ವಿಷಯಕ್ಕೆ ಹೋಗು

ಒಂದಿರುಳು ಕನಸಿನಲಿ

ವಿಕಿಸೋರ್ಸ್ದಿಂದ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ
ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ?
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ;
ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ
ಬಳುಕುತಿರೆ ಕಂಪ ಸೂಸಿ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ,
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.


ಕವಿ: ಕೆ ಎಸ್ ನರಸಿಂಹಸ್ವಾಮಿ
ಸಂಗೀತ: ಸಿ ಅಶ್ವಥ್
ದ್ವನಿಸುರುಳಿ: ಮೈಸೂರು ಮಲ್ಲಿಗೆ
ಗಾಯಕರು: ರತ್ನಮಾಲಾ ಪ್ರಕಾಶ್ ಹಾಗೂ ಸಿ ಅಶ್ವಥ್