ಉತ್ತರ ಕರ್ನಾಟಕದ ಜಾನಪದ ಕಥೆಗಳು
(ಸಂಕಲನ)
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಜೆ.ಸಿ.ರಸ್ತೆ
of North Karnataka by Simpi Linganna Published by Manu Baligar,
Director, Department of Kannada and Culture, Kannada Bhavana,
J.C.Road, Bengaluru - 560 002.
ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ
ಮುದ್ರಿತ ವರ್ಷ : ೨೦೧೧
ಪ್ರತಿಗಳು : ೧೦೦೦
ಪುಟಗಳು : xxviii + ೨೦೧
ಬೆಲೆ : ರೂ. ೫೫.೦೦
ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ
ಮುದ್ರಕರು :
ಮೆ|| ಮಯೂರ ಪ್ರಿಂಟ್ ಆ್ಯಡ್ಸ್
ನಂ. 69, ಸುಬೇದಾರ್ ಛತ್ರಂ ರೋಡ್
ಬೆಂಗಳೂರು - ೫೬೦ ೦೨೦ ದೂ : ೨೩೩೪೨೭೨೪ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು ೫೫ನೇ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದೆ. ಈ ಸಂದರ್ಭವನ್ನು ರಚನಾತ್ಮಕವಾಗಿ ದಾಖಲಿಸಿ ಸ್ಮರಣೀಯಗೊಳಿಸಬೇಕೆಂಬುದು ಸರ್ಕಾರದ ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ "ವಿಶ್ವ ಕನ್ನಡ ಸಮ್ಮೇಳನ” ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವುದು ಕರ್ನಾಟಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳ ೧೦೦ ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಾಸಕ್ತರಿಗೆ ಒದಗಿಸುವ ಹಂಬಲ ನಮ್ಮದು.
ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸುಮಾರು ೧೦೦ ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು ಉದ್ದೇಶಿಸಿರುತ್ತದೆ.
ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ, ಕವನ ಸಂಕಲನ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ ಆಯ್ಕೆ ಸಮಿತಿಯು ಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಎಲ್ಲಾ ವಿದ್ವಾಂಸರಿಗೂ ನನ್ನ ಧನ್ಯವಾದಗಳು. ಈ ಮಹತ್ವದ ಕೃತಿಗಳನ್ನು ಸಹೃದಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬುದು ನಮ್ಮ ಹೆಗ್ಗುರಿಯಾಗಿರುತ್ತದೆ. ಕನ್ನಡ ಸಾಹಿತ್ಯದ ಮೈಲಿಗಲ್ಲುಗಳಾಗಿರುವ ಈ ಪುಸ್ತಕಗಳು ಭಾವಿ ಪೀಳಿಗೆಯವರಿಗೆ ದಾರಿದೀಪಗಳಾಗಿವೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ ನಮ್ಮ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.
ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತುಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿಸರ್ಕಾರವನ್ನೂ ಇಲಾಖೆಯನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡಸಂಸ್ಕೃತಿಗೆ ಈ ಯೋಜನೆಗಳನ್ನು ಮಹತ್ವದ ಕೊಡುಗೆಯನ್ನು ನೀಡುತ್ತವೆ.
ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹಆಯ್ಕೆಯಲ್ಲಿ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ.ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ದಾರಕ್ಕೆ ಬಂದ ಸಮಿತಿಯುಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲಸದಸ್ಯರಿಗೂ ಕೃತಜ್ಞನಾಗಿದ್ದೇನೆ.
ಈ ಕರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನಿರ್ದೇಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತುಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ.
ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನುಹರಡುವ ಈ ಯೋಜನೆಯನ್ನು ಪೂರ್ಣಪ್ರಯೋಜವನ್ನು ಕನ್ನಡಿಗರು ಪಡೆದುಕೊಳ್ಳಲಿಎಂದು ಹಾರೈಸುತ್ತೇನೆ.
ಕರ್ನಾಟಕವು ಏಕೀಕರಣಗೊಂದು ೫೫ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.ಈ ಸಂದರ್ಭದಲ್ಲಿ ಬೆಳೆಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸುತ್ತಿರುವುಒಂದು ಐತಿಹಾಸಿಕವೂ ಹಾಗು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ.
ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಅಂಗವಾಗಿ ಹಲವಾರುಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗುಸೃಜನೇತರ ಪ್ರಕಾರದ ೧೦೧ ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣಯೋಜನೆಯಡಿ ಪ್ರಕಟಿಸಲಾಗುತ್ತಿದೆ.
ಈ ವಿಶಿಷ್ಟ ಕೃತಿಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಅಧ್ಯಕ್ಷರಿಗೆಹಾಗು ಸದಸ್ಯರಿಗೆ ನನ್ನ ವಂದನೆಗಳು. ಈ ಸಾಹಿತ್ಯ ಮಾಲಿಕೆಯನ್ನುಸಾಹಿತ್ಯಾಭಿಮಾನಿಗಳು ಸ್ವಾಗತಿಸುವ ಮೂಲಕ ಈ ಕೃತಿಗಳ ಸದುಪಯೋಗಪಡೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ. ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವತಿಯಿಂದ 'ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ.
ಈ ಕೃತಿಗಳನ್ನು ಆಯ್ಕೆಮಾಡಲು ಖ್ಯಾತ ವಿದ್ವಾಂಸರಾದ ಪ್ರೊ. ಎಲ್. ಎಸ್. ಶೇಷಗಿರಾವ್ ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ ವಿದ್ವಾಂಸರುಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಅಯ್ಕೆ ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ಕೆ ಮಾಡಿರುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲುತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗು ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲಿಕೆಯನ್ನು ಓದುಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ಕರ್ನಾಟಕದ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ 'ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ.
ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ರವರಿಗೆ ಹಾಗು ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುರ್ಗಿ, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲೆಕ್ಕಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕ್ಕರ್, ಡಾ. ಪ್ರಧಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ ವಂದನೆಗಳು.
ಸದರಿ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವ ಕನ್ನಡ ಸಮ್ಮೇಳನದ ಲಾಂಛನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕಗಳು ಹಾಗೂ ಈ ಪುಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆಡ್ಸ್ ನ ಮಾಲೀಕರಾದ ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನನೆನಕೆಗಳು.
ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಮೇರುಕೃತಿಗಳು ನಡೆಸುವ ಆಶಯ ನಮ್ಮದು. ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ
ಅಧ್ಯಕ್ಷರು
ಪ್ರೊ.ಎಲ್.ಎಸ್.ಶೇಷಗಿರಿ ರಾವ್
ಸದಸ್ಯರು
ಡಾ|| ಚಂದ್ರಶೇಖರ ಕಂಬಾರ
ಡಾ|| ಎಂ.ಎಂ. ಕಲಬುರ್ಗಿ
ಡಾ|| ದೊಡ್ಡರಂಗೇಗೌಡ
ಡಾ|| ಅರವಿಂದ ಮಾಲಗತ್ತಿ
ಡಾ|| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಡಾ|| ಪ್ರಧಾನ್ ಗುರುದತ್ತ
ಡಾ|| ಹಂಪ ನಾಗರಾಜಯ್ಯ
ಡಾ|| ಎಚ್.ಜೆ. ಲಕ್ಕಪ್ಪಗೌಡ
ಶ್ರೀಮತಿ ಸಾರಾ ಅಬೂಬಕ್ಕರ್
ಡಾ|| ಪಿ.ಎಸ್. ಶಂಕರ್
ಸದಸ್ಯ ಕಾರ್ಯದರ್ಶಿ
ಶ್ರೀ ಮನು ಬಳಿಗಾರ್, ಕ.ಆ.ಸೇ
ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಲೇಖಕರ ಮಾತು
ಈ ಸೃಷ್ಟಿಯಲ್ಲಿ ಮಾತುಬಲ್ಲ ಪರಮಾತ್ಮ ಪ್ರಕತಣೆಯೆಂದರೆ ಮನುಷ್ಯ ಬುದ್ಧಿ ವಿಕಾಸವಾಗುವವರೆಗು ಮನುಷ್ಯನು ಹಾಡಿದನು. ಆ ಬಳಿಕ ಮಾತಾಡ ತೊಡಗಿದನು. ಕೇಳಲಿ ಹೇಳಲಿ ಮಾತೆಲ್ಲ ಕಥನವೇ ಆಗಿದೆ. ಮಾತಿಗಾರಂಭವಾಗುವಂತೆ ಇಬ್ಬರು ಅಪರಿಚಿತರು ಕೂಡಿದಾಗ ಮಾತಿನಿಂದಲೇ ಪರಿಚಯಕ್ಕೆ ಆರಂಭವಾಗುವುದು. ಹುಟ್ಟುವ್ಯೆರಿಗಳು ಕದನಕ್ಕಾರಂಭಿಸುವ ಮೊದಲು ಕಥನದ ಶ್ರೀಕಾರವನ್ನೇ ಹಾಕುತಾರೆ. ತಾಯಿ-ಮಕ್ಕಳು,ಅಣ್ಣ-ತಮ್ಮಂದಿರು,ಅಕ್ಕ-ತಂಗಿಯರು ಕೂಡಿದಾಗ ಮಾತಿನ ಬೀಜವೊಡೆದು ಕಥನವಾಗಿ ಮೊಳೆಯುತ್ತದೆ. ಮನುಷ್ಯ ಮನುಷ್ಯರ ಸಂದರ್ಶನದಲ್ಲಿಯೇ ಈ ಕಥನ ವಲ್ಲರಿಯು ದಾಂಗುಡಿಯಿಡುವುದೆಂತೆಲ್ಲ. ಮನುಷ್ಯನಿಗೆ ಪಶುಪಕ್ಷಿಗಳೆ ಆಗಲಿ ಹುಳು-ಹುಪ್ಪಡಿಗಳೇ ಆಗಲಿ ಸಂಧಿಸಿದಾಗಲೂ, ಗಿಡಬಳ್ಳಿ ಗುಡ್ಡಬೆಟ್ಟಗಳು ಸಂಧಿಸಿದಾಗಲೂ ಕಥನವಂಕುರಿಸುವುದಕ್ಕೆ ಸುಸಂಧಿಯೊದಗುತ್ತದೆ.
ಆಡಿಸಿರುವ ಕಾಮದಿಂ ಕಡುಕುರುಡರಾದರು ಜಡಜೀವ ಬೇದವನ್ನು ಬಗೆಯದಿರುವಂತೆ, ಬುದ್ಧಿಯ ಕನ್ನಡಕ ಧರಿಸುವ ಮೊದಲು ಮನುಷ್ಯನು ಗಿಡಗಂಟೆ- ಪಶುಪಕ್ಷಿಗಳೊಡನೆ ಅಷ್ಟೇ ಅಲ್ಲ, ಅವು ತಂತಮ್ಮೊಳಗೆ ಮಾತಾಡುವುದಕ್ಕೆ ಅಸ್ಪದ ಕಲ್ಪಸಿಕೊಟ್ಟ ಆ ಕಥೆಯನ್ನು ತಾನು ಕೇಳಬಲ್ಲವನಾಗುತ್ತಾನೆ.
ಶ್ರೀ ಶಾಂತಕವಿಗಳು ಹೇಳಿದ್ದಾರೆ-
- ದರುಶನದಿಂದಲಿ|ಪರಿಚಯವಪ್ಪುದು
- ಪರಿಚಯದಿಂ ಸಂಭಾಷಣವು||
- ಭಾಷಣದಿಂ ಸಹ|ವಾಸವಹುದು ಸಹ-
- ವಾಸದಿಂ ಲಕ್ಕುಂ ಸಖ್ಯಂ||
ಪಾಂಡಿಚೇರಿಯ ಶ್ರೀ ಅರವಿಂದ ಆಶ‍್ರಮದ ಅಧಿಷ್ಠಾತ್ರಿಯಾದ ಶ್ರೀ ಮಾತಾಜಿಯವರು ಚಿಕ್ಕವರಿದ್ದಾಗ ಫ್ರಾನ್ಸದಲ್ಲಿ ದಿನಾಲು ಅಡ್ಡಾಡುತ್ತು ಹೋಗಿ ಒಂದು ಮರದ ಕೆಳಗೆ ಕಳಿತುಕೊಳ್ಳುತ್ತಿದ್ದರು ಒಂದೆರಡು ಗಳಿಗೆ. ಆ ದರುಶನ
ಪರಿಚಯಗಳ ಪರಿಣಾಮವಾಗಿ ಮರವು ಮಾತಾಜಿಯವರಿಗೆ ತನ್ನ ಹೊಟ್ಟೆಯೊಳಗಿನ ಸಂಕಟವನ್ನು ಮನಬಿಚ್ಚಿ ಕಥಿಸತೊಡಗಿತಂತೆ-"ನನ್ನನ್ನು ಕಡಿದು ಹಾಕಬೇಕೆಂದು ವಿಚಾರಿಸುತ್ತಿದ್ದಾರೆ. ಅವರಿಗೆ ತಿಳಿಹೇಳಿ ಕಡಿದುಹಾಕದಂತೆ ನೀವು ಮನವೊಲಿಸಿರಿ" ಎಂದು ಅಂಗಲಾಚಿತಂತೆ.ಅಳುವುದು-ಕರೆಯುವುದಾಗಲಿ, ನಗುವುದು-ಕಲೆಯುವುದಾಗಲಿ ಮಾತಿನ
ತರ್ವಾಯವೆ. ಹೆಣ್ಣು ಮಕ್ಕಳು ಬಳೆಗಾರನ ಕಡೆಯಿಂದ ಬಳೆಯಿಡಿಸಿಕೊಳ್ಳುವ ಸಂದರ್ಭವನ್ನು ಒಂದು ಒಡವು ವರ್ಣಿಸುವುದು ಹೇಗೆಂದರೆ-
ಮಾತುಕಥೆ ಯಾವಾಗ ? ಕೈ ಕೈ ಹಿಡಿದಾಗ
ಅಳೂದು ಕರೆವುದು ಯಾವಾಗ? ಅರ್ಧಒಳಸೇರಿದಾಗ
ನಗೂದು ಕಲೆವೂದು ಯಾವಾಗ? ಪೂರ್ಣ ಒಳಸೇರಿದಾಗ
ದಾಂಪತ್ಯಾರಂಭದಲ್ಲಿ ಗಂಡನ ಕಥನ ತಂತ್ರದಿಂದ ಹೆಂಡತಿಯ ಬಾಯಿ
ಮುಗುಳೊಡೆದು, ಒಮ್ಮೆ ಕಥನಕ್ಕೆ ಆರಂಭವಾದರೆ, ಗಂಡನ ಕಥನ ತಂತ್ರವೆಲ್ಲ
ಹುಸಿಗೂಂಡು ಅವರು ಮೂಕವಿಸ್ಮಿತನಾಗುವಂತೆ ಮಾಡುತ್ತದೆ. ಪುರುಷನು
ಚಾಣಕರಯನ ಕಥೆ ಹೇಳುವುದರಲ್ಲಿ ನಿಷ್ಣಾತನಾಗುವಂತೆ, ಸ್ತ್ರೀಯು ಸಣ್ಣ
ಸಂಗತಿಯನ್ನೇ ಕಥೆಮಾಡಿ ಹೇಳುವುದಕ್ಕೆ ಬಲ್ಲಿದಳಾಗುತ್ತಾಳೆ.
ಕೂಸು ಅಳುನುಂಗಿದ ಬಳಿಕ ನಗೆಯ ಬಗೆಯನ್ನು ಹಾರುತ್ತದಷ್ಟೇ? ಅಳುವಿನ ಹಾಡು ಹಾಲಾಗಿ ಒಡಲ ಸೇರಿದ ಬಳಿಕ, ಕಥನದ ಪಾಡು ಬೇಡುವುದು ಮಗುವಿಗೆ ಸ್ವಾಭಾವಿಕವೇ ಆಗಿದೆ. ಲಾಲಿಯನ್ನು ಆಲಿಸಿ, ಲಲ್ಲೆಯನ್ನು ಕೇಳಿ, ತಿಲ್ಲಾಣವನ್ನು ಆಕಲನ ಮಾಡಿ ಸಾಕಾದ ಮಗುವಿಗೆ ಬೇಕಾದುದು ಕಥೆ. ಅಜ್ಜಿಗೆ ಮಗು ಒಡನಾಡಿಯೋ ಮಗುವಿಗೆ ಅಜ್ಜಿ ಒಡನಾಡಿಯೋ ತಿಳಿಯುವುದೇ ಕಠಿಣ. ಅವರು ಸರಿಯರೂ ಅಲ್ಲ; ಓರಗೆಯವರೂ ಅಲ್ಲ. ಆದರೆ ಹದಿನಾರಾಣೆ ಒಡನಾಡಿಗಳು ಮಾತ್ರ ಅಹುದು. ಅಜ್ಜಿ ಬಾಗಿ ನಡೆಯುತ್ತಾಳೆ. ಮಗುವಿಗೆ ನಿಲ್ಲಲಿಕ್ಕೇ ಬರುವುದಿಲ್ಲ. ಆಕೆಯ ಬಾಯಲ್ಲಿ ಹಲ್ಲು ಉಳಿದಿರುವುದಿಲ್ಲ. ಈತನ ಬಾಯಲ್ಲಿ ಹಲ್ಲು ಮೊಳೆದಿರುವುದಿಲ್ಲ. ಆಕೆ ಮಂದಗಣ್ಣಿನ ಸೂನ್ನಿ. ಈತ ಕಣ್ಣು ತೆರೆಯದ ಕುನ್ನಿ. ಮೂರು ಕಾಲಲ್ಲಿ ನಡೆಯುವ ವಿಚಿತ್ರ ಪ್ರಾಣಿ ಒಂದು; ನಾಲ್ಕು ಕಾಲಲ್ಲಿ ಅಂಬೆಗಾಲಿಡುವ ಸೋಜಿಗದ ಪಶು ಇನ್ನೊಂದು. ಮಗುವಿಗೆ ಇಟ್ಟ ಹೆಸರು, ಅಜ್ಜಿಯನ್ನು ಅಗಲಿ ಹೋದ ಅಜ್ಜನದು. ಕೈ ಹಿಡಿದವನೆ ಕೈಬಿಟ್ಟು ಹೋಗಿ, ಮಗನ ಹೊಟ್ಟೆಯಿಂದ ಮೊಮ್ಮಗನಾಗಿ ಹುಟ್ಟಿ ಬಂದು, ಬಚ್ಚಬಾಯಿಂದ ಅಜ್ಜಿಯನ್ನು ನೋಡಿ ನಗತೊಡಗಿದರೆ, ಅಜ್ಜಿ ತಿಳಿದುಕೂಂಡು ಬಿಡುತ್ತಾಳೆ-ಆತನೇ ಈತನೆಂದು, ಆನಂದ ಬಾಷ್ಪವು ಗೊತ್ತಾಗದಂತೆ ಹನಿಯುತ್ತದೆ. ಬಹುದಿನಗಳ ತರ್ವಾಯದ ಈ ಕೂಡಿಕೆಯು ಮಿಡಿಯಾಗಿ, ಸಹವಾಸದ ಪಾಡಿನಿಂದ ಸಖ್ಯದ ಫಲವಾಗಿ ಪರಿಣಮಿಸುವುದಕ್ಕೆ ಕಥನವೇ ಮಂತ್ರವಾಗುತ್ತದೆ; ಕಥೆಯೇ ತಂತ್ರವಾಗುತ್ತದೆ.
ಅಜ್ಜಿಯೆಂದರೆ ಮನೆಯಲ್ಲಿಯೇ ವಾನಪ್ರಸ್ಥ - ಆಶ್ರಮವನ್ನು ನಿರ್ಮಿಸಿಕೊಂಡವಳು. ಸಂಸಾರದ ಸಂಬಂಧಲ್ಲಿದ್ದರೂ ಬಂಧನವನ್ನು ಸಡಿಲಿಸಿಕೊಂಡವಳು. ಮಕ್ಕಳ ಸಹವಾಸದಲ್ಲಿ ಮಗುವೇ ಆಗಿನಿಂತು, ತನ್ನ ಜೀವನಾಭುವವನ್ನೆಲ್ಲ ಕಥೆ ಕಟ್ಟಿ, ಕಥೆಯಲ್ಲಿ ಎರಕ ಹೊಯ್ದು ಆ ರಸಾಯನವನ್ನು ಮಕ್ಕಳಿಗೆ ಕಿವಿಯಿಂದ ಈಂಟಿಸುವಳು. ತಾಯಬಳಿಯಲ್ಲಿ ಹಾಲಬೇಡಿ ಅತ್ತರೂ, ಕೋಲು ಬೇಡಿ ಕುಣಿದರೂ ಅಜ್ಜಿಯ ಸಂಪರ್ಕದಲ್ಲಿ ಮಗು ದೇವರಂತೆ ಕುಳಿತು ಕಥೆ ಕೇಳುವುದಕ್ಕೆ ತವಕಿಸುತ್ತದೆ. ಅಜ್ಜಿ ಎರಡು ಸಂದರ್ಭದಲ್ಲಿ ಮಗುವಿಗೆ ಕಥೆ ಹೇಳತೊಡಗುತ್ತಾಳೆ. ಹಟಮಾಡಿ ಅಳುತ್ತಿರುವ ಮಗುವನ್ನು ರಂಬಿಸುವ ಸಲುವಾಗಿ ಅಜ್ಜಿ ಕಥೆ ಆರಂಭಿಸುವಳು. ಇಲ್ಲವೆ, ಕಥೆ ಕೇಳಲೆಳಿಸಿ ದುಂಬಾಲ ಬಿದ್ದು ಕಾಡಹತ್ತಿದಾಗ ಅಜ್ಜಿ ಕಥೆ ಹೇಳತೊಡಗುವಳು.
ಮಗು ಕಥೆ ಕೇಳುವುದಕ್ಕೆ ಆತುರ ತೋರಿಸುತ್ತಿರುವಾಗ ಅಜ್ಜಿಗೆ ಉತ್ಸಾಹವಿಲ್ಲದಿದ್ದರೆ ಆಕೆ-"ಕಥೆಯನ್ನು ಕಳ್ಳರೊಯ್ದರು. ನಿಮ್ಮತ್ತೆಯನ್ನು ಡೊಂಬರೊಯ್ದರು" ಎಂದು ಹಾರಿಸಿಬಿಡುವಳು. ಆ ಉಪಾಯವು ಯಶಸ್ವಿಯಾಗದಿದ್ದರೆ-"ಹೀಂಗ ಒಬ್ಬ ಅಯ್ಯನಿದ್ದ. ಅಯ್ಯನಿಗೊಂದು ಜೋಳಿಗೆಯಿತ್ತು. ಜೋಳಿಕೆಯಲ್ಲಿ ಒಂದು ಹೋಳಿಗೆಯಿತ್ತು" ಮಗು ಕಥೆ ಕೇಳುತ್ತ ಮಾತುಮಾತಿಗೂಮ್ಮೆ ಹೂಂ ಅನ್ನತೂಡಗುವದು. ಆಗ ಅಜ್ಜಿ-“ಹೂಂ ಅಂದರೆ ಅಯ್ಯನು ಜೋಳಿಗೆಯೊಳಗಿನ ಹೋಳಿಗೆ ಕೊಡುವನೇ" ಎಂದಾಗ, ಮಗು ನಗತೊಡಗುವದು. ಅಜ್ಜಿ-“ನಕ್ಕರೆ ಅಯ್ಯನು ಹೋಳಿಗೆ ಕೊಡುವನೇ” ಎಂದು ಕೇಳಲು ಮಗ ನಿರುತ್ತರನಾದುದನ್ನು ಕಂಡು “ಸುಮ್ಮನಿದ್ದರೆ ಕೊಡುವನೇ ಹೋಳಿಗೆಯನ್ನು” ಎನ್ನುತ್ತ ಕಥೆಯನ್ನು ಕೂನೆಗೊಳಿಸುವ ಯುಕ್ತಿಂಯನ್ನು ಮುಂದುವರಿಸುವಳು.
ಇನ್ನೊಮ್ಮೆ ಮಗುವನ್ನು ರಂಬಿಸಬೇಕಾದಾಗ ಅಜ್ಜಿ ಆಸ್ಥೆವಹಿಸಿ, ಮುಗಿಯದ ಕಥೆ ಆರಂಭಿಸುವಳು-” ಕಥೆ ಕಥೆ ಕಾರಣ, ಮುದಿಕೇ ಹೂರಣ, ತಿಂದೆಯೋ ಚೆಲ್ಲಿದೆಯೋ” ಎಂದಾಗ ಮಗು “ಚೆಲ್ಲಿದೆ” ಅನ್ನಬೇಕು. “ಎಲ್ಲಿ ಚೆಲ್ಲಿದೆ” ಎಂದಾಗ “ತಿಪ್ಪೆಯಲ್ಲಿ" ಎಂದು ಮರುನುಡಿಯಬೇಕು. “ತಿಪ್ಪೆ ಏನುಕೊಟ್ಟತು" “ಖಾತ ಕೊಟ್ಟಿತು”. “ಖಾತ ಏನು ಮಾಡಿದಿ?" “ತೋಟಕ್ಕೆ ಹಾಕಿದೆ. “ತೋಟವೇನು ಕೊಟ್ಟಿತು?” “ಹೂ ಕೊಟ್ಟಿತು”. “ಹೂ ಏನು ಮಾಡಿದಿ?” “ದೇವರಿಗೇರಿಸಿದೆ.” “ದೇವರೇನು ಕೊಟ್ಟ?" “ಗಳಾಗಂಟಿಕೊಟ್ಟ” ಹೀಗೆ ಕಥೆಯು ಕಥೆಗೆ ಕಾರಣವಾಗಿ, ಮುದುಕೆ ಹೂರಣವಾಗಿ ಮುಂದುವರಿಯುತ್ತದೆ, ಆದರೆ ಮಗುವು ಕಥೆಗಾಗಿ ಹಟಮಾಡಿದ್ದರೆ, ಕಥೆ ಕೇಳುವುದರಲ್ಲಿ ಸಹಕರಿಸುತ್ತ ಕೇಳಿದ ಪ್ರಶ್ನೆಗಳಿಗೆ ನಿರ್ಣಯಿತ ಉತ್ತರ ನೀಡುತ್ತ ಸಾಗುತ್ತಿದ್ದನು. ಆದರೆ ಮಗುವಿಗೆ ಕಥೆ ಬೇಡವಾಗಿದೆ. ಇನ್ನೇನೋ ಬೇಕಾಗಿದೆ. ಅದಕ್ಕಾಗಿ ಕಥೆ ತೀವ್ರ ಮುಗಿಸಬೇಕಾಗಿದೆ. ಅದು ತೀವ್ರಮುಗಿದಷ್ಟು ತನ್ನಪೇಕ್ಷೆಯು ತೀವ್ರ ಕೈಗೂಡುವದು. ಅದಕ್ಕಾಗಿ ಅವನೇನು ಮಾಡುವನು ಗೊತ್ತೇ? “ಕಥೆ ಕಥೆ ಕಾರಣ, ಮುದಿಕೆ ಹೂರಣ ತಿಂದೆಯೋ ಚೆಲ್ಲಿದೆಯೋ” ಎಂದು ಕೇಳಿದಾಗ, ಚೆಲ್ಲಿದೆಯೆನ್ನುವುದನ್ನು ಬಿಟ್ಟು, ತಿಂದೆಯೆಂದು ಹೇಳಿಬಿಟ್ಟರೆ ಕಥೆ ಮೊಟಕಾಗಿ ನಿಲ್ಲುತ್ತದೆ. ಹಾಗಾದರೂ ಅದು ಹೇಳಿ ಕೊಳ್ಳಬಹುದಾದ ಕಥೆಯೇ ಸರಿಯಷ್ಟೇ?
ಅಡುಗೂಳಜ್ಜಿಯ ಕಥೆ ಬಹುತರವಾಗಿ-"ಹೀಗೊಬ್ಬ ರಾಜನಿದ್ದ ಅಥವಾ ಹೀಂಗ ಒಂದೂರಿತ್ತು” ಎಂದು ಆರಂಭವಾಗಿ ಕೊನೆಯಲ್ಲಿ, ಅವರು ಸುಖದಿಂದ ಬಹುಕಾಲ ಆಳಿದರೆಂದೋ ಬಾಳಿದರೆಂದೋ ಮುಗಿಯುವುದುಂಟು. ಕೇಳುವವನು-“ಅಲ್ಲಿಂದ ಅಥವಾ ಆಮೇಲೆ ಏನಾಯಿತಂತೆ” ಎಂಬ ಕುತೂಹಲ ತೋರಿದರೆ “ನಾನು ಕಥೆ ಹೇಳಿನಂತೆ, ನೀನು ಕಥೆ ಕೇಳಿದೆಯಂತ"" ಎಂದು ಮುಗಿಸಬಹುದು.
ಬಹಳ ಹೊತ್ತಿನವರೆಗೆ ಹೇಳಿ ಕೇಳಿದರೂ ಮುಗಿಯಲಾರದ ಕಥೆಯೂ ಉಂಟು. “ಹೀಂಗೊಬ್ಬ ರಾಜನಿದ್ದ. ರಾಜನಿಗೊಬ್ಬ ಪ್ರಧಾನಿಯಿದ್ವ ರಾಜ ಪ್ರಧಾನಿಯರು ಕುಳಿತಾಗ ರಾಜನಂದನು-“ಪ್ರಧಾನೀ ಪ್ರಧಾನೀ, ಒಂದು ಕಥೆಹೇಳು. ಹೊತ್ತೇ ಹೋಗಲೊಲ್ಲದು" ಎಂದಾಗ ಪ್ರಧಾನಿ ಅದಕ್ಕೊಪ್ಪಿ ಕಥೆ ಹೇಳಲು ತೊಡಗುವನು. “ಹೀಂಗೊಬ್ಬ ರಾಜನಿದ್ದ ರಾಜನಿಗೊಬ್ಬ ಪ್ರಧಾನಿಯಿದ್ದ. ರಾಜ ಪ್ರಧಾನಿಯರು ಕುಳಿತಾಗ ರಾಜನಂದನು-ಪ್ರಧಾನೀ, ಪ್ರಧಾನೀ, ಒಂದು ಕಥೆಹೇಳು. ಹೊತ್ತೇ ಹೋಗಲೊಲ್ಲದು" ಎಂದಾಗ ಪ್ರಧಾನಿ ಅದಕೊಪ್ಟಿ ಕಥೆ ಹೇಳಲು ತೊಡಗುವನು. “ಹೀಂಗ ಒಬ್ಬ ರಾಜನಿದ್ದ.. ಕೇಳುವವನಿಗೆ ಕಥೆಯ ಪುನರಾವರ್ತನೆಯ ಮರ್ಮ ತಿಳಿಯಲು ನಗತೊಡಗುವನು. ಹೇಳುವವನೂ...
ಮಾನವನ ತಂದೆಯೆನಿಸುವ ಮಗು ಮೊದಲಿಗೆ ಕೇಳಿದ್ದು ಅಡುಗೂಳಜ್ಜಿಯ ಕಥೆಯನ್ನೇ. ಆ ಬಳಿಕ ಅವನು ಐತಿಹಾಸಿಕ ಕಥೆಯನ್ನಾಗಲಿ ಅದಕ್ಕೂ ಹಿಂದಿನ ಪೌರಾಣಿಕ ಕಥೆಯನ್ನಾಗಲಿ ಅಪೇಕ್ಬಿಸಬಹುದು. ಇಲ್ಲದೆ ಭವಿಷ್ಯತ್ತಿನತ್ತ ಹೊರಳಿ ಕಲ್ಪನಾಮಯ ಲೋಕವನ್ನು ಪ್ರವೇಶಿಸಿ ಕಲ್ಪನಾವೈಭವವನ್ನು ಕಾಣಲು ತವಕಿಸಬಹುದು. ನಿಂತಲ್ಲಿಯೇ ನಿಂತುಕೊಂಡು ಇಂದು ಕಂಡುಬರುವ, ಕೇಳಿಬರುವ ಸಂಗತಿಗಳನ್ನು ಇದ್ದಕ್ಕಿದ್ದ ಹಾಗೆ ಸ್ವೀಕರಿಸಬಹುದು. ಮನುಷ್ಯನಾದವನ ಮೆದುಳು ಮೂರು ನಿಟ್ಟುಗಳಲ್ಲಿ ಕೆಲಸ ಮಾಡುವದೆಂಬುದನ್ನು ಎಲ್ಲರೂ ಬಲ್ಲರು. ಸ್ಮರಣ, ವಿಚಾರ, ಕಲ್ಪನೆ ಎಂಬ ಆ ಮೂರು ನಿಟ್ಟುಗಳಿಂದ ಭೂತ ವರ್ತಮಾನ ಭವಿಷ್ಯತ್ತುಗಳನು ಸ್ಮರಿಸಿ, ವಿಚಾರಿಸಿ, ಕಲ್ಪಿಸಿ ನೋಡಬಲ್ಲನು. ಪೌರಾಣಿಕ ಐತಿಹಾಸಿಕ ಕಥೆಗಳು ಒಂದು ದೃಷ್ಟಿಗೆ ಗೋಚರವಾದರೆ ರಮ್ಯ ಅಮಾನುಷ ಕಥೆಗಳು ಇನ್ನೊಂದು ದೃಷ್ಟಿಗೆ ಕಂಗೊಳಿಸುವವು. ಅದರಂತೆ ವಾಸ್ತವಿಕ-ನಿರೂಪಣ ಕಥೆಗಳು ಬೇರೊಂದು ಬಗೆಯಲ್ಲಿ ಬಗೆಗೊಳ್ಳುವವು.
ಮೂಡಪಡುವಲ ಭೇದವಿಲ್ಲದೆ, ಶೀತೋಷ್ಟ ವಲಯಗಳ ತಾರತಮ್ಯವಿಲ್ಲದೆ ಎಲ್ಲೆಲ್ಲಿಯೂ ಮನುಷ್ಯನು ಕಾಣಿಸಿಕೊಂಡಿದ್ದಾನಷ್ಟೆ? ಬಣ್ಣ ಬೇರೆಯಾಯಿತೇ ಹೊರತು, ಮನುಷ್ಯನ ಮೂಲಗುಣವು ಬೇರೆಯಾಗಲಾರದು. ಮೈಬಣ್ಣದಲ್ಲಿ ಒಂದು ವೈವಿಧ್ಯ ಕಂಡುಬಂದರೆ, ಮಾತಿನ ಬಣ್ಣನೆಯಲ್ಲಿ ನೂರೊಂದು ವೈವಿಧ್ಯ ಕಂಡು ಬರುವವು. ನಿಸರ್ಗಕ್ಕೆ ಬೇರೆ ಬೇರೆ ಪರಿಸ್ಥಿತಿಗಳಿದ್ದರೂ ಅಲ್ಲಿ ಬೀಳುವ ಮಳೆಯಾಗಲಿ, ಬೀಸುವ ಗಾಳಿಯಾಗಲಿ ಒಂದೇ ಆಗಿರುತ್ತದೆ. ಒಂದೇ ಮಳೆಯು ಇಲ್ಲಿ ರಪರಪನೆ ಸುರಿಯುತ್ತದೆ; ಅಲ್ಲಿ ಪಟಪಟನೆ ಉದುರುತ್ತದೆ. ಒಂದೆಡೆಯಲ್ಲಿ ಜಿಟಿಜಿಟಿಯೆನಿಸಿದ್ದೇ ಇನ್ನೊಂದೆಡೆಯಲ್ಲಿ ದನದನ್ ಎನಿಸುತ್ತದೆ. ಗಾಳಿಯು ಸಹ ಸುಯ್ಯನೆ ಬೀಸುವುದಕ್ಕೂ ಭರ್‍ರನೆ ಬೀಸುವುದಕ್ಕೂ ನೃಸರ್ಗಿಕವಾದ ಪರಿಸ್ಥಿತಿ ಭೇದವೇ ಕಾರಣವಲ್ಲವೇ? ಒಬ್ಬನೇ ಮಳೆರಾಯನು ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಬೇರೆ ಬೇರೆ ವಾದ್ಯವೈಭವಗಳಲ್ಲಿ ಇಳಿದು ಬರುವಂತೆ, ಒಬ್ಬನೇ ಗಾಳಿರಾಯನು ಬೇರೆ ಬೇರೆ ಪರಿಸರಗಳಲ್ಲಿ ಬಗೆಬಗೆಯ ಬಣ್ಣ ತೊಟ್ಟು ಬಗೆಬಗೆಯ ನಡಿಗೆಯಲ್ಲಿ ಬಂದರೆ ಆಶ್ಚರ್ಯವೇನು?
ಒಂದೇ ಕಥೆಯು ಬಣ್ಣ ನಡಿಗೆಗಳಲ್ಲಿ ಹಲವಾಗಿ ಕಾಣುವಂತೆ, ಹಲವಾರು ಬಣ್ಣ ನಡಿಗೆಗಳಲ್ಲಿಂಯೂ ಒಂದೇ ಗತ್ತು ಕಂಡುಬರುತ್ತದೆ; ಒಂದೇ ಸೊತ್ತು ತೇಲಿ ಬರುತ್ತದೆ. ಜಗತ್ತಿನೊಳಗಿನ ಕಥಾಕೋಟಿಗೆಲ್ಲ ಒಂದೇ ಜೀವ ಮಿಡಿಯುತ್ತದೆಂದು ಬಲ್ಲವರು ಕಂಡುಹಿಡಿದಿದ್ದಾರೆ. ಮೂಲಬೀಜ ಒಂದೇ ಇದ್ದರೂ ಅದು ಮೊಳೆತು ಅಗಿಯಾಗಿ, ಗಿಡಮರಗಳ ರೂಪ ತಳೆಯುವವರೆಗೆ ಬೇರು-ಬೊಡ್ಡಿ, ತೊಂಗ- ತಿಸಿಲು, ಎಲೆಮುಗುಳು, ಹೂ ಹಣ್ಣುಗಳ ವಿವಿಧ ರೂಪತಳೆದರೂ ಕೊನೆಗೆ ಬೀಜರೂಪದಲ್ಲಿ ಸಮಾಪ್ತಿಗೊಳ್ಳುತ್ತದೆ. "ಸರ್ವತಃ ಪಾಣಿಪಾದಂ, ತತ್ ಸರ್ವತೋಕ್ಷಿ ಶಿರೋಮುಖಂ, ಸರ್ವತಃ ಶ್ರುತಿ-ಮಲ್ಲೋಕೆ ಸರ್ವಮಾವೃತ್ಯಕಿಷ್ಠತೇ" ಎನ್ನುವ ರೀತಿಯಲ್ಲಿ ಭಗವಂತನು ವ್ಯಾಪಿಸಿದ್ದಾನಂತೆ. ಕಥಾವಲ್ಲರಿಯೂ ಭಗವಂತನಂತೆ ಎಲ್ಲೆಲ್ಲಿಯೂ ತನ್ನ ಕೈಕಾಲುಗಳನ್ನು ಚಾಚಿದೆ. ತನ್ನ ಕಣ್ಣು ಮುಖಗಳನ್ನು ಅರಳಿಸಿದೆ; ಹೊರಳಿಸಿದೆ.
ಮಾತಿನಲ್ಲಿ ಕಥೆಮೊಳೆತು, ಸಂವಾದದಲ್ಲಿ ಚಿಗಿತು, ಹಾಡಿನಲ್ಲಿ ಕುಡಿವರಿದು, ಪುರಾಣದಲ್ಲಿ ಹೂತು, ತತ್ತ್ವಜ್ಞಾನದಲ್ಲಿ ಸಫಲವಾಗುವುದರಿಂದ “ಕಥೆಗಳಿಗೆ ಇತಿಯಿಲ್ಲ; ಕಥೆಗಳಿಗೆ ಮಿತಿಯಿಲ್ಲ; ಕಥೆಯಿಲ್ದ ಜಗವಿಲ್ಲ” ಎಂದು ಕಥಿಸದೆ ಗತ್ಯಂತರವಿಲ್ಲ. ಮಹಾಕಾವ್ಯವು ಕಥೋಪಕಥೆಗಳ ಜಾಳಿಗೆ; ಕಥೆಯ ಏರಿಳಿತದಲ್ಲಿಯೇ ಕೀರ್ತನವು ಹೆಜ್ಜೆಹಾಕುವಂಥದು. ನಾಟಕಕ್ಕೆ ಕಥೆಯೇ ಅಸ್ಥಿಪಂಜರ. ಹಾಡುಲಾವಣಿಗಳಲ್ಲಿ ಕಥೆ ಇಲ್ಲವೆ ಕಥಾಂಗ ಹೃದಯವಾಗಿರುತ್ತದೆ. ಗಾದೆ, ಒಗಟು, ಲಾಲಿ, ಲಲ್ಲೆ, ತಿಲ್ಲಾಣಗಳೆಲ್ಲ ಕಥಾಬೀಜಗಳುಳ್ಳ ಹಿಡಿದೆನೆಗಳೇ ಆಗಿವೆ.
ಪ್ರತಿಯೊಂದು ವಸ್ತುವಿನಂತೆ ಪ್ರತಿಯೊಂದು ಸಂಗತಿಗೂ ಒಂದು ಕಥೆಯಿದೆ. ಮುದಿಕೆಹೂರಣವಿಲ್ಲದೆ ಯಾವುದೂ ಕಥೆಗೆ ಕಾರಣವಾಗುವುದಿಲ್ಲ. ಮೊಸಳೆಯ ಮಡು, ಬದನೀಬೀಜ ಹಳ್ಳ, ಬಾಣಗಲ್ಲು, ಸಿಂಗೇನಹರಿ, ಲಂಗೋಟಿಹೊಲ, ಎಮ್ಮೆಕೆರೆ ಮೊದಲಾದವುಗಳು ಒಂದೊಂದು ಕಥೆಯ ತುದಿಯಲ್ಲಿ ಅರಳಿದ ಬಣ್ಣದ ಹೂಗಳೇ ಆಗಿವೆ. ವಸ್ತುವಿನಿಂದ ತುಂಬಿಕೊಂಡಿದ್ದು ಕಥೆಯಾಗಿದ್ದರೂ, ವಸ್ತು ಚಿಕ್ಕದಾಗಿ ರಸವಿಶೇಷದಿಂದ ತುಂಬಿಕೊಂಡಿದ್ದರೆ ಅದು ಸಣ್ಣಕತೆಯೆನಿಸುವದು. ಆ ವಸ್ತು ಹಾಡಿನಲ್ಲಿ ಹೊರಹೊಮ್ಮಿ ಭಾವಗೀತೆಯೆನಿಸುವಂತೆ, ಅಭಿನಯಕ್ಕೆ ಅಳವಟ್ಟರೆ ಏಕಾಂಗವೆನಿಸುವದು. ಹೊಟ್ಟೆಯೊಳಗಿನ ಭಾವವು ಮಾತಿನಿಂದ ಹೊರಬಿದ್ದರೆ ಕಥೆ, ಹಾಡಿನಲ್ಲಿ ಹೊರಹೊಮ್ಮಿದರೆ ಭಾವಗೀತೆ.
ಹಲವಾರು ಕಥೆಗಳು ಗೀತಗಳಾಗಿ ಕಂಗೊಳಿಸಿದರೆ, ಹಲವಾರು ಗೀತಗಳು ಕಥೆಗಳಾಗಿ ಕಾಣಿಸಿಕೊಂಡಿವೆ. ಭಾವಗೀತೆಯಾಗಿ ಬೇಪ೯ಡಬಲ್ಲ ವಸ್ತುವು ಸಣ್ಣ ಕತೆಯಾಗಿ ಮಾರ್ಪಡಬಲ್ಲದೆಂಬ ಮಾತಿಗೆ ಉದಾಹರಣೆಯಂತೆ, ಅವೆಷ್ಟೋ ಕಥೆಗಳನ್ನು ತೋರಿಸಬಹುದು. ಅವೆಷ್ಟೋ ಹಾಡುಗಳನ್ನು ಕಾಣಬಹುದು ಹಾಲಿನಲ್ಲಿ ಜೇನು ಬೆರಸಿದಂತೆ ಒಂದು. ಜೇನಿನಲ್ಲಿ ಹಾಲು ಸುರುವಿದಂತೆ ಇನ್ನೊಂದು. ಒಮ್ಮೆ ಹಾಲು ಜೇನನ್ನು ಬೆಂಬಲಿಸಿದರೆ, ಇನ್ನೊಮ್ಮೆ ಜೇನು ಹಾಲನ್ನು ಹಿಂಬಾಲಿಸುತ್ತದೆ. ಇಲ್ಲಿ ಬಂದ "ತುಂಟ ಬೀಗ"ವಾಗಲಿ. "ದೆವ್ವಕಲಿಸಿದ ಮಂತ್ರ"ವಾಗಲಿ ಕಥೆಯಿಂದಲೇ ಹಾಡಿನ ರೂಪತೊಟ್ಟವೆಂದು ಹೇಳಬಹುದಾಗಿದೆ. ಅಂತೆಯೇ ಆ ಹಾಡುಗಳುದು; ದುಃಖಾಂತವಾಗಿ ಮುಕ್ತಾಯಗೋಂಡಿಲ್ಲ "ಬಾರದ ಬರ", "ಎಲ್ಲಮ್ಮನ ಶಾಪ" ಇಂಥವು ಮೊದಲು ಹಾಡಾಗಿ ಹರಿದು ಹಿಂದಿನಿಂದ ಕಥೆಯಾಗಿ ನಿಂದವೇನೋ. ಅಂತೆಯೇ ಅವು ಮೋದಾಂತವಾಗದೆ ವೇದಾಂತವಾಗಿ ಕೊನೆಗೊಂಡಿವೆ.
ಕವನಕಥೆಗಳೇ ಇರಲಿ, ಕಥಾಗೀತಗಳೇ ಇರಲಿ ಅವುಗಳಲ್ಲಿ ನೇರತೆ ಹಾಗೂ ಸ್ಪಷ್ಟತೆ ಕಂಡುಬರುವದು. "ವೈವಿಧ್ಯತೆಯ ಆರ್ಭಟವಿಲ್ಲ; ಸಂಕೀರ್ಣತೆಯ ಸೆಣಸಾಟವಿಲ್ಲ. ನಿಧಾನವಾದ ಪ್ರವೇಶ, ಸಾವಕಾಶದ ಮುಕ್ತಾಯ. ವಸ್ತುವಿನ ಜಟಿಲತೆಯಿಲ್ಲ. ಪಾತ್ರಗಳ ತೊಡಕಿಲ್ಲ. ಉಪಕಥೆಗಳ ಗೋಜಿಲ್ಲ. ಕಥೆ ಹೇಳುವುದೊಂದೇ ಇಲ್ಲಿ ಪ್ರದಾನ, ಪ್ರದಾನ ಉಳಿದದು ಯಾವುದಿದ್ದರೂ ಅದಕ್ಕೆ ಪೂರಕವಾದ ಹೂರಣ ಅಷ್ತೇ. ಇಲ್ಲಿ ನಡೆಯುವ ಕ್ರಿಯೆಗಳೆಲ್ಲ ಸರಳ ಹಾಗೂ ಸಹಜ, ಪರಿಣಾಮಿ ಹಾಗೂ ಫಲಕಾರಿ" ಎಂಬ ಮಾತು ಎಲ್ಲರಿಗೂ ಒಪ್ಪಿಗೆಯಾಗುವಂತಿದೆ.
ಜನಪದ ಕಥಾ ಸಾಮ್ರಾಜ್ಯದ ಶಾಸನ ಪದ್ದಥಿಯನ್ನು ಅರಿಯಲಿಕ್ಕಾಗದಿದ್ದರೂ ಅಲ್ಲಿ ಪಶುಗಳು ಮಾತಾಡುವವು. ಪಕ್ಷಿಗಳು ಓಲೆಕಾರನ ಕೆಲಸ ಮಾಡುವವು. ಸಿಂಹ ಹುಲಿಗಳಂಥ ಹಿಂಸ್ರ ಪಶುಗಳು ಪರೋಪಕಾರ ಮಾಡುವುವು. ಇಲಿ ಇಣಚಿಗಳು ಪ್ರತ್ಯುಪಕಾರ ಮಾಡುವುವು. ಅಳಿಲು ಸೇವೆ ಶ್ರೀರಾಮನಂಥ ಅವತಾರಿ ಪುರುಷನಿಗೂ ಸಂದಿದೆ. ಹಾವು ಚೇಳುಗಳೂ ಗೆಳೆಯರಾಗಬಲ್ಲವು. ಶಿವನು ಇಳಿದು ಬರುವನು. ರತಿಯು ಹೊಟ್ಟೆಯಲ್ಲಿ ಹುಟ್ಟುವಳು. ಇಂದ್ರನ ಐರಾವತವಾಗಲಿ, ವಸಿಷ್ಠರ ಕಾಮಧೇನುವಾಗಲಿ ಕೊಟ್ಟಿಗೆಯ ಪಶುವಾಗಿ ನಿಲ್ಲುವುದು ಅರಿದಲ್ಲ. ಕೃಷ್ಣನ ಕೊಳಲು, ಶಿವನ ಡಮರು, ಸರಸ್ವತಿಯ ನವಿಲು, ವಿಷ್ಣುವಿನ ಗರುಡ ಅವು ನಮ್ಮ ನಿಮ್ಮ ಮನೆಯ ವಸ್ತುಗಳನಿಸಲು ತಡವಾಗದು. ಗಾಳಿಯಲ್ಲಿ ಈಸುವ ಕೂಸು, ನೀರಮೇಲೆ ನಡೆಯವ ನಲ್ಲ, ಏನು ತಿಂದರೂ ತುಂಬದ ಹೊಟ್ಟೆ, ಎಷ್ಟು ತಂದರೂ ಸರಿಯದ ಬಂಗಾರ, ತಲೆಯಮೇಲೆ ಕೈಯಿಟ್ಟರೆ ಬರುವ ಸವೆಯದ ಸೌಭಾಗ್ಯ, ನಾಲಗೆಯ ಮೇಲೆ ಬರೆದರೆ ಹರಿಗಡಿಯದೆ ವಿದ್ಯೆ ಇವೆಲ್ಲ ನಮ್ಮ ಕಥಾ ಸಾಮ್ರಾಜ್ಯದೊಳಗಿನ ಅದ್ಭುತಗಳು. ಏಳುಮಲ್ಲಿಗೆ ಹೂವಿನ ತೂಕದ ತರುಣಿಯನ್ನು, ನಕ್ಕರೆ ಸಕ್ಕರೆ ಚೆಲ್ಲುವ ಚೆಲುವೆಯನ್ನು, ಕಣ್ಣರಳಿಸಿದರೆ ತಂಬೆಳಕು ಸೂಸುವ ಸುಭಗೆಯನ್ನು, ಹೆಜ್ಜೆಹೆಜ್ಜೆಗೂ ಕುಂಕುಮ ಮೂಡಿಸು ಮಾಟಗಾತಿಯನ್ನು ನಮ್ಮ ಜಾನಪದ ಕಥೆಗಳಲ್ಲಿ ಕಾಣಬಹುದು. ಸಾವಿರ ಕಣ್ಣಿನ ಮನುಷ್ಯ, ಇಪ್ಪತ್ತು ಕಾಲಿನ ನಾಯಿ, ಹಾಡುವ ಕಲ್ಲು, ನಗುವ ಗುಡ್ಡ, ಬೆಳಕು ಹುಟ್ಟಿಸುವ ಗಡ್ಡ ಮೊದಲಾದ ವಿಚಿತ್ರಗಳೂ ಕಥಾ ಸಾಮ್ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಸ್ಯದ ಕಥೆಯೇ ಇರಲಿ, ನೀತಿಯ ಕಥೆಯೇ ಇರಲಿ, ಕಥನವೇ ಪ್ರಯೋಜನವಾದ ಕಥೆಯೇ ಇರಲಿ. ಯಾವ ಗುಂಪಿನೊಳಗಿನ ಕಥೆಯಲ್ಲಿಯೂ ನಾವು ವಿಚಿತ್ರಕತರವಾದ ಅತ್ಯಗಾಧವಾದ ಅದ್ಭುತವನ್ನು ಕಾಣಬಲ್ಲೆವು; ಹೇಳಬಲ್ಲೆವು; ಮೂಕರಾಗಬಲ್ಲೆವು.
ಉತ್ತರಕರ್ನಾಟಕದ ಜನಪದ ಕಥೆಗಳು ಮಾತ್ರ ಇಲ್ಲಿ ಸಂಗ್ರಹಿತವಾಗಿವೆ. ಇಲ್ಲಿ ಬಂದ ಅನೇಕ ಕಥೆಗಳು ದಕ್ಷಿಣ ಕರ್ನಾಟಕದಲ್ಲಿ ತುಸು ಪಾಠಾಂತರ ಗೊಂಡಾದರೂ ಸಿಕ್ಕೇ ಸಿಗುತ್ತವೆ. ದಕ್ಷಿಣ ಕರ್ನಾಟಕದವರೆಂದು ಹೇಳಲಾಗುವ ಅವೆಷ್ಟೋ ಕಥೆಗಳು ಪಾತ್ರಗಳ ಹೆಸರಿನಲ್ಲಿ ಮಾತ್ರ ಬೇರ್ಪಟ್ಟು ನಮ್ಮಲ್ಲಿ ಕಾಣಸಿಗುತ್ತವೆ. ಉದಾಹರಣಾರ್ಥವಾಗಿ ೧೯೭೦ನೇ ದಿಶಂಬರ ತಿಂಗಳ “ಪುಸ್ತಕ ಪ್ರಪಂಚ”ದಲ್ಲಿ ಶಿವಮೊಗ್ಗೆ ಜಿಲ್ಲೆಯವರೂಬ್ವರು ಹೇಳಿದ ಕಥೆಯನ್ನು ಆಧರಿಸಿ ಸಂಗ್ರಹಿಸಿದ “ಸೋಮರಾಯ ಮತ್ತು ಭೀಮರಾಯ" ಎಂಬ ಕಥೆಯನ್ನು ಓದುತ್ತಲೆ ನೆನಪಿಗೆ ಬಂತು-ನಾನು ೫೫ ವರ್ಷಗಳ ಹಿಂದೆ ನಮ್ಮೂರಿನ ಕಂಚುಗಾರನೊಬ್ಬ ಹೇಳಿದ ಕಥೆಯೇ ಅದಾಗಿತ್ತು-"ಗರಡಿಯಗೆಳೆಯರು" ಆದರೆ ಅದರಲ್ಲಿ ಬಂದ ಪಾತ್ರಗಳ ಹೆಸರು ಮಾತ್ರ ಬೇರೆಯಾಗಿದ್ದವು. ಅದರಂತೆ ಗುಲಬರ್ಗಾ-ಬೀದರ್ ಜಿಲ್ಲೆಗಳಲ್ಲಿ ಪ್ರಚಲಿತವಿದ್ದ ಕೆಲವು ಕಥೆಗಳು ವಿಜಾಪುರ-ಬೆಳಗಾವಿ ಜಿಲ್ಲೆಗಳಲ್ಲಿಯೂ ಕೇಳಸಿಗುತ್ತವೆ. “ಸತ್ತೇನು ಗುಬ್ಬಿ?" ವೀರಗಲ್ಲು, ಹಳೆಮರ, ಕಲ್ಲಿನ ಡಿಗ್ಗೆ ಮೊದಲಾದವುಗಳ ಹೆಸರಿನ ಹಿಂದೆ ಹರಡಿಕೊಂಡ ಶುದ್ದ ಐತಿಹಾಸಿಕ ಕಥೆಗಳು ಇನ್ನೆಲ್ಲಿಯೂ ಸಿಗಲಾರವೆನ್ನುವಂತಿವೆ.
“ಗರತಿ ಸಂಗವ್ವ” “ಮಲವಯ್ಯಶೆಟ್ಟಿ" ಕಥೆಗಳು ಐತಿಹಾಸಿಕವನಿಸುವಂತಿವೆ. ಅವು ಹಾಡುಗಳಾಗಿಯೂ ಕೇಳಸಿಗುತ್ತವೆ. ಅವು ತುಂಬ ಮರ್ಮಸ್ಪರ್ಶಿಯಾಗಿವೆ. ಶ್ರೀ ಶಿವರಾಮ ಕಾರಂತರ ಮೊದಲ ಹಂತದ ಕಾದಂಬರಿಯೊಂದು ಅವರ “ವಸಂತ ಮಾಸಿಕದಲ್ಲಿ ಪ್ರಕಟವಾಗಿದೆ. ಅದರ ವಸ್ತು “ಮಲಮಯ್ಯಶೆಟ್ಟಿ'ಯ ಕಥೆಯನ್ನೇ ಹೋಲುತ್ತದೆ.
“ಮೂರು ಆಕಳುಕರುಗಳು" “ಶಾಲಿನ ಚಿಂತೆ” “ಸೊಸೆಗೇನು ಅಧಿಕಾರ" ಇಂಥ ಕಥೆಗಳು ನಮ್ಮವರ ಹೃದಯದ ಕೆಚ್ಚು ಎಂಥದೆಂಬುವದನ್ನು ತೋರಿಸುತ್ತವೆ. ನಮ್ಮವರ ನ್ಯಾಯ ನಿಷ್ಠುರತೆ ಆತ್ಮಾಭಿಮಾನಗಳನ್ನು ನಿಚ್ಚಳವಾಗಿ ಕೊರೆದು ತೋರಿಸುವ “ಗರತಿ ಸಂಗವ್ವ"ಗಳಂಥ ಕಥೆಗಳು ಈ ಸಂಗ್ರಹದಲ್ಲಿ ಇನ್ನೂ ಇವೆ. ಸನಾತನ ಸತ್ಯವನ್ನು ಪ್ರತಿಪಾದಿಸುವ “ಕಾಳಿನ ಮೇಲಿನ ಹೆಸರು", “ದೇವರು ಕೊಟ್ಟರೇನು ಕಡಿಮೆ" ಇಂಥ ಕಥೆಗಳಿಗೇನು ನಮ್ಮಲ್ಲಿ ಬರಗಾಲವಿಲ್ಲ. ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸುವ “ಯಾರಿಗೆ ಕೊಡಬೇಕು ಕನ್ಯೆ", ಸಮಸ್ಯೆಯನ್ನು ಬಿಡಿಸಿತೋರಿಸುವ “ತಮ್ಮಕ್ಕು-ಅಕ್ಕಲೆ” “ನಾಲ್ಕು ಪ್ರಶ್ನೆಗಳಿಗೆ ಉತ್ತರ"; ಸಮಸ್ಯೆಯಲ್ಲಿಯೇ ಅದರ ಉತ್ತರವನ್ನು ಮರೆಮಾಡುವ “ಹುರಮುಂಜಗೇಡಿ", “ರುಚಿಗಾರ-ಸವಿಗಾರ". ಅವು ಯಾವ ವಿಭಾಗದಲ್ಲಿ ಸೇರ್ಪಡೆಗೊಂಡರೂ ಹಾಸ್ಯವಿನೋದಗಳನ್ನು ಉದ್ದೇಶವಿರಿಸಿಕೊಂಡ “ಜಾತ್ರೆಯ ಗದ್ದಲ” “ಉದ್ದನ್ನವರ ಮುಂದೆ ಕೀರ್ತನ", “ರಾತ್ರಿ ರಾಜ", ಬುದ್ದಿಗೆ ಪ್ರಚೋದನೆ ಕೊಡಬಲ್ಲ “ಹಗಮಲ್ಲಿ ದಿಗಮಲ್ಲಿ”, “ಅಳಿಯನ ಅರ್ಹತೆ", ಉಪನಿಷತ್ ಕಥೆಗಳನ್ನು ನೆನಪಿಗೆ ತರಬಹುದಾದ “ಶಿವಪಾರ್ವತಿಯರ ಸೋಲು”, “ಉತ್ತರೀ ಮಳೆ", ದೈವದಾಟದ ವೈಚಿತ್ರ್ಯವನ್ನು ಮನಗಾಣಿಸಿಕೊಡುವ “ಅತ್ತೆಯ ಗೊಂಬೆ”, “ಆಳಬೇಕೆಂದರೆ"; ಈ ಬಗೆಯಾಗಿ ವೈವಿಧ್ಯಗಳನ್ನು ಸ್ಥೂಲವಾಗಿ ಗುರುತಿಸಬಹುದಾಗಿದೆ.
ಅಕಬರ-ಬೀರಬಲನ್ನು ಆರೋಪಿಸಿ ಅವಷ್ಟೋ ಕಥೆಗಳು ಹೇಳಲ್ಪಡುತ್ತವೆ. ಅವೆಲ್ಲ ಬುದ್ದಿವಂತಿಕೆ ಹಾಗೂ ಜಾಣ್ಣೆಯನ್ನು ಒಳಗೊಂಡಂತೆ ವಿನೋದಾತ್ತಕವೂ ಆಗಿವೆ. ಅವನ್ನಿಲ್ಲಿ ಸಂಗ್ರಹಿಸುವುದನ್ನು ಬೇಕೆಂದೇ ಬಿಟ್ಟಿದ್ದೇವೆ.
ಇಲ್ಲಿ ಸಂಗ್ರಹಿತವಾದ ೭೮ ಕಥೆಗಳಲ್ಲಿ ಮುಂಬಯಿ ಕರ್ನಾಟಕದ ಕಥೆಗಳು ಹೆಚ್ಚು ಪ್ರಮಾಣದಲ್ಲಿ ಸೇರ್ಪಡೆಗೊಂಡಿವೆ. ಹೈದ್ರಾಬಾದ ಕರ್ನಾಟಕದ ಕಥೆಗಳೂ ಇದರಲ್ಲಿ ಗಿರ್ಧದಷ್ಟಿವೆ. “ಬಿಂಬಾಲಿಯ ಅದೃಷ್ಟ”, “ಪಾಪಾತ್ಮ ರಾಜ" ಕಥೆಗಳು ಡಾಕ್ಟರ್ ಹೆಗಡೆ ಅವರಿಂದ ಸಂಗ್ರಹಿತವಾಗಿ ಪ್ರಕಟಗೊಂಡಿದ್ದರೂ ನಾವೇ ನೇರವಾಗಿ ಕೇಳಿಕೊಂಡಂತೆ ಬರೆದು ತೆಗೆಯಲಾಗಿದೆ. ಬೀದರ ಗುಲಬರ್ಗಾ ಕಥೆಗಳನ್ನುಳಿದು ಇನ್ನೆಲ್ಲ ಕಥೆಗಳನ್ನು ಅವುಗಳ ಪ್ರಾದೇಶಿಕ ಸರಣಿಯೊಡನ ನಮ್ಮ ಭಾಷೆಯಲ್ಲಿ ಬರೆಯುವುದು ಅನಿವಾರ್ಯವಾಯಿತು.
ಈ ಎಲ್ಲ ಕಥೆಗಳು ಇಪ್ಪತ್ತು ವರ್ಷಗಳಿಂದ, ಕೆಲವು ಅದಕ್ಕಿಂತ ಮುಂಚಿನಿಂದ ಕೇಳಿಕೊಂಡವುಗಳಾಗಿವೆ. ಆದರೆ ಬೀದರ-ಗುಲಬರ್ಗಾ ಭಾಗದ ಕಥೆಗಳನ್ನು ಈ ಸಂಕಲನದ ಸಲುವಾಗಿಯೇ ಸಂಗ್ರಹಿಸಿದ್ದರಿಂದ ಅವುಗಳನ್ನು ಸಾಧ್ಯವಿದ್ದಷ್ಟು ಇದ್ದಕ್ಕಿದ್ದ ಹಾಗೆ ಬರೆಯಲಾಗಿದೆ. ಅಲ್ಲಿಯ ಕನ್ನಡ ಭಾಷೆ ತೀರ ಹಂಡಬಂಡವಾಗಿದೆ. ಅದರ ಮೇಲೆ ಉರ್ದುವಿನ ನೆರಳು ಬಿದ್ದಂತೆ, ಮರಾಠಿಯ ಗಾಳಿಯೂ ಬಡಿದಿದೆ. ಆದರೂ ಅದರಲ್ಲಿ ಅಚ್ಚಗನ್ನಡ ಶಬ್ದಗಳು ಚಂಬವಳದಂತೆ ನುಸುಳಿ ಬರುವುದನ್ನು ಕಾಣುವವು. ಆ ಅಚ್ಚಗನ್ನಡ ಶಬ್ದಗಳು ಸಂಶೋಧನ ನಡೆಯಿಸಲು ಅರ್ಹವಾಗಿವೆ. ಮೂರು ಇಲ್ಲವೆ ಎರಡುವರಿ ಮೈಲು ಅಂತರಕ್ಕೆ ಹರದಾರಿಯೆನ್ನುವುದು ವಾಡಿಕೆ. ಹರಿದಾರಿಯೆಂದೂ ಅನ್ನುವುದುಂಟು. ದಾರಿ ಎನ್ನುವ ಮುಂದಿನ ಶಬ್ದ ತೆಗೆದರೆ ಉಳಿಯುವ ಹರಿಶಬ್ದವು ಅಂತರವನ್ನು ಸೂಚಿಸುವಂತೆ ತೋರುತ್ತದೆ ಆ ಭಾಗದಲ್ಲಿ, “ಹನ್ನೆರಡು ಹರಿ ಓಡುವ ಕುದುರೆ, ಇಪ್ಪತ್ತು ಹರಿ ಓಡುವ ಕುದುರೆ" ಎಂಬ ಮಾತು ಕಥೆಗಳಲ್ಲಿ ಬರುತ್ತದೆ. "ಮಗಾ" ಎಂಬ ಶಬ್ದವು ಲಿಂಗಭೇದವಿಲ್ಲದೆ “ಮಗನೇ, ಮಗಳೇ' ಎಂಬರ್ಥಗಳಲ್ಲಿ ಉಪಯೋಗಿಸುವುದು ಕಂಡುಬರುತ್ತದೆ. ಮಲಗಿದ್ದ-ಮನಗಿದ್ದ-ಮಂಗಿದ್ದ ಎಂದು ಮಾರ್ಪಡುವ ರೀತಿಯಲ್ಲಿ ಹಲವು ಶಬ್ದಗಳನ್ನು ಅರ್ಥಯಿಸಬಹುದಾಗಿದೆ. ಉಡುಗಿದದಾಣಿ ಶಬ್ದವು ಹೊಸದೆಂದು ತೋರಿದರೂ, ದಿಟ್ಟಿಸಿ ನೋಡಿದರೆ ಅದು ಕಸುಗಾಳು ಎಂದು ಕಂಡುಬರುವುದು.
“ನೀರು ಹೊಯ್ಕೊಂಡಿದ್ದಳು" ಎನ್ನುವ ವಾಕ್ಯವು ಬಸುರಿಯಾಗಿದ್ದಳು ಎನ್ನುವ ಅರ್ಥದಲ್ಲಿ ಉಪಯೋಗಿಸಲ್ಪಡುತ್ತದೆ. ಹೊರಗೆ ಕುಳಿತು ಅಥವಾ ಕಡೆಗಾಗಿ ಅಂದರೆ ರಜಸ್ವಲೆಯಾದ ಬಳಿಕ ನಾಲ್ಕನೇ ದಿವಸ ಎರಕೊಂಡಿದ್ದೇ ನೀರು ಹೊಡ್ಕೊಂಡಿದ್ದಳೆನ್ನುವುದರ ಅರ್ಥ. ಬಂಕ, ಚಬಕಿ, ಕುಳ್ಳಬಾನ, ಬೋಕಿ ಒಡ್ಡಿ ಮೊದಲಾದ ಶಬ್ದಗಳನ್ನು ಕನ್ನಡದ ಕನ್ನಡಕದಲ್ಲಿ ನೋಡಬಹುದಾಗಿದೆ.
ಮೊದಲು ಬೀದರ ಜಿಲ್ಲೆಗೆ ಸೇರಿ, ಈಗ ಆಂಧ್ರದ ಗಡಿಗ್ರಾಮವಾಗಿರುವ ಜಹಿರಾಬಾದಕ್ಕೆ ಎಕ್ಕೀಹಳ್ಳಿಯೆಂದುದು ಇಲ್ಲಿಯ ಕಥೆಗಳಲ್ಲಿ ಕಂಡುಬರುತ್ತದೆ.
ಇಲ್ಲಿಯ ಅನೇಕ ಕಥೆಗಳನ್ನು ಅದೇಕೆ, ಎಲ್ಲ ಕಥೆಗಳನ್ನು ನಮ್ಮ ಹತ್ತಿರದ ಹಾಗೂ ದೂರದ ಸ್ನೇಹಿತರು ಹಾಗೂ ತಾಯಂದಿರು ಹೇಳಿಕೊಟ್ಟಿದ್ದಾರೆ. ನಾನು ಕೇಳಿ ನೆನಪಿರಿಸಿಕೊಂಡಂತೆ ಓದಿಯೂ ನೆನಪಿರಿಸಿಕೊಂಡಿದ್ದೇನೆ. ಆ ಕ್ರಮ ಕಳೆದ ಅರವತ್ತು ವರ್ಷಗಳಿಂದಲೂ ಸಾಗಿಬಂದಿದೆ. ಅವರೆಲ್ಲರ ಹೆಸರನ್ನಿಲ್ಲಿ ಕಾಣಿಸುವುದು ಸಾಧ್ಯವಿಲ್ಲ. ಆದರೆ ಇಬ್ಬರ ಹೆಸರನ್ನು ಮಾತ್ರ ಇಲ್ಲಿ ಕಾಣಿಸದೆ ಇರಲಾರನು. ಅವರು ಯಾರೆಂದರೆ-
(೧) ಶ್ರೀಮತಿ ಮಾಣಿಕಮ್ಮ ಅಡಿವೆಪ್ಪ ಭಂಡೆ ಮಾಳೆಗಾವ ತಾ. ಬೀದರ ಅವರು ಹೇಳಿಕೊಟ್ಟ ಕಥೆ ಹದಿನಾರು. ಅವು ಯಾವವೆನ್ನುವುದು ಈ ಸಂಕಲವನ್ನು ಓದಿದವರಿಗೆ ಸಹಜಗೊತ್ತಾಗುವುದು. ಆದರೂ ಆ ಕಥೆಗಳ ತಲೆಕಟ್ಟನ್ನು ಕಾಣಿಸುತ್ತೇನೆ- ನಾಲ್ವರು ಅಣ್ಣತಮ್ಮಂದಿರು, ಮೂರ್ಖದಂಪತಿಗಳು, ದೀಪಮಾತಾಡಿತು, ಕಳ್ಳನ ಮಗಳು, ಅಭೇದಾ, ನಾಲ್ಕು ಮಂದಿ ಹೆಣ್ಮಕ್ಕಳು, ಸಣ್ಣಪೋರ, ಮಿಡಿ ನಾಗೇಂದ್ರ, ಹೆಂಡತಿಗೆ ಹೊಡೆಯಬೇಕನ್ನುವ ರಾಜ, ಪಾಪಕ್ಕೆ ಪ್ರಾಯಶ್ಚಿತ್ತ, ಪಾಪಾಸಿನ ಗಂಡ, ಮೈನಾವತಿ, ನೀರಲಗಿಡ, ಕಥೆಯ ಕಥೆ, ಅಳಿಯ ದೇವರು, ಆಳು ಮಗ ಇಕ್ಯಾ.
(೨) ಶ್ರೀಮತಿ ಭವತಾರಿಣಿ ರೇವಪ್ಪ ಕೇಶಟ್ಟಿ ನನ್ನ ದ್ವಿಕೀಯ ಪುತ್ರಿ ಭವತಾರಿಣಿ ತೀರ ಚಿಕ್ಕಂದಿನಲ್ಲಿಂಯೂ ಕಥೆ ಕೇಳುವುದರಲ್ಲಿ ಹೇಳುವುದರಲ್ಲಿ ವಿಶೇಷ ಆಸಕ್ತಿವಹಿಸುತ್ತ ಬಂದವಳು. ಆದರೆ ಇತ್ತೀಚಿನ ಹತ್ತಿಪ್ಪತ್ತು ವರ್ಷಗಳ ಸಾಂಸಾರಿಕ ಜೀವನದಲ್ಲಿ ಅವೆಲ್ಲ ಕಥೆಗಳು ಮರೆತುಹೋಗಿದ್ದವು. ಆದರೆ ನಾನು ಈ ಸ೦ಕಲನಕ್ಕಾಗಿ ಅವುಗಳನ್ನು ನೆನಪು ಮಾಡಿಕೊಳ್ಳುವಂತೆ ದುಂಬಾಲು ಬಿದ್ದುದರಿಂದ ಆಕೆ ಚಿತ್ತದ ಹೊತ್ತಿಗೆಯ ಹಳೆಯ ಪುಟಗಳನ್ನು ತಿರುಹಿ ಹಲವು ಕಥೆಗಳನ್ನು ನೆನಪಿಗೆ ತಂದುಕೊಂಡು ನನಗೆ ಹೇಳಿದಳು. ನಾನವುಗಳನ್ನು ಆಕೆಯ ಸರಣಿಯಲ್ಲಿಯೇ ಬರೆದು ತೆಗೆದೆನು. ಆಕೆ ಹೇಳಿಕೊಟ್ಟ ಕಥೆಗಳು-ಕೊಂಡು ತಂದ ಮಾತು, ಬಟ್ಟಲ್ಯಾತಕ್ಕ ಕೆನಿತಿನ್ಲಕ್ಕು ಅಳಿಯನ ಅರ್ಹತೆ, ಒಬ್ಬರಿಗಿಂತ ಒಬ್ಬರು ಮಿಗಿಲು, ಪಾದರಕ್ಷೆಯ ಪುಣ್ಯ, ಒಂದು ಹಾಡು ಒಂದು ಕಥೆ, ಯುಕ್ತಿಗೊಂಡು ಪ್ರತಿಯುಕ್ತಿ, ಮಾಡಿದ್ದೊಂದು ಆಗಿದ್ದೊಂದು, ಜಾಣಸೊಸೆ, ತಂಗಿಗೊಬ್ಬ ಅಕ್ಕ, ಅತ್ತೆಯಗೊಂಬೆ, ಪಿಸುಣನಿಗೆ ಉಪಕಾರ, ಲೆಕ್ಕಾಚಾರದ ಅತ್ತೆ, ಸತ್ತೇನು ಗುಬ್ಬಿ, ದೇವರು ಕೊಟ್ಟರೇನು ಕಡಿಮೆ, ಶಿವರಾತ್ರಿಯ ಪಾರಣೆ, ಹಗಮಲ್ಲಿ ದಿಗಮಲ್ಲಿ.
“ಮನುಷ್ಯನನ್ನು ತನ್ನಂತೆ ಮಾಡಬೇಕೆಂದು ದೇವನು ಯೋಚಿಸಿದನು. ಆದರೆ ಮನುಷ್ಯನು ದೇವನನ್ನೇ ತನ್ನಂತೆ ಮಾಡಿಕೊಂಡನು” ಎಂದು ಮಹಾತ್ಮ ಗಾ೦ಧೀಜಿ ಹೇಳುತ್ತಾರೆ. ಆ ಮಾತು ಜನಪದ ಕಥೆಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಶಿವನಿಗಿರುವ ಇಬ್ಬರು ಹೆ೦ಡಿರಲ್ಲಿ ಸವತಿ ಮಾತ್ಸರ್ಯವು ಉಲ್ಬಣಗೊಂಡು ಕದನಗಳಾಗುತ್ತವೆ. “ಇಬ್ಬರು ಹೆಂಡಿರ ಕಾಟ್‌ಗಾಗಿ ಮಗ್ಗದ ಕುಣಿಯಾಗ ಡೊಗ್ಗಿದೆನಪ್ಪೊ ಸಾಯತೇನ್ರೋ ಎಪ್ಪಾ ಸಾಯತೇನ್ರೋ" ಎಂದು ಶಿವನು ಹಲುಬಿದಂತಿದೆ. “ಎನ್ನ ಮೇಲಾಡಿ ಶ್ರೀಗಂಗೀನ ತಂದೀ। ತಪ್ಪು ಮತ್ತೇನು ಕಂಡೀ” ಎಂದು ಗೌರಿಯ ಬಾಯಿಂದ ಕೇಳಿಸಿದ್ದಿದೆ. ನಮ್ಮ ನಿಮ್ಮ ಹೆಂಡಿರಂತೆ ಶಿವನ ಹೆಂಡತಿಯೂ ಕೆಲವೊಂದು ದಿನ ತವರ್ಮನೆಗೆ ಹೋಗುತ್ತಾಳೆ. ತವರುಮನೆಯವರಿತ್ತ ಕೊಡುಗೆಯನ್ನು ಬಣ್ಣಿಸುತ್ತ ಮಾತುಮಾತಿಗೊಮ್ಮೆ "ಎಮ್ಮವರು ಬಡವರು | ಇನ್ನೇನು ಕೊಡುವರು" ಎಂದು ವಿನಯದಲ್ಲಿ ಜಂಬ ಮೆರೆಸುತಾಳೆ. "ನಿನ್ನವರು ನಿನಗೆ ಇಷ್ಟೆಲ್ಲ ಕೂಡಮಾಡಿದರು ಆದರೆ ನನಗೇನು ಕೊಟ್ಟರು" ಎಂದು ಶಿವನು ಕೇಳಿದರೆ-ಇಷ್ಟೆಲ್ಲ ನನಗೆ ಕೊಟ್ಟು ನನ್ನನ್ನೇ ನಿಮಗೆ ಕೊಡಮಾಡಿದರು ಎಂದು ನುಡಿದು, ಒಂದೇಟಿಗೆ ಸಂಭ್ರಮವು ಸೂಸುವಂತೆ ಮಾಡಿಡ್ದುಂಟು
ಜನಪದ ಕಥೆಗಳನ್ನು ಸೃಷ್ಟಿಸಿದರು ಬುದ್ದಿಶಾಲಿಗಳಲ್ಲ, ಭಾವನಾಶೀಲರು, ಅವರಿಗೆ ಬುದ್ದಿಯೇ ಇರಲಿಲ್ಲವೆಂದಲ್ಲ ಭಾವನಾಶೀಲತೆಗೆ ಇಜ್ಜೋಡು ಆಗದಷ್ಟು ಬುದ್ದಿವಂತಿಕೆ ಅರಳಿತ್ತು. ಮಾನಕ್ಕೆ, ಅಭಿಮಾನಕ್ಕೆ ಕಲಂಕ ಹತ್ತುವ ಪ್ರಸಂಗ ಬಂದರೆ ತನ್ನಾಸ್ತಿ ದೊಡ್ದಸಿಕ್ಕೆ ಮೊದಲಾದ ಸರ‍್ವಸ್ವವನ್ನೇ ಸೂರೆಮಾಡಿ, ಜೀವ ಸಹ ತೆತ್ತು ಶುಭ್ರ ಕೀತಿ೯ಯನ್ನು ಕಾಪಾಡಿಕೊಳ್ಳುತ್ತಿದ್ದ ಆದಶ೯ವು ಅವರ ಕಥೆಗಳಲ್ಲಿ ಸೂರೆಗೊಂಡಿವೆ. ನೈಸಗಿ೯ಕ ಕಟ್ಟಳೆಯನ್ನು ತಲೆಯಿಂದ ಪರಿಪಾಲಿಸುತ್ತ, ಪ್ರಸಂಗ ಬಂದರೆ ದೇವನನ್ನು ಸಹ ಸೋಲಿಸುತ್ತಿದ್ದರು. "ಜಗಕೆ ಬಲ್ಲಿನ ನೀನು, ನಿನಗೆ ಬಲ್ಲಿದ ನಾನು" ಎಂದು ಸೆಣಸಿದೆ, "ಜಗವ ಸುತ್ತಿಪ್ಪುದು ನಿನ್ನ ಮಾಯೆ, ನಿನ್ನ ಸುತ್ತಿಪ್ಪುದು ಎನ್ನ ಮನ" ಎಂದು ಗುಣಿಸದೆ ಬುದ್ದಿಯ ಸೋಂಕಿಲ್ಲದೆ ಮರುಳನಂತೆ ಬಾಳುತ್ತಿರುವ ಕುರುಬನಂಥವನು ಶ್ರದ್ಡೆಯ ಬಲದಿಂದ ಶಿವಪಾವ೯ತಿಯರನ್ನು ಸೋಲಿಸಿದ ಕಥೆಯಿದೆ.
ಜಗತ್ತೆಂದರೆ ಮನುಷ್ಯನೊಡನೆ ದೇವನು ಹೂಡಿದ ಪಗಡೆಯಾಟ. ಆಟದಲ್ಲಿ ಯುಕ್ತಿಸಂಗತವಾಗಿ ಪಗಡಿಗಳನ್ನು ಸರಿಸಾಡುವದಿದ್ದರು ಡಾಳು ಬಗೆಯದೆ ಪಗಡಿಗೆ ಕ್ಯೆಹಚ್ಚುವಂತಿಲ್ಲ. ಆಟದಲ್ಲಿ ನಿಪುಣನಾದ ದೇವನು ಗೆಲ್ಲುವುದು ಅಚ್ಚರಿಯಲ್ಲ. ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಜೀವನದು. ಜೀವನು ಗೆಲುವಡೆಯದಿದ್ದರೆ ಬಿಡಲಿ, ಆತನು ಗೆಲುವೆನೆಂದು ಹೇಳಿಕೊಳ್ಳುವುದು ದೊಡ್ಡದು. ಅದು ಶ್ರದ್ದೆಯಿಂದ ದೊರಕೊಳ್ಳುವ ಬಲ. ಜನಪದ ಕಥೆಗಳಲ್ಲಿ ಅಂಥ ಜೀವಿಗಳು ಸುಳಿದು ಬರುತ್ತಾರೆ.
ಅನ್ನವನು ನೀಡುವುದು ಮನುಷ್ಯಧರ್ಮ. ಆ ಧಮ೯ಕ್ಕೆ ಚ್ಯುತಿಬಂದರೆ ಆ ಅನ್ನ ಅಲ್ಲೇಕೆ ಉಳಿದೀತು? ಅದೇ "ಎಲ್ಲಮ್ಮನ ಶಾಪ". ಎಂಜಲುಗ್ಯೆಯಿಂದ ಕಾಗೆ ಹೊಡೆಯದ ಜೀನಹಂಕನು, ಜೋಗಿತಿಯ ವೇಷದಲ್ಲಿ ಬಂದ ಎಲ್ಲಮ್ಮನನ್ನು ಛಲಿಸಿದ್ದರಿಂದ ಆಕೆಯ ಬೆವರು-ನಿಟ್ಟುಸಿರುಗಳೊಡನೆ ಕಣ್ಣಕಾಡಿಗೆ, ಹಣೆಯ ಕುಂಕುಮ, ಗಲ್ಲಭಂಡಾರ, ಮುಂಗ್ಯೆ ಗಂಧಗಳೆಲ್ಲ ತುಂಬಿ ನಿಂತ ಅತನ ಹೊಲದ ಬೆಳೆಯಲ್ಲಿ ಸೂರಾಡಿ ತೂರಾಡಿದ್ದರಿಂದ ಬೆಳೆಗಳೆಲ್ಲಿ ಹುಸಿಯಾದವು. ಕಾಳಿನ ಮೇಲೆ ಅದನ್ನು ತಿನ್ನುವವನ ಹೆಸರು ಬರೆದಿರುವದೆಂಬ ಮಾತಿನಲ್ಲಿ ಜನಪದಕ್ಕೆ ತುಂಬ ಭರವಸೆಯಿದೆ. ತನ್ನ ಚಿಂತೆಯಲ್ಲಿ ಮುಳುಗಿದವನ ಸಲುವಾಗಿ ದೇವನೇ ಚಿಂತಿಸುತ್ತಾನೆಂಬ ನಂಬಿಕೆ ನಮ್ಮವರ ನೆತ್ತರದ ಅಣುಅಣುವಿನಲ್ಲಿಯೂ ಹುದುಗಿದೆ.
ಶ್ರೀ ರಾಮಕೃಷ್ಣ ಪರಮಹಂಸರು ಇಂದಿನ ಕಾಲದ ಜನರಿಗೆ ಬೋಧಿಸಿದಂತೆ ಅಂದಿನವರು ಒಂದು ಕೈಯಿಂದ ದೇವನನ್ನು ಗಟ್ಟಿಯಾಗಿ ಹಿಡಿದು, ಇನ್ನೊಂದು ಕೈಯಿಂದ ಸಂಸಾರದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ದೇವನ ಪ್ರೀತ್ಯರ್ಥವಾಗಿ ಬದುಕುತ್ತಿದ್ದರು; ಅವರ ಸಂತೋಷಕ್ಕಾಗಿ ಸೊಗಸಾಗಿ ಬದುಕುತ್ತಿದ್ದರು. ಅವರ ಬುದ್ಧಿ ಪ್ರಾಣ ದೇಹಗಳು ಸತ್ಯ ಶಿವ ಸುಂದರಗಳಿಗೆ ಆಗರವಾಗುವಂತೆ ವೈಯಕ್ತಿಕ ಸಾಮೂಹಿಕ ಪ್ರಯತ್ನಗಳು ಸ್ವಾಭಾವಿಕವಾಗಿಯೇ ನಡೆಯುತ್ತಿದ್ದವು.
ಕೇಳಿದ ಕಥೆಯನ್ನಾಗಲಿ, ಕಲಿತ ಹಾಡನ್ನಾಗಲಿ ಇನ್ನೊಬ್ಬರಿಗೆ ಕೇಳಿಸುತ್ತ ವಿಕಸಿತ ಜೀವನಕ್ಕೆ ಆಸ್ಪದ ಮಾಡಿಕೊಡುವುದೂ ಒಂದು ಸದ್ಧರ್ಮವೆಂದೇ ನಮ್ಮವರು ಬಗೆದಿದ್ದರು. ಅದನ್ನು ಅಲ್ಲಗೆಳೆದೋ ಒಲ್ಲಗಳೆದೋ ಬಂದ ಕಥೆ ಹಾಡು ಬಯತಿರಿಸಿದರೆ ಅವು ತಾವಾಗಿಯೇ ಕಾಲ್ದೆಗೆಯುವವೆಂದು ನಮ್ಮವರ ಗ್ರಹಿಕೆ. ಕಥೆ ಕಾಲ್ಮರೆಯಾಗಿ ಮೆಟ್ಟುಗಟ್ಟೆಯ ಬಳಿ ಕುಳಿತಿತು. ಹಾಡು ಮೇಲಂಗಿಯಾಗಿ ಗೂಟಕ್ಕೆ ನೇತು ಬಿದ್ದಿತು. ಮನೆಯೊಡತಿಗೆ ಗಂಡ ಕೇಳಿದನು-“ಯಾರು ಬಂದಿದ್ದಾರೆ?”
“ಯಾರೂ ಬಂದಿಲ್ಲ” ಎಂದಳು ಗೃಹಿಣಿ. ಗಂಡನಿಗೆ ಸಂಶಯ ಬಾಧಿಸಿತು. ಹೆಂಡತಿಯನ್ನೂ ಅದು ಬಾಧಿಸದೆ ಬಿಡಲಿಲ್ಲ. ಗಂಡನು ರಾತ್ರಿ ಹನುಮಂತದೇವರ ಗುಡಿಗೆ ನಿತ್ಯದಂತೆ ಮಲಗಲು ಹೋದಾಗ, ಅಲ್ಲಿ ಊರದೀಪಗಳೆಲ್ಲ ಬಂದು ಬಂದು ನೆರೆದವು. ತಡವೇಕಾಯಿತಂದು ಆ ಗೃಹಿಣಿಯ ಮನೆಯ ದೀಪಕ್ಕೆ ಉಳಿದ ದೀಪಗಳು ಕೇಳಿದವು. ಅದಕ್ಕೆ ಮರುನುಡಿದ ತನ್ನ ಮನೆಯ ದೀಪದ ಮಾತಿನಿಂದ, ಆತನಿಗೆ ಕಾಲ್ಕರೆ-ಕೋಟುಗಳ ರಹಸ್ಯವು ನಿಚ್ಚಳವಾಯಿತು, ಹೆಂಡತಿಯ ಬಗೆಗೆ ಮೂಡಿದ ಸಂಶಯ ದೂರವಾಯಿತು. ಬರುವ ಹಾಡು-ಕಥೆಗಳನ್ನು ಹೆರರಿಗೆ ಹೇಳಿ ಸಾರ್ಥಕಗೊಳಿಸದಿದ್ದರೆ ಬದುಕಿನಲ್ಲಿ ಅನಿಷ್ಟಗಳು ನುಸುಳುವವೆಂದು ಹೇಳಿದಂತಾಯಿತು. ಆದ್ದರಿಂದ ಕಥೆಗಳನ್ನು ಹೇಳುವದಕ್ಕೊಂದು ಪ್ರಯೋಜನವಿದ್ದಂತೆ, ಕೇಳುವದಕ್ಕೂ ಒಂದು ಪ್ರಯೋಜನವಿಲ್ಲದಿರಲಾರದು.
ಈ ಜಿನ ಕಥೆಯನು ಕೇಳಿದವರ ಪಾಪ-
ಬೀಜ ನಿರ್ನಾಶನವಹದು ॥
ತೇಜವಹುದು ಪುಣ್ಯವಹುದು, ಮುಂದೊಲಿದಪ
ರಾಜಿತೇಶ್ವರನ ಕಾಣುವರು ॥
ರತ್ನಾಕರವರ್ಣಿಯು ಜಿನಕಥೆಯ ಸಲುವಾಗಿ ಹೇಳಿದ್ದನ್ನೇ ನಾವು ಜನಕಥೆಯ ಸಲುವಾಗಿ ಹೇಳಬಹುದಾಗಿದೆ. ಪಾಪಬೀಜವನ್ನು ನಾಶಗೊಳಿಸಿ, ತೇಜಸ್ಸನ್ನೆರೆದು, ಅ-ಪರಾಜಿತೇಶ್ವರನನ್ನು ಕಾಣಿಸಬಲ್ಲ ಜನಕಥೆಯ ಸಂಗ್ರಹಕಾರ್ಯವು ನಾಡಿನ ಮುನ್ನಡೆಗೆ ಅತ್ಯಾವಶ್ಯಕವಾದ ಸಾಧನವಾಗಿದೆ.
ಪರಿವಿಡಿ
ಮೈನಾವತಿ
ಜಾಣಸೊಸೆ
ಅಭೇದ
ಮಲವಯ್ಯಶೆಟ್ಟಿ
ಹೆಂಡತಿಗೆ ಹೊಡೆಯಬೇಕೆನ್ನುವ ರಾಜ
ಕಳ್ಳನ ಮಗಳು
ಕೊರವಂಜಿಯ ಕಲೆ
ಪಾಪಸಿನ ಗಂಡ
ದೇವರು ಕೊಟ್ಟರೇನು ಕಡಿಮೆ
ಅತ್ತೆಯ ಗೊಂಬೆ
ನಾಲ್ಕು ಮಂದಿ ಹೆಣ್ಣುಮಕ್ಕಳು
ಜಂಬುನೀರಲ
ಪಾಪಾತ್ಮ ರಾಜ
ಒಂದು ಹಾಡು ಒಂದು ಕಥೆ
ಗರತಿ ಸಂಗವ್ವ
ಗರಡಿಯ ಗೆಳೆಯರು
ನಾಲ್ವರು ಅಣ್ಣತಮ್ಮಂದಿರು
ಶಿವಪಾರ್ವತಿಯರ ಸೋಲು
ಗಂಗಮ್ಮ - ತಂಗಿ
ನನಗೇನು ಕೊಟ್ಟರು
ಶಾಲಿನ ಚಿಂತೆ
ಸಣ್ಣಪೋರ
ತಿರುಮಂತ್ರ
ಬಿ೦ಬಾಲಿಯ ಅದೃಷ್ಟ
ಎಲ್ಲಮ್ಮನ ಮುನಿಸು
ಸೊಂಟನೋವಿನ ಎಣ್ಣೆ ಮಜ್ಜನ
ರಾತ್ರಿ ರಾಜ
ಲೆಕ್ಕಾಚಾರದ ಅತ್ತೆ
ಅಳಿಯನ ಅರ್ಹತೆ
ತಂಗಿಗೊಬ್ಬ ಅಕ್ಕ
ಉದ್ದನ್ನವರ ಮುಂದೆ ಕೀರ್ತನ
ತಂದೆ ಮಗ
ಪಿಸುಣನಿಗೆ ಉಪಕಾರ
ಅಳಬೇಕಂದರೆ
ಬಾರದ ಬರ
ಕೊನೆಯಾಶೆ
ತಾಯ ಕೊಂದ ಪಾಪ
ರುಚಿಗಾರ ಸವಿಗಾರ
ದೀಪ ಮಾತಾಡಿತು
ಸೊಸೆಗೇನು ಅಧಿಕಾರ ?
ಮಾಡಿದ್ದೊಂದು ಆಗಿದ್ದೊಂದು
ಸೇವಕನ ಸಂಬಳವೇಕೆ ಕಡಿಮೆ ?
ಮನೆ ಅಳಿಯ
ನಾಲ್ಕು ಪ್ರಶ್ನೆಗಳಿಗೆ ಉತ್ತರ
ಬಟ್ಟಲ್ಯಾತಕ್ಕ ಕೆನಿ ತಿನ್ಲಿಕ್ಕ
ಹಗಮಲ್ಲಿ ದಿಗಮಲ್ಲಿ
ಆಳುಮಗ ಇಕ್ಯಾ
ಯಾರಿಗೆ ಕೊಡಬೇಕು ಕನ್ಯೆ ?
ಪಾದರಕ್ಷೆಯ ಪುಣ್ಯ
ಯುಕ್ತಿಗೊಂದು ಪ್ರತಿಯುಕ್ತಿ
ತುಂಟ ಬೀಗ
ತಮ್ಮಕ್ಕ ಅಕ್ಕೆಲೆ
ಉತ್ತರೀಮಳೆ
ಕೊಂಡು ತಂದ ಮಾತು
ಕಾಳಿನ ಮೇಲಿನ ಹೆಸರು
ಗೌಡರ ನಾಯಿ
ಆಶೆ ಬಹಳ ಕೆಟ್ಟದು
ಕಥೆಯದೇ ಕಥೆ
ಮೂರು ಆಕಳ ಕರುಗಳು
ನೀರಲಗಿಡ
ಸತ್ತೇನು ಗುಬ್ಬಿ ?
ಮಿಡಿ ನಾಗೇಂದ್ರ
ಚೋಟ್ಟೆಪ್ಪನ ಗೆಳೆಯರು
ಒಬ್ಬರಿಗಿಂತ ಒಬ್ಬರು ಮಿಗಿಲು
ಅದರ ಸಪ್ಪಳ ಬೇರೆ
ಕಾಮಣ್ಣ ಭೀಮಣ್ಣ
ಹೂಂ ಅಂದರೆ ಒಂದೇ ಉಂಡಿ
ಹುರಮುಂಜಗೇಡಿ
ಶಿವರಾತ್ರಿ ಪಾರಣೆ
ಗಂಡ ಹೆಂಡಿರ ಕದನ
ಒಂಟಿಯ ಮೇಲಿನ ಶಹಾಣೆ
ಜಾತ್ರೆಯ ಗದ್ದಲ
ಉತ್ತರ ಕರ್ನಾಟಕದ
ಜನಪದ ಕಥೆಗಳು
ಮೈನಾವತಿ
ಒಂದೂರಲ್ಲಿ ಒಬ್ಬ ರಾಜ, ಒಬ್ಬ ಪ್ರಧಾನಿ, ಒಬ್ಬ ಸಾಹುಕಾರ ಇದ್ದರು. ಆ ಮೂವರಿಗೂ ಒಬ್ಬೊಬ್ಬರಂತೆ ಗಂಡಸು ಮಕ್ಕಳಿದ್ದರು. ಅವರೆಲ್ಲರೂ ಸಾಲೆ ಬರೆಯುತ್ತಿದ್ದರು. ಮುಂದೆ ದೊಡ್ಡವರಾದರು. “ಬೇಟೆಗಾಗಿ ಎಕ್ಕೀಹಳ್ಳಿಗೆ ಹೋಗಾರಿ" ಎಂದು ಮೂವರೂ ನಿಶ್ಚಯಿಸಿದರು. ಅಷ್ಟರಲ್ಲಿ ಅವರ ತಾಯಿತಂದೆಗಳು ಅವರ ಲಗ್ನ ಮಾಡಲು ತಯಾರಿ ನಡೆಸಿದರು. ಅದರಂತೆ ಒಳ್ಳೆಯ ಮುಹೂರ್ತದಲ್ಲಿ ಲಗ್ನವನ್ನೂ ಮಾಡಿಹಾಕಿದರು. ಅವರು ಬೇಟೆಗೆ ಹೋಗಲು ಗಡಬಿಡಿ ಮಾಡುತ್ತಿರಲು, ಶೋಭಾನ ಮಾಡಿಕೊಂಡುಹೋಗಿರಿ - ಎಂದು ಹೇಳಿದರು. ಅದರಂತೆ ಶೋಭನ ಕಾರ್ಯ ಮುಗಿಸಿಕೊಂಡು ಬೇಟೆಂಯಾಡಲು ಹೋದರು.
ಮುಂದೆ ಒಂಬತ್ತು ತಿಂಗಳಿಗೆ ಅವರ ಹೆಂಡಂದಿರು ಕೂಸುಗಳಿಗೆ ಜನ್ಮವಿತ್ತರು. ರಾಜ ಮತ್ತು ಪ್ರಧಾನಿಗಳಿಗೆ ಗಂಡು ಕೂಸುಗಳು ಹುಟ್ಟಿದವೆಂದೂ ಸಾಹುಕಾರನಿಗೆ ಹೆಣ್ಣು ಕೂಸು ಹುಟ್ಟಿತೆಂದೂ ಪತ್ರಬಂತು. ಹೆಣ್ಣು ಹುಟ್ಟಿತೆಂದು ಸಾಹುಕಾರನಿಗೆ ಸ್ವಲ್ಪ ಅಸಮಾಧಾನ. ಅದಕ್ಕೇಕೆ ಅಷ್ಟು ಗಿಲಿಗಿಲಿ ಆಗುತ್ತೀ ಎಂದು ರಾಜ ಮತ್ತು ಪ್ರಧಾನಿ ಸಾಹುಕಾರನಿಗೆ ಹಂಗಿಸಿದರು. ತೊಟ್ಟಿಲಿಕ್ಕುವ ಸಲುವಾಗಿ ಮೂವರೂ ಮನೆಗೆ ಬಂದು ಮತ್ತೆ ಬೇಟೆಗೆ ಹೋದರು. ವರ್ಷಗಳು ಉರುಳಿದವು.
ಮಕ್ಕಳು ದೊಡ್ಡವರಾದರು. ಆಗ ಅವರು ಊರಿಗೆ ಮರಳಿದರು. ಸಾಹುಕಾರನ ಮಗಳ ಹೆಸರು ಮೈನಾವತಿ. ಅವಳು ಮದುವೆಂಯ ವಯಸ್ಸಿಗೆ ಬಂದಿದ್ದಾಳೆ. ವರಗಳು ಹೆಣ್ಣು ಕೇಳಲು ಬಂದವು. ಅಷ್ಟರಲ್ಲಿ ರಾಜನಮಗ ಹಾಗೂ ಪ್ರದಾನಿಯ ಮಗ - “ನಾವು ಇನ್ನೂ ಎಷ್ಟುದಿನ ಸಾಲೀ ಬರೀಬೇಕು" ಎಂದು ತಕರಾರು ಮಾಡಿದರು. ರಾಜನ ಮಗನು ಮೈನಾವತಿಯೊಡನೆ ಲಗ್ನವಾಗಬೇಕೆಂದು ಮಾಡಿದ್ದನು. ಆದರೆ ಅವಳ ಲಗ್ನ ಮತ್ತೊಬ್ಬನಕೂಡ ಆಗಿಹೋಯಿತು.
ಮೈನಾವತಿಯನ್ನು ಕರೆಯಲು ಅವರ ಮಾವ ಬಂದನು.
ಒಬ್ಬ ಆಳುಮನುಷ್ಯನು, ರಾಜನ ಮಗನು ಕಳಿಸಿದ ಚೀಟಿಯನ್ನು ಸಾಹುಕಾರನ ಮನೆ ಬಾಗಿಲಿಗೆ ಅಂಟಿಸಿ ಹೋಗುತ್ತಾನೆ. ಮೈನಾವತಿ ಊರಿಗೆ ಹೊಗುವಾಗ ಚೀಟಿ ಆವಳ ಕೈಗೆ ಸಿಗುತ್ತದೆ. ತನ್ನಾ ಮನೆಬಾಗಿಲಿಗೆ ಅವಳೋಂದು ಚೀಟೀ ಅಂಟಿಸಿ ಆತ್ತೆ ಮಾವರ ಮನೆಗೆ ಹೋದಳು
"ನನ್ನೂರಿಗೆ ನೀವು ಬರಬೇಕು" ಎಂದು ಆಕೆ ಚೀಟೀಯಲ್ಲೆ ಬರೆದ ಪ್ರಕಾರ, ರಾಜನ ಮಗ ಹಾಗು ಪ್ರಧಾನಿಯ ಮಗ ಮೈನಾವತಿಯ ಗಂಡನೂರಿಗೆ ಹೊಗಿ ಅಲ್ಲಿ ಹೂಗಾರ ಮುದುಕಿಯ ಮನೆಗೆ ಹೊಗುತ್ತಾರೆ. ಅಲ್ಲಿ ರಾತ್ರಿ ಮಲಗಲು ವ್ಯವಸ್ಥೆ ಮಾಡುತ್ತಾರೆ. ಅಕ್ಕಿತಂದುಕೊಟ್ಟರೆ ಬೋನ ಮಾಡಿಕೊಡುವೆ ಎಂದಳು ಆ ಮುದುಕಿ. ಅಕ್ಕಿ ತರುವುದಕ್ಕೆ ಬುಟ್ಟಿ ಕೇಳಿದರೆ ಆ ಮುದುಕಿ ನೇರವಾಗಿ ಮೈನಾವತಿಯ ಮನೆಗೆ ಹೊಗಿ ಒಂದು ಬುಟ್ಟಿ ಬೇಡುತ್ತಾಳೆ. ಮೈನಾವತಿ ಬುಟ್ಟಿಗೆ ಜಾಜಾ ಹಚ್ಚೀಕೊಡುತ್ತಾಳೆ. ಅಕ್ಕಿ ಕೊಳ್ಳವುದಕ್ಕೆ ರಾಜನ ಮಗನು ಅಂಗಡಿಗೆ ಹೋದಾಗ ಆತನಿಗೆ ಒಂದು ಚೀಟಿ ಸಿಗುತ್ತದೆ -
"ಈ ಹೊತ್ತಿನ ದಿವಸ ಶಂಭೂಮಹಾದೇವನ ಗುಡಿಗೆ ಬರುತ್ತೇನೆ. ನೀವು ಅಲ್ಲಿಗೆ ಬರಬೇಕು" ಎಂದು ಮೈನಾವತಿ ಬರೆದಿದ್ದಳು.
ಅಕ್ಕಿ ತೆಗೆದುಕೂಂಡು ಸೈರ ಮನೆಗೆ ಬಂದರು.
ಹೊತ್ತು ಮುಳುಗುವ ಸಮಯಕ್ಕೆ ರಾಜನ ಮಗನು ಮಹಾದೇವನ ಗುಡಿಗೆ ಹೋಗುತ್ತಾನೆ. ಜರದ ಸೀರೆಯುಟ್ಟು ಕೈಯಲ್ಲಿ ಆರತಿ ಹಿಡಕೊಂಡು ಮೈನಾವತಿ ಗುಡಿಗೆ ಹೋಗುತ್ತಾಳೆ. ಅವಳು ಹೋಗುವುದನ್ನು ನೋಡಿದ ಓಲೆಕಾರನೊಬ್ಬನು ಅವಳ ಬೆನ್ನ ಹಿಂದೆ ತಾನೂ ಗುಡಿಗೆ ಹೋಗುತ್ತಾನೆ. ರಾಜನ ಮಗನೂ ಗುಡಿಯೊಳಕ್ಕೆ ಹೋಗುವುದನ್ನು ಕಂಡ ಓಲೆಕಾರನು - ಹೆಂಗಸೊಬ್ಬಳು ಗಂಡಸರಿದ್ದ ಗುಡಿಯೊಳಕ್ಕೆ ಹೋಗಿದ್ದಾಳೆಂದು ಬೊಬ್ಬಾಟ ಮಾಡುತ್ತಾನೆ. ಗಸ್ತಿಯಾಳುಗಳು ನಾಲ್ವರು ಅಲ್ಲಿ ಕಾವಲು ಕುಳಿತುಕೊಳ್ಳುತ್ತಾರೆ.
ಅದೆಷ್ಟು ಹೊತ್ತಾದರೂ ಮೈನಾವತಿ ಹೊರಗೆ ಬರಲಿಲ್ಲ. ಗಸ್ತಿಯಾಳುಗಳೆಲ್ಲ ತಿರುಗಿ ಹೋದರು.
“ಹೂವಿನ ಬನದಾಗ ಸೈರೇ ದನ ಬಂದಾದ. ಅದನ್ನು ಬಿಡಿಸಿಕೊಂಡು ಬಾ” ಎಂದು ಪ್ರಧಾನಿಯ ಮಗ ಹೂಗಾರ ಮುದುಕಿಗೆ ಬೆನ್ನು ಬೀಳುತ್ತಾನೆ. ಮುದುಕಿ ಹೊರಗೆ ಹೋದಕೂಡಲೇ ಪ್ರಧಾನಿಯ ಮಗನು ಅವಳದೊಂದು ಸೀರೆ ಉಟ್ಟುಕೊಂಡು ಗುಡಿಗೆ ಹೋಗುತ್ತಾನೆ. ಅಲ್ಲಿ ಕುಳಿತವರು ಅವನನ್ನು ಒಳಗೆ ಬಿಡುವುದಿಲ್ಲ.“ಪೂಜೆಮಾಡಿ ಐದು ತಿಂಗಳಾದವು. ದೇವರಿಗೆ ಹರಕೆ ಹೊತ್ತಿದ್ದೇನೆ. ನನ್ನನ್ನು ಒಳಗೆ ಬಿಡಿರಿ” ಎಂದು ದುಂಬಾಲ ಬೀಳುತ್ತಾನೆ. ಆದ್ದರಿಂದ ಒಳಗೆ ಹೋಗಲು ಅಪ್ಪಣೆ ಸಿಕ್ಕಿತು.
ರಾಜನ ಮಗ ಒಳಗೆ ಕುಳಿತಿದ್ದನು. ಈಗ ಪ್ರಧಾನಿಯ ಮಗನೂ ಒಳಗೆ ಹೋಗಿ ಅವನಿಗೆ ಜತೆಯಾದನು. ಪ್ರಧಾನಿಯ ಮಗನು ಉಟ್ಟುಕೊಂಡ ಸೀರೆಯನ್ನೇ ತಾನುಟ್ಟುಕೊ೦ಡು ಮೈನಾವತಿ ಅಲ್ಲಿಂದ ಹೊರಬಿದ್ದಳು. ಅವರಿಬ್ಬರೂ ಜೊತೆಗಾರರು ಗುಡಿಯಲ್ಲಿ ಸ್ವಸ್ಥವಾಗಿ ನಿದ್ದೆ ಮಾಡಿದರು.
ಬೆಳಗಾಗುತ್ತಲೆ ಅವರೆದ್ದು ಹೊರಹೊರಟರು. ಓಲೆಕಾರ ಹಾಗೂ ಉಳಿದಜನ ಅವರನ್ನು ಕಣ್ಣುತೆರೆದು ನೋಡಿದರು. ಒಳಗೆ ಹೋಗಿ ತಪಾಸು ಮಾಡಿದರೆ ಅಲ್ಲಿ ಯಾವ ಹೆಣ್ಣುಮಗಳೂ ಇರಲಿಲ್ಲ. ಎಲ್ಲರೂ ಓಲೆಕಾರನಿಗೆ ಸಿಟ್ಟುಮಾಡಿ ಹೋಗಿಬಿಟ್ಟರು.
ಆ ಉಭಯಕುಮಾರರು ಹೂಗಾರ ಮುದುಕಿಯ ಮನೆಗೆ ಹೋಗಿ ಜಳಕ ಊಟ ಮುಗಿಸಿ ವಿಶ್ರಾಂತಿ ಮಾಡಿದರು.
ಪ್ರಧಾನಿಯ ಮಗನು ರಾಜನ ಮಗನಿಗೆ ಒಂದು ಒಳ್ಳೆಯ ಸೀರೆ ಉಡಿಸಿ ಮೈನಾವತಿಯ ಗಂಡನಮನೆಗೆ ಕರಕೊಂಡು ಹೋದನು. ಆ ಸಂದರ್ಭದಲ್ಲಿ ಮೈನಾವತಿಯ ಗಂಡನು ಊರಲ್ಲಿರಲಿಲ್ಲ. ಮುತ್ತುರತ್ನಗಳ ವ್ಯಾಪಾರಕ್ಕಾಗಿ ದೇಶ ಸಂಚಾರ ಹೋಗಿದ್ದನು. ಪ್ರಧಾನಿಯ ಮಗನು, ಮೈನಾವತಿಯ ಮಾವನಿಗೆ ಹೇಳಿದನು -
“ನನ್ನ ಸೊಸೆಯನ್ನು ನಿಮ್ಮ ಮನೆಯಲ್ಲಿ ಬಿಡುತ್ತೇನೆ. ಯಾಕೆಂದರೆ, ನನ್ನ ಸಾಮಾನುಗಳನ್ನೆಲ್ಲ ಕಳ್ಳರು ದೋಚಿಕೊಂಡು ಒಯ್ದಿದ್ದಾರೆ. ಈಗ ಸಹ ಅವರು ನನ್ನ ಬೆನ್ನು ಹತ್ತಿದ್ದಾರೆ. ದಯಮಾಡಿ ಕೆಲದಿನದ ಮಟ್ಟಿಗೆ ಈಕೆಯನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿರಿ.”
ಈ ಪ್ರಕಾರ ವೇಷದ ಸೊಸೆಯನ್ನು ಬಿಟ್ಟುಕೊಟ್ಟು ಪ್ರಧಾನಿಯ ಮಗನು ಹೋಗಿಬಿಡುತ್ತಾನೆ.
ರಾಜನಮಗ ಹಾಗೂ ಮೈನಾವತಿಯರ ಭೇಟಿ ಹೀಗೆ ಆಗುತ್ತದೆ. ಎಂಟು ಹತ್ತು ದಿನಗಳು ಕಳೆದ ಬಳಿಕ ಮೈನಾವತಿಯ ಗಂಡನು, ವ್ಯಾಪಾರ ತೀರಿಸಿಕೊಂಡು ಮನೆಗೆ ಬರುತ್ತಾನೆ. ಮನೆಯಲ್ಲಿರುವ ಹೊಸ ಹೆಣ್ಣು ಮಗಳನ್ನು ಕಂಡು ಅವಳ ಮೇಲೆ ಮನಸ್ಸು ಮಾಡುತ್ತಾನೆ. “ನಿನ್ನದು ಯಾವ ಊರು?” ಎಂದು, ಆಕೆಯ ಹತ್ತಿರಕ್ಕೆ ಹೋಗಿ ಕೇಳುತ್ತಾನೆ. ಹೆಂಡತಿ ನಡುವೆ ಬಾಯಿಹಾಕಿ ಏನೋ ಹೇಳತೊಡಗಲು - “ನೀನು ಸುಮ್ಮನಿರೇ” ಎಂದು ತನ್ನ ತನ್ನ ಹೆ೦ಡತಿಯನ್ನು ಬೆದರಿಸುತ್ತಾನೆ.
ಅ೦ದು ರಾತ್ರಿಯೇ ಮೈನಾವತಿಯ ಗಂಡನು ಸ್ತ್ರೀವೇಷದಲ್ಲಿರುವ ರಾಜ ಕುಮಾರನ ಕೋಣೆಗೆ ಹೋದನು. ಅಲ್ಲಿ ಬನಿಯನ್, ಅ೦ಡರವೇರ್ ಧರಿಸಿ ಮಲಗಿದ್ದ ರಾಜಕುಮಾರನು ಎಚ್ಚತ್ತವನೇ ಜಾಕುವಿನಿಂದ ಆತನ ಮೂಗನ್ನೇ ಬಿಡಿಸಿದನು. ಮೊದಲೇ ಒಕ್ಕಣ್ಣ, ಈಗ ಮೂಗುಬೇರೆ ಕಳಕೊಂಡು ಮತ್ತಿಷ್ಟು ಅವಲಕ್ಷಣವಾದನು.
ರಾಜಕುಮಾರನು ಸೈರ ಮುದುಕಿಯ ಮನೆಗೆ ತೆರಳಿದನು. ಆಗ ಪ್ರಧಾನಿಯ ಮಗನು ಕುದುರೆ ಹಿಡಕೊಂಡು ಮೈನಾವತಿಯ ಮನೆಗೆ ಹೋಗಿ - “ನನ್ನ ಸೊಸೆಯನ್ನು ಕಳಿಸಿರಿ” ಎಂದು ಕೇಳುತ್ತಾನೆ. “ನಿನ್ನ ಮಗನೇ ಕರಕೊಂಡು ಹೋಗಿದ್ದಾನೆ” ಎಂದು ಮೈನಾವತಿಯ ಮಾವನು ಮರುನುಡಿಯುತ್ತಾನೆ.
“ಸೊಸೆಯನ್ನು ತಂದಿಟ್ಟರೆ ಹೀಗೆ ಮಾಡಬೇಕೆ ? ನನ್ನ ಸೊಸೆಯಿಲ್ಲದಿದ್ದರೆ ನಿನ್ನ ಸೊಸೆಯನ್ನು ಕಳಿಸಿಕೊಡಿರಿ. ಯಾರಿಗೆ ಹೇಳುವಿರಿ” ಎಂದು ಮೈನಾವತಿಯನ್ನು ಬಲಾತ್ಕಾರದಿಂದ ಕರಕೊಂಡು ಹೋದನು.
ರಾಜಕುಮಾರನು ಮೈನಾವತಿಯ ಸಂಗಡ ಲಗ್ನ ಮಾಡಿಕೊಂಡನು.
ಜಾಣಸೊಸೆ
ತಂದೆ ಇದ್ದೊಬ್ಬ ಮಗನಿಗೆ ನೆರೆಯೂರಿನ ಒಂದು ಕನ್ನೆಯನ್ನು ತಂದು ಮದುವೆ ಮಾಡಿದ್ದನು. ಆದರೂ ಅವನು ನಿಶ್ಚಿಂತನಾಗಲಿಲ್ಲ. ಸೊಸೆಯು ತನ್ನ ಪರೀಕ್ಷಿಸಿ ನೋಡಬೇಕೆಂದು ತವಕಿಸುತ್ತಿದ್ದನು.
ಒಂದು ದಿನ ತಂದೆ ಮಗನನ್ನು ಕರೆದು ಹೇಳಿದನು - “ಈ ಹೊತ್ತು ಸಂಜೆಯ ಊಟವನ್ನು ಉಣ್ಣದೆ ಮಲಗಿಕೋ, ಬೆಳಗಾಗುತ್ತಲೆ ಉಣಬಡಿಸೆಂದು ನಿನ್ನ ಹೆಂಡತಿಗೆ ಹೇಳು.”
ಮಗನು ತಂದೆಯ ಸೂಚನೆಯಂತೆ ಸಂಜೆಯ ಊಟ ಬಿಟ್ಟುಕೊಟ್ಟನು. ರಾತ್ರಿ ಕಳೆದು ಬೆಳಗಾಗುತ್ತಲೆ “ಊಟಕ್ಕೆ ಕೊಡು” ಎಂದು ತನ್ನ ಹೆಂಡತಿಗೆ ಕೇಳಲು-“ಇಷ್ಟು ತೀವ್ರ ಊಟಕ್ಕೆ ಕೇಳಿದರೆ ನಾನೇನು ಕೊಡಲಿ ? ಹೊತ್ತೇರುವವರೆಗೆ ತಡೆಯಿರಿ” - ಎಂದಳಾಕೆ.
ತನ್ನ ಮಗನನ್ನು ನೋಡಿಕೊಳ್ಳುವ ಸೊಸೆ ಅಲ್ಲ ಈಕೆ - ಎಂದು ಬಗೆದು ಆಕೆಯನ್ನು ತವರುಮನೆಗೆ ಕಳಿಸುವ ವ್ಯವಸ್ಥೆ ಮಾಡಿದನು. ಮನೆಯಲ್ಲಿ ತಂದೆ ಮಗ ಇಬ್ಬರೇ ಉಳಿದರು.
“ಈ ಎಳ್ಳು ಚೀಲವನ್ನು ನೆರೆಹಳ್ಳಿಯ ಸಂತೆಗೊಯ್ದು ಮಾರಿಕೊಂಡು ಬರಬೇಕು” ಎಂದು ತಂದೆ ಮಗನಿಗೆ ಹೇಳಿದನು. “ಯಾವ ಧಾರಣೆಯಿಂದ ಮಾರಬೇಕು” ಎಂದು ಮಗನು ಕೇಳಲು, “ಯಾವ ಮಾಷಿನಿಂದ ಎಳ್ಳು ಅಳೆದು ಕೊಳ್ಳುವರೋ ಅದೇ ಮಾಷಿನಿಂದ ಎಳ್ಳೆಣ್ಣೆ ಪ್ರತಿಯಾಗಿ ತರಬೇಕು” ಎಂದು ತಂದೆ ಹೇಳಿದನು.
ಬಂಡಿಯಿಂದ ಚೀಲಗಳನ್ನಿಳಿಸಿ ಮಗನು ಸಂತೆಯಲ್ಲಿ ಮಾರಲು ಕುಳಿತನು. ಆದರೆ ಆತನ ಧಾರಣಿ ಮಾತ್ರ ಯಾರಿಗೂ ಸರಿಬರಲಿಲ್ಲ. ಎಳ್ಳುಮಾತ್ರ ನೋಡಿದರೆ ಬಿಡಬಾರದು ಎನ್ನುವಂತಿದ್ದವು. ಸಂತೆಯೂರಿನ ಶ್ರೀಮಂತನೊಬ್ಬನು ಆ ಎಳ್ಳು ಬಿಡಬಾರದೆಂದು ಬಗೆದನಾದರೂ ಅದರ ಧಾರಣಿ ತುಂಬಾ ಹಾನಿಕರವೆಂದು ಯೋಚಿಸಿ, ಮನೆಗೆ ಹೋಗಿ ತನ್ನ ಮಗಳಿಗೆ ಎಳ್ಳಿನ ವ್ಯವಹಾರದ ವಿಷಯವನ್ನು ಹೇಳಿದನು. ಮಗಳು ತಂದೆಗೆ ಹೇಳಿದಳು - “ಎಳ್ಳು ಉತ್ತಮವಾಗಿದ್ದರೆ ಮನೆಗೆ ತಂದು ಬಿಡಿರಿ. ಧಾರಣಿಯ ವ್ಯವಹಾರವನ್ನು ನಾನು ನಿಸ್ತರಿಸುತ್ತೇನೆ.”
