ಓಂಕಾರವೇ ಶಿವ, ಯಕಾರವೇ

ವಿಕಿಸೋರ್ಸ್ದಿಂದ



Pages   (key to Page Status)   


ಓಂಕಾರವೇ ಶಿವ
ಯಕಾರವೇ ಸದಾಶಿವ
ವಾಕಾರವೇ ಈಶ್ವರ
ಶಿಕಾರವೇ ಮಹೇಶ್ವರ
ಮಃಕಾರವೇ ಈಶ್ವರ
ನಕಾರವೇ ಈಶಾನ. ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ
ಮತ್ತೆ-ನಕಾರವೇ ಮೂರ್ತಿಬ್ರಹ್ಮ
ಮಃಕಾರವೇ ಪಿಂಡಬ್ರಹ್ಮ
ಶಿಕಾರವೇ ಕಲಾಬ್ರಹ್ಮ
ವಾಕಾರವೇ ಆನಂದಬ್ರಹ್ಮ
ಯಕಾರವೇ ವಿಜ್ಞಾನಬ್ರಹ್ಮ
ಓಂಕಾರವೇ ಪರಬ್ರಹ್ಮ
ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ
ಶಿಕಾರವೇ ಇಚ್ಛಾಶಕ್ತಿ
ವಾಕಾರವೇ ಆದಿಶಕ್ತಿ
ಯಕಾರವೇ ಪರಶಕ್ತಿ
ಓಂಕಾರವೇ ಚಿಚ್ಛಕ್ತಿ
ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ. ಮತ್ತೆ-ನಕಾರವೇ ಕರ್ಮಸಾದಾಖ್ಯ
ಮಃಕಾರವೇ ಕರ್ತೃಸಾದಾಖ್ಯ
ಶಿಕಾರವೇ ಮೂರ್ತಿಸಾದಾಖ್ಯ
ವಾಕಾರವೇ ಅಮೂರ್ತಿಸಾದಾಖ್ಯ; ಯಕಾರವೇ ಶಿವಸಾದಾಖ್ಯ
ಓಂಕಾರವೇ ಮಹಾಸಾದಾಖ್ಯ ನೋಡ. ಮತ್ತೆ-ನಕಾರವೇ ಪೀತವರ್ಣ
ಮಃಕಾರವೇ ನೀಲವರ್ಣ
ಶಿಕಾರವೇ ಕುಂಕುಮವರ್ಣ
ವಾಕಾರವೇ ಶ್ವೇತವರ್ಣ
ಯಕಾರವೇ ಸ್ಫಟಿಕವರ್ಣ
ಓಂಕಾರವೇ ಜ್ಯೋತಿರ್ಮಯಸ್ವರೂಪು ನೋಡಾ. ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ. ಮತ್ತೆ-ನಕಾರವೇ ಸದ್ಯೋಜಾತಮಂತ್ರಮೂರ್ತಿ. ಮಃಕಾರವೇ ವಾಮದೇವಮಂತ್ರಮೂರ್ತಿ. ಶಿಕಾರವೇ ಅಘೋರಮಂತ್ರಮೂರ್ತಿ. ವಾಕಾರವೇ ತತ್ಪುರುಷಮಂತ್ರಮೂರ್ತಿ. ಯಕಾರವೇ ಈಶಾನ್ಯಮಂತ್ರಮೂರ್ತಿ. ಓಂಕಾರವೇ ಮಹಾಮಂತ್ರಮೂರ್ತಿ. ಇಂತಿವು ಮಂತ್ರಮೂರ್ತಿಯ ವದನಭೇದವೆಂದರಿವುದು ನೋಡಾ. ಮತ್ತೆ-ನಕಾರವೇ ಸತ್ತು
ಮಃಕಾರವೇ ಚಿತ್ತು
ಶಿಕಾರವೇ ಆನಂದ ವಾಕಾರವೇ ನಿತ್ಯ
ಯಕಾರವೇ ಪರಿಪೂರ್ಣ
ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ. ಮತ್ತೆ-ನಕಾರವೇ ಆಚಾರಲಿಂಗ
ಮಃಕಾರವೇ ಗುರುಲಿಂಗ
ಶಿಕಾರವೇ ಶಿವಲಿಂಗ
ವಾಕಾರವೇ ಜಂಗಮಲಿಂಗ
ಯಕಾರವೇ ಪ್ರಸಾದಲಿಂಗ
ಓಂಕಾರವೇ ಮಹಾಲಿಂಗ ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ. ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.