ವಿಷಯಕ್ಕೆ ಹೋಗು

ಅಜಿತ ಕುಮಾರ

ವಿಕಿಸೋರ್ಸ್ದಿಂದ

ಚಾರ್ಲ್ಸ್ ಕಿಂಗ್‌ಸ್ಲೆ91002ಅಜಿತ ಕುಮಾರ1917ಕೆ. ಬಿ. ರಾಮಕೃಷ್ಣ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).


ಅಜಿತ ಕುಮಾರ.



ಮ೦ಗಳೂರು


ಗಣಪತಿ ಸೆಕೆಂಡರಿ ಶಾಲೆಯ ಉಪಾಧ್ಯಾಯ


ಕೆ. ಬಿ. ರಾಮಕೃಷ್ಣ


ಇವರಿಂದ ಬರೆಯಲ್ಪಟ್ಟಿದು.



ಮಂಗಳೂರು ಶಾರದಾ ಮುದ್ರಣಾಲಯದಲ್ಲಿ ಮುದ್ರಿಸಿ


ಪ್ರಕಟಿಸಲ್ಪಟ್ಟಿತು.


1917.
All rights reserved:


ಪೀಠಿಕೆ

[ಸಂಪಾದಿಸಿ]

ಈ ದೇಶದಲ್ಲಿಯ ಮಹಾಭಾರತ, ರಾಮಾಯಣ ಗ್ರಂಥಗಳಂತೆಯೇ ಇಲಿಯಡ್, ಮತ್ತು ಒಡೆಸ್ಸಿ ಎಂಬೀ ಕಥೆಗಳು ಬಹು ಪುರಾತನ ಕಾಲ ದಿಂದಲೂ ಪ್ರಸಿದ್ದವಾಗಿದ್ದ ಗ್ರೀಸ್ ದೇಶದ ಗ್ರಂಥಗಳ, ಕರ್ಣಾರ್ಜುನರು, ಭೀಷ್ಮ ದ್ರೋಣರು, ಭೀಮ ದುರ್ಯೋದನರು ಎಂಬ ವೀರರಂತೆ ಗ್ರೀಸ್ ದೇಶದ ಗ್ರಂಥಗಳಲ್ಲಿಯೂ ಹೆಸರು ಪಡೆದ ವೀರರಿದ್ದರು. ಚಾರ್ಲ್ಸ್ ಕಿಂಗ್‌ಸ್ಲೆ ಎಂಬ ಇಂಗ್ಲಿಷ್ ಗ್ರಂಥಕಾರನು ಆ ಗ್ರೀಕ್ ವೀರರನ್ನು ಕುರಿತು ಕೆಲವು ಕಥೆಗಳನ್ನು ತನ್ನ ಮಕ್ಕಳಿಗಾಗಿಯೇ ಬರೆದಿದ್ದರೂ, ಈಗ ಈ ಕಥೆ ಗಳನ್ನು ಓದಿ ಸಂತೋಷಗೊಳ್ಳದ ಇಂಗ್ಲಿಷ್ ಹುಡುಗನು ಇಲ್ಲ ; ಕಥೆಗಳು ಮಕ್ಕಳಿಗೆ ಅಷ್ಟು ಮನೋರಂಜಕವಾಗಿವೆ.

ಚಾರ್ಲ್ಸ್ ಕಿಂಗ್‌ಸ್ಲೆ ಬರೆದ "ಹೀರೊಸ್" ಎಂಬ ಪುಸ್ತಕದೊಳಗಿನ ಒಂದು ಕಥೆಯನ್ನು ಕನ್ನಡಿಸಿ "ಅಜಿತಕುಮಾರ" ಎಂಬ ಹೆಸರಿನಿಂದ ಈ ಪುಸ್ತಕವನ್ನು ಪ್ರಕಾಶಪಡಿಸಿರುತ್ತೇನೆ ಗ್ರೀಕ್ ಹೆಸರುಗಳ ಬದಲಾಗಿ ಕನ್ನಡ ಹೆಸರುಗಳನ್ನು ಇದರಲ್ಲಿ ಇಟ್ಟಿರುತ್ತೇನೆ. ನಮ್ಮಲ್ಲಿಯ ವಿದ್ಯಾರ್ಥಿಗಳ ತಲೆ ಮೀರಬಹುದಾದ ವಿಷಯಗಳನ್ನು ಬಿಟ್ಟಿರುತ್ತೇನೆ, ಮೂಲಗ್ರಂಥದ ಸ್ವಾರಸ್ಯವನ್ನು ಕನ್ನಡದಲ್ಲಿ ತರುವುದಕ್ಕೆ ಆದಷ್ಟು ಪ್ರಯತ್ನಪಟ್ಟಿರುತ್ತೇನೆ. ಈ ಪ್ರಯತ್ನವು ಸಫಲವಾದರೆ, ಇಂಗ್ಲಿಷ್ ಪುಸ್ತಕದೊಳಗಿನ ಉಳಿದ ಕಥೆಗಳನ್ನು ಕನ್ನಡಿಸುವ ಹಾದಿ ನೋಡುವೆನು.

ಮಂಗಳೂರು,
ಸಿಂಗಳ ಸಂ.ರದ ಚೈ.ಶು ೫ಯು
ಕೆ.ಬಿ.ರಾಮಕೃಷ್ಣ.

ಅಜಿತ ಕುಮಾರ.

I
ಹಾಸುಗಲ್ಲ ಬುಡದ ನಿಕ್ಷೇಪ.


ಬಹುಕಾಲದ ಹಿಂದೆ ಕಿಂಪುರುಷವೆಂಬ ಖಂಡದಲ್ಲಿ ತಾರಾಂಗಣವೆಂಬ ಒಂದು ದೇಶವಿತ್ತು. ಅಲ್ಲಿ ಒಬ್ಬ ಧರ್ಮಿಷ್ಟನಾದ ದೊರೆ ಇದ್ದನು. ಈಗ ಎಷ್ಟೋ ವರುಷಗಳಾಗಿ ಹೋದುದರಿಂದ ಆತನ ಹೆಸರನ್ನು ಯಾರೂ ಅರಿಯರು ; ಆದರೆ ಆತನ ಪುತ್ರಿಯ ಹೆಸರು ವೇತ್ರವತಿ, ಆಕೆಗೆ ಸೋದರಿಕೆಯಲ್ಲಿಯೆ ಮದುವೆಯಾಗಿತ್ತು. ವಿವಾಹವಾದ ಎರಡು ವರುಷಗಳ ಮೇಲೆ ಒಂದು ಗಂಡು ಮಗು ಹುಟ್ಟಿತು. ಆ ಮಗುವಿಗೆ ಅಜಿತಕುಮಾರನೆಂಬ ಹೆಸರನ್ನು ಇಟ್ಟರು.

ಹುಡುಗನಿಗೆ ಮೂರು ವರುಷವಾಗುವಾಗ ತಂದೆಯಾದ ತಾರಾಪತಿಯು ವೀರರಾದ ಕೆಲ ಸಂಗಾತಿಗಳೊಡನೆ ಕೂಡಿಕೊಂಡು, ದಿಗ್ವಿಜಯಕ್ಕೋಸ್ಕರ ದೂರದೇಶಗಳಿಗೆ ಹೊರಟು ಹೋಗಿ, ಮಹಾಪರಾಕ್ರಮಿಯೆಂದು ಕೀರ್ತಿ ಪಡೆದನು. ಆಗ ಅನೇಕ ರಾಜರು ಆತನಿಗೆ ಹೆಣ್ಣು ಕೊಡುವುದಕ್ಕೆ ನಾನು ಮುಂದೆ ತಾನು ಮುಂದೆ ಎಂದು ಬರುತಿದ್ದರು. ಕೊನೆಗೆ ಆತನು ಯವನ ದೇಶದ ದೊರೆಯ ಮಗಳಾದ ಮಾಧವಿ ಎಂಬವಳ ಚೆಲು ವಿಗೆ ಸೋತುಹೋಗಿ, ಆಕೆಯನ್ನು ವರಿಸಿ, ಮನೆಯಳಿಯನಾಗಿ ಅಲ್ಲಿಯೆ ಸುಖವಾಗಿದ್ದನು. ಹೀಗಿದ್ದು ದರಿಂದ ಆತನಿಗೆ ಕೆಲವು ವರ್ಷಗಳಲ್ಲಿ ತನ್ನ ಮೊದಲನೆಯ ಹೆಂಡತಿಯಾದ ನೇತ್ರವತಿಯ ಹೆಸರೇ ಮರೆತುಹೋಯಿತು. ಅದರಲ್ಲಿಯೂ ಆ ಕಿರಿಯ ಹೆಂಡತಿಯು ತನ್ನ ಮುದ್ದು ಮಾಯಗಳಿಂದ ಆತನನ್ನು ತೀರ ಮಂಕುಮಾಡಿ, ಯವನ ದೇಶದಲ್ಲಿಯೇ ಕಾಲ ಕಳೆಯುವಂತೆ ಮಾಡಿಬಿಟ್ಟಳು.

ಇತ್ತ ನೇತ್ರವತಿಗೆ ತನ್ನ ಗಂಡನದೊಂದೆ ಚಿಂತೆ. ಅದನ್ನು ನಿವಾರಿಸುವುದಕ್ಕಾಗಿ ಅವಳು ಮಗನನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಳ್ಳುತಿದ್ದಳು. ಮಗನ ಮುಖವನ್ನು ನೋಡಿದಳೆಂದರೆ, ಅವಳ ವ್ಯಥೆಯು ಕೊಂಚ ಕಡಮೆಯಾಗುತಿತ್ತು, ಆ ಬಾಲಕನಂತೂ ತುಂಬ ಧೈರ್ಯಶಾಲಿ; ತಾರಾಂಗಣದಲ್ಲೆಲ್ಲ ಆತನಷ್ಟು ಸಾಹಸಿಗಳಾದ ಹುಡುಗರು ಮತ್ತಾರೂ ಇರಲಿಲ್ಲ. ಅಜಿತಕುಮಾರನೆಂಬ ಹೆಸರು ಆತನಿಗೆ ಅನ್ವರ್ಥವಾಗಿತ್ತು.

ಆಗಿನ ಕಾಲದ ಜನರಲ್ಲಿ ಸಮುದ್ರರಾಜನಾದ ವರುಣನ ಪೂಜೆಯುವಾಡಿಕೆಯಾಗಿತ್ತು, ದೇವಾಲಯಗಳನ್ನು ಕಟ್ಟಿಸಿ ವಿಗ್ರಹಗಳನ್ನು ಸ್ಥಾಪನೆ ಮಾಡುತಿದ್ದರು, ತಾರಾಂಗಣದಲ್ಲಿ ಕೂಡ ವರುಣದೇವತೆಯ ದೇವ ಸ್ಥಾನವಿತ್ತು, ನೇತ್ರವತಿಯು ದಿನಾಲು ಈ ದೇವಸ್ಥಾನಕ್ಕೆ ಹೋಗುವಳು ; ಅಲ್ಲಿ ಕುಳಿತುಕೊಂಡು ಇದಿರಿಗಿದ್ದ ಕಡಲನ್ನೂ ಅದರ ಆಚೆ ದೂರದಲ್ಲಿದ್ದ ನಾಡನ್ನೂ ಬೆಟ್ಟಗಳ ಕೋಡುಗಳನ್ನೂ ನೋಡುವಳು; ಹೀಗೆ ಅವಳು ಕಾಲ ಕಳೆಯುವಳು.

ಅಜಿತಕುಮಾರನಿಗೆ ಹದಿನೈದು ವರುಷ ತುಂಬುತ್ತಲೇ ಒಂದು ದಿನ ನೇತ್ರವತಿಯು ಆತನನ್ನು ಆ ವರುಣ ದೇವಸ್ಥಾನಕ್ಕೆ ಕರೆದುಕೊಂಡು ಹೋದಳು, ಅಂಗಳದಲ್ಲಿ ಒಂದು ಅರಳಿ ಮರವಿತ್ತು. ಅದರ ಸುತ್ತಲು ಪೊದೆ ಪೊದರುಗಳು ಎತ್ತರವಾಗಿ ಬೆಳೆದಿದ್ದುವು, ನೇತ್ರವತಿಯು ಮಗನನ್ನು ಈ ಪೊದೆಗಳ ನಡುವೆ ಕರೆದುಕೊಂಡು ಹೋಗಿ, ನಿಟ್ಟುಸಿರು ಬಿಟ್ಟು–– "ಮಗು, ಅಜಿತ ! ಆ ಮರದ ಬುಡಕ್ಕೆ ಹೋಗು; ಅಲ್ಲಿ ಒಂದು ಹಾಸುಗಲ್ಲಿದೆ. ಅದನ್ನೆತ್ತಿ ಅದರ ಬುಡದಲ್ಲಿ ಇದ್ದುದನ್ನು ತೆಗೆದುಕೊಂಡು ಬಾ,” ಎಂದು ಹೇಳಿದಳು.

ತತ್‌ಕ್ಷಣವೇ ಅಜಿತನು ಚಿಕ್ಕ ಚಿಕ್ಕ ಗಿಡಗಳನ್ನು ಅತ್ತಿತ್ತ ತಳ್ಳುತ್ತ ಮುಂದುವರಿಸಿ, ಆ ಮರದ ಬುಡವನ್ನು ಸೇರಿದನು. ತಾಯಿಯು ಹೇಳಿದಂತೆ, ನಿಜವಾಗಿ ಅಲ್ಲಿಯೊಂದು ದೊಡ್ಡ ಹಾಸುಗಲ್ಲು ಇತ್ತು, ಎಷ್ಟೋ ವರುಷಗಳಿಂದ ಅದನ್ನು ಯಾರೂ ಅಲುಗಾಡಿಸಿದಂತೆ ಕಾಣಿಸಲಿಲ್ಲ. ಮರದ ಬೇರುಗಳು ಅದನ್ನು ಆವರಿಸಿಕೊಂಡಿದ್ದುವು ; ಮೇಲ್ಗಡೆ ಪಾಚಿ ಬೆಳೆದಿತ್ತು.

ಇದನ್ನು ಕಂಡೊಡನೆ ಅಜಿತನು ಸಂತೋಷದಿಂದ ಅದನ್ನು ಎತ್ತುವುದ ಕ್ಕೆಂದು ಕೈ ನೀಡಿದನು; ಚೆನ್ನಾಗಿ ಬಲದಿಂದ ಕುಲುಕಿದನು; ಅವನ ಮೈಯೆಲ್ಲವೂ ಬೆವರಿನಿಂದ ತೊಯಿದು ಹೋಯಿತು, ಆದರೂ ಆ ಕಲ್ಲು ಎಳ್ಳಿನಷ್ಟು ಅಲುಗಾಡಲಿಲ್ಲ, ಕೊನೆಗೆ ಆತನು ನಿರಾಶೆಯಿಂದ ತಾಯಿಯ ಬಳಿಗೆ ಬಂದು, "ಅಮ್ಮಾ, ಕಲ್ಲನ್ನು ಕಂಡೆನು. ಅದನ್ನು ಎತ್ತುವುದಕ್ಕೆ ಸಾಧ್ಯವಿಲ್ಲ, ನಾನು ಬಿಡು, ಈ ತಾರಾಂಗಣದವರು ಯಾರೂ ಎತ್ತಲಾರರು ಎಂದು ಎಣಿಸುತ್ತೇನೆ !” ಎಂದು ಹೇಳಿದನು.

ಇದನ್ನು ಕೇಳಿ ನೇತ್ರವತಿಯು ವ್ಯಸನದಿಂದ, “ ಇರಲಿ, ಚಿಂತೆ ಇಲ್ಲ ! ದೇವತೆಗಳು ತುಂಬ ಸಹನೆಯುಳ್ಳವರು. ಇದು ಆಗುವ ಸಮಯಕ್ಕೇನೆ ಆಗುವುದು, ಇನ್ನು ಬರುವ ವರುಷ ನೋಡೋಣ. ಈ ದೇಶದಲ್ಲಿ ಎಲ್ಲರಿಗಿಂತಲೂ ನೀನೆ ಬಲಿಷ್ಠನಾಗುವ ಕಾಲ ಬಂದೀತು !” ಎಂದು ಹೇಳಿ, ಅಜಿತನ ಕೈಯನ್ನು ಹಿಡಿದುಕೊಂಡು, ದೇವಸ್ಥಾನಕ್ಕೆ ಹೋಗಿ, ವರುಣನನ್ನು ಪ್ರಾರ್ಥಿಸಿ, ಮಗನೊಡನೆ ಮನೆಗೆ ಹೋದಳು.

ಒಂದು ವರುಷ ಕಾಲವಾದ ಮೇಲೆ ಅವಳು ಪುನಃ ಅಜಿತನನ್ನು ಆ ವರುಣನ ಗುಡಿಗೆ ಕರೆದುಕೊಂಡು ಬಂದು, ಕಲ್ಲನ್ನು ಎತ್ತುವುದಕ್ಕೆ ಹೇಳಿ ದಳು. ಆಗಲೂ ಅವನಿಂದ ಸಾಧ್ಯವಾಗಲಿಲ್ಲ. ಮುಂಚಿನ ವರುಷ ಹೇಳಿದ್ದ ಮಾತುಗಳನ್ನೇ ಆಗಲೂ ಹೇಳಿದಳು. ಮರುವರುಷವೂ ಹಾಗೆಯೇ ನಡೆಯಿತು. ನಾಲ್ಕನೆಯ ವರುಷವೂ ಸಫಲವಾಗಲಿಲ್ಲ. ಆಗ ಮಾತ್ರ ಅಜಿತನಿಗೆ ಆ ಕಲ್ಲಿನ ಬುಡದಲ್ಲಿ ಏನಿದೆಯೆಂದು ತಿಳಿದುಕೊಳ್ಳಬೇಕೆಂದು ಕುತೂ ಹಲವು ಉಂಟಾಯಿತು, ಅದರ ಮರ್ಮವನ್ನು ತಿಳಿದುಕೊಳ್ಳುವ ಬಗೆ ಹೇಗೆ ? ಯಾವಾಗಲೂ ದುಃಖದಲ್ಲಿಯೇ ಬೇಯುತ್ತಿರುವ ತಾಯಿಯೊಡನೆ ಕೇಳುವುದಕ್ಕೆ ಹೇಗೆ ತಾನೇ ಮನಸ್ಸು ಬಂದೀತು ? ಆದುದರಿಂದ ಅಜಿತನು, "ತಾರಾಂಗಣದಲ್ಲಿ ಇದನ್ನು ಎತ್ತುವಷ್ಟು ಸಮರ್ಥರು ಇರಲಿ, ಇಲ್ಲದಿರಲಿ! ನಾನು ಮಾತ್ರ ಎತ್ತಿಯೇ ತೀರಬೇಕು ! ಆ ಯೋಗವು ಎಂದಿಗೂ ಬಾರದೆ ಉಳಿಯಲಿಕ್ಕಿಲ್ಲ" ಎಂದಂದುಕೊಂಡು, ತಾನು ಬಲಿಷ್ಠನಾಗಬೇಕೆಂದು, ಗರುಡಿಸಾಧಕ, ಕುದುರೆಯ ಸವಾರಿ, ಮಿಗಬೇಟೆ, ಜಿಂಕೆಗಳನ್ನು ಬೆನ್ನಟ್ಟಿಕೊಂಡು ಕಾಡುಗುಡ್ಡಗಳಲ್ಲಿ ಸುತ್ತಾಡುವುದು, ಇವೇ ಮೊದಲಾದ ಅಂಗಸಾಧನೆಗಳನ್ನು ಮಾಡುವುದರಲ್ಲಿಯೇ ಮಗ್ನನಾದನು. ಇದರಿಂದ ಕೊನೆಗೆ ಆತನಂಥ ಬೇಟೆಗಾರನೇ ಆ ರಾಷ್ಟ್ರದಲ್ಲಿ ಇಲ್ಲ ವೆಂಬಂತಾಯಿತು. ಅಲ್ಲಿಯ ಜನಗಳು ಶರಭವೆಂಬ ಎಂಟು ಕಾಲಿನ ಒಂದು ಬಗೆಯ ಮೃಗದ ಹಾವಳಿಯಿಂದ ಕಂಗೆಟ್ಟು ಹೋಗಿದ್ದರು. ಅಜಿತನು ಅಂಥ ಭಯಂಕರವಾದ ಪ್ರಾಣಿಯನ್ನು ಕೂಡ ಸಂಹರಿಸಿಬಿಟ್ಟನು. ಆಗ ಈತನ ಸಾಹಸಕಾರ್ಯವನ್ನು ಕಂಡು, ಎಲ್ಲರೂ “ಹುಡುಗನ ಅದೃಷ್ಟವು ಚೆನ್ನಾಗಿದೆ, ಚೆನ್ನಾಗಿದೆ !” ಎಂದು ಹೇಳುವುದಕ್ಕೆ ಮೊದಲುಮಾಡಿದರು.

ಅಷ್ಟರಲ್ಲಿ ಅಜಿತನಿಗೆ ಹದಿನೆಂಟು ವರುಷಗಳು ತುಂಬಿದುವು, ನೇತ್ರವತಿಯು ಆತನನ್ನು ಅದೇ ಗುಡಿಗೆ ಕರೆದುಕೊಂಡು ಹೋಗಿ-“ಅಜಿತ, ಆ ಕಲ್ಲನ್ನು ಈ ಹೊತ್ತು ಎತ್ತುವೆಯಾದರೆ ಎತ್ತಿಬಿಡು; ಇಲ್ಲವಾದರೆ ನಿನ್ನ ಹೆತ್ತವರು ಯಾರೆಂಬದನ್ನು ಅರಿಯಲಾರೆ !” ಎಂದು ಖಂಡಿತವಾಗಿ ಹೇಳಿ ಬಿಟ್ಟಳು.
ಕೂಡಲೆ ಅಜಿತನು, ಕಲ್ಲಿನ ಬಳಿಗೆ ಹೋಗಿ, ಅದರ ಬುಡಕ್ಕೆ ಕೈ ತುರುಕಿ, ಎತ್ತುವುದಕ್ಕೆ ಯತ್ನಿಸಿದನು; ಕೊಂಚ ಅಲುಗಾಡಿದಂತಾಯಿತು. ಆಗ ಅವನು ಮನಸ್ಸಿನಲ್ಲಿ ಉಬ್ಬಿ, “ನನ್ನ ಎದೆ ಬಿರಿದುಹೋದರೂ ಚಿಂತೆಯಿಲ್ಲ ! ಇದನ್ನು ಮಾತ್ರ ಎತ್ತದೆ ಬಿಡೆನು !” ಎಂದಂದುಕೊಂಡು ಕಸುವಿನಿಂದ ಕುಸುಕಿಬಿಟ್ಟನು. ದೊಪ್ಪನೆ ಕಲ್ಲು ಆಚೆಗೆ ಸಿಡಿದುಬಿಟ್ಟಿತು ! ಅದರ ಬುಡದಲ್ಲಿ ಒಂದು ಖಡ್ಗವೂ, ಚಿನ್ನದ ಒಂದು ಹಾವುಗೆಯ ಜೋಡೂ ಇದ್ದುವು, ಕತ್ತಿಯ ಹಿಡಿಯು ಚಿನ್ನದ್ದು; ಎಲೆಯು ಕಂಚಿನದು, ಅಜಿತನು ಖಡ್ಗವನ್ನೂ ಪಾದುಕೆಗಳನ್ನೂ ಹಿಡಿದುಕೊಂಡು ಹುಲ್ಲೆಯ ಕರುವಿನಂತೆ ತಾಯ ಬಳಿಗೆ ಓಡಿಹೋದನು, ನೇತ್ರವತಿಯು ಅದನ್ನು ಕಂಡಳೊ ಇಲ್ಲವೊ, ಅಷ್ಟರಲ್ಲಿ ಅವಳು ತಲೆತಗ್ಗಿಸಿ ಬಲು ಹೊತ್ತು ಅತ್ತಳು, ಅಜಿತನು ಆಶ್ಚರ್ಯದಿಂದ ನೋಡುತ್ತ ನಿಂತು, ತನಗೇನೂ ತಿಳಿಯದಿದ್ದರೂ, ತಾನು ಕೂಡ ಅವಳೊಡನೆ ಅತ್ತುಬಿಟ್ಟನು. ಹೀಗೆ ಅತ್ತತ್ತು ಸಾಕಾದ ಮೇಲೆ, ನೇತ್ರವತಿಯು ತಲೆಯೆತ್ತಿ ಬೆರಳನ್ನು ತುಟಿಯ ಮೇಲೆ ಇಟ್ಟು, "ಮಗೂ ! ನೀನು ತಂದುದನ್ನು ವಸ್ತ್ರದೊಳಗೆ ಮುಚ್ಚಿಟ್ಟುಕೊ, ಈಗ ನಾವು ಕಡಲ ದಡಕ್ಕೆ ಹೋಗೋಣ ಬಾ,” ಎಂದು ಹೇಳಿ ಅವನನ್ನು ಕರೆದುಕೊಂಡು ಹೋದಳು, ಅವರು ದೇವಸ್ಥಾನದ ಪಾಗಾರವನ್ನು ದಾಟಿ ನಾಲ್ಕು ಮಾರು ಮುಂದಕ್ಕೆ ಬರಲು, ಇದಿರಿಗೆ ನೀಲವಾಗಿ ಕಪ್ಪಾಗಿ ಕಾಣುವ ಸಮುದ್ರವು ಕಂಗೊಳಿಸಿತು. ತೀರಕ್ಕೆ ಬರುತ್ತಲೇ ನೇತ್ರವತಿಯು "ನಮ್ಮ ಹಿಂದುಗಡೆ ಇರುವ ದೇಶವನ್ನು, ಮಗು, ಬಲ್ಲೆಯಷ್ಟೆ ?” ಎಂದು ಕೇಳಿದಳು.

ಅದಕ್ಕೆ ಅಜಿತನು “ ಹೌದು, ಅದೇ ನಾನು ಹುಟ್ಟಿ ಬೆಳೆದ ಊರು, ತಾರಾಂಗಣ ” ಎಂದು ಹೇಳಿದನು.

ನೇತ್ರವತಿ––“ ಇದು ಬಲು ಚಿಕ್ಕ ರಾಜ್ಯ ; ಮುಕ್ಕಾಲು ಮೂರು ವೀಸ ಮರಳುಕಾಡು, ಕೊರಕಲಾದ ಕಲ್ಲು ಮಣ್ಣು ! ಬೆಳೆ ಹುಲುಸಾಗಿ ಬೆಳೆಯಲಾರದು. ಅದೊ, ಈ ಸಮುದ್ರದಾಚೆ ನೆಲವು ಕಾಣಿಸುತ್ತಿದೆ ಅಲ್ಲವೆ ?"

ಅಜಿತ-“ಹೌದು, ಅದು ಯವನ ದೇಶ. ಅಲ್ಲಿ ಯವನರು ವಾಸ ಮಾಡುತ್ತಾರೆ”.

ಆಗ ನೇತ್ರವತಿಯು "ಅದು ಬಹು ಫಲವತ್ತಾದ ದೇಶ ; ದಕ್ಷಿಣದಲ್ಲಿದೆ; ಅಲ್ಲಿ ಯಾವಾಗ ನೋಡಿದರೂ ವಸಂತಕಾಲವೆ! ಹೂಗಿಡಗಳು ಕಂಪಿನಿಂದಲೂ ಹಣ್ಣುಗಳಿಂದಲೂ ಸದಾಕಾಲವೂ ಶೋಭಿಸುತ್ತಿವೆ. ಬೆಟ್ಟಗಳಲ್ಲಿ ಅಂತೂ ಅಚ್ಚದಾದ ಅಮೃತಶಿಲೆಯ ಬೆಳ್ಳಿಯೂ ಹೇರಳವಾಗಿ ದೊರೆಯುತ್ತಿವೆ. ಅಲ್ಲಿ ಲೆಕ್ಕವಿಲ್ಲದ ನದಿಗಳನ್ನೂ ಕಾಲುವೆಗಳನ್ನೂ ಕಂಡರೆ ಸೋಜಿಗವಾಗುವುದು, ದೇವತೆಗಳ ವಾಸಸ್ಥಳ ! ಆ ದೇಶದಲ್ಲಿ ಹನ್ನೆರಡು ನಗರಗಳಿವೆ. ಮಹಾಶೇಷನ ವಂಶದವರು ಆ ರಾಜ್ಯವನ್ನು ಆಳುತ್ತಾರೆ. ಈಗ-ಅಜಿತ, ಅಜಿತ, ನೀನು ಆ ರಾಜ್ಯಕ್ಕೆ ಅರಸನಾದರೆ, ಏನು ಮಾಡುವೆ ? ಹೇಳು ನೋಡೋಣ ?” ಎಂದು ಕೇಳಿದಳು.