ಸಾಹುಕಾರನ ಮಗಳು ಎಳ್ಳನ್ನೆಲ್ಲ ದೋಸೆಯ ಹಂಚಿನಲ್ಲಿ ಅಳೆದುಕೊಂಡು, ಅದೇ ಹಂಜಿನಿಂದ ಎಳ್ಳೆಣ್ಣೆಯನ್ನು ಅಳೆದುಕೊಟ್ಟಳು. ಒಂದು ಗಾಡಿ ಎಳ್ಳಿಗೆ ಒಂದು ಕೊಡದಷ್ಟು ಎಳ್ಳೆಣ್ಣೆ ಸಿಕ್ಕಿತು. ಅದನ್ನು ತೆಗೆದುಕೊ೦ಡು ಹೋಗಿ ತಂದೆಗೆ ಒಪ್ಪಿಸಲು, ಆತನು ವ್ಯವಹಾರದ ವಿಷಯವನ್ನೆಲ್ಲ ಕೇಳಿದನು. ಸಾಹುಕಾರನ ಮಗಳ ಜಾಣತನಕ್ಕೆ ಸೈದೂಗಿ ಆಕೆಯನ್ನೇ ತನ್ನ ಸೊಸೆಯಾಗಿ ತಂದುಕೊಳ್ಳಬೇಕೆಂದು ಯೋಜಿಸಿ ಆ ದಿಶೆಯಲ್ಲಿ ಪ್ರಯತ್ನಿಸಿದಾಗ ಅದು ಸಾಧ್ಯವೂ ಆಗಿಬಿಟ್ಟಿತು.
ಹೊಸ ಸೊಸೆ ಬಂದ ಬಳಿಕ ತಂದೆಯು ಮಗನಿಗೆ ಸನಗಿನ ವ್ಯಾಪಾರಕ್ಕೆ ತೊಡಗಿಸಿದನು. ಸನಗಿನ ಗಂಟುಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು, ದೂರ ದೂರದ ಪಟ್ಟಣಗಳಿಗೆ ಹೋಗಿ ಅಲ್ಲಿ ವ್ಯಾಪಾರ ಮಾಡುವುದಕ್ಕೆ ಮಗನು ನಡುಗಟ್ಟಿ ನಿಂತನು.
ಒಂದಾನೊಂದು ಪಟ್ಟಣ. ಅಲ್ಲಿ ಒಬ್ಬ ಪಾತ್ರದವಳು ಜೂಜುಗಾರಿಕೆಯಲ್ಲಿ ಹೆಸರಾದವಳು. ಜೂಜಿನಾಟವು ರಾತ್ರಿಯಲ್ಲಿ ನಡೆಯುವುದು. ಪಾತ್ರದವಳ ಮಗ್ಗುಲಲ್ಲಿ ಕುಳಿತ ಒಂದು ಬೆಕ್ಕಿನ ನೆತ್ತಿಯ ಮೇಲೆ, ಹಣತಿ ದೀವಿಗೆಯನ್ನಿರಿಸಿ ಅದರ ಪ್ರಕಾಶದಲ್ಲಿ ಕವಡಿ ಹಾಕಿ ಜೂಜನಾಡುವುದು. ಆಟ ಆಡುತ್ತಿರುವಾಗ ಆ ಬೆಕ್ಕು ಹಣತಿ ಒಗೆದು ಓಡಿಹೋದರೆ ಆಕೆ ಸೋತಂತೆ. ಅದು ಓಡಿ ಹೋಗದೆ ಕುಳಿತೇ ಬಿಟ್ಟರೆ ಆಕೆ ಗೆದ್ದಂತೆ. ಸೋತವರು ತಮ್ಮ ವಸ್ತುವನ್ನೂ ಧನವನ್ನೂ ಆಕೆಗೊಪ್ಪಿಸಿ ಆಕೆ ಹೇಳಿದಂತೆ ಕೇಳಬೇಕು.
ಸನಗಿನ ವ್ಯಾಪಾರಿಯು ಪಾತ್ರದವಳ ಮನೆಗೆ ಹೋಗಿ ಒಂದು ರಾತ್ರಿ ಜೂಜನಾಡಿ ಸೋತೇಬಿಟ್ಟಿದ್ದರಿ೦ದ ಸನಗಿನ ಗ೦ಟುಗಳು, ಬಳಿಯಲ್ಲಿದ್ದ ಹಣ ಎಲ್ಲವನ್ನೂ ಆಕೆಗೆ ಒಪ್ಪಿಸಬೇಕಾಯಿತು. ಅಂಥ ಜೀತುದಾಳುಗಳದೊಂದು ದವಣಿಯನ್ನೇ ಮಾಡಿದ್ದಳಾಕೆ.
ವ್ಯಾಪಾರಕ್ಕೆಂದು ಹೋದಮಗನ ಸುದ್ದಿ ತಿಳಿಯದೆ ತಂದೆ ಹಾಗೂ ಹೆಂಡತಿ ಚಿ೦ತಿಸತೊಡಗಿದರು. ಅಲ್ಲಲ್ಲಿ ಆಳುಗಳನ್ನು ಕಳಿಸಿ ಹುಡುಕಾಡುವ ಕ್ರಮವನ್ನು ಕೈಕೊಂಡರು. ಸೊಸೆಯು ಒಮ್ಮೆ ಹಳ್ಳಕ್ಕೆ ಬಟ್ಟೆಗಳನ್ನು ಒಗೆಯಲು ಹೋದಾಗ ಆಕೆಗೆ ತೇಲಿ ಬರುವ ಹೂರಣಿಗೆ ಸಿಕ್ಕಿತು. ಅದನ್ನು ಮನೆಗೆ ತಂದು, ಅದರ ದ್ವಾರವನ್ನು ಮೆಲ್ಲಗೆ ತೆರೆದು ನೋಡುವಷ್ಟರಲ್ಲಿ ಒಳಗೆ ಕಾಗದ ಕಾಣಿಸಿತು. ಅದನ್ನು ಹೊರದೆಗೆದು ಕಣ್ಣಾಡಿಸಿದರೆ ಅದು ತನ್ನ ಗಂಡನದೇ ಪತ್ರವೆಂದು ತಿಳಿಯಿತು. ಬಿಚ್ಚಿ ಓದುತ್ತಾಳೆ — ಗಂಡನ ಇಡಿಯ ಕಥೆಯೇ ಅದರಲ್ಲಿದೆ.
ಮಾವನ ಮುಂದೆ ಗಂಡನ ಸಮಾಚಾರವನ್ನೇನೂ ಹೇಳದೆ, "ನಾಲ್ಕುದಿವಸ ತವರು ಮನೆಗೆ ಹೋಗಿ ಬರುತ್ತೇನೆ. ಅವರು ವ್ಯಾಪಾರಕ್ಕೆಂದೇ ಹೋಗಿದ್ದರಿಂದ ನಾಲ್ಕೆಂಟು ಹರದಾರಿ ಮುಂದಿನೂರಿಗೆ ಹೋಗಿದ್ದಾರು. ನಾಲ್ಕು ದಿನ ತಡೆದು ಬಂದಾರು. ಚಿ೦ತಿಸಬೇಡಿರಿ" ಎಂದು ಧೈರ್ಯ ಹೇಳಿ ತನ್ನ ತವರೂರಿಗೆ ತೆರಳಿದಳು.
ಸೊಸೆ ವ್ಯಾಪಾರಿಯ ವೇಷತೊಟ್ಟು ಕುಪ್ಪಸದ ಗಂಟುಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು ಆ ಪಾತ್ರದವಳಿರುವ ಪಟ್ಟಣಕ್ಕೆ ಹೋದಳು. ಸಮಯ ದೊರಕಿಸಿಕೊಂಡು ಪಾತ್ರದವಳ ಮನೆಗೆ ಹೋಗಿ ಜೂಜಿನಾಟದ ಕ್ರಮನಿಯಮಗಳನ್ನೆಲ್ಲ ಅರಿತುಕೊಂಡು ಆಟಕ್ಕೆ ಬರುವೆನೆಂದು ಹೇಳಿ ಬಂದನು ವೇಷಧಾರಿ. ಆ ಬಳಿಕ ಆಟಕ್ಕೆ ಬೇಕಾಗುವ ಪೂರ್ವ ಸಿದ್ಧತೆಯನ್ನೆಲ್ಲ ಒಳ್ಳೆಯ ಯುಕ್ತಿಯರಿತು ಮಾಡಿಕೊಂಡು, ಮೂರು ನಾಲ್ಕು ತಾಸು ರಾತ್ರಿಯಾಗುತ್ತಲೇ ವೇಷಧಾರಿ ಆಕೆಯ ಮನೆಗೆ ತೆರಳಿದನು.
ಆಟವು ಒಳ್ಳೆಯ ಭರಕ್ಕೆ ಬಂದಾಗ ವೇಷಧಾರಿಯು ತನ್ನ ಒಳ ಅಂಗಿಯ ಕಿಸೆಯಲ್ಲಿ ಆದುಮಿಟ್ಟುಕೊಂಡ ಎರಡು ಇಲಿಗಳನ್ನು ಪಾತ್ರದವಳಿಗೆ ಗೊತ್ತಾಗದಂತೆ ಹೊರತೆಗೆದು ಬಿಟ್ಟನು. ಅದನ್ನು ಕಂಡು ಹಣತಿಯನ್ನು ಹೊತ್ತು ಕುಳಿತ ಬೆಕ್ಕು ದೀಪವನ್ನು ಚೆಲ್ಲಿಕೊಟ್ಟು ಇಲಿಗಳ ಬೆನ್ನು ಹತ್ತಿ ಓಡಿತು. ಆ ಕಾರಣದಿಂದ ಪಾತ್ರದವಳು ಅ೦ದಿನ ಜೂಜಿನಾಟದಲ್ಲಿ ಸೋತು ತನ್ನಾಸ್ತಿಯನ್ನೆಲ್ಲ ಆ ಹೊಸ ವ್ಯಾಪಾರಿಗೆ ಒಪ್ಪಿಸಿದಳು.
ವೇಷಧಾರಿಯು, ಆಕೆಗೆ ಸೋತು ಸೆರೆಯಾಳಾಗಿ ಬಿದ್ದವರನ್ನೆಲ್ಲ ಕರೆಯಿಸಿ, ಆ ಗುಂಪಿನಲ್ಲಿ ತನ್ನ ಪತಿಯನ್ನು ಗುರುತಿಸಿ, ಆತನನ್ನುಳಿದು ಉಳಿದವರನ್ನೆಲ್ಲ ಬಿಡುಗಡೆ ಮಾಡಿ ಕಳಿಸಿದಳು. ಉಳಿದುಕೊಂಡ ಸೆರೆಯಾಳು ತನ್ನ ದುರ್ದೈವವಿನ್ನೂ ಹಿಂಗಿಲ್ಲವೆ೦ದು ತಿಳಿದನು. ಮರುದಿನ ಆ ಪಾತ್ರದವಳ ಆಸ್ತಿಯನ್ನೆಲ್ಲ ಗಾಡಿಗಳಲ್ಲಿ ಹೇರಿಸಿಕೊಂಡು ಉಳಿದ ಸೆರೆಯಾಳಿನ ಜೊತೆಗೂಡಿ ತನ್ನೂರ ಹಾದಿಹಿಡಿದನು.
ಅರ್ಧಧಾರಿ ನಡೆದು ಬ೦ದ ಬಳಿಕ ಆ ಸೆರೆಯಾಳಿನ ಕ್ಷೌರಮಾಡಿಸಿ ಉಡುತೊಡಲು ಹೊಸ ಅರಿವೆ ಕೊಟ್ಟನು. ತನ್ನ ವೇಷಬದಲಿಸಿ ಸೀರೆಯುಟ್ಟು ಕುಪ್ಪಸ ತೊಟ್ಟಿದ್ದರಿಂದ ಆತನು ಆಕೆಯನ್ನು ಗುರುತಿಸಿ ಹಿಗ್ಗಿದನೆಂದು ಹೇಳಬೇಕೆ?
ಮುಂದೆರಡು ದಿನ ದಾರಿಸಾಗಿದಾಗ ಅವರೂರು ಬಂತು. ಅವರ ಮನೆಯೂ ಬಂತು. ಮಾವನು ಮನೆಗೆ ಬಂದಾಗ ಸೊಸೆ ಮಗ ಇಬ್ಬರೂ ಕಾಣಿಸಿದರು. ಅದರಿಂದ ಮಾವನಿಗೂ ಹಿಡಿಸಲಾರದಷ್ಟು ಹಿಗ್ಗು. ಸೊಸೆಯು ತಾನು ಗಳಿಸಿಕೊಂಡು ತಂದ ಆಸ್ತಿಯನ್ನೆಲ್ಲ ಮಾವನಿಗೆ ಒಪ್ಪಿಸಿದಳು.
"ಮಗನಗಳಿಕೆಯೆಲ್ಲಿ ಎಂದು ಮಾವ ಕೇಳಿದಾಗ-? ಇದೋ, ಈ ಅರಿವೆ ಗಂಟಿನಲ್ಲಿದೆ. ಎಂದು ಒಪ್ಪಿಸಿದಳು. ಅದನ್ನು ಸಡಗರದಿಂದ ಬಿಚ್ಚಿ ನೋಡಿದಾಗ—ಬೋಳಿಸಿ ತೆಗೆದ ತಲೆಯ ಹಾಗೂ ಗಡ್ಡದ ಕೂದಲು! ಅದರ ಕಥೆಯನ್ನೆಲ್ಲ ಸೊಸೆಯ ಬಾಯಿಂದ ಕೇಳಿ, ಮಗನ ಬಾಳು ಸೊಸೆಯ ಜಾಣತನದಿಂದ ಸುಖಕರವಾಗುವುದರಲ್ಲಿ ಸಂದೇಹವಿಲ್ಲವೆಂದು ಬಗೆದು, ಇನ್ನು ತಾನು ನಿಶ್ಚಿಂತೆಯಿಂದ ಸಾಯುವೆನೆಂದು ಸೊಸೆಗೂ ಮಗನಿಗೂ ಹೇಳಿದನು ಆ ಮುದುಕ.
ಅಭೇದಾ
ತಾಯಿತಂದಿಗಳಿಗೆ ಇಬ್ಬರು ಮಕ್ಕಳು. ಗಂಡೊಂದು ಹೆಣ್ಣೊಂದು.
ಜಂಗಮನೊಬ್ಬ ಭಿಕ್ಷಾಕ್ಕ ಬಂದ—"ನಿಮ್ಮ ಮಗಳೀಗಿ ಸಾಡೇ ಸಾತಿ ಆದ. ಅದ್ರಿಂದ ನಿಮಗೂ ಸುಖ ಇಲ್ಲ. ಅವಳಿಗೂ ಸುಖ ಇಲ್ಲ. ಆಕೀಗಿ ದೂರಮಾಡಬೇಕು. ಅಂದರ ಯಾರಿಗೂ ದುಃಖ ಇಲ್ಲ" ಎಂದು ಹೇಳಿದ.
ಮಗಳಿಗೆ ದೂರಮಾಡಲು ತಾಯಿಯ ಮನಸ್ಸು ಒಪ್ಪಲಿಲ್ಲ. ಅದಕ್ಕಾಗಿ ತಾಯಿತಂದೀನೇ ಹನ್ನೆರಡು ವರುಷದವರೆಗೆ ದೂರ ಹೋದರು. ಮನೆಯಾಗ ಮಗಳೊಬ್ಬಳೇ ಉಳಿದಳು. ನಿತ್ಯ ದೇವರ ಪೂಜಿಮಾಡಬೇಕು, ಭಜನಿ ಕೀರ್ತನಿ ಮಾಡಬೇಕು—ಹೀಗೆ ದಿನ ಕಳೆದಳು. ಜಂಗಮ ಮನಿಯಾಗೇ ಉಳಿದ. ಅವನೀಗಿ ದಿನಾ ಊಟಕ್ಕ ಮಾಡಿ ನೀಡಬೇಕು. ಬಳಿಕ ಭಜನೀ ಮಾಡಕೋತ ಖೋಲ್ಯಾಗ ಒಬ್ಬಳೇ ಕೂಡಲಿಕ್ಕೆ ಹತ್ತಿದಳು. "ಏನು ದಿನಾ ಭಜನೀ ಹಚ್ಚೀದಿ"
ಎಂದು ಜ೦ಗಮ ಕಿಟಿ ಕಿಟಿ ಕೊಡಲಿಕ್ಕೆ ಹತ್ತಿದ. ಒಂದು ದಿನ ಅವಳ ಮೈಮ್ಯಾಗ ಏರಿಹೋದಾಗ ಆಕಿ ಖೋಲ್ಯಾಗ ಕುಂತವಳು ಬಾಗಿಲ ಹಾಕೊಂಡು ಕುಂತೇ ಬಿಟ್ಟಳು. ಎಷ್ಟು ಬಾಗಿಲ ಬಡಿದರೂ ತಗೀಲೇ ಇಲ್ಲ. ನೀರುಬೇಡ, ನಿಡಿಬೇಡ ಎಂದು ಕೂತುಬಿಟ್ಟಳು. ಜಂಗಮ ಅವಳ ತಾಯಿತಂದಿಗೊಳಿಗೆ ಪತ್ರಬರೆದು ತಿಳಿಸಿದ—ಅಭೇದಾಳ ನೀತಿ ಸರಿಯಾಗಿಲ್ಲೆಂದು.
ತಂಗೀಗಿ ಹೋಗಿ ಕಡಿದು ಬಾ ಎಂದು ಅವ್ವ-ಅಪ್ಪ ಮಗನೀಗಿ ಕಳಿಸಿದರು. ಅಭೇದಾ ಎಂದು ಬಾಗಿಲ ಮುಂದ ನಿಂತು ಒದರಿದ. ಅಣ್ಣ ಬಂದಾನೆಂದು ತಿಳಿದು ಬಾಗಿಲು ತೆಗೆದು ಹೊರಗೆ ಬಂದಳು. "ತಾಯಿಗೆ ಜಡ್ಡಾಗಿ ಮಲಗಿದ್ದಾಳೆಂದು" ಸವಿ ಮಾತು ಹೇಳಿ ಕರಕೊಂಡು ಹೊಂಟು ಅಡವ್ಯಾಗ ತಲವಾರ ತೆಗೆದು ಹೊಡೆದರೂ ಅಭೇದಾಳಿಗೆ ತಗುಲಲಿಲ್ಲ. ಗುಂಡಿನಿಂದ ಹೊಡೆದರೂ ಬಡೀಲಿಲ್ಲ. ತಂಗ್ಯಾ ನಿನಗೆ ನನ್ನಿಂದ ಹೊಡೆಯುವದಾಗೂದಿಲ್ಲ. ನಿನಗೆ ಜೀವದಾನ ಮಾಡುತೀನು ಎ೦ದು ಹೇಳಿ, ಆಕೀಗಿ ಒಂದು ಆಲದ ಗಿಡದ ಕೆಳಗೆ ಬಿಟ್ಟು ಹೊಂಟುಹೋದ. ಅಭೇದಾ ಮಾತ್ರ ಆಲದಗಿಡದ ತೊಪ್ಪಲ ತಿಂದು ಇರಲಿಕ್ಕೆ ಹತ್ತಿದಳು. ಮೈ ಮ್ಯಾಗಿನ ಬಟ್ಟೆಯೆಲ್ಲಾ ಚೂರಾಗಿ ಹೋದವು. ಅದಕ್ಕಾಗಿ ಎಲೆಯಾಗ ಮಾನಾ ಮುಚ್ಚಗೊಂಡು ಕುಂತುಬಿಟ್ಟಳು. ದೇವರ ಭಜನಿ ಪ್ರಾರ್ಥನಾ ಸುರು ಇಟ್ಟಳು.
ಒಂದು ದಿನ ರಾಜ ಮತ್ತು ಪ್ರಧಾನಿ ಇಬ್ಬರೂ ಅಡವ್ಯಾಗಿಂದು ಹಾಯ್ದು ಹೊ೦ಟಿದ್ದರು. ಭಜನೀ ಕೇಳಿದರು. ಗಿಡದಾಗ ಯಾರು ಇದ್ದಾರ ಎಂದು ವಿಚಾರ ಮಾಡಲಿಕ್ಕಾಗಿ ತೊಪ್ಪಲ ಧರಿಸಿದ ಹೆಣ್ಣುಮಗಳು ಕಣ್ಣೀಗಿ ಬಿದ್ದಳು. ರಾಜಾ ಬೀಸಿ ಒಗೆದ ಶಾಲು ಉಟಗೊಂಡು ಅಭೇದಾ ಕೆಳಗೆ ಇಳಿದು ಬಂದಳು. ಅವಳ ರೂಪ ನೋಡಿ ರಾಜಾ ಮಳ್ಳಾಗಿ ಬಿಟ್ಟ. ರಾಜಾನ ಜೊತಿಗಿ ಅವಳದು ಲಗ್ನವಾಗಿ ಬಿಟ್ಟಿತು. ಮುಂದೆ ವರ್ಷ ತುಂಬಿ ಒಂದು ಹೆಣ್ಣು ಕೂಸಿಗೆ ಜನ್ಮ ಕೊಟ್ಟಳು. ಮುಂದೆ ನಾಲ್ಕು ವರ್ಷದಾಗ ಒಂದು ಗಂಡು ಕೂಸೂ ಹುಟ್ಟಿತು. ಎರಡೂ ಕೂಸುಗಳು ಪಾಟಿ ಪುಸ್ತಕ ಬೇಡಿ ಅಳಲಿಕ್ಕ ಹತ್ತಿದವು. ತಾನೂ ಸಣ್ಣಾಕಿ ಇದ್ದಾಗ ತಾಯಿ ತಂದೀಗಿ ಸಾಮಾನ ಬೇಡಿ ಅತ್ತ ನೆನಪಾಯಿತು. ಅದರಂಗ ಈಗ ತಾಯಿ ತಂದೀ ನೆನಪು ತಗಿದು ಅತ್ತಳು. ರಾಜಾ ಅಂತಾನ—"ಮನಸೀಗಿ ರಂಜಯಾಕ ಮಾಡಕೋತಿ. ನಿಮ್ಮ ಅವ್ವ ಅಪ್ಪ ಇದ್ದ ಠಿಕಾಣೀ ಹೇಳು. ಹೋಗಾಣು"- ಎಂದನು.
ದಂಡು ಸಮೇತ ಸೇನಾಪತಿ ಪಟ್ಟಣಕ್ಕೆ ಹೋದಳು. ನಡುವೆ ಹಾದ್ಯಾಗ ಒಂದು ಕಡೀ ವಸತಿ ಆಯ್ತು. ಢೇರೆ ಹೊಡೆದು ಅಡಿಗಿ ಅಂಬಲಿ ಎಲ್ಲಾ ಆಯ್ತು. ಅಭೇದಾ ಮತ್ತ ಭಜನೀ ಚಾಲೂಮಾಡಿದಳು. ಪ್ರಧಾನೀಗಿ ರಾಣಿ ಮ್ಯಾಗ ಮನಸ್ಸಾಗಿತ್ತು. ಭಜನಿ ಸಾಕು ಎಂದು ರಾಣೀಗಿ ಒತ್ತಾಯಮಾಡಿದ. ಅವನ ಮನಸ್ಸನಾಗಿಂದು ತಿಳಿದು ರಾಣಿ, ಮಕ್ಕಳ ಜೊತೆ ಕೂಡಿ ಬಾವ್ಯಾಗ ಸಿಡಿದಳು. ಬಾ ಅಂತ ಎಷ್ಟು ಬೇಡಿಕೊಂಡರೂ ರಾಣಿಯೇನೂ ಜಪ್ ಅನ್ಹಿಲ್ಲ. ಸಿಡಿಯ ಮ್ಯಾಗ ಹೋಗಿ ಕುಂತಳು. "ನಾವೆಲ್ಲಿ ಹೋಗಾರಿ" ಎಂದು ಪ್ರಧಾನಿ ಚಿಂತಿಮಾಡಿದ. ರಾಣಿ ಅವ್ವ-ಅಪ್ಪನ ಮನೀಗಿ ಹೋಗ್ಯಾಳ ಎಂದು ಹೇಳಲು ಎಲ್ಲಾ ಸೇವಕರೀಗಿ ತಾಕೀತು ಮಾಡಿದ. ಖರೇ ಹೇಳುವ ಭರದಾಗ ಮಾತ್ರ ಅವಳಿಗಿ ಅಲ್ಲೇ ಅಡಿವ್ಯಾಗ ಬಿಟ್ಟು ತಿರುಗಿ ಅರಮನಿಗಿ ಹೋದರು.
ಈಕಡಿ ಅಭೇದಾ ಮಾತ್ರ ಭಾವಿಯಾಗಿಂದು ಹೊ೦ಟು ಬಂದು, ಗವಾರಿ ದನಾ ಕಾಯುವನ ಕೇಳ್ತಾಳ—"ನೀನಾರು" ಎಂದು.
"ನನಗ ನೀ ಮಾಡಿಕೊಂತಿಯೇನು?"
"ನಾ ಮಾಡಿಕೊಂತೀನಿ. ಆದರ ನೀ ಉಟ್ಟ ಬಟ್ಟೇ ಕೊಡಬೇಕು. ನಾ ರಾತ್ರಿ ಬಂದು ಗುಡ್ಯಾಗ ಮಿಲಾಸಬೇಕು" ಎಂದು ವಚನಕೊಟ್ಟಳು.ಅಭೇದಾ ದನ ಕಾಯುವನ ಬಟ್ಟೇ ತಗೊಂಡು, ಕ್ಯಾವಿ ಬಣ್ಣದ ನೀರಾಗ ಎದ್ದಿದಳು. ಗಂಡಸರದು ಜುಬ್ಬಾ ಹಾಕೊಂಡು ಸೇನಾಪತಿ ಪಟ್ಟಣಕ ಹೊ೦ಟಳು. ಭಜನಿ ಕೀರ್ತನ ಹಾಡಕೋತ. ಊರಾಗ ಹೊಂಟಾಗ ಜನ ಭಕ್ತೀಲೆ ಅಡ್ಡಬಿತ್ತು ಅಂದು ಸೇನಾಪತಿ ಪಟ್ಟಣದಾಗ ಅಭೇದಾ ಕೀರ್‍ತನ ಹೇಳಿದಳು.
ರಾಜಾ ಹೇಣತೀಗಿ ಹುಡುಕಲಿಕ್ಕ ಬಂದ. ಗವಾರಿ ದನ ಕಾಯುವವ ಪ್ರಧಾನಿ ಬಂದರು. ಗುಡ್ಡದೊಳಗಿನ ಜಂಗಮ ಬಂದ. ತಾಯಿ ತಂದೀನೂ ಬಂದರು. ಅವರೆಲ್ಲರ ಮುಂದೆ ಅಭೇದಾ ತನ್ನ ಕತೀನೇ ಕೀರ್ತನೆ ಮಾಡಿ ಹೇಳಿದಳು. ಅವರೆಲ್ಲ ಕೇಳಿದರು. ಕೀರ್ತನಾ ಮುಗಿಸಿ ಭಜನೀ ಮಾಡಕೋತ ಕುಂತಾಗ ತಾಯಿ ಮಗಳ ಖೂನಾ ಹಿಡಿದಳು. ರಾಜಾ ಅಭೇದಾಳ ಕತಿಕೇಳಿ ಖೂನಾ ಹಿಡಿದ. ಆಗ ಅಭೇದಾ ಸಾಧೂರ ಬಟ್ಟೀ ತಗಿದು ತನ್ನ ಪರಿಚಯ ಹೇಳಿದಳು. ಎಲ್ಲರೂ ಮುಂದ ಸುಖದಿಂದ ಇದ್ದರು.
ಮಲವಯ್ಯ ಶೆಟ್ಟಿ
ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿ ಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆ೦ದು ತೋರುತ್ತದೆ.
ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟಿದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್ಲಿ ತಂಬುಲದ ಚೀಲು. ಅದೆಲ್ಲ ಘಟ್ಟದ ಸಾರಿಗೆಯ ಸಿಂಗಾರ. ಕರೀಯೆತ್ತಿಗೆ ಕಮಲದ ಹೂ. ಬಿಳಿಯೆತ್ತಿಗೆ ಗೆಜ್ಜಿಸರ. ಸಾರಂಗದೆತ್ತಿಗೆ ಸರಗಂಟಿ ಕಟ್ಟಿದ್ದಾನೆ.
ಬಟ್ಟಲಲ್ಲಿ ಉಂಡು, ತೊಟ್ಟಲಲ್ಲಿ ಆಡುವ ತಂಗಿಯನ್ನು ಬಿಟ್ಟು ಶೆಟ್ಟಿ ಮಲ್ಲಾಡ ದೇಶಕ್ಕೆ ಹೊರಟಿದ್ದಾನೆ. ಅಂಗಳದಲ್ಲಿ ಆಡಿ, ಗಂಗಾಳದಲ್ಲಿ ಉಣ್ಣುವ ತಂಗಿಯನ್ನು ಬಿಟ್ಟು ಶೆಟ್ಟಿ ಘಟ್ಟದ ಸಾರಿಗೆಗೆ ಹೊರಟಿದ್ದಾನೆ.
ಶುಂಠಿ, ಮೆಣಸು, ಯಾಲಕ್ಕಿ, ಲವ೦ಗ ಇವುಗಳನ್ನೆಲ್ಲ ಹೇರು ಹೇರು ಖರೀದಿ ಮಾಡಿದ್ದಾನೆ. ಉತ್ತತ್ತಿ, ಅಡಿಕೆ ಎರಡೆರಡು ಹೇರು ಖರೀದಿ ಮಾಡಿದ್ದಾನೆ. ತನ್ನ ಕರಿ ಎತ್ತು, ಬಿಳಿ ಎತ್ತು, ಸಾರಂಗದ ಎತ್ತುಗಳ ಮೇಲೆ ಆ ಹೇರುಗಳನ್ನೆಲ್ಲ ಹೇರಿಕೊಂಡು ಘಟ್ಟ ಇಳಿದು ಬಯಲುನಾಡಿಗೆ ಬಂದನು. ಬರುವಾಗ ದಾರಿಯಲ್ಲಿ ವಿಜಯನಗರವನ್ನು ದಾಟಿ ಬಾದಾಮಿಗೆ ಬಂದು ಸಂಗನಬಸವನ ಗುಡಿಯ ಮುಂದೆ ತನ್ನ ಹೇರು ಇಳಿಸಿ, ವಿಶ್ರಾಂತಿಗಾಗಿ ತ೦ಗಿದನು. ಅಲ್ಲಿಯ ಪೇಟೆಯಲ್ಲೆಲ್ಲ ಅಡ್ಡಾಡಿ, ಕೊಂಡುಕೊಳ್ಳಬೇಕಾದುದನ್ನು ಕೊಂಡುಕೊಂಡು ಬರುವಾಗ ಅಲ್ಟೊಬ್ಬ ಥಾಟಗಿತ್ತಿಯನ್ನು ಕಂಡನು. ಆಕೆ ಬಾದಾಮಿಪೇಟೆಯ ಬಸವಿ.
ಶೆಟ್ಟಿ ಊರು ಬಿಟ್ಟು ಹನ್ನೆರಡು ವರ್ಷವಾಗಿತ್ತು. ಮನಸ್ಸು ಚಂಚಲವಾಯಿತು, ಶೆಟ್ಟಿ ಆ ಥಾಟಗಿತ್ತಿಗೆ ಹೇಳಿಕಳಿಸಿದನು.
ತುಂಬಿಸೂಸುವ ಬೆಳದಿಂಗಳಿನಲ್ಲಿ ಇಂಬಾದ ಸೆಳೆಮಂಚ; ದಿಂಬಿಗೊರಗಿ ಮಲಗಿದ್ದಾಳೆ ಆ ಬಸವಿ. ಶೆಟ್ಟಿಯಾದರೋ ಸಿಂಗಾರವನ್ನೇ ಉಟ್ಟು, ಸಿ೦ಗಾರವನ್ನೇ ತೊಟ್ಟು ಆ ಬಸವಿಯ ಮನೆಗೆ ಹೋದನು.
ಆದರೆ ವಿಧಿಯು ಅಲ್ಲೊಂದು ಬೇರೆ ಆಟ ಹೂಡಿದೆ.
ಶೆಟ್ಟಿ ಬಸವಿಗೆ ಎಲೆಕೊಡಹೋದನು. ಅಡಿಕೆ ಕೊಡಹೋದನು. ಕೊಡ ಮಾಡಿದ ಎಲೆ ಅಡಿಕೆ ಉಡಿಯಲ್ಲಿ ಬೀಳದೆ ಕಡೆಗೆ ಬಿದ್ದವು.
"ಅತ್ತ ಇತ್ತ ನೋಡುತ್ತೀಯಲ್ಲ! ಚಿತ್ತ ಎರಡು ಮಾಡುತ್ತಿಯಲ್ಲ!! ಮನಸ್ಸಿಲ್ಲದಿದ್ದರೆ ಮಾತನ್ನೇಕೆ ಕೊಟ್ಟೆ?"ಎಂದು ಕೇಳಿದನು ಶೆಟ್ಟಿ
"ಅತ್ತ ಇತ್ತ ನೋಡಿಯೇ ಇಲ್ಲ. ಚಿತ್ತ ಎರಡು ಮಾಡಿಯೇ ಇಲ್ಲ.ಮಲವೈನ ಆಣೆಮಾಡಿ ಹೇಳುತ್ತೆನೆ. ನನ್ನ ಮನಸ್ಸು ಎರಡಿಲ್ಲ" ಎಂದಳಾಕೆ.
"ಮಲವೈನ ಹೆಸರುಗೊಂಡಿ. ಆತನ ಆಣೆ ಮಾದಡಿದಿ. ಮಲವೈಶೆಟ್ಟಿ ನಿನಗೇನಾಗಬೇಕು? ನಿನ್ನ ಹುಟ್ಟಿದೂರು ಯಾವುದು? ಯಾವ ಊರಿಗೆ ನಿನ್ನನ್ನು ಕೊಟ್ಟಿದ್ದು? ಎಲ್ಲವನ್ನೂ ಸರಿಯಾಗಿ ಹೇಳು. ತಂದೆಯ ಹೆಸರೇನು, ತಾಯಿಯ ಹೆಸರೇನು? ಒಡಹುಟ್ಟಿದ ಅಣ್ಣನ ಹೆಸರೇನು?" ಎಂದು ಕೇಳಿದ ಶೆಟ್ಟಿಗೆ ಬಸವಿ ಈ ರೀತಿಯಾಗಿ ಮರುನುಡಿಯುತ್ತಾಳೆ-
"ತಂದೆ ಸುಂಕುಬಾಳ, ತಾಯಿ ಗಂಗಾಬಾಳ. ಒಡಹುಟ್ಟಿದ ತಂಗಿಯ ಹೆಸರು ಮಾಸುಂದರಿ. ಅಣ್ಣ ಮಲವೈಯ ಶೆಟ್ಟಿ". ಬಸವಿ ಮರುನುಡಿಯುವಾಗ ಶೆಟ್ಟಿಯು ಆಕೆಯ ಮುಖನೋಡಿ, ಹಣೆಯ ಮೇಲಿರುವ ಕಲೆ ಕಂಡು ದಿಗ್ಬ್ರಮೆಗೊಂಡನು. ತೊಟ್ಟಿಲಲ್ಲಿ ಆಡುವಾಗ ಬಟ್ಟಲಲ್ಲಿ ಕುಡಿಯುವಾಗ ಕಟ್ಟೆಯ ಕೆಳಗೆ ಬಿದ್ದ ಕಚ್ಚು ಕಂಡನು ಆ ಶೆಟ್ಟಿ ಬಿಟ್ಟು. "ಹುಟ್ಟುದಟ್ಟಿಯುಟ್ಟು ಬಟ್ಟಲದನ್ನ ಉಣ್ಣುವಾಗ ನನ್ನ ಮಲವಯ್ಯ ಶೆಟ್ಟಿ ಬಿಟ್ಟು ಹೋಗಿದ್ದಾನೆ. ದುರ್ದೈವದಿಂದ ದಿಕ್ಕುಗೇಡಿಯಾದೆ. ಬಾಳಾಸಾನಿ ಎತ್ತಿಕೊಂಡಳು. ಬಾದಾಮಿ ಪೇಟೆಗೆ ನನ್ನನ್ನು ಬಸವಿ ಬಿಟ್ಟಳು."
"ನನ್ನನ್ನು ನಾನು ಕಡಿದುಕೊಳ್ಳಲಾ, ತಂಗೀ, ಇರಿದು ಕೊಳ್ಳಲಾ? ಅಲಗು ಕಟ್ಟಿ ಅದಕ್ಕೆ ಹಾಯಲೇನೇ ತಂಗೀ"ಎಂದು ಹಲ್ಲುಬಿದನು ಶೆಟ್ಟಿ.
"ಕಡಿದುಕೊಳ್ಳುವುದೂ ಬೇಡ; ಅಣ್ಣಯ್ಯ, ಇರಿದು ಕೊಳ್ಳವುದೂ ಬೇಡ. ಅಲಗು ಕಟ್ಟಿ ಅದನ್ನು ಹಾಯುವುದೂ ಬೇಡ. ಅಣ್ಣಯ್ಯ. ಅಣ್ಣಯ್ಯ.ಊರ ಕೋಟೆಯನ್ನು ದಾಟಿದರೆ ಮೂಡಣದ ಕೊಳ್ಳದಲ್ಲಿ ಕೋಟಿಲಿಂಗಗಳು ನೆನೆದಿವೆ. ಅಂಗವನ್ನೇ ವಸ್ತ್ರಮಾಡಿ ಲಿಂಗವನ್ನು ಪೂಜಿಸಿ ನಿನಗೆ ತಟ್ಟಿದ ಇಂದಿನ ಪಾಪವನ್ನು ಹಿಂಗಿಸಣ್ಣ. ಗೋಕಾವಿ ನಾಡಿಗೆ ಹೋಗಿ ಒಂದು ಹಿಂಡು ಆಕಳು ತೆಗೆದುಕೊಂಡು ಬಂದು, ಕೊಳಗೆ ಮೆಟ್ಟಿ ಕೊಂಬ ನೀ ದಾನ ಮಾಡಣ್ಣ. ಆವಾಗ ನಿನ್ನ ಪಾಪ ಪರಿಹಾರ ಅಣ್ಣಯ್ಯ" ಎಂದು ಉಸುರಿದಳು ಆ ತಂಗಿ.
ಹೆಂಡತಿಗೆ ಹೊಡೆಯಬೇಕೆನ್ನುವ ರಾಜ
ಇಬ್ಬರು ಗಂಡ ಹೆಂಡತಿ ಇದ್ದರು. ಅವರಿಗೆ ಒಬ್ಬಾಕೆ ಮಗಳು ಮಾತ್ರ ಇದ್ದಳು. ಅಪ್ಪ ಹೊಲಕ್ಕೆ ಹೋಗಿದ್ದಾನೆ; ತಾಯಿ ಹೊರಕ್ಕೆ ಹೋಗಿದ್ದಾಳೆ; ಮಗಳು ಹೊರಕಡಿಗೆ ಹೊರಟಳು. ಹಾದಿಯಲ್ಲೊಂದು ಮನೆ. ಮನೆಯಲ್ಲಿ ಗಂಡನಾದವನು ಹೆಂಡತಿಗೆ ಹೊಡೆಯುತ್ತಿದ್ದನು. ಮೂರುದಿನಕ್ಕೊಮ್ಮೆ ಗಂಡ ಯಾಕೆ ಹೊಡೆಯುತ್ತಾನೆ? "ಯಾರು ತಿಂತಾರವ್ವ ಹೀಂಗ ದಿನಾಲು ಏಟು. ಏನು ತಪ್ಪುಮಾಡ್ಯಾಳೋ ಯಾನೋ" ಎನ್ನುತ್ತಾಳೆ ಆ ಮಗಳು. ಅಷ್ಟರಲ್ಲಿ
ರಾಜ ಮತ್ತು ಪ್ರಧಾನಿ ಇಬ್ಬರೂ ವಾಯುಸೇವನೆಗೆ ಹೊರಟಿದ್ದರು. ಪ್ರಧಾನಿಯು ರಾಜನಿಗೆ ಸಲಹೆ ಕೊಡುತ್ತಾನೆ—"ಈ ಹೆಣ್ಣುಮಗಳು ಚಪಲ ಕಾಣಿಸುತ್ತಾಳೆ. ಇವಳನ್ನು ಮಾತಾಡಿಸಿ ನೋಡೋಣ."
ಆ ಹೆಣ್ಣು ಮಗಳಿಗೆ ರಾಜನು ಕೇಳುತ್ತಾನೆ—"ಮಗಾ, ನಿಮ್ಮಪ್ಪ ನಿಮ್ಮವ್ವ ಎಲ್ಲಿ ಹೋಗಿದ್ದಾರೆ?"
ಆಕೆ ಮರು ನುಡಿಯುತ್ತಾಳೆ—"ಅಪ್ಪ ಮುಳ್ಳಿನ ಗಿಡಕ್ಕೆ ಮುಳ್ಳುಹಚ್ಚಲು ಹೋಗಿದ್ದಾನೆ. ಖಂಡದೊಳಗಿನ ಖಂಡ ತೆಗೆಯಲು ಅವ್ವ ಹೋಗಿದ್ದಾಳೆ."
"ಯಾವಾಗ ಬರುತ್ತಾರೆ?"
"ಹೊತ್ತು ಮುಳಗಿದ ಬಳಿಕ ಬರುತ್ತಾರೆ"
ವಿಷಯ ಗೊತ್ತಾಯಿತು. ಅವರು ಬ೦ದ ಬಳಿಕ ಕೇಳೋಣ ಎಂದು ರಾಜ ಹಾಗೂ ಪ್ರಧಾನಿ ಮಾತಾಡಿಕೊಂಡರು.
ತಾನು ಬದನೀಗಿಡಕ್ಕೆ ಮುಳ್ಳು ಹಚ್ಚಲು ಹೋಗಿದ್ದೇನೆಂದು ತಂದೆ ಹೇಳಿದನು. ಹಡೆಯಲಾರದೆ ನಿಂತ ಹೆಂಗುಸಿಗೆ ಹಡೆಯುವಂತೆ ಮಾಡಲು ಹೋಗಿದ್ದೆನೆಂದು ತಾಯಿ ಹೇಳಿದಳು.
ಆ ಹುಡಿಗೆಯ ಮಾತಿನ ಕುಶಲತೆಯನ್ನು ರಾಜನು ಮೆಚ್ಚುವನು. ಅವಳನ್ನು ಮದುವೆಯಾಗಬೇಕೆಂದು ನಿರ್ಧರಿಸುತ್ತಾನೆ. ಮಗಳು ಸುಖದಲ್ಲಿ ಬೀಳುವಳೆಂದು ಅಪ್ಪನು ಮಗಳನ್ನು ರಾಜನಿಗೆ ಕೊಟ್ಟು ಲಗ್ನ ಮಾಡುತ್ತಾನೆ.
ರಾಜನು ಹೊಸ ಹೆಂಡತಿಯನ್ನು ಕರಕೊಂಡು ತನ್ನ ಮನೆಗೆ ಹೋಗುತ್ತಾನೆ.ಆ ಬಳಿಕ ಹೆಂಡತಿಗೆ ಹೇಳುತ್ತಾನೆ. — "ನಾವು ಬೇಟೆಯಾಡಲು ಎಕ್ಕೀಹಳ್ಳಿಗೆ ಹೋಗುವೆವು. ನಾವು ಬರುವಷ್ಟರಲ್ಲಿ ಹನ್ನೆರಡು ಮೊಟ್ಟೆ ನಡೆಯುವ ಭಾರಂಗ ಭಾವಿಯನ್ನು ಅಗಿಸಬೇಕು. ಜವೆ, ಮೆಂತಿ ಬೆಳೆಯುವ ತೋಟ ತಯಾರಮಾಡಬೇಕು. ಈಗ ಮಲ್ಲಿಗೆ ಹೂವಿನ ಸರವನ್ನು ನಿನ್ನ ಕೊರಳಲ್ಲಿ ಹಾಕುತ್ತೇನೆ. ಅದು ಬಾಡಲಾರದಂತೆ ನೋಡಿಕೊಳ್ಳಬೇಕು. ಅಲ್ಲಿಗೆ ನಾ ಬರುವಷ್ಟರಲ್ಲಿ ಒಂದು ಮಗಾ ತಯಾರು ಮಾಡಬೇಕು."
ರಾಜನು ಬೇಟಿಯಾಡುವುದಕ್ಕೆ ಹೊರಟುಹೋದನು.
ಹೆಂಡತಿ ಕೈಯೊಳಗಿನ ದುಡ್ಡು ಖರ್ಚುಮಾಡಿ ಭಾರಂಗ ಭಾವಿ ಅಗಿಸಿದಳು. ಮೊಟ್ಟೆ ಹೊಡಿಸಿ ತೋಟ ತಯಾರಿಸಿದಳು.
ಗಂಡಸಿನ ವೇಷತೊಟ್ಟು ಹೊರಬಿದ್ದಳು. ಒಂದೂರು ದಾಟಿ ಸಾಗಿದಾಗ ಅಲ್ಲಿಯ ರಾಜನ ಮಗಳು ಮಾಡಿದ ಶಪಥವನ್ನು ಕೇಳಿದಳು. ಏನೆಂದರೆ ಹರಿಯುವ ನೀರ ಮೇಲಿಂದ ಕುದುರೆ ಹಾರಿಸಬೇಕು. ಕುದುರೆಗೆ ನೀರು ತಟ್ಟಬಾರದು. ಅ೦ಥವರನ್ನು ತಾನು ಲಗ್ನವಾಗುತ್ತೇನೆ. ಗಂಡು ವೇಷದಲ್ಲಿದ್ದ ಆ ಹೆಣ್ಣು ಮಗಳು ನದಿಯ ಮೇಲಿಂದ ಕುದುರೆಯನ್ನು ಹಾರಿಸಿದಳು, ಚಬಕಿಯಿ೦ದ ಹೊಡೆದು, ಅದನ್ನು ಕಂಡು ರಾಜನ ಮಗಳು ಲಗ್ನ ಮಾಡಿಕೊಳ್ಳಲು ಮುಂದೆ ಬಂದಳು.
ಪಂಥ ಗೆದ್ದಿದ್ದಕ್ಕಾಗಿ ಪಂಥದ ವೀಳೆ ಎತ್ತಲಾಯಿತು. ಆದರೆ ಸದ್ಯಕ್ಕೆ ತನ್ನದೊಂದು ವ್ರತವಿದೆಯೆಂದೂ ಈಗ ಲಗ್ನವಾಗಲಾರೆನೆಂದೂ ಪುರುಷ ವೇಷದಲ್ಲಿರುವ ಹೆಣ್ಣು ಮಗಳು ಹೇಳಿದಳು. ಆದ್ದರಿಂದ ತಲವಾರದೊಂದಿಗೆ ಲಗ್ನ ಮಾಡಿಕೊಳ್ಳುವುದು ನಿರ್ಧಾರವಾಯಿತು. ಹಾದಿಗೆ ಹಂದರ ಹಾಕಿ, ಬೀದಿಗೆ ಛಳಿ ಕೊಟ್ಟು ಲಗ್ನವನ್ನು ಸಡಗರದಿಂದ ಮಾಡಿದರು. ರಾಜನ ಮಗಳನ್ನು ಕರಕೊಂಡು ಮುಂದೆ ಹೊರಟಳು.
ಎಕ್ಕೆಹಳ್ಳಿಯನ್ನು ತಲುಪಿದಳು. ಅಲ್ಲಿ ಪಾತರನಾಚು ನಡೆದಿದೆಯೆಂದು ಕೇಳಿ, ನೆಟ್ಟಗೆ ಪಾತರದವರ ಮನೆಗೆ ಹೋದಳು. ದಾಸಿಯರಿಗೆ ಹೇಳಿ ಸೀರೆ ಸಜ್ಜುಮಾಡಿಕೊಂಡಳು. ಬೇಟೆಯಾಡಲು ಹೋದ ರಾಜನ ಎದುರಿಗೆ ನಾಚು ಮಾಡಿದಳು. ರಾಜನು ಹೆಂಡತಿಯನ್ನು ಗುರುತಿಸಲಿಲ್ಲ. ರಾಜನ ಮನಸ್ಸು ಮಾತ್ರ ಅವಳ ಮೇಲೆ ಕುಳಿತಿತು. ರಾಜನ ಸಂಗಡ ಅಂದಿನ ರಾತ್ರಿ ಕಳೆದಳು. ಬೆಳಗಾಗುತ್ತಲೆ ರಾಜನ ಕೈಯೊಳಗಿನ ಉಂಗುರ ಮತ್ತು ಶಾಲು ಇಸಗೊಂಡಳು. ಅಲ್ಲದೆ ಒ೦ದು ಚೇಟಿಯನ್ನೂ ಬರೆಯಿಸಿಕೊಂಡಳು. ಎರಡು ರಾತ್ರಿ ಕಳೆದು ಆಕೆ ಹೋಗಿಬಿಟ್ಟಳು.ರಾಜಧಾನಿಗೆ ಬಂದಳು. ಅಷ್ಟರಲ್ಲಿ ಭಾರಂಗ ಭಾವಿ ತಯಾರಾಗಿದೆ. ರಾಜನ ಮಗಳನ್ನು ಒಳಗೆ ಕರೆದು ಸೀರೆಯುಟ್ಟು ನುಡಿಯುತ್ತಾಳೆ - "ತಂಗೀ, ಇದೆಲ್ಲ ನಮ್ಮದೇ. ಹಿಂದಿನಿಂದ ನಿನ್ನ ಗಂಡ ಹೊರಟಿದ್ದಾನೆ. ನೀ ಏನೂ ಕಾಳಜಿ ಮಾಡಬೇಡ."
ಮುಂದೆ ಬಯಕೆ ಕಾಡಹತ್ತಿ ಒಂಬತ್ತು ತಿ೦ಗಳು ಒಂಬತ್ತು ದಿನಕ್ಕೆ ಗಂಡು ಮಗುವಿಗೆ ಜನ್ಮವಿತ್ತಳು.
ರಾಜ ಬರುತ್ತಾನೆ. ಹೆಂಡತಿಯನ್ನು ಯಾವಾಗ ಹೊಡೆಯಲಿ ಎಂದು ವಿಚಾರಿಸುತ್ತಾನೆ. ತಾನು ಬರುವಷ್ಟರಲ್ಲಿ ಭಾರಂಗ ಭಾವಿ ತಯಾರಾಗಿದೆ. ಅರಮನೆಗೆ ಬರುತ್ತಾನೆ. "ನೀರು ಕುಡಿಯಿರಿ" ಎ೦ದು ಹೆಂಡತಿ ಸ್ಥಾಗತಿಸುತ್ತಾಳೆ. ಬಗಲಲ್ಲಿ ಕೂಸು ಇದೆ. ಕೊರಳೊಳಗಿನ ಹೂವಿನ ಸರ ಬಾಡಿಲ್ಲ.
"ಮಗಾ ಎಲ್ಲಿಯದು?" ಎಂದು ಹೆಂಡತಿಗೆ ಕೇಳಿದರೆ ಆಕೆ ಉಂಗುರ, ಶಾಲು ಮತ್ತು ಚೀಟಿ ತೋರಿಸುತ್ತಾಳೆ. ರಾಜನ ಸಿಟ್ಟೆಲ್ಲ ಇಳಿಯುತ್ತದೆ. ತಾನು ಕೇಳಿದಂತೆ ಮೊಟ್ಟೆಯಿದೆ; ತೋಟವಿದೆ. ಮೇಲೆ ಮಗನೂ ಹುಟ್ಟಿದ್ದಾನೆ. ಇಷ್ಟಾದ ಬಳಿಕ ಹೊಸ ರಾಜಕುಮಾರಿಯೂ ಬಂದಿದ್ದಾಳೆ.
ಈ ಎಲ್ಲ ಐಶ್ಚರ್ಯವನ್ನು ನೋಡಿ ರಾಜನಿಗೆ ಸುಖವೆನಿಸಿತು. ಹೆಂಡತಿಯನ್ನು ಹೊಡೆಯುವ ವಿಚಾರವನ್ನು ಬಿಟ್ಟುಕೊಟ್ಟನು.
ಕಳ್ಳನ ಮಗಳು
ತಾಯಿಗೊಬ್ಬ ಮಗ ಇದ್ದನು. "ಗಳಿಸಿಕೊಂಡು ಬರುತ್ತೇನೆ. ರೊಕ್ಕ ತರುತ್ತೇನೆ. ನೂರು ರೂಪಾಯಿಕೊಡು" ಎಂದು ಮಗನು ತಾಯಿಗೆ ಕೇಳುತ್ತಾನೆ. "ಮಗನೇ, ನೀನು ಮೊದಲೇ ಮರುಳ. ನೀನು ಗಳಿಸುವುದು ಸುಳ್ಳು ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಬಾರದೇ"- ಎಂದು ಅವ್ವ ಹೇಳಿದಳು. ಆದರೂ ಒತ್ತಾಯ ಮಾಡಿದ್ದರಿಂದ ತಾಯಿ ರೊಕ್ಕ ಕೊಟ್ಟು ಕಳುಹಿಸುತ್ತಾಳೆ.
ಹಾದಿಯಲ್ಲಿ ಒಬ್ಬ ಹುಡುಗನು ಸೀಸೆಯಲ್ಲಿ ನೀರುಹಾಕಿ ಅದರೊಳಗೆ ಕಪ್ಪೆ ಬಿಟ್ಟು ಓಡಾಡಿಸುತ್ತಿದ್ದನು. ಮಗನು ಆತನಿಗೆ ನೂರು ರೂಪಾಯಿಕೊಟ್ಟು ಸೀಸೆ ತೆಗೆದುಕೊಂಡು ಮನೆಗೆ ಬಂದನು. ತಾಯಿ ಸಿಟ್ಟಿಗೆ ಬಂದು ಸೀಸೆ ಒಡೆದುಬಿಟ್ಟಳು. ಕಪ್ಪೆ ಜಿಗಿಯಲಿಕ್ಕೆ ಹತ್ತಿತು. ಕಪ್ಪೆ ಅಂದಿತು. "ನನ್ನನ್ನು ನೀರೊಳಗಿಂದ ಹೊರಗೆ ಹಾಕಿದೆ. ನಾನು ಹೇಗೆ ಇರಲಿ? ನನ್ನನ್ನು ಒಂದು ಭಾರಂಗ ಬಾವಿಯಲ್ಲಿ ಬಿಡು. ಹಾಗೆ ಮಾಡಿದರೆ ನಾನು ನಿನಗೆ ಎರಡು ಬಂಗಾರಲಾಲ ಕೊಡುತ್ತೇನೆ." ಸೆಲ್ಲೆಯೊಳಗೆ ಕಪ್ಪೆ ಸುತ್ತಿಕೊಂಡು ಹೋಗಿ ಬಾವಿಯೊಳಗೆ ಬಿಟ್ಟನು. ಕಪ್ಪೆಯು ಆತನಿಗೆ ಎರಡು ಬಂಗಾರಲಾಲ ಕೊಟ್ಟು ನೀರಲ್ಲಿ ಜಿಗಿಯಿತು. ಬಂಗಾರದ ಲಾಲಗಳನ್ನು ತೆಗೆದುಕೊಂಡು ಆ ತಾಯಿಯ ಮಗನು ಮನೆಯ ಹಾದಿ ಹಿಡಿದನು.
ಕಪ್ಪೆಯು ಆತನಿಗೆ ಬಂಗಾರದ ಲಾಲಗಳನ್ನು ಕೊಡುವಾಗ ಒಬ್ಬ ಕಳ್ಳನು ಕಣ್ಣಿಟ್ಟಿದ್ದನು. ಮಗನು ಮನೆಗೆ ಹೊರಟಾಗ ಕಳ್ಳನು ಅವನ ಬೆನ್ನು ಹತ್ತಿಬಿಟ್ಟನು. ಆ ಕಳ್ಳನ ಕೈಯೊಳಗಿಂದ ಹೇಗೆ ಪಾರಾಗಬೇಕೆನ್ನುವುದೇ ಅವನಿಗೆ ದಿಗಿಲು ಹಿಡಿದಿತ್ತು. ಸರಕ್ಕನೇ ಓಡಿಬಂದು ಹತ್ತಿಪ್ಪತ್ತು ಜನರಿದ್ದಲ್ಲಿ ಹೋಗಿ ಕುಳಿತನು. "ಯಾಕಪ್ಪ ಈತ ಹೀಗೇಕೆ ನನ್ನ ಬೆನ್ನ ಬಿಡವೊಲ್ಲದಾಗಿದ್ದಾನೆ" ಎಂದು ಬಾಯಿ ಹೊಲಿದುಕೊಂಡು ಕುಳಿತಾಗ ಕಳ್ಳನು ಆ ಹತ್ತುಮಂದಿ ಮುಂದೆ ಬಂದು ಹೇಳುತ್ತಾನೆ.
"ಈ ಹುಡುಗನಿಗೆ ನನ್ನ ಮಗಳನ್ನು ಕೊಟ್ಟಿದೆ. ಒಲ್ಲೆನೆಂದು ಓಡಿ ಹೊರಟಿದ್ದಾನೆ. ನೀವಾದರೂ ಇವನಿಗೆ ಬುದ್ಧಿ ಹೇಳುವಂತಿದ್ದರೆ ಹೇಳಿರಿ." ಅದನ್ನು ಕೇಳಿ ಆ ಹುಡುಗನು ಗಾಬರಿಗೊಂಡು ಹೇಳುತ್ತಾನೆ—"ಈತನೇನು ನನ್ನ ಮಾವ ಅಲ್ಲ. ನಾನು ಇವನಿಗೆ ಅಳಿಯನಲ್ಲ. ನನ್ನ ಹೆಂಡತಿ ಮನೆಯಲ್ಲಿದ್ದಾಳೆ."
"ನಿಜವಾಗಿಯೂ ಈತ ನನ್ನ ಅಳಿಯ. ಈಗ ಓಡಿಹೊರಟಿದ್ದಾನೆ" ಎಂದು ನುಡಿದನು ಆ ಕಳ್ಳ.
ನೆರೆದ ಮಂದಿ ಅಂದಿತು—"ನಿನ್ನ ಮಗಳನ್ನು ಕರೆತಾ. ಆಕೆ ಬಂದು ಈತನ ಕೈಹಿಡಿದಳೆಂದರೆ ಇವನೇ ಅವಲಗಂಡ ಎಂದು ಖಾತರಿಯಾಗುತ್ತದೆ."
ಕಳ್ಳನು ಮನೆಗೆ ಹೋಗಿ ಮಗಳಿಗೆ ಹೇಳುತ್ತಾನೆ—"ಅಲ್ಲೊಬ್ಬ ಬೆಳ್ಳಗೆ ತೆಳ್ಳಗೆ ಇದ್ದಾನೆ. ಬಗಲಲ್ಲಿ ಸೆಲ್ಲೆ ಹಿಡಿದಿದ್ದಾನೆ. ಹೊತ್ತ ಹೊರಡುವ ದಿಕ್ಕಿಗೆ ಮುಖ ಮಾಡಿದ್ದಾನೆ. ನೀನು ಹೋಗಿ ಅವನ ಕೈಹಿಡಿ. ನೆರೆದ ಮಂದಿಯೆಲ್ಲ ಅವನು ನಿನ್ನ ಗಂಡನೆಂದು ನಿಶ್ಚಯಿಸಿ ಅವನನ್ನು ನಮ್ಮೊಡನೆ ಕಳಿಸುತ್ತಾರೆ. ಅವನನ್ನು ಕೊಂದು ಅವನ ಹತ್ತಿರವಿರುವ ಬಂಗಾರದ ಲಾಲಗಳನ್ನು ತೆಗೆದುಕೊಳ್ಳೋಣ."
ಆ ಯುಕ್ತಿಯಂತೆ ಕಳ್ಳಾನ ಮಗಳು ಬಂದು ಆತನ ಕೈಹಿಡುಯುತ್ತಾಳೆ. "ನೀನು ಸಿಟ್ಟುಸಿಟ್ಟಿನಿಂದ ನನ್ನನ್ನು ಬಿಟ್ಟು ಬಂದರೆ, ನಾ ಹೇಗೆ ಇರಲಿ ನಿನ್ನ ಬಿಟ್ಟು" ಎಂದು ರಾಗ ತೆಗೆಯುತ್ತಾಳೆ. ಆದ್ದರಿಂದ ಆತನು ಕಳ್ಳನಮಗಳ ಬೆನ್ನು ಹತ್ತಲೇ ಬೇಕಾಯಿತು. ಕಳ್ಳನ ಮಗಳನ್ನೂ 'ಅಳಿಯ'ನನ್ನೂ ಕರಕೊಂಡು ಹೋಗುತ್ತಾನೆ, ಮಗಳನ್ನು ಒತ್ತಟ್ಟಿಗೆ ಕರೆದು ಯುಕ್ತಿ ಹೇಳುತ್ತಾನೆ—"ಪ್ರೀತಿಮಾಡಲಿಕ್ಕೆ ಹೋದಾಗ ಆತನನ್ನು ಕೊಡಲಿಯಿಂದ ಕಡಿ."
ಕಳ್ಳನ ಮಗಳು ಬೇರೊಂದು ಉಪಾಯಹೇಳುವಳು—"ಜೋರಾಬಾರಿ ಮಾಡಿ ಇವನ ಹೊಟ್ಟ್ಯಾಗ ವಿಷ ಹಾಕಬೇಕು. ಎರಡು ದುಡ್ಡಿನ ವಿಷ ತೆಗೆದುಕೊಂಡು ಬಾ. ನಾ ರೊಟ್ಟಿ ಮಾಡಿ ಇವನಿಗೆ ಉಣಸತೀನಿ."
ವಿಷ ತರುವುದಕ್ಕೆ ಕಳ್ಳನು ಹೋಗಲು, ಆತನ ಮಗಳು ಈತನಿಗೆ ಹೇಳುತ್ತಾಳೆ - "ಬುಟ್ಟ್ಯಾಗ ನಾಕು ರೊಟ್ಟಿ ಇಟ್ಟಿರತೀನು. ಮ್ಯಾಲಿನ ಎರಡು ವಿಷದ್ದು. ಅವನ್ನು ಬಿಟ್ಟು ತೆಳಗಿನ ಎರಡುರೊಟ್ಟಿ ತಿನ್ನು".
ಈಗ ಅವಳ ಮನಸ್ಸು ಇವನಲ್ಲಿ ನೆಟ್ಟಿತ್ತು.
ಮಗಳು ರೊಟ್ಟಿ ಮಾಡಿದಳು. ತಂದಿ-ಮಗಳು ರೊಟ್ಟಿ ಉಂಡರು; ನೀರು ಕೊಂಡರು. ಬುಟ್ಟಿಯಲ್ಲಿ ನಾಲ್ಕು ರೊಟ್ಟಿಯಿಟ್ಟು ಬುಟ್ಟಿಯನ್ನೇ ಆತನಿಗೆ ಕೊಟ್ಟರು. ಕಳ್ಳನ ಮಗಳು ಹೇಳಿದಂತೆ, ಮೇಲಿನ ಎರಡುರೊಟ್ಟಿ ಬಿಟ್ಟು ತೆಳಗಿನ ಎರಡುರೊಟ್ಟಿ ಉಂಡು, ಸ್ಪಸ್ಥವಾಗಿ ಬಂಕಿನಲ್ಲಿ ಮಲಗಿಕೊ೦ಡನು. ಅಪ್ಪನೂ ಮಲಗಿಕೊಂಡನು.
ಕಳ್ಳನ ಮಗಳು ಯೋಚಿಸಿ ಆತನ ಕಡೆ ಬ೦ದು—"ನಡೆ, ಒತ್ತರಮಾಡು. ಮನೆಯಲ್ಲಿ ಎರಡು ಕುದುರೆ ಅವೆ. ಒಂದು ಚೌವೀಸಹರಿ ಓಡುವ ಕುದುರೆ, ಇನ್ನೊಂದು ಬಾರಾಹರಿ ನಡೆಯುವ ಕುದುರೆ. ನೀನು ಚೌವೀಸ ಹರಿ ನಡೆಯುವ ಕುದುರೆ ತಗೊಂಡು ಊರ ಹೊರಗೆ ಬಾ. ನಾ ಅಲ್ಲಿ ಇರತೀನಿ. ಇಬ್ಬರೂ ಕೂಡಿ ಮುಂದಕ್ಕೆ ಹೋಗೋಣು.*
ಕತ್ತಲೆಯಲ್ಲಿ ಗಡಬಡಿಸಿ ಆತನು ಚೌವೀಸಹರಿಯ ಕುದುರೆಬಿಟ್ಟು ಬಾರಾಹರಿ ನಡೆಯುವ ಕುದುರೆ ಬಿಟ್ಟುಕೊಂಡು ಬಂದನು. "ಹೀಂಗ್ಯಾಕೆ ಮಾಡಿದೀ'" ಎಂದು ಕಳ್ಳನಮಗಳು ಕೇಳಿದಳು. ಇಬ್ಬರೂ ಕುದುರೆ ಮೇಲೆ ಕುಳಿತುಕೊಳ್ಳುತ್ತಲೆ ಬಾರಾಹರಿ ಕುದುರೆ ಒಂದೇ ಓಟದಲ್ಲಿ ಹೋಗಿ ನಿಂತುಬಿಟ್ಟಿತು.
ತನ್ನ ಮನೆಯಲ್ಲಿ ಆ ಹುಡುಗ ಮತ್ತು ಮಗಳು ಇಲ್ಲದ್ದನ್ನು ನೋಡಿ ಕಳ್ಳನು, ಚೌವೀಸಹರಿ ನಡೆಯುವ ಕುದುರೆ ಹತ್ತಿ ಹೊರಟನು. ಒಮ್ಮಿಂದೊಮ್ಮೆ ಅವರಿದ್ದಲ್ಲಿಗೆ ಬಂದನು.
"ಈಗ ನಮ್ಮಪ್ಪ ಹೊಂಟಾನ. ನೀ ಗಪ್ಪನೆ ಗಿಡ ಏರಿ ನಿಲ್ಲು. ಆತನು ಕುದುರೆ ಬಿಟ್ಟು ನಿನ್ನ ಹಿಡೀಲಿಕ್ಕೆ ಬರತಾನ. ಅದಕ್ಕಿಂತ ಮೊದಲೇ ನಾನು ಕುದುರೆ ಹತ್ತಿ ಗಿಡದ ಕೆಳಗೆ ಬರತೀನಿ. ನೀ ಆಗ ಗಿಡದ ಮೇಲಿಂದ ಕುದುರೆ ಮ್ಯಾಗ ಜಿಗಿ" ಎಂದು ಕಳ್ಳನ ಮಗಳು ಆತನಿಗೆ ಹೇಳಿಟ್ಟಿದ್ದಳು.
ಕುದುರೆಯ ಮೇಲೆ ಕಳ್ಳ ಬಂದಾಗ ಅವನ ಮಗಳು ಅಲ್ಲೇ ನಿಂತಿದ್ದಳು - "ಎಲೆ ಮಗಾ, ನೀ ಹಿಂಗ್ಯಾಕ ಬಂದೀ? ನಿನಗೆ ಈಸು ದಿನ ಜೋಕೆ ಜನ ಮಾಡಿದ್ದು ಸುಳ್ಳು ಮಾಡಿದೆಲ್ಲ?" ಎಂದಾಗ ಕಳ್ಳನ ಮಗಳು ಹೇಳುತ್ತಾಳೆ—"ಅಪ್ಪ ಈತ ಈಗ ಗಿಡ ಏರ್ಯಾನ ನೋಡಪ್ಪ ಬದಮಾಶ. ನನಗೆ ಓಡಿಸಿಕೊಂಡು ಬಂದಾನ ನೋಡಪ್ಪ.
ತಂದೆ ಕಳ್ಳನ ಕಡೆಗೆ ಹೊರಟನು. ಮಗಳು ಚೌವೀಸಹರಿ ಓಡುವ ಕುದುರೆಯೇರಿ, ಹುಡುಗನೇರಿದ ಗಿಡದ ಕೆಳಗೆ ನಿಲ್ಲಿಸಿ, ಅವನನ್ನೂ ಕರಕೊಂಡು ಕುದುರೆಗೆ ಸಪ್ ಎಂದು ಚಬಕಿಯಿಂದ ಹೊಡೆದು ಓಡಿಸಿದಳು.
ಚೌವೀಸಹರಿ ಓಡುವ ಕುದುರೆಯೇರಿ ಮಗಳು ಹೋಗಿದ್ದನ್ನು ಕಳ್ಳ ನೋಡಿದನು. ಇವರಂತೂ ದಕ್ಕಿ ಹೋದರು. ಇನ್ನು ನನ್ನ ಹಣೆಬರಹ ಏನಾಗಬೇಕು ಎಂದು ಹಳಹಳಿಪಟ್ಟನು. ಅವನ ಪಾಲಿಗೆ ಉಳಿದದ್ದು ಬಾರಾಹರಿ ನಡೆಯುವ ಕುದುರೆ. ಅದರ ಮೇಲೇರಿ ಬಾರಾಹರಿ ನೆಲ ದಾಟಿದನು. ಹನ್ನೆರಡು ಮೊಳದ ಹಚ್ಚಡ ಹೊಚ್ಚಿಕೊಂಡು ಹೊರಟನು. ಹಾದಿಯಲ್ಲಿ ಒಂದು ಘಟನೆ ನಡೆಯಿತು.
ಇಬ್ಬರು ಗಂಡಹೆಂಡರು. ಅವರಿಗೆ ಇಬ್ಬರು ಮಕ್ಕಳು. ಅವರಿಗೆ ಬಹಳ ಬಡತನ. ಹಚ್ಚಡ ಹೊದ್ದುಕೊಂಡು ಕಳ್ಳ ಹೊರಟಾಗ, ಗಂಡನು ಹೆಂಡತಿಗೆ ಹೇಳುತ್ತಾನೆ—"ಸಣ್ಣ ಮಿಣಿ ಚೀಲು, ದೊಡ್ಡ ಮಿಣಿ ಚೀಲು ತೆಗೆದಿಡು. ಹಾಗೇ ಸರಾದೀಪ ತಗಿ" ಸಣ್ಣ ಮಿಣಿ ಚೇಲು, ದೊಡ್ಡ ಮಿಣಿ ಚೀಲ ಎಂದು ತನ್ನ ಮಕ್ಕಳನ್ನು ಕುರಿತೇ ಅ೦ದಿದ್ದನು. ಆದರೆ ಕಳ್ಳನು ತಿಳಿಕೊಂಡಿದ್ದೇ ಬೇರೆ. ಬಹುತೇಕ ಇವರ ಮನೆಯಲ್ಲಿ ಬಹಳ ದುಡ್ಡು ಅದೆಯೆಂದು ತಿಳಕೊಂಡನು. ಅದರಂತೆ ಸರಿರಾತ್ರಿ ಆದಾಗ ಬಡವನ ಮನೆಯೊಳಗೆ ಹೊಕ್ಕನು. ಆದರೆ ಅಲ್ಲಿ ಏನೇನೂ ಸಿಗಲಿಲ್ಲ. ಪಡಸಾಲೆಯ ಮೂಲೆಯಲ್ಲಿ ಎಳ್ಳಿನ ಹೊರತು ಯಾವ ದಾಣಿಯೂ ಸಿಗಲಿಲ್ಲ. ಬಾರಾಮೊಳದ ಹಚ್ಚಡ ನೆಲದ ಮೇಲೆ ಹಾಸಿ ಎಳ್ಳು ಬರುಕಬೇಕೆಂದಿರುವಾಗ ಗಂಡನು ಕೆಮ್ಮಿದನು. ಹೆಂಡತಿ ಹಚ್ಚಡ ಎಳಕೊಂಡುಬಿಟ್ಟಳು. ಎಳ್ಳು ಬರುಕಿದರೂ ಅವೆಲ್ಲ ನೆಲದ ಮೇಲೆಯೇ ಬಿದ್ದುಬಿಟ್ಟವು. ಸಿಳ್ಳೋ ಎಂದು ಕಳ್ಳ ಮನೆಯ ಕಡೆಗೆ ಹೊರಟನು.
ಕಳ್ಳನ ಮಗಳು ಹಾಗೂ ಆ ಹುಡುಗ ಕೂಡಿ ಜೌವೀಸಹರಿ ನಡೆಯುವ ಕುದುರೆ ತಕ್ಕೊಂಡು ಮುಂದೆ ಸಾಗಿದರು. ಪಟೇಲರ ತೋಟಕ್ಕೆ ಹೋದರು. ಕುದುರೆ ಕಟ್ಟಿದರು. ಆ ಹೊತ್ತು ಅಲ್ಲೇ ವಸತಿ ಒಗೆದರು ಮಜಕೂರಿ ಆಕೆಯನ್ನು ನೋಡಿದನು. ಮನಸ್ಸಿನಲ್ಲಿ ನೆಟ್ಟುಬಿಟ್ಟಿತು ಅವಳ ರೂಪ. "ನಿ೦ದು ಯಾವೂರು" ಎಂದು ಕೇಳಿದನು. "ನಮ್ಮದು ಬಾಳ ದೂರ" ಅಂತ ಆಕೆ ಹೇಳಿದಳು. ಬಹಳ ಚಪಲಳಾಗಿದ್ದಂತೆ ಕಾಣುತ್ತದೆ. "ನಿನ್ನ ಚೌಕಿ ಎಷ್ಟು" ಎಂದು ಮಜಕೂರಿ ಕೇಳಿದನು. ನೂರು ಎಂದಳು ಕಳ್ಳನ ಮಗಳು. ಮಜಕೂರಿ ಅಷ್ಟು ರೂಪಾಯಿ ತೆಗೆದು ಅವಳ ಕೈಯಲ್ಲಿಟ್ಟನು; ಸಂಜೆಮಾಡಿ ಬರತೀನಿ ಎಂದು ಹೇಳಿದನು.
ಮಜಕೂರಿ ಚೌಕಿದಾರನ ಮುಂದೆ ಹೇಳುತ್ತಾನೆ—"ಅಬಬಾ, ತೋಟದಾಗ ಒಂದು ಹೆಣ್ಣು ಬಂದಿದೆ. ಮುಟ್ಟಿದರೆ ಮಾಸುವಂತೆ ಇದ್ದಾಳೆ."
ಚೌಕಿದಾರ ಕೇಳುತ್ತಾನೆ ಕಳ್ಳನ ಮಗಳಿಗೆ—"ನಿನ್ನ ಚೌಕಿ ಎಷ್ಟು?" "ಇನ್ನೂರು" ಎಂದಳಾಕೆ.
ದೀಪ ಹಚ್ಚಿದ ಒಂದು ತಾಸಿನ ಮೇಲೆ ಬರಬೇಕೆಂದು ಹೇಳಲು ಚೌಕಿದಾರನು ಪಟೇಲನ ಬಳಿಗೆ ಹೋಗಿ ಚಲುವೆಯನ್ನು ವರ್ಣಿಸಿದನು. ಪಟೇಲನು ಬಂದು ಕೇಳುತ್ತಾನೆ—"ನಿನ್ನ ಚೌಕಿ ಎಷ್ಟು?"
"ಮುನ್ನೂರು"
ದೀಪ ಹಚ್ಚಿದ ಮೇಲೆ ಎರಡು ತಾಸಿಗೆ ಬರಬೇಕು—ಎಂದಳು ಪಟೇಲನಿಗೆ. ಅದರಂತೆ ಕುಲಕರ್ಣಿಗೆ ನಾನೂರು ಎಂದು ಹೇಳಿ ನಾಲ್ಕು ತಾಸು ರಾತ್ರಿಗೆ ಬರ ಹೇಳುತ್ತಾಳೆ.
ಮಜಕೂರಿ, ಚೌಕಿದಾರ, ಪಟೇಲ, ಕುಲಕರ್ಣಿ ಹೀಗೆ ನಾಲ್ಡರಿಂದಲೂ ರೊಕ್ಕ ವಸೂಲ ಮಾಡುತ್ತಾಳೆ. ಮೊದಲಿಗೆ ಮಜಕೂರಿ ಬಂದನು. ಹೊರಸಿನ ಮೇಲೆ, ಪ್ರೀತಿತೋರಿಸಿ ಕುಳ್ಳಿರಿಸುತ್ತಾಳೆ; ಕೆನ್ನೆಗೊಂದು ಏಟುಕೊಡುತ್ತಾಳೆ. ಮಜಕೂರಿ ಹೊರಸಿನ ಮೇಲಿಂದ ಗಕ್ಕನೆ ಕೆಳಗೆ ಬೀಳುತ್ತಾನೆ. ಅಷ್ಟರಲ್ಲಿ ಚೌಕೀದಾರ ಬಂದು ಕೆಮ್ಮುತ್ತಾನೆ. ಮಜಕೂರಿಗೆ ಒಂದು ಸೀರೆ ಸುತ್ತಿಕೊಳ್ಳಲು ಹೇಳಿ, ಕಡಲೆ ಒಡೆಯುವ ಬೀಸುವ ಕಲ್ಲಿನ ಮುಂದೆ ಕುಳ್ಳಿರಿಸುತ್ತಾಳೆ.
ಎರಡನೆಯವನಾದ ಚೌಕಿದಾರನಿಗೆ ಮೆಲುಕಿನ ಮೇಲೆ ಕಡಬುಕೊಟ್ಟು ಹೊರಗಿನಿಂದ ಕೆಳಗೆ ಕೆಡಹುತ್ತಾಳೆ. ಅದೇ ಹೊತ್ತಿಗೆ ಪಟೇಲ ಬರುವ ಸಪ್ಪಳ ಕೇಳಿದ ಕೂಡಲೇ ಚೌಕೀದಾರನನ್ನು ಚಾಪೆಯಲ್ಲಿ ಸುತ್ತಿ, ಅವನ ತಲೆಯ ಮೇಲೆ ದೀಪದ ಹಣತಿ ಇಟ್ಟು ಮೂಲೆಯಲ್ಲಿ ನಿಲ್ಲಿಸುತ್ತಾಳೆ. ಪಟೇಲ ಬ೦ದು ಹೊರಸಿನ ಮೇಲೆ ಕುಳಿತನು. ಅವನ ಗೆಬ್ಬೆಗೊಂದು ಗುದ್ದಿಕೆ ಕೊಟ್ಟು ಕೆಳಗೆ ಬೀಳಿಸುವಳು. ಕುಲಕರ್ಣಿ ಕೆಮ್ಮುತ್ತ ಬರಲು, ಪಟೇಲನನ್ನು ಹೊರಸಿನ ಕೆಳಗೆ ಕಳಿಸುವಳು.
ಕುಲಕರ್ಣಿ ಹೊರಸಿನ ಮೇಲೆ ಕುಳಿತನು. ಅವನಿಗೆ ವೀಳ್ಯೆ ಮಡಚಿ ತಿನ್ನಲು ಕೊಟ್ಟಳು. ಇಬ್ಬರೂ ವೀಳ್ಯೆಮೆದ್ದು ಹೊರಸಿನ ಕೆಳಗೆ ಉಗುಳಿದರು. ಪಟೇಲನ ಮೈಯೆಲ್ಲ ಉಗುಳೇ ಉಗುಳು—ಆಕೆ ಕಾಲು ಮಡಿದು ಬರುವೆನೆಂದಳು.
ಕುದುರೆಯನ್ನು ಬಿಟ್ಟುಕೊಂಡು ಚಪರಕಿ ಬಾರಿಸಿ ಕಳ್ಳನ ಮಗಳು ತನ್ನ ಪ್ರಿಯನೊಡನೆ ಚೌವೀಸಹರಿ ಮುಂದೆ ಹೋದಳು.
ಮಜಕೂರನ ಕಡಲೆ ಒಡೆಯುವ ಕೆಲಸ ಮುಗಿಯಲೊಲ್ಲದು. ಪಣತಿಯಿಂದ ಸುಡುವ ಎಣ್ಣೆ ಚೌಕೀದಾರನ ತಲೆಯ ಮೇಲೆ ಬೀಳಹತ್ತಿದೆ. ವೀಳ್ಯದ ಉಗುಳಿನಲ್ಲಿ ಪಟೇಲನು ಉರುಳಾಡುತ್ತಿದ್ದಾನೆ. ಚೆಲುವಿಯ ಹಾದಿ ನೋಡುತ್ತ ಕುಲಕರ್ಣಿ ಹೊರಸಿನ ಮೇಲೆ ಕುಳಿತಿದ್ದಾನೆ. ಹೀಗೆ ನಾಲ್ವರಿಗೂ ಕೈಕೊಟ್ಟು ಕಳ್ಳನ ಮಗಳು ಅಲ್ಲಿಂದ ಓಡಿಹೋದಳು.
ಇಪ್ಪತ್ತುನಾಲ್ಕು ಹರದಾರಿ ಬಂದು ಕುದುರೆ ನಿಂತಲ್ಲಿ ಒಂದೂರು ಇತ್ತು. ಅಲ್ಲಿ ಕೋಮಟಿಗರ ಹುಡುಗನು ಆ ಕಳ್ಳನ ಮಗಳ ಮೇಲೆ ಮನಸ್ಸು ಮಾಡುತ್ತಾನೆ. ಅಂದು ರಾತ್ರಿ ಅವರಿಬ್ಬರೂ ಆಗ್ರಹಮಾಡಿ ವಸತಿ ಮಾಡಹಚ್ಚುತ್ತಾನೆ, ನೀರು ತರಲಿಕ್ಕೆ ಗುಂಡರಿಗೆ ಕೊಡುತ್ತಾನೆ. ಅಡಿಗೆ ಮಾಡಿ ಊಟಮಾಡುತ್ತಾರೆ. ಕೋಮಟಿಗರ ಹುಡುಗನು ಅವರಿಬ್ಬರೂ ಮಲಗಿದ ಕೋಣೆಯಲ್ಲಿ ಮಲಗುತ್ತಾನೆ. ಕಳ್ಳನ ಮಗಳ ಕೈಮೇಲೆಕೈ ಚಲ್ಲುತ್ತಾನೆ. ಆಗ ಆಕೆ ತನ್ನವನನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಅವನಿಗೆ ಗಾಢನಿದ್ರೆ ಹತ್ತಿದೆ. ಇನ್ನು ಹೊತ್ತು ಹೊರಡಲು ಒಂದು ತಾಸು ವೇಳೆ ಇದ್ದಾಗ ಕಳ್ಳನ ಮಗಳು, ಕುದುರೆ ಕೋಗೀರು ಹಚ್ಚಿ ಊರ ಬೀಡಬೇಕೆನ್ನುತ್ತಾಳೆ. ಅವಳವನೂ ಸಿದ್ಧನಾದನು. ಹೊತ್ತರಳುವ ವೇಳೆಯಲ್ಲಿ ಹೊರಟುನಿಂತಾಗ -" ಯಾವುದಾದರೂ ನಿಮ್ಮ ಸಾಮಾನು ಬಿಟ್ಟಿರುವಿರೇನು ನೋಡಿರಿ" ಎಂದು ಕೋಮಟಿಗರವನು ಕೇಳುವನು. ಒಂದು ಗಂಟು ಕಾಣಿಸಲಿಲ್ಲ. ಅದನ್ನು ನೋಡಲಿಕ್ಕೆ ಆ ಹುಡುಗನು ಕುದುರೆ ಹತ್ತಿ, ಕಳ್ಳನ ಮಗಳ ಸಂಗಡ ಹೋಗಿಬಿಟ್ಟನು.
ಆ ಹುಡುಗನು ಇಳಕೊಂಡ ಮನೆಯಲ್ಲಿ ಹೋಗಿ ನೋಡುವಷ್ಟರಲ್ಲಿ ಬಂಗಾರದ ಒಂದು ಲಾಲ ಸಿಗುತ್ತದೆ. ಅದನ್ನು ಕಿಸೆಯಲ್ಲಿರಿಸಿಕೊಂಡು ಮನೆಗೆ ತೆರಳುತ್ತಾನೆ. ಅಪ್ಪನಿಗೆ ಹೇಳುತ್ತಾನೆ - ಇದೊಂದು ಲಾಲ ತಂದೀನಪ್ಪ> ಏಕಲಾಲ, ಪೃಥ್ವಿಕಾ ಮೋಲ - ಎಂದು ಒಗಟು ಹೇಳುತ್ತಾನೆ.
ಹೆಂಡತಿ ಊಟಕ್ಕೆ ಕೊಡುತ್ತಾಳೆ. ಆಕೆ ನೆರೆಮನೆಯ ಅಕ್ಕಸಾಲೆಯ ಮುಂದೆ ತನ್ನ ಗಂಡ ತಂದ ಬಂಗಾರದ ಲಾಲದ ಕಥೆ ಹೇಳುತ್ತಾಳೆ. ಮತ್ತು ಅದನ್ನು ತೋರಿಸುತ್ತಾಳೆ. ಅಕ್ಕ ಸಾಲಿಗನು ಆ ಲಾಲವನ್ನು ಬದಲಿಸಿ ರೊಟ್ಟಿ ಲಾಲವನ್ನು ಅಲ್ಲಿಡುತ್ತಾನೆ.
ತಾಯಿತಂದೆಗಳು ಲಾಲವನ್ನು ಪರೀಕ್ಷಿಸಲು ಅದು ಜೋಡಿಗೆ ಹಾಕುವ ಲಾಲವೆಂದು ಗೊತ್ತಾಯ್ತು. ಅವರಿಗೆ ಬಹಳ ಸಿಟ್ಟುಬಂತು - "ಇಪ್ಪತ್ತುನಾಲ್ಕು ವರ್ಷ ಕಷ್ಟಪಟ್ಟು ಇದೊಂದು ಬಿಕನಾಶಿ ಲಾಲ ತಂದಿರುವಿ. ಇಂದಿನಿಂದ ಈ ಕೊಡಲಿ ಒಯ್ದು, ಕಟ್ಟಿಗೆ ಕಡಿದುತಂದು, ಮಾರಾಟ ಮಾಡಿಕೊಂಡು ಬಾ" ಎಂದು ಅವನನ್ನು ಕಳಿಸುತ್ತಾರೆ.
ಹುಡುಗನು ಕೋಟೆಗೆ ಹೋಗುತ್ತಾನೆ. ಅಲ್ಲಿ ಅವನು ಕೋಮಟಿಗನ ಮುಂದೆ ಕಟ್ಟಿಗೆಯ ಹೊರೆಹೊತ್ತು ಸಾಗಿರುವಾಗ, ಕಳ್ಳನ ಮಗಳು ಕೋಮಟಿಗರವನಿಗೆ - "ಹೇಗೂ ನನ್ನನ್ನು ಮೋಸ ಮಾಡಿ ತಂದಿರುವಿ. ಇನ್ನು ಸೀರೆ ತಾ, ಕುಬಸ ತಾ. ನಾಲ್ಕು ಒಡ್ಡಿ ಅಕ್ಕಿ ತಾ" ಎಂದು ಹೇಳಿ ಅವನನ್ನು ಪೇಟೆಗೆ ಕಳಿಸುತ್ತಾಳೆ. ಮೂವರು ಹಾದಿಯಲ್ಲಿ ಹೊರಟಾಗ ಆಕೆ ಕೇಳುತ್ತಾಳೆ—"ಒಂದು ತಿಂಗಳು ನಮ್ಮಲ್ಲಿ ನೌಕರಿ ಮಾಡುವಿರೇನು?" "ತಗ್ಗಿಗೆ ಹೋಗಿ ತಲೆ ಹೊಡೆಯಬೇಕಾಗುತ್ತದೆ" ಎಂದು ಹೇಳುತ್ತಾಳೆ.
"ಯಾಕಾಗಲೊಲ್ಲದು" ಎಂದು ಹೇಳಲು ತಿಪಲು ಮಾಡಿ, ಕೋಮಟಿಗರ ಹುಡುಗನನ್ನು ಹೊಡೆದು ಹಾಕುತ್ತಾರೆ.
ಬೇಳೆ, ಅಕ್ಕಿ ತಂದು ಕಡಾಯಿ ಏರಿಸಿ ಹುಗ್ಗಿ ತಯಾರು ಮಾಡುತ್ತಾಳೆ. ಊರಿಗೇ ಊಟ ಕೊಡುತ್ತಾಳೆ.ಕಟ್ಟಿಗೆ ಮಾರುತ್ತ ಬಂದ ಹುಡುಗನನ್ನು ಕೇಳುತ್ತಾಳೆ, ನಿನ್ನ್ನ ಪರಿಸ್ಥಿತಿ ಹೀಗೇಕೆ ಎಂದು. ಅವನು ತನ್ನ ಕಥೆಯನ್ನೆಲ್ಲ ಹೇಳುತ್ತಾನೆ. ಆಗ ತಾನು ಅವನ ಹೆಂಡತಿಯೆಂದು ಸ್ಪಷ್ಟಮಾಡುತ್ತಾಳೆ.
ಊರುಮಂದಿಯೆಲ್ಲ ಊಟಕ್ಕೆ ಬಂದರು. ಆದರೆ ಅಕ್ಕಸಾಲಿಗನು ಬಂದಿರಲಿಲ್ಲ. ಇಬ್ಬರು ಗಮಾಸ್ತರು ಅವನ ಮನೆಗೆ ಹೋಗಿ ಅವನಿಗೆ ಕೋಮಟಿಗನ ಹೆಣ ತೋರಿಸಿದರು. ಆಗ ಅಕ್ಕಸಾಲಿಗನು ಬಂಗಾರದ ಲಾಲ ಕೊಡುತ್ತಾನೆ. ಆಗ ಕಳ್ಳನ ಮಗಳು ಅನ್ನುತ್ತಾಳೆ ಮಾವನಿಗೆ—"ನಾನು ನಿನ್ನ ಮಗನ ಹೆಂಡತಿ ಗಟ್ಟಿ. ನೀವು ಅತ್ತೆಮಾವ ಗಟ್ಟಿ. ನಾ ನಿಮ್ಮ ಸೊಸೆ ಗಟ್ಟಿ".
ಕೊರವಂಜಿಯ ಕಲೆ
ಅಣ್ಣನ ಮಗಳನ್ನು ಅಕ್ಕರೆಯಿಂದ ಮಗನಿಗೆ ತೆಗೆದುಕೊಂಡು ಮದುವೆಮಾಡಿದ್ದಳು, ನೀಲಗಂಗಮ್ಮ. ಆದರೆ ಮಗನು ಮನೆಗೆ ಹತ್ತಲೊಲ್ಲನಾದನು. ಹೊರಗಿನಿಂದ ಹೊರಗೇ ಇರತೊಡಗಿದನು.
ಬಾಳೆಯ ಬನದಲ್ಲಿ ಮಗನು ಚಂಡಾಡುತ್ತಿರುವನೆಂಬ ಸುದ್ದಿ ಕೇಳಿ ತಾಯಿ ಅಲ್ಲಿಗೆ ಹೋಗಿ ಮಗನನ್ನು ಕೇಳಿಕೊಂಡಳು - "ನನ್ನ ಸೊಸೆ ಬಾಳೆಗಿಂತ ಚಲುವೆಯಾಗಿದ್ದಾಳೆ. ಒಂದು ಸಾರೆ ಮನೆಗೆ ಬಂದು ಮುಖ ತೋರಿಸು."
"ಬಾಳೆಗಿಂತ ಚಲುವೆಯಾದರೆ ಭಾವಿಯಲ್ಲಿ ನುಗಿಸು. ಇಲ್ಲವೆ ಉಟ್ಟಬಟ್ಟಿ ಕಳಕೊಂಡು ತವರುಮನೆಗೆ ಕಳಿಸು. ನಾನು ನನಗೆ ತಿಳಿದಂತೆ ವರ್ತಿಸುವೆನು" ಎಂಬುದು ಮಗನ ಮರುನುಡಿ.
ಇನ್ನೊಂದು ಸಾರೆ, ಮಗನು ನಿಂಬಿಯ ಬನದಲ್ಲಿ ಚೆಂಡಾಡುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗಿ - "ನಿಂಬೆಗಿಂತ ನನ್ನ ಸೊಸೆ ಚೆಲುವೆಯಾಗಿದ್ದಾಳೆ ಒಂದೇ ಸಲ ಮನೆಗೆ ಬಂದು ಮೊಗದೋರು" ಎಂದು ಅಂಗಲಾಚಿದಳು.
ಕಟ್ಟಿಗೆ ಮುರಿದು ಕೈಗೆ ಕೊಟ್ಟಂತೆ ಮಗನು ಮರುನುಡಿದನು - "ನಿಂಬೆಗಿಂತ ಚೆಲುವೆಯಾಗಿದ್ದರೆ ಆಕೆಯನ್ನು ಬಾವಿಗೆ ನೂಕು. ಇಲ್ಲವೆ ಕಟ್ಟಿದ ಕರಿಮಣಿಯನ್ನು ಹರಕೊಂಡು ತವರುಮನೆಗೆ ಹಚ್ಚಗೊಡು. ನಾನು ನನಗೆ ತಿಳಿದಂತೆ ಮಾಡುವೆನು."
ತಾಯಿ ನಿರಾಶಳಾಗಿ ಮನೆಗೆ ಬಂದು ಸೊಸೆಗೆ ಹೇಳಿದಳು - "ಅಣ್ಣನ ಮಗಳೆಂದು ಹೆಮ್ಮೆಯಿಂದ ನಿನ್ನನ್ನು ತಂದುಕೊಂಡರೆ ಮಗನು ಮಾತೇ ಕೇಳದಾಗಿದ್ದಾನೆ. ಸೊಸೆಮುದ್ದೇ, ಹೋಗಿ ಬಿಡವ್ವ ನಿನ್ನ ತವರುಮನೆಗೆ."
"ಯಾರು ಅಣ್ಣ ಯಾರು ತಮ್ಮ? ತಾಯಿ ಯಾರು ತಂದೆ ಯಾರು? ಅಣ್ಣನ ಮದುವೆ ಹೆಂಡಿರಾರು ಅತ್ತೆ? ತವರುಮನೆಗೆ ಹೋಗಲಾರೆ. ಒಂದು ಹೊನ್ನು ಖರ್ಚುಮಾಡಿ ಮದುವೆ ಮಾಡಿದಿ; ಈಗ ಎರಡು ಹೊನ್ನು ಖರ್ಚು ಮಾಡಿ ನನಗೆ ಕೊರವಂಜಿ ಬುಟ್ಟಿ ಕೊಂಡುಕೊಡು. ಅತ್ತೇ, ಗಂಡನನ್ನು ನೋಡಿ ಬರುವೆ. ಆತನ ರಂಡೆಯನ್ನು ನೋಡಿ ಬರುವೆ" ಎಂದಳು ಸೊಸೆ ಹೊರಮೈಗೆ ಮುತ್ತು ಹಚ್ಚಿ ಒಳಮೈಗೆ ಮಾಣಿಕಹಚ್ಚಿ ಕೋದ ಬುಟ್ಟಿಯನ್ನು ಅತ್ತೆ ಆ ಕೂಡಲೇ ತಂದಿಟ್ಟಳು. ಸೊಸೆಯು ಅದನ್ನು ತಲೆಯಮೇಲೆ ಹೊತ್ತು ಕಾಲಲ್ಲಿ ಚೆಪ್ಪಲಿ ಮೆಟ್ಟಿಕೊಂಡು ತನ್ನ ರಾಯರಿರುವ ರಾಜಪಟ್ಟಣದ ದಾರಿ ಕೇಳುತ್ತ ನಡೆದಳು-
"ದನ ಕಾಯುವ ಅಣ್ಣಗಳಿರಾ, ದನಕಾಯುವ ತಮ್ಮಗಳಿರಾ, ನಮ್ಮ ರಾಯರಿರುವ ರಾಜಪಟ್ಟಣದ ದಾರಿಯಾವುದು?"
ದನಗಾಹಿಗಳು ಹೇಳಿಕೊಟ್ಟರು -"ಬಾಳೆ ಬನದ ಬಲಕ್ಕೆ ಹಾಯ್ದು, ನಿಂಬೆ ಬನದ ಎಡಕ್ಕೆ ಹಾಯ್ದು, ನಾಗಸಂಪಿಗೆಯ ನಡುವೆ ಹಾಯ್ದುಹೋಗು." ಹಸಿರು ಸೀರೆಯುಟ್ಟು, ಹಸಿರು ಕುಪ್ಪಸ ತೊಟ್ಟು, ಹಸಿರು ಸೆರಗ ಮರೆಮಾಡಿಕೊಂಡು ಎದುರು ಬರುತ್ತಿರುವ ತನ್ನಂಥ ಹರದಿಯರನ್ನು ಬಲಗೊಂಡಳು. ಅದರಂತೆ ಕೆಂಪುಸೀರೆಯುಟ್ಟು, ಕೆಂಪು ಕುಪ್ಪಸ ತೊಟ್ಟು, ಕೆಂಪು ಸೆರಗು ಮರೆಮಾಡಿಕೊಂಡು ಎದುರು ಬರುತ್ತಿರುವ ಹರದಿಯರನ್ನೂ ಬಲಗೊಂಡಳು. ಬೀದಿಯಲ್ಲಿ ಸಾಗಿದ ಆನೆಗಳ ಮುಂದೆ, ಆನೆಮರಿಗಳ ಮುಂದೆ, ಆನೆಯನ್ನೇರುವ ಚದುರಮನ್ನೆಯರ ಮಗಳು ರಾಜಬೀದಿಯಲ್ಲಿ ಹೊರಟಳು. ಒಂಟೆಗಳ ಮುಂದೆ, ಒಂಟೆಗಳನ್ನೇರುವ ಭಂಟಮನ್ನೆಯರ ಮಗಳು ರಾಜಬೀದಿಯಲ್ಲಿ ಸಾಗಿದಳು.
"ಕಾಲಲ್ಲಿ ಕಂಚಿನಪಿಲ್ಲೆ, ಕಿವಿಯಲ್ಲಿ ಹಿತ್ತಾಳೆಯ ಓಲೆ, ಸರಪಳಿ ಗಂಟಿಸರದಾಳಿ ಧರಿಸಿದ ನೀನು ಯಾವನಾಡಿನ ಕೊರವೆ" ಎಂದು ಕೇಳಿದನು ಒಬ್ಬ ತರುಣ.
"ನಾನು ಈ ನಾಡ ಕೊರವಿಯೂ ಅಲ್ಲ; ಆ ನಾಡ ಕೊರವಿಯೂ ಅಲ್ಲ. ದೇವಲೋಕದ ಕೊರವೆ. ಜಾಣ, ನಾನು ದೇವರು ಹೇಳುತ್ತೇನೆ ಕೇಳು ಸೂಳೆಯರು ನಿನ್ನನ್ನು ಮೋಡಿಮಾಡಿ ಹೊಡೆಯುತ್ತಾರೆ" ಎಂದಳು ಕೊರವಿ.
"ಮಡದಿಯನ್ನು ಬಿಟ್ಟು ಹನ್ನೆರಡುವರುಷ ಆಯ್ತು ಕೊರವೀ. ಮಡದಿಯನ್ನು ಕೂಡಿಸು. ಕೈಮುಗಿಯುತ್ತೇನೆ; ನಿನ್ನ ಕಾಲು ಬೀಳುತ್ತೇನೆ. ಅಷ್ಟು ಮಾಡಿದರೆ ನಿನ್ನನ್ನು ಕರೆತಂದು ಸೀರೆ ಕುಪ್ಪಸ ಉಡುಗೊರೆ ಕೊಡುತ್ತೇನೆ" ಎಂದನು ಆ ಜಾಣ.
"ನನ್ನ ಕಾಲ ಬೀಳುವುದಕ್ಕೆ ನನ್ನ ಕೈಮುಗಿಯುವುದಕ್ಕೆ ಯಾರಿಗೆ ಯಾವ ತಪ್ಪು ಮಾಡಿರುವಿರಿ ಮಾರಾಯರೇ? ಹೋಗೋಣ ನಡೆಯಿರಿ" ಎಂದು ಕೊರವಿ ನುಡಿದು, ಆತನ ದಿಗಿಲನ್ನೆಲ್ಲ ಬಯಲು ಮಾಡಿದಳು. ಗಂಡಹೆಂಡಿರು ಕೂಡಿಕೊಂಡು ಸಡಗರದಿಂದ ತಮ್ಮೂರ ಹಾದಿ ಹಿಡಿದರು. ಹಿಂದೆ ಆ ರಂಡಿ - ಸೂಳೆ ಬೆನ್ನುಹತ್ತಿದ್ದನ್ನು ಕಂಡು, ಆಕೆಯನ್ನು ಹಿಂದಕ್ಕೆ ಹೊಡೆದು ಹಾಕಿದರು.
“ಆರು ವರುಷ ತಿರುಗಿ ಅರಸನನ್ನು ತಂದಿದ್ದೇನೆ ಅತ್ತೇ, ಹೊರಗಡೆ ಬಾ. ನಿನ್ನ ಮಗನನ್ನು ಒಳಗಡೆ ಕರೆದುಕೋ” ಎಂದು ಸೊಸೆಯು ಕೂಗಿದಾಗ
ಅತ್ತೆಗಾದ ಆನಂದಕ್ಕೆ ಅಳತೆಯಿದೆಯೆ?ಪಾಪಾಸಿನ ಗಂಡ
ಹುಡುಗನೊಬ್ಬನು ತನಗೊಂದು ಹೆಣ್ಣು ಗಟ್ಟಿಮಾಡಲು ತಂದೆಗೆ ಹೇಳಿದನು. ತಂದೆ ಹೆಣ್ಣು ನೋಡತೊಡಗಿದನು. ಹೆಣ್ಣಿನವರಿಗೆ ಅವನು ಹೇಳಿದ ಮಾತು ಒಂದೇ ಆಗಿತ್ತು - ತನ್ನ ಮಗನು ಹೆಂಡತಿಗೆ ಪಾಪಾಸಿನಿಂದ ಪಂಚವೀಸ ಏಟು ಹೊಡೆಯುವವನಿದ್ದಾನೆ. ಆ ಮಾತು ಕೇಳಿ ಯಾರೂ ಹೆಣ್ಣು ಕೊಡಲು ಒಪ್ಪಲಿಲ್ಲ. ಹಳ್ಳದಕೆರೆಯಾಯ್ತು. ಮತ್ತೊಂದು ಊರಾಯ್ತು ; ಮಗುದೊಂದು ಊರಾಯಿತು. ಮೂರು ಊರು ತಿರುವಿಹಾಕಿದರೂ ಹೆಣ್ಣು ಗಟ್ಟಿಯಾಗಲಿಲ್ಲ.
ಚಿನ್ನದ ಕೆರೆಗೆ ಹೋಗಿ ಕೇಳಿದರು. ಆ ಹುಡುಗೆ ಪಾಪಾಸಿನಿಂದ ಏಟು ತಿನ್ನಲು ಸಿದ್ಧಳಾದಳು. ಲಗ್ನ ಮಾಡಿದರು. ಮದುವೆಕಾಲಕ್ಕೆ ಬಾಸಿಂಗ ಕಟ್ಟಿಕೊಂಡು ನಿಂತಾಗಲೇ - “ಸೆರಗು ತೆಗೆ ನಾ ಹೊಡೀತಿನಿ” ಎಂದು ಮದುಮಗ ಗಡಿಬಿಡಿ ಮಾಡಹತ್ತಿದನು. ಹುಡುಗಿ ಬಹಳ ಚುರುಕು ಇದ್ದಳು. ಹೇಳಿದಳು - “ಇನ್ನೂ ನಾವು ಮದಿವೆ ಹಂದರದಲ್ಲಿದ್ದೇವೆ. ಈಗ ನಾವು ಶಿವಪಾರ್ವತಿ ಇದ್ದಂತೆ ಇದ್ದೇವೆ. ನಾಳೆ ಹೊಡೆಯುವಿರಂತೆ” ಎಂದು ಹೇಳಿದಳು.
ಮರುದಿನ ದೇವಕಾರ್ಯಕ್ಕೆ ಹೋಗುವುದಿದೆ. ಇಂದು ಹೊಡೆಯುವುದು ಬೇಡ ಎಂದಳು. ನಾಲ್ಕನೇ ದಿನವೂ ಹೇಳಿದಳು - ಅರಿಸಿನ ಮೈಯಲ್ಲಿದ್ದೇವೆ, ಏಟು ಕೊಡುವುದು ಬೇಡ. ಶೋಭಾನದಿನವೆಂದು ಐದನೆಯ ದಿನವೂ ದಾಟಿತು. ಮದುಮಗಳಿಗೆ ಉಡಿಯಕ್ಕಿ ಹೊಯ್ದರು. ಆಕೆಯನ್ನು ಗಂಡನ ಮನೆಗೆ ಕಳಿಸಿದರು.
ಗಂಡನ ಮನೆ ಮುಟ್ಟಿದ ಕೂಡಲೇ ಗಂಡಸು ಪಾಪಾಸು ತಕ್ಕೊಂಡು ಹೊಡೆಯಲು ಎದ್ದನು. ಆಗ ಹುಡುಗಿ ಕೇಳಿದಳು - “ಈ ಮದುವೆಯನ್ನು ನೀನು ಮಾಡಿದೆಯೋ, ನಿಮ್ಮಪ್ಪ ಮಾಡಿದನೋ ?”
“ನಮ್ಮಪ್ಪ ಮಾಡಿದ್ದಾನೆ.”
“ಅಹುದೇ ? ನಿನ್ನಿಂದ ನಾನು ಪೆಟ್ಟು ತಿನ್ನಲಾರೆ. ನೀನು ರೊಕ್ಕಗಳಿಸಿಕೊಂಡು ಬಾ. ಆವಾಗ ನಿನ್ನ ಕೈಯಿಂದ ತಪ್ಪದೆ ಏಟು ತಿನ್ನುತ್ತೇನೆ” ಎಂದು ಹೇಳಿದಳು.
ಅಪ್ಪನ ಕಡೆಯಿಂದ ನೂರು ರೂಪಾಯಿ ಇಸಗೊಂಡು ಮಗ ಹೊರಟನು. ಅಟ್ಟ ಅಟ್ಟ ಅರಣ್ಯದಲ್ಲಿ ಹೊರಟಾಗ ಹಾದಿಯಲ್ಲಿ ಒಂದು ಕಳ್ಳನ ಮನೆ ಹತ್ತಿತು. ಆ ಮನೆಯಲ್ಲಿ ಕಳ್ಳನ ತಾಯಿ ಮುದುಕಿ ಕಾವಲಿದ್ದಳು. ಆ ಮುದುಕೆಗೆ ಆತನು ರಾತ್ರಿಯ ಮಟ್ಟಿಗೆ ಇರಲು ಜಾಗ ಕೇಳಿದನು. ಆಕೆ ಸಮ್ಮತಿಸಲು ಊಟಮಾಡಿ ಆತನು ಮಲಗಿಕೊಂಡನು.
ಆತನಿಗೆ ನಿದ್ದೆ ಹತ್ತಿದಾಗ ಮನೆಯ ಕಾವಲಿನ ಮುದುಕಿ ಒಂದು ಬಂಗಾರದ ಬಟ್ಟಲು ತಂದು ಅವನ ಅಂಗಿಯ ಕಿಸೆಯಲ್ಲಿ ಬಚ್ಚಿಟ್ಟಳು. ಮರುದಿನ ಮುಂಜಾನೆ -ಈತನು ಬಂಗಾರ ಬಟ್ಟಲು ತಗೊಂಡು ಹೊರಟಿದ್ದಾನೆ - ಎಂದು ಮುದುಕಿ ಬೊಬ್ಬಿಟ್ಟಳು. ಸಾಕಷ್ಟು ಮಂದಿ ನೆರೆಯಿತು. ಆ ಹುಡುಗನು ಹೇಳಿದನು- “ನಾನಂತೂ ಮುಂದಿನೂರಿಗೆ ಹೊರಟಿದ್ದೇನೆ. ಈ ಮನೆಯೊಳಗಿನದೇನೂ ತೆಗೆದುಕೊಂಡಿಲ್ಲ. ನಾನು ಏನನ್ನೂ ನೋಡಿಲ್ಲ.”
ಆದರೆ ಆತನ ಅಂಗಿಯ ಕಿಸೆಯಲ್ಲಿ ಬಟ್ಟಲು ಸಿಕ್ಕಿತು. 'ನೀನಿಲ್ಲೇ ಕುಳಿತುಕೋ' ಎನ್ನಲು, ಆತನು ನಿರಾಶನಾಗಿ ಕುಳಿತುಕೊಂಡನು. ಕಳ್ಳನ ಮನೆಯಲ್ಲೇ ಅವನಿಗೆ ಒಳಿತಾಗಿ ವ್ಯವಸ್ಥೆ ಮಾಡಿದರು.
ಆ ಸಮಾಚಾರವನ್ನು ಕೇಳಿ ಆತನ ಹೆಂಡತಿಯು ಗಂಡಸರ ವೇಷ ತೊಟ್ಟಳು. ಹೊತ್ತು ಮುಳುಗುವ ಸಮಯ ಆಗಿತ್ತು. ಅದೇ ವೇಷದಲ್ಲಿ ಕಳ್ಳನ ಮನೆಗೆ ಹೋದಳು. ಅಲ್ಲಿ ಗಂಡನು ಕುದುರೆಗೆ ನೀರು ಕುಡಿಸುತ್ತ ನಿಂತಿದ್ದನು. ಅಂದು ರಾತ್ರಿ ಅಲ್ಲೇ ಉಳಿದಳು.
ಮುದುಕಿ ಮತ್ತೆ ಬಂಗಾರದ ಬಟ್ಟಲು ತಂದು ಈಕೆಯ ಮಡಿಲಲ್ಲಿ ಇಟ್ಟಳು. ಈಕೆ ಡುಕ್ಕು ಹೊಡೆದು ಮಲಗಿದ್ದಳು. ಆ ಬಂಗಾರದ ಬಟ್ಟಲು ಒಯ್ದು, ತಿರುಗಿ ಮುದುಕಿಯ ಬುಟ್ಟಿಯಲ್ಲಿ ಒಯ್ದಿಟ್ಟಳು. ಬೆಳಗಾಯಿತು. ಮುದುಕಿ ಮತ್ತೆ ಬಂಗಾರದ ಬಟ್ಟಲು ಹೋಯ್ತು ಎಂದು ಕೂಗಾಡಿದಳು. ಜನ ಕೂಡಿತು. ವಸತಿ ಮಾಡಿದವನ ಅಂಗಿಚುಂಗುಗಳಲ್ಲಿ ಹುಡುಕಿದರು. ಎಲ್ಲಿಯೂ ಸಿಗಲಿಲ್ಲ ಬಂಗಾರದ ಬಟ್ಟಲು ಕೊನೆಯಲ್ಲಿ ಬುಟ್ಟಿಯಲ್ಲಿಯೇ ಬಂಗಾರದ ಬಟ್ಟಲು ಸಿಕ್ಕಿತು.
“ಏ ಮುದುಕಿ, ನಿಮ್ಮ ಮನೆಯಲ್ಲೇ ಅದೆಯಲ್ಲ ಬಟ್ಟಲು” ಎಂದು ಜನರೆಲ್ಲ ಮುದುಕಿಗೆ ಛೀ ಥೂ ಅಂದರು. ಮುದುಕಿಗೆ ಹೊಡೆದು ಹೊರದೂಡಿಯೇ ಬಿಟ್ಟರು.
ಗಂಡಸು ವೇಷದಲ್ಲಿದ್ದ ಆ ಹೆಣ್ಮಗಳು ಪೂರ್ತಿಯಾಗಿ ಮನೆಯನ್ನು ಗೆದ್ದು ಬಿಟ್ಟಳು. “ನನ್ನ ಕುದುರೆಗೆ ನೀರು ಕುಡಿಸಿಕೊಂಡು ಬಾ ನಿನಗೊಂದು ರೂಪಾಯಿ ಕೊಡುತ್ತೇನೆ” ಎಂದು ಹೇಳಿದಳು. “ಕುದುರೆ ಒರೆಸಿದರೆ ಒಂದು ರೂಪಾಯಿ, ಹಾಸಿದರೆ ಒಂದು ರೂಪಾಯಿ, ತನ್ನ ಕೈ ಕಾಲು ಒತ್ತಿದರೆ ಒಂದು ರೂಪಾಯಿ, ಕುದುರೆಯ ಕಾಲಕಸವನ್ನು ಬಳೆದರೆ ಒಂದು ರೂಪಾಯಿ" ಎಂದು ಹೇಳಿ, ಗಂಡನ ಕೈಯಿಂದ ಕೆಲಸ ಮಾಡಿಸಿಕೊಂಡಳು. ಹೀಗೆ ಪ್ರತಿಯೊಂದು ಕೆಲಸಕ್ಕೆ ಒಂದೊಂದು ರೂಪಾಯಿ ಕೊಡುತ್ತ ಬಂದಳು.
ಎಂಟು ದಿನಗಳಲ್ಲಿ ಅವನು ನೂರು ರೂಪಾಯಿ ಗಳಿಸಿಬಿಟ್ಟನು.
ಎರಡು ಕುದುರೆಗಳ ಮೇಲೆ ಕಳ್ಳನ ಮನೆಯೊಳಗಿನ ಸಂಪತ್ತನ್ನೆಲ್ಲ ಹೇರಿಸಿ, ಹೆಣ್ನುಮಗಳು ಮುಂದೆ ಮುಂದೆ ಹೋದಳು. ಗಂಡ ಮಾತ್ರ ಹಿಂದಿನಿಂದ ಹೋದನು.
ಹೆಂಡತಿ ಹೇಳಿದಂತೆ ಈಗ ನೂರು ರೂಪಾಯಿ ಗಳಿಸಿ ತಂದಿದ್ದಾನೆ. ಹೆಂಡತಿಗೆ ಪಾಪಾಸಿನಿಂದ ಹೊಡೆಯಲು ಮುಂದೆ ಬಂದಿದ್ದಾನೆ.—"ನೂರಾರು ರೂಪಾಯಿ ತಂದಿರುವೆ. ಸೆರಗು ತೆಗೆ ಹೊಡೆಯುತ್ತೇನೆ" ಎಂದು ಒತ್ತಾಯ ಮಾಡಹತ್ತಿದನು.
"ಯಾವ ರೀತಿ ಗಳಿಸಿಕೊಂಡ ಬಂದಿರುವ ಮೊದಲು ಹೇಳು. ಆಮೇಲೆ ನಿನ್ನ ಕೈಯಿಂದ ಹೊಡಿಸಿಕೊಳ್ಳಲು ನಾನು ಸಿದ್ದಳಾಗಿದ್ದೇನೆ" ಎಂದು ಹೆಂಡತಿ ನುಡಿದಳು.
ಗಂಡನು ನಿರುತ್ತರನಾಗಿ ನಿಂತನು.
"ನೀನು ಕುದುರೆ ಒರೆಸಿದಿ, ಒಂದು ರೂಪಾಯಿ ಗಳಿಸಿದಿ. ಅದರ ಲದ್ದಿ ತೆಗೆದಿ. ಯಾರದೋ ಕೈಕಾಲು ಒತ್ತಿದಿ. ಇಷ್ಟೆಲ್ಲ ಮಾಡಿ ನೂರು ರೂಪಾಯಿ ತಂದಿರುವಿ" ಎಂದು ಹೆಂಡತಿ ಹೇಳಿಕೊಟ್ಟಾಗ ಗಂಡನು ಗಾಬರಿಗೊಂಡು ಕುಳಿತನು. ಪಾಪಾಸಿನಿಂದ ಹೊಡೆಯುವ ಹವ್ಯಾಸವನ್ನು ಬಿಟ್ಟುಕೊಟ್ಟನು.
ದೇವರು ಕೊಟ್ಟರೇನು ಕಡಿಮೆ?
ಬಡವೆಯಾದ ವಿಧವೆಗೊಬ್ಬ ಮಗನಿದ್ದನು. ಅವನು ಶಾಲೆಗೆ ಹೋದಾಗ ಸರಿಯರು ಧರಿಸಿದ್ದ ಒಳ್ಳೊಳ್ಳೆಯ ಬಟ್ಟೆಗಳನ್ನೂ ಅವರು ತರುತ್ತಿದ್ದ ತಿಂಡಿತಿನಿಸು ಆಟಿಗೆಗಳನ್ನೂ ಕಂಡು, ಅವು ತನಗೂ ಬೇಕೆಂದು ತಾಯಿಯ ಬಳಿಯಲ್ಲಿ ಕೇಳುವನು. "ನಾವು ಬಡವರು. ಅಂಥ ಬಟ್ಟೆ, ತಿನಿಸು, ಆಟಿಗೆಗಳನ್ನು ಎಲ್ಲಿಂದ ತರೋಣ? ಶ್ರೀಮಂತಿಕೆಯಿದ್ದರೆ ನಮಗೂ ಸಿಗುತ್ತಿದ್ದವು?" ಎಂದಳು ತಾಯಿ.
"ನಮಗೆ ಶ್ರೀಮಂತಿಕೆ ಏಕಿಲ್ಲ?" ಮಗನ ಪ್ರಶ್ನೆ.
"ದೇವರು ಕೊಟ್ಟಿದ್ದರೆ ಶ್ರೀಮಂತಿಕೆ ಇರುತ್ತಿತ್ತು" ಇದು ತಾಯಿಯ ಸಮಾಧಾನ.
"ದೇವರು ಕೊಡುವನೇ? ಹಾಗಾದರೆ ಅವನನ್ನು ಕಂಡು ನಮಗೆ ಬೇಕಾದುದನ್ನೆಲ್ಲ ಇಸಗೊಂಡು ಬರುತ್ತೇನೆ. ಎಲ್ಲಿದ್ದಾನೆ ದೇವರು?"
"ಎಲ್ಲಿಯೋ ಇದ್ದಾನಂತೆ ದೇವರು. ನಾವೇನೂ ಕಂಡಿಲ್ಲ" ಎಂದಳಾಕೆ.
"ನಾಳೆಯೇ ನಾನು ದೇವರನ್ನು ಹುಡುಕಲು ಹೋಗುವೆನು. ದಾರಿಯ ಬುತ್ತಿ ಕಟ್ಟಿಕೊಡು."
ತಾಯಿ ದಾರಿಯ ಬುತ್ತಿ ಕಟ್ಟಿಕೊಡಲು ದೇವರನ್ನು ಹುಡುಕುತ್ತ ಮಗನು ಹೊರಟೇಬಿಟ್ಟನು. ಕೆಲವು ಹರದಾರಿ ದಾರಿ ನಡೆದ ಬಳಿಕ, ದೊಡ್ಡದಾದ ಜನಜಂಗುಳಿ ಸೇರಿ ಅಲ್ಲೊಂದು ಬಾವಿ ಅಗಿಯುವ ಕೆಲಸದಲ್ಲಿ ತೊಡಗಿತ್ತು. ಅಲ್ಲಿಗೆ ಹೋಗಿ ಹುಡುಗನು ಕೇಳಿದನು—"ದೇವರು ಎಲ್ಲಿರುತ್ತಾನೆ? ನಾನು ಅವನನ್ನು ಕಾಣ ಬೇಕಾಗಿದೆ."
ಜನರೆಲ್ಲ ನಕ್ಕುಬಿಟ್ಟರು, ಹುಚ್ಚು ಹುಡುಗನೆಂದು. "ದೇವರು ಇಲ್ಲಿಯಂತೂ ಇಲ್ಲ. ಎಲ್ಲಿದ್ದಾನೆ ನಮಗೆ ಗೊತ್ತೂ ಇಲ್ಲ. ನಿಮಗೆ ಅವನು ಸಿಕ್ಕರೆ ನಮ್ಮ ಸಲುವಾಗಿ ಒಂದು ಪ್ರಶ್ನೆ ಕೇಳಿಕೊಂಡು ಬಾ—ನಮ್ಮ ಬಾವಿಗೆ ನೀರು ಯಾವಾಗ ಬೀಳತ್ತವೆ?"—ಸಾಹುಕಾರನು ಹೇಳಿದನು.
