ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಬ್ರಹ್ಮ. ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ವಿಷ್ಣು. ಕಂಠದಲ್ಲಿ ಲಿಂಗವ ಧರಿಸಿಕೊಂಡಾತ ರುದ್ರ. ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಈಶ್ವರ. ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಸದಾಶಿವ. ಆಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಪರಮೇಶ್ವರ. ಬ್ರಹ್ಮಂಗೆ ಪೀತವರ್ಣದ ಲಿಂಗ
ವಿಷ್ಣುವಿಂಗೆ ನೀಲವರ್ಣದ ಲಿಂಗ
ರುದ್ರಂಗೆ ಕಪಿಲವರ್ಣದ ಲಿಂಗ
ಈಶ್ವರಂಗೆ ಮಾಂಜಿಷ್ಟವರ್ಣದ ಲಿಂಗ
ಸದಾಶಿವಂಗೆ ಮಾಣಿಕ್ಯವರ್ಣದ ಲಿಂಗ
ಪರಮೇಶ್ವರಂಗೆ ಸ್ಫಟಿಕವರ್ಣದ ಲಿಂಗ. ಬ್ರಹ್ಮ ಪಾಶುಪತಿಯಾಗಿ ಸುಳಿದ
ವಿಷ್ಣು ಜೋಗಿಯಾಗಿ ಸುಳಿದ
ರುದ್ರ ಶ್ರವಣನಾಗಿ ಸುಳಿದ
ಈಶ್ವರ ಸನ್ಯಾಸಿಯಾಗಿ ಸುಳಿದ
ಸದಾಶಿವ ಯೋಗಿಯಾಗಿ ಸುಳಿದ
ಪರಮೇಶ್ವರ ಕಾಳಾಮುಖಿಯಾಗಿ ಸುಳಿದ. ಬ್ರಹ್ಮಂಗೆ ಕಾವಿ ಬಿಳಿದು
ವಿಷ್ಣುವಿಂಗೆ ಪೀತಸಕಲಾತಿ
ರುದ್ರಂಗೆ ಕಾಗು ಕಂಬಳಿ
ಈಶ್ವರಂಗೆ ಮೃಗಾಜಿನ ಕಾವಿಕಪ್ಪಡ
ಸದಾಶಿವಂಗೆ ಪುಲಿಚರ್ಮ ರತ್ನಗಂಬಳಿ
ಪರಮೇಶ್ವರಂಗೆ ಮೇಕೆಚರ್ಮ ಸಿತಕಪ್ಪಡ. ಬ್ರಹ್ಮ ಸ್ಥೂಲನೆಂದು
ವಿಷ್ಣು ಸೂಕ್ಷ್ಮನೆಂದು
ರುದ್ರ ಕಾರಣನೆಂದು
ಈಶ್ವರ ಸಕಲನೆಂದು
ಸದಾಶಿವ ನಿಃಕಲನೆಂದು
ಪರಮೇಶ್ವರ ಶೂನ್ಯನೆಂದು. ಬ್ರಹ್ಮಂಗೆ `ನ'ಕಾರ
ವಿಷ್ಣುವಿಂಗೆ `ಮ'ಕಾರ
ರುದ್ರಂಗೆ `ಶಿ'ಕಾರ
ಈಶ್ವರಂಗೆ `ವ'ಕಾರ
ಸದಾಶಿವಂಗೆ `ಯ'ಕಾರ
ಪರಮೇಶ್ವರಂಗೆ `ಓಂ' ಕಾರ. ಬ್ರಹ್ಮಂಗೆ ಭಕ್ತಸ್ಥಲ
ವಿಷ್ಣುವಿಂಗೆ ಮಹೇಶ್ವರಸ್ಥಲ
ರುದ್ರಂಗೆ ಪ್ರಸಾದಿಸ್ಥಲ
ಈಶ್ವರಂಗೆ ಪ್ರಾಣಲಿಂಗಿಸ್ಥಲ
ಸದಾಶಿವಂಗೆ ಶರಣಸ್ಥಲ
ಪರಮೇಶ್ವರಂಗೆ ಐಕ್ಯಸ್ಥಲ. ಇಂತಪ್ಪ ಶೈವಲಿಂಗದ ಭಕ್ತಿಯು
ಷಡುಸ್ಥಲದ ಸುಳುಹಿನೊಳಗಲ್ಲ. ರೇವಣಸಿದ್ಧಯ್ಯದೇವರು ಸಾಕ್ಷಿಯಾಗಿ ಪ್ರಭುದೇವರ ವಿರಶೈವ ಲಿಂಗ ಜಂಗಮದ ಷಡುಸ್ಥಲ ಸುಳುಹು ಆ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಕಾಣಾ
ಸಿದ್ಧರಾಮಯ್ಯಾ.