ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ : ಪ್ರಾಕೃತಪ್ರಾಣಾಯಾಮವೆಂದು
ವೈಕೃತಪ್ರಾಣಾಯಾಮವೆಂದು
ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು
ಮೂರು ಪ್ರಕಾರವಾಗಿರ್ಪುದದೆಂತೆನೆ : ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಹಂಸ ಹಂಸವೆಂದುಚ್ಚರಿಸುವ ಅಹಂಕಾರಾತ್ಮಕವಾದ ಜೀವಜಪವೇ ಪ್ರಾಕೃತ ಪ್ರಾಣಾಯಾಮವೆನಿಸುವುದು. ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ ವೈಕೃತಪ್ರಾಣಾಯಾಮವೆನಿಸುವುದು. ಆ ವೈಕೃತಪ್ರಾಣಾಯಾಮವೆ ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ : ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು
ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ
ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು
ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ
ನಾಬ್ಥಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ ಕನಿಷ್ಠಪ್ರಾಣಾಯಾಮವೆನಿಸುವುದು. ಅದೆಂತೆಂದೊಡೆ : ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ
ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು. ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು. ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು. ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು. ಇಂತೀ ಮೂವತ್ತಾರು ಮಾತ್ರೆಗಳು ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು. ಇನ್ನು ಕೇವಲ ಕುಂಭಕವೆಂತೆನೆ : ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು ಯಮುನಾನದಿ ಎಂದು ಪೇಳಲ್ಪಡುವುದು. ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು ಗಂಗಾನದಿಯೆಂದು ಪೇಳಲ್ಪಡುವುದು. ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ
ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ ತ್ರಿಕೂಟವೆಂದು
ಮಧ್ಯಹೃದಯವೆಂದು
ಕಾಶಿಕ್ಷೇತ್ರವೆಂದು
ಕೂರ್ಚವೆಂದು ಆಜ್ಞಾಚಕ್ರವೆಂದು
ಪರ್ಯಾಯ ನಾಮಂಗಳನುಳ್ಳ ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ ಮನೋಮಾರುತಂಗಳನೈದಿಸಿ ಯೋಗಮಂ ಸಾದ್ಥಿಸಲ್ತಕ್ಕುದೇ ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ.