Library-logo-blue-outline.png
View-refresh.svg
Transclusion_Status_Detection_Tool

ಅಂಡಜ ಉದ್ಬಿಜ ಇಪ್ಪತ್ತೊಂದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅಂಡಜ ಇಪ್ಪತ್ತೊಂದು ಲಕ್ಷ
ಪಿಂಡಜ ಇಪ್ಪತ್ತೊಂದು ಲಕ್ಷ
ಉದ್ಬಿಜ ಇಪ್ಪತ್ತೊಂದು ಲಕ್ಷ
ಜರಾಯುಜ ಇಪ್ಪತ್ತೊಂದು ಲಕ್ಷ
ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ ಅನೇಕ ದುಃಖವಂತಿರಲಿ. ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ : ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ
ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ ಅವಯವಂಗಳು ಬಲಿದು ಪಿಂಡವರ್ಧನವಾಗಿ
ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ
ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು ಮುಚ್ಚಿದ ಕಣ್ಣು
ಮುಗಿದ ಬಾಯಾಗಿ
ಕುಕ್ಕುಟಾಸನದಲ್ಲಿ ಕುಳ್ಳಿರ್ದು
ಕಡಿವ ಜಂತುಜಂಗುಳಿಯ ಬಾಧೆ
ಸುಡುವ ಜಠರಾಗ್ನಿಯ ಬಾಧೆ
ಎಡದಲ್ಲಿ ಮೂತ್ರದ ತಡಿಕೆಯ ಬಾಧೆ
ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ
ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ ದಿನದಿನಕ್ಕೆ ದುಃಖಮಂಬಡುತಿರ್ದು
ಆ ಮೇಲೆ ಜಾತಿಸ್ಮರತ್ವ ಉದಯವಾಗಿ
ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ ಅರಹು ಮರಹುಗಳನಾರೈದು ನೋಡಿ
ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ
ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ ಸರ್ವರಿಗೆ ಪರಮೇಶ್ವರನೇ ಕರ್ತನು
ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು
ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು
ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ ದಿಗ್‍ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು ಗಿರ್ರನೆ ತಿರುಗಿ ತಲೆಕೆಳಗಾಗಿ ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ
ಬಚ್ಚಲಹುಳುವಿನಂದದಿ ಯೋನಿಯೆಂಬ ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು ಪಿಂದಣ ಜಾತಿಸ್ಮರತ್ವ ಕೆಟ್ಟು
ಮತಿ ಮಸುಳಿಸಿ
ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ ಬಾಲಲೀಲೆಯ ಸುಖದುಃಖಂಗಳನನುಭವಿಸಿ
ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ
ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ ಮದಮತ್ಸರಂಗಳಲ್ಲಿ ಮುಂದುಗೆಟ್ಟು ನಾನಾ ವ್ಯಾಪಾರವನಂಗೀಕರಿಸಿ ಬಂದ ಯೋನಿಯೆಂದರಿಯದೆ
ಉಂಡ ಮೊಲೆಯೆಂದರಿಯದೆ
ಕಾಮವಿಕಾರ ತಲೆಗೇರಿ ವಿಷಯಾತುರನಾಗಿ
ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ
ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ
ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ
ಆದ್ಥಿ ವ್ಯಾದ್ಥಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು
ಎದೆ ಗೂಡುಗಟ್ಟಿ
ಬೆನ್ನು ಬಾಗಿ
ಕಣ್ಣು ಒಳನಟ್ಟು
ಶರೀರ ಎಳತಾಟಗೊಂಡು
ಕಾಲಮೇಲೆ ಕೈಯನೂರಿ ಕೋಲವಿಡಿದು ಏಳುತ್ತ
ನಾನಾ ತೆರದ ದುಃಖಧಾವತಿಯಿಂದೆ ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ. ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.