ವಿಷಯಕ್ಕೆ ಹೋಗು

ಅಂಗಗುಣವುಂಟೇ ಲಿಂಗವನೊಳಕೊಂಡ ನಿರಂಗ

ವಿಕಿಸೋರ್ಸ್ದಿಂದ


ಲೇಖಕರು: Tomtada Siddalingeshwara ShivaYogigaLu
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಂಗಗುಣವುಂಟೇ ಲಿಂಗವನೊಳಕೊಂಡ ನಿರಂಗ ಸಂಗಿಗೆ? ಆತ್ಮಗುಣವುಂಟೇ ಪರಮಾತ್ಮಲಿಂಗ ಸಂಬಂಧಿಗೆ? ಅಹಂಭಾವವುಂಟೇ ತಾನೆಂಬ ಭಾವವಳಿದು ದಾಸೋಹಂ ದಾಸೋಹಂ ಎಂಬ ನಿರ್ಮಲ ನಿರಾವರಣಂಗೆ? ಸಂದೇಹಾವರಣ ಎಂದೂ ಇಲ್ಲ ನೋಡಾ. ತಾನೆಂದೆಂದೂ ಇಂದುಧರನಂಗದಲ್ಲಿ ಉದಯವಾಗಿ ಬಂದನಾಗಿ
ಹುಟ್ಟಿದ ಬಟ್ಟೆಯ ಮೆಟ್ಟಿ ನಡೆದು ಹುಟ್ಟಿದಲ್ಲಿಯೆ ಹೊಂದುವಾತನೆ ಮಾಹೇಶ್ವರನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.