ಆನೆಯನೇರಿದ ಮಾವತಿಗ ಚಕ್ರೇಶ್ವರನಾಗಬಲ್ಲನೆ ಅಯ್ಯಾ ? ವೇದಾಗಮಶಾಸ್ತ್ರ ಪುರಾಣಂಗಳನೋದಿ ಕೇಳಿ
ನಡೆ ನುಡಿ ಪೂರಾಯವಾದ ಪುರಾತನರಾಗಬಲ್ಲರೆ ಅಯ್ಯಾ ? ಅದೆಂತೆಂದಡೆ; `ಪೂರ್ಣಶ್ಚ ಪುರಾತನಃ ಎಂದುದಾಗಿ. ತೊತ್ತು ಲಕ್ಷಣವಿರಲು
ನಾಣ್ಯವ ನುಡಿಸಿ
ನವರತ್ನಾಭರಣಂಗಳ ತೊಡಿಸಿ
ದಂಡಿಗೆಯನೇರಿಸಲು `ಶಂಕರಸ್ಯ ಯಥಾ ಗೌರೀ' ಎನಿಸಿಕೊಳ್ಳಬಲ್ಲಳೆ ಅಯ್ಯಾ ? ಖ್ಯಾತಿಗಾಗಿ ನಿಜತತ್ವಂಗಳನೋದಿ ಕೇಳಿ ಹೇಳಿದಡೇನು ? ಅದಕ್ಕೆ ತಕ್ಕ ಅರಿವು ಆಚಾರ ನಡೆನುಡಿಯಲ್ಲಿ ನಿರ್ಣಯವಿಲ್ಲದಿರ್ದಡೆ ಕುಂಭೀಪಾತಕ ನಾಯಕನರಕ ತಪ್ಪದು- ಕೂಡಲಚೆನ್ನಸಂಗಮದೇವಾ.