ಇಳಿದು ಬಾ ತಾಯಿ ಇಳಿದು ಬಾ (ಸಿನೆಮಾ ಆವೃತ್ತಿ )
ಗಂಗಾವತರಣ
ಸಾಹಿತ್ಯ : ವರಕವಿ ಡಾ.ದ.ರಾ.ಬೇಂದ್ರೆ ( ಅಂಬಿಕಾತನಯದತ್ತ )
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್
ಇಳಿದು ಬಾ ತಾಯಿ ಇಳಿದು ಬಾ ||ಪಲ್ಲವಿ||
ಹರನ ಜಡೆಯಿಂದ ಹರಿಯ ಅಡಿಯಿಂದ
ಋಶಿಯ ತೊಡೆಯಿಂದ ನುಸುಳಿ ಬಾ;
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ನಿನಗೆ ಪೊಡಮಡುವೆ ನಿನ್ನನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಇಳಿದು ಬಾ ತಾಯೇ ಇಳಿದು ಬಾ.
ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ;
ಶಿವಶುಭ್ರ ಕರುಣೆ
ಅತಿಕಿಂಚದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!
ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ
ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!
ಇಳಿದು ಬಾ ತಾಯಿ ಇಳಿದು ಬಾ
ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್ ದುಮ್ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯೆ ದುಡುಕಿ ಬಾ
ಹರಣ ಹೊಸದಾಗಿ ಹೊಳೆದು ಬಾ
ಬಾಳುಬೆಳಕಾಗೆ ಬೆಳೆದು ಬಾ
ಕೈ ತೊಳೆದು ಬಾ
ಮೈ ತಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