ಓಂಕಾರವೇ ಪಂಚಭೂತಾತ್ಮಮಯ ನೋಡ. ನಕಾರವೇ ದಶೇಂದ್ರಿಯ
ಮಃಕಾರವೇ ಮನಪಂಚಕಂಗಳು ನೋಡ. ಶಿಕಾರವೇ ಪ್ರಾಣಸ್ವರೂಪು
ವಾಕಾರವೇ ದಶವಾಯುಗಳಸ್ವರೂಪು
ಯಕಾರವೇ ತ್ರಿಗುಣಸ್ವರೂಪು ನೋಡ. ಓಂಕಾರವೇ ಪಾದಾದಿ ಮಸ್ತಕಪರಿಯಂತರ ಪರಿಪೂರ್ಣವಾಗಿ ತ್ವಗುಮಯವಾಗಿಪ್ಪುದು. ನಕಾರವೇ ರುದ್ಥಿರಮಯವಾಗಿಪ್ಪುದು. ಮಃಕಾರವೇ ಮಾಂಸಮಯವಾಗಿಪ್ಪುದು. ಶಿಕಾರವೇ ಮೇದಸ್ಸುಮಯವಾಗಿಪ್ಪುದು. ವಾಕಾರವೇ ಅಸ್ಥಿಮಯವಾಗಿಪ್ಪುದು. ಯಕಾರವೇ ಮಜ್ಜಾಮಯವಾಗಿಪ್ಪುದು. ಈ ಷಡಕ್ಷರಮಂತ್ರವೆಲ್ಲವು ಕೂಡಿ ಶುಕ್ಲಮಯವಾಗಿಪ್ಪುದು ನೋಡಾ. ಇದು ಕಾರಣ
ಶರಣನ ಸಪ್ತಧಾತು ಸರ್ವೇಂದ್ರಿಯ ವಿಷಯ ಕರಣಂಗಳೆಲ್ಲವು ಷಡಕ್ಷರಮಂತ್ರಮಯವಾಗಿಪ್ಪವು. ಇದು ಕಾರಣ
ಶರಣನ ಶರೀರವೆ ಶಿವನ ಶರೀರ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.