ಈ ಬಾನು ಈ ಹಕ್ಕಿ

ವಿಕಿಸೋರ್ಸ್ ಇಂದ
Jump to navigation Jump to search


ಈ ಬಾನು ಈ ಚುಕ್ಕಿ
ಈ ಹೂವು ಈ ಹಕ್ಕಿ

ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ
ತುದಿ ಮೊದಲು ತಿಳಿಯದೀ ನೀಲಿಯಲಿ

ಒಂದೊಂದು ಹೂವಿಗು ಒಂದೊಂದು ಬಣ್ಣ
ಒಂದೊಂದು ಜೀವಕು ಒಂದೊಂದು ಕಣ್ಣ
ಯಾವುದೊ ಬಗೆಯಲ್ಲಿ ಎಲ್ಲರಿಗು ಅನ್ನ
ಕೊಟ್ಟ ಕರುಣೆಯ ಮೂಲ ಮರೆತಿಹುದು ತನ್ನ
ಮರೆತಿಹುದು ತನ್ನ

ನೂರಾರು ನದಿ ಕುಡಿದು
ಮೀರದ ಕಡಲು
ಬೋರೆಂದು ಸುರಿಸುರಿದು
ಆರದ ಮುಗಿಲು

ಸೇರಿಯು ಕೋಟಿ ತಾರೆ
ತುಂಬದ ಬಯಲು
ಯಾರದೀ ಮಾಯೆ
ಯಾವ ಬಿಂಬದ ನೆರಳು
ಬಿಂಬದ ನೆರಳು

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ
ಹುಡುಕಿದರೆ ಕೀಲಿ ಕೈ ಸಿಗದೆ ಎದೆ ಯೊಳಗೆ
ತಿಳಿಯದ್ದೆಲ್ಲದರಲ್ಲಿ ಕುಳಿತಿರುವೆ ನೀನೆ
ಎನ್ನುವರು ನನಗೀಗ
ಸೋಜಿಗವು ನಾನೆ
ಸೋಜಿಗವು ನಾನೆ