ಹುಡುಗನು ಮತ್ತೆ ಕೆಲವೊಂದು ಹರದಾರಿ ದಾಟುವಷ್ಟರಲ್ಲಿ ಒಂದು ಹೆಬ್ಬಾವು ದಾರಿಯಲ್ಲಿ ಅಡ್ಡ ಬಿದ್ದಿದೆ. ದಾಟಲೂ ಸಾಧ್ಯವಿಲ್ಲ. ಕಾಲಕಡೆಯಿಂದಲೋ ತಲೆಕಡೆಯಿ೦ಂದಲೋ ಹಾಯ್ದು ಸುತ್ತುವರಿದು ಹೋಗಬೇಕೆಂದರೆ ಹೊರಹೊರಳಿ ಬಂದು ತಡೆಮಾಡತೊಡಗಿತು. "ದಾರಿ ಬಿಡು ಹಾವಣ್ಣ" ಎಂದು ಹುಡುಗ ಕೇಳಲು "ನೀನೆಲ್ಲಿ ಹೋಗುವಿ" ಎಂದು ಮರುಪ್ರಶ್ನೆ ಮಾಡಿತು ಹಾವು.
"ದೇವರನ್ನು ಹುಡುಕಲು ಹೊರಟಿದ್ದೇನೆ. ನಿನಗೇನಾದರೂ ಗೊತ್ತಿದೆಯೇ ದೇವರೆಲ್ಲಿ ಇದ್ದಾನೆಂಬುದು" ಎಂದು ಬಾಲಕನು ಕೇಳಲು ಹಾವು ಹೇಳಿತು "ದೇವರು ಇದ್ದಾನೆಂದು ಎಲ್ಲರೂ ಹೇಳುತ್ತಾರೆ. ಕಂಡವರಾರೋ ಗೊತ್ತಿಲ್ಲ. ನಿನಗೆ ದೇವರ ದರ್ಶನವಾದರೆ ನನ್ನ ಸಲುವಾಗಿ ಒ೦ದು ಮಾತು ಕೇಳು ನನ್ನ ಕಣ್ಣು ಎಂದು ಬರುವವು?"
"ಕೇಳಿಕೊಂಡು ಬರುತ್ತೇನೆ" ಎಂದು ಮರುನುಡಿದು ಬಾಲಕನು ಪುನಃ ಹರದಾರಿ ಮುಂದೆ ಹೋಗಿ ಒಂದು ಕಟ್ಟಡವಿಗೆ ಬಂದನು. ಅಲ್ಲಿ "ದೇವರೇ" ಎಂದು ಆರ್ತ ಧ್ವನಿಯಿಂದ ಕೂಗಲು, ದೂರದಿಂದ "ಓ" ಎಂಬ ಧ್ವನಿ ಕೇಳಿಸಿತು. ಅಲ್ಲಿಗೆ ಹೋದನು. ಒಬ್ಬ ಮುಪ್ಪಿನ ಸತ್ಪುರುಷನು ಅಲ್ಲೊಂದು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದನು. "ಏಕೆ ಕೂಗಿದೆ ನನ್ನನ್ನು" ಎಂದು ಕೇಳಿದನು. "ಹಾಗಾದರೆ ನೀನೇ ದೇವರು" ಎಂದನು ಬಾಲಕನು. "ನಾನು ದೇವರು ಅಹುದೋ ಅಲ್ಲವೋ ತೆಗೆದುಕೊ೦ಡು ಏನುಮಾಡುತ್ತೀ? ನಿನಗೇನು ಬೇಕಾಗಿತ್ತು" ಎಂದನಾ ಮುದುಕ.
"ನಾವು ಬಡವರು. ಒಳ್ಳೆ ಬಟ್ಟೆ—ತಿಂಡಿ—ಆಟಿಕೆ ನಮಗೆ ಸಿಗುವುದಿಲ್ಲ. ಅವನ್ನೆಲ್ಲ ಕೊಡು" ಎಂದು ಕೇಳಿದ ಬಾಲಕನಿಗೆ ಆ ಸತ್ಪುರುಷನು ಒಂದು ಬಟ್ಟಲು ಕೊಟ್ಟು—ಇದನ್ನು ಪೂಜಿಸಿ ನಿನಗೆ ಬೇಕಾದುದನ್ನು ಕೇಳಿಕೋ. ಅದು ಕೊಡುತ್ತದೆ" ಎಂದನು. ಬಟ್ಟಲು ತೆಗೆದುಕೊಂಡು ತನ್ನೂರಿಗೆ ಹೊರಟು, ದಾರಿಯಲ್ಲಿ ಒಂದೂರಿನ ಮನೆಯಲ್ಲಿ ರಾತ್ರಿ ವಸತಿ ಮಾಡಿದಾಗ ಆ ಮನೆಯವರಿಗೆ ತನ್ನ ಪ್ರವಾಸದ ಉದ್ದೇಶವನ್ನೆಲ್ಲ ವಿವರಿಸಿ, ದೇವರು ಕೊಟ್ಟ ಬಟ್ಟಲು ತೋರಿಸಿದನು. ಅದು ಬೇಡಿದ್ದು ಕೊಡುತ್ತದೆಂದು ಹೇಳಿದನು. ಮನೆಯವರು ಆತನಿಗೆ ಕಣ್ಣು ತಪ್ಪಿಸಿ ಆತನ ಗಂಟಿನೊಳಗಿನ ಬಟ್ಟಲು ಎತ್ತಿ ಅಂಥದೇ ಆದ ತಮ್ಮ ಬಟ್ಟಲನ್ನು ಅದರಲ್ಲಿ ಇರಿಸಿದರು.
ತನ್ನೂರಿಗೆ ಬಂದ ಬಳಿಕ ತಾಯಿಗೆ ಎಲ್ಲ ಸಂಗತಿಯನ್ನು ವಿವರಿಸಿ, ಬಟ್ಟಲು ಪೂಜೆ ಮಾಡಿದನು. ಆದರೆ ಅದು ಏನೂ ಕೊಡಲಿಲ್ಲ. ದೇವರೆಂದು ಹೇಳಿಕೊಂಡ ಆ ಮುದುಕನೇ ಮೋಸ ಮಾಡಿದನೆಂದು ಬಗೆದು ಮರುದಿನ ಮತ್ತೆ ಪ್ರಯಾಣ ಮಾಡಿದನು.ಕಟ್ಟಡವಿಯ ಆ ಸತ್ಪುರುಷನನ್ನು ಕಂಡು, ತಾವಿತ್ತ ಬಟ್ಟಲು ಏನೂ ಕೊಡಲಿಲ್ಲವೆಂದು ಹೇಳಿನು. "ದಾರಿಯಲ್ಲಿ ಆ ಬಟ್ಟಲನ್ನು ಗಂಟಿನಿಂದ ಕಡೆಗೆ ತೆಗೆದಿದ್ದೆಯಾ" ಎಂದು ಮುತ್ತಯ್ಯ ಕೇಳಿದರೆ—"ಒಮ್ಮೆ ಹಸಿವೆಯಾದಾಗ ಅದನ್ನು ಪೂಜಿಸಲು ಹೊರಗೆ ತೆಗೆದಿದ್ದೆ. ಆಗ ಅದು ಕೆಲಸಕೊಟ್ಟಿತು. ಇನ್ನೊಮ್ಮೆ ಒಂದು ಹಳ್ಳಿಯಲ್ಲಿ ವಸತಿ ಮಾಡಿದಾಗ ಆ ಮನೆಯವನಿಗೆ ತೋರಿಸಲು ತೆಗೆದಿದ್ದೆ ಎಂದು ಮರುನುಡಿದನು.
"ನಿನ್ನ ಬಟ್ಟಲು ಕಳುವಾದದ್ದು ಅದೇ ಮನೆಯಲ್ಲಿ. ಈ ಸಾರೆ ಮಂತ್ರಿಸಿದ ಎರಡು ಬಡಿಗೆ ಕೊಡುವೆನು. ಈ ಸಲವೂ ಆ ಮನೆಯಲ್ಲಿ ವಸತಿಮಾಡು. ಈ ಬಡಿಗೆಗಳು ನಿನ್ನ ಬಟ್ಟಲು ಇಸಗೊಡುವವು" ಎಂದು ನುಡಿದು ಆ ಸತ್ಪುರುಷನು ಎರಡು ಬಡಿಗೆಗಳನ್ನು ಅವನ ಕೈಗಿತ್ತನು.
ಹಿಂದಿನ ಸಾರೆ ಕೇಳಲು ಮರೆತ ಎರಡು ಮಾತುಗಳನ್ನೂ ಈ ಸಾರೆ ವೃದ್ಧಮುನಿಗೆ ಕೇಳಿಕೊಂಡನು—"ನನಗೆ ದಾರಿಯಲ್ಲಿ ಅಡ್ಡಗಟ್ಟಿದ ಹಾವಿನ ಕಣ್ಣು ಹೋಗಿದ್ದರಿಂದ ದಾರಿಕಾರರು ತುಳಿಯುತ್ತ ಎಡಹುತ್ತ ಹೋಗುತ್ತಾರೆ. ಕಣ್ಣು ಯಾವಾಗ ಬರುವವು ಕೇಳಿಕೊಂಡು ಬರಹೇಳಿದೆ ಆ ಹಾವು."
"ಆ ಹಾವು ಕಟ್ಟಿದ ಹುತ್ತಿನಲ್ಲಿ ಅಪಾರ ದ್ರವ್ಯವಿದೆ. ಅದನ್ನೆಲ್ಲ ದಾನಮಾಡಿದರೆ ಎರಡೂ ಕಣ್ಣು ಬರುವವು" ಎಂದನು ಮುನಿ.
ಇನ್ನೊಂದು ಪ್ರಶ್ನೆ—"ಆ ಸಾಹುಕಾರನು ಅಗಿಸುವ ಬಾವಿಯಲ್ಲಿ ನೀರು ಯಾವಾಗ ಬೀಳವವು?"
"ಆ ಸಾಹುಕಾರ ಇದ್ದೊಬ್ಬ ಮಗಳನ್ನು ಕನ್ಯಾದಾನಮಾಡಿ ಮದುವೆ ಮಾಡಿ ಕೊಟ್ಟರೆ ಬಾವಿಗೆ ಸಾಕಷ್ಟು ನೀರು ಬೀಳುವದು" ಮುನಿಯ ಉತ್ತರ.
ಮಂತ್ರಿಸಿದ ಎರಡು ಬಡಿಗೆಗಳನ್ನು ತೆಗೆದುಕೊಂಡು ಆ ಬಾಲಕನು ತನ್ನೂರ ಹಾದಿ ಹಿಡಿದನು. ಹೊತ್ತು ಮುಳುಗುವ ಸಮಯಕ್ಕೆ ಹಿಂದಿನ ಸಾರೆ ವಸತಿಮಾಡಿದ ಆ ಹಳ್ಳಿಗೆ ಬಂದು, ಅದೇ ಮನೆಯಲ್ಲಿ ತಂಗಿದನು. ಮನೆಯವರಿಗೆ ಈ ಸಾರೆಯ ಪ್ರವಾಸಕಥೆಯನ್ನೆಲ್ಲ ಹೇಳಿದನು. ಅದರಿಂದ ಮನೆಯವರಿಗೆ ಹೊಸ ಅಸೆ ಹುಟ್ಟಿತು.
ಅತಿಥಿಯನ್ನು ಅದಾವುದೋ ನೆವದಿಂದ ಹೊರಗೆ ಕಳಿಸಿ, ಅವನ ಗಂಟಿಗೆ ಕೈ ಹಚ್ಚುವದೇ ತಡ, ಮಂತ್ರದ ಆ ಬಡಿಗೆಗಳು ಸರತಿಯಂತೆ ಕುಸುಬಿ ಬಡೆದಂತೆ ಬಡಿಯತೊಡಗಿದವು. ಏಟು ತಾಳಲಾರದೆ ಮನೆಯವನು ಹಿಂದಿನ ತಪ್ಪು ಒಪ್ಪಿಕೊಂಡು ಕದ್ದಿಟ್ಟುಕೊ೦ಡ ಆ ಬಟ್ಟಲನ್ನು ಬಾಲಕನಿಗೆ ಕೊಟ್ಟನು. ಮರುದಿನ ಬೆಳಗಾಗುವ ಹೊತ್ತಿಗೆ ಬಾಲಕನು ಬಟ್ಟಲು, ಬಡಿಗೆ ಕಟ್ಟಿಕೊ೦ಡು ತನ್ನ ದಾರಿಹಿಡಿದನು. ಕೆಲವು ಹರದಾರಿ ನಡೆಯುವಷ್ಟರಲ್ಲಿ ಆ ಹೆಬ್ಬಾವು ಭೆಟ್ಟಿಯಾಯಿತು. ಕೇಳಿಕೊ೦ಡು ಬ೦ದ ಪ್ರಕಾರ ಅದರ ಕಣ್ಣು ಬರುವ ಉಪಾಯ ಹೇಳಿದನು. ಹಾವು ತನ್ನ ಹುತ್ತದೊಳಗಿನ ಅರ್ಧಮರ್ಧ ದ್ರವ್ಯವನ್ನು ಬಾಲಕನಿಗೆ ದಾನ ಕೊಡಲು ಕಣ್ಣು ನಿಚ್ಚಳವಾಗತೊಡಗಿದವು. ಅಲ್ಲಿ೦ದ ಹೊರಟು ಬಾವಿ ಅಗಿಯುವಲ್ಲಿ ಬ೦ದು ಸಾಹುಕಾರನನ್ನು ಕರೆದು ಹೇಳಿದನು- "ಇದ್ದೊಬ್ಬ ಮಗಳನ್ನು ಕನ್ಯಾದಾನ ಮಾಡಿ ಧಾರೆಯೆರೆದುಕೊಟ್ಟರೆ, ಬಾವಿಗೆ ವಿಫುಲ ನೀರು ಬೀಳುವದೆ೦ದು ದೇವರು ಹೇಳಿದ್ದಾನೆ.
"ಹಾಗಿದ್ದರೆ ಮತ್ತೇಕೆ ತಡ? ಇಲ್ಲದ ವರವನ್ನು ಹುಡುಕುತ್ತ ಎಲ್ಲಿಗೆ ಹೋಗಲಿ? ನಿನಗೇ ನನ್ನ ಮಗಳನ್ನು ಕೊಟ್ಟು ಧಾರೆಯೆರೆಯುತ್ತೇನೆ" ಏ೦ದು ಹೇಳಿ, ಅದೊ೦ದು ದಿನ ಅವನನ್ನು ಇರಿಸಿಕೊ೦ಡು ಬೆಳಗಾಗುವಷ್ಟರಲ್ಲಿ ಮದುವೆ ಸಿದ್ಧತೆ ಮಾಡಿ, ಮಗಳೊ೦ದಿಗೆ ಆತನಿಗೆ ಅಕ್ಕಿಕಾಳು ಹಾಕುವ ಹೊತ್ತಿಗೆ ಬಾವಿಯೊಳಗಿನ ಸೆಲೆ ಪುಟಿದೆದ್ದು, ಕ್ಷಣಾರ್ಧದಲ್ಲಿ ನೀರಿನಿ೦ದ ತು೦ಬಿ ತುಳುಕಾದಿತು.
ಹೆಬ್ಬಾವು ಕೊಟ್ಟ ದ್ರವ್ಯವನ್ನು ಮೇಲೆ ಹೇರಿಸಿಕೊ೦ಡು, ಹೊಸ ಹೆ೦ಡತಿಯೊಡನೆ ಬ೦ಡಿಯಲ್ಲಿ ಕುಳಿತು ತನ್ನ ಬಟ್ಟಲು—ಬಡಿಗೆಗಳೊಡನೆ ಸುಖವಾಗಿ ತನ್ನೂರು ಸೇರಿದನು.
ತಾಯಿ ಅವನಿ೦ದ ಸಮಗ್ರ ವ್ರತ್ತಾ೦ತವನ್ನು ಕೇಳಿ ಸ೦ತೊಷಪಟ್ಟಳು. ಮಗ ಸೊಸೆಯರೊ೦ದಿಗೆ ಆಕೆ ಬಹುಕಾಲ ಸುಖದಿ೦ದ ಬಾಳ್ವೆಮಾಡಿದಳು. ದೇವರು ಕೊಡಲಿಕ್ಕೆ ನಿ೦ತರೇನು ತಡ?
ಅತ್ತೆಯ ಗೊ೦ಬೆ
ಒ೦ದೂರಲ್ಲಿ ತಾಯಿಮಗ ಇದ್ದರು. ಮಗನು ದೊಡ್ಡವನಾದ ಬಳಿಕ ಹತ್ತಗಡೆಯವರಲ್ಲಿಯ ಹೆಣ್ಣು ತ೦ದು ಆತನ ಮದುವೆಮಾಡಿದಳು.
ಗ೦ಡನ ಮನೆಗೆ ಬ೦ದ ಬಳಿಕ ಸೊಸೆಯು, ಅತ್ತೆಯ ಸಲಹೆ ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಡಿಗೆಮಾಡುವಾಗ ಎಷ್ಟು, ಹೇಗೆ ಎ೦ದು ಕೇಳುವಳು, ಹಾಗೆ ಕೇಳದಿದ್ದರೆ ಆಕೆಗೆ ಯಾವ ಕೆಲಸವೂ ಬಗೆಹರಿಯುತ್ತಿರಲ್ಲಿಲ್ಲ. ಹೀಗೆ ಕೆಲವು ವರ್ಷ ಸಾಗುವಷ್ಟರಲ್ಲಿ ಅಕಸ್ಮಾತ್ತಾಗಿ ಅತ್ತೆ ಯಾವುದೋ ಜಡ್ಡಿನಿ೦ದ ತೀರಿಕೊ೦ಡಳು.
ಅತ್ತೆಯ ಅಗಲಿಕೆಯಿ೦ದ ಸೊಸೆಗೆ ತೀರ ಎಡಚಾಯಿತು. ಯಾರನ್ನು ಕೇಳಬೇಕು, ಏನೆ೦ದು ಕೇಳಬೇಕು ? ಯಾವ ಕೆಲಸವೂ ಸುಗಮವಾಗಿ ಸಾಗದ೦ತಾಗಲು ಆಕೆ ಗ೦ಡನಿಗೆ ಹೇಳಿದಳು ತನ್ನ ತೊ೦ದರೆಯನ್ನು. ಗ೦ಡನು ಬಡಿಗನಿ೦ದ ಕಟ್ಟಿಗೆಯದೊ೦ದು ದೊಡ್ಡ ಗೊ೦ಬೆ ಮಾಡಿಸಿ ತ೦ದು ಹೆ೦ಡತಿಯ ಮು೦ದೆ ಇಳುಹಿಸಿದನು.
ಆ ಗೊ೦ಬೆಯನ್ನೇ ಅತ್ತೆಯೆ೦ದು ಬಗೆದು ಪ್ರತಿಯೊ೦ದು ಕೆಲಸದಲ್ಲಿ ಆಕೆಯ ಸಲಹೆ ಕೇಳತೊಡಗಿದಳು. ಅನ್ನ ಮಾಡಲೋ ರೊಟ್ಟಿ ಮಾಡಲೋ ? ರೊಟ್ಟಿ ಮಾಡುವುದಾದರೆ ಏಸು ಮಾಡಲಿ ? ಅದಕ್ಕೆ ಒಣಗಿಮಾಡಲೊ ಹಸಿಗೆ ಮಾಡಲೋ ಹೀಗೆ ಕೇಳುವಳು.
ಸೊಸೆ ಒಮ್ಮೆ ನೆರೆಹಳ್ಳಿಗೆ ಸ೦ತೆಗೆ ಹೊರಟು ನಿ೦ತು - "ಸ೦ತೆಗೆ ಬರುವಿಯೇನು ಅತ್ತೆ?" ಎ೦ದು ಕೇಳಿದಳು. ಅದಕ್ಕೆ ಉತ್ತರ ಬರದಿರಲು - "ನಡೆಯಲಿಕ್ಕಾಗುದಿಲ್ಲ. ಏನು ಬರಲಿ ಅನ್ನುವಿಯಾ ? ನಾನು ನಿನ್ನನ್ನು ಬುಟ್ಟಿಯಲ್ಲಿ ಕುಳ್ಳಿರಿಸಿಕೊ೦ಡು ಹೋಗುವೆನು ಬರುವೆಯಾ? ಹಾಗಾದರೆ ನಡೆ" ಎ೦ದು ಬುಟ್ಟಿಯನ್ನು ಹೊತ್ತುಕೊ೦ಡು ಸ೦ತೆಯೂರಿಗೆ ಹೋದಳು. ಗೊ೦ಬೆಯ ಬುಟ್ಟಿಯನ್ನು ಹೊತ್ತುಕೊ೦ಡು ಸ೦ತೆಮಾಡಲಿಕ್ಕಾಗದು ಎ೦ದು ಅದನ್ನು ಹನುಮ೦ತ ದೇವರ ಗುಡಿಯಲ್ಲಿಳುಹಿ ತಾನು ಸ೦ತೆಯೊಳಗೆ ಹೋದಳು.ಹನುಮ೦ತ ದೇವರ ಗುಡಿಗೆ ಬ೦ದ ಭಕ್ತರು ಬುಟ್ಟಿಯೊಳಗಿನ ಗೊ೦ಬೆಯನ್ನು ಕ೦ಡು, ಇದೂ ಒ೦ದು ದೇವರೆ೦ದು ತಾವು ತ೦ದ ಅಕ್ಕಿ, ಬೇಳೆ ಮು೦ತಾದವುಗಳನ್ನು ಅದರ ಮು೦ದೆಯೂ ಹಾಕಿ ಹಾಕಿ ಹೋದರು. ಸ೦ಜೆ ಇಳಿಹೊತ್ತಿಗೆ ಸೊಸೆ ಸ೦ತೆಮಾಡಿಕೊ೦ಡು ಗುಡಿಗೆ ಬ೦ದು ನೋಡುತ್ತಾಳೆ - ಅಕ್ಕಿ ಬೇಳೆಗಳು ಎರಡೆರಡು ಸೇರಿನಷ್ಟು ಸುರಿದಿವೆ. "ಅಕ್ಕಿ ಬೇಳೆಯ ಸ೦ತೆ ಮಾಡಿದೆಯಾ ಅತ್ತೆ ?" ಎನ್ನುತ್ತ ಅವನ್ನೆಲ್ಲ ಒ೦ದು ಅರಿವೆಯಲ್ಲಿ ಕಟ್ಟಿಕೊ೦ಡು, ಅತ್ತೆಗೊ೦ಬೆಯ ಬುಟ್ಟಿ ಹೊತ್ತು ಊರಹಾದಿ ಹಿಡಿದಳು.
ಮರುದಿನ ಊರಲ್ಲೆಲ್ಲ ಸುದ್ದಿ. ಸತ್ತ ಅತ್ತೆಯಗೊ೦ಬೆ ಸೊಸೆಗೆ ಅಕ್ಕಿಬೇಳೆಯ ಸ೦ತೆಮಾಡಿಕೊಟ್ಟಿತ೦ತೆ. ಆಶ್ಚರ್ಯವಲ್ಲವೆ ?
ಮು೦ದಿನ ಸ೦ತೆಗೂ ಅತ್ತೆಯನ್ನು ಕರೆದೊಯ್ದಳು ಸೊಸೆ. ಸ೦ತೆಯೊಳಗಿನ ಕೆಲಸ ತೀರಿಸಿಕೊ೦ಡು ಊರಿಗೆ ಹೊರಡಬೇಕೆನ್ನುವಷ್ಟರಲ್ಲಿ ಹೊತ್ತು ಮುಳುಗಿತು. ಆದ್ದರಿ೦ದ ಸೊಸೆ ಅ೦ದಿನ ರಾತ್ರಿಯನ್ನು ಹನುಮ೦ತದೇವರ ಗುಡಿಯಲ್ಲಿಯೇ ಕಳೆದು, ಬೆಳಗಿಗೆ ತನ್ನೂರಿಗೆ ಹೊರಡಬೇಕೆ೦ದು ಯೋಚಿಸಿದಳು.
ಸರಿರಾತ್ರಿಯ ಹೊತ್ತಿಗೆ ಊರೊಳಗೆ ಯಾರ ಮನೆಯಲ್ಲಿಯೋ ಕಳವು ಮಾಡಿಕೊ೦ಡು ನಾಲ್ವರು ಕಳ್ಳರು ದ್ರವ್ಯವನ್ನು ಹ೦ಚುಪಾಲು ಮಾಡಿಕೊಳ್ಳಬೇಕೆ೦ದು ಹನುಮಂತದೇವರ ಗುಡಿಯನ್ನು ಹೊಕ್ಕರು. ಆ ಸುಳುಹಿಗೆ ಸೊಸೆ ಎಚ್ಚೆತ್ತು- "ಅಯ್ಯೋ ಅತ್ತೇ" ಎನ್ನುತ್ತ ಓಡಿಹೋದಳು. ಕಳ್ಳರು ಮು೦ದೆ ಹೋಗಿ ನೋಡುವಷ್ಟರಲ್ಲಿ ಕಟ್ಟಿಗೆಯ ಗೊ೦ಬೆ. ಇದು ಚೇಡಿಯ ಗೊ೦ಬೆಯಾದ್ದರಿ೦ದ ನಮ್ಮ ಕಳ್ಳತನ ಹೊರಗೆಡುವುತ್ತದೆ. ಆದ್ದರಿ೦ದ ಸಮಾಧಾನಪಡಿಸಬೆಕು ಮೊದಲು" ಎ೦ದು ಅದರ ಮು೦ದೆ, ಪ್ರತಿಯೊಬ್ಬರು ಬೊಗಸೆಬೊಗಸೆ ರೂಪಾಯಿ ಸುರಿದು ಓಡಿಹೋದರು.
ತನ್ನತ್ತೆಯನ್ನು ಮರೆತುಹೋದೆನೆ೦ದು ಅರಿವಾಗಿ ಸೊಸೆ ಹೊರಳಿ ಗುಡಿಗೆ ಬ೦ದು ನೋಡುತ್ತಾಳೆ- ಅತ್ತೆಯ ಗೊ೦ಬೆಯ ಮು೦ದೆ ರೂಪಾಯಿಗಳ ಡಿಗ್ಗೆ. ಅವನ್ನೆಲ್ಲ ಜೋಕೆಯಿ೦ದ ಕತ್ತಿಕೊ೦ಡು ಬೆಳಗು ಮು೦ಜಾನೆ ತನ್ನೂರಿಗೆ ಹೊರಟು ಹೋದಳು.
ನಾಲ್ಕಾರು ದಿನ ಕಳೆಯುವಷ್ಟರಲ್ಲಿ ಅತ್ತೆಯ ಗೊ೦ಬೆಯ ಪುಣ್ಯದಿ೦ದ ಅವರು ಸ್ಥಿತಿವ೦ತರಾದರೆ೦ದು ಕೇರಿಯವರಿಗೆಲ್ಲ ಗೊತ್ತಯಿತು. ಬ೦ದುಬ೦ದು ಕೇಳತೊಡಗಿದರು - ಸತ್ಯಸ೦ಗತಿ ಏನೆ೦ದು. ಸೊಸೆಯು ಹೇಳಿಬಿಟ್ಟಳು ಘಟಿಸಿದ ಸ೦ಗತಿಯನ್ನೆಲ್ಲ.ಅದನ್ನೆಲ್ಲ ಕೇಳಿಕೊಂಡು ಇನ್ನೊಂದು ಮನೆಯ ಸೊಸೆಯು ತನ್ನ ಗಂಡನಿಗೆ ದುಂಬಾಲಬಿದ್ದು, ಅತ್ತೆಯ ಗೊಂಬೆಯನ್ನು ಮಾಡಿಸಿ ತರಿಸಿದಳು. ಆಡಿಗೆಮನೆಯಲ್ಲಿರಿಸಿದಳು. ಕ್ಷಣಕ್ಷಣಕ್ಕೂ ಸಲಹೆ ಕೇಳಿವಳು. ಕೊನೆಗೆ ಗೊಂಬೆಯನ್ನೆತ್ತಿಕೊಂಡು ನೆರೆಹಳ್ಳಿಯ ಸಂತೆಗೂ ಹೊರಟಳು. ಸಂತೆಯಲ್ಲಿ ಅಷ್ಟೊಂದು ಕೆಲಸವಿಲ್ಲದಿದ್ದರೂ ಹೊತ್ತು ಮುಳುಗಿಸಿದಳು. ಅಂದಿನ ರಾತ್ರಿ ಅದೇ ಊರಲ್ಲಿ ಕಳೆಯಬೇಕಲ್ಲವೇ?
ಹಾದಿಬಿಟ್ಟು ತುಸು ಒಳಗಿರುವ ಗಿಡವನ್ನೇರಿ ಕುಳಿತು ರಾತ್ರಿ ಕಳೆಯುವದಕ್ಕೆ ನಿಶ್ಚಯಿಸಿದಳು. ಸರಿರಾತ್ರಿಯ ಹೊತ್ತಿಗೆ ಆ ಗಿಡದ ಕೆಳಗೆ ಅದೇ ಕಳ್ಳರು ಬಂದು ತಮ್ಮ ಹಂಚುಪಾಲಿನ ಕೆಲಸದಲ್ಲಿ ತೊಡಗಿದರು. ಅದನ್ನು ಕಂಡು ಗಿಡವೇರಿ ಕುಳಿತವಳ ಕೈಕಾಲು ಥರಥರಿಸತೊಡಗಿದವು. ಕೈಯೊಗಿನ ಗೊಂಬೆಯನ್ನು ಬಿಟ್ಟು ಬಟ್ಟಳು. ಅದು ಕೆಳಗೆ ಅ ಕಳ್ಳರ ಮುಂದೆಯೇ ಬಿತ್ತು. ಏನೆಂದು ನೋಡುವಷರಲ್ಲಿ ಗೊಂಬೆ. ಕಳೆದವಾರವೂ ಇಂಥದೇಗೊಂಬೆ ತಮ್ಮನ್ನು ಹೆದರಿಸಿತೆಂದು ನೆನೆಸಿದರು. ಈ ಸಾರೆಯೂ ಗೊಂಬೆ ಬೆನ್ನಹತ್ತಬೇಕೇ ಕೈ ತೊಳೆದುಕೊಂಡು ಎನ್ನ್ನುತ್ತ, ಅದು ಎಲ್ಲಿಂದ ಬಿತ್ತೆಂದು ಶೋಧಮಾಡಲು ಗಿಡದ ಮೇಲೆ ದೃಷ್ಟಿಹಾಯಿಸುವಷ್ಟರಲ್ಲಿ ಅವರ ಕಣ್ನಿಗೆ ಒಬ್ಬ ಹೆಂಗಸು ಕಾಣಿಸಿದಳು. "ಮರ್ಯದೆಯಿಂದ ಕೆಳಗಿಳಿದು ಬಾ" ಎಂದು ಹೇಳಲು ಆಕೆ ನಡುಗುತ್ತ ಗಿಡದಿಂದ ಕೆಳಗಿಳದು ಬಂದಳು. ಕಳ್ಳರು ಆಕೆಯ ಬಳಿಯಲ್ಲಿರುವ ಸಂತೆಯ ಗಂಟುಗಳನ್ನೆಲ್ಲ ಕಸುಗೊಂಡು, ಗೆಬ್ಬೆಗೆರಡು ಏಟುಕೊಟ್ಟು "ಹೋಗಿನ್ನು" ಎಂದರು.
ಆಕೆ ತಾನು ಆಶೆಪಟ್ಟು ಮಾಡಿದ ತಗಲು ಪರಾಮರಿಕೆಗಾಗಿ ಪಶ್ಟ್ಟಾತ್ತಾಪಪಟ್ಟು ಗಲ್ಲಗಲ್ಲ ಬಡಿದುಕೊಳ್ಳುತ್ತ ತನ್ನೂರಿಗೆ ಹೋಗಿ ಯಾವ ಸುದ್ದಿಯನ್ನು ಹೊರಹಾಕದೆ ಮಿಡುಕುತ್ತ ಕುಳಿತಳು.
ನಾಲ್ಕುಮ೦ದಿ ಹೆಣ್ಣುಮಕ್ಕಳು
ರಾಜನಿಗೆ ನಾಲ್ವರು ಹೆಣ್ಣುಮಕ್ಕಳು. ನಾಲ್ವರನ್ನೂ ಸಾಲೆಗೆ ಹಾಕಿದರು. ದೊಡ್ಡವರಾದಮೇಲೆ ಲಗ್ನಮಾಡಿಕೊಳ್ಳಲು ಅಣಿಗೊಳಿಸಿದರು. ಅವರಲ್ಲಿ ಮೂವರು, ತಾವು ಎ೦ಥವರನ್ನು ಲಗ್ನವಾಗಬೇಕು ಅನ್ನುವುದನ್ನು ಹೇಳಿದರು. ಆದರೆ ಸಣ್ಣಾಕೆ ಮಾತ್ರ - ನೀ ಹೇಳಿದವರಿಗೆ ಲಗ್ನವಾಗುತ್ತೆನೆ - ಎ೦ದು ಹೇಳಿಬಿಟ್ಟಳು. ಹಾದಿಗೆ ಹ೦ದರ ಹಾಕಿ, ಬೀದಿಗೆ ಛಳಿಕೊಟ್ಟು ಮೊದಲಿನ ಮೂವರಿಗೆ ಲಗ್ನ ಮಾಡಿಕೊಟ್ಟರು. ಆದರೆ ನಾಲ್ಕೂ ಮ೦ದಿ ಹೆಣ್ಣುಮಕ್ಕಳಿಗೂ ಒ೦ದೊ೦ದು ಮನೆ ಕಟ್ಟಿಸಿಕೊಟ್ಟರು. ಕಿರಿಯವಳ ಲಗ್ನ ಮಾತ್ರ ಉಳಿಯಿತು.
ಕಲಬುರ್ಗಿ ಜಾತ್ರೆಗೆ ಹೊರಟ ರಾಜನು, ಹೆಣ್ಣುಮಕ್ಕಳಿಗೆ ಜಾತ್ರೆಯಿ೦ದ ಏನೇನು ಸಾಮಾನು ತರಬೇಕು ಎ೦ದು ಕೇಳಿದನು. ಗೊ೦ಬಿ, ತೊಟ್ಟಿಲು, ಮಿಠಾಯಿ ತರಲಿಕ್ಕೆ ಅವರು ಹೇಳಿದರು. ಸಣ್ಣವಳು ಸಬರು (ತಾಳು) ತಾ ಎ೦ದು ಹೇಳಿದಳು.
ಜಾತ್ರೆಯಲ್ಲಿ ತಿರುಗಾಡಿ ನೋಡಲು ಎಲ್ಲ ಸಾಮಾನು ಸಿಕ್ಕವು. ಸಬರು ಮಾತ್ರ ಸಿಗಲೆ ಇಲ್ಲ. ತಿರುಗಿ ಬರುವಾಗ ಹಾದಿಯಲ್ಲಿ ಒಬ್ಬನು, ಚಿಪ್ಪಾಟ್ಟಿಯಿ೦ದ ಸಿಬರು ತೆಗೆದು ಬೆ೦ಡಿನ ತೊಟ್ಟಿಲು ಮಾಡಿದ್ದನ್ನು ನೋಡಿದ ರಾಜನು ಸಬರು ಸಿಗಲೆ ಇಲ್ಲ ಎ೦ದಾಗ ತೊಟ್ಟಿಲು ಮಾಡಿದವನು ತನ್ನ ತೊಟ್ಟಿಲು ತೋರಿಸಿ, ಇದೇ ಸಬರಿನಿ ತೋಟ್ಟಿಲು ಎ೦ದು ಹೇಳಿದನು. ಮಕ್ಕಳಿಗೆ ಅರಳು, ಪುಠಾಣಿ, ಮಿಟಾಯಿಕೊಟ್ಟು ರಾಜನು ಸಣ್ಣಾಕೆಗೆ, ಸಬರಿನ ತೊಟ್ಟಿಲೆ೦ದು ಹೇಳಿ ಬೆ೦ಡಿನ ತೊಟ್ಟಿಲುಕೊಟ್ಟನು.
ಆಕೆ ನೀರಿನ ಹೌದಿನಲ್ಲಿ ಬೆ೦ಡಿನ ತೊಟ್ಟಿಲು ಬಿಡಲು ಕೂಡಲೇ, ತೊಟ್ಟಿಲು ಮಾಡಿದ ಹುಡುಗನ ಬಚ್ಚಲಲ್ಲಿ ಬ೦ದು ನಿ೦ತನು. ಅವರಿಬ್ಬರು ಮಾತಾಡಿಕೊ೦ಡರು. ತೊಟ್ಟಿಲನ್ನು ನೀರಲ್ಲಿಟ್ಟಾಗೊಮ್ಮೆ ಆ ಹುಡುಗ ಬರತೊಡಗಿದನು. ನೀರೊಳಗಿ೦ದ ತೊಟ್ಟಿಲು ತೆಗೆಯುತ್ತಲೇ ಅವನು ತನ್ನ ಮನೆಗೆ ಹೋಗುತ್ತಿದ್ದನು. ಹೀಗೆ ನಾಲ್ಕೊಪ್ಪತ್ತು ದಿನ ನಡೆಯಿತು.ನಾವೆಲ್ಲ ಸರಿಯಾಗಿದ್ದೇವೆ. ತಂಗಿ ಹೇಗಿದ್ದಾಳೋ ನೋಡಿಕೊಂಡು ಬರಬೇಕೆಂದು ಅಕ್ಕಂದಿರೆಲ್ಲ ಮನೆಗೆ ಬಂದರು. “ತಂಗ್ಯಾ ತಂಗ್ಯಾ ಬಾಗಿಲತೆಗೆ” ಎ೦ದರು. ತಂಗಿ ಬಾಗಿಲು ತೆಗೆದು ಅವರನ್ನು ಒಳಗೆ ಕರಕೊ೦ಡು ಹೋದಳು. ಊಟ ಉಪಚಾರ ಮಾಡಿದಳು. ಸುತ್ತಲೆಲ್ಲ ತಿರುಗಾಡಿ ನೋಡಿ, ಉಣ್ಣಲಿಕ್ಕೆ ತಿನ್ನಲಿಕ್ಕೆ ಏನಿದೆ ಇಲ್ಲಿ ? ಶಿವನ ಮನೆ ! ಅವರಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಅದನ್ನು ತೋರಗೊಡದೆ ಅಕ್ಕಗಳೆಲ್ಲ ಹೋಗಿಬಿಟ್ಟರು.
ಮತ್ತೆ ನಾಲ್ಕು ದಿನ ಬಿಟ್ಟು ಬಂದರು. “ಅವ್ವ ! ಎಂದಿಲ್ಲದ ಅಕ್ಕಗಳು ಬಂದಿದ್ದಾರೆಂದು” ಹೇಳಿ ಮಂಚದ ಮೇಲೆ ಕುಳ್ಳಿರಿಸಿದಳು. ಸವತೀಬೀಜ ಹುಗ್ಗಿ ಮಾಡಿದಳು. ಅಕ್ಕಗಳು ಬರುವಾಗ ಖುಸಾಳಿಮುಳ್ಳು ಬಳೆಚೂರು ಕಲೆಸಿ ಕಾಗದ ಚೂರಿನಲ್ಲಿ ಕಟ್ಟಿಕೊಂಡು ಬಂದಿದ್ದರು. ತಂಗಿ ಅಡಿಗೆ ಮನೆಯಲ್ಲಿ ಹೋದಕೂಡಲೇ ಗಾದಿಯಮೇಲೆಲ್ಲ ಖುಸಾಳಿಮುಳ್ಳು ಹರಹಿಬಿಟ್ಟರು. ಊಟವಾದ ಮೇಲೆ ತಂತಮ್ಮ ಮನೆಗೆ ಹೋದರು.
ಅಕ್ಕಗಳು ಹೋದ ಬಳಿಕ ತಂಗಿ ತೊಟ್ಟಿಲವನ್ನು ನೀರಲ್ಲಿ ಒಗೆದಳು. ಸಬರ ಕೊಟ್ಟ ಹುಡುಗನು ತಟ್ಟನೆ ಬಂದನು. ಸವತೀಬೀಜ ಹುಗ್ಗಿಯನ್ನು ಉಣಿಸಲು ಆತನನ್ನು ಬರಮಾಡಿಕೊಂಡಿದ್ದಳು. ಪಲ್ಲಂಗದ ಗಾದಿಯ ಮೇಲೆ ಅತನು ಕೂಡುತ್ತಲೆ - “ನನ್ನನ್ನು ಕೊಂದಿ” ಎಂದು ಆಕ್ರೋಶಿಸಿದನು. ಜಲ್‌ದಿ ತೊಟ್ಟಿಲ ತೆಗೆ. ನಾ ಹೋಗತೀನಿ ಎ೦ದು ಚೇರಾಡಿದನು. ಆಕೆ ನೀರೊಳಗಿಂದ ತೊಟ್ಟಿಲು ತೆಗೆದಳು. ಆವನು ಹೋಗಿಬಿಟ್ಟನು.
ಬಂದು ನೋಡಿದರೆ ಗಾದಿಯ ಮೇಲೆಲ್ಲ ಬಳೆಚೂರು ಬಿದ್ದಿವೆ; ಖುಸಾಳಿಮುಳ್ಳು ಬಿದ್ದಿವೆ. ಅವನ್ನು ನೋಡಿ ಆಕೆಯ ಮನದಲ್ಲಿ ತಳಮಳವಾಯಿತು.
ತನ್ನ ಮನೆಗೆ ಹೋದ ಆ ಹುಡುಗನು ಬೊಬ್ಬೆಯಿಟ್ಟನು. ಮೈಯೆಲ್ಲ ಉರಿ ಹಚ್ಚಿದಂತೆ ಬೇನೆ ಆಯಿತು. ಯಾವ ಔಷಧಿ ಕೊಟ್ಟರೂ ಬೇನೆ ಕಡಿಮೆ ಆಗಲಿಲ್ಲ. ಭಿಕ್ಷುಕ ವೇಷ ಹಾಕಿಕೊಂಡು ಕಿರಿಯಮಗಳು ಹೊರಟಳು. ಹಾದಿಯಲ್ಲಿ ನಂದ್ಯಾಲಗಿಡದ ಕೆಳಗೆ ಅಡ್ಡಾದಳು. ನೆಲಕ್ಕೆ ಮೈ ಹತ್ತುವಷ್ಟರಲ್ಲಿ ಆಕೆಯ ಕಿವಿಯಲ್ಲಿ ಒಂದು ಮಾತು ಬಿತ್ತು - “ನಮ್ಮ ಹೇಲು ಕುದಿಸಿ ಮೈಯೆಲ್ಲ ಹಚ್ಚಿದರೆ ಮುಳ್ಳುಕಾಜು ಉದುರಿ ಹೋಗುತ್ತವೆ”. ಗಂಡುಹೆಣ್ಣು ಗರುಡಪಕ್ಷಿಗಳು ತಂತಮ್ಮೊಳಗೆ ಮಾತಾಡುತ್ತಿದ್ದವು. ಗಿಡದ ಕೆಳಗೆ ಬಿದ್ದ ಗರುಡಪಕ್ಷಿಗಳ ಹೇಲನ್ನು ಜೋಳಿಗೆಯಲ್ಲಿ ಹಾಕಿಕೊಂಡು ಆ ಹುಡುಗನ ಮನೆಗೆ ಹೋದಳು.ಅಲ್ಲಿ ಹುಡುಗನು ಹಾಸಿಗೆಯಲ್ಲಿ ಹೊರಳಾಡುತ್ತಿದ್ದನು; ಬೋರಾಡಿ ನರಳಾಡುತ್ತಿದ್ದನು. “ಈ ಬೇನೆಯನ್ನು ನಾನು ನೆಟ್ಟಗೆ ಮಾಡತೀನಿ” ಎಂದು ಭಿಕ್ಷುಕಿ ಹೇಳಿದರೂ, ಯಾರೂ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಬಹಳ ಹೇಳಿಕೊಂಡಮೇಲೆ “ನೀ ಏನು ಮಾಡುತ್ತೀ' ಎ೦ದು ಕೇಳಿದರು. “ನನಗೊಂದು ಔಷಧಿ ಗೊತ್ತಿದೆ” ಎನ್ನಲು ಆಕೆಯನ್ನು ಒಳಗೆ ಬಿಟ್ಟರು.
ಮೂರುಕಲ್ಲು ಇಟ್ಟು ಮೇಲೊಂದು ಬೋಕಿಯಿಕ್ಕಿ ಒಲೆ ಹೂಡಿ ಹೇಲು ಕುದಿಸಿದಳು. ಆ ಬೂದಿ ತೆಗೆದುಕೊಂಡು ಆ ಹುಡುಗನ ಮೈಗೆಲ್ಲ ಒರೆಸಿದಳು. ಕಾಜು, ಮುಳ್ಳು ಎಲ್ಲ ಉದುರಿ ಬಿದ್ದವು. ಹುಡುಗನಿಗೆ ಸಂತೋಷವಾಗಿ ಮೈಮೇಲಿನ ಶಾಲು ಹಾಗೂ ಮುದ್ರೆಯುಂಗುರ ತೆಗೆದುಕೊಟ್ಟನು. ಆಕೆ ಅವುಗಳನ್ನು ತೆಗೆದುಕೊಂಡು ನೆಟ್ಟಗೆ ಮನೆಗೆ ಬಂದಳು.
ಮನೆಗೆ ಬಂದವಳೇ ಹಿಟ್ಟುನಾದಿ ಕಣಕಮಾಡಿ, ಅದರಿಂದ ಮಾಡಿದ ಮೂರ್ತಿಗೆ ಸೀರೆಯುಡಿಸಿ ವಸ್ತ್ರ ತೊಡಿಸಿ, ಪಡಸಾಲೆಯಲ್ಲಿ ಕುಳ್ಳಿರಿಸಿದಳು. ಬಚ್ಚಲಿಗೆ ಹೋಗಿ ಸಬರದ ತೊಟ್ಟಲು ಬಿಟ್ಟಳು. ಹುಡುಗನು ಸಿಟ್ಟಿನಲ್ಲಿಯೇ ಬಂದನು, ಮತ್ತೇಕೆ ಈಕೆ ನನ್ನನ್ನು, ಕರೆದಳು - ಅನ್ನುತ್ತ. ಪಡಸಾಲೆಯಲ್ಲಿ ಆಕೆಯೇ ಕುಳಿತಿದ್ದಾಳೆಂದು ಬತ ತಲವಾರದಿಂದ ಹೊಡೆಯುತ್ತಾನೆ. ಕಣಕದಲ್ಲಿರುವ ಬೆಲ್ಲದ ಪಾಕವೆಲ್ಲ ಸೋರಾಡುತ್ತದೆ. ಆಗ ಸಣ್ಣಾಕೆ ಶಾಲು ಮತ್ತು ಉಂಗುರ ತೆಗೆದುಕೊಂಡು ಪಡಸಾಲೆಗೆ ಬರುತ್ತಾಳೆ.
“ಇವೆಲ್ಲಿಂದ ಬಂದವು” ಎಂದು ಹುಡುಗನು ಕೇಳಲು, “ನಾನೇ ಭಿಕ್ಷುಕಳಾಗಿ ಬಂದಿದ್ದು; ನಾನೇ ನಿನ್ನನ್ನು ಗುಣಪಡಿಸಿದ್ದು. ನಮ್ಮ ಅಕ್ಕಗಳು ಮಾಡಿದ ಫಲವನ್ನು ನಾನೇ ಭೋಗಿಸಬೇಕಾಯಿತು” ಎಂದು ಹೇಳಿದಳು. ಆಗ ಆತನಿಗೆ ಸಮಾಧಾನವಾಯ್ತು. ಆ ಬಳಿಕ ಆಕೆ ನಿಚ್ಚ ಸಬರದ ತೊಟ್ಟಿಲು ನೀರಲ್ಲಿ ಬಿಡುವಳು; ನಿಚ್ಚ ಆ ಯುವಕ ಬರುವನು.
ಜಂಬುನೀರಲ
ಹೊತ್ತು ಹೊರಟರೆ ಎಳ್ಳು ಅಮಾಸಿ. ಹೊಲಕ್ಕೆ ಚರಗ ಒಯ್ಯಬೇಕು. ಆ ಕಳಶೆಟ್ಟಿಯವರ ಮನೆಯಲ್ಲಿ ಏಳುಜನ ನೆಗೇಣಿಮಕ್ಕಳು. ಅವರು ಇಡಿಯರಾತ್ರಿ ನಿದ್ರೆಯಿಲ್ಲದೆ ಕೆಲಸಮಾಡಿದರು.
ಒಲೆ,ಅಡಿಗೆಮನೆ ಮೊದಲು ಮಾಡಿ ಇಡಿಯ ಮನೆಯನ್ನು ಸಾರಿಸುವುದು. ಒತ್ತಲಕ್ಕೆ ಬೆಂಕಿಹಾಕಿ ನೀರುಕಾಯಿಸಿ ಎರಕೊಳ್ಳುವುದು. ಒಬ್ಬಿಬ್ಬರು ಕಾಯಿಪಲ್ಯೆ ಸೋಸಿದರೆ, ಮತ್ತೆ ಒಬ್ಬಿಬ್ಬರು ಅಡಿಗೆ ಅಂಬಲಿ ಮಾಡಿದರು. ಮಾಡಿದ ಅಡಿಗೆಯನ್ನು ಹೆಡಿಗೆಬುಟ್ಟಿಯಲ್ಲಿ ಓರಣವಾಗಿ ಹೊಂದಿಸಿಟ್ಟರು ಬೇರಿಬ್ಬರು.
ಆ ಏಳು ಜನ ನೆಗೇಣಿಯರಲ್ಲಿ ನಾಗಮ್ಮ ಚಿಕ್ಕವಳು. ಅವಳನ್ನು ಮನೆಯ ಕಾವಲಕ್ಕೆ ಬಿಟ್ಟರು. ಮನೆಮಾರು ಜೋಕೆಯೆಂದು ಹೇಳಿದರು; ಆಕಳ ಕರುವನ್ನು ಬಿಟ್ಟು ಕೊಡುವುದನ್ನೂ ಕಟ್ಟಿಹಾಕುವುದನ್ನೂ ಸೂಚಿಸಿದರು.
ಮಧ್ಯಾಹ್ನದಲ್ಲಿ ಆಕಳ ಕರುವನ್ನು ಬಿಟ್ಟು ಬೇರೆ ಗೂಟಕ್ಕೆ ಕಟ್ಟಬೇಕೆನ್ನುವಷ್ಟರಲ್ಲಿ ಅದು ರಾಜಬೀದಿಗೆ ಹೋಗಿಬಿಟ್ಟಿತು. ಅದನ್ನು ಅಟ್ಟಿಕೊಂಡು ಹೊರಟ ನಾಗಮ್ಮ ಪಟ್ಟಸಾಲೆಯ ಶೆಟ್ಟಿಯವರ ಮನೆಯ ಮುಂದೆ ಹಾದು ಬರುವಾಗ ಕೇರಿಯಲ್ಲಿ ಸಂಧಿಸಿದ ಶೆಟ್ಟಿಯು ಆಕೆಯನ್ನು ಕಂಡನು. ಆಕೆಯೊಡನೆ ಆತನ ಮನಸ್ಸೂ ಹಿಂಬಾಲಿಸಿತು. ಏನು ಮಾಡಿವುದನ್ನು?
ಶೆಟ್ಟಿ ಲಗುಬಗೆಯಿಂದ ಮನೆಯ ಹೋದವನೇ ಹಾಸಿಕೊಂಡು ಮಲಗಿಬಿಟ್ಟನು. "ತಲೆನೋವೇ, ಹೊಟ್ಟೆನೋವೇ" ಎಂದು ತಾಯಿ ಕೇಳಿದರೆ-"ಯಾವುದೂ ಬೇನೆಯಲ್ಲ: ಸರಿಕೆಯಲ್ಲಿ. ಕಳಶೆಟ್ಟಿಯವರ ಸೊಸೆಯಮೇಲೆ ನನ್ನ ಮನಸ್ಸು ಹೋಗಿದೆಯವ್ವ!" ಎಂದು ಹೊಟ್ಟೆಬಿಚ್ಚಿ ಹೇಳಿದನು. ಅದನ್ನು ಸಾಧಿಸುವ ಚಿಂತೆ ತಾಯಿಗೆ ಅಂಟಿಕೊಂಡಿತು. ಅದರ ಯುಕ್ತಿಯೂ ಆಕೆಗೆ ಹೊಳೆಯಿತು.
ಅಂದೇ ಸಾಯಂಕಾಲಕ್ಕೆ ಕಲಶೆಟ್ಟಿಯವರ ಏಳೂ ಜನ ನೆಗೇಣಿ ಮಕ್ಕಳಿಗೆ ಮುತ್ತೈದೆತನದ ಊಟಕ್ಕೆ ಹೇಳಿಸಿದರು, ಪಟ್ಟಸಾಲೆಯ ಶೆಟ್ಟರು. ಸಾಯಂಕಾಲಕ್ಕೆ ಅವರೆಲ್ಲ ಬಂದರು. ಗಂಧ, ಕುಂಕುಮ, ಉಡಿಯಕ್ಕಿಗಳಿಂದ ಅವರನ್ನು ಸತ್ಕರಿಸಿದ ಬಳಿಕ ಉಣಬಡಿಸಲಾಯಿತು. ಚಿಕ್ಕವಳಾದ ನಾಗಮ್ಮನ ಎಡೆಯಲ್ಲಿ ನೊಣಹೊಡೆದು ಬೇಕೆಂದೇ ಬೆರೆಸಿದರು. ಉಂಡೆದ್ದು ಎಲೆ ಅಡಿಕೆ ತೆಗೆದುಕೊಳ್ಳುವ ಹೊತ್ತಿಗೆ ನಾಗಮ್ಮನಿಗೆ ಹಿಂದಕ್ಕೆ ಮುಂದಕ್ಕೆಂದರೆ ವಾಂತಿ-ಭೇದಿ ಆಗತೊಡಗಿತು. ಅಷ್ಟರಲ್ಲಿ ತುಸು ರಾತ್ರಿಯೇ ಆಗಿದ್ದರಿಂದ ಇನ್ನುಳಿದ ಆರೂ ಜನ ನೆಗೇಣಿಯವರನ್ನು ಕಳಿಸಿಕೊಡುವಾಗ—"ನಾಗಮ್ಮನು ತುಸು ವಿಶ್ರಾಂತಿ ತೆಗೆದುಕೊಳ್ಳಲಿ ಮುಂಜಾನೆ ಬರುವಳು" ಎಂದರು.
ರಾತ್ರಿಯ ಸಟ್ಟ ಸರಿಹೊತ್ತು. ಶೆಟ್ಟಿಯು ನಾಗಮ್ಮನ ಮೈಮುಟ್ಟ ಕೈಮುಟ್ಟ ಹೋಗತೊಡಗಿದನು. ಆ ಸಂದರ್ಭದಲ್ಲಿ ನಾಗಮ್ಮನು ತನ್ನ ಕೊರಳೊಳಗಿನ ಪುತ್ಥಳಿಸರವನ್ನು ಬೇಕೆಂದಲೇ ಹರಿದು ಚಲ್ಲಾಡಿದಳು. ಅಲ್ಲದೆ "ನಮ್ಮತ್ತೆ ಬಯ್ಯುತ್ತಾಳೆ. ಮೊದಲಿದನ್ನು ಪವಣಿಸಿಕೊಡಿರಿ" ಎಂದು ಛಲ ಹಿಡಿದಳು. ಶೆಟ್ಟಿ ಅದೇನು ಮಹಾಕೆಲಸ ಎಂದು, ಪುತ್ಥಳಿಸರವನ್ನು ಪವಣಿಸತೊಡಗಿದನು. ಆತನು ಮುಂದೆ ಪವಣಿಸಿದಂತೆ, ಆಕೆ ಹಿ೦ದಿನದನ್ನು ಮೆಲ್ಲನೆ ಉಚ್ಚಲು ತೊಡಗಿದಳು. ಅಷ್ಟರಲ್ಲಿ ನಸುಕುಹರಿಯಿತು.
"ಕಾಲುಮಡಿದು ಬರಬೇಕು. ಬಾಗಿಲು ತೆಗೆಯಿರಿ" ಎಂದಳು ನಾಗಮ್ಮ.
"ಭಾಷೆಕೊಟ್ಟು ಹೋಗು" ಎಂದನು ಶೆಟ್ಟಿ.
ಎದೆಯ ಮೇಲಿನ ಸೆರಗಿನ ಚುಂಗನ್ನು ಆತನ ಕೈಗಿತ್ತು ಮೆಟ್ಟುಗಟ್ಟೆ ಇಳಿಯುತ್ತ ಒಂದೊಂದು ನಿರಿಗೆ ಉಚ್ಚಿದಳು. ನಾಲ್ಕು ಸೋಪಾನಗಳನ್ನಿಳಿದು ಸೀರೆಯ ಕೆಳ ಸೆರಗನ್ನು ಅಂಗಳದಲ್ಲಿ ಕಟ್ಟಿದ ಎಮ್ಮೆಯ ಕೋಡಿಗೆ ಸಿಕ್ಕಿಸಿದವಳೇ ತನ್ನ ಮನೆಯತ್ತ ಧಾವಿಸಿದಳು.
"ಅತ್ತೆವ್ವ ಅತ್ತೆವ್ವ ಬಾಗಿಲು ತೆಗೆಯಿರಿ" ಎ೦ಬ ದನಿ ಕೇಳಿ, ಒಳಗಿನವರು ಕೇಳಿದರು—"ಇಂಥ ಕತ್ತಲು ರಾತ್ರಿಯಲ್ಲಿ ಬಂದ ನೀನು ದೆವ್ವವೋ ಭೂತವೋ? ಏನಿರುವಿ?"
"ದೆವ್ವಲ್ಲ ಭೂತವೂ ಅಲ್ಲ. ಅತ್ತೆ, ನಾನು ನಿನ್ನ ಚಿಕ್ಕ ಸೊಸೆ ನಾಗಮ್ಮ"
ಎನ್ನಲು ಅತ್ತೆ ಓಡಿಬ೦ದು ಬಾಗಿಲು ತೆರೆದಳು.
"ಹೀಗೇಕೆ" ಎಂದು ಕೇಳಲು ನಡೆದ ಸ೦ಗತಿಯನ್ನೆಲ್ಲ ನಾಗಮ್ಮ ಅತ್ತೆಯ ಮುಂದೆ ವಿವರಿಸಿದಳು.
ಪಟ್ಟಸಾಲೆಂಖ ಶೆಟ್ಟಿಯ ಕೈಗೆ ಬಂದರೂ ಬಾಯಿಗೆ ಬರಲಿಲ್ಲ, ಆ ಜಂಬುನೀರಲ ಹಣ್ಣು.ಪಾಪಾತ್ಮ ರಾಜ
ಪಾಪಾತ್ಮ ರಾಜನ ರಾಜ್ಯದಲ್ಲಿ ಸಂಪತ್ತು ಬಹಳವಿತ್ತು. ಅದೆಲ್ಲ ಅರಮನೆ, ದಂಡು, ಪರಿವಾರ ಅವುಗಳಿಗೇ ಖರ್ಚಾಗಿ ಬಿಡುತ್ತಿತ್ತು. ಆದರೆ ರಾಜನಿಗೆ ಹಣವನ್ನು ಕೂಡಹಾಕಬೇಕೆಂಬ ಹವ್ಯಾಸ ಬಹಳ. ಅದಕ್ಕಾಗಿ ಅವನು ಹೆಂಡತಿ, ಮಕ್ಕಳು, ರಾಜ್ಯ ಬಿಟ್ಟುಕೊಟ್ಟು ಕೈಯಲ್ಲಿ ಸಾವಿರ ರೂಪಾಯಿ ತೆಗೆದುಕೊಂಡು ದೇಶಾಂತರಕ್ಕೆ ಹೊಗಿಬಿಟ್ಟನು.
ಹನ್ನೆರಡು ಯೋಜನ ದಾಟಿ ಹೋದನು. ಮೂರುದಿನ ಊಟ ಮಾಡಿರಲಿಲ್ಲ. ದಾರಿಯಲ್ಲಿ ಒಂದು ಆಲದಮರವನ್ನು ನೋಡಿ ಅದರ ಹಣ್ಣುಗಳನ್ನು ತಿನ್ನಬೇಕೆಂದು ಹತ್ತಿರ ಹೋದನು. ಅಷ್ಟರಲ್ಲಿ ಮರದ ಮೇಲೆ ಕುಳಿತ ಹಕ್ಕಿಗಳೆಲ್ಲ ಕೂಗಿದವು-"ಈತನು ಮಹಾಧನಲೋಭಿ. ಹಣದಾಶೆಗಾಗಿ ತನ್ನನ್ನು ನಂಬಿದ ಹೆಂಡರು ಮಕ್ಕಳನ್ನು ಸಹ ಬಿಟ್ಟು ಬಂದ ಪಾಪಿ. ಈತನಿಗೆ ಆಶ್ರಯ ಕೊಡಬೇಡ."
ಆಲದ ಮರವು ಎಲೆಗಳನ್ನೆಲ್ಲ ಉದುರಿಸಿ ಅವನಿಗೆ ನೆರಳು ಸಿಗದಂತೆ ಮಾಡಿತು. ತಿನ್ನುವಾಸೆಯಿಂದ ಹಣ್ಣುಗಳಿಗೆ ಕೈ ಹಾಕಿದರೆ, ಹಣ್ಣಿನ ತುಂಬ ಹುಳುಗಳೇ ಬುಚುಗುಡುತ್ತಿದ್ದವು. ಅವನು ನಿರಾಶನಾಗಿ ಅಲ್ಲಿಂದೆದ್ದನು.
ಮತ್ತೆ ಹನ್ನೆರಡು ಗಾವುದ ನಡೆದು ಹೋಗಲು, ರಾಜನು ಮಗಳ ಊರನ್ನು ತಲುಪಿದನು. ಮಗಳಿಗೆ ಬಡತನ ಬಂದಿತ್ತು. ಕಟ್ಟಿಗೆ ಹೊರೆತಂದು ಮಾರಿಕೊಂಡು ಉಪಜೀವನ ಸಾಗಿಸುತ್ತಿದ್ದಳು. ತನ್ನ ಬಳಿಯಲ್ಲಿರುವ ಹಣವನ್ನು ಕಂಗಾಲಳಾದ ಮಗಳು ನೋಡಿದರೆ ದೋಚದೆ ಬಿಡಳೆಂದು ಬಗೆದು, ಎರಡು ಬಟ್ಟೆಯ ತುಂಡುಗಳಲ್ಲಿ ಐದೈದು ನೂರು ನಾಣ್ಯಗಳನ್ನು ಹರಹಿ, ತನ್ನ ಎರಡೂ ಕಾಲುಗಳಿಗೆ ಸುತ್ತಿಕೊಂಡು ಮೇಲೆ ಹುರಿಯಿಂದ ಬಿಗಿದನು. ನಡೆಯುವುದಕ್ಕೆ ಕಷ್ಟವಾದರೂ, ಕಾಲುಗಳಿಗೆ ನೋವಾದರೂ ಸಹಿಸಿಕೊಂಡು ಮಗಳ ಮನೆಗೆ ಹೋದನು.
ಮಗಳು ಬಡವಿಯಾದರೂ ಬಹಳ ದಿನಕ್ಕೆ ಬಂದ ತಂದೆಯನ್ನು ಆನಂದದಿಂದ ಬರಮಾಡಿಕೊಂಡಳು. ತಾನು ಅರೆಹೊಟ್ಟೆಯುಂಡು, ತಂದೆಗೆ ಊಟದಿಂದ ತೃಪ್ತಿ ಪಡಿಸಿದಳು. ಒಂದೆರಡು ದಿನಗಳಲ್ಲಿ ದೀಪಾವಳಿ ಹಬ್ಬ ಬಂತು. ಮಗಳ ಬಳಿಯಲ್ಲಿ ಏತಕ್ಕೂ ಹಣವಿರಲಿಲ್ಲ. ಅದು ಗೊತ್ತಿದ್ದರೂ ತನ್ನಲ್ಲಿರುವ ಹಣ ತೆಗೆದು ಕೊಡಲಿಲ್ಲ.
ಕಾಲುನೋವಿನಿಂದ ಮಿಡುಕುವ ತಂದೆಯನ್ನು ಉಪಚರಿಸಬೇಕೆಂದು ಮಗಳು ಹತ್ತಿರಕ್ಕೆ ಬಂದರೂ ತಂದೆ ತನ್ನನ್ನು ಮುಟ್ಟಗೊಡಲಿಲ್ಲ. ಆದರೆ ಆತನಿಗೆ ನಿದ್ರೆ ಹತ್ತಿದಾಗ ಮಗಳು ಆತನ ಕಾಲಬಟ್ಟೆ ಬಿಚ್ಚುವಷ್ಟರಲ್ಲಿ ನಾಣ್ಯಗಳೆಲ್ಲ ಚೆಲ್ಲಾಡಿದವು. ತಂದೆಗೆ ಎಚ್ಚರವೂ ಆಯಿತು. "ಇಷ್ಟು ಹಣ ಹತ್ತಿರ ಇರಿಸಿಕೊಂಡೂ, ನಮ್ಮ ಗೋಳಾಟದಲ್ಲಿ ನೆರವಾಗಲಿಲ್ಲವಲ್ಲ ನೀನು" ಎಂದು ತಂದೆಗೆ ಮಗಳು ಸ್ಪಷ್ಟವಾಗಿಯೆ ನುಡಿದಳು.
"ನಾನು ಈ ಹಣಕ್ಕಾಗಿಯೇ ಮನೆಯನ್ನೂ ರಾಜ್ಯವನ್ನೂ ಬಿಟ್ಟು ಬಂದಿದ್ದೇನೆ. ನನ್ನ ಜೀವಹೋಗುವ ಪ್ರಸಂಗ ಬಂದರೂ ನಾನು ಯಾರಿಗೂ ಹಣ ಕೊಡುವುದಿಲ್ಲ"
ಎಂದು ತಂದೆ ಹೇಳಿಬಿಟ್ಟು ಮುಂದಿನ ಹಾದಿ ಹಿಡಿದನು.
ಒಂದು ಕಟ್ಟಡವಿ. ಹೊತ್ತ ಮುಳುಗಿದೆ. ಮುಂದೆ ಒಂದು ಗುಹೆ ಕಾಣಿಸಿತು. ಹತ್ತಿರ ಹೋದರೆ ಅದರ ಬಾಗಿಲಲ್ಲಿ ಸತ್ತ ಪ್ರಾಣಿಗಳ ಅಸ್ಥಿಪಂಜರಗಳು ಹರಡಿಕೊಂಡಿದ್ದವು. ಅದನ್ನು ಕಂಡು ರಾಜನಿಗೆ ಭಯವೆನಿಸಿತು. ಆದರೂ ಗುಹೆಯ ಜಾಗಿಲಲ್ಲಿ ಕುಳಿತುಕೊಂಡನು. ಅಷ್ಟರಲ್ಲಿ ಮನುಷ್ಯಪ್ರಾಣಿಯ ವಾಸನೆಹಿಡಿದು ಒಂದು ಹುಲಿ ಅಲ್ಲಿಗೆ ಬಂದುದೇ ಅವನ ಮೇಲೆ ಹಾರಿ ಕೊಂದು ತಿಂದು, ಉಳಿದುದನ್ನು ಗುಹೆಯಲ್ಲಿ ಒಗೆದು ಮತ್ತೆ ಹೋಯಿತು ಅರಣ್ಯಕ್ಕೆ.
ರಾಜನ ಅಸ್ಥಿಪಂಜರವನ್ನು ನರಿಗಳು ಗುಹೆಯೊಳಗಿಂದ ಹೊರಗೆ ಎಳತಂದು ಹೊಟ್ಟೆತುಂಬ ತಿಂದವು. ಹದ್ದು ಕಾಗೆಗಳು ನೆರೆದು ಅವನ ದೇಹವನ್ನು ಹರಿದು ಕೊಂಡು ತಿನ್ನುವಾಗ ಬೆಳ್ಳಿಯ ರೂಪಾಯಿಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದವು.
ಆ ಅರಣ್ಯದಲ್ಲಿ ಏಳು ಜನ ಕಳ್ಳ ಸೋದರರಿದ್ದರು. ಅವರು ಕಳವು ಮಾಡಿ ತಂದ ಹಣವನ್ನು ನಿತ್ಯದಂತೆ ಗುಹೆಯ ಮುಂದೆ ಕುಳಿತು ಹಂಚಿಕೊಳ್ಳುವಾಗ ಸತ್ತು ಬಿದ್ದ ಹೆಣದ ಸುತ್ತಲು ಚೆಲ್ಲಾಡಿದ ಹಣವನ್ನೆಲ್ಲ ಒಟ್ಟುಗೂಡಿಸಿ ಎಣಿಸಿ ನೋಡಿದರೆ ಸಾವಿರ ರೂಪಾಯಿ ಇದ್ದವು.
ಮನೆಯಿಂದ ಬುತ್ತಿ ತರುವದಕ್ಕಾಗಿ ಕಳ್ಳರು ತಮ್ಮ ಚಿಕ್ಕ ತಮ್ಮನನ್ನು ಊರೊಳಗೆ ಕಳಿಸಿದ್ದರು. ಬುತ್ತಿಕಟ್ಟಿಕೊಂಡು ತಿರುಗಿ ಬರುವಾಗ ಅವನಲ್ಲಿ ದುರ್ಬುದ್ಧಿ ಹುಟ್ಟಿಕೊಂಡಿತು. ಆರು ಜನ ಅಣ್ಣಂದಿರನ್ನೆಲ್ಲ ಕೊಂದುಹಾಕಿದರೆ ಅಷ್ಟೆಲ್ಲ ದ್ರವ್ಯ ತನ್ನದಾಗುವದೆದು ಇಲಿಪಾಷಾಣ, ಶಂಖಪಾಷಾಣ ಎಂಬ ವಿಷಗಳನ್ನು ಅರಣ್ಯದಲ್ಲಿ ದೊರಕಿಸಿ ಅಣ್ಣಂದಿರ ಬುತ್ತಿಯಲ್ಲಿ ಬೆರೆಸಿದನು. ಅದರಲ್ಲಿ ತನ್ನ ಬುತ್ತಿಯೂ ಇದ್ದುದನ್ನು ಮರೆತೇಬಿಟ್ಟನು.
ಎಲ್ಲರೂ ಕೂಡಿ ತಂತಮ್ಮ ಮನೆಯಿಂದ ತರಿಸಿಕೊಂಡ ಬುತ್ತಿಗಳನ್ನು ಬಿಚ್ಚಿ ಉಣ್ಣಲು, ವಿಷವೇರಿ ಸತ್ತುಬಿದ್ದರು.
ಆ ಊರಿನ ರಾಜ, ಪ್ರಧಾನಿ ಬೇಟೆಯಾಡುತ್ತ ಆ ಸಂದರ್ಭದಲ್ಲಿ ಗುಹೆಯ ಬಳಿ ಬಂದರು. ಏಳು ಜನ ಸತ್ತುಬಿದ್ದುದನ್ನು ಕಂಡರು. ಅವರೆಲ್ಲ ಕಳ್ಳರೇ ಎಂದು ನಿರ್ಧರಿಸಿದರು. ಅಲ್ಲಿ ಸೂರೆಗೊಂಡ ಹಣವನ್ನೆಲ್ಲ ಚೀಲು ತುಂಬಿ ಕುದುರೆಗಳ ಮೇಲೆ ಹೇರಿಸಲು ರಾಜನು ಪ್ರಧಾನಿಗೆ ತಿಳಿಸಿದನು. ಅದರಂತೆ ಪ್ರಧಾನಿಯು ಹಣವನ್ನೆಲ್ಲ ಗಂಟುಬಿಚ್ಚಿ ಕುದುರೆಗಳ ಮೇಲಿಟ್ಟು ಹಗ್ಗದಿಂದ ಬಿಗಿಸಿದನು, ರಾಜನೂ ಪ್ರಧಾನಿಯೂ ತಂತಮ್ಮ ಕುದುರೆ ಹತ್ತಿ ಊರಕಡೆಗೆ ಸಾಗಿದರು.
ಪ್ರಧಾನಿಯ ಮನದಲ್ಲಿ ವಿಕಲ್ಪವು ಮೊಳೆಯಿತು, ಅಷ್ಟೆಲ್ಲ ದ್ರವ್ಯವು ತನ್ನದೇ ಆಗಲೆಂದು. ಸೊಂಟದೊಳಗಿನ ಚಂದ್ರಹಾರದಿಂದ ರಾಜನ ಕುತ್ತಿಗೆಗೆ ಜಡಿದನು. ಅದರಿಂದ ಅವನ ರುಂಡ-ಮುಂಡಗಳು ಬೇರ್ಪಟ್ಟು ಬಿದ್ದವು. ಆದರೆ ರಾಜನ ರುಂಡವು ಟುಣುಪುಣು ಜಿಗಿದಾಡತೊಡಗಿತು — "ಮಂತ್ರೀ, ನನ್ನ ಉಪ್ಪನ್ನುಂಡು ದ್ರವ್ಯದಾಶೆಯಿಂದ ನನ್ನ ಹೆಣವನ್ನೇ ಕೆಡವಿದಿಯಲ್ಲ! ಹಣವನ್ನು ಅದೆಷ್ಟು ಚಲ್ಲಿದರೆ ಈ ಸತ್ತ ಜೀವವು ಬಂದೀತು?” ಎಂದು ದವಡೆಕಚ್ಚಿ ಕೇಳಿದಂತಾಯಿತು. ಮರುಕ್ಷಣವೇ ರುಂಡವು ಉರುಳುತ್ತ ಹೋಗಿ ಹತ್ತಿರದ ಬಾವಿಯಲ್ಲಿ ಬಿದ್ದುಕೊಂಡಿತು.
ಮಂತ್ರಿಗೆ ಅತಿಶಯ ಪಶ್ಚಾತ್ತಾಪವಾಯಿತು. ಅರಮನೆಯಲ್ಲಿ ಕೇಳಿದರೆ ಅವರಿಗೆ ಏನೆಂದು ಹೇಳಲಿ? ಹಣದಾಶೆಯಿ೦ದ ನಾನು ಪರಮನೀಚನಾದೆ ಎಂದು ಎಲ್ಲ ಅನರ್ಥಗಳಿಗೂ ಮೂಲವಾದ ಹಣವನ್ನು ಬಾವಿಗೆ ಚೆಲ್ಲಿದನು. ಆ ಹಣದ ಸಹವಾಸದಿಂದ ತನಗೆ ದುರ್ಬುದ್ಧಿ ಬಂದಿತಲ್ಲದೆ, ತನಗೇನೂ ಅರಮನೆಯಯಲ್ಲಿ ಕಡಿಮೆಯಿರಲಿಲ್ಲವಲ್ಲ! ಆದ್ದರಿಂದ ಆ ಹಣವು ಪಾಪಿಯ ಹಣವೇ ಇರಬೇಕು. ಅಸಹ್ಯವಾದ ಈ ವೇದನೆಯು ಇಲ್ಲದಾಗಬೇಕಾದರೆ ನಾನೂ ರಾಜನ ರುಂಡ ಬಿದ್ದ ಬಾವಿಯಲ್ಲಿಯೇ ಬಿದ್ದು ಸಾಯುವುದೇ ಉಪಾಯವೆಂದು ಅತ್ತ ತೆರಳಿದನು.
"ಸ್ವಾಮಿದ್ರೋಹಿ, ಪಾಪಿ! ಈ ಬಾವಿಯಲ್ಲಿ ಬಿದ್ದು ಸತ್ತು ನೀರನ್ನು ಅಪವಿತ್ರ ಮಾಡಬೇಡ. ಆ ಸಾವಿರರೂಪಾಯಿಗಳ ಆಶೆಗೆ ಬಿದ್ದು ಈಗಾಗಲೇ ಒಂಬತ್ತು ಜನರು ಪ್ರಾಣತೆತ್ತಿದ್ದಾರೆ. ನೀನೊಬ್ಬ ಹತ್ತನೆಯವನು. ಮತ್ತೆಲ್ಲಾದರೂ ಹೋಗು" ಎಂದು ಬಾವಿಯೊಳಗಿನ ರಾಜನ ರುಂಡವು ಹೇಳಿದಂತಾಯಿತು.
ಮಂತ್ರಿ ಬಾವಿಗೆ ಬೀಳುವುದನ್ನು ಬಿಟ್ಟುಕೊಟ್ಟು ಕುದುರೆ ಹತ್ತಿ ಹನ್ನೆರಡುಗಾವುದ ದೂರ ಹೋದನು. ಅಲ್ಲಿಯ ಒಂದು ಮರಹತ್ತಿ ಕೆಳಗೆ ಬಿದ್ದು ಸಾಯಬೇಕೆಂದು ಯೋಚಿಸಿದನು. ಆದರೆ ಮರದಿಂದ ಹಾರಿದಾಗ ಸಾಯದೆ ಬರಿ ಕೈಕಾಲು ಮುರಿದರೇನುಗತಿ ಮುಂದೆ? ಅದರಿಂದ ಉರಲು ಹಾಕಿಕೊಂಡು ಸಾಯುವುದೇ ಒಳ್ಳೆಯದೆಂದು ಬಗೆದನು. ಸತ್ತುಬಿದ್ದರೆ ಪೆಟ್ಟುಹತ್ತಬಾರದೆಂಬ ಸುತ್ತಲಿನ ಅಡವಿಯಿಂದ ಬೆರಣಿಗಳನ್ನು ಆಯ್ಡು ತಂದು, ಮರದ ಕೆಳಗೆ ರಾಸಿಹಾಕಿ ಬಳಿಕ ಉರಲು ಹಾಕಿಕೂಂಡು ಸತ್ತನು.
ಒಂದು ಹುಲಿವೇನ್ನೇರಿ, ಅಲ್ಲಿಂದ ಅವನ ಹೆಣದ ಮೇಲೆ ಜಿಗಿದು ಕುಳಿತಿದ್ದರಿಂದ ಆ ಭಾರಕ್ಕೆ ಹಗ್ಗ ಹರಿದು ಹೆಣವು ಬೆರಣೆಯ ರಾಸಿಯ ಮೇಲೆ ಬಿತ್ತು. ಹುಲಿ ನೆಲಕ್ಕೆ ಹಾರಿ ಅವನ ಮಾಂಸ ತಿಂದು ಹೋಯಿತು. ಉಳಿದುದನ್ನು ನರಿಗಳು ಬಂದು ಹರಕೊಂಡು ತಿಂದವು.
ಬೇಟೆಗೆಂದು ಹೋದ ರಾಜನು ಇನ್ನೂ ಬರಲಿಲ್ಲವೆಂದು ರಾಣಿಗೆ ಬಹಳ ಚಿಂತೆಯಾಯಿತು. ಅವನನ್ನು ಹುಡುಕಲು ಹೋದ ಚಾರರು, ಒಂದು ಅಡವಿಯಲ್ಲಿ ಯಾರವೋ ಅಸ್ಥಿಪಂಜರಗಳು ಮಾತ್ರ ಬಿದ್ದಿವೆಯೆಂದೂ, ಹರಕುಬಟ್ಟೆ- ಬೆಳ್ಳಿಯ ನಾಣ್ಯಗಳು ಹರಡಿವೆಯೆಂದು ಸುದ್ದಿ ತಂದರು.
ನಾಲ್ಕು ದಿನಗಳಾದ ಬಳಿಕ ರಾಣಿ ಸೈನ್ಯದೊಡನೆ ಅರಣ್ಯಕ್ಕೆ ಹೋಗಿ ಶೋಧ ಮಾಡಿದಾಗ ರಾಜನ ಕಿರೀಟ, ಕರ್ಣಕುಂಡಲ ಸಿಕ್ಕಿದವು. ಅಸ್ಥಿಪಂಜರಗಳಿಗೆ ಅಗ್ನಿಸಂಸ್ಕಾರಮಾಡಿಸಿ, ರಾಜಧಾನಿಗೆ ಬಂದಳು. ಆ ಬಳಿಕೆ ಅಪರಕರ್ಮ ಮಾಡಿಸುವುದಕ್ಕೆ ಏರ್ಪಾಡು ನಡೆಸಿದಳು.
ರಾಣಿಯು ಮಗನನ್ನು ಹತ್ತಿರ ಕರೆದು ಅವನಿಗೆ ಹೇಳಬೇಕಾದುದನ್ನೆಲ್ಲ ಹೇಳಿ, ತಾನು ದುಃಖದಿಂದ ಅನ್ನ ನೀರು ಬಿಟ್ಟು ಕೊರಗಿ ಕೊರಗಿ ಸತ್ತುಹೋದಳು.ಒಂದು ಹಾಡು ಒಂದು ಕಥೆ
ಒಂದೂರಿನಲ್ಲಿ ಒಬ್ಬ ಗೃಹಿಣಿಯಿದ್ದಳು. ಆಕೆಗೆ ಒಂದು ಕಥೆ ಗೊತ್ತಿತ್ತು. ಮತ್ತು ಒಂದು ಹಾಡು ಬರುತ್ತಿತ್ತು. ಆದರೆ ಅವಳು ತನಗೆ ಗೊತ್ತಿದ್ದ ಕಥೆಯನ್ನು ಯಾರಮುಂದೆಯೂ ಹೇಳಿದವಳಲ್ಲ. ತಾನು ಕಲಿತ ಹಾಡನ್ನು ಯಾರಮುಂದೆಯೂ ಹಾಡಿದವಳಲ್ಲ.
ಆಕೆಯ ಮನಸ್ಸಿನಲ್ಲಿ ಸೆರೆಸಿಕ್ಕಿ ಆ ಕಥೆ ಆ ಹಾಡು ಅಲ್ಲಿಂದ ಕಾಲ್ತೆಗೆದು ಓಡಿ ಹೋಗಬೇಕೆಂದು ಮಾಡಿದವು. ಅಲ್ಲಿ ನಿಲ್ಲುವುದೇ ಬೇಡವಾಗಿತ್ತು ಅವುಗಳಿಗೆ. ಯಾವ ಬಗೆಯಿಂದ ಹೊರಬೀಳಬೇಕು—ಎಂದು ಯೋಚಿಸಿ ಕಡೆಗೆ ಕಥೆಯು ಹೊರಬಿದ್ದು ಅಂಗಳದಲ್ಲಿ ಎರಡು ಬೂಟುಗಳಾಗಿ ಕುಳಿತಿತು. ಹಾಡು ಒಂದು ಕೋಟು ಆಗಿ ಗೂಟಿಗೆ ನೇತು ಬಿದ್ದಿತು.
ಆ ಗೃಹಿಣಿಯ ಪತಿಯು ಮನೆಗೆ ಬಂದಾಗ ಅಂಗಳದೊಳಗಿನ ಬೂಟುಗಳನ್ನೂ ಗೂಟಕ್ಕೆ ತೂಗಬಿದ್ದ ಕೋಟನ್ನೂ ಕಂಡು ಹೆಂಡತಿಗೆ ಕೇಳಿದನು - "ಯಾರು ಬಂದಿದ್ದಾರೆ ಮನೆಗೆ?"
"ಯಾರೂ ಬಂದಿಲ್ಲವಲ್ಲ!" ಎಂದಳು ಹೆಂಡತಿ.
"ಹಾಗಾದರೆ ಈ ಬೂಟು ಈ ಕೋಟು ಯಾರವು?" ಪತಿಯ ಪ್ರಶ್ನೆ.
"ನನಗೂ ತಿಳಿಯದು" ಎಂದು ಸತಿ ಹೇಳಿದ ಉತ್ತರದಿಂದ ಗಂಡನಿಗೆ ಸಮಾಧಾನವೆನಿಸಲಿಲ್ಲ. ಸಂಶಯವೇ ಹುಟ್ಟಿಕೊಂಡಿತು. ಅದರಿಂದ ಅವರ ಮಾತುಕತೆಗಳಲ್ಲಿ ವಿರಸವು ಮೊಳೆಯಿತು. ವಿರಸವು ಕದನವಾಗಿ ಪರಿಣಮಿಸಿತು. ಗಂಡನು ಹೆಂಡತಿಯ ಮೇಲೆ ಮುನಿಸಾಗಿ, ತನ್ನ ಕಂಬಳಿಯನ್ನು ತೆಗೆದುಕೊ೦ಡವನೇ ಹೊರಬಿದ್ದು ಹನುಮಂತ ದೇವರ ಗುಡಿಗೆ ಮಲಗಲು ಹೋದನು.
ಗೃಹಿಣಿಗೇನೂ ತಿಳಿಯಲಿಲ್ಲ. ಮನೆಯಲ್ಲಿ ಒಬ್ಬಳೇ ಅಡ್ಡಾದಳು. ನಿದ್ರೆಯೇ ಬರಲೊಲ್ಲದು. ಅದೇ ಚಿಂತೆ; ಅದೇ ವಿಚಾರ, ತಿರುತಿರುಗಿ ಬಂದು ನಿಲ್ಲುವದು. ಆ ಬೂಟು ಆ ಕೋಟು ಯಾರವು? ಬಹಳ ಹೊತ್ತಿನ ಮೇಲೆ ಬೇಸತ್ತು ದೀಪವನ್ನಾರಿಸಿ ಮಲಗಿಕೊಂಡಳು.ಆ ಊರೊಳಗಿನ ಹಣತಿಗಳೆಲ್ಲ ರಾತ್ರಿಯನ್ನು ಕಳೆಯಲು ಹನುಮಂತ ದೇವರ ಗುಡಿಗೆ ತೆರಳುವುದು ವಾಡಿಕೆಯಾಗಿತ್ತು. ಎಲ್ಲ ಮನೆಗಳಿಂದ ಹಣತಿಗಳು ಬಂದು ಬಂದು ನೆರೆದವು. ಬಹಳ ತಡಮಾಡಿ ಒಂದು ಹಣತಿ ಬಂದಿತು. ಅದಕ್ಕೆ ಉಳಿದ ಹಣತಿಗಳೆಲ್ಲ ಕೇಳಿದವು—"ಇಷ್ಟೇಕೆ ತಡ ಬರಲಿಕ್ಕೆ?"
"ನಮ್ಮ ಮನೆಯಲ್ಲಿ ಗಂಡಹೆಂಡರು ಜಗಳಾಡುತ್ತ ಕುಳಿತಿದ್ದರಿಂದ ರಾತ್ರಿಯಾಯಿತು" ಎಂದಿತು ಆ ಹಣತಿ.
"ಏಕೆ ಜಗಳಾಡಿದರು ಆ ಗಂಹಹೆಂಡಿರು?"
"ಗ೦ಡನಿಲ್ಲದಾಗ ಅವರ ಮನೆಯಂಗಳಕ್ಕೆ ಜೋಡು ಬೂಟುಗಳು ಪಡಸಾಲೆಯ ಗೂಟಿಗೆ ಒಂದು ಕೋಟು ಬಂದಿದ್ದವು. ಅವು ಯಾರವು ಎಂದು ಗಂಡ ಕೇಳಿದರೆ, ನನಗೆ ಗೊತ್ತಿಲ್ಲವೆಂದು ಹೆಂಡತಿ ಹೇಳಿದಳು. ಅದಕ್ಕಾಗಿ ಜಗಳಾಡಿದರು" ಎಂದಿತು ಹಣತಿ.
"ಹಾಗಾದರೆ ಆ ಬೂಟು ಕೋಟು ಎಲ್ಲಿಂದ ಬಂದವು?"
"ನಮ್ಮ ಮನೆಯೊಡತಿಗೆ ಒಂದು ಕಥೆ, ಒಂದು ಹಾಡು ಗೊತ್ತಿದೆ. ಎಷ್ಟು ಚಾಲುವರೆದರೂ ತಾನು ಕಲಿತ ಕಥೆ ಹೇಳಿದವಳಲ್ಲ. ತನ್ನ ಹಾಡು ಅಂದು ತೋರಿಸಿದವಳಲ್ಲ. ಸೆರೆಸಿಕ್ಕ ಆ ಕಥೆ ಹಾಡುಗಳು ಬೂಟುಕೋಟುಗಳಾಗಿ ಹೊರಬಿದ್ದಿವೆ. ಅದು ಆಕೆಗೆ ಗೊತ್ತಾಗಿಲ್ಲ."
ಆ ಹಣತಿಯ ವಿವರಣೆಯನ್ನೆಲ್ಲ ಕಂಬಳಿ ಮುಸುಕಿನಲ್ಲಿಯೇ ಕೇಳಿದ ಆ ಗಂಡನ ಸಂಶಯವೆಲ್ಲ ನಿವಾರಣೆ ಆಯ್ತು. ನಿಶ್ಚಿಂತೆಯಿಂದ ಮಲಗಿ ನಿದ್ದೆಮಾಡಿ ಮುಂಜಾನೆ ಮನೆಗೆ ಹೋದನು. ಕಥೆ ಹಾಡಿನ ಸುದ್ದಿ ತೆಗೆದು ಹೆಂಡತಿಗೆ ಮಾತಾಡಿಸಿ ನೋಡಿದನು. ಆದರೆ ಆಕೆಗೆ ಬರುತ್ತಿದ್ದ ಕಥೆ ಹಾಡು ಎರಡೂ ಮರೆತುಹೋದವೆಂದು ತಿಳಿಯಿತು.ಗರತಿ ಸಂಗವ್ವ
ಎಡಗೈಯಲ್ಲಿ ಸಿಂಬೆ, ಬಲಗೈಯಲ್ಲಿ ಕೊಡ ಹಿಡಕೊಂಡು ಸಂಗವ್ವನು ನೀರು ತರಲು ಹೊಳೆಗೆ ಹೊರಟಿದ್ದಾಳೆ. ಆ ದಾರಿಯು ಅರಮನೆಯ ಮುಂದೆ ಹಾದು ಹೋಗುವದು. ಕಿತ್ತೂರ ದೊರೆಯು ಅರಮನೆಯಲ್ಲಿ ಕುಳಿತಲ್ಲಿಂದಲೇ ಸಂಗಮ್ಮನನ್ನು ಕಂಡು ಎದ್ದು ಬಂದು ಕೇಳಿದನು "ಹತ್ತೂರು ಕೊಡುತ್ತೇನೆ, ಮುಖತೋರಿಸು?"
"ಹತ್ತೂರು ಕೊಟ್ಟರೂ ನನ್ನ ನತ್ತಿನ ಬೆಲೆಯಾಗುವುದಿಲ್ಲ. ಅತ್ತೆಯ ಹೊಟ್ಟೆಯಲ್ಲಿ ಹುಟ್ಟಿದವನು ಪ್ರತ್ಯಕ್ಷ ಅರ್ಜುನನೇ ಆಗಿದ್ದಾನೆ. ಆತನ ಕಾಲಕೆರವಿನ ಬೆಲೆ ನಿನಗಿಲ್ಲ" ಎಂದು ಖಂಡತುಂಡವಾಗಿ ನುಡಿದಳು ಸಂಗಮ್ಮ. ಆದರೇನು, ಹಸಿದ ಹುಲಿಯನ್ನು ಕೆಣಕಿದೆನಲ್ಲ ಎಂದು ಎದೆಗುದಿ ಉಂಟಾಗದೆ ಇರಲಿಲ್ಲ ಆಕೆಗೆ.
ಹೊಳೆಗೆ ಹೇಗೆ ಹೋದಳೋ ನೀರು ಹೇಗೆ ತುಂಬಿದಳೋ ಆಕೆಗೆ ತಿಳಿಯಲಿಲ್ಲ. ತುಂಬಿದ ಕೊಡವನ್ನು ತಲೆಯಮೇಲೆ ಹೊತ್ತುದೇ ತಡ, ಗಾಳಿವೇಗದಿಂದ ಬ೦ದು ಮನೆಯನ್ನು ಸೇರಿದಳು. ಹೊಟ್ಟೆಯಲ್ಲಿ ಸಾಸಿವೆಯೆಣ್ಣೆ ಕಲೆಸುತ್ತಿತ್ತು.
ಮನೆಗೆ ಬಂದು ನೀರುಕೊಡವನ್ನು ಇಳುಹಿದವಳೇ ತಲೆಕಟ್ಟಿಕೊಂಡು ಸಂಗವ್ವ ಮಲಗಿಯೇಬಿಟ್ಟಳು.
ಕೆಲಸಕ್ಕೆ ಹೋದ ಮಾವಯ್ಯನು ಮನೆಗೆ ಬಂದು, ಸಂಗವ್ವ ಮಲಗಿದ್ದನ್ನು ಕಂಡನು. ತಲೆದಿಂಬಿನ ಬಳಿ ನಿಂತುಕೊಂಡು—"ಯಾಕೆ ಸಂಗಮ್ಮ ಮಲಗಿರುವೆಯಲ್ಲ" ಎಂದನು.
"ಕೈನೋವು, ಕಾಲುನೋವು. ವಿಚಿತ್ರವಾದ ಹಲವು ನೋವು ಮಾವಯ್ಯ. ಸಾಯುತ್ತೇನೆ, ನೋವು ತಾಳಲಾಸಲ್ಲ—ತವರವರಿಗೆ ಹೇಳಿಕಳಿಸಿರಿ" ವಿನಯದಿಂದ ಸಂಗಮ್ಮ ನುಡಿದಳು.
ಕೈಹಿಡಿದ ಪತಿದೇವರು ಹೊರಗಿನಿಂದ ಬಂದು ಮಂಚದ ಬಳಿ ನಿಂತು ಕೇಳುತ್ತಾನೆ—"ಯಾಕೆ, ಮಲಗಿಕೊಂಡೆ ಕೆಳದಿ?"
"ಏನು ಹೇಳಲಿ ಸಂದುಸಂದಿನ ನೋವು. ಸೂಜಿಯೂರುವಷ್ಟು ಸಹ ಸ್ಥಳ ನೋವಿಲ್ಲದಿಲ್ಲ. ಸಾಯುತ್ತೇನೆ ನನ್ನ ದೊರೆಯೇ ಹೇಚ್ಛಿನ ನೋವು!" ಹಾದಿಬೀದಿ ಉಡುಗಿಸಿ, ಹಾಲಿನ ಚಳಿಕೊಡಿರಿ. ಹಾದಿಯಲ್ಲಿ ನಿಂತವರೆಲ್ಲ ಬದಿಗಾಗಿರಿ. ಸಂಗಮ್ಮನ ತಾಯಿ ಅಳುತ್ತ ಬರುತ್ತಿದ್ದಾಳೆ.
ತಿಪ್ಪೆಯನ್ನು ಉಡುಗಿಸಿರಿ, ತುಪ್ಪದ ಚಳಿಕೊಡಿರಿ. ತಿಪ್ಪೆಯೊಳಗಿನ ಮಂದಿಯೆಲ್ಲ ಬದಿಗಾಗಿರಿ. ಸಂಗಮ್ಮನ ತಂದೆ ಅಳುತ್ತ ಬರುತ್ತಿದ್ದಾನೆ.
ಸಂಜ್ಞೆಯಿಂದ ತಾಯಿತಂದೆಗಳನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಹೇಳಿದಳು -ತಾನು ಹೇಳಬೇಕಾದುದನ್ನು. ಆ ಜೀವಬಿಟ್ಟು ಮೃತ್ಯುವನ್ನು ಗೆದ್ದಳು. ಮುಗಿಲ ದಾರಿಯಲ್ಲಿ ನಿಂತು ಕಿತ್ತೂರದೊರೆಯನ್ನು ಈಡಾಡಿದಳು.
ತಲೆಯಲ್ಲಿ ಚಂಡುಹೂವಿನ ದಂಡೆಯಿಂದ ಶೋಭಿಸುತ್ತಿರುವ ಸಂಗಮ್ಮನನ್ನು ಬಾಳೆಯ ಬನದಲ್ಲಿ ಬಯತಿರಿಸಿದರು.
ಗರಡಿಯ ಗೆಳೆಯರು
ಒಂದೂರಲ್ಲಿ ಕಲ್ಲಣ್ಣ ಮಲ್ಲಣ್ಣ ಎಂಬ ಇಬ್ಬರು ಗರಡಿಯಾಳುಗಳು, ಸಮವಯಸ್ಕರು, ಸಮಾನಶೀಲರು ಆಗಿದ್ದರು. ಅವರ ಸ್ನೇಹವೇ ಸ್ನೇಹ, ಹಾಲು ಸಕ್ಕರೆ ಬೆರೆದಂತೆ. ದಿನಾಲು ಗರಡಿ ಮನೆಯಲ್ಲಿ ಕೂಡಿಯೇ ಸಾಮು- ಬೈಠಕುಗಳಿಲ್ಲದೆ ಲೋಡು ತಿರುವುಹುದು, ಮಲ್ಲಕಂಬ ಆಡುವುದು ಮೊದಲಾದ ಶಾರೀರಕ ಶಿಸ್ತುಗಲ್ಲಿ ನಿಪುಣರಾಗಿದ್ದರು. ಕ್ರಮವರಿತು ಕತ್ತಿಢಾಲುಗಳನ್ನು ಉಪಯೋಗಿಸುವ ಕಲೆಯನ್ನು ಸಾಧಿಸಿದವರು, ಈ ಊರಿನಲ್ಲಿ ಅವರಿಬ್ಬರೇ ಆಗಿದ್ದರು. ಇಂದು ಅನ್ಯೋನ್ಯವಾಗಿ ಅವರು ತಪ್ಪದೆ ಒಂದೆಡೆಯಲ್ಲಿಯೇ ಇರುತ್ತಿದ್ದರೂ ಕಲ್ಲಣ್ಣನ ಮನೆ ಯಾವ ಓಣಿಯಲ್ಲಿದೆ ಏನ್ನುವುದು ಮಲ್ಲಣ್ಣನಿಗೆ ತಿಳಿಯದು. ಮಲ್ಲಣ್ಣನ ಮನೆಯೆಲ್ಲಿ ಎನ್ನುವುದು ಕಲ್ಲಣ್ಣನಿಗೆ ತಿಳಿಯದು. ಕಲ್ಲ — ಮಲ್ಲ ಹೆಸರಿಗೆ ಒಪ್ಪುವಂತೆ ಅವರಿದ್ದರು.
ಹನುಮಂತದೇವರು ಗುಡಿಯ ಮಗ್ಗುಲಲ್ಲಿರುವ ಗರಡಿಮನೆಯಲ್ಲಿ ಅವರಿಬ್ಬ್ರರು ಸಾಧನೆಮಾಡುತ್ತಿರುವಾಗ, ಕಲ್ಲಣ್ಣನು ಕೊಡಹೊತ್ತು ಸಾಗಿದ ಒಬ್ಬ ತರುಣೆಯನ್ನು ಕಂಡನು. ಆಕೆಯನ್ನು ಕಂಡು ಆತ್ತನಿಗೆ ಬವಳಿಕೆಯೇ ಬಂತು. ಕಣ್ಣು ಕುಕ್ಕಿ ಹೋದವು. ಮನಸ್ಸು ಕಕ್ಕಾವಿಕ್ಕಿ ಆಯಿತು. ಮಲ್ಲಣ್ಣನನ್ನು ಹತ್ತಿರ ಕರೆದು ಕೇಳಿದನು -"ಆ ಚೆಲುವೆಯಾರು? ಆಕೆ ಒಂದು ರಾತ್ರಿಮಟ್ಟಿಗಾದರೂ ನನ್ನವಳಾಗುವಂತೆ ಮಾಡಿ ಈ ಮಿತ್ರನನ್ನು ಬದುಕಿಸು."
ಆ ಮಾತು ಕೇಳಿ ಮಲ್ಲಣ್ಣನಿಗೆ ದಿಕ್ಕೀ ತೋಚದಂತಾಯಿತು. ಅಲ್ಲಿ ಹಾದು ಹೋದ ಚೆಲುವೆ ಆತನ ಹೆಂಡತಿಯೇ ಆಗಿದ್ದಳು. ಅದನ್ನು ಹೇಳಿಬಿಟ್ಟರೆ ತಮ್ಮ ಗೆಳೆತನಕ್ಕೇನಾದರೂ ಭಂಗವುಂಟಾದೀತೆಂದು ಭಾವಿಸಿ-"ಆಕೆ ಈ ಊರಿನ ಸೂಳೆ" ಎಂದು ಗಟ್ಟಿ ಜೀವಮಾಡಿ, ದೃಢಮನದಿಂದ ನುಡಿದನು. ಅದೇ ಯೋಚನೆಯಲ್ಲಿಯೇ ಮನೆಗೆ ಬಂದನು ಮಲ್ಲಣ್ಣ.
ಮೆಲ್ಲನೆ ಹೆಂಡತಿಯ ಬಳಿಗೆ ಹೋಗಿ ಆಕೆಯನ್ನು ಒಲಿಸಲು ಯತ್ನಿಸಿದ್ದು ಹೇಗೆಂದರೆ — "ರಾಣೀ, ನನ್ನ ಗೆಳೆಯನೊಬ್ಬ ನಿನ್ನ ಚೆಲುವಿಕೆಗೆ ಮಾರುವೋಗಿದ್ದಾನೆ. ಅವನನ್ನು ತಿರಸ್ಕರಿಸಬೀಡ. ನನ್ನ ಮಾತು ನಡೆಸಿಕೊಡು". "ಗಂಡನಾಡಿದ ಸೊಲ್ಲು ಆಕೆಯ ಕಿವಿಯನ್ನು ಕೊರೆದು ಎದೆಯಲ್ಲಿಳಿದು ಅದನ್ನು ಗಾಯಗೊಳಿಸಿತು. ತನ್ನನ್ನು ಪರೀಕ್ಷಿಸುವ ಸಲುವಾಗಿಯೇ ಇಂಥ ಮಾತು ಆಡಿರಬಹುದೇ - ಎಂದು ದಿಗಿಲುಬಿದ್ದು ನಿಟ್ಟುಸಿರಿಡುತ್ತ ಮರುನುಡಿದಳು - "ಮನ್ಮಥನಂಥ ಪತಿ ನೀವಾಗಿರುವಾಗ ಇನ್ನಾರನ್ನು ಕೂಡಲಿ? ಇಂಥ ಮಾತು ನಿಮ್ಮ ಬಾಯಲ್ಲಿ ಬಂದುದಾದರೂ ಹೇಗೆ?"
ಮಲ್ಲಣ್ಣನು ತನಗೊದಗಿದ ಧರ್ಮಸಂಕಟವನ್ನು ಬಿಚ್ಚಿ ಹೇಳಿ ಹೆಂಡತಿ ಸಮ್ಮತಿಸುವಂತೆ ಮಾಡಿದನು. ಇದೆಂಥ ತ್ಯಾಗ ಇಬ್ಬರದು? ಮಹಾತ್ಮಾಗ, ತ್ಯಾಗದ ತ್ಯಾಗ!
ಗಂಡಹೆಂಡಿರಿಬ್ಬರು ಮಲಗುವ ಕೋಣೆಯನ್ನು ಸಾಧ್ಯವಾದ ಸಲಕರಣೆಗಳಿಂದ ಅಣಿಗೊಳಿಸಿದರು. ಸಡಗರದ ಆ ಮಂಚ. ಅದರ ಅಂಚುಗಳಲ್ಲಿ ಕಣ್ಣು ಕೋರಯಿಸುವ ದೀಪಗಳು. ಆ ಬಳಿಕ ಕಲ್ಲಣ್ಣನನ್ನು ಕರೆತಂದು ದೂರದಿಂದಲೇ ತೋರಿಸಿದನು - "ಅದೇ ಆ ಸೂಳೆಯ ಮನೆ" ಎಂದು.
ಮಂಚವನ್ನೇರಿ ಕುಳಿತು ಕಲ್ಲಣ್ಣನು ಅತ್ಯಂತ ಪ್ರೀತಿಯಿಂದ, ಹತ್ತಿರಕ್ಕೆ ಬಾಯೆಂದು ಚೆಲುವೆಯನ್ನು ಕರೆದನು. ಆಕೆ ಹಾಗೆ ಮಾಡುವ ಮೊದಲು ದೀಪದ ಕಾಳಿಕೆಯನ್ನು ಕಳೆಯಲು ಉಜ್ಜುಗಿಸಿದಳು. ಆ ಸಂದರ್ಭದಲ್ಲಿ ಆಕೆಯ ಮುಖವನ್ನು ಕೊರಳನ್ನು ಚೆನ್ನಾಗಿ ನೋಡಿ ಆತನಿಗೆ ಸಂಶಯವೇ ಉಂಟಾಯಿತು - "ಈಕೆ ಸೂಳೆ ಅಲ್ಲ । ಯಾರೋ ಗೃಹಿಣಿ!! ಕೆಲಸ ಕೆಟ್ಟಿತು!!!" ಎಂದು ತಲ್ಲಣಿಸುತ್ತ, ತನ್ನ ತಪ್ಪಿಗೆ ಇನ್ನಾವ ಪ್ರಾಯಶ್ಚಿತ್ತ ಎಂದುಕೊಳ್ಳುವಷ್ಟರಲ್ಲಿ, ಮೂಲೆಯಲ್ಲಿ ತೂಗಹಾಕಿದ ಕತ್ತಿ ಗುರಾಣಿಗಳು ಕಾಣಿಸಿಕೊಂಡವು. ಆಗಂತೂ ಕಲ್ಲಣ್ಣನ ಕೈಕಾಲೇ ಹೋದವು. "ಇದು ಮಲ್ಲಣ್ಣನ ಮನೆಯೇ?" ಎಂದು ನಿರ್ಧರಿಸಿ, ಒಡಹುಟ್ಟಿದ ತಂಗಿಯ ಮೇಲೆ ಮನಸ್ಸು ಮಾಡಿದ ಪಾಪಿ ತಾನೆಂದು, ಚಕ್ಕನೇ ಮಂಚದಿಂದಿಳಿದು ತೂಗ ಹಾಕಿದ ಕತ್ತಿಯನ್ನು ಕೈಗೆ ತೆಗೆದುಕೊ೦ಡವನೇ ಕತ್ತಿನ ಮೇಲೆ ಹೊಡಕೊಂಡನು.
"ಅಯ್ಯಯ್ಯೋ, ಇದೇನಾಯಿತು? ಬೆಳಗಾಗುವ ಹೊತ್ತಿಗೆ ನನ್ನ ರಾಜ ಬಂದು ನನ್ನ ಪ್ರಾಣತೆಗೆದುಕೊಳ್ಳುವುದು ಖಂಡಿತ" ಎಂದು ಬಗೆದಳು. "ಅವನು ಬಂದು ತನ್ನ ಪ್ರಾಣತೆಗೆದುಕೊಳ್ಳುವ ಮೊದಲೇ ನಾನು ನನ್ನ ಪ್ರಾಣಕಳಕೊಳ್ಳುವುದು ಸುಗಮದಾರಿ" ಎಂದುಕೊಂಡು ಅಲ್ಲಿ ಬಿದ್ದ ಕತ್ತಿಯಿಂದ ತನ್ನನ್ನು ತುಂಡರಿಸಿಕೊಂಡಳು.
ಬೆಳಗಿಗೆ ಬಂದು ಮಲ್ಲಣ್ಣ ನೋಡಿದರೆ ಎರಡು ಹೆಣಗಳು! ನಚ್ಚಿನ ಗೆಳೆಯ ಮೆಚ್ಚಿನ ಹೆಂಡತಿ ಇಬ್ಬರೂ ಸತ್ತುಬಿದ್ದಿದ್ದಾರೆ. ಕೈಕಾಲು ತಣ್ಣಗಾದವು. ಬಾಯಿ ಒಣಗಿತು. ದುಃಖ ಒತ್ತರಿಸಿ ಬಂದಿತು - “ಕಲ್ಲಣ್ಣ, ನನ್ನನ್ನು ಅಗಲಿದೆಯಾ? ಇನ್ನಾರೊಡನೆ ನಾನು ಕುಸ್ತಿ ಆಡಲಿ ?” ಎಂದು ಗೆಳೆಯನಿಗೆ ದುಃಖಾಂಜಲಿ ಅರ್ಪಿಸಿದನು.
“ಭೂಮಿ ತಿರುಗಿದರೂ ಇಂಥ ಸತಿ ಸಿಗುವುದಿಲ್ಲ” ಎಂದು ಹೆಂಡತಿಯ ನಿಷ್ಠೆ-ಗುಣಗಳನ್ನು ಒಂದೇ ಮಾತಿನಲ್ಲಿ ಸ್ಮರಿಸಿ, - “ಇನ್ನಾರಿಗಾಗಿ ನಾನು ಬದುಕಲಿ” ಎಂದು ಅದೇ ಕತ್ತಿಯಿಂದ ಶಿರವನ್ನು ಕತ್ತರಿಸಿಕೊಳ್ಳಲು ಅಣಿಯಾದಾಗ ಶಿವನು ಕಾಣಿಸಿಕೊಂಡು, ಅವನ ಕೈಹಿಡಿದು ಕಾಪಾಡಿದನಲ್ಲದೆ, ಆತನ ಸತಿಯನ್ನೂ ಸ್ನೇಹಿತನನ್ನೂ ಬದುಕಿಸಿಕೊಟ್ಟು ಹರಸಿದನು.
ಅತಿಮಾನುಷ ಕಥೆಗಳು
ನಾಲ್ದರು ಅಣ್ಣತಮ್ಮಂದಿರು
ಶಿವಪಾರ್ವತಿಯರ ಸೋಲು
ಗಂಗಮ್ಮ — ತಂಗಿ
ನನಗೇನು ಕೊಟ್ಟರು
ಶಾಲಿನ ಚಿಂತೆ
ಸಣ್ಣಪೋರ
ತಿರುಮಂತ್ರ
ಬಿಂಬಾಲಿಯ ಅದೃಷ್ಟ
ಎಲ್ಲಮ್ಮನ ಮುನಿಸು
ಸೊಂಟನೋವಿನ ಎಣ್ಣೆ ಮಜ್ಜನ
ರಾತ್ರಿ ರಾಜ
ನಾಲ್ವರು ಅಣ್ಣತಮ್ಮಂದಿರು
ನಾಲ್ದರು ಅಣ್ಣತಮ್ಮಂದಿರಿದ್ದರು. ಅವರದು ಸಾಹುಕಾರ ಮನೆತನ. ಸಾಲಿ ಓದಿದ್ದರು. "ಈಸು ದಿನ ನಾವು ಸಲುಹಿದೆವು. ಇನ್ನು ತಮ್ಮ ಹಾದಿ ತಾವು ಹಿಡೀಲಿ" ಎಂದು ತಾಯ್ತಂದೆಗಳು ನಾಲ್ಕೂ ಮಕ್ಕಳಿಗೆ ನಾಲ್ಕು ಸಾವಿರ ರೂಪಾಯಿ ಮತ್ತು ನಾಲ್ಕು ಕುದುರೆ ಕೊಟ್ಟು ಕಳಿಸಿದರು. ಅವರೆಲ್ಲ ಎಕ್ಕೀಹಳ್ಳಿಗೆ ಹೋದರು. ಸಿನೀಮಾ ನೋಡು, ಹೋಟೆಲ ನೋಡು ಎಂದು ಎಲ್ಲ ರೊಕ್ಕ ಖರ್ಚುಮಾಡಿ ಹಾಕಿದರು. ದುಡ್ಡುಗಳಿಸಹೊಂಟವರು ಎಲ್ಲ ರೊಕ್ಕ ಖರ್ಚುಮಾಡಿದಾಗ ಕೋಟೆಗೆ ಹೋದರು.
ಅಲ್ಲಿ ನೌಕರಿ ಹುಡುಕಿದರು. ಹತ್ತೆಂಟು ಕಡೆ ಓಡಾಡಿದರು. ಅಲ್ಲಿ ರಾಜನದೊಂದು ತೋಟವಿತ್ತು. ಅದಕ್ಕೆ ದೊಡ್ಡದೊಂದು ಹುಲಿ ಹತ್ತಿತ್ತು. ರಾತ್ರಿ ಹೊತ್ತು ಬೆಳೆಯನ್ನೆಲ್ಲ ಹಾಳುಮಾಡುತ್ತಿತ್ತು. ಎಷ್ಟೋ ಮಂದಿ ಕಾವಲುಮಾಡಿದರೂ ಉಪಯೋಗವಾಗಲಿಲ್ಲ. ಯಾರಾರಿಂದಲೂ ಹುಲಿ ಕೊಲ್ಲುವದು ಆಗಲಿಲ್ಲ. ಅದು ನಿಮ್ಮಿಂದ ಆಗಬೇಕು—ಎಂದು ರಾಜ ಹೇಳಿದನು. ನಾಲ್ಕು ಮೇರೆಗೆ ನಾಲ್ಕು ಮಂದಿ ಅಣ್ಣತಮ್ಮಂದಿರು ಅಲ್ಲೇ ಕಾವಲಿಗೆ ನಿಂತರು.
ಹಿರಿಯ ಅಣ್ಣ ಉಳಿದವರಿಗೆಲ್ಲ ಮಲಗಿಸಿ ತಾನು ಎಚ್ಚರಿದ್ದನು. ಗಡ ಗಡ ಎಂದು ಹುಲಿ ಬಂತು. ಹಿರಿಯಣ್ಣ ಛಕ್ಕನೆ ಎದ್ದುನಿಂತು ಶಾಲು ಹೊದ್ದು ಕೊಂಡು ಹುಲಿ ಬಾಯಲ್ಲಿ ಕೈಕೊಟ್ಟು ಹೊಡೆದನು. ಅದು ಸತ್ತುಚಿತ್ತು. ಆಗ ಎರಡನೇ ತಮ್ಮನನ್ನು ಎಬ್ಬಿಸಿದನು. ಅವನು ಎಚ್ಚರಿದ್ದಾಗ—ಕಳ್ಳರು ಓಡೋಡಿ ಅಲ್ಲಿ ಬಂದರು. ಪರಪರ ಎಂದು ನೆಲ ಕೆದರಿದರು. ತಂದ ರೊಕ್ಕ ಎಲ್ಲ ಹೊದರಿನಲ್ಲಿ ಬರುಕಿದರು. ಹಾಗೇ ತಗ್ಗು ಮುಚ್ಚಿ ಸಾಪಮಾಡಿದರು. ಹೊರಟುಹೋದರು. ಅದನ್ನೆಲ್ಲ ಜಪ್ಪಿಸಿ ಎರಡನೆಯವ ನೋಡಿದನು.
ಮೂರನೆಯವನಿಗೆ ಎಬ್ಬಿಸಿದರು. ಏಳು ಹೆಡೆ ನಾಗೇಂದ್ರ ಬಾಯೊಳಗೆ ಮಾಣಿಕ ಹಿಡಿದು ಹರಿಯದೂರ ಮೇಯುತ್ತ ಭುಸ್ ಎಂದು ಬುಸಗುಟ್ಟುತ್ತ ಹೋಯಿತು. ನಾಲ್ಕು ತಲವಾರ ತಕ್ಕೊಂಡು ಮಾಣಿಕದ ಮೇಲೆ ಕತ್ತರಿ ಮಾಡಿಟ್ಟು ಕತ್ತರಿಸಿದನು. ಆರು ಹೆಡೆಗಳೆಲ್ಲ ಕಡಿದುಬಿದ್ದವು. ಇನ್ನೊಂದು ಹೆಡೆ ಉಳಿಯಿತು. ಅದು ಹೇಳಿತು-ಹುತ್ತಿನಲ್ಲಿ ಏಳು ರ೦ಜಣಗಿ ಮುತ್ತು ಮಾಣಿಕ್ಯ ಅವೆ. ನೀ ಅದನ್ನು ತಗೋ. ಅಷ್ಟು ಹೇಳಿ ಅದೂ ಬಿದ್ದು ಹೋಯಿತು.
ನಾಲ್ಕನೇಯವನನ್ನು ಎಬ್ಬಿಸಿದರು. ಜರಾನೆ ರಾತ್ರಿ ಉಳಿದಿತ್ತು. ಅಲ್ಲೊ೦ದು ಬಾವಿಯಿತ್ತು. ಆ ಬಾವ್ಯಾಗ ಏಳುಜನ ಜಲಕನ್ನಿಕೆಯರು ಜಳಕಮಾಡಲು ಬ೦ದರು. ಅದರೊಳಗೆ ಆರು ಜನ ಜಲಕನ್ನಿಕೆಯರು ಜಳಕಕ್ಕೆ ಇಳಿದರು. ಏಳನೇಯವಳು ಒಬ್ಬ ಹುಡುಗನನ್ನು ಮಾಯಾ ಮಾಡಹತ್ತಿದಳು. ಅದನ್ನೇ ನಾಲ್ಕನೇ ತಮ್ಮ ನೋಡಿದನು. ಆಕೆಯೂ ಬಾವಿ ಇಳಿಯಬೇಕೆ೦ದು ಹೊರಟಾಗ ಅವ ಹೋಗಿ ಅವಳ ಸೀರೆ ಹಿಡಿದು ಜಗ್ಗಿದನು. ತನ್ನ ಹುಡುಗನೇ ಎ೦ದು ತಿಳಿದು- ಸೆರಗ ಬಿಡು ಎ೦ದು ಬೇಡಿಕೊ೦ಡಳು. ಮತ್ತೆ ಬರತೀನಿ ಎ೦ದು ಭರವಸೆಕೊಟ್ಟಳು. "ನಿನ್ನ ಮೇಲೆ ಭರವಸೆಯಿಲ್ಲ" ಎ೦ದನು. ಆಗ ತಲೆಗೂದಲೊ೦ದು ತೆಗೆದು ವೀಣೆಮಾಡಿ ಹೇಳಿದಳು. ಇದನ್ನು ಯಾವಾಗ ಬಾರಿಸಿದರೂ ನಾನು ಬರತೀನಿ ಎ೦ದು ಕೂದಲು ಕೊಟ್ಟು ಬಾವಿಯಲ್ಲಿ ಇಳಿದಳು.
ನಾಲ್ಕೂ ಜನರು ತಮ್ಮ ತಮ್ಮ ಮಾತು ಮನಸ್ಸಿನಲ್ಲಿಯೇ ಇಟ್ಟುಕೊ೦ಡಿದ್ದರು. ಹಿರಿಯವ ಹುಲಿ ಕೊ೦ದ. ಎರಡನೆಯನಿಗೆ ಕಳ್ಳರ ಸ೦ಪತ್ತೆಲ್ಲ ಸಿಕ್ಕಿತು. ಮೂರನೇದವಗ ಏಳು ರ೦ಜಣಗಿ ಮುತ್ತು ಮಾಣಿಕ್ಯ ಸಿಕ್ಕಿತು. ಅವನ್ನೆಲ್ಲ ಕುದುರೆ ಮೇಲೆ ಹಾಕಿಕೊ೦ಡು ಮೂರು ಅಣ್ಣತಮ್ಮರು ಹೊ೦ಟರು. ಹೆಣ್ಣು ದೊರೆತ ನಾಲ್ಕನೇಯವ ಮಾತ್ರ ಬ್ರ ಅ೦ತ ಯಾರ ಮು೦ದೆಯೂ ಏನು ಹೇಳಲಿಲ್ಲ. ಕುದುರೆ ಏರಿ ನಾಲ್ಕೂ ಜನರು ಊರಹಾದಿ ಹಿಡಿದರು.
