ವಿಷಯಕ್ಕೆ ಹೋಗು

ಅನಾದಿ ಶರಣನ ಹೃತ್ಕಮಲ

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅನಾದಿ ಶರಣನ ಹೃತ್ಕಮಲ ಮಧ್ಯದ ತೇಜೋಮಯವನೇನೆಂದುಪಮಿಸಯ್ಯಾ ? ಜಲವೆ ಪಾದಶಿಲೆ
ಪೃಥ್ವಿಯೆ ಪಿಂಡಿಗೆ ಆಕಾಶವೆ ಲಿಂಗ
ಸಪ್ತಸಮುದ್ರಗಳೆ ಪಂಚಾಮೃತ
ಮೇಘವೆ
ಅಗ್ಘವಣಿಯ ಬಿಂದಿಗೆ
ಮಳೆಗಾಲವೆ ಮಜ್ಜನ
ಚಂದ್ರಮನೆ ನೊಸಲ ಗಂಧ
ನಕ್ಷತ್ರವೆ ಅಕ್ಷತೆ
ತರುಮರಾಧಿಗಳೆ ಪತ್ರೆಪುಷ್ಪ
ಮೊಳಗೆ ಪಂಚಮಹಾವಾದ್ಯ ! ಮಾಗಿಯೆಂಬ ಪರಿಯಾಣವ ಬೆಳಗಿ
ಬೇಸಗೆಯೆಂಬ ಓಗರವ ಗಡಣಿಸಿ ಸರ್ವಪರಿಮಳವೆಂಬ ತುಪ್ಪವನೆರೆದು
ಪರವೆಂಬ ಮೇಲೋಗರವನಿಕ್ಕಿ ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ
ಲಿಂಗವ ಆರೋಗಣೆಯ ಮಾಡಿಸಿ ಸುಜ್ಞಾನದಲ್ಲಿ ಕೈಗೆರೆದು ಭಾವವೆಂಬ ವೀಳೆಯವ ಕೊಟ್ಟು
ಅನು ನೀನೆಂಬ ಅನುಲೇಪಗಂಧವ ಪೂಸಿ ವಾಯುವೆಂಬ ವಸ್ತ್ರವನುಡಿಸಿ
ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ
ಮಜ್ಜನಕ್ಕೆರೆವಠಾವಾವುದೈ ಸಂಗನಬಸವಣ್ಣಾ ?