ಎನ್ನ ಮನದ ಮರವೆ ಭಿನ್ನವಾಗದು. ಮರೆದು ಅರಿದೆನೆಂದಡೆ ಅರುಹಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ. ಕೋಲಿನಲ್ಲಿ ನೀರ ಹೊಯ್ದರೆ ಸೀಳಿ ಹೋಳಾದುದುಂಟೆ ? ಅರಿವುದೊಂದು ಘಟ
ಮರೆವುದೊಂದು ಘಟ
ಒಡಗೂಡುವಠಾವಿನ್ನೆಂತೋ. ಹುತ್ತದ ಬಾಯಿ ಹಲವಾದಡೆ ಸರ್ಪನೈದುವಲ್ಲಿ ಒಡಲೊಂದೆ ತಪ್ಪದು. ತನ್ನ ಚಿತ್ತದ ಭೇದವಲ್ಲದೆ ವಸ್ತುವಿಂಗೆ ಭೇದವುಂಟೆ [ಗುಹೇಶ್ವರ]