ಅಂಗದ ಮೇಲಿಹ ಲಿಂಗಕ್ಕರ್ಪಿಸಿದಲ್ಲದೆ ಕೊಳಲಾಗದು. ಅಂಗೈಯಲ್ಲಿ ಹಿಡಿದು ಅರ್ಪಿಸಿಹೆನೆಂದಡೆ ಅರ್ಪಿತವಾಗದು. ಇನ್ನು ಅರ್ಪಿಸುವ ಪರಿ ಎಂತೆಂದಡೆ : ನಾಸಿಕದಲ್ಲಿ ಗಂಧ ಅರ್ಪಿತ
ಜಿಹ್ವೆಯಲ್ಲಿ ರುಚಿ ಅರ್ಪಿತ
ನೇತ್ರದಲ್ಲಿ ರೂಪು ಅರ್ಪಿತ
ತ್ವಕ್ಕಿನಲ್ಲಿ ಸ್ಪರ್ಶನ ಅರ್ಪಿತ
ಶೋತ್ರದಲ್ಲಿ ಶಬ್ದ ಅರ್ಪಿತ
ಹೃದಯದಲ್ಲಿ ಪರಿಣಾಮ ಅರ್ಪಿತ. ಇದನರಿದು ಭೋಗಿಸಬಲ್ಲಡೆ ಪ್ರಸಾದ. ಈ ಕ್ರಮವನರಿಯದೆ ಕೊಂಡ ಪ್ರಸಾದವೆಲ್ಲವು ಅನರ್ಪಿತ. ನುಂಗಿದ ಉಗುಳೆಲ್ಲವು ಕಿಲ್ಬಿಷ
ಕೂಡಲಚೆನ್ನಸಂಗಮದೇವಾ.