ಅಯ್ಯ ! ನಿರವಯಶೂನ್ಯಮೂರ್ತಿ

ವಿಕಿಸೋರ್ಸ್ದಿಂದ



Pages   (key to Page Status)   


ಅಯ್ಯ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗಕ್ಕೆ ಎನ್ನ ಅಷ್ಟತನುವೆ ಅಷ್ಟ ವಿಧಾರ್ಚನೆಯಾಗಿ
ಎನ್ನ ಅಷ್ಟಾತ್ಮ-ಅಷ್ಟಕರಣಂಗಳೆ ಷೋಡಶೋಪಚಾರವಾಗಿ
ಶರಣಸತಿ-ಲಿಂಗಪತಿಯೆಂಬ ಉಭಯ ಭೇದವಳಿದು ಏಕವಾಗಿ ಎಲೆಗಳೆದ ವೃಕ್ಷದಂತೆ ಉಲುಹಡಗಿರ್ದೆನಯ್ಯ. ತೆರೆಯಳಿದ ಅಂಬುಧಿಯಂತೆ ಪರಮ ಚಿದ್ಘನಗುರು ಶಿವಸಾಗರದೊಳಗೆ ಮುಳುಗಿ ಪರಮ ಚಿದ್ಗಂಭೀರನಾಗಿರ್ದೆನಯ್ಯ ಘಟವನಳಿದ ಅವಕಾಶದಂತೆ ಬಚ್ಚಬರಿಯ ಬಯಲಾಗಿ ನಿಶ್ಚಲನಾಗಿರ್ದೆನಯ್ಯಾ ಪಟವನಳಿದ ಚಿತ್ರದಂತೆ ನಿರ್ಮಲ ನಿರಾವರಣನಾಗಿ ಶುದ್ಧ ಅಮಲಬ್ರಹ್ಮವಾಗಿ ಪ್ರತಿಯಿಲ್ಲದ ಅಪ್ರತಿಮ ಅನುಮಿಷ ಅನುಪಮ ಅಪ್ರಮಾಣ ಅನಾಮಯ ಅಗಣಿತ ಅಚಲಾನಂದ ನಿತ್ಯ ನಿಃಕಳಂಕ ನಿರ್ಮಾಯ ನಿರಾಲಂಬ ನಿರ್ಗುಣ ನಿತ್ಯಮುಕ್ತ ನಿತ್ಯತೃಪ್ತ ನಿಶ್ಚಿಂತ ನಿಃಕಾಮ್ಯ ನಿಜಷಡ್ಗುಣೈಶ್ವರ್ಯ ಮದ್ಗುರು ಸಂಗನಬಸವಣ್ಣನ ಚಿದ್ಬೆಳಗಿನ ಬಯಲೊಳಗೆ ಬಯಲಪ್ಪುದು ತಪ್ಪದು ! ನಿಮ್ಮ ಕೃಪೆಯಿಂದ ! ನೋಡ ! ಚೆನ್ನಬಸವಣ್ಣ.