ಬೆರಗಾದ ಅಜಿತನಿಗೆ ಏನು ಹೇಳುವುದಕ್ಕೂ ತೋಚದು, ವಿಶಾಲವಾದ ಸಮುದ್ರವನ್ನೂ ಅದರ ಆಚೆಗಿರುವ ಪರ್ವತಶಿಖರಗಳನ್ನೂ ನೋಡುತ್ತ ನಿಂತುಕೊಂಡನು. ನೇತ್ರವತಿಯು ಪುನಃ ಅದೇ ಪ್ರಶ್ನೆಮಾಡಿದಳು.

ಆಗ ಅಜಿತನು ಉಲ್ಲಾಸದಿಂದ, “ನಾನು ಆ ರಾಜ್ಯಕ್ಕೆ ದೊರೆಯಾದರೆ ಜನಗಳನ್ನು ಬಲು ಚೆನ್ನಾಗಿ ಆಳುವೆನು ; ಸರಿಯಾದ ಮಾರ್ಗದಲ್ಲಿ ಯೇ ನನ್ನ ಬುದ್ಧಿಯನ್ನೂ ಬಲವನ್ನೂ ಉಪಯೋಗಿಸುವೆನು ; ಪ್ರಜೆಗಳನ್ನು ಅತ್ಯಂತ ಸುಖಿಗಳಾಗುವಂತೆ ಮಾಡುವೆನು; ನಾನು ಸತ್ತರೂ ನನ್ನ ಹೆಸರೊಂದು ಅವರ ತುದಿನಾಲಗೆಯ ಮೇಲೆ ತಪ್ಪಬಾರದು” ಎಂದು ಗಂಭೀರವಾಗಿ ಹೇಳಿದನು.

ಇದನ್ನು ಕೇಳಿ, ನೇತ್ರವತಿಯು ನಕ್ಕು, “ಹಾಗಾದರೆ ಈ ಕತ್ತಿಯನ್ನೂ ಈ ಹಾವುಗೆಗಳನ್ನೂ ತೆಗೆದುಕೊಂಡು, ಯವನ ದೇಶದ ದೊರೆ ಯಾದ ತಾರಾಪತಿಯ ಬಳಿಗೆ ಹೋಗಿ, 'ಕಲ್ಲ ನ್ನು ಎತ್ತಿಯಾಯಿತು, ಅದರ ಬುಡದಲ್ಲಿದ್ದ ಈ ವಸ್ತುಗಳು ಯಾರವು ?' ಎಂದು ಕೇಳಿ ಇವನ್ನು ತೋರಿಸು. ಆ ಮೇಲಿನ ಸಂಗತಿಯೆಲ್ಲಾ ದೇವರ ಕೈಯಲ್ಲಿದೆ !" ಎಂದು ಹೇಳಿದಳು.

ಆಗ ಅಜಿತನಿಗೆ ಕಣ್ಣೀರು ಬಂತು. "ಹಾಗಾದರೆ, ಅಮ್ಮಾ, ನಾನು ನಿನ್ನನ್ನು ಬಿಟ್ಟು ಹೋಗಬೇಕೇ ?” ಎಂದು ಅಳುತ್ತ ಕೇಳಿದನು.

ಅದಕ್ಕೆ ನೇತ್ರವತಿಯು-“ಮಗು, ನನಗೋಸ್ಕರ ಅಳಬೇಡ, ಕಂಡೆಯಾ ? ಹಣೆಯಲ್ಲಿ ಬರೆದಿರುವುದನ್ನು ಯಾರೂ ತಪ್ಪಿಸಲಾರರು. ಅದರಲ್ಲಿಯೂ ಯಾವಾಗಲೂ ದುಃಖವನ್ನೇ ಅನುಭವಿಸುತ್ತಿದ್ದವರಿಗೆ ಸಂಕಟವೆಂಬುದು ಅಷ್ಟೊಂದು ಕಠಿನವಾಗಿ ಕಾಣಿಸುವುದಿಲ್ಲ. ನನ್ನ ಬಾಲ್ಯವೂ ದುಃಖಮಯವಾದುದು, ಯೌವನವೂ ಅದರಂತೆಯೆ, ಇನ್ನು ವೃದ್ಧಾಪ್ಯವು ಕೂಡ ದುಃಖದಲ್ಲಿಯೇ ಪರಿಣಮಿಸುವುದು! ಅದೂ ನನಗೆ ಗೊತ್ತಿದೆ; ಆ ದುಷ್ಟ ರಾಕ್ಷಸರಾದ ಹಂಸಪುತ್ರರು ನನ್ನನ್ನು ಎತ್ತಿಕೊಂಡು ಹೋಗಿ, ತಮ್ಮ ದಾಸಿಯನ್ನಾಗಿ ಮಾಡಿ, ಸೆರೆಯಲ್ಲಿ ಇಟ್ಟಿರುವಂತೆ ಅನೇಕಾವೃತ್ತಿ ಕನಸು ಕಂಡಿದ್ದೇನೆ. ಕಟ್ಟಕಡೆಗೆ ನನ್ನ ಈ ಮುದ್ದು ಮಗನು ಬಂದು ನನ್ನನ್ನು ಬಿಡಿಸಿಕೊಂಡು ತಂದದ್ದರಿಂದ ಆತನ ಕೀರ್ತಿಯನ್ನು ಕೂಡ ಕೇಳಿ ಆನಂದಪಟ್ಟೆನು. ಈಗ ಅದು ಹಾಗಿರಲಿ ; ನನಗೆ ಎಷ್ಟು ಸಂಕಷ್ಟಗಳು ಒದಗಿದರೂ, ಪೂರ್ವದಂತೆಯೇ ಧೈರ್ಯದಿಂದ ತಾಳಿಕೊಳ್ಳುವೆನು, ನೀನು ನನ್ನ ಯೋಚನೆಯನ್ನು ಬಿಟ್ಟು, ಯವನ ದೇಶಕ್ಕೆ ಹೋಗು” ಎಂದು ಹೇಳಿ, ಮಗನನ್ನು ಮಾತುಗಳಿಂದ ಒಡಂಬಡಿಸಿ, ಮುತ್ತಿಟ್ಟು ಕಳುಹಿಸಿಕೊಟ್ಟು, ವರುಣಾಲಯಕ್ಕೆ ಅಳುತ್ತ ಹಿಂದಿರುಗಿ ಹೋದಳು. ಇತ್ತ ಅಜಿತನು ಅರ ಮನೆಗೆ ಹೋಗಿ, ತನಗೆ ಬೇಕಾದ ಬಟ್ಟೆಗಳನ್ನು ಕಟ್ಟಿಕೊಂಡು, ಯವನ ದೇಶಕ್ಕೆ ಹೊರಟನು. ಅವನ ತಾಯಿ ಅವನನ್ನು ಈ ಸಲ ಕಂಡದ್ದು ಕಡೆಯ ಸಲದ್ದಾಯಿತು.

II. ಜಾಲವ್ಯೂಹ

[ಸಂಪಾದಿಸಿ]

ಯಾವುದಾದರೊಂದು ಕೆಲಸವನ್ನು ಮಾಡಬೇಕೆಂದು ಯೋಚಿಸಿದರೆ ಸಾಕು; ಆಮೇಲೆ ಅದು ಯಾವಾಗ ನೆರವೇರಲಿಲ್ಲ ಎಂಬದಾಗಿ ಮನಸ್ಸು ಕಾತರಿಸುತ್ತದೆ. ಆ ಕೆಲಸಕ್ಕೆ ಕೈಹಾಕುವುದು ಮಾತ್ರ ಪ್ರಯಾಸ. ಅಜಿತನಿಗೆ ಯವನದೇಶಕ್ಕೆ ಹೋಗಿ ತನ್ನ ತಂದೆಯಾದ ತಾರಾಪತಿಯನ್ನು ನೋಡಬೇಕೆಂಬ ತವಕದಿಂದ ನೆಲದ ಮೇಲೆ ಕಾಲು ನಿಲ್ಲದಿದ್ದರೂ, ಅಲ್ಲಿಗೆ ಹೋಗುವ ಬಗೆ ಹೇಗೆಂದು ಆತನ ಚಿಕ್ಕ ತಲೆಗೆ ಹತ್ತಲೇ ಇಲ್ಲ. ಅರಮನೆಯಿಂದ ಹೊರಟವನು ಕಡಲ ದಡಕ್ಕೆ ಬಂದು, ಬಹಳ ಹೊತ್ತು ಯೋಚಿಸುತ್ತ ನಿಂತನು, ಸಮುದ್ರವನ್ನು ದಾಟುವುದಕ್ಕಾಗಿ ಒಂದು ಹಡಗನ್ನು ಬಾಡಿಗೆಗೆ ಗೊತ್ತು ಮಾಡಿಕೊಳ್ಳಬೇಕೆಂದು ಒಂದು ಸಲ ನಿಶ್ಚಯಿಸಿ ದನು, ಅಲ್ಲಿಗೆ ಹಡಗು ಹೋಗಿ ಮುಟ್ಟುವುದಕ್ಕೆ ಬಹಳ ದಿನಗಳು ಹಿಡಿಯುವುದರಿಂದ, ಬೇರೊಂದು ಉಪಾಯವಿದ್ದರೆ ತ್ವರೆಯಾಗಿ ಹೋಗಬಹುದೆಂದು ತೋಚಿತು, ತನಗೆ ರೆಕ್ಕೆಗಳಿದ್ದದ್ದೇ ಆದರೆ ಹಾರಿಹೋಗಿ ತಂದೆಯನ್ನು ನೋಡಬಹುದಿತ್ತು ಎಂಬ ಆಸೆಯುಂಟಾಯಿತು. ಅಷ್ಟರಲ್ಲಿ ಆತನಿಗೆ ಇನ್ನೊಂದು ಆಲೋಚನೆಯು ಹುಟ್ಟಿ ಅದುವರೆಗಿದ್ದ ಉತ್ಸಾಹವೆಲ್ಲ ಮನಸ್ಸಿನಿಂದ ಆರಿಹೋಯಿತು. “ನಾನು ಹುಟ್ಟಿದಂದಿನಿಂದ ನನ್ನ ತಂದೆಗೆ ನನ್ನ ಯೋಚನೆಯೇ ಇಲ್ಲವೇ? ಅಥವಾ ಆತನಿಗೆ ಬೇರೆ ಮುದ್ದು ಮುದ್ದಾದ ಮಕ್ಕಳು ಇದ್ದಾರೇ ? ಹಾಗಿದ್ದರೆ, ನನ್ನನ್ನು ಪ್ರೇಮದಿಂದ ಕಾಣುವನೆಂಬುದು ನಿಶ್ಚಿತವೇ ? ತಂದೆಗೆ ತನ್ನಲ್ಲಿ ಪ್ರೇಮವುಂಟಾಗುವಂತೆ ನಾನು ಯಾವ ಮಹತ್ಕಾರ್ಯಗಳನ್ನು ಮಾಡಿದ್ದೇನೆ ? ಅತ್ಯಲ್ಪನಾದ ನನ್ನನ್ನು ತಾರಾಪತಿಯು ಹೇಗೆ ತಾನೆ ಸಂತೋಷದಿಂದ ಸ್ವೀಕರಿಸುವನು ?” ಈ ರೀತಿಯಾಗಿ ಅಜಿತನ ಯೋಚನೆಗಳು ಎದ್ದು , ಅವನ ಮನಸ್ಸು ಅಲೆ ಮಸಗಿತು.

ಕೊನೆಗೆ “ಸರಿ ! ನಮ್ಮ ತಂದೆಗೆ ನನ್ನಲ್ಲಿ ಅನುರಾಗವು ಹುಟ್ಟುವಂತೆ ಮಾಡಬೇಕು, ನನ್ನಲ್ಲಿ ಯೋಗ್ಯತೆಯು ಕೊಂಚವಾದರೂ ಇದೆಯೆಂದು ತೋರಿಸಬೇಕು. ಇದು ವೀರ ಕಾರ್ಯಗಳನ್ನು ಮಾಡಿ ಕೀರ್ತಿವಂತನಾಗದ ಹೊರತು ಸಾಧ್ಯವಿಲ್ಲ. ನನ್ನ ಹೆಸರು ಒಂದಿಷ್ಟು ಮುಂದೆಬಂತೆಂದರೆ, ಆಮೇಲೆ-ನಮ್ಮ ತಂದೆಗೆ ಬೇರೆ ಐವತ್ತು ಮಕ್ಕಳು ಬೇಕಾದರೂ ಇರಲಿ-ನನ್ನನ್ನು ವಿಶ್ವಾಸದಿಂದ ಕಾಣದೆ ಎಂದಿಗೂ ಇರಲಾರನು. ನಾನೇ ಅವನ ಅತ್ಯಂತ ಪ್ರೀತಿಗೆ ಪಾತ್ರನಾಗುವೆನು, ಆದರೆ ಕೀರ್ತಿ ಸುಲಭಸಾಧ್ಯವಲ್ಲ. ಇರಲಿ! ನೋಡೋಣ. ಏಕೆ ? ಅನೇಕವಾದ ವಿಘ್ನಗಳು ಬಂದರೂ ನಮ್ಮ ವಜ್ರಾಂಗನು ಖ್ಯಾತಿಯನ್ನು ಸಂಪಾದಿಸಲಿಲ್ಲವೆ? ಆತನು ನೂರಾರು ಕಳ್ಳಕಾಕರನ್ನೂ ದುಷ್ಟ ಮೃಗಗಳನ್ನೂ ಸಂಹರಿಸಿ, ಕೆರೆತೊರೆಗಳನ್ನು ಹಾರಿಬಿಟ್ಟು, ಎಷ್ಟೊ ಬೆಟ್ಟಗಳನ್ನು ತನ್ನ ಗದೆಯಿಂದ ಪುಡಿಪುಡಿ ಮಾಡಲಿಲ್ಲವೆ ? ಆತನು ಜನಗಳ ಕಷ್ಟ ಸಂಕಷ್ಟಗಳನ್ನು ಪರಿಹರಿಸಿ, ಅವರನ್ನು ಸಾರೋದ್ದಾರವಾಗಿ ಸುಖವಾಗಿರುವಂತೆ ಮಾಡಿದ್ದರಿಂದ ಅಲ್ಲವೆ ಆತನನ್ನು ಎಲ್ಲರೂ ಬಹು ಗೌರವದಿಂದಲೂ ವಿಶ್ವಾಸದಿಂದಲೂ ಕಾಣುತಿದ್ದರು ? ಆದರೆ ವಜ್ರಾಂಗನು ಮಾಡಿದಂತೆ ನಾನೇನು ಮಾಡಲಿ ? ರಾಕ್ಷಸರನ್ನೂ, ಚೋರರನ್ನೂ, ದುಷ್ಟ ಮೃಗಗಳನ್ನೂ ಹುಡುಕಿಕೊಂಡು ಎಲ್ಲಿಗೆ ತಾನೆ ಹೋಗಲಿ ? ಒಂದು ವೇಳೆ ಜಲದಾರಿಯನ್ನು ಬಿಟ್ಟು, ನೆಲದಾರಿಯಾಗಿ ಹೋದರೆ, ಆ ಬೆಟ್ಟ ತಪ್ಪಲುಗಳಲ್ಲಿ ಎಲ್ಲಿ ಯಾದರೂ ನನ್ನ ಸಾಹಸವನ್ನು ತೋರಿಸುವುದಕ್ಕೆ ಅವಕಾಶವಿರಬಹುದು. ಈ ನೆಲಹಾದಿಯಿಂದಲೇ ಹೋಗಬೇಕು,” ಎಂದು ನಿರ್ಧರಿಸಿ, ತನ್ನ ತಂದೆಯ ಕತ್ತಿಯನ್ನು ಸೊಂಟದಲ್ಲಿ ಕಟ್ಟಿಕೊಂಡು ಹೊರಟು ಹೋದನು.

ಅಜಿತನು ಕೆಲ ಗಾವುದ ಹಾದಿ ನಡೆದು ಜಾಲವ್ಯೂಹವೆಂಬ ಹೆಸರಿನ ಪರ್ವತಗಳ ಹತ್ತಿರ ಬಂದನು. ಒಂದೇ ಒಂದು ದೊಡ್ಡ ಶಿಖರದಿಂದ ಚಿಕ್ಕ ಚಿಕ್ಕ ಬೆಟ್ಟಗಳು ದಿಕ್ಕು ದಿಕ್ಕಿಗೆ ಕವಲುಗೊಂಡು ಜೇಡನ ಬಲೆಯಂತೆ ಹರಡಿದ್ದುದರಿಂದ, ಅವುಗಳಿಗೆ ಜಾಲವ್ಯೂಹವೆಂಬ ಹೆಸರು ಬಿದ್ದಿತ್ತು. ಇವುಗಳ ಮೇಲೇರುತ್ತ ಹೋಗುವಷ್ಟಕ್ಕೆ ಬಲು ಆಳವಾದ ಕಣಿವೆಗಳೂ ಮುಗಿಲು ಮುಟ್ಟುವ ಕೋಡುಗಳೂ ಕಾಣಿಸಿದುವು. ಅಂಥ ಪ್ರದೇಶಗಳಲ್ಲಿ ಪ್ರಯಾಣ ಮಾಡುವುದೇ ಅಪಾಯಕರವಾಗಿತ್ತು, ಆದರೆ ಅಜಿತನು ಬೆಚ್ಚು ಬೆದರನ್ನು ಅರಿಯನು, ಅದು ಹೊರತು ಅಲ್ಲಿಗೆ ಹೋಗುವುದಕ್ಕೆ ಬೇರೆ ಮಾರ್ಗವೂ ಇರಲಿಲ್ಲ.

ಸ್ವಲ್ಪ ದೂರ ಹೋದ ಮೇಲೆ ಅವನ ಹಾದಿಗೆ ಅಡ್ಡವಾಗಿ ಒಂದು ದೊಡ್ಡ ಕಲ್ಲು ರಾಶಿಯು ಕಣ್ಣಿಗೆ ಬಿತ್ತು, ಅದರ ಮೇಲೆ ವಿಕಾರವಾದ ಪುರುಷನೊಬ್ಬನು ಕುಳಿತಿದ್ದನು, ಆತನ ಅಂಗಿಯು ಕರಡಿಯ ತೊಗಲಿನದು ; ಕುಲಾವಿಯು ತಲೆಯ ಓಡಿನದು; ಅವನ ಹಣೆಯಲ್ಲಿ ಕರಡಿಯ ಕೋರೆಗಳು ಬೆಳ್ಳಗಾಗಿ ಹೊಳೆಯುತ್ತಿದ್ದುವು. ಆತನು ಒಂದು ಕರಡಿಯ ಕಾಲುಗಳನ್ನು ತನ್ನ ಕೊರಳಿನ ಬಳಿ ಬಿಗಿದುಕೊಂಡದ್ದರಿಂದ, ಅದರ ಉಗುರುಗಳು ಆತನ ಅಗಲವಾದ ಎದೆಯ ಮೇಲೆ ನೇತಾಡುತ್ತಿದ್ದುವು. ಇಂಥ ಭೀಕರ ಸ್ವರೂಪಿಯು ಅಜಿತನನ್ನು ಕಾಣುತ್ತಲೆ, ಎದ್ದು ನಿಂತು, ಪರ್ವತಗಳು ದನಿ ಕೊಡುವಂತೆ ಗಹಗಹನೆ ನಕ್ಕನು.

“ಎಲಾ, ಹುಳುಮಾನಿಸನೇ! ನನ್ನ ಬಲೆಯೊಳಕ್ಕೆ ಬಂದಿರುವ ನೀನು ಯಾರಯ್ಯ? " ಎಂದು ಅಣಕಿಸಿ ಕೇಳಿದನು, ಅಜಿತನು ಏನೊಂದು ಉತ್ತರವನ್ನೂ ಕೊಡದೆ ಇವನು ಯಾರು ಕಳ್ಳನಾಗಿರಬಹುದೇ? ಅಷ್ಟು ಬೇಗನೆ ನನಗೊಂದು ವಿನೋದವು ಒದಗಿತೇ ? " ಎಂದಂದುಕೊಂಡು ತನ್ನ ಹಾದಿ ಹಿಡಿದು ಹೋಗುತ್ತಿದ್ದನು.

ಆಗ ಆ ವಿಕಾರಪುರುಷನು ಮತ್ತಷ್ಟು ಗಟ್ಟಿಯಾಗಿ ನಕ್ಕು- "ಎಲಾ, ಸೊಕ್ಕಿದ ಕ್ರಿಮೀ, ಈ ಬಲೆಯಿಂದ ಯಾವ ಹುಳುವೂ ತಪ್ಪಿಸಿಕೊಂಡು ಹೋಗಲಾರದು, ಗೊತ್ತಾಯಿತೇ ? ಇಲ್ಲಿಯೇ ಕೆಳಗಡೆ ಜೇಡನ ಮನೆ ಇದೆ ಎಂಬುದು ನಿನಗೆ ತಿಳಿಯದೇ ? ಆ ಜೇಡನು ನಾನೇ ಎಂಬ ಅರಿವು ಹುಟ್ಟಲಿಲ್ಲವೇ ? ಈಚೆಗೆ ಬಾ, ನಿನ್ನ ಮೈಯಲ್ಲಿ ನೆತ್ತರು ಎಷ್ಟಿದೆ ಎಂದು ನೋಡಿಬಿಡುತ್ತೇನೆ. ಕಣ್ಣು ಬಿಡುವೆ ಏತಕ್ಕೆ ? ಇಲ್ಲಿಂದ ತಪ್ಪಿಸಿಕೊಂಡು ಹೋಗಲಾರೆ; ನಮ್ಮ ತಂದೆಯಾದ ಜಾಲೇಂದ್ರನು ಈ ಪರ್ವತಗಳಲ್ಲಿ ಇಂಥಾದ್ದೊಂದು ಬಲೆಯನ್ನು ನನಗೋಸ್ಕರವೇ ನಿರ್ಮಿಸಿರುವನು,” ಎಂದು ಹೇಳಿದನು.

ಅಜಿತನು ನಡುಗದೆ ಮುಂದಕ್ಕೆ ಬಂದು “ಎಲಾ, ಕೊಬ್ಬಿದ ಜೇಡನೇ, ನಿನ್ನ ಹೆಸರೇನು ? ನಿನ್ನ ಮುಳ್ಳುಗಳೆಲ್ಲಿವೆ ?” ಎಂದು ಕೇಳಿದನು.

ಆ ಪುರುಷನು ಗಟ್ಟಿಯಾಗಿ ನಗುತ್ತ “ನನ್ನ ಹೆಸರು ಜಾಲಭೀಮ; ಆದರೆ ಜನರೆಲ್ಲರೂ ನನ್ನನ್ನು ಗದಾಧರನೆಂದು ಕರೆಯುವರು. ನನ್ನ ಕೋರೆ ಹಲ್ಲುಗಳು, ಇದೊ, ಇಲ್ಲಿವೆ,” ಎಂದು ಹೇಳುತ್ತ ತನ್ನ ಪಕ್ಕದಲ್ಲಿದ್ದ ಬಲು ತೂಕವಾದ ಗದೆಯನ್ನು ಎತ್ತಿ, ಇದನ್ನು ನಮ್ಮ ಅಪ್ಪನು ತಾನೇ ಎರಕ ಹೊಯಿದು ನನಗೆ ಕೊಟ್ಟಿರುವನು. ಇದರಿಂದಲೇ ನಿನ್ನಂಥ ಸೊಕ್ಕಿದ ಹುಳುಗಳನ್ನು ಜಜ್ಜಿ, ಅವರ ಕೊಬ್ಬನ್ನೂ ಸವಿಯನ್ನೂ ಹಿಂಡಿಬಿಡುತ್ತೇನೆ. ಈಗ ನಿನ್ನ ಆ ಚೆಲು ಕತ್ತಿಯನ್ನೂ, ಸೊಗಸು ಅಂಗಿಯನ್ನೂ ಹೊನ್ನಾವುಗೆಗಳನ್ನೂ ಈಚೆಗೆ ಕೊಡು. ನಿನ್ನನ್ನು ಅರೆಯುವಾಗ ಎಲ್ಲಿಯಾದರೂ ದುರದೃಷ್ಟದಿಂದ ಬದುಕಿಬಿಡುವೆಯಷ್ಟೆ” ಎಂದು ಹೇಳಿದನು.

ತತ್‌ಕ್ಷಣವೇ ಅಜಿತನು ಅಂಗಿಯನ್ನು ತಟ್ಟನೆ ಕಳಚಿ ಹೆಗಲಿನಿಂದ ಮುಂಗೈಯ ತನಕ ಎಡತೋಳಿಗೆ ಸುತ್ತಿಕೊಂಡು, ಕತ್ತಿಯನ್ನು ಒರೆಯಿಂದ ಹಿರಿದು, ಆತನ ಮೇಲೆ ಜಿಗಿದನು. ಇಬ್ಬರೂ ಜಗಳಕ್ಕಾರಂಭಿಸಿದರು. ಗದಾಧರನು ಅಜಿತನನ್ನು ಮೂರು ಸಲ ಇಟ್ಟನು. ಎಡಗೈಯಲ್ಲಿ ಗುರಾಣಿಯಂಥ ಅಂಗಿ ಇಲ್ಲದಿದ್ದರೆ ಅಜಿತನ ತಲೆಯು ಒಡೆದು ಚೂರುಚೂರಾಗುತಿತ್ತು. ಅಜಿತನು ಅವನ ಏಟನ್ನು ತಪ್ಪಿಸಿಕೊಂಡು ಸಲಸಲವು ಎದ್ದು ನಿಂತು, ಗದಾಧರನನ್ನು ತಿವಿದನು; ಆದರೆ ಆ ಕರಡಿಯ ತೊಗಲೇ ಆತನ ಮೈಗೆ ವಜ್ರಕವಚವಾಯಿತು.

ಕೊನೆಗೆ ಅಜಿತನು ಆವೇಶಗೊಂಡು ತಟ್ಟನೆ ಗದಾಧರನ ಕೊರಳನ್ನು ಅವುಕಿಹಿಡಿದನು. ಇಬ್ಬರೂ ನೆಲದ ಮೇಲೆ ಉರುಳಾಡಿದರು, ಹೊರಳಾಡಿದರು, ಆಮೇಲೆ ಅಜಿತನು ಎದ್ದು ನಿಂತನು; ಗದಾಧರನು ಮಲಗಿ ಬಿಟ್ಟನು.

ಅನಂತರ ಅಜಿತನು ಆತನ ಗದೆಯನ್ನೂ ಕರಡಿಯ ತೊಗಲನ್ನೂ ತಾನು ಇಟ್ಟುಕೊಂಡು, ಆತನ ಹೆಣದಿಂದ ನರಿನಾಯಿಗಳಿಗೆ ಅವುತಣ ಮಾಡಿಸಿ, ಮುಂದಕ್ಕೆ ನಡೆದನು.

III ನಾಗಕನ್ನೆಯರ ದರ್ಶನ.

[ಸಂಪಾದಿಸಿ]

ಅಜಿತನು ಜಾಲವ್ಯೂಹ ಪರ್ವತಗಳನ್ನು ಕಳೆದು ನಾಲ್ಕು ಗಾವುದ ಹೋಗುತ್ತಲೆ, ಒಂದು ವಿಶಾಲವಾದ ಮೈದಾನದ ಮೇಲೆ ಕೆಲವು ಕುರಿಗಳು ಹಾಯಾಗಿ ನಿದ್ರಿಸಿದ್ದು ದನ್ನು ಕಂಡನು. ಹತ್ತಿರದಲ್ಲಿ ಮರಗಳ ಮತ್ತು ಬಂಡೆಗಳ ಎಡೆಯಲ್ಲಿದ್ದ ಒಂದು ಕಾರಂಜಿಯ ಸುತ್ತಲೂ ಕೆಲವರು ನಾಗಕನ್ಯಯರು ಕುಣಿದಾಡುತಿದ್ದರು, ಅವರ ಕುಣಿತಕ್ಕೆ ಹಾಡುಗಳಾಗಲಿ ಮದ್ದಳೆಯಾಗಲಿ ಇರಲಿಲ್ಲ. ಅಜಿತನನ್ನು ಕಾಣುತ್ತಲೇ ಆ ನಾಗಕನ್ಯೆಯರು ಚಿಟ್ಟನೆ ಚೀರಿಕೊಂಡು ಕಾರಂಜಿಯೊಳಕ್ಕೆ ಹೊಕ್ಕು ಮಾಯವಾದರು. ಅಷ್ಟರಲ್ಲಿ ಹತ್ತಿರವಿದ್ದ ಕುರುಬರು ಕೂಡ ತಮ್ಮ ತಮ್ಮ ಮಂದೆಯನ್ನು ಹೊಡೆದುಕೊಂಡು ಹೋಗುವುದಕ್ಕೆ ಎದ್ದರು.