ಮೂವರು ಅಣ್ಣ೦ತಮ್ಮರಿಗೆಲ್ಲ ಹೆಣ್ಣು ಗಟ್ಟಿ ಮಾಡಿಕ್ಕಿದರು. ಹಾದಿಗೆ ಹ೦ದರ ಹಾಕಿ, ಬೀದಿಗೆ ಛಳಿಕೊಟ್ಟು ಲಗ್ನ ಮಾಡಿದರು. ಸಣ್ಣವ ಲಗ್ನಮಾಡಿಕೊಳ್ಳಲಿಕ್ಕೆ ಒಪ್ಪಲಿಲ್ಲ. ನಾಲ್ಕು ಜನ ಅಣ್ಣತಮ್ಮ೦ದಿರಿಗೆ ನಾಲ್ಕು ಮನೆ ಕೊಟ್ಟರು. ಎಲ್ಲರೂ ಬೇರೆ ಬೇರೆ ಇರಹತ್ತಿದರು. ಸಣ್ಣವನಿಗೂ ಒ೦ದೂ ಮನೆ ಬ೦ತು. ಮನೆಯಲ್ಲಿ ಕುಳಿತು ವೀಣೆ ಬಾರಿಸಿದನು. ಜಲಕನ್ನಿಕೆ ಬ೦ದುಬಿಟ್ಟಳು. ದಿನಾಲೂ ಇವನು ವೀಣೆಬಾರಿಸಬೇಕು, ಅವಳು ಬರಬೇಕು. ಹೀಗೆ ಬಹಳ ದಿನ ನಡೀತು.
ಒ೦ದಿನ ಹಿರಿಯಣ್ಣನ ಹೆ೦ಡತಿ ನೀರಿಗೆ೦ದು ಸಣ್ಣವನ ಮನೆ ಮು೦ದೆ ಬ೦ದಿದ್ದಳು. ಮೈದುನನ ಬಸ್ತಾನಿ ಹೇಗಿದೆ ಎ೦ಬುದನ್ನು ತಿಳಿದುಕೊಳ್ಳಬೇಕೆ೦ದು ಅವನ ಮನೆಯೊಳಗೆ ಹೋದಳು. ಅವನ ಮನಸ್ಸು ಹೇಗಾದರೂ ನಿಲ್ಲುತ್ತದೆ೦ಬುದು ಅವಳಿಗೆ ಬೇಕಾಗಿತ್ತು. ಅವಳು ಅಲ್ಲಿಗೆ ಬ೦ದಾಗ ಮೈದುನ ಇರಲಿಲ್ಲ. ಮನೆಯೆಷ್ಟು ಆರಾಮಸಿರಿ ಇದೆ. ಮನೆ ತು೦ಬ ಸಾಮಾನೇ ಆವೆ. ಗಾದಿ ಅದೆ, ಪಲ್ಲ೦ಗ ಅದೆ. ಸಾಕಾದಷ್ಟು ಬಾರ್ದಾನಿ ಅದೆ- ಎ೦ದುಕೊ೦ಡಳು. ಗಾದಿಯ ಮೇಲೆ ಮಲಗಿದಳು. ಅಲ್ಲೆ ಗಾದಿಯ ಬಳಿ ವೀಣೆಯಿತ್ತು. ಅದನ್ನು ಕೈಯಲ್ಲಿ ತೆಗೆದುಕೊ೦ಡು ಬಾರಿಸಿದಳು. ಜಲಕನ್ನಿಕೆ ಗಪ್ಪನೆ ಬ೦ದಳು. ನೆಗೆಣ್ಣಿಗೆ ನೋಡಿದಳು. ಇಬ್ಬರಿಗೂ ಕೈಗೆ ಕೈ ಹತ್ತಿ ಜಗಳ ಆಯಿತು. ಕೈಗೆ ಕೈ ಮೈಗೆ ಮೈ ಚೂರಾಡಿದರು. ಇದಾವ ತಿಪಲು ಎ೦ದು ಜಲಕನ್ನಿಕೆ ವೀಣೆ ತಕ್ಕೊ೦ಡು ಹೋದಳು. ಈ ಕಡೆ ಹಿರಿಯವನ ಹೆ೦ಡತಿ ಗಪ್ಪುಚಿಪ್ಪಾಗಿ ಮನೆಗೆ ಹೋಗಿಬಿಟ್ಟಳು.
ತಮ್ಮ ಮನೆಗೆ ಬ೦ದನು. ವೀಣೆ ಮನೆಯಲ್ಲಿ ಇರಲಿಲ್ಲ. ಸೀದಾ ಅಣ್ಣಗಳ ಮನೆಗೆ ಹೋಗಿ ಕೇಳಿದ. "ನಮ್ಮ ಮನೆಗೆ ಯಾರಾದರೂ ಬ೦ದಿದ್ದರೇ?"
"ಯಾರೂ ಇಲ್ಲಪ್ಪ. ನನಗೇನೂ ಗೊತ್ತಿಲ್ಲ" ಎ೦ದಳು ಹಿರಿಯವನ ಹೆ೦ಡತಿ. ಯಾರಿಗೂ ಏನೂ ಅನ್ನಲು ಬಾರದ೦ತಾಯಿತು ತಮ್ಮನಿಗೆ.
ಸಣ್ಣವನು ಜಲಕನ್ನಿಕೆಯನ್ನು ಹುಡುಕುತ್ತ ಹೊರಟನು. ಹಾದಿಯಲ್ಲಿ ಇಬ್ಬರು ಕಳ್ಳರ ನಡುವೆ ನ್ಯಾಯ ಬಿದ್ದಿತ್ತು. ಅವರ ಬಳಿಯಲ್ಲಿ ಒ೦ದು ಬಟ್ಟಲು, ಒ೦ದು ಜಮಖಾನೆ, ಒ೦ದು ಬಡಿಗೆ ಇದ್ದವು. ತಮಗೆ ಎರಡು ಜೀನಸು ಬೇಕೆ೦ದು ಇಬ್ಬರ ಜಗಳಾಡುತ್ತಿದ್ದರು. ಬಟ್ಟಲು ಬೇಡಿದ್ದು ಕೊಡುತ್ತಿತ್ತು; ಹಾಗೂ ಮನಸ್ಸಿನಲ್ಲಿ ಇಚ್ಛೆಮಾಡಿದ್ದೆಲ್ಲ ಆಗಿಬಿಡುತ್ತಿತ್ತು. ಜಮಖಾನೆ ಹಾಸಿದರೆ ಬೇಕಾದಷ್ಟು ಜನ ಕೂತರೂ ಸಾಲುತ್ತಿತ್ತು. ಬಡಿಗೆ ಯಾರನ್ನು ಹೊಡೆಯೆ೦ದರೂ ಅವರನ್ನು ಹೊಡೆಯುತ್ತಿತ್ತು.
ದಾರಿಹಿಡಿದು ಆತನು ಸಾಗಿದ್ದನ್ನು ಕ೦ಡು ಆ ಕಳ್ಳರು ಅವನನ್ನು ಕರೆದು, ತಮ್ಮಲ್ಲಿರುವ ಮೂರು ಜೀನಸುಗಳನ್ನು ಹ೦ಚಿಕೊಡಲು ಹೇಳಿದರು. ಬಡಿಗೆ ಬಡಿಯುವದೆ೦ದೂ ಬಟ್ಟಲು ಬೇಡಿದ್ದು ಕೊಡುವದೆ೦ದೂ ತಿಳಿಸಿದರು. ಸಣ್ಣವನು ಒ೦ದು ಬಾಣಬಿಟ್ಟು ಹೇಳುತ್ತಾನೆ.-ಈ ಬಾಣವನ್ನು ಯಾರು ಮೊದಲು ತರುವರೋ ಅವರಿಗೆ ಎರಡು ಜೀನಸು. ಅವರು ಬಾಣದಗು೦ಟ ಓಡಿದಾಗ, ಇವನು ಬೇರೆದಿಕ್ಕು ಹಿಡಿದು ಮೂರು ಜೀನಸು ತಕ್ಕೊ೦ಡು ಓಡಿಬಿಟ್ಟನು.
ಎಕ್ಕೀಹಳ್ಳಿಗೆ ಹೋಗಿ ಒ೦ದು ಚೌರಿ ಖರೀದಿಮಾಡಿದನು. ಧಾರಣಿ ಮಾತಾಡಿದರೂ ಅದನ್ನು ಇನ್ನೂ ಕೈಯೊಳಗೆ ತಕ್ಕೊ೦ಡಿದ್ದಿಲ್ಲ. ಏಳು ಜನ ಕನ್ನಿಕೆಯರು ಚೌರಿ ತಕ್ಕೊ೦ಡು ಹೋಗಲಿಕ್ಕೆ ಬ೦ದಿದ್ದರು. ಇವನಿಗೆ ಪಸ೦ದವೆನಿಸಿದ ಚೌರೀನೆ ಅವರಿಗೂ ಪಸ೦ದ ಬಿತ್ತು. "ನಮಗೆ ಇದೇ ಚೌರಿ ಬೇಕು" ಅ೦ದಾಗ, "ಆ ಚೌರಿ ಇವನು ತಕ್ಕೊ೦ಡುಬಿಟ್ಟಿದ್ದಾನೆ. ಇವನಿಗೆ ಕೇಳಿ ತಕ್ಕೊಳ್ಳಿರಿ" ಎ೦ದು ಅ೦ಗಡಿಯವನು ಹೇಳಿದನು.
ಏಳನೇ ಜಲಕನ್ನಿಕೆಯ ಕಣ್ಣಿಗೆ ಇವನೇ ಬಿದ್ದನು. "ನನ್ನ ಮೇಲೆ ಇನ್ನೊಬ್ಬಳನ್ನು ಇಟ್ಟುಕೊ೦ಡಿರುವಿ" ಎ೦ದಾಗ ಅವನಿಗೆ ದಿಗಿಲು ಹಿಡಿಯಿತು. ಆದರೂ ಅವಳು ಚೌರಿ ತಕ್ಕೊ೦ಡು ಇವನಿಗೆ ವೀಣೆ ಕೊಟ್ಟಳು. ಕರೆದಾಗ ಬರುವೆನು ಎ೦ದು ವಾಯಿದಾ ಮಾಡಿ ಏಳನೇ ಜಲಕನ್ನಿಕೆ ಹೋಗುತ್ತಾಳೆ.
ಸಣ್ಣವನು ಸೈರರ ಮನೆಗೆ ಹೋಗಿ ಉಳಕೊ೦ಡನು. ಬಟ್ಟಲವಿಟ್ಟು ಬೇಕಾಗಿದ್ದನ್ನು ಬೇಡಿದ. ಹೊಟ್ಟೆತು೦ಬ ಉ೦ಡ. ಸೈರ ಮುದುಕಿ"ಊಟಕ್ಕೇನು ಮಾಡಲೋ ಹುಡುಗಾ" ಎ೦ದರೆ,'ನನಗೇನೂ ಬೇಡ' ಅ೦ದನು.
"ಈತನು ನಿಶ್ಚಿ೦ತನಾಗಿಯೇ ಇದ್ದಾನೆ. ಇವನಿಗೆ ಊಟಕ್ಕೆ ಹೇಗೆ ಸಿಗುವದು"
ಎ೦ದು ಮುದುಕಿಗೆ ಕುದಿಯೇ ಬಿತ್ತು. ಒಮ್ಮೆ ಕೇಳಿಯೇ ಬಿಟ್ಟಳು. ಅವನು ಹೇಳಿದನು,"ಬಟ್ಟಲು ಬೇಡಿದ್ದು ಕೊಡುತ್ತದೆ. ಬಡಿಗೆ ಹೊಡೆಯುತ್ತದೆ. ಜಮಖಾನೆ ಎಷ್ಟು ಮ೦ದಿ ಕುಳಿತರೂ ಸಾಲುತ್ತದೆ."
ಗೌಡರ ಮನೆಯಲ್ಲಿ ಶೋಭನಕಾರ್ಯ. ಸೈರಮುದುಕಿ ಅವನಿಗೆ ಹೇಳಿ ಜಮಖಾನೆ ಒಯ್ಡಳು. ಹೊರಟಾಗ ಹೇಳಿದಳು. -"ನೋಡುಮಗಾ, ಪಾತರದವರ ನಾಚು ಆದೆ ಇ೦ದು. ನೋಡಲಿಕ್ಕೆ ಬಾ". ಅವನು ನಾಚು ನೋಡಲಿಕ್ಕೆ ಹೋಗಿ ಕುಳಿತನು. ಮುದುಕಿ ಮನೆಗೆ ಬ೦ದವಳೆ ಬಟ್ಟಲು, ಬಡಿಗೆ ಎತ್ತಿಕೊ೦ಡು ಓಡಿತು.
ನಾಚು ನೋಡಿ ಮನೆಗೆ ಬ೦ದು ವೀಣೆಬಾರಿಸಿದನು. ಜಲಕನ್ನಿಕೆ ಬ೦ದಳು.
"ನನ್ನ ಯಾಕೆ ಕರೆದಿ" ಎನ್ನಲು,"ನನ್ನ ಬಡಿಗೆ ಬಟ್ಟಲು ಹೋಗಿವೆ" ಎ೦ದು ಹೇಳಿದಳು. "ಇದಿಷ್ಟೇ ಮಾತು" ಎನ್ನುತ್ತ ಹೋಗಿಬಿಟ್ಟಳು.
ಗಿಡದ ಬುಡಕ್ಕೆ ಕು೦ಚಿಯಿಟ್ಟುಕೊ೦ಡು ಸಾಲಿಗರ ಮುದುಕಿ ಮಲಗಿತ್ತು. ಬಡಿಗೆ ಮಲಗಿದ್ದ ಮುದುಕಿಯನ್ನು ರಪರಪ ಬಡಿಯಿತು. "ಅವರದನ್ನು ಅವರಿಗೆ ಕೊಟ್ಟರೆ ನಿನಗೇಕೆ ಬಡಿಗೆ ಬಡಿಯುವದು" ಎ೦ದು ಜಲಕನ್ನಿಕೆಯು ಬಟ್ಟಲು ಬಡಿಗೆ ತೆಗೆದುಕೊ೦ಡು ಹೋದಳು. ಬಡಿತ ತಿ೦ದು ಮೈಯೆಲ್ಲ ಹಸಿಹುಣ್ಣು ಮಾಡಿಕೊ೦ಡ ಮುದುಕಿ ಸಿಳ್ಳೋ ಎ೦ದು ಮರಳಿಹೋಯಿತು.
ಜಲಕನ್ನಿಕೆ ನೇರವಾಗಿ ಅವನ ಮನೆಗೆ ಬ೦ದಳು. ಮೂವರೂ ಅಣ್ಣಗಳು ಮತ್ತು ಅವರ ಹೆ೦ಡಿರು ತಮ್ಮನ ಮನೆಗೆ ಬ೦ದರು. ಜಲಕನ್ನಿಕೆ ಹಿರಿನೆಗೆಣ್ಣಿಯ ಗುರುತುಹಿಡಿದಳು. ಆರು ತಿ೦ಗಳು ಮೈದುನನನ್ನು ಅಡವೀಪಾಲು ಮಾಡಿದ ಅವಳನ್ನು ಮನೆಯಿ೦ದ ಹೊರಗೆ ಹಾಕಿಸಿದಳು. ಜಲಕನ್ನಿಕೆಯ ಕೂಡ ತಮ್ಮನ ಲಗ್ನ ಧಾಮಧೂಮದಿ೦ದ ಮಾಡಿದರು. ಆ ಬಳಿಕ ನಾಲ್ವರೂ ಅಣ್ಣತಮ್ಮರು ಒ೦ದೇ ಕಡೆಯಲ್ಲಿ ಇರತೊಡಗಿದರು.ಶಿವಪಾರ್ವತಿಯರ ಸೋಲು
ಕುರುಬ ಬೀರನು ಕುರಿ ಕಾಯುತ್ತ ಒ೦ದು ಹಳ್ಳದ ದ೦ಡೆಗೆ ಬ೦ದನು. ಅಲ್ಲಿಯ ನೀರು ನೆರಳು ನೋಡಿ, ಕುರುಬನು ತನ್ನ ಕುರಿಗಳಿಗೆ ದಡ್ಡಿಹಾಕಲು ತಕ್ಕ ಸ್ಥಳವೆ೦ದು ಬಗೆದನು. ಅದರ೦ತೆ ದಡ್ಡಿಹಾಕಲು ತೊಡಗಿದನು.
ಅಷ್ಟರಲ್ಲಿ ಅತ್ತಕಡೆಯಿ೦ದ ಶಿವಪಾರ್ವತಿ ಬ೦ದರು."ಇಲ್ಲೇಕೆ ದಡ್ಡಿ" ಎ೦ದು ಕೇಳಿದರು.
"ಅದಕ್ಕೇನೂ ಆಗುವುದಿಲ್ಲ" ಎ೦ದನು ಬೀರನು.
"ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತು೦ಬಿ ಬರುವುದಿಲ್ಲವೇ?" ಎ೦ದು ಶಿವ ಪಾರ್ವತಿ ಕೇಳಿದರು.
"ಮಳೆ ಹೋಯಿತು ತನ್ನ ನಾಡಿಗೆ ಮೂರು ತಿ೦ಗಳು" ಎ೦ದು ಬೀರನು ಅವರಿಗೆ ಮರುನುಡಿದನು.
ಶಿವಪಾರ್ವತಿಯರು ಅಲ್ಲಿ ನಿಲ್ಲದೆ ಹೋಗಿಬಿಟ್ಟರು. ಅವರು ನೇರವಾಗಿ ವರುಣನ ಲೋಕಕ್ಕೆ ತೆರಳಿ—"ಈಗಲೇ ಮಳೆರಾಯನನ್ನು ಕಳಿಸಿಕೊಡು" ಎ೦ದು ಹೇಳಿದರು.
"ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ. ಅವನು ಬರುವುದು ಮೂರು ತಿ೦ಗಳು ಕಳೆದ ಬಳಿಕ" ಎ೦ದು ವರುಣನು ತಿಳಿಸಿದನು.
ಆ ಮಾತು ಕೇಳಿ ಶಿವಪಾರ್ವತಿಯರ ಮುಖ ಬಾಡಿಹೋದವು. ಮರುನುಡಿಯದೆ ಅವರು ಕೈಲಾಸಕ್ಕೆ ಹೊರಟುಹೋದರು
ಬೀರನ ದಡ್ಡಿ ಹಳ್ಳದಲ್ಲಿ. ಅವನ ಕುರಿಗಳು ಹಳ್ಳದ ದ೦ಡೆಯಲ್ಲಿ ಬೀಡುಬಿಟ್ಟು ತ೦ಗಿದವು. ಹಳ್ಳದ ದಡದಲ್ಲಿ ಬೆಳೆದು ನಿ೦ತ ಹುಲ್ಲು ಮೇದು, ಹಳ್ಲದ ನೀರು ಕುಡಿಯುತ್ತ ಮೂರು ತಿ೦ಗಳು ಕಳೆದವು.
ಆ ಸ೦ದರ್ಭದಲ್ಲಿ ಅತ್ತ ಕಡೆಯಿ೦ದ ಶಿವಪಾರ್ವತಿಯರು ಬ೦ದರು. ಕೇಳಿದರು -"ಬೀರಾ, ದಡ್ಡಿ ಕಿತ್ತಿದೆಯಲ್ಲ! ಯಾಕೆ?"
"ಮಳೆರಾಜ ಬ೦ದಿರುವನಲ್ಲವೇ ನಮ್ಮ ನಾಡಿಗೆ" ಇದು ಬೀರನ ಮರುನುಡಿ
"ಎಷ್ಟು ಸೊಕ್ಕು ಈ ಕುರುಬನಿಗೆ? ಮಳೆ ಬರುವದೆ೦ದು ಸ್ಪಷ್ಟವಾಗಿ ಹೇಳುತ್ತಿರುವನಲ್ಲ! ಏತರ ಮೇಲಿ೦ದ ಹೇಳುತ್ತಾನೆ ಹೀಗೆ?” ಎ೦ದು ಶಿವಪಾರ್ವತಿ ತಮ್ಮತಮ್ಮಲ್ಲಿಯೇ ಅ೦ದುಕೊ೦ಡು, ನೇರವಾಗಿ ದೇವಲೋಕಕ್ಕೆ ನಡೆದರು. ಅಲ್ಲಿ ವರುಣನ ಬಳಿಗೆ ಹೋಗಿ ಹೇಳಿದರು- "ಮಳೆರಾಯನನ್ನು ಮರಳಿ ಕರೆಯಿಸು."
ವರುಣ ಬಿನ್ನಯಿಸಿದನು-"ಆ ಹೊತ್ತು ನೀವು ಸೂಚಿಸಿದ೦ತೆ ಆತನನ್ನು ಇ೦ದೇ ಅತ್ತಕಡೆ ಕಳಿಸಿದ್ದೇನೆ. ಮೋಡಗಳು ಮು೦ದೆ ಮು೦ದೆ,ಸಿಡಿಲು ಮಿ೦ಚುಗಳು ಹಿ೦ದೆ ಹಿ೦ದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ?ಕೊಟ್ಟ ಹುಕುಮು ಅವರ ಕೈಯಲ್ಲಿದೆ."
ಆ ಮಾತು ಕೇಳಿ ಶಿವಪಾರ್ವತಿಯರು ಅ೦ದುಕೊ೦ಡರು-"ನಾವಿ೦ದು ಕುರುಬನಿಗೆ ಸೋತೆವು."
ಕೊ೦ಬಣಸು, ಕೊರಳಹುಲಿಗೆಜ್ಜಿಗಳಿ೦ದ ನ೦ದಿಯನ್ನು ಸಿ೦ಗರಿಸಿ ಶಿವನು ಪ್ರಯಾಣ ಹೊರಡುತ್ತಾನೆ. ಅದೆಲ್ಲಿಗೆ?
ದಾರಿಯಲ್ಲಿ ಒ೦ದು ಹಳ್ಳ. ಹಳ್ಳದ ದ೦ಡೆಯಲ್ಲಿ ಹೂ ಕೊಯ್ಯುತ್ತಿರುವ ರಮಣಿಯನ್ನು ಕ೦ಡು ಶಿವನು — "ಜಾಣೇ, ನಮ್ಮ ಲಿ೦ಗಪೂಜೆಗೊ೦ದು ಹೂ ಕೊಡು" ಎ೦ದು ಕೇಳಿದನು.
ಆಕೆ ಹೇಳಿದಳು — "ಲಿ೦ಗಪೂಜೆಗೆ೦ದರೆ ಕೊಡಮಾಡಬಹುದು. ಆದರೆ ಮನೆಯಲ್ಲಿ ನಮ್ಮವ್ವ ಬಯ್ಯುತ್ತಾಳೆ; ನಮ್ಮಪ್ಪ ಬಡಿಯುತ್ತಾನೆ."
ನಿಮ್ಮವ್ವ ಬಯ್ದರೆ, ನಿಮ್ಮಪ್ಪ ಬಡಿದರೆ ಗ೦ಗಾ, ನನ್ನ ಜಡೆಯಲ್ಲಿ ಬ೦ದು ಬಿಡು" — ಎನ್ನುತ್ತಾನೆ ಶಿವ.
"ಬ೦ದರೂ ಬರಬಹುದು. ಆದರೆ ಹೇಗೆ ನ೦ಬಲಿ? ನಿಮ್ಮ ಮನೆಯಲ್ಲಿ ರ೦ಭೆಯಿದ್ದಾಳಲ್ಲ!” ಎ೦ದು ಸ೦ಕೊಚ,ಪಟ್ಟಳು ಗ೦ಗಮ್ಮ.
"ನನ್ನಾಣೆ, ನಿನ್ನಾಣೆ ಅಲ್ಲದೆ ಧರಿಸಿದ ಲಿ೦ಗದಾಣೆ ಮಾಡಿ ಹೇಳುತ್ತೇನೆ. ನನ್ನ ಮನೆಯಲ್ಲಿ ರಂಭೆಯಿಲ್ಲ!” ಎಂದು ಶಿವ ಭರವಸೆ ಕೊಡುತ್ತಾನೆ.
"ಬಂದೇನು? ಆದರೆ ಹೇಗೆ ನಂಬಲಿ? ನಿನ್ನ ಮನೆಯಲ್ಲಿ ಮಡದಿಯಿದ್ದಾಳಲ್ಲ!” ಗಂಗಮ್ಮ ಬೇರೊಂದು ಸಂಶಯ ತೋರಿದರೆ, ಆಗಲೂ ಶಿವನು — ತನ್ನಾಣೆ, ನಿನ್ನಾಣೆ ಅಲ್ಲದೆ ದೇವರಾಣೆ ಮಾಡಿ ಹೇಳುತ್ತೇನೆ ಮನೆಯಲ್ಲಿ ಮಡದಿಯಿಲ್ಲವೆಂದು, ಹೇಳುತ್ತಾನೆ. ಆಗ ಗಂಗಮ್ಮನು ಮೆಲ್ಲನೆ ಶಿವನ ಜಡೆಯಲ್ಲಿ ಅಡಗುವಳು. ಅದನ್ನು ನೊಡಿದ ಗಿಣಿರಾಮನು ಕೂಡಲೇ ಹಾರಿಹೋಗಿ ಗೌರಮ್ಮನಿಗೆ ತಿಳಿಸುತ್ತಾನೆ,
ಆ ವಾರ್ತೆಯನ್ನು ಕೇಳಿ, ಮಲಗಿಕೊಂಡಿದ್ದ ಗೌರಮ್ಮನು ಮೈ ಮುರಿದುಕೊಂಡು ಎದ್ದು, ಗಿಂಡಿಯೊಳಗಿನ ತಣ್ಣೀರಿನಿಂದ ಮುಖ ತೊಳೆದುಕೊಂಡವಳೇ ತನ್ನಣ್ಣನ ಅರಮನೆಗೆ ಹೋದಳು.
ಎಂದೂ ಬಾರದ ಗೌರಮ್ಮ ಇಂದು ಏತಕ್ಕಾಗಿ ಬಂದಳೆಂದು ಬಗೆಯುತ್ತ ಅಣ್ನನು, ಆಕೆಗೆ ಕುಳಿತುಕೊಳ್ಳಲು ಮಣಿ ಚೌಕಿ ಕೊಡಿರೆಂದು ಮಡದಿಗೆ ಹೇಳುತ್ತಾನೆ. "ನಾನು ಕುಳಿತುಕೊಳ್ಳಲೂ ಬಂದಿಲ್ಲ. ನಿಂತುಕೊಳ್ಳಲು ಬಂದಿಲ್ಲ. ನಾನೊಂದು ಕನಸು ಹೇಳಲು ಬಂದಿದ್ದೇನೆ. ಕೆರೆಯ ಮೇಲೆ ಕೆರೆಹುಟ್ಟಿ, ಕೆರೆಯ ಮೇಲೆ ಒಬ್ಬಾತನು ಬಲೆಹಾಕಿದ್ದಾನೆ" ಎನ್ನುತ್ತಾಳೆ ಗೌರಮ್ಮ.
ಒಗಟಿನಂಥ ಈ ಕನಸು ಅಣ್ಣನಿಗೆ ತಿಳಿದಂತೆ ತೋರಲಿಲ್ಲ. ಅದನ್ನು ಗೌರಮ್ಮ ಸ್ಪಷ್ಟಗೊಳಿಸಿದಳು- ಕೆರೆ ಅಂದರೆ ಶಿವರಾಯ. ಮರ ಅಂದರೆ ಜಡೆ, ಬಲೆಯೆಂದರೆ ಒಳಗಿನ ಶ್ರೀಗಂಗೆ. "
"ದೇಶವನ್ನೇ ಆಳುವವರಿಗೆ ಹೆಂಡರು ಏಸು ಜನರಿದ್ದರೇನು? ನಿನಗೇಕೆ ಆ ಚಿಂತೆ" ಎಂದು ಅಣ್ಣನು ತೀರ್ಪು ಹೇಳಿದನು.
ಆ ಮಾತು ಕೇಳಿ ಗೌರಮ್ಮ ಕಿಡಿಕಿಡಿಯಾದಳು. ಕಿಡಿಚೆಂಡೇ ಆದಳು. ಎಡಹಿ ಬೆರಳಿಗೆ ನೋವಾದುದನ್ನೂ ಲೆಕ್ಕಿಸದೆ ತನ್ನ ಅರಮನೆಯತ್ತ ಸಾಗಿದಳು.
ಶಿವನು ಒಂದೂರಿನಿಂದ ಯತಿಯ ವೇಷದಲ್ಲಿ ಬಂದು, ಗೌರಿಗೆ ನೀರು ಬೇಡುತ್ತಾನೆ. ಒಂದು ಗಿಂಡಿ ಬೇಡಿದರೆ, ಆಕೆ ಎರಡು ಗಿಂಡಿ ನೀರು ಕೊಡುತ್ತಾಳೆ. ಅದನ್ನು ಕಂಡು ಶಿವನು — "ನಿನಗೆ ಪುರುಷರು ಇಬ್ಬರೇನೆ?” ಎಂದು ಚೇಷ್ಟೇಮಾಡುತ್ತಾನೆ.
ಅಯ್ಯಯ್ಯೋ ಶಿವನೇ, ಅಣಕದ ಮಾತೇಕೆ? ಕೆಂಜೆಡೆಯ ಮಣಿಮುಕುಟದಲ್ಲಿರುವ ಸಿರಿಗಂಗೆಗೊಂದು ಗಿಂಡಿ, ನಿನಗೊಂದು ಗಿಂಡಿ" ಅನ್ನುತ್ತಾಳೆ ಗೌರಮ್ಮ.
"ಅಬ್ಬರಣೆ ಸಾಕು. ಎಡೆಮಾಡು ಗೌರಿ" ಎಂದು ಶಿವನು ಹೇಳಿದರೆ, ಎರಡು ಎಡೆಗಳು ಸಿದ್ದವಾಗಿ ಬರುತ್ತವೆ. ಆಗಲೂ ಶಿವನು ಚೇಷ್ಟೆಮಾಡುತ್ತಾನೆ-"ನಿನಗೆ ಇಬ್ಬರೇನೆ ಪುರುಷರು ಗೌರಿ" ಎಂದು. ಗೌರಮ್ಮ ಮತ್ತೆ ಮುಂಚಿನ ಉತ್ತರವನ್ನೇ ಕೊಡುತ್ತಾಳೆ- "ನಿನಗೊಂದು ಎಡೆ, ಜತೆಯಲ್ಲಿರುವ ಸಿರಿಗಂಗೆಗೊಂದು ಎಡೆ. "
ಶಿವನು ತುಂಬ ದಿಗಿಲುಗೊಂಡು-"ಗಂಗೀನ ತಂದರೆ ತಂಗೀನ ತಂದಂತೆ. ಲಿಂಗ ಮುಟ್ಟಿ ಹೇಳುತ್ತೇನೆ ; ಕೆಂಡಮುಟ್ಟಿ ಹೇಳುತ್ತೇನೆ" ಎಂದು ಕ್ರಿಯೆಗೆ ಸಿದ್ಧನಾಗುತ್ತಾನೆ.
ಗೌರಮ್ಮ ಬೇರೊಂದು ಹಂಚಿಕೆ ತೆಗೆಯುತ್ತಾಳೆ. ಬೆಳ್ಳಿಯ ಬಟ್ಟಲಲ್ಲಿ ಎಳ್ಳೆಣ್ಣೆ ತೆಗೆದು ತಂದು ಶಿವನ ಜಡೆಯನ್ನು ಹೊಸಲು ಆರಂಭಿಸುತ್ತಾಳೆ. ಗೌರಮ್ಮನು ತಲೆಯಿಂದ ಸೊಂಟಿನತ್ತ ಎಣ್ಣೆಹೂಸುತ್ತ ಬರಲು, ಗಂಗೆ ಅದಕ್ಕಿಂತ ಕೆಳಗಡೆ ಸರಿಯುವಳು. ಗೌರಿಯು ಅಲ್ಲಿಯೂ ಎಣ್ಣೆ ಹೊಸತೊಡಗಲು, ಗಂಗೆಯು ಅನಿವಾರ್ಯವಾಗಿ ನೆಲಕ್ಕಿಳಿದು ಹರಿದು ಹೋಗುತ್ತಾಳೆ.
ಗಂಗೆ ಹೋದ ಮರುದಿನವೇ ಗೌರಮ್ಮ ರಜಸ್ವಲೆ ಆಗುತ್ತಾಳೆ. ಮೈದೊಳೆಯಲು ನೀರಿಲ್ಲದಾಗುತ್ತದೆ. ಶಿವನು ಚೇಷ್ಟೆಯಿಂದ ಹಾಲಿನ ಕೊಡವನ್ನು ಕಳಿಸುತ್ತಾನೆ ಗೌರಮ್ಮನ ಕಡೆಗೆ, " ಹಾಲಿನಿಂದ ಮಿಂದರೆ ಮುಡಚಟ್ಟು ಹೋಗುವುದೇ? ತಂಗಿ ಗಂಗಮ್ಮನ್ನನ್ನು ಕಳಿಸಿರಿ" ಎನ್ನಲು, ಶಿವನು ಬೇಕೆಂದೇ ತುಪ್ಪದ ಕೊಡವನ್ನು ಕಳಿಸುವನು."ತುಪ್ಪಿನಲ್ಲಿ ಮಿಂದರೆ ಮೈಲಿಗೆ ಕಳೆಯುವುದೆ? ದಯಮಾಡಿ ತಂಗಿ ಗಂಗಮ್ಮನನ್ನು ಕಳಿಸಿರಿ" ಎಂದು ಗೌರಮ್ಮ ಅಂಗಲಾಚಲು ಶಿವನು 'ಆಗಲಿ' ಎಂದನು.
ನನಗೇನು ಕೊಟ್ಟರು
ಕೈಲಾಸದಲ್ಲಿ ಶಿವಪಾರ್ವತಿಯರು ಸಂತೋಷದಿಂದ ಕುಳಿತು ಸರಸವಾಡುತ್ತಿರುವಾಗ, ಪಾರ್ವತಿ ಕೇಳಿದಳು - "ಶ್ರಾವಣತಿಂಗಳು ಮುಗಿದುಹೋಗಿ ಭಾದ್ರಪದ ಆರಂಭವಾಯಿತು. ನಾಳೆ ನನ್ನ ತವರೂರಿಗೆ ಹೋಗಿ ಬರುವೆ."
"ಅಲ್ಲಿ ನಿನ್ನ ಸರಿಯರು ಯಾರಿದ್ದಾರೆ? ಹೊತ್ತು ಹೇಗೆ ಕಳೆಯುವಿ? ಸರಿಯರು ಯಾರು?" ಎಂದನು ಶಿವ.
"ಸರಿಯರೇತಕೆ ಬೇಕು? ಮೂರುದಿನ ಮಾತ್ರ ಅಲ್ಲಿದ್ದು ನಿಮ್ಮ ಸೇವೆಗೆ ಮರಳುವೆ."
ಮೂರುದಿನವೇಕೆ, ಐದು ದಿನ ಇರು, ಏಳುದಿನಗಳವರೆಗೆ ದಾರಿ ಕಾಯುವೆ, ಮತ್ತೇನು? ಆಗ ಸಹ ನೀನು ಬರದಿದ್ದರೆ ಮೀರಿದವಳೆಂದು ಬಗೆದು, ಗಣಪತಿಯೊಡನೆ ಕರೆಯಲು ಬರುವೆನು," ಎನ್ನುವ ಮಾತಿನಲ್ಲಿ ಶಿವನು ಪಾರ್ವತಿಗೆ ಅಪ್ಪಣೆಯಿತ್ತನು, ತವರು ಮನೆಗೆ ಹೋಗಲಿಕ್ಕೆ.
ತಿರಿದುಣ್ಣುವ ಶಿವನಿಗೆ ಮೂರು ಲೋಕಗಳೆಲ್ಲವೂ ಸ್ವಗೃಹಗಳೇ. ಭಸ್ಮಾಂಗಕೆ ಹೊದಿಕೆಯೆಂದರೆ ಆನೆಯ ತೊಗಲು, ಇನ್ನೇನು ಬೇಕು ಉಪಚಾರ ಶಿವನಿಗೆ?
ಪಾರ್ವತಿಯು ತವರಿನಲ್ಲಿ ನಾಲ್ಗೊಪ್ಪತ್ತು ನಿಂತುಕೊಂಡು ಕೈಲಾಸಕ್ಕೆ ಮರಳಿದಳು. ದುಂಡುಮಲ್ಲಿಗೆ ಹೂವಿನ ದಂಡೆ ತಲೆಯಲ್ಲಿ ಬಿತ್ತಿದ ಮುತ್ತು ಬೈತಲೆಯಲ್ಲಿ, ಕುಡಿ ಹುಬ್ಬಿನ ಕಳೆಗೆ ಕಂಗಳಲ್ಲಿ ರಂಭೆಯೇ ಹೊಳೆಯುತ್ತಿರಲು, ನಿಂಬೆಯ ಹಣ್ಣಿನಂಥ ಕಾಂತಿಯನ್ನು ಸೂಸುತ್ತ ಬಂದ ಪಾರ್ವತಿಯನ್ನು ಕಂಡು ಶಿವನು ಕೇಳಿದನು-
"ನಿನ್ನ ತವರಿಗೆ ಹೋಗಿ ಬಂದೆಯೊ? ತವರಿನವರು ಈಗೇನು ಕೊಟ್ಟರು, ಇನ್ನೇನು ಕೊಡುವರು? ಬೇಗ ಹೇಳು."
"ತಂದೆ ಗಿರಿರಾಯ ಕಡುಬಡವ, ಮುದುಕ ಬೇರೆ. ಏನು ಕೊಟ್ಟಾನು? ಬರಿಗೈಯಲ್ಲಿ ಕಳಿಸಬಾರದೆಂದು ಕೊಪ್ಪರಿಗೆ ಹಣ, ಎಪ್ಪತ್ತು ಆನೆ ಕುದುರೆ ಕೊಟ್ಟನು. ಜತನವಾಗಿರಿಸಿಕೋ ಎಂದು ಬಂಗಾರದ ಕೊಡ ಕೊಟ್ಟನು. ನಮ್ಮವರು ಬಡವರು ಇನ್ನೇನು ಕೊಡುವರು? ಆರು ಹೇರು ಸಣ್ಣಕ್ಕಿ, ಆರು ಹೇರು ಅರಿಸಿಣ, ಆರು ಹೇರು ಅಡಕೆ ಒಂದು ಖಂಡಗ ಬೆಲ್ಲ, ಆರು ಕೊಳಗ ಮೆಣಸು, ನೂರು ತೆಂಗಿನ ಕಾಯಿ ಕೊಟ್ಟರಲ್ಲದೆ ಇನ್ನೇನು ಕೊಟ್ಟಾರು ಬಡವರು? ಐದು ಹರಿವಾಣ, ಐದು ಸಮೆ, ಐದು ತಪ್ಪೇಲ್ಮಿ ಹದಿನಾಲ್ಕು ತಂಬಿಗೆ ಐದು ಬಿಂದಿಗೆ, ನಾಲ್ಕು ತಂಬಿಗೆ ಸುವಾಸಿಕ ಎಣ್ಣೆ ಹೆಚ್ಚಿಗೇನು ಕೊಡುವರು, ಮೊದಲೇ ಬಡವರು."
ಪಟ್ಟೇಸೀರೆ, ಬಣ್ಣದ ಸೀರೆ, ಸಕಲಾತಿ ಶಾಲು, ರತ್ನಗಂಬಳಿ, ಪಟ್ಟಮಂಚ ಅಲ್ಲದೆ ಹಿಂಡು ಆಕಳು ಹದಿನೆಂಟು, ಕಾಲಾಳು ನೂರು ಜನ, ಕರೆವ ಎಮ್ಮೆ ಎಂಟು, ಕರುಗಳೆಂಟು, ಅವುಗಳ ಹಾಲು ಕರೆದು ಕಾಸಿಕೊಡುವ ದಾಸಿಯರನ್ನೂ ಕೊಟ್ಟರು. ಇನ್ನೇನು ಕೊಡುವರು?"
"ಕೆ೦ಪು ಅರಿಸಿನ, ಕಸ್ತೂರಿ, ಕುಂಕುಮ, ಕುಪ್ಪಸ, ಗಿಣಿ ಮೊದಲಾದವುಗಳನ್ನಿತ್ತು ಮುತ್ತೈದೆಂಖರು ಸೇಸೆದಳೆದು ಉಡಿಯಕ್ಕಿ ಹಾಕಿ ಕಳಿಸಿದರು. ಹೆಚ್ಚು ಏನು ಕೊಟ್ಟಾರು ಬಡವರು?"
ಕಡುಬಡವನಾದ ಗಿರಿರಾಯನು ಮಗಳಿಗೆ ಕೊಟ್ಟ ವಸ್ತು ಒಡವೆಗಳ ಹೆಸರುಗಳನ್ನೆಲ್ಲ ಒಮ್ಮೆ ಹೇಳಿ ಮುಗಿಸಿದಳು ಪಾರ್ವತಿ. ಅದನ್ನು ಕೇಳಿ ಆತುರದಿಂದ ಶಿವನು ನುಡಿದನು. - "ಅಕ್ಕರೆಯ ಮಗಳೆಂದು ನಿನಗೆ ಇಷ್ಟೆಲ್ಲ ಕೊಟ್ಟರು. ನನಗೇನಾದರೂ ಒಂದಿಷ್ಟು ಕೊಡಲಿಲ್ಲವೇ?"
ಪಾರ್ವತಿಯೂ ತಡಮಾಡದೆ ಮರುನುಡಿದಳು - "ಇಷ್ಟೆಲ್ಲವನ್ನೂ ನನಗಿತ್ತು ತವರವರು ನನ್ನನ್ನೇ ನಿಮಗಿತ್ತರು."
ಅದನ್ನು ಕೇಳಿ ಶಿವನ ಮನಸ್ಸಿಗೆ ಅದೆಷ್ಟು ಹರ್ಷವಾಗಿರಬೇಕು ?
ಶಾಲಿನ ಚಿಂತೆ
ಚಳಿಗಾಲದ ಒಂದು ಮುಂಬೆಳಗಿನಲ್ಲಿ ಶಿವಪಾರ್ವತಿಯರು ಜೊತೆಯಾಗಿ ಕೈಲಾಸದಿಂದ ಹೊರಬಿದ್ದರು. ಅಡ್ಡಾಡಿಕೊಂಡು ಬರುವುದೇ ಅವರ ಉದ್ದೇಶವಾಗಿತ್ತು. ಹಿಮಾಲಂಹದ ಬೆಟ್ಟಗಳನ್ನಿಳಿದು ಸಾನು ಪ್ರದೇಶಕ್ಕೆ ಬಂದರು. ಅಲ್ಲಲ್ಲಿ ಒಕ್ಕಲಿಗರ ವಸತಿಗಳು ಕಾಣಿಸತೊಡಗಿದವು. ಅವೆಷ್ಟೋ ಹೊಲಗಳಲ್ಲಿ ಒಲೆಗುಣಿಯ ಉರಿಯು ಎದ್ದು ಕಾಣಿಸಿತು. ಹಕ್ಕಿ ಪಕ್ಷಿಗಳ ಉಲುಹು ಇನ್ನೂ ಕುಗ್ಗಿಯೇ ಇತ್ತು. ಆ ಎಲ್ಲ ದೃಶ್ಯಗಳನ್ನು ಕಂಡು ಆನಂದಿಸುತ್ತ ಸಾಗಿದ್ದರು ಆ ದೇವದಂಪತಿಗಳು.
"ಅಗೋ ನೋಡಿರಿ. ಆ ಹೊಲದವನು ಹೇಗೆ ಮಲಗಿದ್ದಾನೆ ಮುದುಡೆಂಾಗಿ. ಮೈಮೇಲೆ ಹೊದೆದುಕೊಂಡ ಕಂಬಳಿ ಸವೆದು ಹಿ೦ಜಾಳಿಯಾಗಿದೆ. ಅಂಥ ಹರಕು ಕೋರಿಯಿಂದ ಚಳಿಯ ಬಾಧೆ ಹೇಗೆ ಪರಿಹಾರವಾದೀತು? ಪಾಪ ಎಂದು ಬೊಟ್ಟು ಮಾಡಿ ಶಿವನಿಗೆ ಮಲಗಿಕೊಂಡವನ ದೃಶ್ಯವನ್ನು ಪಾರ್ವತಿ ತೋರಿಸಿದಳು. ಆ ಮಾತಿಗೆ ಶಿವನು ನಸುನಕ್ಕು ಕನಿಕರವನ್ನು ತೋರ್ಪಡಿಸಿ ಮುಂದೆ ಸಾಗಿದನು. "ಇಲ್ಲಿ ನೋಡಿರಿ. ಇವನೂ ಮಲಗಿದ್ದಾನೆ. ಹೊದೆದದ್ದು ಹೊಸಶಾಲು ಕಾಣಿಸುತ್ತದೆ. ಶಾಲಿನ ಒಂದು ಸೆರಗು ಕಾಲಕೆಳಗೆ, ಇನ್ನೊಂದು ಸೆರಗು ತಲೆಕೆಳಗೆ ಹಾಕಿ ಜೇಟು ಕೊಟ್ಟು ಮಲಗಿದ್ದಾನೆ. ನಿಶ್ಚಿಂತ ಪುರುಷನೇ ಕಾಣಿಸುತ್ತದೆ" ಎಂದಳು ಪಾರ್ವತಿ.
ಆ ದೃಶ್ಯವನ್ನು ಕಂಡು ಶಿವನು — "ಅಹುದಲ್ಲವೇ" ಎಂದುಸುರಿ ಮುಂದಡಿಯಿರಿಸಿದನು. ಮುಂಜಾವಿನ ತಿರುಗಾಟವನ್ನು ಮುಗಿಸಿಕೊಂಡು ಆ ದೇವದಂಪತಿಗಳು ಕೈಲಾಸವನ್ನು ತಲುಪಿದರು. ಶಿವನು ಮೈಮೇಲಿನ ಬಟ್ಟೆಂಯನ್ನು ಕಳಚುತ್ತಿರುವಾಗಲೇ ಸೇವಕನನ್ನು ಕರೆದು—"ಆ ದೇವಾಂಗಪತಿಯನ್ನು ಕೂಡಲೇ ಬರಹೇಳು" ಎಂದು ಆಜ್ಞಾಪಿಸಿದನು.
ಪಾರ್ವತಿಯು ಒಳಮನೆಯನ್ನು ಪ್ರವೇಶಿಸಿ ತನ್ನ ಮುಂದಿನ ಕೆಲಸಕ್ಕೆ ಅಣಿಯಾದಳು. ಅಷ್ಟರಲ್ಲಿ ದೇವಾಂಗಪಶಿ ಬಂದವನೇ ಶಿವನ ಪಾದಕ್ಕೆ ಹಣೆಹಚ್ಚಿ ವಂದಿಸಿದನು. "ದೇವರು ಕರೆಸಿದ್ದೇಕೆ" ಎಂದು ಕೈಮುಗಿದು ಕೇಳಿದನು. "ಒ೦ದು ಶಾಲು ಬೇಕಾಗಿದೆ.ದಡೂತಿ ಶಾಲು.ಉದ್ದ-ಅಗಲತಾಳಿಕೆ-ಬಣ್ಣ ಇವಾವಕ್ಕೂ ಕು೦ದು ಇರಬಾರದು; ಬರಬಾರದು. ಒ೦ದು ವಾರ ಮಾತ್ರ ನಿನಗೆ ಅವಕಾಶ. ಮು೦ದಿನ ವಾರದೊಳಗಾಗಿ ನನ್ನ ಶಾಲು ನನ್ನ ಕೈಗೆ ಬರಬೇಕು" ಎ೦ದು ಸ್ಪಷ್ಪಡಿಸುವ ಶಿವನ ಮಾತುಗಳನ್ನು ಕೇಳಿ,ಪಾರ್ವತಿಗೆ ಅತ್ಯ೦ತ ಹರ್ಷವಾಯ್ತು.
"ಶಿವನು ಕರುಣಾಶಾಲಿ. ಅದನ್ನು ಅವನಿಗೆ ಇನ್ನಾರೂ ಹೇಳಿಕೊಡುವ ಕಾರಣವೇ ಇಲ್ಲ" ಎ೦ದುಕೊಳ್ಳತ್ತ ಹೊರಗೆ ಒಡಿಬಂದು, ಕೈಜೋಡಿಸಿ ಶಿವನಿಗಂದಳು- "ಕರುಣಾಕರನೆಂಬ ಹೆಸರು ತಮಗೇ ಸಲ್ಲುವದು.ಪಾಪ! ಪಿಂಜಾಳಿಯಾದ ಕಂಬಳಿಯನ್ನು ಹೊದೆದು.ಚಳಿಯನ್ನು ತಡೆಯಲಾರದೆ ಮುದುಡೆಯಾಗಿ ಬಿದ್ದ ಆ ಪ್ರಾಣಿಯ ಸಲುವಾಗಿ ನಾನೇ ತಮ್ಮಲ್ಲಿ ಬಿನ್ನಯಿಸಿಕೊಳ್ಳಬೇಕೆಂದು ಯೋಚಿಸಿದ್ದೆ. ಬಹಳ ಒಳ್ಳೆಯ ಕೆಲಸಮಾಡಿದದಿರಿ. ಶಾಲು ನೆಯ್ದು ತರಲು ದೇವಾಂಗ ಪತಿಗೆ ಹೇಳಿದ್ದು ತುಂಬಾ ಸಂತಸದ ವಿಷಯ."
"ಛೇ ಛೇ ಛೇ! ತಪ್ಪು ತಿಳಿದುಕೊಂಡಿರುವಿ ಪಾವರ್ತಿ. ನಾನು ಶಾಲು ಹೇಳಿದ್ದು ಅವನ ಸಲುವಾಗಿ ಅಲ್ಲ. ಪಿಂಜಾಳಿ ಕಂಬಳಿ ಹೊದೆದು ಜೋಕೆಯಿಂದ ಮಲಗಿಕೊಂಡವನು ತನ್ನ ಆ ಹೊದಿಕೆಯಲ್ಲಿ ಇನ್ನೂ ಮೂರು ಚಳಿಗಾಲಗಳನ್ನು ಕಳೆಯುತ್ತಾನೆ. ಅವನ ಚಿ೦ತೆ ನನಗಿಲ್ಲ. ಹಿ೦ದುಗಡೆ ನಾವು ನೋಡಿದೆವಲ್ಲ.ಆ ಹೊಸ ಶಾಲು ಹೊದ್ದು ಜೇಟ್ಟುಕೊಟ್ಟು ಮಲಗಿದವನನ್ನು. ಇನ್ನು ಒ೦ದೇವಾರ ಕಳೆಯುವಷ್ಟರಲ್ಲಿ ಅವನು ತನ್ನ ಶಾಲನ್ನು ಹರಿದು ಚಲ್ಲುತ್ತಾನೆ. ಅವನ ಸಲುವಾಗಿ ಚಿ೦ತೆಯಾಗಿದ್ದರಿ೦ದ, ನಿ೦ತಕಾಲಮೇಲೆ ದೇವಾ೦ಗ ಪತಿಯನ್ನು ಕರೆಸಿ, ಶಾಲು -ದಡೂತಿ ಶಾಲು ನೆಯ್ದು ತರಲು ಹೇಳಬೇಕಾಯಿತು. ಹಾಗೂ ಎ೦ಟು ದಿನಗಳಲ್ಲಿ ಸಿದ್ದಗೊಳಿಸಿ ತರಬೇಕೆ೦ದು" ಎ೦ದು ಶಿವನು ಪಡಿನುಡಿದನು. ಶಿವನ ವಿಚಾರಸರಣಿಯನ್ನು ಕೇಳಿ ಪಾರ್ವತಿಯು ಅಚ್ಚರಿಗೊ೦ಡಳು.
ತೀರ ಸಣ್ಣವ ಇದ್ದಾಗ ಸಣ್ಣಪೋರನ ಲಗ್ನ ಆಗಿತ್ತು. ಲಗ್ನ ಆಗಿದ್ದು ಅವನಿಗೆ ಸಹ ಗೊತ್ತಿರಲಿಲ್ಲ. "ಎಲ್ಲಾರೂ ಅತ್ತೀಮಾವನ ಮನೀಗಿ ಹೋಗತಾರ ನಾನೂಬಿ ಹೋಗುತೆ" ಅಂದಾಗ "ನಿಂಗ ಖೂನ ಹಿಡಿಯುದಿಲ್ಲ ಮಗಾ" ಎಂದು ಅವ್ವ ಅಂದರೂ ಕೇಳಲಿಲ್ಲ; ಅಪ್ಪ ಅಂದರೂ ಕೇಳಲಿಲ್ಲ. ಅತ್ತೀಮಾವನ ಮನೀಗಿ ಹೋಗಿ ಮುಟ್ಟಿದ. ಮಾವ ಬಂಕಿನಾಗ ಕೂತಿದ್ದ : ಅತ್ತಿ ಪಡಸಾಲ್ಕಾಗ ಕುಂತಿದ್ದಳು. ಹೆಂಡತಿ ಅತ್ತೀ ಹಂತ್ಯಾಕ ನಿಂತಿದ್ದಳು. "ಅವ್ವಾ ಯಾರೋ ಬಂದಾರ ಬಾಗಿಲಾಗ? ಎ೦ತ ಹೆಂಡತಿ ಖೂನ ಹಿಡಿಯಲಾರದೆ ಹೇಳತಾಳ. "ನಿನ್ನ ಗಂಡ ಬಂದಾನ? ಎಂದು ಅವ್ವ ಹೇಳಿ ಮುಗಿಸತಾಳ. ಆದರೆ ಅತ್ತೀನೂ ಬಾ ಅನ್ಲಿಲ್ಲ; ಮಾವಾನೂ ಬಾ ಅನ್ಲಿಲ್ಲ. ಏಸುದಿನಾ ಆಯ್ತು ಮದುವೆಂಯಾಗಿ, ಇನ್ನೂ ಯಾಕ ಬಂದಿಲ್ಲಂತ ಇಬ್ಬರಿಗೂ ಸಿಟ್ಟು, ಪೋರ ಕಿಂಡೆ ಬಾಗಿಲಕಡೆ ಹೊ೦ಟ.
ಕಿಂಡೆ ಜಾಗಿಲ ಹಂತ್ಯಾಕ ನಿಂತ ಹೆಂಡತೀನೂ ಗಂಡನ ಬೆನ್ನು ಹತ್ತಿದಳು. "ಪೋರಿ ಎತ್ತಹೋಂಯ್ತು?’ ಅಂತ ತಂದೆ ಕೇಳಿದರ, ಆ ಹುಡುಗನ ಬೆನ್ನು ಹತ್ತಿ ಹೋದಳು — ಎಂದು ತಿಳಿಯಿತು. ತಂದೆತಾಯಿಂಬರು, ಗಂಡನ ಬೆನ್ನು ಹತ್ತಿ ಮಗಳು ಹೋದರ ಹೋಗಲಿ — ಎಂದರು.
"ನನ್ನ ಹೆಂಡತಿನ್ನ ಕರಕೊಂಡು ಬ೦ದೀನಿ ನೋಡವ್ವ'"
"ಅವರ ಮನ್ಯಾಗ ಉಣ್ಣುತಿನ್ನುದಕ ಬೇಕಾದಷ್ಟು ಒಟ್ಟ್ಯಾದ. ಅದನ್ನು ಬಿಟ್ಟು ನಮ್ಮಲ್ಲ್ಯಾಕ ಕರಕೊಂಡು ಬಂದ್ಯೋ ಮಗ" ಎಂದಳು ತಾಯಿ.
"ನೀವು ಉಂಡಿದ್ದು ನಾನು ಉಣ್ಣುವೆ; ನೀವು ಉಟ್ಟಿದ್ದು ನಾನು ಉಡುವೆ" ಎಂದು ಸೊಸೆ ಸಮಾಧಾನ ಹೇಳಿದಳು.
ನಾಲ್ಕಾರು ತಿಂಗಳು ಹೋಗಟ್ಲೆ ಸೊಸೆ ಮೈನೆರೆದಳು. ಊರಾಗ ಯಾರ ಮನ್ಯಾಗ ಶೋಭಾನ ಅಗುತ್ತಲೇ ಪಟೇಲನ ಮನೆಗ ಹೆಣ್ಣುಮಗಳಿಗೆ ಕಳಿಸಬೇಕು — ಹೀಂಗ ಅಲ್ಲಿ ಪದ್ಧತಿಯಿತ್ತು. ಅತ್ತಿ ಅನ್ನ ಉಂಬಲ್ಜೆ ಹೋದಳು; ನೀರು ಕುಡ್ಯಲ್ದೆ ಹೋದಳು. ಮಾರಿ ಸಣ್ಣದು ಮಾಡಿಕೊಂಡು ಕುಂತಳು. — "ಏನು ಬಂದಿದ್ದು ಬರಲಿ, ನಾ ಎದುರಿಸಲಿಕ್ಕೆ ತಯಾರಿದ್ದೀನಿ. ಬಂದದ್ದು ತಗೊಳ್ಳಾಕ ಮುಸ್ತಾದ ಇದ್ದೀನಿ" ಎಂದಳು ಸೊಸಿ.
"ಪಟೇಲನ ಮನೀಗಿ ಶೋಭಾನ ಆದ ಹುಡುಗಿ ಹೋಗಬೇಕೆನ್ನುವುದು ನಮ್ಮೂರ ಪದ್ಧತಿ ಆದ. ಅದಕ್ಕ ಹೇಂಗ ಮಾಡಬೇಕೇನ್ನೂದು ತಿಪಲ ಬಿದ್ದಾದ"ಎಂದಾಳು ಅತ್ತಿ.
ಸೊಸಿ ಚಿಂತಿ ಮಾಡಲ್ದೆ ಆರತಿ ಹಿಡಕೊಂಡು ಶೋಭಾನ ಆದ ಸೀರಿ ಉಟಕೊಂಡು ಹೋದಳು. ಪಟೇಲ ಬಂಕಿನೊಳಗೆ ನಿಂತಿದ್ದ. ಪಡಸಾಲ್ಯಾಗ ಹೋಗಿ ನಿಂತು ಸೊಸಿ ಕೇಳ್ತಾಳ—"ಯಾಕರಿ ಎಪ್ಪಾ, ನಮಗ್ಯಾಕ ಕರೆಸೀರಿ?"
"ನನಗೆ ಅಪ್ಪ ಅಂತ ಕರೆದಳು. ನಾ ಈಗ ಇವಳಿಗೆ ಅಪ್ಪ ಆದೆ. ಇನ್ನ ಬ್ಯಾರೆ ಇಚಾರನೇ ಮಾಡೂದು ಬ್ಯಾಡ" ಎಂದು ಇಚಾರಿಸಿ—"ಬಡವರಿದ್ದೀರಿ. ಸೀರಿ ಉಡಿಸಿ ಕಳಿಸಬೇಕೆಂದು ಮಾಡಿದ್ದೆ. ಸೀರಿ ಉಡಿಸಿ ಉಡಿಯಕ್ಕಿ ಹೊಂಹ್ಹು ಕಳಿಸಿಕೊಡುತೀನಿ ಮಗಾ" ಎಂದ.
"ಎಪ್ಪಾ ನಾ ಒಂದ ಮಾತ ಹೇಳತೀನಿ" ಅಂದಳು ಸೊಸಿ.
"ಅದೇನು ಮಾತವ್ಹ ಖುಲಾಸ ಹೇಳಿಬಿಡು" ಎಂದು ಪಟೇಲ ಹೇಳಿದ.
"ಹೇಂಗೂ ದೀಪಾವಳಿ ಹೊಂಟಾದ. ಒಬ್ಬರೂ ಮನ್ಯಾಗ ತುಂಬಿದ ಕೊಡ ಇಕ್ಕಬಾರದು. ದೀಪ ಇಡಬಾರದು. ನೀ ಹೀಂಗ ಡಂಗುರ ಸಾರಿದರ ಜನ ನೀ ಹೇಳಿದಂಗ ಕೇಳತಾದ.?
ಪಟೇಲ ಅದರ್ಃಂಗ ಡಂಗುರ ಸಾರಿಸಿದ. ಸೊಸಿಗಿ ಉಡಿಯಕ್ಕಿ ಇಕ್ಕಿ ಕಳಿಸಿದ. ನಾಲ್ಕೆ ಭದ ದಿನದಾಗ ದೀವಳಿಗೆ ಬಂತು. ದೀಪ ಇಕ್ಕಬೇಡ ಅಂತ ಪಟೇಲ ಹೇಳಿದಂತೆ ಊರವರು ಬಿಟ್ಟರ ಸೊಸೆ ಮನೀತುಂಬಾ—ಮಾಡತುಂಬಾ ದೀಪ ಹಚ್ಚಿಟ್ಟಳು. ಒಲಿಯೊಳಗೆ ಬೆಂಕಿಮಾಡಿಟ್ಟಳು. ಲಕ್ಷ್ಮೀತಾಯಿ ಊರತುಂಬಾ ತಿರುತಿರುಗಿ ಬಂದಳು. ಊರೆಲ್ಲ ಕತ್ತಲೆ ಕಂಕಾಳ ಆಗಿತ್ತು. ಸಣ್ಣ ಪೋರನ ಮನಿಯಾಗ ದೀಪ ಇರುವದು ಕಂಡು ಅಲ್ಲೇ ಬಂದಳು. "ತಟ್ಟೀ ತೆರೆ" ಅಂತ ಲಕ್ಷ್ಮೀತಾಯಿ ಅಂದಳು.
"ನೀನು ಯಾರು ಇದ್ದೀ" ಎಂದು ಸೊಸಿ ಕೇಳಿದಳು. "ನಾ ಲಕ್ಷ್ಮೀ ಇದ್ದೀನಿ. ಜಲ್ದೀ ತಟ್ಟೀ ತಗಿ ಮಗಾ" ಎಂದಳು. "ಲಕ್ಷ್ಮೀ ಇದ್ದರ ಚೆಂದ ಆಯ್ತು. ಯಾಕ ಹೊಂಟೀದಿ ? ಇರಪಲೆ ಇದ್ದರ ಮಾತ್ರ ತಟ್ಟೀ ತಗೀತೀನಿ" ಎಂದಳು. "ಊರವರಲ್ಲಿ ದೀಪ ಇಲ್ಲ. ಅದಕ್ಕ ನಿನ್ನಲ್ಲಿ ಬಂದೀನು.” "ನೀನು ಎಂದೆಂದಿಗೂ ಹೋಗದಿದ್ದರ ತಟ್ಟೀತಗೀತೀನು." ಲಕ್ಷ್ಮಿಯಿಂದ ವಚನ ತಕ್ಕೊಂಡು ಮನಿಪ್ರವೇಶಮಾಡಗೊಟ್ಟಳು. ಲಕ್ಷ್ಮೀ ದೇವರ ಮನ್ಯಾಗ ಹೊಕ್ಕು ಅಲ್ಲಿ ಮಾಯವಾದಳು. ಹಾಲುಕ್ಕುವಂತೆ ಮನೆ ಸಿರಿ ತುಂಬಿತು. ಸಂಪತ್ತು ತುಳುಕಾಡಿತು.
ಸೊಸೆಗೆ ತಾಯಿತಂದೆಗಳಿಗೆ ಮಗಳನ್ನು ನೋಡಬೇಕೆಂಬ ಇಚ್ಛೆಯಾಯಿತು. ಅಷ್ಟರಾಗೇ ಮಗಳು ತವರೂರಿಗೂ ಗಂಡನೂರಿಗೂ ನಡುವೆ ಸಾಲಾಗಿ ಗಿಡ ಹಚ್ಚಿಸಿದಳು. ಹಾದಿಯಲ್ಲೆಲ್ಲ ನೆರಳಾಯಿತು. ಬಾವಿ ಹೊಡಿಸಿದಳು. ಬೀದಿಯಲ್ಲೆಲ್ಲಾ ನೀರಾಂತ್ರು ತಾಯಿತಂದೆ ಬ೦ದು ನೋಡಿದರು. ಮನೆಯಲ್ಲಿ ಅನಾಜ ಬೇಕಾದಷ್ಟು ಅದ. ಸಂದುಕ ತುಂಬಾ ಪೈಸಾ ಅದ. ಇದನ್ನೆಲ್ಲ ನೋಡಿ ತಾಯಿತಂದಿ ಹಿರಿಹಿರಿ ಹಿಗ್ಗು ಪಟ್ಟರು.
ಮಕರ ಸಂಕ್ರಮಣದ ಕಾಲಕ್ಕೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರನ ಜಾತ್ರೆ ಆಗುತ್ತದೆ. ಆ ಕಾಲಕ್ಕೆ ಸುತ್ತಲಿನ ಹತ್ತಿಪ್ಪತ್ತು ಹರದಾರಿಗಳಿಂದ ಜನರು ಬಂದು ಸೇರುತ್ತಾರೆ. ದೇವರಿಗಾಗಿ ಬರುವವರೂ ಅಷ್ಟೇ. ವ್ಯಾಪಾರಕ್ಕಾಗಿ ಬರುವವರೂ ಅಷ್ಟೇ. ಏತಕ್ಕಾಗಿ ಅಲ್ಲಿಗೆ ಹೋದರೂ ಅಲ್ಲಿ ನಡೆಯುವ ಮನೋರಂಜನೆಯ ಅನೇಕ ಕಾರ್ಯಕ್ರಮಗಳನ್ನು ನೋಡಿ ತಣಿಯುತ್ತಾರೆ. ಆದ್ದರಿಂದ ಹಾಡಿಕೆ, ಬಂದಲಾಟ, ತೊಟ್ಟಿಲು ತೂಗಾಟ, ಚಿರಿಕೆಗಾಣ ಮೊದಲಾದ ಸೌಕರ್ಯಗಳನ್ನು ಸ್ಥಳಿಕರು ಜಾತ್ರೆಗೆ ಬಂದವರಿಗೆ ಒದಗಿಸುತ್ತಾರೆ. ಹಾಗೂ ಕಲಾವಿದರಿಗೆ ಊಟವಸತಿಗಳನ್ನು ಕಲ್ಪಿಸಿಕೊಡುವರಲ್ಲದೆ, ಸಂಭಾವನೆಯನ್ನೂ ಅವರವರ ಯೋಗ್ಯತೆಗೆ ತಕ್ಕಷ್ಟು ಕೊಟ್ಟು ಮರ್ಯಾದಿಸುವರು.
ಒಂದು ಹಳ್ಳಿಯ ಲಾವಣಿಕಾರನೊಬ್ಬನು ಹೆಗಲಿಗೊಂದು ಡಪ್ಪ ಬಗಲಿಗೊಂದು ತುಂತೂನಿ ಸಿಕ್ಕಿಸಿಕೊಂಡು ಸೊಲ್ಲಾಪುರಕ್ಕೆ ಹೊರಟನು. ಹೊತ್ತೇರುವವರೆಗೆ ದಾರಿ ನಡೆದು, ಬದಿಯಲ್ಲಿ ಕಾಣುವ ಕಂಚೇಮರದ ನೆರಳಲ್ಲಿ ಬಿಸಿಲು ಕಳೆದು ಮುಂದೆ ಸಾಗಬೇಕೆಂದು ನಿರ್ಧರಿಸಿದನು. ತಣ್ಣಗಿನ ನೆರಳಿನಲ್ಲಿ ತಾಸರ್ಧತಾಸು ಉರುಳಾಡಿದ ಮೇಲೆ ದಣಿವು ಹಗುರಾದಂತಾಯಿತು. ಎದ್ದು ಕುಳಿತು ಮೇಲೆ ನೋಡಿದರೆ ಇನ್ನೂ ಬಿಸಿಲು ಬಹಳ. ಬಿಸಿಲು ತಗ್ಗಿದ ಮೇಲೆ ಹೊರಟರಾಯಿತೆಂದು ಬಗೆದನು. ಆದರೆ ಅಲ್ಲಿಯವರೆಗೆ ಏನು ಮಾಡುವದು? ಅವನ ಕಾಯಕ ಇದ್ದೇ ಇತ್ತು.
ತುಂತೂನಿಯನ್ನು ಕೈಗೆ ತೆಗೆದುಕೊಂಡು, ಸ್ವರಕಟ್ಟಿ ತನ್ನ ಲಾವಣಿಯ ಪುನರಾವರ್ತನೆಗೆ ತೊಡಗಿದನು. ತುಂತೂನಿ ಒತ್ತಟ್ಟಿಗೆ ಲಾವಣಿ ಒತ್ತಟ್ಟಿಗೆ ಸ್ವರವೂ ಕೂಡುವಂತಿಲ್ಲ. ಲಾವಣಿಕಾರನು ಕಿವಿಕಿತ್ತಿದ ಆಡಿನಂತೆ ಹಲಬುತ್ತಿದ್ದಾನೆ. ಆ ಅಪಸ್ಟರಗಾಯನವನ್ನು ಕೇಳಲಿಕ್ಕಾಗದೇ, ಕಂಚೇಮರದಲ್ಲಿ ವಾಸವಾಗಿದ್ದ ದೆವ್ವ ಬಂದು ಲಾವಣಿಕಾರನಿಗೆ ಬೇಡಿಕೊಂಡಿತು—"ಬಿಸಿಲು ಹೊತ್ತಿನಲ್ಲಿ ಹಾಡುವುದು ಬೇಡ. ತಲೆನೋಯತೊಡಗಿದೆ. ನಿಲ್ಲಿಸು." ಲಾವಣಿಕಾರನು ಹೇಳಿದನು—"ನಾಳೆಂಹೀ ಸೊಲ್ಲಾಪುರದಲ್ಲಿ ಜಾತ್ರೆ. ಜಾತ್ರೆಂಯಿಲ್ಲಿ ನಾನು ಹಾಡಬೇಕಾಗಿದೆ. ಹಾಡಿದರೆ ಹತ್ತೆಂಟುರೂಪಾಯಿ ಸಂಭಾವನೆ ಸಿಗುವದು. ಅದಕ್ಕಾಗಿ ನನ್ನ ಹಾಡಿನ ರೂಢಿ ಮಾಡಿಕೊಳ್ಳುತ್ತಿದ್ದೇನೆ."
ನಿನ್ನ ಅಪಸ್ಟರ ಗಾಯನವನ್ನು ಕೇಳಿ ಸಂಭಾವನೆ ಕೊಡುವವರು ಬೇರೆ ಇರುವರೇ ? ಇಂಥಾ ಲಾವಣಿ ಹಾಡಿ ಹತ್ತೆಂಟು ರೂಪಾಯಿ ಗಳಿಸುವುದಕ್ಕಿಂತ ಒಂದು ಯುಕ್ತಿಯನ್ನು ಹೇಳಿಕೊಡುತ್ತೇನೆ. ಮಾಡಬಾರದೇ ?" ಎ೦ದು ಕೇಳಿತು ಆ ದೆವ್ವ
"ಏನದು ನೀನು ಹೇಳುವ ಯುಕ್ತಿ?" "ಮೊದಲು ಹಾಡುವುದನ್ನು ನಿಲ್ಲಿಸಿ, ತುಂತೂನಿಯನ್ನು ತೆಗೆದಿಡು. ಆ ಬಳಿಕ ಹೇಳುವೆನು" ಎನ್ನಲು ಲಾವಣಿಕಾರನು ತುಂತೂನಿಯ ತಂತಿಯನ್ನು ಸಡಿಲುಮಾಡಿ, ಬದಿಗೆ ಸರಿಸಿಯಿಟ್ಟು ದೆವ್ವ ಹೇಳುವುದನ್ನು ಕೇಳುವುದಕ್ಕೆ ತವಕದಿಂದ ಕುಳಿತನು.
ದೆವ್ವ ಹೇಳಿತು—"ನಾನು ಸೊಲ್ಲಾಪುರಕ್ಕೆ ಹೋಗಿ, ಅಲ್ಲಿಯ ಒಬ್ಬ ದೊಡ್ಡ ಶ್ರೀಮಂತನ ಹೆಂಡತಿಗೆ ಬಡಕೊಳ್ಳುತ್ತೇನೆ. ಯಾರ ಮಂತ್ರತಂತ್ರಗಳಿಗೂ ನಾನು ಬಿಟ್ಟುಹೋಗುವುದಿಲ್ಲ. ನೀನು ದೆವ್ವ ಬಿಡಿಸುತ್ತೇನೆಂದು ಹೇಳುತ್ತ ಅಲ್ಲಿಗೆ ಬಾ. ನೂರು ರೂಪಾಯಿ ಪ್ರಶಿಫಲ ಕೇಳು. ನೀನು ಮಂತ್ರ ಹಾಕಿದಂತೆ ಮಾಡು. ಚಿಫ್ ಎಂದು ಊದು. ಸಾಕು, ನಾನು ಬಿಟ್ಟು ಹೋಗುತ್ತೇನೆ. ಆಯಿತೇ ?"
ಲಾವಣಿಕಾರನು ಹಿಗ್ಗಿ ಸೊಲ್ಲಾಪುರಕ್ಕೆ ಹೊರಟನು. ಅಷ್ಟರಲ್ಲಿ ಶ್ರೀಮಂತನ ಹೆಂಡತಿಗೆ ದೆವ್ವ ಬಡಕೊಂಡ ಸುದ್ದಿ ಹಬ್ಬಿಬಿಟ್ಟಿತ್ತು. ಲೆಕ್ಕವಿಲ್ಲದಷ್ಟು ಮಾಂತ್ರಿಕರೂ ಅಸಂಖ್ಯ ತಾಂತ್ರಿಕರೂ ಹೋಗಿ ತಮ್ಮ ವಿದ್ಯೆಯನ್ನು ಪ್ರಯೋಗಿಸಿದರೂ ಪ್ರಯೋಜನವಾಗಿರಲಿಲ್ಲ. ಲಾವಣಿಕಾರನೂ ಆ ಶ್ರೀಮಂತನ ಮನೆಗೆ ಹೋಗಿ, ತಾನೂ ದೆವ್ವ ಬಿಡಿಸಬಲ್ಲೆನೆಂದು ಹೇಳಿದನು. ತನ್ನ ಪ್ರಯತ್ನದಿಂದ ದೆವ್ವ ಬಿಟ್ಟು ಹೋದರೆ ನೂರು ರೂಪಾಯಿ ಕೊಡಬೇಕಾಗುವದೆಂದೂ ತಿಳಿಸಿದನು. ಗುಮಾಸ್ತರು ಆತನನ್ನು ಕರೆದೊಂಯ್ಚು, ದೆವ್ವಿನ ಮುಂದೆ ಕುಳ್ಳಿರಿಸಿದರು. ದೆವ್ವ ಆತನನ್ನು ಗುರುತಿಸಿತು. ಲಾವಣಿಕಾರನು ಒಂದಿಷ್ಟು ಬೂದಿ ತರಿಸಿ ಅದಕ್ಕೆ ಮಂತ್ರಹಾಕಿ ಚೆಫ್ ಎಂದು ದೆವ್ವಿನ ಮುಖದ ಮೇಲೆ ಊದುತ್ತಲೇ ದೆವ್ವ ಹೋಗುವೆನೆಂದು ಎದ್ದೇನಿ೦ತಿತು. ಯಾವುದೋ ದಾರಿಗುಂಟ ಹತ್ತಿಪ್ಪತ್ತು ಹೆಜ್ಜೆ ಓಡಿಹೋಗಿ ಬಿದ್ದು ಬಿಟ್ಟಿತು.
ದೆವ್ವಿನ ಬಾಧೆಯನ್ನು ದೂರಗೊಳಿಸಿದ್ದಕ್ಕಾಗಿ ಆ ಲಾವಣಿಕಾರನಿಗೆ ಉಡುಗೊರೆಯನ್ನಿತ್ತು ಗೊತ್ತುಮಾಡಿದ ನೂರು ರೂಪಾಯಿ ಸಂಭಾವನೆ ಕೊಟ್ಟು ಕಳಿಸಿದರು. ಆತನು ಜಿಗಿದಾಡುತ್ತ ತನ್ನೂರಿಗೆ ತೆರಳಿದನು.
ಕೆಲವು ದಿನ ಕಳೆಯುವಷ್ಟರಲ್ಲಿ, ಸಾಹುಕಾರನ ಹೆಂಡತಿಯನ್ನು ಬಡಕೊಂಡು ಸವಿಗೊಂಡ ದೆವ್ವ ಮತ್ತೆ ಬಂದು ಸೇರಿಕೊಂಡಿತ್ತು. ಗುಮಾಸ್ತರೆಲ್ಲರೂ ಪುನಃ ಮಾಂತ್ರಿಕರನ್ನು ಕರೆತರಹತ್ತಿದರು. ಲಾವಣಿಕಾರನಿಗೂ ಆ ಸುದ್ದಿ ತಿಳಿಯಿತು. ಸೊಲ್ಲಾಪುರದ ಸಾಹುಕಾರನ ಮನೆಗೆ ಹೋಗಿ, ನೇರವಾಗಿ ದೆವ್ವಿನ ಮುಂದೆ ಕುಳಿತು ತನ್ನ ಮಂತ್ರ ಪಠಿಸತೊಡಗಿದನು ದೆವ್ವ "ಮತ್ತೇಕೆ ಬಂದೆಯೋ ನೀನು? ನಿನ್ನ ವಚನದಿಂದ ಪಾರಾಗಿದ್ದೇನೆ. ಇನ್ನು ನಿನ್ನ ಮಂತ್ರಕ್ಕೆ ನಾನು ಬೆಚ್ಚುವುದಿಲ್ಲ. ಒಳ್ಳೆಯ ಮಾತಿನಲ್ಲಿ ಇಲ್ಲಿಂದ ಹೊರಟುಹೋಗು? ಎಂದಿತು.
ಲಾವಣಿಕಾರನು ಬಹಳಹೊತ್ತು ಮಂತ್ರ ಮಣಮಣಿಸಿದರೂ ಉಪಯೋಗವಾಗಲಿಲ್ಲ. ಜೇಸರಿಯುವ ಹೊತ್ತಿಗೆ ಯುಕ್ತಿ ನೆನಪಾಯಿತು. ಸಾಹುಕಾರನ ಗುಮಾಸ್ತರಿಗೆ ಹೇಳಿ ಒಂದು ತುಂತೂನಿ ಸ್ವರಕಟ್ಟೆ ತನ್ನ ಲಾವಣಿ ಹಾಡಲು ಆರಂಭಿಸುತ್ತಲೇ ದೆವ್ವ ಎದ್ದು ಕುಣಿದಾಡತೊಡಗಿತು "ಹಾಡಬೇಡವೋ ಮಹಾರಾಯಾ, ನಿನ್ನ ಅಪಸ್ಥರದ ಗಾಯನ ಕೇಳಿ ತಲೆ ಸೀಳತೊಡಗಿತು. ಹೋಗುತ್ತೇನಪ್ಪಾ ಈ ಸಾರೆ ಹೋದರೆ ಮತ್ತೆಂದೂ ಮರಳಿ ಬರುವದಿಲ್ಲ. ನಿಜವಾಗಿಯೂ ಹೋಗಿಬಿಡುತ್ತೇನೆ" ಎನ್ನುತ್ತ ಆ ದೆವ್ಹವು ಶ್ರೀಮಂತನ ಹೆಂಡತಿಯನ್ನು ಬಿಟ್ಟು ಹೋದದ್ದು ಹೋಗಿಯೇ ಬಿಟ್ಟಿತು. ಮತ್ತೆ ಮುಖ ತೋರಲಿಲ್ಲ.
ಲಾವಣಿಕಾರನ ಪ್ರಯತ್ನಕ್ಕೆ ಆ ಶ್ರೀಮ೦ತನು ಬೊಗಸೆ ಬೊಗಸೆ ಸಂಭಾವನೆ ಕೊಟ್ಟು ಕಳಿಸಿದನು. ಆದರೆ ದೆವ್ವ ಕಲಿಸಿದ ಮಂತ್ರ ದೆವ್ವಿಗೇ ಮುಳುವಾಯಿತು. ಅದರ ಮಂತ್ರಕ್ಕೆ ತಿರುಮಂತ್ರವಾಯಿತು.
ಬಿಂಬಾಲಿಯ ಅದೃಷ್ಟ
ಒಬ್ಬ ಒಕ್ಕಲಿಗನಿಗೆ ತಿಮ್ಮಣ್ಣನೆಂಬ ಒಬ್ಬ ಮಗ. ಬಿಂಬಾಲಿ ಎ೦ಬ ಮಗಳು ಇದ್ದರು. ಆ ಅಣ್ಣತಂಗಿಯರು ತಮ್ಮ ತೋಟದಲ್ಲಿ ಗೊಂಡೆ ಹೂವಿನ ಗಿಡಗಳನ್ನು ಎರಡು ಸಾಲಿನಲ್ಲಿ ಬೆಳೆಸಿದ್ದರು. ಅಣ್ಣನು ನೆಟ್ಟಗಿಡಗಳಲ್ಲಿ ಹೆಣ್ಣು ಹೂಗಳೂ, ತಂಗಿಯು ನೆಟ್ಟ ಗಿಡಗಳಲ್ಲಿ ಗಂಡು ಹೂಗಳೂ ಅರಳಿದವು. ಹೆಣ್ಣು ಹೂವುಗಳೇ ಸುಂದರವಾಗಿರುವುದರಿಂದ ಅವುಗಳನ್ನೇ ಹೆಚ್ಚಾಗಿ ಮುಡಿಯುವರು.
ತನ್ನ ಗಿಡದೊಳಗಿನ ಗೊಂಡೆಹೂಗಳನ್ನು ಮುಡಿದವಳನ್ನೇ ತಾನು ಮದುವೆಂಯಾಗುವೆನೆಂದು ತಿಮ್ಮಣ್ಣನ ಹೂಣಿಕೆ.
ತಿಮ್ಮಣ್ಣನು ಗಾಳ ತೆಗೆದುಕೊಂಡು ಮೀನು ಹಿಡಿಯಲು ಹೊಳೆಗೆ ಹೋದಾಗ ಬಿಂಬಾಲಿಯು, ಅಣ್ಣನ ಗೊಂಡೆಗಳನ್ನು ಹರಿದು, ದಂಡೆಕಟ್ಟೆ ಮುಡಿಯಜೇಕೆಂದು ಹೊಳೆಯ ಮೇಲ್ಭಾಗದಲ್ಲಿಳಿದು ಮಿ೦ದಳು. ತಲೆಗೂದಲನ್ನು ತಿಕ್ಕಿ ತೊಳೆಯುವಾಗ ಒಂದೆರಡು ಎಳೆಗಳು ನೀರಲ್ಲಿ ಹರಿದುಹೋಗಿ, ತಿಮ್ಮಣ್ಣನ ಗಾಳಕ್ಕೆ ಸಿಕ್ಕಿದವು. ಆ ಕೂದಲೆಳೆಗಳನ್ನು ತೆಗೆದುಕೊ೦ಡು ನೋಡಿದರೆ ಅವು ನೀಳವಾಗಿದ್ದವು; ಚಿನ್ನದಂತೆ ತಳತಳಿಸುತ್ತಿದ್ದವು. ಈ ಜಿನ್ನದ ಕೂದಲಿನವಳು ತನ್ನ ಮಡದಿಯಾಗಬೇಕೆಂದು ಇನ್ನೊಂದು ಪ್ರತಿಜ್ಞೆಮಾಡಿದನು.
ಮೀನು ಹಿಡಿದುಕೊಂಡು ತಿಮ್ಮಣ್ಣನು ಮನೆಗೆ ಬರುವಷ್ಟರಲ್ಲಿ ಬಿ೦ಂಜಾಲಿಯು, ಅಣ್ಣನು ನೆಟ್ಟ ಗಿಡಗಳೊಳಗಿನ ಗೊಂಡೆ ಹೂಗಳಿಂದ ದಂಡೆಕಟ್ಟೆಟ್ಟು ಅದನ್ನು ಮುಡಿಯಬೇಕೆಂದು ತಲೆಗೆ ಎಣ್ಣೆ ಸವರಿ ಬಾಚಿಕೊಳ್ಳುತ್ತಿದ್ದಳು. ಅದನ್ನು ಕಂಡು ತಿಮ್ಮಣ್ಣ ನೇರವಾಗಿ ತಾಂರು ಬಳಿಗೆ ಹೋದನು.
ಅಣ್ಣನ ಪ್ರತಿಜ್ಞೆ ತನಗೆ ಗೊತ್ತಿದ್ದರೂ, ಆತನ ಪ್ರತಿಜ್ಞೆ ತನಗೆ ಬಾಧಕವಲ್ಲ ಎ೦ದು ಭಾವಿಸಿಯೇ ಪ್ರೀತಿಯ ಗೊಂಡೆಹೂಗಳನ್ನು ಬಿಂಬಾಲಿ ಕೊಯ್ದಿದ್ದಳು.
"ಅವ್ವಾ, ನನ್ನ ಗೊಂಡೆಗಿಡದ ಹೂಗಳನ್ನು ಕೊಯ್ದವರಾರು?” ಎಂದು ಕೇಳಿದನು ತಿಮ್ಮಣ್ಣ. "ಮತ್ತಾರೂ ಕೊಯ್ದಿಲ್ಲ. ನಿನ್ನ ತಂಗಿ ನಾಲ್ಕು ಹೂ ಕೊಯ್ದು ದಂಡೆಕಟ್ಟಿಕೊಂಡಿದ್ದಾಳೆ" ಎಂದಳು ತಾಯಿ. "ನಾನು ಮಾಡಿದ ಪ್ರತಿಜ್ಞೆ ಬಿಂಬಾಲಿಗೆ ಗೊತ್ತಿದೆ. ಆದ್ದರಿಂದ ಆಕೆ ನನ್ನನ್ನು ಮದುವೆಯಾಗಲು ಸಿದ್ಧಳಾಗಬೇಕು.?
"ಏನೂ ಅರಿಯದ ಹುಡಿಗೆ. ಹೂಗಳಾಶೆಯಿ೦ದ ಎರಡು ಹೂ ಕೊಯ್ದರೆ, ತಂಗಿಯನ್ನು ಮದುವೆ ಆಗುವೆಯಾ ? ಏನಾದರೂ ಮಾತಾಡಬೇಡ" ಎಂದು ತಾಯಿ ತಿಳಿಹೇಳಿದಳು.
ತಿಮ್ಮಣ್ಣ ಬಿ೦ಬಾಲಿಯ ಬಳಿಗೆ ಹೋಗಿ ಆಕೆ ಬಾಚಿಕೊಳ್ಳುವಾಗ ಉದುರಿದ ಕೂದಲನ್ನೆತ್ತಿ ನೋಡಿದರೆ ಹೊಳೆಯಲ್ಲಿ ಸಿಕ್ಕ ಕೂದಲು ಈಕೆಯದೇ ಎಂದು ಮನವರಿಕೆಯಾಯಿತು. "ಅವಳೇ ತನ್ನ ಹೆಂಡತಿಯಾಗಬೇಕೆಂಬ ದೇವಸಂಕಲ್ಪವಿದೆ? ಎಂದು ಬಗೆದು, ತನ್ನ ಕೋಣೆಗೆ ಹೋಗಿ ಮುಸುಕೆಳೆದುಕೊಂಡು ಮಲಗಿದನು. ಊಟಕ್ಕೆ ಬರಲಿಲ್ಲವೆಂದು ತಾಯಿ ಹೋಗಿ ಆತನ ಮುಸುಕೆತ್ತಿ ಅವನನ್ನು ಊಟಕ್ಕೆ ಕರೆದಳು.
"ಅವ್ವಾ ನನ್ನ ಎರಡು ಪ್ರತಿಜ್ಞೆಗಳು ಪೂರಯಿಸಬೇಕಾದರೆ, ನಾನು ತಂಗಿಯನ್ನು ಮದುವೆಯಾಗಲೇಬೇಕು ಅವಳೊಡನೆ ನೀನು ನನ್ನ ಮದುವೆಮಾಡುವವರೆಗೆ ನಾನು ಬಾಯಲ್ಲಿ ತುಕ್ತಿಡುವುದಿಲ್ಲ. ಕೈಯಲ್ಲಿ ಕೆಲಸ ಗೈಂಯ್ಯುವುದಿಲ್ಲ. ಜೀವವಿಟ್ಟುಕೊಳ್ಳುವದಿಲ್ಲ" ಎಂದಾಗ. ಅವನ ತಂದೆ ಬಂದು ಬುದ್ಧಿ ಹೇಳಿದನು. ಕೇಳಲಿಲ್ಲ.
ತಾಯಿತಂದೆಗಳು ವಿಚಾರಿಸಿ ಒಂದು ನಿರ್ಧಾರಕ್ಕೆ ಬಂದರು. "ಇದ್ದೊಬ್ಬ ಮಗ ನಮ್ಮ ಕಣ್ಣ ಮುಂದೆ ಬದುಕಿದರೆ ಸಾಕು. ತಂಗಿಯು ಸಂಗಡವೇ ಮದುವೆ ಮಾಡಿದರಾಯಿತು?” ಎಂದು ಹಂದರು ಹಸಿಜಗಲಿ ಹಾಕಿದರು. ಮದುವೆಯ ಸಲಕರಣೆಗಳನ್ನು ಅಣಿಗೊಳಿಸಿದರು. ಅಡಿಗೆಯ ಸಿದ್ಧತೆ ನಡೆಯಿತು.
"ಬಿಂಬಾಲೀ, ಈ ಅಕ್ಕಿ ತೊಳೆದುಕೊಂಡು ಬಾ" ಎಂದು ತಾಯಿ ಹೇಳಲು, ಆಕೆ ಅಕ್ಕಿಯ ಬುಟ್ಟಿಂಪನ್ನೆತ್ತಿಕೊಂಡು ಬಾವಿಯ ಕಟ್ಟೆಗೆ ಹೋದಳು. ಅಲ್ಲಿ ಕುಳಿತ ಕಾಗೆ — "ಬಿ೦ಬಾಲೀಬಿಂಬಾಲೀ, ನನಗೆರಡು ಕಾಳು ಒಗೆ. ನಾನೊಂದು ಕತೆ ಹೇಳುತ್ತೇನೆ" ಎನ್ನಲು ಬಿಂಬಾಲಿ ಒಗೆದ ಹಿಡಿ ಅಕ್ಕಿಕಾಳು ತಿಂದು ಕಾಗೆ ಕೇಳಿತು — "ಬಿಂಬಾಲಿ, ನೀನು ನಿನ್ನಣ್ಣನನ್ನು ಮದುವೆ ಆಗುವೆಯಾ ?" ಬಿಂಬಾಲಿಗೆ ಸಿಟ್ಟು ಬಂತು. ಅವ್ಡನ ಬಳಿಗೆ ಹೇಗಿ ಕಾಗೆಯ ಬಗ್ಗೆ ದೂರು ಹೇಳಿದಳು. "ಕಾಗೆ ಸಾಯಲಿ. ಅದು ಹಾಗೇ ಅ೦ದುಕೊಳ್ಳಲೊಲ್ಲದೇಕೆ ಸುಮ್ಮನಿರು" ಎಂದಳು ತಾಯಿ. ಅಡಿಗೆ ಮನೆಗೆ ಹೋಗಿ ಬಿಂಬಾಲಿ ತೆಂಗು ಒಡೆದು ಹಸಿಕೊಬ್ಬರಿಯನ್ನು ಹೆರೆಸತೊಡಗಿದಳು. ಅತ್ತಿಂದ ಒಂದು ಬೆಕ್ಕು ಬಂದು—"ಬಿಂಬಾಲೀ, ನನಗಿಷ್ಟು ಹೆರೆಕೊಬ್ಬರಿ ಕೊಡು. ನಾನೊಂದು ಕಥೆ ಹೇಳುತ್ತೇನೆಂದು" ಅನ್ನಲು, ಕೊಟ್ಟ ಹೆರೆ ಕೊಬ್ಬರಿ ತಿಂದು—"ಬಿಂಬಾಲೀ, ನೀನು ನಿನ್ನಣ್ಣನನ್ನೇ ಮಡುವೆಯಾಗುವೆಯಾ?" ಎಂದು ಕೇಳಿತು. ಬಿಂಬಾಲಿಗೆ ಸಿಟ್ಟುಬಂತು ಅವ್ವನ ಬಳಿಗೆ ಹೋಗಿ ಬೆಕ್ಕಿನ ಬಗ್ಗೆ ದೂರು ಹೇಳಿದಳು. "ಬೆಕ್ಕು ಸಾಯಲಿ. ಅದು ಹಾಗೇ ಅಂದುಕೊಳ್ಳಲೊಲ್ಲದೇಕೆ. ಸುಮ್ಮನಿರು?" ಎಂದಳು ತಾಯಿ.
ಅಡಿಗೆ-ಅಂಬಲಿ ಆಯಿತು. ಜಳಕಕ್ಕೆ ನೀರು ಕಾಯ್ದವು. ಒಬ್ಬ ಭಿಕ್ಷುಕಿ ಬಂದು—"ಬಿಂಬಾಲೀ, ಮುಷ್ಟಿ ಕಾಳು ಭಿಕ್ಷೆ ಹಾಕು. ನಾನೊಂದು ಕಥೆ ಹೇಳುತ್ತೇನೆ" ಅನ್ನಲು, ಬಿಂಬಾಲಿ ಅವಳಿಗೆ ಹಿಡಿ ಅಕ್ಕಿ ಹಾಕಲು ಆ ಭಿಕ್ಷುಕಿ ಕೇಳಿದಳು—"ಬಿಂಬಾಲೀ, ನಾನೊಂದು ಸುದ್ದಿ ಕೇಳಿದ್ದೇನೆ. ನೀನು ನಿನ್ನಣ್ಣನನ್ನೇ ಮದುವೆಯಾಗುವೆಂಖಾ? ಬಿಂಬಾಲಿಗೆ ತಲೆಕೀಸರಿಟ್ಟು ಅವ್ವನ ಬಳಿಗೆ ಹೋಗಿ, ಭಿಕ್ಷುಕಿಯ ಬಗ್ಗೆ ದೂರು ಹೇಳಿದಳು. "ಮುದುಕಿಸಾಯಲಿ, ಅಂದುಕೊಳ್ಳುವವರು ಅಂದುಕೊಳ್ಳಲಿ. ನೀನು ಸುಮ್ಮನಿರು?" ಎಂದಳು ತಾಯಿ.
ಮನೆಯ ಮುಂದೆ ಹಾಕಿದ ಹಂದರ, ಹಸೆ ಜಗಲಿ, ಅಡಿಗೆ-ಜಿಡಿಗೆ ಇವುಗಳನ್ನೆಲ್ಲ ಕಂಡು ಬಿಂಬಾಲಿಗೆ ಅರ್ಥವಾಯಿತು. ಮುಡಿಕಟ್ಟಿಕೊಂಡಳು. ಗೊಂಡೆ ಹೂವಿನ ದಂಡೆಂಹನ್ನು ಮುಡಿದುಕೊಂಡಳು. ಯಾರಿಗೂ ತಿಳಿಯದಂತೆ ಮನೆಯಿಂದ ಹೊರ ಬಿದ್ದು ದೂರದಲ್ಲಿರುವ ಒಂದು ಅಶ್ವತ್ಥವೃಕ್ಷವನ್ನೇರಿ ಕುಳಿತುಬಿಟ್ಟಳು.
ಬಿಂಬಾಲಿಯ ಮದುವೆಮಾಡಿಸಲು ಭಟ್ಟರು ಬಂದರು. ವಿಧಿವಿಧಾನಗಳು ಮೊದಲಾದಪ್ಪ. ಹೆಣ್ಣನ್ನು ಸಿಂಗರಿಸಿಕೊಂಡು ಹೊರತರಬೇಕೆಂದರೆ ಬಿಂಬಾಲಿಯೆಲ್ಲಿ? ಮನೆ ಹಿತ್ತಿಲ ಮೊದಲುಮಾಡಿ, ಊರ ಕೆರೆ ಬಾವಿ ಹುಡುಕಲು ಜನರನ್ನು ಕಳಿಸಿದರು.
ಅಶ್ಚತ್ಯಮರದ ನೆರಳಲ್ಲಿ ಕುಳಿತ ತಿರುಪೆಯವನನ್ನು ನೋಡದೆ, ಬಿಂಬಾಲಿ ಮರದ ಮೇಲಿಂದಲೇ ಹಿಚಕ್ಕನೆ ಉಗುಳಿದಳು. ಅದು ಅವನ ಮೈಮೇಲೆ ಬೀಳಲು ಮುಖವೆತ್ತಿ—"ಮೋಡವಿಲ್ಲ ಮುಗಿಲಿಲ್ಲ ನೀರೆಲ್ಲಿಯದು ?" ಎಂದು ಮೇಲೆ ನೋಡುವಷ್ಟರಲ್ಲಿ ಬಿಂಬಾಲಿ ಕಾಣಿಸಿದಳು. ಬಿಂಬಾಲಿಯ ಮನೆಯವರು ಆಕೆಂಯನ್ನು ಹುಡುಕುತ್ತಿದ್ದುದೂ, ಆಕೆಯ ಮದುವೆಯ ಸಿದ್ಧತೆ ನಡೆದದ್ದೂ ಅವನಿಗೆ ತಿಳಿದಿತ್ತು. ಆಕೆ ತನ್ನ ಮೇಲೆ ಉಗುಳಿದಳೆಂಬ ಸಿಟ್ಟಿನಿಂದ ಅವಳ ಮನೆಗೆ ಹೋಗಿ - “ಅವ್ವಾ ನಿಮ್ಮ ಮಗಳನ್ನು ತೋರಿಸಿಕೊಡುತ್ತೇನೆ. ನನಗೆ ಎರಡು ಮುಷ್ಟಿ ಅನ್ನ ಹಾಕಿರಿ” ಎಂದು ತನ್ನ ಜೋಳಿಗೆಯನ್ನು ಮುಂದೊಡ್ಡಿದನು. ಮನೆಯವರು ಎರಡಕ್ಕೆ ನಾಲ್ಕು ಮುಷ್ಟಿ ಅಕ್ಕಿ ಹಾಕಿ, ನನ್ನ ಮಗಳನ್ನು ತೋರಿಸೆನ್ನಲು, ಅವನು ಅವರನ್ನು ಅಶ್ವತ್ಥಮರದ ಬಳಿಗೆ ಕರೆತಂದು ಬಿಂಜಾಲಿಯನ್ನು ತೋರಿಸಿದನು. ಮರದ ಮೇಲೆ ಕುಳಿತಿದ್ದ ಬಿಂಬಾಲಿಯನ್ನು ಕಂಡು ತಾಯಿ ಕರೆದಳು -
“ಬಿ೦ಬಾಲಿ ಬಿಂಬಾಲಿ ಕಾದ ನೀರು ಕಬ್ಬಿಣವಾಯ್ತು
ತೇದ ಅರಿಸಿನ ಗೊಬ್ಬರವಾಯ್ತು
ಹಂಡೆನೀರು ಕಾದವೊ ಮಡ್ಕೆಲನ್ನ ಬೆ೦ದವೊ.
ಮೀಯೋಕೆ ಬಾರೆ ಬಿಂಬಾಲಿ.”
ಬಿಂಬಾಲಿ ಅಲ್ಲಿಂದಲೇ ಹೇಳಿದಳು -
“ಆವಾಗೀನ ಕಾಲದಲ್ಲಿ ಅವ್ವ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಅತ್ತೆಯೆಂದು ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”
ತಾಯಿ ಹಿಂದಿರುಗಿ ಹೋದಳು. ತಂದೆ ಬಂದು ಕರೆದನು -
“ಬಿ೦ಬಾಲಿ ಬಿ೦ಬಾಲಿ ಕಾದ ನೀರು ಕಬ್ಬಿಣವಾಯ್ತು
ತೇದ ಅರಿಸಿನ ಗೊಬ್ಬರವಾಯ್ತು
ಹಂಡೆನೀರು ಕಾದವೊ ಮಡ್ಕೆಲನ್ನ ಬೆ೦ದವೊ.
ಮೀಯೋಕೆ ಬಾರೆ ಬಿಂಬಾಲಿ.”
ಮರದ ಮೇಲಿಂದಲೇ ಬಿಂಬಾಲಿ ಪಡಿನುಡಿದಳು -
“ಆವಾಗೀನ ಕಾಲದಲ್ಲಿ ಅಪ್ಪ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಮಾವನೆಂದು ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”
ತಂದೆ ಹೋದನು. ಅಣ್ಣ ಬಂದು, ಮೊದಲು ತಾಯ ತಂದೆ ಕರೆದಂತೆ - “ಮೀಯಲ್ಕೆ ಬಾರೇ ಬಿಂಬಾಲಿ” ಎಂದು ಕರೆದನು. ಅವನಿಗೂ ಮರದ ಮೇಲಿಂದಲೇ ಉತ್ತರ ನೀಡಿದಳು-
“ಆವಾಗೀನ ಕಾಲದಲ್ಲಿ ಅಣ್ಣ ಎಂದು ಕರೆದಿದ್ದೆ
ಈವಾಗಿನ ಕಾಲದಲ್ಲಿ ಪುರುಷ ಕರೆಯಲಾರೆ.
ಪಾಪದ ಮೊಕ ತೋರಲಾರೆ, ಬರಲಾರೆ, ಬರಲಾರೆ.”
ಅಣ್ಣನು ಸಿಟ್ಟಿನಿಂದ ಮನೆಗೆ ಹೋಗಿ ಕೊಡಲಿ ತಂದು ಮರಕಡಿಯಲು ಅನುವಾದನು. ಬಿಂಬಾಲಿ ಸೂರ್ಯನನ್ನು ಪ್ರಾರ್ಥಿಸಿದಳು- "ಸ್ವಾಮೀ, ನನಗೊಂದು ನೂಲಿನುಂಡೆಯನ್ನು ಬಿಡು." ಆಕಾಶದಿಂದ ನೂಲಿನುಂಡೆ ಬರಲು ನೂಲು ಹಿಡಿದು ಆಕೆ ಸೂರ್ಯಲೋಕಕ್ಕೆ ಹೋದಳು. ಅಲ್ಲಿ ಅವನು ಆಕೆಯನ್ನು ಲಗ್ನವಾದನು.
ಬಿಂಬಾಲಿ ಬಸುರಿಯಾಗಿ ನವಮಾಸ ತುಂಬಿ ಸೂರ್ಯದೇವನಂಥ ಮಗನನ್ನು ಹಡೆದು ಸುಖದಿಂದ ಇರತೊಡಗಿದಳು. ಒಂದು ದಿನ ಪತಿ ಇದ್ದಕ್ಕಿದ್ದ ಹಾಗೆ- "ಬಿಂಬಾಲಿ, ನನ್ನ ತಲೆಗೂದಲು ಬಿಡಿಸಿ ನೋಡು. ತಲೆಯೇಕೆ ತುರಿಸುತ್ತದೆ" ಎಂದನು.
ಪತಿಯ ತಲೆಗೂದಲನ್ನು ಬಿಡಿಸಿನೋಡುತ್ತಿರುವಾಗ ಬಿಂಬಾಲಿಗೆ ತನ್ನ ತಾಯಿಯ ನೆನಪಾಯಿತು. ಚಿಕ್ಕಂದಿನಲ್ಲಿ ತಾಯಿಯ ತಲೆಸೋಸಿ ನೋಡಿದ್ದಳು. ದುಃಖದಿಂದ ಕಣ್ಣು ತುಂಬಿ ನಾಲ್ಕು ಹನಿ ಉದುರಿದವು. ಅವು ಪತಿಯ ಮೇಲೆ ಬೀಳಲು-"ಮೋಡವಿಲ್ಲ ಮಳೆಯಿಲ್ಲ, ಇದೆಲ್ಲಿಯ ನೀರು" ಎಂದು ಕತ್ತೆತ್ತಿ ನೋಡಿದರೆ ಬಿಂಬಾಲಿ ಅಳುತ್ತಿದ್ದಾಳೆ. ಅಳುವ ಕಾರಣವೇನೆಂದು ಕೇಳಲು ಆಕೆ ಹೇಳಿದಳು-"ನನ್ನ ತಾಯಿಯ ಹಂಬಲವಾಯ್ತು.ಕಣ್ಣೀರು ಬಂತು."
"ಹಾಗಾದರೆ ನಿನ್ನನ್ನು ಇಂದೇ ಕೆಳಗಿನ ಲೋಕಕ್ಕೆ ಕಳಿಸುತ್ತೇನೆ. ಮಗುವನ್ನು ಕರೆದುಕೊಂಡು ತಾಯಿತಂದೆಗಳ ಬಳಿಗೆ ಹೋಗಿ ಬಾ"ಎಂದು ಸೂರ್ಯದೇವನು ನೂಲುಂಡೆಯ ಏಣಿಯನ್ನು ಬಿಟ್ಟನು. ಬಿಂಬಾಲಿ ನಾಣ್ಯದ ಚೀಲ ತೆಗೆದುಕೊಂಡು ನೂಲೇಣಿಯಿಂದ ಮಧ್ಯರಾತ್ರಿಯ ಹೊತ್ತಿಗೆ ತವರು ಮನೆಯ ಅಂಗಳದಲ್ಲಿ ಇಳಿದಳು. ಮನೆಯ ಬಾಗಿಲು ಮುಚ್ಚಿತ್ತು.ಬಿಂಬಾಲಿ ಕರೆದಳು-
"ಓ ಅಪ್ಪ, ಓ ಅವ್ವ, ಗೆಜ್ಜೆಕಾಲ ಮೊಮ್ಮಗ ಬಂದ
ಗಿಲ್ ಗಿಲ್ ನುಡಿಸ್ತನಿಂದ. ಓ ಅಪ್ಪ ಅಮ್ಮ ಬನ್ನಿ"
ಸೂರ್ಯದೇವನು ಮಾಯದ ನಿದ್ರೆ ಕಳಿಸಿ,ಅವರು ಎಚ್ಚರಿಲ್ಲದಂತೆ ಮಾಡಿದ್ದರಿಂದ ಅವರಾರೂ ಏಳಲಿಲ್ಲ; ಕದ ತೆರೆಯಲಿಲ್ಲ.
"ಓ ಅಣ್ಣ ನನ್ನಣ್ಣ ಗೆಜ್ಜೆಕಾಲ ಅಳಿಯ ಬಂದ
ಗಿಲ್ ಗಿಲ್ ನುಡಿಸ್ತನಿಂದ ಓ ಅಣ್ಣ ಕದ ತೆಗೆಯೋ"
ಅಣ್ಣನೂ ಬರಲಿಲ್ಲ. ಅಂಗಳದಲ್ಲಿ ಬತ್ತ ಕುಟ್ಟುವ ಒರಳಲ್ಲಿ ತಾನು ತಂದ ಹೊನ್ನ ನಾಣ್ಯಗಳನ್ನು ಚೆಲ್ಲಿ, ಮುಂದೆ ನಡೆದು ನೆರೆಮನೆಯ ಅಜ್ಜಿಯನ್ನು ಕರೆದಳು-
"ಆಚೆಮನೆ ಅಜ್ಜಮ್ಮ ಗೆಜ್ಜೆ ಕಾಲ ಮೊಮ್ಮಗ ಬಂದ
ಗಿಲ್‌ಗಿಲ್ ನುಡಿಸ್ತನಿಂದ, ಓ ಅಜ್ಜಿ ಎದ್ದು ಬಾರೆ.”
ಆಚೆಮನೆಯ ಅಜ್ಜಿ ಎಚ್ಚರಾಗಲು ಎದ್ದು ಬಂದು ಆಕೆ ಬಿಂಬಾಲಿಯನ್ನು ನೋಡಿದಳು. “ದೇವರೇ, ಬಿಂಬಾಲಿ ತವರು ಮನೆಯ ಹಂಬಲದಿಂದ ಬಂದಿದ್ದಾಳೆ. ಒಬ್ಬರಿಗೂ ಎಚ್ಚರಿಲ್ಲ” ಎಂದು ಬಾಗಿಲುದೂಡಿ ಒಳಗೆ ಹೋದಳು. ಹೆಪ್ಪು ಹಾಕಿದ ಮೊಸರನ್ನೇ ತಂದು ಬಿಂಬಾಲಿಗೆ ಕುಡಿಯಲು ಕೊಟ್ಟಳು. ಮಗುವನ್ನೆಕ್ತಿಕೊಂಡು ಅವನ ಕೈಯಲ್ಲಿ ದುಡ್ಡು ಕೊಟ್ಟು ಅವನನ್ನು ಕಟ್ಟಾಡಿಸಿದಳು. ಬಿಂಬಾಲಿ ತನ್ನ ಕಥೆಯನ್ನೆಲ್ಲ ಅಜ್ಜಿಗೆ ಹೇಳಿ ತಂದೆ-ತಾಯಿ-ಅಣ್ಣಂದಿರನ್ನು ನೋಡಿಕೊಂಡು ಮರಳಿದಳು.
ನೂಲಿನೇಣಿ ಮತ್ತೆ ಇಳಿದು ಬಂದಿತು. ಬಿಂಬಾಲಿ ಮುಗನ ಕಾಲಗೆಜ್ಜೆಗಳೆರಡನ್ನೂ ತೆಗೆದು ಬಾಗಿಲ ಬಳಿ ಇಟ್ಟು - “ಅಜ್ಜೀ ನಾನಿನ್ನು ಬರುತ್ತೇನೆ” ಎಂದವಳೇ ಏಣಿ ಹತ್ತಿ ಸೂರ್ಯಲೋಕಕ್ಕೆ ಹೋದಳು.
ಬೆಳಗಾದ ಮೇಲೆ ಬಿಂಬಾಲಿಯ ತಾಯಿ-ತಂದೆ-ಅಣ್ಣಂದಿರಿಗೆ ಎಚ್ಚರಾಗಲು, ಬಾಗಿಲಲ್ಲಿ ಹುಡುಗರ ಎರಡು ಕಾಲುಗೆಚ್ಚೆಗಳನ್ನು ನೋಡಿದರು. ಒರಳಿನಲ್ಲಿ ನಾಣ್ಯ ರಾಸಿ ತುಂಬಿದ್ದನ್ನು ನೋಡಿ - “ಇವು ಇಲ್ಲಿ ಹೇಗೆ ಬಂದವು” ಎಂದು ಒಬ್ಬರನ್ನೊಬ್ಬರು ಕೇಳಿದರು. ಅಷ್ಟರಲ್ಲಿ ನೆರೆಮನೆಯ ಅಜ್ಜಿ ಬಂದು ಮಧ್ಯರಾತ್ರಿಯ ಸುಮಾರಿಗೆ ಬಿಂಬಾಲಿ ಮಗನೊಡನೆ ಸೂರ್‍ಯಲೋಕದಿಂದ ನೂಲೇಣಿಯಲ್ಲಿಳಿದು ಬಂದಿದ್ದಳು. ಎಷ್ಟು ಕರೆದರೂ ನಿಮಗೆಚ್ಚರಾಗಲಿಲ್ಲ. ಅವಳ ಮಗ ಗೆಜ್ಜೆ ಕಾಲ ಕುಣಿಸುವ ಶಬ್ದ ಕೇಳಲಿಲ್ಲ. ಅವಳು ನನ್ನನ್ನು ಕರೆಯಲು ನನಗೆಚ್ಚರವಾಯಿತು. ಓಡಿ ಬಂದು ಅವಳಿಗೆ ಹೆಪ್ಪು ಹಾಕಿದ ಹಾಲು ಕೊಟ್ಟೆನು. ಮೊಮ್ಮಗನನ್ನು ಎತ್ತಿಕೊಂಡು ಆಡಿಸಿದೆನು. ಚಿನ್ನದ ನಾಣ್ಯಗಳನ್ನು ಅವಳೇ ಒರಳಿನಲ್ಲಿ ಸುರುವಿದಳು. ಹುಡುಗನ ಕಾಲುಗೆಜ್ಜೆಗಳನ್ನು ತಾನು ಬಂದ ಗುರುತಿಗಾಗಿ ಬಿಂಬಾಲಿ ಬಿಟ್ಟು ಹೋಗಿದ್ದಾಳೆ - ಎಂದಳು.
ತಂದೆತಾಯಿಗಳು ತಮ್ಮ ಅದೃಷ್ಟವನ್ನು ನೆನೆದು ದುಃಖಿಸಿದರು. ಬಿಂಬಾಲಿಯು ಸೂರ್ಯಲೋಕಕ್ಕೆ ಹೋಗಿ ಅವನನ್ನು ಮದುವೆಯಾಗಿ, ಮಗನನ್ನು ಪಡೆದು ಸುಖವಾಗಿದ್ದಾಳೆ ಎನ್ನುವುದಾದರೂ ಅವಳಿಲ್ಲಿ ಬಂದು ಹೋದದ್ದರಿಂದ ತಿಳಿಯಿತು - ಎಂದು ಕಣ್ಣೀರು ಸುರಿಸಿದರು.
ಬೆಳಗು ಮುಂಜಾವಿನಲ್ಲಿ ಹಕ್ಕಿಗಳೆದ್ದು ಚೆಲಿಪಿಲಿಮಾಡುವಾಗ ಇಂದಿಗೂ
ಬಿಂಬಾಲಿಯ ಮಗನ ಗೆಚ್ಜೆಕಾಲುಗಳ ಗಿಲಗಿಲ ಶಬ್ದವನ್ನು ನಾವು ಕೇಳಬಹುದು. ಎಲ್ಲಮ್ಮನ ಮನಿಸು
ಒಕ್ಕಲಿಗರೆಲ್ಲ ಸೀಗೆ ಹುಣ್ಣಿಮೆ ಹಾಗೂ ಎಳ್ಳು ಅಮಾಸಿಗೆ ಹೊಲದ ಲಕ್ಷ್ಮಿಗೆ ನೈವೇದ್ಯ ಕೊಂಡೊಯ್ಯುತ್ತಾರೆ. ಹೊಲವುಳ್ಳವರು ಹೊಲವಿಲ್ಲದವರನ್ನು ತಮ್ಮೊಡನೆ ಹೊಲಕ್ಕೆ ಕರೆದೊಯ್ದು ಊಟಮಾಡಿಸಿ ಕಳಿಸುವರು. “ಎಳ್ಳು ಅಮಾಸಿಗೆ ಉಳ್ಳಿಕ್ಕೆ ಕರೆಯದವರಾರು” ಎಂಬ ಲೋಕೋಕ್ತಿಯೇ ಹುಟ್ಟಿಕೊಂಡಿದೆ.
ವಾಡಿಕೆಯಂತೆ ಸಜ್ಜೆಯ ಕಡಬು, ಹಿಂಡಿಪಲ್ಲೆ, ಫುಂಡಿಪಲ್ಲೆ, ಬದನೆಕಾಯಿಪಲ್ಲೆ ಅಲ್ಲದೆ ಹೋಳಿಗೆ ಅನ್ನ ಮೊದಲಾದ ಸಾಮಗ್ರಿಗಳು ಸಿದ್ಧವಾಗಬೇಕು. ಅವುಗಳನ್ನೆಲ್ಲ ಒಂದು ಡೊಳ್ಳುಹೆಡಿಗೆಯಲ್ಲಿ ವ್ಯವಸ್ಥಿತವಾಗಿ ಇರಿಸಿಕೊಂಡು, ಗೃಹಿಣಿಯು ಅದನ್ನು ನೆತ್ತಿಯ ಮೇಲೆ ಹೊತ್ತು ಹೊಲದ ಹಾದಿ ಹಿಡಿಯಬೇಕು.
ಜೀನ ಒಕ್ಕಲಿಗನೊಬ್ಬನು ಹೆಂಡತಿಗೆ ಬೊಗಸೆ ಗೋದಿ, ಸೆರೆ ಅಕ್ಕಿ ತೆಗೆದು ಕೊಟ್ಟು ಎಳ್ಳು ಅಮಾಸಿಯ ಅಡಿಗೆ ಮಾಡಲು ಹೇಳಿದನು. ಅಡಿಗೆ ಸಿದ್ಧವಾಯಿತು. ಊರ ಒಕ್ಕಲಿಗರೆಲ್ಲ ತಂತಮ್ಮ ಹೊಲದಹಾದಿ ಹಿಡಿದರು. ನೆರೆಹೊರೆಯವರನ್ನು ಊಟಕ್ಕೆಂದು ಹೊಲಕ್ಕೆ ಕರಕೊಂಡು ನಡೆದರು. ಎಲ್ಲರೂ ಹೋದಬಳಿಕ ಜೀನನ ಎಡೆ ಹೊರಬಿತ್ತು. ಮುಂಚಿತ ಹೊರಬಿದ್ದರೆ ನೆರೆಹೊರೆಯವರನ್ನು ಊಟಕ್ಕೆ ಕರೆಯಬೇಕಾಗುತ್ತಿತ್ತು. ಔಪಚಾರಿಕವಾಗಿ ಕರೆಯುವಷ್ಟರಲ್ಲಿ ಬಂದೇ ಬಿಟ್ಟರೆ ಗತಿಯೇನೆಂದು ತಡಮಾಡಿ ಹೊಲಕ್ಕೆ ಹೊರಟನು. ಹೆಂಡತಿಯನ್ನು ಸಹ ಕರೆದೊಯ್ಯಲಿಲ್ಲ.
ಚರಗದ ಬುಟ್ಟಿಯನ್ನು ಅಟ್ಟದ ಕೆಳಗಿಟ್ಟು ಅಲ್ಲಿಯೇ ತುಸುಹೊತ್ತು ಒರಗುವಷ್ಟರಲ್ಲಿ ಜಂಪು ಹತ್ತಿತು. ಬಹಳ ಹೊತ್ತಿನ ಮೇಲೆ ನಿದ್ದೆಯಿಂದ ಗಡಬಡಿಸಿ ಎದ್ದು ನೋಡುತ್ತಾನೆ - ಇದ್ದಷ್ಟು ಅಡಿಗೆಯನ್ನು ಗುಬ್ಬಿ ಕಾಗೆಗಳು ತಿಂದು ಚೆಲ್ಲಾಡಿದ್ದವು. ಮಗಿಯಲ್ಲಿಟ್ಟ ನೀರಿಗೆ ಹದ್ದು ಬಾಯಿ ಹಾಕಿ ಉರುಳಿಸಿದೆ. ಇನ್ನೇನುಣ್ಣುವುದು, ಇನ್ನೇನು ತಿನ್ನುವುದು ಎಂದು ಮೋರೆ ಒಣಗಿಸಿಕೊಂಡು
ಕುಳಿತಾಗ ಅತ್ತಕಡೆಯಿಂದ ಒಬ್ಬ ಜೋಗತಿ ಬಂದಳು ಉಧೋ ಉಧೋ ಎನ್ನುತ್ತ. ಆಕೆ ಬಂದುದು ಭಿಕ್ಷೆ ಬೇಡುವ ಸಲುವಾಗಿ.ಜೋಗತಿ ಭಿಕ್ಷೆ ಹಾಕು ಎಂದಾಗ ಜೀನನಿಗೆ ಸಿಟ್ಟೇ ಬಂತು “ನೀಡುವದಿಲ್ಲ” ಎಂದರೂ ಆಕೆ ತನ್ನ ಚೌಡಿಕಿ ಬಾರಿಸುವದನ್ನು ಬಿಡಲಿಲ್ಲ. ಜೀನನು ಎದ್ದವನೇ ಎರಡು ಹಸಿದಂಟು ಕಿತ್ತಿ ಜೋಗತಿಯ ಬೆನ್ನಮೇಲೆ ಬಾರಿಸತೊಡಗಿದನು.
