ಆಕಾರ ನಿರಾಕಾರವಿಲ್ಲದಂದು
ಹಮ್ಮುಬಿಮ್ಮುಗಳಿಲ್ಲದಂದು
ಜೀವ ಪರಮರಿಲ್ಲದಂದು
ಮನ ಮನನ ಮನುನೀಯವಿಲ್ಲದಂದು
ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ
ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು
ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ
ಉಕಾರವೇ ಬಿಂದು
ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ
ಸೂಕ್ಷ ್ಮ
ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು
ಸರ್ವತೋಬಾಹು
ಸರ್ವತೋಪಾದ
ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು
ತ್ರಿಣೇತ್ರ
ಎರಡು ಹಸ್ತ
ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು
ಆರು ಕಂಗಳು
ನಾಲ್ಕು ಭುಜ
ಎರಡು ಪಾದ
ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ
ಒಂಬತ್ತು ಕಂಗಳು
ಆರು ಭುಜ
ಎರಡು ಪಾದ
ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ
ಹನ್ನೆರಡು ಕಂಗಳು
ಎಂಟು ಭುಜ
ಎರಡು ಪಾದ
ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ
ದಶಭುಜ
ದಶಪಂಚನೇತ್ರ
ದ್ವಿಪಾದ
ತನುಯೇಕ
ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ
ಶಾಂತಿ
ವಿದ್ಯೆ
ಪ್ರತಿಷೆ*
ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ
ತ್ವಂ ಪದವೇ ಅಂಗ
ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.