ಇದನ್ನು ಕಂಡು ಅಜಿತನಿಗೆ ಆಶ್ಚರ್ಯವಾಯಿತು, ಆ ಜನಗಳು ಅಪರಿಚಿತರನ್ನು ಕಂಡ ಕೂಡಲೆ ಮೂಢರಂತೆ ಓಡಿಹೋಗುವುದನ್ನೂ ತಾಳಹಾಕದೆ ಕುಣಿಯುವುದನ್ನೂ ಕಂಡು, ಆತನಿಗೆ ನಗು ಬಂತು. ಆತನು ದಾರಿ ನಡೆದು ಬಳಲಿ ಬಾಯಾರಿದ್ದು ದರಿಂದ ಅವರ ಯೋಚನೆಯನ್ನೆ ಬಿಟ್ಟು, ಬೇಗನೆ ಕೆಳಕ್ಕೆ ಹೋಗಿ ಮಿಂದು, ತಿಳಿನೀರು ಕುಡಿದು, ಒಂದು ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡನು. ಊಟೆಯ ನೀರು ಕಲ್ಲಿನಿಂದ ಕಲ್ಲಿಗೆ ದುಮುಕುವಾಗ ಜೊಕ್ಕಿನ್ನುವ ಶಬ್ದವೇ ಜೋಗುಳದಂತಾಗಲು, ಆತನ ರೆಪ್ಪೆಗಳು ಒತ್ತಿಕೊಂಡುವು.

ಅಜಿತನು ನಿದ್ದೆಯಿಂದ ಎಚ್ಚತ್ತಾಗ ಯಾರೋ ಮಾತಾಡುವ ಗುಜುಗುಜು ಕೇಳಿಸಿತು; ಸುತ್ತಲೂ ನೋಡಿದನು. ಆ ಕಾರಂಜಿಯ ಆಚೆಗಡೆ, ಒಂದು ಗುಹೆಯೊಳಗೆ ಹಸುರಾದ ಪಾಚಿಯ ಮೇಲೆ ಕುಳಿತುಕೊಂಡು, ಆ ನಾಗಕನ್ಯಯರು ತಮ್ಮೊಳಗೆನೇ ಪಿಸುಗುಟ್ಟುತಿದ್ದರು. ಒಬ್ಬಳು ಈತನು ಗದಾಧರನಲ್ಲವೆಂದೂ, ಇನ್ನೊಬ್ಬಳು ಈತನು ಕಳ್ಳನಂತೆ ತೋರದೆ ಸಾಧುವಾದ ಯುವಕನಂತೆ ಕಾಣುವನೆಂದೂ ತಂತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತಿದ್ದರು.

ಆಗ ಅಜಿತನು ನಗುವಿನಿಂದ, “ಎಲೌ, ನಾಗಕನ್ಯೆಯರೇ, ನಾನು ಗದಾಧರನಲ್ಲ. ಆತನು ನರಿನಾಯಿಗಳ ಹೊಟ್ಟೆಯಲ್ಲಿ ಸುಖವಾಗಿ ನಿದ್ರೆ ಮಾಡುತಿದ್ದಾನೆ, ಆತನ ಕೈಯ ಗದೆಯ ಕರಡಿಯ ಚರ್ಮವೂ ಮಾತ್ರವೇ ನನ್ನ ಹತ್ತಿರ ಇವೆ,” ಎಂದು ಹೇಳಿದನು.

ಕೂಡಲೆ ಅವರು ಧೈರ್ಯದಿಂದ, ಆ ಕೊಳದಿಂದೀಚೆಗೆ ಬಂದು, ಕುರುಬರನ್ನು ಹಿಂದಕ್ಕೆ ಕರೆದರು, ಅಜಿತನು ತಾನು ಗದಾಧರನನ್ನು ಕೊಂದ ಸಂಗತಿಯನ್ನು ಬಿಚ್ಚಿ ಹೇಳಲು, ಅವರೆಲ್ಲರೂ ಸಂತೋಷದಿಂದ ಆತನ ಪಾದಗಳ ಮೇಲೆ ಬಿದ್ದು –––

ಚಿಂತಯೇಂ? ಕುರಿಮಂದ ಹುಲ್ಲನು ಸಂತತಂ ಸುಖವಾಗಿ ಮೇ |
ವಂತೆಯಾದುದು, ನಮ್ಮ ಗಾನವನಂತೂ ಮಾಡಲು ಕೇಳೋರಾರ್, ||
ಅಂತಕಾಂತಕ ಘೋರಪಾತಕಿಯಂತಕಾಲಯಕ್ಕೆದಿದಂ, |
ಅಂತು ಕಾಡುವ ಕೂಂಬಿನಾ ದನಿ ಮುಂತ ಕೇಳದು ಜೇಡನಾ ||

ಎಂದು ಹಾಡುವುದಕ್ಕೆ ತೊಡಗಿದರು.

ತರುವಾಯ ಕುರುಬರು ಹಣ್ಣುಹಂಪಲುಗಳನ್ನೂ ಕನ್ಯೆಯರು ಸವಿಜೇನನ್ನೂ ಅಜಿತನಿಗೆ ತಂದು ಕೊಟ್ಟರು. ಅಜಿತನು ಹಣ್ಣು ತಿಂದು, ಜೇನು ಕುಡಿದು, ತುಸ ಒರಗಿದನು, ನಾಗಕನ್ನಿಕೆಯರು ಅವನ ಸುತ್ತಲೂ ಕುಣಿದಾಡಿದರು. ಸ್ವಲ್ಪ ಹೊತ್ತಿನ ತರುವಾಯ ಅಜಿತನಿಗೆ ಎಚ್ಚರವಾಗಿ, ಅವನು ಹೊರಟನು. ಆಗ ಆತನು ಎಲ್ಲಿಗೂ ಹೋಗಕೂಡದೆಂದು ಆ ಸ್ತ್ರೀಯರು ಬಗೆಬಗೆಯಾಗಿ ಹಲುಬಿದರೂ ಅವನು ಯಾವು ದಕ್ಕೂ ಕಿವಿಗೊಡದೆ ತನಗೊಂದು ಮಹತ್ಕಾರ್ಯವಿರುವುದೆಂದೂ ಯವನ ದೇಶಕ್ಕೆ ಹೋಗಬೇಕಾಗಿದೆಯೆಂದೂ ಹೇಳಿದನು,

ಅದಕ್ಕೆ ಕುರುಬರು ಬೆರಗಾಗಿ, “ನೀನೊಬ್ಬನೆ ಹೋಗುವೆಯಾ ? ಆ ಕಡೆ ಈಗೀಗ ಯಾರೂ ಶಸ್ತ್ರ ಪ್ರಾಣಿಗಳ ಜೊತೆಯಲ್ಲಿ ಹೊರತು ಒಬ್ಬೊಬ್ಬರಾಗಿ ಸುಳಿಯುವುದಿಲ್ಲ !” ಎಂದು ಹೇಳಿದರು.

ಅದಕ್ಕೆ ಅಜಿತನು-"ಆಯುಧಗಳೊ ? ನನ್ನಲ್ಲಿ ಬೇಕಷ್ಟು ಇವೆ. ಇನ್ನು ಜನಗಳು ನನಗೆ ಆವಶ್ಯಕವಿಲ್ಲ. ಸತ್ಪುರುಷನು ತನಗೆ ತಾನೆ ಸಂಗಾತಿಯಲ್ಲವೆ? ನಾನೊಬ್ಬನೇ ಏತಕ್ಕಾಗಿ ಯವನದೇಶಕ್ಕೆ ಹೋಗ ಕೂಡದು?' ಎಂದು ಕೇಳಿದನು.

ಮೊದಲನೆಯ ಕುರುಬನು, “ಒಂದುವೇಳೆ ಹಾಗೆ ಹೋಗುವೆಯಾದರೆ, ಆ ಬೆಟ್ಟಗಳ ಕಿಬ್ಬಿಯಲ್ಲಿ ಮಾತ್ರ ಜಾಗರೂಕರಾಗಿರಬೇಕು. ಅಲ್ಲಿ ದಾರಕನೆಂಬ ಚೋರನಿದ್ದಾನೆ. ಆತನು ಆ ಹಾದಿಯಾಗಿ ಹೋಗುವವರೆಲ್ಲರನ್ನೂ ಹಿಡಿದು, ಎರಡು ಎಳೆಯ ದೇವದಾರು ಮರಗಳನ್ನು ಸೆಳೆದು, ಅವನ್ನು ಬಗ್ಗಿಸಿ ಹತ್ತಿರ ತಂದು, ದಾರಿಗರ ಎಡ ಕೈ ಕಾಲುಗಳನ್ನು ಒಂದು ಮರಕ್ಕೂ, ಬಲ ಕೈ ಕಾಲುಗಳನ್ನು ಇನ್ನೊಂದು ಮರಕ್ಕೂ ಕಟ್ಟಿ, ಆ ಮರಗಳನ್ನು ಬಿಟ್ಟುಬಿಡುವನು. ಆ ಮರಗಳೊಳಗೆ ಸಿಕ್ಕುಬಿದ್ದ ಬಡ ಪಾಯಿಯಾದ ಮನುಷ್ಯನ ಮೈ ಸಿಳ್ಳನೆ ಸೀಳಾಗಿ ಹೋಗುವುದು,” ಎಂದನು.

ಎರಡನೆಯ ಕುರುಬನು, “ಅಯ್ಯಾ, ಆ ಮೇಲೆ ಸಮುದ್ರ ತೀರವನ್ನು ಬಿಟ್ಟು ಒಳದೇಶಕ್ಕೆ ಹೋಗಬೇಕು. ಇಲ್ಲದಿದ್ದರೆ ಕ್ಷಾಲಕನ ಬಾಯಿಗೆ ಬೀಳುವೆ. ಒಂದು ಕಡೆ ಎತ್ತರವಾದ ಗಿರಿಶಿಖರಗಳು; ಮತ್ತೊಂದು ಕಡೆ ಅಗಾಧವಾದ ಸಮುದ್ರ ! ಇವುಗಳ ನಡುವೆ ಅಗಲಕಿರಿದಾದ ಒಂದೇ ಒಂದು ದಾರಿಯಲ್ಲದೆ ಬೇರೆ ಹಾದಿಯಿಲ್ಲ. ಈ ಮಾರ್ಗವಾಗಿ ಹೋದರೆ ಕ್ಷಾಲಕನು ಸಿಕ್ಕಿಯೇ ಸಿಕ್ಕುವನು. ಬಂದಬಂದವರನ್ನೆಲ್ಲ ಆತನು ಹಿಡಿದು ತನ್ನ ಕಾಲುಗಳನ್ನು ತೊಳೆಸುತ್ತ, ಒದೆದು ಕಡಲಿಗೆ ತಳ್ಳಿ ಬಿಡುವನು. ಹೀಗೆ ಸತ್ತವನ ದೇಹವು ಅಲ್ಲಿರುವ ಮಹಾ ಕೂರ್ಮಕ್ಕೆ ಆಹಾರವಾಗುವುದು. ಅಲ್ಲಿಗೆ ಹೋದರೆ ನಿನಗೂ ಇದೇ ಗತಿ,” ಎಂದನು.

ಕೂಡಲೆ ಮೂರನೆಯ ಕುರುಬನು ಈ ಅಷ್ಟೆ ? ಅದಕ್ಕಿಂತಲೂ ಮಹತ್ತಾದ ಮತ್ತೊಂದು ಅಪಾಯವಿದೆ. ನೀನು ಮತ್ತೂ ಎಡಗಡೆ ಹೋಗುತ್ತ ಹೋಗುತ್ತ ಸಮುದ್ರದಿಂದ ಬಹು ದೂರವಾಗದಿದ್ದರೆ ಖಂಡಿತವಾಗಿಯ, ಕ್ರೂರಾಕ್ಷನೆಂಬ ಜಟ್ಟಿಯ ಊರಿಗೆ ಹೋಗುವೆ. ಆತನಿಗೆ ಕಣ್ಣಿನಲ್ಲಿ ರವಷ್ಟಾದರೂ ರಕ್ತವಿಲ್ಲ ; ತನ್ನ ಸ್ವಂತ ಮಗಳನ್ನೇ ಸೆರೆಯಲ್ಲಿ ಇರಿಸಿ, ಕೊಂದುಬಿಟ್ಟು, ಅವಳ ಮಗುವನ್ನು ಪರ್ವತಗಳ ಮೇಲೆ ಒಗೆದುಬಿಟ್ಟನು. ಏನೋ ದೈವಯೋಗದಿಂದ ಅಲ್ಲಿದ್ದ ಕುದುರೆಗಳು ಕರುಣೆಯಿಂದ ಆ ಮಗುವಿಗೆ ಹಾಲೂಡಿ ಅದನ್ನು ಸಂರಕ್ಷಿಸಿದುವು. ಕೊನೆಗೆ ಅಪ್ಸರೆಯರು ಅದನ್ನೆತ್ತಿಕೊಂಡು ಹೋದರು. ಆ ಜಟ್ಟಿಯು ಬಹುತ್ರಾಣಿ ; ಯಾರೂ ಆತನೊಡನೆ ಕಾದಿ ಜಯಿಸಿದ್ದಿಲ್ಲ. ಆತನು ಈಗ ಅಲ್ಲಿಯ ದೊರೆಯಾಗಿದ್ದಾನೆ. ಪರಸ್ಥಳದವರು ಯಾರಾದರೂ ಹೋದರೆ ಅವರೊಡನೆ ಕಾದಾಡಿ, ಸೋಲಿಸುವನು. ಹಾಗೆ ಸೋತವರನ್ನು ಕೊಂದು ಬಿಟ್ಟು, ಅವರ ಅಟ್ಟೆಗಳಿಂದ ಅರಮನೆಯ ಮುಂದುಗಡೆ ತೋರಣ ಕಟ್ಟಿಸುವನು,” ಎಂದನು.

ಇವರ ಮಾತುಗಳನ್ನು ಕೇಳಿ ಅಜಿತನು ಸಿಟ್ಟಿನಿಂದ ಹುಬ್ಬು ಗಂಟಿಕ್ಕಿ, “ಓ, ಹೊ ! ಈ ರಾಜ್ಯದ ಆಡಳಿತೆಯು ಚೆನ್ನಾಗಿಲ್ಲವೆಂದು ಕಾಣುತ್ತಿದೆ. ನಾನು ಮಾತ್ರ ಇದಕ್ಕೆ ರಾಜನಾಗಬೇಕಿತ್ತು; ಎಲ್ಲವನ್ನೂ ಸರಿಯಾಗಿ ಇಡುತ್ತಿದ್ದೆ! ಇದೊ, ನನ್ನ ರಾಜದಂಡವು ಇಲ್ಲಿಯೆ ಇದೆ,” ಎಂದು ಹೇಳುತ್ತ, ಕಂಚಿನ ಗದೆಯನ್ನು ತಿರ್ರನೆ ತಿರುಪಿ, ಹೋಗುವುದಕ್ಕೆ ಹೊರಟನು. ಹೆಂಗುಸರೂ ಕುರುಬರೂ ಹೋಗಕೂಡದೆಂದು ಅವನ ಕಾಲುಕಟ್ಟಿದರು. ಆದರೂ ಅಜಿತನು ಹೋಗೇ ಹೋದನು.

IV
ದಾರಕನೂ ಕ್ಷಾಲಕನೂ

ಜಿತನು ಕುರುಬರನ್ನು ಬಿಟ್ಟು ಬಹಳ ದೂರ ಹೋದನು. ಆಗ
ಎಡಗಡೆ ಎತ್ತರವಾದ ಗಿರಿಗಳೂ ಬಲಗಡೆ ಸಮುದ್ರವೂ ಕಾಣಿಸಿದುವು.
ಕೂಡಲೆ ಕುರುಬರ ಮಾತುಗಳು ನೆನಪಿಗೆ ಬಂದು, ದಾರಕನು ಎಂದು
ಬರುವನೋ ಅವನ ದಾರಿಯನ್ನು ಎಂದು ನೋಡುವೆನೋ ಎಂದು ಹಳಹಳಿಸು
ತ್ತಿದ್ದನು. ಸ್ವಲ್ಪ ದೂರ ಹೋದ ಮೇಲೆ ದೇವದಾರು ವೃಕ್ಷಗಳ ನಡುವೆ
ಮಾರ್ಗವು ತುಂಬ ಅಗಲಕಿರಿದಾಗಿದ್ದಲ್ಲಿ, ಯಾರೋ ಒಬ್ಬನು ಒಂದು
ಕಲ್ಲಿನ ಮೇಲೆ ಕುಳಿತಿದ್ದುದನ್ನು ಕಂಡನು. ಆತನ ತೊಡೆಯ ಮೇಲೆ
ತಾಳೆಯ ಮರದ ಗದೆಯೊಂದಿತ್ತು. ಹಿಂದುಗಡೆ ಮರಗಳ ತುದಿಗಳಲ್ಲಿ
ಮನುಷ್ಯರ ಅಟ್ಟೆಗಳು ಜೋಲಾಡುತಿದ್ದುವು.

ಆತನ ಹತ್ತಿರ ಹೋಗಿ ಅಜಿತನು, “ಎಲಾ, ದಾರಕ, ಈ ಎರಡು
ದೇವದಾರು ಮರಗಳನ್ನು ನನಗಾಗಿ ಸಿದ್ಧ ಮಾಡಿಟ್ಟಿರುವೆಯಾ ?” ಎಂದು
ಕೇಳಿದನು.

ದಾರಕನು ತಟ್ಟನೆ ಎದ್ದು ನಿಂತು, ಮರಗಳನ್ನು ಬೆರಳಿನಿಂದ ತೋರಿ
ಸುತ್ತ, “ನನ್ನ ಜಿಂದಿಗೆಯು ಬರಿದಾಗುತ್ತ ಬಂದಿದೆ. ಆದುದರಿಂದ ನಿನ
ಗಾಗಿಯೇ ಈ ಎರಡು ಮರಗಳನ್ನು ಸಿದ್ಧ ಮಾಡಿಟ್ಟಿದ್ದೇನೆ” ಎಂದು ಹೇಳಿ,
ಗದೆಯನ್ನು ಎತ್ತಿಕೊಂಡು ಬಡೆಯುವುದಕ್ಕೆ ಬಂದನು.

ಇಬ್ಬರೂ ಕಾಳಗಕ್ಕೆ ಅನುವಾಗಿ, ಅವರ ಆರ್ಭಟವು ಕಾಡುಗುಡ್ಡ
ಗಳಲ್ಲಿ ಪ್ರತಿಧ್ವನಿಸಿತು. ಮರಕ್ಕಿಂತ ಲೋಹವೆ ಗಟ್ಟಿಯಷ್ಟೆ ; ಕಂಚಿನ
ಪೆಟ್ಟನ್ನು ತಾಳಲಾರದೆ ಮರದ ದೊಣ್ಣೆಯು ನುಚ್ಚು ನೂರಾಗಿ ಹೋಯಿತು! ಕೂಡಲೆ ಅಜಿತನು ಮತ್ತೊಂದು ಬಲವಾದ ಏಟನ್ನು ಇಟ್ಟನು. ದಾರಕನು
ಬೋರ್ಲ ಬಿದ್ದು ಬಿಟ್ಟನು! ಅಜಿತನು ಅವನ ಬೆನ್ನಿನ ಮೇಲೆ ಮೊಳ
ಕಾಲೂರಿ, ಅವನ ಹಗ್ಗದಿಂದಲೇ ಅವನನ್ನು ಬಿಗಿದು, ಇತರರಿಗೆ ಯಾವ
ಗತಿಯನ್ನು ಕಾಣಿಸಿರುವೆಯೊ ಆ ದಶೆಯೇ ನಿನಗೂ ಸಂಭವಿಸಲಿ' ಎಂದು
ಹೇಳಿ, ಹತ್ತಿರವಿದ್ದ ಎರಡು ದೇವದಾರು ಮರಗಳನ್ನು ಬಗ್ಗಿಸಿ, ಅವನನ್ನು
ಅವುಗಳಿಗೆ ಕಟ್ಟಿದನು. ದಾರಕನು ಬಹಳವಾಗಿ ಬೇಡಿಕೊಂಡನು; ಅಜಿತ
ನಿಗೆ ಕರುಣೆ ಹುಟ್ಟಲಿಲ್ಲ. ಬಾಗಿಸಿದ ಮರಗಳು ನೆಟ್ಟಗಾದುವು ; ದಾರ
ಕನ ಜೀವನವು ಸಮಾಪ್ತವಾಯಿತು. ಅವನ ಅವಸ್ಥೆಯು ತೀರಿದಂತಾ
ಯಿತು. ಆ ಮೇಲೆ ಅಜಿತನು ಆ ಹೆಣವನ್ನು ಕಾಗೆಗಳ ಪಾಲುಮಾಡಿ,
ಮುಂದಕ್ಕೆ ನಡೆದನು.

ತರುವಾಯ ಅಜಿತನು ಅನೇಕ ಗಿರಿಗಹ್ವರಗಳನ್ನು ದಾಟಿ, ಅಗಲ
ಕಿರಿದಾದ ಇನ್ನೊಂದು ಸ್ಥಳಕ್ಕೆ ಬಂದನು. ಬಲಗಡೆ ಇದ್ದ ಅಗಾಧವಾದ
ಸಮುದ್ರವನ್ನು ನೋಡಲಾಗಿ, ಜಮ್ಮೆಂದು ಕಣ್ಣು ಕತ್ತಲೆ ಬರುತಿತ್ತು.

ಈ ಮಾರ್ಗವಾಗಿ ಸ್ವಲ್ಪ ದೂರ ಹೋದ ತರುವಾಯ ಒಂದು
ಬುಗ್ಗೆಯು ಕಾಣಿಸಿತು. ಅದರ ಹತ್ತಿರವೇ ಒಂದು ದೊಡ್ಡ ಒನಕೆಯನ್ನು
ಹಿಡಿದುಕೊಂಡು ಕಾಲಕಾಸುರನು ಕುಳಿತಿದ್ದನು ; ಪ್ರಯಾಣಿಕರನ್ನು
ಅಡ್ಡಯಿಸಬೇಕೆಂದು ದಾರಿಗೆ ಅಡ್ಡವಾಗಿ ಕಲ್ಲುಗಳನ್ನು ಒಟ್ಟಿದ್ದನು.

ಆತನನ್ನು ಕಂಡೊಡನೆ ಅಜಿತನು ಆರ್ಭಟಿಸುತ್ತ, “ಎಲಾ, ಕೂರ್ಮ
ಪೋಷಕ, ಇಂದು ಕೂಡ ಪಾದಪ್ರಕ್ಷಾಲನ ಆಗಬೇಕೆಂದಿರುವೆಯಾ?”
ಎಂದು ಕೇಳಿದನು.

ತತ್‌ಕ್ಷಣವೆ ಕಾಲಕನು ಎದ್ದು ನಿಂತು, “ಹೌದು, ನನ್ನ ಕೂರ್ಮ
ನಿಗೆ ಬಲು ಹಸಿವೆಯಾಗಿದೆ; ನನ್ನ ಪಾದಗಳಿಗೂ ಕ್ಷಾಲನವು ಆವಶ್ಯಕ”
ಎಂದು ಹೇಳುತ್ತ, ಕಲ್ಲಿನ ರಾಶಿಗೆ ಬೆನ್ನು ಮಾಡಿ ನಿಂತುಕೊಂಡು, ಮುಸಲ
ವನ್ನು ಎತ್ತಿದನು. ಅಜಿತನೇನು, ಬೆಚ್ಚಿದನೆ ಬೆದರಿದನೆ ? ಇಲ್ಲ. ಅವನು ಬಲು ಸೊಗ
ಸಾಗಿ ಕಾದಿದನು. ಕೊನೆಗೆ ಅಜಿತನ ಕೈಯಲ್ಲಿದ್ದ ಕಂಚೇ ತನ್ನ ಮರ
ಕ್ಕಿಂತ ಬಲವಾದ್ದೆಂಬದನ್ನು ಊಹಿಸಿ, ಕ್ಯಾಲಕನು ಗದೆಯನ್ನು ಬಿಸುಟು,
ಮುಷ್ಟಿಯುದ್ಧದಲ್ಲಿ ಆತನನ್ನು ಸೋಲಿಸಿ, ಸಮುದ್ರಕ್ಕೆ ಎಸೆದು ಬಿಡ
ಬೇಕೆಂದಿದ್ದನು. ಅಜಿತನಂತೂ ಈ ಜಟ್ಟಿ ಕಾಳಗಕ್ಕೆ ಹೊಸಬನಲ್ಲವಷ್ಟೆ!
ಅವನು ತಟ್ಟನೆ ತನ್ನ ಗದೆಯನ್ನು ಆಚೆಗೆಸೆದು, ಕ್ವಾಲಕನ ಕೊರಲನ್ನು
ಅವುಕಿ ಹಿಡಿದು, ಮೊಳಕಾಲನ್ನು ಹೊಟ್ಟೆಗಿಟ್ಟು, ಆ ಗೋಡೆಗೆ ಬಲವಾಗಿ
ಒತ್ತಿ ಹಿಡಿದನು. ಆಗ ಕ್ಷಾಲಕನಿಗೆ ಉಸುರಾಡದೆ, “ಅಯ್ಯಾ, ನನ್ನನ್ನು
ಬಿಟ್ಟುಬಿಡು ; ನಿನಗೆ ಹೋಗುವುದಕ್ಕೇನೂ ಅಡ್ಡಿ ಮಾಡುವುದಿಲ್ಲ” ಎಂದು
ಕೂಗಿದನು. ಅಜಿತನು "ಇಲ್ಲ , ಈ ಒರಟು ಹಾದಿಯು ಕಂಟಕ
ರಹಿತವಾದ ಹೊರತು ನಾನು ಹೋಗುವ ಹಾಗಿಲ್ಲ” ಎಂದು ಹೇಳಿ,
ಆತನನ್ನು ಬಲವಾಗಿ ಹಿಂದಕ್ಕೆ ಇನ್ನೂ ಇನ್ನೂ ಒತ್ತಿದನು. ಗೋಡೆಯ
ಕಲ್ಲುಗಳೆಲ್ಲವೂ ಮಾವಿನ ಮಿಡಿಗಳಂತೆ ಉದುರಿಹೋದುವು. ಕ್ಷಾಲಕನು
ತಲೆಕೆಳಗಾಗಿ ಆಚೆಗೆ ಬಿದ್ದು ಬಿಟ್ಟನು!

"ಆ ಮೇಲೆ ಕ್ಷಾಲಕನ ಗಾಯವಾದ ಮೈಯಿಂದ ನೆತ್ತರು ಹೊನಲು
ಹರಿಯುತ್ತಿರಲು ಅಜಿತನು ಅವನನ್ನು ಮೇಲಕ್ಕೆತ್ತಿ, “ಇದೆ, ಇಲ್ಲಿ ಬಾ,
ನನ್ನ ಕಾಲುಗಳನ್ನು ತೊಳೆ” ಎಂದು ಹೇಳಿ, ಕತ್ತಿಯನ್ನು ಈಚೆಗೆ ಸೆಳೆದು
ಹಿಡಿದುಕೊಂಡು, ಕೊಳದ ಬಳಿಯಲ್ಲಿ ಕುಳಿತುಕೊಂಡನು.

“ಇದೊ, ತೊಳೆ, ಇಲ್ಲದಿದ್ದರೆ ನಿನ್ನನ್ನು ಚೆಂಡಾಡಿ ಬಿಡುವೆನು !”
ಎಂದು ಪುನಃ ಗರ್ಜಿಸಿದನು.

