ಉಪಪಾತಕ ಮಹಾಪಾತಕಂಗಳ ಮಾಡಿದ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಉಪಪಾತಕ ಮಹಾಪಾತಕಂಗಳ ಮಾಡಿದ ಕರ್ಮಂಗಳು ಕೋಟ್ಯನುಕೋಟಿ
ಒಬ್ಬ ಶಿವಶರಣನ ಅಂಗಳವ ಕಂಡಲ್ಲಿ ಅಳಿದು ಹೋಹುದು ನೋಡಯ್ಯಾ. ಅದೇನು ಕಾರಣವೆಂದಡೆ: ಆ ಶಿವಶರಣನ ಅಂತರಂಗದಲ್ಲಿ ಶಿವನಿಪ್ಪನು. ಶಿವನಿದ್ದಲ್ಲಿ ಕೈಲಾಸವಿಪ್ಪುದು ಕೈಲಾಸವಿದ್ದಲ್ಲಿ ಸಮಸ್ತ ರುದ್ರಗಣಂಗಳಿಪ್ಪರು. ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳಿಪ್ಪವು. ಇಂತಪ್ಪ ಶರಣಬಸವಣ್ಣನ ಅಂಗಳವ ಕಂಡೆನಾಗಿ ಗುಹೇಶ್ವರಲಿಂಗದ ಕಂಗಳಿಗೆ ತೃಪ್ತಿಯಾಯಿತ್ತು ಕಾಣಾ ಸಿದ್ಧರಾಮಯ್ಯಾ.