“ಹೊಡಿಯಬೇಡೋ ಮಾರಾಯಾ, ಹೊಡಿಯಬೇಡ. ಬಂದ ಹಾದಿಯಿಂದ ಹೋಗ್ತೇನೆ?” ಎನ್ನುತ್ತ ಜೋಗತಿ ಜೀನನ ಹೊಲವನ್ನು ಹೊಕ್ಕಳು. ಅಲ್ಲಿ ತನ್ನ ಕಣ್ಣ ಕಾಡಿಗೆಯನ್ನು ಉದುರಿಸಿದಳು. ಜೀನನು ಬೆನ್ನು ಹತ್ತಿಯೇ ಬರುವದನ್ನು ಕಂಡು ಹತ್ತಿಯ ಹೊಲವನ್ನು ಹೊಕ್ಕು ಅಲ್ಲಿ ಕೈ ಮೇಲಿನ ಗಂಧವನ್ನು ಜಾಡಿಸಿದಳು. ಅಷ್ಟಕ್ಕೇ ಬಿಡದೆ ಗೋದಿಯ ಹೊಲದಲ್ಲಿ ಹಾಯ್ದು ಉಡಿಯೊಳಗಿನ ಭಂಡಾರವನ್ನು ತೂರಿದಳು. ಕಡಲೆಯ ಹೊಲದಲ್ಲಿ ಹಾಯ್ದು ಹಣೆಯ ಮೇಲಿನ ಕುಂಕುಮವನ್ನು ಈಡಾಡಿದಳು. ಅಂತೂ ಆಕೆಯನ್ನ ಬೆನ್ನಟ್ಟಿದ ಜೀನನು ಹೊಲದ ಸೀಮೆ ದಾಟಿಸಿಯೇ ಅಟ್ಟದ ಕಡೆಗೆ ಮರಳಿದನು.
ಉಣ್ಣದೆ ತಿನ್ನದೆ, ಬರಿದಾಗಿ ಕುಳಿತ. ಡೊಳ್ಳು ಹೆಡಿಗೆಯನ್ನು ಹೊತ್ತುಕೊಂಡು ಜೀನನು ಸಂಜೆಗೆ ಮನೆಗೆ ಹೋಗಿ ಮುಸುಕು ಎಳೆದುಕೊಂಡು ಮಲಗಿಯೇ ಬಿಟ್ಟನು.
****
ಬೆಳೆಭರಕ್ಕೆ ಬರುವ ಸಂದರ್ಭದಲ್ಲಿ ಹೊಲಕ್ಕೆ ಹೋಗಿ ಬೆಳೆಯಲ್ಲಿ ತಿರುಗಾಡಿ ನೋಡಿದರೆ ಎಲ್ಲವೂ ಅವಲಕ್ಷಣ. ಜೋಳದ ಬೆಳೆಗೆಲ್ಲ ಕಾಡಿಗೆ ರೋಗ ಬಿದ್ದಿದೆ. ಹತ್ತಿಯ ಬೆಳೆ, ಗೋದಿಯ ಬೆಳೆ, ಕಡಲೆಯ ಬೆಳೆಗಳೆಲ್ಲ ಭಂಡಾರ, ಇಟ್ಟಂಗಿ, ಸಿಡಿ, ಕೊಳ್ಳೆ ರೋಗಗಳಿಗೆ ಈಡಾಗಿದ್ದನ್ನು ಕಂಡು, ಹೊಲದಲ್ಲಿ ಒಂದು ಕ್ಷಣ ಸಹ ನಿಲ್ಲದೆ, ಮನೆಗೆ ಬಂದವನೇ ಕಂಬಳಿ ಹೊದೆದುಕೊಂಡು ಜಗಲಿಗೆ ತಲೆಕೊಟ್ಟು ಮಲಗಿದನು.
ಹೆಂಡತಿ ಬಂದು ಊಟಕ್ಕೆ ಎಬ್ಬಿಸಿದಳು. ಇನ್ನೇನುಣ್ಣಲಿ, ಇನ್ನೇನು ತಿನ್ನಲಿ ಹತ್ತುಖಂಡಗ ಜೋಳವೆಲ್ಲ ಕಾಡಿಗೆ, ಹತ್ತುಖಂಡಗ ಹತ್ತಿಯೆಲ್ಲ ಬಂಜೆ, ಹತ್ತುಖಂಡಗ ಗೋದಿಗೆಲ್ಲ ಸೊಳ್ಳು ಹಾಯ್ದಿದೆ. ಹತ್ತುಖಂಡಗ ಕಡಲೆಗೆಲ್ಲ ಕೊಳ್ಳಿ ಹಾಯ್ದಿದೆ - ಎಂದು ಗೋಳಿಟ್ಟನು.
ಅಟ್ಟ ಮೇಲೆ ಒಲೆ ಉರಿದಂತೆ ಹಿಂದುಗಡೆ ಆತನ ಲಕ್ಷಕ್ಕೆ ಬಂತು. ಅಂದು ಹೊಲದಲ್ಲಿ ಉದೋ ಉದೋ ಎನ್ನುತ್ತ ಭಿಕ್ಷೆಗೆ ಬಂದವಳು ಜೋಗಿತಿಯಾಗಿರದೆ ಎಲ್ಲಮ್ಮ ದೇವಿಯೇ ಆಗಿರಬಹುದೇ ? ಆಕೆ ಎಲ್ಲ ಬೆಳೆಗಳಲ್ಲಿಯೂ ಓಡಾಡಿದಳು. ಓಡಾಡುತ್ತ ಕಣ್ಣ ಕಾಡಿಗೆ, ಕೈಯ ಗಂಧ, ಹಣೆಯ ಕುಂಕುಮ ಭಂಡಾರ ತೂರಾಡಿದ್ದರಿಂದ ಬೆಳೆಗಳೆಲ್ಲ ಹಾಳಾಗಿ ಹೋಗಿವೆ.
ತನ್ನ ಜೀನತನ ಬಿಡಿಸುವ ಸಲುವಾಗಿಯೇ ಎಲ್ಲಮ್ಮನು ಹೀಗೆ ಮುನಿಸಿದಳೆಂದು ಬಗೆದು ಅಂದಿನಿಂದ ಜಿಪುಣತನವನ್ನು ಬಿಟ್ಟು ಉದಾರನಾಗುತ್ತ ಹೋದನು.
ಸೊಂಟನೋವಿಗೆ ಎಣ್ಣೆ ಮಜ್ಜನ
ಬಹುತರವಾಗಿ ಯಾವ ಅಮಲ್ದಾರರೂ ಕಾಲಿಡದ ಹಳ್ಳಿಯೆಂದರೆ ಕೊರಕಲಮಟ್ಟಿ. ಅಲ್ಲಿಗೊಮ್ಮೆ ಜಾಫರಖಾನ ಫೌಜದಾರ ಸಾಹೇಬರು ಬಂದುಹೋದರು. ಅಷ್ಟೇ ಅಲ್ಲ, ಒಂದು ರಾತ್ರಿ ಚಾವಡಿಯಲ್ಲಿ ಮುಕ್ಕಾಮು ಮಾಡಿದರು. ಏಳುಗೇಣು ಎತ್ತರದ ಕಪ್ಪು ಕುದುರೆಯನ್ನು ನೀಳಗಡ್ಡದ ಫೌಜದಾರ ಸಾಹೇಬರು ಹತ್ತಿ ನಡೆಯಿಸತೊಡಗಿದರೆ ಕುದುರೆಯ ಬೆನ್ನು ಬಾಗಿ ಬಿಲ್ಲಾಗುತ್ತಿತ್ತು.
ಕೊರಕಲಮಟ್ಟಿಗೆ ಬರುವುದಕ್ಕೆ ಯಾವ ದಾರಿಯೂ ಅನುಕೂಲವಾಗಿಲ್ಲ. ನಡೆಯುತ್ತಲೇ ಬರಬೇಕು. ಇಲ್ಲವೆ ಕುದುರೆ ಹತ್ತಿ ಬರಬೇಕು. ಜಾಫರಖಾನ ಫೌಜದಾರರು ಕುದುರೆ ಸಾಕಿದ್ದರಿಂದಲೇ ಕೊರಕಲಮಟ್ಟಿಗೆ ಬರಲು ಸಾಧ್ಯವಾಯಿತು.
ಬೆಳಗಾಗುವ ಹೊತ್ತಿಗೆ ಚಾವಡಿ ಮುಂದಿನ ಕುದುರೆಯನ್ನು ಬಿಚ್ಚಿಕೊಂಡು ಓಲೆಕಾರನು ಮುಂದೆ ಸಾಗಿದನು. ಅಗಸೆಯ ಹೊರಗಿರುವ ಹನುಮಪ್ಪನ ಹಾಳು ಗುಡಿಯ ಕಲ್ಲುಡಿಗ್ಗೆಯ ಬಳಿಯಲ್ಲಿ ನಿಲ್ಲಿಸಿದನು. ಏಳುಗೇಣಿನ ಕುದುರೆಯಾದ್ದರಿಂದ ಮೇಲೆ ಹತ್ತುವವರಿಗೆ ಆನುಗಲ್ಲು ಅಥವಾ ಕಟ್ಟೆ ಅವಶ್ಯವಾಗಿ ಬೇಕು.
ಗುಡಿಯ ಮಗ್ಗುಲಿಗೆ ಅಸ್ತವ್ಯಸ್ತವಾಗಿ ಬಿದ್ದ ಕಲ್ಲುಗಳಲ್ಲಿ ಒಂದನ್ನೇರಿ ನಿಂತು ಕುದುರೆಯನ್ನು ಜಿಗಿದು ಹತ್ತಿದರು. ಆ ಇಸಲಿಗೆ ಕಾಲಕೆಳಗಿನ ಕಲ್ಲು ಉರುಳಿಬಿತ್ತು. ಗೌಡ ಓಲೆಕಾರರು ಮಾಡಿದ ಮುಜುರೆಯನ್ನು ಸ್ವೀಕರಿಸುತ್ತ ಫೌಜದಾರರು ಕುದುರೆಯನ್ನು ಓಡಿಸಿದರು.
ಅಂದು ರಾತ್ರಿ ಊರಗೌಡರ ಕನಸಿನಲ್ಲಿ ಹನುಮಪ್ಪನು ಕಾಣಿಸಿಕೊಂಡು ಅವನನ್ನು ಗಟ್ಟಿಯಾಗಿ ಹಿಡಿದನು.
“ಏಕೆ ದೇವಾ, ಕನಸಿನಲ್ಲಿ ದರ್ಶನಕೊಟ್ಟಿರಲ್ಲ” ಎಂದು ವಿನಯದಿಂದ ಗೌಡ ಕೇಳಿದನು.
“ಗೌಡ, ಒಳ್ಳೆಯ ಮಾತಿನಿಂದ ಎಣ್ಣೆ ಮಜ್ಜನ ಮಾಡಿಸುವೆಯೋ ಇಲ್ಲವೋ ನಿನ್ನ ಕುತ್ತಿಗೆ ಹಿಸುಕಲೋ ?” ಎಂದನು ಹನುಮಪ್ಪ."ನನ್ನ ಮೇಲೇಕೆ ಸಿಟ್ಟು ದೇವಾ ? ನಾನಾವ ಅಪರಾಧ ಮಾಡಿದೆ ?"
"ನನ್ನ ಸೊಂಟ ನೋವಾಗಿದೆ."
"ಸೋಂಟನೋವು ಏಕಾಯಿತು ?" ಗೌಡನ ಪ್ರಶ್ನೆ.
"ಬಂದಿದ್ದನಲ್ಲ ನಿಮ್ಮ ಫೌಜದಾರ. ತನ್ನೂರಿಗೆ ಹೋಗುವಾಗ ಕುದುರೆ ಹತ್ತುವ ಮುಂದೆ ನನ್ನ ಮೇಲೆ ಕಾಲಿಟ್ಟು ನೆಗೆದು ಕುದುರೆ ಹತ್ತಿದನು. ಆ ಇಸಲಿಗೆ ಸೊಂಟ ನೋವು ಆಗಿದೆ" ಹನುಮಪ್ಪನ ವಿವರನಣೆ.
"ಆ ಫೌಜದಾರನನ್ನು ಬಿಟ್ಟು ನನ್ನನ್ನೇಕೆ ಹಿಡಿದಿರಿ ದೇವಾ ?"
"ಯಾರನ್ನು ಹಿಡಿಯಲಿ ? ಫೌಜದಾರನು ನನ್ನ ಭಕ್ತನೇ ? ಭಕ್ತರನ್ನು ಬಿಟ್ಟು ಅನ್ಯರನ್ನು ನಾನೇಕೆ ಹಿಡಿಯಲಿ" ಹನುಮಂತದೇವರ ಸ್ಪಷ್ಟೀಕರಣ. "ಬೆಳಗಾಗುತ್ತಲೇ ಎಣ್ಣೆ ಮಜ್ಜನ ಮಾಡಿಸುತ್ತೇನೆ. ತಾಳು ದೇವ" ಎಂದು ಗೌಡನು ಕಾಲಿಗೆರಗಲು ಹನುಮಪ್ಪನು ಅವರನ್ನು ಬಿಟ್ಟುಕೊಟ್ಟನು.
ಕನಸಿನಲ್ಲಿ ಮಾತುಕೊಟ್ಟ ಪ್ರಕಾರ ಗೌಡನು, ಮಗಿ ಎಣ್ನೆ ತರಿಸಿ ಹನುಮಪ್ಪ ದೇವರಿಗೆ ಎಣ್ನೆ ಮಜ್ಜನ ಮಾದಿಸಿದನು.
ರಾತ್ರಿರಾಜ
ಭೂಲೋಕದಿಂದ ತನ್ನ ಕಡೆಗೆ ಬಂದ ವಿಪುಲ ಅರ್ಜಿಗಳ ಒಟ್ಟಣೆಂಯನ್ನು ನೋಡಿ, ಅವುಗಳಿಗೆಲ್ಲ ಉತ್ತರ ಬರೆಯಿಸುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವತಃ ಭೂಲೋಕಕ್ಕೆ ಹೋಗಿ, ಅಲ್ಲಿಯವರಿಗೆ ಬೇಕಾದ ಪರಿಹಾರವನ್ನು ಒದಗಿಸಿ ಬರುವುದು ಲೇಸೆಂದು ಬಗೆದು ಬ್ರಹ್ಮದೇವನು ತನ್ನ ಸಿಬ್ಬಂದಿಯೊಡನೆ ಪೃಥ್ವಿಗಿಳಿದನು. ಅರ್ಜಿದಾರರಿಗೆ ಕೊಡಬೇಕಾದ ಪರಿಹಾರಗಳನ್ನೂ ಹೊತ್ತುತಂದನು.
ಊರಮುಂದಿನ ಧರ್ಮಶಾಲೆಯಲ್ಲಿ ಬೀಡುಬಿಟ್ಟು ಊರಲ್ಲೆಲ್ಲ ಡಂಗುರ ಹೊಡಿಸಿದನು. "ಯಾರಾರ ಬೇಡಿಕೆ ಏನೇನಿದೆಯೆಂಬುದನ್ನು ಸಮಕ್ಷಮದಲ್ಲಿ ತಿಳಿಸಿ ಪರಿಹಾರ ಪಡೆಯಬೇಕು" ಎನ್ನುವ ಸುದ್ದಿ ಕಣ್ಣುಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಊರವರಿಗೆ ತಿಳಿದುಬಂತು.
ಮರುದಿನ ಮುಂಜಾನೆ ಧರ್ಮಶಾಲೆಯತ್ತ ಜನರು ಸಾಲುಗಟ್ಟಿ ಸಾಗಿಯೇ ಸಾಗಿದರು. ತಮ್ಮ ಬೇಡಿಕೆಗಳನ್ನು ಬ್ರಹ್ಮದೇವನ ಮುಂದಿಟ್ಟರು. ಬ್ರಹ್ಮದೇವನಾದರೂ ಯಾರನ್ನೂ ಬರಿಗೈಯಿಂದ ಕಳಿಸದೆ, ಕೈಸಡಿಲು ಬಿಟ್ಟು ಕೇಳಿದವರಿಗೆ ತೃಪ್ತಿಯಾಗುವಂತೆ ಅವರವರ ಜೇಡಿಕೆಗಳನ್ನು ಪೂರಯಿಸಿದನು. ಸಂತ್ರಸ್ತರಲ್ಲಿ ಕೆಲವರಿಗೆ ಹೊಲ ಸಿಕ್ಕವು. ಕೆಲವರಿಗೆ ಮನೆ ಸಿಕ್ಕವು. ಹಿಂಡುವ ಎಮ್ಮೆ ಕೆಲವರಿಗೆ, ಹೂಡುವ ಎತ್ತು ಕೆಲವರಿಗೆ ದೊರೆತವು. ಕುದುರೆ ಬೇಡಿದವರಿಗೆ ಕುದುರೆ, ಗಾಡಿ ಬೇಡಿದವರಿಗೆ ಗಾಡಿ, ಪ್ರಾಯ ಬೇಡಿದರೂ ಸಿಕ್ಕಿತು. ಆರೋಗ್ಯ ಬೇಡಿದರೂ ಸಿಕ್ಕಿತು. ಚೆಲುವಿಕೆ — ಆಭರಣಗಳನ್ನೂ ಬ್ರಹ್ಮದೇವನು ಇಲ್ಲೆನ್ನದೆ ಕೊಟ್ಟೇಕೊಟ್ಟನು.
ದೀಪ ಹಚ್ಚುವ ವೇಳೆಯಾಯಿತು. ಬಡ ನೇಕಾರನೊಬ್ಬನು ಧರ್ಮಶಾಲೆಗೆ ಬಂದು, ಬ್ರಹ್ಮದೇವರಿಗೆ ಕೈಮುಗಿದು ನಿಂತನು.
"ಏನು ಬೇಕಾಗಿತ್ತು ನಿನಗೆ" ಎಂದು ಕೇಳಿದನು ಬ್ರಹ್ಮದೇವ.
"ನನಗೆ ಅರಸೊತ್ತಿಗೆಯನ್ನು ಕೊಟ್ಟುಬಿಡಿರಿ" ಎ೦ದನು ಆ ನೇಕಾರ.
"ತೀವ್ರ ಏಕೆ ಬರಲಿಲ್ಲ ನೀನು ?”
"ಮಗ್ಗದ ಮೇಲಿನ ಸೀರೆ ನೆಯ್ದು ಮುಗಿಸಬೇಕಾಗಿತ್ತು. ಆದ್ದರಿಂದ ತಡವಾಯಿತು? ಎಂದು ನೇಕಾರನು ಕೈತಿಕ್ಕುತ್ತ ನುಡಿದು ಮುಗಿಸಿದನು. "ನಾನು ಕೊಡಬೇಕಾದ ಅರಸೊತ್ತಿಗೆಗಳೆಲ್ಲ ತೀರಿಹೋದವು. ಮತ್ತೇನಾದರೂ ಕೇಳಿಕೋ ಕೊಡುವೆನು.
"ನನಗೆ ಅರಸೊತ್ತಿಗೆಯೇ ಬೇಕಾಗಿತ್ತು" ನೇಕಾರನು ತಡವರಿಸುತ್ತ ಹೇಳಿದನು. ಬ್ರಹ್ಮದೇವನು ಕೆಲಹೊತ್ತು ವಿಚಾರಮಗ್ಗನಾಗಿ ಆ ಬಳಿಕ ಹೇಳಿದನು
"ರಾತ್ರಿರಾಜನಾಗುವೆಯಾ ?”
"ಆಗಲಿ. ಎಂಥದೇ ಆಗಲಿ. ರಾಜನಾದರೆ ಸಾಕು. ಕೊಟ್ಟುಬಿಡಿರಿ" ಎಂದು ಹಿರಿಹಿಗ್ಗಿನಲ್ಲಿ ಕೇಳಿದನು.
"ಕೊಟ್ಟಿದೆ ಹೋಗು" ಎಂದನು ಬ್ರಹ್ಮದೇವ.
***
ಹಳ್ಳಿಯ ಬಯಲಾಟದ ಮೇಳದವರು ಪ್ರತಿಯೊಂದು ಆಟದಲ್ಲಿ ಆ ನೇಕಾರನಿಗೇ ರಾಜನ ಸೋಗು ಕೊಡತೊಡಗಿದರು. ಬಡ ನೇಕಾರನು ದುಡಿದು ದುಡಿದು ಬಡಕಲಾಗಿದ್ದನು. ಗಲ್ಲಗಳೆಲ್ಲ ಕರಗಿ ದವಡಿಗೆ ಹತ್ತಿದ್ದವು. ಕಣ್ಣು ಒಳಸೇರಿದ್ದವು. ಅವು ಅಸಹ್ಯವಾಗಿ ಕಾಣಿಸಬಾರದೆಂದು ನೇಕಾರನು ಕಣ್ಣಿಗೆ ಬಣ್ಣದ ಕನ್ನಡಕ ಧರಿಸುವನು. ಗಲ್ಲಮೀಸೆ ಹಚ್ಚಿಕೊಳ್ಳುವನು. ಅದಕ್ಕಾಗಿ ಮೇಳದವರು ಬಣ್ಣದ ಕೋಣೆಯಲ್ಲಿ ಹರಕಲಾದ ಒ೦ದು ಉಣ್ಣೆಯ ಝಾನ (ಥಡಿ) ತಂದಿಟ್ಟರು. ಬಟ್ಟಲಲ್ಲಿ ಅರೆದ ಅಂಟು ನೆನೆಯಿಟ್ಟರು.
ಪ್ರತಿಯೊಂದು ಸೋಗು ರಂಗಸ್ಥಳಕ್ಕೆ ಕುಣಿಯುತ್ತಲೇ ಬರುವದು. "ಝೆಂತತ ಝಣತ ಕಡಕಡ ಝೇಂತತ ರುಣತ । ತಯಾ ತೋಮ್ಲದರಿನಲಾ" ಎಂದು ತಿಲ್ಲಾಣವಾಡುವುದು ವಾಡಿಕೆಯಾಗಿದೆ. ಆದರೆ ಅದಕ್ಕೆ ಅರ್ಥವೇನು, ಯಾರಿಗೂ ತಿಳಿಯದು.
"ಝಾನ್ ತಾ| ಕಡಕಡ್ಡು ತಾ|
ಜಿಗಿತಾ | ಝಾನತಾ
ತಗೊಂಡು ಬರಲಿಲ್ಲ ಲಾ?"
ಎನ್ನುವುದೇ ಆ ವೀರಾವೇಶದ ರಾಜನ ವೀರವಾಣಿ.
ಬ್ರಹ್ಮದೇವರಿತ್ತ ವರಪ್ರಸಾದದಿಂದ ನೇಕಾರನು ರಾತ್ರಿರಾಜನಾಗುತ್ತಲೇ ಬಂದನು. ಅವನ ಆ ವತನವನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ರಾತ್ರಿರಾಜ ಅವನು.
ವಾಸ್ತವಿಕ ಕಥೆಗಳು
ಲೆಕ್ಕಾಚಾರದ ಅತ್ತೆ
ಅಳಿಯನ ಅರ್ಹತೆ
ತಂಗಿಗೊಬ್ಬ ಅಕ್ಕ
ಉದ್ದನ್ನವರ ಮುಂದೆ ಕೀರ್ತನ
ತಂದೆ ಮಗ
ಪಿಸುಣನಿಗೆ ಉಪಕಾರ
ಅಳಬೇಕೆಂದರೆ
ಬಾರದ ಬರ
ಕೊನೆಯಾಶೆ
ತಾಯ ಕೊಂದ ಪಾಪ
ರುಚಿಗಾರ ಸವಿಗಾರ
ದೀಪ ಮಾತಾಡಿತು
ಸೊಸೆಗೇನು ಅಧಿಕಾರ?
ಮಾಡಿದ್ದೊಂದು ಆಗಿದ್ದೊಂದು
ಒಂದೂರಲ್ಲಿ ತಾಯಿ ಮಗ ಇದ್ದರು. ಮಗನ ಹೆಂಡತಿಯೂ ಬಂದಿದ್ದಳು.
ಸೊಸೆಯ ಕೈಯಿಂದ ಅಡಿಗೆ ಮಾಡಿಸುವಾಗ ಅತ್ತೆಯು ಹಿಟ್ಟು ಬೇಳೆ, ಸೊಪ್ಪು, ಖಾರಗಳನ್ನೆಲ್ಲ ಲೆಕ್ಕಾಚಾರದಿಂದ ತೆಗೆದುಕೊಡುವಳು. ಅದರಿಂದ ಅಡಿಗೆ ಹಾಳಾಗುವದಕ್ಕೆ ಅವಕಾಶವೇ ಇಲ್ಲವೆಂದು ಅತ್ತೆ ಬಗೆದಿದ್ದಳು.
ಮಕರಸಂಕ್ರಮಣದ ಕಾಲಕ್ಕೆ ಅತ್ತೆ ಸೊಸೆಂಯನ್ನು ಕರೆದು, ಮೂರೆಂದರೆ ಮೂರೇ ರೊಟ್ಟಿಯಾಗುವಷ್ಟು ಸಜ್ಜೆಹಿಟ್ಟು ಮೂರು ಬದನೆಕಾಯಿ ಕೊಟ್ಟಳು. "ಇದರಿಂದ ತಲೆಗೊಂದು ರೊಟ್ಟಿ, ಮೇಲೆ ಇಡಿಗಾಯಿ ಬದನೆಕಾಯಿ ಪಲ್ಲೆ ಆಗುತ್ತದೆ. ಜೋಕೆಯಿಂದ ಮಾಡು" ಎಂದು ಸೂಚಿಸಿದಳು.
ಎಳ್ಳುಹಚ್ಚಿದ ಮೂರುರೊಟ್ಟಿ, ಬದನೆಕಾಯಿಪಲ್ಲೆ ಸಿದ್ಧಪಡಿಸಿದ ಸೊಸೆಗೆ ಬದನೆಕಾಯಿಪಲ್ಲೆಂಯ ವಾಸನೆಯು ಆಕೆಯ ಬಾಂಹಲ್ಲಿ ನೀರೂರಿಸಿತು. ಅದರ ತುಸು ಎಸರು ಕೈಯಲ್ಲಿ ಹಾಕಿಕೊಂಡು ನೆಕ್ಕಿದಳು. ಸೊಗಸಾಗಿತ್ತು. ತನ್ನ ಪಾಲಿನ ಒಂದು ರೊಟ್ಟಿ, ಒಂದು ಬದನೇಕಾಯಿ ತಿಂದೇಬಿಟ್ಟರಾಯಿತೆಂದು ಅದನ್ನೂ ಮುಗಿಸಿದಳು. ಸಾಕೆನಿಸಲಿಲ್ಲ. ಇನ್ನು, ಗಂಡನ ಪಾಲಿನ ರೊಟ್ಟಿ ಪಲ್ಲೆ ತಿನ್ನಬಹುದು. ಅವನಿಗೇನಾದರೂ ನೆವ ಹೇಳಿದರಾಗುವದು—ಎಂದು ಎರಡನೇ ರೊಟ್ಟಿಯನ್ನೂ ಆಗು ಮಾಡಿದಳು. ಇನ್ನುಳಿದದ್ದು ಅತ್ತೆಯ ಪಾಲಿನ ರೊಟ್ಟಿ. "ಜೀವ ಕೇಳಲೊಲ್ಲದು. ತಿಂದೇಬಿಡುವೆ. ಬಯ್ದಷ್ಟು ಬಯ್ಯಲಿ" ಎಂದು ಅದನ್ನೂ ಬಕ್ಕರಿಸಿಬಿಟ್ಟಳು.
ಉಣ್ಣುವ ಹೊತ್ತಿಗೆ ಗಂಡ ಬಂದನು. ಅತ್ತೆ ಬಂದಳು. ಅವರಿಗೆ ಊಟಕ್ಕೇನೂ ಇರಲಿಲ್ಲ. ಮಾಡಿದ ರೊಟ್ಟಿ ಪಲ್ಲೆ ಎಲ್ಲಿ—ಎಂದು ಅತ್ತೆ ಕೇಳಿದರೆ ಸೊಸೆ ಇದ್ದ ಸಂಗತಿಯನ್ನೆಲ್ಲ ಹೇಳಿಬಿಟ್ಟಳು.
"ನೋಡಿದೆಯಾ ? ಇಂಥಾಕೆಯನ್ನು ಏನು ಮಾಡಬೇಕೋ ತಮ್ಮ ?" ಎಂದು ಮಗನಿಗೆ ಕೇಳಿದಳು.
"ನಿನಗೆ ತಿಳಿದಂತೆ ಮಾಡವ್ಟ" ಎಂದನು ಮಗ. ಅತ್ತೆಯ ಹೊಟ್ಟೆ ಉರಿಯುತ್ತಿತ್ತು. ಸೊಸೆಯ ಮೇಲೆ ಸಿಟ್ಟು ಬೆಂಕಿಯಾದಳು. "ಈಕೆಯನ್ನು ಜೀವಸಹಿತ ಸುಟ್ಟು ಬರೋಣ?” ಎಂದು ತೀರ್ಮಾನ ಹೇಳಿದ್ದಕ್ಕೆ ಮಗನು ಸಮ್ಮತಿಸಿದನು.
ಗಾಡಿಯಲ್ಲಿ ಕುಳ್ಳುಕಟ್ಟಿಗೆ ಹೇರಿಕೊಂಡು ಮಗಸೊಸೆಯರೊಂದಿಗೆ ಸುಡುಗಾಡಿಗೆ ಹೋದಳು. ಅಲ್ಲಿ ಸೊಸೆಯನ್ನು ಕುಳ್ಳಿರಿಸಿ, ಕುಳ್ಳುಕಟ್ಟಿಗೆ ಒಟ್ಟಿ ಬೆಂಕಿ ಹಚ್ಚಬೇಕೆಂದರೆ, ಕಡ್ಡಿ ಪೆಟ್ಟಿಗೆಯನ್ನು ಮನೆಯಲ್ಲಿಯೇ ಮರೆತು ಬಂದಿದ್ದರು. ಮನೆಗೆ ಹೋಗಿ ಕಡ್ಡಿಪೆಟ್ಟಿಗೆ ತರಲು ಮಗನಿಗೆ ಹೇಳಿದರೆ ಆತನು ಒಲ್ಲೆನೆಂದನು. ತಾಯಿಂಯೀ ಅವಸರದಿಂದ ಮನೆಯತ್ತ ಧಾವಿಸಿದಳು.
ಹೆಂಡತಿಯ ಸಲುವಾಗಿ ಕರುಣೆ ಬಂದು, ಆಕೆಯನ್ನು ಬದುಕಿಸಿಕೊಳ್ಳುವ ಎತ್ತುಗಡೆ ನಡೆಸಿದನು ಗಂಡ. ಅವ್ವನು ಮನೆಯಿಂದ ಬರುವಷ್ಟರಲ್ಲಿ ಹೆಂಡತಿಯನ್ನು ಕುಳ್ಳಿನ ತಾಳಿಯೊಳಗಿಂದ ಕಡೆಗೆ ತೆಗೆದು, ಅಲ್ಲಿ ಒಂದು ಕಲ್ಲು ಇಟ್ಟು ಕುಳ್ಳು ಕಟ್ಟಿಗೆ ಒಟ್ಟಿದನು. ಒಂದು ಗಿಡವನ್ನೇರಿ ಕುಳಿತುಕೊಳ್ಳಲು ಹೆಂಡತಿಗೆ ಹೇಳಿದನು.
ಅಂದು ಕಳ್ಳರು ಊರಲ್ಲಿ ಕಳವುಮಾಡಿಕೊಂಡು, ಸುಡುಗಾಡಿನ ಬಳಿಯಲ್ಲಿರುವ ಮರದ ಕೆಳಗೆ ಹಂಚುಪಾಲು ಮಾಡಿಕೊಳ್ಳಲು ಅಣಿಯಾದರು. ಅವರನ್ನು ಕಂಡು ಮರದ ಮೇಲೆ ಕುಳಿತ ಹೆಣ್ಣುಮಗಳು ಅಂಜಿ ಚೆಟ್ಟನೆ ಚೀರಿದಳು. ಅದನ್ನು ಕೇಳಿ ಕಳ್ಳರು ಮರದಲ್ಲಿ ಪಿಶಾಚಿಯಿದ್ದಂತೆ ತೋರುತ್ತದೆ. ತಮ್ಮನ್ನೆಲ್ಲಾದರೂ ನುಂಗೀತೆಂದು ಎಲ್ಲವನ್ನೂ ಬಿಟ್ಟು ಓಡಿಹೋದರು.
ಸೊಸೆಯು ಎದೆಗಟ್ಟಿಮಾಡಿ ಕೆಳಗಿಳಿದು ನೋಡಿದರೆ ರೂಪಾಯಿ ಸುರಿದಿವೆ. ಬೆಳ್ಳಿ ಬಂಗಾರ ಚೆಲ್ಲಾಡಿದೆ. ಅವನ್ನೆಲ್ಲ ಕಟ್ಟಿಕೊಂಡರೆ ದೊಡ್ಡ ಗಂಟೇ ಆಯಿತು. ದಣಿದಣಿ ಎತ್ತಿ ತಲೆಯ ಮೇಲೆ ಹೊತ್ತುಕೊಂಡು ಮನೆಯ ಹಾದಿ ಹಿಡಿದಳು.
"ಅತ್ತೇ, ಬಾಗಿಲು ತೆರೆ" ಎಂದು ಕೂಗಿದಳು.
ಸೊಸೆಯ ದನಿಯನ್ನು ಗುರುತಿಸಿ "ಇಂದೇ ಸುಟ್ಟು ಬಂದರೆ ಪಿಶಾಚಿಯಾಗಿ ಬೆನ್ನ ಹಿಂದೆಯೇ ಬರಬೇಕೆ? ಬಾಗಿಲ ತೆರೆಯುವುದೇ ಬೇಡ" ಎಂದು ಡುಕ್ಕು ಹೊಡೆದಳು ಅತ್ತೆ.
"ಒಜ್ಜೆಯಾಗಿದೆ ಅತ್ತೇ. ಆ ಲೋಕದಲ್ಲಿದ್ದ ಮಾವನವರು ಇದನ್ನೆಲ್ಲ ಕಳಿಸಿದ್ದಾರೆ. ಜನರು ನೋಡಿಗೀಡಿದರೆ ನಮ್ಮ ಗತಿ ಏನಾದೀತು? ದ್ರವ್ಯ, ಬೆಳ್ಳಿ ಬಂಗಾರ ತಂದಿದ್ದೇನೆ. ಅತ್ತೆ ಹೆದರಬೇಡ. ಬಾಗಿಲು ತೆರೆ" ಎಂದಳು ಸೊಸೆ.
ಅತ್ತೆ ಮೆಲ್ಲಗೆ ಜಾಗಿಲು ತೆಗೆದು ನೋಡಿದಳು. ಬಂದವಳು ಸೊಸೆಯೆ ಆಗಿದ್ದಾಳೆ. ಪಿಶಾಚಿಗಿಶಾಚಿಯಂತೆ ತೋರಲಿಲ್ಲ. ಬಾಗಿಲು ತೆರೆದು ಒಳಗೆ ಬರಮಾಡಿಕೊಂಡು, ಆಕೆಯ ತಲೆಯ ಮೇಲಿನ ಗಂಟು ಇಳುಹಿ ಒಳಗೊಯ್ದು ಇಟ್ಟಳು. ಮಗನೊಡನೆ ತಾಯಿ ಗಂಟು ಬಿಚ್ಚಿ ನೋಡಿದಳು. ಬೆಳ್ಳಿ ಬಂಗಾರ ರೂಪಾಯಿ ಎಲ್ಲಾ ಇದ್ದವು. ಹಿಗ್ಗಿನಿಂದ ಅತ್ತೆ ಸೊಸೆಂದನ್ನು ಕೇಳಿದಳು - "ಇದನ್ನೆಲ್ಲ ಎಲ್ಲಿಂದ ತಂದಿ ?"
"ನನ್ನನ್ನು ನೀವು ಸುಟ್ಟು ಬ೦ದಿರಿ. ಬಳಿಕ ನಾನು ಆ ಲೋಕಕ್ಕೆ ಹೋದೆ. ಅಲ್ಲಿ ಮಾವನವರು ಭೆಟ್ಟೆಯಾದರು. ಮನೆಯ ಕಡೆಯ ಸುದ್ದಿ ಕೇಳಿದರು. ಹೆಂಡತಿ, ಮಗ ಇನ್ನೂ ತಾಪತ್ರಯದಲ್ಲಿಯೇ ಇದ್ದಾರೆಂಬ ಸಂಗತಿ ಕೇಳಿ, ಇಷ್ಟೆಲ್ಲ ದ್ರವ್ಯವನ್ನು ಕೊಟ್ಟು ಕಳಿಸಿದ್ದಾರೆ. ಇದೆಲ್ಲ ತೀರಿದ ಬಳಿಕ ಮತ್ತೆ ಬರಲು ತಿಳಿಸಿದ್ದಾರೆ. ಅಲ್ಲಿ ನಾನು ಬಹಳ ಹೊತ್ತು ಇರಲಿಲ್ಲ. ಆದರೂ ಅಲ್ಲಿ ಬಹಳ ವೈಭವ, ಬಹಳ ಸಡಗರ" ಎಂದು ಸತ್ಯಸಂಗತಿಯೇ ಅನಿಸುವಂತೆ ಹೇಳಿದಳು.
"ಈ ಸಾರೆ ನಾನೇ ಹೋಗುತ್ತೇನೆ. ನೀನು ಮನೆಯಲ್ಲಿರು" ಎಂದಳು ಅತ್ತೆ.
"ಇಪ್ಪೆಲ್ಲ ತೀರಿದ ಬಳಿಕ ಹೋಗುವೆಯಂತೆ ಅತ್ತೆ."
"ಛೇ ಛೇ ! ಇದೆಲ್ಲ ತೀರುವುದು ಎಂದೋ ಏನೋ ! ಕೊಡುವೆನೆಂದ ಕ್ಷಣಕ್ಕೆ ಹೋಗಿಬಿಟ್ಟರಾಯ್ತು" ಎಂದು ನಿಶ್ಚಯಿಸಿ, ಅತ್ತೆ ಮಗನನ್ನು ಕರೆದು ಹೇಳಿದಳು-
"ಗಾಡಿಯಲ್ಲಿ ಕುಳ್ಳು-ಕಟ್ಟಿಗೆ ಹೇರು. ಮರೆಯದೆ ಕಡ್ಡಿಪೆಟ್ಟಿಗೆ ತಗೋ. ಸುಡುಗಾಡಿಗೆ ಬಂಡಿ ಹೊಡೆಗ ಸುಡುಗಾಡಿನಲ್ಲಿ ಕುಳಿತು, ಮಗ ಸೊಸೆಂಯಂದಿರ ಕೈಯಿಂದ ಕುಳ್ಳು-ಪೆಟ್ಟಿಗೆ ಒಟ್ಟಿಸಿಕೊಂಡು, ಮನೆಯ ಕಡೆಗೆ ಜೋಕೆ ಎಂದು ಹೇಳಿ, ಬೆಂಕಿ ಹಚ್ಚಲು ತಿಳಿಸಿದಳು.
ಬೆಂಕಿ ಹತ್ತಿಕೊಂಡಿತು. ಅತ್ತೆ ಸುಟ್ಟುಕೊಂಡು ಹೋದಳು. ಗಂಡಹೆಂಡಿರು ಮನೆಗೆ ಬಂದು, ಸುಖದಿಂದ ಬಾಳ್ವೆಮಾಡತೊಡಗಿದರು.
ಜೀನಹಂಕನಾದ ಶ್ರೀಮಂತನಿಗೆ ಒಬ್ಬಳೇ ಮಗಳಿದ್ದಳು. ಅವನು ಯುಕ್ತಿಪರಿಯುಕ್ತಿಗಳಿಂದ ಸಾಕಷ್ಟು ಗಳಿಸಿದ್ದನು. ಹಾಗೂ ಜಿಪುಣತನದಿಂದ ಖರ್ಚುಮಾಡಿ ಬೇಕಾದಷ್ಟು ಉಳಿಸಿದ್ದನು. ತಾನು ಸಂಗ್ರಹಿಸಿದ ಆಸ್ಮಿಯನ್ನೆಲ್ಲ ಕಾಯ್ದುಕೊಂಡು ಹೋಗಬಲ್ಲ ವರ ಸಿಕ್ಕರೆ, ಅವನನ್ನು ಅಳಿಂಪುತನಕ್ಕೆ ಇಟ್ಟುಕೊಳ್ಳಬೇಕೆಂದು ನಿರ್ಣಯಿಸಿದ್ದನು.
ಅದೆಷ್ಟೋ ಜನ ವರಗಳು ಬಂದು ಬಂದು ಹೋದವು. ಆದರೆ ಶ್ರೀಮಂತ ಮಾವನಿಗೆ ಅವರಾರಲ್ಲಿಯೂ ಅರ್ಹತೆ ಕಂಡುಬರಲಿಲ್ಲ. ಆದರೆ ಬಕ್ಕಣಗಿ ಎಂಬ ಹಳ್ಳಿಯಲ್ಲಿ ಅದೇ ಗೋತ್ರದ ಒಂದು ಮನೆತನವಿತ್ತು. ಅಲ್ಲಿ ಇಬ್ಬರು ಅಣ್ಣತಮೃಂದಿರಿದ್ದರು. ಅವರಿಗಿನ್ನೂ ಮದಿವೆಯಾಗಿರಲಿಲ್ಲ. ಆ ಶ್ರೀಮಂತ ಮನೆತನಕ್ಕೆ ಅಳಿಂಯನಾಗಿ ನಿಲ್ಲಲು ಅರ್ಹನಾದ ಒಬ್ಬ ವರ ಬೇಕಾಗಿದ್ದಾನೆಂಬ ಸಂಗತಿ ತಿಳಿಯಿತು. ಅವರ ತಂದಿಯು ಮಕ್ಕಳಿಬ್ಬರನ್ನೂ ಕರೆದು — "ನೀವಿಬ್ಬರೂ ಹೋಗಿ ನಿಮ್ಮ ನಿಮ್ಮ ಬುದ್ಧಿವಂತಿಕೆ ತೋರಿಸಿ, ಇಬ್ಬರಲ್ಲಿ ಒಬ್ಬರು ಅಳಿಯತನಕ್ಕೆ ನಿಂತರೆ ಒಳ್ಳೆಯದಾಗುತ್ತದೆ" ಎಂದು ಹೇಳಿದನು.
ತಂದೆಯ ಸೂಚನೆಯಂತೆ ಅವರಿಬ್ಬರೂ ಆ ಶ್ರೀಮಂತನ ಊರಿಗೆ ಹೋಗಿ ಅವನನ್ನು ಭೆಟ್ಟಿಯಾದರು. ಅವನು ಒಬ್ಬೊಬ್ಬರನ್ನು ಪರಭಾರೆ ಕರೆದೊಂಯ್ದು ಅವರ ಅರ್ಹತೆಂಯನ್ನು ಪರೀಕ್ಷಿಸತೊಡಗಿದನು.
"ಇದ್ದ ಆಸ್ತಿಯನ್ನು ಉಳಿಸುವುದಕ್ಕೂ ಬೆಳೆಸುವುದಕ್ಕೂ ನೀನಾವ ಬುದ್ಧಿವಂತಿಕೆಯಿಂದ ಸಂಸಾರ ಮಾಡುತ್ತೀ" ಎಂದು ಕೇಳಿದನು.
ಹಿರಿಯವನು ತನ್ನ ಅರ್ಹತೆಂಯನ್ನು ವಿವರಿಸುತ್ತಾನೆ — "ನನಗೆ ದಿನಕ್ಕೆ ಒ೦ದು ರೊಟ್ಟಿಂಯಾದರೆ ಸಾಕು. ಅದನ್ನು ತಿಂದು ತಂಬಿಗೆ ನೀರು ಕುಡಿದು ಒ೦ದು ದಿನ ಕಳೆಯುತ್ತೇನೆ.” ಆ ಮಾತು ಕೇಳಿ ಶ್ರೀಮಂತನು ಮನಸ್ಸಿನಲ್ಲಿ "ಅಬಬಬಾ ! ಅಂದುಕೊಂಡು — "ಅಡ್ಡಿಯಿಲ್ಲ, ನಿನ್ನ ತಮ್ಮನನ್ನು ಒಳಗೆ ಕಳಿಸಿಕೊಡು" ಎ೦ದು ಹಿರಿಯ ವರನಿಗೆ ಹೇಳಿದನು. ಚಿಕ್ಕವನು ಶ್ರೀಮಂತನ ಬಳಿಗೆ ಬರಲು ಆತನಿಗೆ — "ಈ ಆಸ್ತಿಯನ್ನೆಲ್ಲ ನೀನೆಂತು ಕಾಪಾಡಿಕೊಂಡು ಹೋಗಬಲ್ಲೆ? ಯಾವ ಯುಕ್ತಿಯನ್ನು ಅನುಸರಿಸುವಿ?” ಎಂದು ಕೇಳಿದನು.
ಆತನು ತನ್ನ ಜೀವನ ರೀತಿಂಯನ್ನು ಹೇಳುತ್ತಾನೆ — "ಒಂದು ದಾರದೆಳೆಗೆ ಒಂದು ರೊಟ್ಟಿ ಕಟ್ಟಿ ಅದನ್ನು ತೂಗಿಬಿಡುವುದು. ಹತ್ತಿರದಲ್ಲಿ ಒಂದು ತಂಬಿಗೆ ಕುಡಿಯುವ ನೀರನ್ನು ತುಂಬಿಟ್ಟುಕೊಳ್ಳುವದು. ಮೊದಲು ನೇತಾಡುವ ರೊಟ್ಟಿಯನ್ನು ಕಣ್ತುಂಬ ನೋಡಿ, ಆ ಬಳಿಕ ತಂಬಿಗೆಯೊಳಗಿನ ನೀರಿನ ಕಡೆಗೆ ಕಣ್ಣು ಹೊರಳಿಸಿದರೆ ತೀರಿತು ನನ್ನ ಊಟ. ತರುವಾಯ ಅಡಿಕೆಹೋಳು ಇದ್ದರೂ ಸರಿ, ಇರದಿದ್ದರೂ ಸರಿ. ಸಾಗಿತು ನಮ್ಮ ಗಾಡಿ."
ಶ್ರೀಮಂತನು ಚಿಕ್ಕವನ ಅರ್ಹತೆಗೆ ಮೆಚ್ಚಿ. ಆತನನ್ನು ಅಳಿಂಹುತನಕ್ಕೆ ಇಟ್ಟುಕೊಂಡು ಮಗಳನ್ನು ಕೊಟ್ಟು ಮದುವೆ ಮಾಡಿದನು.
ಅಳಿಯನೇ ಶ್ರೀಮಂತ ಆಸ್ತಿಗೆ ಒಡೆಯನಾಗಿ, ಆತನ ಸರಿಯದ ಸಂಪತ್ತನ್ನು ಉಪಭೋಗಿಸುತ್ತ ಸುಖದಿಂದ ಕಾಲಕಳೆಯಹತ್ತಿದನು.
ಒಂದಾನೊಂದು ಊರಲ್ಲಿ ಅಕ್ಕ ತಮ್ಮ ಇದ್ದರು. ಅಕ್ಕನ ಗಂಡ ತೀರಿಕೊಂಡಿದ್ದನು. ಆಕೆಗೊಂದು ಹೆಣ್ಣು ಮಗು ಇತ್ತು. ತಾಯಿತಂದೆಗಳು ತಮ್ಮನು ಚಿಕ್ಕವನಿರುವಾಗಲೇ ದೇಹವಿಟ್ಟಿದ್ದರು. ಅವನಿಗೆ ಅಕ್ಕನೇ ಹತ್ತಗಡೆಯವಳು. ಹೀಗೆ ದಿನ ಕಳೆಯುವಷ್ಟರಲ್ಲಿ ಅಕ್ಕನೂ ಅಗಲಿ ಹೋದಳು. ಚಿಕ್ಕವಳಾದ ಅಕ್ಕನ ಮಗಳನ್ನು ತಮ್ಮನು ಜೋಪಾನಮಾಡುವುದು ಅನಿವಾರ್ಯವಾಯಿತು.
ಸೋದರಸೊಸೆಯು ಆರೆಂಟು ವರುಷಗಳಲ್ಲಿ ದೊಡ್ಡವಳಾಗಲು ಅವಳನ್ನು ತಾನೇ ಲಗ್ನವಾದನು. ಅಂದಿನಿಂದ ಅವರು ಗಂಡಹೆಂಡಿರಾಗಿ ಸಂತೋಷದಿಂದ ಇರತೊಡಗಿದರು. ಚೆಲುವೆಯಾದ ಹೆಂಡತಿಯು ಮನೆಯಲ್ಲಿಯೇ ಉಳಿದುಕೊಂಡು ತನ್ನ ಕೆಲಸದಲ್ಲಿಯೇ ತೊಡಗುವಳು. ಆದರೂ ನೆರೆಮನೆಯ ಕಾಮಣ್ಣನೊಬ್ಬನು ಆಕೆಯನ್ನು ಕದ್ದುಗಣ್ಣಿನಿಂದ ಎಂದೋ ನೋಡಿ ಚಂಚಲಚಿತ್ತನಾದನು. ಏನಾದರೂ ನೆವ ಮುಂದೆ ಮಾಡಿಕೊಂಡು ಆ ಚೆಲುವೆಯನ್ನು ಹೊಂಚುಹಾಕಿದನು. ಆಕೆಯ ಗಂಡನು ಮನೆಯಲ್ಲಿಲ್ಲದ ಸಂಧಿಸಾಧಿಸಿ ಬೆಲೆಯುಳ್ಳ ಒಂದು ಸೀರೆಯನ್ನು ಬಗಲಲ್ಲಿ ಹಿಡಿದುಕೊಂಡು ಅವರ ಮನೆಯನ್ನು ಪ್ರವೇಶಿಸಿದನು. ಆದರೆ ಆಕೆಯನ್ನು ಮಾತನಾಡಿಸಲು ಧೈರ್ಯವಾಗದೆ, ಆಕೆಯ ಗಂಡನು ಬಂದುಗಿಂದರೆ ತನ್ನ ಗತಿಯೇನೆಂದು ಹೆದರಿ, ತಾನು ತಂದ ಸೀರೆಯನ್ನು ನಿಲುವುಗಣೆಯ ಮೇಲೆ ಹಾಕಿ ಅಲ್ಲಿಂದ ಕಾಲು ಕಿತ್ತಿದನು.
ಗಂಡನು ಮನೆಗೆ ಬರುವುದೇ ತಡ, ಮೊದಲು ನಿಲವುಗಣೆಯ ಮೇಲಿನ ಸೀರೆ ಆತನ ಕಣ್ಣಿಗೆ ಬಿತ್ತು. ಹೆಂಡತಿಯನ್ನು ಕರೆದು ಕೇಳಿದನು—"ಇದೆಲ್ಲಿಯ ಸೀರೆ?"
"ನನ್ನಕ್ಕ ಕಳಿಸಿದ ಸೀರೆ" ಎಂದಳು.
"ನನಗೆ ಗೊತ್ತಿಲ್ಲದ ಅಕ್ಕನಿನಗಾರಿದ್ದಾಳೆ?" ಎಂದು ಅನುಮಾನ ತೋರಿದನು ಗಂಡ. "ಒಡಹುಟ್ಟಿದ ಅಕ್ಕನಲ್ಲವಾದರೂ ನಡೆಪಥದ ಅಕ್ಕ ಇದ್ದಾಳೆ ದೂರಿನ ಊರಲ್ಲಿ"
ಅದೇ ಅನುಮಾನದಲ್ಲಿ ಗಂಡ ಕೇಳಿದನು — "ಆಕೆಯನ್ನು ನನಗೆ ತೋರಿಸುವಿಯಾ?"
"ಆಕೆಯ ಊರಿಗೆ ನಾಳೆಯೇ ಹೊರಡೋಣ" ಎ೦ದು ಎಲ್ಲಿಲ್ಲದ ದೈರ್ಯದಿಂದ ಹೆಂಡತಿ ಹೇಳಲು ಗಂಡನು ಪ್ರಯಾಣಕ್ಕೆ ಅಣಿಗೊಳಿಸಿದನು.
ಹೆಂಡತಿ ದಾರಿಯ ರೊಟ್ಟಿಬುತ್ತಿ ಮಾಡಿಟ್ಟಳು. ಗಂಡನು ಒಂದು ಬಾಡಿಗೆಯ ಕುದುರೆ ತಂದನು. ಬೆಳಗಾಗುವ ಮೊದಲು ಗಂಡಹೆಂಡರು ಹೊರಟುಬಿಟ್ಟರು. ಸರತಿಯಿಂದ ಕುದುರೆ ಹತ್ತುತ್ತ ಸಾಗಿದ್ದರಿ೦ದ ಮಧ್ಯಾಹ್ನವಾಗುತ್ತ ಬಂದರೂ ಅವರಿಗೆ ದಣಿವಾಗಲಿಲ್ಲ. ಇನ್ನೇನು, ನೀರು-ನೆರಳು ನೋಡಿ ಊಟ ತೀರಿಸಬೇಕೆಂದು ದಾರಿಯ ಬದಿಯಲ್ಲಿರುವ ಒಂದು ತೋಟವನ್ನು ಕಂಡು ಅಲ್ಲಿಳಿದರು.
ತೋಟಕ್ಕೊಂದು ಬಾವಿಯಿತ್ತು. ಆದರೆ ಅದೆಷ್ಟು ಆಳವಾಗಿ ಅಗೆಸಿದರೂ ಬಾವಿಗೆ ನೀರೇ ಬಿದ್ದಿಲ್ಲವೆಂದು ತಿಳಿಯಿತು. ಏನಿದ್ದರೂ ದಾರಿಕಾರರು ಉಂಡು ನೀರು ಕುಡಿದು ತಣಿಯಲಿಕ್ಕೆ ಯಾವ ತೊಂದರೆಯೂ ಇರಲಿಲ್ಲ. ಗಂಡನಾದವನು ತಂಬಿಗೆ ತೆಗೆದುಕೊಂಡು ಕೈಕಾಲಿಗೆ ಹೋದನು. ಹೆಂಡತಿ ಜಾವಿಯ ಬಳಿಗೆ ಹೋಗಿ ನಾಲ್ಕು ಮೆಟ್ಟುಗಲ್ಲುಗಳನ್ನಿಳಿದು ಬಾಗಿನಿ೦ತು ನೀರು ನೋಡಿದಳು. ಆಕೆಯ ದೃಷ್ಟಿಬಿದ್ದ ಮುಕ್ಕು ನೀರೇ ಅದೇ ನಿಮಿಷದಿಂದ ಏರತೊಡಗಿ ಕ್ಷಣಾರ್ಧದಲ್ಲಿ ಮೆಟ್ಟುಗಟ್ಟೆಯನ್ನು ಮುಳುಗಿಸಿಬಿಟ್ಟಿತು. ಅದನ್ನು ಕಂಡು ಅಲ್ಲಿಯೇ ಬಾವಿಯ ಮೇಲೆ ಆಡುತ್ತ ಕುಳಿತ ಇಬ್ಬರು ಬಾಲಕರು, ಬಾವಿಗೆ ನೀರು ಬಂದ ಸಂತೋಷದ ಸುದ್ದಿಯನ್ನು ಹೇಳುವುದಕ್ಕೆ ಮನೆಗೆ ಓಡಿದರು.
ಒ೦ದರ್ಧಗಳಿಗೆ ಕಳೆಯುವಷ್ಟರಲ್ಲಿ ಮನೆಯೊಡತಿ ಹಿರಿಹಿರಿಹಿಗ್ಗಿನಿಂದ ಗಾಡಿ ಹೂಡಿಸಿಕೊಂಡು ತನ್ನಿಬ್ಬರು ಮಕ್ಕಳೊಡನೆ ತೋಟಕ್ಕೆ ಬಂದೇಬಿಟ್ಟಳು, ಅವರು ಪರಸ್ಪರ ಪರಿಚಯದವರೂ ಅಲ್ಲ. ಒಬ್ಬರನ್ನೊಬ್ಬರು ಕಂಡಿದ್ದು ಸಹ ಅಂದೇ. ಆದರೆ ಆ ಹೆಣ್ಣುಮಗಳ ಕಾಲ್ಗುಣದಿಂದ ತಮ್ಮ ತೋಟದ ಬಾವಿಗೆ ನೀರು ಬಂದವೆಂಬ ಅತಿಹರ್ಷದಿಂದ ತೋಟದೊಡತಿ ಗಾಡಿಯಿಂದ ಇಳಿದವಳೇ "ತಂಗೀ, ಯಾವಾಗ ಬಂದಿರಿ” ಎಂದು ಅಪ್ಪಿಕೊಂಡಳು.
"ಅಕ್ಕ! ಹಾಲು ಹರಿದಂತೆ ಒಗೆತನ ಹರಿದುಹೊರಟಿದೆ? ಎಂದಳೀಕೆ.
"ಕಳಿಸಿದ ಗಳಿಗೆ ಜೋಕೆಯಾಗಿದೆಯೋ?” ಎ೦ದಳಾ ಅಕ್ಕ. ಆ ಅಕ್ಕತಂಗಿಯರ ಅಕ್ಕರೆಯ ಸಂದರ್ಶನವನ್ನು ಕಂಡು ಗಂಡನು ಮೂಕವಿಸ್ಮಿತನಾದನು. ತನ್ನ ಹೆಂಡತಿ ಹೇಳಿದ್ದರಲ್ಲಿ ಎಷ್ಟೂ ಅವಾಸ್ತವವಿಲ್ಲ ಎಂದು ಮನಗಂಡನು.
ತೋಟದೊಡತಿಯು ಪ್ರವಾಸಿಕರಾಗಿ ಬಂದ ಆ ದಂಪತಿಗಳ ಬುತ್ತಿಗಂಟು ಬಿಚ್ಚಗೊಡದೆ ಕರೆದೊಯ್ದಳು. ತಂಗಿಯನ್ನು ಎರಡು ದಿನ ತನ್ನಲ್ಲಿಟ್ಟುಕೊಂಡು ಅಕ್ಕನು ವಿಧವಿಧದ ಪಕ್ವಾನ್ನಗಳನ್ನುಣಿಸಿ, ರೇಶಿಮೆ — ಜರತಾರಿಂಥ ಸೀರೆ ಕುಪ್ಪಸಗಳ ಉಡುಗೊರೆಯನ್ನು ಮಾಡಿ, ಎತ್ತಿನ ಬಂಡಿಯಲ್ಲಿ ಕುಳ್ಳಿರಿಸಿ ಆಕೆಯ ಊರಿಗೆ ಕಳಿಸಿದಳು.
ಗಂಡನ ಸಂಶಯವು ದೂರವಾಗಿದ್ದರಿಂದ ಅವರಿಬ್ಬರೂ ಮೊದಲಿಗಿಂತ ಹೆಚ್ಚು ಸುಖದಿಂದ ಬಾಳ್ವೆಮಾಡತೊಡಗಿದರು.
ಉದ್ದನ್ನವರ ಮುಂದೆ ಕೀರ್ತನ
ಊರಿಗೆ ಬ೦ದ ಪ್ರಖ್ಯಾತ ಕೀರ್ತನಕಾರನೊಬ್ಬನ ಕೀರ್ತನ ಮಾಡಿಸಬೇಕೆಂದು, ಪ್ರಮುಖರು ಎತ್ತುಗಡೆ ನಡೆಯಿಸಿದರು. ಕೀರ್ತನಕಾರನು ಮೊದಲೇ ಸೂಚಿಸಿದಂತೆ ಶ್ರೋತೃವೃಂದದಲ್ಲಿ ಕುಳಿತ ಗಿಡ್ಡಗಿಡ್ಡ ಜನರನ್ನೆಲ್ಲ ಎಬ್ಬಿಸಿ ಕಳಿಸಲಾಗಿತ್ತು. ಕುಳಿತವರೆಲ್ಲರೂ ಉದ್ದನ್ನವರೇ ಆಗಿದ್ದಾರೆಂಬ ಭರವಸೆಯಾದ ಬಳಿಕ ಕೀರ್ತನಕಾರನು ತನ್ನ ಅಮೋಘವಾಣಿಯಿಂದ ಕೀರ್ತನ ಹೇಳಲು ಪ್ರಾರಂಭಿಸಿದನು.
ಸ್ತೋತ್ರವಾಯಿತು. ಉಪೋದ್ಘಾತ ಮುಗಿಯಿತು. ಮುಖ್ಯಕಥೆ ಮುಗುಳಿ ಮುಂದುವರೆಯಿತು. ಅಷ್ಟರಲ್ಲಿ ಸಂದರ್ಭಾನುಸಾರವಾಗಿ ಒಂದು ಅಡ್ಡಕತೆಯನ್ನು ಹೇಳುವದಕ್ಕೆ ಮೊದಲು ಮಾಡಿದನು ಕೀರ್ತನಕಾರನು. ಅದು ಏನೆಂದರೆ-
"ಒಮ್ಮೆ ತಿಪ್ಪೆಯಲ್ಲಿ ಬಿದ್ದ ಪತ್ರಾವಳಿಗೂ ಮಣ್ಣು ಹೆಂಟೆಗೂ ಮಾತುಕತೆ ನಡೆಯಿತು. ಪತ್ರಾವಳಿ ಅ೦ದಿತು — 'ಹೆಂಟೆಣ್ಣ ಮಳೆಗಾಲ ಆರಂಭವಾಗುವಂತೆ ತೋರುತ್ತದೆ. ಗಾಳಿ-ಮಳೆಗಳು ನಾಮುಂದೆ ನಾಮುಂದೆ ಎನ್ನುತ್ತ ಮೈ ಮೇಲೆ ದಾಳಿ ಮಾಡುವವು. ಅಂಥ ಸಂದರ್ಭದಲ್ಲಿ ನಾವು ಬದುಕುವ ಬಗೆಯೇನು? ಗಾಳಿ ಬಿರುಸಾಗಿ ಬೀಸಿದರೆ ನಾನು ಹಾರಿಹೋಗುತ್ತೇನೆ ಎಲ್ಲಿಯೋ. ಮರಮಳೆಹೊಡೆಯ ಹತ್ತಿದರೆ ನೀನು ಕರಗಿಹೋಗುತ್ತೀ. ಏನು ಉಪಾಯ ಇದಕ್ಕೆ ?'
ಅಷ್ಟರಲ್ಲಿ ಶ್ರೋತೃವೃಂದದಿ೦ದ ಒಂದು ಮಾತು ಕೇಳಿಬಂದಿತು — ಗಾಳಿ ಮಳೆ ಎರಡೂ ಏಕಕಾಲಕ್ಕೆ ಕೂಡಿಕೊಂಡು ಬಂದರೆ ಹೇಗೆ ಮಾಡುವುದು ?
ಆ ಅಡ್ಡ ಪ್ರಶ್ನೆಯನ್ನು ಕೇಳಿ ಕೀರ್ತನಕಾರನಿಗೆ ದಿಗಿಲಾಯಿತು. ಕಕ್ಕಾವಿಕ್ಕಿಯೇ ಆಗಿ ನಿಂತನು. ಊರ ಪ್ರಮುಖರನ್ನು ಹತ್ತಿರ ಕರೆದು ಕಿವಿಯಲ್ಲಿ ಹೇಳಿದನು "ಶ್ರೋತೃವರ್ಗದಲ್ಲಿ ಇನ್ನೊಬ್ಬ ಗಿಡ್ಡನು ಉಳಿದುಕೊಂಡಿದ್ದಾನೆ. ಅವನನ್ನು ಎಬ್ಬಿಸಿ ಕಳಿಸಿರಿ. ಇಲ್ಲದಿದ್ದರೆ ಕೀರ್ತನೆ ಮುಂದೆ ಸಾಗುವದಿಲ್ಲ?"
ಜನರಲ್ಲಿ ಕಣ್ಣುತಪ್ಪಿಸಿ ಕುಳಿತ ಆ ಗಿಡ್ಡನನ್ನು ಎಬ್ಬಿಸಿ ಕಳಿಸಿದ ಬಳಿಕ, ಕೀರ್ತನವು ತಡೆಯಿಲ್ಲದೆ ಸಾಗತೊಡಗಿತು. ಉದ್ದನ್ನವರ ಮುಂದೆಯೇ ಅವನ ಕೀರ್ತನ. ಯಾಕಂದರೆ — ಉದ್ದನ್ನವರಿಗೆ ಬುದ್ಧಿ ಕಡಿಮೆಯಂತೆ. ತಂದೆ ಮಗ
ಸನಗಿನ ವ್ಯಾಪಾರಮಾಡುವುದರಲ್ಲಿಯೇ ಮುದುಕನಾದ ಶಿವಲಿಂಗಪ್ಪನು, ಕೈಗೆ ಬಂದ ಮಗನಿಗೆ ತನ್ನ ವ್ಯಾಪಾರದ ಹಾಗು ತನ್ನ ಗಿರಾಕಿಗಳ ಪರಿಚಯ ಮಾಡಿಸಿಕೊಟ್ಟರೆ ತಾನು ಕೆಲಸದಿಂದ ನಿವೃತ್ತನಾಗುವುದಕ್ಕೆ ನಿಶ್ಚಿಂತವಾಗುವುದೆಂದು ಆಲೋಚಿಸಿ, ಮಗನನ್ನು ಕರೆದು ತನ್ನ ವಿಚಾರವನ್ನು ಆತನ ಮುಂದೆ ವಿವರಿಸಿದನು. ಮಗನೂ ಅದಕ್ಕೆ ಸಮ್ಮತಿಸಿದನು.
ಕುದುರೆಯ ಮೇಲೆ ಸೀರೆಯ ಗಂಟುಗಳನ್ನು ಹೇರಿ, ನಾಲ್ಕು ದಿನ ಸಾಕಾಗುವಷ್ಟು ರೊಟ್ಟಿ — ಬುತ್ತಿ ಕಟ್ಟಿಕೊಂಡು ತಂದೆಯು ಮಗನೊಂದಿಗೆ ವ್ಯಾಪಾರಕ್ಕೆಂದು ತನ್ನ ದೂರದ ಹಳ್ಳಿಗಳತ್ತ ಹೊರಟನು. ಸರತಿ ಪ್ರಕಾರ ತಂದೆಮಗ ಕುದುರೆ ಹತ್ತುತ್ತಿದ್ದರು. ಕುದುರೆ ತನ್ನದೇ ಆದ ವೇಗದಲ್ಲಿ ಸಾಗಬಹುದಾದರೂ ಅದರ ಬೆನ್ನ ಹಿಂದೆ ನಡೆಯುತ್ತ ಹೊರಟವರ ಸಲುವಾಗಿ ಮಂದವೇಗದಿಂದ ನಡೆಯಿತು. ಆ ಕಾರಣದಿಂದ ಅವರು ತಲಪಬೇಕಾದ ಹಳ್ಳಿಂಪನ್ನು ಸಾಯಂಕಾಲದೊಳಗಾಗಿ ತಲುಪಲು ಸಾಧ್ಯವಾಗಲಿಲ್ಲ. ಆ ಹಳ್ಳಿ ಇನ್ನೂ ಎರಡು ಹರದಾರಿ ದೂರವಿರುವಾಗಲೇ ಹೊತ್ತು ಮುಳುಗಿ ದೀಪಹಚ್ಚುವ ವೇಳೆಯಾಯಿತು. ತುಸು ರಾತ್ರಿಯಾದರೂ ಚಿಂತೆಯಿಲ್ಲ, ಹೋಗಿಯೇ ಬಿಡೋಣ ಎಂದು ಮಗ, ಇದೇ ಹಳ್ಳಿಂಯಲ್ಲಿ ರಾತ್ರಿ ಕಳೆದು ಮುಂಜಾನೆ ಹೋಗೋಣ ಎಂದು ತಂದೆ ಯೋಚಿಸತೊಡಗಿದನು.
ಮಗ ಕುದುರೆಯ ಮೇಲೆ ಕುಳಿತಿದ್ದಾನೆ. ತಂದೆ ನಡುವಿಗೆ ಒಲ್ಲಿಸುತ್ತಿ ಹಿಂದೆ ನಡೆದಿದ್ದಾನೆ. ಮು೦ದಿನ ಊರ ಹಾದಿ ಹಿಡಿದ ಕುದುರೆಯನ್ನು ಹೊರಳಿಸಿ ಊರ ಅಗಸೆಯತ್ತ ಕರೆದೊಯ್ಯಲು ತಂದೆ ಲಗಾಮು ಹಿಡಿದಿದ್ದಾನೆ. ಮೇಲೆ ಕುಳಿತವನು ಮುಂದಿನ ದಾರಿ ಹಿಡಿಯಲು ತವಕಿಸುತ್ತಿದ್ದಾನೆ. ಆ ಹಳ್ಳಿಂಕು ಅಗಸೆಯ ಮುಂದೆ ತಂದೆ ಮಕ್ಕಳಲ್ಲಿ ಜಗ್ಗಾಟವೇ ನಡೆಯಿತು. "ನಿನಗೆ ತಿಳಿಯುವದಿಲ್ಲ. ನಾನು ಹೇಳಿದಂತೆ ಕೇಳು". ಎಂಬುದೇ ಅವರಿಬ್ಬರ ಕಟ್ಟಾಜ್ಞೆಯಾಯಿತು. ಆ ಗಲವಿಲಿಗೆ ಹತ್ತೆಂಟುಜನ ನೆರೆಯಿತು ಅವರಲ್ಲೊಬ್ಬ ಕೇಳಿದರು
"ನೀವು ಒಬ್ಬರಿಗೊಬ್ಬರು ಏನಾಗಬೇಕು?"
"ತಂದೆ-ಮಗ" ಎಂದು ಮುದುಕನು ಹೇಳಿದನು.
"ಸುಳ್ಳು. ನಾನು ಮಾಲಿಕ, ಆತ ಗುಮಾಸ್ತೆ" ಎಂದವನು ಮಗ.
"ಆ ಹುಡುಗನದೇನು ಕೇಳುವಿರಿ ? ನಾವು ತಂದೆ ಮಕ್ಕಳು?"
"ಆ ಮುದುಕನದೇನು ಕೇಳುವಿರಿ? ನಾವು ಮಾಲಿಕ — ಗುಮಾಸ್ತೆ?
"ಮಗನಾದವನು ತಂದೆಯ ಮಾತು ಕೇಳಬೇಕಲ್ಲವೇ ?” ಎಂಬುದು ಮುದುಕನ ವಾದ.
"ಗುಮಾಸ್ತನಾದವನು ಮಾಲಿಕನು ಹೇಳಿದಂತೆ ನಡೆಯಬೇಕಲ್ಲವೇ?" ಎಂಬುದು ಮಗನ ಪ್ರತಿವಾದ".
ಹಗ್ಗವೂ ಹರಿಯದೆ ಕೋಲೂ ಮುರಿಯದೆ ವಾದವಿವಾದವು ಸಾಗಿದ ಬಳಿಕ ಊರವರು ಅವರ ಕುದುರೆಯನ್ನು ಜಗ್ಗಿಕೊ೦ಡು ಚಾವಡಿಗೊಯ್ದರು. ಗೌಡನು ಅವರ ವಾದ-ಪ್ರಶಿವಾದಗಳನ್ನು ಕೇಳಿ, ಮು೦ದಿನ ಯೋಚನೆ ಹೇಳಿದನು — "ನೀವು ತಂದೆಮಕ್ಕಳೋ ಮಾಲಿಕ ಗುಮಾಸ್ತರೋ ಸ್ಪಷ್ಟವಾಗುವವರೆಗೆ ನಿಮ್ಮನ್ನು ಇಲ್ಲಿಂದ ಬಿಡುವುದೇ ಇಲ್ಲ. ನಿಮ್ಮೂರಿನ ಗ್ರಾಮಸ್ಥರಿಂದ ನಿಮ್ಮ ಹತ್ತಗಡೆಯ ವಿಷಯವನ್ನು ತರಿಸಿಕೊಡಿರಿ."
ಮರುದಿನ ಗೌಡನು ಓಲೆಕಾರನನ್ನು ಅವರೂರಿಗೆ ಕಳಿಸಿ ಅವರ ವಿಷಯವನ್ನು ತರಿಸಿಕೊಂಡರೆ ತಂದೆ-ಮಗ ಎನ್ನುವುದು ತಿಳಿಯಿತು. ಶಿವಲಿಂಗಪ್ಪನಿಂದ ಓಲೆಕಾರನಿಗೆ ಎರಡು ರೂಪಾಯಿ ಕೊಡಿಸಿ, ಮಗನಿಗೆ ಬುದ್ಧಿಹೇಳಿ ಅವರನ್ನು ಮುಂದಿನೂರಿಗೆ ಹೋಗಗೊಟ್ಟನು.
ಪಿಸುಣನಿಗೆ ಉಪಕಾರ
ಗಂಡ ಹೆಂಡಿರು ಕೂಡಿಕೊಂಡು ನೆರೆಯೂರಿನ ಸಂತೆಗೆ ಹೋಗಿ, ತಮಗೆ ಬೇಕಾದ ಅರಿವೆ ಅಂಚಡಿ, ಕಾಳುಕಡ್ಡಿ ಕೊಳ್ಳುವುದರಲ್ಲಿ ತೊಡಗಿದರು. ಜವಳಿಸಾಲಿನಿಂದ ಕಿರಾಣಿ ಸಾಲಿನ ಕಡೆಗೆ ಸಾಗಿದಾಗ ಅಲ್ಲೊಬ್ಬ ಕುರುಡ ಮುದುಕನು ಹೊರಟಿದ್ದನು. ಆತನ ಕಣ್ಣು ಕಾಣದೆ ಮುಳ್ಳು ಕಲ್ಲು ತುಳಿಯುತ್ತ ತೋಟದ ಬೇಲಿಯಲ್ಲಿಯೇ ಸಾಗಿದ್ದನು—"ಯಾರಾದರೂ ನನ್ನನ್ನು ಹಾದಿಗೆ ಹಚ್ಚಿರಪ್ಪೋ. ನಾನು ಕಣ್ಣು ಕಾಣದ ಕುರುಡ. ಮುಳ್ಳುಬೇಲಿಯಲ್ಲಿ ಹೋಗಿ ಬೀಳುತ್ತೇನೆ. ಒಂದಿಷ್ಟು ಪುಣ್ಯ ಕಟ್ಟಿಕೊಳ್ಳಿರೆಪ್ಪ ಪುಣ್ಯಾತ್ಮರ್‍ಯಾ" ಎಂದು ಹಲಬುತ್ತಿದ್ದನು.
ಕುರುಡನ ಸ್ಥಿತಿಯನ್ನು ಕಂಡು ಗಂಡನು ಕನಿಕರಿಸಿ ಹೆಂಡತಿಗೆ ಹೇಳಿದನು — "ಆ ಮುದುಕನ ಕೈ ಹಿಡಿದು ದಾರಿಗೆ ಹಚ್ಚು"
ಗಂಡನಪ್ಪಣೆಯಂತೆ ಹೆಂಡತಿಯು ಕುರುಡನ ಕೈಹಿಡಿದು ಮೆಲ್ಲನೆ ಹೊರಳಿಸಿ ಸರಿದಾರಿಗೆ ಹಚ್ಚಿ, ಕೈಬಿಡಬೇಕೆಂದರೆ ಕುರುಡನು ಕೈಬಿಡದೆ ಕೂಗಿಕೊಳ್ಳತೊಡಗಿದನು — "ನನ್ನ ಹೆಂಡತಿ ನೋಡಿರೋ ಅಪ್ಪಾ ಈಕೆ. ನನ್ನ ಕೈಬಿಟ್ಟು ಇನ್ನಾವನೋ ಗೆಳೆಯನ ಕೂಡ ಓಡಿಹೋಗಬೇಕೆನ್ನುತ್ತಾಳೆ. ನ್ಯಾಯ ಮಾಡಿರೋ ಅಪ್ಪಾ ಕುರುಡನದು" ಎನ್ನುತ್ತ ಗಟ್ಟಿಯಾಗಿ ಬೊಬ್ಬಿಟ್ಟನು. ಜನ ನೆರೆಯಿತು.
ತನ್ನ ಹೆಂಡತಿಂಯನ್ನು ಕುರುಡನ ಕೈಯೊಳಗಿಂದ ಬಿಡಿಸಿಕೊಳ್ಳಲು ಗಂಡನು ಪ್ರಯತ್ನಿಸಿದರೆ ಮತ್ತಿಷ್ಟು ಬೊಬ್ಬಾಟವೇ ಆಗತೊಡಗಿತು. ಆಕೆ ತನ್ನ ಹೆಂಡತಿಯೆಂದು ಕುರುಡ ಹೇಳುವನು; ನನ್ನ ಹೆಂಡತಿಯೆಂದು ಆತ ಹೇಳುವನು. ಆತನು ನನ್ನ ಗಂಡನೆಂದು ಹೆಂಡತಿ ಹೇಳಿದರೆ, ತನ್ನನ್ನು ಬಿಟ್ಟು ಹೊರಟಿದ್ದರಿಂದ ಹಾಗೆ ಹೇಳುತ್ತಾಳೆಂದು ಕುರುಡನ ಕೂಗಾಟ.
ಆ ನ್ಯಾಯ ಚಾವಡಿಯ ಕಟ್ಟೆಯೇರಿತು. ಅಲ್ಲಿಯೂ ಬಗೆಹರಿಯಲಿಲ್ಲ. ಬಳಿಕ ಗೌಡನು ಸಿಟ್ಟಿಗೇರಿ ಆ ಮೂವರನ್ನೂ ಮೂರು ಬೇರೆ ಬೇರೆ ಕೋಣೆಗಳಲ್ಲಿ ಹಾಕಿಸಿ ಒಂದೊಂದು ಕೋಣೆಯ ಮುಂದೆ ಒಬ್ಬೊಬ್ಬ ಓಲೆಕಾರನನ್ನು ಕಾವಲಿಟ್ಟನು.
ಮರುದಿವಸ ಗೌಡನು ಆ ಮೂವರೂ ಕಾವಲುಗಾರನನ್ನು ಬೇರೆಬೇರೆಯಾಗಿ ಕರೆಯಿಸಿಕೊಂಡು, ಒಳಗಿದ್ದವರು ಒಡನುಡಿಯುತ್ತಿದ್ದ ಮಾತುಗಳಾವವೆಂದು ಕೇಳಿದನು. ಅವರು ಕ್ರಮವಾಗಿ ಹೀಗೆ ಹೇಳಿದರು ಕುರುಡನ ಕೋಣೆಯ ಕಾವಲುಗಾರ—"ಮನಸ್ಸಿನಂತೆ ಮಹಾದೇವ! ಮನಸ್ಸಿನಂತೆ ಮಹಾದೇವ! ಎನ್ನುತ್ತ ಕುಣಿದಾಡುತ್ತಿದ್ದನು ಆ ಕುರುಡ."
ಹೆಂಗಸಿನ ಕೋಣೆಯ ಕಾವಲುಗಾರ—"ಗಂಡನಪ್ಪಣೆ ಮೀರಬಾರದೆಂದು ತಂದೆಗೆ ಸಮಾನನಾದ ಆ ಕುರುಡ ಮುದುಕನ ಕೈಹಿಡಿದು ಸರಿದಾರಿಗೆ ಹಚ್ಚಿದರೆ, "ಹೆಂಡತಿ ಕೈಕೊಸರಿಕೊಂಡು ಓಡಿಹೋಗುವಳೋ ಅಪ್ಪಾ? ಎಂದು ಹೊಯ್ಕೊಂಡರೆ ನಾನೇನು ಹಣೆಹಣೆ ಗಟ್ಟಿಸಿಕೊಳ್ಳಲಾ? ಎಂಥ ವೇಳೆ ತಂದೆಯೋ ದೇವರೇ"
ಎನ್ನುತ್ತ ಆಕೆ ಬೆಳತನಕ ಗೋಳಾಡಿ ಅತ್ತಳು.
ಗಂಡನ ಕೋಣೆಯ ಕಾವಲುಗಾರ—"ಆ ಕುರುಡನನ್ನು ನೋಡಿ ನನಗೇಕೆ ದಯೆ ಬಂದಿತೋ ಏನೋ. ಆತನಿಗೆ ಸರಿದಾರಿಗೆ ಹಚ್ಚುವ ಕೆಲಸವನ್ನು ಹೆಂಡತಿಗೆ ಹೇಳದೆ ನಾನೇ ಮಾಡಿದ್ದರೆ ಎಷ್ಟು ಚೆನ್ನಾಗಿತ್ತಲ್ಲ!" ಎಂದು ಗಳಿಗೆಗೊಮ್ಮೆ ಮಿಡುಕುತ್ತಿದ್ದನು.
ಆ ಎಲ್ಲ ಹೇಳಿಕೆಗಳನ್ನು, ಕೇಳಿ ಗೌಡನು, ಆ ಹೆಣ್ಣು ಮಗಳು ಕುರುಡನ ಹೆಂಡತಿ ಅಲ್ಲವೆಂದು ನಿರ್ಣಯಿಸಿ ಆಕೆಯನ್ನು ಆಕೆಯ ಗಂಡನೊಡನೆ ಕಳಿಸಿದನು. ಕುರುಡ ಮುದುಕನನ್ನು ಬಯ್ದು ಬೆದರಿಸಿ ಊರಹೊರಗೆ ಹಾಕಿಸಿದನು.
ಅಳಬೇಕೆಂದರೆ
ಒಂದು ಗಂಡು ಒಂದು ಹೆಣ್ಣು ಭೂಮಿಯ ಮೇಲೆ ಮೊದಲು ಹುಟ್ಟಿದರು. ಅವರಿಂದ ಆರಂಭವಾಯಿತು ಮಾನವ ಸಂತಾನ ಬೆಳೆಯಲಿಕ್ಕೆ. ಹೆಣ್ಣು-ಗಂಡು ಮಕ್ಕಳು ಹುಟ್ಟಿದರು. ಮಕ್ಕಳಿಂದ ಮಕ್ಕಳಾದರು. ಮೊಮ್ಮಕ್ಕಳು ಮರಿಮಕ್ಕಳು ಆದರು. ಮೊಮ್ಮಕ್ಕಳ ಮರಿಮಕ್ಕಳೂ ಹುಟ್ಟಿಕೊಂಡರು. ಹುಟ್ಟಿದವರೆಲ್ಲ ಬೆಳೆದು ದೊಡ್ಡವರಾದರು; ದೊಡ್ಡವರು ಮುದುಕರಾದರು. ಮನುಷ್ಯಕೋಟಿ ಬೆಳೆದೇ ಬೆಳೆಯಿತು. ಎಲ್ಲಿ ನೋಡಿದರೂ ಹುಟ್ಟಿದ ಒಸಗೆಯೇ. ಏನು ಕೇಳಿದರೂ ಹುಟ್ಟಿದ ಸುದ್ದಿಯೇ. ಸುಖ ಸಂತೋಷಗಳಲ್ಲಿಯೇ ಮಾನವ ಸಂತಾನವು ವಾಸಿಸತೊಡಗಿತು.
ವಿಶಾಲವಾದ ಮನೆತನ. ಮನೆತನದಲ್ಲಿ ಎಣಿಸಲಿಕ್ಕಾಗದಷ್ಟು ಜನ. ಹಗಲು ಹೊತ್ತಿನಲ್ಲಿ ಹೆಣ್ಣು ಗಂಡು ಎನ್ನದೆ, ಹುಡುಗ ಬಾಲಿಕೆ ಎನ್ನದೆ ಎಲ್ಲರೂ ಅಡವಿ ಸೇರಿ ತಂತಮ್ಮ ಕೆಲಸದಲ್ಲಿ ತೊಡಗುವರು. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಆಡಿಸುತ್ತ ಒಬ್ಬ ಅಜ್ಜಿ ಮನೆಯಲ್ಲಿ ಉಳಕೊಳ್ಳುವಳು.
ಸುಖಸಂತೋಷಗಳನ್ನೇ ಉಣ್ಣುತ್ತ ಬಂದ ಅಜ್ಜಿಗೆ ಏಕೋ ಬೇಸರವೆನಿಸಿತು. ಎದೆ ಜಡವಾಯಿತು. ಮನಸ್ಸು ಹಗುರಾಗುವುದಕ್ಕೆ ಉಪಾಯವೇನೆಂದು ಚಿಂತಿಸತೊಡಗಿದಳು. ಚಿಕ್ಕದೊಡ್ಡ ಬಾಲಕರೆಲ್ಲ ಆಡುತ್ತ ಎಲ್ಲೆಲ್ಲಿಯೋ ಹೋಗಿದ್ದರು. ಅಜ್ಜಿಗೊಂದು ಯುಕ್ತಿಹೊಳೆಯಿತು. ಹಿಟ್ಟಿನಿಂದ ಒಂದು ಕೂಸು ಮಾಡಿ, ಅದು ಸತ್ತುಹೋಯಿತೆಂದು ಬಗೆದು, ಕ್ಷಣಹೊತ್ತು ಅತ್ತುಬಿಟ್ಟರೆ ಮನಸ್ಸು ಹಗುರಾಗುವದೆಂದು ಯೋಚಿಸಿದಳು.
ಮೆತ್ತಿಗೆಯೊಳಗಿಂದ ಬೊಗಸೆ ಕಡಲೆತೆಗೆದು ಬೀಸಿ ಹಿಟ್ಟುಮಾಡಿದಳು. ಆ ಹಿಟ್ಟನ್ನು ನೀರಲ್ಲಿ ಕಲೆಸಿ ಕಣಕಮಾಡಿದಳು. ಆ ಕಣಕದಿಂದ ಒಂದು ಗೊಂಬೆ ಮಾಡಿ ಮುಗಿಸುವುದರಲ್ಲಿದ್ದಳು. ಅಷ್ಟರಲ್ಲಿ ಆಡಹೋದ ಬಾಲಕರೆಲ್ಲರೂ ಒಬ್ಬೊಬ್ಬರಾಗಿ ಬಂದರು. "ಅಜ್ಜೀ, ನನಗೆ ತಿನ್ನಲು ಬೆಲ್ಲ" ಎಂದು ಒಂದು ಹುಡುಗ ಕೇಳಿದರೆ, ಇನ್ನೊಂದು—"ಅಜ್ಜೀ ನನಗೆ ಉಣ್ಣಲು ರೊಟ್ಟಿ" ಬೇಡುತ್ತದೆ. ಒಂದು ನೀರು ಕೇಳುತ್ತದೆ. ಇನ್ನೊಂದು ಮಮ್ಮ ಅನ್ನುತ್ತದೆ. "ರೊಟ್ಟಿಗೆ ಬೆಣ್ಣೆ ಸವರು," "ಅನ್ನಕ್ಕೆ ಮೊಸರು ಕಲೆಸು" ಎನ್ನುತ್ತ ಅಜ್ಜಿಯನ್ನು ಜಗ್ಗಾಡಿ ಎಬ್ಬಿಸಿದವು. ಆಕೆಯ ಸೆರಗು ಒಂದು ಹಿಡಿದಿದೆ, ಕೈ ಮತ್ತೊಂದು ಹಿಡಿದಿದೆ. ಹಿಂದೆ ನೂಕುವುದು ಒಂದು, ಮುಂದೆ ಎಳೆಯುವುದು ಬೇರೊಂದು. ಎಲ್ಲ ಕೂಡಿ ಅಜ್ಜಿಯನ್ನು ಅಡಿಗೆ ಮನೆಗೆ ಕರೆದೊಯ್ದವು.
"ನಂಗೂ ಅಜ್ಜಿ, ಉಪ್ಪಿನಕಾಯಿ" ಎಂದು ತೊದಲತ್ತ ಇನ್ನೊಂದು ಕೂಸು ತಪ್ಪುಹೆಜ್ಜೆ ಹಾಕುತ್ತ ಅಜ್ಜಿಯ ಬಳಿಗೆ ಬಂದಿತು. "ಇದಾವ ಹೊಸದನಿ" ಎಂದು ಅಜ್ಜಿ ನೋಡಿದರೆ, ಕಡಲೆ ಹಿಟ್ಟಿನ ಗೊಂಬೆ, ಜೀವತಳೆದು ಎದ್ಧು ಬಂದಿದೆ! ಅಶ್ಛರ್ಯವೆನಿಸಿತು ಅಜ್ಜಿಗೆ.
"ಗೊಂಬೆಯ ಹೆಣವನ್ನು ಮುಂದಿರಿಸಿಕೊಂಡು ಅತ್ತು ಕಣ್ಣೀರು ಸುರಿದು ಮನಸ್ಸು ಹಗುರಮಾಡಿಕೊಳ್ಳಬೇಕೆಂದರೆ ಹಿಟ್ಟಿನ ಗೊಂಬೆಯೂ ಜೀವಂತವಾಗಬೇಕೆ? ಅಳುವುದು ನನ್ನ ದೈವದಲ್ಲಿಲ್ಲ" ಎಂದುಕೊಂಡಳು.
ಬಾರದ ಬರ
ಒಂದೂರಲ್ಲಿ ಇಬ್ಬರು ಅಣ್ಣತಮ್ಮಂದಿರು. ಅವರವರ ಹೆಂಡಿರು ಬಂದಿದ್ದರು. ಅಣ್ಣನಿಗೆ ಮಕ್ಕಳಾಗಲಿಲ್ಲ. ತಮ್ಮನಿಗೆ ಸಾಕಷ್ಟು ಮಕ್ಕಳಾಗಿದ್ದರು. ನೆಗೆಣ್ಣಿಯರಲ್ಲಿ ಕೂಡಿನಡೆಯಲಿಲ್ಲವೆಂದು ಅವರಿಬ್ಬರೂ ಆಸ್ತಿಯನ್ನು ಹಂಚಿಕೊಂಡು ಬೇರೆಯಾದರು.
ದೇಶಕ್ಕೆ ಬರಗಾಲ ಬಂತು ಒಮ್ಮೆ. ಅವಾಗ ಜನರು ಹೊಟ್ಟೆಗಿಲ್ಲದೆ ಕುಸುಬೆಯನ್ನು ಸಹ ಕೊಂಡು ತಿಂದರು. ಒಂದುದಿನ ಬೆಳಗು ಮುಂಜಾನೆ ತಮ್ಮನು ಅಣ್ಣನ ಮನೆಗೆ ಬಂದು -"ಅಣ್ಣಾ, ಕೈಗಡವಾಗಿ ಒಂದು ಸೊಲಗಿ ಜೋಳಕೂಡು. ಕೊಟ್ಟರೆ ನಾನು ನಟ್ಟುಕಡಿಯಲು ಹೊಲಕ್ಕೆ ಹೋಗುವೆನು" ಎಂದನು.
ಅಣ್ಣನು ಸರಸರನೆ ಹೋದವನೇ ಗಾದೆಮೆತ್ತಿಗೆಯನ್ನು ತೆಗೆದು ಒಂದು ಸೊಲಗಿ ಜೋಳವನ್ನು ತೆಗೆದು ತಮ್ಮನ ಉಡಿಯಲ್ಲಿ ಬರುಕಿದನು. ತಮ್ಮನು ಆ ಜೋಳ ಹೆಂಡತಿಗೊಪ್ಪಿಸಿ ತಾನು ಹೊಲಕ್ಕೆ ಹೋದನು.
ತಮ್ಮನ ಹೆಂಡತಿ ನುಚ್ಛು ಕುದಿಸಬೇಕೆಂದು ಒಲೆಹೊತ್ತಿಸಿ, ನೀರು ಎಸರಿಟ್ಠು ಜೋಳ ತೆಗೆದುಕೊಂಡು ಬೀಸುಕಲ್ಲಿನ ಬಳಿಗೆ ಹೋದಳು, ಜೋಳ ಒಡೆಯಲಿಕ್ಕೆ.
ನೆರೆಯಲ್ಲಿಯೆ ಇದ್ಧ ನೆಗೆಣ್ಣಿಯು ಬೆಂಕಿಗೆಂದು ಮೈದುನನ ಮನೆಗೆ ಹೋದಾಗ, ಮರದಲ್ಲಿ ಜೋಳವನ್ನು ಗುರುತಿಸುತ್ತಾಳೆ. ಹೊಟ್ಟೆಕಿಚ್ಛು ಭುಗಿಲ್ಲೆಂದು ಉರಿದೇಳುತ್ತಾಳೆ. ಒಲೆಯ ಮೇಲಿನ ಎಸರಿನಲ್ಲಿ ಹಿಡಿಗಲ್ಲು ಒಗೆದುಬಿಡದೆ, ಬೀಸಿದ ಹಿಟ್ಟಿನಲ್ಲಿ ಬೂದಿಮಣ್ಣು ಕಲೆಸುತ್ತಾಳೆ. ಅಷ್ಟು ಸಾಕಾಗದೆ ಮೊರದೊಳಗಿನ ಜೋಳವನ್ನು ತನ್ನುಡಿಯಲ್ಲಿ ಹಾಕಿಕೊಂಡು ಮನೆಗೆ ಹೋದಳು.
ತಮ್ಮನ ಹೆಂಡತಿಯು ತನ್ನ ಎಂಟುಜನ ಮಕ್ಕಳನ್ನು ಕರೆದುಕೂಂಡು ತವರುಮನೆಗೆ ಹೋಗಿ ಅಣ್ಣನ ಕಾಣದಿರಲು ಅತ್ತಿಗೆಗೆ ಕೇಳುವಳು—"ಕೈಗಡವಾಗಿ ಒಂದು ಸೇರು ಜೋಳ ಕೊಡು". ಅದಕ್ಕೆ ಅತ್ತಿಗೆ ಸ್ಪಷ್ತವಾಗಿ ಹೇಳಿದ್ದೇನಂದರೆ—"ನಮ್ಮಲ್ಲಿ ಸೇರುಜೋಳವೂ ಇಲ್ಲ; ಹೇರು ಜೋಳವು ಇಲ್ಲ.""ಹಾಗಾದರೆ ಈ ಎಲ್ಲ ಮಕ್ಕಳ ಕೈಯಲ್ಲಿ ತುತ್ತುರೊಟ್ಟಿಯನ್ನಾದರೂ ಕೊಡು" ಎಂದು ವಿನಯಿಸಿದಳು.
"ತುತ್ತುರೊಟ್ಟಿ ಕೇಳಲು ಭಿಕ್ಷೆಗೆ ಬಂದಿರುವೆಯಾ?" ಎಂಬ ಉತ್ತರವನ್ನು ಪಡೆದು, ಅಷ್ಟೆಲ್ಲ ಮಕ್ಕಳನ್ನು ಕರೆದುಕೊಂಡು ಅಳುತ್ತ ಕರೆಯುತ್ತ ತನ್ನ ಮನೆಗೆ ಹೋದಳು.
ಅವರಲ್ಲಿದ್ದ ಬೆಲೆಯ ವಸ್ತುವೆಂದರೆ ಆಕೆಯ ಕೊರಳಲ್ಲಿದ್ದ ತಾಳಿ ಅಂದರೆ ಮಂಗಲ ಸೂತ್ರ. ಅದನ್ನು ತೆಗೆದುಕೊಂಡು ತಮ್ಮನ ಹೆಂಡತಿ ಅಂಗಡಿಗೆ ಹೋದಳು. ಅಂಗಡಿಯವನಿಗೆ ಅದ್ನ ಅಕ್ಕಿಯನ್ನೂ ದುಡ್ಡಿನ ವಿಷವನ್ನೂ ಕೊಡಬೇಕೆಂದು ಕೇಳಿದಳು.
"ಅದ್ನ ಅಕ್ಕಿ ಯಾರಿಗೆ, ದುಡ್ಡಿನ ವಿಷ ಯಾತಕ್ಕೆ" ಎಂದು ಅಂಗಡಿಯವನು ಕೇಳಲು, "ಅದ್ನ ಅಕ್ಕಿ ಮಕ್ಕಳಿಗೆ, ದುಡ್ಡಿನ ವಿಷ ಹೆಗ್ಗಣಕೆ" ಎಂದು ಸುಳ್ಳು ಹೇಳಿದಳು.
ಅಂಗಡಿಯಿಂದ ಅಕ್ಕಿಯನ್ನು ತಂದು ಅನ್ನಕ್ಕಿಟ್ಟಳು. ಅದು ಕುದಿಯುತ್ತಿರುವಾಗಲೇ ಅದರಲ್ಲಿ ಅ ದುಡ್ಡಿನ ವಿಷವನ್ನೂ ಸುರಿದಳು. ಮರುಕ್ಷಣದಲ್ಲಿಯೇ ಅನ್ನವು ಸಿದ್ಧವಾಯಿತು.
ಎಂಟುಜನ ಮಕ್ಕಳಲ್ಲಿ ನೀಲವ್ವ-ನಿಂಬೆವ್ವನಿಗಾಗಿ ಒಂದೆಡೆ, ಗಂಗವ್ವಗೌರವ್ವನಿಗಾಗಿ ಒಂದೆಡೆ ಬಡಿಸಿದಳು. ಭೀಮಣ್ಣ-ಕಾಮಣ್ಣ ಇವರಿಗೊಂದು, ರಾಮ-ಲಕ್ಷುಮಣ್ಣ ಇವರಿಗೊಂದು ಎಡೆ ಸಿದ್ದವಾದವು. ಗಂಡಹೆಂಡಿರ ನಡುವೆ ಒಂದೆಡೆ ಬಡಿಸಲಾಯಿತು. ಎಲ್ಲರದೂ ಊಟವಾಯಿತು. ಇನ್ನು ಮಲಗಿಕೊಳ್ಳುವುದು.
ತನ್ನ ಬಲಕ್ಕೆ ನೀಲವ್ವ-ನಿಂಬವ್ವರನ್ನು, ಎಡಕ್ಕೆ ಗಂಗವ್ವ-ಗೌರವ್ವರನ್ನು ಮಲಗಿಸಿದಳು. ರಾಮಣ್ಣ-ಲಕ್ಷಮಣ್ಣರನ್ನು ಗಂಡನ ಬಲಕ್ಕೆ, ಭೀಮಣ್ಣಕಾಮಣ್ಣರನ್ನು ಗಂಡನ ಎಡಕ್ಕೆ ಮಲಗಿಸಿದಳು. ತಮಗಾಗಿ ನಟ್ಟುನಡುವೆ ಹಾಸಿದಳು.
ಮಲಗುವ ಮುಂಚೆ ತಲೆಬಾಗಿಲ ಬಳಿಗೆ ಹೋಗಿ ಮನದಲ್ಲಿ ಅಂದುಕೊಂಡಳು—"ಅಕ್ಕರೆಯ ಅಣ್ಣನು ಮಲ್ಲಾಡದೇಶಕ್ಕೆ ಹೋಗಿದ್ದಾನೆ. ದಿಕ್ಕುಗೇಡಿ ಈ ಬರ ನಮ್ಮ ಮಕ್ಕಳ ಸಲುವಾಗಿಯೇ ಬಂದಿತೆ? ರಾಜ್ಯಕ್ಕೆ ಹೊರತಾದ ಈ ಬರ ನಮ್ಮ ರಾಯರ ಸಲುವಾಗಿಯೇ ಬಂದಿತೆ?"
ಮಲ್ಲಾಡಕ್ಕೆ ಹೋದ ಅಣ್ಣನು ಮರಳಿ ಬಂದವನೇ ತಾಯಿಗೆ ಕೇಳುತ್ತಾನೆ
"ಅವ್ವಾ, ತಂಗೆಮ್ಮನ ಸುದ್ದಿಯೇನು?"ತಾಯಿ ಹೇಳುತ್ತಾಳೆ—"ಮೊನ್ನೆ ಬಂದಿದ್ದಳಪ್ಪ ಸೇರು ಜೋಳ ಬೇಡಿದಳು."
"ಸೇರು ಜೋಳ ಬೇಡಿದರೆ ಹೇರುಜೋಳ ಕೊಡಬೇಕಾಗಿತ್ತು ತಂಗಿಗೆ. ಮಕ್ಕಳ ಗಿತ್ತಿ, ಬಡವಿ, ಕೊಡಲಿಲ್ಲವೇಕೆ?" ಎಂದವನೇ ಎತ್ತಿನಮೇಲೆ ಹೇರುಜೋಳ ತೆಗೆದುಕೊಂಡು ತಂಗಿಯ ಊರಿಗೆ ಹೊರಟನು.
ಊರಮುಂದಿನ ಬಾವಿಗೆ ನೀರಿಗಾಗಿ ಬಂದ ಹೆಣ್ಣು ಮಕ್ಕಳನ್ನು ಕುರಿತು - "ಅವ್ವಗಳಿರಾ, ನಮ್ಮ ತಂಗೆಮ್ಮ ಚೆನ್ನಾಗಿರುವಳೇ" ಎಂದು ಕೇಳಲು, "ಆಕೆಯ ಸುದ್ದಿ ಕೇಳಿಲ್ಲ. ಆಕೆಯಮನೆಗೂ ಹೋಗಿಲ್ಲಪ್ಪ" ಎಂಬ ಉತ್ತರ ಬಂದಿತು. ಎತ್ತು ಹೊಡಕೊಂಡು ನೇರವಾಗಿ ತಂಗಿಯಮನೆಗೆ ಹೋದನು.
ಇದೇನು? ಹೊತ್ತು ಹೊರಟು ಇಷ್ಟು ಹೊತ್ತಾದರೂ ತಂಗಿಯ ಸುಳಿವೇ ತೋರಲಿಲ್ಲ. ಬೆಳಗಾಗಿ ಇಷ್ಟು ಹೊತ್ತಾದರೂ ಬೀಗನ ಸುಳಿವೇ ಕಾಣಲಿಲ್ಲ. ಬಿಸಿಲು ಬಿದ್ದು ಇಷ್ಟು ಹೊತ್ತಾದರೂ ಮಕ್ಕಳ ಉಲಿವೇ ಕಂಡುಬರಲಿಲ್ಲ. ಸಂಶಯವೇ ಬಂತು. ಮುಚ್ಚಿದ ಬಾಗಿಲು ತೆರೆದುನೋಡಿದರೆ ಹತ್ತುಹೆಣ ಮಲಗಿವೆ ಸಾಲಾಗಿ! ಅದನ್ನು ಕಂಡ ತಂಗೆಮ್ಮನ ಅಣ್ಣನು, ಹತ್ತಿರಕೂಡ ಹನ್ನೊಂದಾಗಲೆಂದು ಹೊಟ್ಟೆಯಲ್ಲಿ ಚೂರಿತಿವಿದುಕೊಂಡು ಸತ್ತುಬಿದ್ದನು.
ಮುಂದಿನ ಕೆಲಸ ಏನುಳಿಯಿತಿನ್ನು? ಅಂತ್ಯವಿಧಿ ಒಂದೇ. ನೀಲವ್ವ ನಿಂಬೆವ್ವರನ್ನು ನಿಂಬೆಯ ಬನದಲ್ಲಿ, ಗಂಗವ್ವ—ಗೌರವ್ವರನ್ನು ಬಾಳೆಯ ಬನದಲ್ಲಿ ಇಟ್ಟರು. ತೆಂಗಿನ ಬನದಲ್ಲಿ ರಾಮಲಕ್ಷ್ಮಣರನ್ನು, ಪೇರಲಬನದಲ್ಲಿ ಭೀಮಕಾಮರನ್ನು ಇಟ್ಟರು. ಗಂಡಹೆಂಡಿರನ್ನು ಶಿವನ ಪಾದದಲ್ಲಿ ಹಾಗೂ ಅಕ್ಕರೆಯ ಅಣ್ಣನನ್ನು ತಂಗಿಯ ಪಾದದಲ್ಲಿ ಇಟ್ಟರು.
ಹೊಟ್ಟೆಗಿಲ್ಲವೆಂದು ವಿಷ ತಿಂದು ಸತ್ತರೂ ಹಿಂದಿನವರು ಅವರ ಹೆಣಗಳನ್ನೆಲ್ಲ ಒಂದೊಂದು ಬನದಲ್ಲಿ ಹುಗಿದು ತಣಿಸಿದರು. ಹೆಚ್ಚಿನ ಸಹಾನುಭೂತಿ ಏನು ಬೇಕು?
ಕೊನೆಯಾಶೆ
ಹೊಲಮನೆ, ಬೆಳ್ಳಿ ಬಂಗಾರ ಸಾಕಷ್ಟು ಗಳಿಸಿದ ಒಬ್ಬ ದೈವುಳ್ಳ ಗೃಹಸ್ಥನು ಕಾಯಿಲೆಯಿಂದ ಹಾಸಿಗೆ ಹಿಡಿದನು. ಆ ಗೃಹಸ್ಥನು ಸಾಧ್ಯವಾದ ಸೌಮೋಪಾಯಗಳಿಂದ ತನ್ನ ಕಾಯಿಲೆ ಕಳಕೊಳ್ಳುವ ಎತ್ತುಗಡೆ ನಡೆಸಿದನು. ಅದಕ್ಕನುಗುಣವಾದ ಔಷಧಿ-ಚಿಕಿತ್ಸೆಗಳನ್ನು ಅನುಸರಿಸಬೇಕಾಯಿತು.
ಸೌಮ್ಯವಾದ ಔಷಧಿ-ಚಿಕಿತ್ಸೆಗಳಿಗೆ ಹಣಿಯದೆ ಕಾಯಿಲೆಯು ದಿನದಿನಕ್ಕೆ ಅಸಾಧ್ಯವಾಗುತ್ತಲೇ ಬಂದಿತು. ಯಜಮಾನನು ಬಿದ್ದಲ್ಲಿಯೇ ಬಿದ್ದುಕೊಳ್ಳುವ ಸ್ಥಿತಿಯು ಪ್ರಾಪ್ತವಾಯಿತು. ಮಾತನಾಡುವುದಕ್ಕೆ ತ್ರಾಣವಿಲ್ಲದಂತಾಯಿತು. ಕೊನೆಗೆ ಮಾತೂ ನಿಂತುಹೋದವು. ಸನ್ನೆಯಿಂದಲೇ ಹೇಳಲು ಕೇಳಲು ತೊಡಗಿದರು.
ತಂದೆಯ ದುರವಸ್ಥೆ ಕಂಡು, ಮಕ್ಕಳೆಲ್ಲ ಸುತ್ತಲು ನೆರೆದು ಕುಳಿತು "ನನಗೇನು ಹೇಳುತ್ತೀ" ಎಂದು ಕಣ್ಣೀರು ಸುರಿಸತೊಡಗಿದರು. ತಂದೆಗೆ ಮಾತಾಡಲು ಸಾಧ್ಯವಿರದಿದ್ದರೂ ಸ್ಮೃತಿಯಿತ್ತು. ಆದ್ದರಿಂದ ಕೈಸನ್ನೆಯಿಂದಲೇ ಅವರಿಗೆ ಸಾಂತ್ವನ ಹೇಳಿದನು. ಮರುಕ್ಷಣದಿಂದಲೇ ಬೆರಳಿನಿಂದ ಸೂಚಿಸುತ್ತ ಏನೋ ತೋರಿಸಹತ್ತಿದನು. ಮಕ್ಕಳಿಗೆ ಅನುಮಾನವಾಯಿತು "ಹುಗಿದಿಟ್ಟ ದ್ರವ್ಯವನ್ನೇ ತೋರಿಸುತ್ತಾನೋ ಏನೋ?" ಎಂದು. ತಂದೆಯ ಅಭಿಪ್ರಾಯವನ್ನು ಸರಿಯಾಗಿ ತಿಳಕೊಳ್ಳುವ ಆಸೆಯುಂಟಾಯಿತು ಅವರಿಗೆ ಅದಕ್ಕೇನು ಮಾಡುವುದು? ಅದೆಷ್ಟು ಹಣ ಖರ್ಚಾದರೂ ಚಿಂತೆಯಿಲ್ಲ. ಒಂದು ಕ್ಷಣದ ಮಟ್ಟಿಗಾದರೂ ಆತನು ಎದ್ದು ಕುಳಿತು ಮಾತಾಡುವಷ್ಟು ಪ್ರಾಣಬರುವಂತೆ ಉಪಾಯ ಮಾಡಲೇಬೇಕೆಂದು ಯೋಚಿಸಿ, ಬಲ್ಲವರ ಬಳಿಗೆ ಓಡಿಹೋಗಿ ಕೇಳಿಕೊಂಡರು.
ನೂರಿನ್ನೂರು ರೂಪಾಯಿ ಖರ್ಚುಮಾಡಿ, ವೈದ್ಯರ ಬಳಿಯಲ್ಲಿರುವ ಒಂದು ಮಾತ್ರೆಯನ್ನು ತಂದು, ತೇದು, ಆಸನ್ನ ಮರಣನಾದ ತಂದೆಯ ನಾಲಗೆಗೆ ಸವರಿದರು. ಅದರ ಪರಿಣಾಮವಾಗಿ ರೋಗಿಯು ಚೇತರಿಸಿಕೊಂಡು ಎದ್ದು ಕುಳಿತನು. ಅಲಕ್ಕನೇ ಸ್ಮರಣಶಕ್ತಿ ಸುಳಿದು ಬಂದಿತು. ಬಾಯಿಗೆ ಮಾತು ಬಂದವು. ಮಕ್ಕಳು ಹಿಗ್ಗಿ ತಂದೆಗೆ ಕೇಳಿದರು "ಆಗಲೇ ಕೈಮಾಡಿ ಏನೋ ಸೂಚಿಸುತ್ತಿದ್ದೆಯಲ್ಲ! ಏನು ಹೇಳಬೇಕೆಂದು ಮಾಡಿದ್ದೀ." "ಆಹುದೇ? ಅದೋ. ಈಗ ಸಹ ನೋಡಿರಿ. ಆ ಸುಟ್ಟ ಮುಸಡಿಂದು ಎಮ್ಮೆ ಕರುವು ಮೊಂಡ ಕಸಬರಿಗೆ ತಿನ್ನುತ್ತಿದೆ. ಅದನ್ನು ಈಗಲಾದರೂ ಕಸಿದಿಡಿರೋ."
ಇಷ್ಟು ಹೇಳುವದಕ್ಕೆ ಅವನ ಅವಸಾನ ತೀರಿತು. ನೆಲಕ್ಕುರುಳಿದನು. ಬಾಯಲ್ಲಿ ನೀರು ಹನಿಸುವಪ್ಟರಲ್ಲಿ ಪ್ರಾಣಹೋಯಿತು.
ನೂರಿನ್ನೂರು ಖರ್ಚುಮಾಡಿ ಮಾತ್ರೆ ತಂದು ತೇದುಹಾಕಿದ ಮಕ್ಕಳು ಉಳಿಸಿಕೊಂಡಿದ್ದೇನು? ಮೊಂಡ ಕಸಬರಿಗೆ ಮಾತ್ರ.ತಾಯಕೊಂದ ಪಾಪ
ಒಬ್ಬಾಕೆ ಹೆಣ್ಣು ಮಗಳಿದ್ದಳು. ಆಕೆ ನೀರು ಹೊಂಯ್ದುಕೊ೦ಡಿದ್ದಳು. ಅವರ ಮನೆಯಲ್ಲಿ ನಾಯಿಯೂ ಗಬ್ಬವಾಗಿತ್ತು. ತವರು ಮನೆಯವರು ಬುತ್ತಿತಂದರು. ನಾಯಿ ತನ್ನಲ್ಲೇ ಅಂದುಕೊಂಡಿತು — ಈಕೆ ಉಂಡ ಒಂದು ಅಗುಳಾದರೂ ನನಗೆ ಹಾಕಿದರೆ ಅದನ್ನೇ ನಾನು ತಿನ್ನುತ್ತೇನೆ. ಆದರೆ ಆ ಹೆಣ್ಣುಮಗಳದೇ ಒಂದು ಛಲ — ಈ ನಾಯಿಗೆ ಯಾಕೆ ಹಾಕಲಿ ತಿನ್ನಲಿಕ್ಕೆ? ಆದು ಹೀಗೇ ಉಪವಾಸ ಬೀಳಲಿ — ಎಂದು, ಎಮ್ಮೆಗೆ ಮುಸುರಿ ನೀರುಮಾಡಿ ಕುಡಿಸಿದಳು.
ನಾಯಿಗೆ ಸಂತಾಪವಾಗುತ್ತದೆ. ನನ್ನ ಮರಿ ಅವಳಿಗೆ ಹುಟ್ಟಲಿ, ಅವಳ ಕೂಸು ನನಗೆ ಹುಟ್ಟಲಿ — ಎಂದು ಅವಳಿಗೆ ಶಪಿಸುತ್ತದೆ. ಮುಂದೆ ಒಂಬತ್ತು ತಿಂಗಳು ತುಂಬಿದಾಗ ನಾಯಿಗೆ ಅವಳಿಜವಳಿ ಹೆಂಗೂಸು ಹುಟ್ಟಿದವು. ಹೆಣ್ಣುಮಗಳಿಗೆ ಎರಡು ನಾಯಕುನ್ನಿಗಳು ಹುಟ್ಟಿದವು.
ಒಂದು ತಗ್ಗಿನಲ್ಲಿ ನಾಯಿ ಈದಿತ್ತು. ಯಾರದೋ ಮನೆಯಿಂದ ರೊಟ್ಟಿಯನ್ನು ಕದ್ದುಕೊಂಡು ತಂದಿತು. ಇನ್ನೊಂದು ಮನೆಯಿಂದ ಅಂಗಿ ಕುಲಾಯಿ ಕದ್ದುಕೊಂಡು ತಂದಿತು. ಹೂಗಾರರ ತೋಟಕ್ಕೆ ಹೋಗಿ ಅವರು ಯಾರಿಂದಲೋ ಬೇಡಿತಂದ ಮುತ್ತಿನ ಕುಲಾಯಿ ಎತ್ತಿಕೊಂಡು ತಂದಿತು. ಅವಳಿಜವಳಿ ಹೆಣ್ಣುಮಕ್ಕಳು ಬೆಳೆದು ದೊಡ್ಡವರಾದರು.
ಪ್ರಧಾನಿಯೊಡನೆ ರಾಜನು ಸಂಚಾರಕ್ಕೆ ಹೊರಟಿದ್ದನು. ಪ್ರಧಾನಿಯ ಕಣ್ಣು ಆ ಇಬ್ಬರ ಮೇಲೆಯೂ ಬಿದ್ದಿತು. ರಾಜನಿಗೆ ಹೇಳುತ್ತಾನೆ — "ಹುಡುಗಿಯರು ಚೆಲುವಾಗಿದ್ದಾರೆ. ಗವಿಯೊಳಗೆ ಇರುವರಂತೆ. ನೋಡೋಣ ಬನ್ನಿ?’
ರಾಜನೊಂದಿಗೆ ಗವಿಗೆ ಹೋಗಿ, ಅಲ್ಲಿ ಇಬ್ಬರೂ ಅಕ್ಕತಂಗಿಯರನ್ನು ಮಾತನಾಡಿಸುತ್ತಾನೆ — "ತಂಗೆಂದಿರೇ, ನಿಮ್ಮೂರು ಯಾವುದು ? ನಿಮ್ಮ ತಾಯಿಯ ಹೆಸರೇನು ?"
"ಇದೇ ನಮ್ಮೂರು. ನಾಯಿಯೇ ನಮ್ಮ ತಾಯಿ? ಎಂದವರ ಮರುನುಡಿ.
"ನಮ್ಮೊಡನೆ ಬರುವಿರಾ?'" ಎಂದು ಪುಧಾನಿ ಕೇಳಲಿ, ಹಿರಿಯಳು "ಬರುವೆನು ನಡೆಯಿರಿ? ಅನ್ನುತ್ತಾಳೆ. "ಈಗ ಹೋಗೂದು ಬೇಡ. ಅವ್ವ ಬಂದ ಬಳಿಕ ಅವಳನ್ನು ಕೇಳಿ ಹೋಗಾರಿ" ಎಂದು ಕಿರಿಯವಳು ಅಂದಳು. ಆದರೆ ಹಿರಿಯವಳು ಹೊರಟೇಬಿಡುತ್ತಾಳೆ. "ನೀನೊಬ್ಬಾಕೆ ಹೋದಮೇಲೆ ನಾಯೇಕೆ ಇರಬೇಕಿಲ್ಲಿ" ಎಂದು ಕಿರಿಯವಳೂ ಹೊರಟಳು.
ಅಕ್ಕತಂಗಿಯರು ರಾಜನ ಮನೆಯವರೆಗೆ ಮುತ್ತುಗಳನ್ನು ಚೆಲ್ಲುತ್ತ ಹೋದರು. ಸಣ್ಣಾಕೆ ಪ್ರಧಾನಿಯನ್ನೂ ದೊಡ್ಡಾಕೆ ರಾಜನನ್ನೂ ಲಗ್ನವಾದರು. ಮುತ್ತು ಅರಮನೆಗೆ ಬರುವತನಕ ಸಾಕಾದವು. ಮುಂದೆ ಪ್ರಧಾನಿಯ ಮನೆಯವರೆಗೆ ಮುತ್ತು ಚೆಲ್ಲಲಿಕ್ಕಾಗಲಿಲ್ಲ.
ನಿತ್ಯದಂತೆ ನಾಯಿ ತೋಟಕ್ಕೆ ಬಂತು. ಆದರೆ ಹೆಣ್ಣುಮಕ್ಕಳಿಬ್ಬರೂ ಇರಲಿಲ್ಲ. ಗಾಬರಿಯಾಗಿ ಮುತ್ತು ಚೆಲ್ಲಿದ ದಾರಿಹಿಡಿದು ಅರಮನೆಂಯವರೆಗೆ ಹೋಯಿತು. ದೊಡ್ಡಾಕೆ ಈಗ ರಾಣಿಯಾಗಿದ್ದಾಳೆ. ಆದರೆ ನಾಲ್ಕು ಜನರ ಮುಂದೆ ನಾಯಿಗೆ ತಾಯಿ ಅನ್ನಲಿಕ್ಕೆ ತಯಾರಿಲ್ಲ. ತಾಯಿಯ ಗುರುತು ಹಿಡಿದರೂ ಅದನ್ನು ಹೊಡೆದು ಹಾಕಬೇಕೆಂದು ವಿಚಾರಿಸಿದಳು. ರಾಜನು ಸಹ ಹಾಗೇ ಆಗಲೆಂದು ಹೇಳಿ, ನಾಯಿಯನ್ನು ಹೊಡೆದು ತಗ್ಗಿನಲ್ಲಿ ಹಾಕಿಸಿಬಿಟ್ಟನು. ನಾಯಿಂಬನ್ನು ಹೊಡೆದು ಹಾಕಿದ ಹೆಣ್ಣು ಮಗಳು ಅದೆಷ್ಟು ಪಾಪಿ ಎಂದು ಜನ ಮಾತಾಡಿತು.
ಅದೇ ಊರಲ್ಲಿ ಸಣ್ಣಮಗಳೂ ಇದ್ದಳು. ತಂಬಿಗೆ ತಗೊಂಡು ಹೊರಟಾಗ ತಗ್ಗಿನಲ್ಲಿ ಬಿದ್ದದ್ದು ತನ್ನ ತಾಯಿಯೇ ಎಂದು ಗುರುತಿಸಿದಳು. ನಾಯಿಯ ಎಲುವುಗಳನ್ನೆಲ್ಲ ಸಂಗ್ರಹಿಸಿ ತಂದು ಸಂದುಕಿನಲ್ಲಿಟ್ಟಳು.
ದಿನ ಕಳೆದಂತೆ ರಾಜನ ಸಂಪತ್ತೆಲ್ಲ ನಾಶವಾಗಿ ಹೋಯಿತು. ಪ್ರಧಾನಿಯ ಪರಿಸ್ಥಿತಿಯು ಮಾತ್ರ ಉತ್ತಮವಾಯಿತು. ಸಂದುಕಿನಲ್ಲಿಟ್ಟ ಎಲುವುಗಳೆಲ್ಲ ಬಂಗಾರದ ಚಡಿ ಹಾಕಲಾರಂಭಿಸಿದವು. ಒಂದೊಂದು ಬಂಗಾರದ ಚಡಿಯನ್ನು ಹೊರಗೊಯ್ದು ತಮಗೆ ಬೇಕಾದ ಸಾಮಾನು ತರಹತ್ತಿದರು. ಸುಖ ಸಮೃದ್ಧಿ ತುಂಬಿ ಹೊರಸೂಸತೊಡಗಿತು.