ಕ್ಷಾಲಕನು ಅದರಿ ಬೆದರಿ ಹೆದರಿ, ಹೇಗಾದರೂ ಆತನ ಕಾಲು
ಗಳನ್ನು ತೊಳೆದನು. ಅಷ್ಟರಲ್ಲಿ ಅಜಿತನು ಇತರರಿಗೆ ನೀನಾವ ಗತಿ
ಯನ್ನು ಕಾಣಿಸಿರುವೆಯೊ ಆ ಗತಿಯೇ ನಿನಗೂ ಸಂಭವಿಸುವುದು ! ನಡೆ,
ನಿನ್ನ ಕೂರ್ಮನ ಹೊಟ್ಟೆ ತುಂಬಲಿ !” ಎಂದು ಹೇಳಿ, ಆತನನ್ನು ತುಳಿದು
ಕಡಲಿಗೆ ಬಿಸುಟನು.
ಆದರೆ ಕೂರ್ಮನು ಅವನನ್ನು ತಿಂದಿತೊ ಇಲ್ಲವೊ ಹೇಳಬರುವುದಿಲ್ಲ. ನೆಲವೂ ಜಲವೂ ಆತನ ದೇಹವನ್ನು ಮುಟ್ಟಲೊಲ್ಲವು. ಅದು ಅಷ್ಟು ತುಚ್ಛವಾದುದು ! ಆದುದರಿಂದ ಸಮುದ್ರವು ಅದನ್ನು ದಡಕ್ಕೆ ಎತ್ತಿಹಾಕಿತಂತೆ ; ದಡವು ಪುನಃ ಸಮುದ್ರಕ್ಕೆ ತಳ್ಳಿಬಿಟ್ಟಿತಂತೆ ! ಹೀಗೆಯೆ ನಡೆಯುತ್ತಿರಲು ಕೊನೆಗೆ ಕಡಲ ಅಲೆಗಳು ಸಿಟ್ಟಿನಿಂದ ಅದನ್ನು ಆಕಾಶಕ್ಕೆ ಹಾರಿಸಲು, ಅಲ್ಲಿಯೇ ಅದು ಯಾವುದೊಂದೂ ಸಂಸ್ಕಾರವು ಇಲ್ಲದೆ, ಬಹಳ ಕಾಲದ ವರೆಗೆ ಹಾಗೆಯೇ ಇದ್ದು, ಕೊನೆಗೆ ದೊಡ್ಡದೊಂದು ಶಿಲೆಯಾಗಿ ಹೋಯಿತಂತೆ, ಆ ಬಂಡೆಯು ಮಾತ್ರ ಈಗಲೂ ಆ ಸ್ಥಳದಲ್ಲಿ ಕಾಣಿಸುತ್ತಿದೆ.


V
ಮಲ್ಲ ಯುದ್ಧ

ಸಾಯಂಕಾಲವಾಗುತ್ತ ಬಂದಿತು. ಅಜಿತನು ಇನ್ನೂ ಆ ಕಾಡು
ಗುಡ್ಡಗಳಲ್ಲಿಯೇ ನಡೆದು ಹೋಗುತಿದ್ದನು. ಆತನಿಗೆ ರಾತ್ರಿಯಾದೀತೆಂಬ
ಭಯವೇನೂ ಇರಲಿಲ್ಲ. ಹೊಟ್ಟೆ ಹಸಿದರೆ ಮರಗಳಲ್ಲಿ ಹಣ್ಣುಗಳಿವೆ;
ನಿದ್ದೆ ಕವಿದರೆ ಮಲಗುವುದಕ್ಕೆ ಹಸುರು ಹುಲ್ಲು ಇದೆ. ಕತ್ತಲಾಗುವುದ
ರೊಳಗೆ ಯಾವದಾದರೊಂದು ಪಟ್ಟಣವನ್ನು ಸೇರಬೇಕೆಂಬ ಯೋಚನೆಯೇ
ಇರಲಿಲ್ಲ. ಆದುದರಿಂದ ದೂರದಲ್ಲಿ ಬೆಳ್ಳಗೆ ಕಾಣಿಸುವ ಪರ್ವತಗಳ
ಅಂದವನ್ನು ನೋಡುತ್ತ, ನಿಧಾನವಾಗಿ ನಡೆದು ಹೋಗುತ್ತ, ಹೊತ್ತು
ಮುಳುಗುವುದಕ್ಕಾದಾಗ ಕುಸುಮಪುರವೆಂಬ ಪಟ್ಟಣವನ್ನು ಮುಟ್ಟಿದನು.

ಕುಸುಮಪುರವು ಆಗಿನ ಕಾಲದಲ್ಲಿ ಹೆಸರುವಾಸಿಯಾದ ಪಟ್ಟಣ.
ಬೇಸಾಯವು ಅಲ್ಲಿಯೇ ಪ್ರಾರಂಭವಾಯಿತು. ಒಂದು ಸಲ ಭೂದೇವಿಯು
ಅವತಾರವೆತ್ತಿ ಅಲ್ಲಿಗೆ ಹೋಗಿ, ನೆಲವನ್ನು ಉತ್ತು ಬಿತ್ತುವ ಕ್ರಮಗಳನ್ನು
ಜನಗಳಿಗೆ ಉಪದೇಶಿಸಿದಳಂತೆ, ಆಕೆಯ ಗಂಡನು ಅವರಿಗೆ ಬಿತ್ತವನ್ನು
ಒದಗಿಸಿಕೊಟ್ಟನಂತೆ. ಆದುದರಿಂದ ಅಲ್ಲಿ ಭೂದೇವಿಯನ್ನೂ ಆಕೆಯ
ಪತಿಯನ್ನೂ ದೇವಾಲಯಗಳಲ್ಲಿ ಪೂಜಿಸುವ ವಾಡಿಕೆ ಇತ್ತು.

ಕುಸುಮಪುರಕ್ಕೆ ಕ್ರೂರಾಕ್ಷನೆಂಬವನು ಅರಸನಾಗಿದ್ದನು. ಆತನ
ಹೆಸರೆಷ್ಟು ಕಠಿನವೋ ಮನಸೂ ಅಷ್ಟೇ ಗಟ್ಟಿಯಾಗಿತ್ತು. ಅಲ್ಲಿಯ
ಪ್ರಜೆಗಳು ಸುಖವೆಂದರೆ ಏನೆಂದು ತಿಳಿದಿರಲಿಲ್ಲ; ಆತನೊಂದು ಸಲ ಸತ್ತರೆ
ಸಾಕೆಂದು ಹಾರೈಸುತ್ತಿದ್ದರು. ಅಜಿತನು ಅಲ್ಲಿ ಸಂತೆ ನೆರೆಯುವ ಸ್ಥಳಕ್ಕೆ ಹೋಗಿ, “ಇಲ್ಲಿಯ
ರಾಜನಾದ ಕ್ರೂರಾಕ್ಷನೆಲ್ಲಿ ? ಆತನೊಡನೆ ಕಾದಬೇಕಾಗಿದೆ ! ಇಂದು ಅವನ
ಗರ್ವವನ್ನು ಮುರಿದುಬಿಡುತ್ತೇನೆ!” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

ಇದನ್ನು ಕೇಳಿ ಜನಗಳು ಸುತ್ತಲೂ ಗುಂಪುಕಟ್ಟಿಕೊಂಡು, “ಸುಂದ
ರಾಂಗನಾದ ಯುವಕನೇ, ಏತಕ್ಕಾಗಿ ಅವನ ಕೈಯಲ್ಲಿ ಸಾಯುವೆ ?
ಆದಷ್ಟು ಬೇಗನೆ ಈ ಊರಿಂದ ಓಡಿಹೋಗು ! ನೀನು ಬಂದ ಸಂಗತಿ
ಯನ್ನು ಆ ನೀಚನಿಗೆ ತಿಳಿಯಗೊಡಿಸಬೇಡ!” ಎಂದು ಬೋಧಿಸತೊಡಗಿದರು.

ಆದರೆ ಅಜಿತನು ಅವರ ಮಾತಿಗೆ ಕಿವಿಗೊಡದೆ, ಅರಮನೆಯ ಕಡೆಗೆ
ಹೊರಟನು, ಎಲ್ಲರೂ ಆತನಿಗೆ ಹೋಗಬೇಡವೆಂದು ಪ್ರಾರ್ಥಿಸುತ್ತ ಅರ
ಮನೆಯ ಹೆಬ್ಬಾಗಿಲಿನ ವರೆಗೆ ಬಂದರು. ಆದರೆ ಒಳಕ್ಕೆ ಹೋಗುವಷ್ಟು
ಧೈರ್ಯವು ಯಾರಿಗೂ ಸಾಕಾಗಲಿಲ್ಲ. ಅಜಿತನೊಬ್ಬನೇ ಪ್ರವೇಶಿಸಿ
ದನು. ಹೆಬ್ಬಾಗಿಲಿನಿಂದ ಚಾವಡಿಯ ತನಕವೂ ಮನುಷ್ಯರ ತಲೆಯೋ
ಡುಗಳೂ, ಮೂಳೆಯ ರಾಶಿಗಳೂ ಬಿದ್ದಿದ್ದುವು. ಚಾವಡಿಯಲ್ಲಿ, ಯಾವನ
ಹೆಸರನ್ನು ಕೇಳಿದ ಮಾತ್ರದಿಂದ ಜನಗಳು ಮೈ ತೆಗೆಯುತಿದ್ದರೆ ಅಂಥ
ಕ್ರೂರಾಕ್ಷನು ಕುಳಿತಿದ್ದನು.

ಚಾವಡಿಯಲ್ಲಿ ಮತ್ತೆ ಯಾರೂ ಇರಲಿಲ್ಲ. ಕ್ರೂರಾಕ್ಷನ ಇದಿರಿ
ನಲ್ಲಿ ಬಕಾಸುರನ ಬಲಿಯಂತೆ ಅನ್ನದ ದೊಡ್ಡ ರಾಶಿಯೊಂದಿತ್ತು. ಎಡ
ಗಡೆ ಎರಡು ಹಂಡೆಗಳಲ್ಲಿ ತುಂಬ ಸೋಮರಸವಿತ್ತು. ಅವನನ್ನು ನೋಡು
ತ್ತಲೇ ಅಜಿತನು, “ಎಲೊ, ಜಟ್ಟಿಯೆ, ಇಂದು ಒಂದು ಸಲ ನಿನ್ನ ಚಮ
ತ್ಕಾರವನ್ನು ತೋರಿಸಿಬಿಡುವೆಯಾ ?” ಎಂದು ಕೇಳಿದನು.

ಕ್ರೂರಾಕ್ಷನು ಅವನನ್ನು ನೋಡಿ ನಕ್ಕು, “ಆಗಲಿ, ನನ್ನ ಕೌಶಲ
ವನ್ನು ತೋರಿಸುವೆನಂತೆ. ಆದರೆ, ಈಗ ಒಳಕ್ಕೆ ಬಾ. ನಾನೂ ಒಬ್ಬನೇ
ಇದ್ದೇನೆ, ನೀನೂ ಬಳಲಿರುವೆ. ಸಾಯುವುದಕ್ಕೆ ಮೊದಲು ಕೊಂಚ
ಊಟ ಮಾಡಿಬಿಡು” ಎಂದು ಉಪಚಾರ ಹೇಳಿದನು. ಅಜಿತನು ಅಳುಕಿಲ್ಲದೆ ಅವನ ಬಳಿ ಹೋಗಿ ಕುಳಿತುಕೊಂಡನು.
ಇಬ್ಬರೂ ಉಣ್ಣುವುದಕ್ಕೆ ತೊಡಗಿದರು. ಅಜಿತನು ತನ್ನಿಂದಾದಷ್ಟು ಅನ್ನ
ವನ್ನು ಹೊಟ್ಟೆಗೆ ಅಡಸಿಕೊಂಡನು ; ಮೂವರು ಉಣ್ಣುವಷ್ಟು ಅವನೂ
ಬ್ಬನೇ ಉಂಡಿರಬಹುದು. ಕ್ರೂರಾಕ್ಷನು ಏಳು ಮಂದಿಯ ಗ್ರಾಸವನ್ನು
ಒಬ್ಬನೇ ತಿಂದುಬಿಟ್ಟನು.

ಊಟದ ಹೊತ್ತಿಗೆ ಒಬ್ಬರನ್ನೊಬ್ಬರು ಓರೆಗಣ್ಣಿನಿಂದ ನೋಡು
ತ್ತಿದ್ದರೂ, ಅವರೊಳಗೆ ಮಾತುಕಥೆಗಳೇನೂ ನಡೆಯಲಿಲ್ಲ. ಒಬ್ಬನು
ಮತ್ತೊಬ್ಬನನ್ನು ನೋಡಿ, “ಆತನ ರಟ್ಟೆಗಳು ಬಲವಾಗಿವೆ; ಆದರೆ ನನ್ನ
ಭುಜಗಳು ಕೂಡ ಅಷ್ಟೇ ಬಲವಾಗಿರಬಹುದು" ಎಂದು ಮನಸ್ಸಿನೊಳಗೆ
ಅಂದುಕೊಳ್ಳುತಿದ್ದನು.

ಕೊನೆಗೆ ಅನ್ನದ ರಾಶಿ ಮುಗಿಯಿತು, ಹಂಡೆಗಳು ಬರಿದಾದುವು.
ಆ ಮೇಲೆ ಕೂರಾಕ್ಷನು ಎದ್ದು , “ಆಗಲಿ, ಇನ್ನು ಬೇಕಾದರೆ ನಮ್ಮ
ನಮ್ಮ ಸಾಹಸವನ್ನು ತೋರಿಸೋಣ” ಎಂದು ಹೇಳಿದನು.

ಈಗ ನೋಡು, ಇಬ್ಬರು ವೀರರೂ ತಂತಮ್ಮ ಅಂಗಿಗಳನ್ನು ತೆಗೆದು
ಆಚೆಗಿಟ್ಟು, ಅಂಗಳಕ್ಕೆ ಇಳಿವರು. ಕ್ರೂರಾಕ್ಷನು ಆ ಮೂಳೆಗಳ ರಾಶಿ
ಯನ್ನು ಕೊಂಚ ಬಿಡಿಸಿಕೊಳ್ಳುವನು. ಸಣ್ಣಾದ ಉಸುಬನ್ನು ತರಿಸಿ
ನಡುವೆ ಹಸರಿಸುವನು. ಈಗ ಇಬ್ಬರೂ ಎದುರು ಎದುರಾಗಿ ನಿಂತು
ಕೊಂಡರು. ಅವರ ಕಣ್ಣುಗಳು ಕಾಡುಕೋಣಗಳ ಕಣ್ಣುಗಳಂತೆ ತಳ
ತಳಿಸುತ್ತಿದ್ದುವು. "ಇದರ ಪರಿಣಾಮವು ಏನಾಗುವುದೋ, ನೋಡೋಣ"
ಎಂದು ಕುತೂಹಲವುಳ್ಳವರಾಗಿ, ಜನರು ಹೆಬ್ಬಾಗಿಲಿನ ಬಳಿ ನಿಂತುಕೊಂಡು
ಇಣಿಕಿ ನೋಡುತಿದ್ದರು.

}ಇಬ್ಬರೂ ಬಲುಹೊತ್ತು ಕಾದಾಡಿದರು ; ಎಷ್ಟು ಸಮಯವೆಂದು
ಹೇಳುವುದಕ್ಕೆ ಬಾರದು. ಆಕಾಶದಲ್ಲಿ ಮೂಡಿದ ತಾರೆಗಳು ಅವರ
ತಲೆಯ ಮೇಲೆ ತಳತಳಿಸಿ, ಕೆಳಗಡೆ ಇಳಿದು, ಸುತ್ತು ಸುತ್ತ ತಿರುಗಿದುವು. ಕಳದಲ್ಲಿದ್ದ ಮಳಲು ಇವರ ತುಳಿತದಿಂದ ಹೆಂಟೆಕಟ್ಟಿತು. ಆದರೂ ಕಾದಾ
ಟವು ಮುಗಿಯಲಿಲ್ಲ. ಕತ್ತಲೆಯಲ್ಲಿ ಅವರ ಕಣ್ಣುಗಳು ಚುಕ್ಕೆಗಳಂತ
ಮಿಣುಕುತಿದ್ದುವು ; ಎದೆಗಳು ತಿದಿಯಂತೆ ಬುಸುಗುಟ್ಟುತ್ತಿದ್ದುವು; ಉಸಿರು
ಮುಗಿಲುಗಳಂತೆ ಮೇಲಕ್ಕೆ ಹೋಗುತಿತ್ತು. ಒಬ್ಬನಾದರೂ ಒಂದು ಹೆಜ್ಜೆ
ಕೂಡ ಬಿಟ್ಟು ಕೊಡಲಿಲ್ಲ ! ನೋಡುತಿದ್ದ ಜನರು ಉಣ್ಣುವುದನ್ನೂ ಕುಡಿ
ಯುವುದನ್ನೂ ಮರೆತು, ನಿಂತಲ್ಲಿಯೇ ನಿಂತಿದ್ದರು !

ಕೊನೆಗೆ ಕ್ರೂರಾಕ್ಷನಿಗೆ ಸಿಟ್ಟು ಬಂದು, ಅಜಿತನ ಕೊರಳನ್ನು ಅವುಕಿ
ಹಿಡಿದು, ನಾಯಿಯು ಇಲಿಯನ್ನು ಕೊಡಹುವಂತೆ ಕೊಡಹಿದನು. ಆದರೆ
ಅಜಿತನ ನೆಲದಿಂದ ಅಡಿ ತಪ್ಪಲಿಲ್ಲ.

ಈ ಸಂದರ್ಭದಲ್ಲಿ ಅಜಿತನು ಅವನ ನಡುವನ್ನು ಬಿಗಿಯಾಗಿ
ಹಿಡಿದುಕೊಂಡು, ತನ್ನ ಸೊಂಟವನ್ನು ಅವನ ತೊಡೆಗಳ ನಡುವೆ ತುರುಕಿ
ಒಂದು ಸಾರಿ ಹಿಗ್ಗಿ ಬಿಟ್ಟನು. ಆಗ ಅಜಿತನ ಕೈಯನ್ನು ಹಿಡಿದು
ಕೊಂಡಿದ್ದ ಕ್ರೂರಾಕ್ಷನು ದೊಪ್ಪನೆ ನೆಲದ ಮೇಲೆ ಅಂಗಾತ ಬಿದ್ದು
ಹೋದನು. ತತ್‌ಕ್ಷಣವೇ ಅಜಿತನು ಅವನ ಮೇಲೆ ಸಿಡಿದು, “ಶರಣಾ
ಗತನಾಗು, ಇಲ್ಲವಾದರೆ ಕೊಂದುಬಿಡುತ್ತೇನೆ” ಎಂದು ಆರ್ಭಟಿಸಿದನು
ಆದರೆ ಕ್ರೂರಾಕ್ಷನ ಬಾಯಿಂದ ಹೇಗೆ ತಾನೆ ಮಾತು ಹೊರಡುವುದು
ಬಿದ್ದ ಪೆಟ್ಟಿನಿಂದಲೂ, ತಿಂದ ಅನ್ನದಿಂದಲೂ, ಕುಡಿದ ಸೋಮರಸ
ದಿಂದಲೂ ಅವನ ಹೊಟ್ಟೆಯು ಬಿರಿದುಹೋಗಿ, ಅವನ ಹೃದಯದಿಂದ ಪ್ರಾಣ
ವಾಯುವು ಹಾರಿಹೋಗಿತ್ತು.

ಆ ಮೇಲೆ ಅಜಿತನು ಮನೆಯ ಹೆಬ್ಬಾಗಿಲನ್ನು ತೆರೆದು, ಹೊರಗಿದ್ದ
ಜನಗಳನ್ನು ಒಳಕ್ಕೆ ಬಿಟ್ಟನು. ಅವರೆಲ್ಲರೂ ಏಕಕಂಠದಿಂದ “ನೀನು
ಕ್ರೂರಾಕ್ಷನನ್ನು ಧ್ವಂಸಮಾಡಿದೆ, ಆದ್ದರಿಂದ ಇನ್ನು ನಮ್ಮ ರಾಜನಾ
ಗಿ ಸುಖವಾಗಿ ಆಳಿಕೊಂಡಿರು” ಎಂದು ಪ್ರಾರ್ಥಿಸಿದರು.

ಅದಕ್ಕೆ ಅಜಿತನು ಆಗಲಿ! ನಾನೇ ನಿಮ್ಮ ರಾಜನಾಗುವೆನಂತೆ ಇಲ್ಲಿ ನೀತಿತಪ್ಪದೆ ಚೆನ್ನಾಗಿ ರಾಜ್ಯಭಾರ ಮಾಡುವೆನು. ಅದಕ್ಕೋಸ್ಕರ
ವಲ್ಲವೆ ಕಂಟಕಗಳನ್ನೆಲ್ಲಾ ನಿವಾರಿಸುತ್ತ ಬಂದೆನು ? ದಾರಕನೂ ಹೋ
ದನು ! ಕ್ವಾಲಕನೂ ಹೋದನು ! ಈತನೇ ಕೊನೆಯವನು !” ಎಂದು
ಹೇಳಿದನು.

ಆಗ ಒಬ್ಬ ವೃದ್ಧನು “ಅಯ್ಯಾ, ಶೂರನೆ ! ದಾರಕನನ್ನು ಕೊಂದು
ಹಾಕಿದೆಯಾ ? ಹಾಗಾದರೆ ನೀನೆಲ್ಲಿಗೆ ಹೋಗಬೇಕೆಂದಿರುವೆಯೊ ಆ
ಯವನದೇಶಕ್ಕೆ ಒಡೆಯನಾದ ತಾರಾಪತಿಯನ್ನು ನೋಡಿಕೊ ! ಆತನಿಗೂ
ದಾರಕನಿಗೂ ಏನೂ ಹತ್ತಿರದ ಸಂಬಂಧವಿರಬೇಕು ! ” ಎಂದು ಎಚ್ಚ
ರಿಸಿದನು.

ಇದನ್ನು ಕೇಳಿ ಅಜಿತನು, “ಹಾಹಾ ! ಸ್ವಂತ ಬಂಧುವನ್ನೇ
ಕೊಂದಂತಾಯಿತು ! ಆದರೆ ಅವನಿಗದು ತಕ್ಕದಾದ ದಂಡನೆಯೇ ಸರಿ !
ಅವನು ಮಹಾ ಪಾತಕಿ, ಲೋಕೋಪಕಾರಕ್ಕಾಗಿ ಕೊಂದೆನು. ಈಗ
ನನ್ನ ಗೋತ್ರಹತ್ಯದ ದೋಷವು ಹೇಗೆ ತಾನೆ ಪರಿಹಾರವಾದೀತು ?"
ಎಂದು ಕೇಳಿದನು.

ಆಗ ಆ ಮುದುಕನು ಇದಕ್ಕೆ ಪ್ರಾಯಶ್ಚಿತ್ತವನ್ನು ಮಾಡತಕ್ಕ
ವರು ಅಶ್ವಿನೀ ಕುಮಾರರೇ ಸರಿ. ಅವರಿಗೆ ದೇವತೆಗಳ ರಹಸ್ಯಗಳೆಲ್ಲವೂ
ಗೊತ್ತು, ಧವಳಗಿರಿಯಲ್ಲಿಯ ಗಂಗಾತೀರವು ಅವರ ವಾಸಸ್ಥಾನ. ನೀನು
ಮೊದಲು ಅವರ ಬಳಿಗೆ ಹೋಗಿ ಪವಿತ್ರನಾಗಿ ಬಾ ; ಆಮೇಲೆ ನಮ್ಮನ್ನಾ
ಳುವೆಯಂತೆ" ಎಂದು ಹೇಳಿದನು.

ಅಜಿತನು ಅದಕ್ಕೊಪ್ಪಿಕೊಂಡು ಜನಗಳು ತನ್ನನ್ನು ರಾಜನಾಗಿ
ಸ್ವೀಕರಿಸುವುದೆಂಬ ನಂಬಿಗೆಯನ್ನು ಪಡೆದುಕೊಂಡು, ಧವಳಗಿರಿಗೆ ಹೊರಟು
ಹೋದನು.


VI
ಮೋಸದ ಹಾಸು

ವಳಗಿರಿಗೆ ಹೋಗುವ ಮಾರ್ಗವು ಪರ್ವತಗಳಿಂದ ಇಡಿಕಿರಿದು
ಹೋಗಿತ್ತು. ಅಜಿತನು ಕೆಲ ಗಾವುದ ದೂರ ಹೋದ ಮೇಲೆ, ಒಂದು
ಕಡೆ, ದೀರ್ಘಾಕಾರನಾಗಿಯೂ ದೃಢಕಾಯನಾಗಿಯೂ ಇದ್ದ ಮನುಷ್ಯ
ನೊಬ್ಬನು ಬರುತಿದ್ದುದನ್ನು ಕಂಡನು. ಆತನು ಬಹು ಬೆಲೆಯುಳ್ಳ ಉಡು
ಪನ್ನು ಉಟ್ಟುಕೊಂಡಿದ್ದನು ; ಕೈಗೆ ಕಂಕಣಗಳೂ ಕುತ್ತಿಗೆಗೆ ರತ್ನ
ಮಾಲಿಕೆಗಳೂ ಇದ್ದುವು.

ಆ ವ್ಯಕ್ತಿಯು ಹತ್ತಿರ ಬರುತ್ತಲೆ ಅಜಿತನನ್ನು ವಂದಿಸಿ, ಆತನಿಗೆ
ಹಸ್ತಲಾಘವವನ್ನು ಕೊಟ್ಟು, “ಅಯ್ಯಾ, ತಾವು ಈ ಪರ್ವತಪ್ರಾಂತಕ್ಕೆ
ಬಂದುದರಿಂದ ನನಗೆ ಪರಮಾನಂದವಾಯಿತು. ಅತಿಥಿ ಸತ್ಕಾರಕ್ಕಿಂತಲೂ
ಶ್ರೇಷ್ಠವಾದುದು ಬೇರೇನಿದೆ ? ತುಂಬ ಬಳಲಿರುವಂತೆ ಕಾಣಿಸುತ್ತೀರಿ ;
ನಮ್ಮ ಅರಮನೆಗೆ ಬಂದು ಕೊಂಚ ವಿಶ್ರಮಿಸಿಕೊಳ್ಳೋಣಾಗಲಿ” ಎಂದು
ಹೇಳಿದನು.

ಅದಕ್ಕೆ ಅಜಿತನು “ಅಯ್ಯಾ, ನಾನೂ ಧನ್ಯನಾದೆನು. ಆದರೆ
ನನಗೆ ತ್ವರೆಯಾಗಿ ಧವಳಗಿರಿಗೆ ಹೋಗಬೇಕಾಗಿದೆ. ಆದುದರಿಂದ
ನನ್ನನ್ನು ಕ್ಷಮಿಸೋಣಾಗಲಿ,” ಎಂದು ವಿನಯಪೂರ್ವಕವಾಗಿ ಹೇಳಿದನು.

