ಇಷ್ಟಲಿಂಗವೆ ಅಂಗಲಿಂಗ ಪ್ರಾಣಲಿಂಗವೆ ಮನಲಿಂಗವಾಯಿತ್ತು ನೋಡಾ. ಅಂಗಲಿಂಗವಾಗಿ ನಡೆನುಡಿಗತಿಯನರಿಯದು
ಪ್ರಾಣಲಿಂಗವಾಗಿ ನವನಾಳದ ಸುಳುಹನರಿಯದು. ಮನ ಲಿಂಗವಾಗಿ ನೆನಹುಗೆಟ್ಟಿತ್ತು
ಅನುಭಾವ ಲಿಂಗವಾಗಿ ವಿಚಾರವರತಿತ್ತು. ಭಾವಲಿಂಗವಾಗಿ ನಿರ್ಭಾವವಳವಟ್ಟಿತ್ತು. ಸರ್ವಕ್ರೀಗಳೆಲ್ಲ ಲಿಂಗವಾಗಿ ಮಾರ್ಗಕ್ರೀಯ ಹೊಲಬನರಿದು ಅರಿವು ಲಿಂಗವಾಗಿ ಮರಹುಗೆಟ್ಟಿತ್ತು. ಅಂತರಂಗ ಲಿಂಗವಾಗಿ ಬಹಿರಂಗವೆಂದರಿಯದು ಬಹಿರಂಗ ಲಿಂಗವಾಗಿ ಅಂತರಂಗದ ಶುದ್ಧಿಯನರಿಯದು. ಇಂತು ಸರ್ವಾಂಗಲಿಂಗವಾಗಿ ಸರ್ವೇಂದ್ರಿಯ ಗಮನ ಕೆಟ್ಟಿತ್ತು. ಮಹಾಘನವಿಂಬುಗೊಂಡಿತ್ತಾಗಿ ನಿಷ್ಪತಿ ಕರಿಗೊಂಡಿತ್ತು. ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗ ಸಂಬಂಧ ಸ್ವಯವಾಯಿತ್ತು ನೋಡಾ ಸಿದ್ಧರಾಮಯ್ಯಾ.