ಅಡಿಗಡಿಗೆ ಸ್ಥೂಲಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ
ಸಂಗ-ಮಹಾಸಂಗ-ಸಂಕಲ್ಪವಿರಹಿತನು. ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನವೆಂಬ ಪಂಚವಕ್ತ್ರವನು ಊಧ್ರ್ವಮುಖಕ್ಕೆ ತಂದು ಅರ್ಪಿಸಬಲ್ಲನಾಗಿ ಗುರುಪ್ರಸಾದಿ. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮ ಇಂತೀ ಅಷ್ಟಮೂರ್ತಿಮದವನು ದಾಸೋಹದಲ್ಲಿ ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ. ಹೊರಗೆ ಭಜಿಸಲಿಲ್ಲ
ಒಳಗೆ ನೆನೆಯಲಿಲ್ಲ. ಸರ್ವಾಂಗಲಿಂಗಿಯಾಗಿ ಲಿಂಗಪ್ರಸಾದಿ. ಇದು ಕಾರಣ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಮಹಾಪ್ರಸಾದಿ.