ಆಗ ಅಪರಿಚಿತ ವ್ಯಕ್ತಿಯು “ಓಹೋ! ಹಾಗಾದರೆ ತಾವು ಹಾದಿ
ತಪ್ಪಿ, ಬಹು ದೂರ ಬಂದಿರಿ. ಇಂದು ಧವಳಗಿರಿಯನ್ನು ಸೇರುವುದಕ್ಕೆ
ಸಾಧ್ಯವಿಲ್ಲ. ಬೆಟ್ಟಗಳ ನಡುವೆ ಹಲವು ಗಾವುದ ನಡೆಯಬೇಕಾಗಿದೆ;
ಮಾರ್ಗವೂ ಚೆನ್ನಾಗಿಲ್ಲ. ಅಲ್ಲಲ್ಲಿ ಹಳ್ಳತಿಟ್ಟೆಗಳೂ ಇರುವುದರಿಂದ, ಹೊತ್ತು ಮುಳುಗಿದ ಮೇಲೆ ಹೋಗುವುದೂ ಸರಿಯಲ್ಲ. ತಾವು ಸಿಕ್ಕಿ
ದುದು ಒಳ್ಳೆಯದಾಯಿತು. ಅದರಲ್ಲಿಯೂ, ನನಗೆ ಪರಸ್ಥಳದವರನ್ನು
ಕರೆದುಕೊಂಡು ಹೋಗಿ ಊಟ ಉಪಚಾರಗಳನ್ನು ಮಾಡಿಸಿ, ಅವ
ರಿಂದ ಇತರ ದೇಶಗಳ ವೃತ್ತಾಂತವನ್ನು ಕೇಳುವುದೆಂದರೆ ತುಂಬ ಇಷ್ಟ,
ಈಗ ನಮ್ಮ ಅರಮನೆಗೆ ಹೋಗೋಣ ; ತಾವು ಒಂದಿಷ್ಟು ಉಂಡುಕೊಂಡು
ಸುಖವಾಗಿ ನಿದ್ದೆ ಹೋಗಬಹುದು. ನಮ್ಮಲ್ಲಿ ಒಂದು ಹಾಸಿಗೆ ಇದೆ; ಬಂದ
ಬಂದವರು ಅದನ್ನು ಹೊಗಳುತ್ತಾರೆ; ಅಂಥ ಹಾಸನ್ನು ಯಾರೂ ಎಲ್ಲಿ
ಯೂ ನೋಡಲಿಲ್ಲ ವಂತೆ! ಅದರಲ್ಲಿ ಮಲಗುವವನು ನಿಡುಮೈಯವನಾಗಲಿ,
ಗುಜ್ಜಾರಿಯೇ ಆಗಲಿ, ಹಾಸಿಗೆಯು ಅವನಿಗೆ ಹಾಳಿತವಾಗುವುದು ; ಒಂದೆ
ಳ್ಳಿನಷ್ಟು ಕೂಡ ಹೆಚ್ಚು ಕಡಮೆ ಬಾರದು ! ಇನ್ನು ಅದರ ಮೇಲೆ ಒಬ್ಬನು
ಒರಗಿದನೆಂದರೆ, ಅಂಥ ನಿದ್ರೆಯು ಆತನಿಗದು ಮೊದಲು ಎಂದೂ ಹತ್ತಿರ
ಲಾರದು,” ಎಂದು ಹೇಳಿ ಅಜಿತನ ಕೈಯನ್ನು ಹಿಡಿದುಕೊಂಡು, ಆತನನ್ನು
ಮುಂದರಿಸಲೀಸದೆ, ತಂಗುವುದಕ್ಕೆ ಒತ್ತಾಯ ಮಾಡಿದನು.

ಅಜಿತನಿಗೆ ಆ ದಿನ ಅಲ್ಲಿ ಉಳುಕೊಳ್ಳುವುದಕ್ಕೆ ಸಂತೋಷವಿದ್ದಿಲ್ಲವಾ
ದರೂ, ಅಂಥ ದೊಡ್ಡ ಮನಸ್ಸಿನವನ ಮಾತನ್ನು ತೆಗೆದುಹಾಕುವುದು ಸರಿ
ಯಲ್ಲ ಎಂದು ಕಂಡಿತು. ಅದಲ್ಲದೆ ಆ ಅದ್ಭುತವಾದ ಹಾಸಿಗೆಯನ್ನು
ಒಂದು ಸಲ ನೋಡಬೇಕೆಂಬ ಕುತೂಹಲವೂ ಇತ್ತು. ತುಂಬ ಬಳಲಿದ್ದುದ
ರಿಂದ ಹಸಿವೂ ಆಗಿತ್ತು, ಆದರೆ ಆ ಮನುಷ್ಯನನ್ನು ಕಂಡರೆ ಅಜಿತನಿಗೆ
ಏನೂ ಕಾಣುತಿತ್ತು. ಏನೆಂದು ತಿಳಿಯದು. ಅವನ ಸ್ವರವು ಅಷ್ಟೊಂದು
ಕರ್ಕಶವಾಗಿಯೂ ಇರಲಿಲ್ಲ, ಮೃದುವಾಗಿಯೂ ಇರಲಿಲ್ಲ; ಕಪ್ಪೆಯ
ಗೋ೦ಕರಿನಂತಿತ್ತು. ಕಣ್ಣುಗಳಲ್ಲಿ ದಯೆತೋರುತಿದ್ದ ರೂ ರಕ್ತಚ್ಛಾಯೆ
ಇರಲಿಲ್ಲ. ಹೇಗೂ ಇರಲಿ, ತಾನು ಅವನ ಸತ್ಕಾರಗಳನ್ನು ಕೈಕೊಳ್ಳದೆ
ಇರಬಾರದೆಂದು ಅಜಿತನು ಅರಮನೆಗೆ ಹೊರಟನು.

ಅರಮನೆಗೆ ಹೋಗುವ ದಾರಿಯಲ್ಲಿ ಬಂಡೆಗಳೂ ಕಣಿವೆಗಳೂ ಬಹಳ
ವಾಗಿದ್ದುವು. ಒಂದು ಮರವಾಗಲಿ ಪೊದೆಯಾಗಲಿ ಎಲ್ಲಿಯೂ ಕಣ್ಣಿಗೆ
೨೮

ಬೀಳಲಿಲ್ಲ. ಒಂದು ನದಿಯು ಪಾತಾಳ ಲೋಕಕ್ಕೆ ದುಮುಕುವುದೋ
ಎಂಬಂತೆ ಹರಿಯುವ ಶಬ್ದವು ಮಾತ್ರ ಕೇಳಿಸುತಿತ್ತು. ಮಂಜುಗಡ್ಡೆ
ಮುಚ್ಚಿದ ಬೆಟ್ಟ ತಪ್ಪಲುಗಳಿಂದ ಬೀಸುತಿದ್ದ ಗಾಳಿ ತಂಪಾಗಿತ್ತು. ಅಜಿತ
ನಿಗೆ ಇಂಥ ನಿರ್ಜನವಾದ ಪ್ರದೇಶವನ್ನು ಕಂಡು ಮನಸ್ಸು ಕದಲಿ, ತಮ್ಮ
ಅರಮನೆ ಇರುವ ಸ್ಥಳವು ಅಷ್ಟೊಂದು ಉತ್ತಮವಲ್ಲ ವೆಂದು ಕಾಣುತ್ತಿದೆ,
ಅಲ್ಲವೆ? ” ಎಂದು ಕೇಳಿದನು.

“ಹಾಗೇನೂ ಇಲ್ಲ. ಅಲ್ಲಿಗೆ ಹೋದೆವೆಂದರೆ ಎಲ್ಲವೂ ಸರಿಯಾಗು
ವುದು. ಆದರೆ, ಅವರು ಯಾರು ಬರುತ್ತಿರುವವರು ? ಎಂದು ಹೇಳುತ್ತ
ಆ ಅಪರಿಚಿತ ವ್ಯಕ್ತಿಯು ಹಿಂತಿರುಗಿ ನೋಡಿದನು. ದೂರದಲ್ಲಿ ಕೆಲವರು
ಸಾಹುಕಾರರು ಕತ್ತೆಗಳ ಮೇಲೆ ಹೇರು ಹೇರಿಸಿಕೊಂಡು ಬರುತ್ತಿದ್ದರು.

“ಅಯ್ಯೋ, ಪಾಪ! ನಾನು ಹಿಂದಕ್ಕೆ ನೋಡಿದ್ದು ಒಳ್ಳೆಯದಾಯಿತು,
ಈ ಬಂಡೆಗಳ ನಡುವೆ ಅವರೇನು ತಾನೆ ಮಾಡಿಯಾರು ? ನನಗೂ ಅನೇ
ಕರು ಅತಿಥಿಗಳು ಸಿಕ್ಕಿದಂತಾಯಿತು. ಇಂದು ಎಲ್ಲರೂ ಒಟ್ಟಿಗೆ ಕುಳಿತು
ಕೊಂಡು, ಭೋಜನಮಾಡಿ ಸಂತೋಷವಾಗಿರೋಣ. ಇಲ್ಲಿ ಕೊಂಚ
ಇರಿ, ಅವರನ್ನು ಕರೆದುಕೊಂಡು ಬರುತ್ತೇನೆ. ಇಂದು ನನ್ನ ದೆಸೆಯು
ಬೆಳಗುತ್ತಿದೆ. ಒಂದೇ ಸಲ ಎಷ್ಟು ಮಂದಿ ? ಧನ್ಯನೇ ಸರಿ !” ಎಂದು
ಹೇಳಿ, ಆ ಸಾಹುಕಾರರಿಗೆ ಅಲ್ಲಿಯೇ ನಿಲ್ಲುವಂತೆ ಸನ್ನೆ ಮಾಡುತ್ತ ಬೆಟ್ಟದ
ಕೆಳಗಿಳಿದು, ಹೋದನು. ಅಜಿತನು ಮೆಲ್ಲ ಮೆಲ್ಲಗೆ ಮುಂದುವರಿದನು.

ಸ್ವಲ್ಪ ದೂರದಲ್ಲಿ ಒಬ್ಬ ಮುದುಕನು ಮಾರ್ಗದ ಬಳಿ ಇದ್ದ ಒಂದು
ಕಟ್ಟಿಗೆಯ ಹೊರೆಯನ್ನು ಎತ್ತಿ, ತಲೆಯ ಮೇಲಿಟ್ಟು ಕೊಳ್ಳುವುದಕ್ಕೆ ಯತ್ನಿ
ಸುತ್ತಿದ್ದನು. ಅವನು ಅಜಿತನನ್ನು ಕಂಡು, “ಅಯ್ಯಾ, ಯುವಕನೆ, ನನಗೆ
ವಯಸ್ಸು ಮೀರಿಹೋಗಿದೆ. ಕೈಕಾಲುಗಳಲ್ಲಿ ತ್ರಾಣವಿಲ್ಲ. ದಯವಿಟ್ಟು
ಕೊಂಚ ಕೈಕೊಡುವೆಯಾ ?” ಎಂದು ಕೇಳಿದನು.

ಕೂಡಲೇ ಅಜಿತನು ಹೊರೆಯನ್ನು ಅವನ ತಲೆಗೆತ್ತಿದನು. ಮುದು ಕನು ಸಂತೋಷದಿಂದ ಆತನನ್ನು ಹರಸಿ, “ಅಯ್ಯಾ ನೀನು ಯಾರು ?
ಈ ಮಾರ್ಗವಾಗಿ ಎಲ್ಲಿಗೆ ಹೋಗುತ್ತಿರುವೆ ?” ಎಂದು ಪ್ರಶ್ನೆ ಮಾಡಿದನು.

ಅದಕ್ಕೆ ಅಜಿತನು, “ನಾನು ಯಾರೆಂಬುದು ನನ್ನ ಹೆತ್ತವರಿಗೆನೇ
ಗೊತ್ತು ; ಈ ಮಾರ್ಗವಾಗಿ ಬರುವುದಕ್ಕೆ ಕಾರಣವೇನೆಂದರೆ, ಒಬ್ಬ
ಶ್ರೀಮಂತನು ನನ್ನನ್ನು ಊಟಕ್ಕೆ ಕರೆದಿದ್ದಾನೆ; ಆತನಲ್ಲಿ ಒಂದು ಅಪೂರ್ವ
ವಾದ ಹಾಸಿಗೆ ಇದೆಯಂತೆ ! ಅದನ್ನು ಅವನು ಇಂದು ನನಗೆ ಕೊಡುವ
ನಂತೆ !' ” ಎಂದು ಹೇಳಿದನು.

ತತ್‌ಕ್ಷಣವೆ ವೃದ್ಧನು ತನ್ನ ಎರಡು ಕೈಗಳನ್ನು ಜೋಡಿಸಿ ಹಿಡಿದು
ಕೊಂಡು, “ಅಯ್ಯಯ್ಯೋ ! ಸಾಯುವುದಕ್ಕೆ ಹೊರಟಿರುವೆ! ಎಲಾ,
ಮಾರಕನೆ ! ನಿನ್ನ ಹೊಟ್ಟೆ ಇನ್ನೂ ತುಂಬಲಾರದೆ ?” ಎಂದು ಅರಚಿ
ಕೊಂಡು, “ಅಯ್ಯಾ, ಯುವಕನೆ, ನೀನು ಚಿತ್ರವಧೆಯನ್ನು ಅನುಭವಿಸಲು
ಹೊರಟಿರುವೆ, ಬಲ್ಲೆಯಾ ? ನಿನ್ನನ್ನು ಕಂಡವನು ಮಾರಕನೆಂಬ ಪಾತಕಿ ;
ಜನರನ್ನು ಕೊಲ್ಲುವವನು! ಅವನ ಕೈಗೆ ಸಿಕ್ಕಿದವರೆಲ್ಲರೂ ಮೃತ್ಯುವಿನ
ಬಾಯಿಗೆ ತುತ್ತಾಗಿರುವರು. ಹಾಸಿಗೆಯು ಎಂಥವರಿಗೂ ಸರಿ
ಯಾಗುವುದು ಎಂಬುದು ನಿಜ! ಆದರೆ ಅದರ ಮೇಲೆ ಮಲಗಿದವನು
ಮತ್ತೆ ಏಳುವುದಿಲ್ಲ !” ಎಂದು ಹೇಳಿದನು.

ಅಜಿತನು ಆಶ್ಚರ್ಯದಿಂದ 'ಅದೇಕೆ ಹಾಗೆ' ಎಂದು ಕೇಳಲು, ಆ
ಮುದುಕನು, “ಏಕಂದರೆ, ಆ ಕ್ರೂರಿಯು ಉದ್ದವಾಗಿದ್ದವರ ಕಾಲು
ಗಳನ್ನು ಕತ್ತರಿಸಿ ಹಾಳಿತಕ್ಕೆ ತರುವನು, ಗಿಡ್ಡಗಿದ್ದವರ ದೇಹವನ್ನು
ಉದ್ದಕ್ಕೆ ಎಳೆದು ಸರಿಮಾಡುವನು ! ಇದುವರೆಗೆ ಬದುಕಿಕೊಂಡವನು
ನಾನೊಬ್ಬನೇ ಸರಿ ! ನನ್ನ ದೇಹವು ಅದಕ್ಕೆ ಸರಿಯಾಗಿ ಎರಕ ಹೊಯಿ
ದಂತಿತ್ತು. ಆದುದರಿಂದ ನನ್ನನ್ನು ಆ ಚಿತ್ರವಧೆಯಿಂದ ಉಳಿಸಿದನು.
ಇಂದಿಗೆ ಏಳು ವರುಷಗಳು ಸಂದುಹೋದುವು. ನಾನು ಕೂಡ ಒಂದು
ಸಲ ಶ್ರೀಮಂತನಾದ ವರ್ತಕನಾಗಿದ್ದೆ ! ಆದರೆ ಈಗ ಮಾತ್ರ ಎಲ್ಲರಿಗೂ ಕಾಲಭೈರವನಂತೆ ಇರುವ ಈ ಮಾರಕನಲ್ಲಿ ಸೌದೆ ಒಡೆದು ನೀರು ಸೇದ
ಬೇಕಾದ ಈ ದುರವಸ್ಥೆಯು ನನಗೆ ಪ್ರಾಪ್ತವಾಗಿದೆ !” ಎಂದು ದುಃಖ
ದಿಂದ ಹೇಳಿದನು.

ಅಜಿತನು ಅದಕ್ಕೆ ಏನೊಂದು ಉತ್ತರವನ್ನೂ ಕೊಡಲಿಲ್ಲ; ಸಿಟ್ಟಿನಿಂದ
ಹಲ್ಲು ಮಾತ್ರ ಕಡಿದನು, ಮುದುಕನು ಮತ್ತೂ ಹೇಳತೊಡಗಿದನು.
ಇಲ್ಲಿಂದ ಬೇಗನೆ ತಪ್ಪಿಸಿಕೊಂಡು ಹೋಗು ; ನಿನ್ನಲ್ಲಿ ಆತನಿಗೆ ಏನೂ
ಕರುಣೆ ಹುಟ್ಟದು. ನಿನ್ನೆ ತಾನೆ ಒಬ್ಬ ಯುವಕನನ್ನೂ ಒಬ್ಬ ಯುವತಿ
ಯನ್ನೂ ಆತನು ಕರೆದುಕೊಂಡು ಬಂದಿದ್ದನು. ಯುವಕನ ಕೈ ಕಾಲು
ಗಳನ್ನು ಕತ್ತರಿಸಿಬಿಟ್ಟನು! ಯುವತಿಯ ದೇಹವನ್ನು ಲಂಬಿಸಿಬಿಟ್ಟನು !
ಇಬ್ಬರೂ ಸತ್ತು ಹೋದರು. ಆದರೆ ನನಗೇನು ಅಳುಬಾರದು, ನೋಡಿ
ನೋಡಿ ಸಾಕಾಯಿತು ! ಈಗ ನೀನು ಹೇಗಾದರೂ ಮಾಡಿ ಓಡಿಹೋಗ
ಬೇಕು. ಎಲ್ಲಿಗೆ ತಾನೆ ಓಡಿಹೋಗುವೆ? ಈ ಬಂಡೆಗಳು ಬಹು ಎತ್ತರ
ವಾಗಿವೆ ; ನೀನು ಹತ್ತಲಾರೆ ! ಬೇರೆ ಹಾದಿಯಿಂದ ಹೋಗುವೆಯೆಂದರೆ
ಇಲ್ಲಿ ಇರುವುದೊಂದೇ ಹಾದಿ !” ಎಂದು ತಳಮಳಿಸಿದನು.

ಅಜಿತನು ಕೂಡಲೆ ಮುದುಕನ ಕೈಯನ್ನು ಮುಟ್ಟಿ ಹಿಡಿದು
ಕೊಂಡು, “ಓಡಿಹೋಗುವ ಆವಶ್ಯಕವಿಲ್ಲ” ಎಂದು ಹೇಳಿ, ಬಂದ
ಹಾದಿಯಿಂದಲೇ ಹಿಂದೆ ಹೋಗುವುದಕ್ಕೆ ಹೊರಟನು.

ಆಗ ಮುದುಕನು “ಅಯಾ, ನಾನು ಹೀಗೆ ಹೇಳಿದೆನೆಂದು ಆ
ಮಾರಕನಿಗೆ ಮಾತ್ರ ತಿಳಿಸಬೇಡ, ಕಂಡೆಯಾ? ನನ್ನನ್ನು ಚಿತ್ರವಧೆ
ಮಾಡಿಬಿಟ್ಟಾನು !” ಎಂದು ಬಹು ದೈನ್ಯದಿಂದ ಪ್ರಾರ್ಥಿಸಿದನು. ಅಜಿತನು
ಕಿಡಿಕಿಡಿಯಾಗುತ್ತ ಹೊರಟುಹೋಗುತಿದ್ದನು.

"ಈ ರಾಜ್ಯದ ಆಡಳಿತೆ ಏನೂ ಚೆನ್ನಾಗಿಲ್ಲ. ಇಂಥ ದುಷ್ಟರನ್ನು
ಸಂಹಾರಮಾಡಿ ಮುಗಿಸಿಬಿಡುವ ಕಾಲವು ಎಂದಿಗೆ ಪ್ರಾಪ್ತಿಸುವುದೋ"?
ಎಂದು ಯೋಚಿಸುತ್ತ ಹೋಗುವಷ್ಟರಲ್ಲಿ, ಮಾರಕನು ಆ ಸಾಹುಕಾರರನ್ನು ಕರೆದುಕೊಂಡು ಅಲ್ಲಿಗೆ ಬಂದನು, ಸಾಹುಕಾರರು ಸಂತೋಷದಿಂದ ಮಾತನಾಡುತ್ತಲೂ ನಗುತ್ತಲೂ ಬರುತಿದ್ದರು. ಮಾರಕನು ಅಜಿತನ ಬಳಿ ಹೋಗಿ, "ಅಯ್ಯಾ ಕ್ಷಮಿಸಿರಿ ; ಬಹಳ ಹೊತ್ತು ತಡಿಸಿಬಿಟ್ಟೆನಲ್ಲವೆ ?” ಎಂದನು.

ಅದಕ್ಕೆ ಅಜಿತನ ಉತ್ತರವು ಬೇರೆಯೇ ಆಯಿತು. “ ಊರೆಲ್ಲಾ ಧರ್ಮವನ್ನು ಸಂಸ್ಥಾಪಿಸುವ ಕಾಲಕ್ಕೆ, ಬಂದಬಂದವರನ್ನು ಮಂಚದ ಮೇಲೆ ಮಲಗಿಸಿ, ಕೈ ಕಾಲುಗಳನ್ನು ಕತ್ತರಿಸುವಂಥ ದುರುಳನಿಗೆ ಎಂಥ ಶಿಕ್ಷೆಯನ್ನು ವಿಧಿಸಬೇಕು, ಹೇಳಿರಿ, ನೋಡೋಣ ” ಎಂದು ಕೇಳಿದನು.

ಇದನ್ನು ಕೇಳಿದೊಡನೆಯೆ ಮಾರಕನ ಮುಖವು ವಿವರ್ಣವಾಯಿತು; ಕೆನ್ನೆಗಳು ಹಲ್ಲಿಯಂತೆ ಬಣ್ಣಗೆಟ್ಟುವು, ಕತ್ತಿಯ ಮೇಲೆ ಕೈ ಹೋಯಿತು. ಅಜಿತನು ತಟ್ಟನೆ ಅವನ ಮೇಲೆ ಹಾರಿ, ಕತ್ತಿಯನ್ನು ತೆಗೆಯದಂತೆ ಅವನ ಕೈಗಳನ್ನು ಬಲವಾಗಿ ಹಿಡಿದುಕೊಂಡು, ಇದು ನಿಜವೋ ಸುಳ್ಳೋ? ಖಂಡಿತವಾಗಿ ಹೇಳು” ಎಂದು ದಕ್ಷಿಸಿದನು.

ಮಾರಕನ ಬಾಯಿಂದ ಮಾತು ಹೊರಡದ್ದನ್ನು ಕಂಡು, ಅವನನ್ನು ಹಿಂದಕ್ಕೆ ದೂಡಿ, ಅಜಿತನು ತನ್ನ ಗದೆಯನ್ನು ಜಡಿದು, ಬಲವಾಗಿ ಹೊಡೆಯಲು, ಮಾರಕನು ನೆಲದ ಮೇಲೆ ಮಲಗಿಬಿಟ್ಟನು. ಅಜಿತನ ಮತ್ತೊಂದು ಏಟಿಗೆ ಮಾರಕನ ಪ್ರಾಣವು ಹಾರಿಹೋಯಿತು. ಆ ಮೇಲೆ ಅವನ ಮೈಮೇಲಿನ ಚಿನ್ನದ ಒಡವೆಗಳನ್ನು ತೆಗೆದುಕೊಂಡು, ಅಜಿತನು ಅವನ ಅರಮನೆಯನ್ನು ಹೊಕ್ಕು, ಆ ರಾತ್ರಿಯನ್ನು ಅಲ್ಲಿಯೇ ಕಳೆದನು.

ಮರುದಿನ ಬೆಳಗ್ಗೆ ಅರಮನೆಯ ಹಲವು ಕೋಣೆಗಳಲ್ಲಿ, ಹುಡುಕಿ ಹುಡುಕಿ ನೋಡಿ, ದಾರಿಗರಿಂದ ಮಾರಕನು ಕಸಕೊಂಡಿದ್ದ ಧನ ಕನಕ ವಸ್ತ್ರಗಳ ರಾಶಿಗಳು ಅಲ್ಲಿ ಬಿದ್ದಿದ್ದು ದನ್ನು ಕಂಡು, ಊರುಗರನ್ನು ಕರೆದು ಆ ಸೊತ್ತನ್ನು ಅವರಿಗೆ ಹಂಚಿಕೊಟ್ಟು, ಅಜಿತನು ತನ್ನ ಹಾದಿಹಿಡಿದು ಮುಂದಕ್ಕೆ ಹೋದನು.

VII
ಮಾಯಾವಿಯಾದ ಮಾಧವಿ

ವಳಗಿರಿಯೆಂದರೆ ಬಿಳಿಯ ಪರ್ವತವೆಂದರ್ಥ. ಸದಾಕಾಲವೂ ಹಿಮವು ಗಡ್ಡೆ ಕಟ್ಟಿಕೊಂಡಿರುವುದರಿಂದ ಅದಕ್ಕೆ ಆ ಹೆಸರು ಬಂತು. ಅಜಿತನು ಅಲ್ಲಿ ಮುಟ್ಟಿದಾಗ ಸಾಯಂಕಾಲವಾದುದರಿಂದ, ಅಶ್ವಿನೀ ದೇವತೆಗಳ ಎಲೆಮನೆಯನ್ನು ಹುಡುಕುವುದಕ್ಕಾಗಲಿಲ್ಲ. ಆದುದರಿಂದ ಕಾಡುಮೃಗಗಳ ಬಾಧೆ ಬಾರದಂತೆ ಆತನು ಒಂದು ಮರ ಹತ್ತಿ, ಕೊಂಬೆಗಳ ನಡುವೆ ಅವಿತುಕೊಂಡು, ಆ ರಾತ್ರಿಯನ್ನು ಕಳೆದನು.

ಬೆಳಗಾಗುತ್ತಲೇ ಅಶ್ವಿನೀದೇವತೆಗಳ ಪರ್ಣಶಾಲೆಯನ್ನು ಹುಡುಕಿ ತೆಗೆದು, ಅವರನ್ನು ಕಂಡು, ತನ್ನ ಸಂಗತಿಯನ್ನು ಹೇಳಿಕೊಂಡನು. ಅವರು ಸಂಕಲ್ಪ ಮಂತ್ರವನ್ನು ಉಚ್ಚರಿಸಿ, ತಮ್ಮ ಕಮಂಡಲೋದಕವನ್ನು ಈತನ ತಲೆಯ ಮೇಲೆ ಪ್ರೋಕ್ಷಿಸಿ, ಈತನನ್ನು ಆಕಾಶಗಂಗೆಯಲ್ಲಿ ಸ್ನಾನಮಾಡಿಸಿದರು. ಅನಂತರ ಅವರಿಂದ ಹಲವು ನೀತಿಕಥೆಗಳನ್ನು ಕೇಳುತಿದ್ದು, ಅವರು ಕೊಟ್ಟ ಗಡ್ಡೆಗೆಳಸುಗಳನ್ನು ತಿಂದು, ಅವರಿಗೆ ಸಾಷ್ಟಾಂಗವೆರಗಿ, ಅವರ ಆಶೀರ್ವಾದಗಳನ್ನು ಪಡೆದು, ಹೊತ್ತು ಇಳಿ ಯುವ ಮೊದಲೇ ನೆಟ್ಟಗೆ ಯವನದೇಶದ ಹಾದಿ ಹಿಡಿದು ಹೋದನು.

ಸ್ವಲ್ಪ ಮುಂದೆ ಹೋಗುತ್ತಲೇ ಸರಸ್ವತಿಯ ವಾಸಸ್ಥಾನವಾದ ಪರ್ವತವು ಕಾಣಿಸಿತು. ಅದರ ತಪ್ಪಲಲ್ಲಿಯೇ ಯವನದೇಶದ ರಾಜಧಾನಿ. ಹೊತ್ತು ಮುಳುಗುವುದಕ್ಕೆ ಸರಿಯಾಗಿ ಅಜಿತನು ಆ ಪಟ್ಟಣವನ್ನು ಸೇರಿದನು. ಜನರೆಲ್ಲರೂ ಆತನನ್ನು ಕಂಡು ಹರಸಿ ಕೊಂಡಾಡ ತೊಡಗಿದರು. ಆತನ ಕೀರ್ತಿಯು ಅಷ್ಟು ಬೇಗನೆ ಎಲ್ಲೆಲ್ಲಿಯೂ ಹಬ್ಬಿ ಹರಡಿತ್ತು. ಆತನ ಮಹತ್ಕಾರ್ಯಗಳನ್ನು ತಿಳಿಯದ ಜನಗಳೇ ಇರಲಿಲ್ಲ. "ಇದೊ, ದಾರಕ, ಮಾರಕ, ಕೊರಾಕ್ಷ ಮೊದಲಾದವರನ್ನು ನಾಶಮಾಡಿದ ವೀರನು ಬರುತ್ತಿರುವನು” ಎಂದು ಎಲ್ಲರು ಕೂಗುತ್ತ ಸಾಲುಕಟ್ಟಿಕೊಂಡು ಆತನ ಹಿಂದೆಯೆ ಬರುತಿದ್ದರು.

ಆದರೆ ಅಜಿತನಿಗೆ ಉತ್ಸಾಹವೇ ಇರಲಿಲ್ಲ. ತನ್ನ ತಂದೆಯ ಸುತ್ತಲೂ ನೀಚರು ಬಳಸಿಕೊಂಡಿದ್ದಾರೆ! ಆ ಜಿಗಳೆಗಳನ್ನು ಹಿಂಡಿಬಿಡುವ ಬಗೆ ಹೇಗೆಂಬ ಯೋಚನೆಯಲ್ಲಿ ಮನಸ್ಸು ಸುಳಿಯುತಿತ್ತು.

