ಆದಿ ಜಂಗಮ ಅನಾದಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿ ಜಂಗಮ ಅನಾದಿ ಭಕ್ತನೆಂಬುದನಾರು ಬಲ್ಲರು ಹೇಳಾ ಬಸವಣ್ಣಾ ನೀನಲ್ಲದೆ ? ನಿತ್ಯನಿರಾಕಾರ ಘನವು ಶಕ್ತಿಯಿಲ್ಲದೆ ಇದ್ದಡೆ
ಆಗಲೆ ಬಯಲಾದಹುದೆಂದು
ನೀನು ಘನಚೈತನ್ಯವೆಂಬ ಕಾಯವ ಧರಿಸಿದಡೆ
ಆ ಬಯಲು ಪರಬ್ರಹ್ಮವೆಂಬ ನಾಮವನೆಯ್ದಿತ್ತು. ಆ ಮಹಾಘನವು ತನ್ನ ವಿನೋದದಿಂದ ಸಾಕಾರವನೆಯ್ದಿದಡೆ
[ನೀನು] ಧರ್ಮವೆಂಬ ಕಾಯವ ಧರಿಸಿ
ಆ ಮೂರ್ತಿಗೆ ಆಧಾರವಾದೆಯಾಗಿ ಜಗದ ಕರ್ತ ಶಿವನೆಂಬ ನಾಮವಾಯಿತ್ತಲ್ಲಾ ಬಸವಣ್ಣಾ. ಜಂಗಮವೆ ಲಿಂಗವೆಂದು ನೀನು ಭಾವಿಸಲಾಗಿ
ನಿನ್ನ ಸನ್ನಿಧಿಯಿಂದ ಪ್ರತಿನಿಧಿಯಾಯಿತ್ತು ನೋಡಾ ಬಸವಣ್ಣಾ. ಲಿಂಗವ ಹಿಡಿದು ನೀನು ಪೂಜಿಸಲಾಗಿ
ಲಿಂಗವು ಹೆಸರುವಡೆಯಿತ್ತು ನೋಡಾ ಬಸವಣ್ಣಾ. ಪ್ರಸಾದವನು ನೀನು ಕೊಂಡು ಪಥವ ತೋರಿದೆಯಾಗಿ ಪ್ರಸಾದವು ಹೆಸರಾಯಿತ್ತು ನೋಡಾ ಬಸವಣ್ಣಾ. ಇದು ಕಾರಣ ನೀನೆ ಅನಾದಿ ಭಕ್ತ
ನಾನೆ ಅನಾದಿಯಿಂದತ್ತತ್ತ ! ನೀನು ಮಾಡಲಾಗಿ ಆನಾದೆನೆಂಬುದ ನಮ್ಮ ಗುಹೇಶ್ವರಲಿಂಗವು ಬಲ್ಲ ಕಾಣಾ ಸಂಗನಬಸವಣ್ಣ.