ಎನ್ನ ಭವಿತನವ ಕಳೆದು
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎನ್ನ ಭವಿತನವ ಕಳೆದು ಭಕ್ತನ ಮಾಡಿದಿರಿಯಯ್ಯ. ಪಂಚಭೂತದ ಪ್ರಕೃತಿಕಾಯವ ಕಳೆದು ಪ್ರಸಾದಾಕಾಯವ ಮಾಡಿದಿರಿಯಯ್ಯ. ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದಿರಿಯಯ್ಯ. ಅಂಗೇಂದ್ರಿಯ ಕಳೆದು ಲಿಂಗೇಂದ್ರಿಯವ ಮಾಡಿದಿರಿಯಯ್ಯ. ಅಂಗವಿಷಯಭ್ರಮೆಯ ಕಳೆದು ಲಿಂಗವಿಷಯಭ್ರಾಂತನ ಮಾಡಿದಿರಿಯಯ್ಯ. ಅಂಗ ಕರಣಂಗಳ ಕಳೆದು ಲಿಂಗ ಕರಣಂಗಳ ಮಾಡಿದಿರಿಯಯ್ಯ. ಆ ಲಿಂಗ ಕರಣಂಗಳೇ ಹರಣ ಕಿರಣವಾಗಿ ಬಿಂಬಿಸುವಂತೆ ಮಾಡಿದಿರಿಯಯ್ಯ. ಕುಲಸೂತಕ ಛಲಸೂತಕ ತನುಸೂತಕ ಮನಸೂತಕ ನೆನಹುಸೂತಕ ಭಾವಸೂತಕವೆಂಬ ಇಂತೀ ಭ್ರಮೆಯ ಕಳೆದು ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ ನಮೋನಮೋಯೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.