ಅಕ್ಕನು ತಂಗಿಯ ಮನೆಗೆ ಹೋದಾಗ "ನಿಮ್ಮ ಈ ಸಂಪತ್ತಿಗೇನು ಕಾರಣ?" ಎಂದು ಕೇಳುತ್ತಾಳೆ.
"ನೀ ಹೊಡಿಸಿ ಹಾಕಿಸಿದಂಥ ನಮ್ಮ ತಾಯಿಯ ಎಲುವುಗಳನ್ನೆಲ್ಲ ತಂದು ಸಂದುಕಿನಲ್ಲಿ ಇಟ್ಟೆ. ಅವು ದಿನಾಲು ಒಂದು ಬಂಗಾರದ ಚಡಿ ಕೊಟ್ಟವು" ಎಂದು ಹೇಳಿದಳು ತಂಗಿ.
ಅಕ್ಕ ತನ್ನ ಮನೆಗೆ ಹೋಗಿ, ಯಾವುದೋ ನಾಯಿಂಹನ್ನು ತರಿಸಿ ಹೊಡಿಸುತ್ತಾಳೆ. ಅದರ ಎಲುವುಗಳನ್ನೆಲ್ಲ ಮನೆಗೊಂಯ್ದು ಇಡುತ್ತಾಳೆ. ಮುಂದೆ ಕೆಲವೊಂದು ದಿನಗಳ ತರುವಾಯ ನೋಡುವಷ್ಟರಲ್ಲಿ ಆ ಎಲುವುಗಳೆಲ್ಲ ಪುಡಿಪುಡಿಯಾಗಿದ್ದವು. ಅಲ್ಲದೆ ಕೊಳೆತು ಹುಳು ತುಂಬಿದ್ದವು.
"ನೀನು ತಾಯಿಯನ್ನು ಕೊಂದು ಪಾಪಮಾಡಿದೆ. ಅದರ ಫಲವನ್ನು ನೀನೇ ಉಣ್ಣಬೇಕಾಗುತ್ತದೆ." ಎಂದು ನಾಲ್ಕು ಜನರು ಬುದ್ದಿ ಹೇಳಿದರು ಆಕೆಗೆ.ರುಚಿಗಾರ ಸವಿಗಾರ
ಅನಾಥೆಯಾದ ಒಬ್ಬ ಮುದುಕಿಯಿದ್ದಳು ಒಂದೂರಿನಲ್ಲಿ. ಆಕೆಗೆ ಯಾರೂ ಇರಲಿಲ್ಲ. ದಿನಾಲು ರಾಟಿಯ ಮೇಲೆ ನೂಲುವಳು. ಬಂದಷ್ಟರಲ್ಲಿ ಉದರ ನಿರ್ವಾಹ ಸಾಗಿಸುವಳು.
ರಾತ್ರಿ ಸಹ ನಿದ್ರೆ ಬರುವವರೆಗೆ ನೂಲುತ್ತ ಕುಳಿತುಕೊಳ್ಳುವಳು. ಒಂದು ದಿವಸ ರಾತ್ರಿ ಬಹಳ ಹೊತ್ತು ನೂಲುತ್ತ ಕುಳಿತಳು. ಅಂದು ಸೋಮವಾರ. ಆಕೆಗೆ ಒಪ್ಪೋತ್ತು. ಸಂಜೆಯ ಊಟವಿರಲಿಲ್ಲ. ನೂಲುವುದು ಸಾಕಾದ ಬಳಿಕ ರಾಟಿಯನ್ನು ಒತ್ತಟ್ಟಿಗೆ ಸರಿಸಿಟ್ಟು, ಕೈ ಬಾಯಿ ತೊಳಕೊಂಡು, ನೀರು ಕುಡಿಯುವದಕ್ಕೆ ಅಣಿಯಾದಳು. ಆಕೆಯ ಬಾಯಲ್ಲಿ ಹಲ್ಲು ಇರಲಿಲ್ಲ. ಕಾಳು ನುರಿಸುವದಕ್ಕೆ ಆಗದೆ ಅಬಡು ಜಬಡು ತಿಂದು ನೀರು ಕುಡಿಯುತ್ತ—"ಏನು ಹೋದೆಯೋ ನನ್ನ ರುಚಿಗಾರ, ನನ್ನ ಸವಿಗಾರ" ಎಂದು ಮೈಮರೆತು ನುಡಿದಳು.
ಆ ಮಾತು ನೆರೆಮನೆಯವರಿಗೆ ಕೇಳಿಸಿತು. "ಈಕೆ ಯಾರೊಡನೆ ಮಾತಾಡುತ್ತಿದ್ದಾಳೆ? ಅವನೆಂಥ ರುಚಿಗಾರ ಸವಿಗಾರ ಇದ್ದಿರಬಹುದು ಈಕೆಗೆ" ಎಂದು ಸಂಶಯ ಪಟ್ಟರು.
"ಅಜ್ಜಿ, ನೀನು ಯಾರೊಡನೆ ಮಾತಾಡುತ್ತಿರುವ?" ಎಂಬ ದನಿ ನೆರೆಮನೆಯವರಿಂದ ಕೇಳಿ ಬಂತು.
"ನಾನಾರೊಡನೆ ಮಾತಾಡಲೆವ್ವ! ನನಗಾರಿದ್ದಾರೆ?"
"ರುಚಿಗಾರ ಸವಿಗಾರ ಅಂದೆಯಲ್ಲ, ಯಾರು ಅವರು?" ನೆರೆಮನೆಯಿಂದ ಬಂದ ಪ್ರಶ್ನೆ.
ಇನ್ನೆಲ್ಲಿಯ ರುಚಿಗಾರ, ಇನ್ನೆಲ್ಲಿಯ ಸವಿಗಾರ! ಹೋಗಿಬಿಟ್ಟು ಬಹಳ ದಿನಗಳಾದವು" ಮುದುಕಿಯ ಮರುನುಡಿ.
"ಹಳೆ ಗೆಳೆತನದ ನೆನಪಾದಂತೆ ತೋರುತ್ತದೆ ಈ ಮುದುಕಿಗೆ" ಎಂದುಕೊಂಡಿದ್ದಾಳೆ ನೆರೆಯವಳು. "ಹೋದವರು ಮರಳಿ ಬರಲಾರರು ಅಷ್ಟೇ. ನಾವೂ ಒಮ್ಮೆ ಅದೇ ಹಾದಿಯಲ್ಲಿ ಹೋಗತಕ್ಕವರೇ ಅಲ್ಲವೇ?" ಎಂದಳು. “ನಾನು ಹುಚ್ಚಿ ಸತ್ತವರನ್ನು ನೆನೆಯಲಿಲ್ಲ. ಬಿದ್ದು ಹೋದ ಹಲ್ಲುಗಳನ್ನು
ನೆನಪಿಸಿಕೊಂಡು ಹಾಗೆ ನುಡಿದೆ - ಏನು ಹೋದೆಯೋ ನನ್ನ ರುಚಿಗಾರ -
ಸವಿಗಾರ ಎಂದು.” ಮುದಿಕೆ ಅರ್ಥವನ್ನು ಸ್ಪಷ್ಟಗೊಳಿಸಿದಳು.
“ಅಹುದೇ ಅಜ್ಜಿ ? ನಾನು ಬೇರೆಯೇ ತಿಳಿದಿದ್ದೆನಲ್ಲ !” ಎಂದು ನೆರೆಯವಳು
ದೀಪ ಮಾತಾಡಿತು
ಒಂದೂರಾಗ ಅತ್ತಿಗೆ ನಾದಿನಿ ಇದ್ರು ನಾದಿನಿ ನೀರು ಹೊಡ್ಕೊಂಡಿದ್ದಳು. ಐದರಾಗ ಅಣ್ಣ ತಂಗೀಗಿ ಕರಕೊಂಡು ಬರಲಿಕ್ಕ ಹೋದ. ಕರಕೊಂಡೂ ಬಂದ. ಅಡವ್ಯಾಗ ಒಂದು ಬಾಳೆಗಿಡ ಇತ್ತು. ಅದರ ಬುಡಕ್ಕ ಅಣ್ಣ ತಂಗಿ ಮನಕೊಂಡರು. ತಂಗಿ ನಿದ್ಯಾಗ ಗುರ್ ಹೊಡೆದಳು. ಹೊಟ್ಯಾಗಿನ ಕೂಸು ಗೊರಕಿ ಹೊಡೀತದ ಎಂದು ಅಣ್ಣ ತಂಗೀಗಿ ಲಗೂಮಾಡಿ ಮನೀಗಿ ಕರಕೊಂಡು ಬಂದ.
ಅತಿಗಿ ಎಷ್ಟಾದರೂ ಅತಿಗೀನೆ, ನಾದನಿಗಿ ನವಣಕ್ಕಿ, ಹಾರಕಿನ ಅಕ್ಕಿ ಉಣಿಸಿದಳೇ ಹೊರತು ನೆಲ್ಲಕ್ಕಿಯ ಅನ್ನಮಾಡಿ ನೀಡಲಿಲ್ಲ. ತಂಗೀಗಿ, ಆಕೀ ಮಕ್ಕಳೀಗಿ ಮನೆಮುಟ್ಟಿಸಿ ಅಣ್ಣ ಹೊಲಕ್ಕೆ ಹೋದ. ಗಂಡಗ ಶಾವಿಗಿ, ಬಾನಾ ಮಾಡಿ ನೀಡಿದಾಕಿ ನಾದಿನಿ ಮಕ್ಕಳಿಗಿ, ಮನಸ್ಯಾಗ ಒಂದೊಂದು ಬಿಲ್ಲಿರೊಟ್ಟಿ, ನವಣಕ್ಕಿ ಬಾನಾಮಾಡಿ ನೀಡಿದಳು. ಕೊಟಗ್ಯಾಗ ಮನಗಿಸಿದಳು. ಹೊಲದಿಂದ ಬಂದ ಗಂಡಗ ಹೇಳಿದಳು-ನಾದಿನಿ ಮತ್ತ ಕೂಸುಗಳೆಲ್ಲ ಉಂಡವು. ನಾಲೈದುದಿನ ದಿನಾಲು ಉಡುಗಿನ ದಾಣೆ ಉಣಿಸಿ, ಗಂಡ ಬರೂಕಿಂತ ಪಹಲೇನೆ ಉಣಿಸಿ, ಇನ್ನು ಮನಕೋರಿ ಎಂದು ಹೇಳುತ್ತಿದ್ದಳು. ಗಂಡನಿಗಿ ಹೆಂಡತಿಯ ಒಳಗಿನ ತಿಪಲ ಮಾತ್ರ ಖೂನ ಆಗಲಿಲ್ಲ. ಹೀಂಗೇ ಎಂಟುದಿನ ನಡೀತು. "ಇನ್ನ ಹೋಗಾರಿ ಮಗಾ" ಎಂದು ತಂಗಿ ತನ್ನ ಮಕ್ಕಳಿಗೆ ಅಂದಳು. ತವರ್ಮನಿ ಸುಖ ಬಹಳ ಆಯ್ತು—ಅಂದುಕೊಂಡಳು. "ಅಣ್ಣಾ, ನಾ ಇನ್ನ ಹೋಗತೀನು ನಮ್ಮ ಮನೀಗಿ" ಅಂದಾಗ ತಂಗೀಗಿ ಸೀರಿ, ಹುಡುಗರಿಗಿ ಅರಿವೆ ತರಬೇಕು ಎಂದಾಗ, ಅಣ್ಣನ ಹೆಂಡತಿ—ನಾನೇ ತರತೀನಿರೊಕ್ಕಾ ತಾತಾ-ಅಂದಳು. ನೂರುದೀಡಸೆ ಪದರಾಗ ಕಟಕೊಂಡು ದುಕಾನಕ್ಕೆ ಹೊಂಟಳು. ಆಕಡಿ ಈಕಡಿ ಓಡಾಡಿ ತಿಪ್ಪಿಮ್ಯಾಲಿಂದು, ಮೊಸಂಡೀ ಮ್ಯಾಗಿಂದು ಅರಿಬಿ ಜೋಡಿಸಿದಳು. ಕತ್ತಲಾಗೋದಕ್ಕೆ ಮೀರಿ ಬಂದಳು. ದೊಡ್ಡ ಗಂಟುಕಟ್ಟಿ ಇಟ್ಟಳು. ನಾಳೀಗಿ ಇದನ್ನು ಒಯ್ಯು ಎಂದು ನಾದಿನಿಗೆ ಹೇಳಿಬಿಟ್ಟಳು. ಬಾನ, ಬ್ಯಾಳಿ ಮಾಡಿ ಗಂಡಗ ಉಣಿಸಿದಳು. ನಾದಿನಿ ಮತ್ತು ಅವಳ ಮಕ್ಕಳಿಗೆ ನವಣಕ್ಕಿ ಬಾನ ತಪ್ಪಲಿಲ್ಲ.
ಅಣ್ಣ ಹರ್‍ಯಾಹೊತ್ತಿಗಿ ಹೊಲಕ್ಕೆ ಹೋಗುವಾಗ-"ತಂಗಿ ಮಕ್ಕಳೊಂದಗಿತ್ತಿ. 8-10 ರೊಟ್ಟಿ ಮಾಡಿ ಕಟ್ಟು" ಎಂದ. ಹೂ ಎಂದ ಹೆಂಡತಿ ನಸುಕಿನಾಗೆದ್ದು ರೊಟ್ಟಿ ಮಾಡಲಿಲ್ಲ. ದೊಡ್ಡ ದೊಡ್ಡ ಹಲುಪಿಕುಳ್ಳು ತಂದು, ಕುಂಚಿಗ್ಯಾಗ ಹಾಕಿ ಕಟ್ಟದಳು. ಅಲ್ಲೇ ಹೋಗಿ ಉಟುಗೋರಿ,ವ್ಉಟುಗೊಂಡು ಮೆರೀರಿ ಎಂದು ಅರಿಬಿ ಬಿಂಡೆ ತಂದಿಕ್ಕಿದಳು. ಮನಸ್ಯಾಗ ಒಂದೊಂದು ಬಿಲ್ಲೆ ರೊಟ್ಟಿ ಕೊಟ್ಟಳು.
ಹಾದ್ಯಾಗ ಅಣ್ಣನ ಹೊಲ. ಸೌತೀ ಬಳ್ಳಿಯ ಗುಂಟ ಕಾಯೀನೆ ಕಾಯಿ ಹರವಿದ್ದವು. ಪೋರಗೋಳಿಗಿ ಹಸಿವಿ ಆಗಿದ್ದವು. ಅವು ಸವತೀಕಾಯಿ ಕಡಕೊಂಡು ತಿಂದವು. ಹೊಲದೊಳಗಿದ್ದ ಆಳುಮಕ್ಕಳು -"ನೀ ಯಾರವ್ವ? ಇಲ್ಲಿಯಾಕ ಬಂದೀದಿ" ಎಂದು ಬೆದರಿಸಿದವು. "ಚಂದಪ್ಪನ ತಂಗಿ ಅಗಬೇಕು" ಎಂದಳು. ವವಾಳಿ ಸವತೀಕಾಯಿ ತಾಯಿಮಕ್ಕಳು ತಿಂದರು; ಕುಂಚಿಗ್ಯಾಗ ಕಟಗೊಂಡು ಮುಂದ ನಡೆದರು. ಹೊಂಟು ನಿಂತಾಗ ಮನಸು ತುಂಬಿ ಹರಕಿ ಕೊಟ್ಟಳು"ಕಂಟಿಕೊತ್ಹಂಗ ಹೊಲದ ಬೆಳೀ ಬೆಳೀಲಿ ಮುತ್ತು ರತ್ನ ಬೆಳೀಲಿ. ನಮ್ಮಣ್ಣ ಆಶುಳ್ಳವ ಆಗಲಿ. ಶಂಭರವರ್ಷ ಆಯುಷ್ಯಾಗಲಿ" ಎಂದು.
ಹಾದ್ಯಾಗ ಹಳ್ಳ ಹರೀತಿತ್ತು. ಕೂಸುಗಳು ಹಸಿದು ಕಂಗಾಲಾಗಿದ್ದವು.
"ಮಗಾ, ನಿಮ್ಮತ್ತಿ ಬುತ್ತಿ ಕೊಟ್ಟಾಳ ಬಿಚ್ಚಿರೋ" ಅಂದಳು. ಬಿಚ್ಚಿನೋಡುತಾನ ಬುತ್ತಾಗ ಕುಳ್ಳ ಅದೆ, ಹೆಂಡಿ ಅದೆ. ಅರಬೀಗಂಟನ್ನೂ ಬಿಚ್ಚಿನೋಡಿದರೆ ಅಲ್ಲಿ ಮಶಾಂಡದನ ಅರಬಿ ಅದ. ಅರಿಬಿ, ಕುಳ್ಳು ಎಲ್ಲಾ ಹರಿಯೂ ಗಂಗೆಯೊಳಗ ಒಗದು ಬಿಟ್ಟಳು. "ಶಿವ ನಮಗೆ ಹೆಂಥಾ ವೇಳೆ ತಂದೆಪ್ಪಾ" ಎಂದು ಅವ್ವಮಕ್ಕಳು ಗೋಳೋ ಎಂದು ಅತ್ತರು.
ಶಿವಪಾರ್ವತಿ ಆಕಡಿಂದ ಬಂದರು. "ಯಾಕವ್ವ, ಯಾಕಳತೀ" ಎಂದು ಕೇಳಿದರು. "ದೈವುಳ್ಳ ಅಣ್ಣನ ಮನೀಗಿ ಹೋದ್ರ ಅತ್ತಿಗಿ ಬಿಲ್ಲೆರೊಟ್ಟಿ ಮಕ್ಕಳ ಕೈಯಾಗ ಕೊಟ್ಟಳು. ಬುತ್ತಿ ಅಂತ ಹೇಳಿ ಕುಳಬಾನದಾಗಿನ ಕುಳ್ಳ ಕಟ್ಯಾಳ. ನಂದು ಖೊಟ್ಟಿ ನಸೀಬ" ಎಂದಳು.
ಶಿವಾ ಅಂದ "ತಂಗೀ ಮನೀಗಿ ಹೋಗು. ಶಿವಪೂಜಿ ಮಾಡು. ನೀ ಬಯಸಿದ್ದು ಸಿಗತಾದ."
ಆಕಿ ಮನೆಗೆ ಹೋದಳು. ಮೈತಕೊಂಡು, ದೀಪ ಹಚ್ಚಿ ದೇವರ ಮುಂದೆ ಅಡ್ಡಬಿದ್ದಳು. ಮನಸೀಗಿ ಬಂದದ್ದೆಲ್ಲ ಬೇಡಿದಳು. ಮನೀತುಂಬ ತುಂಬಿತು. ಯಾತಕ್ಕೂ ಯಾನು ಕೊರತಿ ಬೀಳಲಿಲ್ಲ.
ಜಬರದಸ್ತ ಒಕ್ಕಲುತನ ಮಾಡಿದಳು, ಒಂದು ಜೋಡು ಎತ್ತು ಬೇಕಾದವು. ರೊಕ್ಕ ಪದರಾಗ ಕಟಗೊಂಡು ತಂಗಿ ಸಂತೀಗಿ ಹೋದಳು. ಅತಗೀನೂ ಸಂತಿಗಿ ಬಂದಿದ್ದಳು. ನಾದಿನಿಯ ಸೀರೇನು, ತೆನಿತಿರುವಿದ ಕುಬಸೇನು, ಮೈಮೇಲಿನ ಡಾಗೀಣೇನು — ಝೋಕು ಆಗ್ಯಾಳೆಂದು ಮನಸಿನಾಗೆ ಹಲ್ಲು ಕಡಿದಳು. ಹೊಟ್ಯಾಗ ಬೆಂಕಿ ಬಿದ್ದಾಂಗಾಯ್ತು ಅವಳಿಗಿ. ಸರ್‍ರನೆ ಮನೀಗಿ ಹೋಗಿಬಿಟ್ಟಳು.
ತಂಗೀನೂ ತನ್ನ ಮನೀಗಿ ಬಂದಳು. ರಾತ್ರಿ ದೀಪ ಮಾತಾಡಿತು "ಎಲ್ಲಾರು ಬಂದು ಹೋದರು. ನಾನೂಬಿ ಯಾವಾಗ ಹೋಗಲಿ" ಎಂದು ಕೇಳೇ ಕೇಳಿತು. ತಂಗಿ ತನ್ನ ತಾಪ ಎಲ್ಲ ದೀಪದ ಮುಂದ ಒಡೆದು ಹೇಳಿದಳು — "ನನ್ನ ಮಕ್ಕಳು ಮರಿ ಬಹಾಳ ವನವಾಸ ಕಳೆದಾವ. ನನ್ನ ಅತ್ತಿಗಿ ಬಿಲ್ಲಿರೊಟ್ಟಿ ಕೊಟ್ಟಾಳ. ಕುಳ್ಳಿನ ಬುತ್ತಿ ಕಟ್ಯಾಳ. ನೀನೇ ನನ್ನ ಸಾಥೀ. ನೀ ಬಿಟ್ಟುಹೋದರ ನಾ ಹ್ಯಾಂಗ್ ಇರಲಿ?"
ಇಕಡಿ ಅತಿಗಿ ಮನೀಗಿ ಹೋಗಿ ಗಂಡಗಹೇಳ್ತಾಳ — "ನಿನ್ನ ತಂಗಿಯ ಗುಣಾನೇ ಚಂದಿಲ್ಲ. ಅಕಾ ಅವಳ ಸೀರೇನು, ಅವಳ ಥಾಟೇನು. ಹೆಂಗೋ ಏನೋ...” ಕೊಡಲಿ ತಗೊಂಡು ತಂಗೀಗಿ ಕಡೀಲಿಕ್ಕಿ ಹೊಂಟಾನ. ತಂಗಿ ಜ್ಯೋತಿ ಸುತ್ತ ಮಾತಡಿದ್ದು ಕೇಳಿಸಗೋತಾನ. ದೇವರs ನೀನೆ ಕಾಯಿ ಎಂದು ದೇವರ ಮುಂದ ಅಡ್ದಿ ಬೀಳೂದು ನೋಡ್ತಾನ. ಮನಸಿನಾಗ ಅಂತಾನ
"ನನ್ನ ತಂಗಿ ತಾಪ ನನಗ ಇಂದ ಖೂನ ಅಯ್ತು. ಎಲಾ ಇವಳ ನನ್ನ ಖಾಸಾ ಒಡಹುಟ್ಟಿದ ತಂಗೀಗಿ ಮೂಲ್ಯಾಗೀನ ದಾಣಿ ಉಣಿಸಿದಳಲ್ಲಾ."
ತಂಗೀ ಮುಂದ ಅಣ್ಣ ಬಂದು- "ನಂದುಕಡೆ ತಪ್ಪಾತು. ಕ್ಷಮಾ ಇರಲಿ"
ಎಂದನು ತಂಗಿಗೆ.
ಅಣ್ಣನಿಗಿ ತಂಗಿ ಶಾವಿಗಿ, ಬಾನಾ ಮಾಡಿ ನೀಡಿದಳು.
ತನ್ನ ಮನಿಗಿ ಹೋಗಿ ಇಂಥಾ ಕೆಟ್ಟ ಇಚಾರ ಮಾಡಿದಕ್ಕೆ ಹೆಂಡತಿಗಿ ಅದೇ ಕೊಡಲಿಯಿಂದ ಕಡಿದು ಹಾಕಿದ.
ಸೊಸೆಗೇನು ಅಧಿಕಾರ?
ಸೆರಗಿನಿಂದ ಕೈಒರೆಸಿಕೊಂಡು ದಾರಿಯಲ್ಲಿ ಬರುತಿದ್ದ ನೀಲಜ್ಜಿಯನ್ನು ಕಂಡು ಸಂಗಮ್ಮ ಕೇಳಿದಳು - "ಎಲ್ಲಿಗೆ ಹೋಗಿದ್ದೆ ನೀಲಜ್ಜಿ?"
"ನಿಮ್ಮ ಮನೆಗೆ ಹೋಗಿದ್ದೆ. ಮುಕ್ಕು ಮಜ್ಜಿಗೆ ಸಿಕ್ಕಾವೆಂದು?"
"ಏನಂದರು?" ಸಂಗಮ್ಮನ ಪ್ರಶ್ನೆ.
"ಮಜ್ಜಿಗೆ ಅಗಿಲ್ಲವೆಂದರು" ನೀಲಜ್ಜಿಯ ಪಡಿನುಡಿ.
"ಯಾರು ಹೇಳಿದರು ಹೀಗೆ?"
"ನಿನ್ನ ಸೊಸೆ ನಿಂಬೆಕ್ಕ."
ಆಕೆಗೇನು ಅಧಿಕಾರ ಹಾಗೆ ಹೇಳಲಿಕ್ಕೆ. ಬಾನನ್ನೊಡನೆ" ಎಂದಳು ಸಂಗಮ್ಯ. ಸಂಗಮ್ಮ ಮಂದೆ ಮಂದೆ, ನೀಲಜ್ಜಿ ಹಿಂದೆ ಹಿಂದೆ. ಹತ್ತುಮಾರು ಹೋಗುವಷ್ಟರಲ್ಲಿ ಮನೆ ಬಂತು. ಸಂಗಮ್ಮ ಬಿರಬಿರನೆ ತಲೆವಾಗಿಲು ಹೊಕ್ಕು ಪಡಸಾಲೆಯನ್ನು ಏರಿದಳು. ನೀಲಜ್ಜಿಯು ಮೆಲ್ಲನೆ ನಡೆದು ಬಂದು ಮೆಟ್ಟುಗಟ್ಟೆಯ ಬಳಿ ನಿಂತುಕೊಂಡಳು.
"ತಾ ಇಲ್ಲಿ. ಮಜ್ಜಿಗೆ ಒಯ್ಯುವುದಕ್ಕೆ ಏನು ತಂದಿರುವಿ?" ಎನ್ನುತ್ತ ಸಂಗಪ್ಪನು ಆಕೆ ಕೊಟ್ಟ ಚಿಕ್ಕ ಗಡಿಗೆಯನ್ನು ತೆಗೆದುಕೊಂಡು ಅಡಿಗೆ ಮನೆಗೆ ಹೊಕ್ಕಳು. ಸಂಗಮ್ಮನು ಮರಳಿ ಬರುವ ದಾರಿಯನ್ನೇ ಮಿಕಿಮಿಕಿ ನೋಡುತ್ತ ನೀಲಜ್ಜಿ ನಿಂತುಕೊಳ್ಳುವಷ್ಟರಲ್ಲಿ ಸಂಗಮ್ಮ ಹೊರಕ್ಕೆ ಬಂದೇ ಬಿಟ್ಟಳು. "ನಿನ್ನ ಮಕ್ಕಳ ಹೊಟ್ಟೆ ತಣ್ಣಗಾಗಲಿ ಸಂಗೂ" ಎಂದು ನೀಲಜ್ಜಿ ಹರಕೆ ನುಡಿಯತ್ತಿರುವಾಗಲೇ ಸಂಗಮ್ಮ
"ಇಗಾ ಅಜ್ಜಿ. ಈ ಹೊತ್ತು ಮಜ್ಜಿಗೆ ಆಗಿಲ್ಲ" ಎನ್ನುತ ಆಕೆಯ ಗಡಿಗೆಯನ್ನು ಇದ್ದಕ್ಕಿದ್ದ ಹಾಗೆ ಒಪ್ಪಿಸಿದಳು. "ಅಯs! ಅದೇ ಮಾತು ಖರೆ ಆಯ್ತಲ್ಲ"
ಎನ್ನುತ್ತ ನೀಲಜ್ಜಿ ತನ್ನ ಮನೆಯ ಹಾದಿ ಹಿಡಿದಳು.
ಮಜ್ಜಿಗೆ ಆಗಿಲ್ಲವೆಂದು ಹೇಳುವುದಕ್ಕೆ ಸೊಸೆಗೇನು ಅಧಿಕಾರ? ಆ ಮಾತನ್ನು ಅತ್ತೆಯಾದವಳೆ ಹೇಳಬೇಕು ಅಲ್ಲವೆ?
ಮಾಡಿದೊಂದು ಆಗಿದ್ದೊಂದು
ಹೀಗೆ ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿಗೆ ಸೊಸೆಯೂ ಬಂದಿದ್ದಳು. ವಾಡಿಕೆಯಂತೆ ಅತ್ತೆ ಸೊಸೆಯರಲ್ಲಿ ವಿರಸಕ್ಕಾರಂಭವಾಗಿ ಕದನವಾಗತೊಡಗಿದವು. ಕದನದ ಪರಿಣಾಮದಿಂದ ಕುನಸುಹುಟ್ಟಿಕೊಂಡಿತು ಪರಸ್ಪರರಲ್ಲಿ. ಎಂಥದೋ ಒಂದು ಉಪಾಯದಿಂದ ಅತ್ತೆಯನ್ನು ಇಲ್ಲದಂತಾಗಿಸಬೇಕೆಂಬ ಹಂಚಿಕೆಯನ್ನು ಸೊಸೆ ಹುಡುಕ ತೊಡಗಿದಳು. ಅದಕ್ಕೆ ಗಂಡನ ಸಹಾಯವೂ ಸಕಾಲದಲ್ಲಿ ದೊರೆಯುವಂತೆ ಹೇಳಿದ್ದಳು.
ರಾತ್ರಿ ಮಲಗಿರುವಾಗ ಅತ್ತೆಯನ್ನು ಕಟ್ಟಿ ಒಯ್ದು ಹೊಳೆಯಲ್ಲಿ ಒಗೆಯಬೇಕೆಂದು ನಿರ್ಧರಿಸಿ ಗಂಡನಿಗೆ ಸಿದ್ಧನಾಗಿರಲು ತಿಳಿಸಿದಳು.
ಗಂಡನು ಹೆಂಡತಿಯ ಕೆಲಸಕ್ಕೆ ಸಮ್ಮತಿಸಿ ಅದನ್ನು ನಿರ್ವಹಿಸಲು ಸಿದ್ಧನಾದರೂ ಆ ವಿಷಯವನ್ನು ತಾಯಿಗೆ ಹೇಳಲು ಮರೆಯಲಿಲ್ಲ.
ಅದೇ ಸಂಧರ್ಭದಲ್ಲಿ ಮಗಳನ್ನು ಕಂಡುಹೋಗಲೆಂದು ಸೊಸೆಯ ತಾಯಿ ಆ ಊರಿಗೆ ಬಂದಳು. ಮನೆಗೆ ಬಂದ ಬೀಗತಿಯನ್ನು ತಾಯಿ ಆದರದಿಂದ ಬರಮಾಡಿಕೊಂಡಳು. ಎಲ್ಲರೂ ಕೂಡಿ ಉಂಡು ನಕ್ಕರು, ಕೆಲೆದರು. ರಾತ್ರಿ ಬಹಳ ಆಯಿತಂದು ತಂತಮ್ಮ ಹಾಸಿಗೆ ಹಾಕಿಕೊಂಡರು.
ಬೀಗತಿಯರು ಒಂದೇ ಕಡೆ ಹಾಸಿಗೆ ಹಾಕಿದರು. ತಂತಮ್ಮ ಹೊದಿಕೆ ಹೊತ್ತು ಕೆಲಹೊತ್ತು ಮಾತಾಡುತ್ತ ಮಲಗಿದರು. ಬಳಿಕ ಅವರಿಗೆ ನಿದ್ದೆ ಹತ್ತಿತು. ಗಂಡ ಹೆಂಡಿರು ನಿತ್ಯದಂತೆ ತಮ್ಮ ಕೋಣೆಗೆ ತರಳಿದರು ಮಲಗಲಿಕ್ಕೆ.
ಸೊಸೆ ಯಾವುದೊ ನೆವದಿಂದ ಹೊರ ಬಂದು, ತನ್ನ ತಾಯಿ-ಅತ್ತೆಯರಿಗೆ ನಿದ್ದೆ ಹತ್ತಿದೆಯೆಂದು ಬಗೆದು, ಅತ್ತೆಯ ಕಾಲಬೆರಳಿಗೆ ಕಂಬಳಿಯ ಕರೆಯನ್ನು ಕಟ್ಟಿದಳು. ಅಂದಿನ ರಾತ್ರಿಯಲ್ಲಿಯೇ ಹೊಳೆ ಕಾಣಿಸಿ ಬರಬೇಕಾಗಿತ್ತು. ಇಬ್ಬರು ಮುದುಕಿಯರು ಒತಟ್ಟಿಗೆ ಮಲಗಿದಾಗ, ಗಂಡನು ತನ್ನ ತಾಯನ್ನು ಸಹಜವಾಗಿ ಗುರುತಿಸಲೆಂದು ಹಾಗೆ ಮಾಡಿ ಗಂಡನಿಗೆ ತಿಳಿಸಿದಳು.
ತನ್ನನ್ನು ಎಂದಾದರೊಮ್ಮೆ ಹೊತ್ತೊಯ್ಯುವರೆಂಬ ಎದೆಗುದಿಯಲ್ಲಿ ಆತನ ತಾಯಿಗೆ ನಿದ್ದೆ ಹತ್ತಿರಲಿಲ್ಲ. ಕಾಲಕಿರಿಬೆರಳಿಗೆ ಸೊಸೆ ಕಂಬಳಿಯ ಕರೆ ಕಟ್ಟುವುದು ಆಕೆಗೆ ಗೊತ್ತಾಗಿತ್ತು. ಆದರು ಬೇಕೆಂತಲೇ ಡುಕ್ಕು ಹೊಡೆದಿದ್ದಳು. ಸೊಸೆ ತನ್ನ ಕೋಣೆಗೆ ಹೊರಟುಹೋದಮೇಲೆ, ಆಕೆ ಎದ್ದು ಕುಳಿತು ತನ್ನ ಕಾಲಿನ ಕರೆಯನ್ನು ಬಿಚ್ಚಿ, ಬೀಗತಿಯ ಕಾಲಬೆರಳಿಗೆ ಕಟ್ಟಿದಳು. ಅದು ಆಕೆಗೆ ಗೊತ್ತಾಗಲಿಲ್ಲ. ಗಡದಾಗಿ ನಿದ್ದೆ ಹತ್ತಿತ್ತು.
ದೊಡ್ಡ ನಸುಕಿನಲ್ಲೆದ್ದು ಆತನು ಕರೆಕಟ್ಟಿದ ಕಾಲುಳ್ಳ ಮುದುಕಿಯನ್ನು ಅದೇ ಹಾಸಿಗೆಯಲ್ಲಿ ಸುತ್ತಿ ಬಿಗಿದು, ಹೊತ್ತುಕೊಂಡು ಹೊಳೆಯಕಡೆಗೆ ನಡೆದನು. ಜೊತೆಯಲ್ಲಿ ಹೆಂಡತಿಯೂ ಇದ್ದಳು. ಹೊಳೆಯಲ್ಲಿ ಒಂದುಕಡೆಗೆ ನೀರು ಬಹಳವಿದ್ದವು. ಅಲ್ಲಿಗೆ ಹೋಗಿ ತಲೆಯಮೇಲಿನ ಗಂಟನ್ನು ಚೆಲ್ಲಿಕೊಟ್ಟ ಬಳಿಕ
"ಪೀಡೆ ತೊಲಗಿತು" ಎಂದು ಹೆಂಡತಿ ಸಮಾಧಾನದ ಉಸಿರು ಹಾಕಿದಳು.
ಅವರು ತಮ್ಮ ಕೆಲಸ ಮುಗಿಸುವ ಹೊತ್ತಿಗೆ ನಸುಕು ಹರಿದು ಬೆಳಗಾಗತೊಡಗಿತು. ಗಂಡ ಹೆಂಡರು ಮನೆಯಅ ಹಾದಿ ಹಿಡಿದರು.
ಎಂಥದೋ ಮೌನದಲ್ಲಿ ಅರ್ಧದಾರಿ ಮರಳಿ ಬಂದ ಮೇಲೆ "ಮನಸಿನಂತೆ ಮಹಾದೇವ" ಎಂದಳು ಹೆಂಡತಿ.
"ಮನೆಗೆ ಹೋದ ಬಳಿಕ ತಿಳಿಯುವದು" ಗಂಡನ ಪಡಿನುಡಿ.
ಹೆಂಡತಿಗೆ ಅದೇನೋ ದಿಗಿಲು. ಮತ್ತೆ ಅದೇ ಮೌನದಲ್ಲಿ ಮನೆಗೆ ಬರುವಷ್ಟರಲ್ಲಿ ತನ್ನತ್ತೆಯೆ ಬಾಗಿನಿಂತು, ಬಾಗಿಲಮುಂದೆ ಕಸಗುಡಿಸುವುದನ್ನು ಕಂಡು ತಬ್ಬಿಬ್ಬಾದಳು. ಆದರೆ ಯಾರಿಗೆ ಹೇಳುವುದು, ಏನೆಂದು ಹೇಳುವುದು. ಹೊಳೆಯ ಪಾಲಾದವಳು ಗಂಡನ ತಾಯಾಗಿರದೆ ತನ್ನ ತಾಯಿಯೇ ಆಗಿದ್ದಾಳೆಂದು ಬಗೆದು ಒಳಗಿನದೊಳಗೇ ದುಃಖಿಸಿದಳು. ಆಡಿತೋರಿಸಲು ಸಾದ್ಯವೇ?
ಹೆಂಡತಿಯ ಅತ್ತೆಯನ್ನು ಹೊತ್ತೊಯ್ದು ಹೊಳೆಕಾಣಿಸುವುದನ್ನು ಬಿಟ್ಟು ತನ್ನತ್ತೆಯನ್ನು ಹೊತ್ತೊಯ್ಯುವ ಪ್ರಸಂಗ ಬಂದುದು ಆಶ್ಚರ್ಯವೆಂದು ಬಗೆದ ಗಂಡನಿಗು ಅದರ ಕೀಲು ತಿಳಿದಿರಲಿಲ್ಲ.ಸೇವಕನ ಸಂಬಳವೇಕೆ ಕಡಿಮೆ?
ಮನೆ ಅಳಿಯ
ನಾಲ್ಕು ಪ್ರಶ್ನೆಗಳಿಗೆ ಉತ್ತರ
ಬಟ್ಟಲ್ಯಾತಕ್ಕ ಕೆನಿ ತಿನ್ಲಕ
ಹಗಮಲ್ಲಿ ದಿಗಮಲ್ಲಿ
ಅಳುಮಗ ಇಕ್ಯಾ
ಯಾರಿಗೆ ಕೊಡಬೇಕು ಕನ್ಯೆ?
ಪಾದರಕ್ಷೆಯ ಪುಣ್ಯ
ಯುಕ್ತಿಗೊಂದು ಪ್ರತಿಯುಕ್ತಿ
ತುಂಟ ಬೀಗ
ಸೇವಕನ ಸಂಬಳವೇಕೆ ಕಡಿಮೆ?
ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು. ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು—"ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ. ಪ್ರಧಾನಿಯ ಸಂಬಳ ಬೊಗಸೆ ಬೊಗಸೆ. ತನ್ನ ಕೆಲಸ ಓಡಾಟದ್ದು, ಪ್ರಧಾನಿಯದು ಸ್ವಸ್ಥ ಕುಳಿತುಕೊಳ್ಳುವುದು. ಈ ಭೇದಭಾವವೇಕೆ?"
ರಾಜನನ್ನು ಕೇಳಿಯೇಬಿಟ್ಟನು ಸೇವಕನು—"ಹಗುರು ಕೆಲಸಮಾಡುವ ಪ್ರಧಾನಿಯ ಸಂಬಳ ಲೆಕ್ಕ ತಪ್ಪಿ; ಶ್ರಮದ ಕೆಲಸಮಾಡುವ ನನ್ನ ಸಂಬಳ ಹತ್ತೆಂಟು ಟಿಗಳಿ. ಹೀಗೇಕೆ?"
"ನಿನ್ನ ಕೆಲಸ ಶ್ರಮದ್ದು. ಪ್ರಧಾನಿಯ ಕೆಲಸ ಹಗುರು. ಆದರೂ ಅಷ್ಟು ಸಂಬಳ ಅವನಿಗೆ ಕೊಡಲೇಬೇಕಾಗುತ್ತದೆ. ಶ್ರಮದ ಕೆಲಸವಾದರೂ ನಿನ್ನ ಸಂಬಳ ಕಡಿಮೆ ಅಲ್ಲ. ಆದರೂ ನಿನಗೆ ಅಸಮಾಧಾನವೆನಿಸುತ್ತಿದ್ದರೆ ಇನ್ನೂ ನಾಲ್ಕು ರೂಪಾಯಿ ಹೆಚ್ಚಿಗೆ ಕೊಡಿಸುತ್ತೇನೆ. ಆಯಿತೇ" ಎಂದನು ರಾಜ.
ಸೇವಕನ ತಲೆಯೊಳಗಿನ ಗುಂಗೇ ಇಳಿಯಲೊಲ್ಲದು. ಅಷ್ಟು ದೊಡ್ಡ ಸಂಬಳ ಪ್ರಧಾನಿಗೇಕೆ?
ರಾಜನು ಒಂದು ದಿನ ಬೇಟೆಗೆ ಹೊರಟನು. ಜೊತೆಗೆ ಪ್ರಧಾನಿ ಹಾಗೂ ಸೇವಕ ಇರತಕ್ಕವರೇ, ಬೇಟೆಯನ್ನರಸುತ್ತ ಹೋದೇ ಹೋದರು. ಒಂದು ಹೊಳೆ ಕಾಣಿಸಿತು. ಕೈಕಾಲು ತೊಳಕೊಂಡು ಹೊಳೆಯ ದಂಡೆಯಲ್ಲಿರುವ ಒಂದು ಮರದ ನೆರಳಿಗೆ ಕುಳಿತು ಕೊಂಡರು.
ಹೊಳೆಯ ಆಚೆಯಲ್ಲಿ ಜನರ ಗುಂಪು ಕೂಡಿದಂತೆ ಕಾಣಿಸಲು, ರಾಜನಲ್ಲಿ ಕುತೂಹಲ ಹುಟ್ಟಿತು. ಸೇವಕನಿಗೆ ಹೇಳಿದನು "ಆಚೆಯ ದಡಕ್ಕೆ ಹೋಗಿ ಅವರಾರು, ತಿಳಕೊಂಡು ಬಾ."
ಸೇವಕನು ಹೊಳೆದಾಟಿ ಆಚೆಯ ತೀರವನ್ನು ಸೇರಿ, ಆ ಜನರ ಗುಂಪಿನ ಬಳಿ ಹೋಗಿ ಮಾತನಾಡಿಸಿ ಬಂದು ರಾಜನಿಗೆ ಹೇಳಿದನು "ಅವರು ವೇಷಗಾರರಂತೆ.""ಅವರ ಊರು ಯಾವುದಂತೆ?" ರಾಜ ಕೇಳಿದನು.
"ಅದನ್ನು ಕೇಳಲಿಲ್ಲ ದೊರೆಗಳೇ, ಓಡುತ್ತ ಹೋಗಿ ಕೇಳಿಕೊಂಡು ಬರುವೆ"
ಎಂದವನೇ ಅತ್ತ ಓಡಿದನು ಸೇವಕ. ಮರಳಿ ಬಂದ ರಾಜನಿಗೆ ತಿಳಿಸಿದನು "ಅವರು ಶ್ರೀಶೈಲ ಕಡೆಯವರಂತೆ."
"ಹೀಗೋ? ಇಲ್ಲಿ ಇನ್ನೂ ಎಷ್ಟು ದಿವಸ ಇರುವರಂತೆ?" ರಾಜನ ಪ್ರಶ್ನೆ. ಅದನ್ನು ಕೇಳುವುದಕ್ಕೆ ಸೇವಕನು ಮತ್ತೆ ಹೊಳೆದಾಟಿದನು. ಇನ್ನೂ ನಾಲ್ಕಾರುದಿನ ಇಲ್ಲಿಯೇ ಇರುವರೆಂಬ ಸಮಾಚಾರ ತಂದನು.
"ನಮ್ಮ ಊರಿಗೆ ಬರುವರೇ?" ಮತ್ತೊಂದು ಪ್ರಶ್ನೆ ರಾಜನದು. ಅದನ್ನು ತಿಳಿಯಲು ಸೇವಕನು ಹೋಗಿ ಬಂದನು. "ರಾಜನ ಅಪ್ಪಣೆಯಾದರೆ ಬರುವರಂತೆ"
ಎಂದು ಸೇವಕನು ಬಿನ್ನಯಿಸಿದನು.
"ಅವರು ಯಾವ ಸೋಗು ಹಾಕುತ್ತಾರೆ? ಅವರು ಅಪೇಕ್ಷಿಸುವ ಪ್ರತಿಫಲ ಎಂಥದು? ನಮ್ಮ ರಾಜಧಾನಿಯಲ್ಲಿಯೇ ಅವರು ನೆಲಸಬೇಕಾದರೆ ನಾವು ಯಾವ ಸೌಕರ್ಯ ಒದಗಿಸಬೇಕು?"—ಮೊದಲಾದ ಸಂಗತಿಗಳನ್ನು ತಿಳಕೊಳ್ಳುವ ಸಲುವಾಗಿ ಸೇವಕನು ಹಲವು ಸಾರೆ ಓಡಾಡಬೇಕಾಯಿತು. ಆತನು ದಣಿದುಹೋದನೇ ಹೊರತು ರಾಜನಿಗೆ ಬೇಕಾದ ಸಂಪೂರ್ಣ ಮಾಹಿತಿ ತರಲಿಲ್ಲ.
ಪ್ರಧಾನಿಯನ್ನು ಕರೆಯಿಸಿ ರಾಜನು ಹೇಳಿದನು "ಹೊಳೆಯಾಚೆಗೆ ಕಾಣಿಸುವ ಗುಂಪು ಏತಕ್ಕಾಗಿ ನೆರೆದಿದೆ? ಅವರಾರು? ಅವರ ಉದ್ದೇಶವೇನು, ತಿಳಕೊಂಡು ಬರಬೇಕು."
"ಆಗಲಿ ದೊರೆಗಳೇ" ಎಂದು ವಂದಿಸಿ ಪ್ರಧಾನಿಯು ಹೊಳೆಯಾಚೆಗಿನ ತೀರಕ್ಕೆ ತೆರಳಿದನು. ಒಂದೆರಡು ಗಳಿಗೆಯಲ್ಲಿ ಬಂದು ತಾನು ತಂದ ಸಮಾಚಾರವನ್ನೆಲ್ಲ ರಾಜನಿಗೆ ಬಿನ್ನಯಿಸಿದನು "ಅವರು ಶ್ರೀಶೈಲಕಡೆಯವರು. ವೇಷಗಾರರು. ಹೆಣ್ಣು ಗಂಡು ಕೂಡಿ ಹನ್ನೊಂದು ಜನರಿದ್ದಾರೆ. ಈ ಊರಲ್ಲಿ ನಾಲ್ಕಾರು ದಿನವಿದ್ದು ಮುಂದಿನೂರಿಗೆ ಹೊರಡುವದರಲ್ಲಿದ್ದರು. ನಮ್ಮೂರಿಗೆ ಬರಲು ತಿಳಿಸಿದ್ದೇನೆ. ದಶಾವತಾರಗಳ ಸೋಗು ಹಾಕುವರಂತೆ. ನಾಲ್ಕು ಕೂರಿಗೆ ಹೊಲ, ಹನ್ನೆರಡು ಅಂಕಣದ ಮನೆ ಕೊಟ್ಟರೆ, ನಮ್ಮೂರವರಾಗಿಯೇ ಉಳಿಯುತ್ತೇವೆಂದು ಹೇಳಿದರು. ಅಪ್ಪಣೆಯಾದರೆ ಈಗಲೇ ಬಂದು ದೊರೆಗಳನ್ನು ಕಾಣುವರಂತೆ.ಪ್ರಧಾನಿಯು ಒದಗಿಸಿದ ಸಂಗತಿಗಳನ್ನು ಕೇಳಿಕೊಂಡ ಬಳಿಕ, ರಾಜನಿಗೆ ಹೆಚ್ಚು ತಿಳುಕೊಳ್ಳುವ ಅಗತ್ಯವೇ ಉಳಿಯಲಿಲ್ಲ. ಸೇವಕನನ್ನು ಕರೆದು ರಾಜನು ಹೇಳಿದನು -
“ನೋಡಿದೆಯಾ ? ನೀನು ಹತ್ತೆಂಟು ಸಾರೆ ಎಡತಾಕಿ ಮಾಹಿತಿ ತಂದರೂ ಅಪೂರ್ಣವಾಗಿಯೇ ಉಳಿಯಿತು. ಪ್ರಧಾನಿಯು ಒಂದೇ ಸಾರೆ ಹೋಗಿ ಬಂದರೆ, ಯಾವ ಸಂಗತಿಯನ್ನೂ ಉಳಿಸಿಕೊಂಡು ಬರಲಿಲ್ಲ. ಅದಕ್ಕಾಗಿಯೇ ಆತನ ಸಂಬಳ ಅಷ್ಟು, ನಿನ್ನ ಸಂಬಳ ಇಷ್ಟೇ.
ಮನೆ ಅಳಿಯ
ಅಳಿಯನಿಗೆ ಮನೆಯಳಿಯ ಮಾಡಿಕೊಂಡಿದ್ದರು; ಮಗಳಿಗೆ ಮನೆಯಾಗೇ ಇಟ್ಟುಕೊಂಡಿದ್ದರು. ಅಳಿಯ ದನಕರುಗಳನ್ನು ಕಾಯಬೇಕು. ಮನೆಯಲ್ಲಿ ತಂಗುಳಬಂಗುಳ ಉಣ್ಣಬೇಕು—ಈ ರೀತಿ ವ್ಯವಸ್ಥೆಮಾಡಿದ್ದರು. ಅಳಿಯನೆಂದರೆ ದನಕಾಯುವ ಹುಡುಗ ಅಂತ ನಿಷ್ಕಾಳಜಿ ಮಾಡುತ್ತಿದ್ದರು.
"ನನ್ನ ಹಣೇಬರಹದಾಗ ಇಷ್ಟೇ ಬರೆದಾದ. ಅದಕ್ಕಾಕ ಚಿಂತಿ ಮಾಡಬೇಕು" ಎಂದು ವಿಚಾರಮಾಡಿ ದಿನಾಲು ಕೆಲಸಮಾಡುತ್ತ ಇದ್ದನು. ಒಂದುದಿನ ಹೊಲದಾಗ ಎತ್ತುಬಿಟ್ಟಿದ್ದ. ಧಾರೆ ಮಳೆ ಸುರೀಲಿಕ್ಕ ಹತ್ತಿತು. ಆ ಸಮಯದಾಗ ನೀರಿನ ಬಿಂದಿಗೆಯೊಳಗಿನ ನೀರೆಲ್ಲ ಚೆಲ್ಲಿ ಅದರಲ್ಲಿ ಅಂಗಿ, ಧೋತರ ತುರುಕಿದನು. ತಾನು ಬರಿಯ ಚಡ್ಡಿಯಮೇಲೆ ನಿಂತನು. ಬಿಂದಿಗೆ ಬೋರಲು ಹಾಕಿದ. ಹಾಂಗೇ ತಾಸು ಗಟ್ಟಲೆ ನಿಂತನು. ಮಳೆ ಹೊಡೆದು ಹೊಡೆದು ಬಹಳ ಹೊತ್ತಿನ ಮೇಲೆ ನಿಂತು ಬಿಟ್ಟಿತು. ಛಕ್ಕನೆ ಬಿಸಿಲುಬಿತ್ತು. ಉಟ್ಟುಕೊಂಡು ತೊಟ್ಟುಕೊಂಡು ನಿಂತನು. ಅಲ್ಲಿಗೆ ಒಬ್ಬ ಗೋಸಾವಿ ಮೈತೋಯಿಸಿಕೊಂಡು ಬಂದನು. "ನಾನು ಇಷ್ಟು ತೋಯಿಸಿಕೊಂಡೀನು. ಈ ಮನುಷ್ಯ ಏನೂ ತೋಯಿಸಿಕೊಂಡಿಲ್ಲ. ಇದರಾಗೇನಿದೆ ಚಮತ್ಕಾರ" ಎಂದುಕೊಂಡನು. "ಯಾಕಪ್ಪ ನಿನ್ನ ಮೈಮ್ಯಾಗ ಮಳೆ ಬಿದ್ದಿಲ್ಲೇನು" ಎಂದು ಕೇಳಿದನು.
"ನಂದು ನನಗೇ ಗೊತ್ತು. ನಿಂದು ನಿನಗೇ ಗೊತ್ತು. ನನಗ ಇದರ ಅರ್ಥಹೇಳು ಅಂದರೆ, ನಿನ್ನ ಹಂತ್ಯಾಕಿದ್ದ ಮಂತ್ರ ತಂತ್ರ ಹೇಳಿದರ ನಾ ನನ್ನ ಹಿಕಮತಿ ಹೇಳತೀನಿ" ಎಂದು ನುಡಿದನು ಅಳಿಯ.
ತನ್ನ ಪರಿಸ್ಥಿತಿಯನ್ನೆಲ್ಲ ಅಳಿಯ ಹೇಳಿದನು. "ಹೊತ್ತರಳಿ ದನಕಾಯಲು ಅತ್ತೆ ಮಾವ ಕಳಿಸತಾರ. ಅತ್ತಿ ಮಾವ ಹೇಣತಿ ಯಾರೂ ಸೇರೂದಿಲ್ಲ. ಈ ಪರಿಸ್ಥಿತಿ ಹೋಗೂ ಸಲುವಾಗಿ ಒಂದು ಉಪಾಯ ಹೇಳು" ಎಂದು ಗೋಸಾವಿಗೆ ಕೇಳಿಕೊಂಡನು. ಗೋಸಾವಿ ಅಲ್ಲೇಬಿದ್ದ ಏಳು ಹರಳು ಆರಿಸಿಕೊಂಡನು.
"ಒಂದು ಹರಳು ಒಗೆದು ಅಲ್ಲೇ ಚಿಟಕಾಸಿ ಕೂಡು, ಅಂದರ ಅಲ್ಲೇ ನೆಲಕ್ಕೆ ಹತ್ತಂಡಿ ಆಗಿ ಚಿಟಕಾಸಿಕೊಂಡು ಬಿಡತಾದ. ಅತ್ತೆ ಮಾವ ಮಲಕೊಂಡ ಜಾಗಾದಿಂದ ಏಳಬಾರದು — ಎರಡು ಹರಳು ಒಗೆದರೆ — ಯಾರೂ ಅವರೀಗಿ ಎಬ್ಬಿಸಲಿಕ್ಕೆ ಸಾಧ್ಯವಿಲ್ಲ. ಹೀಂಗ ಏಳು ಹರಳು ಉಪಯೋಗಿಸುವುದರಾಗ ಅತ್ತಿ ಮಾವ ಹಾದೀ ಮ್ಯಾಲ ಬರತಾರೆ" ಎಂದು ಹೇಳಿ, ಅಳಿಯನ ಹಿಕಮತ್ತಿಯ ಬಗ್ಗೆ ಕೇಳುತ್ತಾನೆ.
"ಗುಂಡರಗಿಯೊಳಗೆ ಅರಿವೆ ತುರುಕಿ ಬಿಂದಿಗೆ ಬೋರಲ ಹಾಕಿದ್ದರಿಂದ ಮಳಿ ಹತ್ತಲಿಲ್ಲ."
ಅಳಿಯ ಮನೆಗೆ ಬಂದು ಬಂಕಿನಲ್ಲಿ ಮಲಗಿಕೊಂಡನು. ಬಾಗಿಲಲ್ಲಿ ಬಂದು ಅತ್ತೆ ಮಾವ ಮಲಗಿದಲ್ಲಿ ಮಲಗಲಿ ಎಂದು ಸೈ ಎಂದನು. ಬಾಗಿಲಿಗೆ ಬಂದು ಬಾಗಿಲು ತೆರೆಯಿರಿ ಅನ್ನುತ್ತಾನೆ. ಅವರು ನೆಲಕ್ಕೆ ಮೆತ್ತಿಕೊಂಡವರು ಮೇಲೆ ಏಳಲೊಲ್ಲರಾದರು. "ತೊರೆಯ ಆಚೆಗೆ ಜಾಣಿಹಾಳ, ಅವಳೀಗಿ ಕೇಳಿ ಬರಿ" ಎಂದು ಮಂದೀಗಿ ಕಳಿಸ್ತಾರ. ಜಾಣಿ ನಡುನೀರೊಳಗಿಂದ ಹಾಯ್ದು ಬರುವಾಗ ಇಂವ ನಿಂತಲ್ಲಿ — ನಿಂತು — ನೀರಾಗ ನಿಂತಕ್ಕಿ ನಿಂತಾಂಗೇ ಇರಲಿ ಎಂದು ಗಟ್ಟಿಯಾಗಿ ಹೇಳುತ್ತಲೇ ಹರಳ ಒಗೆಯುತ್ತಾನೆ.
ಜಾಣಿ ಇವನಿಗೆ ಅಂಗಲಾಚಿ ಬೇಡುತ್ತಾಳೆ — "ನನಗೆ ಬಿಡುಗಡೆ ಮಾಡಿದರೆ ನಿನಗ ಬೇಡಿದ್ದು ಕೊಡುತ್ತೀನಿ."
ನಡೆ ಅಂದಕೂಡಲೇ ನೀರೊಳಗಿಂದ ಜಾಣಿ ಪಾರಾಗಿ ಮುಂದೆ ಮುಂದೆ ಬಂದಳು. ಬಂದು ಅತ್ತೆ ಮಾವಂದಿರಿಗೆ ಬುದ್ಧಿ ಹೇಳಿದಳು "ನಿಮ್ಮ ಅಳಿಯನಿಗೆ ಈ ರೀತಿ ಕಾಡಬೇಡಿರಿ. ಇಲ್ಲ ಅಂದರೆ ನೀವು ನೆಲದ ಮ್ಯಾಗಿಂದ ಏಳಲಿಕ್ಕ ಸಾಧ್ಯವೇ ಇಲ್ಲ" ಎಂದು ಗಟ್ಟಿಯಾಗಿ ಹೇಳುತ್ತಾಳೆ.
"ನಾವು ಹಿಂಥಾ ಕೆಲಸ ಇನ್ನೆಂದೂ ಮಾಡೂದಿಲ್ಲ" ಎಂದು ಗಲ್ಲಗಲ್ಲ ಬಡಕೊಳ್ಳುತ್ತಾರೆ. ಏಳಬೇಕೆನ್ನುತ್ತಾರೆ, ಏಳುವದಾಗಲಿಲ್ಲ. ಆಗ ಅಳಿಯ "ನಡೆ" ಅಂದ ಕೂಡಲೇ ಗಪ್ಪನೆ ಎದ್ದು ಕುಳಿತರು.
ಅಂದಿನಿಂದ ಅಳಿಯದೇವರ ಸತ್ಕಾರ ನಡೆಯಲು ಆರಂಭವಾಯಿತು.
ನಾಲ್ಕು ಪ್ರಶ್ನೆಗಳಿಗೆ ಉತ್ತರ
ಒಬ್ಬ ರಾಜನಿದ್ದನು. ಅವನಿಗೆ ಜಾಣನಾದ ಮಂತ್ರಿಯಿದ್ದನು. ಮಂತ್ರಿಯ ಸಹಾಯದಿಂದ ರಾಜ್ಯವಾಳುತ್ತ ರಾಜನು ಸುಖದಿಂದ ಇದ್ದನು.
ರಾಜನು ಒಂದು ದಿವಸ ಮಂತ್ರಿಮಾನ್ಕರೊಡನೆ ತನ್ನೋಲಗದಲ್ಲಿ ಕುಳಿತಾಗ ನೆರೆಯ ರಾಜನ ಕಡೆಯಿಂದ ಒಬ್ಬ ದೂತನು ಬಂದು, ತಾನು ತಂದ ಪತ್ರವನ್ನು ಮಂತ್ರಿಯ ಕೈಗೆ ಕೊಟ್ಟನು. ಮಂತ್ರಿ ಅದನ್ನೋದಿ ರಾಜನಿಗೆ ಹೇಳಿದನು "ನೆರೆಯ ರಾಜನು ನಾಲ್ಕು ಪ್ರಶ್ನೆಗಳನ್ನು ಬರೆದು ಕಳಿಸಿದ್ದಾನೆ. ಆ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ಕೊಡಬೇಕು. ಇಲ್ಲವೆ ಯುದ್ಧಕ್ಕೆ ಸಿದ್ಧರಾಗಬೇಕು."
"ಯಾವುವು ಆ ನಾಲ್ಕು ಪ್ರಶ್ನೆಗಳು" ಎಂದು ರಾಜನು ಕೇಳಿದನು.
ಮಂತ್ರಿ ಹೇಳುತ್ತಾನೆ—"ಇವೇ ಆ ನಾಲ್ಕು ಪ್ರಶ್ನೆಗಳು. (೧) ಒಳ್ಳೆಯದರಲ್ಲಿ ಕೆಟ್ಟದು ಯಾವುದು? (೨) ಕೆಟ್ಟದರಲ್ಲಿ ಒಳ್ಳೆಯದು ಯಾವುದು? (೩) ಅಂಗಡಿಯೊಳಗಿನ ನಾಯಿ ಯಾವುದು ) (೪) ಸಿಂಹಾಸನ ಮೇಲಿನ ಕತ್ತೆಯಾವುದು?"
"ಈ ಪ್ರಶ್ನೆಗಳಿಗೆ ಈಗಲೇ ಉತ್ತರ ಕೇಳಲಾಗಿದೆಯೆ?
"ಅಹುದು. ಆದರೆ ನಾನಿದಕ್ಕೆ ಮೂರುತಿಂಗಳ ಅವಧಿ ಕೇಳುವೆನು, ಆ ನೆರೆಯ ರಾಜನಿಗೆ. ಅಷ್ಟರಲ್ಲಿ ಉತ್ತರ ಸಿದ್ಧಪಡಿಸೋಣ" ಎಂದು ಮಂತ್ರಿಯು ರಾಜನಿಗೆ ಹೇಳಿ, ಬಂದ ದೂತನ ಕೈಯಲ್ಲಿ ಪ್ರತ್ಯುತ್ತರ ಬರಕೊಟ್ಟನು. ಅದರಲ್ಲಿ ಆ ನಾಲ್ಕು ಪ್ರಶ್ನೆಗಳಿಗೆ ಉತ್ತರ ಒದಗಿಸಲು ಮೂರುತಿಂಗಳ ಅವಧಿ ಬೇಕೆಂದು ತಿಳಿಸಿದರು.
ಮಂತ್ರಿಯು ನಾಗರಿಕನ ವೇಷದಿಂದ ನೆರೆಯ ರಾಜನ ಪಟ್ಟಣಕ್ಕೆ ಹೋಗಿ ಅಲ್ಲಿಯೇ ನೆಲೆಸಿದನು. ಪಟ್ಟಣದ ಪ್ರತಿಷ್ಠಿತ ಜನರೊಡನೆ ಸ್ನೇಹ ಬೆಳೆಸಿದನು. ಸಕಲರಿಗೂ ಪರಿಚಿತವ್ಯಕ್ತಿಯಾದನು. ಅಲ್ಲದೆ ಅಲ್ಲಿಯ ಒಬ್ಬ ಕಲಾವತಿಂಯಾದ ಪಾತ್ರದವಳೊಡನೆ ಸಂಪರ್ಕವನ್ನಿರಿಸಿಕೊಂಡನು. ಅಲ್ಲಿಯ ಕೊತವಾಲನೊಡನೆ ವಿಶೇಷ ಬಳಕೆ. ಅವರ ಮನೆಗಳೂ ಹತ್ತಿರ ಹತ್ತಿರದಲ್ಲಿಯೇ ಇದ್ದವು. ತಿಂಗಳೊಪ್ಪತ್ತಿನಲ್ಲಿ ಅಲ್ಲಿಯ ಪರಿಚಿತರೆಲ್ಲರೂ ಸೇರಿ, ಆತನಿಗೊಂದು ಅನುರೂಪ ಕನ್ಶೆಯನ್ನು ಗೊತ್ತುಮಾಡಿ ಲಗ್ನವನ್ನೂ ಮಾಡಿದರು. ಅದರಿಂದ ಅವನು ಸುಖದಿಂದ ಬಾಳ್ವೆ ಮಾಡತೊಡಗಿದನು.
ನಾಗರಿಕನು ಸಾಯಂಕಾಲ ಮನೆಗೆ ಬರುವಾಗ ತನ್ನ ಕರವಸ್ತದಲ್ಲಿ ಕಲ್ಲಂಗಡಿ ಹಣ್ಣನ್ನು ಕಟ್ಟಿಕೊಂಡು ಮನೆಗೆ ತಂದನು. "ಇದೇನು ತಂದಿರಿ" ಎಂದು ಹೆಂಡತಿ ಕೇಳಿದಳು.
"ಇದು ಗೌಪ್ಯವಾಗಿರಬೇಕಾದ ಸಂಗತಿ. ಯಾರಮುಂದೆಂಯೂ ಹೇಳಬಾರದು. ಇದು ರಾಜನ ಮಗನ ತಲೆ. ಕೊಲೆಮಾಡಿಸಿದ್ದೇನೆ" ಎಂದು ಪಿಸುಮಾತಿನಲ್ಲಿ ಹೆಂಡತಿಗೆ ತಿಳಿಸಿದನು. ಆ ಬಳಿಕ ಕರವಸ್ತದಲ್ಲಿ ಕಟ್ಟಿದ ಗಂಟನ್ನು ಪೆಟ್ಟಿಗೆಯಲ್ಲಿಟ್ಟು ಕೀಲಿ ಹಾಕಿದನು.
ಯಾರ ಮುಂದೆಂಯೂ ಹೇಳಬಾರದೆಂದು ಗಂಡನು ಖಂಡಿತವಾಗಿ ಹೇಳಿದ್ದರೂ, ಆತನ ಹೆಂಡತಿಗೆ ಜೀವ ಕೇಳಲಾರದೆ, ನೆರೆಯಲ್ಲಿಯೇ ಇರುವ ಕೊತವಾಲನ ಮನೆಗೆ ಹೋದಾಗ ಆತನ ಹೆಂಡತಿಗೆ ಆ ಗೌಪ್ಯಸಂಗತಿಯನ್ನು ಸಹಜವಾಗಿ ಉಸುರಿದಳು, ಆ ಸಂಗತಿಯು ಕೊತವಾಲನಿಗೆ ಹೆಂಡತಿಯಿಂದ ತಿಳಿಯಲು ತಡವಾಗಲಿಲ್ಲ.
"ಸ್ನೇಹಿತ, ಜೀವದ ಗೆಳೆಯ ಆದರೇನಾಯಿತು? ರಾಜಕುಮಾರನ ಕೊಲೆಯ ಕೃತಿಯನ್ನು ದಕ್ಕಿಸಿಕೊಳ್ಳುವುದೇ?" ಎಂದು ಕೊತವಾಲನು ಆ ನಾಗರಿಕನನ್ನು ಕೈದು ಮಾಡಿ ಸೆರೆಮನೆಯಲ್ಲಿ ಇಡಿಸಿದನು. ಆ ನಾಗರಿಕನೊಡನೆ ಸಂಪರ್‍ಕವಿರಿಸಿಕೊಂಡ ಆ ಕಲಾವಂತಿ ಪಾತ್ರದವಳು ರಾಜನ ಆಸ್ಥಾನಕ್ಕೆ ಬಂದು ತನ್ನ ನೃತ್ಯದಿಂದ ಎಲ್ಲರನ್ನು ಹರ್ಷಗೊಳಿಸಿದನು. "ಏನು ಪ್ರತಿಫಲ" ಎಂದು ರಾಜನು ಆಕೆಗೆ ಕೇಳಿದನು. ಆಕೆ—"ನನಗೆ ಯಾವ ಪ್ರತಿಫಲವೂ ಬೇಡ. ಬಂಧಿಸಿಟ್ಟ ಆ ನಾಗರಿಕನನ್ನು ಬಿಟ್ಟುಕೊಟ್ಟರೆ ಸಾಕು. ನನಗದೇ ಪ್ರತಿಫಲ?" ಎಂದು ಮರು ನುಡಿಯಲು ರಾಜನು, ಆಕೆಯ ಬೇಡಿಕೆಯಂತೆ ಆ ನಾಗರಿಕನನ್ನು ಬ೦ಧಮುಕ್ತಗೊಳಿಸಿದನು.
ಸೆರೆಮನೆಯಲ್ಲಿದ್ದವನು ನಾಗರಿಕವೇಷದ ಮಂತ್ರಿಯಲ್ಲವೆ? ಅತನು ತನ್ನ ರಾಜನಿಗೆ ಪತ್ರಕಳಿಸಿ—"ನಾಲ್ಕೂ ಪ್ರಶ್ನೆಗಳಿಗೆ ಉತ್ತರ ಸಿದ್ಧವಾಗಿವೆ. ತೀವ್ರ ಬನ್ನಿರಿ" ಎಂದು ತಿಳಿಸಿದನು.
ರಾಜನು ನೇರವಾಗಿ ನೆರೆಯ ರಾಜನ ಆಸ್ಥಾನಕ್ಕೆ ಹೋಗಿ—"ನಿಮ್ಮ ಉತ್ತರಗಳು ಸಿದ್ಧವಾಗಿವೆ. ಸೆರೆಮನೆಯಲ್ಲಿ ಬಂಧಿತನಾಗಿದ್ದ ಆ ನಾಗರಿಕನನ್ನು ಕರೆಯಿಸಿರಿ" ಎಂದು ಹೇಳಿದನು.ನೆರೆಯ ರಾಜನು ಕೊತವಾಲನ ಮುಖಾಂತರ ಆ ನಾಗರಿಕನನ್ನು ಕರೆಯಿಸಿದನು. ಆತನೇ ನಮ್ಮ ಮಂತ್ರಿಯೆಂದೂ ಅವನೇ ನಾಲ್ಕೂ ಪ್ರಶ್ನೆಗಳಿಗೆ ಈಗ ಉತ್ತರ ಹೇಳುವನೆಂದೂ ರಾಜನು ತಿಳಿಸಿದನು.
ಮಂತ್ರಿಯು ನೆರೆಯರಾಜನಿಗೆ ಆತನ ನಾಲ್ಕು ಪ್ರಶ್ನೆಗಳಿಗೆ ಕ್ರಮವಾಗಿ ಉತ್ತರ ಹೇಳಿದನು (೧) ಒಳ್ಳೆಯದರಲ್ಲಿ ಕೆಟ್ಟದಾವುದು? ಈ ಪ್ರಶ್ನೆಗೆ ಉತ್ತರವೆಂದರೆ ನನ್ನ ಹೆಂಡತಿ ಗೌಪ್ಯಸಂಗತಿಯೆಂದು ತಿಳಿಸಿದ್ದರೂ ಆಕೆ ಕೊತವಾಲನ ಮನೆಯಲ್ಲಿ ಅದನ್ನು ಬಹಿರಂಗಪಡಿಸಿದಳು.
(೨) ಕೆಟ್ಟದರಲ್ಲಿ ಒಳ್ಳೆಯದಾವುದು? ಈ ಪ್ರಶ್ನೆಗೆ ಉತ್ತರ ಆ ಪಾತ್ರದವಳು. ಆಕೆ ಸೂಳೆಯಾಗಿದ್ದರೂ ಋಣಾನುಬಂಧವನ್ನು ನೆನೆದು, ನನ್ನನ್ನು ಬಂಧಮುಕ್ತಗೊಳಿಸಿದಳು.
(೩) ಅಂಗಡಿಯೊಳಗಿನ ನಾಯಿ ಯಾವುದೆಂದರೆ—ಈ ಕೊತವಾಲ. ಈತನಿಗೆ ನಾನು ಪ್ರಾಣಸ್ನೇಹಿತನಾಗಿದ್ದರೂ ಸಂಪೂರ್ಣ ವಿಚಾರಿಸದೆ ನನ್ನನ್ನು ಸೆರೆಯಲ್ಲಿರಿಸಿದನು.
(೪) ಸಿಂಹಾಸನ ಮೇಲಿನ ಕತ್ತೆ ಯಾವುದೆಂದು ಹೇಳಲಿ? ತಾವೇ ದೊರೆಗಳೇ. ರಾಜನ ಮಗ ಕೊಲೆಯೆಂದಕೂಡಲೇ ಕೊಲೆಗಾರನೆಂದು ಶಿಕ್ಷೆ ವಿಧಿಸಿಯೇ ಬಿಟ್ಟಿರಿ. ಯಾವ ರಾಜನ ಮಗನ ಕೊಲೆಯಾದದ್ದು—ಎಂಬುದನ್ನೇನೂ ನೀವು ವಿಚಾರಿಸಲಿಲ್ಲ.
ನೆರೆಯ ರಾಜನು ಉತ್ತರಗಳನ್ನು ಕೇಳಿಕೊಂಡು ಮಂತ್ರಿಯ ಜಾಣತನಕ್ಕೆ ತಲೆದೂಗಿ, ಆತನ ರಾಜನನ್ನು ಧನ್ಯವಾದಗಳೊಡನೆ ಬೀಳ್ಕೊಟ್ಟನು.
ಬಟ್ಟಲ್ಯಾತಕ್ಕ ಕೆನಿ ತಿನ್ಸಕ್ಕ
ಗಂಡಹೆಂಡಿರು ಮಾತಾಡಿಕೊಂಡು ಒಂದು ಹಿಂಡುವ ಎಮ್ಮೆಯನ್ನು ಕೊಂಡುತಂದರು. ಹಾಲಿಗೆ ಹೆಪ್ಪು ಹಾಕಿ, ಬೆಣ್ಣೆ ತುಪ್ಪ ಮಾಡಿ ಮಾರಿಕೊಂಡರೆ ಕೈಯಲ್ಲಿ ಹಣವೂ ಆಗುವದೆಂದು ಗಂಡನು ಹೆಂಡತಿಗೆ ಸೂಚನೆಮಾಡಿದನು. ಅದಕ್ಕೆ ಹೆಂಡತಿ ಸೈ ಎಂದಳು.
ಕೆಂಡದ ಮೇಲಿಟ್ಟು ಹಾಲು ಕಾಸಿದರೆ, ಅಂಗೈಗಡುತರ ಕೆನೆ ಹೊರಡುವದು. ಆದರೆ ಅದನ್ನು ನೋಡಿದರೆ ಹೆಂಡತಿಯ ಜೀವ ಅದನ್ನು ತಿನ್ನುವುದಕ್ಕೆ ಎಳಸುವದು. ಅಲ್ಪಸ್ವಲ್ಪ ತಿಂದರೆ ಸಾಕಾಗುವಂಥವಲ್ಲ ಕೆನೆ. ಅದನ್ನು ಇಡಿಯಾಗಿ ತಿಂದು, ಹಾಲಿಗೆ ಕೆನೆಯೇ ಹೊರಡುವದಿಲ್ಲವೆಂದು ಗಂಡನಿಗೆ ಹೇಳುವಳು. ಎಮ್ಮೆ ಹೆಡಸಿನದಲ್ಲ, ಬರಿ ಹಾಲಿನದು—ಎಂದು ತಪ್ಪ ಎಮ್ಮೆಯಮೇಲೆ ಹಾಕುವಳು.
ಗಂಡನು, ತಮಗೆ ಎಮ್ಮೆ ಮಾರಿದವರಲ್ಲಿ ಹೋಗಿ ಕೇಳಿದ—"ಹೆಡಸು ಹಯನಿಗೆ ಮಿಗಿಲಾದ ಎಮ್ಮೆಯೆಂದು ನಮಗೆ ಭರವಸೆ ಹೇಳಿದಿರಿ. ಈಗ ಕೆನೆಯೇ ಹೊರಡುವದಿಲ್ಲವೆಂದು ನನ್ನ ಹೆಂಡತಿ ಹೇಳುತ್ತಿದ್ದಾಳೆ. ನೀವು ಸುಳ್ಳು ಹೇಳಿ ಎಮ್ಮೆ ಕೊಡಬಾರದಿತ್ತು ನೆರೆಯವರಿಗೆ?"
ಆ ರೈತನ ಹೆಂಡತಿ ಹಯನು ಮಾಡಬಲ್ಲಳು. ಆ ಕೆಲಸದಲ್ಲಿ ಬಲ್ಲಿದಳು. ಮಾರಿದ ಎಮ್ಮೆಯ ಹಯನವನ್ನು ಸಹ ಈ ಮುಂಚೆ ಮಾಡಿದ್ದಳು. ಆಕೆ ಹೇಳಿದಳು—"ತಮ್ಮಾ ನಿನ್ನ ಹೆಂಡತಿ ಹೇಳುವುದು ಸುಳ್ಳು. ಹಾಲು ಚನ್ನಾಗಿ ಕಾಸಿ ಅಂಗೈಗಡುತರ ಕೆನೆ ತೆಗೆದು ತೋರಿಸಲೇನು ನಿನಗೆ? ನಿಮ್ಮಲ್ಲಿಯೂ ಕೆನೆ ಹೊರಡುತ್ತಿರಬಹುದು. ಆದರೆ ಅದನ್ನು ನಿನ್ನ ಹೆಂಡತಿ ಅದೆಂತು ಇಲ್ಲದಾಗಿಸುತ್ತಾಳೋ ನೋಡು?"
"ಹೇಗೆ ನೋಡಲಿ?"
"ನಾನು ಎರಡು ಗೊಂಬೆ ಮಾಡಿಕೊಡುತ್ತೇನೆ. ಅವುಗಳಲ್ಲಿ ಒಂದನ್ನು ಹಾಲ ಗಡಿಗೆಯಿಡುವಲ್ಲಿ, ಇನ್ನೊಂದು ಪಾತ್ರೆಪಡಗೆ ಇಡುವಲ್ಲಿ ಗಟ್ಟಿಯಾಗಿ ನೆಡು. ಅದರಿಂದ ತಾನೇ ಹೊರಬೀಳುತ್ತದೆ ಇದ್ದ ಸಂಗತಿ" ಎಂದಳು ಆ ರೈತನ ಹೆಂಡತಿ.ಅವೆರಡು ಗೊಂಬೆಗಳನ್ನು ತಂದು ಗಂಡನು ಸರಿಯಾದ ಸ್ಥಳಗಳಲ್ಲಿ ಗಟ್ಟಿಯಾಗಿ ನಿಲ್ಲಿಸಿದನು. ಹೆಂಡತಿ ಎಂದಿನಂತೆ ಹಾಲಗಡಿಗೆಯನ್ನು ತೆಗೆದುಕೊಂಡು ಕೆನೆ ತಿನ್ನಬೇಕೆಂದು, ಪಾತ್ರೆ ತೆಗೆದುಕೊಳ್ಳಲು ಕೈ ಚಾಚಿದಾಗ ಅಲ್ಲಿ ನಿಲ್ಲಿಸಿದ ಗೊಂಬೆ - "ಬಟ್ಟಲ್ಯಾತಕ್ಕ" ಎಂದು ಕೇಳಿತು. ಅತ್ತ ಕಡೆಗೆ ಕಿವಿಕೊಡದೆ ಹಾಲಗಡಿಗೆಯ ಬಳಿಗೆ ಬಂದಾಗ - "ಹಾಲು ಕೆನಿ ತಿನ್ಷಕ್ಕೆ' ಎಂದಿತು ಇನ್ನೊಂದು ಗೊಂಬೆ. ಅಷ್ಟಕ್ಕೆ ಬಿಡಲಿಲ್ಲ ಆ ಗೊಂಬೆಗಳು.
ಒಂದು ಕೇಳುವುದು - "ಬಟ್ಟಲ್ಯಾತಕ್ಕ?"
ಇನ್ನೊಂದು ಕೇಳುವುದು - "ಕೆನಿತಿನ್ಸಕ್ಕ."
ಈ ಕ್ರಮ ನಡೆದೇ ನಡೆಯಲು ಹೆಂಡತಿ ಹುಚ್ಚು ಹಿಡಿದಂತೆ ನಿಂತುಬಿಟ್ಟಳು. ಅದೇ ಹೊತ್ತಿಗೆ ಅಕಸ್ಮಾತ್ ಗಂಡ ಬರಲು ಆಕೆ ಗೊಂಬೆಗಳ ಸಲುವಾಗಿ ದೂರು ಹೇಳಿದಳು - "ನೋಡಿರಿ. ಈ ಗೊಂಬೆಗಳು ಸುಳ್ಳುಸುಳ್ಳೇ ಕೂಗಾಟ ಎಬ್ಬಿಸಿವೆ. ಬಟ್ಟಲ್ಯಾತಕ್ಕ ಅನ್ನುತ್ತದೆ ಒಂದು. ಕೆನಿತಿನ್ಸಕ್ಕ ಅನ್ನುತ್ತದೆ ಇನ್ನೊಂದು, ಅವುಗಳನ್ನು ಕಿತ್ತೊಗೆಯಿರಿ."
"ಇರಲಿ ಬಿಡು. ಅವೇನು ಮಾಡುತ್ತವೆ ನಿನಗೆ?"
ತರುವಾಯ ಹಾಲು ಕಾಸಿದರೆ ಕೆನೆ ಬರತೊಡಗಿತು. ಕಡಿದರೆ ಮುದ್ದೆ ಮುದ್ದೆ ಬೆಣ್ಣೆ; ಕಾಸಿದರೆ ತಂಬಿಗೆ ತಂಬಿಗೆ ತುಪ್ಪ. ಅದನ್ನು ಕಂಡು ಗಂಡನು ಹಿಗ್ಗಿ-
"ಹೆಂಡತಿ ಜೆನ್ನಾಗಿ ಮಾಡುವಳು ಹಯನ?" ಎಂದು ಹೊಗಳತೊಡಗಿದನು.
ಹಗಮಲ್ಲಿ ದಿಗಮಲ್ಲಿ
ಅಜ್ಜಿಗೆ ಮೊಮ್ಮಗಳೊಬ್ಬಳ ಹೊರತು ಇನ್ನಾರೂ ಇರಲಿಲ್ಲ. ಮೊಮ್ಮಗಳು ದೊಡ್ಡವಳಾದಳೆಂದು ತಕ್ಕವರನಿಗೆ ಕೊಟ್ಟು ಲಗ್ನಮಾಡಿದ್ದಳು. ಒಳ್ಳೆಯದಿನ ನೋಡಿ ಮೊಮ್ಮಗಳನ್ನು ಕರೆಯಲಿಕ್ಕೆ ಆಕೆಯ ಗಂಡನು ಬಂದನು. ಅಜ್ಜಿ ಬಲು ಹಿಗ್ಗಿನಿಂದ ಮೊಮ್ಮಗಳನ್ನು ಎರಡುದಿವಸ ಇಟ್ಟುಕೊಂಡು, ಹೋಳಿಗೆ ಹುಗ್ಗಿ ಮಾಡಿ ಉಣ್ಣಿಸಿದಳು. ಮೂರನೇದಿವಸ ಮೊಮ್ಮಗಳಿಗೆ ತನ್ನ ಗಂಡನ ಕೂಡ ಹೊರಡುವುದಕ್ಕೆ ಸಿದ್ಧತೆ ಮಾಡಿಕೊಟ್ಟಳು. ಮೊಮ್ಮಗಳನ್ನು ಆಗಲುವಾಗ ಅದೆಷ್ಟು ತಳಮಳಿಸಿದರೂ, ಆಕೆಯು ಗಂಡನ ಮನೆಗೆ ಹೋಗುವ ಸಡಗರವನ್ನು ನೋಡಿ ಮುದುಕಿಗೆ ಹಿಡಿಸಲಾರದಷ್ಟು ಹಿಗ್ಗಾಯಿತು—"ಹೋಗಿ ಬಾ ನನ್ನ ಹಗಮಲ್ಲೀ, ದಿಗಮಲ್ಲೀ; ಸುಖದಿಂದ ಹೋಗಿ ಬಾ?" ಎಂದು ಸೂಸುವ ಹಿಗ್ಗಿನಲ್ಲಿ ನುಡಿದು ಬೀಳ್ಕೊಟ್ಟಳು.
ಎತ್ತಿನ ಮೇಲೆ ಹೆಂಡತಿಯನ್ನು ಕುಳ್ಳಿರಿಸಿ ಗಂಡನು ಅದನ್ನು ಬೆಂಬಳಿಸಿ ತನ್ನೂರ ಹಾದಿ ಹಿಡಿದನು. ಒಂದೆರಡು ಹರದಾರಿ ದಾರಿ ಸಾಗಿದ ಬಳಿಕ ಗಂಡನು ಕೇಳಿದನು ಹೆಂಡತಿಗೆ "ನಿಮ್ಮ ಅಜ್ಜಿ ಹಾಗೇಕೆಂದಳು ಹಗಮಲ್ಲಿ ದಿಗಮಲ್ಲಿ ಎಂದು? ಏನದರ ಅರ್ಥ?" "ಅದು ಆಕೆ ಪ್ರೀತಿಯಿಂದ ಆಡಿದ ಮಾತು. ಅದರರ್ಥ ಬರುವದಿಲ್ಲ. ಬೇಕೆಂದರೆ ಮಾಡಿಯೇ ತೋರಿಸುತ್ತೇನೆ" ಎಂದಳು ಹೆಂಡತಿ.
ಮುಂದಿನೂರ ದಾಟುತ್ತಲೆ ಗಂಡನು ಒಂದು ಗಿಡದ ಕೆಳಗೆ ಎತ್ತು ಬಿಟ್ಟು ಕುಳಿತುಕೊಂಡನು. ಹೆಂಡತಿ ಅಲ್ಲಿಂದ ಊರಮುಂದಿನ ಹಳ್ಳದ ಕಡೆಗೆ ಸಾಗಿದಳು. ಹಳ್ಳದ ಬದಿಹಿಡಿದು ಬರುತ್ತಿರುವ ನಾಲ್ವರನ್ನು ಕಂಡು, ಅವರು ಒಂದು ಕೂಸಿನ ಅಂತ್ಯಕ್ರಿಯೆ ಮಾಡಿಬಂದರೆಂದು ತಿಳಕೊಂಡು ಗೋರಿ ಮರಡಿಗೆ ನಡೆದಳು. ಗೋರಿಯನ್ನಗಿದು ಕೂಸಿನ ಶವವನ್ನೆತ್ತಿ ಅರಿವೆಯಲ್ಲಿ ಸುತ್ತಿಕೊಂಡು, ಊರಲ್ಲಿ ಹೊಕ್ಕು ಭಿಕ್ಷುಕಳಂತೆ ಮನೆಮನೆಯಲ್ಲಿ ಭಿಕ್ಷೆ ಬೇಡತೊಡಗಿದಳು.
ಒಂದು ದೊಡ್ಡ ಮನೆಯ ಮುಂದೆ ನಿಂತು, ಭಿಕ್ಷೆ ಹಾಕಿರೆಂದು ಕೀಸರಿಡುವಂತೆ ಕೂಗಹತ್ತಲು ಮನೆಯವನು ಬೇಸರಗೊಂಡು ಬಂದವನೇ ಆಕೆಯನ್ನು ನುಗಿಸಿದನು. ಅಷ್ಟೇ ನೆವವಾಯಿತು. ಭಿಕ್ಷುಕಿ ಒತ್ತಟ್ಟಿಗೆ, ಆಕೆಯ ಕೈಯೊಳಗಿನ ಕೂಸು ಒತ್ತಟ್ಟಿಗೆ ಬೀಳಲು, ಆತನೇ ಆಕೆಯನ್ನ ಹಿಡಿದೆತ್ತಿ ಆಕೆಯ ಕೂಸನ್ನು ಆಕೆಯ ಕೈಗೆ ಕೊಟ್ಟನು. ಕೂಸು ಪೆಟ್ಟು ಬಡಿದು ಸತ್ತಿತೆಂದು ಬೋರಾಡಿ ಅಳತೊಡಗಲು ಮನೆಯವನು ಹೆದರಿಕೆಯಿಂದ ಆಕೆಯ ಕೈಯಲ್ಲಿ ಮುಚ್ಚಿ ನೂರು ರೂಪಾಯಿಗಳನ್ನು ಇಟ್ಟನು. ಆಕೆ ಮೆಲ್ಲನೆ ಅಲ್ಲಿಂದ ಕಾಲ್ತೆಗೆದು ಗಂಡನು ಕುಳಿತಲ್ಲಿಗೆ ಹೋಗಿ ಆತನಿಗೆ ಆ ನೂರು ರೂಪಾಯಿಗಳನ್ನು ಎಣಿಸಿಕೊಡುತ್ತ ಹೇಳಿದಳು—"ಇದೇ ಹಗಮಲ್ಲಿತನ. ಇನ್ನು ದಿಗಮಲ್ಲಿತನವನ್ನು ತೋರಿಸುವೆ."
ಅದೇ ಊರಿನ ಆಚೆಯ ಓಣೆಯಲ್ಲಿ ಒಬ್ಬ ನಿಪುತ್ರಿಕ ಶ್ರೀಮಂತನು ಸತ್ತಿದ್ದನು. ಆತನ ಮೂವರು ಹೆಂಡರು ಬಡಬಡಕೊಂಡು ಅಳುತ್ತಿದ್ದರು. ಆ ಸಂದರ್ಭವನ್ನು ಲಕ್ಷ್ಯಿಸಿ, ಆ ಹೆಣ್ಣು ಮಗಳು ಎದೆಎದೆ ಬಡಕೊಂಡು, ಕೈ ಹಿಡಿದವನು ಅಗಲಿ ಹೋದನೆಂದು ಹಾಡಿಹಾಡಿಕೊಂಡು ಅಳತೊಡಗಿದಳು. ನೆರೆದವರಿಗೆಲ್ಲ ಅನಿಸಿತು - ಈಕೆಯೂ ಒಬ್ಬ ಹೆಂಡತಿಯಿರಬೇಕು ಶ್ರೀಮಂತನಿಗೆ. ಮಕ್ಕಳ ಸಲುವಾಗಿ ಒಟ್ಟಿಗೆ ನಾಲ್ಕು ಜನ ಹೆಂಡಿರನ್ನು ಮಾಡಿಕೊಂಡಿದ್ದನೆಂದು ಲೆಕ್ಕ ಹಾಕಿದರು.
ಅಂತ್ಯವಿಧಿ ಮುಗಿಯಿತು.
ಶ್ರೀಮಂತನ ಆಸ್ತಿಯನ್ನೆಲ್ಲ ಆತನ ನಾಲ್ವರು ಹೆಂಡರಿಗೆ ಹಂಚಿಕೊಟ್ಟರು ಸಾಮಾಜಿಕರು. ಆತನಿಗೆ ಮಕ್ಕಳೇ ಇಲ್ಲವೆಂದಾಗ ಆತನ ಆಸ್ತಿಗೆ ಹೆಂಡಂದಿರೇ ಹಕ್ಕು ದಾರರಲ್ಲವೇ?
ತನ್ನ ಪಾಲಿಗೆ ಬಂದ ದ್ರವ್ಯವನ್ನೆಲ್ಲ ಗಂಟುಕಟ್ಟಿದಳು. ಆ ಮೇಲೆ ಅದನ್ನು ಹೊತ್ತುಕೊಂಡು ಗಂಡನು ಇಳಿದುಕೊಂಡ ಸ್ಥಳಕ್ಕೆ ಹೋದಳು.
"ಇದೇನು ತಂದೆ" ಎಂದು ಕೇಳಿದನು ಗಂಡ.
"ನೋಡಿಕೋ" ಎಂದು ನುಡಿದು ಹೆಂಡತಿಯು ಬೆಳ್ಳಿ ಬಂಗಾರ, ಮುತ್ತು ರತ್ನ, ರೂಪಾಯಿ ಎಲ್ಲವನ್ನು ತೋರಿಸಿದಳು.
"ಇದನ್ನೆಲ್ಲ ಹೇಗೆ ದೊರಕಿಸಿದೆ" ಎಂದು ಗಂಡನು ಕೇಳಿದನು.
"ಅದರ ಕಥೆಯನ್ನೆಲ್ಲ ಹಿಂದಿನಿಂದ ಹೇಳುವೆ. ಈಗ, ಇದಕ್ಕೇ ದಿಗಮಲ್ಲಿತನವೆನ್ನುವರೆಂದು ಹೇಳಿದರೆ ಸಾಕು" ಎಂದಳು.
ಮರುದಿನ ನಸುಕಿನಲ್ಲಿ ಎದ್ದು ಗಂಡ-ಹೆಂಡಿರಿಬ್ಬರು ತಮ್ಮೂರ ಹಾದಿ ಹಿಡಿದರು.
ಆಳುಮಗ ಇಕ್ಯಾ
ಕೋಮಟಿಗನೊಬ್ಬನಿದ್ದನು. ಅವನ ಆಳುಮಗನ ಹೆಸರು ಇಕ್ಯಾ. "ತುಪ್ಪ ಕೊಂಡುಕೊಂಡು ಬಾ" ಎಂದು ಕೋಮಟಿಗ ಹೇಳಿದರೆ, ಇಕ್ಯಾ ತುಪ್ಪ ಕೊಂಡು ತರುವಾಗ ಲೆಕ್ಕ ಹಾಕತೊಡಗಿದನು—"ಈ ಉಳಿದ ನಾಲ್ಕು ರೂಪಾಯಿಕೊಟ್ಟು ಕೋಳಿ ಕೊಂಡರೆ ಕೆಲವು ದಿನಗಳಲ್ಲಿ ಕೋಳಿಯದೊಂದು ದೊಡ್ಡ ಗೂಡೇ ಆಗುವದು. ಅವುಗಳನ್ನೆಲ್ಲ ಮಾರಿ ಕುದುರೆ ತರಬೇಕು." ಹೀಗೆ ಶೇಖಮಹಮ್ಮದನ ವಿಚಾರ ಮಾಡುವಷ್ಟರಲ್ಲಿ ತುಪ್ಪದ ಗಡಿಗೆ ಕೆಳಗೆ ಬಿದ್ದು ಒಡೆದುಹೋಯಿತು. ಅದಕ್ಕಾಗಿ ಕೋಮಟಿಗ ಆತನನ್ನು ಕೆಲಸದಿಂದ ತೆಗೆದು ಹಾಕಿದನು.
ಇಕ್ಯಾ ಬೇರೊಬ್ಬ ಕೋಮಟಿಗನಲ್ಲಿ ದುಡಿಯಲು ನಿಂತನು. ಅಂಗಡಿಯಲ್ಲಿ ಕುಳಿತು ಎಣ್ಣೆ ಉಪ್ಪು ನಗದಿ ರೊಕ್ಕ ತಂದವರಿಗೆ ಮಾತ್ರ ಕೊಟ್ಟನು. "ಇಷ್ಟೇ ವ್ಯಾಪಾರವಾಯಿತೇನೋ ಇಕ್ಯಾ" ಎಂದರೆ "ನಗದೀ ವ್ಯಾಪಾರ ಇಷ್ಟಾಗಿದೆ" ಎಂದು ಮರುನುಡಿದನು.
"ಕೆಲವರಿಗೆ ಉದ್ರಿನೂ ಕೊಡಬೇಕು" ಎಂದು ಕೋಮಟಿಗ ಹೇಳಿದ್ದರಿಂದ, ಮರುದಿನ ಬಂದವರಿಗೆ ಹೋದವರಿಗೆ ಉದ್ರಿಕೊಟ್ಟು ಅಂಗಡಿಯೊಳಗಿನ ಜೀನಸನ್ನೆಲ್ಲ ಆಗುಮಾಡಿಬಿಟ್ಟನು. ಅದಕ್ಕಾಗಿ ಕೋಮಟಿಗನು ಅ೦ಗಡಿಂಯನ್ನೇ ಮುಚ್ಚಿದನು.
"ಇಕ್ಯಾ, ಈ ಹುಡುಗರಿಗೆ ಹೊರಕಡೆಗೆ ಕರಕೊಂಡು ಹೋಗಿಬಾ? ಎಂದರೆ ಅವರನ್ನು ಬಯಲಲ್ಲಿ ಅಡ್ಡಾಡಿಸಿಕೊಂಡು ಮನೆಗೆ ಬರುವನು. "ಕೂಡಿಸಿಕೊಂಡು ಬಾ" ಅಂದಾಗ ಮಾತ್ರ ಹುಡುಗರಿಗೆಲ್ಲ ಕೂಡಿಸಿಕೊಂಡು ಬರುವನು. "ಕುದುರೆ ನೀರಡಿಸಿದಂತಿದೆ. ನೀರು ತೋರಿಸಿಕೊಂಡುಬಾ" ಎಂದು ಹೇಳಿದರೆ, ಕುದುರೆಯನ್ನೊಯ್ದು ದಂಡೆಯ ಮೇಲೆ ನಿಲ್ಲಿಸಿಕೊಂಡು ತರುವನು. "ಅಲ್ಲೋ ಹುಚ್ಚಾ ಕುದುರೆಗೆ ನೀರು ಕುಡಿಸಿಕೊಂಡು ಬಾ" ಅಂದಾಗ, ಹಾಗೇ ಆಗಲೆಂದು ಹೋಗಿ ಕುದುರೆಗೆ ನೀರು ಕುಡಿಸಿಕೊಂಡು ಬರುವನು.
ಕೋಮಟಿಗನು ಮಾವನ ಮನೆಗೆ ಹೊರಟನು. ಗಾರಿಗೆ, ಕೋಡಬಳೆ, ಪುಟ್ಟ ಗೋಳಿ ಎಲ್ಲ ಸಜ್ಜು ಮಾಡಿ ಕೊಟ್ಟಿದ್ದರು. ಬೇಗನೆ ನಸುಕಿನಲ್ಲೆದ್ದು ಮೈತೊಳಕೊಂಡರು. ಹಡಪ ತುಂಬಿ, ಕುದುರೆಯ ಮೇಲೆ ಹೇರಿದರು. ಕೋಮಟಿಗನು ಐದೂ ಬೆರಳಿಗೆ ಐದು ಉಂಗುರ ಹಾಕಿದನು. ಅವನು ಕೈ ಬೀಸುವಾಗ ಒಂದು ಉಂಗುರ ಬಿತ್ತು ಕೆಳಗೆ. ಇಕ್ಯಾ ಆ ಉಂಗುರವನ್ನು ಮಣ್ಣಿನಿಂದ ಮುಚ್ಚಿಟ್ಟನು. “ಏನೋ ಇಕ್ಯಾ ಮುಚ್ಚಿಟ್ಟದ್ದು” ಎಂದು ಕೇಳಿದರೆ, “ಏನೋ ಕೆಂಪು ಕಾಣಿಸಿತು. ಮುಚ್ಚಿಬಿಟ್ಟೆ” ಎಂದನು. “ಹಾದಿಯಲ್ಲಿ ಏನಾದರೂ ಬಿದ್ದರೆ ಅದನ್ನು ತೆಗೆದುಕೊಂಡು ಬರಬೇಕು” ಎಂದು ಕೋಮಟಿಗನು ಅವನಿಗೆ ಎಚ್ಚರಿಕೆಕೊಟ್ಟನು.
ಆ ಬಳಿಕ ಹಾದಿಯಲ್ಲಿ ಬಿದ್ದಿದ್ದನ್ನೆಲ್ಲ ಎತ್ತಿ ಹಡಪದಲ್ಲಿ ತುಂಬಿದನು. ನುಣ್ಣಗಿನ ಕಲ್ಲು ಹರಳುಗಳನ್ನೆಲ್ಲ ಹಡಪದಲ್ಲಿ ಹಾಕಿಟ್ಟನು.
“ಬಹಳ ದಿನಗಳಾದ ಬಳಿಕ ಮಾವನ ಮನೆಗೆ ಬಂದಿರುವಿರಿ. ಒಮ್ಮೆಲೆ ಮಾವನ ಮನೆಗೆ ಹೋಗಬೇಡಿರಿ. ನಾ ಹೇಳಿದಂತೆ ಈ ಗುಡಿಯಲ್ಲಿ ಕುಳಿತುಕೊಳ್ಳಿರಿ. ನಿಮ್ಮ ಸೂಟುಬೂಟು ನನಗೆ ಕೊಡಿರಿ. ನಾ ಹೋಗಿ ನೀವು ಬಂದ ಸಮಾಚಾರ ಹೇಳುತ್ತೇನೆ. ಊದಿಸುತ್ತ ಬಾರಿಸುತ್ತ ಬಂದು, ಅಳಿಯನನ್ನು ಕರೆದೊಯ್ದು ಮನೆ ಹೊಗಿಸಿ ಕೊಳ್ಳಲಿ” ಎಂದು ಇಕ್ಯಾ ಯುಕ್ತಿ ಹೇಳಿದನು.
ಮಾಲಕನ ಸೂಟುಬೂಟು ತಾನು ಹಾಕಿಕೊಂಡು, ತನ್ನ ಬಟ್ಟೆಗಳನ್ನು ಮಾಲಕನಿಗೆ ಕೊಟ್ಟು ಕೋಮಟಿಗನ ಮಾವನ ಮನೆಗೆ ಹೋಗಿ ಅಳಿಯನ ಸಮಾಚಾರ ಹೇಳಿದನು. ತಾನು ಅಳಿಯನ ಗೆಳೆಯನೆಂದು ತಿಳಿಸಿದನು -
“ನಿಮ್ಮ ಅಳಿಯನಿಗೆ ಹುಚ್ಚು ಹಿಡಿದಿದೆ. ಹನುಮಂತದೇವರ ಗುಡಿಯ ಕಟ್ಟೆಯ ಮೇಲೆ ಕುಳಿತಿದ್ದಾನೆ.” ಎಂಬ ಸಮಾಚಾರ ಕೇಳಿ, ಅತ್ತಮಾವಂದಿರು ಚಿಂತಿಸುತ್ತ ಬಂದು ನೋಡಿದರೆ - ಅಳಿಯನು ಹರಿದ ಹಾಗೂ ಮಾಸಿದ ಬಟ್ಟೆ ಹಾಕಿಕೊಂಡಿದ್ದಾನೆ. ಅವನನ್ನು ಒತ್ತಾಯಮಾಡಿ ಮನೆಗೆ ಕರಕೊಂಡು ಹೋದರು.
ಇಕ್ಯಾ ಅಡಿಗೆ ಮನೆಗೆ ಹೋಗಿ ಹೇಳಿದನು -
“ನಿಮ್ಮ ಅಳಿಯ ನವಣಕ್ಕಿಯ ಬೋನ, ಮೂರುವರ್ಷದ ಹುಣಿಸೆ ಹಣ್ಣಿನ ಸಾರು ಮಾತ್ರ ಉಣ್ಣುತ್ತಾನೆ. ಮತ್ತೇನೂ ಉಣ್ಣುವುದಿಲ್ಲ.”
“ಈಗಲಾದರೂ ನನ್ನ ಬಟ್ಟೆ ಕೊಡೋ ಇಕ್ಯಾ” ಎಂದು ಕೋಮಟಿಗ ಕೇಳಿದರೆ “ನಾಳೆ ಮುಂಜಾನೆ ಹೊತ್ತರಳಿ ಕೊಡತೀನಿ. ಎಂದಾರೆ ಬಟ್ಟೆ ಕಂಡಿದ್ಯೋ ಇಲ್ಲೋ ?” ಎಂದನು ಇಕ್ಯಾ.
“ಬಯಲುಕಡೆಗೆ ಹೋಗಬೇಕು ನಡೆಯೋ ಇಕ್ಕಾ” ಎಂದು ರಾತ್ರಿಯಲ್ಲಿ ಕೋಮಟಿಗ ಕೇಳಿದನು."ನಾನೇನೂ ಬರೂದಿಲ್ಲಪ್ಪ" ಎಂದನು ಇಕ್ಕಾ.
ಮಲಗುವ ಕೋಣೆಯಲ್ಲಿಯೇ ಕೋಮುಟಿಗನು ಹೊಲಸು ಮಾಡಬೇಕಾಯಿತು. ಆದ್ದರಿಂದ ನಸುಕಿನಲ್ಲಿಯೇ ಎದ್ದು ಹಳ್ಳಕ್ಕೆ ಹೊರಟನು.
"ನಿಮ್ಮಳಿಯ ಹೇಳಿಕೇಳಿ ಹುಚ್ಚ, ಈಗ ಮನೆಬಿಟ್ಟು ಹೊಂಟಾನ" ಎಂದು ಇಕ್ಯಾ ಹೇಳಿದ್ದರಿಂದ ಭಾವಂದಿರು ಬಂದು — "ಮಾವ ಎಲ್ಲಿ ಹೊರಟಿ, ಯಾಕೆ ಹೊರಟಿ" ಎಂದು ತರುಬಿ ಮಾತಾಡಿಸುವಷ್ಟರಲ್ಲಿ ಅರಿವೆ ಕೆಳಗೆ ಬಿದ್ದು ಎಲ್ಲರ ಮುಂದೆ ಅವಮಾನವಾಯಿತು.
ಹಳ್ಳದಲ್ಲಿ ಬಟ್ಟೆ ಒಗೆದರು. ಕೋಮಟಿಗ ಹನುಮಂತ ದೇವರ ಗುಡಿಯಲ್ಲಿ ಕುಳಿತನು. ಹೆಂಡತಿ ಆರತಿ ತೆಗೆದುಕೊಂಡು ಗುಡಿಗೆ ಬಂದಳು. "ದೇವರ ಮುಂದೆ ತೆಂಗು ಒಡೆಯದೆ, ನಿನ್ನ ಗಂಡನ ತಲೆಗೇ ತೆಂಗು ಒಡೆ" ಎಂದು ಇಕ್ಯಾ ಸೂಚನೆ ಕೊಡುತ್ತಾನೆ. ಅದರಂತೆ ತೆಂಗು ಒಡೆಯುವಷ್ಟರಲ್ಲಿ ಕೋಮಟಿಗ ಕವಳುಶತ್ತಿ ಸತ್ತು ಬಿದ್ದನು.
ಇಕ್ಯಾ ಕೋಮಟಿಗನ ಹೆಂಡತಿಗೆ ಲಗ್ನವಾದನಂತೆ.
ಯಾರಿಗೆ ಕೊಡಬೇಕು ಕನ್ಯೆ
ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು ದಾಳಿಂಬರ ಬೀಜ; ಆಕೆಯನ್ನು ಯಾರು ಬೇಡವೆಂದಾರು? ಆಕೆಗಿದ್ದ ಮೂವರೂ ಸೋದರ ಮಾವಂದಿರು ಕೇಳುತ್ತಿದ್ದರು—ಆಕೆ ನನಗೆ ಬೇಕು, ನನಗೆ ಬೇಕು ಎಂದು.
ಅಕ್ಕನಿಗೆ ಇದ್ದವಳು ಒಬ್ಬಳೇ ಮಗಳು. ಕೇಳುವವರು ಮೂವರು ತಮ್ಮಂದಿರು. ಯಾರಿಗೆ ಕೊಡಬೇಕು?
ಎಲ್ಲರೂ ಒಳ್ಳೆಯವರೇ ಆಗಿದ್ದರು; ಚಲುವರೂ ಆಗಿದ್ದರು. ಒಬ್ಬನಿಗೆ ಕೊಟ್ಟರೆ ಇಬ್ಬರು ಸಿಟ್ಟಾಗುತ್ತಾರೆ. ಏನು ಮಾಡುವುದು ಯುಕ್ತಿ?
ಮಾವರೂ ತಮ್ಮಂದಿರನ್ನು ಕರೆದು ಅಕ್ಕನು, ತಲೆಗೆ ನೂರುನೂರು ರೂಪಾಯಿ ಕೊಟ್ಟಳು. "ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿರಿ. ಯಾರು ತೀವ್ರವಾಗಿ ಹೆಚ್ಚು ಗಳಿಸಿಕೊಂಡು ಬರುವಿರೋ ಅವರಿಗೆ ನನ್ನ ಮಗಳನ್ನು ಕೊಡುವೆನು" ಎಂದು ಹೇಳಿದಳು.
ಆ ಮಾತಿಗೆ ಮೂವರೂ ಒಪ್ಪಿ ದೇಶಾಂತರಕ್ಕೆ ನಡೆದರು. ಕೆಲವು ದಿನಗಳಲ್ಲಿ ಅವರು ಮೈಸೂರಿನಂಥ ಪಟ್ಟಣಕ್ಕೆ ಹೋದರು. ಊರತುಂಬ ದೊಡ್ಡದೊಡ್ಡ ಅಂಗಡಿಗಳು! ಪ್ರತಿಯೊಂದು ಅಂಗಡಿಯಲ್ಲಿ ತರತರದ ಬದುಕು! ನೋಡುತ್ತ ನೋಡುತ್ತ ಒಂದು ಅಂಗಡಿಯನ್ನು ಪ್ರವೇಶಿಸಿದರು. ಅಲ್ಲೊಂದು ಕನ್ನಡಿಯಿತ್ತು. ಅದರಲ್ಲಿ ನೋಡಿದರೆ ಜಗತ್ತೆಲ್ಲ ಕಣ್ಣಮುಂದೆ ಬರುತ್ತಿತ್ತು. ಹಿರಿಯಣ್ಣನು ತನ್ನ ಬಳಿಯಲ್ಲಿದ್ದ ನೂರು ರೂಪಾಯಿಕೊಟ್ಟು ಅದನ್ನು ಕೊಂಡುಕೊಂಡನು.
ಇನ್ನೊಂದು ಅಂಗಡಿಂಯಲ್ಲಿ ವಿಚಿತ್ರವಾದ ತೊಟ್ಟೆಲು ಕಂಡರು. ಅದರಲ್ಲಿ ಕುಳಿತು ಮನಸ್ಸು ಹರಿದಲ್ಲಿ ಹೋಗಲು ಬರುವಂತಿತ್ತು. ನಡುವಿನಣ್ಣನು ಅದನ್ನು ನೂರು ರೂಪಾಯಿಗಳಿಗೆ ಖರೀದಿಮಾಡಿದನು. ಮುಂದಿನ ಪೇಟೆಯಲ್ಲಿ ಗೊಂಬೆಗಳ ಅಂಗಡಿಯಿತ್ತು. ಅಲ್ಲಿ ಸತ್ತವರನ್ನು ಬದುಕಿಸುವ ಗೊಂಬೆಗಳಿದ್ದವು. ಅವುಗಳನ್ನು ಸಣ್ಣವನು ಕೊಂಡುಕೊಂಡನು.
ಅಷ್ಟಾಗುವುದಕ್ಕೆ ಊಟದ ಹೊತ್ತಾಗಿತ್ತು. ಮೂವರೂ ಹಸಿದಿದ್ದರು. ಅಕ್ಕ ಕಟ್ಟಿದ ಬುತ್ತಿಯಂತೂ ಇತ್ತು ಅದನ್ನು ತೆಗೆದುಕೊಂಡು ಊರಹೊರಗೆ ಹಳ್ಳದ ಕಡೆಗೆ ಊಟಕ್ಕೆಂದು ನಡೆದರು. ಹಳ್ಳದಲ್ಲಿ ಕೈಕಾಲು ತೊಳೆದುಕೊಂಡು ಬಂದು ಬುತ್ತಿ ಬಿಚ್ಚಿದರು. ಇನ್ನೇನು, ಊಟಕ್ಕೆ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ, ತಮ್ಮೂರ ಕಡೆಯ ಸಂಗತಿಯನ್ನು ತಿಳಿದುಕೊಳ್ಳಬೇಕೆಂದು ಕನ್ನಡಿಯಲ್ಲಿ ನೋಡಿದರು. ದುರ್ದೈವ ಎದುರಿಗೇ ಬಂದಂತಾಯ್ತು ತಾವು ಮದುವೆಯಾಗಬೇಕೆಂದಿರುವ ಕನ್ನೆ ತೀರಿಕೊಂಡಿತ್ತು. ಗೋರಿಮರಡಿಗೆ ಒಯ್ಯುವ ಸಿದ್ಧತೆ ನಡೆದಿತ್ತು. ಬಿಚ್ಚಿದ ಬುತ್ತಿ ಕಟ್ಟಿದರು. ಇನ್ನೆಲ್ಲಿಯ ಊಟವೆಂದು ಕೂಡಲೇ ತೊಟ್ಟಿಲಲ್ಲಿ ಕುಳಿತರು. ಹಾಂ ಅನ್ನುವಷ್ಟರಲ್ಲಿ ಊರಿಗೆ ಬಂದು ತಲುಪಿದರು. ಸಣ್ಣ ತಮ್ಮನು ತನ್ನ ಬಳಿಯಲ್ಲಿರುವ ಗೊಂಬೆಯಿಂದ ಸತ್ತವಳನ್ನು ಎಬ್ಬಿಸಿದನು.
ಪಾದರಕ್ಷೆಯ ಪುಣ್ಯ
ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಮಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ, ಮೊದಲಿನಂತೆಯೇ ಅವರನ್ನು ಸತ್ಕರಿಸಲು ನಿಶ್ಚಯಿಸಿದರು. ತಮ್ಮ ಮನೆಯೊಳಗಿನ ಒಂದು ಕೋಣೆಯಲ್ಲಿ ಗುರುಗಳು ಇಳಿದುಕೊಳ್ಳಲು ಏರ್ಪಡಿಸಿದರು. ಆದರೆ ಗುರುಗಳಿಗೆ ಬಿನ್ನಹಮಾಡಿ ದಕ್ಷಿಣೆಕೊಡಮಾಡುವುದು ಏತರಿಂದ — ಎಂದು ಆ ದಂಪತಿಗಳು ಯೋಚಿಸತೊಡಗಿದರು. ಅವರಿಗೊಂದು ಯುಕ್ತಿ ಹೊಳೆಯಿತು — "ಗುರುಗಳಿಗೆ ಪ್ರತ್ಯೇಕವಾದ ಒಂದು ಜೊತೆ ಚಮ್ಮಳಿಗೆಗಳಿವೆ. ಹೇಗಾದರೂ ಅವುಗಳನ್ನು ಅವರು ಉಪಯೋಗಿಸುವದಿಲ್ಲ. ಚೇಲದಲ್ಲಿ ಬಯತಿರಿಸಿರುತ್ತಾರೆ. ಅವುಗಳನ್ನು ಅವರಿಗೆ ಗೊತ್ತಾಗದಂತೆ ಒಯ್ದ ಮಾರಿ ಬಂದರಾಯಿತು. ತಕ್ಕಷ್ಟು ಹಣ ಬರುತ್ತದೆ. ಅದನ್ನೇ ಖರ್ಚು ಮಾಡಿ, ಗುರುಗಳಿಗೆ ಬಿನ್ನಹಮಾಡಿಸಿ ಮೇಲೆ ದಕ್ಷಿಣೆ ಕೊಡಬಹುದು.
ಗಂಟಿನಲ್ಲಿದ್ದ ಆ ಚಮ್ಮಳಿಗೆಗಳನ್ನು ಗುರುಗಳಿಗೂ ಅವರ ಸೇವಕನಿಗೂ ಗೊತ್ತಾಗದಂತೆ ಎತ್ತಿತಂದು ಕೊಟ್ಟವಳು ಹೆಂಡತಿ. ಅವುಗಳನ್ನು ಪೇಟೆಗೊಯ್ದು ಮಾರಿಕೊಂಡು ಮೂವತ್ತು ರೂಪಾಯಿ ತಂದವನು ಗಂಡ. ಆ ಬಳಿಕ ಗೋದಿ, ಅಕ್ಕಿ, ಬೇಳೆ, ಬೆಲ್ಲ, ತುಪ್ಪ, ಎಣ್ಣೆ ಎಣ್ಣಿ ಮೊದಲಾದವುಗಳನ್ನು ಕೊಂಡುತಂದರು. ಗೊತ್ತು ಮಾಡಿದ ದಿವಸ ಹೂರಣಕ್ಕೆ ಹಾಕಿ ಹೋಳಿಗೆ ಮಾಡಿದರು. ತುಪ್ಪವಂತೂ ಬೆಣ್ಣೆ ಕಾಸಿದ್ದಿತ್ತು.
ಗುರುಗಳ ಸ್ನಾನ, ಪೂಜೆ ಆದ ಬಳಿಕ ಆ ದಂಪತಿಗಳು ಪಾದಪೂಜೆಗೆ ಕುಳಿತರು. ಅದು ಮುಗಿದ ಮೇಲೆ ಕರಣಪ್ರಸಾದ ತೆಗೆದುಕೊಂಡು ಗುರುಗಳಿಗೆ ಉಣಬಡಿಸುವ ಏರ್ಪಾಡು ನಡೆಸಿದರು. ಹೋಳಿಗೆ — ತುಪ್ಪದ ಊಟದಿಂದ ಗುರುಗಳು ಸಂತೃಪ್ತರಾದರು. ಶಿಷ್ಯ ಮಕ್ಕಳು ಗುರುಗಳ ಕಾಲಿಗೆರಗಿ ಇಪ್ಪತ್ತುರೂಪಾಯಿ ಗುರುದಕ್ಷಿಣೆಯಿಟ್ಟರು. ಗುರುಗಳಿಗೆ ಅತಿಶಯ ಆನಂದವಾಗಿ ಅವರ ಔದಾರ್ಯವನ್ನು ಹೊಗಳ ತೊಡಗಿದರು.
ಗಂಡಹೆಂಡಿರು ಕೈಮುಗಿದು - "ಅದೆಲ್ಲ ತಮ್ಮ ಪಾದರಕ್ಷೆಯ ಪುಣ್ಯ" ಎಂದು ವಿನಯಿಸಿದರು.
ಸೇವಕನನ್ನು ಕರೆದು ಗುರುಗಳು ಮುಂದಿನ ಪಂಯಣದ ಸಿದ್ಧ ತೆ ನಡೆಸಿದರು. ಗಂಡಹೆಂಡಿರನ್ನು ಕರೆದು ಅವರ ಭಕ್ತಿಯನ್ನೂ ಔದಾರ್ಯವನ್ನೂ ಕೊಂಡಾಡಿದರು. ದಂಪತಿಗಳಿಬ್ಬರೂ ಗುರುಗಳ ಕಾಲಿಗೆರಗಿ - "ತಮ್ಮ ಪಾದರಕ್ಷೆಯ ಪುಣ್ಯ' ಎನ್ನುತ್ತ ಆಶೀರ್ವಾದ ಪಡೆದರು.
ಮುಂದಿನೂರು ತಲುಪಿ ಬೀಡು ಬಿಟ್ಟಾಗ ಗುರುಗಳು ತಮ್ಮ ಚಮ್ಮಳಿಗೆಗಳನ್ನು ಹುಡುಕಾಡಿದರೆ ಸಿಗಲೇ ಇಲ್ಲ. ಸೇವಕನನ್ನು ಕೇಳಿದರು - "ಎಲ್ಲಿ ಮಾಯವಾದವು?"
ಗುರುಗಳಿಗಂತೂ ಏನೂ ತಿಳಿಯಲಿಲ್ಲ. ಕೊನೆಗೆ ಸೇವಕನೇ ಅನುಮಾನಿಸುತ್ತ ನುಡಿದನು "ಹಿಂದಿನೂರಿನ ಶಿಷ್ಯಮಕ್ಕಳು ಮಾತುಮಾತಿಗೆ "ತಮ್ಮ ಪಾದರಕ್ಷೆಯ ಪುಣ್ಯ'ವೆನ್ನುತ್ತಿದ್ದರು. ಅವರೇ ಪುಣ್ಯಕಟ್ಟಿಕೊಂಡಂತೆ ಕಾಣುತ್ತದೆ."