ಅರಮನೆಯು ನಗರದ ಮಧ್ಯದಲ್ಲಿತ್ತು. ಅಜಿತನು ನೆಟ್ಟಗೆ ಬಾಗಿಲಿಗೆ ಹೋಗಿ, ಹೊಸ್ತಿಲಿನ ಮೇಲೆ ನಿಂತುಕೊಂಡು, ಒಳಕ್ಕೆ ನೋಡಿದನು. ಅಲ್ಲಿ ಕೆಲವರು ಯುವಕರು ಕುಳಿತುಕೊಂಡು ಮದ್ಯಪಾನ ಮಾಡುತಿದ್ದರು. ಅವರ ವಯಸ್ಸನ್ನೂ ವಸ್ತ್ರವನ್ನೂ ಕಂಡು, ತನ್ನ ಮಲತಾಯಿ ಮಾಧವಿಯ ಮಕ್ಕಳಾದ ಮಾಧವೇಯರೆಂದು ತಿಳಿದುಕೊಂಡನು. ತಾರಾಪತಿಯು ಅಲ್ಲಿರಲಿಲ್ಲ. ಆ ರಾಜಪುತ್ರರು ನಗುತ್ತಲೂ, ತಿನ್ನುತ್ತಲೂ, ಮದ್ಯಪಾತ್ರೆಯನ್ನು ಕೈಯಿಂದ ಕೈಗೆ ದಾಟಿಸುತ್ತಲೂ ಇದ್ದರು. ಹತ್ತಿರದಲ್ಲಿ ಕೆಲವರು ವೀಣೆಯನ್ನು ಬಾರಿಸುತ್ತಲೂ, ಕೆಲವರು ಹಾಡುತ್ತಲೂ ಕುಳಿತಿದ್ದರು.

ಹೊತ್ತು ಹೋಗುವಷ್ಟಕ್ಕೆ ನಗುವೂ ಹೆಚ್ಚುತ್ತ ಬಂತು, ಮದ್ಯಪಾತ್ರೆಯ ಸುತ್ತುತ್ತ ಬಂತು; ಅಜಿತನಿಗೆ ಇದನ್ನು ಕಂಡು ಅಸಹ್ಯವುಂಟಾಗಿ “ರಕ್ಷಕರಾದವರೇ ತಸ್ಕರರಂತಿದ್ದರೆ, ರಾಜ್ಯದ ವ್ಯವಸ್ಥೆಯು ಹೇಗೆ ತಾನೆ ಸರಿಯಾಗಿದ್ದೀತು ?” ಎಂದಂದುಕೊಂಡನು.

ಅಷ್ಟರಲ್ಲಿ ಆ ಕುಡುಕರಾದ ಮಾಧವೇಯರು ಅವನನ್ನು ಕಂಡು, “ಭಲಾ! ಬಾಗಿಲಿನ ಬಳಿ ನಿಂತಿರುವ ಉದ್ದ ಕಾಲಿನವನೇ! ಇಂದು ನಿನ್ನ ಬಯಕೆ ಏನಿದೆ ?” ಎಂದು ಹುಬ್ಬೆ ಪ್ರಶ್ನಿಸಿದರು.
ಅದಕ್ಕೆ ಅಜಿತನು “ನನಗಿಲ್ಲಿ ಕೊಂಚ ಆಸರೆ ಬೇಕಾಗಿದೆ,” ಎಂದನು.

ಆಗ ಮಾಧವೇಯರು ಈ ಕೊಂಚವೇಕೆ ? ಬೇಕಾದಷ್ಟು ಕೊಡೋಣ ! ನೀನೊಬ್ಬ ವೀರನಂತೆ ಕಾಣಿಸುತ್ತೀಯೆ ! ವೀರರು ನಮ್ಮೊಡನೆ ಕುಡಿವುದೆಂದರೆ, ನಮಗೆ ತುಂಬ ಇಷ್ಟ !” ಎಂದರು.

ಅದಕ್ಕೆ ಅಜಿತನು, ನಿಮ್ಮೊಡನೆ ನಾನೇನೂ ಕೇಳುವುದಿಲ್ಲ! ನಿಮ್ಮ ಯಜಮಾನನಾದ ತಾರಾಪತಿ ಎಲ್ಲಿ ? ಆತನೊಡನೆ ಕೇಳುತ್ತೇನೆ!” ಎಂದನು. ಇದನ್ನು ಕೇಳುತ್ತಲೇ ಮಾಧವಿಯ ಮಕ್ಕಳಲ್ಲಿ ಕೆಲವರು ನಗುವುದಕ್ಕೂ, ಕೆಲವರು ಹುಚ್ಚುನಾಯಿಗಳಂತೆ ಬೊಗಳುವುದಕ್ಕೂ ಹತ್ತಿದರು. ಅವರಲ್ಲಿ ಹಿರಿಯವನು ಎಲೋ, ನಾವೆಲ್ಲರೂ ಇಲ್ಲಿ ಯಜಮಾನರೆ!” ಎಂದನು.

“ಹಾಗಾದರೆ, ನಿಮ್ಮಷ್ಟು ಯಾಜಮಾನ್ಯವು ನನಗೂ ಇದೆ!” ಎಂದು ಹೇಳಿ, ಅಜಿತನು ಒಳಕ್ಕೆ ಬಂದು ಅತ್ತಿತ್ತ ನೋಡಿದನು, ಆದರೆ ತಾರಾಪತಿಯು ಅಲ್ಲಿ ಎಲ್ಲಿಯೂ ಕಾಣಿಸಲಿಲ್ಲ.

ಮಾಧವೇಯರು ಅಜಿತನ ಧೈರ್ಯವನ್ನು ಕಂಡು, ಬೆರಗಾಗಿ ಒಂದು ಸಲ ಆತನ ಮೋರೆಯನ್ನೂ, ಮತ್ತೊಂದು ಸಲ ತಮ್ಮವರ ಮುಖಗಳನ್ನೂ ನೋಡುವುದಕ್ಕೆ ತೊಡಗಿದರು. ಪ್ರತಿಯೊಬ್ಬನು “ ಏನು ಹುಳಿ! ಕುತ್ತಿಗೆಗೆ ಕೈ ಹಾಕಿ ದೊಬ್ಬಿಬಿಡೋಣ ” ಎಂದು ತನ್ನ ಪಕ್ಕದವರೊಡನೆ ಹೇಳಿದನು, ಆ ಮಾತಿನೊಂದಿಗೆ “ಈತನ ತೋಳುಗಳು ಬಲವಾಗಿವೆ ! ನೀನೇ ಮೆಲ್ಲಗೆ ಎದ್ದು ಹೊರಗೆ ಹಾಕುವೆಯಾ ?” ಎಂದು ಕೇಳುವುದಕ್ಕೆ ಕೂಡ ಮರೆಯಲಿಲ್ಲ ! ಆದರೆ ಯಾರಿಗೂ ಧೈರ್ಯವಿಲ್ಲದೆ ಎಲ್ಲರೂ ಕುಳಿತಲ್ಲಿಯೇ ಕುಳಿತುಕೊಂಡರು.

ಅಷ್ಟರಲ್ಲಿ ಅಜಿತನು ಸೇವಕರನ್ನು ಕರೆದು, ತಾರಾಂಗಣದ ಅಜಿತನು ಬಂದಿದ್ದಾನೆಂದು ತಾರಾಪತಿಗೆ ತಿಳಿಸುವಂತೆ ಹೇಳಿದನು.

ಆಗ ತಾರಾಪತಿಯು ಕೊಟಡಿಯೊಳಗೆ ಒರಗಿಕೊಂಡು, ಮಾಧವಿ ಯೊಡನೆ ಸಲ್ಲಾಸ ಮಾಡುತಿದ್ದನು. ಅಜಿತನೆಂಬ ಹೆಸರನ್ನು ಕೇಳಿದಾ ಕ್ಷಣವೇ ಅವನಿಗೆ ನಡುಕ ಉಂಟಾಯಿತು; ಫಕ್ಕನೆ ಕುಳಿತಲ್ಲಿಂದ ಎದ್ದನು. ಮಾಯಾವಿಯಾದ ಮಾಧವಿಯು ಈತನ ಚರ್ಯೆಚೇಷ್ಟೆಗಳನ್ನು ನೋಡಿ, “ಏನು ಸಮಾಚಾರ ?” ಎಂದು ಕೇಳಿದಳು.

ಅದಕ್ಕೆ ತಾರಾಪತಿಯು "ಈ ಅಜಿತನು ಯಾರೆಂಬುದು ನಿನಗೆ ಗೊತ್ತಿಲ್ಲವೆ ? ಈತನೇ ಆ ದುಷ್ಟರನ್ನು ಕೊಂದವನು. ತಾರಾಂಗಣದಿಂದ ಇಲ್ಲಿಗೆ ಬಂದಿದ್ದಾನೆಂಬುದು ಹೊರತು ಬೇರೇನೂ ನನಗೆ ತಿಳಿಯದು. ಆಗಲಿ ; ಈಗ ಆತನನ್ನು ತಕ್ಕ ಬಗೆಯಿಂದ ಸತ್ಕರಿಸಬೇಕು” ಎಂದು ಹೇಳುತ್ತ ಚಾವಡಿಗೆ ಹೊರಟುಹೋದನು.

ತಾರಾಪತಿಯನ್ನು ನೋಡುತ್ತಲೇ ಅಜಿತನ ಎದೆಯಲ್ಲಿ ಸಂತೋಷವು ಉಕ್ಕಿಬಂದು, ಆತನನ್ನು ಒಂದು ಸಲ ಅಪ್ಪಿಕೊಳ್ಳಬೇಕೆಂದು ಆಸೆಯಾಯಿತು, ಆದರೆ ತಂದೆಗೆ ತನ್ನನ್ನು ಕಂಡರಾಗುವುದೂ ಇಲ್ಲವೊ ಎಂಬುದನ್ನು ಮೊದಲು ಗೊತ್ತು ಮಾಡಿಕೊಳ್ಳಬೇಕೆಂದು ಎಣಿಸಿ, ತನ್ನ ಮನಸ್ಸನ್ನು ಬಿಗಿದು, ಆತನಿಗೆ ನಮಸ್ಕರಿಸಿ, “ಮಹಾರಾಜರ ರಾಜ್ಯದಲ್ಲಿದ್ದ ಹಲವರು ರಾಕ್ಷಸರನ್ನು ಸಂಹರಿಸಿರುವ ನನಗೆ ಬಹುಮಾನಾರ್ಥವಾಗಿ ಒಂದು ಉಡುಗೊರೆ ದಯಪಾಲಿಸಿದರೆ ಆಗಬಹುದು !” ಎಂದು ಹೇಳಿದನು.

ತಾರಾಪತಿಯು ಆತನ ಮುಖದಲ್ಲಿಯೇ ದೃಷ್ಟಿಯನ್ನು ಅಂಟಿಸಿ ಸಂತೋಷದಿಂದ, “ ಅಯ್ಯಾ, ವೀರನೇ ! ನೀನು ಮಾಡಿರುವ ಸಾಹಸಕ್ಕೆ ಸರಿಯಾದ ಉಡುಗೊರೆ ಕೊಡಲು ನಾನು ಸಮರ್ಥನಲ್ಲ ! ಮನುಷ್ಯ ಮಾತ್ರನಿಗೆ ಅಸಾಧ್ಯವಾದ ಕೆಲಸಗಳನ್ನು ಮಾಡಿರುವ ನೀನು, ನಿಜವಾಗಿಯೂ, ಮರ್ತ್ಯನಲ್ಲವೆಂದು ನನ್ನ ಭಾವನೆ !” ಎಂದನು.

ಆಗ ಅಜಿತನು, “ನನಗೆ ಬೇರೇನೂ ಬೇಡ ! ತಮ್ಮ ಪಂಕ್ತಿಯಲ್ಲಿ ಕುಳಿತುಕೊಂಡು ಒಂದು ತುತ್ತು ಉಣ್ಣುವುದಕ್ಕೆ ಅನುಜ್ಞೆಯಾದರೆ ತೀರಿತು! " ಎಂದು ದೈನ್ಯದಿಂದ ಕೇಳಿಕೊಂಡನು. "ಅಷ್ಟೆ ತಾನೆ? ಅದಕ್ಕೆ ಏನು ಅಡ್ಡಿ?” ಎಂದು ಹೇಳಿ ತಾರಾಪತಿಯು ಅಜಿತನನ್ನು ಭೋಜನಶಾಲೆಗೆ ಕರೆದುಕೊಂಡು ಹೋದನು. ಸೇವಕರು ಬೆಳ್ಳಿಯ ಮನೆಗಳನ್ನು ಇಟ್ಟು, ಇಬ್ಬರಿಗೂ ಚಿನ್ನದ ತಳಿಗೆಗಳನ್ನು ತಂದಿಟ್ಟರು, ಅಡಿಗೆಯವರು ಸೊಗಸಾದ ಸಣ್ಣಕ್ಕಿಯ ಅನ್ನವನ್ನು ಬಡಿಸಿದರು. ರಾಜನೂ ಅಜಿತನೂ ಇಬ್ಬರೂ ಒಂದೇ ಸಾಲಿನಲ್ಲಿ ಊಟಕ್ಕೆ ಕುಳಿತುಕೊಂಡರು. ಅಜಿತನು ಉಣ್ಣುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಬಡಿಸಿದಷ್ಟು ಭಕ್ಷ್ಯಭೋಜ್ಯಗಳು ಆತನ ಬಾಯಿಯೊಳಕ್ಕೆ ಹೋಗುತಿದ್ದುವು.

ಮಾಧವಿಯು ಕೂಡ ಅಲ್ಲಿ ನಿಂತುಕೊಂಡು, ಇವನನ್ನು ಪರೀಕ್ಷೆ ಮಾಡಿ ನೋಡುತಿದ್ದಳು. ತಾರಾಗಣವೆಂಬ ಹೆಸರನ್ನು ಕೇಳಿದೊಡನೆಯೆ ತಾರಾಪತಿಗೆ ಹತ್ತಿದ್ದ ಅಂಜಿಕೆಯನ್ನೂ, ಅಜಿತನೊಡನೆ ಏನೂ ಮುಚ್ಚು ಮರೆಯಿಲ್ಲದೆ ಅವನು ಮಾತನಾಡುವ ರೀತಿಯನ್ನೂ, ಮೂಳೆ ನಾಯಿಗಳಂತಿರುವ ಮಾಧವೇಯರ ನಡುವೆ ಹುಲಿಮರಿಯಂತಿರುವ ಅಜಿತನು ಕಂಗೊಳಿಸುವ ಅಂದವನ್ನೂ ಯೋಚಿಸಿ, “ಈ ಯುವಕನು ಇಲ್ಲಿಗೆ ರಾಜನಾಗುವನೆ ? ಒಂದು ವೇಳೆ ಈತನು ತಾರಾಪತಿಯ ಹತ್ತಿರದ ನಂಟನಾಗಿರಬಹುದೇ ? ಹೇಗೂ ಇರಲಿ, ಈತನಿದ್ದರೆ, ನನ್ನ ಮಕ್ಕಳ ಹೊಟ್ಟೆ ಮೇಲೆ ಕಾಲುಮಾಡುವನು!” ಎಂದಂದುಕೊಳ್ಳುತ್ತ ಒಳಕ್ಕೆ ಹೋದಳು.

ಉಣ್ಣುತಲಿದ್ದ ಅಜಿತನನ್ನು ಸೇವಕರು ಕಂಡು, “ ಆ ರಕ್ಕಸರನ್ನು ಕೊಂದವನು ಇವನೇನು ? ಎಷ್ಟು ವೀರನಾಗಿ ಕಾಣಿಸುತ್ತಾನೆ! ಎಷ್ಟು ಅಗಲವಾದ ಎದೆ! ಎಷ್ಟು ಉಬ್ಬಿದ ಹೆಗಲು! ಎಷ್ಟು ಸಣಕಲಾದ ಮೈ ! ಈತನೇ ನಮ್ಮ ದೊರೆಯ ಮಗನಾಗಿರಬಾರದೆ?” ಎಂದು ತಮ್ಮೊಳಗೆನೇ ಅಂದುಕೊಳ್ಳುತಿದ್ದರು.

ಅಷ್ಟರಲ್ಲಿ ಮಾಧವಿಯು ನವರತ್ನಗಳ ಒಡವೆಗಳನ್ನು ಇಟ್ಟುಕೊಂಡು, ಮೋಹಿನಿಯಂತೆ ಕಾಣಿಸುತ್ತ, ಒಂದು ಚಿನ್ನದ ಬಿಂದಿಗೆಯನ್ನು ಹಿಡಿದು ಕೊಂಡು, ಹೊರಕ್ಕೆ ಬಂದಳು. ಎಲ್ಲರೂ ಆಕೆಯ ಚೆಲುವನ್ನೇ ನೋಡುತ್ತಿದ್ದರು. ಆಕೆಯು ಅಜಿತನ ಹತ್ತಿರ ಬಂದು, ಎಲ್ಲೆಲ್ಲಿಯೂ ಜಯ ಶೀಲನಾಗು! ದುರ್ಜಯನಾದ ಶೂರನೆ, ವಿಜಯಿಯಾಗು ! ಇದೊ, ಈ ಬರಿ ಬಿಂದಿಗೆಯೊಳಗಿರುವ ದ್ರವವನ್ನು ಸೇವಿಸು ! ಇದರಿಂದ ನಿನ್ನ ಆಯಾಸವೆಲ್ಲವೂ ಪರಿಹಾರವಾಗಿ ಉಲ್ಲಾಸ ಹುಟ್ಟುವುದು ! ಅಮೃತಕ್ಕೆ ಸಮಾನವಾಗಿದೆ ! ಇದೊ, ತೆಗೆದುಕೋ !” ಎಂದು ಹೇಳಿ ಆ ದ್ರವವನ್ನು ಅಜಿತನ ಪಾತ್ರೆಗೆ ಹೊಯಿದಳು, ಆಗ ಅದರ ಸುವಾಸನೆಯು ಅತ್ತರಿನಂತೆ ಕೋಣೆಯಲ್ಲಿ ಮಗಮಗಿಸಿತು !

ಕೂಡಲೆ ಅಜಿತನು ಆಕೆಯಮುಖವನ್ನು ನೋಡಿದನು, ಆಕೆಯ ನೆತ್ತರಿಲ್ಲದ ಕಣ್ಣುಗಳನ್ನು ಕಂಡು ಅವನು ಮೈ ತೆಗೆದನು, ತತ್‌ಕ್ಷಣವೆ ಎದ್ದು ನಿಂತು, ಈ ದ್ರವವು ಅತ್ಯುತ್ತಮವೇ ಸರಿ ! ಇದನ್ನು ತಂದವಳಂತೂ ಸಾಕ್ಷಾತ್‌ ದೇವಕನ್ನಿಕೆ, ಆದರೆ ಇದನ್ನು ಆಕೆಯೇ ಮೊದಲು ಕುಡಿಯಲಿ ! ಆ ಮೇಲೆ ನಾನು ಕುಡಿಯುವೆನಂತೆ ! ಆಗ ಅದರ ರುಚಿಯು ಮತ್ತಷ್ಟು ಹೆಚ್ಚಿತು !” ಎಂದು ಹೇಳಿದನು. ಇದನ್ನು ಕೇಳಿ ಮಾಧವಿಯು ಮೂದೇವಿಯಂತಾಗಿ, ಆ ಆದರೆ ನಾನು ಸ್ವಸ್ಥಳಾಗಿಲ್ಲ ; ಇದನ್ನು ಕುಡಿಯಲಾರೆ !” ' ಎಂದು ತಬ್ಬಿಬ್ಬಾದಂತೆ ಒದರಿದಳು.

"ಆಗದಾಗದು ! ನೀನು ಕುಡಿಯಲೇ ಬೇಕು ! ಇಲ್ಲದಿದ್ದರೆ ಸಾಯುವೆ ! " ಎಂದು ಹೇಳಿ, ಎಲ್ಲರೂ ನೋಡುತಿದ್ದ ಹಾಗೆಯೇ ಅಜಿತನು ಗದೆಯನ್ನು ಎತ್ತಿದನು.

ಮಾಧವಿಗೆ ಕರುಳು ಕೊರಳಿಗೆ ಬಂದಂತಾಯಿತು. ಮಧು ಪಾತ್ರೆಯು ಬುಡಕ್ಕನೆ ಜಾರಿ ಬಿದ್ದುಬಿಟ್ಟಿತು. ಆಕೆಯು ಚೀರಿಕೊಂಡು ಓಡಿಬಿಟ್ಟಳು. ಆ ದ್ರವವು ನೆಲದ ಮೇಲೆ ಚೆಲ್ಲಿಹೋಗಿ, ಅದರಲ್ಲಿದ್ದ ವಿಷದ ಖಾರಕ್ಕೆ ಹಿಸ್ಸೆಂದು ಶಬ್ದ ಮಾಡುತ್ತ ಕುದಿಯ ತೊಡಗಿತು.

ಇತ್ತ ಮಾಧವಿಯು ತನ್ನ ಪಕ್ಷಿರಥವನ್ನು ಏರಿಕೊಂಡು ಎಲ್ಲಿಯೋ ಮಾಯವಾದಳು. ಆ ಮೇಲೆ ಆಕೆಯನ್ನು ಆ ದೇಶದಲ್ಲಿ ಯಾರೂ ಕಾಣಲಿಲ್ಲವಂತೆ!

ತಾರಾಪತಿಯು ಈ ಚರ್ಯೆಗಳನ್ನು ನೋಡಿ, “ ಏನು ಮಾಡಿ ಬಿಟ್ಟಿ?” ಎಂದು ಅಜಿತನನ್ನು ಕೇಳಿದನು.

ಆಗ ಅಜಿತನು ನೆಲವನ್ನು ತೋರಿಸಿ, "ಇದೊ, ಒಂದು ಮಾಟವನ್ನು ಉಚ್ಚಾಟನೆ ಮಾಡಿದ್ದಾಯಿತು ! ಈಗ ಇನ್ನೊಂದರ ಹೆಸರಿಲ್ಲದಂತೆ ಮಾಡಿಬಿಡುತ್ತೇನೆ” ಎಂದು ಹೇಳಿ, ತಾರಾಪತಿಯ ಹತ್ತಿರ ಬಂದು, ತಾನು ಬಚ್ಚಿಟ್ಟುಕೊಂಡಿದ್ದ ಕತ್ತಿಯನ್ನೂ ಹಾವುಗೆಗಳನ್ನೂ ತೆಗೆದು ತೋರಿಸಿ, ತನ್ನ ತಾಯಿಯಾದ ನೇತ್ರವತಿಯು ಕಲಿಸಿಕೊಟ್ಟಿದ್ದ ಮಾತುಗಳನ್ನು ಹೊರ ಗೆಡವಿದನು.

ಕೂಡಲೆ ತಾರಾಪತಿಯು ಅಜಿತನನ್ನು ಸ್ಥಿರದೃಷ್ಟಿಯಿಂದ ಕ್ಷಣಕಾಲ ನೋಡಿ, ಸಂತೋಷದಿಂದ ಆತನನ್ನು ತಬ್ಬಿಕೊಂಡು ಅಳಹತ್ತಿದನು; ಅಜಿತನೂ ಅತ್ತನು.

ಕೊಂಚ ಹೊತ್ತಿನ ಮೇಲೆ ತಾರಾಪತಿಯು ಅಳುವನ್ನು ನಿಲ್ಲಿಸಿ, ಅಲ್ಲಿ ನೆರೆದಿದ್ದ ಜನಗಳನ್ನು ನೋಡಿ, “ಎಲೈ ಮಾಧವೇಯರಾ, ಇಲ್ಲಿ ಕೇಳಿರಿ. ಈತನು ನನ್ನ ಹಿರಿಯ ಮಗನು ! ತಂದೆಯಾದ ನನಗಿಂತಲೂ ಎಷ್ಟೋ ಉತ್ತಮನಾಗಿದ್ದಾನೆ !” ಎಂದನು.

ಈ ಮಾತನ್ನು ಕೇಳಿ, ಮಾಧವೇಯರು ಹುಚ್ಚರಂತಾದರು. ಒಬ್ಬನು “ದಿಗ್ದೇಶವಿಲ್ಲದ ಈ ನೀಚನನ್ನು ಇಲ್ಲಿ ಇರಗೊಡಿಸಬಾರದು !” ಎಂದನು. ಇನ್ನೊಬ್ಬನು “ಎಷ್ಟಾದರೂ ಆತನು ಒಬ್ಬನೆ ! ನಾವು ಹಲವರಿದ್ದೇವೆ. ಹೊಡೆದು ಹಾಕಿಬಿಡೋಣ" ಎಂದನು. ಈ ರೀತಿಯಾಗಿ ಮದ್ಯವು ತಲೆಗೇರಿ, ಒಬ್ಬೊಬ್ಬರು ಒಂದೊಂದು ವಿಧವಾಗಿ ಗಳಹುವುದಕ್ಕೆ ತೊಡಗಿದರು. ಕೊನೆಗೆ ಬಾಯಿಮಾತು ಹೋಗಿ ಕೈಕೆಲಸಕ್ಕೆ ಆರಂಭವಾಯಿತು. ಎಲ್ಲರೂ ತಂತಮ್ಮ ಕತ್ತಿಗಳನ್ನು ಹಿರಿದುಕೊಂಡು, ಅಜಿತನನ್ನು ಕಡಿಯುವುದಕ್ಕೆ ಬಂದರು. ಎಂಥೆಂಥ ರಾಕ್ಷಸರನ್ನು ಕೊಂದುಹಾಕಿದ ಅಜಿತನಿಗೆ ಈ ಕುನ್ನಿಗಳೇನು ಲಕ್ಷ್ಯವೆ? "ಒಳ್ಳೆಯ ಮಾತಿನಿಂದ, ಸುಮ್ಮನೆ ಹೊರಟುಹೋಗಿರಿ ! ಕೈಮಾಡಿದಿರೆಂದರೆ ಎಲ್ಲರನ್ನೂ ಸಾಯಬಡಿಯುತ್ತೇನೆ !” ಎಂದು ಗದರಿಸಿದನು. ಆದರೂ ಅವರು ಕೇಳಲಿಲ್ಲ. ಎಲ್ಲರೂ ಒಟ್ಟಾಗಿ ಆತನ ಬಳಿಗೆ ಓಡಿ ಬಂದರು ; ಆದರೆ ಬಲು ಹತ್ತಿರ ಹೋಗುವಷ್ಟು ಧೈರ್ಯವಿರಲಿಲ್ಲ. ನಾಯಿಗಳು ಆನೆಮರಿಯನ್ನು ಕಂಡು ಬೊಗಳುತ್ತ ಹೇಗೆ ದೂರ ನಿಲ್ಲುತ್ತವೋ ಹಾಗೆಯೇ ಇವರು ಕೂಡ, ಬೆಲೆಬಾರದ ಮಾತುಗಳನ್ನು ಆಡುತ್ತ ದೂರ ನಿಂತುಕೊಂಡರು.

ತರುವಾಯ ಅವರಲ್ಲಿ ಒಬ್ಬನು ಬಿಚ್ಚು ಕತ್ತಿಯನ್ನು ಬೀಸಿದನು. ಅದು ಅಜಿತನ ತಲೆಯ ಹತ್ತಿರ ಸುಳಿಯಿತು. ಕೂಡಲೆ ಅಜಿತನೂ ಹೊಡೆಯ ಹತ್ತಿದನು. ಇಪ್ಪತ್ತು ಮಂದಿಗಳ ಇದಿರಿಗೆ ಒಬ್ಬ ! ಆದರೂ ಎಲ್ಲರನ್ನೂ ಕೆಡವಿಬಿಟ್ಟನು. ಕೆಲವರು ಅಲ್ಲಿಯೇ ಹೆಣವಾದರು. ಕೆಲ ವರು ಜೀವದಿಂದ ಉಳಿದರೆ ಸಾಕೆಂದು ಓಡಿಹೋದರು. ಊರವರು ಅವರನ್ನು ಬೆಂಬತ್ತಿ ಹೋಗಿ, ಪಟ್ಟಣದಿಂದ ಗಡಿಪಾರು ಮಾಡಿಬಿಟ್ಟರು. ಈಗ ಚಾವಡಿಯ ಮೇಲೆ ತಂದೆ ಮತ್ತು ಮಗ, ಇಬ್ಬರೇ ಉಳಿದರು. ಅಷ್ಟರಲ್ಲಿ ಊರುಗರು ಬಂದು, ತಮ್ಮ ದೊರೆಗೆ ಮಗನೂ ತಮಗೆ ಯುವರಾಜನೂ ಸಿಕ್ಕಿದನೆಂಬ ಆನಂದದಿಂದ ನೃತ್ಯಗೀತ ಮೊದಲಾದ ವಿನೋದಗಳಿಂದ ಕಾಲಕಳೆದರು.

