಕನ್ನಡಿಸಿದ್ದಾರೆ. ವಿವಿಧ ಲೇಖಕರ ಹದಿಮೂರು ಶ್ರೇಷ್ಠ ಕಥೆಗಳು ಎಂಬ ಕೃತಿಯನ್ನು ಎಲ್.ಎಸ್.ಶೇಷಗಿರಿರಾವ್ ಅನುವಾದಿಸಿದ್ದಾರೆ. ಏಷ್ಯಾದ ಆಯ್ದ ಕಥೆಗಳು ಎಂಬ ಕೃತಿಯನ್ನು ಎಸ್.ಕೆ.ರಮಾದೇವಮ್ಮ ಕನ್ನಡೀಕರಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿಯೂ ಅನೇಕ ಅನುವಾದ ಕೃತಿಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಬಿ.ರಾಮರಾಜರ ‘ಆಂಧ್ರ ಜಾನಪದ’ (ಆರ್ವಿಯಸ್ ಸುಂದರಂ), ಡಿ.ಆರ್.ಅಹುಜ ‘ರಾಜಾಸ್ಥಾನದ ಜಾನಪದ’ (ಸಿ.ಪಿ.ಕೃಷ್ಣ ಕುಮಾರ್) ಅನುವಾದಗೊಂಡಿವೆ. ಶಾಂತಾ ರಂಗಾಚಾರಿಯವರ ‘ಎಲ್ಲಾ ಕಾಲಕ್ಕೂ ಬರುವ ಕಥೆಗಳು’, ಎಂಬುದನ್ನು ಕೆ.ವಿ.ಸುಬ್ಬಣ್ಣ ಅನುವಾದಿಸಿದ್ದಾರೆ. ಮನೋಜ್ದಾಸ್ರ, ‘ಸಾರ್ವಕಾಲಿಕ ಪುಸ್ತಕಗಳು’ ಎಂ.ಗೋಪಾಲಕೃಷ್ಣ ಅಡಿಗರಿಂದ ಅನುವಾದಗೊಂಡಿದೆ. ಲೀಲಾವತಿ ಭಾಗವತ್ರ ‘ಸ್ವರ್ಗಕ್ಕೆ ಸವಾರಿ ಮತ್ತು ಇತರ ಕಥೆಗಳು’ ಎಂಬ ಕೃತಿಯನ್ನು ಯು.ಆರ್.ಅನಂತಮೂರ್ತಿ ಕನ್ನಡಿಸಿದ್ದಾರೆ. ಲೀಲಾ ಜಾರ್ಜ್ರ ‘ಸತ್ಯಶೋಧನೆ’ ಜಿ.ಆರ್.ರಂಗಸ್ವಾಮಯ್ಯನವರಿಂದ ಅನುವಾದಗೊಂಡಿದೆ. ಅನುವಾದ ಆಧುನಿಕ ಕಾಲದಲ್ಲಿ ಹೆಚ್ಚು ಹೆಚ್ಚು ಮಹತ್ವ ಪಡೆದುಕೊಂಡಿದ್ದು ಅದು ಸೃಜನಾತ್ಮಕ ಪ್ರಕಾರವನ್ನಷ್ಟೇ ಅಲ್ಲದೆ ಜ್ಞಾನದ ಎಲ್ಲ ಶಾಖೆಗಳನ್ನೂ ವ್ಯಾಪಿಸಿದೆ. *