"ಗುರುದಕ್ಷಿಣೆ ಈ ಬಗೆಯಾಗಿ ಸಿಕ್ಕಿತೆನ್ನೋಣ - ಗುರುವಿನಿಂದ ದಕ್ಷಿಣೆ" ಎಂದರು ಗುರುಗಳು.
ಯುಕ್ತಿಗೊಂದು ಪ್ರತಿಯಕ್ತಿ
ಅತ್ತೆಯನ್ನು ಮಾತನಾಡಿಸಿ ಬರಬೇಕೆಂದು ಅಳಿಯನು ಅತ್ತೆಯೂರಿಗೆ ಹೋದನು. ಆಕೆ ಹೆಣ್ಣು ಕೊಟ್ಟ ಅತ್ತೆ ಮಾತ್ರ ಆಗಿರದೆ, ಸೋದರತ್ತೆಯೂ ಆಗಿದ್ದಳು. ಚಿಕ್ಕಂದಿನಿಂದಲೂ ಅಳಿಯನಿಗೆ ತಿನ್ನಿಸಿ ಉಣ್ಣಿಸಿದವಳಾಗಿದ್ದಳು. ಆದರೂ ಆಕೆಯ ಕೈಬಿಗಿತ; ಜೀನಳೇ ಆಗಿದ್ದಳು.
ಅಳಿಯಬಂದನೆಂದು ಅಕ್ಕರೆಯಿಂದ ಅತ್ತೆಯು, ಆತನ ಊಟಕ್ಕೆ ಪಾಯಸ ಮಾಡಿದಳು. ತುಪ್ಪದ ಪಾತ್ರೆ ನೋಡಿದರೆ ಅದರಲ್ಲಿ ತುಪ್ಪ ಹೆರತಿತ್ತು. ಅದನ್ನೆಲ್ಲ ಕರಗಿಸಿ, ಪಾತ್ರೆ ಬಗ್ಗಿಸಿ ಸುರುವಿದರೆ ಪಾತ್ರೆಯೊಳಗಿನ ತುಪ್ಪವೆಲ್ಲ ಗಂಗಾಳದಲ್ಲಿ ಬಿದ್ದು ಬಿಡುವುದಲ್ಲ! ಪಾತ್ರೆಯಿಂದ ತುಪ್ಪವನ್ನು ಸುರುವಿದಂತೆಯೂ ಆಗಿರಬೇಕು; ತುಪ್ಪವೂ ಕಡಿಮೆಬಿದ್ದಿರಬೇಕು - ಎನ್ನುವುದಕ್ಕೆ ಒಂದು ಯುಕ್ತಿ ತೆಗೆದಳು. ಏನಂದರೆ - ಸಣ್ಣಗಿನ ಸೂಜಿಯನ್ನು ಕಾಸಿ, ಹೆತ್ತ ತುಪ್ಪಿನಲ್ಲಿ ಚುಚ್ಚಿ ಪಾತ್ರೆ ಬಗ್ಗಿಸಿದರೆ, ಸೂಜಿಯಿಂದ ಕರಗಿದಷ್ಟೇ ಸಣ್ಣಗಿನ ಧಾರೆಯಾಗಿ ತಾಬಾಣದಲ್ಲಿ ಸುರಿಯುವದು. ಅದಕ್ಕಾಗಿ ಸೂಜಿಯನ್ನು ಒಲೆಯ ಬಿಸಿಬೂದಿಂಯಲ್ಲಿ ತುರುಕಿದಳು.
"ಒಳಗೆ ನೋಡುತ್ತಿರಪ್ಪ ಬೆಕ್ಕುಗಿಕ್ಕು. ನಾನೊಂದು ಕೊಡ ಸಿಹಿ ನೀರು ಎಳೆದುಕೊಂಡು ಬರುವೆನು" ಎಂದು ಹೇಳಿ ಅತ್ತೆ ಕೊಡ ತೆಗೆದುಕೊಂಡು ಬಾವಿಗೆ ಹೋದಳು.
ಚಿಕ್ಕಂದಿನಿಂದಲೂ ಪರಿಚಯದ ಮನೆಯೇ ಆಗಿದ್ದರಿಂದ, ಅತ್ತೆ ತನಗಾಗಿ ಏನೇನು ಅಡಿಗೆ ಮಾಡಿದ್ದಾಳೆ, ನೋಡಬೇಕೆಂದು ಅಡಿಗೆ ಮನೆಂಹನ್ನು ಹೊಕ್ಕು ನೋಡಿದರೆ ಪಾಯಸ ಸಿದ್ಧವಾಗಿದೆ. ತುಪ್ಪದ ಪಾತ್ರೆ ಹೆತ್ತ ತುಪ್ಪದಿಂದ ತುಂಬಿ ಒಲೆಯಿಂದ ತುಸು ದೂರ ಇದೆ. ಒಲೆಯಲ್ಲಿ ಒತ್ತಿದ ಸೂಜಿಯ ಅರ್ಧಭಾಗವು ಹೊರಗೆ ಕಾಣುತ್ತಿತ್ತು. ಅದನ್ನೆಲ್ಲ ಕಂಡು ಅಳಿಯನಿಗೆ ಸಂಶಯವೇ ಬಂತು. ಅತ್ತೆ ಸಾಕಷ್ಟು ಜಿಪುಣೆಯೆನ್ನುವುದನ್ನೂ ಆತನು ಎಂದೋ ಅರಿತಿದ್ದನು. ತುಪ್ಪದ ಪಾತ್ರೆಯನ್ನು ಒಂದರೆಕ್ಷಣ ಕಿಚ್ಚದ ಮೇಲಿಟ್ಟು ಕೆಳಭಾಗವು ಕರಗುವಂತೆ ಮಾಡಿ, ಅದನ್ನು ಮತ್ತೆ ಮೊದಲಿನ ಸ್ಥಳದಲ್ಲಿಯೇ ಇರಿಸಿ ಹೊರಗೆ ಬಂದು ಕುಳಿತನು. ಅತ್ತೆ ಬಾವಿಯಿಂದ ನೀರು ತಂದ ಬಳಿಕ ಅಳಿಯನನ್ನು ಊಟಕ್ಕೆ ಎಬ್ಬಿಸಿದಳು. ಮಣೆ ಹಾಕಿ ತಾಬಾಣ ಮುಂದಿಟ್ಟು ಪಾಯಸವನ್ನು ಎಡೆಬಡಿಸಿ, ತುಪ್ಪದ ಪಾತ್ರೆಯಲ್ಲಿ ಕಾದಸೂಜಿಚುಚ್ಚಿ ತಂದು ಪಾತ್ರೆಯನ್ನು ಬಗ್ಗಿಸಿ ಧಾರಾಳವಾಗಿ ನೀಡಿದಂತೆ ಮಾಡುವಷ್ಟರಲ್ಲಿ ಇಡಿಯ ತುಪ್ಪವು ಅಳಿಯನ ತಾಬಾಣದಲ್ಲಿ ಜಿಗಿದು ಬಿಟ್ಟಿತು. ಅದನ್ನು ಕಂಡು ಅತ್ತೆಯ ಹೊಟ್ಟೆ ಕಳವಳಿಸಿತು. ಇದ್ದಷ್ಟು ತುಪ್ಪವೆಲ್ಲ ಅಳಿಂತುನ ಪಾಲಾಗಿಬಿಟ್ಟರೆ, ನನ್ನ ಊಟಕ್ಕೇನು ಗತಿ — ಎಂದು ತಳಮಳಿಸತೊಡಗಿದಳು. ಆದರೆ ಆಕೆಗೆ ಕೂಡಲೇ ಒಂದು ಯುಕ್ತಿ ಹೊಳೆಯಿತು. ಏನಂದರೆ — "ಏನಪ್ಪ ಅಳಿಯ ದೇವರು, ನನ್ನ ಕಣ್ಣ ಮುಂದೆ ಬೆಳೆದ ಕೂಸು ನೀನು! ಒಂದೇ ತಾಬಾಣದಲ್ಲಿ ಕೂಡಿಕೊಂಡು ಉಂಡಿದ್ದೇವೆ ನಾವು. ನೀನು ದೊಡ್ಡವನಾಗಿರಬಹುದು. ಆದರೆ ನನಗೆ ನೀನು ಚಿಕ್ಕವನೇ. ಈಗಲೂ ಕೂಡಿಕೊಂಡೇ ಉಂಡರೆ ನನಗೆ ಸಮಾಧಾನ" ಎಂದವಳೇ ಅಳಿಂಹನ ಮುಂದೆ ಸರಿದು ಕುಳಿತು, ಆತನ ತಾಜಾಣದಲ್ಲಿಯೇ ಉಣ್ಣ ತೊಡಗಿದಳು.
ಅಳಿಯನಿಗೂ ಅದೇನು ಹೊಸ ಸಂಗತಿಯಲ್ಲ "ಆಗಲಿ' ಎಂದು ತಾಬಾಣವನ್ನು ಮುಂದಕ್ಕೆ ಸರಿಸಿದನು.
ಕರಗಿದ ತುಪ್ಪ ತನ್ನ ಕಡೆಗೆ ಹರಿದು ಬರುವಂತೆ ಅಭಿನಯ ಮಾಡಬೇಕಾದರೆ, ಅದಕ್ಕೆ ತಕ್ಕ ಭಾಷಣ ಬೇಡವೇ ? ಅದನ್ನು ಆರಂಭಿಸಿದಳು ಅತ್ತೆ.
"ಅಳಿಯನೆಂದರೆ ಅಳಿಯ ನೀನು. ಅತ್ತೆಗೊಂದು ಸೀರೆ ಅಂದೆಯಾ, ಒಂದು ಕುಬಸ ಅಂದೆಯಾ? ಹಬ್ಬಕ್ಕೆ ಕರೆದೊಯ್ದೋಯಾ, ಹುಣ್ಣಿವೆಗೆ ಹೇಳಿಕಳಿಸಿದೆಯಾ? ಹಣ್ಣು ಆಡಾಗ ಕೊಟ್ಟು ಕಳಿಸಿದೆಂಯಾ, ಹಯನು ಆದಾಗ ಹೊರಿಸಿಕಳಿಸಿದೆಯಾ? ಹೆಂಡತಿಯ ಮೈಮೇಲೆ ವಸ್ತು ಅಂದೆಯಾ, ಒಡವೆ ಆಂದೆಯಾ?"
ಬಾಯಿಂದ ಒಂದೊಂದು ವಾಕ್ಯಹೊರಬಿದ್ದಂತೆ, ತಾಬಾಣದ ಪಾಯಸದೊಳಗೆ ಬೆರಳಾಡಿಸಿ, ಕಾಲುವೆಮಾಡಿ ತುಪ್ಪ ಹರಿದುಬರುವಂತೆ ಮಾಡಿಕೊಳ್ಳತೊಡಗಿದಳು.
ಅಳಿಂಹನಿಗೂ ಆಕೆಂಯ ಹೊಲಬು ತಿಳಿಯಿತು. ಅವನೂ ಆಕೆಯ ಮಾತಿಗೆ ಉತ್ತರ ಕೊಡುತ್ತ ತನ್ನತ್ತ ತುಪ್ಪ ಉಳಿದುಕೊಳ್ಳುವಂತೆ ಎತ್ತುಗಡೆ ನಡೆಸಿದನು.
"ಅತ್ತೇ, ನೀನು ಹೀಗೆ ಮಾತಾಡುವದನ್ನು ಕಂಡು ನನ್ನ ಹೊಟ್ಟೆಂಥಲ್ಲಿ ಹೀಗೆ ಕಿವುಚಿದಂತಾಗುತ್ತದೆ, ನೋಡವ್ವ" ಎನ್ನುತ್ತ ಇಡಿಯ ಹುಗ್ಗಿಯಲ್ಲಿ ಆ ತುಪ್ಪವೆಲ್ಲ ಕಲೆಯುವಂತೆ ಕಿವುಚತೊಡಗಿದನು. ಅದೆಲ್ಲ ಮುಗಿದ ಬಳಿಕ ಅಳಿಯ ಹೇಳಿದನು — "ಅತ್ತೇ, ನಿನ್ನ ಕಡೆಯ ಪಾಯಸವನ್ನು ನೀನುಣ್ಣು; ನನ್ನ ಕಡೆಗಿದ್ದ ಪಾಯಸವನ್ನು ನಾನುಣ್ಣುತ್ತೇನೆ".
ಹೀಗೆ ಯುಕ್ತಿ-ಪ್ರತಿಯುಕ್ತಿಗಳಿಂದ ಅಳಿಯ-ಅತ್ತೆಯರು ಒಂದೇ ತಾಬಾಣದಲ್ಲಿ ಕೂಡಿಕೊಂಡು ಉಂಡು ತೃಪ್ತಿಪಟ್ಟರು.ತುಂಟ ಬೀಗ
ದೊಡ್ಡವಾಡದಲ್ಲಿ ಇಬ್ಬರು ಗಂಡಹೆಂಡತಿಯಿದ್ದರು. ಗಂಡನು ಬರಿ ಜೀನನಾಗಿದ್ದರೆ ಹೆಂಡತಿ ಜೀನಹಂಕಳಾಗಿದ್ದಳು. ಅವರು ಎರಡೂ ಹೊತ್ತು ಎಂದೂ ಉಣ್ಣುತ್ತಿದ್ದಿಲ್ಲ, ಒಪ್ಪೊತ್ತೇ ಉಣ್ಣುಕ್ತಿದ್ದರು. ರೊಟ್ಟಿಯೊಡನೆ ಕಾಯಿಪಲ್ಲೆ ತಿಂದರೆ ರೊಟ್ಟಿಯ ಸ್ಥಾರಸ್ಯವೇ ಕೆಡುತ್ತದೆಂದು ಅವರು ತಿಳಿದಿದ್ದರು.
ಒಂದು ದಿನ ಗಂಡನು ಹೆಂಡತಿಗೆ ಹೇಳಿದನು - "ಯಾಕೋ ಹೋಳಿಗೆ ಉಣ್ಣುವಂತಾಗಿದೆ ಮನಸ್ಸು?"
"ಆಗಲಿ. ಆದರೆ ಇಂದು ಬೇಡ ನಾಳೆಗೆ ಮಾಡೋಣ?" ಎಂದಳು ಹೆಂಡತಿ.
ಮರುದಿನ ಮುಂಜಾನೆ ಏಳುತ್ತಲೆ ಗಂಡನು ಗಳಿಗೆಯಲ್ಲಿ ಕೈಹಾಕಿ ಒಂದು ಸೇರಿನಷ್ಟು ಗೋದಿ ತೆಗೆದುಕೊಟ್ಟನು. ಕಡಲೆಬೇಳೆ ಮನೆಯಲ್ಲಿದ್ದವು. ತುಪ್ಪ ಸಹ ಮನೆಯದಿತ್ತು. ಅಂಗಡಿಯಿಂದ ಉಪ್ಪು, ಎಣ್ಣೆ ಬೆಲ್ಲ ತರಬೇಕಾಗುತ್ತದೆ. ಉದ್ದರಿ ತಂದರಾಯಿತು. ಅಂಗಡಿಯವನು ಕೊಟ್ಟಾಗ ತೆಗೆದುಕೊಳ್ಳುತ್ತಾನೆ. ರಿಣ ಆಗುತ್ತದೆ, ಆಗಲಿ.
ಅಡಿಗೆ ಸಿದ್ಧಪಡಿಸಲು ಹೆಂಡತಿಗೆ ಹೇಳಿ ಗಂಡನು, ಜಳಕ ಮಾಡಿ ಬರುವೆನೆಂದು ಹಳ್ಳಕ್ಕೆ ಹೋದನು. ಅದೇ ದಿನ ಸಾಧಿಸಿದಂತೆ ಅವನ ಬೀಗನು ಬಂದನು. ಹಳ್ಳದಲ್ಲಿಂಯೀ ಅವನ ದರ್ಶನವಾಯಿತು. ಅಕ್ಕನ ಗಂಡನಿಗೆ ಬೀಗನು ಕೈಮುಗಿದನು.
"ನಮ್ಮ ಹೋಳಿಗೆಗೆ ದಾಳಿ ತಂದನೀತನು?" ಎಂದು ಬಗೆದು, ಮುಂಚಿತವಾಗಿ ಮನೆಗೆ ಓಡಿ ಬ೦ದು ಹೆಂಡತಿಗೆ ಹೇಳಿದನು - "ಏನೇ, ಮಾಡಿದ ಹೋಳಿಗೆಗಳನ್ನೆಲ್ಲ ಮುಚ್ಚಿಡು. ನಿನ್ನ ತಮ್ಮ ಬಂದಿದ್ದಾನೆ. ಎಲ್ಲಿ ಕುಳಿತಿದ್ದವನೋ ನೋಡಿಕೊಂಡು ?"
"ಈ ಖೋಡಿ ಏಕೆ ಬಂತವ್ವ ಎಂದು ತಲೆಕಟ್ಟಿಕೊಂಡು ಮಲಗಿ ಬಿಟ್ಟಳು, ಜಡ್ಡಿನ ಸೋಗಿನಿ೦ದ.
ಅತಿಥಿಯಾಗಿ ಬೀಗ ಮನೆಗೆ ಬ೦ದನು. ಆತನಿಗೆ ಕುಡಿಯಲು ನೀರು ಸಹ ಕೊಡಲಿಲ್ಲ ಯಾರೂ. ಅಕ್ಕನಂತೂ ಹಾಸಿಗೆಯನ್ನೇ ಹಿಡಿದಿದ್ದಾಳೆ. ಬದುಕುವಳೋ ಇಲ್ಲವೋ ? ಭಾವನು ಹೇಳುತ್ತಾನೆ — "ನೋಡಿದೆಯಾ ಬೀಗ, ನಮ್ಮ ತಾಪತ್ರಂಖವನ್ನು? ಮೂರು ದಿನಗಳಾದವು ಕೂಳು ನೀರು ಕಂಡಿಲ್ಲ. ರೊಟ್ಟಿ ಮಾಡುವವರೂ ದಿಕ್ಕಿಲ್ಲದಂತಾಗಿದೆ."
ಬೀಗನಿಗೆ ಆ ಮಾತು ನಿಜವೆನಿಸಲಿಲ್ಲ "ಹೂರಣವನ್ನು ಅರೆಯುವ ಕಬಲ್ಲನ್ನೇಕೆ ಹೊರಗಿಟ್ಟಿದ್ದಾರೆ ? ಏನು ಚಮತ್ಕಾರವಿದು ? ಮನೆಯಲ್ಲೆಲ್ಲ ಕಮರಿನ ದುಂದುಕಾರ ಇಡಗಿದೆ. ಇವರು ಹೋಳಿಗೆಮಾಡಿದ್ದು ನಿಶ್ಚಯ. ನನ್ನನ್ನು ಕಳಿಸಿಕೊಟ್ಟು ತಾವೇ ತಿನ್ನಬೇಕೆಂದು ಮಂಡಿಗೆ ಮಾಡಿದ್ದಾರೆ" ಎಂದೇ ನಿರ್ಣಯಿಸಿದನು.
ಮತ್ತೆ ಭಾವ ಹೇಳುತ್ತಾನೆ — "ಬೀಗಾ, ನಿನ್ನೂರಿಗೆ ಹೋಗಿಬಿಡು. ಇಲ್ಲಿದ್ದರೆ ಉಪವಾಸ ಮರುಗಬೇಕಾದೀತು.?
"ಹೋಗೇ ಬಿಡುತ್ತೇನೆ. ಒಂದು ಚುಟ್ಟ ತಂಬಾಕನ್ನಾದರೂ ಕೊಡು ಸೇದುವದಕ್ಕೆ" ಎಂದನು ಬೀಗ.
"ಮನೆಯ ತಂಬಾಕವನ್ನೆಲ್ಲ ಮೊನ್ನೆಯೇ ಮಾರಿ ಬಂದವು. ಅಂಗಡಿಯಿಂದ ತರಬೇಕೆಂದರೆ ಅವರು ಉದ್ದರಿ ಕೊಡುವದಿಲ್ಲ" ಎಂದು ಭಾವನು ಮರುನುಡಿಂಯಲು ಬೀಗನು ಹೊರಟು ಹೋದನು.
"ಏಳು ಏಳು ! ಹೀಡೆ ಹೋಯಿತು. ಹಸಿವೆಯಾದ ಕೈಯಲ್ಲಿ ಬಿಸಿ ಜಿಸಿ ಅಡಿಗೆ ಉಣಬಡಿಸು" ಎಂದು ನುಡಿದು, ಗಂಡನು ವಿನೋದಕ್ಕಾಗಿ ಒಂದು ಕಟ್ಟಳೆ ಹಾಕಿದನು. ಏನಂದರೆ — "ಇಬ್ಬರೂ ಕಣ್ಣು ಕಟ್ಟಿಕೊಂಡು ಊಟಮಾಡೋಣ. ಅಲ್ಲದೆ ತುತ್ತುಮಾಡಿ ನೀನು ನನಗೆ ಉಣ್ಣಿಸು. ನಾನು ತುತ್ತು ಮಾಡಿ ನಿನ್ನ ಬಾಯಿಗಿಡುತ್ತೇನೆ. ಸಾಕಾಗುವಷ್ಟು ನುಂಗು."
ಆ ಮಾತು ಹೆಂಡತಿಗೂ ಸಮ್ಮತವಾಯಿತು. ಗಂಡಹೆಂಡಿರಿಬ್ಬರೂ ಕಣ್ಣು ಕಟ್ಟಿಕೊಂಡು ಕುಳಿತುಬಿಟ್ಟರು.
ತನ್ನ ಊರಿಗೆ ಹೋಗುವೆನೆಂದು ಹೇಳಿ ಹೋದ ಬೀಗನು, ಎಲ್ಲಿಯೂ ಹೋಗದೆ ಹೊರಳಿ ಬಂದು ಮಾಳಿಗೆ ಏರಿ ಕುಳಿತಿದ್ದನು.
ಮೊದಲಿಗೆ ಹೆಂಡತಿ ಹೋಳಿಗೆಯನ್ನು ಹರಿದು, ತುಪ್ಪದಲ್ಲಿ ಅದ್ದಿ ತುತ್ತು ಮಾಡಿ ಗಂಡನ ಬಾಯಿಕಡೆ ಒಯ್ಯುವುದಕ್ಕೆ ಮಾಳಿಗೆ ಏರಿದ್ದ ಬೀಗನು ಹವುರಾಗಿ ಇಳಿದು ಬಂದು, ಆ ತುತ್ತು ತೆಗೆದುಕೊಂಡನು ತನ್ನ ಬಾಂಹಲ್ಲಿ. ಅದರಂತೆ ಗಂಡನು ಹಾಕುವ ತುತ್ತನ್ನೂ ಮಾಳಿಗೆಯ ಬೀಗನು ಅನುಮಾನವಿಲ್ಲದೆ ತೆಗೆದುಕೊಂಡನು. ಪರಸ್ಪರರಿಗೆ ತುತ್ತುಮಾಡಿ ಉಣ್ಣಿಸುವ ಕೆಲಸ ಕೆಲಹೊತ್ತು ಸಾಗಿದ ಬಳಿಕ ಹೆಂಡತಿ ಯೋಚಿಸಿದಳು -ಮೊದಲಿಗೆ ಹೆಂಡತಿ ಹೋಳಿಗೆಯನ್ನು ಹರಿದು, ತುಪ್ಪದಲ್ಲಿ ಅದ್ದಿ ತುತ್ತು ಮಾಡಿ ಗಂಡನ ಬಾಯಿಕಡೆ ಒಯ್ಯುವುದಕ್ಕೆ ಮಾಳಿಗೆ ಏರಿದ್ದ ಬೀಗನು ಹವುರಾಗಿ ಇಳಿದು ಬಂದು, ಆ ತುತ್ತು ತೆಗೆದುಕೊಂಡನು ತನ್ನ ಬಾಯಲ್ಲಿ. ಅದರಂತೆ ಗಂಡನು ಹಾಕುವ ತುತ್ತನ್ನೂ ಮಾಳಿಗೆಯ ಬೀಗನು ಅನುಮಾನವಿಲ್ಲದೆ ತೆಗೆದುಕೊಂಡನು. ಪರಸ್ಪರರಿಗೆ ತುತ್ತುಮಾಡಿ ಉಣ್ಣಿಸುವ ಕೆಲಸ ಕೆಲಹೊತ್ತು ಸಾಗಿದ ಬಳಿಕ ಹೆಂಡತಿ ಯೋಚಿಸಿದಳು "ನನ್ನ ಗಂಡ ಬಹಳ ಹಸಿದಂತೆ ತೋರುತ್ತದೆ. ಯಾವಾಗಿನಿಂದಲೂ ತುತ್ತು ಮಾಡಿ ಹಾಕುತ್ತಲೇ ಇದ್ದೇನೆ. ಆದರೆ ಅವನು ಮಾತ್ರ ನನ್ನ ಜಾಂಹಲ್ಲಿ ಒಂದು ತುತ್ತು ಸಹ ಹಾಕಲೊಲ್ಲನಲ್ಲ!"
ಗಂಡನೂ ಯೋಚಿಸಿದನು "ಈ ರಂಡೆ ಎಲ್ಲವನ್ನೂ ತಾನೇ ತಿನ್ನುತ್ತಿದ್ದಾಳೆ."
ಆದರೆ ಅಡ್ಡ ಬಾಯಿ ಹಾಕಿ, ಎರಡೂ ಕಡೆಯ ತುತ್ತುಗಳನ್ನು ಕಬಳಿಸುವ ಜೀಗನು ಬೇರೆಯೇ ಇದ್ದಾನೆ. ಅವನ ಗಡ್ಡ ಮೀಸೆಗಳಲ್ಲೆಲ್ಲ ತುಪ್ಪವು ಸೋರಾಡುವಂತಾಯಿತು. ಹೊಟ್ಟೆ ತುಂಬಿಬಿಟ್ಟಿತು. ಅ ಅ s s ಬ—ಎನ್ನುತ್ತ ಢರಿಬಿಟ್ಟನು.
ಆ ಸಪ್ಪಳವನ್ನು ಕೇಳಿ "ಏನೋ ಘಾತ ಆಯಿತು" ಎನ್ನುತ್ತ ಗಂಡಹೆಂಡಿರಿಬ್ಬರೂ ಕಣ್ಕಟ್ಟು ಕಳಚಿಹಾಕುತ್ತಾರೆ—ಮುಂದೆ ಕುಳಿತಿದ್ದಾನೆ ಬೀಗ!
"ಬಹಳ ತುಂಟ ನೀನು" ಎಂದರು.
"ನೀವೇನು ಕಡಿಮೆ? ಹೋಗಿ ಬರುತ್ತೇನೆ. ಕುಶಾಲವಾಗಿ ಇದ್ದುಬಿಡಿರಿ" ಎನ್ನುತ್ತ ಬೀಗನು ಹೋಗಿಯೇ ಬಿಟ್ಟನು.
ಆ ಬಳಿಕ ಗಂಡಹೆಂಡಿರು ಕುಳಿತು ಉಳಿದಷ್ಟು ಹೋಳಿಗೆ, ತುಪ್ಪ ನಗು
ನಗುತ್ತ ಊಟಮಾಡಿದರು.
ವಿವರಣಾತ್ಮಕ ಕಥೆಗಳು
ತಮ್ಮಕ್ಕ ಅಕ್ಕೆಲೆ
ಉತ್ತರೀಮಳೆ
ತಮ್ಮಕ್ಕ—ಅಕ್ಕೆಲೆ
ಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುವುದಕ್ಕೆ ಹಿಂದಿನ ದಿನಗಳಲ್ಲಿ ತಂಬಾಕು ಸೇದುವ ಏರ್ಪಾಡು ಮಾಡಿಕೊಡುತ್ತಿದ್ದರು. ಬಂದವರಿಗೆ ಎಕ್ಕೆಲೆ ತಂಬಾಕುಗಳನ್ನು ಒದಗಿಸಿದರೆ ದೊಡ್ಡ ಮನ್ನಣೆ ಮಾಡಿದಂತೆ. ಬಂದ ಅತಿಥಿಯಾಗಲಿ ಆಪ್ತರಾಗಲಿ ಮನೆಯವರಿತ್ತ ಎಕ್ಕೆಲೆಯಿಂದ ಚುಟ್ಟಕಟ್ಟೆ ಅದರಲ್ಲಿ ತಂಬಾಕು ತುಂಬಿ, ಮೇಲೆ ಬೆಂಕಿಯ ಕಿಡಿಯಿಟ್ಟು ಧೂಮ್ರಪಾನ ಮಾಡುತ್ತಿದ್ದರು.
ಎಕ್ಕೆಲೆ ತಂಬಾಕುಗಳಿಗೆ ಅಷ್ಟೊಂದು ದೊಡ್ಡಸ್ತಿಕೆ ಬರಲು ಕಾರಣವೇನು? ಎಕ್ಕೆಲೆ ತಂಬಾಕುಗಳು ಹುಟ್ಟಿಕೊಂಡಿದ್ದು ಎಂದಿನಿಂದ?
ಬಹಳ ಹಿಂದಿನ ಕಾಲದಲ್ಲಿ ಅಂದರೆ ಈ ಭೂಮಿಯಮೇಲೆ ಮನುಷ್ಯಪ್ರಾಣಿ ಹುಟ್ಟಿಬಂದ ಬಳಿಕ, ಮನೆಯೊಳಗಿನ ಗಂಡು ಹೆಣ್ಣುಗಳಿಗೆ ಹೊಂದಾಣಿಕೆಗೊಳಿಸಿ ಮದುವೆ ಮಾಡುವ ಪರಿಪಾಠವಿರಿಸಿಕೊಳ್ಳಲಾಗಿತ್ತು. ಮುಂದೆ ಅನೇಕ ಶತಮಾನಗಳನ್ನು ಕಳೆಯುವ ಹೊತ್ತಿಗೆ ಮನುಷ್ಯರ ಸಂಖ್ಯೆ ಬೆಳೆಯಿತು. ಅವರು ಗುಂಪು ಗುಂಪಾಗಿ ನೆಲೆಸತೊಡಗಿದರು. ಆವಾಗ ಮನುಷ್ಯಪ್ರಮುಖರು ಹೊಸಯುಕ್ತಿಯೊಂದನ್ನು ಕಂಡುಹಿಡಿದರು. ಏನೆಂದರೆ—ಗಂಡಿಗೆ ಹೆಣ್ಣನ್ನು ಮನೆಯೊಳಗಿಂದಲೇ ತೆಗೆದುಕೊಳ್ಳದೆ ಬೇರೊಂದು ಗುಂಪಿನೊಳಗಿನಿಂದ ತರುವುದು ಒಳ್ಳೆಯದು.
ಹೀಗೆ ಕೊಡುಗೂಸುಗಳನ್ನು ಬೇರೊಂದು ಮನೆಗೆ ಕೊಡುವ ಕ್ರಮವು ಬಳಕೆಯಲ್ಲಿ ಬಂದಿತು. ಆದರೆ ಹಳೆಯ ಸಂಪ್ರದಾಯವೂ ಅಧರ್ಮವೆನಿಸುತ್ತಿರಲಿಲ್ಲ. ಬೇರೊಂದು ಗುಂಪಿಗೆ ಕೊಡಮಾಡಿದ ಹೆಣ್ಣನ್ನು ಹಬ್ಬ—ಹುಣ್ಣಿಮೆ, ಉತ್ಸವ ಆಮೋದದ ಕಾಲಕ್ಕೆ ತವರುಮನೆಗೆ ಕರೆತರತೊಡಗಿದರು.
ನಾಗರಪಂಚಮಿ ಹಬ್ಬದ ಕಾಲಕ್ಕೆ ಮನೆಯ ಹೆಣ್ಮಗಳನ್ನು ತವರಿಗೆ ಕರೆತರುವದಕ್ಕೆ ತಮ್ಮನ್ನು ಕಂಟಲಿ ಎತ್ತು ತೆಗೆದುಕೊಂಡು, ಬೇರೊಂದು ಗುಂಪು ಇರುವಲ್ಲಿಗೆ ಹೋದನು. ಅಕ್ಕನ ಅತ್ತೆ ಮಾವಂದಿರು ಯಾವ ನೆವವನ್ನೂ ಮುಂದೊಡ್ಡದೆ ಸೊಸೆಯನ್ನು ಆಕೆಯ ತವರುಮನೆಗೆ ಕಳಿಸುವ ಏರ್ಪಾಡು ಮಾಡಿದರು.ಅಕ್ಕನನ್ನು ಎತ್ತಿನಮೇಲೆ ಕುಳ್ಳಿರಿಸಿಕೊಂಡು ತನ್ನೂರಿಗೆ ಸಾಗಿದ ತಮ್ಮನು, ಪ್ರಾಯದಿಂದ ತುಂಬಿತುಳುಕುವ ಅಕ್ಕನನ್ನು ಕಂಡು ತಬ್ಬಿಬ್ಬಾದನು. ಆಕೆಯು ಧರಿಸಿದ ಬಂಗಾರದೊಡವೆಗಳಿಂದ ಆಕೆಯ ಚೆಲುವು ನೂರ್ಮಡಿಸಿತ್ತು ಹಿಂದಿನ ಕಾಲವಾಗಿದ್ದರೆ ಅಕ್ಕನೇ ತನ್ನ ಹೆಂಡತಿ ಆಗುತ್ತಿದ್ದಳಲ್ಲವೇ, ಎಂದು ಎಣಿಸಿದನು. ಅದೇ ಪದ್ಧತಿ ಯೋಗ್ಯವಾಗಿತ್ತೆಂದೂ ಬಗೆದನು. ಅಕ್ಕನೂ ಏನಾದರೂ ಕೇಳಿದರೆ ತಮ್ಮನು ತನ್ನ ತಲೆಯೊಳಗೆ ಸುಳಿದಾಡುವ ವಿಚಾರವನ್ನೇ ಮುಂದೆ ಮಾಡಿ ಮರುನುಡಿಯುವನು. ದಾರಿಸಾಗುತ್ತಲೇ ಇತ್ತು.
ಹೊತ್ತು ಮುಳುಗುವ ಸಮಯವಾಯಿತು. ತಮ್ಮನ ಬುದ್ಧಿ ತೀರ ಚಂಚಲಗೊಂಡಿತು. ಅವನ ಕಂಟಲಿ ಎತ್ತು ತೀರ ನಿರ್ಜನಪ್ರದೇಶವನ್ನು ಪ್ರವೇಶಿಸಿತು. ಒಂದೆರಡು ಕೂಗಳತೆ ದಾಟಿತ್ತೋ ಇಲ್ಲವೋ ತಮ್ಮನು ಅಡ್ಡಬಂದು ಎತ್ತಿನ ಮುಗದಾಣಿ ಹಿಡಿದನು. ಅದು ಗಕ್ಕನೆ ನಿಂತಿತು. ಅಕ್ಕನಿಗೆ ಕೆಳಗಿಳಿಯಲು ಹೇಳಿದನು. ಆಕೆ ಮರುನುಡಿದಳು "ಹೊತ್ತು ಮುಳುಗಿತು, ಕತ್ತಲಾಗುವಷ್ಟರಲ್ಲಿ ಊರು ಸೇರುವುದು ಒಳ್ಳೆಯದಲ್ಲವೇ? ಹುಲಿಕರಡಿಗಳ ಬಾಯಿಗೆ ಬೀಳುವುದಾಗಲಿ, ಕಳ್ಳರ ಕೈಗೆ ಸಿಗುವದಾಗಲಿ ಅದರಿಂದ ತಪ್ಪುತ್ತದೆ. ಆದ್ದರಿಂದ ಎತ್ತನ್ನು ಅವಸರದಿಂದ ಹೊಡೆಯುವುದನ್ನು ಬಿಟ್ಟು ಇಲ್ಲೇಕೆ ಇಳಿಯಬೇಕು?"
"ಊರು ಇನ್ನು ದೂರವಿಲ್ಲ. ಇಳಿದುಬಿಡು. ನೀರು ಕುಡಿದು ಮುಂದೆ ಸಾಗೋಣ" ಎಂದು ತಮ್ಮನು ಅಕ್ಕನಿಗೆ ನೆರವು ನೀಡಿ ಎತ್ತಿನಿಂದ ಕೆಳಗಿಳಿಸಿಕೊಂಡನು. ಆಕೆಯ ಸ್ಪರ್ಶದಿಂದ ಆತನಲ್ಲಿ ವಿದ್ಯುತ್‍ಸಂಚಾರವೇ ಆದಂತಾಯಿತು.
ಮುಂದೆ ಏನು ನಡೆಯಿತೆಂಬುದನ್ನು ಹೇಳುವ ಕಾರಣವೇ ಇಲ್ಲ ಬಲಾತ್ಕಾರ! "ಇದು ಧರ್ಮವಲ್ಲ" ಎಂದು ಅಕ್ಕನು ಹಲುಬಿದಳು. "ಹಳೆಯದಾದರೇನು, ಇದು ಧರ್ಮವಾಗಿಯೇ ಇತ್ತು" ಎಂದನು ತಮ್ಮ.
"ಬಿಟ್ಟುಕೊಟ್ಟ ಧರ್ಮದದಾರಿ ಅಧರ್ಮವೇ ಅಲ್ಲವೇ? ದೇವಿ, ಭೂಮಿತಾಯಿ, ಇಲ್ಲಿ ನೀನಲ್ಲದೆ ಇನ್ನಾರೂ ಇಲ್ಲ. ಅಧರ್ಮದಿಂದ ನನ್ನನ್ನು ಉಳಿಸು ತಾಯಿ" ಎಂದು ಕೈಮುಗಿದು ಹೃತ್‌ಪೂರ್ವಕವಾಗಿ ಮೊರೆಯಿಟ್ಟಳು.
ಭೂಮಿತಾಯಿಗೆ ಕೇಳಿಸಿತೇನೋ ಆಕೆಯಮೊರೆ. ಅದು ಬಿರಿದು ಬಿಟ್ಟಿತು. ದುಃಖಾರ್ತೆಯು ನೆಲದ ಬಿರುಕಿನಲ್ಲಿ ಇಳಿಯತೊಡಗಿದಳು. ಅದನ್ನು ಕಂಡು ತಮ್ಮನು ಮುಗಿದ ಆ ಕೈಗಳೆರಡನ್ನೂ ಹಿಡಿದು ಹಿಂದೆಳೆಯತೊಡಗಿದನು.ಆದರೆ ಅಕ್ಕನ ಇಡಿಯ ಶರೀರದೊಡನೆ ಮೇಲೆತ್ತಿದ್ದ ಕೈಗಳೆರಡೂ ಅಡಗಿಕೊಂಡವಾದರೂ ಮುಗಿದ ಹಸ್ತಗಳು ಮಾತ್ರ ಹೊರಗೆ ಕಾಣಿಸಿಕೊಂಡವು.
ಅದನ್ನೆಲ್ಲ ಕಂಡು ತಮ್ಮನಿಗೆ ಪಶ್ಚಾತ್ತಾಪವಾಯಿತು. ಅಕ್ಕನನ್ನು ಕಳೆದುಕೊಂಡೆನೆಂದು ದಿಕ್ಕು ಮರುದನಿಗೊಡುವಂತೆ ಆಕ್ರೋಶಿಸತೊಡಗಿದನು. ಮುಂದುಗಾಣದೆ ಎತ್ತು ಎಳೆದುಕೊಂಡು ಊರದಾರಿ ಹಿಡಿದನು. ತಾಯಿ ತಂದೆಗಳ ಮುಂದೆ ಅಕ್ಕನ ಸುದ್ಧಿಯನ್ನು ಏನೆಂದು ಹೇಳಲಿ—ಎಂಬ ವಿಚಾರದಲ್ಲಿಯೇ ಮುಳುಗಿದನು. ನೆಲದಲ್ಲಿ ಹುಗಿದುಹೋದ ಆ ಪವಿತ್ರಾತ್ಮಳ ಹಸ್ತಗಳೆರಡೂ ಮುಂದೆ ಎರಡು ಎಲೆಗಳಾಗಿ ಚಿಗುರಿದವು. ಒಂದು ಅಕ್ಕೆಲೆ, ಇನ್ನೊಂದು ತಮ್ಮಕ್ಕ.
ಅಂದಿನ ಆ ಅಕ್ಕೆಲೆಯೇ ಎಕ್ಕೆಲೆ ಎನಿಸಿತು. ತಮ್ಕಕ್ಕವೆ ತಂಬಾಕು ಎನಿಸಿತು. ಆ ಪವಿತ್ರಾತ್ಮಳು ಕೊಟ್ಟುಹೋದ ಎಕ್ಕೆಲೆ ತಂಬಾಕುಗಳೆರಡೂ ಅತಿಥಿಸತ್ಕಾರದಲ್ಲಿ ಹಿರಿಮೆಯಸ್ಥಾನ ಗಳಿಸಿದವು.
ಉತ್ತರೀಮಳೆ
ಅತ್ತೆ ಸೊಸೆಯರು ಹಿತ್ತಲ ಮನೆಯಲ್ಲಿ ಒಂದಿಷ್ಟು ವಾದಿಸಾಡುತ್ತಿದ್ದರು. ಅಷ್ಟರಲ್ಲಿ ಹೊಲದಿಂದ ಮಗನು ಬಂದನೆಂದು ಅತ್ತೆ ಎದ್ದು ಹೋದಳು. ಮಗನಿಗೆ ಉಣಬಡಿಸಬೇಕಲ್ಲವೇ?
ಊಟಕ್ಕೆ ಕುಳಿತ ಮಗನಿಗೆ ಉಣಬಡಿಸುತ್ತ ಹಗುರಾಗಿ ಎಳೆತೆಗೆದಳು ತಾಯಿ—"ಈ ಸೊಸೆ ಬೇಡಪ್ಪ ಮಗನೇ, ಇವಳನ್ನು ತವರಿಗೆ ಕಳಿಸು."
"ಕಳಿಸಿಬಿಡುವುದಕ್ಕೆ ಎತ್ತೇ ಎಮ್ಮೆಯೇ? ಖರ್ಚು—ಮಾಡಿತಂದು ಕೈಹಿಡಿದವಳನ್ನು ಹೇಗೆ ಬಿಡುವುದವ್ವ" ಎಂದು ಕೇಳಿದನು ಮಗ.
"ನನ್ನ ಚಿನ್ನದ ಒಂಕೆ ಮಾರುವೆನು. ಸೂತ್ರದ ಗೊಂಬೆಯಂಥ ಹೆಣ್ಣು ತರುವೆನು. ಮಗನೇ, ಬಿಟ್ಟುಬಿಡು ಇವಳನ್ನು?" ತಾಯಿಯ ಆಗ್ರಹ.
"ಆವಲ್ಲ ಕರುವಲ್ಲ, ಬೊಗಸೆತುಂಬ ತೆರವುಕೊಟ್ಟು ತಂದವಳನ್ನು ಬಿಡುವುದೆಂತು ತಾಯಿ?"
"ಕಿವಿಯೊಳಗಿನ ವಜ್ರದೋಲೆ ಮಾರುತ್ತೇನೆ. ಬ್ಯಾಂಗಡಿಯಂಥ ಹೆಣ್ಣು ತರುತ್ತೇನೆ. ಬಿಟ್ಟುಬಿಡು ನನ್ನ ಮಗನೇ ಇವಳನ್ನು" ಮತ್ತೆಯೂ ಅದೇ ಒತ್ತಾಯ ತಾಯಿಯದು.
"ಕೊಂಡುತಂದ ಆಡು-ಕುರಿ ಬಿಟ್ಟುಬಿಡುವುದಕ್ಕಾಗುವದಿಲ್ಲ. ದೈವಸಾಕ್ಷಿಯಾಗಿ ಕೈಹಿಡಿದವಳನ್ನು ಹೇಗೆ ಬಿಡುವುದು ಅವ್ವಾ?"
"ಇದೋ ಈ ಮೂಗುತಿಯನ್ನು ಮಾರುತ್ತೇನೆ. ಮುತ್ತಿನಂಥ ಮಡದಿಯನ್ನು ತರುತ್ತೇನೆ. ಬಿಟ್ಟುಬಿಡು ಇವಳನ್ನು?" ಅನ್ನುತ್ತಾಳೆ ತಾಯಿ.
ನೂರು ಸಾರೆ ಹೇಳುತ್ತ ಬಂದರೆ ಸುಳ್ಳೇ ಸತ್ಯವಾಗುವದಂತೆ. ಛಲಹಿಡಿದು ಬಿಟ್ಟು ಮಾತು ಗೆಲ್ಲಲೇ ಬೇಕಲ್ಲವೇ? ಸೊಸೆ ತನ್ನ ತವರಿಗೆ ಹೊರಟುನಿಂತಳು.
"ಸೊಸೆ ಮುದ್ದೇ, ನೆಲುವಿನ ಮೇಲಿಟ್ಟ ನೆಲ್ಲಕ್ಕಿ ಬೋನವನ್ನಾದರೂ ಉಂಡು ಹೋಗು" ಎಂದು ಅತ್ತೆ ತೋರಿಕೆಯಲ್ಲಿ ಆಗ್ರಹಪಡಿಸಿದರೆ, ಸೊಸೆ ಏನೆಂದು ಮರುನುಡಿಯುತ್ತಾಳೆ—"ಅದನ್ನು ನೀನುಣ್ಣು ಇಲ್ಲವೆ ಮಗನಿಗೆ ಉಣಬಡಿಸು. ಉಳಿದರೆ ಬರುವವಳಿಗಾಗಿ ಕಾಯ್ದಿಡು.""ಚೆಟ್ಟಿಗೆಯೊಳಗಿರುವ ಗಟ್ಟಿತುಪ್ಪವೊಂದಿಷ್ಟು ತಿಂದಾದರೂ ಹೋಗಮ್ಮ ಮುದ್ದು ಸೊಸೆಯೇ" ಎಂದು ಅತ್ತೆಯಾಡಿದ ಉಪಕಾರದ ಮಾತಿಗೆ ಸೊಸೆ ಹೇಳುತ್ತಾಳೆ — "ನೀನಾದರೂ ತಿನ್ನು. ನಿನ್ನ ಮಗನಿಗಾದರೂ ತಿನ್ನಿಸು. ಅದರಲ್ಲಿ ಒಂದಿಷ್ಟು ಬರುವವಳಿಗಾಗಿ ಕಾಯ್ದಿರಿಸು."
ಒಲೆಯಮೇಲಿಟ್ಟ ಹಸುವಿನ ಹಾಲನ್ನಾದರೂ ಕುಡಿದು ಹೋಗು ಎಂದಾಗ ಹಾಗೂ, ಪೆಟ್ಟಿಗೆಯೊಳಗಿನ ಸಂಣಂಚಿನ ಕುಪ್ಪಸವನ್ನಾದರೂ ತೊಟ್ಟುಕೊಂಡು ಹೋಗು ಎಂದಾಗ, ಸೊಸೆ ಅದೇರೀತಿಯಲ್ಲಿ ಉತ್ತರಿಸುತ್ತಾಳೆ.
ಹೇಳಿದ್ದಕ್ಕೆಲ್ಲ ಮರಳಿ ಉತ್ತರ ಕೊಡುವಳೆಂದು ಆ ಸೊಸೆಗೆ ಉತ್ತರಾದೇವಿಯೆಂದು ಹೆಸರಾಯಿತೇನೋ. ಅಂತೂ ಉತ್ತರಾದೇವಿ ಅತ್ತೆಯ ಮನೆಯಿಂದ ತವರು ಮನೆಯತ್ತ ಹೊರಟಳು.
ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡಿದ್ದಾಳೆ. ಇನ್ನೊಂದನ್ನು ಕೈಹಿಡಿದು ನಡೆಸುತ್ತಿದ್ದಾಳೆ. ತುಸು ಮುಂದೆ ಸಾಗುವಷ್ಟರಲ್ಲಿ ಬಾಳೆ ಬನವನ್ನು ಕಂಡು, ಅದಕ್ಕೆ ಹೇಳುತ್ತಾಳೆ, ತವರುಮನೆಗೆ ಹೋಗುವೆನೆಂದು. "ನೀನು ಹೋದರೆ ನಮಗೆ ನೀರುಣಿಸುವವರಾರು? ಹಣ್ಣಾದರೆ ತಿನ್ನುವವರಾರು?” ಎಂದು ಕೇಳಿತು ಬಾಳೆಯ ಬನ.
"ನೀರುಣ್ಣಿಸುವದಕ್ಕೂ ಹಣ್ಣು ತಿನ್ನುವದಕ್ಕೂ ನನಗಿಂತ ಜಾಣೆಯಾದವಳು ಈ ಮನೆಗೆ ಬರುತ್ತಾಳೆ" ಎಂದು ಮರುನುಡಿಯುತ್ತಾಳೆ ಉತ್ತರೆ.
ಇನ್ನೂ ಮುಂದೆ ಹೋದಾಗ ಕಿತ್ತಳೆಯ ಬನಕ್ಕೂ ಹೇಳುತ್ತಾಳೆ ತವರೂರಿಗೆ ಹೋಗುವೆನೆಂದು. ಕಿತ್ತಳೆ ಬನವೂ ಕೇಳುತ್ತದೆ — "ನೀನು ಹೋದರೆ ನನಗೆ ನೀರುಣ್ಣಿಸುವರಾರು? ಹಣ್ಣಾದರೆ ತಿನ್ನುವವರಾರು"" ಎಂದು. ಅದಕ್ಕೂ ಮರುನುಡಿಯುತ್ತಾಳೆ ಆದೇಬಗೆಯಾಗಿ -"ನೀರುಣಿಸುವದಕ್ಕೂ ಹಣ್ಣುತಿನ್ನುವದಕ್ಕೂ ನನಗಿಂತ ಜಾಣೆಯಾದವಳು ಈ ಮನೆಗೆ ಬರುತ್ತಾಳೆ."
ಅತ್ತೆಯಾದವಳು ಸೀರೆಕುಪ್ಪಸಗಳ ದೊಡ್ಡ ಗಂಟನ್ನೇ ಆಕೆಯ ಮುಂದೆ ಇಳುಹಿದರೆ ಸೊಸೆ — "ಇನ್ನಾವ ಸೀರೆಯೂ ಬೇಡ. ಬೇರಾವ ಕುಪ್ಪಸವೂ ಬೇಡ, ನಮ್ಮವ್ವ ನನಗೆಂದು ಕೊಟ್ಟ ಸೀರೆಕುಪ್ಪಸ ಎತ್ತಿ ಇಡಿರಿ ಈಚೆಗೆ" ಎಂದಳು.
ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡು, ಇನ್ನೊಂದನ್ನು ಕೈಯಲ್ಲಿ ಹಿಡಿದುಕೊಂಡು, ಕಾಲ್ಗೆಜ್ಜೆಯನ್ನು ಗಿಲಿಸುತ್ತ ಹೊರಟ ಆಕೆಯನ್ನು ಕಂಡು ದೊಡ್ಡಮನುಷ್ಯರೊಬ್ಬರು ಕೇಳಿದರು — "ನೀನಾವ ರಾಜನ ಸೊಸೆಯಮ್ಮ?""ನಾನಾವ ರಾಜನ ಸೊಸೆಯಾಗಲಿ? ಅತ್ತೆಮ್ಮನ ಉರವಣಿಗೆಯಲ್ಲಿ ತವರೂರಿಗೆ ಹೊರಟಿದ್ದೇನೆ" ಎಂದು ಉತ್ತರಾ ಮರುನುಡಿಯುತ್ತಾಳೆ.
ಮೊದಲು ತಂದೆಯ ಮನೆಗೆ ಹೋಗಿ — "ಅಪ್ಪ, ಕದತೆಗೆ, ಅಪ್ಪಯ್ಯ, ಕದತೆಗೆಯಿರಿ. ನನ್ನಪ್ಪಾ ನನಗೆ ಕದತೆಗೆ" ಎಂದು ಕೂಗಲು ಒಳಗಿನಿಂದ ತಂದೆಯ ಉತ್ತರ ಬರುತ್ತದೆ.
"ಕಂದವ್ವನನ್ನು ತೊಡೆಯಮೇಲೆ ಹಾಕಿಕೊಂಡು ಚಾಪೆಯ ಮೇಲೆ ಕುಳಿತಿದ್ದೇನೆ. ದೀಪದ ಬುರುಡೆ ತುಂಬಿದೆ. ಹೇಗೆ ಎದ್ದು ಬರಲಿ? ಮಗಳೇ, ನಿಮ್ಮಣ್ಣನ ಮನೆಗೆ ಹೋಗವ್ವ"
ಬಳಿಕ ಅಣ್ಣನ ಮನೆಗೆ ಹೋಗಿ ಅಲ್ಲಿಯೂ ಅದೇ ಬಗೆಯಾಗಿ ಹಲುಬಿದರೆ, ಅಣ್ಣನ ತೊಡೆಯ ಮೇಲೆ ಮುದ್ದುಮಗು ಮಲಗಿದ್ದರಿಂದ ಅವನಿಗೂ ಎದ್ದು ಬರಲಿಕ್ಕಾಗಲಿಲ್ಲ. ಅಕ್ಕನಮನೆಗೆ ಹೋಗಲು ತಿಳಿಸಿದನು.
ಅಕ್ಕನ ಮನೆ ಆಯಿತು. ತಂಗೆಯಮನೆ ಆಯಿತು. ಅಲ್ಲಿ ತೋಳಿನಲ್ಲಿ ಕೆಂಪವ್ವ ಮಲಗಿದ್ದರೆ, ಇಲ್ಲಿ ಕಾಳವ್ವ ಮಲಗಿದ್ದಳು. ಆದ್ದರಿಂದ ಎದ್ದು ಬರುವವರಾರು? ತಂಗಿಯ ಸೂಚನೆಯಂತೆ ಅವ್ವನ ಮನೆಗೆ ಹೋದಳು. ಕಣ್ಣೀರು ಕೋಡಿಯಾಗಿ ಹರಿಯುತ್ತದೆ.
"ಕದ ತೆಗೆ ಅವ್ವಾ" ಅಂದಾಗ ಅವಳು ಕದತೆಗೆದು ಮಗಳನ್ನು ಅಪ್ಪಿಕೊಂಡು ತಲೆತಡವಿದಳು. ಕಣ್ಣೀರು ಹೊಳೆಯಾಗಿ ಹರಿಸುತ್ತ ಹೇಳಿದಳು "ನಿನ್ನಪ್ಪ ನನ್ನನ್ನು ಉರಿಸಿದನು. ನನ್ನ ಪಾಡು ನಿನಗೂ ತಗುಲಿತೇ? ನೀನು ಉತ್ತರಾಮಳೆಯಾಗಿ ಹೊರಡಿನ್ನು".
ಮಗಳು ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡು, ಇನ್ನೊಂದನ್ನು ಕೈಯಲ್ಲಿ ಹಿಡಿದುಕೊಂಡು ಕಾಲುಗೆಜ್ಜೆ ಗಿಲಕ್ ಅನ್ನುತ್ತಿರಲಿ, ಉತ್ತರೆ ಮಳೆಯಾಗಿ ಹೊರಟಳು.
ಉತ್ತರೆಮಳೆಗಾಗಿ ದಾರಿಕಾಯದವರು ಯಾರಿದ್ದಾರೆ?
ನೀತಿ ಕಥೆಗಳು
ಕೊಂಡು ತಂದ ಮಾತು
ಕಾಳಿನ ಮೇಲಿನ ಹೆಸರು
ಗೌಡರ ನಾಯಿ
ಆಶೆ ಬಹಳ ಕೆಟ್ಟದು
ಕಥೆಯದೇ ಕಥೆ
ಕೊಂಡು ತಂದ ಮಾತು
ಚಿಕ್ಕ ಹಳ್ಳಿಯೊಂದರಲ್ಲಿ ಸಮಗಾರ ಗಂಡಹೆಂಡಿರಿದ್ದರು. ಗಂಡನು ಹಳೆಯ ಕಾಲ್ಮರೆಗಳನ್ನು ಗಟ್ಟಿಮಾಡಿಕೊಡುವ ಕೆಲಸಮಾಡುತ್ತಿದ್ದನು. ಇಡಿಯವಾರ ದುಡಿದರೂ ಅವನಿಗೆ ಒಂದು ರೂಪಾಯಿಗಿಂತ ಹೆಚ್ಚು ಗಳಿಕೆ ಆಗುತ್ತಿದ್ದಿಲ್ಲ.
ನೆರೆಯೂರಿನ ಸಂತೆಗೆ ಹೋಗಿ ಉಪ್ಪು ಮೆಣಸಿನ ಕಾಯಿ ಮೊದಲಾದವುಗಳನ್ನು ಕೊಂಡುತರುವದಕ್ಕಾಗಿ ಹೆಂಡತಿಯು ಹನ್ನೆರಡಾಣೆ ಹಣವನ್ನು ಗಂಡನ ಕೈಗಿತ್ತಳು. ಹಸಿವೆಯಾದಾಗ ಉಣ್ಣಲೆಂದು ಒಂದೆರಡು ರೊಟ್ಟಿಗಳನ್ನೂ ಕಟ್ಟಿದಳು.
ಸಮಗಾರನು ದಾರಿ ಹಿಡಿದು ಸಾಗುತ್ತಿರಲು ಅವನಿಗೆ ಕುದುರೆಯ ಮೇಲೆ ಕುಳಿತು ಸಂತೆಗೆ ಹೊರಟವನು ಜೊತೆಯಾದನು. ಅವನನ್ನು ಕುರಿತು ಸಮಗಾರನು - “ಅಪ್ಪಾ ಏನಾದರೊಂದು ಮಾತುಹೇಳಿರಿ. ಅಂದರೆ ದಾರಿಸಾಗುತ್ತದೆ” ಎಂದನು.
“ಮಾತೆಂದರೆ ಸುಮ್ಮನೇ ಬರುವವೇ ? ಮಾತಿಗೆ ರೊಕ್ಕ ಬೀಳುತ್ತವೆ” ಎಂದನು ಕುದುರೆಯವನು.
“ಒಂದು ಮಾತಿನ ಬೆಲೆ ಎಷ್ಟು ?” ಸಮಗಾರನ ಪ್ರಶ್ನೆ.
“ನಾಲ್ಕಾಣೆಗೊಂದು ಮಾತು.”
ಹೆಂಡತಿ ಸಂತೆಗಾಗಿ ಕೊಟ್ಟ ಹನ್ನೆರಡಾಣೆಗಳಲ್ಲಿ ನಾಲ್ಕಾಣೆಕೊಟ್ಟು ಒಂದು ಮಾತು ಕೊಂಡರಾಗುತ್ತದೆ. ಕೊಂಡಮಾತು ಎಂಥವಿರುತ್ತವೆಯೋ ನೋಡೋಣ - ಎಂದುಕೊಂಡು, ಕಿಸೆಯೊಳಗಿನ ನಾಲ್ಕಾಣೆ ರೊಕ್ಕ ತೆಗೆದು ಕುದುರೆಯವನ ಕೈಯಲ್ಲಿಟ್ಟು - “ಒಂದು ಮಾತು ಹೇಳಿರಿ” ಅಂದನು.
“ಸತ್ತವನನ್ನು ಹೊತ್ತು ಹಾಕಬೇಕು.”
“ಇಷ್ಟಕ್ಕೇ ನಾಲ್ಕಾಣೆ ಕೊಟ್ಟಂತಾಯಿತು. ಆಗಲಿ. ಇನ್ನೊಂದು ಮಾತು ಹೇಳಿ. ಇಕೊಳ್ಳಿರಿ, ನಾಲ್ಕಾಣೆ” ಸಮಗಾರನು ಅನ್ನಲು
“ಸರಕಾರದ ಮುಂದೆ ಸುಳ್ಳು ಹೇಳಬಾರದು. ಇದು ಕುದುರೆಯವನು ಹೇಳಿದ ಎರಡನೇಮಾತು. ಸಮಗಾರನಿಗೆ ಅನಿಸಿತು “ಇನ್ನುಳಿದ ನಾಲ್ಕಾಣೆಯಿಂದ ಸಂತೆಯಲ್ಲಿ ಏನುಕೊಳ್ಳಲಿಕ್ಕಾಗುತ್ತದೆ? ಇನ್ನೊಂದು ಮಾತನ್ನೇ ಕೊಂಡರಾಯಿತು” ಕುದುರೆಯವನಿಗೆ ಮತ್ತೆ ನಾಲ್ಕಾಣೆಕೊಟ್ಟು ಮೂರನೇ ಮಾತು ಕೇಳಿದನು.
“ಹೆಂಡತಿಯ ಮುಂದೆ ನಿಜ ಹೇಳಬಾರದು” ಇದೇ ಆತನು ಹೇಳಿಕೊಟ್ಟ ಮೂರನೇಮಾತು. ಸಮಗಾರನಿಗೆ ಸಂತೆಯಲ್ಲಿ ಮಾಡಬೇಕಾದ ಯಾವಕೆಲಸವೂ ಇರಲಿಲ್ಲ. ನೇರವಾಗಿ ಹಳ್ಳಕ್ಕೆ ಹೋಗಿ ಹೆಂಡತಿಕಟ್ಟಿಕೊಟ್ಟ ಎರಡು ರೊಟ್ಟಿಗಳನ್ನು ತಿಂದು, ಊರ ಚಾವಡಿ ಮುಂದಿನ ಕಟ್ಟೆಯಮೇಲೆ ಕುಳಿತುಕೊಂಡನು. ಅಷ್ಟರಲ್ಲಿ ಓಲೆಕಾರನು ಬ೦ದು - “ನಿನ್ನನ್ನು ಗೌಡರು ಕರೆಯುತ್ತಾರೆ” ಎನ್ನಲು ಸಮಗಾರನು ಗೌಡನ ಬಳಿಗೆ ಹೋದನು. ಗೌಡ ಹೇಳಿದನು ಆತನಿಗೆ - “ಇಗೋ, ಇಲ್ಲಿ ಯಾವ ಊರಿನವನೋ ಏನೋ, ಮಲಗಿಕೊಂಡಲ್ಲಿಯೇ ಸತ್ತಿದ್ದಾನೆ. ಆತನನ್ನು ಹೊತ್ತೊಯ್ದು ಹುಗಿದು ಬಾ, ಎರಡು ರೂಪಾಯಿ ಕೊಡುತ್ತೇನೆ.”
ಸಮಗಾರನಿಗೆನಿಸಿತು - ನಾಲ್ಕಾಣೆಗೆ ಕೊಂಡ ಒಂದು ಮಾತು ಎರಡು ರೂಪಾಯಿ ಗಳಿಸಿಕೊಡುತ್ತಿರುವಾಗ ಒಲ್ಲೆನೆನ್ನಬಾರದು. ಗೌಡನಿಂದ ಎರಡು ರೂಪಾಯಿ ಇಸಗೊಂಡು ಮಲಗಿದವನ ಬಳಿಗೆ ಹೋಗಿ, ಅವನನ್ನು ಎತ್ತಿ ಕುಳ್ಳಿರಿಸುವಷ್ಟರಲ್ಲಿ ಒಂದು ಹಮ್ಮಿಣಿಯೇ ಸಿಕ್ಕಿತು. ಅದನ್ನು ಭದ್ರವಾಗಿರಿಸಿಕೊಂಡು ಹೆಣವನ್ನು ಹೊತ್ತು ಹುಗಿದುಬಂದನು ಸಂತೆಗೆ.
ಜೀವ ಬೇಡಿದ್ದನ್ನು ಮೊದಲು ಕೊಂಡು ತಿಂದು, ಆ ಬಳಿಕ ಒಂದು ಕುದುರೆಯನ್ನು ಕೊಂಡು ಅದರ ಮೇಲೆ ಕುಳಿತುಕೊಂಡು ತನ್ನೂರ ಹಾದಿ ಹಿಡಿದನು. ದಾರಿ ನೋಡುತ್ತ ಕುಳಿತ ಹೆಂಡತಿಯು ದೂರದಿಂದಲೇ ಗಂಡನನ್ನು ಗುರುತಿಸಿ, “ಕುದುರೆ ಎಲ್ಲಿಂದ ತಂದಿ” ಎಂದು ಕೇಳಿದಳು. “ತಡೆ, ಹೇಳುತ್ತೇನೆ” ಎಂದು ಕುದುರೆ ಕಟ್ಟಿ ಹಾಕಿ ಒಳಗೆ ಹೋಗಿ ಹೆಂಡತಿಯ ಕೈಯಲ್ಲಿ ಹಮ್ಮೀಣಿಕೊಟ್ಟು ತೆಗೆದು ಇಡಲು ಹೇಳಿದನು.
“ಇದೆಲ್ಲಿ ಸಿಕ್ಕಿತು ?" ಹೆಂಡತಿಯ ಪ್ರಶ್ನೆ.
“ನೀನು ಕಟ್ಟಿಕೊಟ್ಟ ಎರಡು ರೊಟ್ಟಿಯಿಂದ ಹೊಟ್ಟೆತುಂಬಲಿಲ್ಲ. ಒಂದು ಎಕ್ಕೆಲೆ ಗಿಡದ ಬಳಿಗೆ ಹೋಗಿ ಅದರ ಹಾಲು ತೆಗೆದುಕೊಂಡು ಕುಳಿತಾಗ ಈ ಹಮ್ಮೀಣಿ ಕಾಣಿಸಿತು” ಎಂದು ಸುಳ್ಳುಸುಳ್ಳೇ ಹೇಳಿದನು. ಹೆ೦ಡತಿಯ ಮುಂದೆ ನಿಜ ಹೇಳಬಾರದು - ಎ೦ಬ ಮಾತು ಕೊಂಡಿದ್ದನಲ್ಲವೇ ?
ಹಮ್ಮೀಣಿಯ ಸಹಾಯದಿಂದ ಸಮಗಾರನು ಹೊಸಮನೆ ಕಟ್ಟಿಸಿದನು. ಎತ್ತುಗಳನ್ನು ಕೊಂಡನು. ಗಾಡಿ ಮಾಡಿಸಿದನು. ಹಯನಿಗೆ ಎಮ್ಮೆ ಕಟ್ಟಿದನು. ಹೆಂಡತಿಗೆ ಒಳ್ಳೊಳ್ಳೆಯ ಸೀರೆ ಕುಪ್ಪಸ ಕೊಟ್ಟನು. ಆಭರಣಗಳನ್ನು ತಂದನು. ಅದನ್ನೆಲ್ಲ ಕಂಡು ನೆರೆಹೊರೆಯವರಿಗೆ ಆಶ್ಚರ್ಯವೆನಿಸಿತು.
ಸಮಗಾರನ ಹೆಂಡತಿಯನ್ನು ಒತ್ತಟ್ಟಿಗೆ ಕರೆದು, ನೆರೆಮನೆಯ ಹೆಣ್ಣುಮಗಳು ಕೇಳಿದಳು - “ಇದೆಲ್ಲ ಐಶ್ವರ್ಯ ಎಲ್ಲಿಂದ ಬಂತು ?”
“ಸಂತೆಗೆ ಹೋದಾಗ ನನ್ನ ಗಂಡನು ಹೊಟ್ಟೆತುಂಬಲಿಲ್ಲವೆಂದು ಎಕ್ಕೆಲೆಯ ಹಾಲು ಕುಡಿದು, ಕುಳಿತಾಗ ರೊಕ್ಕದ ಹಮ್ಮೀಣಿಯೇ ಕಾಣಿಸಿತಂತೆ”' ಎಂದು ಸಮಗಾರತಿ ಹೇಳಿದಳು.
ನೆರೆಮನೆಯ ಹೆಂಗಸು ತನ್ನ ಗಂಡನನ್ನು ಸಂತೆಗೆ ಕಳಿಸುವ ಎತ್ತುಗಡೆ ಮಾಡಿದಳು. ಎಕ್ಕೆಲೆಯ ಹಾಲು ಕುಡಿಯುವ ರಹಸ್ಯವನ್ನು ಹೇಳಿಕೊಟ್ಟಳು. ಕೈಯಲ್ಲಿ ಹನ್ನೆರಡಾಣೆ ರೊಕ್ಕ ಕೊಟ್ಟಳು.
ಶ್ರೀಮಂತನಾಗಬೇಕೆಂಬ ಹವ್ಯಾಸದಿಂದ ಹೆಂಡತಿಯ ಮಾತು ಕೇಳಿ ಎಕ್ಕೆಲೆಯ ಹಾಲು ಕುಡಿದು, ಹೊಟ್ಟೆಯುರಿಯುವದೆಂದು ಮನೆಗೆ ಬಂದು ಆ ಗೃಹಸ್ಥನು ಸತ್ತೇಹೋದನು. ಆತನ ಹೆಂಡತಿ ಸಮಗಾರ್‍ತಿಯ ಮಾತು ಕೇಳಿದ್ದರಿಂದ ಹೀಗಾಯಿತೆಂದು ಬೊಬ್ಬಿಟ್ಟಳು.
ಸರ್ಕಾರದವರು ಸಮಗಾರ್ತಿಯನ್ನು ಕರೆಸಿ ಕೇಳಿದರೆ ಆಕೆ ತನ್ನ ಗಂಡನ ಹೆಸರು ಹೇಳಿದಳು. ಸಮಗಾರನನ್ನು ಕರೆಯಿಸಲು, ಸರ್ಕಾರದ ಮುಂದೆ ಸುಳ್ಳು ಹೇಳಬಾರದು - ಎ೦ಬ ಮಾತು ನೆನಪಿಗೆ ಬಂತು. ನಡೆದ ಸಂಗತಿಯನ್ನೆಲ್ಲ ಹೇಳಿದನು. ಹೆಂಡತಿಯ ಮುಂದೆ ನಿಜ ಹೇಳಬಾರದು - ಎ೦ಬ ಮಾತಿನ ಪ್ರಕಾರ ನಾನು ಆಕೆಗೆ ಎಕ್ಕಲೆಯ ಕಥೆಯನ್ನು ಹುಟ್ಟಿಸಿಕೊಂಡು ಹೇಳಿದೆನೆಂದೂ ನುಡಿದನು.
“ಎಕ್ಕೆಲೆಯ ಹಾಲು ಕುಡಿದರೆ ಹೊಟ್ಟೆಯಲ್ಲಿ ಉರುಪುಬಿಟ್ಟು ಸಾಯುವರು” ಎಂಬುದು ನಿನ್ನ ಗಂಡನಿಗೆ ತಿಳಿಯಲಿಲ್ಲವೇ ? ಹೋಗು. ಸಮಗಾರ್ತಿಯದಾಗಲಿ ಸಮಗಾರನದಾಗಲಿ ಏನೂ ತಪ್ಪಿಲ್ಲ. ನಿನ್ನದೇ ತಪ್ಪು. ಮಾಡಿದ್ದನ್ನು ಭೋಗಿಸು?” ಎಂದರು ಸರ್ಕಾರದವರು ಆಕೆಗೆ.
ಕಾಳಿನ ಮೇಲೆ ಹೆಸರು
ಸಾಹುಕಾರನು ನೆಲಗಡಲೆ ತಿನ್ನುತ್ತ ತನ್ನ ಮನೆಯ ತಲೆವಾಗಿಲ ಮುಂದೆ ಕುಳಿತಿದ್ದನು. ಅತ್ತಕಡೆಯಿಂದ ಒಬ್ಬ ಸಾಧು ಬಂದು ಭಿಕ್ಷೆ ಬೇಡಿದನು. “ಮುಂದಿನ ಮನೆಗೆ ಹೋಗು?” ಎಂದು ಸಾಹುಕಾರನು ನುಡಿದನು.
“ತಿನ್ನಲು ನಾಲ್ಕು ಕಾಯಿಗಳನ್ನಾದರೂ ಕೊಡಿರಿ” ಎಂದನು ಸಾಧು.
“ಅವು ಪುಕ್ಕಟೆ ಬಂದಿಲ್ಲ. ನಮಗೆ ಸಾಕಾಗಿ ಉಳಿದರೆ, ನಿನ್ನನ್ನು ಕರೆದು ಕೊಡುವೆನು. ಆಯಿತೇ ?” ಎಂದು ಸಾಹುಕಾರನು ಹೀಯಾಳಿಸಿದನು.
“ಎಲ್ಲವನ್ನೂ ನಾನೇ ತಿನ್ನುವೆನೆಂದರೆ ಸಾಧ್ಯವೇ ? ಪ್ರತಿಯೊಂದು ಕಾಳಿನ ಮೇಲೆ ಅದು ಹುಟ್ಟುವಾಗಲೇ ಅದನ್ನು ಯಾರು ತಿನ್ನಬೇಕಾಗಿದೆಯೋ ಅವರ ಹೆಸರು ಬರೆದಿರುತ್ತದೆ.”
ಸಾಹುಕಾರನ ತಲೆ ತಿರುಗಿತು - ಸಾಧುವಿನ ಬ್ರಹ್ಮಜ್ಞಾನವನ್ನು ಕೇಳಿ. ಕೇಳಿದನು. - “ನೀನೊಬ್ಬ ಒಂಟೆಯ ಮೇಲಿನ ಜಾಣನೇ ಬ೦ದಿರುವೆಯಲ್ಲ | ಇಲ್ಲಿ ನೋಡು ನನ್ನ ಕೈ ಬೆರಳಿನಲ್ಲಿ ಹಿಡಿದ ಕಾಳು ! ಇದರ ಮೇಲೆ ಯಾರ ಹೆಸರು ಬರೆದಿದೆ ಹೇಳು ನೋಡುವಾ."
“ಅದರ ಮೇಲೆ ಒಂದು ಕಾಗೆಯ ಹೆಸರಿದೆ. ಆ ಕಾಳು ಅದರ ಆಹಾರ” ಎಂದನು ಸಾಧು.
ಸಾಹುಕಾರನು ಈರ್ಷೆಯಿಂದ - “ಇದೋ ನಾನಿದನ್ನು ತಿಂದುಬಿಡುವೆ. ಎಲ್ಲಿದೆ ನಿನ್ನ ಆ ಕಾಗೆ ?” ಎನ್ನುತ್ತ ಆ ಕಾಳನ್ನು ಬಾಯಲ್ಲಿ ಒಗೆದುಕೊಳ್ಳಹೋದನು. ಅದು ತಪ್ಪಿ ಅವನ ಮೂಗಿನ ಹೊರಳೆಯಲ್ಲಿ ಸೇರಿಬಿಟ್ಟಿತು.
ನೆಲಗಡಲೆಯಕಾಳು ಮೂಗಿನ ಹೊರಳೆಂಯಲ್ಲಿ ಸೇರಿಬಿಟ್ಟಿದ್ದರಿ೦ದ ಸಾಹುಕಾರನ ಉಸಿರಾಟಕ್ಕೆ ತಡೆಯಾಯಿತು. ಕೂಗಾಡತೊಡಗಿದನು. ಆ ಗಲವಿಲಿಗೆ ನೆರೆಹೊರೆಯವರು ನೆರೆದರು. ಆತನನ್ನು ಹೊತ್ತುಕೊಂಡು ಕ್ಷೌರಿಕನ ಮನೆಗೆ ಹೋದರು.
ತನ್ನಲ್ಲಿರುವ ಚಿಮಟಿಗೆಯಿಂದ ಹಡಪಿಗನು, ಸಾಹುಕಾರನ ಮೂಗಿನೊಳಗಿನ ಆ ಕಾಳನ್ನು ತೆಗೆದು ಬೀಸಿ ಅ೦ಗಳಕ್ಕೆ ಒಗೆದನು. ಕೂಡಲೇ ಬದಿಯ ಗಿಡದಲ್ಲಿ ಕುಳಿತ ಕಾಗೆ ಹಾರಿಬಂದು ಆ ಕಾಳನ್ನು ಕಟ್ಟಿಕೊಂಡು ಹೋಯಿತು.
"ಕಾಗೆಗೆಂದು ಹುಟ್ಟಿದ ಕಾಳು ಕಾಗೆಗೆ ಸಂದಿತು" ಎಂದನು ಆ ಸಾಧು. ಆ ಬಳಿಕ ಸಾಧುವನ್ನು ಕರೆದು ಸಾಹುಕಾರನು ಸತ್ಕರಿಸಿ ಕಳಿಸಿದನು.
ಗೌಡರ ನಾಯಿ
ಗೋಡಿಹಾಳ ಗ್ರಾಮ ಚಿಕ್ಕದಾದರೂ ಅಲ್ಲಿಯ ಗೌಡರು ದೊಡ್ಡವರಾಗಿದ್ದರು. ಶ್ರೀಮಂತಿಕೆಗಿಂತ ಅವರಲ್ಲಿ ತಿಳಿವಳಿಕೆ ಹೆಚ್ಚಾಗಿತ್ತು. ವಯಸ್ಸಿನಿಂದಲೂ ಹಿರಿಯರಾಗಿದ್ದರು. ಮಕ್ಕಳೆಲ್ಲ ಕೈಗೆ ಬ೦ದಿದ್ದರು. ಹಿರೇಮಗ ಗೌಡಿಕೆಯನ್ನೂ ಚಿಕ್ಕವನು ಹೊಲಮನೆಗಳ ಮೇಲ್ವಿಚಾರಣೆಂಯನ್ನೂ ನಿಸ್ತರಿಸುತ್ತಿದ್ದನು. ದೊಡ್ಡ ಗೌಡರು ವೇದಾಂತಗ್ರಂಥಗಳನ್ನು ಓದುವುದರಲ್ಲಿ ಆಸಕ್ತಿಯುಳ್ಳವರು. ಬಂದವರೊಡನೆ ಚರ್ಚೆ ಮಾಡುವುದರಲ್ಲಿ ಅವರಿಗೆ ವೇಳೆಯೇ ಸಾಲುತ್ತಿರಲಿಲ್ಲ.
ಚಳಿಗಾಲದ ಮುಂಜಾವಿನಲ್ಲಿ ಮನೆಯ ಮುಂದಿನ ಕಟ್ಟೆಯ ಮೇಲೆ ಬಿಸಿಲು ಕಾಯಿಸಿಕೊಳ್ಳುತ್ತ ಕುಳಿತರೆಂದರೆ, ಅವರ ಮಗ್ಗುಲಲ್ಲಿ ಒಂದು ನಾಯಿ ಯಾವಾಗಲೂ ಪವಡಿಸಿರುತ್ತಿತ್ತು. ಗೌಡರ ಸಲುವಾಗಿ ಅದೆಷ್ಟೋ ಜನರು ಅಲ್ಲಿಗೆ ಬಂದಾಗ ಆ ನಾಯಿ ಜಗ್ಗನೆದ್ದು ಕವ್ಹನೇ ಬೊಗಳಿ ಹೆದರಿಸುವದು. ಒಮ್ಮೊಮ್ಮೆ ಚಂಗನೆ ನೆಗೆದು ಬಂದವರ ಮೈಮೇಲೆ ಏರಿಹೋಗುವದು. ಆಗ ಗೌಡರು ಬೆದರಿಸಿ ಅದನ್ನು ಹತ್ತಿರ ಕರೆದು ಕುಳ್ಳಿರಿಸಿಕೊಳ್ಳುವರು. ಅದರಿಂದ ಸಂದರ್ಶನಾರ್ಥಿಗಳಿಗೆ ನಿರ್ಬಾಧವಾಗುವದು.
ಅದೆಷ್ಟೋ ಜನರು ನಾಯಿಗಂಜಿಯೇ ಗೌಡರ ಬಳಿಗೆ ಹೋಗುವುದಕ್ಕೆ ಹಿಂಜರಿಯುತ್ತಿದ್ದರು. ನಾಯಿಯ ಆ ಸ್ವಭಾವಕ್ಕಾಗಿ ಗೌಡರಿಗೂ ಬೇಸರವೆನಿಸಿತ್ತು. ಆದರ ಸ್ವಭಾವ ಪರಿವರ್ತನಗೊಳಿಸುವದಕ್ಕೆ ಯಾವ ಹಂಚಿಕೆಮಾಡಬೇಕು ಎಂದು ಯೋಚನೆಗೀಡಾದರು. ಒ೦ದು ಯುಕ್ತಿಯೂ ಹೊಳೆಯಿತವರಿಗೆ. ಸಿದ್ಧತೆಮಾಡಿ ಕೊಂಡರು. ನಾಯಿಯನ್ನು ಹತ್ತಿರಕ್ಕೆ ಕರೆದು ಕುಳ್ಳಿರಿಸಿಕೊಂಡರು. ಸೂಜಿಯಿಂದ ಕೇರಿನೆಣ್ಣೆ ತೆಗೆದು ನಾಯಿಯ ಪೃಷ್ಠದ್ಧಾರದ ಮೇಲೆ ಅಧಿಕ ಚಿಹ್ನ ಬರೆದರು. ಅದು ಒಂದೆರಡು ದಿನಗಳಲ್ಲಿ ಗುದುಗುದಿಸಹತ್ತಿದ್ದರಿಂದ ನಾಯಿ ಎದ್ದುನಿಂತು ಮುಕಳಿಯನ್ನು ನೆಲಕ್ಕೆ ತಿಕ್ಕಿತು. ಅದರಿಂದ ಗುದದ್ದಾರವು ಕೆತ್ತಿಹೋಗಿ ಹುಣ್ಣೇ ಬಿದ್ದಿತು. ಕೀವು ಆಯಿತು. ಆದರೆ ಬಂದ ಹೊಸಬರನ್ನು ಕಂಡು, ವವ್ಚ್ ಎಂದು ಜೊಗಳಿ ಅವರ ಮೈಮೇಲೆ ಹೋಗುವುದನ್ನು ಬಿಟ್ಟಿರಲಿಲ್ಲ. ಆದರೆ ವವ್ಚ್ ಎಂದು ಬೊಗಳಬೇಕಾದರೆ ಗುದದ್ವಾರವನ್ನು ಬಿಗಿಹಿಡಿಯಬೇಕಾಗುತ್ತದೆ. ಹಾಗೆ ಬಿಗಿಹಿಡಿಯುವಾಗ, ಹುಣ್ಣು ಬಿದ್ದಿದ್ದರಿಂದ ಅಸಹ್ಯವಾದ ನೋವುಂಟಾಗುವದು. ಅದೆಷ್ಟು ರಭಸದಿಂದ ಚಂಗನೆ ನೆಗೆದು ಬಂದವರ ಮೈಮೇಲೆ ಹೋಗುವದೋ, ಅಷ್ಟೇ ವೇದನೆಯಿಂದ “ಆ೦sss” ಎಂದು ನರಳಿ ಹಿಂದಿರುಗಿ ಬರತೊಡಗಿತು.
ಗುದದ್ವಾರದಲ್ಲಿ ಬಿದ್ದ ಹುಣ್ಣಿನ ನೋವಿಗಂಜಿ ಅದು, ರಭಸದಿಂದ ಬೊಗಳಿ ಬಂದವರ ಮೇಲೆ ಹೋಗುವುದನ್ನು ಒಮ್ಮೆಲೇ ಕಡಿಮೆ ಮಾಡಿತು. ಅಲ್ಲಿಯವರಿಗೆ ಆ ಹುಣ್ಣು ಮಾಯಿಸುವ ಉಪಾಯವನ್ನೇ ಮಾಡಲಿಲ್ಲ ಗೌಡರು.
“ಕಳೆನೋಡಿ ಕೇರು ಹಾಕಿದರೆ ಹಾದಿಗೆ ಬಾರದವರಾರು” ಎಂದು ಗೌಡರ ಮೇಲಿಂದ ಮೇಲೆ ಮಾತಿನಲ್ಲಿ ನುಡಿಯತೊಡಗಿದರು. ಕೇಳಿದವರಿಗೆ ಅದು ಸತ್ಯವೂ ಅನಿಸಿತು.
ಆಶೆ ಬಹಳ ಕೆಟ್ಟದು
ಕಾಶಮ್ಮ - ಮಲ್ಲೇಶಿ ಎಂಬ ಅಜ್ಜಿ ಮೊಮ್ಮಗ ಇದ್ದರು. ಮೊಮ್ಮಗನು ದುಡಿದು ತಂದಷ್ಟರಲ್ಲಿಯೇ ಅವರಿಬ್ಬರೂ ಕಷ್ಟದಿಂದ ಬಾಳ್ವೆ ಮಾಡುತ್ತಿದ್ದರು. ಒಂದು ದಿನ ಮಲ್ಲೇಶಿ ಹೇಳಿದನು ಅಜ್ಜಿಗೆ - “ಅಜ್ಜಿ, ಈ ಚಿಕ್ಕ ಹಳ್ಳಿಯಲ್ಲಿ ಬಾಳ್ವೆ ಸರಿಯಾಗಿ ಸಾಗುವಂತಿಲ್ಲ. ನೆರೆಯೂರಿಗೆ ಹೋಗೋಣ.” ಅಜ್ಜಿಗೂ ಆ ಮಾತು ಸಮ್ಮತವಾಯಿತು. ಹೊರಟೇಬಿಟ್ಟರು ಬೆಣ್ಣೆಕಟ್ಟೆಗೆ.
ಬೆಣ್ಣೆಕಟ್ಟೆಗೆ ಒಬ್ಬ ಸಾಹುಕಾರನ ಮನೆಗೆ ಹೋದಾಗ ಅವನು ಅದೇ ಉಂಡು, ಎಲೆ ಅಡಿಕೆ ಮೆಲ್ಲುತ್ತ ಕುಳಿತುಕೊಂಡಿದ್ದನು. ಅಜ್ಜಿ ಕೇಳಿದಳು “ಧನಿಯರೇ ನಾವು ಬೇರೂರಿಂದ ಬಂದಿದ್ದೇವೆ. ಇಲ್ಲಿ ದುಡಕೊಂಡು ತಿನ್ನಲಿಕ್ಕೆ. ಇರಲಿಕ್ಕೆ ಒಂದಿಷ್ಟು ಜಾಗಕೊಡಿರಿ.”
“ನಮ್ಮ ಹಿತ್ತಲಲ್ಲಿ ಕಸ ಚೆಲ್ಲುವ ಒಂದು ಗುಂಡಿಯಿದೆ. ಅದರೊಳಗಿನ ಕಸವನ್ನೆಲ್ಲ ನಮ್ಮ ತೋಟಕ್ಕೊಯ್ದು ಹಾಕಿ ಆ ತೋಟದಲ್ಲಿರುವ ಒಂದೆರಡು ಮುರುಕು ತಗಡುಗಳನ್ನು ತಂದು ಆಶ್ರಯ ಮಾಡಿಕೊಂಡು ಇರುವಿರಾ ?” ಸಾಹುಕಾರನು ಕೇಳಿದನು.
“ಆ ಜಾಗದ ಬಾಡಿಗೆ ಎಷ್ಟು ?” ಅಜ್ಜಿಯ ಪ್ರಶ್ನೆ.
“ನಮ್ಮಲ್ಲಿರುವ ನಾಲ್ಕು ಎಮ್ಮೆ, ಎರಡು ಹೋರಿ, ಮೂರು ಆಕಳುಗಳನ್ನು ಕಾಯಬೇಕು. ಅವುಗಳ ಸೆಗಣಿಯನ್ನು ಬಡಿದು ಕುಳ್ಳುಹಚ್ಚಬೇಕಲ್ಲದೆ ಅವುಗಳನ್ನು ಮಾರಿಕೊಂಡು ಬಂದು, ನಮಗೆ ರೊಕ್ಕ ಕೊಡಬೇಕು ; ಅದೇ ಬಾಡಿಗೆ.”
ಸಾಹುಕಾರನು ಹೇಳಿದ್ದಕ್ಕೆ ಮುದಿಕೆ ಒಪ್ಪಿಕೊಂಡಳು. ಮಲ್ಲೇಶಿಗೂ ಕೆಲಸ ದೊರೆತು ಉಪಜೀವನಕ್ಕೆ ದಾರಿಯಾಯಿತು.
ಶಿವನು ಸಾಹುಕಾರನನ್ನು ಪರೀಕ್ಷಿಸಬೇಕೆಂದು ಮುಪ್ಪಿನ ಭಿಕ್ಷುಕನಾಗಿ ಬಂದು ಒಂದು ದಿನ ಸಾಹುಕಾರನ ಮನೆಯ ಮುಂದೆ ನಿಂತು – “ಅನ್ನ ನೀಡಿರಿ” ಎಂದು ಕೂಗ ತೊಡಗಲು, “ಮುಂದೆ ಸಾಗು” ಎಂದು ಸಾಹುಕಾರನು ಅಬ್ಬರಿಸಿದನು. ಅದನ್ನು ಕಂಡು ಕನಿಕರವೆನಿಸಿ ಅಜ್ಜಿಯು ಆ ಮುದುಕನನ್ನು ಕರೆತಂದು ಕುಳ್ಳಿರಿಸಿ ಉಣಬಡಿಸಿದಳು. ಒಂದು ರೊಟ್ಟಿ, ಪುಂಡಿಪಲ್ಲೆ, ಹಸಿದ ಭಿಕ್ಷುಕನು ಅದನ್ನು ಗಪಗಪನೆ ತಿಂದು ಇನ್ನೂ ಒಂದು ರೊಟ್ಟಿ ಕೇಳಿದನು. ಮೊಮ್ಮಗನಿಗಾಗಿ ಇಟ್ಟ ರೊಟ್ಟಿಯನ್ನೂ ಅಜ್ಜಿಯು ಭಿಕ್ಷುಕನಿಗೆ ನೀಡಿದಳು ಅದೂ ಸಾಕಾಗದೆ - “ಅಜ್ಜೀ, ನೀನು ಬಯ್ದರೂ ಚಿಂತೆಯಿಲ್ಲ. ಇನ್ನೊಂದು ರೊಟ್ಟಿ ಕೊಡಮ್ಮ” ಎಂದನು ಆ ಭಿಕ್ಷುಕ.
ಅಜ್ಜಿಯ ಬಳಿಯಲ್ಲಿಯೂ ರೊಟ್ಟಿ ಉಳಿದಿರಲಿಲ್ಲ. ವಿಚಾರಿಸತೊಡಗಿದಳು. ಮರು ಕ್ಷಣದಲ್ಲಿ ಏನೋ ಹೊಳೆದಂತಾಗಿ ಅಲ್ಲಿಂದೆದ್ದು ಸಾಹುಕಾರನ ಮನೆಗೆ ಹೋಗಿ ಒಂದು ರೊಟ್ಟಿಯನ್ನು ಕೈಗಡ ಕೇಳಿದಳು. “ರೊಟ್ಟಿಯನ್ನು ಕೈಗಡ ಕೊಡುವದಿಲ್ಲ. ಸಾಲವಾಗಿ ಕೊಡುತ್ತೇನೆ. ಅದಕ್ಕೆ ಬಡ್ಡಿ ಬೀಳುತ್ತದೆ” ಎಂದನು.
ಅಜ್ಜಿ ಅದಕ್ಕೊಪ್ಪಲು ಸಾಹುಕಾರನು ಒಳಗೆ ಹೋಗಿ ಹೆಂಡತಿಗೆ ಹೇಳಿದನು, ಕಿವಿಯಲ್ಲಿ - “ತುಸು ಹಿಟ್ಟು ಹಿಡಿದು ತೆಳ್ಳಗಿನ ಒಂದು ರೊಟ್ಟಿ ಮಾಡಿಕೊಡು.” ಸಾಹುಕಾರನಿತ್ತ ರೊಟ್ಟಿಯನ್ನು ತಂದು ಅಜ್ಜಿ ಭಿಕ್ಷುಕನಿಗೆ ನೀಡಿದಳು. ಆತನು ಉಂಡು ಸಂತುಷ್ಟನಾಗಿ ಅಜ್ಜಿಗೊಂದು ದುಡ್ಡುಕೊಟ್ಟು - “ನಿನ್ನ ಮೊಮ್ಮಗನಿಗೆ ಚುರುಮುರಿ ತಿನ್ನಲಿಕ್ಕೆ” ಎಂದನು. ಅಜ್ಜಿ ಆ ದುಡ್ಡನ್ನು ತನ್ನ ಮುರುಕ ಪೆಟ್ಟಿಗೆಯಲ್ಲಿಟ್ಟಳು.
ಮಧ್ಯಾಹ್ನದ ಹೊತ್ತಿಗೆ ಮಲ್ಲೇಶಿ ಹೊಲದಿಂದ ಹಸಿದು ಬಂದು, ಊಟಕ್ಕೆ ಸಿದ್ಧನಾದನು. ಅಜ್ಜಿಗೇನೂ ತಿಳಿಯದಾಯಿತು. ಮನೆಯಲ್ಲಿ ರೊಟ್ಟಿಯೂ ಇರಲಿಲ್ಲ. ಹಿಟ್ಟೂ ಇರಲಿಲ್ಲ. “ಒಂದು ದುಡ್ಡ ಅದೆ, ಚುರುಮುರಿಕೊಂಡು ತಿನ್ನು” ಎಂದು ಪೆಟ್ಟಿಗೆ ತೆಗೆದು ನೋಡಿದಾಗ, ಪೆಟ್ಟಿಗೆಯ ತುಂಬ ಬಂಗಾರವಾಗಿತ್ತು. “ಇದನ್ನೆಲ್ಲಿಂದ ತಂದೆ ? ಯಾರು ಕೊಟ್ಟರು ?” ಎಂದು ಕೇಳಿದನು ಮಲ್ಲೇಶಿ. ಅಜ್ಜಿ ನಡೆದ ಕಥೆಯನ್ನೆಲ್ಲ ಹೇಳಿದನು.
ಪೆಟ್ಟಿಗೆಯೊಳಗಿನ ಅರ್ಧಬಂಗಾರ ಮಾರಿ, ಬೆಚ್ಚಗಿನ ಮನೆ ಕಟ್ಟಿಸಿದರು. ಎತ್ತು ಗಾಡಿ ಕೊಂಡರು. ಮಲ್ಲೇಶಿಯೂ ಒಬ್ಬ ಸಾಹುಕಾರನೇ ಆಗಿ ಕುಳಿತನು, ಆ ಬೆಣ್ಣೆಕಟ್ಟಿಯಲ್ಲಿ.
ಅದನ್ನೆಲ್ಲ ಕಂಡ ಸಾಹುಕಾರನಿಗೆ ಅಸೂಯೆ ಉಂಟಾಯಿತು. ಇದೆಲ್ಲ ಐಶ್ವರ್ಯ ಏತರಿಂದ ಬಂತೆಂದು ಅಜ್ಜಿಗೆ ಕೇಳಲು ಹೆಂಡತಿಗೆ ತಿಳಿಸಿದನು. ಸಾಹುಕಾರನ ಹೆಂಡತಿ ಅಜ್ಜಿಯ ಮನೆಗೆ ಬಂದು ಕೇಳಿದರೆ - “ಭಿಕ್ಷುಕ ಮುದುಕನು ನಮ್ಮಲ್ಲಿ ಉಂಡು ಹೋಗುವಾಗ ಒಂದು ದುಡ್ಡು ಕೊಟ್ಟ ಹೋಗಿದ್ದನು. ಅದರಿಂದ ಒಂದು ಪೆಟ್ಟಿಗೆ ಬಂಗಾರವಾಗಿ ಬಿಟ್ಟಿತು. ಅದೇ ಈ ಎಲ್ಲ ಐಶ್ವರ್ಯಕ್ಕೆ ಕಾರಣ” ಎಂದಳು ಕಾಶಮ್ಮಜ್ಜಿ.ಹೆಂಡತಿಯ ಬಾಯಿಂದ ಅಜ್ಜಿಯ ಐಶ್ವರ್ಯದ ಕಾರಣ ತಿಳಿದು ಸಾಹುಕಾರನ ಆಶೆಗೆ ಕುಡಿ ಒಡೆಯಿತು. ಒಬ್ಬ ಭಿಕ್ಷುಕನನ್ನು ಹಿಡಿದು ತಂದು, ಹುಗ್ಗಿ ಹೋಳಿಗೆ ಉಣಿಸಿದರೆ, ಆತನು ಒಂದೇ ದುಡ್ಡಲ್ಲ ಎರಡು ದುಡ್ಡು ಕೊಡುವದರಿಂದ ಎರಡು ಪೆಟ್ಟಿಗೆ ಬಂಗಾರ ಸಿದ್ಧವಾಗುವದೆಂದು ಲೆಕ್ಕ ಹಾಕಿದನು. ಶಿವನು ಅದೇ ವೇಷದಿಂದ ಕಾಣಿಸಿಕೊಳ್ಳಲು ಅವನನ್ನು ಕರೆತಂದು ಪಂಚಪಕ್ವಾನ್ನಗಳನ್ನು ಸಾಕುಸಾಕೆಂದರೂ ಉಣಬಡಿಸಿದರು. ಭಿಕ್ಷುಕನು ಉಂಡುಹೋಗುವಾಗ ವಾಡಿಕೆಯಂತೆ ಕೊಟ್ಟ ದುಡ್ಡನ್ನೂ ಸಾಹುಕಾರನು ತಿಜೋರಿಯಲ್ಲಿಟ್ಟು ಕೀಲಿಹಾಕಿದನು.
ಅಂದು ರಾತ್ರಿ ಆತನಿಗೆ ನಿದ್ರೆಯೇ ಹತ್ತಲಿಲ್ಲ. ಹೊತ್ತು ಹೊರಡುವ ಸಂದರ್ಭವನ್ನೇ ನೋಡುತ್ತಿದ್ದನು. ತಡವಾಗಿಯಾದರೂ ಒಮ್ಮೆ ಬೆಳಗಾಯಿತು. ಸಾಹುಕಾರನು ಎದ್ದವನೇ ಮುಖಸಹ ತೊಳಕೊಳ್ಳದೆ, ಹೆಂಡತಿಯನ್ನು ಕರೆದು ತಿಜೋರಿಯನ್ನು ತೆರೆದರೆ, ಅಲ್ಲೇನು ಕಂಡನು? ಹಣವೆಲ್ಲ ಹಂಚಾಗಿತ್ತು. ಬಂಗಾರವೆಲ್ಲ ಇದ್ದಿಲಾಗಿತ್ತು. ವಸ್ತುಒಡವೆಗಳೆಲ್ಲ ಚೀಪುಗಲ್ಲು ಆಗಿದ್ದವು. ಏತಕ್ಕಾಗಿ ಬದುಕುವುದಿನ್ನು - ಎಂದು ನಿರಾಶನಾಗಿ ಕೈಯಾಡಿಸುವಷ್ಟರಲ್ಲಿ ಅವನ ಕೈಗೆ ಒಂದು ಕಾಗದ ಸಿಕ್ಕಿತು. ಅದನ್ನೆತ್ತಿಕೊಂಡು ಬಿಚ್ಚಿ ನೋಡುತ್ತಾನೆ, ಒಳಗೆ ಏನೋ ಬರೆದಿದೆ-
“ಆಶೆ ಬಹಳ ಕೆಟ್ಟದು. ಆಶೆಬುರುಕನಾಗಬಾರದು.” ಆ ಪಾಠ ಹೇಳಿಸಿಕೊಳ್ಳಲಿಕ್ಕೆ ಅದೆಷ್ಟು ಶುಲ್ಕವೀಯಬೇಕಾಯಿತಲ್ಲ ಆ ಸಾಹುಕಾರ !
ಕಥೆಯದೇ ಕಥೆ
ಅಳಿಯ ಇದ್ದನು. ಹಾಡಬಂದರೂ ಹಾಡು ಹೇಳುತ್ತಿದ್ದಿಲ್ಲ ; ಕಥೆ ಬಂದರೂ ಕಥೆ ಹೇಳುತ್ತಿದ್ದಿಲ್ಲ. “ಏನು ಬಂದು ಏನುಕಂಡೆವು. ಇವನೇನು ಒಂದು ಹಾಡು ಹೇಳಲಿಲ್ಲ ; ಕಥೆ ಹೇಳಲಿಲ್ಲ. ಇವನನ್ನು ಹೇಗಾದರೂ ಮಾಡಿ ಕೊಲ್ಲಬೇಕು” ಎಂದು ಕಥೆ ಹಂಚಿಕೆ ಹಾಕಿತು.
“ಮುಂಜಾನೆ ಎದ್ದಕೂಡಲೇ ಜೋಡು ಮೆಡುತ್ತಾನೆ. ಆವಾಗ ಅವನಿಗೆ ಚೇಳು ಆಗಿ ಕಡಿಯಬೇಕು. ಹೆಂಡತಿಯನ್ನು ಕರೆಯಲಿಕ್ಕೆ ಹೋಗುತ್ತಾನೆ. ಆವಾಗ ಅಗಸೆ ಅವನ ತಲೆಯಮೇಲೆ ಬೀಳುವಂತೆ ಮಾಡಬೇಕು” ಹೀಗೆನ್ನುವ ಕಥೆಯ ಮಾತನ್ನು ಆಳುಮಗ ಕೇಳಿರುತ್ತಾನೆ.
“ಎವ್ವಾ ಎವ್ವಾ ನಾನೂ ಹೇಣತೀಗಿ ಕರಕೊಂಡು ಬರ್ತಿನಿ” ಎಂದು ಅವ್ವನಿಗೆ ಕೇಳಿ, ಆಕೆಯ ಅಪ್ಪಣೆ ಪಡೆಯುತ್ತಾನೆ, ಆ ಅಳಿಯ.
ಆವಾಗ ಆಳುಮಗ ಅನ್ನುತ್ತಾನೆ. “ನಾನು ಬರ್ತಿನಿ, ನಿನ್ನೊಡನೆ ಧಣೀ” “ಯಾತಕ್ಕ ಬರತೀಯೋ ಎತ್ತು ದನ ನೋಡಕೋತ ಇರು” ಎಂದರೂ ಕೇಳುವದಿಲ್ಲ. ಕುದುರೆಯ ಮೇಲೆ ಜೀನು ಬಿಗಿದು ಸಜ್ಜುಗೊಳಿಸುತ್ತಾನೆ. ಧಣಿಯು ಮುಂಜಾನೆ ಎದ್ದು ಜೋಡು ಮೆಡುವಷ್ಟರಲ್ಲಿ ಆಳು ಜೋಡಿನಲ್ಲಿರುವ ಚೇಳನ್ನು ನೋಡಿ ಅದನ್ನು ಕಡಿದು ಕಿಸೆಯಲ್ಲಿ ಹಾಕಿಕೊಂಡುಬಿಟ್ಟನು.
ಊರುಬಿಟ್ಟು ಹೊರಬೀಳುವಾಗ ಆಳು ಸುತ್ತು ಸುತ್ತು ದಾರಿಯಲ್ಲಿ ಕರಕೊಂಡು ಹೊರಟನು. ಅಗಸೆಯ ಎರಡೂ ದಾರಿ ಬಿಟ್ಟು, ಮೂರನೇ ಅಡ್ಡದಾರಿ ಹಿಡಿದು ಊರ ದಾಟಲಿಕ್ಕೆ ಅನುವು ಮಾಡಿಕೊಟ್ಟನು.
ಇಷ್ಟೆಲ್ಲ ಪಾರು ಆಗಿ ಅತ್ತೆಮಾವನ ಊರು ತಲುಪುತ್ತಾರೆ. ಅಲ್ಲಿ ಕೈಕಾಲು ತೊಳೆಯಲಿಕ್ಕೆ ಮನೆಯವರು ನೀರು ಕೊಟ್ಟರು; ಉಣಬಡಿಸಿದರು. ಬಹಳ ದಿನಗಳ ಮೇಲೆ ಬಂದವನೆಂದು ತಿಳಿದು ಹಾಸಿಗೆ ಮಾಡಿಕೊಟ್ಟು, ಅಳಿಯನಿಗೆ ಮಲಗಲು ಹೇಳಿದರು. ಪ್ರವಾಸದಿಂದ ದಣಿದ ಅಳಿಯ ಮಲಗಿಬಿಟ್ಟನು. ಹೆಂಡತಿಯ ನಡತೆ ಸರಿಯಾಗಿರಲಿಲ್ಲ. ಗಂಡನು ಮಲಗಿದ್ದನ್ನು ನೋಡಿದ ಕೂಡಲೇ, ದಿನಾಲು ಹೋಗುವಂತೆ ಮನೆಬಿಟ್ಟು ಹೊರಗೆ ಹೊರಟಳು. ಅವಳ ಹಿಂದಿನಿಂದ ಆಳುಮಗನೂ ಸಾಗಿದನು, ಆಕೆಗೆ ಗೊತ್ತಾಗದಂತೆ.
ಆಕೆ ನೇರವಾಗಿ ಫಕೀರನ ಮನೆಗೆ ಹೋದಳು; ಅವನನ್ನು ತೆಕ್ಕೆಹೊಡೆದಳು.
“ಇಷ್ಟೇಕೆ ತಡಮಾಡಿ ಬಂದಿ ? ಇಷ್ಟೇಕೆ ರಾತ್ರಿ ಮಾಡಿದಿ ?" ಎಂದು ಅವಳ ಮೂಗನ್ನೇ ಕೊಯ್ದು ಹಾಕಿದನು. ಆಕೆ ಅಳುತ್ತ ಕರೆಯುತ್ತ ಮನೆಯ ಕಡೆಗೆ ಹೊರಟಳು.
ಇನ್ನು ಗಂಡನ ಮನೆಗೆ ಯಾವ ಮುಖದಿಂದ ಹೋಗುವದು?
“ಅವನೇ ಮೂಗು ಕೊಯ್ದನೆಂದು ಅಪವಾದ ಹೊರಿಸಿದರಾಯಿತು. ತಾನೇ ಮೂಕಾಟಲೆ ಕರಕೊಂಡು ಹೋಗುತ್ತಾನೆ. ಮತ್ತು ಎಲ್ಲ ಸುರಳೀತ ನಡೀತದೆ” ಎಂದು ಲೆಕ್ಕ ಹಾಕಿದಳು. ಹಾಗೂ ಗಂಡನ ಮಗ್ಗುಲಲ್ಲಿ ಮಲಗಿಕೊಂಡಳು.
ಬೆಳಗಾಗುವ ಮೊದಲೇ ಆಕೆಯೆದ್ದು “ನನ್ನ ಮೂಗು ಹೋಯಿತು" ಎಂದು ಬೊಜ್ಜೆ ಹೊಡೆದಳು. ಗಂಡನು ಗಾಬರಿಗೊಂಡು ಎದ್ದನು. ತಾಯಿತಂದೆ ಎಲ್ಲರೂ ಬಂದರು, “ಯಾಕೆ ಮಗಾ, ಏನಾಯ್ತು” ಎ೦ದು ಎಲ್ಲರೂ ಕೇಳುವವರೇ.
“ನನ್ನ ಗಂಡ ನನ್ನ ಮೂಗು ಕೊಯ್ದರೆಪ್ಪೋ” ಎಂದು ಗುಲ್ಲುಮಾಡಿದಳು.
ನೆರೆದ ಜನ ಅಳಿಯನಿಗೆ ಛೀ ಥೂ ಅಂದಿತು.
ಅಲ್ಲಿಯೇ ನಿಂತ ಆಳುಮಗ ಹೇಳಿದನು - “ನನ್ನ ಧೋರೀನೇ ಮೂಗು ಕೊಂಯ್ದಾನೆಂದರೆ ಅವನ ಕೈ ರಕ್ತ ಆಗಿರಬೇಕು. ಹಾ೦ಗ ಆಗಿಲ್ಲವಾದರೆ ಮತ್ತೆ ಯಾರಾದರೂ ಅವಳ ಮೂಗು ಕೊಯ್ದಿರಬೇಕು. ಫಕೀರ ಬಾವಾ ಸಾಹೇಬ ಅವಳ ಮೂಗು ಕೊಯ್ದಾನ.”
ಆಳು ಗಟ್ಟಿಸಿ ಹೇಳುವುದನ್ನು ಸುಳ್ಳು ಸತ್ಯ ನಿರ್ಣಯಿಸುವ ಸಲುವಾಗಿ ನೆರೆದವರೆಲ್ಲರೂ ಕಂದೀಲು ಹಿಡಕೊಂಡು ಫಕೀರನ ಮನೆಗೆ ಹೋದರು.
ಅಲ್ಲಿ ನೋಡಿದರೆ ಫಕೀರನ ಮನೆಯಲ್ಲಿ ರಕ್ತ ಬಿದ್ದಿರುತ್ತದೆ.
ಮಾವನನ್ನೂ ಮಾಲಕನ ಹೆಂಡತಿಯನ್ನೂ ಕಚೇರಿಗೆ ಕಳಿಸಲಾಯಿತು. ಆಳು ಮಗನು ಅಳಿಯನನ್ನು ಕರಕೊಂಡು ಮರಳಿ ತನ್ನೂರಿಗೆ ಹೋದನು.
ಕಲಿತ ಕಥೆಯನ್ನು ಮನಸ್ಸಿನಲ್ಲಿ ಇಟ್ಟುಕೊ೦ಡರೆ ಹೀಗೆ ಅಪವಾದ ಬರುತ್ತವೆ. ಅವು ಜನ್ಮಕ್ಕೇ ಮೂಲವಾಗುವವು. ಆದ್ದರಿಂದ ಬಂದಕಥೆ ಮಂದಿಗೆ ಹೇಳಬೇಕು.
ಪ್ರಾಣಿ ಕಥೆಗಳು
ಮೂರು ಆಕಳ ಕರುಗಳು
ನೀರಲಗಿಡ
ಸತ್ತೇನು ಗುಬ್ಬಿ ?
ಮಿಡಿ ನಾಗೇಂದ್ರ
ಚೋಟೆಪ್ಪನ ಗೆಳೆಯರು
ಮೂರು ಆಕಳ ಕರುಗಳು
ಮಾಗಿಯ ಕಾಲ. ಹಳ್ಳಿಯೊಳಗಿನ ಜನರೆಲ್ಲ ಹಗಲುಹೊತ್ತನ್ನು ಬಹುಶಃ ಹೊಲದಲ್ಲಿಯೇ ಕಳೆಯುವರು. ದನಗಳು ಸಹ ಅಡವಿಯಲ್ಲಿಯೇ ಉಳಿಯುವವು. ಹಿಂಡುವ ದನಗಳು ಮಾತ್ರ ಸಾಯಂಕಾಲಕ್ಕೆ ಮನೆಗೆ ಮರಳುವವು.
ಮಧ್ಯಾಹ್ನವಾಗಿದ್ದರೂ ಚಳಿ ಹಿಮ್ಮೆಟ್ಟಿದೆ. ಬಿಸಿಲು ಬೆಳದಿಂಗಳಾಗಿರುವಾಗ ಕಟ್ಟಿಹಾಕಿದ ಕರುಗಳನ್ನು, ತುಸು ಅಡ್ಡಾಡಿ ಬರಲೆಂದು ಕುಣಿಕೆ ಉಚ್ಚಿ ಬಿಡುವುದುಂಟು. ಹಾಗೆ ಹೊರಬಿದ್ದ ಮೂರು ಆಕಳ ಕರುಗಳು ಅಗಸೆಯ ಬಳಿಯಲ್ಲಿ ಕೂಡಿದವು. ಒಂದು ಕರು ಒಕ್ಕಲಿಗರದು; ಇನ್ನೊಂದು ಉಪಾಧ್ಯರದು; ಮೂರನೇದು ಗೌಳಿಗರದು.
ಮೂರೂ ಕರುಗಳು ಜೊತೆಗೂಡಿ ಅಗಸೆಯಿಂದ ಹೊರಬಿದ್ದವು. ಮುಂದೆ ಬಚ್ಚಲ ಮೋರೆಯ ನೀರು ಹೊರಬಿದ್ದು, ಹುದಿಲುಂಟುಮಾಡಿತ್ತು. ದಾರಿಹಿಡಿದು ಸಾಗುವವರು ಅದನ್ನು ದಾಟಬೇಕಾಗುತ್ತಿತ್ತು. ಎಲ್ಲಿಂದ ಹೇಗೆ ದಾಟಬೇಕು ಎಂದು ಯೋಚಿಸದೆ ಒಕ್ಕಲಿಗರ ಕರು ಬಾಲವನ್ನು ಎತ್ತರಿಸಿ ಟಣ್ಣನೆ ಜಿಗಿದು ಆಚೆಯ ಬದಿಯಲ್ಲಿ ನಿಂತಿತು. ಅದರಂತೆ ಜಿಗಿದು ಹೋಗುವ ಪ್ರಯತ್ನ ಮಾಡಿದರೂ ಉಪಾಧ್ಯರ ಕರುವಿನ ಹಿಂಗಾಲು ಕೆಸರು ತುಳಿದವು. ಇನ್ನುಳಿದದ್ದು ಗೌಳಿಗರ ಕರು. ಅದು ಜಿಗಿದು ಹೋಗುವ ವಿಚಾರವನ್ನೇ ಮಾಡಲಿಲ್ಲ. ಪಚಲ್ ಕಚಲ್ ಎಂದು ಹುದಿಲು ತುಳಿಯುತ್ತ ಅದನ್ನು ದಾಟಿಹೋಗಿ ಮುಂದಿನ ಕರುಗಳನ್ನು ಕೂಡಿಕೊಳ್ಳಲು ಧಾವಿಸಿತು.
ಅಷ್ಟರಲ್ಲಿ ಉಪಾಧ್ಯರ ಕರು ಕೇಳಿತು ಒಕ್ಕಲಿಗರ ಕರುವಿಗೆ—"ಏನೋ, ನೀನು ಕಾಲಿಗೆ ಕೆಸರು ಸೋಂಕದಂತೆ ಆ ಹುದಿಲು ಹರಿಯನ್ನು ಟಣ್ಣನೆ ಜಿಗಿದು ಬಂದೆಯಲ್ಲ! ಅಷ್ಟೊಂದು ಚಪಲತೆ ನಿನಗೆಲ್ಲಿಂದ ಬಂತು" ಎಂದು ಕೇಳಿತು.
ಒಕ್ಕಲಿಗರ ಕರು ಅಭಿಮಾನದಿಂದ ಹೇಳಿತು–"ನಮ್ಮವ್ವನಿಗಿರುವ ನಾಲ್ಕು ಮೊಲೆಗಳ ಹಾಲನ್ನೆಲ್ಲ ದಿನಾಲು ಎರಡೂ ಹೊತ್ತು ಕುಡಿಯುತ್ತೇನೆ. ಅದರಿಂದ ನನಗೆ ಅಷ್ಟೊಂದು ಕಸುವು ಬಂದಿದೆ.""ಏನಂದೀ? ಅವ್ವನ ಮೊಲೆಯಲ್ಲಿ ಹಾಲಿರುತ್ತವೆಯೇ?” ಎಂದು ಉಪಾಧ್ಯರ ಕರು ಬೆಕ್ಕಸಬಟ್ಟು ಕೇಳಿತು.
ಅವೆರಡೂ ಕರುಗಳು ಮಾತಾಡುವುದನ್ನು ಕೇಳಿ ಇದಾವ ಹೊಸವಿಷಯ ಎಂದು ಕುತುಹಲದಿಂದ ಗೌಳಿಗರ ಕರು ಅವಸರದ ಹೆಜ್ಜೆ ಹಾಕಿ ಕೇಳಿತು "ಅವ್ವನಿಗೆ ಮೊಲೆ ಇರುವವೇ?"
ತಮ್ಮ ಎಳೆಕರು ಬೆಲೆಯುಳ್ಳ ಬದುಕಾಗಲೆಂದು ಆಕಳನ್ನು ಹಿಂಡಿಕೊಳ್ಳದೆ ಇದ್ದಷ್ಟು ಹಾಲನ್ನು ಒಕ್ಕಲಿಗರು ಹೋರಿಗರುವಿಗೆ ಬಿಟ್ಟುಕೊಡುತ್ತಾರೆ, ಉಪಾಧ್ಯರು ಹಾಲಿನ ಸಲುವಾಗಿ ಅವುಗಳನ್ನು ಕಟ್ಟಿರುವುದರಿಂದ ಅವರು, ಕೆಚ್ಚಲೊಳಗಿನ ಹಾಲನ್ನೆಲ್ಲ ಹಿಂಡಿಕೊಂಡು ಆಮೇಲೆ ಕರುವಿಗೆ ಬಿಡುವರು. ಅದು ಒಣ ಮೊಲೆಗಳನ್ನು ಚೀಪುವದು. ಅಂತೆಯೇ ಅದು ಕೇಳಿತು–"ಅವ್ವನ ಮೊಲೆಯಲ್ಲಿ ಹಾಲಿರುವವೇ" ಎಂದು.
ಇನ್ನು ಗೌಳಿಗರಂತೂ ಹಾಲು ಮಾರುವವರು. ಆಕಳ ಮೊಲೆಗಳನ್ನು ಜಗ್ಗಿ ಹಿಂಡಿಕೊಳ್ಳವರಲ್ಲದೆ, ಹಿಂದುಗಡೆ ಸಹ ಕರುವನ್ನು ಬಿಡುವದಿಲ್ಲ. ಅಂತೆಯೇ ಗೌಳಿಗರ ಕರು ಕೇಳುತ್ತದೆ — "ಅವ್ವನಿಗೆ ಮೊಲೆ ಇರುವವೇ" ಎಂದು.
ನೀರಲಗಿಡ
ಒಬ್ಬ ಹೆಣ್ಣು ಮಗಳು ನೀರು ಹಾಕಿಕೊಂಡಳು. ಆಕೆಗೆ ಬಯಕೆ ಕಾಡಹತ್ತಿದವು. ಆಕೆಯ ಜೀವ ನೀರಲ ಹಣ್ಣು ಬಯಸಿತು. ಗಂಡನು ನೀರಲ ಹಣ್ಣು ತರಲಿಕ್ಕೆ ಹೋದನು.
ನೀರಲಗಿಡವನ್ನೇರಿ ಆತನ ಗಿಡ ಕಡಿಯ ತೊಡಗಿದನು. ಎರಡು ಹಣ್ಣು ಕಡಿದನು. ಗಿಡದಲ್ಲಿ ನಾಗೇಂದ್ರನು ಕಾಣಿಸಿಕೊಂಡು ಈ ಗಿಡ ಕಡಿಯಬೇಡವೆಂದು ಹೇಳಿದನು.
"ನನ್ನ ಹೆಂಡತಿ ಬಯಸಿದ್ದಾಳೆ. ನಾನು ಒಯ್ಯುತ್ತೇನೆ."
"ಒಂದು ಕರಾರಿನ ಮೇಲೆ ನೀರಲ ಹಣ್ಣು ಒಯ್ಯಬಹುದು ನೀನು" ಎಂದನು ನಾಗೇಂದ್ರ. ಆ ಕರಾರಿನಂತೆ ಹೆಣ್ಣು ಹುಟ್ಟಿದರೆ ನಾಗೇಂದ್ರನಿಗೆ ಕೊಡಬೇಕು. ಗಂಡು ಹುಟ್ಟಿದರೆ ಅವನ ಮಗಳನ್ನು ತೆಗೆದುಕೊಳ್ಳಬೇಕು. ಕರಾರಿಗೆ ಸಮ್ಮತಿಸಿ ಗಂಡನು ನೀರಲಹಣ್ಣು ತೆಗೆದುಕೊಂಡು ಒಯ್ದು ಹೆಂಡತಿಗೆ ತಿನ್ನಲು ಕೊಡುತ್ತಾನೆ. ಆಕೆ ನೀರಲಹಣ್ಣು ತಿನ್ನುತ್ತಾಳೆ.
ಒಂಬತ್ತು ತಿಂಗಳು ಒಂಬತ್ತು ದಿನಕ್ಕೆ ಹೆಣ್ಣು ಕೂಸನ್ನು ಹಡೆದಳು. ಈ ಮಗಳನ್ನು ನಾಗೇಂದ್ರನಿಗೆ ಕೊಡಬೇಕಲ್ಲ—ಎಂದು ಗಂಡನಿಗೆ ಮಹಾ ಚಿಂತೆಯಾಯಿತು. ಚಿಂತೆಯಲ್ಲಿ ತಾನೇ ಸಣ್ಣಗಾದನೇ ಹೊರತು ಹೆಂಡತಿಗೆ ಹೇಳಲೇ ಇಲ್ಲ.
