ಅನುಭಾವ ! ಅನುಭಾವವೆಂದು

ವಿಕಿಸೋರ್ಸ್ದಿಂದ



Pages   (key to Page Status)   


ಅನುಭಾವ ಅನುಭಾವವೆಂದು ನುಡಿವುತಿರ್ಪರೆಲ್ಲರು. ಅನುಭಾವದ ಕೀಲವನಾರೂ ಅರಿಯರಲ್ಲ ! ಅನುಭಾವವೆಂದೊಡೆ
ಅಂತರಂಗದ ಹೃದಯಕಮಳದ ಅಷ್ಟದಳಂಗಳ ಮೆಟ್ಟಿ ಚರಿಸುವ ಜೀವಹಂಸನ ಕೊಂದು
ಇಂದ್ರದಿಕ್ಕಿನ ಎಸಳಿನಲ್ಲಿ ತೋರುವ ಭಿನ್ನಭಕ್ತಿಯನಳಿದು
ಅಗ್ನಿದಿಕ್ಕಿನ ಎಸಳಿನಲ್ಲಿ ತೋರುವ ಜಡನಿದ್ರೆಯ ಮರ್ದಿಸಿ
ಯಮದಿಕ್ಕಿನ ಎಸಳಿನಲ್ಲಿ ತೋರುವ ವ್ಯಸನವಿಕಾರವ ಮಸುಳಿಸಿ
ನೈಋತ್ಯದಿಕ್ಕಿನ ಎಸಳಿನಲ್ಲಿ ತೋರುವ ಪಾಪದ ದುಷ್ಕøತವ ಪಲ್ಲಟಿಸಿ
ವರುಣದಿಕ್ಕಿನ ಎಸಳಿನಲ್ಲಿ ತೋರುವ ಮಂದಗಮನವ ಪರಿಹರಿಸಿ
ವಾಯುವ್ಯದಿಕ್ಕಿನ ಎಸಳಿನಲ್ಲಿ ತೋರುವ ದುಷ್ಟಾಚಾರವ ದೂರಮಾಡಿ
ಕುಬೇರದಿಕ್ಕಿನ ಎಸಳಿನಲ್ಲಿ ತೋರುವ ದ್ರವ್ಯಾಪೇಕ್ಷೆಯ ಧಿಕ್ಕಿರಿಸಿ
ಈಶಾನ್ಯದಿಕ್ಕಿನ ಎಸಳಿನಲ್ಲಿ ತೋರುವ ವನಿತಾದಿ ವಿಷಯ ಪ್ರಪಂಚುಗಳ ಈಡಾಡಿ ನೂಂಕಿ
ಇಂತೀ ಅಷ್ಟದಳಂಗಳ ಹಿಡಿದು ತೋರುವ ಪ್ರಕೃತಿಗುಣಂಗಳ ನಷ್ಟಮಾಡಿ
ನಟ್ಟನಡು ಚೌದಳಮಧ್ಯದಲ್ಲಿರ್ದ ಪರಬ್ರಹ್ಮವನು ನೆಟ್ಟನೆ ಕೂಡಿ
ಅಷ್ಟಾವಧಾನಿಯಾಗಿ
ಅಚಲಿತಜ್ಞಾನದಲ್ಲಿ ಸುಳಿಯಬಲ್ಲಡೆ ಆತನೆ ನಿಜಾನುಭಾವಿ
ಆತನೆ ನಿತ್ಯಮುಕ್ತನು
ಆತನೆ ನಿರ್ಭೇದ್ಯನು. ಇಂತೀ ಭೇದವನರಿಯದೆ
ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋ ಮಾತುಗಳ ಕಲಿತು ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಟೆಗುಟ್ಟುವ ಒಣ ಹರಟೆಗಾರರ ಶಿವಾನುಭಾವಿಗಳೆಂತೆಂಬೆನಯ್ಯಾ ಅಖಂಡೇಶ್ವರಾ ?