ಆದಿಯ ಲಿಂಗವ ಮೇದಿನಿಗೆ ತಂದು
ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯಾ ಸಂಗನಬಸವಣ್ಣನು. ಆ ಮನೆಯ ನೋಡಲೆಂದು ಹೋದಡೆ
ಆ ಗೃಹ ಹೋಗದ ಮುನ್ನವೆ ಎನ್ನ ನುಂಗಿತ್ತಯ್ಯಾ ! ಅದಕ್ಕೆ ಕಂಭ ಒಂದು
ತೊಲೆ ಆರು
ಜಂತೆವಲಗೆ ಮೂವತ್ತಾರು ಧರೆಯಾಕಾಶವ ಹೊದ್ದದ ಕೆಸರುಗಲ್ಲು ಒಂಬತ್ತು ಬಾಗಿಲು
ಬಿಯ್ಯಗವಿಕ್ಕಿಹವು. ಬೇರೊಂದು ಬಾಗಿಲು ಉರಿಯನುಗುಳುತಿರ್ಪುದು. ಮುತ್ತಿನ ಕಂಭದ ಮೇಲುಕಟ್ಟಿನ ಮೇಲೆ ಮಾಣಿಕ್ಯದ ಶಿಖರಿ ! ಆ ಶಿಖರಿಯ ತುದಿಯಲ್ಲಿ ಬಿಳಿಯ ಹೊಂಗಳಸವಿಪ್ಪುದು. ಅದು ಕಾಬವರಿಗೆ ಕಾಣಬಾರದು. ಕಾಣಬಾರದವರಿಗೆ ಕಾಣಬಪ್ಪುದು. ಅಲ್ಲಿ ಹತ್ತು ಮಂದಿ ಪರಿಚಾರಕರು ಎಡೆಯಾಡುತಿಪ್ಪರು. ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು. ಒಬ್ಬಾಕೆ ಎಡೆಯಾಡುತ್ತಿಪ್ಪಳು. ಒಬ್ಬಾಕೆ ಲಿಂಗಾರ್ಚನೆಗೆ ನೀಡುತ್ತಿಪ್ಪಳು. ಒಬ್ಬಾಕೆ ಸುಯಿಧಾನಂಗಳೆಲ್ಲವನು ಶೋಧಿಸಿ ತಂದುಕೊಡುತ್ತಿಪ್ಪಳು. ಒಬ್ಬಾಕೆ ಉರಿಯಿಲ್ಲದಗ್ನಿಯಲಿ ಪಾಕವ ಮಾಡುತ್ತಿಪ್ಪಳು. ಒಬ್ಬಾಕೆ ಲಿಂಗಜಂಗಮಕ್ಕೆ ಮಾಡಿ
ನೀಡಿ
ಊಡಿ
ಉಣಿಸಿ ತೃಪ್ತಿಯ ಮಾಡುತ್ತಿಪ್ಪಳು_ ಒಂದಡ್ಡಣಿಗೆಯ ಮೇಲೆ
ಐದು ಅಗಲೊಳಗೆ ಇಟ್ಟ ಬೋನವನು ಒಬ್ಬನುಂಡಡೆ
ಪ್ರಮಥಗಣಂಗಳೆಲ್ಲರೂ ಆತನ ಒಕ್ಕುದ ಕೊಳಲೆಂದು ಬಂದು
ಆ ಮನೆಯ ಹೊಕ್ಕು ನಿಶ್ಚಿಂತನಿವಾಸಿಗಳಾದರು. ಗುಹೇಶ್ವರನ ಶರಣ ಸಂಗನಬಸವಣ್ಣನ ಮಹಾಮನೆಯ ಕಂಡು ಧನ್ಯನಾದೆನು ಕಾಣಾ ಸಿದ್ಧರಾಮಯ್ಯಾ.