ಅವೆಷ್ಟೋ ವರುಷಗಳು ಗತಿಸಿದವು. ಹೆಣ್ಣುಮಗಳು ಬೆಳೆದು ದೊಡ್ಡವಳಾದಳು. ನೆಂಟಸ್ತನದ ಮಾತುಕತೆಗಳು ನಡೆಯತೊಡಗಿದವು. ಕೊಡುವ ಹೆಣ್ಣುಮಗಳಿದ್ದಾಳೆ. ಕೊಡಲಿಕ್ಕೇಬೇಕು—ಎಂದು ಅಪ್ಪನು ಮನಸ್ಸನ್ನು ಕಲ್ಲು ಮಾಡಿಕೊಳ್ಳುತ್ತಾನೆ. ಅದರಂತೆ ಮಗಳನ್ನು ಬೇರೊಂದೂರಿಗೆ ಕೊಟ್ಟು ಲಗ್ನ ಮಾಡುತ್ತಾನೆ. ಲಗ್ನದ ನಿಬ್ಬಣ ಹೊರಡುತ್ತದೆ. ನಾಲ್ಕು ಅಗಸೆಯಿಂದ ನಿಬ್ಬಣ ಹೊರಬೀಳಬೇಕೆಂದರೂ ನಾಗೇಂದ್ರನು ಹೆಡೆತೆಗೆದು ನಿಂತಿರುವನು.
ಇದರಲ್ಲೇನೋ ದೋಷವಿದೆಯೆಂದು ಬೀಗರು ಮಾತಾಡಿಕೊಂಡರು. ದೇವ ದೇವಸ್ಥರಿಗೆ ಸುಳ್ಳು ಹೇಳುವುದು ಬೇಡ ಎಂದು ನೆರೆದ ಜನ ಬುದ್ಧಿ ಹೇಳಿತು. ಅದನ್ನು ಕೇಳಿ, ನಡೆದಂಥ ಲಗ್ನಬಿಡಿಸಿ ನಾಗೇಂದ್ರನಿಗೆ ಮಗಳನ್ನು ಕೊಡಬೇಕು ಎಂದು ಜನರು ಅಭಿಪ್ರಾಯ ಪಟ್ಟರು. ಅದರಂತೆ ಆ ಹೆಣ್ಣುಮಗಳನ್ನು ನಾಗೇಂದ್ರನ ಬೆನ್ನುಹಚ್ಚಿ ಬಿಟ್ಟರು.
ಭಾರಂಗ ಭಾವಿಯಲ್ಲಿ ಒಂದು ವಿಶಾಲವಾದ ಮನೆಯಿತ್ತು ನಾಗೇಂದ್ರನು ಅವಳಿಗೆ ಯಾವರೀತಿಯಿಂದಲೂ ಕೊರತೆ ಮಾಡಲಿಲ್ಲ. ವರುಷ ತುಂಬುವಷ್ಟರಲ್ಲಿ ಅವಳಿಗೊಂದು ಗಂಡುಮಗು ಹುಟ್ಟಿತು. ನಾಗೇಂದ್ರ ಅವಳಿಗೆ ಹೇಳಿದನು "ಹಾಲನ್ನು ಸಳಮಳನೆ ಕುದಿಸಿ ಕಬ್ಬಿಣ ಬುಟ್ಟಿಗೆ ಹೊಯ್ಯು. ನಾನು ಮೇಯಲಿಕ್ಕೆ ಹೋಗುತ್ತೇನೆ. ಹೊರಗಿನಿಂದ ನಾನು ಬಂದ ಕೂಡಲೇ ಬಾವಿಯ ಹತ್ತಿರ ಗಂಟೆ ಘಣ್ ಅನ್ನುತ್ತದೆ. ಆಗ ಹಾಲು ತಂದು ಹೊರಗಿಟ್ಟು ತಟ್ಟೆ ಮುಚ್ಚಿಬಿಡು"
ಈ ರೀತಿಯಾಗಿ ಆಕೆ ನಾಗೇಂದ್ರನ ಸೇವೆ ಮಾಡುತ್ತ ಇದ್ದಳು. ಆಕೆಯ ತಮ್ಮನೊಬ್ಬನು ಚಂಡು ತಕ್ಕೊಂಡು ಹೊರಗೆ ಆಡಲಿಕ್ಕೆ ಹೋದಾಗ ಆ ಚೆಂಡು ಹಿರಿಯ ಹೆಣ್ಣುಮಗಳ ಕೊಡಕ್ಕೆ ಬಡಿದು ಕೊಡ ಒಡೆದು ಹೋಯಿತು. ಹೀಗೆ ಮಾಡುವೆಯೆಂದೇ ನಿಮ್ಮಕ್ಕನನ್ನು ನಾಗೇಂದ್ರನು ಒಯ್ದಿದ್ದಾನೆ—ಎಂದು ಆಕೆ ಹಂಗಿಸಿದಳು. ಹುಡುಗನು ಮನೆಗೆ ಬಂದು "ಅವ್ವಾ, ಅವ್ಚಾ, ನಮ್ಮಕ್ಕನನ್ನು ನಾಗೇಂದ್ರ ಒಯ್ದಿದ್ದಾನಂತೆ. ನಮ್ಮಕ್ಕನನ್ನು ನೋಡಲಿಕ್ಕೆ ನಾನು ಹೋಗಲೇಬೇಕು" ಎಂದನು ತಾಯಿಗೆ.
"ನೀನೊಬ್ಬನೇ ಮಗ ನಮಗೆ. ನೀನೂ ಒಬ್ಬ ಹೋಗಿಬಿಟ್ಟರೆ ಹೇಗಪ್ಪ"
ಎಂದು ತಾಯಿ ಪರಿಪರಿಯಿಂದ ಬೇಡಿಕೊಂಡರೂ ಅವನು ಹೋಗಿಯೇಬಿಟ್ಟನು.
ಭಾರಂಗ ಬಾವಿಗೆ ಹೋದನು. ಗಂಟೆ ಗಣ್ ಅಂದಿತು. ಹಾಲನ್ನು ಕಬ್ಬಿಣ ಬುಟ್ಟಿಯಲ್ಲಿಟ್ಟು ಓಡಿಹೋಗಿ ತಟ್ಟಿಮುಚ್ಚಿಕೊಂಡಳು. "ಅಕ್ಕಾ! ಅಕ್ಕಾ! ಎಂದು ಹುಡುಗನು ಕೂಗಹತ್ತಿದನು. ಹೆಣ್ಣುಮಗಳು ಬಂದು ತಟ್ಟೆತೆರೆದು ಕೇಳಿದಳು "ತಮ್ಮಾ ನೀನೇಕೆ ಬಂದಿ? ಇಷ್ಟರಲ್ಲಿ ನಾಗೇಂದ್ರ ಬಂದರೆ ನಿನ್ನನ್ನು ಕೊಂದು ಹಾಕುತ್ತಾನೆ" ಎಂದಳು ಅಕ್ಕ.
"ನಿನ್ನ ಭೆಟ್ಟಿಯಾಗುವದಕ್ಕೆ ನಾನು ಬಂದಿದ್ದೇನೆ" ತಮ್ಮನ ಹೇಳಿಕೆ.
"ಬಂದರೆ ಒಳ್ಳೆಯದಾಯಿತು. ಈಗ ಲಗೂನೇ ಇಲ್ಲಿಂದ ಹೋಗು?" ಎಂದು ಅಕ್ಕ ದುಂಬಾಲ ಬಿದ್ದಳು.
ಅಷ್ಟರಲ್ಲಿ ನಾಗೇಂದ್ರ ಅಲ್ಲಿಗೆ ಬಂದನು. ಗಂಟೆ ಗಣ್ ಅಂದಿತು. ಹಾಲನ್ನು ಕಬ್ಬಿಣ ಬುಟ್ಟಿಯಲ್ಲಿ ಹಾಕಿ ತಟ್ಟೆ ಮುಚ್ಚಿಕೊಳ್ಳುವಷ್ಟರಲ್ಲಿ ನಾಗೇಂದ್ರ ಕೇಳುತ್ತಾನೆ. - "ಯಾರೋ ಬಂದಂತೆ ಕಾಣುತ್ತದೆ." "ನನ್ನ ತಮ್ಮ" ಎಂದು ಹೆಣ್ಣುಮಗಳು ಗಾಬರಿಗೊಂಡು ಹೇಳಿದಳು.
ಹಾವು ಸಿಟ್ಟಿನಿಂದ ಕಾವರ್ ಬಾವರ್ ಎಂದು ಮೈಯೆಲ್ಲ ಪರಚಿಕೊಂಡಿತು. "ನಿನ್ನ ತಮ್ಮನನ್ನು ನಾನು ಕೊಲ್ಲುತ್ತೇನೆ" ಎಂದು ಚೀರಾಡಿತು.
"ನನ್ನ ತಮ್ಮನನ್ನು ನಾನೇ ಕೊಂದುಬಿಡುತ್ತೇನೆ. ನೀನೇನೂ ಕಾಳಜಿ ಮಾಡುವುದು ಬೇಡ" ಎಂದು ಸಮಾಧಾನ ಮಾಡಿ ನಾಗೇಂದ್ರನನ್ನು ಹೊರಗೆ ಕಳಿಸುತ್ತಾಳೆ.
ಆಕೆ ಒಂದು ಹಲ್ಲಿಯನ್ನು ಕೊಂದು ಅದರ ರಕ್ತವನ್ನು ಗೋಡೆಗೆ ಸವರಿದಳು ಹಾಗೂ ತಮ್ಮನನ್ನು ಮುಚ್ಚಿಟ್ಟಳು. ನಾಗೇಂದ್ರನು ಮೇದು ತಿರುಗಿ ಬಂದಾಗ, ಗೋಡೆಯ ಮೇಲಿನ ರಕ್ತ ತೋರಿಸಿ ಸಮಾಧಾನ ಮಾಡಿದಳು.
ಅಕ್ಕನಿಗೆ ಕೇಳುತ್ತಾನೆ ತಮ್ಮ—"ನಾಗೇಂದ್ರನ ಜೀವ ಏತರಲ್ಲಿದೆ ತಿಳಿಸು ಕೊಲ್ಲುತ್ತೇನೆ?
"ಆಗಲಿ" ಅನ್ನುತ್ತಾಳೆ ಅಕ್ಕ.
ವಾಡಿಕೆಯಂತೆ ನಾಗೇಂದ್ರ ಮನೆಗೆ ಬರಲು ಗಂಟಿ ಗಣ್ ಅಂದಿತು. ಮೆಟ್ಟು ಗಟ್ಟೆಯಿಂದ ನೀರು ಕೆಳಗಿಳಿಯಿತು. ಅವನು ಒಳಗೆ ಹೋದನು. ಸಮಯವರಿತು ಆ ಹೆಣ್ಣುಮಗಳು ಕೇಳಿದಳು "ನಾಗೇಂದ್ರ ನಾಗೇಂದ್ರ ನಿನ್ನ ಜೀವ ಯಾತರಲ್ಲಿದೆ ಹೇಳು."
"ನನಗಾರು ಹೊಡೆಯುತ್ತಾರೆ? ಆದರೂ ಹೇಳುತ್ತೇನೆ ಕೇಳು. ಬಿಸಿ ಬಿಸಿ ಹಾಲು ಗಟಗಟ ಕುಡಿಯುವುದರಲ್ಲಿ ನನ್ನ ಜೀವವಿದೆ" ಎಂದನು ನಾಗೇಂದ್ರ.
ಮರುದಿನ ಹಾಲನ್ನು ಸಳಮಳನೆ ಕುದಿಸಿದಳು. ಆರಿಸಲಾರದೆ ಇದ್ದಕ್ಕಿದ್ದ ಹಾಗೆಯೇ ಕಬ್ಬಿಣ ಬುಟ್ಟಿಯಲ್ಲಿ ಸುರುವಿದಳು. ನಾಗೇಂದ್ರನು ಸಳಮಳಿಸುವ ಹಾಲು ಕುಡಿಯುತ್ತಲೇ ಸತ್ತುಬಿದ್ದನು. ಆದರೆ ಅವನ ಹೊಟ್ಟೆಯಲ್ಲಿ ಸಾವಿರಾರು ತತ್ತಿಗಳಿದ್ದವು. ತಗ್ಗಿನಲ್ಲಿ ಒಯ್ದು ಸುಟ್ಟರೂ ಅವು ಬೆನ್ನು ಹತ್ತುವುದು ನಿಶ್ಚಯ.
ದುಗ್ಗ ಕೂಡಿಹಾಕಿ ಉರಿ ಹಚ್ಚಿದರು. ತಕ್ತಿಗಳೆಲ್ಲ ಸುಟ್ಟು ಭಸ್ಮವಾದವು. ಆದರೆ ಒಂದೇ ಒಂದು ತತ್ತಿ ಹೊಲದ ಎರೆಬೀಡಿನಲ್ಲಿ ಬಿತ್ತು.
- ಒಂದಾದರೂ ತತ್ತಿ ಉಳಿಯಿತಲ್ಲ ಎಂಬ ಚಿಂತೆಯಾಯಿತು.
- ಅದೆಷ್ಟು ನೆಲ ಅಗಿದರೂ ತತ್ತಿ ಸಿಗಲಿಲ್ಲ.
- ಕೊನೆಗೂ ಸಿಗದಂತಾಗಲು ನಿರಾಶರಾಗಿ ಕುಳಿತರು.
ಮನೆಯ ಮುಂದೆ ಒಬ್ಬ ಸಾಧು ಹೊರಟಿದ್ದನು. ಅವನನ್ನು ಕೇಳಿದಳು ಅಕ್ಕ -
- "ನನ್ನ ತಮ್ಮ ನನ್ನನ್ನು ಕರೆಯ ಬಂದಿದ್ದಾನೆ. ನಾನು ಹೇಗೆ ಹೋಗಲಿ? ತತ್ತಿ ನನ್ನ ಬೆನ್ನು ಹತ್ತುತ್ತದೆ."
ಸಾಧು ಏಳು ಹರಳುಗಳನ್ನು ಮಂತ್ರಿಸಿಕೊಟ್ಟನು. ಅವುಗಳನ್ನು ಉಪಯೋಗಿಸುವ ವಿಧಾನವನ್ನು ಹೇಳಿದನು -
- "ಈ ಏಳು ಹರಳು ಒಗೆಯಿರಿ. ಏಳುಹರಿ ನೆಲ ದಾಟಿ ಹೋಗುವಿರಿ." ಅದೇ ರೀತಿಯಲ್ಲಿ ಅಕ್ಕ ತಮ್ಮ ನಿಶ್ಚಿಂತೆಯಿಂದ ತಮ್ಮೂರು ತಲುಪಿದರು.
ಸತ್ತೇನು ಗುಬ್ಬಿ?
ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ.
ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು ಓಡಿಸುತ್ತಿದ್ದನು. ಬೀಸಾಗಿ ಬಂದ ಕವಣೆಗಲ್ಲಿನ ರಭಸಕ್ಕಂಜಿಯೇ ಹಕ್ಕಿಗಳೆಲ್ಲ ಹಾರಿಹೋದವು, ಆದರೆ ಒಂದು ಗುಬ್ಬಿ ಮಾತ್ರ ಹಾರಿ ಹೋಗದೆ, ಒಂದು ತೆನೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿತು. ಹೊಲದವನ ಬಾಯ ಬೆದರಿಕೆಗಾಗಲಿ, ಬಾರಕೋಲಿನ ಸಪ್ಪಳಕ್ಕಾಗಲಿ ಅದು ಮಿಸುಕಲಿಲ್ಲ; ಕವಣೆಗಲ್ಲಿಗೂ ಹಣಿಯಲಿಲ್ಲ.
ಅಟ್ಟದಿಂದಿಳಿದು ಕಾವಲಿಗನು ಆ ಗುಬ್ಬಿ ಕುಳಿತಲ್ಲಿಗೆ ಮೆಲ್ಲನೆ ಹೋಗಿ ಅದನ್ನು ಗಪ್ಪನೆ ಹಿಡಿದು ತಂದು, ಅದರ ಕಾಲಿಗೆ ದಾರಕಟ್ಟಿ ಅಟ್ಟದ ಕಾಲಿಗೆ ಬಿಗಿದನು. ಆದರೂ ಅದು ಪಕ್ಕ ಬಿಚ್ಚಿ ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು ಕಾವಲಿಗನು ಕೇಳಿದನು - “ಸತ್ತೇಯೇನು ಗುಬ್ಬಿ?”
ಆ ಗುಬ್ಬಿ ಹೇಳಿತು –
ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚಗೀ ಕಾಲಿನಲ್ಲಿ
ಜೋಕಾಲಿ ಆಡಹತ್ತಿದ್ದೇನೆ.
ನಾನೇಕೆ ಸಾಯುವನು ?”
ಹೊಲದವನು ಅದನ್ನು ಬಿಚ್ಚಿ ಕೊಂಡೊಯ್ದು ಹರಿಯುವ ಹಳ್ಳದಲ್ಲಿ ಒಗೆದನು, ಆಗಲೂ ಅದು ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು - “ಸತ್ತೆಯಾ ಗುಬ್ಬಿ” ಎಂದು ಕೇಳಿದನು. ಗುಬ್ಬಿ ಹೇಳಿತು -
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳಕ್ಕೆ ಬಂದು ಈಸಾಡುತ್ತಿದ್ದೇನೆ.
ನಾನೇಕೆ ಸಾಯುವೆನು ?"
ಒಕ್ಕಲಿಗನು ಆ ಗುಬ್ಬಿಯನ್ನು ಊರಲ್ಲಿ ತೆಗೆದುಕೊಂಡು ಹೋಗಿ, ಗಾಣಿಗನ ಗಾಣದ ಗಾಲಿಯಲ್ಲಿ ಹಾಕಿದನು. ಮತ್ತೆಯೂ ಅದು ಫಡಪಘಡಿಸಿತು. ಕೇಳಿದನು-
“ಸತ್ತೆಯೇನು ಗುಬ್ಬಿ?"
ತನ್ನ ದಾಟಿಯಲ್ಲಿಯೇ ಗುಬ್ಬಿ ಮರುನುಡಿಯಿತು.
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಿನಲ್ಲಿ ಈಸಾಡಿ
ಈಗ ಎಣ್ಣೆ ಹೂಸಿಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ ?”
ಹೊಲದವನು ಗುಬ್ಬಿಯನ್ನು ಮನೆಗೊಯ್ದು ಒಲೆಯಮೇಲಿನ ಸಳಮಳಿಸುವ ನೀರಿನ ಭಾಂಡೆಯಲ್ಲಿ ಚೆಲ್ಲಿದನು. ಅಲ್ಲಿಯೂ ಗುಬ್ಬಿಯ ಫಡಫಡಾಟ ನಡೆದೇ ಇತ್ತು. “ಸತ್ತೆಯಾ ಗುಬ್ಬಿ” ಎಂದು ಕೇಳಿದನು. ಗುಬ್ಬಿ ಹೇಳಿತು -
“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ
ಹಳ್ಳದ ತಿಳಿನೀರಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಇಲ್ಲಿ ಬಿಸಿಬಿಸಿ ನೀರಿನಿಂದ
ಎರಕೊಳ್ಳುತ್ತಿದ್ದೇನೆ.
ನಾನೇಕೆ ಸಾಯಲಿ?”
ಗುಬ್ಬಿಯನ್ನು ಹೆಂಡತಿಯ ಕೈಗಿತ್ತು, ಇದನ್ನು ಕೊಯ್ದು ಅಡಿಗೆ ಮಾಡಲು ಹೊಲದವನು ತಿಳಿಸಿದನು. ಹೆಂಡತಿಯು ಮರುಕ್ಷಣದಲ್ಲಿ ಅಡಿಗೆಮಾಡಿ ಗಂಡನಿಗೆ ಉಣಬಡಿಸಿದಳು. ಉಂಡ ಬಳಿಕ ಹೊಟ್ಟೆಯಲ್ಲಿ ಫಡಘಡಿಸುತ್ತಿರುವ ಗುಬ್ಬಿಯನ್ನು ಕುರಿತು ಗಂಡನು ಕೇಳಿದನು -
“ಸತ್ತೆಯಾ ಗುಬ್ಬಿ?”
“ಗುಂಡ ಗುಂಡ ತೆನಿ ತಿಂದು
ಗು೦ಡದಾಗ ನೀರು ಕುಡಿದು
ಮಂಚದ ಕಾಲಿಗೆ ಜೋಕಾಲಿ ಆಡಿ
ಹಳ್ಳದ ತಿಳಿ ನೀರಿನಲ್ಲಿ ಈಸಾಡಿ
ಗಾಣಿಗರ ಗಾಣದಲ್ಲಿ ಎಣ್ಣೆ ಹೂಸಿಕೊಂಡು
ಬಿಸಿಬಿಸಿ ನೀರಿನಿಂದ ಎರಕೊ೦ಡು
ಪಲ್ಲೆ ಮಾಡಿಸಿ ಉಂಡುಗಿಂಡು
ಹೊರಟಿದ್ದೇನೆ ನೋಡು.
ನಾನೇಕೆ ಸಾಯುವೆನು?”
ಎನ್ನುತ್ತ ಬುರ್ರನೆ ಹಾರಿಹೋಯಿತು ಸಾವಿಲ್ಲದ ಗುಬ್ಬಿ.
ಮೀನು ಬೆಳೆದು ದೊಡ್ಡದಾಯ್ತು. ಆಮೇಲೆ ಹಾಲಿಕ್ಕಿದ್ದರೂ ಕುಡಿಂಯಲಿಲ್ಲ; ನೀರಿಕ್ಕಿದರೂ ಕುಡಿಂಯಲಿಲ್ಲ. “ಯಾಕ ಮೀನಪ್ಪ ಹಾಲಯಾಕ ಕುಡೀಲೊಲ್ಲಿ? ಲಗ್ನ ಮಾಡಂತೀಯೇನಪ್ಪ' ಎಂದಾಗ ಮೀನು ಸುಮ್ಮನೆ ಕುಳಿತಿತು. ಲಗ್ನ ಮಾಡಿಯೇ ಬಿಡಬೇಕೆಂದು ಯೋಜಿಸಿದರು. ಹಾಲು ಕುಡಿಯಲು ಕೊಟ್ಟರು.
ಹೆಣ್ಣು ಬೇಡಲು ಒಂದೂರಿಗೆ ಹೋದರು. ಅಲ್ಲಿ ಒಬ್ಬಾಕೆಗೆ ಮಲಮಗಳೊಬ್ಬಳಿದ್ದಳು; ರೂಪಿಸ್ಥ ಇದ್ದಳು; ಮಹಾ ಗುಣವಾನ್ ಇದ್ದಳು ಆಕೆ. ಪೀಡೆ ಹೋಗಲೆಂದು ಮಲಮಗಳನ್ನು ಕೊಟ್ಟುಬಿಟ್ಟಳು. ಆಕೆಂಯನ್ನು ತಲವಾರದೊಡನೆ ಲಗ್ನಮಾಡಿ ಮುಗಿಸಿದರು. ಆ ಕೊಡುಗೂಸು ನಾಲ್ಕು ವರ್ಷಗಳಾದ ಮೇಲೆ ಮೈನರೆದಳು. ಶೋಭಾನಮಾಡಲು ಯೋಚಿಸಿದರು. ಮೀನಪ್ಪ ಮತ್ತೆ ಹಾಲು ಕುಡಿಯದಾದನು; ನೀರು ಕುಡಿಯದಾದನು. ಶೋಭಾನ ಮಾಡೋಣೇನಪ್ಪ ಎಂದರೆ, ಮೀನಪ್ಪ ತಲೆ ಹಾಕಿದನು. ಹತ್ತು ಹನ್ನೆರಡು ದಿನ ಹಾಲು ಕುಡಿಯದೆ ಕುಳಿತು ಈ ಹೊತ್ತು ಶೋಭಾನ ಮಾಡುತ್ತೇವೆ ಹಾಲು ಕುಡಿಯಪ್ಪ ಅಂದಾಗ, ಮೀನಪ್ಪ ಹಾಲು ಕುಡಿದನು. ಶೋಭನದ ದಿನ ಹೆಣ್ಣುಮಗಳು ಹಳ್ಳಕ್ಕೆ ನೀರು ತರಲು ಹೋಗಿದ್ದಳು. ತನ್ನ ಹಣೆಬರಹಕ್ಕೆ ತಾ ಅಳುತ್ತ ನಿಂತಿದ್ದಳು. ಅಲ್ಲೊಬ್ಬ ಗೋಸಾವಿ ಗಂಟುಬಿದ್ದನು. ಆವನು ಪರಮಾತ್ಮ ಬ೦ದಂತೆ ಬಂದನು. “ಮೀನು ನಿನ್ನ ಹಾಸಿಗೆಯಲ್ಲಿ ಬಂದ ಕೂಡಲೇ ಈ ಎರಡು ಹರಳುಗಳಿಂದ ಹೊಡೆ. ನಿನಗೆ ಮೀನು ಏನೂ ಮಾಡುವುದಿಲ್ಲ” ಎಂದು ಹೇಳಿದನು.
ಪಿಂಜರದೊಳಗಿನ ಮೀನಪ್ಪನನ್ನು ತೆಗೆದರು. ಹೆಣ್ಣುಮಗಳು ಗೋಸಾವಿ ಕೊಟ್ಟಂಥ ಹರಳು ಒಗೆದಳು. ಮೀನಿನ ವೇಷ ತೆಗೆದೊಗೆದು ಒಬ್ಬ ಪುರುಷ ಆಗಿ ನಿಂತನು. ಅಲ್ಲಿಯೇ ಇದ್ದ ಅಗ್ಗಿಷ್ಟಿಕೆಯಲ್ಲಿ ಪೋಷಾಕ ಒಗೆದರು. ಗಂಡ ಹೆಂಡಿರು ಮಲಗಿದರು. ಸರಿಯಾಗಿ ಹೊತ್ತು ಹೊರಡುವದಕ್ಕೆ ಬಾಗಿಲು ತೆರೆದರು. ಹೆಣ್ಣು ಮಗಳು ಬಂದು ಅತ್ತೆಯ ಕಾಲು ಬಿದ್ದಳು. ಅಗ್ಗಿಷ್ಟಿಕೆಯಲ್ಲಿ ಪೋಷಾಕ ಒಗೆದ ಸುದ್ದಿ ಹೇಳಿದಳು. ಮೀನಪ್ಪ ಪುರುಷಾಕಾರ ತೊಟ್ಟಿದ್ದು ನೋಡಿ, ತಾಯಿತಂದೆಗಳಿಗೆ ಬಹಳೆಂದರೆ ಬಹಳ ಹಿಗ್ಗು ಆಯ್ತು.
ಮಗ ಸೊಸಿ ಆನಂದದಿಂದ ಸಂಸಾರಮಾಡಿದರು, ಸೊಸೆಗೆ ದಿನತುಂಬಿದವು. ತವರುಮನೆಗೆ ಸಮಾಚಾರ ಹೇಳಿ ಕಳಿಸಿದರು. ಬೀಗತಿ ಐದರಲ್ಲಿ ಊಟಕ್ಕೆ ಮಾಡಿ ಕೊಂಡು ಬಂದಳು. ಅವಳು ಹೊಟ್ಟೆಯ ಮಗಳನ್ನು ಬಡವರಿಗೆ ಕೊಟ್ಟಿದ್ದಳು. “ಈಕೆಯದೆಷ್ಟು ಸೊಗಸಾಯಿತು" ಎಂದು ಮಲತಾಯಿಯ ಮನದಲ್ಲಿ ನುಚ್ಚು ಕುದಿಯುವಂತೆ ಕುದಿಯಶತ್ತಿತು. ಊಟಕ್ಕೆ ಮಾಡಿದಳು. ಮಗಳಿಗೆ ಪ್ರೀತಿಸಿದಂತೆ ಮಾಡಿ ಆಕೆಯನ್ನು ತವರುಮನೆಗೆ ಕರಕೊಂಡು ಹೋದಳು. ಹೊಟ್ಟೆಯ ಮಗಳು ಸಹ ಗರ್ಬಿಣಿಯಾಗಿ ತವರುಮನೆಗೆ ಬಂದಿದ್ದಳು. ಹೊಟ್ಟೆಯ ಮಗಳದೊಂದು ಕಣ್ಣು ಕುರುಡು. “ಹಡೆದರೆ ಕುಳ್ಳು ಕಟ್ಟಿಗೆ ಬೇಕಾಗುತ್ತವೆ” ಎಂದು ಹೇಳಿ ಇಬ್ಬರೂ ಹೆಣ್ಣುಮಕ್ಕಳನ್ನು ಕುಳ್ಳು ಆಯಲು ಕಳಿಸಿದಳು. “ನಿನ್ನ ವಸ್ತಾ ನಾ ಇಟಗೋಶೀದಿ; ನನ್ನ ವಸ್ತಾ ನೀ ಇಟ್ಟುಕೋ. ನನ್ನ ಸೀರೆ ನೀನು ಉಟ್ಟುಕೋ; ನಿನ್ನ ಸೀರೆ ನಾ ಉಟ್ಟುಗೋತೀನಿ” ಎಂದು ಜುಲುಮೆ ಮಾಡಿ, ತನ್ನ ಸೀರೆಂಯನ್ನು ಅಕ್ಕನಿಗೆ ಉಡಿಸುತ್ತಾಳೆ; ಆಕೆಯದನ್ನು ತಾನು ಉಟ್ಟುಕೊಳ್ಳುತ್ತಾಳೆ.
ಅಲ್ಲೊಂದು ಭಾರಂಗಭಾವಿಯಿತ್ತು. ನೀರು ಎಷ್ಟಿವೆ ನೋಡಬೇಕೆಂದು ಇಬ್ಬರೂ ಬಾಗಿದಾಗ ಕುರುಡಿಮಗಳು ತನ್ನಕ್ಕನನ್ನು ಬಾವಿಂಯಲ್ಲಿ ಕೆಡಹಿದಳು. ಗರ್ಭಿಣಿ ಹೆಣ್ಣುಮಗಳು ಜೋರಾಗಿ ಬಾವಿಯಲ್ಲಿ ಬಿದ್ದಾಗ ಅಲ್ಲೊಂದು ಚಮತ್ಕಾರವಾಯಿತು. ನಾಗೇಂದ್ರನ ಹೆಡೆಯಮೇಲೆ ರಸದ ಹುಣ್ಣು ಆಗಿತ್ತು. ಇವಳು ಅದರ ಮೇಲೆ ರಪ್ಪನೆ ಬಿದ್ದಾಗ ಹುಣ್ಣು ಒಡೆದು ತಣ್ಣಗಾಯಿತು. “ನಮ್ಮಲ್ಲಿ ಬಂಗಾರದ ತೂಗುಮಂಚ ಅದೆ. ನಮ್ಮ ಮನೆಯಲ್ಲಿ ಇರಬಾ" ಎಂದು ಹೇಳಿ, ಆ ಹೆಣ್ಣುಮಗಳನ್ನು ಬಾವಿಯೊಳಗಿರುವ ತನ್ನ ಮನೆಗೆ ಕರೆದೊಯ್ದಿತು ನಾಗೇಂದ್ರ.
ಇತ್ತ ಕಡೆಗೆ ಐದು ತಿ೦ಗಳು ಹೋಗಿ ಒಂಬತ್ತು ತಿಂಗಳಿಗೆ ಮೀನಪ್ಪನಿಗೆ ಸಮಾಚಾರ ಹೋಯಿತು. ಐದು ಕ್ಳೈ ಮುಷ್ಟಿಯಿಂದ ಐದು ಹಿಡಿ ಅಕ್ಕಿ ಒಂದು ಲಿಂಗ ಕೊಟ್ಟರು. ತೊಟ್ಟಿಲಿಗೆಂದು ಉಂಗುರ, ಬಿಂದುಲಿ ತೆಗೆದುಕೊಂಡು ಬಂದರು. “ಕೂಸು ಚೆನ್ನಾಗಿದೆ. ಆದರೆ ಹೆಣ್ಣುಮಗಳ ಕಣ್ಣು ಹೋಗಿವೆ” ಎಂದು ಮೀನಪ್ಪನ ಮನೆಯವರಿಗೆ ಸುಳ್ಳು ಹೇಳಿದರು.
ಕುರುಡಿಮಗಳು ಮೊದಲಿನ ಗಂಡನನ್ನು ಮಡಿಜೆಹಾಕಿದಳು. ಮನಸ್ಸಿಲ್ಲದ ಮನಸ್ಸಿನಿಂದ ಕೂಸಿಗೆ ತೊಟ್ಟಿಲಲ್ಲಿ ಹಾಕಿ, ಮೀನಪ್ಪ ಮತ್ತು ಅವನ ತಾಯಿ ತಂದೆ ತಿರುಗಿ ಬಂದರು. ಮುಂದೆ ಐದರಲ್ಲಿ ಕರಕೊಂಡು ಬ೦ದಾಗ ಏನೆಂಬೂದು ತಿಳಿಯುತ್ತದೆ - ಅಂದುಕೊಂಡರು. ಆದರಂತೆ ಕರಕೊಂಡೂ ಬಂದರು. ಒಬ್ಬರೂ ಅವಳ ಕೂಡ ಮಾತಾಡಲಿಲ್ಲ.
ಮೀನಪ್ಪನ ನಿಜವಾದ ಹೆಂಡತಿ ಬಾವಿಯಲ್ಲಿ ಹಡೆದಳು. ಬಾಣಂತನ ನಡೆಯಿತು. ಕೂಸಿಗೆ ತೊಟ್ಟಿಲಲ್ಲಿ ಹಾಕಿದರು. ನಾಗೇಂದ್ರ ತೊಟ್ಟಿಲು ಬಟ್ಟಲು ಕೊಟ್ಟನು. ಮಿಡಿ ನಾಗೇಂದ್ರ ಬಾವಿಯ ಕಟ್ಟೆಯ ಮೇಲಿಂದ ಇಳಿದು ಕೆಳಗೆ ಮೇಯಿತ್ತಿದ್ದ. ಅಲ್ಲೊಬ್ಬ ಬಳೆಗಾರ ಹೊರಟಿದ್ದನು. ಮಿಡಿನಾಗೇಂದ್ರ ಅವನನ್ನು ಕರೆದು ಹೇಳಿದನು - “ನಮ್ಮಕ್ಕನಿಗೆ ಬಳೆ ಇಡಿಸುವದದೆ. ನೀ ಬರಬೇಕು” ಬಳೆಗಾರನು ಒಪ್ಪಿಕೊಂಡನು.
ಬಳೆಗಾರನು ಬಾವಿಯಲ್ಲಿ ಇಳಿಯುತ್ತ ಹೊರಟಂತೆ, ನೀರು ಮೆಟ್ಟು ಮೆಟ್ಟಿಲಂತೆ ಕೆಳಗಿಳಿಯುತ್ತ ಹೋಯಿತು. ಬಳೆಗಾರನು ನಾಗೇಂದ್ರನ ಮನೆ ತಲುಪಿದಾಗ - ಹೆಣ್ಣು ಮಗಳು ಮಗನಿಗೆ ಆಡಿಸುತ್ತಿದ್ದಳು - “ಮೀನಪ್ಪನ ಮಗ ಮೀನಾಕುಮಾರ, ಸುಮ್ಮನೆ ಕೂಡಪ್ಪ ಬಾ ನನ್ನ ಕಂದಾ ಬಗಲಾಗ.”
ಮೀನಪ್ಪನ ಊರಿಗೆ ಬಳೆಗಾರ ಬಂದನು. ಕುರುಡಿ ತನಗೆ ಬಳೆಯಿಡಿಸಲು ಹೇಳಿದಳು. ಆಕೆಯ ಕೂಸು ಅಳಹತ್ತಿತು - “ಏನು ಅಳತಾದ ಈ ಕೂಸು. ಬಾಡಕೋ. ಕಾಗಿ ಆಗ್ಯಾದ” ಇಂಥ ಶಬ್ಧ ಉಪಯೋಗಿಸಬೇಡ ಎಂದನು ಬಳೆಗಾರ. ಭಾರಂಗ ಬಾವಿಯೊಳಗೆ ಒಬ್ಬ ಹೆಣ್ಣು ಮಗಳು ಕೂಸಿಗೆ ಆಡಿಸಿದ ಕಥೆ ಹೇಳಿದನು - “ಮೀನಪ್ಪನ ಮಗ ಮೀನಾಕುಮಾರ, ಸುಮ್ಮನೆ ಕೂಡಪ್ಪ” ಎಂದು ಆ ಹೆಣ್ಣು ಮಗಳು ಅದೆಷ್ಟು ಚಲೋ ಆಡಿಸುತ್ತಿದ್ದಳು ನೋಡಬಾರದೇ?” ಆ ಮಾತು ಕೇಳಿ ಮೀನಪ್ಪ ಬಳೆಗಾರನಿಗೆ ಕೇಳಿದನು - “ನನಗೆ ಭಾರಂಗ ಭಾವಿ ತೋರಿಸು.”
ಮೀನಪ್ಪ ಬಳೆಗಾರನ ಜೆನ್ನು ಹತ್ತಿ ಬಾವಿಯಲ್ಲಿ ಇಳಿದನು. ಒಳಗೆ ಹೋದಂತೆ ನೀರು ಮೆಟ್ಟಿಲು ಮೆಟ್ಟಿಲು ಇಳಿಯುತ್ತ ಹೋಯಿತು. ಏಳು ಹೆಡೆಯ ನಾಗೇಂದ್ರ ಮೀನಪ್ಪನಿಗೆ ಎಲ್ಲ ಸತ್ಕಾರ ಮಾಡಿ ತನ್ನಲಿಲ್ಹ್ದ ಸಂಪತ್ತು ಕೊಟ್ಟನು. ಹೆಣ್ಣು ಮಗಳೂ ಬೆಳ್ಳಿ ಬಂಗಾರ ತುಂಬಿಕೊಂಡು ನಾಗೇಂದ್ರನ ಅಪ್ಪಣೆ ಪಡೆದು ತನ್ನ ಗಂಡನ ಮನೆಗೆ ತಿರುಗಿ ಬಂದಳು.
ಆ ಸಂದರ್ಭದಲ್ಲಿ ತಿರುಗಾಡಲಿಕ್ಕೆ ಹೋದ ಮಿಡಿನಾಗೇಂದ್ರ ತಿರುಗಿ ಬಂತು. “ನಾನು ಮನೆಯಲ್ಲಿ ಇಲ್ಲದಾಗ ಅಕ್ಕ ಹೇಗೆ ಹೋದಳು. ನಾ ಹೋಗಿ ಅವಳ ಮಗನಿಗೆ ಕಚ್ಚತೀನಿ. ಬಚ್ಚಲ ಮನೀಲಿಂದ ಹೋಗಿ ಆ ಕೂಸಿಗೆ ಕಚ್ಚಿ ಬರ್ತಿನಿ” ಎಂದು ಹೊರಟಿತು.
ರಾತ್ರಿ ಆಗಿತ್ತು. ಕೂಸು ಅಳುತ್ತಿತ್ತು. ಸೀರೆಯ ಸೆರಗಿನಿಂದ ದೀಪ ತೆಗೆಯಲು ಹೋದಳು. ಮೀನಪ್ಪ ಹೆಂಡತಿಗೆ ಕೇಳುತ್ತಾನೆ - “ಹೀಂಗ ದೀಪ ಆರಿಸಿದರೆ ಸೀರೆ ಸುಟ್ಟು ಹೋಗುತ್ತವಲ್ಲ?" ಆ ಮಾತಿಗೆ ಹೆಣ್ಣು ಮಗಳು ಅನ್ನುತ್ತಾಳೆ ಹು “ನನ್ನ ತಮ್ಮ ಮಿಡಿನಾಗೇಂದ್ರ ಮನಸ್ಸು ಮಾಡಿದರೆ ನನಗೆ ಬೇಕಾದಷ್ಟು ಸೀರೆ ಸಿಗುತಾವ?”
ಮಿಡಿನಾಗೇಂದ್ರ ಅಕ್ಕನಾಡಿದ ಮಾತು ಕೇಳಿತು. ಕೂಸಿಗೆ ಕಚ್ಚಲಾರದೆ ಮೂಕಾಟದಲ್ಲಿ ತಿರುಗಿ ಹೋಗಿಬಿಟ್ಟಿತು.
ಮರುದಿನವೇ ಆ ಕುರುಡಿಯನ್ನು ಅಗಸೆಯ ಬಂಡೆಗಲ್ಲಿನಲ್ಲಿ ಹೂಳಿಬಿಟ್ಟರು. ಅವಳ ತಲಿ ಮಾತ್ರ ಕಾಣುವಂತೆ. ಎಲ್ಲರೂ ಹೋಗುತ್ತಾ ಒಮ್ಮೆ ಬರುತ್ತಾ ಒಮ್ಮೆ ತಂಬಿಗೆ ಒರೆಸಹತ್ತಿದರು. ಒಂದು ದಿನ ಕುರುಡಿಯ ತಾಯಿಂಹೀ ತನ್ನ ತಂಬಿಗೆ ಒರೆಸಹೋದಳು. “ಎಲ್ಲರೂ ಒರೆಸುತ್ತಾರೆಂದು ನೀನೂ ಒರೆಸುತ್ತೀಯಾ ಅವ್ಜ?” ಎಂದು ಕುರುಡಿ ಚೀರಿದಳು. ತನ್ನ ಮಗಳಿಗೆ ಇದೆಂತ ಗತಿ ಬಂತಲ್ಲ ಎಂದು ತಿಳಿದು, ಅವ್ವನು ಮಗಳನ್ನು ಹೆಗಲಮೇಲೆ ಹೊತ್ತುಕೊಂಡು ಹೋಗುವಾಗ ಕುರುಡಿಯ ತಲೆ ಬಂಡೆಗಲ್ಲಿಗೆ ಬಡಿದು, ಅಲ್ಲಿಯೇ ಸತ್ತುಚಿದ್ದಳು.
ಚೋಟಪ್ಪನ ಗೆಳೆಯರು
ಚೋಟಪ್ಪನೆಂಬುವನು ಹೆಸರಿಗೆ ತಕ್ಕಂತೆ ಚೋಟುದ್ದವಾಗಿಯೇ ಇದ್ದನು. ಅವನು ದಿನಾಲು ಎತ್ತುಗಳನ್ನು ಬಿಟ್ಟುಕೊಂಡು ಹೊಲಕ್ಕೆ ಹೋಗುವನು. ಅಲ್ಲಿ ಗಳೆ ಹೊಡೆಯುವ ಕೆಲಸ ಮುಗಿಸಿ ಸಂಜೆಗೆ ಮರಳಿ ಮನೆಗೆ ಬರುವನು.
ಒಂದು ದಿನ ಜೋಟಪ್ಪನು ಗಳೆ ಹೊಡೆಯುತ್ತಿರುವಾಗ ಮೋಡಮುಸುಕಿ ಮಳೆ ಬರುವ ಲಕ್ಷಣಗಳು ಕಾಣತೊಡಗಿದವು. ಚೋಟಪ್ಪನು ಅವಸರವಾಗಿ ಎತ್ತುಗಳ ಕೊರಳು ಬಿಡುವ ಹೊತ್ತಿಗೆ ಮಳೆ ಆರಂಭವಾಗಿಂಹೀ ಬಿಟ್ಟಿತು. ಅದರೊಡನೆ ಗಾಳಿಯೂ ಭರದಿಂದ ತೀಡತೊಡಗಿತು. ಸುರಕ್ಷಿತವಾಗಿ ಎಲ್ಲಿ ನಿಲ್ಲಬೇಕೆಂದು ಯೋಚಿಸಿ ಚೋಟಪ್ಪನು ನೀರಿನ ಬಿಂದಿಗೆಯನ್ನು ಬೋರಲು ಹಾಕಿ ನೀರು ಚೆಲ್ಲಿದನು. ಅದು ಬರಿದಾಗಲು ಅದರಲ್ಲಿ ಸೇರಿಕೊಂಡು, ಮಳೆಯ ಇರಸಲು ಸಹ ತಗುಲಬಾರದೆಂದು ಬಿಂದಿಗೆಯ ಮೇಲೆ ಮಗಿ ಸರಿಸಿಕೊಂಡನು.
ಮಳೆಯು ರಪರಪನೆ ಸುರಿಯ ತೊಡಗಿದ್ದು, ಸಂಜೆಗೂ ಬಿಡಲಿಲ್ಲ; ನಡುರಾತ್ರಿಗೂ ಬಿಡಲಿಲ್ಲ. ಬೆಳ್ಳಬೆಳತನಕ ಹೊಡೆಯಿತು. ಎಲ್ಲೆಲ್ಲಿಯೂ ಮಳೆಯ ನೀರು ನಿಂತು ತುಳುಕಾಡಿತು. ಮಳೆಯ ಲಕ್ಷಣವು ಕಡಿಮೆಯಾದುದನ್ನು ತಿಳಿದು ಚೋಟಪ್ಪನು ಮಗಿ ಉರುಳಿಸಿ ಬಿಂದಿಗೆಯೊಳಗಿಂದ ಕಡೆಗೆ ಬಂದನು. ಆದರೆ ಅವನ ಎತ್ತುಗಳು ಕಾಣಿಸಲಿಲ್ಲ. ಸುತ್ತಲೂ ನೋಡಿದನು. ಒಡ್ಡಿನ ಮೇಲೆ, ಒಡ್ಡಿನ ಬದಿಗೆ, ಗಿಡದ ಕೆಳಗೆ ಮರಡಿಯ ಹತ್ತಿರ ಎಲ್ಲಿಯೂ ಎತ್ತುಗಳು ಕಾಣಿಸಲಿಲ್ಲ. ಹುದಿಲಲ್ಲಿ ಹೆಜ್ಜೆಗಳು ಅಸ್ಪಷ್ಟವಾಗಿ ಮೂಡಿದ್ದವು. ಅವು ಎತ್ತುಗಳ ಹೆಜ್ಜೆ ಮಾತ್ರವಲ್ಲದೆ, ಅವುಗಳೊಂದಿಗೆ ಮನುಷ್ಯ ಹೆಜ್ಜೆಗಳೂ ಕಾಣಿಸಿದವು. ತನ್ನ ಎತ್ತುಗಳನ್ನು ಯಾರೋ ಕದ್ದೊಯ್ದಿದ್ದಾರೆಂದು ಜೋಟಪ್ಪನು ನಿರ್ಣಯಿಸಿದನು. ಆ ಹೆಜ್ಜೆಯ ಹೊಳಹು ಹಿಡಿದು ಎತ್ತುಗಳನ್ನು ಹುಡುಕುತ್ತ ಮುಂದೆ ಸಾಗಿದನು.
ಕೆಲವೊಂದು ದಾರಿ ನಡೆದ ಬಳಿಕ ಅಲ್ಲೊಂದು ಚೇಳು ಸಂಧಿಸಿತು. ಕೇಳಿತು - "ಜೋಟಪ್ಪಾ ಎಲ್ಲಿ ಹೊರಟಿರುವಿ?"
"ನನ್ನ ಎತ್ತುಗಳನ್ನು ಕಳ್ಳರು ಒಯ್ದಿದ್ದಾರೆ. ಅವುಗಳನ್ನು ಹುಡುಕಿಕೊಂಡು ತರಬೇಕಾಗಿದೆ, ಹೊರಟಿದ್ದೇನೆ."“ನಾನೂ ನಿನ್ನ ಸಂಗಡ ಬರಲಿಯಾ?” ಎಂದು ಚೇಳು ಕೇಳಿಕೊಂಡಿತು. ಚೋಟಪ್ಪನು ಆಗಲಿ ಎನ್ನಲು, ಚೇಳು ಜೋಟಪ್ಪನನ್ನು ಹಿಂಬಾಲಿಸಿತು. ಹೀಗೆ ಇಬ್ಬರೂ ಸಾಗಿದಾಗ ಹಾದಿಯ ಮೇಲೆ ಬಿದ ಒಂದು ಗುಂಡುಕಲ್ಲು ಮಾತಾಡಿಸಿತು -“ಇಬ್ಬರೂ ಎಲ್ಲಿ ನಡೆದಿರುವಿರಿ?”
ಚೇಳು ಹೇಳಿತು - “ಜೋಟಪ್ಪನ ಎತ್ತುಗಳನ್ನು ಯಾರೋ ಕದ್ದೊಣ್ದಿದ್ದಾರೆ. ನಾವು ಹುಡುಕಲು ಹೊರಟಿದ್ದೇವೆ.”
“ಹಾಗಾದರೆ ನಾನೂ ನಿಮ್ಮೊಡನೆ ಬರುವೆನು” ಎಂದು ಗುಂಡುಕಲ್ಲು ಉತ್ಸಾಹ ತೋರಿಸಲು, ಚೋಟಪ್ಪನು “ಆಗಲಿ ಹೊರಡು” ಎಂದನು.
ಈಗ ಪ್ರವಾಸಿಕರು ಮೂವರಾಗಿ ಹೊರಟರು; ಹೊರಟೇ ಹೊರಟರು. ಎತ್ತುಗಳು ಕಣ್ಣಿಗೆ ಬೀಳಲಿಲ್ಲ. ಮುಂದೆ ಒಂದು ಕಂಟಿಂಹಲ್ಲಿ ಒಂದು ಬುರಲಿ ಎಂಬ ಕಾಡುಪ್ಸ್ ಕುಳಿತಿತ್ತು ಅದು ಕೇಳಿತು - “ಎಲ್ಲಿಗೆ ಸಾಗಿದ್ದೀರಿ ಜೊತೆಯಾಗಿ?” ಅವು ತಾವು ಹೊರಟಕಾರಣವನ್ನು ಹೇಳಿದವು. ಅವರ ಅಪ್ಪಣೆ ಪಡಕೊಂಡು ಬುರಲಿಂಯೂ ಅವರೊಡನೆ ಮುಂದುವರಿಯಿತು. ಆ ನಸುಬೆಳಕಿನಲ್ಲಿಯೇ ಚೋಟಪ್ಪನು ತನ್ನ ಎತ್ತುಗಳನ್ನು ಒಂದು ಕೊಟ್ಟಿಗೆಯಲ್ಲಿ ಕಂಡನು. ತನ್ನ ಸಂಗಡಿಗರಿಗೆ ತಾನು ಹೇಳಜೇಕಾದುದನ್ನೆಲ್ಲ ಹೇಳಿ ಚೋಟಪ್ಪನು ದವಣಿಂಹಲ್ಲಿ ಅಡಗಿಕೊ೦ಡನು. ಚೇಳು ಮೇವಿನ ಹತ್ತಿರ ಸುಳಿದಾಡತೊಡಗಿತು. ಗುಂಡುಕಲ್ಲು ಚಪ್ಪರದ ಮೇಲೇರಿ ಕುಳಿತಿತು. ಬುರುಲಿಯು ಅಡಿಗೆಮನೆಯ ಒಲೆಯಲ್ಲಿ ಅವಿತುಕೊಂಡಿತು.
ಎತ್ತುಗಳನ್ನು ಅಟ್ಟಿಕೊಂಡು ಬಂದ ಒಕ್ಕಲಿಗನು ಸಂಜೆಯ ಊಟ ತೀರಿಸಿಕೊಂಡು ಕೊಟ್ಟಿಗೆಯ ಕಡೆಗೆ ಬಂದನು. ಎತ್ತುಗಳ ಮುಂದೆ ಮೇವು ಕಾಣಲಿಲ್ಲ. ಕಣಿಕೆ ಕತ್ತರಿಸಿ ತಂದು ಹಾಕಬೇಕೆಂದು ಮೇಣಿನ ಕಡಗೆ ಗೋದಲಿಗೆ ಹೋದನು. ಒಕ್ಕಲಿಗನ ಮನೆ, ಅದೂ ಹಳ್ಳಿಯಲ್ಲಿ. ಅಂದಮೇಲೆ ಒಂದೇ ದೀಪ ಜಿಣಿಮಿಣಿ ಎಂದು ಉರಿಯುತ್ತಿತ್ತು. ಎಲ್ಲಿ ? ಅಡಿಗೆ ಮನೆಂಯಲ್ಲಿ. ಒಕ್ಕಲಿಗನು ಕತ್ತಲಲ್ಲಿಯೇ ಕೈಯಾಡಿಸುತ್ತ ಮೇವಿನ ಬಳಿಗೆ ಹೇಗಿ, ಕಣಿಕೆಯನ್ನು ತೆಕ್ಕೆಯಲ್ಲಿ ಹಿಡಿದು ಎತ್ತುವಷ್ಟರಲ್ಲಿ ಕಾಲಿಗೆ ಚೇಳು ಕುಟುಕಲು ಬಲವಾಗಿ ಕೂಗಿದನು.
ಎತ್ತಿನ ಮೈ ತಿಕ್ಕುತ್ತಿದ್ದ ಒಕ್ಕಲಿಗನ ಮಗನು ಅವಸರದಿಂದ ತಂದೆಯ ಬಳಿಗೆ ಬರುವಷ್ಟರಲ್ಲಿ ಚಪ್ಪರದ ಮೇಲೆ ಕುಳಿತ ಗುಂಡುಗಲ್ಲು ಉರುಳಲು, ಆತನ ತಲೆಯೊಡೆದು ನೆತ್ತರು ಸುರಿಯತೊಡಗಿತು. “ದೀಪವನ್ನಾದರೂ ತಕ್ಕೊಂಡು ಬರಬಾರದೇ” ಎಂದು ಅರಚಲು, ಅಡಿಗೆ ಮನೆಯಲ್ಲಿದ್ದ ಹೆಣ್ಣು ಮಗಳು ಸಾವರಿಸಿಕೊಂಡು ಆ ಜಿಣಿಮಿಣಿ ದೀಪ ಎತ್ತಿಕೊಳ್ಳುವಷ್ಟರಲ್ಲಿ ಒಲಿಯೊಳಗಿನ ಬುರಲಿ ಬುರ್ರನೇ ಹಾರಿಹೋಗಿದ್ದರಿಂದ ದೀಪ ಆರಿತಲ್ಲದೆ, ಆ ಒಕ್ಕಲಗಿತ್ತಿಯ ಕಣ್ಣೊಳಗೆ ಬೂದಿ ತೂರಿ ಬೀಳಲು ಕಣ್ಣೊರೆಸುತ್ತ “ಅಯ್ಯಯ್ಯೋ' ಎಂದು ಹಲುಬತೊಡಗಿದಳು. ಆ ಸಂಧಿಯಲ್ಲಿ ಸಾಧಿಸಿ ದವಣಿಯಲ್ಲಿ ಅಡಗಿಕೊಂಡಿದ್ದ ಚೋಟಪ್ಪನು ತನ್ನ ಎತ್ತುಗಳನ್ನು ಬಿಟ್ಟಕೊ೦ಡು ಹೊರಬಿದ್ದನು. ಚೇಳು, ಗುಂಡಗಲ್ಲು ಬುರಲಿ ಅವನನ್ನು ಬೆಂಬಲಿಸಿದರು. ಹೀಗೆ ಚೋಟಪ್ಪನು ಗೆಳೆಯರ ನೆರವಿನಿಂದ ತನ್ನ ಎತ್ತುಗಳನ್ನು ದೊರಕಿಸಿಕೊಂಡು ಮನೆಗೆ ಮರಳಿದನು.
ಒಬ್ಬರಿಗಿಂತ ಒಬ್ಬರು ಮಿಗಿಲು
ಅದರ ಸಪ್ಪುಳ ಬೇರೆ
ಕಾಮಣ್ಣ ಭೀಮಣ್ಣ
ಹೂಂ ಅಂದರೆ ಒಂದೇ ಉಂಡಿ
ಹುರಮುಂಜಗೇಡಿ
ಶಿವರಾತ್ರಿ ಪಾರಣೆ
ಗಂಡ ಹೆಂಡಿರ ಕದನ
ಒಂಟೆಯ ಮೇಲಿನ ಶಾಹಣೆ
ಜಾತ್ರೆಯ ಗದ್ದಲ
“ಏನೋ, ತಮ್ಮಾ ಏಕೆ ನಗುತ್ತಿರುವಿ ?”
ಅನುಮಾನಿಸುತ್ತಲೇ ಆ ಹುಡುಗನು ಮರುನುಡಿದನು - “ಅಕಸ್ಮಾತ್ ನೀವು ಸತ್ತರೆ ನಿಮ್ಮ ಹೆಣವನ್ನು ಈಚೆಗೆ ಹೇಗೆ ತರುವುದು - ಎಂದು ಯೋಜಿಸಿ ನಕ್ಕೆನು.”
ಹುಡುಗನು ಅಧಿಕಪ್ರಸಂಗಿಯೆನ್ನುವುದು ಸ್ಪಷ್ಟವಾಯಿತು. ಅವನ ಮನೆಯೊಳಗಿನ ಹಿರಿಯರನ್ನು ಕರೆಯಿಸಿ ಈತನು ವಿವೇಕಿಯಾಗುವಂತೆ ತಿದ್ದಲು ಸೂಚಿಸಬೇಕೆಂದು ಶ್ರೀಮಂತನು ಬಗೆದನು.
“ಏ ಹುಡುಗಾ, ನಿಮ್ಮ ಮನೆಯಲ್ಲಿ ಯಾರಾರು ಇರುವಿರಿ ?”
“ನನ್ನ ಅಣ್ಣ ಹಾಗೂ ತಂದೆ ಇದ್ದಾರೆ? ಹುಡುಗನ ಹೇಳಿಕೆ.
“ಒಳ್ಳೇದು, ಇಲ್ಲಿ ಕುಳಿತುಕೋ” ಎಂದು ಆ ಹುಡುಗನನ್ನು ಕುಳ್ಳಿರಿಸಿಕೊಂಡು ಒಬ್ಬ ಆಳುಮಗನನ್ನು ಕರೆದು ಆ ಹುಡುಗನ ಅಣ್ಣನನ್ನು ಕರೆತರಲು ಹೇಳಿದನು.
ಹುಡುಗನ ಅಣ್ಣ ಬರಲು, ಶ್ರೀಮಂತನು ಅವನ ಅಧಿಕಪ್ರಸಂಗವನ್ನು ತಿಳಿಸಿದನು. ಆ ಮಾತು ಕೇಳಿ ಅಣ್ಣನಿಗೆ ತಮ್ಮನ ಮೇಲೆ ಸಿಟ್ಟು ಬಂತು. ಜ೦ಕಿಸಿ ನುಡಿದನು - “ಧನಿಯರು ಸತ್ತರೆ ಆ ಹೆಣವನ್ನು ಹೊರತರುವ ವಿಚಾರ ನಿನಗೇಕೆ ಬೇಕಾಗಿತ್ತು ? ಹೆಣವನ್ನು ಕಡಿಕಡಿದು ತಂದಾರು ಹೊರಗೆ. ಅದರ ಉಸಾಬರಿ ಏತಕ್ಕೆ ಮಾಡುವಿ ?" ಆ ಮಾತು ಕೇಳಿ ಶ್ರೀಮಂತನಿಗೆ ಅನಿಸಿತು - ಈತನು ತಮ್ಮನಿಗಿಂತ ಮಿಗಿಲಾದ ಅಧಿಕಪ್ರಸಂಗಿ - “ತಮ್ಮಾ ನೀನೂ ಒಂದಿಷ್ಟು ಕುಳಿತುಕೋ' ಎಂದು ನುಡಿದು, “ಇವರಿಬ್ಬರನ್ನು ಬಿಡಬೇಡ” ಎಂದು ಆಳುಮಗನಿಗೆ ಸೂಚಿಸಿದನು. ಬೇರೊಬ್ಬ ಆಳನ್ನು ಕರೆದು - “ಅವರ ತಂದೆಯನ್ನು ಮುಂದೆ ಹಾಕಿಕೊಂಡು ಬಾ. ಅವನಾದರೂ ಈ ಅವಿವೇಕಿಗಳನ್ನು ತಿದ್ದಲಿ” ಎಂದು ಹೇಳಿದನು.
ಮರುಕ್ಷಣದಲ್ಲಿಯೇ ಅವರ ತಂದೆ ಬರಲು, ಶ್ರೀಮಂತನು ಅವನನ್ನು ಹತ್ತಿರಕ್ಕೆ ಕರೆದು ಕುಳ್ಳಿರಿಸಿಕೊಂಡು, ಅವನ ಮಕ್ಕಳಿಬ್ಬರೊಡನೆ ನಡೆದ ಸಂಗತಿಂದನ್ನು ಕ್ರಮವಾಗಿ ವಿವರಿಸಿದನು. ತಂದೆಗೂ ಎಲ್ಲಿಲ್ಲದ ಸಿಟ್ಟುಬ೦ತು, ಅವರ ವರ್ತನೆ ಕೇಳಿ. ಶ್ರೀಮಂತನ ಎದುರಿನಲ್ಲಿಯೇ ಮಕ್ಕಳಿಗೆ ಛೀ ಎನ್ನಲು ತೊಡಗಿದನು - “ಕತ್ತೆ ಆಗಿರುವಿರಿ ತಿಳಿಯುವದಿಲ್ಲವೇ ನಿಮಗೆ ? ಧನಿಯರು ಸತ್ತರೆ ಹೆಣವನ್ನು ಹೇಗೆ ಹೊರತರುವುದೆಂಬ ವಿಚಾರ ನಿಮಗೇಕೆ ಬೇಕಿತ್ತು ? ಹೆಣವನ್ನು ಕಡಿ ಕಡಿದು ಹೊರತರುವ ಯುಕ್ತಿ ಹೇಳಿಕೊಡುವದಕ್ಕೆ ನೀನಾವ ಪಂಡಿತನು ? ಮನೆಯಲ್ಲಿಯೇ ಶವಕ್ಕೆ ಬೆಂಕಿ ಹಚ್ಚಲೊಲ್ಲರೇಕೆ, ನಿಮಗೇಕೆ ಆ ಉಸಾಬರಿ ?”
ತಂದೆಯೂ ಅದೇ ವರ್ಗಕ್ಕೆ ಸೇರಿದ ಪ್ರಾಣಿಯೆಂದು ಬಗೆದು, ಅವರೆಲ್ಲರಿಗೂ ಹೋಗಿಬನ್ನಿರೆಂದು ಶ್ರೀಮಂತನು ಕೈಮುಗಿದು ಕಳಿಸಿದನು.
ಹಳ್ಳಿಯಲ್ಲಿ ಅಂದು ಜಂಗಮನು ಸಿಗುವುದೂ ಕಷ್ಟವೇ. ಸರತಿಂಪಂತೆ ಮನೆ ಮುಗಿಸಬೇಕಾಗುವುದರಿಂದ ಸಕಾಲಕ್ಕೆ ಜಂಗಮ ಬರಲಾರನು.
ಶೆಟ್ಟರ ತಾಯಿ ಅಂದು ಜ೦ಗಮನ ದಾರಿ ನೋಡುತ್ತ ಕುಳಿತೇ ಕುಳಿತಳು. ಬಹಳ ಹೊತ್ತಿನ ಮೇಲೆ ಜ೦ಗಮನು ಬಂದನು. ಅಜ್ಜಿ ಆತನ ಕೈಕಾಲಿಗೆ ನೀರು ಕೊಟ್ಟು ಗದ್ದಿಗೆಯ ಮೇಲೆ ಕುಳ್ಳಿರಿಸಿದಳು. ಧೂಳಪಾದೋದಕ ತೆಗೆದುಕೊಂಡು ಮನೆಯಲ್ಲೆಲ್ಲ ಸಿಂಪಡಿಸಿದಳು. ಆ ಬಳಿಕ ತೊಳೆದ ತಾಬಾಣವನ್ನು ತಂದು ಜಂಗಮನ ಮುಂದಿರಿಸಿ, ತಾನು ಉಣಬಡಿಸುವದಕ್ಕೆ ಎತ್ತುಗಡೆ ನಡೆಸಿದಳು.
ಗದ್ದಿಗೆಯ ಮೇಲೆ ಕುಳಿತ ಜ೦ಗಮನಿಗೂ ತಿಳಿಯದಂತೆ ಒಂದು ಅಪಾನವಾಯು ಹೊರಬಿದ್ದು ಸಪ್ಪಳ ಮಾಡಿತು. ಆ ಸಪ್ಪಳ ಕಿವಿಗೆ ಬಿದ್ದಾಗ ಆತನ ಲಕ್ಷ್ಯಕ್ಕೆ ಬಂತು. ಮನೆಯವರು ಏನೆಂದುಕೊಳ್ಳುವರೋ ಎಂದು ಚೆ೦ಂತಿಸತೊಡಗಿದನು. ಸಾಧ್ಯವಿದ್ದಷ್ಟು ಮನೆಯವರ ತಿಳುವಳಿಕೆ ದೂರಗೊಳಿಸುವ ಸಲುವಾಗಿ, ತಾಬಾಣವನ್ನು ತುದಿಬೆರಳುಗಳಿಂದ ತಿಕ್ಕಿ ಒರೆಸುತ್ತ ಬೆರಳು ಎಳೆದು ಸಪ್ಪಳ ಮಾಡಲು ತೊಡಗಿದನು.
ಅಷ್ಟರಲ್ಲಿ ಅಜ್ಜಿ ಬಂದು ವಿನಯದಿಂದ ಹೇಳಿದಳು - “ಇದರ ಸಪ್ಪುಳ ಬೇರೆ ಆಗ್ತದೆ ಅಪ್ಪಾ ಅವರೇ.”
ಅಜ್ಜಿಯ ಮಾತು ಕೇಳಿ ಜ೦ಗಮನಿಗೆ ನೆಲದಲ್ಲಿ ಇಳಿದು ಹೋದಂತಾಯಿತು, ನಾಚಿಕೆಯಿಂದ ಮುಂದಿನ ಕೆಲಸವನ್ನು ಅವಸರವಸರವಾಗಿ ಮುಗಿಸಿ ಎದ್ದು ಓಡಿದನು. ದಕ್ಷಿಣೆ ಕೇಳುವುದನ್ನೂ ಮರೆತನು.
ಅವರಿಬ್ಬರು ಕುರಿ ಹಿಂಡು ಮುಂದೆ ಮಾಡಿಕೊಂಡು ಸಾಗಿದಾಗ ಒಂದು ದೊಡ್ಡ ಹೊಲದಲ್ಲಿ ಹಾಂಯ್ದು ಹೋಗಬೇಕಾಯಿತು. ಅಲ್ಲಿ ಏಳು ಗಳೆ ನಿಂತಿದ್ದವು; ಮತ್ತು ಹತ್ತಿರದಲ್ಲಿಯೇ ಹದಿನಾಲ್ಕು ಎತ್ತುಗಳು ಮೇಯುತ್ತಿದ್ದವು. ಗಳೆ ಹಾಗೂ ಎತ್ತುಗಳನ್ನು ಕಂಡು ಕಾಮಣ್ಣನಲ್ಲಿ ಗಣಿತದ ರೀತಿ ಸುಳಿದು ಬಂತು - “ಏ ಭೀಮಾ, ಇಲ್ಲಿ ನೋಡು. ಬೆಸ ಗಳೆ, ಸರಿ ಎತ್ತುಗಳಿವೆ. ಬೆಸ ಗಳೇಗಳಿಗೆ ಸರಿ ಎತ್ತುಗಳನ್ನು ಹೇಗೆ ಹೂಡುವರೋ ನೋಡಿಯೇ ಹೋಗೋಣ.”
ಅವರು ಮಂಡಿಗೆಯನ್ನೇನೊ ಹಾಗೆ ಮಾಡಿದರು, ಆದರೆ ಮುಖತಸಗ್ಗಿಸಿ ಸಾಗಿದ ಕುರಿಹಿಂಡು ಮುಂದಿನ ಮರಡಿಯೇರಿ ಹೋಗಿದ್ದರಿಂದ ಅವರು ಆ ಹೊಲದಲ್ಲಿ ಆಳುಗಳು ಬರುವವರೆಗೆ ನಿಲ್ಲದೆ, ಕುರಿಹಿಂಡು ಮೇಯುತ್ತಿರುವ ಮರಡಿಂಹನ್ನೇರಿ ಹೋದರು.
ಮುಂದೆ ಒಂದರ್ಧತಾಸಿನಲ್ಲಿ ಹೊರಳಿನೋಡಿದರೆ, ಎಲ್ಲ ಗಳೇಗಳನ್ನು ಎತ್ತುಗಳು ಎಳೆಯುತ್ತ ಉಳತೊಡಗಿದ್ದು ಕಾಣಿಸಿತು.
ಇನ್ನೊಮ್ಮೆ ಒಂದು ಜೋಳದ ಹೊಲದ ಬದಿಯಲ್ಲಿ ತಮ್ಮ ಹಿಂಡಿನೊಡನೆ ಹೊರಟಾಗ ಎಲ್ಲಾ ಕಡೆಗೂ ಕಣ್ಣಾಡಿಸಿ, ಕಣ್ಣೋಡಿಸಿ ನೋಡಿದರು. ಜೋಳದ ಬೆಳೆ ಎಡೆಗೆ ಬಂದಿತ್ತು. ಭೀಮಣ್ಣ ಕೇಳಿದನು - ಕಾಮಾ, ಈ ಒಕ್ಕಲಿಗರು ಗಿಪ್ಪದ ಹಾಲು ಕುಡಿದು ಬಾಳೆಮಾಡುವರೇನೋ ? ಇಡಿಯ ಹೊಲವನ್ನೆಲ್ಲ ಜೋಳಬಿಶ್ರಿಬಿಟ್ಟಿದ್ದಾರೆ. ನಾಳೆ ಬೆಳೆಯೆಲ್ಲ ತೆನಿಹಿಡಿದು, ಕಾಳು ಆಗಿ, ಹಕ್ಕಿ ಕಾವಲಿಗೆ ಬಂದಾಗ ಏತರಮೇಲೆ ನಿಂತು ಹಕ್ಕಿ ಹೊಡೆಯುತ್ತಾರೆ? ಅಟ್ಟ ಹಾಕುವುದೆಲ್ಲಿ?” “ಅಹುದು. ಬಿತ್ತುವಾಗ ಅವರು ಅಟ್ಟ ಹಾಕುವುದನ್ನು ಲೆಕ್ಕಿಸಿಯೇ ಇಲ್ಲ. ತೆನೆಗಳೆಲ್ಲ ಕಾಳು ಹಿಡಿದಾಗ ಅವರಿಗೆ ತಮ್ಮ ತಪ್ಪು ತಿಳಿಯುತ್ತದೆ?” ಎಂದು ಮರುನುಡಿದನು ಕಾಮಣ್ಣ.
ಹದಿನೈದು ದಿನಗಳ ತರ್ವಾಯ ಅವರಿಬ್ಬರೂ ಅದೇ ದಾರಿಯಿಂದ ತಮ್ಮ ಹಿಂಡುಗಳೊಡನೆ ಸಾಗಿದಾಗ ಆ ಜೋಳದಲ್ಲಿ ಅಟ್ಟ ಕಾಣಿಸಿತು. “ಯಾರು ಹೇಳಿಕೊಟ್ಟಿದ್ದಾರು ಅವರಿಗೆ ಅಟ್ಟ ಹಾಕುವ ಯುಕ್ತಿಯನ್ನು ?” ಎಂದು ಅವರು ಮಾತಾಡುತ್ತ ಹೊರಟಾಗ, ಹಿಂದಿನಿಂದ ಒಂದು ದನಿ ಬಂದು - “ಅಟ್ಟ ಹಾಕುವ ಯುಕ್ತಿಯೇ ?
“ಹೊಲದ ತುಂಬ ಜೋಳ ಬಿತ್ತಿದ್ದರು. ಅಟ್ಟಹಾಕುವದಕ್ಕೆ ಸ್ಥಳವನ್ನೇ ಬಿಟ್ಟಿರಲಿಲ್ಲ. ಈಗ ಅಟ್ಟ ಹೇಗೆ ಹಾಕಿದರು ?
“ಅದರಲ್ಲೇನು ಜಾಣತನವಿದೆ ? ಹತ್ತೆಂಟು ಜೋಳದ ದಂಟು ಕಿತ್ತಿ ಹಾಕಿದರಾಯ್ತು. ಅಟ್ಟ ಹಾಕುವದಕ್ಕೆ ಸ್ಥಳ ಆಗುತ್ತದೆ?” ಎಂದವನೇ ಬಿರಿಬಿರಿ ಹೋಗಿಬಿಟ್ಟನು, ಆ ಹೊಲದ ಮುದುಕ.
“ಇಲ್ಲ. ನಾ ಮಾಡಿಸಂದಾ೦ವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎಂದು ಗಂಡನವಾದ.
ಒಂದು ತಾಸು ಜಗಳಾಡಿದರು. ಯಾರೂ ಉಣ್ಣಲಿಲ್ಲ. ಕಡೆಯಲ್ಲಿ ಒಂದು ನಿರ್ಧಾರಕ್ಕೆ ಬಂದರು. - “ಯಾರು ಹೂ೦ ಅಂತಾರೊ ಅವರು ಒಂದು ತಿನ್ನಬೇಕು. ಸುಮ್ಮನೆ ಮನಗಿದವರಿಗೆ ಎರಡು?
ನಾಯಿ ಬಂದು ಮಾಾಲಾದಿ ತಿನ್ನೆ ಹತ್ತಿತು. ನಾಯಿಯನ್ನು ಹೊಡೆಯುವರಾರು? ಹೊಡೆದರೆ ಹೂಂ ಅನ್ನಬೇಕಾಗುತ್ತದೆ. ಹೂಂ ಅಂದವರಿಗೆ ಒಂದ ಉಂಡಿ. ಅದಕ್ಕಾಗಿ ಅವನೂ ಹೂಂ ಅನಲಿಲ್ಲ. ಅವಳೂ ಹೂಂ ಅನಲಿಲ್ಲ. ಹಾಗೇ ಮಲಗಿದರು.
ಹೊತ್ತು ಹೊರಟಿತು. ಸೂರ್ಯನು ಮಾರು ಮೇಲೆ ಏರಿ ಬಂದನು. ಅವರ ಮುಚ್ಚಿದ ತಟ್ಟಿ ಮುಚ್ಚಿದ ಹಾಗೆಯೇ ಇತ್ತು. ನೆರೆಹೊರೆಯವರು ತಟ್ಟಿ ಬಡಿದರು. ಹೂಂ ಅನಲಿಲ್ಲ; ಹಾಂ ಅನಲಿಲ್ಲ. ನಾಲ್ಕು ಮಂದಿ ನೆರೆದರು. ತಟ್ಟಿ ಮುರಿದರು. ಒಳಗೆ ಹೊಕ್ಕರು. ಇಬ್ಬರಿಗೂ ಮಾತಾಡಿಸಿ ನೋಡಿದರು. ಅಗಳಾಡಿಸಿ ನೋಡಿದರು. ಮಿಸುಕಲೇ ಇಲ್ಲ ಯಾರೂ.
ಇಬ್ಬರೂ ಸತ್ತಿದ್ದಾರೆಂದು ನಿರ್ಧರಿಸಿ ಕುಳ್ಳುಕಟ್ಟಿಗೆಗಳನ್ನು ಹೊತ್ತೊಂಯ್ದು ಸುಡುಗಾಡಿನಲ್ಲಿ ಒಗೆದು ಬ೦ದರು. ಇಬ್ಬರನ್ನೂ ನಾಲ್ಕು ನಾಲ್ಕು ಜನ ಹೊತ್ತರು. ಇಬ್ಬರೊಳಗಾರೂ ಹೂಂ ಅನಲಿಲ್ಲ. ಹೂಂ ಅಂದರೆ ಒಂದೇ ಉಂಡಿ ಅಲ್ಲವೇ?
ಕುಳ್ಳು ಕಟ್ಟಿಗೆಯ ತಾಳಿಯ ಮೇಲೆ ಹೆಣ ಒಗೆದರು. ಉರಿ ಹಚ್ಚಿದರು. ಚೌಕೀದಾರನನ್ನು ಅಲ್ಲಿ ನಿಲ್ಲಿಸಿ ಮಂದಿಯೆಲ್ಲ ತಂತಮ್ಮ ಮನೆಗ ಹೋದರು. ಬೆಂಕಿ ಹೊತ್ತಿದಂತೆ ಮೈಯೆಲ್ಲ ಸುಡುತ್ತ ಬಂತು. ಇಬ್ಬರಲ್ಲಿ ಒಬ್ಬರೂ ಸೋಲಲಿಲ್ಲ. ಕಿರಿ ಬೆರಳೊಂದು ಛಟ್ ಎಂದು ಸಿಡಿದು ಬಂದು ಚಿತ್ತು. “ಥೂ! ನೀನೇ ಎರಡು ಉಂಡಿ ತಿನ್ನು" ಎಂದನು ಗಂಡ. ಮೈಮೇಲಿನ ಬಟ್ಟೆಬರೆಗಳೆಲ್ಲ ಸುಟ್ಟಿದ್ದರಿಂದ ಇಬ್ಬರೂ ಬರಿ ಬತ್ತಲೆಯೇ ಜಿಗಿದು ಕಡೆಗೆ ಬಂದರು. “ದೆವ್ವ ಬಂದವೆಂ"ದು ಚೌಕಿದಾರ ಓಡಿಹೋದನು.
ಊರ ಗೌಡನು ತನ್ನ ಅರಿವೆ ಒಗೆದು ತರಲಿಕ್ಕೆ ಅಗಸನಿಗೆ ಹೇಳಿದನು. ಆದರೆ ಅಗಸನು ಹಳ್ಳಕ್ಕೆ ಹೋಗಲು ಸಿದ್ಧನಾಗಲಿಲ್ಲ. ಹಳ್ಳದ ದಂಡೆಯಲ್ಲಿಯೇ ಸುಡುಗಾಡು ಇತ್ತು. ದೆವ್ವ ಬೆನ್ನುಹತ್ತುವವೆಂದು ಚೌಕಿದಾರನು ಊರಲ್ಲೆಲ್ಲ ಹೇಳಿದ್ದನು. ಗೌಡನು ಅಗಸನಿಗೆ ಒತ್ತಾಯದಿಂದ ಅರಿವೆಗಳನ್ನು ಕೊಟ್ಟು ತಾನೂ ಕುದುರೆ ಹತ್ತಿ ಬೆನ್ನ ಹಿಂದೆ ಹೋದನು. ಬಟ್ಟೆ ಒಗೆದು ದಡದಲ್ಲಿ ಒಣಹಾಕಲಾಯಿತು. ಆ ಬಟ್ಟೆಗಳನ್ನು ತೆಗೆದುಕೊಳ್ಳಲು ಇಬ್ಬರೂ ಆ ಗಂಡಹೆಂಡತಿ ಓಡುತ್ತ ಬಂದರು.
“ಅಯ್ಯಯ್ಯೋ ದೆವ್ವ ಹಿಡಿಯುತ್ತವೆ” ಎನ್ನುತ್ತ ಅಗಸ ಮತ್ತು ಗೌಡ ಇಬ್ಬರೂ ಓಡಿದರು. ಅಂದು ಆ ಗಂಡ ಹೆಂಡತಿ ಅಗಸನ ಬಟ್ಟೆ ಹಾಕಿಕೊಂಡು ಬಂದಂದಿನಿಂದ ಹಾರುವರು, ಲಮಾಣಿಗರಾದರಂತೆ.
ಹುರಮುಂಜಗೇಡಿ
ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು. ಬೆಲ್ಲ - ಎಣ್ಣೆ ಇಂಗು - ಜೀರಿಗೆ ಚುರಮರಿ - ಪುಠಾಣಿ ಮಾರುವ ಕಿರಾಣಿ ಅಂಗಡಿ. ಹಳ್ಳಿಯೊಳಗಿನ ಗಿರಾಕಿಗಳು ಉಡಿಯಲ್ಲಿ ಜೋಳವನ್ನೋ ಕುಸುಬೆಯನ್ನೋ ತಂದು ಅಂಗಡಿಕಾರನ ಮಾಷಿನಲ್ಲಿ ಅಳೆದುಹಾಕಿ ತಮಗೆ ಬೇಕಾದ ಸಾಮಾನು ಕೊಂಡುಕೊಳ್ಳುವುದು ವಾಡಿಕೆ. ದುಡ್ಡು ತಂದು ವ್ಯಾಪಾರ ಮಾಡಿಕೊಳ್ಳುವವರು ಬಹಳ ಕಡಿಮೆ.
ಹಬ್ಬ ಹುಣ್ಣಿಮೆ ದಿವಸ ಇಲ್ಲವೆ ಸೋಮವಾರ ದಿವಸ ಗಿರಾಕಿಗಳ ಗೊಂದಲ ಹೆಚ್ಚಿಗಿರುತ್ತದೆ. ಸರತಿಯ ಮೇಲೆ ಗಿರಾಕಿಗಳು ವ್ಯಾಪಾರ ಗಿಟ್ಟಿಸಬೇಕಾಗುತ್ತದೆ. ಒಂದು ಸಾರೆ ಗೌಡರ ಮನೆಯಲ್ಲಿ ತೊತ್ತುಗೆಲಸಮಾಡುವ ಬಂಡೆವ್ವ ಮುದಿಕೆ ಉಡಿಯಲ್ಲಿ ಜೋಳ ಕಟ್ಟಿಕೊಂಡು ಬಂದು ಸರತಿ ಕಾಯುತ್ತ ನಿಂತೇ ನಿಂತಳು. ಮುಂದಿನ ಗಿರಾಕಿಗಳು ಹೊರಟು ಹೋದ ಬಳಿಕ, ಮುದಿಕೆ ತನ್ನ ಉಡಿಯೊಳಗಿನ ಜೋಳವನ್ನು ಅಳೆದು ಹಾಕಿದಳು.
“ಏನು ಕೊಡಲಿ” ಎಂದನು ಅಂಗಡಿಕಾರ.
“ಗೌಡತಿ ಏನೋ ಹೇಳಿದ್ದಾಳೆರೀ” ಎಂದು ನೆನಪು ಮಾಡಿಕೊಳ್ಳಕತ್ತಿದಳು.
“ಅಲ್ಲ” ಮುದಿಕೆಯ ಸೊಲ್ಲು.
“ಇಂಗು ಜೀರಿಗೆ ?”
“ಅದು ಅಲ್ಲ?”
“ಶುಂಠಿ, ಮೆಣಸು ?"
“ಊಂ! ಹು?"
“ಅಡಿಕೆ, ಕಾಚು ?”
ಅಲ್ಲವೆನ್ನುವಂತೆ ಮುದಿಕೆ ಗೋಣುಕೊಡಹಿದಳು. ಅಂಗಡಿಕಾರನಿಗೆ ಬೇಸರಾಯಿತು. ಹಿಂದೆ ನಿಂತ ಗಿರಾಕಿಗಳು ಅವಸರ ಮಾಡತೊಡಗಿದ್ದನ್ನು ಕಂಡು ಸಿಟ್ಟಿನಿ೦ದ ಆ ಮುದಿಕೆಗೆ “ಕೇಳಿದ್ದಕ್ಕೆಲ್ಲ ಅಲ್ಲವೆನ್ನುತ್ತ ಮತ್ತೇಕೆ ನಿಂತೆ ? ನಿನ್ನ ಜೋಳ ತೆಗೆದುಕೊಂಡು ಹೋಗು, ಹುರಮುಂಜಗೇಡೀ” ಎಂದು ಗದ್ದರಿಸುವಷ್ಟರಲ್ಲಿ - “ಅದೇ ನೋಡೋ ಅಪ್ಪಾ ನನಗೆ ಬೇಕಾಗಿದ್ದು ಹುರಮು೦ಜ. ಕೊಟ್ಟುಬಿಡು ನನ್ನಪ್ಪಾ, ಹೋಗುತ್ತೇನೆ. ಗೌಡತಿ ಬಯ್ದಾಳು ಬಹಳ ಹೊತ್ತಾಯ್ತು" ಎಂದು ಮುದಿಕೆ ನುಡಿಯಲು, ಅಂಗಡಿಕಾರನು ಕಾಗದದಲ್ಲಿ ಹುರಮುಂಜ ಪೊಟ್ಟಣ ಕಟ್ಟಿಕೊಟ್ಟನು.
ಶಿವರಾತ್ರಿಯದಿನ ಇಡಿಯರಾತ್ರಿ ಮಹಾದೇವನ ಗುಡಿಯಲ್ಲಿ ನಡೆಯುವ ಭಜನೆಯಲ್ಲಿ ಭಾಗವಹಿಸಿಲು ಗಂಡನು ಹೊರಟನು “ನೀನೂ ಗುಡಿಗೆ ಬಂದುಬಿಡು ನನ್ನೊಡನೆ. ಭಜನೆ ಕೇಳುವಿಯಂತೆ. ಸಾಕಷ್ಟು ಹೆಣ್ಣು ಮಕ್ಕಳು ಬಂದಿರುತ್ತಾರೆ ಎಂದು ಹೆಂಡತಿಗೆ ಹೇಳಲು, ಆಕೆ ಗಂಡನ ಬಿಡೆಯಕ್ಕಾಗಿ ಗುಡಿಗೆ ಹೋದಳು.
ಭಜನೆ ಆರಂಭವಾಗಿ ಒಳ್ಳೆಯ ಭರಕ್ಕೆ ಬರತೊಡಗಿತ್ತು. ಅಂಥ ಪ್ರಸಂಗದಲ್ಲಿ ಆಕೆಯ ಮನಸ್ಸು ಮನೆಯತ್ತ ಎಳೆಯತೊಡಗಿತು. ಬೇಕಾದಷ್ಟು ಫಲಾಹಾರ ಮಾಡಿದ್ದರೂ ಆಕೆಗೆ ಉಂಡಷ್ಟು ತೃಪ್ತಿಯಾಗಿರಲಿಲ್ಲ. ಹಸಿವೆಯೆನಿಸಹತ್ತಿದ್ದರಿಂದ ಮನೆಗೆ ಹೋಗಿ, ಏನಾದರೂ ಮಾಡಿಕೊಂಡು ತಿಂದು ಮಲಗಬೇಕೆಂದು ಯೋಚಿಸಿದಳು. “ಗಂಡನಂತೂ ಭಜನೆಯಲ್ಲಿ ಭಾಗಿಯಾಗಿದ್ದರಿಂದ ಅಡ್ಡಹೊತ್ತಿನಲ್ಲಿ ಮನೆಗೆ ಬರುವಂತಿಲ್ಲ. ಆದ್ದರಿಂದ ನನ್ನ ಉದ್ದೇಶವು ನಿರ್ಬಾಧವಾಗಿ ನೆರವೇರುತ್ತದೆ” - ಎಂದು ಎದ್ದು ಮನೆಂಯ ಹಾದಿ ಹಿಡಿದಳು. ಮನೆಗ ಬಂದವಳೇ ಒಲೆಹೊತ್ತಿಸಿ, ಭಾಂಡೆಯಲ್ಲಿ ಸಜ್ಜುಗವನ್ನು ಅಟ್ಟು, ಕೋಣಮಗಿಯಲ್ಲಿ ಆರಹಾಕಿದಳು. ತಾಬಾಣದಲ್ಲಿ ಅಷ್ಟಷ್ಟು ತೆಗೆದುಕೊಂಡು ತಿಂದರಾಯಿತೆಂದು, ತಾಬಾಣ ತೆಗೆದುಕೊಳ್ಳುವಷ್ಟರಲ್ಲಿ ಗುಡಿಯಿಂದ ಗಂಡ ಬಂದು, ಬಾಗಿಲು ತೆಗೆಯೆಂದು ಕೂಗಿದನು. ಹೆಂಡತಿ ಲಗುಬಗೆಯಿಂದ ಅದೆಲ್ಲವನ್ನೂ ಮುಚ್ಚಿಟ್ಟು ದಡದಡನೆ ಬಾಗಿಲಿಗೆ ಬಂದು ಕದ ತೆರೆದಳು.
“ಗುಡಿಯಿಂದ ತೀವ್ರವೇ ಬಂದುಬಿಟ್ಟೆಯಲ್ಲ! ಏಕೆ ?” ಎಂದು ಕೇಳಿದನು ಗಂಡ."ಭಜನೆ ನನಗೇನು ತಿಳಿಯುವದೇ - ಹೊಳೆಯುವದೇ? ಆದ್ದರಿಂದ ಬೇಸರವೆನಿಸಿತು. ಓಡಿ ಮನೆಗೆ ಬಂದೆ."
"ಒಳ್ಳೆಯದೇ ಆಯಿತು. ಮಲಗಿಕೊಂಡುಬಿಡೋಣ ಹಾಗಾದರೆ" ಎಂದು ಗಂಡನು ಮಲಗುವದಕ್ಕೆ ಅಣಿಯಾದನು.
"ಅನಕಾ ಒಂದು ಕಥೆಯನ್ನಾದರೂ ಹೇಳಿರಿ" ಎಂದಳು ಹೆಂಡತಿ.
"ನಿದ್ದೆಯ ಹೊತ್ತಿನಲ್ಲಿ ಕಥೆ ಕೇಳಬೇಕನ್ನುವಳಲ್ಲ" ಎಂದು, ಬೇಸರದಿಂದ ಎಂಥದೋ ಕತೆಯನ್ನು ಹೇಳಲು ಆರಂಭಿಸಿದನು ಗಂಡ.
"ಕತ್ತಲದಾಗ ಕಡೋಡಿ, ಕೊಣಮಗ್ಕಾಗ ತೊಡೋಡಿ, ಸುಮ್ಮನೆ ಮನಗ ಬಿದ್ದೋಡಿ" ಎಂದು ಚೇಷ್ಟೆಯಿಂದಾಡಿದ ಲಲ್ಲೆಯನ್ನು ಕೇಳಿ ಹೆಂಡತಿ ಕಕ್ಕಾ ವಿಕ್ಕಿಯಾದಳು. "ಇವನಿಗೆ ಗೊತ್ತಾಗದಂತೆ ಮಾಡಿದ್ದೆಲ್ಲ ತಿಳಿದೇ ಬಿಟ್ಟಿದೆಯಲ್ಲ? ಎನ್ನುತ್ತ ತಾನು ಮಾಡಿದ್ದನ್ನೆಲ್ಲ ವಿವರಿಸಿದಳು.
"ಸುಳ್ಳೇಕೆ ಹೇಳಲಿ? ಭಜನೆ ಕೇಳಬೇಕೆ೦ದರೆ ಹಸಿವೆ ಮನೆಯತ್ತ ಎಳೆದುತಂದು ಸಜ್ಜಿಗೆ ಮಾಡಿಸಿತು. ನೀವು ಬರುವಷ್ಟರಲ್ಲಿ ತಿ೦ದುಮುಗಿಸಿ, ಉಪವಾಸ ಮಾಡಿದವರಂತೆಂಹೀ ಮಲಗಿಬಿಟ್ಟು, ನೀವು ಬಂದಾಗ ಬಾಗಿಲು ತೆರೆಯಬೇಕೆಂದು ಯೋಚಿಸಿದ್ದೆ. ಆದರೆ ನಾನು ತಾಬಾಣ ಸಾವರಿಸುವಷ್ಟರಲ್ಲಿ ನೀವು ಬಂದೇ ಬಿಟ್ಟಿದ್ದರಿಂದ, ಮಾಡಿದ್ದನ್ನೆಲ್ಲ ಮುಚ್ಚಿಟ್ಟು ಓಡಿಬಂದು ಬಾಗಿಲು ತೆರೆದೆ, ನನ್ನದೇನಿದೆ ತಪ್ಪು? ಹಸಿವೆ ತಾಳದೆ ಹೀಗೆ ಮಾಡಿದೆ. ನಿಮಗೆಲ್ಲ ತಿಳಿದೇ ಬಿಟ್ಟಿದೆಯಲ್ಲ? ಹೊಟ್ಟೆಂಯಲ್ಲಿ ಹಾಕಿಕೊಳ್ಳಿರಿ" ಎಂದು ವಿನಯದಿಂದ ಕೇಳಿಕೊಂಡಳು.
ಗಂಡನು, ಅಂದು ರಾತ್ರಿ ಹೆಂಡತಿಯು ಮಾಡಿದ ಅಚಾತುರ್ಯವನ್ನೂ, ಮರುದಿನ ಬೆಳಗಾದ ಬಳಿಕ ಆಕೆ ಮಾಡಿದ ಸಜ್ಜಿಗೆಯನ್ನೂ ಆಕೆಯ ವಿನಂತಿಯನ್ನು ಮನ್ನಿಸಿ ಹೊಟ್ಟೆಯಲ್ಲಿ ಹಾಕಿಕೊಂಡನು.
ಗಂಡ ಹೆಂಡಿರ ಕದನ
ನನ್ನೀಸಾಹೇಬ ಹಾಗೂ ಬಡೇಮಾ ಎಂಬ ಇಬ್ಬರು ಗಂಡಹೆಂಡಿರಿದ್ದರು. ನನ್ನೀ ಸಾಹೇಬನು ಹೆಸರಿಗೆ ತಕ್ಕಂತೆ ತೆಳ್ಳಗಿನ ಕುಳ್ಳನೇ ಆಗಿದ್ದನು. ಅದರಂತೆ ಬಡೇಮಾ ಕೂಡ ಹೆಸರಿಗೆ ಒಪ್ಪುವ ಹಾಗೆ ಮೇಲೆತ್ತರದ ದುಂಡಮೈಯವಳೇ ಆಗಿದ್ದಳು. ಅಂಥ ಇಜ್ಜೋಡಿನ ಸಂಸಾರವೂ ಸಾಗಿಯೇ. ಬಂದಿತ್ತು ಆದರೆ ಹಲವು ಸಾರೆ ಅವರಲ್ಲಿ ವಿರಸಪ್ರಸಂಗಗಳು ಬರುತ್ತಲೆ ಅವರಲ್ಲಿ ಬಾಯಿಗೆ ಬಾಯಿ, ಕೈಗೆಕ್ಕೆ ಹತ್ತಿ ಕದನಗಳಾಗುತ್ತಿದ್ದವು. ಆದರೆ ಗಂಡಹೆಂಡಿರ ಜಗಳ ಉಂಡು ಮಲಗುವವರೆಗಷ್ಟೇ ಅಲ್ಲವೇ?
ಬಾಯಿಗೆ ಬಾಯಿ ಹತ್ತಿ ಜಗಳಾಡಿದ್ದು ಸಾಕಾಗದೆ, ನನ್ನೀಸಾಹೇಬನು ಸಿಟ್ಟಿನ ಭರದಲ್ಲಿ ಹೆಂಡತಿಯನ್ನು ಒಳಿತಾಗಿ ಥಳಿಸಬೇಕೆಂದು, ಒಂದು ಬಡಿಗೆಯಿತ್ತಿ ಆಕೆಯ ಮೈಮುಟ್ಟಹೋಗಿ ಹೊಡೆಯಲನುವಾದನು. ಅಷ್ಟರಲ್ಲಿ ಹೆಂಡತಿ ಆತನನ್ನು ಎದುರಿಸಿ ಆತನ ಕೈಯೊಳಗಿನ ಬಡಿಗೆಯನ್ನು ನಿರಾಯಾಸವಾಗಿ ಕಸಿದುಕೊಂಡು ಜಂತಿಯಲ್ಲಿ ತುರುಕಿಬಿಡುವಳು. ಅದು ಕುಳ್ಳನಾದ ನನ್ನೀ ಸಾಹೇಬನಿಗೆ ನಿಲುಕದಂತಾಗುವದು. ಆ ಕಾರಣದಿ೦ದ ಅವರ ಜಗಳವು ಮೊ೦ಡವಾಗಿಬಿಡುವದು.
ಒಮ್ಮೊಮ್ಮೆ ಬಡೇಮಾನಿಗೆ ಸಿಟ್ಟು ಬಂದಾಗ ಆಕೆ ಬಾಗಿಲಿಕ್ಕಿ ಗಂಡನನ್ನು ಅದೇ ಬಡಿಗೆಯಿಂದ ಬಡಿಯುವಳು. ಹೆಂಡತಿ ಬಡೆಯುವಳೆಂದರೂ ಗಂಡನ ಬಾಯ ಅಬ್ಬರವೇ ಹೆಚ್ಚು. ಅದನ್ನು ಕೇಳಿದವರಿಗೆ ಅನಿಸುವುದು - "ಗಂಡನೇ ಬಾಗಿಲು ಹಾಕಿ ಹೆಂಡತಿಯನ್ನು ಜಿಗಿಜಿಗಿದು ಬಡಿಯುತ್ತಿದ್ದಾನೆ. ಅಂತೆಯೇ ದನಿ ತೇಕುತ್ತದೆ."
ಹೆಂಡತಿ ಎಡಗೈಯಿಂದ ಗಂಡನ ರಟ್ಟೆಹಿಡಿದು ಮಗ್ಗುಲಿಗೆ ನಿಲ್ಲಿಸಿ, ಬೆನ್ನ ಮೇಲೆ ಬಡಿಗೆಯೇಟು ಹಾಕುವಳು. ಇನ್ನೇನು ಏಟು ಬೀಳುವುದಿನ್ನು ಎನ್ನುವ ಕ್ಷಣದಲ್ಲಿ - "ಎಷ್ಟಿರಬೇಕು ನಿನ್ನ ಸೊಕ್ಕು?" ಎಂದು ಜೀರುವನು. ಅದು ಮುಗಿಯುವಷ್ಟರಲ್ಲಿ ಬಡಿಗೆಯೇಟಿನ ಸಪ್ಪಳ! ಆಮೇಲೆ - "ನಿನ್ನ ಜೀವ ಉಳಿಸುವದಿಲ್ಲ ಇನ್ನು" ಎಂದು ಗುಡುಗುವನು. ತರುವಾಯ ಇನ್ನೊಂದು ಏಟು. ಅನಂತರ - ನಿನ್ನನ್ನು ಕೊಂದು ಹಾಕಿದರೂ ನನ್ನ ಸಿಟ್ಟು ಇಳಿಯದು" ಎನ್ನುತ್ತ ಬೇರೊಂದು ಏಟು ತಿನ್ನುವನು.
ಬಾಗಿಲು ಹಾಕಿಕೊಂಡಿರುವದರಿಂದ ಅವರ ಬಡಿದಾಟ — ಚೀರಾಟಗಳನ್ನು ಕೇಳಿ, ನೆರೆಹೊರೆಯವರು ನೆರೆಯುತ್ತಿದ್ದರೂ ಅವರನ್ನು ಬಿಡಿಸುವುದು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ತುಸು ಹೊತ್ತು ನಿಂತುಕೊಂಡು — "ನನ್ನೀಸಾಹೇಬನು ಹಿಡಿಯಾಳು ಆಗಿದ್ದರೂ ಅವನಿಗೆ ಸಿಟ್ಟು ಬಂದಾಗ ಯಾರಿಗೂ ಆಟೋಪವಲ್ಲ. ಹೆಂಡತಿಗೆ ಸಾಯುವಂತೆ ಹೊಡೆಯುತ್ತಾನೆ" ಎನ್ನುತ್ತ ಸಾಗಿ ಹೋಗುವರು.
ಒಂಟೆಯ ಮೇಲಿನ ಶಾಹಣೆ
ಹಳ್ಳಿಯಲ್ಲಿ ಒಕ್ಕಲಿಗರ ಮನೆ. ದನಗಳ ಕೊಟ್ಟಿಗೆಯಲ್ಲಿಯೇ ಅವರು ಬಚ್ಚಲಮಾಡಿ ಕೊಂಡಿದ್ದರು. ಎಮ್ಮೆಯ ಕರು ಒಂದು ದಿನ ನೀರಡಿಸಿ, ಕಟ್ಟಿಹಾಕಿದ ಕಣ್ಣಿಯನ್ನು ಹರಿದುಕೊಂಡು ಬಚ್ಚಲುಮನೆಗೆ ನೀರು ಕುಡಿಯಲು ಹೊಕ್ಕಿತು. ಜಳಕದ ಹಂಡೆಯಲ್ಲಿ ಬಾಯಿಹಾಕಿತು.
ಚಿಕ್ಕದಾದ ಹಂಡೆಯ ಬಾಯಿಗಿಂತ ದೊಡ್ಡದಾದ ಕೋಣನ ತಲೆಯು ಹಂಡೆಯಲ್ಲಿ ಸಿಕ್ಕುಕೊ೦ಡಿತು. ಜಗ್ಗಾಡಿತು, ಎಳೆದಾಡಿತು. ಬಗೆ ಹರಿಯಲಿಲ್ಲ. ಮನೆಯವರು; ಓಡಿಬಂದರು ಒಬ್ಬಿಬ್ಬರು ಹಂಡೆ ಹಿಡಿದರು. ಒಬ್ಬಿಬ್ಬರು ಕೋಣಕರುವನ್ನು ಹಿಡಿದೆಳೆದರು. ಏನುಮಾಡಿದರೂ ಕೋಣನ ತಲೆ ಹಂಡೆಯಿಂದ ಹೊರಬರಲಿಲ್ಲ. ಕೊನೆಗೆ ಊರಲ್ಲಿರುವ ಶಾಹಣೆನನ್ನು ಕರೆಯಕಳಿಸಿದರು.
ಬಹಳ ಶಾಹಣೆ ಎಂದು ಆತನು ಆ ಭಾಗದ ಹಳ್ಳಿಗಳಿಗೆಲ್ಲ ಹೆಸರಾಗಿದ್ದನು. ಎಲ್ಲಿಗೆ ಹೋದರೂ ಆತನು ಒಂಟೆಯ ಮೇಲೆ ಕುಳಿತುಕೊಂಡೇ ಹೋಗುತ್ತಿದ್ದನು.ಹೋದಲ್ಲಿ ಅವನು ಯುಕ್ತಿ ಹೇಳುವಾಗ ಸಹ ಒಂಟೆಯ ಮೇಲಿಂದ ಕೆಳಗಿಳಿಯುತ್ತಿದ್ದಿಲ್ಲ. ಒಂಟೆಯ ಮೇಲೆ ಕುಳಿತುಕೊಂಡೇ ಬುದ್ಧಿ ಹೇಳುತ್ತಿದ್ದುದರಿಂದ ಅವನನ್ನು ಒಂಟೆಯ ಮೇಲಿನ ಶಾಹಣೆ ಎಂದು ಕರೆಯುತ್ತಿದ್ದರು.
ಆ ಒಂಟೆಯಮೇಲಿನ ಶಾಹಣೆ ಬಂದನು. ಆದರೆ ಆ ರೈತನ ಮನೆಯ ಒಳಗೆ ಬರುವುದು ಹೇಗೆ? ಆತನಂತೂ ಒಂಟೆಯ ಮೇಲೆ ಕುಳಿತುಕೊಂಡೇ ಬರತಕ್ಕವನು.
ಮನೆಯೊಳಗೆ ಬರುವದಕ್ಕೆ ಯುಕ್ತಿಯನ್ನೂ ಅವನೇ ಹೇಳಿಕೊಟ್ಟನು. ಆ ಪ್ರಕಾರ ತಲೆಬಾಗಿಲನ್ನು ಕಿತ್ತಿಡಬೇಕಾಯಿತು. ಆಗ ಒಳಗೆ ಬಂದು ಇದ್ದ ತೊಡಕನ್ನು ನಿರೀಕ್ಷಿಸಿದನು—"ಇದೇನು ಮಹಾ?" ಎಂದನು.
ಕೋಣನ ಕುತ್ತಿಗೆ ಕಡಿಯಲು ಹೇಳಿದನು.
ಹಂಡೆಯನ್ನು ಒಡೆಯಲು ಸಲಹೆಯಿತ್ತನು.
ಅವನು ಹೇಳಿದಂತೆ ಎಲ್ಲವೂ ನಡೆದುಹೋಯಿತು. ಜಾತ್ರೆಯ ಗದ್ದಲ
ಬಯಲಾಟದ ಒಂದು ಮೇಳದಲ್ಲಿ ಸಂಕಣ್ಣ, ಹುಣಸಿಕ್ಕ ಹಿಮ್ಮೇಳದ ಹಾಡುಗಾರರಾಗಿದ್ದರು. ಸಂಕಣ್ಣ ಅಸಾಧ್ಯ ಸಿಂಬಳ ಬುರಕನಾಗಿದ್ದರೆ, ಹುಣಸಿಕ್ಕ ತಡೆಯಿಲ್ಲದೆ ತುರಿಸುವ ಹುರುಕಲಿಯಾಗಿದ್ದನು. ಸಿಂಬಳ ಹಣಿಕೆ ಹಾಕಿದಾಗೊಮ್ಮೆ ಸಂಕಣ್ಣ ಸರಕ್ಕನೇ ಮೂಗೇರಿಸಿ, ಅಂಗಿಯ ತೋಳಿನಿಂದ ಒರೆಸಿಕೊಳ್ಳುವನು. ಬಲಧಾರೆಯನ್ನು ಬಲತೋಳಿನಿಂದ, ಎಡಧಾರೆಯನ್ನು ಎಡತೋಳಿನಿಂದ ಒರೆಸಿಕೊಂಡು ಅಂಗಿಯ ತೋಳತುದಿಗಳೆರಡೂ ಕಟುರಾಗಿದ್ದವು. ಅದರಂತೆ ಹುಣಸಿಕ್ಕನು ಕೈಬೆರಳ ಸಂದುಗಳಲ್ಲಿ ತುರಿಕೆಯಿದ್ದರೆ ಕೈಗೆ ಕತ್ತರಿ ಮಾಡಿ ತಿಕ್ಕಾಡುವದರಿಂದ ತೊಗಲೆಲ್ಲ ಕೆತ್ತಿಹೋಗಿ ನೆತ್ತರು ಸುರಿಯುವದು.
ಮೇಳದವರು ಅಟ್ಟಹೂಡಿ ತಾವು ಕಲಿತ ಬಯಲಾಟವನ್ನು ಆಡುವದಕ್ಕೆ ಅಣಿಯಾದರು. ಸಂಕಣ್ಣ - ಹುಣಿಸಿಕ್ಕರನ್ನು ಕರೆದು, ಇಂದಿನ ರಾತ್ರಿಯಾದರೂ ಹೇಸಿತನಕ್ಕೆ ಆಸ್ಪದ ಕೊಡದೆ, ಜೊಕ್ಕಾಗಿರಬೇಕೆಂದು ಅವರಿಗೆ ಕಟ್ಟಪ್ಪಣೆ ಮಾಡಿದರು. ನಿಮ್ಮ ಹೇಸಿತನ ಕಂಡುಬಂದರೆ, ನಿಂತಕಾಲಮೇಲೆ ಅಟ್ಟದಿಂದ ಇಳಿಸಿ ನಿಮ್ಮನ್ನು ಮನೆಗೆ ಕಳಿಸುವೆವು ಎಂದು ಹೆದರಿಕೆ ಹಾಕಿದರು. ಆ ಲಕ್ಷ್ಮಣರೇಖೆಯಲ್ಲಿಯೇ ಅಂದಿನ ಇರುಳನ್ನು ಕಳೆಯುವೆವೆಂದು ಅವರಿಬ್ಬರೂ ಮಾತುಕೊಟ್ಟರು.
ಹಳ್ಳಿಯವರೆಲ್ಲ ಉಂಡುಂಡುಬಂದು ಬಯಲಲ್ಲಿ ಸೇರಿದರು. ತಡಮಾಡಿದರೆ ದೂರದಲ್ಲಿಯೇ ಕುಳಿತುಕೊಳ್ಳಬೇಕಾಗುವದೆಂದು ಜನರು ಬೇಗಬೇಗನೆ ಬಂದರು. ಬಂಪಿಲು ತುಂಬುವ ಹೊತ್ತಿಗೆ ಗಣಪತಿ ಸ್ತೋತ್ರವು ಆರಂಭವಾಯಿತು. ಅರ್ಧ ರಾತ್ರಿ ಕಳೆಯುವ ಹೊತ್ತಿಗೆ ಕಥೆ ಭರತಿಗೆ ಬಂತು. ಜನರೆಲ್ಲ ನಿಸ್ತಬ್ಜರಾಗಿ, ಬಿಟ್ಟ ಕಣ್ಣುಗಳಿಂದ ನೋಡುತ್ತ ಕುಳಿತುಕೊಂಡಿದ್ದರು. ಪಾತ್ರಧಾರಿಗಳಿಗೆ ತುಸು ವಿಶ್ರಾಂತಿಯೂ ಬೇಕಾಗಿತ್ತು. ಆ ಸಂದರ್ಭದ ಸದುಪಯೋಗ ಮಾಡಿಕೊಳ್ಳಬೇಕೆಂದು ಸಂಕಣ್ಣ ಹುಣಸಿಕ್ಕ ಮಾತಾಡಿಕೊಂಡು ಒಂದು ಅಡ್ಡಸೋಗು ತರುವುದಕ್ಕೆ ಸಿದ್ಧತೆ ಮಾಡಿದರು.
“ಏನು ಯಮನೂರು ಜಾತ್ರೆಯೋ ಸಂಕಾ! ಜನದಟ್ಟಣೆ ಏನು ಹೇಳಲಿ?"“ಬನಶಂಕರಿ ಜಾತ್ರೆ ಅದಕ್ಕೂ ಗಡಚು. ಆ ನುಗ್ಗಾಟದಲ್ಲಿ ಒಳ್ಳೊಳ್ಳೆಯವರು ಜಬ್ಬಾಗಿ ಹೋಗುತ್ತಿದ್ದರು.
“ಅಷ್ಟೊಂದು ಜನ ಸುಮ್ಮನೆ ಒಂದೆಡೆಗೇ ನಿಂತಿರಲಿಲ್ಲ. ಅತ್ತಿಂದ ಇತ್ತ, ಇತ್ತಿಂದ ಅತ್ತ ಬರುತ್ತಲೇ ಇತ್ತು ; ಹೋಗುತ್ತಲೇ ಇತ್ತು” ಎಂದು ಹೇಳುವ ಸಮಯದಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಅಂಗಿಯ ತೋಳುಗಳಿಂದ ಒಳಿತಾಗಿ ಮೂಗು ಒರೆಸಿಕೊಂಡನು ಸಂಕಣ್ಣ.
“ಥೂ ಥೂ ಥೂ | ಒಂದು ಹೆಜ್ಜೆ ಮುಂದೆ ಸಾಗೇನೆಂದರೆ ತಿಕ್ಕಾಟ ಮುಕ್ಕಾಟ ! ತಿಕ್ಕಾಟ ಮುಕ್ಕಾಟ !” ಎನ್ನುತ್ತ ಕೈ ಬೆರಳುಗಳ ಕತ್ತರಿಮಾಡಿ ತಿಕ್ಕಿ ತಿಕ್ಕಿ ಹುರುಕಿನ ತುರಿಕೆಯನ್ನು ತಮ್ಮಣಿಗೊಳಿಸಿಕೊಂಡನು ಹುಣಸಿಕ್ಕ.
ಈ ರೀತಿ ಅಡ್ಡಸೋಗು ಮುಗಿಸಿ ಅವರಿಬ್ಬರೂ ಒಳಗೆ ಬಂದು ಹಿಮ್ಮೇಳದವರನ್ನು ಕೂಡಿಕೊಂಡರು. ಮುಂದಿನ ಅರ್ಧರಾತ್ರಿಯನ್ನು ಅವನು ಮಾತುಕೊಟ್ಟಂತೆ ಕಳೆಯುವುದಕ್ಕೆ ಸಾಧ್ಯವಾಯಿತು. ಮೇಳದವರಿಗೆ ಜಾತ್ರೆಯ ಗದ್ದಲದ ಅರ್ಥವಾಗದೆ ಇರಲಿಲ್ಲ.
ಅರ್ಥಕೋಶ
ಅನಾಜ = ಆಹಾರ ಸಾಮಗ್ರಿ
ಅಲಬತ್ = ನಿಶ್ಚಯ
ಅವಬಿ = ಅವನುಸಹ
ಅಸೂಮಂದಿ = ಎಲ್ಲರೂ
ಅಟ್ಟ = ಮಂಚಿಕೆ
ಉಡುಗಿನದಾಣಿ = ಕಸಗಾಳು
ಊದಸ್ತ = ಊದಿಸುತ್ತ
ಏಕ್ಕಾ ಎವ್ವಾ = ಏ ಅಕ್ಕಾ, ಏ ಅವ್ವಾ
ಎಕ್ಕಿಹಳ್ಳಿ = ಜಯರಾಬಾದ
ಏಕಿಗೆ = ಕಾಲುಮಡಿಯಲಿಕ್ಕೆ
ಐದರಾಗ = ಹೊಟ್ಟಿಲಾಗಿ ಅಥವಾ ಹುಟ್ಟಿ ಐದು ತಿಂಗಳು ಆದಾಗ
ಒಡ್ಡಿ = ಮುಷ್ಟಿ
ಔಸುದ್ದಿ = ಔಷಧಿ
ಕರೆ = ಹುರಿಯೆಳೆ
ಕಾವರಬಾವರ = ಸಂತಾಪ
ಕುಂಚಿ = ಕುಂಚಿಗೆ
ಕುಂದರಿಸು = ಕುಳ್ಳಿರಿಸು
ಕುಳ್ಳು = ಬೆರಣಿ
ಕುಳ್ಳುಬಾವ = ಬೆರಣಿಯಒಟ್ಟಿಲು
ಕೆಮ್ಮಕೋತ = ಕೆಮ್ಮುತ್ತ
ಕೋಶಿಸ್ = ಚೌಕಸಿ
ಖರಾಬ = ಹಾಳು
ಖರೆಹುಸೆ = ಸತ್ಯ-ಸುಳ್ಳು
ಗಳಿಗೆ = ಧಾನ್ಯಹಾಕುವ ಸಾಧನ
ಗಟ್ಟಿಸಿಕೊಳ್ಳು = ಬಡಕೊಳ್ಳು
ಗಾದಮೆತ್ತಿಗೆ = ದಾನ್ಯವನ್ನು ಬುಟ್ಟಿಯಲ್ಲಿ ತುಂಬಿ ಅರಲಿನಿಂದ ಮೆತ್ತಿದ್ದು
ಗಿಲಿಗಿಲಿಯಾಗು = ಸೊರಗು
ಗುಂಡಿ = ತಗ್ಗು
ಚಟಿಗೆ = ಮಣ್ಣ ಪಾತ್ರೆ
ಚಡಿ = ಸಲಾಕೆ
ಚಬಕಿ = ಜಬರಿ
ಚರಗ = ಹೊಲದ ದೇವತೆಗೆ ನೈವೇದ್ಯ
ಚಮ್ಮಳಿಗೆ = ಕಾಲ್ಮರೆ
ಚುಂಗು = ತುದಿ
ಜರ = ತುಸು
ಜಾಜಾ = ಮೇಣ
ಜೋರಾಬಾರಿ = ಬಲ್ಮೆಜುಲ್ಮೆ
ಡರಿ = ತೇಗು
ಡೊಳ್ಳುಹೆಡಿಗೆ = ದೊಡ್ಡ ಬುಟ್ಟಿ
ತಟ್ಟಿ = ಕದ
ತಿಪ್ಪಲು = ತಗಲು
ತಿಲ್ಲಕ್ಕ = ತಿನ್ನಲಿಕ್ಕೆ
ತೋಲ = ಬಹಳ
ತೊಟ್ಟಲುಬಟ್ಟಲು = ತವರ್ಮನೆಯಿಂದ ಹಡೆದು ಹೋಗುವಾಗ ಹೆಣ್ಮಗಳಿಗೆ ಕೊಡುವ ಜೀನಸು
ಥಳಿಸು = ಬಡಿ
ದಡೂತಿ = ಹೇಳಿಮಾಡಿಸಿದ್ದು
ದಾಗೀಣೆ = ಆಭರಣ
ದಾಣಿ = ಧಾನ್ಯ
ಧಾಮಧೂಮ - ಅಟ್ಟಹಾಸ
ನಿಗ = ಲಕ್ಷ್ಯ
ನಿಲವುಗಣೆ = ಅರಿವೆಗಳನ್ನು ಒಣಹಾಕಲು ತೂಗಬಿಟ್ಟ ಗಳ
ಪದರಾಗ = ಉಡಿಯಲ್ಲಿ
ಪದಿ = ಪಡಗಲ್ಲು
ಪಸಂದ = ಸಮ್ಮತ
ಪಾಪಾಸು = ಕೆರವು
ಪಿಂಜಾಳಿ = ಜಿಳಿಜಿಳಿ
ಬಡ್ಯೆಲ್ದು = ಬಡಿಯಲೊಲ್ಲದು
ಬಲ್ಯಾಕ = ಬಳಿಯಲ್ಲಿ
ಬಸ್ತಾನಿ = ಶಾಸ್ತಿ
ಬಂಕ = ಮೊಗಶಾಲೆ
ಬಂಕೆ = ಬಯಕೆ
ಬಾಡಕೊ = ಬಾಡಿಗೆತಿನ್ನುವವ
ಬಾರದಾನಿ = ಸಾಮಾನು
ಬಾರಲ = ಬೋರಲು
ಬಾಸಣಿಗೆ = ಬಾಸಿಂಗ
ಬಿಂಡಿ = ಗಂಟು
ಬೇಮನಸ್ಸಿಲೆ = ಮನಸ್ಸಿಲ್ಲದೆ
ಬೋಕಿ = ಕೊಪ್ಪರಿಗೆ
ಮಜಕೂರಿ = ವಾಲಿಕಾರ
ಮಕಾಂಡ = ಸುಡುಗಾಡ
ಮಳ್ಳಾಗಿ = ಮರುಳಾಗಿ
ಮಂಗಿದ್ದ = ಮಲಗಿದ್ದ
ಮಂಕೊಂಡರುಫ್ಲೆ = ಮಲಗಿಕೊಂಡ ಕೂಡಲೇ
ಮಮ್ಮ = ಮೆತ್ತಗಿನ ಅನ್ನ
ಮಾಸಪ್ಪಲೆ = ಮಾಸುವಂತೆ
ಮಿಲಾಸು = ಕೂಡಿಕೊಳ್ಳು
ಮಸ್ತಾದ = ಗಟ್ಟಿಗ
ರಂಜ = ವ್ಯಸನ
ರಂಗಣಗಿ = ಮಣ್ಣಿನಪಾತ್ರೆ
ಲಗಾಮು = ಕಡಿವಾಣ
ಲಾಡಗೇರಿ = ಒಂದು ಓಣಿಯ ಹೆಸರು
ಲಾಲ = ಗುಂಡು
ವಾಯದಾ = ಮುದ್ದತು
ಸಪಾಟಿ = ತೀವ್ರ
ಸಬರು = ಸಿಬಿರು
ಸಳ್ಳಾಮಳ್ಳಾ = ಸಳಮಳನೆ
ಸ೦ಗಾಟಲೆ = ಕೂಡಲೆ
ಸ೦ದೂಕ = ಪೆಟ್ಟಿಗೆ
ಸಿಡಿ = ಮೆಟ್ಟಿಲು
ಸೈರ = ಹೂಗಾರ
ಸೈರೇದನ = ಬಿಡಾಡಿದನ
ಹಲಪಿ = ಚಪ್ಪಟೆ
ಹರಿ = ಹರದಾರಿ
ಹತ್ಯಾಕ = ಹತ್ತಿರ
ಹಮ್ಮೀಣಿ = ಹಣದ ಚೀಲು
ಹರ್ಯಾಹೊತ್ತು = ಬೆಳಗು
ಹಿಕಮತಿ = ಯುಕ್ತಿ
ಹೂರಣಗಿ = ಬಿದರಿನ ಕೊಳವೆ
ಹೊಡಪೇಟ = ಬಡಿದಾಟ
ಹೊತ್ತರಳಿ = ಮುಂಜಾನೆ
ಹೋಗಾರಿ = ಹೋಗೋಣ