ಅಜಿತನು ಮಳೆಗಾಲವೆಲ್ಲ ತಂದೆಯೊಡನೆ ಸುಖವಾಗಿದ್ದನು. ಚಳಿಗಾಲ ಕಳೆದು ವಸಂತಕಾಲ ಬರುವ ಸಮಯಕ್ಕೆ, ಅದುವರೆಗೂ ಅರಳಿದ್ದ ಯವನರ ಮುಖವು ಬಾಡಿಹೋಯಿತು. ಎಲ್ಲಿ ನೋಡಿದರೂ ಸಾವಿನ ಮನೆಯಂತೆ ಅಳಲು ಕವಿದಿತ್ತು. ಇದಕ್ಕೇನು ಕಾರಣವೆಂದು ಯಾರೊಡನೆ ಕೇಳಿದರೂ ಯಾರೂ ಹೇಳಲೊಲ್ಲರು.
ಕಡೆಗೆ ಅಜಿತನು ತನ್ನ ತಂದೆಯ ಹತ್ತಿರ ಬಂದು ಕೇಳಲು, ಅವನು ಮುಖವನ್ನು ತಿರುಗಿಸಿಕೊಂಡು, “ ಎಷ್ಟು ಆಪತ್ತುಗಳು ಬಂದರೂ ಅನುಭವಿಸಿಯೇ ತೀರಬೇಕು. ಇನ್ನು ಇದರ ವಿಷಯವಾಗಿ ಮಾತನಾಡಿ ಸುಮ್ಮನೆ ಸಂಕಟವನ್ನು ಉಂಟುಮಾಡಬೇಡ” ಎಂದು ಹೇಳಿ, ಬಾಯಿಗೆ ಬೀಗ ಹಾಕಿಕೊಂಡನು.

VIII ವಸಂತ ಕಾಲದ ಬಲಿ.

[ಸಂಪಾದಿಸಿ]

ವಸಂತಕಾಲವು ಪ್ರಾಪ್ತವಾಯಿತು. ಗಿಡಮರಗಳು ತಮ್ಮ ಹೂ ಹಣ್ಣುಗಳಿಂದಲೂ, ಹೊಲಗದ್ದೆಗಳು ಪೈರು ಪಚ್ಚೆಗಳಿಂದಲೂ, ಹಕ್ಕಿಗಳು ತಮ್ಮ ಇಂಪಾದ ಹಾಡಿನಿಂದಲೂ ಎಲ್ಲರನ್ನೂ ಆನಂದಪಡಿಸುತಿದ್ದುವು. ಒಂದು ದಿನ ಒಬ್ಬ ರಾಜದೂತನು ಸಂತೆಗೂಡುವಲ್ಲಿ ನಿಂತುಕೊಂಡು, "ಯವನದೇಶದ ರಾಜನೇ, ಯವನದೇಶದ ಜನಗಳೇ, ಇತ್ತ ಕೇಳಿರಿ. ನೀವು ವರ್ಷಂಪ್ರತಿ ಸಲ್ಲಿ ಸತಕ್ಕ ಕಪ್ಪವು ಎಲ್ಲಿದೆ ?” ಎಂದು ಕೇಳುತಿದ್ದನು. ಆಗ ನಗರವೆಲ್ಲ ಮರುಗುವುದಕ್ಕೆ ತೊಡಗಿತು. ಆದರೆ ಅಜಿತನು ಆ ದೂತನ ಇದಿರಿಗೆ ನೆಟ್ಟಗೆ ನಿಂತುಕೊಂಡು, “ಎಲೋ ನಾಯಿಮೊಗದವನೆ, ನೀನು ಯಾರು ? ಕಪ್ಪಕೇಳಲು ನಿನಗೆ ಎಷ್ಟು ಧೈರ್ಯ ? ಏನು ಮಾಡಲಿ? ನೀನು ರಾಜದೂತನಾದೆ. ಇಲ್ಲದಿದ್ದರೆ, ನಿನ್ನ ತಲೆಯನ್ನು ಜಜ್ಜಿ ಪುಡಿ ಮಾಡಿಬಿಡುತಿದ್ದೆ" ! ಎಂದನು.

ವೃದ್ದನೂ ಬುದ್ದಿವಂತನೂ ಆದ ಆ ದೂತನು ಅಜಿತನ ಮಾತಿಗೆ ಕೋಪಿಸದೆ, "ಎಲಾ ಯುವಕ, ನಾನು ನಾಯಿಮೋರೆಯವನೂ ಅಲ್ಲ, ನಾಚಿಕೆಗೆಟ್ಟವನೂ ಅಲ್ಲ, ನನ್ನ ಯಜಮಾನನ ಆಜ್ಞೆಯನ್ನು ನಡಿಸುವುದಕ್ಕೆ ಬಂದಂಥವನು. ಪ್ರಸಿದ್ಧವಾದ ಶತಪುರದ ರಾಜನಾದ ಶತಬಲಿಯೇ ನನ್ನೊಡೆಯನು. ಆದರೆ ನೀನು ಬಹುಶಃ ಇಲ್ಲಿಗೆ ಹೊಸಬನಾಗಿರಬೇಕು. ಹಾಗಲ್ಲದಿದ್ದರೆ, ನಾನು ಇಲ್ಲಿಗೆ ಬಂದ ಕಾರಣವೂ, ನನಗಿರುವ ಹಕ್ಕೂ ನಿನಗೆ ಗೊತ್ತಿರಬೇಕಿತ್ತು” ಎಂದನು. ಅದಕ್ಕೆ ಅಜಿತನು “ಹೌದು ನಾನಿಲ್ಲಿಗೆ ಮೊನ್ನೆ ತಾನೆ ಬಂದವನು, ನನಗೊಂದೂ ತಿಳಿಯದು. ಈಗ ನೀನು ಬಂದಿರುವ ಹದನವನ್ನು ಹೇಳು, ನೋಡೋಣ” ಎಂದನು.

ಆಗ ಆ ವೃದ್ಧನು, “ ನಿಮ್ಮ ತಾರಾಪತಿಯು ನಮ್ಮೊಡೆಯನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದ ಕಪ್ಪವನ್ನು ತೆಗೆದುಕೊಂಡು ಹೋಗಲು ನಾನು ಬಂದಿದ್ದೇನೆ ! ಹಿಂದೆ ಒಂದು ಸಲ ನಮ್ಮ ರಾಜಪುತ್ರನು ಇಲ್ಲಿಗೆ ಕುದುರೆಯ ಜೂಜಿಗೆ ಬಂದಿದ್ದನು. ಜೂಜಿನಲ್ಲಿ ಎಲ್ಲರಿಗಿಂತಲೂ ಆತನೇ ಮುಂದಾಳಾಗಲು, ಆತನ ಅಶ್ವವಿದ್ಯೆಯನ್ನು ಕಂಡು ನಿಮ್ಮ ತಾರಾ ಪತಿಯ ಎದೆಯಲ್ಲಿ ಮತ್ಸರವು ಮೊಳೆಯಿತು. ನಮ್ಮ ಅರಸುಮಗನು ಮಾಧವೇಯರೊಡನೆ ಸೇರಿಕೊಂಡು ತಾರಾಪತಿಯನ್ನು ಸಿಂಹಾಸನದಿಂದ ತಳ್ಳಿಬಿಡುವನೋ ಏನೋ ಎಂದು ಬೆದರಿ, ತಾರಾಪತಿಯು ಒಳಸಂಚು ಮಾಡಿ, ಆತನನ್ನು ಹೇಗೋ ಕೊಲ್ಲಿಸಿಬಿಟ್ಟನು. ಶತಪುರಕ್ಕೆ ಹೋಗುವ ದಾರಿಯಲ್ಲಿ ಆತನನ್ನು ಹಿಡಿದು ಕೊಂದರೆಂದು ಕೆಲವರೂ, ಕಾಡುಮೃಗ ಗಳಿಂದ ಕೊಲಿಸಿದರೆಂದು ಇನ್ನು ಕೆಲವರೂ ಹೇಳುತ್ತಾರೆ. ಜೂಜಿನಲ್ಲಿ ಸೋತವರೇ ಹೊಟ್ಟೆಯ ಕಿಚ್ಚಿನಿಂದ ಕೊಂದರೆಂದು ತಾರಾಪತಿಯು ಹೇಳು ತ್ತಾನೆ. ಅದು ಹೇಗೂ ಇರಲಿ. ಆ ಮೇಲೆ ನಮ್ಮ ರಾಜನಾದ ಶತ ಬಲಿಯು ಇಲ್ಲಿಗೆ ಬಂದು, ಈ ರಾಷ್ಟ್ರವನ್ನೆಲ್ಲಾ ವಶಮಾಡಿಕೊಂಡನು. ಆಗ ತಾರಾಪತಿಯು ಶರಣಾಗತನಾಗಿ ವರ್ಷವರ್ಷವೂ ಏಳು ಮಂದಿ ಯುವಕರನ್ನೂ ಏಳು ಮಂದಿ ಕನ್ನಿಕೆಯರನ್ನೂ ಕಪ್ಪಕೊಡುವುದಾಗಿ ಒಪ್ಪಿಕೊಳ್ಳಲು, ಈ ರಾಜ್ಯವನ್ನು ಪುನಃ ಆತನಿಗೆ ಕೊಟ್ಟು ಹಿಂದೆರಳಿದನು. ಅಂದಿನಿಂದ ಪ್ರತಿವರ್ಷವೂ ಅಷ್ಟು ಮಂದಿ ಯುವಕ ಯುವತಿಯರನ್ನೂ ಒಂದು ಕರಿಯ ಹಾಯಿಯ ಹಡಗಿನಲ್ಲಿ ತೆಗೆದುಕೊಂಡು ಹೋಗುತ್ತಲಿ ದ್ದೇನೆ ! " ಎಂದನು.

ಈ ಮಾತನ್ನು ಕೇಳಿದ ಕೂಡಲೆ ಅಜಿತನು ಕೋಪದಿಂದ ಅವುಡುಗಳನ್ನು ಕಚ್ಚುತ್ತ, “ನೀನು ರಾಜದೂತನಾಗಿ ಹೋದೆ! ಇಲ್ಲದಿದ್ದರೆ ನಮ್ಮ ತಂದೆಯ ಮೇಲೆ ಇಂಥ ಅಪವಾದವನ್ನು ಹೊರಿಸುವ ನಿನ್ನ ನಾಲಗೆಯನ್ನು ನೋಡುತಿದ್ದೆ, ಇರಲಿ, ತಂದೆಯೊಡನೆ ಕೇಳಿ ಇದರ ಸತ್ಯವನ್ನು ತಿಳಿದುಕೊಳ್ಳಬೇಕು" ಎಂದು ಹೇಳಿ ತಂದೆ ಇದ್ದಲ್ಲಿಗೆ ಹೋದನು. ತಾರಾಪತಿಯನ್ನು ಕೇಳಿದೊಡನೆಯೆ, ಅವನು ಮುಖ ತಿರುಗಿಸಿ, ಅಳುತ್ತ, "ಅನ್ಯಾಯವಾಗಿ ಅಂದು ರಕ್ತ ಸುರಿಯಿತು. ಅದಕ್ಕೆ ಪ್ರತಿಯಾಗಿ ಅವರು ಕೂಡ ನೆತ್ತರದ ಮಳೆಯನ್ನೇ ಸುರಿಸುತ್ತಾರೆ. ಈ ವಿಷಯವಾಗಿ ಇನ್ನು ಮಾತನಾಡಿ ಸಂಕಟವನ್ನು ಉಂಟುಮಾಡಬೇಡ, ಕೆಮ್ಮನೆ ಕುಳಿತುಕೊಂಡು ಎಲ್ಲವನ್ನೂ ಸಹಿಸಿಕೊಂಡರೆ ಮಾತ್ರ ಸಾಕು !” ಎಂದನು.

ಇದನ್ನು ಕೇಳಿ, ಅಜಿತನು ಮನಸ್ಸಿನೊಳಗೆ ಮರುಗಿಕೊಂಡು, “ಈ ಸಲ ನಾನೆ ಹೋಗಿ, ಆ ಶತಬಲಿಯನ್ನು ಭೂತಗಳಿಗೆ ಬಲಿಕೊಡುತ್ತೇನೆ, ಆಗದೆ ?” ಎಂದನು.

ತತ್‌ಕ್ಷಣವೆ ತಾರಾಪತಿಯು ಭಯದಿಂದ, “ಇಲ್ಲ, ಇಲ್ಲ, ನೀನು ಹೋಗಕೂಡದು, ನನಗೆ ಮುಪ್ಪಿನಲ್ಲಿ ನೀನೇ ಊರುಗೋಲು; ಈ ಮನೆಗೆ ನೀನೇ ಬೆಳಕು, ನೀನೇ ಇಲ್ಲಿಗೆ ರಾಜನಾಗತಕ್ಕವನು, ಎಷ್ಟು ಮಾತ್ರಕ್ಕೂ ಹೋಗಕೂಡದು. ಅಂಥಾ ದಂಡನೆಯನ್ನು ನೀನು ಅನುಭವಿಸಲಾರೆ. ಶತಬಲಿಯು ಒಂದು ಚಕ್ರವ್ಯೂಹ ಕೋಟೆಯನ್ನು ಕಟ್ಟಿಸಿರುತ್ತಾನೆ. ಒಳಹೋದರೆ ಹೊರಕ್ಕೆ ಬರಲು ದಾರಿ ಕಾಣದು ! ಅದರೊಳಗೆ ಒಂದು ಪುರುಷಾಮೃಗವಿದೆ. ಇಲ್ಲಿಂದ ತೆಗೆದುಕೊಂಡು ಹೋದವರನ್ನು ಅದರೊಳಗೆ ತಳ್ಳಿಬಿಡುವನಂತೆ, ಪುನಃ ಅವರಿಗೆ ಈ ಬಾನನ್ನೂ ಈ ಭೂಮಿಯನ್ನೂ ನೋಡುವ ಆಸೆಯೇ ಇಲ್ಲ !” ಎಂದು ನಿಟ್ಟುಸಿರುಬಿಟ್ಟನು.

ಇದನ್ನು ಕೇಳಿ ಅಜಿತನ ಮುಖವು ದಾಸಾಳ ಹೂವಿನಂತೆ ಕೆಂಪೇರಿ, ಕೊಂಚ ಹೊತ್ತು ಮಾತಾಡದೆ, “ಹಾಗಾದರೆ ನಾನು ಹೋಗಲೇಬೇಕು; ಆ ದುಷ್ಟ ಮೃಗಕ್ಕೆ ನಾನೇ ಮದ್ದು ಅರೆವೆನು, ಇದುವರೆಗೆ ಎಷ್ಟೋ ರಕ್ಕಸರನ್ನು ಅಪ್ಪಳಿಸಿ ಬಿಡಲಿಲ್ಲವೆ ? ದಾರಕ, ಕ್ಷಾಲಕ, ಕ್ರೂರಾಕ್ಷ ಇವರೆಲ್ಲ ಎಲ್ಲಿದ್ದಾರೆ? ಈ ಪುರುಷಾಮೃಗವು ಕೂಡ ಅವರ ಹಾದಿಯನ್ನೇ ಹಿಡಿಯಲಿ! ಶತಬಲಿಯು ಏನಾದರೂ ಅಡ್ಡಿಮಾಡಿದನೆಂದರೆ ಆತನಿಗೂ ಅದೇ ಗತಿಯು ಪ್ರಾಪ್ತಿಸುವುದು !” ಎಂದು ಹೇಳಿದನು.

ತಾರಾಪತಿಯು "ಆದರೆ, ಮಗನೆ, ಅದನ್ನು ಹೇಗೆ ಕೊಲ್ಲಬಲ್ಲೆ? ಗದೆಯನ್ನೂ ಕವಚವನ್ನೂ ತೆಗೆದುಕೊಂಡು ಹೋಗುವುದಕ್ಕೆ ಬಿಡರು ! ಮೈಮೇಲಿದ್ದ ಬಟ್ಟೆಯನ್ನು ಸುಲಿದು, ಬತ್ತಲೆ ಮಾಡಿ, ಅದರೊಳಕ್ಕೆ ತಳ್ಳಿ ಬಿಡುತ್ತಾರೆ !” ಎಂದನು.

ಆಗ ಅಜಿತನು "ಆ ಕೋಟೆಯೊಳಗೆ ಕಲ್ಲು ಗಳಾದರೂ ಇರಲಾರವೆ ? ನನಗೆ ಮುಷ್ಟಿಗಳೂ ಹಲ್ಲುಗಳೂ ಮತ್ತೇತಕ್ಕೆ? ಕ್ರೂರಾಕ್ಷನನ್ನು ನೆಲಸಮ ಮಾಡುವುದಕ್ಕೆ ನನಗೆ ಯಾವ ಆಯುಧವು ಬೇಕಾಯಿತು ?” ಎಂದನು.

ಅಜಿತನ ದೃಢತ್ವವನ್ನು ಕಂಡು, ತಾರಾಪತಿಯು ಎಷ್ಟು ಪ್ರಾರ್ಥಿಸಿದರೂ ಅಜಿತನು ಕೇಳದೆ ಹೊರಡುವುದಕ್ಕೆ ಸಿದ್ಧನಾದನು. ಕಡೆಗೆ ತಾರಾಪತಿಯು "ಚಿಂತೆ ಇಲ್ಲ ; ಒಂದು ಮಾತು ಹೇಳುತ್ತೇನೆ; ಒಂದು ವೇಳೆ ನೀನು ಗೆದ್ದು ಬಂದರೆ, ನಿನ್ನ ಹಡಗಿನ ಕರಿ ಪತಾಕೆಯನ್ನು ತಪ್ಪಿಸಿ, ಬಿಳಿ ಪತಾಕೆಯನ್ನು ಏರಿಸಿಬಿಡು ! ನಿನ್ನ ವಿಜಯವು ಆದಷ್ಟು ಬೇಗನೆ ನನಗೆ ತಿಳಿಯಲಿ; ಆ ಗುಡ್ಡದ ಮೇಲೆ ಕಾದುಕೊಂಡಿರುತ್ತೇನೆ!” ಎಂದನು. ಅಜಿತನು ಹಾಗೆಯೇ ಮಾಡುವುದಾಗಿ ಮಾತುಕೊಟ್ಟು, ಸಂತೆಯ ಕಡೆಗೆ ಹೊರಟುಹೋದನು.

ಅಲ್ಲಿ ಶತಪುರಕ್ಕೆ ಹೋಗತಕ್ಕವರನ್ನು ಆರಿಸಿ ತೆಗೆಯುತಿದ್ದರು. ಅಲ್ಲಿಯೇ ನಿಂತಿದ್ದ ರಾಜದೂತನ ಹತ್ತಿರ ಹೋಗಿ ಅಜಿತನು ತನ್ನನ್ನೂ ಕಳುಹಿಸಬೇಕೆಂದು ಪ್ರಾರ್ಥಿಸಿದನು.

ಆಗ ದೂತನು "ಯುವಕನೆ, ಎಲ್ಲಿಗೆ ಹೋಗುವುದೆಂದು ಗೊತ್ತಿದೆಯೆ ?” ಎಂದು ಕೇಳಿದನು.
ಅದಕ್ಕೆ ಅಜಿತನು "ಹೌದು, ಗೊತ್ತಿದೆ, ಕರಿ ಹಡಗಿಗೆ ಹೋಗೋಣ, ಬನ್ನಿ" ಎಂದು ಕರೆದನು.

ಹಾಗೆಯೇ ಏಳು ಮಂದಿ ಯುವಕರೂ ಏಳು ಮಂದಿ ಕನ್ನಿಕೆಯರೂ ಸಮುದ್ರದ ಬಳಿಗೆ ಹೋದರು. ಅಜಿತನು ಎಲ್ಲರಿಗಿಂತಲೂ ಮುಂದಿನಿಂದ ನಡೆಯುತ್ತ, “ಭಯ ಪಡಬೇಡಿರಿ; ಪುರುಷಾಮೃಗವು ಸಾವಿಲ್ಲ ದುದಲ್ಲ ! ದಾರಕ, ಕ್ಷಾಲಕ, ಮೊದಲಾದವರು ಈಗ ಎಲ್ಲಿದ್ದಾರೆ? ಅವರನ್ನು ಅಪ್ಪಳಿಸಿದವನು ನಾನೇ ಅಲ್ಲವೆ ?” ಎಂದು ಕಿವಿಯಲ್ಲಿ ಹೇಳುತ್ತ, ಅವರಿಗೆ ಧೈರ್ಯ ಕೊಡುತಿದ್ದನು. ಎಲ್ಲರೂ ಬಿಕ್ಕಿ ಬಿಕ್ಕಿ ಅಳುತ್ತ, ಹಡಗನ್ನು ಹತ್ತಿದರು. ಅದು ವಾಯುವೇಗದಿಂದ ಶತಪುರದ ಮಾರ್ಗವಾಗಿ ತೇಲುತ್ತ ಹೋಯಿತು.

IX ಚಕ್ರವ್ಯೂಹದ ಪುರುಷಾಮೃಗ.

[ಸಂಪಾದಿಸಿ]

ಅಂತೂ ಇಂತೂ ಹಡಗು ಶತಪುರವನ್ನು ಮುಟ್ಟಿತು. ಎಲ್ಲರು ಹಡಗಿನಿಂದ ಇಳಿದರು, ಆ ರಾಜದೂತನು ಈ ಬಂದಿಯವರೆಲ್ಲರನ್ನು ಅರಮನೆಗೆ ಕರೆದುಕೊಂಡು ಹೋದನು. ಆಗ ಶತಬಲಿ ರಾಜನು ಹಾಲುಗಲ್ಲಿನ ಅರಮನೆಯಲ್ಲಿ ಕುಂದಣದ ಸಿಂಹಾಸನದ ಮೇಲೆ ಕುಳಿತಿದ್ದನು.

ಬಂದಿಯವರನ್ನು ಕಾಣುತ್ತಲೇ ಶತಬಲಿಯು "ಇವರನ್ನು ಸೆರೆಮನೆಗೆ ತೆಗೆದುಕೊಂಡು ಹೋಗಿ, ದಿನಕ್ಕೆ ಒಬ್ಬೊಬ್ಬನನ್ನು ಪುರುಷಾಮೃಗದ ಕೋಟೆಯೊಳಕ್ಕೆ ತಳ್ಳಿಬಿಡಿರಿ !” ಎಂದು ಆಳುಗಳಿಗೆ ಆಜ್ಞಾಪಿಸಿದನು.

ಕೂಡಲೆ ಅಜಿತನು "ಶತಬಲಿರಾಜನೆ, ಒಂದೇ ಒಂದು ವರವನ್ನು ನನಗೆ ಕರುಣಿಸು ! ನನ್ನನ್ನೇ ಮೊದಲು ತಳ್ಳಿಬಿಡಲಿ ! ಅದಕ್ಕಾಗಿಯೆ ನಾನು ಇಲ್ಲಿ ತನಕ ಬಂದುದು !” ಎಂದು ಕೂಗಿದನು.

ಆಗ ರಾಜನು ಆಶ್ಚರ್ಯದಿಂದ, "ಯುವಕನೆ, ನೀನು ಯಾರು ? ನಿನಗಿಷ್ಟು ಆತುರವೇಕೆ ?” ಎಂದು ಕೇಳಿದನು.

ಅದಕ್ಕೆ ಅಜಿತನು “ನಾನೇ ? ನೀನು ಯಾರನ್ನು ಅತಿ ಹೆಚ್ಚಾಗಿ ದ್ವೇಷಿಸುತ್ತಿರುವೆಯೊ ಆ ತಾರಾಪತಿಯ ಮಗ ! ಅವನು ಕಪ್ಪ ಕೊಡುವ ಪದ್ಧತಿಯನ್ನು ಮುರಿಯಬೇಕೆಂದು ಬಂದವನು ನಾನು" ಎಂದು ಗಂಭೀರವಾಗಿ ನುಡಿದನು.

ಈ ಮಾತುಗಳನ್ನು ಕೇಳಿದ ಶತಬಲಿಯು ಅಜಿತನ ಮುಖವನ್ನೇ ಎವೆಯಿಕ್ಕದೆ ದೃಷ್ಟಿಸಿ, “ಈತನು ತನ್ನ ತಂದೆಯ ಪಾತಕಕ್ಕೆ ತಕ್ಕ ಪರಿ ಹಾರವನ್ನು ಮಾಡಬೇಕೆಂದಿರುವನು” ಎಂದೆಣಿಸಿ, ಮೃದುವಾದ ಸ್ವರದಿಂದ “ಮಗು, ಸ್ವಸ್ಥವಾಗಿ ಹಿಂದಕ್ಕೆ ಹೋಗು, ನಿನ್ನಂಥ ವೀರರು ಸಾಯುವುದೆಂದರೆ ಬಹು ದುಃಖಕರ " ಎಂದು ಹೇಳಿದನು.

ಆದರೆ ಅಜಿತನು' ಇಲ್ಲ. ಹಿಂದಕ್ಕೆ ಹೋಗಲಾರೆ. ಆ ಪುರುಷಾ ಮೃಗವನ್ನು ಕಂಡ ವಿನಾ ಹಿಂದಿರುಗುವುದಿಲ್ಲ. ನಾನು ಆಣೆ ಹಾಕಿಕೊಂಡಿದ್ದೇನೆ” ಎಂದನು.

ಆಗ ಶತಬಲಿಯು “ಹಾಗಾದರೆ ಅದನ್ನು ನೋಡುವೆಯಂತೆ,” ಎಂದು ಹೇಳಿ, ಪಹರೆಯವರಿಗೆ “ಈ ಹುಚ್ಚನನ್ನು ಆಚೆಗೆ ತೆಗೆದುಕೊಂಡು ಹೋಗಿ!” ಎಂದು ಆಜ್ಞಾಪಿಸಿದನು. ಕೂಡಲೆ ಅಜಿತನನ್ನೂ ಉಳಿದ ಬಂದಿವಾನರನ್ನೂ ಸೆರೆಮನೆಗೆ ತೆಗೆದುಕೊಂಡು ಹೋದರು.

ಶತಬಲಿಗೆ ಅರಿಂದಮೆ ಎಂಬೊಬ್ಬಳು ಮಗಳಿದ್ದಳು. ಆಕೆಯು ತನ್ನ ಹಾಲುಗಲ್ಲಿನ ಅರಮನೆಯ ಉಪ್ಪರಿಗೆ ಮೇಲಿಂದ ಅಜಿತನನ್ನು ನೋಡಿ ಆತನ ಧೈರ್ಯಕ್ಕೂ ಆಕಾರಕ್ಕೂ ಮೆಚ್ಚಿ, “ಇಂಥ ಯುವಕನು ಸಾಯುವುದು ಬಲು ದುಃಖಕರ” ಎಂದು ಅಂದುಕೊಂಡಳು. ಅದರೊಂದಿಗೆ ಆತನಲ್ಲಿ ಆಕೆಗೆ ಪ್ರೀತಿಯೂ ಹುಟ್ಟಿತು. ಆದುದರಿಂದ ರಾತ್ರಿಯಾಗುತ್ತಲೇ ಸೆರೆಮನೆಗೆ ಹೋಗಿ ಆತನೊಡನೆ ತನ್ನ ಮನಸ್ಸನ್ನು ಬಿಚ್ಚಿ ಹೇಳಿದಳು.

"ಈಗಲೆ ನಿನ್ನ ಹಡಗಿಗೆ ಓಡಿಹೋಗು, ಬಾಗಿಲ ಬಳಿಯ ಪಹರೆಯವರು ತಡೆಯಲೊಲ್ಲರು, ಅವರಿಗೆ ಲಂಚ ಕೊಟ್ಟಿರುತ್ತೇನೆ, ನೀನೂ, ನಿನ್ನ ಸ್ನೇಹಿತರೂ, ಎಲ್ಲ ರೂ ಓಡಿಹೋಗಿರಿ, ನನ್ನನ್ನು ಕೂಡ ಕರೆದುಕೊಂಡು ಹೋಗು ; ನಿನ್ನನ್ನು ಬಿಟ್ಟಿರಲಾರೆ. ಈ ಗುಟ್ಟು ರಟ್ಟಾದರೆ, ನನ್ನ ತಂದೆ ನನ್ನನ್ನು ಕೊಂದುಬಿಟ್ಟಾನು ” ಎಂದು ಹೇಳಿದಳು.

