ಅಸುರರ ಸುರರ ಶಿರೋಮಾಲೆಯ ಕೊರಳಲಿಕ್ಕಿ ಶಿವಕಳೆಯೆದ್ದಾಡುವಲ್ಲಿ ಅವಕಳೆಯಾಗದೆ ? ಅಸುರ ದೇವಾದಿಗಳೆಲ್ಲಿಯಯ್ಯಾ ! ನೀ ಮಾಡಿದ ಧಾರುಣಿ ರಸಾತಳಕ್ಕಿಳಿದು
ಕೂರ್ಮ ಕುಸಿದು ದಿಗುದಂತಿಗಳು ಘೀಳಿಟ್ಟು
ಫಣಿಯ ಹೆಡೆ ಮುರಿದು ನಿನ್ನ ಪಾದದ ಗುಡುಗಾಟದಿಂದ ಕೆಂಧೂಲಿ ನೆಗೆದು ನರಲೋಕ ಸುರಲೋಕ ಬ್ರಹ್ಮಲೋಕ ವಿಷ್ಣುಲೋಕ ಇಂದ್ರಲೋಕ ಸೂರ್ಯಲೋಕ ಚಂದ್ರಲೋಕ ತಾರಾಲೋಕ ಅಸುರಲೋಕಂಗಳು ಬೂದಿಯಲ್ಲಿ ಮುಸುಕಿದವಯ್ಯಾ. ಪ್ರಭುವೆದ್ದು ಹಗರಣವಾಡುತ್ತಿರಲು
ಈರೇಳು ಭುವನದೊಳಗುಳ್ಳ ಆತ್ಮಾದಿಗಳೆಲ್ಲ ದೆಸೆದೆಸೆಗೆಡಲು
ಶಶಿಧರ ನಾಟ್ಯಕ್ಕೆ
ನಿಂದಲ್ಲಿ
ಇನ್ನಾರಯ್ಯ ಸಂತೈಸುವರು ಕೂಡಲಚೆನ್ನಸಂಗಯ್ಯಾ ?