ಅಜಿತನು ಆಕೆಯ ಚೆಲುವನ್ನು ಕಂಡು ಮನಸೋತು, ಹಾಗೆ ಯೋಚಿಸಿ, “ಪುರುಷಾಮೃಗವನ್ನು ಕೊಂದು ನಮ್ಮ ದೇಶದವರಿಗಿರುವ ಭೀತಿಯನ್ನು ನಿವಾರಿಸಿದ ಹೊರತು ನಾನು ಹಿಂದಿರುಗಲೊಲ್ಲೆನು !” ಎಂದು ಖಂಡಿತವಾಗಿ ಹೇಳಿಬಿಟ್ಟನು.

ಆಗ ಅರಿಂದಮೆಯು “ಆದರೆ, ಅದನ್ನು ಹೇಗೆ ಕೊಲ್ಲ ಬಲ್ಲೆ?” ಎಂದು ಕೇಳಿದಳು.

ಅದಕ್ಕೆ ಅಜಿತನು “ಹೇಗೆಂದು ನಾನರಿಯೆ. ಆದರೆ ನನ್ನಿಂದಲೂ ಅದು ಬಲಶಾಲಿಯನ್ನಬೇಕಾದರೆ ವಿಚಿತ್ರ ಪ್ರಾಣಿಯಾಗಿರಬೇಕು” ಎಂದನು.

ಇದನ್ನು ಕೇಳಿದೊಡನೆಯೆ ಆಕೆಯ ಪ್ರೀತಿಯು ಮತ್ತಷ್ಟು ಹೆಚ್ಚಾಯಿತು. ಆಗಲಿ ! ಅದನ್ನು ನೀನು ಕೊಂದೆ ಎಂತಲೇ ಹೇಳೋಣ ; ಆ ಮೇಲೆ ಕೋಟೆಯಿಂದ ಹೊರಗೆ ಹೇಗೆ ಬರುವೆ ?” ಎಂದು ಕೇಳಿದಳು.

"ಅದೊಂದೂ ನನಗೆ ತಿಳಿಯದು, ಆದರೆ ಆ ಮೃಗದ ಮಾಂಸವನ್ನು ತಿಂದು ಮುಗಿಯುವ ತನಕವೂ ನನಗೆ ಹಾದಿ ಕಂಡುಹಿಡಿಯುವುದಕ್ಕೆ ಆಗದೆ ಹೋದರೆ, ಅದು ಬಹು ಅದ್ಭುತ ಕೋಟೆಯಾಗಿರಬೇಕು” ಎಂದು ಹೇಳಿದನು.

ಇದನ್ನು ಕೇಳಿಯಂತೂ ಆಕೆಗುಂಟಾದ ಅನುರಾಗವು ಅಷ್ಟಿಷ್ಟಲ್ಲ. "ವೀರನೆ, ಹಾಗಲ್ಲ, ನಾನೆಷ್ಟಾದರೂ ಅಬಲೆ ; ಆದರೂ ನಿನಗೆ ಸ್ವಲ್ಪ ಸಹಾಯ ಮಾಡಬಲ್ಲೆ. ಇದೆ, ಈ ಕತ್ತಿಯಿಂದ ಅದನ್ನು ಕೊಲ್ಲಬಹುದು; ಈ ನೂಲಿನ ಉಂಡೆಯಿಂದ ಹಾದಿಯನ್ನು ಕಂಡುಹಿಡಿಯಬಹುದು. ಆದರೆ, ನೀನು ಸುರಕ್ಷಿತವಾಗಿ ಬಂದರೆ, ನನ್ನನ್ನು ಕೂಡಯವನ ದೇಶಕ್ಕೆ ಕರೆದುಕೊಂಡು ಹೋಗುವೆಯಾಗಿ ಮಾತು ಕೊಡಬೇಕು, ನಾನು ಮಾಡಿರುವುದೆಲ್ಲ ನನ್ನ ತಂದೆಗೆ ತಿಳಿಯಿತೆಂದರೆ ನಿಜವಾಗಿಯೂ ನಾನು ಬದುಕುವ ಆಸೆ ಇಲ್ಲ ” ಎಂದು ಹೇಳಿ ಕತ್ತಿಯನ್ನೂ ನೂಲನ್ನೂ ಅಜಿತನಿಗೆ ಕೊಟ್ಟಳು.
ಅಜಿತನು ಅವುಗಳನ್ನು ಬಚ್ಚಿಟ್ಟುಕೊಂಡು, ಆಕೆಯನ್ನು ತನ್ನೊಡನೆ ಕರೆದುಕೊಂಡು ಹೋಗುವುದಾಗಿ ಅವಳಿಗೆ ಮಾತುಕೊಟ್ಟು ನಗುನಗುತ್ತ, “ ಈಗ ನನಗೇನೂ ಭಯವಿಲ್ಲ ” ಎಂದು ಹೇಳಿ ಆಕೆಯನ್ನು ಕಳುಹಿಸಿ ಕೊಟ್ಟನು. ಅರಿಂದಮೆಯು ಅಳುತ್ತ ಅಂತಃಪುರಕ್ಕೆ ಹೊರಟುಹೋದಳು. ಅಜಿತನು ಸುಖವಾಗಿ ನಿದ್ದೆಹೋದನು.

ಮರುದಿನ ಸಾಯಂಕಾಲಕ್ಕೆ ಸರಿಯಾಗಿ ಪಹರೆಯವರು ಬಂದು, ಅಜಿತನನ್ನು ಆ ಚಕ್ರವ್ಯೂಹಕ್ಕೆ ಕರೆದುಕೊಂಡು ಹೋದರು. ಎಲ್ಲರೂ ಬಾಗಿಲಲ್ಲಿ ನಿಂತರು; ಅಜಿತನೊಬ್ಬನೆ ಒಳಗೆ ಹೋದನು. ಹೋಗುತ್ತ ನೂಲಿನ ತುದಿಯನ್ನು ಒಂದು ಕಲ್ಲಿಗೆ ಕಟ್ಟಿ ಬಿಟ್ಟು, ಮುಂದೆ ಹೋದ ಹಾಗೆ ನೂಲನ್ನು ಬಿಡುತ್ತ ಹೋದನು. ದಾರಿಯು ಬಹಳ ಸುತ್ತು, ಒಂದೆಡೆ ಕಲ್ಲಿನ ರಾಶಿಗಳು ಕುಸಿದು ಬಿದ್ದಿವೆ, ಮತ್ತೊಂದು ಎದೆ ತುಂಬ ಇಕ್ಕಟ್ಟು. ಒಂದೊಂದು ಕಡೆ ಕುಳಿಗಳು, ಜಾಗರೂಕತೆಯಿಂದ ನಡೆಯದಿದ್ದರೆ ಕಾಲುಮುರಿದುಹೋಗುವುದು, ಇಂಥ ಕೋಟೆಯೊಳಗೆ ಹಾಗೂ ಹೀಗೂ ತಡವರಿಸಿಕೊಂಡು ಬಹಳ ಹೊತ್ತಿನ ತನಕ ಹೋದನು, ತಲೆಸುತ್ತುವುದಕ್ಕೆ ಆರಂಭವಾಯಿತು, ಅಷ್ಟರಲ್ಲಿ ಬಂಡೆಗಳ ನಡುವೆ ಒಂದು ಇಕ್ಕಟ್ಟಾದ ಸ್ಥಳದಲ್ಲಿ ಪುರುಷಾಮೃಗವು ನೋಡುವುದಕ್ಕೆ ಸಿಕ್ಕಿತು, ಅದನ್ನು ಕಂಡು, ಒಂದು ನಿಮಿಷ ಬೆರಗಾಗಿ ನಿಂತುಕೊಂಡನು. ಅಂಥ ಪ್ರಾಣಿಯನ್ನು ಅದುವರೆಗೆ ಆತನು ನೋಡಿರಲಿಲ್ಲ, ಮನುಷ್ಯನ ಮೈ, ಎತ್ತಿನ ತಲೆ, ಸಿಂಹದ ಕೊರೆಗಳು-ವಿಜಾತೀಯವಾದ ಮೃಗ.

ಅಜಿತನನ್ನು ಕಂಡ ಕೂಡಲೆ ಅದು ಗರ್ಜಿಸುತ್ತ ತಲೆಬಗ್ಗಿಸಿಕೊಂಡು ಕೊಂಬುಗಳಿಂದ ತಿವಿಯುವುದಕ್ಕೆ ಬಂತು. ಅಜಿತನು ಮೆಲ್ಲನೆ ಒಂದು ಬದಿಗೆ ಸರಿದು ನಿಂತುಕೊಂಡು, ಅದರ ಕಾಲನ್ನೇ ಕಡಿದು ಬಿಟ್ಟನು. ಅದು ಪುನಃ ತಿರುಗುವುದರೊಳಗಾಗಿಯೆ ಹಿಂದಿನಿಂದ ಮೇಲೆ ಇರಿದನು. ಆ ಪುರುಷಾಮೃಗವು ನೋವೆಂಬದನ್ನು ಕಂಡರಿಯದು. ಆದುದ ರಿಂದ ಅರಚಿಕೊಂಡು ಓಡತೊಡಗಿತು. ಅಜಿತನೂ ಎಡಗೈಯಿಂದ ನೂಲನ್ನು ಬಿಡುತ್ತ ಅದನ್ನು ಬೆನ್ನಟ್ಟಿದನು, ಪುರುಷಾಮೃಗವು ಕೂಗುತ್ತ ಮುಂದಿನಿಂದಲೂ, ಅಜಿತನು ಹೊಡೆಯುತ್ತ ಹಿಂದಿನಿಂದಲೂ ಎಷ್ಟೋ ಗುಹೆಗಳನ್ನೂ ಬಂಡೆಗಳನ್ನೂ ದಾಟಿಕೊಂಡು ಹೋದರು. ಕೊನೆಗೆ ಅದು ಓಡಲಾರದೆ ತೊಪ್ಪನೆ ಬಿತ್ತು, ಆಗ ಅಜಿತನು ಅದರ ಕೊಂಬುಗಳನ್ನು ಹಿಡಿದು, ತಲೆಯನ್ನು ಹಿಂದಕ್ಕೆ ಆನಿಸಿ, ಕುತ್ತಿಗೆಯನ್ನು ಕೊಯ್ದು ಬಿಟ್ಟನು, ಪುರುಷಾಮೃಗವು ಮಡಿದುಬಿತ್ತು.

ಅಲ್ಲಿಂದ ಅಜಿತನು ಎದ್ದು ಬಳಲಿಕೆಯಿಂದ, ಮೆಲ್ಲಮೆಲ್ಲನೆ, ಕುಂಟುತ್ತ, ನೂಲಿನ ಸಹಾಯದಿಂದ ಕೋಟೆಯ ಬಾಗಿಲಿಗೆ ಬಂದನು. ಅಲ್ಲಿ ಅರಿಂದಮೆಯು ಆತುರದಿಂದ ಅವನನ್ನು ಕಾದುಕೊಂಡಿದ್ದಳು.

ಅಜಿತನು ಆಕೆಯನ್ನು ಕಂಡು, “ಎಲ್ಲವೂ ಸರಿಯಾಯಿತು' ಎಂದು ಹೇಳಿ, ಕತ್ತಿಯ ನೆತ್ತರನ್ನು ತೋರಿಸಿದನು, ಅರಿಂದಮೆಯು ಮಾತ ನಾಡಬಾರದೆಂದು ಸನ್ನೆಯಿಂದಲೇ ತಿಳಿಸಿ, ಆತನನ್ನು ಸೆರೆಮನೆಗೆ ಕರೆದುಕೊಂಡು ಹೋದಳು. ಪಹರೆಯವರಿಗೆ ಮುಂಚಿತವಾಗಿಯೇ ಚೆನ್ನಾಗಿ ಕುಡಿಸಿ ಬಿಟ್ಟಿದ್ದುದರಿಂದ, ಅವರೆಲ್ಲ ರೂ ಗೊರಕೆ ಹೊಡೆಯುತ್ತಿದ್ದರು. ಮೆಲ್ಲನೆ ಬಾಗಿಲು ತೆರೆದು ಯವನದೇಶದಿಂದ ಬಂದಿದ್ದ ವರನ್ನು ಹೊರಕ್ಕೆ ಬಿಟ್ಟಳು. ಅವರು ಸಂತೋಷದಿಂದ ಸಮುದ್ರತೀರಕ್ಕೆ ಹೋಗಿ, ಅಲ್ಲಿ ಮೊದಲೇ ಸಿದ್ಧವಾಗಿದ್ದ ಹಡಗನ್ನು ಹತ್ತಿ ಕೊಂಡು, ಹಾಯಿಗಳನ್ನು ಬಿಚ್ಚಿಬಿಟ್ಟರು. ಕತ್ತಲೆಯಾಗಿದ್ದು ದರಿಂದ ಶತಬಲಿಯ ದೋಣಿಗಳು ಅನೇಕವಿದ್ದರೂ ಈ ಹಡಗು ಹೋದುದು ಅವರಿಗೆ ಗೊತ್ತೇ ಆಗಲಿಲ್ಲ. ಅವರು ಬೆಳಕು ಹರಿಯುವುದರೊಳಗೆ ಒಂದು ದ್ವೀಪವನ್ನು ಸೇರಿದರು, ಅಲ್ಲಿ ಅಜಿತನು ಅರಿಂದಮೆಯನ್ನು ಮದುವೆಮಾಡಿಕೊಂಡನು.

X ನೇತ್ರವತಿಯ ಸ್ಪಪ್ನ ಫಲ.

[ಸಂಪಾದಿಸಿ]

ಅರಿಂದಮೆಯು ಅಜಿತನ ಹೆಂಡತಿಯಾದರೂ ಯವನದೇಶಕ್ಕೆ ಬರಲೇ ಇಲ್ಲ, ಎಲ್ಲಿಯೋ ಒಂದು ಕಡೆ ಮಲಗಿದ್ದಾಗ ಅಜಿತನು ಬಿಟ್ಟು ಬಂದನೆಂದೂ, ಒಬ್ಬ ರಕ್ಕಸನು ಆಕೆಯನ್ನು ಎತ್ತಿಕೊಂಡು ಹೋದನೆಂದೂ ಕೆಲವರು ಹೇಳುವರು ; ಇನ್ನು ಕೆಲವರು ಆ ರಕ್ಕಸನು ಅಜಿತನನ್ನು ಓಡಿಸಿ, ಬಲಾತ್ಕಾರದಿಂದ ಅವಳನ್ನು ಸೆಳೆದುಕೊಂಡು ಹೋದನೆಂದು ಹೇಳುವರು, ಹೇಗೂ ಇರಲಿ ;-ಅಜಿತನು ಹಡಗು ಹತ್ತಿ ಬರುವಾಗ ವ್ಯಥೆಯಿಂದಲೊ ಇಲ್ಲವೆ ಅವಸರದಿಂದಲೊ ಕರಿಯ ಪತಾಕೆಯನ್ನು ತೆಗೆದು ಬಿಳಿಯ ಪತಾಕೆಯನ್ನು ಏರಿಸುವುದಕ್ಕೆ ಮರೆತುಬಿಟ್ಟನು ! ಪರ್ವತಶಿಖರ ದಲ್ಲಿ ಕಾದುಕೊಂಡಿದ್ದ ತಾರಾಪತಿಯು ಹಡಗಿನ ಮೇಲೆ ಬಿಳಿಯ ಬಾವಟೆಯನ್ನು ಕಾಣದೆ, ತನ್ನ ಮಗನು ಸತ್ತನೆಂದೆಣಿಸಿ ಸಮುದ್ರಕ್ಕೆ ಹಾರಿ, ಪ್ರಾಣವನ್ನು ಕಳೆದುಕೊಂಡನು.

ಅಜಿತನು ಪಟ್ಟಣವನ್ನು ಮುಟ್ಟಿದ ತರುವಾಯ ತಂದೆಯ ಮರಣ ವಾರ್ತೆಯನ್ನು ಕೇಳಿ, ತನ್ನ ಮರವೆಗಾಗಿ ಬಹಳ ಪಶ್ಚಾತ್ತಾಪ ಪಟ್ಟನು. ಆ ಮೇಲೆ ಯವನದೇಶಕ್ಕೆ ಆತನೇ ಅರಸನಾಗಿ ಪ್ರಜೆಗಳನ್ನು ಒಳ್ಳೆಯ ರೀತಿಯಿಂದ ನೋಡುತಿದ್ದನು, ಹಾವಳಿ ಮಾಡುತಿದ್ದ ಎಷ್ಟೋ ಮಂದಿ ರಾಕ್ಷಸರನ್ನು ನಾಶಮಾಡಿದನು, ಆ ಕಾಲದಲ್ಲಿ ಚಂಪಾವತಿಯೆಂಬ ಪಟ್ಟಣದಲ್ಲಿ ಅಜಿತನಂತೆಯೇ ಶೂರನಾಗಿದ್ದ ಒಬ್ಬ ರಾಜನು ಅವನ ಮೇಲೆ ಕತ್ತಿ ಕಟ್ಟಿ ಯುದ್ಧಕ್ಕೆ ನಿಂತ ಕೂಡಲೆ ಇಬ್ಬರೂ ವೀರರಾದುದರಿಂದ, ಇಬ್ಬರ ಮನಸ್ಸಿನಲ್ಲಿಯೂ ಹಗೆ ಹೋಗಿ, ಅಕ್ಕರೆ ಹುಟ್ಟಿತು. ತತ್‌ಕ್ಷಣವೆ ಕತ್ತಿಗಳನ್ನು ಒರೆಯಲ್ಲಿ ಇಟ್ಟು, ಇಬ್ಬರು ಗೆಳೆಯರಂತೆ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಆ ರಾಜನ ಮಗಳನ್ನು ಅಜಿತನು ಮದುವೆ ಮಾಡಿ ಕೊಂಡನು.

ಅದು ವರೆಗೆ ಜನರಲ್ಲಿ ಒಕ್ಕಪ್ಟೆಂಬದು ಇರಲಿಲ್ಲ. ಅಜಿತನು ತನ್ನ ಗ್ರಾಮಗಳೊಳಗೆ ಪರಸ್ಪರ ಸ್ನೇಹವುಂಟಾಗುವಂತೆ ಮಾಡಿ, ಸುತ್ತುಮುತ್ತಲಿನ ಇತರ ಸೀಮೆಗಳಲ್ಲಿ ಯವನದೇಶವೇ ಶ್ರೇಷ್ಠವಾಗುವ ಹಾಗೆ ಅನೇಕ ಸತ್ಕಾರ್ಯಗಳನ್ನು ಮಾಡಿದನು. ಜನರೆಲ್ಲರೂ ಆತನಲ್ಲಿ ಸಂಪೂರ್ಣ ವಿಶ್ವಾಸವುಳ್ಳವರಾಗಿದ್ದರು, ತಮಗೆ ಸುಖಜೀವನವನ್ನೂ ಸ್ವಾತಂತ್ರವನ್ನೂ ಅಜಿತನು ದಯಪಾಲಿಸಿದನೆಂದು ಆತನನ್ನು ಕೊಂಡಾಡಿ, ಅವನ ಮರಣಾನಂತರವೂ ಅವನನ್ನು ಅಧಿಕವಾಗಿ ಗೌರವಿಸ ಹತ್ತಿದರು. ಅವನು ತೀರಿಕೊಂಡ ಇಪ್ಪತ್ತು ವರುಷಗಳ ಮೇಲೆ ಆತನ ಮೂಳೆಗಳು ಸಮುದ್ರದಾಚೆ ಅಂಜನವೆಂಬ ದ್ವೀಪದಲ್ಲಿ ದೊರೆತವಂತೆ ! ಅವು ಸಾಮಾನ್ಯರಾದ ಮನುಷ್ಯರು ಎಲುಬುಗಳಿಗಿಂತ ಗಟ್ಟಿಮುಟ್ಟಾಗಿದ್ದು ವಂತೆ ! ಆ ಅಸ್ಥಿಗಳನ್ನು ಬಹು ಸಂಭ್ರಮದಿಂದ ತಂದು, ಅರಮನೆಯ ಬಳಿ ಹುಗಿದು, ಅಲ್ಲಿ ಆತನ ನೆನಪಿಗಾಗಿ ಒಂದು ದೇವಾಲಯವನ್ನು ಕಟ್ಟಿಸಿದರು, ಪ್ರಾಯಶಃ ಆರು ನೂರು ವರುಷಗಳ ವರೆಗೆ ಲೋಕೈಕವೀರನಾದ ಅಜಿತನ ಹೆಸರನ್ನು ಜನಗಳು ಮರೆಯಲಿಲ್ಲ.

ಆದರೆ ಅಜಿತನ ಮೂಳೆಗಳು ಅಂಜನ ದ್ವೀಪದಲ್ಲಿ ಸಿಕ್ಕಿದುದಕ್ಕೆ ಕಾರಣವೇನು? ಆತನು ಯವನದೇಶದಲ್ಲಿ ಯೇ ಸಾಯದೆ, ಅಂಜನ ದ್ವೀಪದಲ್ಲಿ ಹೇಗೆ ಸತ್ತನು? ಹೋದಹೋದಲ್ಲಿ ಆತನಿಗೆ ಜಯಲಕ್ಷ್ಮಿಯು ಹೂ ಮಾಲೆಯನ್ನು ಹಾಕಿದುದರಿಂದ, ಕೊನೆಗೆ ಆತನ ತಲೆ ಕೊಂಚ ತಿರುಗಿತು, ಆಗ ಅವನು ದೇವರ ನಿಯಮಗಳನ್ನು ಮೀರಿ, ಅನ್ಯಾಯಮಾರ್ಗಕ್ಕೆ ಕಾಲೂರಿದನು, ತನಗೆ ಮಿತ್ರನೂ ಮಾವನೂ ಆದ ಚಂಪಾವತಿಯ ರಾಜ ನನ್ನು ಕರೆದುಕೊಂಡು, ಸುರಂಗ ಮಾರ್ಗವಾಗಿ ಪಾತಾಳ ಲೋಕಕ್ಕೆ ಹೋಗಿ, ಅಲ್ಲಿಯ ರಾಜನ ಮಗಳಾದ ಒಬ್ಬ ನಾಗಕನ್ನಿಕೆಯನ್ನು-ರಾವ ಣನು ಸೀತೆಯನ್ನು ಕದ್ದು ಕೊಂಡು ಹೋದಂತೆ--- ಎತ್ತಿ ಕೊಂಡು ಹೋಗುವುದಕ್ಕೆ ಹವಣಿಸಿದನು. ಆ ಪ್ರಯತ್ನದಲ್ಲಿ ಸೋತು ಹೋಗಲು, ಇವನನ್ನು ಹಿಡಿದು, ಸಂಕಲೆಗಳಿಂದ ಒಂದು ಬಂಡೆಗೆ ಕಟ್ಟಿಬಿಟ್ಟರು. ಮಾವನು ಸತ್ತು ಹೋದನು.

ಅಜಿತನು ಅಲ್ಲಿಯೇ ಅನೇಕ ವರುಷಗಳ ತನಕ ನರಳುತ್ತಿರಲು, ಆ ಹಾದಿಯಾಗಿ ಒಂದು ದಿನ ಹೋಗುತಿದ್ದ ವಜ್ರಾಂಗನೆಂಬ ವೀರನೊಬ್ಬನು ಕನಿಕರಪಟ್ಟು, ಇವನನ್ನು ಬಿಡಿಸಿ ತಂದನು.

ಅಷ್ಟರಲ್ಲಿ ಯವನದೇಶದಲ್ಲಿ ಹೊಸ ಏರ್ಪಾಡುಗಳು ನಡೆದಿದ್ದುವು. ಅಜಿತನು ಹಿಂದೆ ಬಾರದಿದ್ದುದನ್ನು ಕಂಡು, ಅವನು ಸತ್ತನೆಂದು ಎಣಿಸಿ, ಯವನರು ತಾರಾಂಗಣಕ್ಕೆ ತೆರಳಿ, ಆತನ ತಾಯಿಯಾದ ನೇತ್ರವತಿಯನ್ನು ಕರೆದುಕೊಂಡು ಬಂದು, ತಮ್ಮ ರಾಣಿಯಾಗಿ ಮಾಡಿದರು, ಆಗ ದುಷ್ಟರಾದ ಹಂಸಪುತ್ರರೆಂಬ ರಾಕ್ಷಸರು, ಅಜಿತನು ಇಲ್ಲ ಎಂಬುದನ್ನು ತಿಳಿದು, ಯವನದೇಶವನ್ನು ನುಗ್ಗಿ, ಜನರನ್ನು ಮುರಿದು, ಅವರ ರಾಣಿಯನ್ನು ಸೆರೆಹಿಡಿದರು.ನೇತ್ರವತಿಯು ದಾಸಿಯಾಗಿ ಅವರೊಂದಿಗೆ ಹೋಗಬೇಕಾಯಿತು.

ಹೀಗೆ ಅಜಿತನು ಹಿಂದಿರುಗಿ ಬಂದಾಗ, ಯವನದೇಶವು ರಾಕ್ಷಸಮಯವಾಗಿತ್ತು. ಜನರು ಕೂಡ ಅವನನ್ನು ಗುರುತಿಸಲಾರದೆ ಹೋದರು. ರಾಜ್ಯವನ್ನು ತಿರುಗಿ ಪಡೆಯಬೇಕೆಂದು ಗಲಾಟೆ ಎಬ್ಬಿಸಿದನು. ಆದರೆ ಅಲ್ಲಿದ್ದ ಅಧಿಕಾರಿಗಳು ಆತನನ್ನು ಹೊಡೆದು ಅಟ್ಟಿಬಿಟ್ಟರು.

ಆ ಮೇಲೆ ಅಜಿತನು ವ್ಯಸನದಿಂದಲೂ ಲಜ್ಜೆಯಿಂದಲೂ ಮುಖ ಬಾಡಿಸಿಕೊಂಡು, ಅಂಜನ ದ್ವೀಪಕ್ಕೆ ಹೋಗಿ, ಅಲ್ಲಿಯ ದೊರೆಯ ಮರೆಯಲ್ಲಿ ಕೆಲಕಾಲ ಇದ್ದನು. ಕಡೆಗೆ ರಾಜನಿಗೇನೊ ಎರಡು ಬಗೆದ ನಂದು ಈತನ ಮೇಲೊಂದು ಅಪವಾದದ ನೆರಳು ಬಿದ್ದು, ಈತನಿಗೆ ಮರಣ ದಂಡನೆಯನ್ನು ವಿಧಿಸಿ ಬಿಟ್ಟರು. ಅಜಿತನು ವೀರನೆ ಹೌದು; ಆದರೂ ಆತನ ಅವಸಾನವನ್ನು ನೋಡಬಾರದೆ ? ಮನುಷ್ಯನಿಗೆ ಶಕ್ತಿಯನ್ನೂ ಯುಕ್ತಿಯನ್ನೂ ದೇವರೇ ಕರುಣಿಸುವನು, ಆದರೆ ಸೊಕ್ಕು ತಲೆಗೆ ಅಡರಿ, ಮನುಷ್ಯನು ತಾನು ಭೂಮಿಯ ಮೇಲೆ ಇದ್ದಾನೋ ಇಲ್ಲವೋ ಎಂಬಂತೆ ನಡೆಯುವುದಕ್ಕೆ ತೊಡಗಿದನೆಂದರೆ, ದೇವರೇ ಆತನ ಕೈ ಬಿಟ್ಟು ಬಿಡುವನು, ಬೆಂಕಿಯಾಗಿ ಬಾನಿಗೇರಿದವನ ಬಿರುಸು ಆಗ ಬೂದಿಯಾಗಿ ಭೂಮಿಗೆ ಬೀಳುವುದು. ಅಜಿತನು ಆ ದುರ್ದಶೆಗೆ ಬಂದನು. ಅಂಥ ಅವಸ್ಥೆಯು ನಮ್ಮ ಹಗೆಗಾರರಿಗೆ ಕೂಡ ಬರಬಾರದು.